ನಮ್ಮ ಮನೆಯ ಹೂತೋಟದಲ್ಲಿ ಎರಡು ಬಣ್ಣದ ಗೊರಟೆ ಹೂವುಗಳು ಆಗತೊಡಗಿವೆ - ಗುಲಾಬಿ ಮತ್ತು ಬಿಳಿ ಬಣ್ಣದವು. ನಾವು ಗಿಡ ನೆಟ್ಟು ಕೆಲವು ವರ್ಷಗಳಾದರೂ ಹೂ ಬಿಡಲು ಪ್ರಾರಂಭಿಸಿದ್ದು ಈ ವರ್ಷ! ಅದೇನು ಪರಿಮಳ ಇರುವ ಹೂವೇನೂ ಅಲ್ಲ. ನಾನು ಹೂವನ್ನು ಮುಡಿಯುವವಳೂ ಅಲ್ಲ. ಆದರೂ ನನಗೆ ಗೊರಟೆ ಇಷ್ಟದ ಹೂವು. ಅದರೊಡನೆ ನನ್ನ ಬಾಲ್ಯದ ನೆನಪುಗಳು ಹೆಣೆದುಕೊಂಡಿವೆ.
ಗೊರಟೆ ನನ್ನನ್ನು ಆನಮ್ಮನ ಮನೆಯಂಗಳಕ್ಕೆ ಕೊಂಡೊಯ್ಯುತ್ತದೆ. ಅಲ್ಲಿ ನಾನು ಯಾವಾಗಲೂ ನೋಡುತ್ತಿದ್ದ ಹೂಗಳು ಸಂಜೆ ಮಲ್ಲಿಗೆ, ಸದಾ ಪುಷ್ಪ, ಶಂಖಪುಷ್ಪ ಮತ್ತು ಗೊರಟೆ. ನನಗೆ ಅಲ್ಲಿದ್ದ ನೇರಳೆ ಬಣ್ಣದ ಗೊರಟೆಯ ನೆನಪು ಇನ್ನೂ ಇದೆ.
ಸುಮಾರು ಒಂದೆರಡು ಮೀಟರ್ ಎತ್ತರಕ್ಕೆ ಪೊದೆಯಾಗಿ ಬೆಳೆಯುವ ಗೊರಟೆಯ ಗಿಡದ ಎಲೆಗಳು ಸಾಧಾರಣವಾದ ಉದ್ದನೆಯ ಎಲೆಗಳಾಗಿರುತ್ತವೆ. ಕೆಲವು ಜಾತಿಯ ಗೊರಟೆ ಗಿಡದಲ್ಲಿ ಸಣ್ಣ ಮುಳ್ಳುಗಳಿರುತ್ತವೆ. ಹೂವುಗಳು ಎಲೆ ಕಾಂಡ ಸೇರಿರುವ ಸಂಧಿಯಲ್ಲಿ ಬಿಡುತ್ತವೆ. ಅವು ಮೇಲೆ ಎಸಳುಗಳಿರುವ ಕೆಳಭಾಗ ಕೊಳವೆಯಂತಿರುವ ಆಕಾರದ ಹೂಗಳು. ಕೆಳಭಾಗವು ಒಂದು ಹಸಿರು ತೊಟ್ಟಿನೊಳಗೆ ಇರುತ್ತದೆ. ಹೂವನ್ನು ಕೀಳುವಾಗ ಆ ಹಸಿರು ತೊಟ್ಟು ಬಾರದ ಹಾಗೆ ಕೀಳಬೇಕು. ಗೊರಟೆ ಹೂವು ಸುಮಾರು ಒಂದು ಇಂಚಿನಷ್ಟು ದೊಡ್ಡದಿರುತ್ತದೆ.
ನಾನು ಚಿಕ್ಕವಳಿರುವಾಗ ಗೊರಟೆಯ ಮೊಗ್ಗನ್ನು ಕೊಯ್ದು ಹೂಮಾಲೆ ಕಟ್ಟುವುದು ನನಗೆ ಇಷ್ಟದ ಕೆಲಸವಾಗಿತ್ತು. ಅರಳಿದ ಗೊರಟೆ ಹೂವನ್ನು ಕಟ್ಟುವುದು ಕಷ್ಟದ ಕೆಲಸ. ಮೊಗ್ಗಾದರೆ ಕಟ್ಟುವುದು ಸುಲಭ. ಮಾರನೆಯ ದಿನ ಅದು ಅರಳಿದಾಗ ಆ ಮಾಲೆಯಲ್ಲಿ ಒತ್ತೊತ್ತಾಗಿ ನೋಡಲು ಸುಂದರವಾಗಿರುತ್ತದೆ.
ಈಗ ನಮ್ಮ ಮನೆಯಲ್ಲಿ ಬಿಡುವ ಗೊರಟೆ ಹೂವುಗಳ ಮಾಲೆಯನ್ನು ಶಂಕರಿ ಕಟ್ಟುತ್ತಾಳೆ. ಅವಳು ನಮ್ಮ ಹೂದೋಟವನ್ನು ಬೆಳೆಸಿದವಳು ಹಾಗೂ ಅದರ ಮೇಲ್ವಿಚಾರಕಿ ಕೂಡಾ. ಅವಳ ಗಮನಕ್ಕೆ ತಂದು ಮೊನ್ನೆ ಒಂದು ದಿನ ನಾನೂ ಗೊರಟೆ ಮೊಗ್ಗುಗಳನ್ನು ಕಿತ್ತು ಹಳೆಯದನ್ನು ನೆನಪಿಸಿಕೊಳ್ಳುತ್ತಾ ಹೂಮಾಲೆ ಕಟ್ಟಿದ್ದೆ. ಗಿಡದ ಸಂಧಿಯಲ್ಲಿ ನಿಂತು ಮೊಗ್ಗುಗಳನ್ನು ಹುಡುಕಿ ಕೊಯ್ಯುವುದೇ ಚೆಂದ. ಹಸಿರು ಗಿಡದ ನಡುವೆ ಬಣ್ಣಬಣ್ಣದ ಪುಟಾಣಿ ಹೂವುಗಳನ್ನು ಕೊಯ್ಯುವ ಪ್ರಕ್ರಿಯೆಯೇ ಸೊಗಸಾದದ್ದು. ಹೂವು/ಮೊಗ್ಗು ಕೊಯ್ಯುವಷ್ಟು ಹೊತ್ತು ನಾವು ಪುಷ್ಪ ಲೋಕದಲ್ಲಿ ವಿಹರಿಸುವ ಪರಿ ಬಲ್ಲವರು ಹಲವರಿರಬಹುದು!
ಈಗಿನ ಕಾಲದಲ್ಲಿ ಗೊರಟೆ ಗಿಡ ಕಾಣಸಿಗುವುದು ಬಹಳ ಕಡಿಮೆ. ವಿವಿಧ ಜಾತಿಯ ಹೈಬ್ರೀಡ್ ಹೂವುಗಳ ನಡುವೆ ದೇಶೀಯ ಗೊರಟೆ ಕಳೆದು ಹೋಗಿಬಿಟ್ಟಿದೆ. ಹೊಸತನ್ನು ಕಟ್ಟುವುದರ ಜೊತೆಗೆ ಹಳತನ್ನು ಇಟ್ಟುಕೊಳ್ಳುವುದು ಸೂಕ್ತವೇನೋ? ಹೀಗಾಗಿ ಹೊಸತನ್ನು ಸ್ವಾಗತಿಸೋಣ, ಹಳೆಯದನ್ನು ಉಳಿಸಿಕೊಳ್ಳೋಣ ಎಂಬುದು ನನ್ನ ವಿಚಾರ
145. ನೆನಪುಗಳು - ಪೆಟ್ಟಿಗೆ ಕಳೆದ ಬಾರಿ ಸಾಲಿಕೇರಿಗೆ ಹೋದಾಗ ಹಳೆಯ ವಸ್ತುಗಳ ಒಂದಷ್ಟು ಫೋಟೊಗಳನ್ನು ತೆಗೆದಿಟ್ಟುಕೊಂಡಿದ್ದೆ. ಅವುಗಳಲ್ಲಿ ಒಂದು ಹಳೆಯ ಕಾಲದ ತಗಡಿನ ಪೆಟ್ಟಿಗೆ. ಕಬೋರ್ಡ್ ಗಳು ಬರುವುದಕ್ಕಿಂತಲೂ ಮೊದಲು ಬಟ್ಟೆಬರೆ ಹಾಕಿಡಲು ಉಪಯೋಗಿಸುತ್ತಿದ್ದ ಪೆಟ್ಟಿಗೆಯದು. ಸುಮಾರು 3/1.5 ಅಡಿ ಅಳತೆಯ ಒಂದಡಿ ಉದ್ದವಿರುವ ಪೆಟ್ಟಿಗೆಯದು. ಪೆಟ್ಟಿಗೆಯ ಮುಚ್ಚಳದ ನಡುವೆ ಒಂದು ಚಿಲಕವಿದೆ. ಮುಚ್ಚಳವನ್ನು ಮುಚ್ಚಿದಾಗ ಆ ಚಿಲಕವನ್ನು ಸಿಕ್ಕಿಸಲು ಪೆಟ್ಟಿಗೆಯ ನಡುವೆ ಒಂದು ವೃತ್ತಾಕಾರದ ತೆಳ್ಳನೆಯ ಕಬ್ಬಿಣದ ಸರಳಿದೆ. ಪೆಟ್ಟಿಗೆಯ ಎರಡೂ ಪಕ್ಕದಲ್ಲಿ ಒಂದೊಂದು ಚಿಲಕದ ಕೊಂಡಿಯಿದೆ. ಪೆಟ್ಟಿಗೆಯ ಬದಿಯಲ್ಲಿ ಎರಡೂ ಕಡೆ ಹಿಡಿಕೆ ಇದೆ. ಕಬ್ಬಿಣದ ತಗಡಿನ ಪೆಟ್ಟಿಗೆಯಾದ ಕಾರಣ ಬಹಳ ಭಾರವಾಗಿದೆ. ಅದು ಹಳೆಯದಾದ ಕಾರಣ ಅದಕ್ಕೆ ಪೈಂಟ್ ಮಾಡಿ ಬಳಸಲಾಗುತ್ತಿದೆ. ನನ್ನಮ್ಮ ಅದನ್ನೀಗ ಎಕ್ಸ್ಟ್ರಾ ಹೊದಿಕೆ ಹಾಕಿಡಲು ಬಳಸುತ್ತಾಳೆ.
ನಾನು ಶಾಲೆಗೆ ಹೋಗುವಾಗ ನನ್ನ ಬಳಿ ಅಂತಹುದೇ ಸಣ್ಣ ಗಾತ್ರದ ಅಲ್ಯೂಮಿನಿಯಂ ಪೆಟ್ಟಿಗೆ ಇತ್ತು. ಅದು ಬಹಳ ಹಗುರವಾಗಿತ್ತು. ನನ್ನ ಇಷ್ಟದ ಪೆಟ್ಟಿಗೆ ಅದಾಗಿತ್ತು. ಬ್ಯಾಗಿಗೆ ಬದಲಾಗಿ ಅದನ್ನು ಶಾಲೆಗೆ ತೆಗೆದುಕೊಂಡು ಹೋಗುತ್ತಿದ್ದೆ. ದೊಡ್ಡ ತರಗತಿಗೆ ಹೋಗಲು ಪ್ರಾರಂಭಿಸಿದ ಮೇಲೆ ಅದನ್ನು ಮನೆಯಲ್ಲೇ ಇಟ್ಟು ನನ್ನ ಹಳೆಯ ವಸ್ತುಗಳನ್ನು ಆದರಲ್ಲಿ ಹಾಕಿಡುತ್ತಿದ್ದೆ. ಅದರ ಮೇಲೆ ನನಗೆ ವಿಶೇಷ ಪ್ರೀತಿ ಇತ್ತು. ಅಂತಹ ಪೆಟ್ಟಿಗೆ ಎಲ್ಲರ ಬಳಿ ಇಲ್ಲದ ಕಾರಣ ಅದರ ಬಗ್ಗೆ ಹೆಮ್ಮೆಯೂ ಇತ್ತು. ನಾನು ಬಳಸುವುದನ್ನು ನಿಲ್ಲಿಸಿದರೂ ಆ ಪೆಟ್ಟಿಗೆ ಕೆಲವು ವರ್ಷಗಳ ಇತ್ತೀಚಿನವರೆಗೂ ನಮ್ಮ ಮನೆಯಲ್ಲಿ ಇತ್ತು. ನಂತರ ನನ್ನ ಅಮ್ಮ ಅದನ್ನು ವಿಲೇವಾರಿ ಮಾಡಿರಬೇಕು!
ಈಗ ಬಟ್ಟೆ ಇಡಲು ಕಬೋರ್ಡ್, ವಾರ್ಡ್ ರೋಬ್ ಗಳಿವೆ. ಶಾಲೆಗೆ ತೆಗೆದುಕೊಂಡು ಹೋಗಲು ಬೆನ್ನಿಗೆ ಹಾಕಿಕೊಂಡು ಹೋಗುವ ವೈವಿಧ್ಯಮಯ ಬ್ಯಾಗ್ ಗಳಿವೆ. ಈಗ ಸುಲಭವಾಗಿ ಸಿಗುವ ವೆರೈಟಿ ವಸ್ತುಗಳು ಮಕ್ಕಳಿಗೆ ಅವುಗಳೊಟ್ಟಿಗಿನ ಬೆಚ್ಚನೆಯ ಭಾವವನ್ನು ಇಲ್ಲವಾಗಿಸಿವೆ. ಕೇಳುವುದಕ್ಕಿಂತ ಮೊದಲೇ ಹಿರಿಯರಿಂದ ಒದಗಿಸಲ್ಪಡುವ ವಸ್ತುಗಳು ಅವುಗಳ ಮೌಲ್ಯದ ಅರಿವನ್ನು ಮಕ್ಕಳಲ್ಲಿ ಮೂಡಿಸುವುದರಲ್ಲಿ ಸೋತಿವೆ. ಇದರ ಬಗ್ಗೆ ನಾನು ವಿಮರ್ಶೆ ಮಾಡಲು ಇಷ್ಟ ಪಡುವುದಿಲ್ಲ ಹಾಗೂ ವಸ್ತುಗಳೊಟ್ಟಿಗೆ ಅಂಟಿಕೊಂಡಿರುವುದು ಸರಿ ಎಂದೂ ಹೇಳುವುದಿಲ್ಲ. ನಮಗೆ ಬೇಕಾದದ್ದು ಸಿಗುವುದೇ ತತ್ವಾರವಾಗಿದ್ದ ಆ ಕಾಲದಲ್ಲಿ ನಮಗೆ ಕಷ್ಟಸಾಧ್ಯವಾಗಿ ಸಿಕ್ಕ ವಸ್ತುಗಳೊಡನೆ ನಮ್ಮ ಪ್ರೀತಿ ಬೆಳೆದದ್ದು ಸರಿ ತಾನೆ ಎನ್ನುವುದು ನನ್ನ ಪ್ರಶ್ನೆಯಷ್ಟೆ!
144.ಸಿನೆಮಾ - ರಾಜ್ಮ ಚಾವಲ್ ನಿನ್ನೆ "ರಾಜ್ಮಾ ಚಾವಲ್" ಎಂಬ ಹಿಂದಿ ಸಿನೆಮಾ ನೋಡಿದೆ. ಒಂದು ಬಾರಿ ಕುಟುಂಬ ಸಹಿತ ನೋಡುವಂತಹ ಸಿನೆಮಾ. ತಾಯಿಯನ್ನು ಕಳೆದುಕೊಂಡ ಹಾಗೂ ತಂದೆಯೊಡನೆ ಹಿತಕರ ಸಂಬಂಧವಿಲ್ಲದ ಮಗ ಮತ್ತು ತಂದೆಯ ಕಥೆ. ಹಾಗೆಯೇ ಹಳೆ ಹಾಗೂ ಹೊಸ ದೆಹಲಿಯ ಬದುಕಿನ ಸಂಸ್ಕೃತಿಯ ವ್ಯತ್ಯಾಸವನ್ನೂ ಅಷ್ಟೇ ಸೂಕ್ಷ್ಮವಾಗಿ ಈ ಸಿನೆಮಾದಲ್ಲಿ ತೋರಿಸಿದ್ದಾರೆ. ಆ ಸಿನೆಮಾವನ್ನು ನೋಡಿದಾಗ ಸಂಬಂಧಗಳು ಏಕಷ್ಟು ಕಗ್ಗಂಟಾಗುತ್ತವೆ? ಒಂದೇ ಸೂರಿನಡಿ ಇದ್ದರೂ ಮನಸ್ಸಿನ ಮಾತುಗಳನ್ನು ವ್ಯಕ್ತಪಡಿಸಲು ಏಕೆ ಕಷ್ಟವಾಗುತ್ತದೆ? ನಮ್ಮದೇ ಮಕ್ಕಳೊಡನೆ ಒಡನಾಟ ಬೆಳೆಸಿಕೊಳ್ಳಲಾಗದಿರಲಿಕ್ಕೆ ಕಾರಣವೇನು? ಜೀವನದ ಏಕತಾನತೆಯಲ್ಲಿ ಒಬ್ಬರನ್ನೊಬ್ಬರು ಅರಿತುಕೊಳ್ಳಲು ನಾವು ಸೋಲುತ್ತಿದ್ದೇವೆಯೆ? ಅಥವಾ ಪರಸ್ಪರ taken for granted ಮನಸ್ಥಿತಿ ಬೆಳೆಯುತ್ತಿದೆಯೆ? ಈಗಿನ ಮಕ್ಕಳು ವೃತ್ತಿ ಮತ್ತು ಪ್ರವೃತ್ತಿಯನ್ನು ಒಂದೇಯಾಗಿ ಪರಿಗಣಿಸುತ್ತಿದ್ದಾರೋ? ಸಂಬಂಧ ನಿರ್ವಹಣೆ ಎನ್ನುವುದನ್ನು ನಾವು ಕ್ಲಿಷ್ಟಕರವಾಗಿಸುತ್ತಿದ್ದೇವೊ? ಹೊರಗಿನವರೊಡನೆ ಸಾಧ್ಯವಾಗುವ ಮುಕ್ತ ಮಾತುಕತೆ ಮನೆಯವರೊಡನೆ ಏಕೆ ಆಗುತ್ತಿಲ್ಲ? ಇಂತಹ ಬಹಳಷ್ಟು ಪ್ರಶ್ನೆಗಳು ನನ್ನೊಳಗೆ ಹುಟ್ಟಿದವು. ಇವಕ್ಕೆ ಉತ್ತರ??? ಅದನ್ನು ನಾವೇ ಹುಡುಕಿಕೊಳ್ಳಬೇಕು ಎನ್ನುವುದು ಎಲ್ಲರೂ ತಿಳಿದಿರುವ ಸತ್ಯ ತಾನೇ!
ಇದಲ್ಲದೆ ಮಾನವೀಯ ಸಂಬಂಧವೇ ಪ್ರಧಾನವಾದ ಹಳೆ ದೆಹಲಿಯ ಜೀವನ ಕ್ರಮ, ಹಳೆಯ ನೆನಪುಗಳನ್ನು ಜೀವಂತವಾಗಿಡುವ ಅಲ್ಲಿನ ಸಂಸ್ಕೃತಿ ಹಾಗೂ ಬರೀ ವ್ಯಾವಹಾರಿಕವಾಗಿರದ ಅದಕ್ಕೂ ಮೀರಿದ ಒಂದು ಸಂಬಂಧವಿರುವ ಬದುಕು ಇವನ್ನೆಲ್ಲ ಸೂಕ್ಷ್ಮವಾಗಿ ಚಿತ್ರಿಸಿದ್ದಾರೆ. ಜನರೇಶನ್ ಗ್ಯಾಪ್ ಒಂದು ಮಿಥ್ಯೆ; ಬದಲಾವಣೆಯನ್ನು ಸ್ವೀಕರಿಸುವ ಮನಸ್ಥಿತಿ ಇದ್ದಲ್ಲಿ ಸಂಬಂಧ ನಿರ್ವಹಣೆ ಸುಲಭ ಸಾಧ್ಯ ಎನ್ನುವ ಸಾಧ್ಯತೆಯನ್ನೂ ಆ ಸಿನೆಮಾ ಹೇಳುತ್ತದೆ. ನಮ್ಮ ಪ್ಯಾಶನ್ ನಮಗೆ ಸಂಪೂರ್ಣವಾಗಿ ಅರ್ಥವಾದರೆ, ಅದಕ್ಕೆ ಪೂರಕ ಬೆಂಬಲ ಇದ್ದರೆ ಹಿಡಿದದ್ದನ್ನು ಸಾಧಿಸಬಹುದು ಎನ್ನುವ ಚಿತ್ರಣವನ್ನೂ ಈ ಸಿನೆಮಾ ನೀಡುತ್ತದೆ. ಅಲ್ಲಲ್ಲಿ ಅತಾರ್ಕಿಕವಾಗಿ, ಅಸಮಂಜಸವಾಗಿ ಸಾಗಿದರೂ ಒಂದು ರೀತಿಯಲ್ಲಿ ಹತ್ತು ಹಲವಾರು ಪ್ರಶ್ನೆಗಳನ್ನು ನಮ್ಮೊಳಗೆ ಹುಟ್ಟಿಸಿ ಅಲ್ಲಲ್ಲೇ ಉತ್ತರವನ್ನು ಕೊಡುವ ಪ್ರಯತ್ನವನ್ನು ಈ ಸಿನೆಮಾ ಮಾಡಿದೆ ಎಂದರೆ ಸುಳ್ಳಲ್ಲ.
There is nothing permanent except change ಎನ್ನುವ ಸೂಕ್ತಿಯನ್ನು ಈ ಸಿನೆಮಾ ಎತ್ತಿ ಹಿಡಿಯುತ್ತದೆ ಎಂದು ನನ್ನ ಅನಿಸಿಕೆ.
143. ಪರಿಸರ - ಹುಳು ನಿನ್ನೆ ಸಂಜೆ ನಮ್ಮ ಮನೆಯ ಸಿಟ್ ಔಟ್ ನಲ್ಲಿ ಕುಳಿತು ಮಗಳೊಡನೆ ಕಥೆ ಹೊಡೆಯುವಾಗ ನನ್ನ ಭುಜದ ಮೇಲೆ ಏನೋ ಹುಳು ಇದೆ ನನ್ನ ಮಗಳು ಹೇಳಿದಳು. ತಕ್ಷಣ ತಟ್ಟಿ ಕೆಳಗೆ ಹಾಕಿ ನೋಡಿದರೆ ಅದು ಬಸವನ ಹುಳುವಾಗಿತ್ತು. ಬಹಳ ಅಪರೂಪಕ್ಕೆ ಬಸವನ ಹುಳು ನೋಡಿದೆ ಎಂದು ನನಗೆ ಖುಷಿಯಾಯಿತು. ನಮ್ಮ ಮನೆಯಲ್ಲಿ ಸಿಂಬಳದ ಹುಳು ಸರ್ವೇ ಸಾಮಾನ್ಯವಾಗಿ ಎಲ್ಲೆಂದರಲ್ಲಿ ಹರಿಯುತ್ತಿರುತ್ತದೆ. ಆದರೆ ಬಸವನ ಹುಳು ಅಪರೂಪವಾಗಿ ಕಾಣಸಿಕ್ಕಿದ್ದು.
ಸಿಂಬಳದ ಹುಳು ಉದ್ದಕ್ಕೆ, ದಪ್ಪಕ್ಕೆ ಇದ್ದರೆ ಬಸವನ ಹುಳು ಸ್ವಲ್ಪ ಆಕರ್ಷಕವಾಗಿ ಇರುತ್ತದೆ. ಬಸವನ ಹುಳುವಿನ ಮೇಲೆ ಇರುವ ಶಂಖದಂತಹ ಚಿಪ್ಪುಅದಕ್ಕೊಂದು ವಿಶೇಷ ಆಕಾರ ಹಾಗೂ ಸೌಂದರ್ಯವನ್ನು ಕೊಟ್ಟಿದೆ. ಎರಡೂ ಹುಳುಗಳ ಚಲನೆ ನಿಧಾನವಾಗಿರುತ್ತದೆ. ದೇಹದ ಆಕಾರದಲ್ಲಷ್ಟೇ ಸ್ವಲ್ಪ ಬದಲಾವಣೆ!
ನಾನು ಹೆಬ್ರಿಯಲ್ಲಿ ಇದ್ದಾಗ ಈ ಬಸವನ ಹುಳುಗಳನ್ನು ದೊಡ್ಡ ಪ್ರಮಾಣದಲ್ಲಿ ನೋಡಿದ ನೆನಪು ಮಸುಕು ಮಸುಕಾಗಿದೆ. ಪುಟ್ಟ ಮಕ್ಕಳಾಗಿದ್ದ ನಮಗೆ ಬಸವನ ಹುಳುಗಳ ಚಲನೆ ನೋಡುವುದೆಂದರೆ ಬಹಳ ಖುಷಿ. ಅವುಗಳ ನಿಧಾನ ಚಲನೆ ನಮಗೊಂದು ಆಕರ್ಷಣೆಯಾಗಿತ್ತು. ಅವುಗಳು ಚಲಿಸಿದ ದಾರಿಯಲ್ಲಿ ಸಿಂಬಳದಂತಹ ಅಂಟು ದ್ರವ ಇರುತ್ತಿತ್ತು. ಕೌತುಕದಿಂದ ಅವುಗಳನ್ನು ನೋಡುತ್ತಿರುವುದೇ ನಮಗೊಂದು ಆಟವಾಗಿತ್ತು.
ಮಲೆನಾಡಿನ ನಮ್ಮ ಮನೆಯಲ್ಲಿ ಎಲ್ಲೆಂದರಲ್ಲಿ ಕಾಣಸಿಗುವ ಸಿಂಬಳದ ಹುಳುಗಳನ್ನು ಕಂಡಾಗ ಮೊದಮೊದಲಿಗೆ ಅಸಹ್ಯವಾಗುತ್ತಿತ್ತು. ಈಗ ಅವುಗಳ ನಿರಂತರ ಒಡನಾಟ ಅವುಗಳನ್ನು ಸಹಿಸಿಕೊಳ್ಳುವ ಶಕ್ತಿ ಕೊಟ್ಟಿದೆ. ಅವುಗಳ ಮೇಲೆ ಅಪ್ಪಿತಪ್ಪಿ ಕಾಲಿಟ್ಟರೆ ಅದರ ಅಂಟು ತೆಗೆದುಕೊಳ್ಳಲು ಸುಮಾರು ಒದ್ದಾಟ ಮಾಡಬೇಕಾಗುತ್ತದೆ.
ಮಲೆನಾಡಿನ ಬದುಕೇ ಹಾಗೆ. ಹುಳುಹುಪ್ಪಟೆ ಹಾವು ಎರಣೆಗಳೊಡನೆ ಸಹಬಾಳ್ವೆ ಬಹಳ ಸಹಜ ಹಾವುಗಳನ್ನು ನೋಡಿದಾಗ ಒಮ್ಮೆ ಎದೆ ಝಲ್ ಎಂದರೂ ನಂತರ ಆ ಹೆದರಿಕೆಯನ್ನು ಮೆಟ್ಟಿ ಬದುಕುವ ಗಟ್ಟಿತನ ಬೆಳೆಯುತ್ತದೆ. ನಮ್ಮೊಡನೆ ಸದಾಕಾಲ ಇರುವ ಸಿಂಬಳದ ಹುಳು, ಕಪ್ಪೆ, ಎರಣೆ ಒಮ್ಮೊಮ್ಮೆ ಕಾಣ ಸಿಗದಾಗ ನಮ್ಮವರ್ಯಾರೋ ನಮ್ಮೊಡನೆ ಇಲ್ಲದಿರುವ ಹಾಗೆ ಅನಿಸಿದ ಕ್ಷಣಗಳೂ ಇವೆ ಒಟ್ಟಾರೆಯಾಗಿ ಹುಳುಹುಪ್ಪಟೆಗಳೊಡನೆ ನಮ್ಮದೊಂದು ರೀತಿ ಇನ್ಕ್ಲೂಸಿವ್ ಬದುಕು ಅಂದರೂ ತಪ್ಪಿಲ್ಲ!
142. ಪರಿಸರ - ಭಟ್ಟರ ಅಂಗಡಿ ನಾನು ಹೋಟೆಲ್ಲಿಗೆ ಹೋಗುವುದು ಅಥವಾ ಹೊರಗಿನ ಖಾದ್ಯಗಳನ್ನು ತಿನ್ನುವುದು ಬಹಳ ಕಡಿಮೆ. ಹೀಗಾಗಿ ಸಾಗರದಲ್ಲಿ ಸೂಕ್ತ ಫ್ಯಾಮಿಲಿ ಹೋಟೆಲ್ ಇಲ್ಲದಿರುವುದರ ಬಗ್ಗೆ ನನಗೇನು ಖೇದವಿಲ್ಲ. ಆದರೂ ಒಮ್ಮೊಮ್ಮೆ ಜಿಹ್ವಾ ಚಾಪಲ್ಯ ತಣಿಸಲಿಕ್ಕೆ ಹೊರಗೆ ತಿನ್ನುವುದುಂಟು. ಸಾಗರದಲ್ಲಿ ನಾನು ಹೆಚ್ಚಾಗಿ ಹೋಗುವ ಅಂತಹ ಜಾಗ ಎಸ್ ಎನ್ ನಗರದ ಸಭಾಹಿತ್ ಬಿಲ್ಡಿಂಗ್ ಎದುರಿಗಿರುವ ಭಟ್ಟರ ಪಾನಿಪೂರಿ ಗಾಡಿಯಂಗಡಿ.
ನಾಣಿಕಟ್ಟಾದ ಹತ್ತಿರದ ಹಳ್ಳಿಯವರಾದ ಎಸ್ ಎನ್ ನಗರದ ಭಟ್ಟರು ಎಂದೇ ಗುರುತಿಸಲ್ಪಡುವ ನಾಗಪತಿ ವಿ. ಹೆಗ್ಡೆಯವರ ಮಸಾಲೆ/ಪಾನಿಪೂರಿಯ ರುಚಿ ಇನ್ನೆಲ್ಲೂ ಸಿಗುವುದಿಲ್ಲ. ಅದೆಲ್ಲಕ್ಕಿಂತಲೂ ಪಾನಿಪೂರಿ ಕೊಡುವಾಗ ಅವರು ತೋರುವ ಆತ್ಮೀಯತೆ ಬೆಲೆ ಕಟ್ಟಲಾರದಂತಹುದು.
ಕಳೆದ ಹತ್ತು ವರ್ಷಗಳಿಂದ ಸಾಗರದ ಎಸ್ ಎನ್ ನಗರದಲ್ಲಿ ಸಂಜೆ ಆರರ ಬಳಿಕ ಪಾನಿ/ಮಸಾಲೆಪೂರಿ ಮಾಡುತ್ತಿರುವ ಭಟ್ಟರ ವಿಶೇಷತೆ ಏನೆಂದರೆ ಅವರು ದೇಹಕ್ಕೆ ಹಾನಿಕಾರಕವಾದ ಅಜಿನೋಮೋಟೊವನ್ನು ಬಳಸದಿರುವುದು. ಗಾಡಿಯಂಗಡಿಯ ಪಕ್ಕದಲ್ಲಿ ಇರುವ ಅವರ ಬಾಡಿಗೆ ಮನೆಯ ಬಾವಿಯ ನೀರನ್ನು ಉಪಯೋಗಿಸಿ ಹಳೆಯ ಹುಣಸೆ ಹಣ್ಣನ್ನು ಬಳಸಿ ಮಾಡುವ ಪಾನಿಗೆ ವಿಶೇಷವಾದ ರುಚಿಯಿದೆ. ಅವರು ಖಾರಕ್ಕೆ ಸೂಜಿ ಮೆಣಸನ್ನಷ್ಟೇ ಬಳಸುತ್ತಾರೆ. ಹಸಿರು ಬಟಾಣಿಯ ಬದಲು ಬಿಳಿ ಬಟಾಣಿಯನ್ನು ಬಳಸುತ್ತಾರೆ. ಪೂರಿ, ಸೇವು,ಮಸಾಲೆ ಎಲ್ಲವನ್ನೂ ಖುದ್ದಾಗಿ ಭಟ್ಟರೇ ತಯಾರಿಸುತ್ತಾರೆ. ದಿನಕ್ಕಿಷ್ಟು ಅಂತ ನಿಗದಿತ ಪಾನಿ/ಮಸಾಲೆ ಪೂರಿಯನ್ನು ಮಾಡುವ ಭಟ್ಟರು ಅಷ್ಟೇ ಸಂಖ್ಯೆಯ ತಟ್ಟೆ ಚಮಚೆಗಳನ್ನು ಇರಿಸಿರುತ್ತಾರೆ. ಇನ್ನೊಬ್ಬರು ತಿಂದು ತೊಳೆಸಿದ ತಟ್ಟೆಯಲ್ಲಿ ನಾವು ತಿನ್ನುವ ಪ್ರಮೇಯ ಬರುವುದಿಲ್ಲ. ಈಗಂತೂ ಕೋವಿಡ್ ನಿಂದಾಗಿ ಸ್ಟೀಲ್ ತಟ್ಟೆಯ ಬದಲು ಅಡಿಕೆ ಹಾಳೆಯ ಡಿಸ್ಪೋಸೆಬಲ್ ತಟ್ಟೆ ಬಳಸುತ್ತಾರೆ. ಇಷ್ಟೆಲ್ಲಾ ಹೇಳುತ್ತಿರುವುದು ಅವರು ನೈರ್ಮಲ್ಯಕ್ಕೆ ಕೊಡುತ್ತಿರುವ ಪ್ರಾಶಸ್ತ್ಯದ ಬಗ್ಗೆ ತಿಳಿಸಲು.
ನಾನು ಅವರಲ್ಲಿಗೆ ಅಪರೂಪಕ್ಕೆ ಹೋಗುವವಳಾದರೂ ನನಗೆ ಎಷ್ಟು ಖಾರ ಬೇಕು ಎನ್ನುವ ನೆನಪು ಭಟ್ಟರಿಗಿದೆ. ಇದು ನನ್ನೊಬ್ಬಳ ಬಗ್ಗೆ ಮಾತ್ರವಲ್ಲ. ಅವರ ಬಳಿ ಬರುವ ಪ್ರತಿಯೊಬ್ಬ ಗಿರಾಕಿಯ ರುಚಿಯ ಆದ್ಯತೆಯ ಬಗ್ಗೆ ಭಟ್ಟರಿಗೆ ಗೊತ್ತಿರುತ್ತದೆ. ಅವರು ಇದನ್ನೊಂದು ಬರೀ ವ್ಯಾಪಾರವಾಗಿ ಪರಿಗಣಿಸಿಲ್ಲ. ವ್ಯಾಪಾರದ ಜೊತೆ ಜೊತೆಗೆ ತನ್ನ ಬಳಿ ಬರುವ ಗಿರಾಕಿಗಳೊಡನೆ ಮಾನವೀಯ ಸಂಬಂಧವನ್ನು ಬೆಸೆಯುವವರು ಈ ಭಟ್ಟರು. ಯಾರೊಡನೆಯೂ ಸ್ಪರ್ಧೆಗೆ ಇಳಿಯದ ಭಟ್ಟರು ರುಚಿಯ ಬಗ್ಗೆ ಯಾವತ್ತೂ ರಾಜಿ ಮಾಡಿಕೊಳ್ಳುವವರಲ್ಲ. ಮಾರ್ಕೆಟ್ ನಲ್ಲಿ ಈರುಳ್ಳಿ ಅಥವಾ ಇನ್ನಿತರ ವಸ್ತುಗಳ ಬೆಲೆಯಲ್ಲಿ ಏರುಪೇರಾದರೂ ಭಟ್ಟರು ಯಾವತ್ತೂ ಅನಾವಶ್ಯಕವಾಗಿ ರೇಟ್ ಏರಿಸಿದವರಲ್ಲ. ಭಟ್ಟರು ಪಾನಿ ಪೂರಿ, ಮಸಾಲೆ ಪೂರಿ ಜೊತೆ ಸೇವ್ ಪೂರಿ, ಭೇಲ್ ಪುರಿಯನ್ನೂ ಮಾಡುತ್ತಾರೆ.
ಭಟ್ಟರ ಗಾಡಿಯಂಗಡಿಗೆ ಹೋಗಿ ಎಷ್ಟೇ ರಶ್ ಇದ್ದರೂ ಅವರೊಡನೆ ಕಥೆ ಹೊಡೆಯುತ್ತಾ ಮಸಾಲೆ ಪೂರಿ ತಿನ್ನುವುದು ಎಲ್ಲರಿಗೂ ಇಷ್ಟದ ವಿಷಯ. ಮೂರ್ನಾಲ್ಕು ವರ್ಷಕ್ಕೊಮ್ಮೆ ಸ್ವೀಡನ್ ನಿಂದ ಬರುವ ಕ್ಲಾರಾ ನಮ್ಮಲ್ಲಿಗೆ ಬಂದ ತಕ್ಷಣ ಭಟ್ಟರು ಮಾಡುವ ಮಸಾಲೆ ಪೂರಿಯನ್ನು ತಿನ್ನುವ ಹಂಬಲ ವ್ಯಕ್ತಪಡಿಸುತ್ತಾಳೆ. ಅಂತಹ ಮರೆಯಲಾಗದ ಕೈರುಚಿ ಭಟ್ಟರದ್ದು! ಸಾಗರಕ್ಕೆ ಬಂದಾಗ ತಪ್ಪದೇ ಭಟ್ಟರ ಗಾಡಿಯಂಗಡಿಗೆ ಭೇಟಿ ಕೊಡುತ್ತೀರಲ್ಲವೆ?
141. ನೆನಪುಗಳು - ಪುಡಿಗಾಸಿನ ಪೆಟ್ಟಿಗೆ ನಿನ್ನೆ ಸುಧಾ ಓದುವಾಗ "ನಿಮ್ಮ ಪುಟ"ದಲ್ಲಿದ್ದ "ಪುಡಿಗಾಸಿಗೊಂದು ಪೆಟ್ಟಿಗೆ" ಅನ್ನುವ ಪುಟ್ಟ ಚಿತ್ರ ಸಹಿತ ಲೇಖನ ಓದಿದೆ. ಆ ಚಿತ್ರ ನೋಡಿದ ತಕ್ಷಣ ನನ್ನಪ್ಪ ಕೊಟ್ಟಿದ್ದ ಅಂತಹುದೇ ಪೆಟ್ಟಿಗೆಯ ನೆನಪಾಯಿತು. ಅದೃಷ್ಟವಶಾತ್ ಅದು ನನ್ನ ಬಳಿಯೇ ಇತ್ತು. ನನ್ನಪ್ಪನಿಗೆ ಅವರದೊಬ್ಬ ಎಲ್ಐಸಿ ಏಜೆಂಟ್ ಕೊಟ್ಟ ಪೆಟ್ಟಿಗೆಯದು. ಅದನ್ನು ನಾನು ನನ್ನ ಪುಡಿಗಾಸನ್ನು ಹಾಕಲು ಉಪಯೋಗಿಸುತ್ತಿದ್ದೆ. ಅದು ಸುಮಾರು 6/3ಇಂಚು ಆಯಳತೆಯ ಹಿತ್ತಾಳೆ ಬಣ್ಣದ ಡಬ್ಬ. ಮುಚ್ಚಳದ ಮೇಲೆ ದುಡ್ಡು ಹಾಕಲು ಒಂದಿಂಚಿನ ಉದ್ದನೆಯ ಸೀಳು ಇತ್ತು. ಅಲ್ಲೇ ಒಂದು ಹಿಡಿಕೆಯೂ ಇತ್ತು. ಆ ಪೆಟ್ಟಿಗೆಗೆ ಬೀಗ ಹಾಕುವ ಒದಗಣೆ ಕೂಡಾ ಇತ್ತು. ಅದೊಂದು ಚೆಂದದ ಹಿತಕರ ಭಾವ ಕೊಡುವ ಪೆಟ್ಟಿಗೆಯಾಗಿತ್ತು.
ಆಗೆಲ್ಲ ಮನೆಗೆ ಯಾರೇ ನೆಂಟರು ಬಂದರೂ ಹಿಂದಿರುಗಿ ಹೋಗುವಾಗ ಮನೆಯಲ್ಲಿದ್ದ ಚಿಕ್ಕ ಮಕ್ಕಳಿಗೆ ದುಡ್ಡು ಕೊಡುವ ರೂಢಿ ಇತ್ತು. ಅದನ್ನು ಇಂತಹ ಪೆಟ್ಟಿಗೆ ಅಥವಾ ಗಟ್ಟಿ ಮುಚ್ಚಳದ ಮೇಲೆ ಸೀಳು ಮಾಡಿರುವ ಡಬ್ಬದಲ್ಲಿ ನಾವು ಹಾಕಿಡುತ್ತಿತ್ತು. ಕೊಡುತ್ತಿದ್ದ ದುಡ್ಡು ಬಹಳ ದೊಡ್ಡ ಮೊತ್ತದ್ದಲ್ಲ. ಆದರೆ ನಮಗೆ ಅದು ಬಹಳ ದೊಡ್ಡದಾಗೇ ಕಾಣುತ್ತಿತ್ತು.
ನಾನು ಮತ್ತು ನನ್ನ ತಂಗಿ ಪ್ರತ್ಯೇಕವಾಗಿ ನಮಗೆ ಬಂದ ದುಡ್ಡನ್ನು ಶೇಖರಿಸಿ ಇಡುತ್ತಿದ್ದೆವು. ನಾನು ಅದರಲ್ಲಿ ಸ್ವಲ್ಪವಾದರೂ ಖರ್ಚು ಮಾಡುತ್ತಿದ್ದೆ. ಆದರೆ ಅವಳು ಅದರಲ್ಲಿ ಒಂದು ನಯಾ ಪೈಸೆ ಕೂಡಾ ಉಪಯೋಗಿಸುತ್ತಿರಲಿಲ್ಲ. ನಾನವಳನ್ನು "ಜುಗ್ಗಿ" ಎಂದು ಚುಡಾಯಿಸುತ್ತಿದ್ದೆ. ಇದೆಲ್ಲ ಬಾಲ್ಯದ ಕಥೆ. ಈಗ ಅವಳು ಹಾಗಿಲ್ಲಬಿಡಿ ನಮ್ಮಪ್ಪ ಅಮ್ಮ ಯಾವುದಕ್ಕೂ ಕೊರತೆ ಆಗದಂತೆ ನೋಡಿಕೊಂಡರೂ ನಮಗೆ ಮನೆಗೆ ಬಂದ ನೆಂಟರು ಕೊಟ್ಟ ದುಡ್ಡಿನ ಮೇಲೆ ಅಪಾರ ಮೋಹ. ಅದನ್ನು ಹಾಗೆಯೇ ಕೂಡಿಟ್ಟು ಅದು ವೃದ್ಧಿಯಾಗುವುದನ್ನು ನೋಡುವುದೇ ಒಂದು ಖುಷಿಯ ಆಟ. ಆಗಾಗ್ಗೆ ದುಡ್ಡಿನ ಡಬ್ಬ ಓಪನ್ ಮಾಡಿ ಅದರೊಳಗಿರುವ ದುಡ್ಡನ್ನು ಹರಡಿಕೊಂಡು ಲೆಖ್ಖ ಮಾಡುವಾಗ ಒಂದು ರೀತಿಯ ಹೆಮ್ಮೆಯ ಭಾವ. ನನಗಿಂತ ತಂಗಿಯ ಬಳಿ ಸ್ವಲ್ಪ ದುಡ್ಡು ಹೆಚ್ಚಿದ್ದರೂ ಹೊಟ್ಟೆಕಿಚ್ಚಾಗುತ್ತಿತ್ತು. ಅಲ್ಲೇ ಸಣ್ಣ ಜಗಳವೂ ಆಗುತ್ತಿತ್ತು. ಹೀಗೆ ಒಟ್ಟು ಮಾಡಿದ್ದ ದುಡ್ಡಿನಲ್ಲಿ ನಾನು ಆರನೇ ತರಗತಿಯಲ್ಲಿದ್ದಾಗ ಬಂಗಾರದ ಲೋಲಾಕ್ ಖರೀದಿಸಿದ್ದೆ. ಅದು ಈಗಲೂ ನನ್ನ ಬಳಿ ಇದೆ.
ಆಗಿನ ಒಂದು ಪೈಸೆ, ಎರಡು ಪೈಸೆ, ಐದು ಪೈಸೆ, ಹತ್ತು ಪೈಸೆ, ನಾಲ್ಕಾಣೆ.... ಇವೆಲ್ಲ ನಮಗಾಗ ತುಂಬಾ ದೊಡ್ಡ ಮೊತ್ತವಾಗಿದ್ದವು. ಅದರಲ್ಲಿ ಹುಳಿ ಪೆಪ್ಪರ್ ಮಿಂಟ್, ನ್ಯೂಟ್ರೀನ್ ಚಾಕಲೇಟ್, ಬೆಲ್ಲದ ಮಿಠಾಯಿ ಕೊಂಡು ತಿನ್ನುವಾಗ ಬ್ರಹ್ಮಾಂಡ ಆನಂದ. ಹೀಗಾಗಿ ನಮಗೆ ಆ ಪುಡಿಗಾಸಿನ ಪೆಟ್ಟಿಗೆ ಅಥವಾ ಡಬ್ಬ ದೊಡ್ಡ ಆಸ್ತಿಯಾಗಿತ್ತು. ಏನನ್ನು ಮರೆತರೂ ದಿನಕ್ಕೊಮ್ಮೆ ಆ ಪೆಟ್ಟಿಗೆಯನ್ನು ನೋಡಲು ಮರೆಯುತ್ತಿರಲಿಲ್ಲ. ಈಗ ಅದನ್ನೆಲ್ಲ ನೆನಪಿಸಿ ಕೊಂಡರೆ ನಮ್ಮ ಮುಗ್ಧತೆಯ ಬಗ್ಗೆ ನಗು ಬರುತ್ತದೆ. ಆದರೆ ಬಾಲ್ಯಕಾಲದ ಆ ಮುಗ್ಧತೆ ನಮ್ಮನ್ನು ಒಂದು ಸುಂದರವಾದ ಕಲ್ಪನಾಲೋಕದಲ್ಲಿ ತೇಲಿಸಿದ್ದಂತೂ ನಿಜವಲ್ಲವೆ?!
140. ನೆನಪುಗಳು - ಬಚ್ಚಲು ಮನೆ (ಸಾಲಿಕೇರಿ)ಸಾಲಿಕೇರಿಯ ಅಜ್ಜಯ್ಯನ ಮನೆಯ ಬಚ್ಚಲುಮನೆ ನನಗೆ ನೆನಪಿರುವಂತೆ ಕಳೆದ ನಲವತ್ತೈದು ಐವತ್ತು ವರ್ಷಗಳಿಂದ ಒಂದೇ ರೀತಿಯಲ್ಲಿದೆ. ಮೂರು ಮರದ ಹಲಗೆ ಜೋಡಿಸಿದ ಮಧ್ಯದಲ್ಲಿ ಚಡಕಿ ಇರುವ ಬಾಗಿಲು, ಒಳಗೆ ಪ್ರವೇಶಿಸುತ್ತಿರುವಂತೆ ಒಂದಿಷ್ಟು ಖಾಲಿ ಜಾಗ, ಬಲಬದಿಗೆ ಸ್ನಾನದ ಬಚ್ಚಲು, ಒಂದು ಹುಗಿದ ಹಂಡೆ, ಅದರ ಪಕ್ಕದಲ್ಲಿ ಬಕೆಟ್ ಮತ್ತು ತಣ್ಣೀರಿನ ನಲ್ಲಿ. ಬಚ್ಚಲುಮನೆಯ ಎಡತುದಿಯಲ್ಲಿ ಒಂದು ಬಿದಿರಿನ ಏಣಿ ಇರಿಸಲಾಗಿದೆ. ಆ ಏಣಿಯನ್ನೇರಿ ಹೋದರೆ ಮೇಲೊಂದು ಅಟ್ಟ ಸಿಗುತ್ತದೆ. ಹಿಂದೆ ಆ ಅಟ್ಟದಲ್ಲಿ ಹುಲ್ಲು, ತೆಂಗಿನ ಮಡಲು ಹಾಗೂ ಇನ್ನಿತರ ವಸ್ತುಗಳನ್ನು ದಾಸ್ತಾನು ಮಾಡಿಡಲಾಗುತ್ತಿತ್ತು. ಈಗದು ಖಾಲಿ ಅಟ್ಟವಷ್ಟೆ. ಒಟ್ಟಿನಲ್ಲಿ ಇಡೀ ಬಚ್ಚಲುಮನೆ ಈಗಿನ ಆಧುನಿಕ ಮನೆಗಳ ಬೆಡ್ ರೂಮಿಗಿಂತ ದೊಡ್ಡದಾಗಿದೆ.
ಆ ಬಚ್ಚಲುಮನೆಯಲ್ಲಿ ಒಂದು ಹಳೆಯ ಕಾಲದ ಸ್ವಿಚ್ ಇದೆ. ಲೈಟ್ ಆನ್ ಮಾಡಲು ಆ ಸ್ವಿಚ್ಚನ್ನು ಎರಡು ಮೂರು ಸಲ ಒಂದು ಆನಿಕೆಯಲ್ಲಿ ಅಲುಗಾಡಿಸಬೇಕಾಗುತ್ತದೆ. ಅದನ್ನು ಬ್ಯಾಲೆನ್ಸ್ ಮಾಡಿ ಆನ್ ಮಾಡುವುದೇ ನಮಗೊಂದು ಸವಾಲು. ಆದರೂ ಆ ಪ್ರಕ್ರಿಯೆ ಮಜವಾಗಿರುತ್ತದೆ. ಆ ಬಚ್ಚಲುಮನೆಯ ಬಾಗಿಲನ್ನು ತೆಗೆಯಬೇಕಾದರೂ ಸ್ವಲ್ಪ ಕಸರತ್ತು ಮಾಡಬೇಕು. ಮನೆಯಲ್ಲಿ ಇನ್ನೊಂದು ಸುಸಜ್ಜಿತವಾದ ಬಾತ್ ರೂಮ್ ಇದ್ದರೂ ಈ ಹಳೆಯ ಬಚ್ಚಲುಮನೆಯಲ್ಲಿ ಸ್ನಾನ ಮಾಡುವುದೇ ನಮಗೆ ಹಿಗ್ಗು!
ಆ ಬಚ್ಚಲುಮನೆ ಮುಖ್ಯ ಮನೆಯ ಎದುರು ಭಾಗದಲ್ಲಿದೆ. ಮನೆಯ ಊಟದ ಕೋಣೆಯ ಬಾಗಿಲಿನಿಂದ ಹೊರಗೆ ಸುಮಾರು ಐವತ್ತು ಅಡಿಯಷ್ಟು ದೂರದಲ್ಲಿದೆ. ಆ ಬಾಗಿಲಿನಿಂದ ಬಚ್ಚಲುಮನೆಯ ಕಡೆಗೆ ಹೋಗಲು ಒಂದು ಕಟ್ಟೆಯಿದೆ. ಮನೆ ಮತ್ತು ಬಚ್ಚಲುಮನೆಯ ಭಾಗದ ನಡುವೆ 50/50ಅಡಿ ಆಯಳತೆಯ ಓಪನ್ ಅಂಗಳವಿದೆ. ಬಚ್ಚಲುಮನೆಯ ಹಿಂಪಕ್ಕದಲ್ಲಿ ಬಾವಿ ಹಾಗೂ ಬಾವಿಮನೆಯಿದೆ. ಬಚ್ಚಲುಮನೆಯ ಎಡಪಕ್ಕದಲ್ಲಿ ಕೊಟ್ಟಿಗೆ ಇದೆ. ಈಗ ದನಕರುಗಳೇನೂ ಇಲ್ಲ. ಹೀಗೆ ವಾಸದ ಜಾಗ ಒಂದು ಕಡೆಗಾದರೆ ಬಳಕೆಯ ಜಾಗ ಇನ್ನೊಂದು ಕಡೆಗಿರುವ ವ್ಯವಸ್ಥಿತ ಮನೆ ನಮ್ಮದು. ಒಟ್ಟಿನಲ್ಲಿ ಅಜ್ಜಯ್ಯನ ಮನೆಯ ನೆನಪೇ ಖುಷಿ ಕೊಡುವಂತಹುದು. ಮನೆ ಹಳೆಯದಾದರೂ ಅದರ ಪ್ರತಿಯೊಂದು ವಸ್ತುಗಳ ಜೊತೆಗಿರುವ ಅವಿನಾಭಾವ ಸಂಬಂಧ ನೆನಪುಗಳ ಬುತ್ತಿಯನ್ನು ಕಟ್ಟಿಕೊಡುವುದು ನಿಜವಲ್ಲವೆ?
139. ನೆನಪುಗಳು - ಲಾಂಚಿನ ಪಯಣ
ನನ್ನ ಗಂಡನ ಮನೆಯವರ ಮೂಲ ಸಿಗಂದೂರು ಸಮೀಪದ ಕಳಸವಳ್ಳಿ ಎಂಬಲ್ಲಿ. ನನ್ನ ಮಾವ ಆ ಪ್ರಾಂತ್ಯದ ಪಟೇಲರಾಗಿದ್ದವರು. ತಮ್ಮ ನ್ಯಾಯನಿರ್ಣಯಕ್ಕೆ ಬಹಳ ಹೆಸರಾದವರು. ಪಟೇಲ್ ಗಣೇಶ ರಾಯರು ಎಂದರೆ ಎಲ್ಲರೂ ಗೌರವದಿಂದ ನೋಡುತ್ತಿದ್ದರು. ಅವರ ಮನೆಯಲ್ಲಿ ಎಲ್ಲರಿಗೂ ಮುಕ್ತ ಪ್ರವೇಶವಿತ್ತು. ಹೀಗಾಗಿ ಮನೆಯ ಎಲ್ಲರಲ್ಲೂ ಜಾತಿಭೇದವಿಲ್ಲದ ಒಳಗೊಳ್ಳುವಿಕೆಯ ಮನೋಧರ್ಮ ಸಹಜವಾಗಿ ಬೆಳೆದಿತ್ತು. ಹೊಳೆಗೆ ದೋಣಿ ಹತ್ತಲು ಹೋಗುವ ಕೆಳತಟ್ಟಿನಲ್ಲಿ ಮನೆಯಿದ್ದ ಕಾರಣ ಎಲ್ಲರೂ ಆ ಮನೆಗೆ ಭೇಟಿಯಿತ್ತೇ ಹೋಗುತ್ತಿದ್ದರು. ಕೆಳಮನೆ ಎಂದು ನಾಮಕರಣವಾದದ್ದು ಅಲ್ಲಿಯೇ. ನಂತರ ಮಡೆನೂರು ಡ್ಯಾಂ ನಿರ್ಮಾಣವಾದ ಸಂದರ್ಭದಲ್ಲಿ ಜಮೀನು ಮುಳುಗಡೆಯಾಗಿ ತಮ್ಮ ತುಂಬು ಸಂಸಾರದೊಂದಿಗೆ ಮಾವನವರು ತುಂಬಿನಕೆರೆಯಲ್ಲಿ ಹೊಸದಾಗಿ ಬದುಕನ್ನು ಕಟ್ಟಿಕೊಂಡರು. ಹೊಳೆ ದಾಟಿ ಈಚೆ ಬಂದಿದ್ದರೂ ನಮ್ಮ ಮನೆಯವರಿಗೆ ತಮ್ಮ ಮೂಲ ನೆಲದ ಪ್ರೀತಿ ಹಾಗೂ ಅಂಟು ಹಾಗೆಯೇ ಉಳಿದು ಬಿಟ್ಟಿತ್ತು. ಹೀಗಾಗಿ
ನಾನು ಮದುವೆಯಾಗಿ ಬಂದಾಗ ಹೊಳೆಯಾಚೆಗೆ ಹೋಗಿ ಊರು ಮನೆಯವರನ್ನು ಭೇಟಿ ಮಾಡಬೇಕೆಂದು ನಮ್ಮನೆಯವರೆಲ್ಲರ ಒತ್ತಾಸೆಯಾಗಿತ್ತು. ಅದರ ಮೇರೆಗೆ ನಮ್ಮೆಲ್ಲರ ಪಯಣ ಅತ್ತ ಕಡೆ ಸಾಗಿತು. ಹೊಳೆಬಾಗಿಲಿಗೆ ಬಂದು ಲಾಂಚಿಗಾಗಿ ಕಾದು ಆ ಹಿನ್ನೀರಿನಲ್ಲಿ ನಮ್ಮ ಪಯಣ ಪ್ರಾರಂಭವಾದಾಗ ಏನೋ ಒಂದು ರೀತಿಯ ಸಂಭ್ರಮ. ಲಾಂಚಿನ ನನ್ನ ಆ ಪ್ರಥಮ ಪ್ರಯಾಣವನ್ನು ನಾನೆಂದೂ ಮರೆಯಲಾರೆ. ಮೊದಲೇ ನೀರೆಂದರೆ ನನಗೆ ಸೆಳೆತ. ಅಪಾರ ಜಲರಾಶಿಯಲ್ಲಿನ ಒಂದರ್ಧ ಘಂಟೆಯ ಪ್ರಯಾಣ ನನಗೆ ಖುಷಿ ಕೊಡದೆ ಮತ್ತೇನು ಮಾಡೀತು! ಆ ಲಾಂಚ್ ದಡಕ್ಕೆ ಬಂದು ನಿಲ್ಲುವುದು, ಅದರ ಹಲಗೆ ದಡಕ್ಕೆ ಫಿಕ್ಸ್ ಆಗಿ ಜನ ಹಾಗೂ ವಾಹನಗಳು ಒಳ ಹೋಗುವುದು, ಜನರಿಗೆ ಕುಳಿತುಕೊಳ್ಳಲು ಲಾಂಚಿನ ಇನ್ನೊಂದು ಬದಿಯಲ್ಲಿರುವ ಕೂರುವ ಬೆಂಚಿನ ವ್ಯವಸ್ಥೆ, ಕೂರಲು ಜಾಗವಿಲ್ಲದಾಗ ಲಾಂಚಿನ ಬದಿಗಳಲ್ಲಿರುವ ಸರಳುಗಳಿಗೆ ಆತು ನಿಲ್ಲುವುದು, ಅಲ್ಲೇ ಸ್ವಲ್ಪ ಬಗ್ಗಿ ನೀರನ್ನು ಸೀಳಿಕೊಂಡು ಹೋಗುವ ಲಾಂಚಿನ ಪಥವನ್ನು ಗಮನಿಸುವುದು.... ಇವೆಲ್ಲವು ನನಗೆ ಹೊಸ ಅನುಭವ ಕೊಟ್ಟವು. ಯಾವಾಗಲೂ ಹೊಸತನ್ನು ಸ್ವಾಗತಿಸುವ ನನಗೆ ಇಂತಹ ಅಪರೂಪದ ಅನುಭವ ಖುಷಿ ಕೊಡದೆ ಬಿಡುತ್ತದೆಯೆ?
ಇಂತಹ ರೋಚಕ ಪಯಣವನ್ನು ಮುಗಿಸಿ ಊರು ಮನೆಗಳಿಗೆ ಭೇಟಿ ನೀಡಿ ಅವರು ಅತಿ ಪ್ರೀತಿಯಿಂದ ಕೊಟ್ಟ ತಿನಿಸುಗಳನ್ನು ತಿಂದು, ನಮ್ಮ ಮೂಲ ಮನೆ, ತೋಟ ಮುಳುಗಡೆಯಾದ ಜಾಗವನ್ನು ನೋಡಿಕೊಂಡು, ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ಪುನಃ ಲಾಂಚಿನ ಮೂಲಕ ಹಿಂದಿರುಗಿ ಬಂದು ಮನೆ ಮುಟ್ಟಿದ್ದು ಎಲ್ಲವೂ ಒಂದು ಸವಿ ನೆನಪಾಗಿ ಈಗಲೂ ಉಳಿದಿದೆ.
ನಂತರದಲ್ಲಿ ಹಲವಾರು ಬಾರಿ ಲಾಂಚಿನಲ್ಲಿ ಪಯಣಿಸಿದರೂ ಅದು ಪ್ರತಿ ಬಾರಿ ಹೊಸ ಲೋಕವನ್ನೇ ನನ್ನ ಮುಂದೆ ತೆರೆದಿಡುತ್ತದೆ ಅಂದರೆ ಸುಳ್ಳಲ್ಲ. ಈಗ ಲಾಂಚ್ ಪಯಣ ಮೊದಲಿನಂತಿಲ್ಲ. ಜನದಟ್ಟಣಿ ಜಾಸ್ತಿಯಾಗಿ ಲಾಂಚಿನೊಳಗೆ ಪ್ರವೇಶ ಸಿಗುವುದೇ ಒಂದು ಸವಾಲಾಗಿ ಪರಿಣಮಿಸಿದೆ. ತದನಂತರದಲ್ಲಿ ಜನರ ದಂಡಿನಲ್ಲಿ ಒತ್ತೊತ್ತಿಕೊಂಡು ನಿಲ್ಲಬೇಕಾದ ಪರಿಸ್ಥಿತಿ ಇದ್ದು ಮೊದಲಿನ ಆರಾಮದಾಯಕ ಪಯಣದ ಅನುಭವವನ್ನು ಕಿತ್ತುಕೊಂಡಿದೆ. ಬದಲಾವಣೆ ಅನಿವಾರ್ಯವಾದ ಕಾರಣ ಅದಕ್ಕೆ ಒಗ್ಗಿಕೊಳ್ಳುವ ಮನಸ್ಥಿತಿಯನ್ನು ಕಟ್ಟಿಕೊಂಡು ಪಯಣಿಸಿದರೆ ಅದನ್ನು ಹಿತಕರವಾಗಿ ಪರಿಗಣಿಸಬಹುದೇನೋ?
138. ನೆನಪು - ಪುಟ್ಟು ಮತ್ತು ಗಸಿ ಮೊನ್ನೆ ರೇಖಾ ಬೆಳಗಿನ ತಿಂಡಿಗೆ ಪುಟ್ಟು ಮತ್ತು ಕೆಂಪು ಕಡಲೆ ಗಸಿ ಮಾಡಿದ್ದಳು. ಅವಳು ಮಾಡಿದ ಅಡುಗೆ ಯಾವಾಗಲೂ ರುಚಿಯಾಗಿರುತ್ತದೆ. ಪುಟ್ಟು ಕೂಡ ತುಂಬಾ ಆರೋಗ್ಯಕರವಾದ ತಿಂಡಿ. ಅಕ್ಕಿಹಿಟ್ಟಿಗೆ ಸ್ವಲ್ಪ ಜೀರಿಗೆ ಸೇರಿಸಿ ತಣ್ಣೀರಿನಲ್ಲಿ ಒದ್ದೆ ಮಾಡಿ ಹುಡಿಹುಡಿಯಾಗಿ ಕಲೆಸಿ ಇಡಬೇಕು. ಅದನ್ನು ಸುಮಾರು ಒಂದು ಗಂಟೆಯ ಕಾಲ ಹಾಗೆಯೇ ಬಿಟ್ಟು ತದನಂತರ ಪುಟ್ಟು ಮಾಡುವ ಉದ್ದನೆಯ ಕೊಳವೆಯಲ್ಲಿ ತಯಾರಾದ ಅಕ್ಕಿ ಹಿಟ್ಟು ಸ್ವಲ್ಪ ನಂತರ ಸ್ವಲ್ಪ ಕಾಯಿತುರಿ ತದನಂತರ ಪುನಃ ಸ್ವಲ್ಪ ಅಕ್ಕಿ ಹಿಟ್ಟನ್ನು ಹಾಕಿ ಸ್ಟೀಮ್ ಮಾಡಿದರೆ ಐದ್ಹತ್ತು ನಿಮಿಷಗಳಲ್ಲಿ ಒಂದೊಂದು ಪುಟ್ಟು ತಯಾರು. ಅದನ್ನು ಅದೇ ಕಾಯಿತುರಿ ಅಥವಾ ಕಡಲೆ ಗಸಿ ಅಥವಾ ಪಚ್ಚ ಬಾಳೆಹಣ್ಣಿನೊಡನೆ ತಿನ್ನಲು ಬಲು ರುಚಿ.
ಪುಟ್ಟುವನ್ನು ನೋಡಿದ ಕೂಡಲೆ ನನ್ನ ಮನದೊಳಗೆ ರಿಂಗಣಗೊಳ್ಳುವುದು ನಾನು ಬಾಳೆಹೊನ್ನೂರಿನಲ್ಲಿದ್ದಾಗ ನವೋದಯದ ಪಕ್ಕದಲ್ಲಿದ್ದ ಮಲಯಾಳಿ ವೇಲಾಯುಧನ್ ನ ಗೂಡು ಹೋಟೆಲ್. ನಾಲ್ಕು ಕಂಬಗಳನ್ನೂರಿ ಸುತ್ತಲೂ ತಟ್ಟಿ ಕಟ್ಟಿ ಸೋಗೆ ಮಾಡಿದ್ದ ಒಳಗೆಲ್ಲ ಹೊಗೆ ತುಂಬಿದ ಗೂಡು ಬಿಡಾರವವನದ್ದು. ಹತ್ತಿರದಲ್ಲಿ ಏನೂ ಸಿಗದ ಆ ಕಾಲದಲ್ಲಿ ವೇಲಾಯುಧನ್ ನ ಆ ಗೂಡೇ ಆಗೀಗ ನಮ್ಮ ಹೊಟ್ಟೆಯ ಹಸಿವನ್ನು ತಣಿಸುತ್ತಿತ್ತು. ಕಟ್ಟಿಗೆ ಒಲೆಯಲ್ಲಿ ಮಾಡುತ್ತಿದ್ದ ಹೊಗೆ ಸುತ್ತಿದ ವಾಸನೆಯಿದ್ದ ಪುಟ್ಟು ಆಗ ನಮಗೆ ಅಮೃತವಾಗಿತ್ತು. ಆಗೆಲ್ಲ ಶುಚಿ ರುಚಿ ನೋಡದೆ ಬಾಯಿ ಚಪಲವನ್ನು ತೃಪ್ತಿ ಪಡಿಸಿಕೊಳ್ಳಲು ತಿನ್ನುತ್ತಿದ್ದ ಆ ಪುಟ್ಟು ಇನ್ನೂ ನನ್ನ ನೆನಪಿನ ಗೂಡಿನಲ್ಲಿ ಹಸಿಯಾಗಿದೆ. ವಯಸ್ಸಿನ ಹಾಗೂ ಬದುಕಿನ ಭಾರದಿಂದ ಹಣ್ಣಾಗಿದ್ದ ವೇಲಾಯುಧನ್, ಅವನ ಹರಕು ಮುರುಕು ಕನ್ನಡ, ದುಡ್ಡು ತೆಗೆದುಕೊಂಡರೂ ಅವನು ನಿಸ್ಪೃಹತೆಯಿಂದ ಮಾಡಿಕೊಡುತ್ತಿದ್ದ ಪುಟ್ಟು ಇವೆಲ್ಲ ಇಷ್ಟು ದೀರ್ಘಾವಧಿಯವರೆಗೆ ನನ್ನೊಳಗೆ ಉಳಿದುಕೊಂಡಿರುವುದರ ಕಾರಣ ಏನಿರಬಹುದೆಂದು ಹುಡುಕಬೇಕಷ್ಟೆ!
ಇದನ್ನೆಲ್ಲ ನೋಡಿದಾಗ ನಮ್ಮೆಲ್ಲರ ಬದುಕಿನಲ್ಲಿ ಯಾವುದೂ ಮುಖ್ಯ/ಅಮುಖ್ಯವಲ್ಲ; ಯಾರೂ ಮುಖ್ಯ/ಅಮುಖ್ಯರಲ್ಲ ಅಂತ ಒಮ್ಮೊಮ್ಮೆ ಅನಿಸಿ ಬಿಡುತ್ತದೆ. ಒಂದು ಪುಟ್ಟು ಎನ್ನುವುದು ಎಷ್ಟೆಲ್ಲ ವಿಚಾರಗಳ ಮಂಥನವನ್ನು ನನ್ನೊಳಗೆ ಮಾಡಿಸಿತಲ್ವೆ!
137. ಪರಿಸರ - ದೇವರ ಕಾಡು.ಮೊನ್ನೆ ಸಂಜೆ ಹೊಸಗುಂದದ ದೇವರಕಾಡಿಗೆ ನಾನು ಮಕ್ಕಳೊಡನೆ ಹೋಗಿದ್ದೆ. ಇಷ್ಟು ವರ್ಷ ನಮ್ಮ ಶಾಲೆಯ ಮಕ್ಕಳನ್ನು ಅಲ್ಲಿಗೆ ಕ್ಯಾಂಪ್ ಮಾಡಲು ಕಳಿಸಿ ಅವರಿಗೆಲ್ಲ ದೇವರಕಾಡಿನ ದರ್ಶನ ಮಾಡಿಸಿದರೂ ನಾನು ಈವರೆಗೆ ಆ ಕಾಡಿನೊಳಗೆ ಹೋಗಿರಲಿಲ್ಲ. ಮೊನ್ನೆ ಮಳೆಯೂ ಇರಲಿಲ್ಲ, ವಾತಾವರಣವೂ ಚೆನ್ನಾಗಿತ್ತು. ಅಲ್ಲಿ ವಿನಾಯಕ ಭಟ್ ಅನ್ನುವವರ ನೇತೃತ್ವದಲ್ಲಿ ಕಾಡಿನ ಚಾರಣ ನಡೆಸಿದೆವು. ಕೆಸರಿನ ನೆಲದಲ್ಲಿ ಜಾರಿ ಬೀಳದಂತೆ ಎಚ್ಚರಿಕೆಯಿಂದ ಕಾಲಿಡುತ್ತಾ ನಮ್ಮ ನಡಿಗೆ ಸಾಗಿತು. ಪ್ರಾರಂಭದಲ್ಲೇ ಹಸಿಯಾಗಿದ್ದ ಬೃಹತ್ತಾದ ಗಣಪೆಕಾಯಿಯ ದರ್ಶನವಾಯಿತು. ನಂತರ ನಾವು ನಡೆದ ಕಡೆಯಲ್ಲೆಲ್ಲಾ ಇದ್ದದ್ದು ಪುರಾತನವಾದ ಬೃಹತ್ ಮರಗಳ ನಡುವೆ ಇದ್ದ ದೊಡ್ಡ ದೊಡ್ಡ ಗಣಪೆ ಬಳ್ಳಿಗಳು. ಆ ಬಳ್ಳಿಗಳನ್ನು ನೋಡುವುದೇ ಒಂದು ಅದ್ಭುತ ಅನುಭವ. ದಪ್ಪನೆಯ ತಿರುಚಿದ ಬಳ್ಳಿಗಳು ಒಂದು ಮರದಿಂದ ಇನ್ನೊಂದು ಮರಕ್ಕೆ ಹಾದು ಹೋಗುವಾಗ ನಡುವಿನ ಖಾಲಿ ಜಾಗದಲ್ಲಿ ಜೋಕಾಲಿಯ ಹಾಗೆ ನೇಲುತ್ತಿದ್ದವು. ನನ್ನಂತಹ ಭಾರಿ ದೇಹದವರು ಕುಳಿತರೂ ಅವುಗಳೇನೂ ಜಗ್ಗುತ್ತಿರಲಿಲ್ಲ. ಅವುಗಳ ಆಕಾರವೇ ಸೌಂದರ್ಯಾಸ್ವಾದನೆಯಮನಸ್ಥಿತಿ ಹುಟ್ಟಿಸುವಂತಿತ್ತು..
ಆ ಇಡೀ ದೇವರಕಾಡು ಪ್ರಕೃತಿಯ ಅದ್ಭುತ ಸಿರಿಯ ಆಗರ ಎಂದರೆ ತಪ್ಪಾಗಲಾರದು. ಬೃಹತ್ ಮರಗಳು, ಅಪರೂಪದ ವೃಕ್ಷಗಳು, ಗಣಪೆ ಬಳ್ಳಿಗಳೊಂದಿಗೆ ತುರಿಕೆ ಗಿಡ ಹಾಗೂ ಇನ್ನಿತರ ಸಣ್ಣಪುಟ್ಟ ಸಸ್ಯಗಳು ಅಷ್ಟೇ ಸಮೃದ್ಧವಾಗಿದ್ದವು. ತುರಿಕೆ ಗಿಡ ನೋಡಿದ ತಕ್ಷಣ ನಾನು ಚಿಕ್ಕವಳಿದ್ದಾಗ ಮಾಡಿದ ಪುಂಡಾಟಿಕೆಯ ನೆನಪಾಯಿತು ಕೂಡಾ. ನಾವೆಲ್ಲ ಸ್ನೇಹಿತರು ಸೇರಿ ಪರಸ್ಪರ ತುರಿಕೆ ಗಿಡಗಳನ್ನು ಇನ್ನೊಬ್ಬರಿಗೆ ಮುಟ್ಟಿಸಿ ಎದ್ದುಬಿದ್ದು ಮೈ ತುರಿಸಿಕೊಳ್ಳುತ್ತಿದ್ದ ನೆನಪಾಯಿತು. ಕೆಲವೊಮ್ಮೆ ಈ ನೆನಪುಗಳ ಅಗಾಧತೆಯ ಬಗ್ಗೆಯೇ ಆಶ್ಚರ್ಯವಾಗುತ್ತದೆ. ಎಲ್ಲೋ ಮನಸ್ಸಿನ ಮೂಲೆಯೊಳಗಿರುವ ನೆನಪು ಯಾವುದಾದರು ಘಟನೆಯಿಂದ, ವಸ್ತುವಿನಿಂದ ಪುಟಕ್ಕನೆ ಮೇಲೆ ಚಿಮ್ಮಿ ಬರುವುದು ಸೋಜಿಗವೇ ತಾನೆ?
ಆ ದೇವರಕಾಡಿನಲ್ಲಿರುವ ರಾಜರ ಕಾಲದಲ್ಲಿ ನಿರ್ಮಿಸಲಾದ ಇಪ್ಪತ್ತೈದು ಅಡಿಯ ಆಸುಪಾಸಿನ ಅಗಳ(ಕಾಲುವೆ) ಇನ್ನೂ ಸುಸ್ಥಿತಿಯಲ್ಲಿರುವುದು ಖುಷಿ ಕೊಡುವ ವಿಷಯ. ಸುಮಾರು 450 ಎಕರೆ ವಿಸ್ತೀರ್ಣವಿರುವ ದೇವರಕಾಡಿನ ಒಂದು ಸಣ್ಣ ತುಣುಕನ್ನು ನೋಡಲು ನಾವು ಒಂದೂವರೆ ತಾಸು ತೆಗೆದುಕೊಂಡೆವು. ತದನಂತರ ಅದರಲ್ಲಿರುವ 600 ವರ್ಷ ಹಳೆಯ ಗಣಪೆಬಳ್ಳಿಯ ದರ್ಶನದೊಂದಿಗೆ ನಮ್ಮ ದೇವರಕಾಡಿನ ಚಾರಣವನ್ನು ಮುಗಿಸಿ ಅಲ್ಲಿರುವ ದೇವಾಲಯಗಳಿಗೆ ಭೇಟಿ ನೀಡಿ ಹಿಂದಿರುಗುವಾಗ ದೇಹಕ್ಕೆ ಸುಸ್ತಾಗಿದ್ದರೂ ಮನಸ್ಸು ಹಗುರಾದ ಅನುಭವದಲ್ಲಿ ತೇಲುತ್ತಿತ್ತು!
136. ನೆನಪುಗಳು - ದೂರವಾಣಿ ನನಗೆ ನನ್ನಪ್ಪನ ನೆನಪಾದ ತಕ್ಷಣ ಕಣ್ಣ ಮುಂದೆ ಬರುವುದು ಕರಿ ಸ್ಥಿರ ದೂರವಾಣಿಯ ಚಿತ್ರ. ನನ್ನಪ್ಪ ಜೀವವಿಮಾ ಅಭಿವೃದ್ಧಿ ಅಧಿಕಾರಿಯಾಗಿದ್ದ ಕಾರಣ ಜನರೊಡನೆ ಮಾತನಾಡುವ ಅಗತ್ಯವಿತ್ತು. ಇಲ್ಲದಿದ್ದರೂ ಸ್ವಭಾವತಃ ಅವರು ಮಾತುಗಾರರು. ಹೀಗಾಗಿ ಅವರು ಮನೆಯಲ್ಲಿದ್ದಾಗಲೂ ದೂರವಾಣಿ ಕರೆ ಬಂದಾಗ ಗಂಟೆಗಟ್ಟಲೆ ಮಾತನಾಡುತ್ತಿದ್ದರು. ರಾಂಗ್ ನಂಬರಿನಿಂದ ಫೋನ್ ಬಂದರೂ ಅರ್ಧ ಗಂಟೆ ಮಾತನಾಡುತ್ತಿದ್ದರು. ನಮಗೆಲ್ಲ ಅವರ ಈ ದೀರ್ಘಕಾಲದ ಮಾತುಕತೆ ತಮಾಷೆಯ ವಸ್ತುವಾಗಿತ್ತು. ನಾವೆಷ್ಟೇ ತಮಾಷೆ ಮಾಡಿದರೂ ನನ್ನಪ್ಪನ ದೂರವಾಣಿಯ ಮಾತಿನ ಅವಧಿಯನ್ನು ಕಡಿತಗೊಳಿಸಲಾಗಲೇ ಇಲ್ಲ.
ಆಗಿನ ಕಾಲದಲ್ಲಿ ಕೇವಲ ಕೆಲವು ಮನೆಗಳಲ್ಲಿ ಮಾತ್ರ ಫೋನ್ ಇರುತ್ತಿತ್ತು. ಹೀಗಾಗಿ ಅಕ್ಕಪಕ್ಕದ ಮನೆಯವರು ದೂರವಾಣಿ ಕರೆ ಮಾಡಬೇಕಾಗಿ ಬಂದಾಗ ಫೋನ್ ಇದ್ದ ಮನೆಗೆ ಹೋಗಿ ಅವರ ಫೋನನ್ನು ಬಳಸುತ್ತಿದ್ದರು. ದೂರದ ಊರಿನವರಿಗೆ ಕರೆ ಮಾಡಬೇಕಾಗಿ ಬಂದಾಗ ಕಾಲ್ ಬುಕ್ ಮಾಡಿ ಗಂಟೆಗಟ್ಟಲೆ ಕಾಯಬೇಕಾಗುತ್ತಿತ್ತು. ಇದಲ್ಲದೇ ಅಕ್ಕಪಕ್ಕದವರಿಗೆ ಕರೆ ಬಂದಾಗ ಅವರನ್ನು ಕರೆದು ವಿಷಯ ತಿಳಿಸುವ ಕೆಲಸ ಫೋನ್ ಇದ್ದವರ ಮನೆಯವರದಾಗಿತ್ತು. ಹೀಗೆ ಒಂದು ದೂರವಾಣಿ ಎನ್ನುವುದು ಅಕ್ಕಪಕ್ಕದವರನ್ನು ಒಂದಾಗಿಸುವ ಒಂದು ಬೈಂಡಿಂಗ್ ಫೋರ್ಸ್ ಆಗಿರುತ್ತಿತ್ತು.
ನಾವು ನವೋದಯದಲ್ಲಿದ್ದಾಗ ನಮ್ಮ ಮನೆಯಲ್ಲಿ ಒಂದು ಸ್ಥಿರ ದೂರವಾಣಿ ಇತ್ತು. ಅದರಿಂದಾಗಿ ನಮ್ಮ ಮನೆಯೊಂದು ಪಬ್ಲಿಕ್ ಬೂತ್ ತರಹ ಆಗಿತ್ತು. ತಿಂಗಳ ಕೊನೆಯಲ್ಲಿ ಫೋನ್ ಬಿಲ್ ನೋಡಿ ನಾವು ಹೌಹಾರುತ್ತಿದ್ದೆವು. ಯಾರ್ಯಾರೋ ಮಾಡಿದ ಕರೆಗಳಿಗೆ ಹಣ ಪಾವತಿಸುವ ಸಂಕಷ್ಟ ನಮ್ಮದ್ದಾಗಿತ್ತು.
ಮಳೆಗಾಲದಲ್ಲಿ ದೂರವಾಣಿ ಕೇವಲ ಅಲಂಕಾರಿಕ ವಸ್ತುವಾಗಿರುತ್ತಿತ್ತು. ಜೋರು ಮಳೆಯಿಂದ ಹಾಳಾದ ಟೆಲಿಫೋನ್ ಲೈನ್ ರಿಪೇರಿ ಆಗುವಾಗ ಶತಮಾನಗಳೇ ಕಳೆದ ಹಾಗೆ ಅನುಭವವಾಗುತ್ತಿತ್ತು. ಈಗಿನಷ್ಟು ಆರಾಮವಾಗಿ ಅದನ್ನು ಬಳಸಲಾಗುತ್ತಿರಲಿಲ್ಲ. ಫೋನಿನ ಅಷ್ಟೂ ಅಂಕೆಗಳನ್ನು ಎಸ್ ಟಿ ಡಿ ಕೋಡ್ ಸಹಿತ ತಿರುಗಿಸುವಾಗ ಬೆರಳು ನೋವು ಬರುತ್ತಿತ್ತು. ಈಗಿನ ಮೊಬೈಲ್ ಫೋನ್ಗಳನ್ನು ನೋಡುವಾಗ "ಅರೇ ದೂರವಾಣಿ ಸಂವಹನ ಇಷ್ಟು ಸುಲಭವೇ?!" ಎಂದು ಆಶ್ಚರ್ಯವಾಗುತ್ತದೆ. ಈಗಿನ ಮೊಬೈಲ್ ಫೋನ್ಗಳಿಗೆ ಅಗತ್ಯಕ್ಕಿಂತ ಹೆಚ್ಚಿನ ಫೀಚರ್ಸ್ ಇದ್ದರೂ ನಮ್ಮ ಹಳೆಯ ಅಲಂಕಾರ ಪ್ರಾಯವಾಗಿದ್ದ ಸ್ಥಿರ ದೂರವಾಣಿಯೊಂದಿಗಿದ್ದ ಭಾವನಾತ್ಮಕ ಎಳೆಯೊಂದು ಅದರಲ್ಲಿಲ್ಲದಿರುವ ವಾಸ್ತವ ಸತ್ಯವನ್ನು ನೀವೆಲ್ಲ ಒಪ್ಪುತ್ತೀರಲ್ಲವೆ?
135. ಶಿಕ್ಷಕರ ದಿನಾಚರಣೆ (ಸಪ್ಟಂಬರ್ 5)ಇಂದು ಶಿಕ್ಷಕರ ದಿನಾಚರಣೆ. ನನ್ನ ವೃತ್ತಿ ಬಾಂಧವರಿಗೆಲ್ಲ ನನ್ನ ಶುಭಕಾಮನೆಗಳು.
1988ರಲ್ಲಿ ಶಿಕ್ಷಕಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದ ನಾನು ಈವರೆಗೆ ನನ್ನ ವೃತ್ತಿಯನ್ನು ಹೆಮ್ಮೆ ಮತ್ತು ಗೌರವದಿಂದ ನೋಡಿದ್ದೇನೆ ಹಾಗೂ ಸ್ವೀಕರಿಸಿದ್ದೇನೆ. ಕಾಲೇಜು ಶಿಕ್ಷಣ ಮುಗಿಸಿದ ಬಿಸಿಯಲ್ಲಿ ಖಾಸಗಿ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದಾಗ ಹುಡುಕಾಟವಿತ್ತು ಹಾಗೂ ಹುಡುಗು ಮನಸ್ಸಿತ್ತು. ಮಾಡಬೇಕಾಗಿರುವ ಪಾಠಗಳಿಗೆ ನಿದ್ದೆಗೆಟ್ಟು ತಯಾರಿ ನಡೆಸಿ ಅತ್ಯುತ್ತಮವಾದದ್ದನ್ನು ಮಕ್ಕಳಿಗೆ ನೀಡಬೇಕೆಂಬ ಹುಮ್ಮಸ್ಸಿತ್ತು. ಅದು ಈಗಲೂ ಇದೆ ಬಿಡಿ ಇನ್ನೂ ಹುಡುಗಾಟಿಕೆಯ ಸ್ವಭಾವವಿದ್ದ ನನಗೆ ಮೆರಿಡಾ ಮೇಡಮ್ ರವರಂತಹ ನುರಿತ ಶಿಕ್ಷಕರ ಬೆಂಬಲ ಮತ್ತು ಮಾರ್ಗದರ್ಶನವಿತ್ತು. ನಾನೂ ಎಂತಹ ಮಕ್ಕಳನ್ನಾದರೂ ಸಂಭಾಳಿಸಿ ಪಾಠ ಮಾಡುವ ಉತ್ತಮ ಶಿಕ್ಷಕಿಯಾಗಬಲ್ಲೆ ಎನ್ನುವ ಆತ್ಮವಿಶ್ವಾಸ ನನ್ನ ಕೆಲವು ಸಹೋದ್ಯೋಗಿಗಳ ಸಹಕಾರದಿಂದ ಮೂಡಿತು. ವೃತ್ತಿ ಜೀವನದ ಪ್ರಾರಂಭದಲ್ಲಿ ಸೂಕ್ತ ವಾತಾವರಣ ಸಿಕ್ಕರೆ ವೃತ್ತಿಯಲ್ಲಿ ಸಕಾರಾತ್ಮಕ ಬೆಳವಣಿಗೆ ಸಾಧ್ಯ ಎನ್ನುವುದು ನನ್ನ ಅನುಭವದ ಪಾಠ. ಪ್ರಥಮ ವರ್ಷ ನಾನು ಕಲಿಸುವ ವಿಷಯದ ಮೇಲಿನ ಹಿಡಿತ ಪಡೆದುಕೊಳ್ಳಲು ಹಾಗೂ ಕ್ಲಾಸ್ ರೂಮ್ ಮ್ಯಾನೇಜ್ಮೆಂಟ್ ಮಾಡುವುದನ್ನು ಕಲಿಯಲು ಕೇಂದ್ರೀಕರಿಸಿಕೊಂಡೆ ಎಂದರೆ ಸುಳ್ಳಲ್ಲ. ಎಲ್ಲಿ ಒಮ್ಮೆ ನವೋದಯದ ವಸತಿಶಾಲೆಯ ಅನುಭವಕ್ಕೆ ಒಡ್ಡಿಕೊಂಡೆನೋ ಆ 24/7 ಕೆಲಸ ಶಿಕ್ಷಣ ರಂಗದ ಎಲ್ಲಾ ಆಯಾಮಗಳ ಪರಿಚಯ ಮಾಡಿಸತೊಡಗಿತು. ಕಲಿಯುವ ಮಕ್ಕಳ ಮನಸ್ಥಿತಿ, ಕಲಿಕೆಯ ಬಗೆಗಿನ ಅವರ ಮನೋಭಾವ ಇವೆಲ್ಲವೂ ನಿಧಾನವಾಗಿ ಅರ್ಥವಾಗುತ್ತಾ ಹೋಯಿತು. ಎಲ್ಲರ ಕಲಿಕಾ ಸಾಮರ್ಥ್ಯದ ವಿಭಿನ್ನತೆ ಅವರವರ ಬುದ್ಧಿಮತ್ತೆ , ಆಸಕ್ತಿ ಹಾಗೂ ಪರಿಶ್ರಮವನ್ನಾಧರಿಸಿರುವುದಲ್ಲದೆ ಶಿಕ್ಷಕರ ಧೋರಣೆಯೂ ಅವರ ಕಲಿಕೆಯ ಮೇಲೆ ಪ್ರಭಾವ ಬೀರುತ್ತದೆ ಎನ್ನುವ ಸತ್ಯ ದರ್ಶನವಾಯಿತು. ಒತ್ತಡ, ಬೆದರಿಕೆ ಎಲ್ಲವೂ ಮಕ್ಕಳ ಮೇಲೆ ಕ್ಷಣಿಕ ಪರಿಣಾಮವನ್ನು ಬೀರಬಹುದಲ್ಲದೆ ಅವರಲ್ಲಿ ಪರಿವರ್ತನೆ ತರಲಾರದು ಎನ್ನುವ ನಿತ್ಯಸತ್ಯದ ಅರಿವೂ ಆಯಿತು. ಪ್ರತಿಯೊಬ್ಬ ಮಗುವಿನ ಕಲಿಕೆಯನ್ನು ಖಚಿತಪಡಿಸಿಕೊಳ್ಳಬೇಕೆಂದರೆ ಪ್ರತಿ ಮಗುವಿನ ಅಗತ್ಯಗಳನ್ನು ಅರಿತುಕೊಳ್ಳುವ ಮನಸ್ಥಿತಿ ಪ್ರತಿ ಶಿಕ್ಷಕರಲ್ಲೂ ಇರಬೇಕು ಎನ್ನುವ ಪ್ರಸಕ್ತತೆಯ ಅರಿವಾಯಿತು. ಒಂದೊಂದೇ ವಿಷಯಗಳ ಅನಾವರಣವಾಗುತ್ತಾ, ಅರ್ಥವಾಗುತ್ತಾ ಹೋದಂತೆ ಅವುಗಳನ್ನು ಸರಿಯಾಗಿ ಸಂಭೋದಿಸಲಾಗದ ವ್ಯವಸ್ಥೆ ಹತಾಶೆಯನ್ನು ಹುಟ್ಟುಹಾಕುತ್ತಿತ್ತು. ಇವೆಲ್ಲವನ್ನೂ ಸರಿಮಾಡಲೇಬೇಕೆಂಬ ಛಲ ಮನದಾಳದಲ್ಲಿ ಉದಿಸತೊಡಗಿತ್ತು. ಆದರೆ ವಾಸ್ತವವೇ ಬೇರೆಯಾಗಿತ್ತು. ಅಂಕ ಪ್ರಧಾನ ಪದ್ಧತಿಯ ಬಗೆಗಿನ ಮನಸ್ಥಿತಿಯ ಬದಲಾವಣೆಯನ್ನು ಎಲ್ಲಾ ಸ್ಥರದಲ್ಲೂ, ಎಲ್ಲರಲ್ಲೂ ತರುವುದು ಸುಲಭದ ವಿಷಯವಾಗಿರಲಿಲ್ಲ. ಇದರೆಲ್ಲದರ ಬಗ್ಗೆ ವಿಚಾರ ಕೃಷಿ ಮಾಡುವ ಅಗತ್ಯವಿತ್ತು. ಇದು ನಿತ್ಯನಿರಂತರ ಯೋಚನೆಯಾಗಿ, ಚಿಂತನೆಯಾಗಿ ನನ್ನೊಳಗೆ ಮಂಥನ ನಡೆಯುತ್ತಿತ್ತು.
ಇಂತಹ ಚಿಂತನೆಯನ್ನಿಟ್ಟುಕೊಂಡು ಸರ್ಕಾರ ರೂಪಿಸಿರುವ ಹೊಸ ಶಿಕ್ಷಣ ನೀತಿಯನ್ನು ನಾವೆಲ್ಲರೂ ಸ್ವಾಗತಿಸಿ, ಸ್ವೀಕರಿಸಿ ಮನಃಪೂರ್ವಕವಾಗಿ ನಮ್ಮ ವೃತ್ತಿಯಲ್ಲಿ ನಮ್ಮನ್ನು ತೊಡಗಿಸಿಕೊಂಡರೆ ಅದು ನಾವು ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆಯಾಗುತ್ತದೆ ಎಂಬ ಹಾರೈಕೆಯೊಂದಿಗೆ......
134. ಅಪ್ಪನ ನೆನಪುಗಳು ಇವತ್ತು ನನ್ನ ಅಪ್ಪನ ಹುಟ್ಟುಹಬ್ಬ. ಅವರು ಬದುಕಿದ್ದಿದ್ದರೆ ಇದು ಅವರದು 90ನೇ ಹುಟ್ಟುಹಬ್ಬವಾಗಿರುತ್ತಿತ್ತು. ನನ್ನಪ್ಪ ತನ್ನ 67ನೇ ವಯಸ್ಸಿನಲ್ಲಿ ನಮ್ಮನ್ನೆಲ್ಲ ಅಗಲಿ ಹೋಗಿರುವುದು ನಮಗೆಲ್ಲರಿಗೂ ಆದ ತುಂಬಲಾರದ ನಷ್ಟ. ನಾನು ಹುಟ್ಟಿದ್ದು ಸೆಪ್ಟೆಂಬರ್ 3 ಹಾಗೂ ನನ್ನ ಅಪ್ಪನ ಹುಟ್ಟುಹಬ್ಬ ಸೆಪ್ಟೆಂಬರ್ 4ರಂದು. ನಾನು ಯಾವಾಗಲೂ ನನ್ನಪ್ಪನಿಗೆ "ನೀವು ನನಗಿಂತ ಚಿಕ್ಕವರು" ಅಂತ ಚಾಳಿಸುತ್ತಿದ್ದೆ. ನಿಜಕ್ಕೂ ನನ್ನಪ್ಪ ಎಲ್ಲಾ ವಯೋಮಾನದವರೊಡನೆಯೂ ಹೊಂದಿಕೊಳ್ಳುವ ಮನೋಭಾವದವರಾಗಿದ್ದ ಕಾರಣ ನನ್ನೀ ಮಾತು ಅವರಿಗೆ ಒಪ್ಪುತ್ತಿತ್ತು. ವಯಸ್ಸು ಆವರ ಜೀವನಸ್ಫೂರ್ತಿಗೆ ಯಾವತ್ತೂ ಧಕ್ಕೆ ತರಲೇ ಇಲ್ಲ!
ಅಪ್ಪನಾಗಿ ನನ್ನಪ್ಪ ಅವರ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದರು. ಅವರು ಮಾರ್ಗದರ್ಶಕರಾಗಿದ್ದರು, ಸ್ನೇಹಿತರಾಗಿದ್ದರು, ನಮಗೆಲ್ಲವೂ ಆಗಿದ್ದರು. ಅವರಿಗಿದ್ದ ತಾಳ್ಮೆಯನ್ನು ಅವರು ಬಹಳಷ್ಟು ಸಾರಿ ಪರೀಕ್ಷಿಸಿಕೊಳ್ಳುವ ಹಾಗೆ ನಾನು ಮಾಡುತ್ತಿದ್ದೆ. ನಾನು ಗರ್ಭಿಣಿಯಾಗಿದ್ದಾಗ ನನ್ನಪ್ಪ "ಮಗಳೇ, ನಿನಗೇನು ಬೇಕು?" ಅಂತ ಕೇಳಿದಾಗ ನಾನು ಕಿವಿಗೆ ಹಾಕುವ ಬಂಗಾರದ ದೊಡ್ಡ ರಿಂಗ್ ಒಂದನ್ನು ತಂದು ಕೊಡಿ ಎಂದಿದ್ದೆ. ಅದು ಮಳೆಗಾಲವಾಗಿತ್ತು. ನನ್ನಪ್ಪ ಘೋರ ಮಳೆಯಲ್ಲಿ ಉಡುಪಿ ಪೇಟೆಯಲ್ಲಿ ಓಡಾಡಿ ಒಂದು ರಿಂಗ್ ತಂದರು. ಆದು ನಾನೆಣಿಸಿದಷ್ಟು ದೊಡ್ಡದಾಗಿರದ ಕಾರಣ ನಾನು ಬೇಷರತ್ತಾಗಿ ಅದನ್ನು ತಿರಸ್ಕರಿಸಿ ಬಿಟ್ಟೆ. ಪಾಪ! ನನ್ನಪ್ಪ ಮಾರನೇ ದಿನ ಪುನಃ ಅದೇ ಘೋರ ಮಳೆಯಲ್ಲಿ ಉಡುಪಿ ಪೇಟೆ ಸುತ್ತಿ ನಾನು ಹೇಳಿದ ಸೈಜಿನ ರಿಂಗ್ ಒಂದನ್ನು ತಂದುಕೊಟ್ಟರು. ನನ್ನ ಒರಟು ವರ್ತನೆಯ ಬಗ್ಗೆ ಒಂದು ಮಾತೂ ಆಡಲಿಲ್ಲ. ನನಗಾಗ ನನ್ನ ವರ್ತನೆ ಅವರನ್ನು ನೋಯಿಸಿರಬಹುದೆನ್ನುವದು ಕಲ್ಪನೆಗೂ ಬಂದಿರಲಿಲ್ಲ. ಈಗ ಆ ಘಟನೆಯ ನೆನಪಾದಾಗ ನನಗೆ ನನ್ನ ಆ ವರ್ತನೆ ಅವರಿಗೆ ಎಷ್ಟು ನೋಯಿಸಿರಬಹುದು ಅನ್ನುವ ಅರಿವಾಗುತ್ತಿದೆ. ನಾನು ಚಿಕ್ಕವಳಿರುವಾಗ ಕೆಲವೊಮ್ಮೆ ಅಪ್ಪನೊಡನೆ "taken for granted" ಮನಸ್ಥಿತಿಯಲ್ಲಿ ವರ್ತಿಸಿದ್ದು ನೆನಪಾದರೆ ಈಗ ಒಂದು ರೀತಿಯ ಅಪರಾಧಿ ಮನೋಭಾವ ಮೂಡುತ್ತದೆ. ಯಾರದ್ದೇ ತಾಳ್ಮೆಯನ್ನು ಒರೆಗೆ ಹಚ್ಚುವುದು ಅಷ್ಟು ಒಳ್ಳೆಯದಲ್ಲವಲ್ವೆ?
ನಾವು ಮೂರು ಮಕ್ಕಳಲ್ಲಿ ನನ್ನಪ್ಪನ ಒಡನಾಟ ಹೆಚ್ಚಿಗಿದ್ದದ್ದು ನನ್ನ ಜೊತೆಗಾಗಿತ್ತು. ಅವರ ಜೀವನ ಸ್ಪೂರ್ತಿ, ಒಳಗೊಳ್ಳುವಿಕೆಯ ಸ್ವಭಾವ ಎಲ್ಲಾ ನನ್ನಲ್ಲೂ ಇದ್ದ ಕಾರಣ ನನ್ನ ಹಾಗೂ ನನ್ನಪ್ಪನ ಸಂಬಂಧ ಬಹಳ ಗಾಢವಾಗಿತ್ತು. ನನ್ನ ಜೀವನದ ರೋಲ್ ಮಾಡೆಲ್ ಯಾರು ಎಂದು ಕೇಳಿದರೆ ನನ್ನುತ್ತರ "ನನ್ನಪ್ಪ" ಎಂದು. ನನ್ನ ಅಪ್ಪನ ಪ್ರಭಾವ ನನ್ನ ಮೇಲೆ ಅಷ್ಟು ಇದೆ!
ಅಪ್ಪ ತೀರಿಕೊಂಡು ಇಪ್ಪತ್ಮೂರು ವರ್ಷಗಳಾದರೂ ಅವರಿದ್ದಾಗ ಹೇಳುತ್ತಿದ್ದ ಜೀವನ ಸಿದ್ಧಾಂತಗಳು ಇನ್ನೂ ನನ್ನ ನೆನಪಿನಲ್ಲಿವೆ ಹಾಗೂ ಈಗ ದೇಹದ ಕಸುವು ಕಡಿಮೆಯಾಗುತ್ತಾ ಬರುತ್ತಿರುವಾಗ ಸಂಪೂರ್ಣವಾಗಿ ಅರ್ಥವಾಗತೊಡಗುತ್ತಿದೆ. ಅಪ್ಪನಿಗಿದ್ದ ತಾಳ್ಮೆ, ಜೀವನ ಸೂಕ್ಷ್ಮಗಳು ನನ್ನಲ್ಲಿರದಿದ್ದರೂ ಅವರಲ್ಲಿದ್ದ ಜೀವನ ಪ್ರೀತಿ, ಸಕಾರಾತ್ಮಕ ಮನೋಭಾವ ನನ್ನಲ್ಲಿದೆ. ಅದರ ಬಗ್ಗೆ ನನಗೆ ಹೆಮ್ಮೆ ಇದೆ. ಅಪ್ಪ ಯಾವಾಗಲೂ ಹೇಳುತ್ತಿದ್ದ "ತಣ್ಣೀರನ್ನಾದರೂ ತಣಿಸಿ ಕುಡಿಯಬೇಕು" ಎನ್ನುವುದನ್ನು ಇನ್ನಾದರೂ ರೂಢಿಸಿಕೊಳ್ಳಬೇಕೆಂಬ ಹಂಬಲ ನನ್ನಲ್ಲಿದೆ. ಪ್ರಯತ್ನಿಸಿ ನೋಡಬೇಕು ಪ್ರತಿಕ್ರಿಯೆಗಳು:
ಜಯರಾಮ ಸೋಮಯಾಜಿ :ನನ್ನ ಮಾರ್ಗದರ್ಶಕರೂ, ಹಿತೈಷಿಗಳು ಆಗಿದ್ದರು ನನ್ನ ಅಣ್ಣಯ್ಯ. ಅಪ್ಪನ ನೆನಪುಗಳನ್ನು ಚಂದವಾಗಿ ಬರೆದಿರುವಿ ಶೋಭ...
ಸೂರ್ಯನಾರಾಯಣ ರಾವ್ :
I was born on 2nd ,Sept .If there was anybody who could remain a lifelong friend of my late father who thought nothing of speaking what he thought was right no matter it might hurt or even insult others it was your dad .To the best of my memory he was the only one such friend of my father .My dad admitted being friend of him was like making friendship with a scorpion .
ನಳಿನಿ ಸೋಮಯಾಜಿ:ನಾ ಮದುವೆಯಾದ ಮೇಲೆ ನನಗೂ ತಂದೆಯಾಗಿ ಮಾರ್ಗದರ್ಶಕರಾಗಿ ಪ್ರತಿ ಹೆಜ್ಜೆ ಇಡಲು ಕಲಿಸಿದವರು ನಿನ್ನಪ್ಪ.. ನೆನಪಿನ ಬುತ್ತಿ ಯಲಿ ಸಾಕಷ್ಟಿವೆ. ಚಂದದ ಪ್ರೀತಿಯ ಬರಹ ಶೋಭ.
ಉಷಾ ಸುರೇಶ್ :Nanna manadalavannu aritu , avaru mechchida sodaraliyannu nanage maduvemadikottavaru avare nanna Chikkappa, me like him.
133. ಪರಿಸರ - ಅಳಿಲು/ಇಣಚಿ ಅಳಿಲು/ಇಣಚಿ ನಮಗೆಲ್ಲರಿಗೂ ಪರಿಚಿತ ಪ್ರಾಣಿ. ನಮ್ಮ ಹೊಂಗಿರಣದ ಗಾರ್ಡನ್ ನಲ್ಲಿ ಮರದ ಮೇಲೆಲ್ಲ ಅವು ಪುಟಪುಟನೆ ಓಡಾಡುತ್ತಿರುವುದನ್ನು ನೋಡುವುದೇ ಚೆಂದ. ಕೆಲವೊಮ್ಮೆ ನಮ್ಮ ನಾಯಿಗಳ ಬಾಯಿಗೆ ಅವು ಸಿಕ್ಕಿ ಸತ್ತಾಗ ಬೇಸರವಾಗುತ್ತದೆ.
ಒಮ್ಮೆ ನಮ್ಮ ಕಿಟ್ಟಣ್ಣನ ಜೊತೆಗೆ ತುಮರಿಯ ಹತ್ತಿರದ ಊರಲ್ಲಿರುವ ಲೋಕಣ್ಣನ ಮನೆಗೆ ಹೋದಾಗ ಅಲ್ಲೊಂದು ಕೆಂದಳಿಲನ್ನು ನೋಡಿದ್ದೆ. ಅವರ ಕುಟುಂಬದವರೊಡನೆ ಅದರ ಒಡನಾಟ ಚೆನ್ನಾಗಿತ್ತು. ನಾನು ಅದನ್ನು ಮುಟ್ಟಿ ಖುಷಿ ಪಟ್ಟೆ. ಅಂತಹ ಕೆಂದಳಿಲನ್ನು ಸಾಕಬೇಕೆಂಬ ಆಸೆ ಮನಸ್ಸಲ್ಲಿ ಹುಟ್ಟಿದ್ದಂತೂ ನಿಜ. ಆದರೆ ನಮ್ಮ ನಾಯಿಗಳಿಂದ ಅವುಗಳನ್ನು ಕಾಪಿಡುವುದು ಕಷ್ಟ ಎಂದು ಆ ಆಸೆಯನ್ನು ಹತ್ತಿಕ್ಕಿಕೊಂಡೆ.
ಇನ್ನೊಂದು ಬಾರಿ ನಮ್ಮ ಮನೆಯ ಹತ್ತಿರದ ನೇರಳೆ ಮರಕ್ಕೆ ಕೆಂದಳಿಲಿನ ಮರಿಯೊಂದು ಬಂದಿತ್ತು. ಮರಿಯಾದರೂ ಅದರ ಸೈಜ್ ದೊಡ್ಡಕ್ಕೇ ಇತ್ತು. ಒಂದಿಷ್ಟು ಕಾಗೆಗಳು ಮರಕ್ಕೆ ಮುತ್ತಿ ಅದನ್ನು ಕುಕ್ಕಲು ಯತ್ನಿಸಿದವು. ಆ ಕಾಗೆಗಳನ್ನು ಅಲ್ಲಿಂದ ಓಡಿಸುವುದೇ ಹರಸಾಹಸದ ಕೆಲಸವಾಯಿತು. ಕೊನೆಗೂ ಆ ಕೆಂದಳಿಲು ಸುರಕ್ಷಿತವಾಗಿ ತಪ್ಪಿಸಿಕೊಳ್ಳಲು ನಾವು ಮಾಡಿದ ಪ್ರಯತ್ನ ಸಹಾಯ ಮಾಡಿತು.
ಅಳಿಲಾಗಲಿ ಕೆಂದಳಿಲಾಗಲಿ ಅವುಗಳ ದೇಹದಲ್ಲಿ ನೋಡಲು ಅತೀ ಆಕರ್ಷಕವಾಗಿರುವುದು ಅವುಗಳ ಬಾಲ. ಅಳಿಲಿನ ಮೈಮೇಲಿನ ಪಟ್ಟೆಯೂ ನೋಡಲು ಸೊಗಸು. ಕೆಂದಳಿಲು ಆಕಾರದಲ್ಲಿ ಸ್ವಲ್ಪ ದೊಡ್ಡದಾಗಿದ್ದು ಕಡುಗೆಂಪು ಬಣ್ಣ ಹಾಗೂ ಕೆನೆಯ ಬಣ್ಣದಿಂದ ಕೂಡಿರುತ್ತದೆ. ನೋಡಿದರೆ ಮುದ್ದಿಸಿಬಿಡುವ ಅನ್ನುವ ಮೋಹಕ ಸೌಂದರ್ಯ ಅದರದ್ದು.
ಸೃಷ್ಟಿ ಕ್ರಿಯೆಯೆ ವಿಚಿತ್ರ. ಅಳಿಲು ಮತ್ತು ಹೆಗ್ಗಣ ಒಂದೇ ವರ್ಗಕ್ಕೆ ಸೇರಿದವು. ಆದರೆ ಅಳಿಲಿನ ಆಹಾರ ಶೇಖರಣೆಯ ಕ್ರಿಯೆ ಸಸ್ಯ ಸೃಷ್ಟಿ ಮಾಡಿದರೆ ಹೆಗ್ಗಣದ ಆಹಾರದ ಸಂಗ್ಧಹ ಬೆಳೆ ನಾಶ ಮಾಡುತ್ತದೆ. ಅಳಿಲಿನ ಮೋಹಕ ಸೌಂದರ್ಯ ಹೆಗ್ಗಣಕ್ಕಿಲ್ಲ. ಅಳಿಲನ್ನು ಕಂಡಾಗ ಖುಷಿ ಪಡುವ ನಾವು ಹೆಗ್ಗಣವನ್ನು ಕಂಡಾಗ ಕಿರಿಕಿರಿ ಮಾಡಿಕೊಳ್ಳುತ್ತೇವೆ. ಎಲ್ಲರಿಗೂ ಸಹ್ಯವಾಗಿರಬೇಕೆಂದರೆ ಒಂದು ಮಟ್ಟಿಗಿನ ಸಕಾರಾತ್ಮಕತೆ ಎಲ್ಲರಲ್ಲೂ ಇರಬೇಕೆನ್ನುವುದನ್ನು ಇದು ಸೂಚಿಸುತ್ತಿರಬಹುದಲ್ವೆ? ಇದೇ ನಿಸರ್ಗದ ವೈಚಿತ್ರ್ಯವಲ್ಲವೆ?!
132. ನೆನಪುಗಳು - ಗೊಂಬೆ
ನನ್ನಣ್ಣನ ಮಗ ಅನಿಶ ವಾಟ್ಸಾಪ್ ನಲ್ಲಿ ನಾನು ಮೂರ್ನಾಲ್ಕು ವರ್ಷದವಳಿದ್ದಾಗ ಗೊಂಬೆ ಹಿಡಿದುಕೊಂಡಿದ್ದ ಫೋಟೋವೊಂದನ್ನು ಕಳುಹಿಸಿದ್ದ. ಅದು ನನ್ನನ್ನು ಪುನಃ ನನ್ನ ಬಾಲ್ಯಾವಸ್ಥೆಗೆ ಕರೆದೊಯ್ದಿತು.
ಅದೊಂದು ಅರ್ಧ ಅಡಿಗೂ ಕಡಿಮೆ ಇದ್ದ ರಬ್ಬರಿನಿಂದ ಮಾಡಿದ್ದ ತಿಳಿಗಂದು ಬಣ್ಣದ ಗೊಂಬೆಯಾಗಿತ್ತು. ಮೆತ್ತನೆಯ ಗೊಂಬೆಯಾಗಿತ್ತು. ಈಗಿನ ಗೊಂಬೆಗಳಷ್ಟು ವಿಶೇಷತೆಗಳು ಅದಕ್ಕೇನೂ ಇರಲಿಲ್ಲ. ಆದರೆ ನನಗದು ವಿಶೇಷವಾಗಿತ್ತು. ಅದರೊಡನೆ ನನ್ನ ಸಂಭಾಷಣೆ ಕೂಡಾ ನಡೆಯುತ್ತಿತ್ತು ನಾನು ಬಹಳಷ್ಟು ವರ್ಷ ಆ ಗೊಂಬೆಯನ್ನು ದಿನವಿಡೀ ಹಿಡಿದುಕೊಂಡಿರುತ್ತಿದ್ದೆ. ಮಲಗುವಾಗಲೂ ಅದು ನನ್ನ ಬಗಲಲ್ಲಿರಬೇಕಿತ್ತು. ಅಂತಹ ಮೋಹ ಆ ಗೊಂಬೆಯ ಬಗ್ಗೆ ನನಗಿತ್ತು. ಅದನ್ನು ಬಳಸುವುದನ್ನು ಯಾವಾಗ ಬಿಟ್ಟೆ ಅನ್ನುವುದು ನನಗೆ ನೆನಪಿಲ್ಲ. ಪ್ರಾಯಶಃ ಹೊರಾಂಗಣ ಆಟವಾಡಲು ಪ್ರಾರಂಭಿಸಿದ ಮೇಲೆ ಜೀರ್ಣಾವಸ್ಥೆಗೆ ಹೋಗಿದ್ದ ಆ ಗೊಂಬೆಯನ್ನು ನಾನು ಕೈ ಬಿಟ್ಟಿರಬಹುದು ಅಂತ ಅನಿಸುತ್ತದೆ! ಅಡುಗೆಯಾಟ, ಗೊಂಬೆಯಾಟ ಎಲ್ಲಾ ಚಿಕ್ಕವಳಿರುವಾಗ ನನ್ನ ಪ್ರೀತಿಯ ಆಟಗಳಾಗಿದ್ದವು. ಅದು ಎಷ್ಟರ ಮಟ್ಟಿಗೆಂದರೆ ನನಗೂ ನನ್ನ ತಂಗಿಗೂ ಸುಮಾರು ಏಳು ವರ್ಷಗಳ ಅಂತರವಿದ್ದು ಅವಳು ಮನೆಯಾಟ ಆಡುವಷ್ಟು ವರ್ಷ ನಾನು ವಯಸ್ಸಿನಲ್ಲಿ ದೊಡ್ಡವಳಾಗಿದ್ದರೂ ಅವಳು ಮತ್ತವಳ ಸ್ನೇಹಿತೆಯರೊಡನೆ ಮನೆಯಾಟವಾಡುತ್ತಿದ್ದೆ. ನಮ್ಮ ಮನೆಯಲ್ಲಿ ಅಡುಗೆ ಆಟದ ಒಂದು ಮರದ ಸೆಟ್ ಹಾಗೂ ಇನ್ನೊಂದು ಸ್ಟೀಲ್ ಸೆಟ್ ಇದ್ದವು. ಕಲ್ಪನೆಯ ಅಡುಗೆಯನ್ನು ಆ ಸೆಟ್ ಗಳಲ್ಲಿ ಮಾಡುವುದು ತುಂಬಾ ಗಮ್ಮತ್ತಿನ ಅನುಭವವಾಗಿತ್ತು. ಅಡುಗೆ ಆಟದ ಸೆಟ್ಟನ್ನು ಸೃಷ್ಟಿ ಮಾಡಿದವರ ಸೃಜನಶೀಲತೆಗೆ ಖಂಡಿತವಾಗಿಯೂ ಭೇಷ್ ಎನ್ನಲೇ ಬೇಕು. ಮಕ್ಕಳನ್ನು ಕ್ರಿಯಾಶೀಲರನ್ನಾಗಿಡುವ ಶಕ್ತಿ ಆ ಅಡುಗೆ ಆಟದ ಸೆಟ್ಟಿಗಿದೆ.
ಬಹಳಷ್ಟು ಜನ ಎಷ್ಟೇ ವಯಸ್ಸಾಗಿದ್ದರೂ ತಮ್ಮ ಬಾಲ್ಯದ ಆಟಿಕೆಗಳನ್ನು ಇಟ್ಟುಕೊಂಡಿರುತ್ತಾರೆ. ಅದೇನು ಮೌಲ್ಯಯುತವಾದ ವಸ್ತುವಲ್ಲದಿದ್ದರೂ ಅದರೊಡನೆಯ ನೆನಪುಗಳು ಅಮೂಲ್ಯವಾದವುಗಳು. ಪ್ರತಿ ಆಟಿಕೆಗೂ ಒಂದು ರೆಲೆವೆನ್ಸ್ ಅಥವಾ ಪ್ರಸಕ್ತತೆ ಇರುತ್ತದೆ. ಅದನ್ನು ಬೇರೆ ಯಾವುದೂ ರಿಪ್ಲೇಸ್ ಮಾಡಲಾಗುವುದಿಲ್ಲ. ಆ ಆಟಿಕೆಗಳಿಂದ ಪ್ರಾರಂಭವಾಗುವ ನಮ್ಮ ಬದುಕಿನ ಆಟಗಳು ನಂತರ ವಿವಿಧ ಸ್ತರಗಳಲ್ಲಿ ನಮ್ಮನ್ನಾಡಿಸುತ್ತಾ ಬರುವುದು ನಿಜವಲ್ಲವೆ?
131.ನೆನಪುಗಳು - ನವೋದಯ ಶಾಲೆ
ರಾತ್ರಿ ಊಟ ಮಾಡುತ್ತಾ ಕಥೆ ಹೊಡೆಯುವಾಗ ನನ್ನ ಮಗಳು ನವೋದಯದಲ್ಲಿ ಯಾವುದೋ ನಾಟಕಕ್ಕೆ ಭೂತದ ಪಾತ್ರ ಮಾಡಿದ್ದ ಹುಡುಗಿಯ ಮುಖಕ್ಕೆ ನಾನು ದೋಸೆ ಹಿಟ್ಟು ಹಚ್ಚಿ ಭೂತದ ಲುಕ್ ಭರಿಸಿದ ಬಗ್ಗೆ ನೆನಪಿಸಿಕೊಂಡು ನಕ್ಕಳು. ಆಗ ನನಗೆ ಅಲ್ಲಿ ರೂಢಿಯಲ್ಲಿದ್ದ ಹೌಸ್ ವೈಸ್ ಕಾಂಪಿಟೇಶನ್ ಗೆ ನಾವು ಹೌಸ್ ಮಿಸ್ಟ್ರೆಸ್/ಮಾಸ್ಟರ್ ಗಳು ಮಕ್ಕಳಿಗಿಂತಲೂ ಹೆಚ್ಚು ಉಮೇದು ತೋರಿಸಿ ತೊಡಗಿಕೊಳ್ಳುತ್ತಿದ್ದದ್ದು ನೆನಪಿಗೆ ಬಂದಿತು.
ನವೋದಯದಲ್ಲಿ ಹೌಸ್ ಸಿಸ್ಟಂ ಇತ್ತು. ಈಗಲೂ ಇದೆ. ಆ ಹೌಸ್ ಗಳ ನಡುವೆ ಹಲವಾರು ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಬಂಧಿ ಸ್ಪರ್ಧೆಗಳು ನಡೆಯುತ್ತಿದ್ದವು. ಯಾವ ಹೌಸ್ ಗೆ ಟೋಟಲ್ ಪಾಯಿಂಟ್ ಜಾಸ್ತಿ ಬರುತ್ತದೋ ಅವರಿಗೆ ಹೌಸ್ ಕಪ್ ಸಿಗುತ್ತಿತ್ತು. ಈ ಎಲ್ಲಾ ಸ್ಪರ್ಧೆಗಳು ನಿಗದಿತ ದಿನಗಳಲ್ಲಿ ಮಧ್ಯಾಹ್ನ ಮೂರು ಗಂಟೆಗೆ ಎಂ.ಪಿ. ಹಾಲ್ ನಲ್ಲಿ ಜರುಗುತ್ತಿದ್ದವು. ಮಕ್ಕಳನ್ನು ಸ್ಪರ್ಧೆಗೆ ತಯಾರಿ ಮಾಡುವ ಜವಾಬ್ದಾರಿ ಆಯಾಯ ಹೌಸ್ ಮಾಸ್ಟರ್/ಮಿಸ್ಟ್ರೆಸ್ ರವರದ್ದಾಗಿತ್ತು.
ಅದರಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದ ಸ್ಪರ್ಧೆ ನಾಟಕ ಸ್ಪರ್ಧೆ. ಕೆಲವು ಟೀಚರ್ಸ್ ಈ ಸ್ಪರ್ಧೆಗಾಗಿ ಅವರುಗಳೇ ನಾಟಕ ಬರೆದದ್ದೂ ಇದೆ. ಅಂತಹ ಸ್ಪಿರಿಟ್ ನಾಟಕ ಸ್ಪರ್ಧೆಯ ಸಂಬಂಧಿ ನಮ್ಮೆಲ್ಲರಲ್ಲೂ ಇತ್ತು. ನಾಟಕ ನಿರ್ದೇಶನದ ಗಂಧಗಾಳಿ ಇಲ್ಲದ ನಾವು ದೊಡ್ಡ ನಿರ್ದೇಶಕರಾಗುತ್ತಿದ್ದೆವು ನಾಟಕ ಮಾಡುವ - ಮಾಡಿಸುವ ಪ್ರಕ್ರಿಯೆಯೇ ಚೆಂದ. ಮಕ್ಕಳಂತೂ ನಾಟಕ ಕಲಿಕೆಯಲ್ಲಿ ಅಪಾರ ಆಸಕ್ತಿ ತೋರಿಸುತ್ತಿದ್ದರು. ನಾಟಕ ತಯಾರಿಯ ಆ ಹತ್ತ್ಹದಿನೈದು ದಿವಸಗಳು ಬಹಳ ಒತ್ತಡಭರಿತ ಖುಷಿಯ ದಿವಸಗಳಾಗಿದ್ದವು. ನಮ್ಮೆಲ್ಲರ ಸೃಜನಾತ್ಮಕತೆಯನ್ನು ಒರೆಗೆ ಹಚ್ಚುವ ಅವಕಾಶ ಇದಾಗಿತ್ತು. ಸ್ಪರ್ಧೆಯ ನಂತರ ಸೋಲು ಗೆಲುವಿನಾಧರಿತ ಮನಸ್ಥಿತಿಯಲ್ಲಿ ಪುನಃ ನಿತ್ಯದ ದಿನಚರಿಗೆ ಎಲ್ಲರೂ ಮರಳುತ್ತಿದ್ದೆವು. ನಾಟಕದ ಯಾವುದೇ ಕಾಸ್ಟ್ಯೂಮ್ ಅಥವಾ ಮೇಕಪ್ ಗೆ ಹಣ ಕೊಡದ ಕಾರಣ ಅಗತ್ಯಗನುಗುಣವಾಗಿ ನಮ್ಮ ನಮ್ಮ ಮನೆಗಳಲ್ಲಿರುವ ದಿರಿಸುಗಳು ಕಾಸ್ಟ್ಯೂಮ್ ಆಗುತ್ತಿದ್ದವು ಹಾಗೂ ಪೌಡರ್, ಹಿಟ್ಟುಗಳೇ ಮಕ್ಕಳಿಗೆ ಮೇಕಪ್ ಸಾಮಗ್ರಿಗಳಾಗುತ್ತಿದ್ದವು. ಏನೇ ಮಾಡಿದರೂ ಅದರಲ್ಲಿ ಒಂದು ರೀತಿಯ ವಿಭಿನ್ನತೆ ತರುವ ಪ್ರಯತ್ನ ಸದಾ ನಡೆಯುತ್ತಿತ್ತು.
ನಮಗೆ ಪಾಠ ಪ್ರವಚನ ಮಾಡುವುದರ ಜೊತೆ ಜೊತೆಗೆ ನಿರ್ವಹಿಸಲು ಹತ್ತು ಹಲವಾರು ಜವಾಬ್ದಾರಿಗಳಿದ್ದವು. ಹೀಗಾಗಿ ನಾವು ನವೋದಯದಲ್ಲಿ ಬರೀ ಸಿಲೆಬಸ್ ಪೂರ್ಣಗೊಳಿಸುವ ಶಿಕ್ಷಕರಾಗದೆ ಮಕ್ಕಳ ಸರ್ವತೋಮುಖ ಬೆಳವಣಿಗೆಗಾಗಿ ಎಲ್ಲಾ ಪ್ರಾಕಾರಗಳಲ್ಲೂ ತೊಡಗಿಸಿಕೊಂಡದ್ದು ಮಕ್ಕಳೊಡನೆ ನಾವು ಬೆಳೆಯಲು ಸಹಾಯಕವಾದದ್ದಂತೂ ನಿಜ!!
130. ಹೊಂಗಿರಣ - ನೆನಪುಗಳು ನಾವು ಹೊಂಗಿರಣ ಪ್ರಾರಂಭಿಸಿದಾಗ ಬಹಳಷ್ಟು ಜನ "ನೀವೇಕೆ ಸರಕಾರಿ ಕೆಲಸವನ್ನು ಬಿಟ್ಟು ನಿಮ್ಮಗಳದೇ ಶಾಲೆಯನ್ನು ಪ್ರಾರಂಭಿಸುವಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದೀರಿ?" ಅಂತ ಪ್ರಶ್ನಿಸಿದ್ದರು. ನಾವು ಶಾಲೆ ಪ್ರಾರಂಭಿಸಿದ ನಮ್ಮ ಉದ್ದೇಶದ ಬಗ್ಗೆ ಸ್ಪಷ್ಟನೆ ನೀಡಿದರೂ ಅವರೆಲ್ಲ ಒಪ್ಪಿಕೊಳ್ಳಲು ತಯಾರಿರಲಿಲ್ಲ. ಹೀಗಾಗಿ ಸ್ಪಷ್ಟನೆ ಕೊಡುವ ಪ್ರಯತ್ನ ಬಿಟ್ಟು ಬಿಟ್ಟೆವು. ಆದರೆ ನಿಜಕ್ಕೂ ಇದು ಉತ್ತರಿಸಬೇಕಾದ ವಿಷಯವೇ ತಾನೇ? ನಮ್ಮನ್ನು ಇಂತಹ ಕೈಂಕರ್ಯದಲ್ಲಿ ತೊಡಗಿಕೊಳ್ಳುವಂತೆ ಮಾಡಿದ್ದು ಶಿಕ್ಷಕರಾಗಿ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಮೊದಲ 15 ವರ್ಷಗಳ ಅನುಭವ. ಅದು ನಮಗೆ ಮಕ್ಕಳನ್ನು ಬಹಳ ಹತ್ತಿರದಿಂದ ನೋಡುವ ಅವಕಾಶವನ್ನು ಕೊಟ್ಟಿತು. ಕಲಿಕೆ - ಕಲಿಸುವಿಕೆಯ ಬಗ್ಗೆ ಗಾಢವಾದ ಅನುಭವಪೂರ್ವಕವಾದ ಚಿಂತನೆಯನ್ನು ಹುಟ್ಟಿಸಿತು. ಬರೀ ಸಿಲೆಬಸ್ ನ್ನು ಪೂರ್ಣಗೊಳಿಸುವುದರ ಹೊರತಾಗಿ ಇನ್ನೂ ಬಹಳಷ್ಟು ಅಂಶಗಳು ಈ ಕಲಿಕಾ ಪ್ರಕ್ರಿಯೆಯಲ್ಲಿವೆ ಎನ್ನುವ ಅರಿವು ಹುಟ್ಟಿತು. ಶಿಕ್ಷಕರಾಗಿ ನಾವೇನೇ ಕಲಿಸಲಿ ಅದನ್ನು ಸ್ವೀಕರಿಸುವ ಮನಸ್ಥಿತಿಯಲ್ಲಿ ಮಗುವಿದೆಯೇ ಎನ್ನುವ ಸೂಕ್ಷ್ಮ ವಿಷಯವನ್ನು ನಾವು ಗಮನಿಸಬೇಕಾದ ಅಗತ್ಯತೆಯ ಅರಿವಾದದ್ದು ಆಗಲೇ. "ನಾನು ಕಲಿಸಿದ್ದನ್ನು ನೀನು ಕಲಿಯಬೇಕು" ಎಂಬ ಪೊಳ್ಳು ನಿರೀಕ್ಷೆಯ ಹೊರ ಬಂದು ಯೋಚಿಸುವ ಅಗತ್ಯದ ಹೊಳಹು ಸಿಕ್ಕಿದ್ದು ಆಗಲೇ. ಮಗು ಒಂದು ಸಾಮಾಗ್ರಿಯಲ್ಲ; ತನ್ನದೇ ಆದ ತುಡಿತವಿರುವ ಜೀವ ಎನ್ನುವುದನ್ನು ಶಿಕ್ಷಕರಾಗಿ ನಾವು ಗಮನಿಸಲೇ ಬೇಕಾದ ಅಗತ್ಯತೆಯ ತಿಳುವಳಿಕೆ ಮೂಡಿದ್ದು ಆಗಲೇ. ಮಗು ಬರೀ ಪುಸ್ತಕದ ಬದನೆಕಾಯಿಯಾಗದೆ ಅನುಭವದ ಮೂಸೆಯೊಳಗಿಂದ ಕಲಿತರೆ ಅದು ಗಟ್ಟಿಯಾದ ಕಲಿಕೆಯಾಗುತ್ತದೆ ಎಂದು ಅನಿಸಿದ್ದು ಆಗಲೇ.
ಆದರೆ ನಮ್ಮ ಪ್ರಸ್ತುತ ಶಿಕ್ಷಣ ವ್ಯವಸ್ಥೆ ಈ ಅಂಶಗಳನ್ನು ಗಮನಿಸಿದೆಯೆ ಎಂಬ ಪ್ರಶ್ನೆ ಬಂದಾಗ ಸಿಗುವ ಉತ್ತರ 'ಇಲ್ಲ' ಎಂದು. ಹಾಗಾದರೆ ಬದಲಾವಣೆಯ ಹರಿಕಾರರಾಗುವವರು ಯಾರು ಎಂದಾಗ ಪುನಃ ಸಿಕ್ಕ ಉತ್ತರ "ಯಾರೂ ಇಲ್ಲ" ಎಂದು. ಹೀಗಾಗಿ ಈ ಎಲ್ಲಾ ಅಂಶಗಳಿಗೆ ಉತ್ತರವನ್ನು ಕಂಡುಕೊಳ್ಳುವ ಚಿಂತನೆಯಿಂದ ಪ್ರಾರಂಭವಾದದ್ದು ಹೊಂಗಿರಣ.
ಈ ಸವಾಲುಗಳಿಗೆ ಸಿದ್ಧ ಮಾದರಿ ಪರಿಹಾರಗಳು ಸಿಗುವುದಿಲ್ಲ ಎನ್ನುವ ಅರಿವಿದ್ದರೂ ಹೊಂಗಿರಣವನ್ನು ಶಿಶು ಸ್ನೇಹಿ ಶಾಲೆಯನ್ನಾಗಿ ಮಾಡುವ ಸತತ ಪ್ರಯತ್ನ ನಮ್ಮದಾಗಿದೆ. ಕಲಿಕೆ - ಕಲಿಸುವಿಕೆಯನ್ನು ಸಮ್ಮಿಳಿತಗೊಳಿಸುವ ಪ್ರಕ್ರಿಯೆಯಲ್ಲಿ ನಾವಿದ್ದೇವೆ. ಪರಿಸ್ಥಿತಿಯ ಅಗತ್ಯಕ್ಕೆ ಒಗ್ಗಿಕೊಂಡು ಅಗತ್ಯವಿರುವ ಬದಲಾವಣೆಗಳನ್ನು ತಂದುಕೊಳ್ಳುತ್ತಾ ನಮ್ಮ ಕಲಿಕಾ ಪದ್ಧತಿಗಳನ್ನು ಪರಿಷ್ಕರಿಸಿಕೊಳ್ಳುವ ನಮ್ಯತೆ ಹೊಂಗಿರಣದಲ್ಲಿದೆ.
ಯಾವುದೇ ವಾಣಿಜ್ಯೀಕರಣದ ಉದ್ದೇಶವಿಲ್ಲದೆ ನಮ್ಮ ಅನುಭವಮುಖೀ ಸವಾಲುಗಳಿಗೆ ಉತ್ತರ ಕಂಡುಕೊಳ್ಳುತ್ತಾ ಹೊಂಗಿರಣ ಬೆಳೆಯುತ್ತಿರುವುದು ನಾವು ನಮ್ಮ "ಕನಸಿನ ಶಾಲೆ" ಪ್ರಾರಂಭಿಸಿದ ಉದ್ದೇಶದ ಸಾರ್ಥಕ್ಯದ ಸೂಚಕ ಅಂದರೆ ತಪ್ಪಾಗಲಾರದು!
129. ನೆನಪುಗಳು - ಚಾರಟೆ ಕೆಲವು ದಿನ ಬರೆಯಲು ಕುಳಿತಾಗ ಏನೂ ವಿಷಯಗಳಿಲ್ಲ ಅಂತ ಆನಿಸಿ ತಲೆ ಖಾಲಿಯಾದ ಹಾಗೆ ಆಗುತ್ತದೆ. ಹಾಗೆಯೇ ವಿಷಯಾವಲೋಕನ ಮಾಡತೊಡಗಿದಾಗ ಒಂದೊಂದೇ ವಿಷಯಗಳು ಗೋಚರವಾಗತೊಡಗುತ್ತವೆ. ಇವತ್ತೂ ಕೂಡ ಖಾಲಿ ತಲೆಯಲ್ಲಿ ಕುಳಿತು ಯೋಚಿಸತೊಡಗಿದಾಗ ಕಣ್ಣ ಮುಂದೆ ಬಂದದ್ದು ಚಾರಟೆ ಹುಳ. ನಾವು ಸಣ್ಣವರಿದ್ದಾಗ ಹರಿದಾಡುತ್ತಿದ್ದ ಚಾರಟೆಯನ್ನು ಮುಟ್ಟಿ ಅದು ಚಕ್ಕುಲಿಯಂತೆ ಸುತ್ತಿಕೊಳ್ಳುವುದನ್ನು ನೋಡಿ ಏನೋ ಮಹಾ ಸಾಧಿಸಿದ ಹಾಗೆ ಕುಣಿದು ಕುಪ್ಪಳಿಸುತ್ತಿದ್ದೆವು. ಅದು ಹಾಗೆ ಸುತ್ತಿಕೊಳ್ಳಲು ನಮ್ಮ ಪೌರುಷವೇ ಕಾರಣ ಎಂಬ ಒಣ ಹಮ್ಮು ನಮ್ಮಲ್ಲಿ ಇರುತ್ತಿತ್ತು.
ಮಕ್ಕಳ ಲೋಕವೇ ಒಂದು ಅದ್ಭುತ! ಅವರಿಗೆ ಖುಷಿ ಪಡಲು ಸಣ್ಣ ಸಣ್ಣ ವಿಷಯಗಳು ಸಾಕು. ಅವರ ವಿಷಯ ವಿಶ್ಲೇಷಣೆ ಕೂಡಾ ರೋಚಕವಾಗಿರುತ್ತದೆ. ವಾಸ್ತವಕ್ಕೆ ದೂರವಾಗಿರುವ ಅವರ ಕಲ್ಪನೆಗಳು ಅವರು ನಂಬಿಕೊಂಡ ಸತ್ಯವಾಗಿರುತ್ತದೆ. ಹೀಗಾಗಿ ಮಕ್ಕಳು ಯಾವುದೇ ಭಯ - ಆತಂಕ ಇಲ್ಲದೆ ತಮಗನಿಸಿದ್ದನ್ನು ಹೇಳುತ್ತಾರೆ - ತಮಗೆ ಕಂಡದ್ದನ್ನು ಮಾಡುತ್ತಾರೆ. ಇಂತಹ ಮಕ್ಕಳ ಲೋಕದ ಸೋಜಿಗದ ವಸ್ತು ಈ ಚಾರಟೆ.
ನಾನು ಎರಡು ವಿಧವಾದ ಚಾರಟೆಯನ್ನು ನೋಡಿದ್ದೇನೆ - ಒಂದು ಹದವಾದ ಸೈಜಿನದ್ದು, ಇನ್ನೊಂದು ಸ್ವಲ್ಪ ದೊಡ್ಡದು. ಸಣ್ಣ ಸೈಜಿನ ಚಾರಟೆ ಸ್ವಲ್ಪ ಮೆರೂನ್ ಬಣ್ಣದ್ದಾಗಿರುತ್ತದೆ. ದೊಡ್ಡ ಚಾರಟೆ ಸ್ವಲ್ಪ ಬ್ರೌನಿಶ್ ಇರುತ್ತದೆ. ಕೆಲವು ದೊಡ್ಡ ಚಾರಟೆಗಳ ಮೇಲೆ ಪಟ್ಟೆ ಕೂಡಾ ಇರುತ್ತದೆ. ನಾವು ಚಿಕ್ಕವರಿರುವಾಗ ಅವುಗಳಿಗೆಷ್ಟು ಕಾಲುಗಳಿರಬಹುದು ಅನ್ನುವುದೊಂದು ದೊಡ್ಡ ಸವಾಲಾಗಿತ್ತು. ಅವು ಚಕ್ಕುಲಿಯಂತೆ ಹೇಗೆ ಸುತ್ತಿಕೊಳ್ಳುತ್ತವೆ ಅನ್ನುವುದು ಯಕ್ಷ ಪ್ರಶ್ನೆಯಾಗಿತ್ತು. ಆಗ ನಮಗೆ ಪ್ರಶ್ನೆಗಳು ಬಹಳಷ್ಟು ಹುಟ್ಟಿಕೊಳ್ಳುತ್ತಿದ್ದರೂ ಉತ್ತರ ಬೇಕೇ ಬೇಕೆನ್ನುವ ಅಪೇಕ್ಷೆ ಏನೂ ಇರಲಿಲ್ಲ. ಉತ್ತರ ಸಿಕ್ಕಲ್ಲಿ ಖುಷಿಯಾಗುತ್ತಿತ್ತಷ್ಟೆ!
ಒತ್ತಡರಹಿತ ವಾತಾವರಣವಿದ್ದ ನಮ್ಮ ಬಾಲ್ಯಕಾಲ ನಮ್ಮಲ್ಲಿ ಅನ್ವೇಷಣೆಯ ಗುಣವನ್ನು ಬೆಳೆಯಲು ಅವಕಾಶ ಮಾಡಿಕೊಟ್ಟಿತ್ತು. ಚಾರಟೆ ಮಾತ್ರವಲ್ಲ ಇನ್ನೂ ಹತ್ತಾರು ರೀತಿಯ ಹುಳು ಹುಪ್ಪಟೆಗಳನ್ನು ನಾವು ತಲಾಶ್ ಮಾಡಿತ್ತು. ಅದು ವಿವಿಧ ರೀತಿಯ ಚೇಳುಗಳಾಗಿರಬಹುದು, ನಾಮರಹಿತ ಹುಳುಗಳಾಗಿರಬಹುದು, ಗೋಸುಂಬೆ, ಎರಣೆ, ಎರಡು ತಲೆ ಹಾವು, ಹಸಿರು ಹಾವು, ಕಪ್ಪೆ, ಮರಗಪ್ಪೆ ಆಗಿರಬಹುದು. ಹೀಗೆ ಬರೆಯುತ್ತಾ ಹೋದರೆ ಪಟ್ಟಿ ಉದ್ದವಾಗುತ್ತದೆ. ಅದೊಂದು ರೀತಿಯ ವಿಸ್ಮಯ ಹುಟ್ಟಿಸುವ ಲೋಕವಾಗಿತ್ತು. ನಮ್ಮನ್ನು ಮನೆಯೊಳಗೇ ಕಟ್ಟಿ ಹಾಕದೆ ನಮ್ಮ ಜವಾಬ್ದಾರಿಯ ಅರಿವು ಮೂಡಿಸಿ ನಮ್ಮನ್ನು ಹೊರ ಪ್ರಪಂಚಕ್ಕೆ ತೆರೆದುಕೊಳ್ಳಲು ಅವಕಾಶ ನೀಡಿದ ನಮ್ಮ ಹಿರಿಯರಿಗೆ ನಾವು ಕೃತಜ್ಞತೆ ಸಲ್ಲಿಸಲೇ ಬೇಕು. ಇಲ್ಲವಾದಲ್ಲಿ ನಿಸರ್ಗದೊಡನಾಟವೆನ್ನುವುದು ಇಲ್ಲವಾಗಿ ನಾವು ಷೋಕೇಸಿನ ಬೊಂಬೆಗಳಾಗುತ್ತಿದ್ದೆವೇನೋ?
128. ನೆನಪುಗಳು - ನವಿಲು ಗರಿ ನಾವು ಚಿಕ್ಕವರಿದ್ದಾಗ ನಮ್ಮ ಪುಸ್ತಕದ ಪುಟಗಳ ಮಧ್ಯೆ ನವಿಲು ಗರಿ, ಹಕ್ಕಿಯ ಪುಕ್ಕ ಹಾಗೂ ಚಟ್ ಪಟೆ ಎಲೆಗಳನ್ನು ಇಡುತ್ತಿದ್ದೆವು. ನವಿಲುಗರಿ ಮರಿ ಹಾಕುತ್ತದೆ ಅಂದರೆ ಇನ್ನೊಂದು ಗರಿಯನ್ನು ಹುಟ್ಟಿಸುತ್ತದೆ ಎಂದು ಬಾಯ್ಬಿಟ್ಟು ಕಾಯುತ್ತಿದ್ದೆವು. "ಕಾಯುವಿಕೆಗಿಂತ ತಪವು ಇಲ್ಲ" ಎಂದು ಕಾದು ತಪಸ್ಸು ಮಾಡಿದ್ದಾಯಿತೇ ಹೊರತು ಇನ್ನೊಂದು ಗರಿ ಹುಟ್ಟಲೇ ಇಲ್ಲ. ಇಂತಹುದನ್ನೆಲ್ಲ ಕಣ್ಮುಚ್ಚಿ ನಂಬುವ ಅಂತಹ ಮುಗ್ಧತೆ ಇದ್ದ ವಯಸ್ಸದು. ಪ್ರತಿದಿನ ಪುಸ್ತಕವನ್ನು ಬಿಡಿಸಿ "ಇನ್ನೊಂದು ಗರಿ ಹುಟ್ಟಿತೇ" ಎಂದು ಕಾತುರದಿಂದ ನೋಡುತ್ತಿದ್ದ ಆ ಘಳಿಗೆಗಳು ಇನ್ನೂ ನೆನಪಿನಲ್ಲಿವೆ.
ವಿವಿಧ ಬಣ್ಣಗಳ ಹಕ್ಕಿಪುಕ್ಕಗಳನ್ನು ಒಟ್ಟು ಮಾಡಿ, ಪ್ರತಿಯೊಬ್ಬರು ಒಟ್ಟು ಮಾಡಿದ್ದನ್ನು ರಾಶಿ ಮಾಡಿ ಆ ಬಣ್ಣಗಳ ಬಗ್ಗೆ ಮಾತನಾಡುವುದು, ಅದು ಯಾವ ಹಕ್ಕಿಯ ಗರಿಯಾಗಿರಬಹುದೆಂಬುವುನ್ನು ಊಹಿಸುವುದು ಇನ್ನೊಂದು ಕಾಲಕ್ಷೇಪದ ಕಾರ್ಯವಾಗಿತ್ತು. ಇದು ನಮ್ಮ ತಲೆಗೆ ಕೆಲಸ ಕೊಟ್ಟು ಹೊಸ ಯೋಚನೆಗಳನ್ನು ಹುಟ್ಟು ಹಾಕುತ್ತಿತ್ತು. ಅಷ್ಟು ಹೊತ್ತು ನಾವು ಬಣ್ಣದ ಲೋಕದೊಳಗೆ ಮುಳುಗಿ ಹೋಗಿ ಬಿಡುತ್ತಿದ್ದೆವು. ಹಕ್ಕಿಗಳ ಗರಿಗಳು ಕೂಡಾ ನಮ್ಮನ್ನು ಸೆಳೆದು ಹಿಡಿದಿಡುತ್ತಿದ್ದ ಕಾಲವದು!
ಚಟ್ ಪಟೆ ಎಲೆ ಮಾತ್ರ ನಮ್ಮ ನಿರೀಕ್ಷೆಯನ್ನು ಯಾವತ್ತೂ ಹುಸಿಗೊಳಿಸಲಿಲ್ಲ. ಆ ಎಲೆಗಳು ಪುಸ್ತಕದೊಳಗಿಟ್ಟ ಕೆಲವೇ ದಿನಗಳಲ್ಲಿ ಬೇರೊಡೆಯುತ್ತಿದ್ದವು. ಅಲ್ಲಿಯೇ ಇನ್ನೊಂದು ಎಲೆ ಚಿಗುರಲು ಶುರುವಾಗುತ್ತಿತ್ತು. ಯಾವ ಶಿಕ್ಷಕರ ಸಹಾಯವಿಲ್ಲದೇ ನಾವು ನಮ್ಮಷ್ಟಕ್ಕೆ ಆ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೆವು. ನಮಗೆ ಅದರ ಹಿಂದಿನ ವೈಜ್ಞಾನಿಕ ಸತ್ಯ ಅಷ್ಟು ಮುಖ್ಯವಾಗಿರಲಿಲ್ಲ. ಅದು ಬೇರು ಬಿಟ್ಟು ಎಲೆ ಹುಟ್ಟುವುದು ನಮಗೆ ಸೋಜಿಗದ ವಿಷಯವಾಗಿತ್ತು. ಯಾರ ಎಲೆ ಎಷ್ಟು ಬೇಗ ಬೇರು ಬಿಡುತ್ತದೆ ಎನ್ನುವ ಸ್ಪರ್ಧೆ ಹಾಗೂ ಕುತೂಹಲ ನಮ್ಮೊಳಗಿರುತ್ತಿತ್ತು.
ಇವೆಲ್ಲ ಎಷ್ಟು ಚೆಂದವಲ್ಲವೆ? ಆ ಮುಗ್ಧತೆ, ವಯೋ ಸಹಜ ಕುತೂಹಲ, ಅದರೊಳಗಿನ ತೊಡಗಿಕೊಳ್ಳುವಿಕೆ ಒಂದು ರೀತಿಯ ಆಹ್ಲಾದಕರ ಅನುಭವವನ್ನು ಕೊಡುತ್ತಿದ್ದದ್ದಂತೂ ಸತ್ಯ. ಇಂತಹ ಅನೇಕ ರೋಚಕ ಸತ್ಯಗಳು ನಮ್ಮ ಬಾಲ್ಯದ ಮೌಲ್ಯವನ್ನು ಹೆಚ್ಚಿಸಿರುವುದು ಎಲ್ಲರೂ ಒಪ್ಪುವ ವಿಷಯವೇ ತಾನೆ?
127. ನೆನಪುಗಳು - ಸ್ಲೇಟು ಕಡ್ಡಿ ನಾವೆಲ್ಲ ಪ್ರಾಥಮಿಕ ಶಾಲೆಯಲ್ಲಿ ಸ್ಲೇಟಿನಲ್ಲಿ ಬರೆಯುತ್ತಿದ್ದ ಕಾಲದವರು. ಅದರ ಮೇಲೆ ಬರೆಯಲು ಬೆಣ್ಣೆ ಕಡ್ಡಿಯನ್ನು ಬಳಸುತ್ತಿತ್ತು. ಸ್ಲೇಟಿನಲ್ಲಿ ಬರೆಯುವ ಖುಷಿಯೇ ಬೇರೆ. ಅದರಲ್ಲಿ ಬರೆದದ್ದನ್ನು ಅಳಿಸಲು ಸಣ್ಣ ತುಂಡು ಬಟ್ಟೆ ಯಾವಾಗಲೂ ಕೈಚೀಲದಲ್ಲಿ ಇರುತ್ತಿತ್ತು. ಕೆಳಗೆ ಬಿದ್ದರೆ ಒಡೆದು ಹೋಗುತ್ತಿದ್ದ ಸ್ಲೇಟುಗಳವು. ಮೆಟಲ್ ಸ್ಲೇಟುಗಳು ಆಗಿನ್ನೂ ಬಂದಿರಲಿಲ್ಲ. ಕರಿ ಸ್ಲೇಟಿಗೆ ಮರದ ಚೌಕಟ್ಟು ಇರುತ್ತಿತ್ತು. ನಮ್ಮ ಶಾಲೆಗೆ ತೆಗೆದುಕೊಂಡು ಹೋಗುವ ಬಟ್ಟೆಯ ಕೈಚೀಲದಲ್ಲಿ ಪಠ್ಯಪುಸ್ತಕದೊಡನೆ ಸ್ಲೇಟು ಮತ್ತು ಕಡ್ಡಿತುಂಡು ಬಿಟ್ಟರೆ ಮತ್ಯಾವ ಪುಸ್ತಕಗಳು ಇರುತ್ತಿರಲಿಲ್ಲ. ಯಾವುದೇ ರೀತಿಯ 'ಹೊರೆ' ಇಲ್ಲದ ಶಿಕ್ಷಣ ನಮ್ಮ ಕಾಲದ್ದು!
ಮಳೆಗಾಲದಲ್ಲಿ ಸ್ಲೇಟು ಒರೆಸಲು ಮಾಡಿನ ನೀರಿಗೆ ಸ್ಲೇಟನ್ನು ಹಿಡಿದು ನೀರಾಟವಾಡುತ್ತಿದ್ದೆವು. ಮಳೆ ಇಲ್ಲದಿದ್ದಾಗ ನೀರು ತುಂಬಿಕೊಂಡಂತಿರುವ ಕಾಟು ಗಿಡದಿಂದ ಸ್ಲೇಟನ್ನು ಉಜ್ಜುತ್ತಿದ್ದೆವು. ಅದು ನೋಡಲು ಸೋಣೆ ಹೂವಿನ ಗಿಡದಂತೆ ಇರುತ್ತಿತ್ತು. ಅದರಲ್ಲಿ ತಿಳಿಗೆಂಪು ಹಾಗೂ ಹಸಿರು ಕಾಂಡದ ಗಿಡಗಳಿರುತ್ತಿದ್ದವು. ಅವುಗಳಿಗೆ ಒಂದು ಒಳ್ಳೆಯ ಸೌಮ್ಯವಾದ ಸುಗಂಧವಿರುತ್ತಿತ್ತು. ಆ ಗಿಡವನ್ನು ಸ್ಲೇಟಿಗೆ ತಿಕ್ಕಿದಾಗ ಅದು ನೀರನ್ನು ಬಿಡುತ್ತಿತ್ತು. ನಮಗೆ ಶಾಲಾ ಕೊಠಡಿಯ ಹೊರಗೆ ಈ ಗಿಡಗಳನ್ನು ಹುಡುಕಿ ಸ್ಲೇಟು ಒರೆಸುವುದೇ ಒಂದು ದೊಡ್ಡ ಆಟವಾಗಿತ್ತು. ಕ್ಲಾಸ್ ರೂಮಿನಿಂದ ಹೊರಗೆ ಹೋಗಲು ಇದೊಂದು ಸಕಾರಣವಾಗಿತ್ತು.
ಸ್ಲೇಟಿನ ಎರಡೂ ಭಾಗದಲ್ಲಿ ಬರೆಯಲಾಗುತ್ತಿತ್ತು. ಕೆಲವೊಮ್ಮೆ ನಾವು ಒಂದು ಭಾಗದಲ್ಲಿ ಕೈಮುಚ್ಚಿ ಬರೆದ ಅಂಕೆಯನ್ನು ನಮ್ಮ ಕೈಚಲನೆಯನ್ನು ನೋಡಿ ಇನ್ನೊಬ್ಬರು ಊಹಿಸಿ ಅದು ಯಾವ ಸಂಖ್ಯೆ ಎಂದು ಹೇಳಿ ಅದು ಸರಿಯಾಗಿದ್ದರೆ ಆವರಿಗೆ ಒಂದು ಕಡ್ಡಿ ತುಂಡು ಕೊಡುವ ಆಟವನ್ನಾಡುತ್ತಿತ್ತು.
ಸ್ಲೇಟಿನ ಮೇಲೆ ಬರೆದದ್ದನ್ನು ಉಳಿಸಿಕೊಳ್ಳುವುದು ಬಹಳ ಕಷ್ಟಕರವಾಗಿತ್ತು. ಎಷ್ಟೋ ಸಲ ಮನೆಯಲ್ಲಿ ಬರೆದುಕೊಂಡು ಬಂದದ್ದನ್ನು ಟೀಚರಿಗೆ ತೋರಿಸಲು ಹೋಗುವಾಗ ಅದು ಅರ್ಧದಷ್ಟು ಅಳಿಸಿಯೇ ಹೋಗಿರುತ್ತಿತ್ತು.
ನನ್ನ ತರಗತಿಯಲ್ಲಿ ಕೆಲವರಿಗೆ ಬೆಣ್ಣೆಕಡ್ಡಿಯನ್ನು ತಿನ್ನುವ ಅಭ್ಯಾಸವಿತ್ತು. ಅಂತಹವರಿಂದ ಕಡ್ಡಿ ತುಂಡುಗಳನ್ನು ಕಾಪಿಟ್ಟುಕೊಳ್ಳುವುದೇ ಕಷ್ಟದ ಕೆಲಸವಾಗಿತ್ತು.ಈ ಕಡ್ಡಿಗೆ ಬಳಪ ಅಂತ ಕೂಡ ಹೇಳುತ್ತಿದ್ದರು.
ನಾವೆಲ್ಲ ಐದನೇ ತರಗತಿಗೆ ಪುಸ್ತಕದಲ್ಲಿ ಬರೆಯಲು ಪ್ರಾರಂಭಿಸಿದ ನೆನಪು. ಆವರೆಗೆ ನಮ್ಮ ಸಂಗಾತಿಯಾಗಿದ್ದ ಸ್ಲೇಟು-ಕಡ್ಡಿ ನಮಗೆ ಬರೀ ಬರೆಯುವ ಸಾಧನವಾಗಿರದೇ ಆಟದ ಆಟಿಕೆ ಕೂಡಾ ಆಗಿದ್ದವು. ಯಾವುದೇ ಒತ್ತಡವಿಲ್ಲದಿದ್ದ ನಮ್ಮ ಬಾಲ್ಯ , ಶಾಲಾ ಜೀವನ ಸದಾ ನೆನಪಿಸಿಕೊಳ್ಳಲು ಯೋಗ್ಯವಾದದ್ದು ಅಂದರೆ ತಪ್ಪಿಲ್ಲ.
126. ನೆನಪುಗಳು - ನೆಲ್ಲಿ ಕಾಯಿ
ಸಾಧಾರಣವಾಗಿ ನೆಲ್ಲಿಕಾಯಿ ಎಲ್ಲರೂ ಇಷ್ಟ ಪಡುವ ಹಣ್ಣು. ಅದನ್ನು ನೋಡಿದ ಕೂಡಲೇ ನಮಗರಿವಿಲ್ಲದೆ ಬಾಯಿಯಲ್ಲಿ ನೀರೂರುತ್ತದೆ! ಸಣ್ಣ ಎಲೆಗಳ ಮರದಲ್ಲಿ ಬಿಡುವ ಇದು ಹಸಿರಾಗಿ ಗುಂಡುಗುಂಡಗಾಗಿ ಆಕರ್ಷಕವಾಗಿರುತ್ತದೆ.
ನಾವು ಹೆಬ್ರಿಯಲ್ಲಿರುವಾಗ ನನ್ನಮ್ಮ ನೆಲ್ಲಿಕಾಯಿ ಔಷಧಿ ಮಾಡುತ್ತಿದ್ದದ್ದು ನನಗೆ ಇನ್ನೂ ನೆನಪಿದೆ. ಒಳ್ಳೆಯ ಬೆಟ್ಟದ ನೆಲ್ಲಿಕಾಯಿಗಳನ್ನು ತರಿಸಿಕೊಂಡು ಅವುಗಳನ್ನು ಶೋಧಿಸಿ ನಂತರದಲ್ಲಿ ಒಂದು ಸಾಧಾರಣ ಅಳತೆಯ ಮಡಿಕೆಯೊಳಗೆ ಹಾಕಿ ಅದಕ್ಕೆ ಅಗತ್ಯವಿರುವಷ್ಟು ಬೆಲ್ಲ ಹಾಕಿ ಮತ್ತೆ ಸ್ವಲ್ಪ ಮೂಲಿಕಾ ಪದಾರ್ಥಗಳನ್ನು ಹಾಕಿ ಮಡಕೆಯ ಬಾಯಿಯನ್ನು ಬಿಗಿಯಾಗಿ ಮುಚ್ಚಿ ನೆಲದ ಗುಂಡಿಯೊಳಗೆ 45 ದಿನ ಹುಗಿದು ಇಡುತ್ತಿದ್ದಳು. ನಂತರದಲ್ಲಿ ಅದನ್ನು ಸೋಸಿ ಗಾಜಿನ ಬಾಟಲಿಯಲ್ಲಿ ತುಂಬಿಸಿ ಇಡುತ್ತಿದ್ದಳು. ನಮಗೆ ಶೀತವಾದಾಗ 5ml ಅಷ್ಟು ಕುಡಿಯಲು ಕೊಡುತ್ತಿದ್ದಳು. ಬಹಳ ರುಚಿಯಾದ ದ್ರಾವಣವದು! ಹೀಗಾಗಿ ನಮಗೆ ಶೀತ ಪದೇ ಪದೇ ಬರುತ್ತಿತ್ತು ಬೆಟ್ಟದ ನೆಲ್ಲಿಕಾಯಿ ಸ್ವಲ್ಪ ಒಗರು, ಸ್ವಲ್ಪ ಹುಳಿ. ತಿಂದು ನೀರು ಕುಡಿದರೆ ಬಾಯಿಯೆಲ್ಲ ಸಿಹಿ. ಸರಿಯಾಗಿ ಬೆಳೆದ ಕಾಯಿಯಾದರೆ ಅದರ ರುಚಿಯ ಮುಂದೆ ಬೇರೇನೂ ಸಾಟಿ ಇಲ್ಲ. ಎಳೆ ಕಾಯಿಯಾದರೆ ಕಹಿ ಮುಂದಿರುತ್ತದೆ. ಹೈಬ್ರೀಡ್ ಕಾಯಿಯಾದರೆ ರಸರಸವಾಗಿರುತ್ತದೆ.
ನಾನು ಮದುವೆಯಾಗಿ ಬಂದ ಪ್ರಾರಂಭದಲ್ಲಿ ಕೆಳಮನೆಯ ಎದುರುಗಡೆ ಕಾನಿನಲ್ಲಿದ್ದ ನೆಲ್ಲಿಕಾಯಿ ಕೊಯ್ಯಲು ಮನೆಯ ಮಕ್ಕಳನ್ನು ಜೊತೆಮಾಡಿಕೊಂಡು ಹೋಗುತ್ತಿದ್ದೆ. ನಂತರದಲ್ಲಿ ಮೈಗೆ ಹತ್ತಿದ ಕಣ್ಣಿಗೆ ಕಾಣದ ಉಣುಗಿನ ಕಚ್ಚುವಿಕೆಯ ತುರಿಕೆಯಿಂದ ಸುಧಾರಿಸಿಕೊಳ್ಳಲು ಬಹಳ ದಿನ ಬೇಕಾಗುತ್ತಿತ್ತು ಇನ್ನೊಂದು ತರಹದ ನೆಲ್ಲಿಕಾಯಿ ಇದೆ. ಮರದ ರೀತಿಯೂ ಬೇರೆ, ಕಾಯಿಯೂ ಬೇರೆಯೇ. ಈ ಮರದ ಎಲೆಗಳು ಕರಿಬೇವಿನ ಎಲೆಯಂತಿರುತ್ತವೆ. ಕಾಯಿಗಳು ತಿಳಿ ಹಸಿರು ಹಳದಿ ಮಿಶ್ರಿತವಾಗಿದ್ದು ಸ್ವಲ್ಪ ನಕ್ಷತ್ರದಾಕಾರದಲ್ಲಿರುತ್ತವೆ.ಇದಕ್ಕೆ ಬೊಂಬಾಯಿ/ರಾಜಾ ನೆಲ್ಲಿ ಎನ್ನುತ್ತಾರೆ. ನಾವು ಕುಂದಾಪುರದಲ್ಲಿ ಇದ್ದಾಗ ನಮ್ಮ ಬಾಡಿಗೆ ಮನೆಯ ತೋಟದಲ್ಲಿ ಬೊಂಬಾಯಿ ನೆಲ್ಲಿ ಮರವಿತ್ತು. ಗೊಂಚಲು ಗೊಂಚಲಾಗಿ ಬಿಡುತ್ತಿದ್ದ ಅವುಗಳನ್ನು ಉಪ್ಪುಕಾರ ಹಾಕಿ ತಿನ್ನುತ್ತಿತ್ತು, ಹಾಗೆಯೂ ತಿನ್ನುತ್ತಿತ್ತು. ಅದೂ ಕೂಡ ರಸರಸವಾಗಿದ್ದು ತಿನ್ನಲು ಮಜವಾಗಿರುತ್ತಿತ್ತು. ಮರದ ತುಂಬಾ ಅದರ ಗೊಂಚಲುಗಳನ್ನು ನೋಡುವುದೇ ಕಣ್ಣಿಗೆ ಹಬ್ಬ.
ನೆಲ್ಲಿಕಾಯಿಯಿಂದ ತರಹೇವಾರಿ ಖಾದ್ಯಗಳನ್ನು ಮಾಡಬಹುದು. ಬೆಟ್ಟದ ನೆಲ್ಲಿಕಾಯಿಯ ಉಪ್ಪಿನಕಾಯಿ ಬಹಳ ರುಚಿ. ಅದರಲ್ಲಿ ಮೊರಬ್ಬ, ಜ್ಯಾಮ್ ಕೂಡಾ ಮಾಡುತ್ತಾರೆ. ನೆಲ್ಲಿಕಾಯಿಯನ್ನು ತುಂಡರಿಸಿ ಉಪ್ಪುಕಾರ ಹಾಕಿ ಒಣಗಿಸಿಟ್ಟರೆ ತಿನ್ನಲು ಬಲು ರುಚಿ. ಬೊಂಬಾಯಿ ನೆಲ್ಲಿಕಾಯಿಯಲ್ಲೂ ಕೂಡ ವಿವಿಧ ರೀತಿಯ ಪದಾರ್ಥಗಳನ್ನು ಮಾಡಬಹುದು. ಈ ಬಹೂಪಯೋಗಿ ನೆಲ್ಲಿಕಾಯಿ ನನಗಂತೂ ಬಹಳ ಇಷ್ಟ!