Sunday, July 12, 2020

ಶೋಭಾಳ ಬರಹಗಳು - ಭಾಗ 3 (ನೆನಪುಗಳು)

ಸೋಮವಾರ , ಜುಲೈ 13, 2020 


ಶೋಭಾ, (3/9/1966) ಅಣ್ಣನ ಮಗಳು, ಸಾಗರ ಹೊಂಗಿರಣ ಸಂಸ್ಥೆಯ  ಸಂಸ್ಥಾಪಕಿ, ಪ್ರಾಂಶುಪಾಲೆ, ಗ್ರಹ ಬಂಧನದ (lockdown) ಈ ಸಮಯದಲ್ಲಿ ಹಲವಾರು ಲೇಖನಗಳನ್ನು ಬರದು ಬಾಲ್ಯ, ತನ್ನ ಹಿರಿಯರು, ಪರಿಸರ, ಜೀವನದ ಅನುಭವ ಇತ್ಯಾದಿ ವಿಷಯಗಳನ್ನು ಸುಂದರವಾಗಿ, ಅರ್ಥಪೂರ್ಣವಾಗಿ ಬರೆದು ಫೆಸ್ಬುಕ್ , ಇನ್ಸ್ಟಗ್ರಾಂ ಖಾತೆಗಳಲ್ಲಿ ಹಂಚಿ ಕೊಂಡಿರುತ್ತಾಳೆ. ಅವಳ ಬರವಣಿಗೆಯ ವೈಖರಿ, ವಿಷಯಗಳ ನಿರೂಪಣೆ ಮನ ಮುಟ್ಟುವಂತಿದ್ದು ನೆನಪಿಗೋಸ್ಕರ ಇಲ್ಲಿ ಇರಿಸಿಕೊಂಡಿದ್ದೇನೆ.
===========================================================



100. ಅನಿಸಿಕೆ - ಅಡಿಗೆ 
ಈಗೆಲ್ಲ ಅಡುಗೆ ಮಾಡುವುದು ಒಂದು ದೊಡ್ಡ ವಿಷಯವೇ ಅಲ್ಲ. ಗ್ಯಾಸ್, ಕರೆಂಟ್ ಒಲೆ, ರೈಸ್ ಕುಕ್ಕರ್, ಓವನ್ ಅಂತೆಲ್ಲ ಆಧುನಿಕ ಸಾಧನಗಳು ಅಡುಗೆಯ ಪ್ರಕ್ರಿಯೆಯನ್ನು ಸುಲಭಗೊಳಿಸಿವೆ. ನಾನು ಚಿಕ್ಕವಳಿರುವಾಗ ನನ್ನಮ್ಮ ಸೀಮೆಎಣ್ಣೆ ಸ್ಟವ್ ಹಾಗೂ ಕರೆಂಟ್ ಒಲೆ ಬಳಸಿ ಅಡುಗೆ ಮಾಡುವುದನ್ನು ನೋಡಿದ್ದೆ. ಸಾಲಿಕೇರಿಯಲ್ಲಿ ಕೊಚ್ಚಕ್ಕಿ ಅನ್ನವನ್ನು ಕಾಶಿಯತ್ತೆ ಕಟ್ಟಿಗೆ ಒಲೆಯಲ್ಲಿ ಮಾಡುತ್ತಿದ್ದರು. ನಂತರದ ದಿನಗಳಲ್ಲಿ ಗ್ಯಾಸಿನ ಉಪಯೋಗ ಬರುತ್ತಿದ್ದಂತೆಯೆ ನಮ್ಮ ಮನೆಯಲ್ಲೂ ಗ್ಯಾಸ್ ಸ್ಟವ್ ಬಂದು ಅಡುಗೆ ಮಾಡುವುದು ಸುಲಭವಾಯಿತು.
ನಮ್ಮ ಕೆಳಮನೆಯಲ್ಲಿ ಈಗಲೂ ಕೂಡಾ ಹೆಚ್ಚು ಕಮ್ಮಿ ಎಲ್ಲ ಅಡುಗೆಯನ್ನು ಕಟ್ಟಿಗೆ ಒಲೆಯ ಮೇಲೆಯೇ ಮಾಡುತ್ತಾರೆ. ನಾನು ಮದುವೆಯಾಗಿ ಬಂದಾಗ ದೋಸೆ ಹಾಗೂ ತಾಳಿಪಟ್ಟು ಮಾಡುವ ಜವಾಬ್ದಾರಿ ತೆಗೆದುಕೊಂಡು ಕಟ್ಟಿಗೆ ಒಲೆಯ ಮುಂದೆ ಕೂರುತ್ತಿದ್ದೆ. ಆದರೆ ಬೆಂಕಿಯನ್ನು ಮ್ಯಾನೇಜ್ ಮಾಡಲು ನನಗೆ ಬರುತ್ತಿರಲಿಲ್ಲ. ಈಗಲೂ ಬರುವುದಿಲ್ಲ😊 ಆ ವಿಷಯ ಬೇರೆ ಬಿಡಿ. ಹೀಗಾಗಿ ನಾನು ಅಡುಗೆ ಮಾಡಿದರೆ ಬೆಂಕಿ ಹೊಂದಿಸಲು ನನಗೆ ಮನೆಯವರ ಸಹಾಯ ಬೇಕೇ ಬೇಕಿತ್ತು.
ಮಳೆಗಾಲ ಹಾಗೂ ಚಳಿಗಾಲದಲ್ಲಿ ಕಟ್ಟಿಗೆ ಒಲೆಯ ಮುಂದೆ ಕೂತು ಅಡುಗೆ ಮಾಡುವ ಅನುಭವ ಆಪ್ಯಾಯಮಾನವಾದದ್ದು. ಹೊರಗಿನ ಚಳಿಗೆ ಒಲೆಯ ಮುಂದಿನ ಬಿಸಿ ಖುಷಿ ಕೊಡುತ್ತಿತ್ತು. ಅಡುಗೆ ಮಾಡಿ ಮುಗಿದ ಮೇಲೆ ಅದಕ್ಕೆ ತಾಗಿಕೊಂಡಿರುವ ಕಟ್ಟೆಯ ಮೇಲೆ ಕುಳಿತರೆ ಅದರ ಬಿಸುಪು ಹಿತಕರವಾಗಿರುತ್ತಿತ್ತು. ನಾನು ಆ ಕಟ್ಟೆಯ ಮೇಲೆ ಕೂರುವ ಖಾಯಂ ಗಿರಾಕಿ ಆಗಿದ್ದೆ. ಈಗಲೂ ನಾನು ಕೆಳಮನೆಗೆ ಹೋದರೆ ನನ್ನನ್ನು ಸೆಳೆಯುವ ಜಾಗ ಆ ಕಟ್ಟಿಗೆ ಒಲೆಯ ಪಕ್ಕದ ಕಟ್ಟೆ.
ಒಲೆಗೆ ಬೆಂಕಿ ಒಟ್ಟುವುದು ಒಂದು ಕಲೆ. ಹದವಾದ ಸೈಜಿನ ಕಟ್ಟಿಗೆಗಳನ್ನು ಒಂದರ ಮೇಲೆ/ಪಕ್ಕದಲ್ಲಿ ಒಂದರಂತೆ ಜೋಡಿಸಿ ಒಣಗಿದ ಅಡಿಕೆ ಹಾಳೆಯ ಸಣ್ಣ ತುಂಡುಗಳನ್ನು ನಡುವಿನಲ್ಲಿ ಇರಿಸಿ ಬೆಂಕಿ ಹಚ್ಚುವುದು ಹಾಗೂ ಬೆಂಕಿ ಹತ್ತದಿದ್ದಾಗ ಊದು ಕೊಳವೆಯಿಂದ ಊದಿ ಬೆಂಕಿ ಹತ್ತುವ ಹಾಗೆ ಮಾಡುವುದು ನೋಡಲು ಚೆಂದ, ಮಾಡಲು ಕಷ್ಟ. ಎಷ್ಟೋ ಸಲ ಊದು ಕೊಳವೆಯಿಂದ ಊದುವಾಗ ಮೂಗು, ಕಣ್ಣಿನೊಳಗೆ ಹೊಗೆ ಹೋಗಿ ಕೆಮ್ಮುವ ಪ್ರಮೇಯವೂ ಇರುತ್ತದೆ. ಮಳೆಗಾಲದಲ್ಲಿ ಕಟ್ಟಿಗೆಗೆ ಬೆಂಕಿ ಹತ್ತುವುದೇ ಬಹಳ ಕಷ್ಟದ ಕೆಲಸ. ಒದ್ದೆ ಕಟ್ಟಿಗೆಯಾದರೆ ಅಡುಗೆ ಮನೆಯೆಲ್ಲಾ ಹೊಗೆಯಿಂದ ತುಂಬಿ ಬಿಡುವುದು ಸರ್ವೇ ಸಾಧಾರಣ ವಿಷಯ. ಹೀಗಾದಲ್ಲಿ ಕೆಲವೊಮ್ಮೆ ಮಾಡಿದ ಟೀಗೆ ಹೊಗೆ ಸುತ್ತಿದ ವಾಸನೆ ಬರುವ ಸಾಧ್ಯತೆಯೂ ಇರುತ್ತಿತ್ತು. ಟೀ ಚೆನ್ನಾಗಿದ್ದರೂ ಹೊಗೆ ಸುತ್ತಿದ ವಾಸನೆ ಅದರ ಸೊಗಸನ್ನೇ ತೆಗೆದು ಬಿಡುತ್ತಿತ್ತು. ಆದರೂ ಕಟ್ಟಿಗೆ ಒಲೆಯ ಮೇಲೆ ಮಾಡಿದ ಅಡುಗೆಗೆ ವಿಶೇಷ ರುಚಿ ಇರುತ್ತಿತ್ತು. ಆದರೆ ಪಾತ್ರೆಗಳನ್ನು ತೊಳೆಯುವಾಗ, ಅವಕ್ಕೆ ಹಿಡಿದ ಮಸಿಯನ್ನು ತೆಗೆಯುವಾಗ ಅಡುಗೆ ಕೆಲಸದ ಬಗ್ಗೆಯೇ ಜಿಗುಪ್ಸೆ ಬರುತ್ತಿತ್ತು. ಪಾತ್ರೆ ತೊಳೆದಾದ ಮೇಲೆ ಉಗುರು ಸಂಧಿಗೆ ಸಿಕ್ಕಿದ ಮಸಿ ತೆಗೆಯಲು ಸುಮಾರು ಸಮಯ ಬೇಕಾಗುತ್ತಿತ್ತು.
ಈಗ ಹೆಚ್ಚಿನ ಮನೆಗಳಲ್ಲಿ ವಿಶೇಷ ಸಂದರ್ಭಗಳಲ್ಲೂ ಕಟ್ಟಿಗೆ ಒಲೆಯನ್ನು ಉಪಯೋಗಿಸದೆ ಅಡುಗೆ ಭಟ್ಟರಿಗೆ ಅಡುಗೆಗೆ ದೊಡ್ಡ ಗ್ಯಾಸ್ ಸ್ಟವ್ ಒದಗಿಸಲಾಗುತ್ತಿದೆ. ಹೀಗಾಗಿ ಕಟ್ಟಿಗೆ ಒಲೆ ಉಪಯೋಗಿಸಲ್ಪಡದೆ ಒಂದು ಅಲಂಕಾರಿಕ ವಸ್ತುವಾಗಿರುವುದು ಈಗಿನ ಕಟು ವಾಸ್ತವ!


99. ಹೊಂಗಿರಣ - ನೆನಪುಗಳು 
ನಾವು ಶಾಲೆಗಾಗಿ ಜಾಗ ತೆಗೆದುಕೊಂಡಾಗ ಮಾಡಿದ ಪ್ರಪ್ರಥಮ ಕೆಲಸ ಒಂದು ಬಾವಿಯನ್ನು ತೋಡಿಸಿದ್ದು. ಸುಮಾರು ಐವತ್ತಡಿ ಆಳವಿರಬಹುದಾದ ಬಾವಿಯದು. ಎರಡು ಮೂರು ವರ್ಷ ನಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸಿದ ಕ್ರೆಡಿಟ್ ಅನ್ನು ಆ ಬಾವಿಗೆ ಕೊಡಬೇಕು. ಕ್ಯಾಂಪಸ್ಸಿನ ಜನಸಂಖ್ಯೆ ಹೆಚ್ಚಾದ ಹಾಗೆ, ಕಟ್ಟಡಗಳ ಕಟ್ಟೋಣಕ್ಕೆ ನೀರಿನ ಬೇಡಿಕೆ ಜಾಸ್ತಿಯಾದ ಹಾಗೆ ಆ ಒಂದು ಓಪನ್ ವೆಲ್ ನ ಮೇಲಷ್ಟೇ ನಿರ್ಭರವಾಗಿರುವುದು ಅಷ್ಟು ಸಮಂಜಸವೆಂದೆನಿಸದೆ ಅದರ ಹತ್ತಿರದಲ್ಲೇ ಒಂದು ಬೋರ್ ವೆಲ್ ತೋಡಲಾಯಿತು. ಆ ದಿನ ನಾನು, ರವಿ ಅನುಭವಿಸಿದ ಒತ್ತಡ ಮರೆಯಲಾಗದ್ದು. ಯಾವುದೇ ವಸ್ತುವಿನ ಅನಿವಾರ್ಯತೆ ನಮ್ಮೊಳಗೆ ಎಂತಹ ಒತ್ತಡವನ್ನು ಉಂಟು ಮಾಡುತ್ತದೆಂಬ ಅನುಭವ ಅಂದು ನಮಗಾಯಿತು. ಹೇರಳವಾದ ನೀರು ದೊರೆಯದಿದ್ದಲ್ಲಿ ಸಂಸ್ಥೆಯನ್ನು ನಡೆಸುವುದು ಕಷ್ಟದ ಕೆಲಸವಾಗಿತ್ತು. ನಟ್ಟ ನಡು ರಾತ್ರಿಯಲ್ಲಿ ಬಾವಿಯ ಕೊರೆಯುವಿಕೆಯ ಕೆಲಸ ನಡೆಯುವಾಗ ನಮ್ಮ ಆತ್ಮೀಯರ ದೊಡ್ಡ ಗುಂಪೇ ನಮ್ಮೊಡನಿತ್ತು. ಒಂದೊಂದು ಪೈಪ್ ಒಳಗಿಳಿಯುತ್ತಾ ಹೋದಂತೆ, ಬರೀ ಕಲ್ಲಿನ ಪುಡಿ ಮೇಲೆ ಹಾರುತ್ತಿದ್ದಂತೆ ನಮ್ಮಿಬ್ಬರ ಎದೆ ಬಡಿತ ಕೂಡಾ ಅಷ್ಟೇ ತೀವ್ರಗತಿಯಲ್ಲಿ ಮೇಲೇರುತ್ತಿತ್ತು. ಅವತ್ತು ಪ್ರಪಂಚದ ಸರ್ವಧರ್ಮದ ದೇವರುಗಳೆಲ್ಲ ನೆನಪಾದದ್ದಂತೂ ನಿಜ😊 ರಾತ್ರಿ ಒಂದು ಘಂಟೆಯಾದರೂ ನೀರು ಕಂಡು ಬರದಿದ್ದಾಗ ನಮ್ಮ ಜಂಘಾಬಲವೆ ಉಡುಗಿ ಹೋಗಿತ್ತು. "ಏನೇ ಆಗಲಿ, ಇನ್ನೂ ಸ್ವಲ್ಪ ಆಳಕ್ಕೆ ಕೊರೆಯಿರಿ" ಎಂದು ಜೈಗುಡಿಸಿದ್ದೂ ಆಯಿತು. ಪ್ರಾಯಶಃ ಸುಮಾರು ಇನ್ನೂರು ಅಡಿ ಆಳಕ್ಕಿಳಿಯುತ್ತಿದ್ದಂತೆಯೆ ಚಿಮ್ಮಿದ ನೀರು ನಮ್ಮ ಧೈರ್ಯವನ್ನು ಕೂಡಾ ಅದೇ ಪ್ರಮಾಣದಲ್ಲಿ ಚಿಮ್ಮಿಸಿ ನಮ್ಮೊಳಗಿನ ಬಿಸಿಯನ್ನು ತಣ್ಣಗಾಗಿಸಿತು. ಆ ಮೂರು ಇಂಚಿನ ನೀರು ಅಂದು ಕೊಟ್ಟ "ಬಲ" ಇಂದಿಗೂ ಮುಂದುವರೆದುಕೊಂಡು ಹೋಗುತ್ತಿರುವುದು ವಾಸ್ತವ ಸಂಗತಿ.
ತದನಂತರದಲ್ಲಿ ಸಂಸ್ಥೆ ಬೆಳೆಯುತ್ತಿದ್ದಂತೆ, ನೀರಿನ ಅಗತ್ಯ ಏರುತ್ತಿದ್ದಂತೆ ತೋಡಿಸಿದ ನಾಲ್ಕೈದು ಬೋರ್ ವೆಲ್ ಗಳು ಯಶಸ್ವಿಯಾಗದೆ ಪುನಃ ಕೈಕಾಲು ಚೆಲ್ಲಿ ಕೂತಾಗ ಇನ್ನೊಂದು ಬೋರ್ ವೆಲ್ ಯಶಸ್ವಿಯಾಗಿ ನಮ್ಮ ನೀರಿನ ಅಗತ್ಯಗಳನ್ನು ಪೂರೈಸತೊಡಗಿತು. ಕ್ಯಾಂಪಸ್ಸಿನ ಮೇಲ್ಭಾಗದಲ್ಲಿ ಕುಡಿಯಲಿಕ್ಕೆಂದೇ ಮತ್ತೊಂದು ಓಪನ್ ವೆಲ್ ತೋಡಿಸಲಾಯಿತು. ನೀರನ್ನು ಇಂಗಿಸಲಿಕ್ಕಾಗಿ ಇಳಿಜಾರಾಗಿದ್ದ ಹಲವಾರು ಭಾಗಗಳನ್ನು ಸಮತಟ್ಟಾಗಿಸಿ ಹರಿಯುವ ನೀರನ್ನು ಇಂಗುವ ಹಾಗೆ ಮಾಡಲಾಯಿತು. ಹುಲ್ಲನ್ನು ಬೆಳೆಸಿ ನೀರನ್ನು ಇಂಗಿಸಲಾಯಿತು. ಮಾಡಿನ ನೀರನ್ನು ಶೇಖರಿಸಿ ಮಳೆನೀರನ್ನು ಉಪಯೋಗಿಸುವ ಪ್ರಯತ್ನ ಮಾಡಲಾಯಿತು. ಮರಗಿಡಗಳನ್ನು ಹೆಚ್ಚೆಚ್ಚು ಬೆಳೆಸಲಾಯಿತು. ಮರಕ್ಕೆ ಕಟ್ಟೆ ಕಟ್ಟಿ ನೀರನ್ನು ಹಿಡಿದಿಡುವ ಪ್ರಯತ್ನ ಮಾಡಲಾಯಿತು. ತೋಡಿನಲ್ಲಿ ಅಲ್ಲಲ್ಲಿ ಕಲ್ಲು ಕಟ್ಟಿ ಹರಿಯುವ ನೀರನ್ನು ತಡೆ ಹಿಡಿಯಲಾಯಿತು. ಹೀಗೆ ಇರುವ ಎರಡು ಬೋರ್ ವೆಲ್ ಹಾಗೂ ಎರಡು ಓಪನ್ ವೆಲ್ ಗಳ ಜೊತೆಗೆ ಮಳೆನೀರಿನ ಇಂಗಿಸುವಿಕೆ ನಮಗೆ ನೀರಿನ ಬವಣೆಯ ಬಿಸಿ ತಟ್ಟದಂತೆ ಮಾಡಿದೆ. ಇದಲ್ಲದೆ ನಮ್ಮಲ್ಲಿರುವ ಎಲ್ಲರಿಗೂ ನೀರಿನ ಮಿತ ಬಳಕೆಯ ಕರೆ ಕೊಟ್ಟಿದೆ. ಏಕೆಂದರೆ ಒಂದು ಸಂಸ್ಥೆಯ ಬೆಳವಣಿಗೆಗೆ ಜನ - ಧನ ಬಲ ಇದ್ದರಷ್ಟೇ ಸಾಲದು, ಜಲ ಬಲವೂ ಅಷ್ಟೇ ಅಗತ್ಯವಾಗಿದೆ ಎನ್ನುವ ಅರಿವು ನಮ್ಮೆಲ್ಲರಿಗಿದೆ.


98. ನೆನಪುಗಳು - ಚಿಕ್ಕಪ್ಪ 
ಚಿಕ್ಕವಳಿದ್ದಾಗ ಹೆಬ್ರಿಯಿಂದ ಉಡುಪಿಗೆ ಹೋಗುವಾಗ ಮಣಿಪಾಲದ ಎಂಐಟಿಯನ್ನು ನೋಡಿ ನಾನ್ಯಾವಾಗಲೂ "ಚಿಕ್ಕಪ್ಪ ಕಾಲೇಜು" ಅಂತ ಕರೆಯುತ್ತಿದ್ದೆ. ಏಕೆಂದರೆ ನನ್ನ ಚಿಕ್ಕಪ್ಪ ಜಯರಾಮ ಸೋಮಯಾಜಿ ಆ ಕಾಲೇಜಿನಲ್ಲಿ ಕೆಲವು ಕಾಲ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರು.
ಆರು ಅಡಿಗೂ ಮೀರಿ ಎತ್ತರವಿರುವ ನನ್ನ ಚಿಕ್ಕಪ್ಪ ಬಹಳ ಬುದ್ಧಿವಂತರು. ಹಾರಾಡಿ ಶಾಲೆಯಲ್ಲಿ ಪ್ರೈಮರಿ, ಉಪ್ಪಿನಕೋಟೆ ಶಾಲೆಯಲ್ಲಿ ಮಿಡಲ್ ಸ್ಕೂಲ್, ಬ್ರಹ್ಮಾವರದಲ್ಲಿ ಹೈಸ್ಕೂಲ್, ಪಿಯುಸಿ ಓದಿದ ನನ್ನ ಚಿಕ್ಕಪ್ಪ ಉಡುಪಿಯ ಎಂಜಿಎಂ ನಲ್ಲಿ ಬಿ.ಎಸ್ಸಿಯನ್ನು rank ಪಡೆದು ಮುಗಿಸಿದರು. ತದನಂತರ ಮೈಸೂರು ಯೂನಿವರ್ಸಿಟಿ ಯಲ್ಲಿ rankನೊಂದಿಗೆ ಫಿಸಿಕ್ಸ್ ಎಂ.ಎಸ್ಸಿ ಮುಗಿಸಿ ಮಣಿಪಾಲದ ಎಂಐಟಿಯಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಿಸಿದರು. ಅಪ್ಪನ ಸ್ನೇಹಿತರಾದ ಪದಕಣ್ಣಾಯರು ಆಫ್ರಿಕಾದಲ್ಲಿ ಇದ್ದ ಕಾರಣ ನನ್ನಪ್ಪ ಚಿಕ್ಕಪ್ಪನಿಗೆ ಹೊರದೇಶಕ್ಕೆ ಪ್ರಾಧ್ಯಾಪಕರಾಗಿ ಹೋಗಲು ಒತ್ತಾಸೆ ನೀಡಿದರು. ನಮ್ಮ ಕುಟುಂಬದಲ್ಲಿ ಹೊರದೇಶಕ್ಕೆ ಹೋದ ಪ್ರಪ್ರಥಮ ವ್ಯಕ್ತಿ ನನ್ನ ಚಿಕ್ಕಪ್ಪ. ಅವರನ್ನು ವಿಮಾನ ಹತ್ತಿಸಲು ನಾವೆಲ್ಲ ಬಜ್ಪೆ ಏರ್ ಪೋರ್ಟ್ ಗೆ ಹೋಗಿದ್ದದ್ದು ನನಗಿನ್ನೂ ನೆನಪಿದೆ. ಪ್ರಾಯಶಃ ಆಗ ನಾನಿನ್ನೂ ಮೂರ್ನಾಲ್ಕು ವರ್ಷದವಳಿರಬಹುದು. ಆಫ್ರಿಕಾದಲ್ಲಿ ತುಂಬಾ ವರ್ಷಗಳಿದ್ದ ಚಿಕ್ಕಪ್ಪ ಕೊನೆಗೆ ದುಬಾಯಿಗೆ ಬಂದು ಹತ್ತದಿನೈದು ವರುಷ ನೆಲೆಸಿ ಈಗ ಬೆಂಗಳೂರಿನಲ್ಲಿ ತಮ್ಮ ಪತ್ನಿ, ಮಕ್ಕಳೊಡನೆ ವಾಸವಾಗಿದ್ದಾರೆ.
ಎಂಟು ಮಕ್ಕಳಲ್ಲಿ ಕೊನೆಯವರಾದ ಚಿಕ್ಕಪ್ಪ ತುಂಬಾ ಮೃದು ಮನಸ್ಸಿನವರು. ಬಂಧು ಬಳಗದವರ ನಂಟು ಜಾಸ್ತಿ. ನನ್ನ ಅಪ್ಪನಿಗೆ ಅವರು ಮಗನಿದ್ದ ಹಾಗೆ. ಅವರಿಬ್ಬರ ನಡುವೆ ಸುಮಾರು ಇಪ್ಪತ್ತು ವರ್ಷಗಳ ಅಂತರವಿತ್ತು. ಅವರಿಬ್ಬರ ಮಧ್ಯೆ ಹಲವಾರು ವಿಷಯಗಳ ಬಗ್ಗೆ ಅಭಿಪ್ರಾಯ ಭೇದವಿದ್ದರೂ ಅವರಿಬ್ಬರ ಸಂಬಂಧ ಬಹಳ ಆಪ್ತವಾಗಿತ್ತು.
ಆ ಸಮಯದಲ್ಲಿ ಎರಡು ವರ್ಷಕ್ಕೊಮ್ಮೆ ಊರಿಗೆ ಬರುತ್ತಿದ್ದ ಚಿಕ್ಕಪ್ಪನನ್ನು ನಾವೆಲ್ಲ ಚಾತಕ ಪಕ್ಷಿಯಂತೆ ಕಾಯುತ್ತಿದ್ದೆವು. ನನ್ನ ಕಸಿನ್ಸ್ ಗೆ ಸಣ್ಣಮಾವಯ್ಯನಾಗಿದ್ದ ಅವರು ಹೊರದೇಶದಿಂದ ತರುತ್ತಿದ್ದ ಬಟ್ಟೆಗಳು, ಚಾಕೊಲೇಟ್ ಗಳು, ಇತರೆ ವಸ್ತುಗಳು ನಮ್ಮ ಮುಂದೆ ಹೊಸ ಲೋಕವನ್ನು ತೆರೆದಿಡುತ್ತಿದ್ದವು. ಚಿಕ್ಕಪ್ಪ ಕೊಡುಗೈ ದೊರೆ. ಎಲ್ಲಾ ಮಕ್ಕಳಿಗೂ ಅವರವರಿಗೆ ಪ್ರಿಯವಾದ ವಸ್ತುಗಳನ್ನು ತರುತ್ತಿದ್ದರು. ನನ್ನ ಮೇಲೆ ಜಾಸ್ತಿ ಪ್ರೀತಿ ಇದ್ದ ಕಾರಣ ನನಗೆ ಸ್ವಲ್ಪ extra gifts ಸಿಗುತ್ತಿತ್ತು. ಅವರೊಮ್ಮೆ ತಂದು ಕೊಟ್ಟಿದ್ದ ಆಫ್ರಿಕನ್ನರ ದಿರಿಸನ್ನು ನಾನು ಸುಮಾರು ಹತ್ತು ವರ್ಷಗಳ ಕಾಲ ಬಳಸಿದ್ದೆ. ಆದರೂ ಅದು ಹೊಸದರ ಹಾಗೇ ಕಾಣುತ್ತಿತ್ತು. ಕಡು ನೀಲಿ ಬಣ್ಣದ ಆ ದಿರಿಸು ನನಗೆ ಬಹಳ ಪ್ರಿಯವಾಗಿತ್ತು.
ಮೊದಲಿನಿಂದಲೂ ತಿರುಗಾಟಪ್ರಿಯರಾದ ಚಿಕ್ಕಪ್ಪ ಈಗ ಎಪ್ಪತ್ತು ವರ್ಷ ದಾಟಿದರೂ ತಮ್ಮ ತಿರುಗಾಟವನ್ನು ನಿಲ್ಲಿಸಿಲ್ಲ. ಅವರ ಜೀವನೋತ್ಸಾಹವನ್ನು ಮೆಚ್ಚಲೇ ಬೇಕು. ಈಗಲೂ ಕೂಡ ನಮ್ಮೆಲ್ಲರ ಅದೇ ಹಳೆಯ ಚಿಕ್ಕಪ್ಪನಾಗಿ, ನನ್ನ ಕಸಿನ್ಸ್ ಗಳಿಗೆ ಅದೇ ಸಣ್ಣ ಮಾವಯ್ಯನಾಗಿ ನಮ್ಮೆಲ್ಲರೊಡನೆ ಒಡನಾಟವನ್ನಿಟ್ಟುಕೊಂಡಿರುವ ಚಿಕ್ಕಪ್ಪ ಇನ್ನಷ್ಟು ಕಾಲ ಸಂತೃಪ್ತವಾದ ತುಂಬು ಜೀವನವನ್ನು ನಡೆಸಲಿ ಎನ್ನುವ ಹಾರೈಕೆ ನಮ್ಮೆಲ್ಲರದು.


97. ಪರಿಸರ - ಇರುವೆ 
ನಮ್ಮ ಮನೆ ಕಟ್ಟಿ ಹತ್ತು ವರ್ಷಗಳಾದವು. ಈ ಹತ್ತು ವರ್ಷಗಳ ವಿಶೇಷವೇನೆಂದರೆ ದಿನಂಪ್ರತಿ ರಾತ್ರಿ ನಮ್ಮ ಅಡುಗೆ ಮನೆ ಮತ್ತು ಹಾಲಿನಲ್ಲಿ ಬಿಡದೆ ಬರುವ ಕಪ್ಪು ಬಣ್ಣದ ಕಟ್ಟೆಗಳು. ಕಟ್ಟೆ ಎಂದರೆ ದೊಡ್ಡ ಜಾತಿಯ ಇರುವೆ. ಇವುಗಳು ನಿರುಪದ್ರವಿಗಳು. ಕಚ್ಚುವುದಿಲ್ಲ. ಆದರೆ ಮನೆ ತುಂಬಾ ಓಡಾಡುತ್ತವಷ್ಟೇ. ಬೆಳಗಾಗುವಾಗ ಮಾಯವಾಗುತ್ತವೆ. ಹೀಗಾಗಿ ನಾನು ಅವುಗಳ ಬಗ್ಗೆ ಬಹಳ ತಲೆ ಕೆಡಿಸಿಕೊಂಡಿಲ್ಲ.
ಆದರೆ ತಲೆ ಕೆಡಿಸಿಕೊಳ್ಳಬೇಕಾದ ಇನ್ನೊಂದು ಜಾತಿಯ ಇರುವೆ ಇದೆ. ಕಣ್ಣಿಗೆ ಕಾಣದಷ್ಟು ಸಣ್ಣದು. ಒಂದು ರೀತಿಯ ವಿಚಿತ್ರ ಸುವಾಸನೆಯೋ, ವಾಸನೆಯೋ ಇರುವ ಇರುವೆ. ಏನು ಇಟ್ಟರೂ ಬಂದು ಸೇರಿಕೊಂಡು ಮಾಡಿದ ಅಡುಗೆಗೆ ವಿಶಿಷ್ಟ ಘಮವನ್ನು ಕೊಡುತ್ತದೆ. ಮಾಡಿಟ್ಟ ತಿಂಡಿತೀರ್ಥಗಳನ್ನು ಅವುಗಳಿಂದ ದೂರ ಇಡುವುದೇ ಒಂದು ಸವಾಲು. ಬೇಸಿಗೆ ದಿನಗಳಲ್ಲಿ ಅವುಗಳ ಕಾಟ ಜಾಸ್ತಿ.
ನಾನು ಸಾಲಿಕೇರಿಯಲ್ಲಿದ್ದಾಗ ಅಲ್ಲಿ ಹೇರಳವಾಗಿದ್ದದ್ದು ಬೆದರುಕಟ್ಟೆ. ನಿಜಕ್ಕೂ ಕಚ್ಚಿ ಉರಿ ಹಿಡಿಸಿ ಬೆದರಿಸುವ ಕಟ್ಟೆಯೇ ಅದು. ಕೆಂಪು ತಲೆ ಕಪ್ಪು ಮೈಯ್ಯ ಆ ಕಟ್ಟೆ ರಾಜಗಾಂಭೀರ್ಯದಿಂದ ಮನೆ ಇಡೀ ಚಲಿಸುತ್ತಿರುತ್ತದೆ. ತಪ್ಪಿ ಎಲ್ಲಾದರೂ ನಮ್ಮ ಮೈಗೆ ಹತ್ತಿಕೊಂಡರೆ ಕಥೆ ಮುಗಿದ ಹಾಗೇ! ಅದು ಕಚ್ಚಿದ ಉರಿ ಹೋಗಲು ಅರ್ಧ ದಿನ ಬೇಕು. ಅದು ಕಚ್ಚಿದ ಜಾಗ ಊದಿಕೊಳ್ಳುತ್ತದೆ ಕೂಡಾ. ಸಾಗರದ ಕಡೆ ಬೆದರುಕಟ್ಟೆ ಕಡಿಮೆಯೇನೋ?
ಇನ್ನೊಂದು ಸರ್ವೇ ಸಾಧಾರಣ ಇರುವೆ ಓಡಿರುವೆ. ಹದಾ ಸೈಜಿನ ಈ ಇರುವೆ ತನ್ನ ಪಾಡಿಗೆ ತಾನು ಓಡಾಡಿಕೊಂಡು ಸಿಹಿತಿಂಡಿ ಇದ್ದರೆ ಸ್ವಲ್ಪ ರುಚಿನೋಡಿಕೊಂಡಿರುತ್ತದಷ್ಟೇ😊
ಇನ್ನೊಂದು ಕೆಂಪಿರುವೆ. ಕಚ್ಚಿದರೆ ಉರಿಯುತ್ತದೆ. ಬೆದರುಕಟ್ಟೆ ಕಚ್ಚಿದ ಉರಿಯ ಹಾಗಲ್ಲ. ಸ್ವಲ್ಪ ಸಹ್ಯವಾದ ಉರಿ!
ನಮ್ಮ ಮನೆಯ ಹೊರಗೆ ಚೌಳಿ ಅಥವಾ ಚಗಳಿ ದಂಡಿಯಾಗಿದೆ. ಅವು ನಮಗೆ ಯಾವುದೇ ಹಣ್ಣನ್ನು ಕೊಯ್ಯಲು ಬಿಡದ ಫಲ ರಕ್ಷಕರು. ಮಾವು, ಗೇರು, ಪೇರಳೆ ಹೀಗೆ ಎಲ್ಲಾ ಮರಗಳಲ್ಲಿ ಆರಾಮವಾಗಿ ಓಡಾಡಿಕೊಂಡಿರುವ ಚೌಳಿಗಳು ನಾವು ಹಣ್ಣು ಕೊಯ್ಯಲು ಮರಕ್ಕೆ ಕೈ ಹಾಕಿದರೆ ನಮ್ಮ ಮೈ ಹತ್ತಿ ಕಂಡಲ್ಲಿ ಕಚ್ಚಿ ನಮ್ಮನ್ನು ಕುಣಿಸುವುದು ಸೋಜಿಗವೇ ಸೈ!
ಇನ್ನಷ್ಟು ಬಗೆಯ ಇರುವೆಗಳಿದ್ದರೂ ಇವಿಷ್ಟರ ಬಗ್ಗೆ ಸ್ವಲ್ಪ ಜಾಸ್ತಿ ಪರಿಚಯವಷ್ಟೇ! ಇರುವೆ ಗೂಡು ಕಟ್ಟುವುದು, ಮಣ್ಣು ಅಥವಾ ಮರಳನ್ನು ಮನೆಯ ನೆಲದ ಮೇಲೆ ಗುಡ್ಡೆ ಹಾಕಿಡುವುದು ಇನ್ನೊಂದು ತಲೆನೋವಿನ ವಿಚಾರ. ಆದರೂ ಒಂಟಿಯಾಗಿ ಪುರುಸೊತ್ತಿನಲ್ಲಿ ಕೂತು ಇರುವೆಗಳ ಚಲನವಲನ ನೋಡುತ್ತಿದ್ದರೆ ಕಲಿಯುವುದು ಬಹಳಷ್ಟಿರುತ್ತದೆ. ಅವುಗಳ ಟೀಮ್ ವರ್ಕ್, ಶಿಸ್ತು ಇವುಗಳನ್ನೆಲ್ಲ ಒಂದೆರಡು ಸಲ ಗಮನಿಸಿದಾಗಲೇ ಗೊತ್ತಾಗಿ ಬಿಡುತ್ತದೆ. ಅವುಗಳ ಸಂಘಜೀವನ ಮತ್ತು ನಿಖರವಾಗಿ ಕೆಲಸ ಮಾಡುವ ಕಲೆಯನ್ನು ನಾವು ಮೆಚ್ಚಲೇ ಬೇಕಲ್ಲವೇ? ಇವೆಲ್ಲವನ್ನು ಗಮನಿಸಿದಾಗ ಒಂದು ಸಾಮಾನ್ಯ ಇರುವೆಯ 'ಇರು'ವಿಕೆ ಕೂಡಾ ಮಹತ್ತರವಾದದ್ದೇನನ್ನೋ ಕಲಿಸುತ್ತದೆ ಎಂದಾಯಿತಲ್ವಾ? ಕಲಿಯಲು ಸಿದ್ಧರಾಗೋಣವೆ?


96. ನೆನಪುಗಳು - ಬಾಲ್ಯ 
ನಮ್ಮ ಮನೆಯ ಜಾಜಿ ಮಲ್ಲಿಗೆ ಗಿಡದಲ್ಲಿ ಬಿಟ್ಟಿದ್ದ ಹೂವುಗಳನ್ನು ಕಿತ್ತು ಹೂವಿನ ಮಾಲೆ ಕಟ್ಟುವಾಗ ಒಂದಿಷ್ಟು ಬಾಲ್ಯದ ನೆನಪು ನನ್ನನ್ನು ಆವರಿಸಿದವು. ಚಿಕ್ಕವಳಿದ್ದಾಗ ನನಗಿದ್ದ ಉದ್ದನೆಯ ಜಡೆ ಹಾಗೂ ನನ್ನ ಅಮ್ಮನ ಸೋದರಮಾವನ ಮಗಳಂದಿರು ಹೆಬ್ರಿಗೆ ಬಂದಾಗಲೆಲ್ಲ ನನಗೆ ವಿವಿಧ ರೀತಿಯ ಜಡೆ ಕಟ್ಟುತ್ತಿದ್ದ ನೆನಪಾಯಿತು... ನಾಲ್ಕು ಕಾಲಿನ ಜಡೆ, ನೀರು ಜಡೆ, ಕುದುರೆ ಜುಟ್ಟು, ಮೂರು ಕಾಲಿನ ಜಡೆ, ಎರಡು ಕಾಲಿನ ಜಡೆ.... ಹೀಗೆ ಹಲವಾರು ರೀತಿಯ ಜಡೆ ಕಟ್ಟುತ್ತಿದ್ದರು. ನನಗೆ ಅವರ ಹತ್ತಿರ ಬೇರೆ ಬೇರೆ ರೀತಿಯ ಜಡೆ ಕಟ್ಟಿಸಿಕೊಳ್ಳುವುದೆಂದರೆ ಬಹಳ ಇಷ್ಟವಾಗಿತ್ತು. ಒಮ್ಮೆ ಅವರ ಬಳಿ ಮೊಗ್ಗಿನ ಜಡೆ ಕೂಡಾ ಹಾಕಿಸಿಕೊಂಡಿದ್ದೆ.
ಆಗೆಲ್ಲ ಈಗಿನಂತೆ ಹೈಬ್ರೀಡ್ ಹೂವುಗಳಿರಲಿಲ್ಲ. ಆನಮ್ಮನ ಮನೆಯ ಸುತ್ತ ದಾಸವಾಳ, ಗೊರಟೆ, ಕರವೀರ, ರತ್ನ ಪುಷ್ಪ, ಸದಾಪುಷ್ಪ, ಸಂಜೆಮಲ್ಲಿಗೆ ಇಂತಹ ಗ್ರಾಮೀಣ ಸೊಗಡಿನ ಹೂಗಿಡಗಳಿದ್ದವು. ಸಂಜೆಮಲ್ಲಿಗೆಯ ಹಲವಾರು ಬಣ್ಣದ ಹೂ ಬಿಡುವ ಗಿಡಗಳು ಅಲ್ಲಿ ಜಾಸ್ತಿ ಇದ್ದವು. ಪ್ರಾಯಶಃ ಒಂದನೇ ತರಗತಿಯಲ್ಲಿದ್ದಾಗ ಅಮ್ಮನ ಕಸಿನ್ಸ್ ಬಂದಾಗ ವಿವಿಧ ಬಣ್ಣದ ಸಂಜೆಮಲ್ಲಿಗೆ ಹೂವುಗಳಲ್ಲಿ ಮಾಲೆ ಕಟ್ಟಿ ನನಗೆ ಮೊಗ್ಗಿನ ಜಡೆ ಹಾಕಿದ್ದರು. ಆ ಉದ್ದನೆಯ ಜಡೆಗೆ ಹೂವುಗಳ ಅಲಂಕಾರ ಚೆನ್ನಾಗಿ ಕಾಣುತ್ತಿತ್ತು ಅಂತ ಎಲ್ಲರೂ ಹೊಗಳಿದ ನೆನಪು ಇನ್ನೂ ಸ್ವಲ್ಪ ಇದೆ.
ನಾನು ಮೂರನೆ ತರಗತಿಗೆ ಬಂದಿದ್ದರೂ ಅಪ್ಪ ನನಗೆ ಕಿವಿ ಚುಚ್ಚಲು ಬಿಟ್ಟಿರಲಿಲ್ಲ. ನಾನು ಮೂಲತಃ ಅಲಂಕಾರ ಪ್ರಿಯೆಯಲ್ಲದವಳಾದರೂ ಕಿವಿ ಚುಚ್ಚಿಸಿಕೊಳ್ಳಬೇಕೆಂಬ ಆಸೆ ಬಹಳ ಇತ್ತು. ಕೊನೆಗೆ ಭದ್ರಾವತಿಯಲ್ಲಿ ಅಮ್ಮನ ಸೋದರ ಮಾವನ ಮನೆಗೆ ಹೋದಾಗ ಕಿವಿ ಚುಚ್ಚಿಸಿಕೊಂಡಿದ್ದೆ. ಆಗ ನನಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ. ಇವೆಲ್ಲ ಸಣ್ಣ ವಿಷಯಗಳಾದರೂ ಚಿಕ್ಕವರಿದ್ದಾಗ ಅವುಗಳು ಬಹಳ ದೊಡ್ಡ ಸಾಧನೆಯಂತೆ ಅನಿಸುತ್ತಿತ್ತು. ಮದರಂಗಿ ಹಚ್ಚಿಕೊಂಡಾಗ ಎಲ್ಲರಿಗಿಂತ ನಮ್ಮ ಕೈ ಹೆಚ್ಚು ಕೆಂಪಗಾದರೆ ಅದೊಂದು ಹೆಮ್ಮೆ ಅನಿಸುವ ವಿಷಯವಾಗುತ್ತಿತ್ತು. ಜಡೆಗೆ ಹೊಸ ಹೊಸ ರಿಬ್ಬನ್ ಹಾಕಿಕೊಂಡು ಅದರಲ್ಲಿ ವಿಭಿನ್ನ ಗೊಂಡೆ ಮಾಡಿದರೆ ಅದೊಂದು ಖುಷಿಯ ವಿಷಯವಾಗುತ್ತಿತ್ತು. ಮನೆಯಲ್ಲಿ ನೈಲ್ ಪಾಲಿಷ್ ಹಾಕಲು ಅನುಮತಿ ಕೊಟ್ಟು ನಾವು ಬಣ್ಣಬಣ್ಣದ ನೈಲ್ ಪಾಲಿಷ್ ಹಾಕಿಕೊಳ್ಳುವುದೇ ಒಂದು ಥ್ರಿಲ್ಲಿಂಗ್ ವಿಷಯ ಆಗುತ್ತಿತ್ತು. ಅಂಗಡಿಯಲ್ಲಿ ಐದು ಪೈಸೆಯ ಹುಳಿ ಕಿತ್ತಲೆ ಪೆಪ್ಪರ್ ಮಿಂಟ್ ಅನ್ನು ನಾವೇ ಖರೀದಿಸಿ ತಂದಾಗ ಜಗತ್ತನ್ನೇ ಗೆದ್ದ ಭಾವ ಬರುತ್ತಿತ್ತು.
ಈಗ ನಡು ವಯಸ್ಸಿನಲ್ಲಿ ಸುಮ್ಮನೆ ಕುಳಿತುಕೊಂಡಾಗ ನೆನಪಿಸಿಕೊಳ್ಳಲು ಒಂದಿಷ್ಟು ಹಳೆಯ ಸರಕುಗಳಿರುವುದು ನಿಜಕ್ಕೂ ಹೆಮ್ಮೆ ಅನಿಸುವ ವಿಷಯವಲ್ಲದೆ ಮತ್ತೇನು?


95. ಹೊಂಗಿರಣ - ನೆನಪುಗಳು 
ಹೊಂಗಿರಣದ ಪ್ರಾರಂಭದ ದಿನಗಳಿಂದಲೂ ಮಧ್ಯವಾರ್ಷಿಕ ರಜೆಯನ್ನು ದೀಪಾವಳಿ ಹಬ್ಬಕ್ಕೆ ಹೊಂದಿಸಿ ಕೊಡುತ್ತಿತ್ತು. ಒಂದು ಬಾರಿ ಮಾತ್ರ ಕಾರಣಾಂತರದಿಂದ ದೀಪಾವಳಿ ಹಾಗೂ ಮಧ್ಯವಾರ್ಷಿಕ ರಜೆಯನ್ನು ಹೊಂದಿಸಲಾಗದೆ ಹಾಸ್ಟೆಲ್ ಮಕ್ಕಳಿಗೆ ಹಬ್ಬಕ್ಕೆ ಮನೆಗೆ ಕಳುಹಿಸಿರಲಿಲ್ಲ. ಶುರುವಾಯ್ತಲ್ಲ ಹತ್ತಿರದಲ್ಲಿದ್ದ ಹಾಸ್ಟೆಲ್ ಪೇರೆಂಟ್ಸ್ ಪ್ರೆಶರ್! ಫೋನಿನಲ್ಲಿ ಪೇರೆಂಟ್ಸ್ ಜೊತೆ ಜಟಾಪಟಿಯಾದರೂ ನಾನು ಮಕ್ಕಳನ್ನು ಮನೆಗೆ ಕಳುಹಿಸಲಿಲ್ಲ. ಮಕ್ಕಳನ್ನೆಲ್ಲ ಹಾಸ್ಟೆಲ್ ನಲ್ಲಿ ಇರಿಸಿಕೊಂಡ ಮೇಲೆ ಹಬ್ಬವನ್ನು ಸರಿಯಾಗಿ ಆಚರಿಸಬೇಕಲ್ಲವೆ? ಸರಿ. ಹಬ್ಬದ ದಿನ ಬೆಳಿಗ್ಗೆ ನಾನು, ರವಿ, ಹಾಸ್ಟೆಲ್ ಟೀಚರ್ಸ್ ಎಲ್ಲಾ ಸೇರಿ ಆಗ ಹಾಸ್ಟೆಲ್ ನಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಅಷ್ಟೂ ಮಕ್ಕಳಿಗೂ ಎಣ್ಣೆ ಹಚ್ಚಿ ಅಭ್ಯಂಜನ ಮಾಡಿಸಿದೆವು. ದೊಡ್ಡ ಮಕ್ಕಳ ಸಹಾಯ ಪಡೆದು ಮೆಸ್ಸಿನಲ್ಲಿ ಹೋಳಿಗೆ ಊಟದ ತಯಾರಿಯೂ ಆಯಿತು. ಸಾಯಂಕಾಲ ಹಣತೆಗಳಲ್ಲಿ ದೀಪ ಹಚ್ಚಿ ಇಡೀ ಕ್ಯಾಂಪಸ್ಸನ್ನು ಝಗಮಗಿಸಿದ್ದಾಯಿತು. ಅದೊಂದು ಯಾರೂ ಮರೆಯದ ದೀಪಾವಳಿಯಾದದ್ದಂತೂ ನಿಜ. ಮನೆಯಿಂದ ದೂರವಿದ್ದ ಮಕ್ಕಳಿಗೆ ಎಲ್ಲರೂ ಒಟ್ಟುಗೂಡಿ ಆಚರಿಸಿದ ಆ ದೀಪಾವಳಿಯ ಆಚರಣೆ ಮನೆಯನ್ನು ಒಂದರೆಘಳಿಗೆ ಮರೆಯಿಸಿಯೇ ಬಿಟ್ಟಿತ್ತು. ಅದು ಒಂದು ರೀತಿಯ ಆಪ್ಯಾಯಮಾನ ಅನುಭವ ಕೊಟ್ಟಿತ್ತು.
ನಮ್ಮ ಮಧ್ಯವಾರ್ಷಿಕ ರಜೆಯನ್ನು ನವರಾತ್ರಿಯಲ್ಲಿ ಕೊಡದ ಕಾರಣ ಹಾಸ್ಟೆಲ್ ಮಕ್ಕಳೆಲ್ಲ ಕ್ಯಾಂಪಸ್ಸಿನಲ್ಲಿಯೇ ಉಳಿದಿರುತ್ತಾರೆ. ಆಯುಧ ಪೂಜೆಯಂದು ನಮ್ಮಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುವ ವಾಹನ ಪೂಜೆ ಅಂದರೆ ನಮ್ಮಹಾಸ್ಟೆಲ್ ಮಕ್ಕಳಿಗೆ ಸಂಭ್ರಮವೋ ಸಂಭ್ರಮ. ಶಾಲೆಯ ಆಟದ ಮೈದಾನದಲ್ಲಿ ಅಷ್ಟೂ ವಾಹನಗಳನ್ನು ಸಾಲಂಕೃತವಾಗಿ ಸಾಲಾಗಿ ನಿಲ್ಲಿಸಿ ವಾಹನ ಪೂಜೆ ಮಾಡಲಾಗುವುದು. ಅದು ಸುಮಾರು ಒಂದೂವರೆ ಎರಡು ಘಂಟೆಗಳ ಪೂಜಾ ಪ್ರಕ್ರಿಯೆ. ವಾಹನ ಪೂಜೆ ಮುಗಿದ ಕೂಡಲೆ ಸಿಹಿತಿಂಡಿ ತಿಂದು ನನ್ನನ್ನೂ ಒಡಗೂಡಿ ಎಲ್ಲರೂ ಎಲ್ಲಾ ವಾಹನಗಳಲ್ಲಿ ಹಂಚಿಕೆಯಾಗಿ ಕುಳಿತು ಸಾಲು ಸಾಲಾಗಿ ಹರುಡಿಕೆ, ಭೀಮನಕೋಣೆ, ಹೆಗ್ಗೋಡಿನ ಮಾರ್ಗವಾಗಿ ಮೆರವಣಿಗೆಯಲ್ಲಿ ಸಾಗಿ ಕ್ಯಾಂಪಸ್ಸಿಗೆ ಹಿಂದಿರುಗಿ ಬರುವುದೇ ಒಂದು ಸೊಗಸಾದ ಅನುಭವ. ಕ್ಯಾಂಪಸ್ಸಿನಲ್ಲಿರುವ ಪ್ರತಿಯೊಬ್ಬರೂ ಕೂಡಿ ಮಾಡುವ ಸಂಭ್ರಮಾಚರಣೆಯಿದು!
ಇಂತಹ ಆಚರಣೆಗಳು ಯಾಂತ್ರಿಕವಾದ ದಿನಚರಿಗೆ ವಿರಾಮ ಹಾಡಿ ಬದುಕಿಗೆ ಹೊಸ ಹುರುಪನ್ನು ತಂದುಕೊಡುತ್ತವೆ. ಕಾಲ ಕಳೆದಂತೆ ಒಂದರೆಕ್ಷಣ ಕಳೆದು ಹೋದ ದಿನಗಳ ಬಗ್ಗೆ ಯೋಚಿಸಿದಾಗ ಎಲ್ಲರೂ ಒಗ್ಗೂಡಿ ಮಾಡಿದ ಇಂತಹ ಆಚರಣೆಗಳು ತತ್ ಕ್ಷಣದಲ್ಲಿ ಮನಪಟಲದ ಮುಂದೆ ಬಂದು ಬಿಡುತ್ತವೆ. ಅಂದಿನ ದಿನದ ಖುಷಿ ನೆನಪಾಗುತ್ತದೆ. ಈ ಕಾರಣಕ್ಕೆ ತಾನೆ ಹಬ್ಬಹರಿದಿನಗಳು ಆಚರಣೆಗೆ ಬಂದದ್ದು?


94. ಇಕಿಗಾಯ್ (2) - ನೆನಪುಗಳು 
ನಾನು ನಿನ್ನೆ ಬರೆದ ಇಕಿಗಾಯ್ ಬಗೆಗಿನ ಲೇಖನಕ್ಕೆ ನನ್ನ ಪ್ರೌಢಶಾಲಾ ಸ್ನೇಹಿತೆಯೊಬ್ಬಳು "ನನಗಿನ್ನೂ ನನ್ನ ಇಕಿಗಾಯ್ ಏನೆಂದು ಗೊತ್ತಾಗಿಲ್ಲ ಮಾರಾಯ್ತಿ" ಅಂತ ಬರೆದಿದ್ದಳು. ಇದು ಪ್ರತಿಯೊಬ್ಬರಿಗೂ ಅನಿಸುವ ವಿಚಾರವೇ ಸೈ. ಏಕೆಂದರೆ ಪ್ರತಿಯೊಬ್ಬರ ಇಕಿಗಾಯ್ ವಿಭಿನ್ನವಾಗಿರುತ್ತದೆ. ಅದನ್ನು ತಿಳಿದುಕೊಳ್ಳಲು ಯಾವುದೇ ವಿಧಾನಗಳಿಲ್ಲ. ಇಕಿಗಾಯ್ ನ ಸರ್ವೇ ಸಾಧಾರಣ ಅಂಶವೇನೆಂದರೆ ನಾವು ಮಾಡುವ ಕೆಲಸದಲ್ಲಿ ಖುಷಿ ಪಡೆದುಕೊಂಡು ಜೀವನದ ಸಾರ್ಥಕ್ಯವನ್ನು ಅನುಭವಿಸುವುದಾಗಿದೆ. ನಮ್ಮ ದಿನಂಪ್ರತಿ ಕೆಲಸದೊಡನೆ ನಮ್ಮ ಬದುಕಿನ ಎಳೆ ನೇಯಲ್ಪಟ್ಟು ಅದರಿಂದ ನಮ್ಮಬದುಕಿಗೊಂದು ಅರ್ಥ ಸಿಕ್ಕರೆ ಅದೇ ನಮ್ಮ ಇಕಿಗಾಯ್ ಆಗುವುದು. ಇದನ್ನು ಹಣ, ಅಧಿಕಾರ, ಯಶಸ್ಸಿನೊಡನೆ ಸಮೀಕರಿಸಲು ಆಗುವುದಿಲ್ಲ. ಇಕಿಗಾಯ್ ಒಂದು ಸಂತೃಪ್ತ ಮನಸ್ಥಿತಿಯ ಸೃಷ್ಟಿಯಷ್ಟೆ!
ನಾವು ಮಾಡುವ ಕೆಲಸ ನಮ್ಮ ಇಕಿಗಾಯ್ ಅನ್ನುವುದಕ್ಕೆ ಸೂಚಕವೇನೆಂದರೆ ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ನಾವು ಬಿಡದೇ ಆ ಕೆಲಸವನ್ನು ಮಾಡುತ್ತಿರುವುದು. ಯಾವುದೇ ತೀವ್ರತರವಾದ ಸಮಸ್ಯೆಯಿಂದ ಹಿಡಿದ ಕೆಲಸ ಒಂದು ಘಳಿಗೆ ಹಿನ್ನಡೆಯಾದರೂ ಪುನಃ ಹೊಸ ಹುರುಪಿನಿಂದ ಪುಟಿದೆದ್ದು ನಮ್ಮ ಕೆಲಸವನ್ನು ಮುಂದುವರೆಸುವುದು. ಯಾವುದೇ ನಕಾರಾತ್ಮಕ ಮನಸ್ಥಿತಿಗೆ ಹೋಗಿ ದುರ್ಬಲರಾಗದೆ ನಾವು ನಮ್ಮ ಕೆಲಸವನ್ನು ಧನಾತ್ಮಕವಾಗಿ ಮುಂದುವರೆಸಿಕೊಂಡು ಹೋದರೆ ಅದು ನಮ್ಮ ಇಕಿಗಾಯ್ ಆಗಿರುವುದು. ಇಕಿಗಾಯ್ ನಮ್ಮ ಮನಸ್ಸಿಗೆ ಪ್ರಶಾಂತತೆ ದೊರಕಿಸಿ ಕೊಟ್ಟು ಅಹಂ, ಭಯ, ಸಿಟ್ಟು ಇನ್ನಿತರ ನಕಾರಾತ್ಮಕ ಅಂಶಗಳನ್ನು ದೂರವಿರಿಸಿ ನಿರ್ಮಲ ಚಿತ್ತದಲ್ಲಿ ಪ್ರೀತಿ, ಸಂತೋಷದಿಂದ ಪ್ರಸ್ತುತದಲ್ಲಿ ಬದುಕಲು ಅನುವು ಮಾಡಿಕೊಡುತ್ತದೆ.
ಬದುಕನ್ನು ಅರ್ಥಪೂರ್ಣವಾಗಿಸುವುದಕ್ಕೆ ಇಕಿಗಾಯ್ ಕೆಲವು ನಿಯಮಗಳನ್ನು ಸೂಚಿಸುತ್ತದೆ. ಜೀವನದ ಯಾವುದೇ ಘಟ್ಟದಲ್ಲೂ ಸಕ್ರಿಯತೆಯನ್ನು ಕಳೆದುಕೊಳ್ಳದೆ ಬದುಕಬೇಕು.... ಯಾವುದೇ ಕೆಲಸವನ್ನು ಗಡಿಬಿಡಿಯಲ್ಲಿ, ಧಾವಂತದಲ್ಲಿ ಮಾಡಬಾರದು...ಅಗತ್ಯವಿರುವುದಕ್ಕಿಂತ ಕಡಿಮೆ ತಿನ್ನಬೇಕು....ಒಳ್ಳೆಯ ಸ್ನೇಹಿತರನ್ನು ಹೊಂದಿರಬೇಕು...ದಿನಂಪ್ರತಿ ದೈಹಿಕ ಚಟುವಟಿಕೆ ಮಾಡಬೇಕು....ಮುಖದ ಮೇಲೆ ಯಾವಾಗಲೂ ಪ್ರಸನ್ನತೆ ಇರಬೇಕು....ನಿರಂತರ ನಿಸರ್ಗದೊಡನಾಟವಿರಬೇಕು...ನಮಗೆ ಸಿಗುವ ಪ್ರತಿಯೊಂದರ ಬಗ್ಗೆ ಕೃತಾರ್ಥಭಾವವಿರಬೇಕು.......ಪ್ರಸ್ತುತದಲ್ಲಿ ಬದುಕಬೇಕು.. ಸಂಪನ್ನ ಬದುಕಿಗಾಗಿ ನಮ್ಮ ಇಕಿಗಾಯ್ ಅನ್ನು ಅನುಸರಿಸಬೇಕು. ನಮ್ಮ ಇಕಿಗಾಯ್ ಏನೆಂದು ಗೊತ್ತಿರದಿದ್ದರೆ ಅದನ್ನು ಕಂಡುಹಿಡಿಯುವುದೇ ನಮ್ಮ ಗುರಿಯಾಗಬೇಕು!


93. ನೆನಪುಗಳು- ಇಕಿಗಾಯ್
ನಾನು ಇತ್ತೀಚೆಗಷ್ಟೇ ಹೆಕ್ಟರ್ ಗ್ರೇಷಿಯ ಹಾಗೂ ಫ್ರಾನ್ಸಿಸ್ ಮಿರಾಲೆಸ್ ಬರೆದ ಜಪಾನಿಯರ ಸಂತೋಷದ ಶತಾಯುಷಿ ಜೀವನದ ಬಗೆಗಿರುವ 'ಇಕಿಗಾಯ್' ಎನ್ನುವ ಪುಸ್ತಕ ಓದಿ ಮುಗಿಸಿದೆ. ಇಕಿಗಾಯ್ ಅಂದರೆ ಜೀವನದಲ್ಲಿ ನಮಗಿರುವ passionನನ್ನು ಕಂಡುಕೊಂಡು ಅದರಲ್ಲಿ ನಮ್ಮನ್ನು ತೊಡಗಿಸಿಕೊಂಡು ನಮ್ಮ ಜೀವನವನ್ನು ಸಂತೋಷಕರವಾಗಿ ನಡೆಸುವುದು. ಇದರ ಜೊತೆ ಜೊತೆಗೆ ಒಳ್ಳೆಯ ಸ್ನೇಹ, ಬಾಂಧವ್ಯ, ಅಗತ್ಯವಿರುವುದಕ್ಕಿಂತಲೂ ಕಡಿಮೆ ಆಹಾರ ಸೇವನೆ, ಒತ್ತಡರಹಿತ ಕೆಲಸದ ಶೈಲಿ, ನಿರಂತರ ದೈಹಿಕ ಚಟುವಟಿಕೆಗಳು ಇವೆಲ್ಲವು ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಚೆನ್ನಾಗಿ ಇಡುತ್ತವೆ ಅನ್ನುವುದನ್ನು ಸಮರ್ಪಕ ಮಾಹಿತಿಯೊಂದಿಗೆ ಈ ಪುಸ್ತಕದಲ್ಲಿ ನೀಡಲಾಗಿದೆ.
ಇಲ್ಲಿ ನನ್ನ ಗಮನ ಸೆಳೆದದ್ದು ತಮ್ಮ ತಮ್ಮ ಇಕಿಗಾಯ್ ಅನ್ನು ಅರಿತುಕೊಂಡು ಬದುಕು ಕಟ್ಟಿಕೊಂಡಿರುವ ಕೆಲವು ಜಪಾನೀಯರ ಉದಾಹರಣೆಗಳು. ಅದು ಒಂದು ಪೈಂಟ್ ಬ್ರಶ್ ತಯಾರಿಸುವುದಾಗಿರಬಹುದು, ಸುಶಿಯನ್ನು ಮಾಡುವುದಾಗಿರಬಹುದು, ಪೊರ್ಸೆಲಿನ್ ಕಪ್ ನ ತಯಾರಿಕೆಯಾಗಿರಬಹುದು......ಇವೆಲ್ಲವನ್ನು ಹಲವಾರು ವರುಷಗಳಿಂದ ಖುಷಿ ಮತ್ತು ಬದ್ಧತೆಯಿಂದ ಮಾಡುತ್ತಿರುವ ಆ ವ್ಯಕ್ತಿಗಳ ಚಿತ್ರಣ ಸುಂದರವಾಗಿ ಮೂಡಿ ಬಂದಿದೆ. ಇಕಿಗಾಯ್ ಹೇಗೆ ಒಬ್ಬ ಸಾಮಾನ್ಯ ಮನುಷ್ಯನನ್ನು ವಿಶಿಷ್ಟವ್ಯಕ್ತಿಯನ್ನಾಗಿಸುತ್ತದೆ ಎನ್ನುವುದನ್ನು ನಾವು ಈ ಪುಸ್ತಕದಲ್ಲಿ ಕಾಣಬಹುದು. ಇವೆಲ್ಲವನ್ನು ಓದಿದಾಗ ನನ್ನ ಇಕಿಗಾಯ್ ಏನಿರಬಹುದು ಎಂಬ ಪ್ರಶ್ನೆ ಸಹಜವಾಗಿ ನನ್ನ ಮುಂದೆ ಉದ್ಭವಿಸಿದ್ದಂತೂ ನಿಜ. ಶಿಕ್ಷಕಿಯಾಗಿ ಮಕ್ಕಳಿಗೆ ಸೂಕ್ತ ಕಲಿಕೆಯ ವಾತಾವರಣ ಕಟ್ಟುವುದು ನನ್ನ ಇಕಿಗಾಯ್ ಆಗಿದ್ದಿರಬಹುದೇ ಅಂತ ಅನಿಸಿದ್ದಂತೂ ಸತ್ಯದ ವಿಚಾರ. ನಮ್ಮ ಇಕಿಗಾಯ್ ನ ಅರಿವು ನಮ್ಮ ಕಾರ್ಯದಲ್ಲಿ ನಾವು ಮುಂದುವರಿದುಕೊಂಡು ಹೋಗಲು ನಮಗೆ ಮಾರ್ಗದರ್ಶಿಯಾಗಿರುತ್ತದೆಯೆ ಎಂಬ ಪ್ರಶ್ನೆಯೂ ಜೊತೆಜೊತೆಗೆ ಉದಿಸಿತು ಕೂಡ.
ಆಗ ನಮ್ಮೆಲ್ಲರ ಇಕಿಗಾಯ್ ಆದ 'ಹೊಂಗಿರಣ'ದ ಪ್ರಾರಂಭದ ದಿನದಿಂದ ಈಗಿನವರೆಗಿನ ಬೆಳವಣಿಗೆಯ ಹಾದಿ ಒಂದರೆಘಳಿಗೆ ನನ್ನ ಕಣ್ಣ ಮುಂದೆ ಹಾದು ಹೋಯಿತು. ನಮ್ಮ ಇಕಿಗಾಯ್ ಹೇಗೆ ನಮ್ಮ ವೃತ್ತಿಪರ ಬೆಳವಣಿಗೆಯೊಂದಿಗೆ ತೊಡಗಿಕೊಂಡ ಕಾರ್ಯ ಕ್ಷೇತ್ರದ ಅಭಿವೃದ್ಧಿಯನ್ನು ಮಾಡುವಲ್ಲಿಯೂ ಶಕ್ತವಾಗುತ್ತದೆ ಎನ್ನುವುದು ಹೊಂಗಿರಣದ ಬೆಳವಣಿಗೆಯಲ್ಲೇ ಕಾಣಬಹುದು ಎಂದನಿಸಿತು. ಕೇವಲ ಹೊಂಗಿರಣ ಕ್ಯಾಂಪಸ್ಸಿನ ಮುಖ್ಯದ್ವಾರ ಬದಲಾದ ಪರಿಯಲ್ಲೇ ಅದರ ಬೆಳವಣಿಗೆ ಕಾಣಸಿಗುತ್ತದೆ. ಕ್ಯಾಂಪಸ್ಸನ್ನು ಪ್ರವೇಶಿಸಲಿಕ್ಕಾಗಿಯೆ ಮೊತ್ತಮೊದಲು ಖರೀದಿಸಿದ ಹತ್ತು ಗುಂಟೆ ಜಾಗ...ಕೆಸರಿನಿಂದ ಮುಳುಗಿ ಹೋಗಿದ್ದ ಅದಕ್ಕೆ ಗೊಚ್ಚು ಮಣ್ಣು ಹಾಕಿ ಒಂದು ಉಪಯೋಗ ಯೋಗ್ಯ ರಸ್ತೆಯನ್ನಾಗಿಸಿದ್ದು...ತದನಂತರ ಖರೀದಿಸಿದ ರಸ್ತೆ ಪಕ್ಕದ ಐದೆಕೆರೆ ಜಾಗ....ನಂತರದಲ್ಲಿ ಬದಲಾಯಿಸಿದ ಮುಖ್ಯದ್ವಾರ...ಅದಕ್ಕೊಂದು ಕಳಶಪ್ರಾಯವಾದ ಮುಖಮಂಟಪ...ಮೆಟ್ಲಿಂಗ್ ಮಾಡಿದ ರಸ್ತೆ.... ಇಕ್ಕೆಲದಲ್ಲಿ ನೆಟ್ಟು ಬೆಳೆಸಿದ ಮರಗಳ ಸಾಲು.... ಇದೆಲ್ಲವೂ ಹೊಂಗಿರಣ ಕ್ಯಾಂಪಸ್ಸಿನ ಹಂತ ಹಂತದ ರಚನೆಯ ಚಿತ್ರಣವನ್ನು ಕೊಡುತ್ತದೆ. ಆಗ ಮತ್ತೊಮ್ಮೆ ಅನಿಸುವುದೇನೆಂದರೆ ನಮ್ಮೆಲ್ಲರೊಳಗಿರುವ 'ಇಕಿಗಾಯ್' ಇಂತಹ ರಚನಾತ್ಮಕ ಸೃಷ್ಟಿ ಕಾರ್ಯದ ಪ್ರೇರಕ ಶಕ್ತಿಯಲ್ಲವೆ ಎಂದು!


92. ನೆನಪುಗಳು - ಪುಸ್ತಕಗಳು  
ಚಿಕ್ಕವಳಿರುವಾಗ ನನ್ನ ಮೇಲೆ ಬಹಳ ಪ್ರಭಾವ ಬೀರಿದ್ದು ನಾನು ಓದಿದ ಲಾರ ಇಂಗಲ್ಸ್ ವೈಲ್ಡರ್ ಬರೆದ ಸರಣಿ ಪುಸ್ತಕಗಳು. ಅದು ದೊಡ್ಡಕಾಡಿನಲ್ಲಿ ಪುಟ್ಟಮನೆ, ಹುಲ್ಲುಗಾವಲಿನಲ್ಲಿ ಪುಟ್ಟ‌ ಮನೆ... ಹೀಗೆ ಸುಮಾರು ಎಂಟು ಪುಸ್ತಕಗಳ ಸರಣಿ. ಅಮೆರಿಕೆಗೆ ವಸಾಹತುಗಾರರು ಬಂದು ನೆಲೆಸಲು ಅವಕಾಶಗಳನ್ನು ಕಲ್ಪಿಸುತ್ತಿದ್ದಾಗಿನ ಸಂದರ್ಭದ ಚಿತ್ರಣವನ್ನು ಈ ಪುಸ್ತಕಗಳಲ್ಲಿ ಕಾಣಬಹುದು. ನನಗಂತೂ ಅದರಲ್ಲಿ ನಮೂದಿಸಿದ ಭೌಗೋಳಿಕ ವಿವರಣೆಗಳು ಹಾಗೂ ಹವಾಮಾನ ವೈಪರೀತ್ಯದ ಚಿತ್ರಣ ಇನ್ನೂ ಕಣ್ಣಿಗೆ ಕಟ್ಟಿದಂತಿವೆ.
ನಾನು ಅವುಗಳನ್ನು ಓದುವಾಗ ಸುಮಾರು ಹದಿನೈದು ವಯಸ್ಸಿನ ಆಜುಬಾಜಿನವಳಾಗಿರಬಹುದು. ಪುಸ್ತಕ ಓದುತ್ತಾ ಕೂತರೆ ಜಗತ್ತನ್ನೇ ಮರೆಯುತ್ತಿದ್ದೆ. ಎಷ್ಟೋ ಬಾರಿ ಅಮ್ಮ ಬಂದು ತಲೆಯ ಮೇಲೆ ಮೊಟಕಿದಾಗಲೇ ಈ ಲೋಕಕ್ಕೆ ಬರುತ್ತಿದ್ದೆ. ಅಂತಹ ಓದಿಸಿಕೊಂಡು ಹೋಗುವ ತಾಕತ್ತು ಆ ಪುಸ್ತಕಗಳಿಗಿತ್ತು.
ನನಗೆ ಆ ಕಥೆಗಳಲ್ಲಿ ಬಹಳ ಇಷ್ಟವಾಗುತ್ತಿದ್ದದ್ದು ಅವಳು ವಿವರಿಸುತ್ತಿದ್ದ ಅವರ ಮರದ ದಿಮ್ಮಿಯ ಮನೆಯ ಚಿತ್ರಣ. ಆ ಪುಟ್ಟ ಮನೆಯ ಕೋಣೆಗಳು, ಕಿಟಕಿ ಬಾಗಿಲುಗಳು, ಪುಟ್ಟ ಅಟ್ಟ.. ಎಲ್ಲವನ್ನು ಕಣ್ಣಿಗೆ ಕಟ್ಟುವಂತೆ ಆಕೆ ವಿವರಿಸಿ ಬರೆದಿದ್ದಾಳೆ. ಹೊರಗೆ ಮಂಜು ಬೀಳುವಾಗ ಇವರೆಲ್ಲ ಬೆಚ್ಚಗೆ ಬೆಂಕಿಯ ಬುಡದಲ್ಲಿ ಕುಳಿತುಕೊಳ್ಳುವುದು, ಹವಾಮಾನದ ವೈಪರೀತ್ಯದಲ್ಲಿಯೂ ಮನೆಯ ಏಕೈಕ ಗಂಡಸಾದ ಅವಳ ಅಪ್ಪ ಮನೆಯಿಂದ ಸ್ವಲ್ಪ ದೂರವಿದ್ದ ಕೊಟ್ಟಿಗೆಗೆ ಹೋಗಿ ಜಾನುವಾರುಗಳನ್ನು ಜೋಪಾನ ಮಾಡಿಟ್ಟು ಹಿಂದಿರುಗುವ ತನಕದ ಅವರ ಆತಂಕ, ಮನೆಯ ಹೊರಗೆ ಕಾಡುಪ್ರಾಣಿಗಳು ಬಂದಾಗ ಒಳಗಿರುವ ಮಕ್ಕಳಾದ ಅವರ ಭಯ, ಅಪ್ಪ ಅಮ್ಮ ಕೊಡುವ ಧೈರ್ಯ, ಅಪ್ಪ ದೊಡ್ಡ ಬಂದೂಕು ಹಿಡಿದು ಬೇಟೆಗೆ ಹೋಗುವ ಪರಿ, ಮನೆ ಕಾಯುವ ಸೀಳುನಾಯಿ ಜಾಕ್, ಕರಿ ಬೆಕ್ಕು ಸೂಸನ್..... ಹೀಗೆ ಓದುತ್ತಾ ಓದುತ್ತಾ ಅವರ ಬದುಕಿನೊಳಗೆ ನಾವೊಂದು ಭಾಗವಾಗಿ ಬಿಡುತ್ತೇವೆ. ಅವಳಪ್ಪನ ಪ್ರತಿ ಸಾಹಸವು ನಮ್ಮಲ್ಲಿ ರೋಮಾಂಚನ ಮೂಡಿಸುತ್ತದೆ. ಅವರು ಚಳಿಗಾಲಕ್ಕಾಗಿ ಆಹಾರ ಒಟ್ಟು ಮಾಡಿ ಶೇಖರಿಸಿಡುವ ರೀತಿಯಂತೂ ಆಶ್ಚರ್ಯ ಮೂಡಿಸುತ್ತದೆ.
ನಾವು ಹೊಂಗಿರಣದ ಕ್ಯಾಂಪಸ್ಸಿಗೆ ಬಂದ ಕೆಲವು ವರ್ಷಗಳು ಎದೆಮಟ್ಟಕ್ಕೆ ಎಲ್ಲೆಂದರಲ್ಲಿ ಹುಲ್ಲು ಬೆಳೆದಿರುತ್ತಿತ್ತು. ಆವು ಸಂಜೆಯ ಗಾಳಿಗೆ ತೊನೆದಾಡುವಾಗ ನನಗೆ ಲಾರಳ 'ಹುಲ್ಲುಗಾವಲಿನಲ್ಲಿ ಪುಟ್ಟಮನೆ' ಪುಸ್ತಕದಲ್ಲಿ ಬಿಂಬಿಸಿದ ದೃಶ್ಯದ ನೆನಪಾಗುತ್ತಿತ್ತು. ಅಂದರೆ ಎಂದೋ ಮಾಡಿದ ಬಾಲ್ಯಕಾಲದ ಓದು ನನ್ನೊಳಗೆ ಅಚ್ಚಳಿಯದ ನೆನಪಾಗಿ ಉಳಿದಿದೆಯೆಂದರೆ ಆ ಬರವಣಿಗೆಯ ಶೈಲಿ ಹೇಗಿರಬಹುದೆಂದು ನೀವೇ ಊಹಿಸಿ!
ಆ ಕಾಲದ ಸಾಮಾಜಿಕ ಸ್ಥಿತಿಯನ್ನು, ಜೀವನ ಶೈಲಿಯನ್ನು, ಬದುಕಿನಲ್ಲಿ ನೆಲೆ ಕಂಡುಕೊಳ್ಳಲು ಅವರು ನಡೆಸುತ್ತಿದ್ದ ಹೋರಾಟವನ್ನು ಸುಂದರವಾಗಿ ನಿರೂಪಿಸಿರುವ ಆ ಕೃತಿಗಳು ಎಲ್ಲಾ ವಯೋಮಾನದವರು ಓದಲು ಯೋಗ್ಯ.


91. ನೆನಪುಗಳು - ಚಬಕಾರು 
ರವಿಯ ದೊಡ್ಡ ಅಕ್ಕನ ಮನೆ ಕಾರ್ಗಲ್ಲಿನಿಂದ ಮೂರ್ನಾಲ್ಕು ಕಿಮೀ ದೂರದಲ್ಲಿರುವ ಚಬಕಾರು ಎನ್ನುವಲ್ಲಿದೆ. ಈಗ ಅಲ್ಲಿಗೆ ಹೋಗಲು ಒಂದು ಸಾಧಾರಣ ರಸ್ತೆ ಅನ್ನುವುದು ಆಗಿದೆ. ಮೊದಲೆಲ್ಲ ನಮ್ಮ ವಾಹನವನ್ನು ಮುಖ್ಯ ರಸ್ತೆಯ ಬದಿಯಲ್ಲಿರುವ ಯಾರ ಮನೆಯಲ್ಲಾದರೂ ಪಾರ್ಕ್ ಮಾಡಿ ಒಂದೆರಡು ಕಿಮೀ ನಡೆದು ಅವರ ಮನೆಗೆ ಹೋಗಬೇಕಿತ್ತು. ಅವರದ್ದು ಕೂಡ ಒಂಟಿಮನೆ. ಜನ ಬಂದರೆ ಅವರಿಗೆ ಖುಷಿಯೋ ಖುಷಿ. ಅದೂ ತಮ್ಮಂದಿರು, ಅವರ ಹೆಂಡತಿ ಮಕ್ಕಳು ಬಂದರೆ ವಿಶೇಷ ಸಂಭ್ರಮ. ನನ್ನ ದೊಡ್ಡತ್ತಿಗೆಯ ಮನೆಯಲ್ಲಿ ಆಗ ಇದ್ದದ್ದು ಅವರು, ಅವರ ಗಂಡ ಮತ್ತು ಮಗ. ಈಗ ಮಗನಿಗೆ ಮದುವೆಯಾಗಿ ಅವನ ಹೆಂಡತಿ ಮಕ್ಕಳು ಕೂಡಾ ಜೊತೆಗಿದ್ದಾರೆ. ನನ್ನತ್ತಿಗೆ ಅಪಾರ ಪ್ರೀತಿ ತೋರಿಸುವ ವ್ಯಕ್ತಿ. ಯಾರು ಬಂದರೂ ದಡಬಡ ಅಂತ ಅಡುಗೆ ಮನೆಗೆ ಹೋಗಿ ಬಗೆಬಗೆಯ ಖಾದ್ಯಗಳನ್ನು ಮಾಡಲು ಶುರು ಹಚ್ಚಿ ಬಿಡುತ್ತಾರೆ.
ಅವರ ಮನೆ ಒಂದು ಕಣಿವೆಯಲ್ಲಿದೆ. ಅಲ್ಲಿಗೆ ಹೋಗುವ ದಾರಿಯೆ ಸೊಗಸು. ನಡಿಗೆಯ ದಾರಿಯಾದರೆ ಸಣ್ಣ ಸಣ್ಣ ಗುಡ್ಡ ಹತ್ತಿ ಇಳಿದು, ಗದ್ದೆಗಳನ್ನು, ತೊರೆಗಳನ್ನು ದಾಟಿ ಸಾಗಬೇಕು. ಆಗ ಇದ್ದದ್ದು ಮಣ್ಣಿನಲ್ಲಿ ಕಟ್ಟಿದ್ದ ಒಂದು ಪುಟಾಣಿ ಮನೆ. ಟಾಯ್ಲೆಟ್ ಇರಲಿಲ್ಲ. ನಾವೆಲ್ಲ ಹತ್ತಿರದ ಕಾಡಿನೆಡೆ ಹೋಗಿ ನಮ್ಮ ವಿಸರ್ಜನೆಯ ಕೆಲಸಗಳನ್ನು ಮುಗಿಸಬೇಕಿತ್ತು. ರೂಢಿಯಿಲ್ಲದ ಅಂತಹುದನ್ನು ಅಲ್ಲಿ ರೂಢಿಸಿಕೊಳ್ಳುವ ಅನಿವಾರ್ಯತೆ ಹುಟ್ಟಿತು. ಹೂಂ ಬಿಡಿ. ಅದೂ ಒಂದು ಅನುಭವವೇ ತಾನೇ! ಮಳೆಗಾಲದಲ್ಲಿ ಕಾಲು ಇಟ್ಟಲ್ಲೆಲ್ಲ ಇಂಬಳ. ನನ್ನ ಮಗಳಂತೂ ಇಂಬಳಕ್ಕೆ ಹೆದರಿ ನೆಲಕ್ಕೆ ಕಾಲಿಡುತ್ತಿರಲಿಲ್ಲ. ಭಾರವಾಗಿದ್ದ ಅವಳನ್ನು ಹೊರಗೆ ಹೋಗುವಾಗ ನನ್ನ ಅತ್ತಿಗೆ ಹೊತ್ತುಕೊಂಡು ತಿರುಗಿಸುತ್ತಿದ್ದರು.
ಅವರ ಮನೆಯ ಸುತ್ತಲೂ ಗದ್ದೆಗಳು ಹಾಗೂ ಹಿನ್ನೆಲೆಯಲ್ಲಿ ಬೆಟ್ಟಗಳು. ಅವರ ಮನೆಯ ಎದುರು ಒಂದು ಸಣ್ಣ ಝರಿ ಯಾವಾಗಲೂ ಹರಿಯುತ್ತಿರುತ್ತದೆ. ಆ ಝರಿ ಅವರ ಮನೆಯ ಹಿಂಭಾಗದ ಸ್ವಲ್ಪ ದೂರದಲ್ಲಿ ಹರಿಯುವ ನದಿಯ ಒಂದು ಕವಲು. ಬಂಡೆಗಳ ನಡುವೆ ಹರಿಯುವ ಆ ನದಿನೀರಿನಲ್ಲಿ ಆಟ ಆಡಲು ಮಸ್ತ್ ಮಜಾ! ನಾವೆಲ್ಲ ಒಟ್ಟಾಗಿ ಗಂಟೆಗಟ್ಟಲೆ ಆ ನೀರಿನಲ್ಲಿ ಆಡಿ ಮನೆಗೆ ಹಿಂದಿರುಗಿ ಬಂದು ಅತ್ತಿಗೆ ಮಾಡಿ ಬಡಿಸುವ ಬಿಸಿಬಿಸಿ ಊಟ ಮಾಡುತ್ತಿದ್ದ ನೆನಪು ಇನ್ನೂ ಹಸಿಯಾಗಿದೆ. ನಮ್ಮ ರಜಾಕಾಲದಲ್ಲಿ ನಾಲ್ಕೈದು ದಿನಗಳನ್ನು ಅವರ ಮನೆಯಲ್ಲಿ ದಾಂಧಲೆ ಮಾಡುತ್ತಾ ಕಳೆಯುತ್ತಿತ್ತು.
ನಾವು ಶಾಲೆ ಶುರು ಮಾಡಿದ ವರ್ಷ ನಮ್ಮಲ್ಲಿದ್ದ ಸುಮಾರು ಐವತ್ತು ಮಕ್ಕಳು ಹಾಗೂ ಎಲ್ಲಾ ಶಿಕ್ಷಕರೊಡನೆ ಜೋಗ ಜಲಪಾತ ನೋಡಿ ನನ್ನತ್ತಿಗೆಯ ಮನೆಗೆ ಹೋಗಿ ಅವರೇ ಮಾಡಿ ಬಡಿಸಿದ ಊಟವನ್ನು ಮಾಡಿ, ಸ್ವಲ್ಪ ಹೊತ್ತು ಅವರೊಡನೆ ಸಮಯ ಕಳೆದು ಹಿಂದಿರುಗಿ ಬಂದಿತ್ತು. ಮಕ್ಕಳಿಗೆಲ್ಲ ಇಕ್ಕೆಲದಲ್ಲಿ ಕಾಡಿರುವ, ಗುಡ್ಡವನ್ನು ಇಳಿಯುತ್ತಾ ಹೋಗುವ ಆ ದಾರಿ ಭಾರಿ ಖುಷಿ ಕೊಟ್ಟಿತ್ತು. ಅವರಿಗೆ ಅದೊಂದು ಪುಟ್ಟ ಟ್ರೆಕ್ಕಿಂಗ್ ಅನುಭವವನ್ನು ಕೊಟ್ಟಿತ್ತು.
ಶಾಲೆಯ ಬೆಳವಣಿಗೆಯ ಕೈಂಕರ್ಯದಲ್ಲಿ ತೊಡಗಿ ನೆಂಟರ ಮನೆಯ ತಿರುಗಾಟಕ್ಕೆಲ್ಲ ತಿಲಾಂಜಲಿ ಇತ್ತಿದ್ದು ಈಗ ಅವುಗಳನ್ನೆಲ್ಲ ಕೇವಲ ನೆನಪುಗಳನ್ನಾಗಿ ಉಳಿಸಿದೆ. ನೆನಪುಗಳು ಸದಾ ಮಧುರ!
ಈಗ ನನ್ನತ್ತಿಗೆ ಅಲ್ಲಿಯೇ ಮೇಲ್ತಟ್ಟಿನಲ್ಲಿ ಒಳ್ಳೆಯ ಮನೆಯನ್ನು ಕಟ್ಟಿಕೊಂಡು ಗಂಡ, ಮಗ, ಸೊಸೆ, ಮೊಮ್ಮಕ್ಕಳೊಟ್ಟಿಗೆ ತುಂಬು ಜೀವನ ನಡೆಸುತ್ತಿದ್ದಾರೆ.

90. ಅನುಭವ - ಹಬ್ಬ, ಹರಿದಿನಗಳು.
ನನಗೆ ಹಬ್ಬ ಹರಿದಿನಗಳ ಆಚರಣೆಯಲ್ಲಿ ಅಷ್ಟು ವಿಶೇಷ ಆಸಕ್ತಿ ಇಲ್ಲ. ಆದರೂ ಕೂಡ ನನ್ನಲ್ಲಿ ಇನ್ನೂ ತಾಜ ನೆನಪಾಗಿ ಉಳಿದಿರುವುದು ನಮ್ಮ ಹೆಬ್ರಿಯ ಆನಮ್ಮನ ಮನೆಯಲ್ಲಿ ಮಾಡುತ್ತಿದ್ದ ಚೂಡಿ ಪೂಜೆ.
ಇದು ಶ್ರಾವಣ ಮಾಸದಲ್ಲಿ ಶುಕ್ರವಾರ ಹಾಗೂ ಭಾನುವಾರ ಆಚರಿಸುವ ಪೂಜೆಯಿದು. ಸುಮತಿ ಆಂಟಿಯ ಬಾಲವಾಗಿದ್ದ ನಾನು ಅವರು ಚೂಡಿ ಮಾಡಲು ಬೇಕಾಗುವ ಹೂವು ಎಲೆಗಳನ್ನು ತರಲು ಹೋಗುವಾಗ ಅವರ ಹಿಂದೆಯೆ ಹೋಗುತ್ತಿದ್ದೆ.
ರಥಪುಷ್ಪ, ರತ್ನಗಂಧಿ, ಕರವೀರ, ಗರಿಕೆ, ಪಚ್ಚೆ, ಕದಿರು ಇನ್ನೂ ಏನೇನೋ ಹೂವು ಎಲೆಗಳನ್ನು ತರುತ್ತಿದ್ದ ನೆನಪು. ನನಗೆ ಈಗಲೂ ಕೂಡ ರಥಪುಷ್ಪ ನೋಡಿದ ಕೂಡಲೆ ಚೂಡಿ ಪೂಜೆಯ ನೆನಪಾಗಿ ಬಿಡುತ್ತದೆ. ಪತ್ರೆ ಪುಷ್ಪ ತಂದ ನಂತರ ಆಂಟಿ ಮತ್ತು ಆನಮ್ಮ ಸೇರಿ ಅವುಗಳನ್ನು ಒಂದೊಂದಾಗಿ ಜೋಡಿಸಿ ಬಾಳೆನಾರಿನಿಂದ ಕಟ್ಟಿ ಇರಿಸುತ್ತಿದ್ದರು. ಒಂದೊಂದು ಚೂಡಿಯಲ್ಲೂ ವಿವಿಧ ಬಣ್ಣಗಳನ್ನು ಕಾಣುವಾಗ ಖುಷಿಯಾಗುತ್ತಿತ್ತು. ನಂತರ ಅವುಗಳನ್ನು ತುಳಸಿ ಕಟ್ಟೆ, ಹೊಸ್ತಿಲು ಮತ್ತು ದೇವರ ಮುಂದಿಟ್ಟು ಪೂಜೆ ಮಾಡಿ ಮುತ್ತೈದೆಯರಿಗೆ ಚೂಡಿಯನ್ನು ಕೊಡುತ್ತಿದ್ದರು. ಅಗಲಿದ ಮನೆಯ ಹಿರಿಯರಿಗಾಗಿ ಮಾಡಿನ ಮೇಲೆ ಚೂಡಿಯನ್ನು ಇಡುತ್ತಿದ್ದರು. ಮಕ್ಕಳಿಗೆಲ್ಲ ನೈವೇದ್ಯಕ್ಕೆ ಮಾಡಿದ ಸಿಹಿತಿಂಡಿ ಕೊಡುತ್ತಿದ್ದರು. ನಮಗೆ ಬೇಕಾಗಿದ್ದದ್ದು ಅದೇ ತಾನೇ?
ನನ್ನ ನೆನಪಿನಲ್ಲಿ ಇರುವ ಇನ್ನೊಂದು ಆಚರಣೆ ದೀಪಾವಳಿಯ ಸಂದರ್ಭದಲ್ಲಿ ಮಾಡುವ ಬಲೀಂದ್ರ ಪೂಜೆ. ನನ್ನ ಅಜ್ಜಯ್ಯ ಕೋಲಿಗೆ ಎಣ್ಣೆ ಬಟ್ಟೆಯನ್ನು ಕಟ್ಟಿ ಅದನ್ನು ದೊಂದಿಯಂತೆ ಮಾಡಿ ಸಂಜೆಯ ಬಲೀಂದ್ರನ ಪೂಜೆಯ ತರುವಾಯ ಗದ್ದೆ ಬದುವಿನ ಮೇಲೆ ಊರಿ ಬರುತ್ತಿದ್ದರು. ಆಗ ಮಕ್ಕಳಾಗಿದ್ದ ನಾವೆಲ್ಲ ಅಜ್ಜಯ್ಯನ ಹಿಂದೆ ಬಲೀಂದ್ರನಿಗೆ ಸಂಬಂಧಪಟ್ಟ ಹಾಡನ್ನು ಕೂಗಿ ಹಾಡುತ್ತಾ ಹೋಗುವುದೇ ಒಂದು ಸಂಭ್ರಮ. ಈ ಆಚರಣೆ ನಮ್ಮ ಕೆಳಮನೆಯಲ್ಲೂ ನಡೆಯುತ್ತದೆ.
'ಹೊಸತು' ನಮ್ಮ ಕಡೆ ಬೇಸಾಯಕ್ಕೆ ಸಂಬಂಧಪಟ್ಟ ವಿಶೇಷ ಆಚರಣೆ. ಗದ್ದೆಯಲ್ಲಿ ಹೊಸ ಫಸಲು ಬಂದಾಗ ತೆನೆ ತಂದು ಮನೆಯ ಜಗುಲಿಯಲ್ಲಿರುವ ಕಂಬಕ್ಕೆ ಕಟ್ಟುತ್ತಾರೆ. ತದನಂತರ ಕಾಯಿಹಾಲು ಗಂಜಿಯನ್ನು ವಿಶೇಷ ಭೋಜ್ಯವಾಗಿ ತಯಾರಿಸುತ್ತಾರೆ. ತಿನ್ನಲು ಅದು ಬಲು ಸೊಗಸು.
ಮಲೆನಾಡಿನ ಕಡೆಯ ವಿಶೇಷ ಹಬ್ಬ ಭೂಮಿ ಹುಣ್ಣಿಮೆ. ಅಂದು ಮನೆಯ ಹೆಂಗಸರು ಬೆಳಗಿನ ಜಾವಕ್ಕೆ ಎದ್ದು ತರಹೇವಾರಿ ಅಡುಗೆ ಮಾಡುತ್ತಾರೆ. ತದನಂತರ ಬೆಳಗ್ಗೆಯೆ ಭೂಮಿ ಪೂಜೆ ಮಾಡಿ ಅಡಿಕೆ ತೋಟದಲ್ಲಿ ಊಟ ಮಾಡುವುದು ಒಂದು ಖುಷಿಯ ಸಂಗತಿ. ಮಕ್ಕಳು ಅವತ್ತು ಮಧ್ಯಾಹ್ನದೊಳಗೆ ಎರಡೆರಡು ಊಟ ಮಾಡುವುದೂ ಇದೆ. ಅಂದು ಮಾಡುವ ಕಡುಬು ಹಾಗೂ ಇತರೆ ಖಾದ್ಯಗಳು ಮಕ್ಕಳ ಹೊಟ್ಟೆಯ ಹಸಿವನ್ನು ಕೆದರಿಸುವುದಂತೂ ನಿಜ.
ನಾವು ಮಕ್ಕಳಾಗಿದ್ದಾಗ ಈ ಎಲ್ಲಾ ಹಬ್ಬ ಹರಿದಿನಗಳನ್ನು ಅವುಗಳ ಆಚರಣೆಗಿಂತ ಆ ದಿನದ ವಿಶೇಷ ತಿನಿಸಿಗಾಗಿ ಕಾಯುತ್ತಿದ್ದದ್ದು ಹಾಗೂ ಮನೆಮಂದಿ ಎಲ್ಲಾ ಒಟ್ಟಾಗಿ ಉಂಡು ಆನಂದಿಸುತ್ತಿದ್ದದ್ದು ಮರೆಯಲಾಗದ ಅನುಭವಗಳು. ಅದೇನೆ ಇರಲಿ ಈ ಎಲ್ಲಾ ಆಚರಣೆಗಳು ಮನುಷ್ಯ - ಪ್ರಕೃತಿಯ ನಡುವಣ ಅನುಬಂಧವನ್ನು ಗಟ್ಟಿ ಮಾಡುವುದಂತೂ ನಿಜ.

89. ಅನುಭವ - ಅಡಿಗೆ 
ಅಡುಗೆ ಮಾಡುವುದು ಒಂದು ಕಲೆ. ಹಾಗೆಯೆ ಮಾಡಿದ ಅಡುಗೆಯನ್ನು ಉಣ ಬಡಿಸುವುದು ಇನ್ನೊಂದು ವಿಶಿಷ್ಟ ಕಲೆ. ಕೆಲವರ ಕೈಯ್ಯಡುಗೆ ಉಂಡದ್ದು ಮರೆಯಲು ಆಗುವುದೇ ಇಲ್ಲ. ಎಂದೋ ಉಂಡ ಆ ಊಟದ ಸವಿ ಯಾವಾಗಲೂ ಮನದ ಮೂಲೆಯಲ್ಲೆಲ್ಲೋ ಇದ್ದೇ ಇರುತ್ತದೆ.
ಬಾಳೆಹೊನ್ನೂರು ನವೋದಯದಲ್ಲಿ ಕ್ಲರ್ಕ್ ಆಗಿದ್ದ ಗಾಯತ್ರಿ ಅಲ್ಲೇ ಹತ್ತಿರದ ಜಯಪುರದವಳು. ನಾವು ಅಪರೂಪಕ್ಕೊಮ್ಮೆ ಅವಳ ಮನೆಗೆ ಊಟಕ್ಕೆ ಹೋಗಿ ಅವರ ಅಮ್ಮ ಮಾಡುತ್ತಿದ್ದ ಬೀಸುಗೊಜ್ಜು ಹಾಗೂ ತಂಬುಳಿಯನ್ನು ತಿಂದದ್ದು ಇವತ್ತಿಗೂ ಅಚ್ಚ ಅಳಿಯದೆ ಮನದೊಳಗಿದೆ. ಅವರು ಮಾಡುತ್ತಿದ್ದ ಅಮಟೆಕಾಯಿ ಬೀಸುಗೊಜ್ಜಿನ ರುಚಿ ಇನ್ನೆಲ್ಲೂ ಸಿಗುವುದಿಲ್ಲ. ಅಂತಹ ರುಚಿ ಅದಕ್ಕೆ! ಎಲ್ಲಕ್ಕು ಮಿಕ್ಕಿ ಮಾಡಿದ್ದನ್ನು ಅವರು ಪ್ರೀತಿಯಿಂದ ಬಡಿಸುತ್ತಿದ್ದ ರೀತಿ ಆ ಊಟಕ್ಕೆ ವಿಶೇಷ ಸ್ವಾದ ಕೊಡುತ್ತಿತ್ತು. ಈಗಲೂ ನನಗೆ ಜಯಪುರ ಅಂದ ಕೂಡಲೆ ನೆನಪಾಗುವುದು ಗಾಯತ್ರಿಯ ಅಮ್ಮನ ಅಡುಗೆ.
ಹಾಗೆಯೆ ಆ ರೀತಿಯಲ್ಲಿ ನೆನಪಿನಲ್ಲಿರುವವರು ಹೆಬ್ರಿ ದೊಡ್ಡಮ್ಮ. ಅವರದೊಂದು ತುಂಬಿದ ಸಂಸಾರ. ಮಧ್ಯಾಹ್ನ ಅವರ ಮನೆಯ ಊಟದ ಒಳದಲ್ಲಿ ಊಟಕ್ಕೆ ಸಾಲು ಸಾಲು ಜನರಿರುತ್ತಿದ್ದದ್ದು ಇನ್ನೂ ನೆನಪಿದೆ ನನಗೆ. ನಾನಾಗ ಚಿಕ್ಕವಳು. ಆದರೂ ಹೆಬ್ರಿ ದೊಡ್ಡಮ್ಮನ ಅಡುಗೆಯ ರುಚಿ, ಪ್ರೀತಿಯಿಂದ ಅವರು ಬಡಿಸುತ್ತಿದ್ದ ರೀತಿ ಇನ್ನೂ ನನ್ನ ಮನದಾಳದಲ್ಲೆಲ್ಲೋ ಇಣುಕಿ ಹಾಕುತ್ತಿರುತ್ತದೆ. ನನ್ನಣ್ಣನಿಗಂತೂ ಅವರ ಅಡುಗೆ ಅಂದರೆ ಭಾರಿ ಇಷ್ಟ.
ನಮ್ಮಸುನಂದ ದೊಡ್ಡಮ್ಮ ಅಂತೂ ಭಾರಿ ಪ್ರಮಾಣದ ಅಡುಗೆ ಮಾಡ್ಲಿಕ್ಕೂ, ಕೈ ಎತ್ತಿ ಬಡಿಸುವುದಕ್ಕೂ ತುಂಬಾ ಫೇಮಸ್. ಅವರು ಬಡಿಸುವುದಕ್ಕೆ ಮುಂಚೆಯೇ ಸಾಕು ಅಂದರೆ ನಾವು ಬಚಾವ್. ಇಲ್ಲದಿದ್ದರೆ ನಮ್ಮ ಊಟದ ತಟ್ಟೆ ಅನ್ನ ಪದಾರ್ಥಗಳಿಂದ ತುಂಬಿ ತುಳುಕಿ ಬಿಡುತ್ತಿತ್ತು. ನಾವು ಊಟ ಮಾಡುವಾಗ ಅವರು "ಸರಿಯಾಗಿ ಉಣ್ಣು ಮಗಾ. ನಾನೇನೂ ವಿಶೇಷ ಮಾಡ್ಲಿಲ್ಲ" ಅಂತ ಉಪಚರಿಸುತ್ತ ಹತ್ತಾರು ಬಗೆಯ ತಿನಿಸುಗಳನ್ನು ಬಡಿಸಿ ತಿನ್ನಿಸಿ ಬಿಡುತ್ತಿದ್ದರು. ಅದೇ ರೀತಿಯಲ್ಲಿ ಬಗೆಬಗೆಯಲ್ಲಿ ಅಡುಗೆ ಮಾಡಿ ಪ್ರೀತಿಯಿಂದ ಬಡಿಸುವ ಇನ್ನೋರ್ವ ವ್ಯಕ್ತಿ ನನ್ನ ಅತ್ತಿಗೆಯ ಅಮ್ಮ ಶ್ರೀಮತಿ ವಸುಮತಿ ಹಂದೆಯವರು. ಯಾರಾದರೂ ಮನೆಗೆ ಬಂದರೆ ಅವರಿಗೆ ಸಂಭ್ರಮವೋ ಸಂಭ್ರಮ. ಅಡುಗೆ ಮನೆಯಿಂದ ಅದೂ ಇದೂ ಅಂತ ಕನಿಷ್ಟ ಹತ್ತಾರು ಬಗೆಯ ತಿನಿಸುಗಳು ಹೊರಬಂದು ನಮ್ಮ ಹೊಟ್ಟೆ ಬಿರಿಯುವಷ್ಟು ತಿನ್ನಿಸಿ ಕಳಿಸುವುದರಲ್ಲಿ ಅವರದ್ದು ಎತ್ತಿದ ಕೈ. ಅವರ ಕೈ ರುಚಿ ಕೂಡಾ ಮರೆಯುವಂತಹದ್ದಲ್ಲ. ಇವರೆಲ್ಲರಲ್ಲೂ ನಾನು ಕಂಡ ಒಂದು ಸಾಮಾನ್ಯ ಅಂಶವೆಂದರೆ ತಿನಿಸುವಾಗ ಅವರು ತೋರಿಸುವ ಪ್ರೀತಿ. ಅವರ ಮೊಗದ ಮೇಲಿರುವ ಪ್ರೀತಿಯನ್ನು ಕಂಡೇ ಅರ್ಧ ಹೊಟ್ಟೆ ತುಂಬಿ ಹೋಗುತ್ತದೆ. ಅವರು ತೋರುವ ಪ್ರೀತಿ ಕಾಳಜಿಯಿಂದ ಅವರ ಅಡುಗೆ ಇನ್ನಷ್ಟು ರುಚಿ ಎನಿಸುತ್ತದೆ. ನಾವು ಏನು ಮಾಡಿ ಹಾಕುತ್ತೇವೆ ಅನ್ನುವುದಕ್ಕಿಂತ ಮಾಡಿದ್ದನ್ನು ಹೇಗೆ ಬಡಿಸುತ್ತೇವೆ ಎನ್ನುವುದು ಬಹಳ ಮುಖ್ಯ ಎನ್ನುವುದು ನಾನಿವರನ್ನೆಲ್ಲ ನೋಡಿ ತಿಳಿದುಕೊಂಡ ಸತ್ಯ.

88. ನೆನಪುಗಳು - ಕೆಳ ಮನೆ 
ನಾನು ಸೊಸೆಯಾಗಿ ಬಂದು ಸೇರಿದ ಮನೆ ಕೆಳಮನೆ. ನನಗಿನ್ನೂ ನಾನು ಮದುವೆಯಾಗಿ ಬಂದ ದಿನದ ನೆನಪಿದೆ. ಆಗ ರಸ್ತೆ ಚೆನ್ನಾಗಿರದ ಕಾರಣ ನಮ್ಮೂರಿನಿಂದ ಕೆಳಮನೆಗೆ ಪಯಣಿಸಲು ಸುಮಾರು ನಾಲ್ಕು ಗಂಟೆ ತಗಲುತ್ತಿತ್ತು. ಮದುವೆ ಮುಗಿಸಿ ಸಾಯಂಕಾಲ ಹೊರಟು ಪಯಣಿಸಿ ಕೆಳಮನೆ ತಲುಪುವಾಗ ರಾತ್ರಿ ಹತ್ತರ ಸಮಯ. ಎಲ್ಲಿ ನೋಡಿದರಲ್ಲಿ ಕತ್ತಲೋ ಕತ್ತಲು. ಕಾರನ್ನು ಮನೆಯಿಂದ ಸ್ವಲ್ಪ ದೂರ ನಿಲ್ಲಿಸಲಾಗಿತ್ತು. ಪಟಾಕಿ, ಗರ್ನಾಲು, ಡೋಲು ಹೊಡೆಯುತ್ತಾ ಗ್ಯಾಸ್ ಲೈಟ್ ಹಿಡಿದು ನಮ್ಮನ್ನು ಎದುರುಗೊಳ್ಳಲು ಜನಸಮೂಹವೇ ಇತ್ತು. ನನಗೋ ಇದೆಲ್ಲ ಹೊಸದು. ಕತ್ತಲೆಯಲ್ಲೇ ಮನೆ ತನಕ ನಡೆಸಿಕೊಂಡು ಹೋಗಿ ನನ್ನನ್ನು ಮನೆ ತುಂಬಿಸಿಕೊಂಡರು.
ಅದೊಂದು ಇಪ್ಪತ್ತೈದು ಚದರದ ವಿಶಾಲವಾದ ಮನೆ. ಆಗ ಅದರ ವಿಶಾಲತೆಗೆ ತಕ್ಕಂತೆ ಮನೆ ತುಂಬಾ ಜನರಿದ್ದರು ಕೂಡ. ಮನೆ ಪ್ರವೇಶಿಸುತ್ತಿದ್ದಂತೆಯೆ 40/10ರ ಅಳತೆಯ ದೊಡ್ಡ ಚಾವಡಿ. ಅದರ ಬಲಪಕ್ಕದಲ್ಲಿ 10/10 ರ ಅಳತೆಯ ಕೋಣೆ. ಎಡಪಕ್ಕದಲ್ಲಿ 30/10 ರ ಅಳತೆಯ ಕಡಿಮಾಡು. ಅದರ ಕೊನೆಯಲ್ಲೊಂದು ಕೋಣೆ. ಚಾವಡಿಯಲ್ಲಿರುವ ವಾಸ್ತು ಬಾಗಿಲು ದಾಟುತ್ತಿದ್ದಂತೆ ಸುಮಾರು 25/20 ರ ಅಳತೆಯ ಜಗಲಿ. ಅದರ ಎಡ ಮತ್ತು ಬಲ ಪಕ್ಕದಲ್ಲಿ ಒಂದೊಂದು ಕೋಣೆ. ಅಲ್ಲಿಯೇ ಬಲಪಕ್ಕದ ಮೂಲೆಯಲ್ಲಿ ಮೆತ್ತಿಗೆ ಹೋಗಲು ಮರದ ಮೆಟ್ಟಿಲುಗಳು. ಜಗಲಿಯ ನಡುವಿರುವ ಬಾಗಿಲಿನಿಂದ ಆಚೆ ಪಕ್ಕದಲ್ಲಿ 30/10 ರ ಅಳತೆಯ ಊಟದ ಒಳ. ನಾನು ಮದುವೆಯಾಗಿ ಬಂದ ಸಮಯದಲ್ಲಿ ಆ ಒಳದಲ್ಲಿ ಪ್ರತಿನಿತ್ಯ ಎರಡು ಪಂಕ್ತಿ ಆಗುವಷ್ಟು ಜನ ಊಟಕ್ಕೆ ಇರುತ್ತಿದ್ದರು. ಆ ಊಟದ ಒಳದ ಎಡ ಪಕ್ಕದಲ್ಲಿ ಅಡುಗೆ ಮನೆ ಹಾಗೂ ಬಲಪಕ್ಕದಲ್ಲಿ ಬಾವಿಮನೆ, ಪಣತದ ಮನೆ ಹಾಗೂ ಬಚ್ಚಲುಮನೆ. ಆ ಊಟದ ಒಳದ ಹೊರ ಕಟ್ಟೆಯಿಂದ ಎಡಕ್ಕೆ ಸುಮಾರು ಎಪ್ಪತ್ತು ಅಡಿ ದಾಟಿದ ಮೇಲೆ ವಿಶಾಲವಾದ ಕೊಟ್ಟಿಗೆ.
ಮನೆಯ ಎದುರು ಅಡಿಕೆ ತೋಟ. ತೋಟಕ್ಕೆ ಇಳಿದು ಹೋಗುವಾಗ ನಡುವೆ ಹರಿಯುವ ಸಣ್ಣ ಹೊಳೆ. ಮನೆಯ ಹಿಂತಟ್ಟಿನಲ್ಲಿ ದರೆ. ಅದಕ್ಕೆ ಲಗತ್ತಾಗಿ ಅಲ್ಲಲ್ಲಿ ತೆಂಗಿನಮರಗಳು ಹಾಗೂ ಕಾಡು ಗಿಡಗಳು. ಒಟ್ಟಿನಲ್ಲಿ ಕಾಡು - ತೋಟದ ನಡುವೆ ಇರುವ ಒಂಟಿಮನೆ ಅದಾಗಿತ್ತು. ಮನೆ ಒಂಟಿಯಾಗಿದ್ದರೂ ಮನೆಮಂದಿ ಒಂಟಿಗರಲ್ಲ. ಮನೆಗೆ ಬಂದವರನ್ನು ಉಪಚರಿಸಿ ಅವರ ಬ್ಯಾಗನ್ನು ಅಡಗಿಸಿಟ್ಟು ಅವರು ನಮ್ಮೆಲ್ಲರೊಡನೆ ನಾಲ್ಕು ದಿವಸ ಉಳಿದುಕೊಂಡು ಹೋಗುವಂತೆ ಮಾಡುವ ಕಲೆ ನಮ್ಮ ಮನೆಯವರಿಗೆ ಚೆನ್ನಾಗಿ ಗೊತ್ತಿತ್ತು. ಹೀಗಾಗಿ ನಾವು ಮನೆಮಂದಿ ಹಾಗೂ ಬಂದ ನೆಂಟರಿಷ್ಟರು ಅಂತ ಮನೆಯಲ್ಲಿ ಯಾವಾಗಲೂ ಇಪ್ಪತ್ತು ಇಪ್ಪತ್ತೈದು ಜನ ಖಾಯಂ ಇರುತ್ತಿದ್ದರು. ಮನೆಯಲ್ಲಿ ಪ್ರತಿದಿನ ಹಬ್ಬದ ವಾತಾವರಣ ಇದ್ದ ಹಾಗೆ ಇರುತ್ತಿತ್ತೆಂದರೆ ಸುಳ್ಳಲ್ಲ. ಈಗ ಕಾಲ ಬದಲಾಗಿದೆ. ವಯಸ್ಸು ಎಲ್ಲರನ್ನು ಹಣ್ಣು ಮಾಡಿದೆ. ಆದರೆ ಈಗಲೂ ಆ ಮನೆಗೆ ಹೋದರೆ ಅಲ್ಲಿನ ಮಾಸದಿರುವ ಆತ್ಮೀಯತೆ ಅನುಭವಕ್ಕೆ ಬರುತ್ತದೆ.

 87.ನೆನಪುಗಳು - ನಾಯಿಗಳು 
ನಮ್ಮ ನಾಯಿ ಬೂಗಿ ನಿನ್ನೆ ನಾಲ್ಕು ಮರಿ ಹಾಕಿದೆ. ನಮ್ಮಲ್ಲಿ ಈವರೆಗೆ ಇದ್ದ ಎಲ್ಲಾ ನಾಯಿಗಳು ಹಾಕಿದ ಮರಿಗಳ ಸಂಖ್ಯೆ ಒಟ್ಟು ನೂರು ದಾಟಿರಬಹುದು.
ನಮ್ಮಲ್ಲಿ ಮರಿ ಹಾಕಿದ ಮೊದಲ ನಾಯಿ ಜರ್ಮನ್ ಶೆಫರ್ಡ್ ಜಾತಿಯ ಭಿಕ್ಕು. ಅದೊಂದು ಮಹಾತಾಯಿ. ಒಂದೊಂದು ಸಾರಿ ಹತ್ತನ್ನೆರಡು ಮರಿಗಳನ್ನು ಹಾಕುತ್ತಿತ್ತು. ಭಿಕ್ಕುವಿನ ಮಗಳು ಬುಸ್ಸಿ. ಅದು ಸಣ್ಣಕ್ಕಿರುವಾಗ ಅದರ ಸೊಂಟದ ಮೇಲೆ ನಮ್ಮ ಸುಮೊ ಗಾಡಿ ಹತ್ತಿ ಅದಕ್ಕೆ ಮರಿ ಹಾಕುವಾಗ ಕಷ್ಟವಾಗುತ್ತಿತ್ತು. ನಮ್ಮ ಸಹಾಯ ಬೇಕಾಗುತ್ತಿತ್ತು. ಅದು ಪ್ರತಿ ಬಾರಿ ಮರಿ ಹಾಕುವಾಗ ನಾನು ಅರ್ಧ ಹೊರಬಂದ ಮರಿಗಳನ್ನು ಹಿಡಿದೆಳೆದು ಹೊರ ತೆಗೆಯುತ್ತಿದ್ದೆ. ಕೊನೆಗೊಮ್ಮೆ ನಮಗೆ ಅದು ಬಸುರಿ ಎನ್ನುವುದು ಗೊತ್ತಾಗದೆ ಅದರ ಹೊಟ್ಟೆಯಲ್ಲೇ ಮರಿಗಳು ಸತ್ತು ಬುಸ್ಸಿಯೂ ತೀರಿಕೊಂಡಿತು. ನಮ್ಮಲ್ಲಿದ್ದ ಡಾಬರ್ ಮನ್ ಬಂಪಿ ಮೊತ್ತಮೊದಲಿಗೆ ಹಾಕಿದ ಮೂರು ಸೊಗಸಾದ ಮರಿಗಳನ್ನು ಕೊಟ್ಟು ವಿನಿಮಯದಲ್ಲಿ ಹದಿನೈದು ದಿನಗಳ ರಾಟ್ವೀಲರ್ ಮರಿ ಬುಜ್ಜಿಯನ್ನು ತಂದೆವು. ನಂತರದಲ್ಲಿ ಬಂಪಿ ಹಲವಾರು ಬಾರಿ ಮರಿ ಹಾಕಿದರೂ ಮರಿಗಳು ಸರಿಯಾದ ಬೆಳವಣಿಗೆ ಇಲ್ಲದೆ ಸತ್ತು ಹೋದವು. ನಂತರದಲ್ಲಿ ನಮ್ಮ ಬುಜ್ಜಿಯ ಮರಿಗಳ ಪ್ರತಾಪ. ಅದು ಪ್ರಪ್ರಥಮವಾಗಿ ಕರಡಿಯಂತಹ ಕಪ್ಪನೆಯ, ದಪ್ಪನೆಯ ಒಂದೇ ಮರಿಯನ್ನು ಹಾಕಿತು. ಅದಕ್ಕೆ ನಾವು ಬಾಲಿ ಎಂದು ಹೆಸರಿಟ್ಟಿದ್ದೇವೆ. ಈಗದಕ್ಕೆ ಐದು ವರ್ಷ. ಆದರೆ ಬುಜ್ಜಿ ಮರಿ ಹಾಕುವುದೆಂದರೆ ನಮಗೆಲ್ಲ ತಲೆಬಿಸಿ. ಮರಿ ಹಾಕುವಾಗ ತುಂಬಾ ರೌದ್ರಾವತಾರ ತಾಳುತ್ತದೆ. ಅದು ಕೂಡ ಬಹಳಷ್ಟು ಸಲ ಮರಿ ಹಾಕಿದೆ. ಅದರ ಇನ್ನೊಂದು ಮರಿಯನ್ನು ಕೂಡಾ ಸಾಕಿ ಅದಕ್ಕೆ ಬುಟ್ಟ ಎಂದು ಹೆಸರಿಟ್ಟಿದ್ದೇವೆ. ನಮ್ಮ ಲ್ಯಾಬ್ರಡಾರ್ ನಾಯಿ ಭಾಮ ಕೂಡಾ ಬಹಳಷ್ಟು ಮರಿಗಳನ್ನು ಹಾಕಿದೆ. ಈ ಬೂಗಿ ಭಾಮಾಳ ಮಗಳು. ಭಾಮ ಎಲ್ಲಾ ನಾಯಿಗಳ ಮರಿಗಳನ್ನು ತನ್ನದೇ ಮರಿಗಳ ತರಹ ನೋಡಿಕೊಳ್ಳುತ್ತದೆ. ತುಂಬಾ ಪ್ರೀತಿ ತೋರಿಸುವ ಜೀವಿ ಭಾಮ.
ಈ ಪ್ರಾಣಿ ಪ್ರಪಂಚವೇ ತುಂಬಾ ರೋಚಕ. ಅವುಗಳನ್ನು ಗಮನಿಸುತ್ತಾ ಹೋದರೆ ಅವುಗಳಲ್ಲಿರುವ ಸೂಕ್ಷ್ಮ ಭಾವನೆಗಳ ಅರಿವಾಗುತ್ತದೆ. ಅವುಗಳಲ್ಲಿರುವ ನಿಷ್ಕಲ್ಮಶ ಪ್ರೀತಿಗೆ ಬೆಲೆ ಕಟ್ಟಲಾಗುವುದಿಲ್ಲ. ಅವುಗಳು ಒಂದು ರೀತಿಯ stress buster ಕೂಡಾ. ನಮ್ಮ ಡಿಂಗ ನಮ್ಮಲ್ಲಿರುವ ಐದು ನಾಯಿಗಳೊಡನೆ ಮಾತನಾಡುವ ಪರಿ ಚೆಂದ.
ನಮ್ಮಲ್ಲಿರುವ ಮೂರು ಹೆಣ್ಣು ನಾಯಿಗಳು ವರ್ಷಕ್ಕೆ ಒಂದು ಬಾರಿಯಂತೂ ಮರಿ ಹಾಕುತ್ತವೆ. ಪ್ರತಿ ಬಾರಿ ಮರಿಗಳನ್ನು ಬೇರೆಯವರಿಗೆ ಕೊಡುವಾಗ ಒಂದು ರೀತಿಯ ಬೇಸರವಾಗುತ್ತದೆ. ಹೀಗಾಗಿ ಯಾರ್ಯಾರಿಗೋ ಮರಿಗಳನ್ನು ಕೊಡದೆ ಪ್ರೀತಿಯಿಂದ ಸಾಕುತ್ತಾರೆ ಎನ್ನುವವರಿಗೆ ಮಾತ್ರ ಮರಿಗಳನ್ನು ಕೊಡುತ್ತೇವೆ. ಪ್ರಾಣಿಗಳ ಒಡನಾಟವಿದ್ದವರಿಗೆ ಈ ಪ್ರಾಣಿಪ್ರೇಮ ಖಂಡಿತವಾಗಿ ಅನುಭವಕ್ಕೆ ಬಂದಿರುತ್ತದೆ!


86. ನೆನಪುಗಳು - (ಭಾವನೆಗಳು)
ಆಪಲ್ ಟಿವಿ ಶೋನಲ್ಲಿ The Little America ಎನ್ನುವ web series ಇದೆ. ಅದು ಸತ್ಯ ಘಟನೆಗಳನ್ನಾಧರಿಸಿ ಮಾಡಿದ web series. ಅದರ ಎಲ್ಲಾ episodes ತುಂಬಾ ಚೆನ್ನಾಗಿ ಮೂಡಿ ಬಂದಿವೆ. ಅದರಲ್ಲಿ ನನಗೆ ಒಳ್ಳೆಯ ರೀತಿಯಲ್ಲಿ connect ಆದ ಎಪಿಸೋಡ್ The Silence ಎನ್ನುವುದು. ಒಬ್ಬಾಕೆ ಧ್ಯಾನ ಮಾಡಿ ಮನಸ್ಸಮಾಧಾನ ಪಡೆಯಲು ಒಂದು ರಿಟ್ರೀಟ್ ಕ್ಯಾಂಪಿಗೆ ಹೋಗುತ್ತಾಳೆ. ಎಲ್ಲರೂ ಧ್ಯಾನಸ್ಥ ಸ್ಥಿತಿಗೆ ಹೋದರೆ ಇವಳ ಮನಸ್ಸು ಮಾತ್ರ ವಿಕ್ಷಿಪ್ತ ಸ್ಥಿತಿಯಲ್ಲಿರುತ್ತದೆ. ಏನನ್ನು ಕಂಡರೂ ಆ ವಸ್ತುವಿನ ಬಗ್ಗೆ ಅವಳ ಮನಸ್ಸು ಯೋಚಿಸತೊಡಗುತ್ತದೆ. ಒಂದು ಕ್ಷಣ ಅವಳ ಮನಸ್ಸು ಹಕ್ಕಿಯಾದರೆ ಇನ್ನೊಂದು ಕ್ಷಣ ದುಃಖದ ಮಡುವಿನಲ್ಲಿರುವಂತಹ ಅನುಭವ. ಬಿಡುವಿನ ಸಮಯದಲ್ಲಿ ಬಾಯಿ ಚಪಲ ತಾಳಲಾರದೆ ಕದ್ದು ಮುಚ್ಚಿ ಕಾರು ನಿಲ್ಲಿಸಿದ ಜಾಗಕ್ಕೆ ಹೋಗಿ ಅದರಲ್ಲಿ ಇಟ್ಟ ತಿಂಡಿ ತಿಂದು ಸಂತೃಪ್ತಳಾಗುತ್ತಾಳೆ. ನಂತರ ಅಲ್ಲೇ ಪರಿಚಯವಾದ ಭಾಷೆಯನ್ನರಿಯದ ವ್ಯಕ್ತಿಯನ್ನು ಮದುವೆಯಾಗುತ್ತಾಳೆ.
ಇಡೀ episodeನಲ್ಲಿ ನಿರ್ದೇಶಕ ಚಿತ್ರೀಕರಿಸಿರುವ ಅವಳ ವಿಕ್ಷಿಪ್ತ ಮನೋಚಿತ್ರಣ ಅದ್ಭುತವಾಗಿ ಮೂಡಿ ಬಂದಿದೆ. ಒಂದರಘಳಿಗೆ ನಾವೇ ಆ ಪಾತ್ರದೊಳಗೆ ಹೋಗಿ ಬಂದಂತಾಗುತ್ತದೆ. ಅಷ್ಟು ಸಹಜವಾಗಿ, ಸರಳವಾಗಿ ಮೂಡಿ ಬಂದ ಕಥಾ/ವ್ಯಕ್ತಿ ಚಿತ್ರಣವದು.
ನಾನೂ ಬಹಳಷ್ಟು ಧ್ಯಾನದ ಶಿಬಿರಗಳಿಗೆ ಹೋಗಿದ್ದೇನೆ. ಮೊದಮೊದಲು ಆ ಧ್ಯಾನ ಪ್ರಕ್ರಿಯೆಯೊಳಗೆ ತೊಡಗಿಕೊಳ್ಳಲಾಗದೇ ಒದ್ದಾಡಿದ್ದಿದೆ. The Silence ನ್ನು ವೀಕ್ಷಿಸಿದಾಗ ಮೊದಮೊದಲಿಗೆ ಧ್ಯಾನ ಮಾಡಲೆತ್ನಿಸುವಾಗ ಮನಸ್ಸನ್ನು ಹದ್ದುಬಸ್ತಿನಲ್ಲಿ ಇಡಲಾಗದೆ ಒದ್ದಾಡುತ್ತಿದ್ದ ನನ್ನ ಸ್ಥಿತಿಯ ನೆನಪಾಯಿತು. ನಂತರದಲ್ಲಿ ನಿಯಮಿತ ಅಭ್ಯಾಸದಿಂದಾಗಿ ಭಾವನಾತ್ಮಕ ಯೋಚನೆಗಳ ಬದಲಿಗೆ ದಿನಂಪ್ರತಿ ಕೆಲಸದ ಯೋಚನೆಗಳು ಬಂದು ಹಾಗೇ ಹೋಗುವ ಬದಲಾವಣೆ ಗಮನಕ್ಕೆ ಬಂದಿತು.ಹೆಚ್ಚಿನವರು ಧ್ಯಾನ ಎಂದರೆ ಮನಸ್ಸು ಸಂಪೂರ್ಣವಾಗಿ ಯೋಚಿಸುವುದನ್ನು ನಿಲ್ಲಿಸಿ ಶಾಂತ ಸ್ಥಿತಿಗೆ ಹೋಗುವುದು ಎಂದು ಕಲ್ಪಿಸಿಕೊಳ್ಳುತ್ತಾರೆ. ಅದು ಅಷ್ಟು ಸುಲಭದ ವಿಷಯವಲ್ಲ. ಎಷ್ಟೇ ಆದರೂ ಎಲ್ಲರ ಮನಸ್ಸು ಯೋಚನೆಗಳ, ವಿಚಾರಗಳ ಹಾಗೂ ಭಾವನೆಗಳ ಸುಳಿಯಲ್ಲಿರುವುದಲ್ಲವೇ? ಹೀಗಾಗಿ ಆಗಾಗ್ಗೆ ಹುಚ್ಚು ಮನಸ್ಸಿನ ಒಂದೊಂದು ಮುಖ ಪುಟಿದೇಳುವುದರಲ್ಲಿ ಆಶ್ಚರ್ಯವಿಲ್ಲ😊


85 .ನೆನಪುಗಳು - ಹಾಲು, ಮೊಸರು, ಬೆಣ್ಣೆ, ತುಪ್ಪ 
ನಾನಿವತ್ತು ಬೆಣ್ಣೆ ಕಾಯಿಸಿ ತುಪ್ಪ ಮಾಡಿದ ಬಾಣಲೆಯಲ್ಲಿ ಅನ್ನಕ್ಕೆ ಉಪ್ಪು ಹಾಕಿ ಕಲೆಸಿ ತಿಂದೆ. ಆಗಷ್ಟೆ ಕಾಯಿಸಿದ ತುಪ್ಪದ ಘಮ ಅದಕ್ಕೊಂದು ವಿಶಿಷ್ಟ ರುಚಿಯನ್ನು ಕೊಡುತ್ತದೆ.
ಚಿಕ್ಕಂದಿನಿಂದಲೂ ನನಗೆ ಹಾಲು, ಮೊಸರು, ಬೆಣ್ಣೆ, ತುಪ್ಪ ಅಂದರೆ ಬಹಳ ಇಷ್ಟ. ಆಗೆಲ್ಲ ಫ್ರಿಡ್ಜ್ ಇರದಿದ್ದ ಕಾರಣ ಎಲ್ಲಿಗಾದರೂ ಹೋಗಬೇಕಾದ ದಿನ ಉಪಯೋಗಿಸಿ ಉಳಿದ ಹಾಲನ್ನು ಕೆನೆ ಸಹಿತ ನಾನು ಕುಡಿಯುತ್ತಿದ್ದೆ. ನನ್ನಮ್ಮನಾದರೋ ಕೆನೆ ದ್ವೇಷಿ. ಅವಳು ಹೋಟೆಲಿಗೆ ಹೋದರು ಕೂಡಾ ಕಾಫಿಯನ್ನು ಅದಕ್ಕಾಗಿ ಇಟ್ಟ ಕರ್ಚೀಫಿನಲ್ಲಿ ಸೋಸಿ ಕುಡಿಯುವ ಜನ. ನನ್ನ ಮನೆಯಲ್ಲಿ ಅವಳಿದ್ದಾಗ ನಾನು ಕಾಫಿ ಸೋಸಿ ಕೊಡುತ್ತೇನೆ ಅನ್ನುವ ನಂಬಿಕೆ ಅವಳಿಗಿರದ ಕಾರಣ ಅವಳ ಎದುರಿನಲ್ಲಿಯೇ ಅವಳಿಗೆ ಕಾಫಿ ಸೋಸಿ ಕೊಡಬೇಕಿತ್ತು. ನಾನು, ನನ್ನಣ್ಣ ಮತ್ತು ಅಪ್ಪ ಮೂವರೂ ಕೆನೆಯನ್ನು ಸ್ವಾದಿಷ್ಟವಾಗಿ ತಿನ್ನುತ್ತಿದ್ದೆವು. ನನ್ನ ತಂಗಿಗೆ ಕೆನೆಯಾಗದು. ಆದರೆ ಅವಳಿಗೆ ಇವತ್ತಿಗೂ ಉಪ್ಪು ತುಪ್ಪದನ್ನ ಇಷ್ಟ😊
ನಾನು ಮದುವೆಯಾಗಿ ಮಲೆನಾಡಿನ ಸೊಸೆಯಾಗಿ ಬಂದಾಗ ಮನೆಯಲ್ಲಿ ಬೆಣ್ಣೆ, ತುಪ್ಪ, ಮೊಸರಿನ ಹೊಳೆಯೇ ಹರಿಯುತ್ತಿತ್ತು! ನಮ್ಮಲ್ಲಿ ನಾವು ತಿಂಡಿಗೆ ಮೊಸರು ಉಪಯೋಗಿಸುತ್ತಿರಲಿಲ್ಲ. ಇಲ್ಲಾದರೋ ಊಟ ತಿಂಡಿ ಎರಡಕ್ಕೂ ಮೊಸರಿನ ಬಳಕೆ ಸರ್ವೇ ಸಾಮಾನ್ಯ. ಒಳ್ಳೆಯ ಎಮ್ಮೆ ಹಾಲಿನ ಗಟ್ಟಿ ಮೊಸರು. ಚಾಕುವಿನಲ್ಲಿ ತುಂಡರಿಸಬೇಕೇನೋ ಅನ್ನುವಷ್ಟು ಗಟ್ಟಿ ಮೊಸರು. ದೋಸೆ, ರೊಟ್ಟಿಯ ಜೊತೆ ಮೊಸರಿಗೆ ಜೋನಿ ಬೆಲ್ಲ ಬೆರೆಸಿ ತಿನ್ನುವ ಪರಿ ಈಗಲೂ ಬಾಯಿಯಲ್ಲಿ ನೀರು ಬರಿಸುತ್ತದೆ. ಒಂದು ರೌಂಡ್ ಬೆಣ್ಣೆ ಹಾಕಿ ತಿಂದ ಮೇಲೆ ಮೊಸರು ಬೆಲ್ಲದೊಡನೆ ತಿಂಡಿಯ ಮುಕ್ತಾಯ. ಕೇಸರಿಬಾತ್ ಮಾಡಿದ್ರಂತೂ ತುಪ್ಪ ಹೆರೆಹೆರೆಯಾಗಿ ಅದರ ಮೇಲಿರುತ್ತಿತ್ತು. ಹೋಳಿಗೆಯನ್ನು ತುಪ್ಪದೊಳಗೇ ಅದ್ದಿ ತಿನ್ನುತ್ತಿದ್ದ ದಿನಗಳವು. ಮನೆಯಲ್ಲಿ ಎಮ್ಮೆ, ದನಗಳು ಇದ್ದ ಕಾರಣ ಹಾಲು ಮೊಸರು ಹೇರಳವಾಗಿತ್ತು. ನಾನಂತೂ ಇಲ್ಲಿನ ಕ್ಷೀರೋತ್ಪನ್ನಗಳನ್ನು ಸಖತ್ತಾಗಿ ಸೇವಿಸಿ ಆನಂದಿಸಿದ್ದೇನೆ.
ಸಂತೃಪ್ತವಾಗಿ ತಿಂದ ಆ ದಿನಗಳನ್ನು ಈಗ ನೆನಪಿಸಿ ಕೊಳ್ಳುವುದೇ ಹೊರತು ತಿಂದು ಜೀರ್ಣಿಸಿಕೊಳ್ಳುವ ತಾಕತ್ತು ಇಲ್ಲದಾಗಿದೆ. ಆದರೂ ಆಗೊಮ್ಮೆ ಈಗೊಮ್ಮೆ ಬೆಣ್ಣೆ ತುಪ್ಪವನ್ನು ಮೆಯ್ಯುವ ಪ್ರಯತ್ನ ನಡೆಸುವುದಿದೆ😄


84. ನೆನಪುಗಳು - ಪಾರ್ವತಿ 
ಬಹಳ ಕಾಲದ ನಂತರ ನನ್ನ ಬಾಳೆಹೊನ್ನೂರಿನ ದಿನಗಳ ಸ್ನೇಹಿತೆಯಾದ ಪಾರ್ವತಿಯವರೊಡನೆ ಮಾತನಾಡಿದೆ. ಹಳೆಯ ದಿನಗಳ ಹಾಗೂ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಒಂದಿಷ್ಟು ಹರಟೆ ನಡೆಯಿತು. ಇಂದಿನ ಆತಂಕದ ದಿನಗಳಿಗೂ ಅಂದಿದ್ದ ನಿರಾತಂಕ ದಿನಗಳಿಗೂ ಇರುವ ಅಜಗಜಾಂತರ ವ್ಯತ್ಯಾಸದ ಬಗ್ಗೆ ಮಾತನಾಡಿದೆವು. ಆ ಮಾತುಕತೆ ಹಳೆಯ ನೆನಪುಗಳನ್ನು ಕೆದಕಿತು.
ನಾನು ನವೋದಯದಲ್ಲಿ ಕೆಲಸಕ್ಕೆ ಸೇರಿದ್ದು 1989ರ ಜುಲೈ ತಿಂಗಳಿರಬೇಕು. ಪಾರ್ವತಿ ಸೇರಿದ್ದು ಸೆಪ್ಟೆಂಬರ್ ನಲ್ಲಿ. ನನಗಿಂತ ಸುಮಾರು ಹತ್ತು ವರ್ಷ ದೊಡ್ಡವರು. ಆದರೆ ಬಂದವರು ಕೂಡಲೇ ಆತ್ಮೀಯರಾದರು. ಬೆಂಗಳೂರಿನಲ್ಲಿ ಹುಟ್ಟಿದ ಅವರು ಬೆಳೆದಿದ್ದೆಲ್ಲ ಉತ್ತರ ಭಾರತದಲ್ಲಿ. ಅವರ ತಂದೆ ಇಂಜಿನಿಯರ್ ಆಗಿದ್ದರು. ಸುಮಾರು ಏಳು ಮಕ್ಕಳ ತುಂಬು ಸಂಸಾರಕ್ಕೆ ಹಿರಿಯಕ್ಕ ಆಕೆ. ಉತ್ತರ ಭಾರತದಲ್ಲಿ ಬೆಳೆದಿದ್ದ ಕಾರಣ ಕನ್ನಡದ ಮೇಲಿನ ಅವರ ಹಿಡಿತ ಅಷ್ಟಕ್ಕಷ್ಟೇ ಇತ್ತು. ಆದರೆ ಅವರ ಇಂಗ್ಲಿಷ್ ಹಾಗೂ ಹಿಂದಿ ಉತ್ಕೃಷ್ಟವಾಗಿದ್ದವು. ನನ್ನ ಇಂಗ್ಲಿಷ್ ಭಾಷೆಯನ್ನು ಅಲ್ಲಲ್ಲಿ ಸರಿಪಡಿಸಿದ ಕ್ರೆಡಿಟ್ ಪಾರ್ವತಿಗೆ ಸಲ್ಲುತ್ತದೆ. ಅವರ ಮನೆಯಲ್ಲಿ ಅವರ ತಮ್ಮ ತಂಗಿಯರಿಗೆ ಹಿರಿಯಕ್ಕನಾಗಿದ್ದ ಅವರು ನವೋದಯದಲ್ಲಿ ನನಗೆ ಹಿರಿಯಕ್ಕನಾಗಿದ್ದರು! ಸ್ವಲ್ಪ ಹಟವಾದಿ. ಅವರ ಮಾತನ್ನು ಕೇಳದಿದ್ದರೆ ಕೇಳಿಸುವ ತಾಕತ್ತು ಅವರಿಗಿತ್ತು.
ಪಾರ್ವತಿ, ನಾನು, ಗೀತಾ, ಉಮಾ ಆಗ ದಟ್ಟವಾದ ಕಾಡಿದ್ದ ಸೀಗೋಡಿನಲ್ಲಿ ರಾತ್ರಿ ಕೂಡಾ ವಾಕಿಂಗ್ ಮಾಡಿ ಹಿರಿ ತಲೆಗಳ ಹತ್ತಿರ ಬೈಸಿಕೊಂಡದ್ದಿದೆ. ಪಾರ್ವತಿಗೆ ಉಳಿಯಲು ಕೊಟ್ಟಿದ್ದ ಮೆಸ್ಸಿನ ಸ್ಟೋರ್ ರೂಮಿನಲ್ಲಿ ನಾವು ನಾಲ್ವರು ಸೇರಿ ಅಡುಗೆ ಮಾಡಿಕೊಂಡದ್ದಿದೆ. ಐದು ಕಿಮೀ ದೂರವಿದ್ದ ಬಾಳೆಹೊನ್ನೂರಿಗೆ ನಡೆದುಕೊಂಡು ಹೋಗಿ ಕೆಲಸ ಮುಗಿಸಿ ವಾಪಾಸ್ ನಡಕೊಂಡು ಬಂದದ್ದಿದೆ. ಒಮ್ಮೆಯಂತೂ ನಮ್ಮಲ್ಲಿಗೆ ಇನ್ಸ್ಪೆಕ್ಶನ್ ಗೆ ಬಂದಿದ್ದ ಆಫೀಸರ್ ರವರ ವಯಸ್ಸಾದ ಪತ್ನಿಯನ್ನು ಕಳಸದಿಂದ ಹೊರನಾಡಿಗೆ ಬಸ್ಸು ಸಿಗದ ಕಾರಣ ನಡೆಸಿಕೊಂಡು ಕರೆದುಕೊಂಡು ಹೋಗಿದ್ದೆವು.
ಯಾವುದೇ ಕೆಲಸವನ್ನು ಎಷ್ಟೇ ಹೊತ್ತಿಗೆ ಹೇಳಿದರೂ ಮಾಡಲು ನಾವು ಮುಂದು ಬರುತ್ತಿದ್ದೆವು. ವಯಸ್ಸಿನಲ್ಲಿ ಚಿಕ್ಕವರಾಗಿದ್ದ ನಮಗೆಲ್ಲ ಪಾರ್ವತಿ ಒಳ್ಳೆಯ ಸ್ಟ್ರಿಕ್ಟ್ ಗೈಡ್ ಆಗಿದ್ದರು. ಅಧಿಕಪ್ರಸಂಗ ಮಾಡಿದಾಗ ಹಿಡಿದು, ಬೈದು ತಿದ್ದುತ್ತಿದ್ದರು. ರವಿಗೂ ಕೂಡಾ ಅವರೊಡನೆ ಆಪ್ತತೆ ಬೆಳೆದಿತ್ತು. ಎಷ್ಟೋ ಬಾರಿ ನಮ್ಮಿಬ್ಬರ ನಡುವಣ ತಪ್ಪು ಗ್ರಹಿಕೆಯನ್ನು ಅವರು ತಿದ್ದಿ ಸರಿಪಡಿಸಿದ್ದಿದೆ.
ಕಾಲ ಕಳೆಯುತ್ತಾ ಹೋದಂತೆ ಆ ಎಲ್ಲಾ ಘಟನೆಗಳು ನೆನಪಿನಂಗಳದ ಮೂಲೆಯಲ್ಲೆಲ್ಲೋ ಸೇರಿ ಬಿಡುತ್ತವೆ. ಇಂತಹ ಹರಟೆಗಳು, ಮಾತುಕತೆಗಳಾದಾಗ ಅವು ಮೂಲೆಯೊಳಗಿಂದ ಚಿಮ್ಮಿ ಹೊರ ಬರುತ್ತವೆ. ಆಗಿನ ಘಟನೆಗಳನ್ನು ವಯೋ ಸಹಜ ಪ್ರೌಢಿಮೆಯಿಂದಾಗಿ ಬದಲಾದ ದೃಷ್ಟಿಕೋನದಿಂದ ಈಗ ನೋಡಿದಾಗ ಅವು ಬೇರೆ ರೀತಿಯಲ್ಲೇ ಕಾಣಸಿಗುತ್ತವೆ. ಮನಸಿನ ಭಾವಕ್ಕೆ ತಕ್ಕಂತೆ ಬದುಕಲ್ಲವೆ?



83. ಹೊಂಗಿರಣ - ನೆನಪುಗಳು 
ಜೀವನದಲ್ಲಿ ಯಾವುದೂ ಶಾಶ್ವತವಲ್ಲ; ಅಶಾಶ್ವತೆಯೇ ಶಾಶ್ವತ. ಸೋಲಿರಲಿ ಗೆಲುವಿರಲಿ, ದುಗುಡ ದುಮ್ಮಾನಗಳಿರಲಿ ಅವೆಲ್ಲ ಆ ಘಳಿಗೆಯ ಭಾವನೆಗಳು ಹಾಗೂ ಅನುಭವಗಳು. ಅಂತಹ ಯಾವುದೇ ಕ್ಷಣಗಳು ಸರಿದು ಹೋಗಿ ಬಿಡುತ್ತವೆ ಎನ್ನುವ ಸಾರಾಂಶವಿರುವ ರಾಜನ ಕಥೆಯೊಂದನ್ನು ಓದಿದೆ. ನನ್ನ ಈವರೆಗಿನ ಅನುಭವವನ್ನು ಅವಲೋಕಿಸಿದಾಗ ಈ ಕಥೆಯ ಸಾರ ನೂರಕ್ಕೆ ನೂರರಷ್ಟು ಸತ್ಯ ಎಂದೆನಿಸಿತು. ಒಂದು "ಕಟ್ಟುವಿಕೆ"ಯ ಕಾರ್ಯ ನಮಗೆ ಇದೆಲ್ಲದರ ಪರಿಚಯ ಮಾಡಿಕೊಡುತ್ತದೆ. ಕಟ್ಟುವಿಕೆ ಎನ್ನುವುದು ಕೇವಲ ಬಾಹ್ಯ ಕಾರ್ಯವಲ್ಲ. ನಮ್ಮ ಆಂತರ್ಯವನ್ನು ಕಟ್ಟುವ ಕಾರ್ಯವೂ ಕೂಡ. ಕಲ್ಲುಗಳು ಕಟ್ಟಡವನ್ನು ಕಟ್ಟಿದರೆ, ಅನುಭವಗಳು ನಮ್ಮೊಳಗಿನ ವ್ಯಕ್ತಿತ್ವವನ್ನು ಕಟ್ಟುತ್ತವೆ. ಹೊಂಗಿರಣ ರೂಪುಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಕ್ಷಣ ಕ್ಷಣಕ್ಕೂ ವಿಭಿನ್ನ ರೀತಿಯ ಅನುಭವಗಳನ್ನು ಪಡೆದ ಹಿನ್ನೆಲೆಯಲ್ಲಿ ಈ ಮಾತಷ್ಟೆ!
ಶಾಲೆ ಪ್ರಾರಂಭಿಸಿದಾಗ ನಾವು ಎದುರಿಸಿದ ಸವಾಲುಗಳು, ಅವಮಾನಗಳು ಅದರಿಂದ ಆನುಭವಿಸಿದ ದುಗುಡ ದುಮ್ಮಾನಗಳು ಅಪಾರ. ನಾವು ಶಾಲೆ ಪ್ರಾರಂಭಿಸುತ್ತೇವೆ ಎಂದಾಗ ನಮ್ಮನ್ನು ಬೆಂಬಲಿಸಿದ್ದಕ್ಕಿಂತ ಅವಹೇಳನ ಮಾಡಿದವರೇ ಜಾಸ್ತಿ. ನಮಗೆ ವ್ಯಾವಹಾರಿಕ ಜ್ಞಾನ ಕಡಿಮೆ ಇದ್ದು ಹಲವಾರು ಕಡೆ ಎಡವಿದಾಗ ಎಚ್ಚರಿಸಿದವರಿಗಿಂತ ಥೂತ್ಕರಿಸಿದವರೇ ಹೆಚ್ಚು. ನಾವಿನ್ನೂ ಹಣಕಾಸಿನ ಹೊಂದಾಣಿಕೆ ಮಾಡಿಕೊಂಡು ಕ್ಯಾಂಪಸ್ಸನ್ನು ನಿರ್ಮಿಸುವ ಪ್ರಯತ್ನದಲ್ಲಿದ್ದಾಗ ಹದ ಹೇಳಿ ನಮ್ಮ ಧೃತಿಗೆಡಿಸಿದವರು ಬಹಳಷ್ಟು ಜನ. ಕಲಿಕಾ ಕ್ರಮದಲ್ಲಿ ಮಕ್ಕಳಿಗೆ ಮುಕ್ತ ವಾತಾವರಣ ಕಲ್ಪಿಸಿ ಅವರನ್ನು ಕಲಿಕಾ ಪ್ರಕ್ರಿಯೆಯೊಳಗೆ ತೆಗೆದುಕೊಂಡು ಹೋಗುವ ಪ್ರಯತ್ನದಲ್ಲಿದ್ದಾಗ ನಮ್ಮ ಪ್ರಯತ್ನವನ್ನು ತುಚ್ಛೀಕರಿಸಿ ನೋಡಿದವರು ಮತ್ತಷ್ಟು ಜನ. ಇವೆಲ್ಲಕ್ಕೂ ಸಮಯವೇ ಉತ್ತರಿಸುತ್ತದೆ ಎನ್ನುವ ನಂಬಿಕೆಯಲ್ಲಿ ನಾವು ಕೈಗೊಂಡ ಕೆಲಸವನ್ನು ಮುಂದುವರಿಸುತ್ತಾ ಹೋಯಿತಷ್ಟೇ!
ಹೊಂಗಿರಣ ಬೆಳೆಯುತ್ತಾ ಬಂದಂತೆ, ಒಂದು ಸುಂದರ ಕ್ಯಾಂಪಸ್ ರೂಪಿತವಾಗುತ್ತಿದ್ದಂತೆಯೆ ನಮ್ಮನ್ನು ನೋಡುವವರ ಚರ್ಯೆ ಬದಲಾಯಿತು. ನಮ್ಮ ಕಲಿಕಾ ಪ್ರಕ್ರಿಯೆಯ ಬಗ್ಗೆ ಶ್ಲಾಘನೆ ಸಿಕ್ಕಿತು. ಮಕ್ಕಳ ಸಮಗ್ರ ವ್ಯಕ್ತಿತ್ವದ ಬೆಳವಣಿಗೆಗೆ ನಾವು ಮಾಡುತ್ತಿರುವ ಪ್ರಯತ್ನದ ಫಲ ಸಿಕ್ಕತೊಡಗಿದಾಗ ಅದು ಸರ್ವರಿಗೂ ಒಪ್ಪಿತವಾಯಿತು. ನಾವು ಎಡವಿದಲ್ಲೆಲ್ಲ ಕಲಿತ ಪಾಠ ನಮ್ಮ ಬೆಳವಣಿಗೆಗೆ ಪೂರಕವಾಯಿತು. ಈಗ ಎಲ್ಲೆಡೆಯೂ ಸಿಗುವ ಆದರಾತಿಥ್ಯವನ್ನು ಅಪಥ್ಯ ಮಾಡಿಕೊಳ್ಳದೆ ಅದೇ ಸ್ಥಿತಪ್ರಜ್ಞತೆಯಿಂದ ಮುಂದುವರೆಯುತ್ತಿರುವುದು ಬದುಕು ನಮಗೆ ಕಲಿಸಿದ ಪಾಠ. ಏಕೆಂದರೆ ಹೊಗಳಿಕೆ - ತೆಗಳಿಕೆ ಎಲ್ಲವೂ ಸಾಂದರ್ಭಿಕ; ಬರುತ್ತದೆ - ಹೋಗುತ್ತದೆ. ಬಂದದ್ದನ್ನು ಬಂದ ಹಾಗೆ ಸ್ವೀಕರಿಸಿ, ಹಿಗ್ಗದೆ ಕುಗ್ಗದೆ ಸ್ಥಿತಪ್ರಜ್ಞತೆಯಿಂದ ವಸ್ತುಸ್ಥಿತಿಯನ್ನು ನೋಡಿ ಹಿಡಿದ ಕೆಲಸವನ್ನು ಬಿಡದೆ ಮಾಡಿದರೆ ಯಶಸ್ಸು ಸಿಕ್ಕಿಯೇ ಸಿಗುತ್ತದೆ ಎನ್ನುವುದು ಹೊಂಗಿರಣ ತೋರಿಸಿಕೊಟ್ಟ ಸತ್ಯ. ನೋವಿರಲಿ, ನಲಿವಿರಲಿ ಬಂದಂತೆ ಸರಿದು ಹೋಗುತ್ತದೆ ಎನ್ನುವುದನ್ನು ಅರಿಯುವ ತಿಳುವಳಿಕೆಯನ್ನು ನಮ್ಮ ಈವರೆಗಿನ "ಕಟ್ಟುವಿಕೆ" ಕಲಿಸಿ ಕೊಟ್ಟಿದೆ ಎಂದರೆ ತಪ್ಪಲ್ಲ.

No comments:

Post a Comment