Saturday, July 11, 2020

AUTOBIOGRAPHY (3) - LIFE JOURNEY(ವೃತ್ತಿ ಜೀವನ)

ಬಯೋಗ್ರಫಿ - 3 - ವೃತ್ತಿ ಜೀವನ, ಬದುಕಿನ ಪಯಣ 
ಶುಕ್ರವಾರ, ಜುಲೈ 10, 2020

ಎಲ್ಲಿಂದ ಪ್ರಾರಂಭಿಸಲಿ...?
1. ಲೆಕ್ಚರರ್ - ಮಣಿಪಾಲ ಇಂಜಿನಿಯರಿಂಗ್ ಕಾಲೇಜು, ಮಣಿಪಾಲ 
ಸುರತ್ಕಲ್ ಇಂಜಿನಿಯರಿಂಗ್ ಕಾಲೇಜಿನ ಎಮ್.ಟೆಕ್.ಅಭ್ಯಾಸವನ್ನು ಮೂರು ತಿಂಗಳಿಗೆ ಬಿಟ್ಟು, 1970 ರ ಅಕ್ಟೋಬರ ತಿಂಗಳಲ್ಲಿ ಮಣಿಪಾಲ ಇಂಜಿನಿಯರಿಂಗ್ ಕಾಲೇಜಿಗೆ (Manipal Engineering College) ಭೌತಶಾಸ್ತ್ರದ ಉಪನ್ಯಾಸಕನಾಗಿ (Physics Lecturer) ಸೇರಿದ್ದು ಆಯಿತು.

ಅದು ಪ್ರಥಮ ವರ್ಷದ, ಪ್ರಥಮ ಸೆಮಿಸ್ಟರ್ ನ ಇಂಜಿನಿಯರಿಂಗ್ ವಿಧ್ಯಾರ್ಥಿಗಳಿಗೆ ಭೌತಶಾಸ್ತ್ರದ ಭೋಧನೆ. ಸುಮಾರು 70-80 ವಿಧ್ಯಾರ್ಥಿ ಗಳಿರುವ ಕ್ಲಾಸಿನಲ್ಲಿ ಹಲವಾರು ಆಸಕ್ತಿ ಇಲ್ಲದೆ ಕುಳಿತಿರುವವರು, ಕೆಲವರು ಕೀಟಲೆ ಮಾಡಲೆಂದೇ ಕುಳಿತಿರುವವರು. ಕೆಲವೊಮ್ಮೆ ಅವರನ್ನು ನಿಭಾಯಿದುವುದೇ ಕಷ್ಟ ವಾದರೂ ಮುಂದುವರಿಸಿಕೊಂಡು ಒಂದು ಗಂಟೆಯ ಭೋಧನೆಯನ್ನು ಮಾಡುತಿದ್ದೆ. ಶ್ರೀ.ಕೆ. ಮೋಹನ ಪೈ (ವಿಭಾಗದ ಮುಖ್ಯಸ್ಥ), ಐ. ನಾರಾಯಣ ಅವರು  ಸಹೋದ್ಯೋಗಿ ಗಳಗಿದ್ದರು. ಬಿ. ವಿ.ಕೃಷ್ಣಮೂರ್ತಿ ಅವರು ಪ್ರಾಂಶುಪಾಲ ರಾಗಿದ್ದ ನೆನಪು.

ಇದೇ ಸಮಯದಲ್ಲಿ ವಿದೇಶಕ್ಕೆ ಹೋಗಿ ಕೆಲಸ ಮಾಡುವ ಹಂಬಲ, ಅಸೆ ಸುರುವಾಯ್ತು. ಆಫ್ರಿಕ, ಅಮೇರಿಕ, ಆಸ್ಟ್ರೇಲಿಯ, ಇಂಗ್ಲಂಡ್ ಮುಂತಾದ ದೇಶಗಳಿಗೆ, ಕೆಲಸ ಹುಡುಕುವುದು, ಅರ್ಜಿ ಕಳುಹಿಸುವುದು ನಿರಂತರವಾಗಿ ನಡೆಯುತ್ತಿತ್ತು. ಈಗಿದ್ದಂತೆ ಆಗ ಇಮೈಲ್, ಇಂಟರ್ನೆಟ್ ಸೌಲಭ್ಯಗಳು ಇರಲಿಲ್ಲ. ಅಂಚೆ ಮೂಲಕ ಅರ್ಜಿ ಕಳುಹಿಸುವುದು, ಉತ್ತರಕ್ಕಾಗಿ ಕಾಯುವುದು. ಇದೇ, ಸಮಯದಲ್ಲಿ ಪದ್ಮನಾಭ ಅಣ್ಣನ ಸ್ನೇಹಿತರೊಬ್ಬರು, ಶ್ರೀ ನಾರಾಯಣ ಪದಕಣ್ಣಾಯರು, ಆಫ್ರಿಕ ಖಂಡದ ಸಿಯಾರ ಲಿಯೋನ್ ಎಂಬ ದೇಶದ ರಾಜಧಾನಿ  ಫ್ರಿಟೌನ್ ಎಂಬಲ್ಲಿ ಅಧ್ಯಾಪಕರಾಗಿ ಕೆಲಸ ಮಾಡುತ್ತಿರುವುದು ತಿಳಿದು, ಅವರು ರಜೆಯಲ್ಲಿ ಬಂದಿರುವುದರಿಂದ ಮಂಗಳೂರಿಗೆ ಹೋಗಿ ಅವರನ್ನು ಭೇಟಿ ಮಾಡಿ, ಅರ್ಜಿಯೊಂದನ್ನು ಕೊಟ್ಟು ಬಂದಿದ್ದಾಯಿತು. ಅವರು ವಾಪಸ್ಸು ಹೋದ ನಂತರ ಅದಕ್ಕೆ ಪುಷ್ಟಿ ಕೊಡುವುದಾಗಿ ತಿಳಿಸಿದ್ದು ಸಂತಸವಾಯಿತು.

2. ಮೆತೊದಿಸ್ಟ್ ಗರ್ಲ್ಸ್ ಹೈ ಸ್ಕೂಲ್, ಫ್ರಿ ಟೌನ್ (Methodist Girls High school, Freetown, Sierra Leone))
ಸುಮಾರು ಜುಲೈ 1971 ರ ಸಮಯದಲ್ಲಿ ಅಲ್ಲಿನ ಮೆತಡಿಸ್ಟ್ ಗರ್ಲ್ಸ್ ಹೈಸ್ಕೂಲ್ (Methodist Girls High School, Freetown) ನಲ್ಲಿ ಭೌತಶಾಸ್ತ್ರದ ಅಧ್ಯಾಪಕ ಕೆಲಸಕ್ಕೆ ಸೇರಲು ಕಾಗದವು ಬಂತು. ಖುಷಿಯೋ, ಖುಶಿ. ವಿದೇಶಕ್ಕೆ ಹೋಗುವ ಸಂಭ್ರಮ, ಕಾತುರ. ಇನ್ನು ಹೊರ ದೇಶಕ್ಕೆ ಹೋಗುವ ತಯಾರಿ, ಪಾಸ್ ಪೋರ್ಟ್,ವೀಸಾ , ವಿಮಾನದ ಟಿಕೆಟ್, ಆರೋಗ್ಯದ ಕಾರ್ಡ್, ಇತ್ಯಾದಿ, ಇತ್ಯಾದಿ. ಕಾಲೇಜಿಗೆ ಹೋಗುವ ಕೆಲಸ ಮುಂದುವರಿಯುತ್ತಾ ಇತ್ತು. ಒಂದೆರಡು ತಿಂಗಳಲ್ಲಿ ಪಾಸ್ ಪೋರ್ಟ್ ಸಿಕ್ಕಿಯೂ ಆಯಿತು.
ಫ್ರೀ ಟೌನ್ ನಲ್ಲಿ ಕೆಲಸಕ್ಕೆ ಸೇರುವ ಪತ್ರದೊಂದಿಗೆ, ದೆಹಲಿಯ ಸಿಯಾರ ಲಿಯೋನ್ ಎಂಬಸ್ಸಿಗೆ (High Commission) ತೆರಳಿ ವೀಸಾ ಅರ್ಜಿಯನ್ನು ಕೊಟ್ಟು ಆಯಿತು. ಅವರಿಗೆ ಫ್ರಿ ಟೌನ್ ನಿಂದ confirmation ಬರುವ ವರೆಗೆ ಕಾಯಬೇಕು ಎಂದು ತಿಳಿಸಿದರು. ಹಾಗೆ ದೆಹಲಿಯಿಂದ ವಾಪಸ್ಸು ಬಂದು ಕಾಲೇಜಿನ ಕೆಲಸ ಮುಂದುವರಿಸಿ, ದಿನಾ ವೀಸಾ ಕ್ಕಾಗಿ ಕಾಯಬೇಕಾಯಿತು. ಆಗಸ್ಟ್, ಸೆಪ್ಟೆಂಬರ, ಅಕ್ಟೋಬರ ತಿಂಗಳುಗಳು ಕಳೆಯುತ್ತಿತ್ತು.  ಇಂಜಿನಿಯರಿಂಗ್ ಕಾಲೇಜಿಗೆ ರಾಜೀನಾಮೆ ಕೊಟ್ಟು, ಅಲ್ಲಿಂದ ಹೊರ ಬಂದೂ ಆಯಿತು.
 ವಿದೇಶ ಪ್ರಯಾಣ, ಆಫ್ರಿಕಾದ ಸಿಯಾರ ಲಿಯೋನ್ ದೇಶದ ಫ್ರಿಟೌನ್ :
ಅಂತೂ ಅಕ್ಟೋಬರ 15 ರ ಸುಮಾರಿಗೆ ವೀಸಾ ಬಂತು. ಮಂಗಳೂರಿನಿಂದ, ಬೊಂಬಾಯಿ, ಇಜಿಪ್ಟಿನ ಕೈರೋ, ನೈಜಿರಿಯಾದ ಲಾಗೊಸ್ ನಂತರ ಫ್ರಿ ಟೌನ್ .... ವಿಮಾನದ ಪಯಣ.

ಸೀತಾರಾಮ ಅಣ್ಣಯ್ಯ, ಅಪ್ಪಯ್ಯ, ನಾನು,ಶೋಭಾ, ಪದ್ಮನಾಭ ಅಣ್ಣಯ್ಯ, ಲೀಲ ಅತ್ತಿಗೆ, ಶ್ರೀಕಾಂತ, ಸುರೇಶ.
ಉಡುಪಿಯ ಗುರುಕೃಪ ಸ್ಟುಡಿಯೋದ ಮುಂಭಾಗ 

ಪ್ರಥಮವಾಗಿ ವಿದೇಶಕ್ಕೆ ಹೋಗುವ ಸಂಭ್ರಮ. ಅಣ್ಣನ ಅಂಬಾಸಡರ್ ಕಾರಿನಲ್ಲಿ ಮಂಗಳೂರಿನ ಬಜ್ಪೆ ವಿಮಾನ ನಿಲ್ದಾಣಕ್ಕೆ ಪ್ರಯಾಣ. ದಾರಿಯಲ್ಲಿ ಕಟಿಲಿನ ದೇವಸ್ಥಾನಕ್ಕೆ ಭೇಟಿ, ದೇವರ ದರ್ಶನ, ಮತ್ತೆ ವಿಮಾನ ನಿಲ್ದಾಣ.
ಮಧ್ಯಾಹ್ನ 2 ಗಂಟೆಗೆ ಇಂಡಿಯನ್ ಏರ್ಲೈನ್ಸ್ ವಿಮಾನ ಬಂದು, ಎಲ್ಲರಿಗೆ ಬೈ ಬೈ ಹೇಳಿ, ಪ್ರಥಮವಾಗಿ ವಿದೇಶಕ್ಕೆ ಹೋಗುವ ಪ್ರಾರಂಭ. ಬೊಂಬಾಯಿ ವಿಮಾನ ನಿಲ್ದಾಣ ಸೇರಿ, ಮುಂದಿನ ಪ್ರಯಾಣ ಕೈರೋಗೆ, ಮಧ್ಯರಾತ್ರಿಯ ವರೆಗೆ ಕಾದು,ವಿದೇಶಕ್ಕೆ ಹೋಗುವ ಕ್ರಮಗಳನೆಲ್ಲ, ಪಾಸ್ಪೋರ್ಟ್, ಎಮಿಗ್ರೆಶನ್ ಚೆಕ್, ವೀಸಾ ಚೆಕ್, ಸೆಕ್ಯುರಿಟಿ ಎಲ್ಲ ಮುಗಿಸಿ ಅಂತರ ರಾಷ್ಟೀಯ ವಿಮಾನ ಏರಿದ್ದೂ ಆಯಿತು. ಮೂರು ಗಂಟೆಯ ಪಯಣ ಕೈರೋ ಗೆ, ಅಲ್ಲಿ ಎರಡು ಗಂಟೆಗಳ ಕಾಲ ಕಾದು, ನೈಜಿರಿಯಾದ ರಾಜಧಾನಿ ಲಾಗೊಸ್ ಗೆ ಇನ್ನೊಂದು ವಿಮಾನದಲ್ಲಿ ಪ್ರಯಾಣ. ಅಲ್ಲಿಂದ ಫ್ರಿ ಟೌನ್ ನಗರಕ್ಕೆ ಮಾರನೇ ದಿನ ವಿಮಾನ ಇದ್ದುದರಿಂದ ರಾತ್ರಿ ಹೋಟೆಲಿನಲ್ಲಿ ಇರುವಿಕೆ. ಮಾರನೇ ದಿನ ಬೆಳಿಗ್ಗೆಯ ನೈಜಿರಿಯಾ ಏರ್ ವೇಸ್ ನಲ್ಲಿ ಪಶ್ಚಿಮ ಆಫ್ರಿಕಾದ (West Africa) ಘಾನಾ, ಐವರಿ ಕೋಸ್ಟ್,ದೇಶಗಳನ್ನು ದಾಟಿ ಸಿಯಾರ ಲಿಯೋನ್ ನ ರಾಜಧಾನಿ ಫ್ರಿ ಟೌನ್ ತಲುಪಿದ್ದಾಯಿತು. ಅದಾಗಲೇ ಪದಕನ್ನಾಯರು, ಅವರ ಪತ್ನಿ (ವಸಂತಿ), ಮಕ್ಕಳು (ಶಮ, ಕಿಶನ್) ಅವರೊಡನೆ ಶಾಲೆಯ ಆವರಣದಲ್ಲಿ ವಾಸವಗಿದ್ದರಿಂದ ಅವರ ಮನೆಗೆ ಹೋದದ್ದೂ ಆಯಿತು. ಕೆಲ ದಿನಗಳ ನಂತರ, ಬೇರೊಂದು ಕ್ವಾರ್ಟರ್ಸ್ ಸಿಕ್ಕಿ ಅಲ್ಲಿಯ ವಾಸ ಪ್ರಾರಂಭವಾಯಿತು.
ಶಾಲೆ ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ವರೆಗೆ ಪಾಠಗಳು. ಹೈಸ್ಕೂಲ್ ಹೆಣ್ಣು ಮಕ್ಕಳು, ಸಿಯಾರ ಲಿಯೋನ್ ಪ್ರಜೆಗಳು, ಆಫ್ರಿಕಾದ ಕಪ್ಪು ಬಣ್ಣ, ಹೊಸತರಲ್ಲಿ ಎಲ್ಲವೂ ಭಿನ್ನವಾಗಿ ಕಂಡಿತು. ಸ್ವಲ್ಪ ಸಮಯದ ನಂತರ ಅದು ಅಭ್ಯಾಸವಾಯಿತು. ವಾರಾಂತ್ಯದಲ್ಲಿ ಅಲ್ಲಿ, ಇಲ್ಲಿ ತಿರುಗಾಟ, ಪೇಟೆ ಫ್ರೀಟೌನ್ ಒಂದು ಸಣ್ಣ ಜಾಗ, ಒಂದು ಸೆಕೆಂಡ್ ಹ್ಯಾಂಡ್ ಮೋಟಾರ್ ಸೈಕಲನ್ನು ಕೊಂಡದ್ದಾಯಿತು. ಪೇಟೆಯಲ್ಲಿ ಅದನ್ನು ನಿಲ್ಲಿಸಿ ಒಂದು ಗ್ರಂಥಾಲಯಕ್ಕೆ ಹೋಗಿ ವಾಪಸ್ಸು ಬರುವಾಗ ಅದು ಕಾಣೆಯಾಗಿತ್ತು. ನಂತರ ಅದರ ಸುದ್ದಿಯೇ ಸಿಕ್ಕಿಲ್ಲ.


ಶ್ರೀಲಂಕಾದವರಾದ ರಂಜಿತ್ ಕುಟ್ಟಪಿಟಿಯ, ಕಂದವೇಲು  ಸ್ನೇಹಿತರಾಗಿದ್ದರು. ಅಂದು ವರ್ಷದ ನಂತರ ಒಂದು ಸಣ್ಣ ಸೆಕೆಂಡ್ ಹ್ಯಾಂಡ್ ಮಿನಿ ಕಾರೊಂದನ್ನು ಖರೀದಿಸಿ ಅದರಲ್ಲಿ ಡ್ರೈವಿಂಗ್ ಅಭ್ಯಾಸ ಪ್ರಾರಂಬಿಸಿ ಲೈಸೆನ್ಸ್ ಪಡಕೊಂಡಿದ್ದೂ ಆಯಿತು.
ಒಂದು ನೂರು ಕಿಲೋಮೀಟರು ದೂರದ "ಬೊ" ಎಂಬ ಸಣ್ಣ ಸ್ತಳಕ್ಕೆ ಕೆಲವರು ಬಾರಿ ಹೋದ ನೆನಪು.ಭಾರತೀಯ ಹೋಟೆಲ್ಲುಗಳು ಎಲ್ಲೂ ಇರದು.
1973 ರ ಜುಲೈ/ಆಗೋಸ್ಟ್ ಸಮಯದಲ್ಲಿ ನೈಜಿರಿಯಾ ದೇಶದ  ಸರಕಾರಿ ಶಾಲೆಗಳಿಗೆ ಅಧ್ಯಾಪಕರುಗಳು ಬೇಕೆಂಬ ಸುದ್ದಿಯಿಂದ ಅಲ್ಲಿಯ ಶಿಕ್ಷಣ ವಿಭಾಗಕ್ಕೆ ಅರ್ಜಿಯನ್ನು ಕಳುಹಿಸಿ, ಅಲ್ಲಿಯ ಹೈಕಮಿಷನ್ ನಲ್ಲಿ ಇಂಟರ್ವ್ಯೂ ನಡೆದು, ಆಯ್ಕೆಯೂ ಆಯಿತು. ಎಮ್. ಜಿ. ಎಚ್.ಎಸ್.ಗೆ ರಾಜೀನಾಮೆ ಇತ್ತು, 1974 ಜನವರಿಯಲ್ಲಿ ಊರಿಗೆ ಬಂದು, ಫೆಬ್ರವರಿ ತಿಂಗಳಲ್ಲಿ ಪುನಃ ನೈಜಿರಿಯಾ ದೇಶದ ಮೈದುಗುರಿ ಎಂಬ ಸ್ಥಳಕ್ಕೆ ಹೋಗಿ, ಒಂದು ತಿಂಗಳು ಹೋಟೆಲಿನಲ್ಲಿ ಇದ್ದು ಕಾದು, ಅಲ್ಲಿಂದ 250 ಕಿ.ಮಿ.ದೂರದ ಗೊಂಬೆ ಎಂಬ ಸಣ್ಣ ಪೇಟೆಯಲ್ಲಿಯ Doma Government Secondary School, ಭೌತಶಾಸ್ತ್ರದ ಅಧ್ಯಾಪಕನಾಗಿ ಕೆಲಸ ಪ್ರಾರಂಭಿಸಿದ್ದಾಯಿತು.

ಮುಂದುವರಿಯುವುದು.... ಭಾಗ 4.............

No comments:

Post a Comment