Sunday, July 26, 2020

AUTOBIOGRAPHY (5) - LIFE JOURNEY -YOLA

ಆತ್ಮ ಚರಿತ್ರೆ - ಭಾಗ 5 - (1980 - 1986 )
ಯೋಲ, (ರಾಜಧಾನಿ) ಗೊಂಗೊಲ ರಾಜ್ಯ, ನೈಜಿರಿಯಾ 
ಬಾಂಜುಲ್ ನಗರದ ಶಾಲೆ, ಅಲ್ಲಿಯ ಸಂಬಳ ಹಾಗೂ ಜೀವನ ಬಹಳ ಅತೃಪ್ತಿ ಯಾಗಿತ್ತು. ಪದಕನ್ನಾಯ ಪರಿವಾರವೂ ಅಲ್ಲೇ ಇದ್ದರೂ ಮುಂದುವರಿಸಲು ಮನಸ್ಸು ಕೇಳಲಿಲ್ಲ.  ಹತ್ತು ತಿಂಗಳೊಳಗೆ ಅಲ್ಲಿಯ ಕೆಲಸಕ್ಕೆ ರಾಜೀನಾಮೆ ಇತ್ತು ಪುನ ನೈಜೆರಿಯಾದ ಕಡೆಗೆ ಪಯಣ.
ನೈಜಿರಿಯಾದ ಗೊಂಗೊಲ ರಾಜ್ಯದ ರಾಜಧಾನಿ ಯೋಲ ನಗರಕ್ಕೆ ವಿಸಿಟ್  ವಿಸಾದಲ್ಲಿ ಬಂದು  ಅಲ್ಲಿಯ ಶಿಕ್ಷಣ ಸಚಿವಾಲಯದಲ್ಲಿ ಇಂಟರ್ ವ್ಯೂ ಗೆ ಹಾಜರಾಗಿ ಕೆಲಸವನ್ನೂ ಪಡೆದದ್ದಾಯಿತು. ಅದು ಜುಲೈ 1980 ರ ಸಮಯ.
ಆಗ ಶಾಲೆಗಳಿಗೆ ರಜಾ ಕಾಲವಾದ್ದರಿಂದ ಊರಿಗೆ ಹೋಗುವ ಸಂಭ್ರಮ. ಆಗೋಸ್ಟ್ ತಿಂಗಳಲ್ಲಿ ಊರಿಗೆ ಬಂದದ್ದಾಯಿತು.
ಹೆಬ್ರಿಯಲ್ಲಿ ಮಗಳು ಶುಭಾಲೊಡನೆ ಕೆಲದಿನಗಳು ಕಳೆದದ್ದೂ ಆಯಿತು.
ನಳಿನಿ 11/09/1980





ಸಪ್ಟಂಬರ 11, 1980 ಉಡುಪಿ ಪುತ್ತಿಗೆ ಮಠ 
ಪದ್ಮನಾಭ ಅಣ್ಣಯ್ಯ ನವರ ಮರು ಮದುವೆಯ ಪ್ರಸ್ತಾಪ. ಉದ್ಯಾವರದಲ್ಲಿ ದೊಡ್ಡಮ್ಮನ ಮನೆಯಲ್ಲಿ ಇದ್ದ, ಮಾಧವ  ರಾವ್ ಬಡೆಕಿಲ್ಲಾಯರ ಮಗಳು ನಳಿನಿಯನ್ನು ನೋಡಿ ಒಪ್ಪಿದ್ದಾಯಿತು. ಸಪ್ಟಂಬರ 11, 1980, ರಂದು ಉಡುಪಿಯ ಪುತ್ತಿಗೆ ಮಠದಲ್ಲಿ ಮದುವೆಯೂ ನಡೆದು ಹೋಯಿತು.
ನಂತರ ಅವಳ ಪಾಸ್ಪೋರ್ಟ್, ವೀಸಾ ಇತ್ಯಾದಿಗಳಿಗೆ ಓಡಾಟ, ಆಗ ಪಾರ್ಲಿಮೆಂಟ್ ಸದಸ್ಯರಾಗಿದ್ದ ಆಸ್ಕರ್ ಫಾರ್ನಂದೆಸ್ ಅವರೊಡನೆ ಪಾಸ್ಪೋರ್ಟ್ ಅರ್ಜಿಗೆ ಸಹಿ ಪಡೆದು ಪಾಸ್ಪೋರ್ಟ್ ಕಚೇರಿಗೆ ಕಳುಹಿಸಲಾಯಿತು.
ಇತ್ತ ನಾನು ಪುನಃ ನೈಜೆರಿಯಾದ, ಗೊಂಗೊಲ ರಾಜ್ಯದ  ಯೋಲ ನಗರಕ್ಕೆ ಬಂದು ಸಚಿವಾಲಯಕ್ಕೆ ರಿಪೋರ್ಟ್ ಮಾಡಿ, ಯೋಲದಲ್ಲಿ ಇರುವ ಹೈಸ್ಕೂಲ್, ಜನರಲ್ ಮುರ್ತಾಲ ಮೊಹಮದ್ ಕಾಲೇಜು  (General Murtala Mohammed College), ಭೌತಶಾಸ್ತ್ರದ ಅಧ್ಯಾಪಕನಾಗಿ ಪೋಸ್ಟಿಂಗ್ ಆಯಿತು. (ಜನರಲ್ ಮುರ್ತಾಲ ಮೊಹಮ್ಮದ್ ಅವರು ಕೆಲ ಸಮಯದ ಹಿಂದೆ ನೈಜೇರಿಯಾ ದೇಶದ ಸೈನಿಕರ ದಂಗೆಯಲ್ಲಿ (Military Coup) ಹತನಾಗಿದ್ದ.)
ಯೋಲದಲ್ಲಿ ಕೆಲಸ ಸಿಕ್ಕಿರುವುದು ನನ್ನ ಅದೃಸ್ಥ (Lucky) ಯಾಕೆಂದರೆ ರಾಜ್ಯದ ಹಲವಾರು ಭಾಗದ ಶಾಲೆಗಳಲ್ಲಿ ನೀರು, ವಿದ್ಯುತ್ ಅಭಾವ, ದೂರ ದೂರದ ಸ್ಥಳಗಳಿಗೆ ಸರಿಯಾದ ರಸ್ತೆಗಳೂ ಇರದ ಜಾಗಗಳು ಇದೆ.  ಕೆಲದಿನಗಳ ನಂತರ ಕಾಲೇಜಿನ ಆವರಣದಲ್ಲಿ ಒಂದು ಮನೆಯನ್ನೂ ನನಗೆ ನೀಡಲಾಯಿತು. ಅದು ಮರಗಳ ಮಧ್ಯ ಇರುವ, ಹಕ್ಕಿಗಳ ಚಿಲಿಪಿಲಿ ರಾಗ ಇರುವ prefabricated ಎರಡು ಕೋಣೆಯ  ಅಚ್ಚು ಕಟ್ಟಾದ ಮನೆ. ಹೀಗೆ ಕಾಲೇಜಿನಲ್ಲಿ ಭೋದನೆಯ ಕೆಲಸವೂ ಪ್ರಾರಂಭವಾಯಿತು.
ಯೋಲ ಕುಟೀರ 
ಇನ್ನು ಮಡದಿ ನಳಿನಿಯ ನೈಜಿರಿಯಗೆ ಬರುವ ಕಾತರ. ನಾಲ್ಕು ತಿಂಗಳ ನಂತರ ಜನವರಿ 29, 1981, ಅವಳು ಬೊಂಬಾಯಿ ಯಿಂದ ನೈರೋಬಿ, ಲಾಗೊಸ್ ಬಂದಾಗಿತ್ತು. ಅವಳನ್ನು ವಿದೇಶಕ್ಕೆ (foreign) ಗೆ ಕಳುಹಿಸಿಕೊಡಲು  ಪದ್ಮನಾಭ ಅಣ್ಣಯ್ಯ ಅವರ ಕಾರಿನಲ್ಲಿ ಊರಿಂದ ಒಂದು ದಂಡೇ ಬೊಂಬಾಯಿಗೆ ಬಂದಿತ್ತು. ಅವಳು ಪ್ರಥಮವಾಗಿ ವಿಮಾನದಲ್ಲಿ, ಅದೂ ಹೊರದೇಶಕ್ಕೆ ಪ್ರಯಾಣಿಸುವ ಸಂದರ್ಭ. ಕಾಣದ ಊರಿಗೆ ಅವಳನ್ನು ಒಂಟಿಯಾಗಿ ಕಳುಹಿಸಿ ಕೊಡುವುದನ್ನು ಅಣ್ಣಯ್ಯ ಬಹಳ ಬೇಸರಿಸಿ ಕೊಂಡಿದ್ದರು.
ಆಗ ನೈಜಿರಿಯಾದ ರಾಜಧಾನಿ (Capital) ಲಾಗೊಸ್ ಆಗಿತ್ತು. ಕೆಲ ವರ್ಷಗಳ ನಂತರ ಅದು ದೇಶದ ಮಧ್ಯ ಭಾಗದ ಅಭುಜ (Abhuja) ಎಂಬ ನಗರಕ್ಕೆ ಸ್ತಲಾಂತರ ವಾಯಿತು. ಲಾಗೊಸ್ ನಲ್ಲಿ ಸ್ನೇಹಿತ ರಾಮಚಂದ್ರ ಅವರು ವಿಮಾನ ನಿಲ್ದಾಣದಿಂದ ಅವರ ಮನೆಗೆ ಕರೆದು ಕೊಂಡು ಹೋಗಿ, ನಾನೂ ಅದೇ ದಿನ ಯೋಲದಿಂದ ವಿಮಾನದಲ್ಲಿ ಲಾಗೊಸ್ ಗೆ ಹೋಗಿ ಅವಳನ್ನು ಸೇರಿಕೊಂಡೆ. ನಂತರ ಒಟ್ಟಿಗೆ ವಿಮಾನದಲ್ಲಿ ಯೋಲ ಕ್ಕೆ ಬಂದು ಶಾಲೆಯಲ್ಲಿಯ ನಮ್ಮ ಕುಟಿರವನ್ನು ಸೇರಿದೆವು.

ಅದಾಗಲೇ ಸರಕಾರದ ವತಿಯಿಂದ ಸಾಲ ಪಡೆದುಕೊಂಡು ಇನ್ನೊಂದು ವೋಕ್ಸ್ ವಾಗನ್ (Volkswagen Beetle) ಬೀಟಲ್ ಕಾರೊಂದನ್ನು ಖರೀದಿಸಿಯಾಗಿತ್ತು. (Registration No. GG 9250 Y) GG ಅಂದರೆ ಗೊಂಗೊಲ ರಾಜ್ಯ, Y ಅಂದರೆ ಯೋಲ. ಅದೇ ಸಮಯಕ್ಕೆ Maths Professor ಸುಂದರೇಶನ್ ಅವರು ಸಹ ಯೋಲ ಪೋಲಿಟೆಕ್ನಿಕ್  (Yola Polytechnic) ಕಾಲೇಜಿನಲ್ಲಿ ಲೆಕ್ಚರರ್ (Lecturer) ಆಗಿ ಸೇರಿ ಅವರ ಕುಟುಂಬವೂ ಅಲ್ಲಿಯೇ ಮನೆ ಮಾಡಿದ್ದರು.
ರವಿ - ಬಾಲ್ಯ 
ಭಾರತೀಯರು ಅಲ್ಲಿ ಬಹಳಷ್ಟು ಮಂದಿ ಇದ್ದಿರಲಿಲ್ಲ. ಅಲ್ಲಿ ಕೆಲಸ ಮಾಡುತ್ತಿರುವ ಶ್ರೀಲಂಕಾದ ಪ್ರಜೆಗಳು ಸಹ ಆತ್ಮೀಯ ರಾಗಿರುತಿದ್ದರು. ಟೆಲಿಫೋನ್, ಮೊಬೈಲ್, ಇಂಟರ್ನೆಟ್ (Internet) ಯಾವುದೂ ಆವಿಷ್ಕಾರ ಆಗಿರದ ಕಾಲವಾಗಿತ್ತು.
ಹೀಗೆಯೇ ಕಾರಿನಲ್ಲಿ ಅಲ್ಲಿ, ಇಲ್ಲಿ ಸುತ್ತಾಟ, ಸ್ನೇಹಿತರೊಡನೆ ಹೊರಸಂಚಾರ (Picnic), ಬರ್ತ್ ಡೇ ಪಾರ್ಟಿ (Birthday Party) ಇತ್ಯಾದಿಗಳು. ತಿಂಗಳುಗಳು ಕಳೆಯಿತು, ನಳಿನಿಯು  ಗರ್ಭಿಣಿ. ಊರಿಗೆ ಹೋಗುವ ಯೋಚನೆ ಮಾಡಿಲ್ಲ. ಅಲ್ಲಿಯೇ ಸರಕಾರಿ ಆಸ್ಪತ್ರೆಯಲ್ಲಿ ಇರುವ ಡಾ. ಮಹಾಪಾತ್ರ ಸ್ನೇಹಿತ ವರ್ಗ ದಲ್ಲಿ ಇರುವವರಾದುದರಿಂದ ಯೋಲದಲ್ಲಿಯೇ ಇರುವ ನಿರ್ಧಾರ. ಪ್ರೇಮ ಸುಂದರೇಶನ್ ಅವರು ಅಮ್ಮನ ಸ್ಥಾನದಲ್ಲಿದ್ದು ಸಹಕರಿಸು ತಿದ್ದರು.

ಸ್ನೇಹ ಕೂಟ, ಯೋಲ 
ಜನವರಿ 6 , 1982, ಬೆಳಿಗ್ಗೆ  ಪುತ್ರನ ಜನನ. ಅವನು ರವಿಕಾಂತ ಎಂದು ಆಮೇಲೆ ಹೆಸರಿಸಿದೆವು. ಹಿಂದಿನ  ದಿನದ ರಾತ್ರಿ ನಳಿನಿಯು ಬಹಳಷ್ಟು ಪ್ರಸವ ವೇದನೆಯನ್ನು ಅನುಭವಿಸಿ, ರಾತ್ರಿಯಿಡೀ ಪ್ರೇಮಕ್ಕ ಹತ್ತಿರದಲ್ಲಿ ಇದ್ದು ಸಹಕರಿಸುತಿದ್ದರು. ಬೆಳಿಗ್ಗೆ ಸಿಸೇರಿಯನ್ ಅಪರೇಷನ್ ಮೂಲಕ ರವಿಯ ಜನನವಾಯಿತು. ಆತ್ಮಿಯ ಸ್ನೇಹಿತರಾಗಿದ್ದ ಜೂಡಿ ಮತ್ತು ಜಾಕೊಬ್ ಪ್ರಥಮವಾಗಿ ಸಂಭ್ರಮಿಸಿದವರು. ಈಗ ಹಲವಾರು ವರ್ಷಗಳಿಂದ ಜಾಕೊಬ್ ಅವರು ಕೇರಳದ ಅಲೆಪ್ಪಿ ನಗರದಲ್ಲಿ ನೆಲೆಸಿ, Exchange ಕಂಪೆನಿ ನಡೆಸುತ್ತಿರುವರು. ಇತ್ತೀಚಿಗೆ ನಾವು ಅಲ್ಲಿಗೆ ಭೇಟಿಗೆ ಹೋಗಿದ್ದೆವು.

ಪಾರ್ಟಿ 
ಕೆಲ ದಿನಗಳ ನಂತರ ತಾಯಿ ಮಗುವನ್ನು ಮನೆಗೆ ಕರೆದು ಕೊಂಡು ಬರಲಾಯಿತು. ಕೆಲ ದಿನಗಳ ಕಾಲ ಅಲ್ಲೇ ಹತ್ತಿರದಲ್ಲೇ ಇದ್ದ ಬೆಂಗಳೂರಿನ ಪ್ರೊಫೆಸರ್ ಪಂಡಿತ್ (ಯೋಲ ಪಾಲಿಟೆಕ್ನಿಕ್ ನಲ್ಲಿ ಕೆಲಸ ಮಾಡುತಿದ್ದರು) ಅವರ ಪತ್ನಿ ಪದ್ಮ ಅವರು ಮನೆಗೆ ಕಾಲ್ನಡಿಗೆಯಲ್ಲಿ ಬಂದು ಮಗುವಿಗೆ ಸ್ನಾನ ಮಾಡಿಸಿ ಹೋಗುತಿದ್ದರು.


ರವಿಯು ಆರೋಗ್ಯದಿಂದ ಬೆಳೆಯುತ್ತಿರುವುದರಿಂದ ದಿನಗಳು ಬಹಳ ಬೇಗ ಕಳೆಯುತಿದ್ದವು. ಸ್ನೇಹಿತರ ಮನೆಗಳಿಗೆ ಭೇಟಿ, ಹೊರಸಂಚಾರ (picnic), ಹೀಗೆ ಕಾಲ ಕಳೆಯುತ್ತಿತ್ತು.
ಗಣತಂತ್ರ ದಿವಸ, ಸಾಂಸ್ಕೃತಿಕ ಕಾರ್ಯಕ್ರಮ ,ಯೋಲ 
ಅಲ್ಲ್ಲಿಯ ಶಾಲೆಗಳಿಗೆ ಜುಲೈ - ಆಗೋಸ್ಟ್ ಬೇಸಿಗೆ ರಜೆ. ಎರಡು ವರ್ಷಕ್ಕೊಮ್ಮೆ ಸರಕಾರದಿಂದ ಊರಿಗೆ ಹೋಗಿ ಬರಲು ವಿಮಾನದ ಟಿಕೆಟನ್ನು ಕೊಡುತ್ತಿರುವರು, ಹಾಗೇ  1982 ರ ಜುಲೈ ತಿಂಗಳ ರಜೆಗೆ ಊರಿಗೆ ಹೋಗುವ ಮುನ್ನ ಲಂಡನ್ ನಲ್ಲಿ ಕೆಲವು ದಿನ ಇದ್ದು, ಅಲ್ಲಿಯ ಪ್ರೇಕ್ಷಣಿಯ ಸ್ತಳಗಳನ್ನು ನೋಡಿ ಬೊಂಬಾಯಿ ಹಾದಿಯಾಗಿ ಊರಿಗೆ ತೆರಳಿದೆವು.

ರವಿ  ನಾಮಕರಣ, ಬಿರ್ತಿ, ಸಾಲಿಕೇರಿ  2/10/1982 


ಲಂಡನ್ ಭೇಟಿ 
ಹಾಗೆಯೇ ಸಪ್ಟಂಬರ ತಿಂಗಳಲ್ಲಿ ವಾಪಸ್ಸು ನೈಜೆರಿಯಾದ ಯೋಲ ಪೇಟೆಗೆ ತೆರಳಿ , ಪುನ ಭೋದನೆಯ ಕಾಯಕ ಪ್ರಾರಂಭವಾಯಿತು. ಅಲ್ಲಿರುವ ಭಾರತೀಯರೊಡನೆ ಒಮ್ಮೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾಡಿದ್ದ ನೆನಪು. ಅದು ಗಣತಂತ್ರ ಸಂಭ್ರಮಾಚರಣೆ ಇರಬೇಕು. ಹಾಡುಗಳು, ನೃತ್ಯ, ಫಲಾಹಾರ ಇತ್ಯಾದಿ.
1983 ರ ಜುಲೈ ತಿಂಗಳಲ್ಲಿ ಯೋಲದಿಂದ ಸುಮಾರು 120 ಕಿ.ಮೀ. ದೂರದ ಗುಯುಕ್ ಎಂಬ ಹಳ್ಳಿಯ ಶಾಲೆಗೆ ವರ್ಗಾವಣೆ ಆಯಿತು.

ಮುಂದುವರಿಯುದು....... ಭಾಗ 6

No comments:

Post a Comment