Wednesday, July 29, 2020

SHOBHA'S FB POST - ABOUT US

Thursday, 29 July 2020


ಚಿಕ್ಕವಳಿದ್ದಾಗ ಹೆಬ್ರಿಯಿಂದ ಉಡುಪಿಗೆ ಹೋಗುವಾಗ ಮಣಿಪಾಲದ ಎಂಐಟಿಯನ್ನು ನೋಡಿ ನಾನ್ಯಾವಾಗಲೂ "ಚಿಕ್ಕಪ್ಪ ಕಾಲೇಜು" ಅಂತ ಕರೆಯುತ್ತಿದ್ದೆ. ಏಕೆಂದರೆ ನನ್ನ ಚಿಕ್ಕಪ್ಪ ಜಯರಾಮ ಸೋಮಯಾಜಿ ಆ ಕಾಲೇಜಿನಲ್ಲಿ ಕೆಲವು ಕಾಲ ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದರು.
ಆರು ಅಡಿಗೂ ಮೀರಿ ಎತ್ತರವಿರುವ ನನ್ನ ಚಿಕ್ಕಪ್ಪ ಬಹಳ ಬುದ್ಧಿವಂತರು. ಹಾರಾಡಿ ಶಾಲೆಯಲ್ಲಿ ಪ್ರೈಮರಿ, ಉಪ್ಪಿನಕೋಟೆ ಶಾಲೆಯಲ್ಲಿ ಮಿಡಲ್ ಸ್ಕೂಲ್, ಬ್ರಹ್ಮಾವರದಲ್ಲಿ ಹೈಸ್ಕೂಲ್, ಪಿಯುಸಿ ಓದಿದ ನನ್ನ ಚಿಕ್ಕಪ್ಪ ಉಡುಪಿಯ ಎಂಜಿಎಂ ನಲ್ಲಿ ಬಿ.ಎಸ್ಸಿಯನ್ನು rank ಪಡೆದು ಮುಗಿಸಿದರು. ತದನಂತರ ಮೈಸೂರು ಯೂನಿವರ್ಸಿಟಿ ಯಲ್ಲಿ rankನೊಂದಿಗೆ ಫಿಸಿಕ್ಸ್ ಎಂ.ಎಸ್ಸಿ ಮುಗಿಸಿ ಮಣಿಪಾಲದ ಎಂಐಟಿಯಲ್ಲಿ ಪ್ರಾಧ್ಯಾಪಕರಾಗಿ ವೃತ್ತಿ ಜೀವನ ಪ್ರಾರಂಭಿಸಿದರು. ಅಪ್ಪನ ಸ್ನೇಹಿತರಾದ ಪದಕಣ್ಣಾಯರು ಆಫ್ರಿಕಾದಲ್ಲಿ ಇದ್ದ ಕಾರಣ ನನ್ನಪ್ಪ ಚಿಕ್ಕಪ್ಪನಿಗೆ ಹೊರದೇಶಕ್ಕೆ ಪ್ರಾಧ್ಯಾಪಕರಾಗಿ ಹೋಗಲು ಒತ್ತಾಸೆ ನೀಡಿದರು. ನಮ್ಮ ಕುಟುಂಬದಲ್ಲಿ ಹೊರದೇಶಕ್ಕೆ ಹೋದ ಪ್ರಪ್ರಥಮ ವ್ಯಕ್ತಿ ನನ್ನ ಚಿಕ್ಕಪ್ಪ. ಅವರನ್ನು ವಿಮಾನ ಹತ್ತಿಸಲು ನಾವೆಲ್ಲ ಬಜ್ಪೆ ಏರ್ ಪೋರ್ಟ್ ಗೆ ಹೋಗಿದ್ದದ್ದು ನನಗಿನ್ನೂ ನೆನಪಿದೆ. ಪ್ರಾಯಶಃ ಆಗ ನಾನಿನ್ನೂ ಮೂರ್ನಾಲ್ಕು ವರ್ಷದವಳಿರಬಹುದು. ಆಫ್ರಿಕಾದಲ್ಲಿ 15 ವರ್ಷಗಳಿದ್ದ ಚಿಕ್ಕಪ್ಪ ಕೊನೆಗೆ ದುಬಾಯಿಗೆ ಬಂದು 24 ವರುಷ ನೆಲೆಸಿ ಈಗ ಬೆಂಗಳೂರಿನಲ್ಲಿ ತಮ್ಮ ಪತ್ನಿ, ಮಕ್ಕಳೊಡನೆ ವಾಸವಾಗಿದ್ದಾರೆ.
ಎಂಟು ಮಕ್ಕಳಲ್ಲಿ ಕೊನೆಯವರಾದ ಚಿಕ್ಕಪ್ಪ ತುಂಬಾ ಮೃದು ಮನಸ್ಸಿನವರು. ಬಂಧು ಬಳಗದವರ ನಂಟು ಜಾಸ್ತಿ. ನನ್ನ ಅಪ್ಪನಿಗೆ ಅವರು ಮಗನಿದ್ದ ಹಾಗೆ. ಅವರಿಬ್ಬರ ನಡುವೆ ಸುಮಾರು ಇಪ್ಪತ್ತು ವರ್ಷಗಳ ಅಂತರವಿತ್ತು. ಅವರಿಬ್ಬರ ಮಧ್ಯೆ ಹಲವಾರು ವಿಷಯಗಳ ಬಗ್ಗೆ ಅಭಿಪ್ರಾಯ ಭೇದವಿದ್ದರೂ ಅವರಿಬ್ಬರ ಸಂಬಂಧ ಬಹಳ ಆಪ್ತವಾಗಿತ್ತು.
ಆ ಸಮಯದಲ್ಲಿ ಎರಡು ವರ್ಷಕ್ಕೊಮ್ಮೆ ಊರಿಗೆ ಬರುತ್ತಿದ್ದ ಚಿಕ್ಕಪ್ಪನನ್ನು ನಾವೆಲ್ಲ ಚಾತಕ ಪಕ್ಷಿಯಂತೆ ಕಾಯುತ್ತಿದ್ದೆವು. ನನ್ನ ಕಸಿನ್ಸ್ ಗೆ ಸಣ್ಣಮಾವಯ್ಯನಾಗಿದ್ದ ಅವರು ಹೊರದೇಶದಿಂದ ತರುತ್ತಿದ್ದ ಬಟ್ಟೆಗಳು, ಚಾಕೊಲೇಟ್ ಗಳು, ಇತರೆ ವಸ್ತುಗಳು ನಮ್ಮ ಮುಂದೆ ಹೊಸ ಲೋಕವನ್ನು ತೆರೆದಿಡುತ್ತಿದ್ದವು. ಚಿಕ್ಕಪ್ಪ ಕೊಡುಗೈ ದೊರೆ. ಎಲ್ಲಾ ಮಕ್ಕಳಿಗೂ ಅವರವರಿಗೆ ಪ್ರಿಯವಾದ ವಸ್ತುಗಳನ್ನು ತರುತ್ತಿದ್ದರು. ನನ್ನ ಮೇಲೆ ಜಾಸ್ತಿ ಪ್ರೀತಿ ಇದ್ದ ಕಾರಣ ನನಗೆ ಸ್ವಲ್ಪ extra gifts ಸಿಗುತ್ತಿತ್ತು. ಅವರೊಮ್ಮೆ ತಂದು ಕೊಟ್ಟಿದ್ದ ಆಫ್ರಿಕನ್ನರ ದಿರಿಸನ್ನು ನಾನು ಸುಮಾರು ಹತ್ತು ವರ್ಷಗಳ ಕಾಲ ಬಳಸಿದ್ದೆ. ಆದರೂ ಅದು ಹೊಸದರ ಹಾಗೇ ಕಾಣುತ್ತಿತ್ತು. ಕಡು ನೀಲಿ ಬಣ್ಣದ ಆ ದಿರಿಸು ನನಗೆ ಬಹಳ ಪ್ರಿಯವಾಗಿತ್ತು.
ಮೊದಲಿನಿಂದಲೂ ತಿರುಗಾಟಪ್ರಿಯರಾದ ಚಿಕ್ಕಪ್ಪ ಈಗ ಎಪ್ಪತ್ತು ವರ್ಷ ದಾಟಿದರೂ ತಮ್ಮ ತಿರುಗಾಟವನ್ನು ನಿಲ್ಲಿಸಿಲ್ಲ. ಅವರ ಜೀವನೋತ್ಸಾಹವನ್ನು ಮೆಚ್ಚಲೇ ಬೇಕು. ಈಗಲೂ ಕೂಡ ನಮ್ಮೆಲ್ಲರ ಅದೇ ಹಳೆಯ ಚಿಕ್ಕಪ್ಪನಾಗಿ, ನನ್ನ ಕಸಿನ್ಸ್ ಗಳಿಗೆ ಅದೇ ಸಣ್ಣ ಮಾವಯ್ಯನಾಗಿ ನಮ್ಮೆಲ್ಲರೊಡನೆ ಒಡನಾಟವನ್ನಿಟ್ಟುಕೊಂಡಿರುವ ಚಿಕ್ಕಪ್ಪ ಇನ್ನಷ್ಟು ಕಾಲ ಸಂತೃಪ್ತವಾದ ತುಂಬು ಜೀವನವನ್ನು ನಡೆಸಲಿ ಎನ್ನುವ ಹಾರೈಕೆ ನಮ್ಮೆಲ್ಲರದು.

Reply:
ಧನ್ಯವಾದಗಳು ಶೋಭ ನಿನ್ನ ಅಕ್ಕರೆಯ ನುಡಿಗಳಿಗೆ. ದುಬೈಯಲ್ಲಿ ನಮ್ಮ ಬದುಕು ಸುಮಾರು 24 ವರ್ಷ ಗಳಾಗಿತ್ತು. ಅಲ್ಲಿಯೂ ಕರ್ನಾಟಕ ಸಂಘ, ಬ್ರಾಹ್ಮಣ ಸಮಾಜ ಸಂಘಟನೆಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡಿದ್ದೆವು

Posted 29th July 2020

No comments:

Post a Comment