Saturday, August 1, 2020

ಶೋಭಾ ಳ ಬರಹಗಳು - ಭಾಗ 4 (ನೆನಪುಗಳು)

ಮುಂದುವರಿದ ಭಾಗ 4 :

ಶೋಭಾ, (3/9/1966) ಅಣ್ಣನ ಮಗಳು, ಸಾಗರ ಹೊಂಗಿರಣ ಸಂಸ್ಥೆಯ  ಸಂಸ್ಥಾಪಕಿ, ಪ್ರಾಂಶುಪಾಲೆ, ಗ್ರಹ ಬಂಧನದ (lockdown) ಈ ಸಮಯದಲ್ಲಿ ಹಲವಾರು ಲೇಖನಗಳನ್ನು ಬರದು ಬಾಲ್ಯ, ತನ್ನ ಹಿರಿಯರು, ಪರಿಸರ, ಜೀವನದ ಅನುಭವ ಇತ್ಯಾದಿ ವಿಷಯಗಳನ್ನು ಸುಂದರವಾಗಿ, ಅರ್ಥಪೂರ್ಣವಾಗಿ ಬರೆದು ಫೆಸ್ಬುಕ್ , ಇನ್ಸ್ಟಗ್ರಾಂ ಖಾತೆಗಳಲ್ಲಿ ಹಂಚಿ ಕೊಂಡಿರುತ್ತಾಳೆ. ಅವಳ ಬರವಣಿಗೆಯ ವೈಖರಿ, ವಿಷಯಗಳ ನಿರೂಪಣೆ ಮನ ಮುಟ್ಟುವಂತಿದ್ದು ನೆನಪಿಗೋಸ್ಕರ ಇಲ್ಲಿ ಇರಿಸಿಕೊಂಡಿದ್ದೇನೆ.=








125. ನೆನಪುಗಳು - ವಿಶೇಷ ಖಾದ್ಯ 
ಮಲೆನಾಡಿನಲ್ಲಿ ಚೌತಿ ಹಬ್ಬಕ್ಕೆ ವಿಶೇಷವಾಗಿ ಮಾಡುವ ಖಾದ್ಯಗಳು - ಕಡುಬು, ಚಕ್ಕುಲಿ, ಉಂಡ್ಲಿಕಾಳು ಪಾಯಸ, ಮೋದಕ ಹಾಗೂ ಕರಿಗಡುಬು. ಕರಿಗಡುಬು ವಿಶೇಷ ರುಚಿಯುಳ್ಳ ಸಿಹಿತಿಂಡಿ. ನೆನೆಸಿ ನುಣ್ಣಗೆ ರುಬ್ಬಿದ ಬೆಳ್ತಿಗೆ ಅಕ್ಕಿಹಿಟ್ಟನ್ನು ಉಕ್ಕರಿಸಿ ಅದು ಬಿಸಿಯಾರಿದ ಮೇಲೆ ಅದಕ್ಕೆ ಒಂದೆರಡು ಚಮಚ ತುಪ್ಪ ಹಾಕಿ ಚೆನ್ನಾಗಿ ನಾದಿಕೊಳ್ತಾರೆ. ಹೂರಣಕ್ಕಾಗಿ ತುರಿದ ಕಾಯಿಗೆ ಬೆಲ್ಲ ಹಾಕಿ ಸಣ್ಣ ಪಾಕ ಬರಿಸಿಟ್ಟುಕೊಳ್ತಾರೆ. ನಾದಿದ ಹಿಟ್ಟನ್ನು ಸ್ವಲ್ಪ ಸ್ವಲ್ಪವೇ ತೆಗೆದುಕೊಂಡು ಪುನಃ ನಾದುತ್ತಾ ಸಣ್ಣ ಉಂಡೆಗಳನ್ನಾಗಿ ಮಾಡಿಕೊಳ್ತಾರೆ. ತದನಂತರ ಆ ಉಂಡೆಗಳನ್ನು ಹೆಬ್ಬೆರಳುಗಳಿಂದ ಒತ್ತುತ್ತಾ ಬಟ್ಟಲಾಕಾರಕ್ಕೆ ತಂದುಕೊಂಡು ಅದರೊಳಗೆ ಹೂರಣವನ್ನು ತುಂಬಿಸಿ ಅದರ ಎರಡೂ ತುದಿಗಳನ್ನು ಒತ್ತಿ ಸೇರಿಸಿ ದೋಣಿಯಾಕಾರಕ್ಕೆ ತಂದು ಊಟದ ತಟ್ಟೆಯಲ್ಲಿ ಒಂದರ ಪಕ್ಕ ಒಂದನ್ನು ಜೋಡಿಸಿಡ್ತಾರೆ. ಆ ತಟ್ಟೆ ತುಂಬಿದ ಮೇಲೆ ಅದರ ಮೇಲೊಂದಿಷ್ಟು ಬೆಲ್ಲವನ್ನು ಹಾಕಿ ಅಟ್ಟದಲ್ಲಿ ಬೇಯಲಿಡ್ತಾರೆ. ಸುಮಾರು ಇಪ್ಪತ್ತು ನಿಮಿಷಕ್ಕೂ ಮೀರಿ ಬೇಯಿಸಿದ ಮೇಲೆ ಅದನ್ನು ಅಟ್ಟದಿಂದ ಹೊರತೆಗೆಯುತ್ತಾರೆ. ಬಿಸಿಬಿಸಿಯಾದ ಕರಿಗಡುಬುಗಳನ್ನು ತುಪ್ಪದೊಂದಿಗೆ ತಿನ್ನಲು ಬಲು ಸೊಗಸು.
ನಮ್ಮ ಮನೆಯಲ್ಲಿ ಹಬ್ಬಕ್ಕೆ ನಾವೆಲ್ಲಾ ಮನೆಮಂದಿ ಸೇರುವ ಕಾರಣ ಊಟ ಗಮ್ಮತ್ತಾಗಿ ಸಾಗುತ್ತದೆ. ನಮ್ಮ ಮನೆಯ ಗಂಡುಮಕ್ಕಳು ಕರಿಗಡುಬು ತಿನ್ನುವ ಸ್ಪರ್ಧೆ ಮಾಡಿ ಒಬ್ಬರನ್ನೊಬ್ಬರು ಮೀರಿಸಿ ತಿನ್ನುತ್ತಾರೆ. ಅವರ ತಿನ್ನುವ ಈ ಸ್ಪರ್ಧೆ ನೋಡಲು ಬಲು ಮಜಾ. ಹೀಗಾಗಿ ಕರಿಗಡುಬನ್ನು ಮಾಡುವ ಪ್ರಮಾಣವೂ ಜಾಸ್ತಿ ಇರುತ್ತದೆ. ಕೆಲವೊಮ್ಮೆ ಕುಳಿತವರ ಎರಡು ಪಂಕ್ತಿ ಊಟ ಮುಗಿದರೂ ಕರಿಗಡುಬನ್ನು ಬೇಯಿಸಿ ಮುಗಿಸಲಾಗುವುದಿಲ್ಲ. ಅದರ ತಯಾರಿಗೆ ಬಹಳ ಸಮಯ ತಗೊಳ್ಳುವ ಕಾರಣ ಕರಿಗಡುಬನ್ನು ಹೆಚ್ಚಾಗಿ ಗಣಪತಿ ಹಬ್ಬದ ವಿಶೇಷ ತಿನಿಸಾಗಿಯೆ ಇರಿಸಲಾಗುತ್ತದೆ. ಅದನ್ನೊಮ್ಮೆ ತಿಂದವರು ಅದರ ರುಚಿ ಮರೆಯಲಾರರು. ಅಂತಹ ಸೊಗಸಾದ, ಆರೋಗ್ಯಕರವಾದ ತಿನಿಸು ಕರಿಗಡುಬು!

124. ನೆನಪುಗಳು - ಅಂಗಡಿಯ ಹಲಗೆಗಳ ಬಾಗಿಲು.
ಕಳೆದ ವಾರ ಊರಿಗೆ ಹೋಗಿ ಬರುವಾಗ ದಾರಿಯುದ್ದಕ್ಕೂ ಮಳೆಗಾಲದ ಸಮೃದ್ಧ ಹಸಿರ ಸಿರಿಯ ನೋಟ! ಅಲ್ಲದೇ ದಾರಿ ಬದಿಯಲ್ಲಿ ಅಲ್ಲಲ್ಲೇ ಕಾಣಸಿಗುವ ಹಳೆಯ ಅಂಗಡಿಗಳು, ಮನೆಗಳು, ಪಾಚಿ ಹಿಡಿದ ಪಾಳು ಕಟ್ಟಡಗಳು. ಖುಷಿ ಕೊಟ್ಟ ವಿಷಯವೇನೆಂದರೆ ಕೆಲವು ಅಂಗಡಿಗಳಿಗೆ ಇನ್ನೂ ಹಲಗೆ ಬಾಗಿಲುಗಳಿದ್ದದ್ದು. ಈಗ ಅದು ಬಲು ಅಪರೂಪಕ್ಕೆ ಕಾಣಸಿಗುವ ವಸ್ತು. ನನ್ನ ಜಮಾನದವರು ನೆನಪಿಸಿಕೊಳ್ಳುವುದಾದರೆ ಆಗ ಹೆಚ್ಚಿನ ಅಂಗಡಿಗಳಿಗೆ ಇದ್ದ ಬಾಗಿಲುಗಳೆಂದರೆ ಹಲಗೆಗಳ ಬಾಗಿಲುಗಳು.
ಸುಮಾರು ಏಳಡಿ ಎತ್ತರ ಹಾಗೂ ಒಂದು ಅಡಿ ಅಗಲದ ಇಂತಹ ಆರೇಳು ಹಲಗೆಗಳನ್ನು ಚೌಕಟ್ಟಿನಲ್ಲಿ ಸೇರಿಸಿದಾಗ ಅದು ಬಾಗಿಲಾಗಿ ಮಾರ್ಪಾಟಾಗುತ್ತಿತ್ತು. ಅವುಗಳನ್ನು ಒಂದೊಂದಾಗಿ ತೆಗೆದು ಎತ್ತಿಟ್ಟು ಅಂಗಡಿ ತೆರೆಯುವುದನ್ನು ನಂತರ ಒಂದೊಂದಾಗಿ ಸೇರಿಸಿ ಅಂಗಡಿಯ ಬಾಗಿಲು ಮುಚ್ಚುವುದನ್ನು ನೋಡುವುದೇ ನಮಗೊಂದು ಖುಷಿಯ ವಿಷಯವಾಗಿತ್ತು. ಅದನ್ನು ಸರಿಯಾಗಿ ಜೋಡಿಸಿದ ಮೇಲೆ ಕಬ್ಬಿಣದ ರಾಡನ್ನು ಸಿಕ್ಕಿಸಿ ಅದಕ್ಕೊಂದು ದೊಡ್ಡ ಬೀಗ ಹಾಕುತ್ತಿದ್ದರು. ಪುಟ್ಟ ಪುಟಾಣಿಗಳಾಗಿದ್ದ ನಮಗೆಲ್ಲ ಹಲಗೆ ಎತ್ತಿ ಬಾಗಿಲು ತೆರೆಯುವ ಹಾಗೂ ಹಲಗೆ ಇಟ್ಟು ಬಾಗಿಲು ಮುಚ್ಚುವ ಆ ಇಡೀ ಪ್ರಕ್ರಿಯೆಯೇ ಒಂದು ಚಿದಂಬರ ರಹಸ್ಯವಾಗಿ ಕಾಣುತ್ತಿತ್ತು. ನಮ್ಮ ಬಾಲ್ಯ ನಮಗೆ ಎಲ್ಲವನ್ನೂ ಬೆರಗುಗಣ್ಣುಗಳಿಂದ ನೋಡಿ ಆನಂದಿಸುವ ಅವಕಾಶ ಕೊಟ್ಟಿತ್ತು.
ಈಗಲೂ ಹಲವು ಹಳ್ಳಿಗಳಲ್ಲಿ ಇನ್ನೂ ಇರುವ ಅಂತಹ ಬಾಗಿಲುಗಳ ಅಂಗಡಿಗಳನ್ನು ಕಂಡಾಗ ಮನಸ್ಸು ಬಾಲ್ಯ ಕಾಲಕ್ಕೆ ಹೋಗುತ್ತದೆ. ಕ್ಷಣಕ್ಷಣಕ್ಕೂ ಹೊಸತಿಗೆ ತೆರೆದುಕೊಳ್ಳುವ ಪ್ರಪಂಚದೊಡನೆ ಹೆಜ್ಜೆ ಹಾಕುತ್ತಾ ಸಾಗುವಾಗ ಇಂತಹ ಹಳೆಯ ಝಲಕ್ ಗಳು ನಮ್ಮನ್ನು ಪುನಃ ಹಿಂದಿನ ದಿನಗಳಿಗೆ ಒಯ್ದು ಹಿತಕರ ಅನುಭವ ನೀಡುವುದು ಯಾರಿಗೆ ತಾನೇ ಬೇಡ ಹೇಳಿ! ಅಂತಹ ಮುದವನ್ನು ಪದಗಳಿಂದ ವರ್ಣಿಸಲು ಸಾಧ್ಯವಿಲ್ಲ. ಪುನಃ ಬಾಲ್ಯದ ದಿನಗಳು ಮನಸ್ಸಿನೊಳಗೆ ಮರುಕಳಿಕೆಯಾಗುವ ಅಂತಹ ಪ್ರತಿಯೊಂದು ಕ್ಷಣಕ್ಕೂ ನಾನು ಕಾಯುತ್ತೇನೆ ಅನ್ನುವುದು ಸತ್ಯಕ್ಕೆ ದೂರವಾದ ಮಾತಲ್ಲ.


123. ನೆನಪುಗಳು - ಮಜ್ಜಿಗೆ ಗೂಡು, ಭವಂತಿ ಮನೆ 
ಹಳ್ಳಿಯ ಹಳೆಮನೆಗಳ ಅಡುಗೆ ಮನೆಗಳಲ್ಲಿ ಇನ್ನೂ ಕಾಣಸಿಗುವ ಗೂಡು ಮಜ್ಜಿಗೆ ಗೂಡು. ವಿವಿಧ ಗಾತ್ರಗಳಲ್ಲಿರುವ ಈ ಗೂಡಿನಲ್ಲಿ ಬರೀ ಮಜ್ಜಿಗೆ ಮಾತ್ರ ಇರುವುದಿಲ್ಲ. ಅಡುಗೆ ಮನೆ ಸಂಬಂಧಿ ಹಲವು ವಸ್ತುಗಳನ್ನು ಅಲ್ಲಿ ಸಣ್ಣ ಪ್ರಮಾಣದಲ್ಲಿ ದಾಸ್ತಾನು ಮಾಡಲಾಗುವುದು. ಹಿಂದಿನ ಕಾಲದಲ್ಲಿ ಬೆಕ್ಕು, ಇಲಿ, ಜಿರಲೆಗಳಿಂದ ಹಾಲಿನ ಉತ್ಪನ್ನಗಳನ್ನು ಕಾಪಿಡಲು ಹೆಚ್ಚಾಗಿ ಉಪಯೋಗಿಸಲ್ಪಡುತ್ತಿದ್ದ ಜಾಗ ಈ ಮಜ್ಜಿಗೆ ಗೂಡು.
ಅಜ್ಜಯ್ಯನ ಮನೆಯ ಅಡುಗೆ ಮನೆಯಲ್ಲಿರುವ ಮಜ್ಜಿಗೆಗೂಡು ಸುಮಾರು 2/4 ಅಡಿ ಅಳತೆಯದ್ದು. ಅದರಲ್ಲಿ ಮೂರು ಅರೆಗಳಿದ್ದು ಒಂದು ಅರೆಯನ್ನು ಮೊಸರು, ಮಜ್ಜಿಗೆಯನ್ನು ಇಡಲು ಬಳಸುತ್ತಾರೆ. ಮೇಲಿನ ಅರೆಯಲ್ಲಿ ತುಪ್ಪ, ಎಣ್ಣೆ ಇತ್ಯಾದಿಗಳನ್ನು ಇಡುತ್ತಾರೆ. ಕೆಳಗಿನ ಅರೆಯಲ್ಲಿ ಉಪ್ಪು, ಬೆಲ್ಲ ಇವುಗಳನ್ನು ಇಡುತ್ತಾರೆ. ಅದರ ಬಾಗಿಲುಗಳನ್ನು ಮುಚ್ಚಿ ಚಿಲಕ ಹಾಕಿದರೆ ಅದರಲ್ಲಿರುವ ವಸ್ತುಗಳು ಸುರಕ್ಷಿತ!
ಕೆಳಮನೆಯ ಮಜ್ಜಿಗೆ ಗೂಡು ದೊಡ್ಡದು. ಸುಮಾರು 3/5 ಅಡಿ ಅಳತೆಯದ್ದು. ಅದರಲ್ಲಿ ನಾಲ್ಕು ದೊಡ್ಡ ಅರೆಗಳಿವೆ. ಅದರ ಒಂದು ಅರೆಯಲ್ಲಿ ಕಾದಾರಿದ ಹಾಲನ್ನಿರಿಸಿದರೆ ಇನ್ನೊಂದರೆಯಲ್ಲಿ ಮೊಸರು ಮಜ್ಜಿಗೆಯನ್ನು ಇರಿಸಲಾಗುವುದು. ಮತ್ತೆರಡು ಅರೆಗಳಲ್ಲಿ ಬೆಣ್ಣೆ, ತುಪ್ಪ, ಎಣ್ಣೆ ಇತ್ಯಾದಿಗಳನ್ನು ಇರಿಸಲು ಬಳಸಲಾಗುವುದು.
ಹಳೆಮನೆಗಳು, ಅದರಲ್ಲಿರುವ ಹಳೆಯ ವಸ್ತುಗಳು ನನ್ನನ್ನು ಯಾವಾಗಲೂ ಆಕರ್ಷಿಸುತ್ತವೆ. ಹಿಂದಿನ ಕಾಲದ ಹಿತ್ತಾಳೆಯ ಕಡುಬಿನ ಅಟ್ಟ, ಹಿತ್ತಾಳೆಯ ಕೊಳಗಗಳು, ಮರದ ಕಳಸಿಗೆ, ಮರದ ಶಾವಿಗೆ ಮುಟ್ಟು, ಕೊಳದಪ್ಪಲೆ, ಕೊಡಪಾನ....ಇವೆಲ್ಲವೂ ಮನಸ್ಸಿನ ಭಾವುಕ ಜಗತ್ತನ್ನು ತಟ್ಟುತ್ತವೆ ಅಂದರೆ ಸುಳ್ಳಲ್ಲ. ಅದೊಂದು ರೀತಿಯ ಬಿಡಿಸಲಾರದ ಬಂಧ!
ನನ್ನ ಎರಡನೇ ಸೋದರತ್ತೆ ಬಾಬಿಯತ್ತೆಯ ಕೊನೆಯ ಮಗ ಕಿಟ್ಟು(ಕೃಷ್ಣಮೂರ್ತಿ ಭಟ್) ಹಳೆಯ ಕಾಲದ ವಸ್ತುಗಳನ್ನು ಸಂಗ್ರಹಿಸುವ ಖಯಾಲಿ ಉಳ್ಳವನು. ಹಳೆಯ ಕಾಲದ ವಸ್ತುಗಳನ್ನು ಹುಡುಕಿಕೊಂಡು ಎಲ್ಲಿಂದ ಎಲ್ಲಿಗೆ ಬೇಕಾದರೂ ಹೋಗಿ ಸಂಗ್ರಹಿಸುವ ಪ್ಯಾಷನ್ ಅವನಲ್ಲಿದೆ. ಹೀಗೆ ಸಂಗ್ರಹಿಸಿದ ವಸ್ತುಗಳನ್ನು ಇಡಲಿಕ್ಕಾಗಿಯೇ ಅವನು ಉಡುಪಿಯ ಮಾಯಾಗುಂಡಿಯಲ್ಲಿ ಮಣ್ಣಿನಲ್ಲಿ ಒಂದು ಅತ್ಯಧ್ಭುತವಾದ ಭವಂತಿ ಮನೆಯನ್ನು ಕಲಾತ್ಮಕವಾಗಿ ಕಟ್ಟಿದ್ದಾನೆ. ಹಳೆಯ ವಸ್ತುಗಳನ್ನು ಆ ಮನೆಯಲ್ಲಿ ಬಹಳ ಸುಂದರವಾಗಿ, ವ್ಯವಸ್ಥಿತವಾಗಿ ಪ್ರದರ್ಶನ ಯೋಗ್ಯವಾಗಿ ಜೋಡಿಸಿಟ್ಟಿದ್ದಾನೆ. ಅಲ್ಲದೆ ಆ ಕಾರ್ಯದಲ್ಲಿರುವ ತನ್ನ ಪ್ರೀತಿಯನ್ನು ಅಲ್ಲಿರುವ ಪ್ರತಿ ವಸ್ತುವನ್ನು ಜೋಡಿಸಿಡುವುದರಲ್ಲಿ ತೋರಿಸಿದ್ದಾನೆ. ಎಲ್ಲರೂ ಒಮ್ಮೆ ನೋಡಲೇಬೇಕಾದ ಸ್ಥಳವದು.

122. . ನೆನಪುಗಳು - ಉದ್ದ  ಲಂಗ 
ಹಬ್ಬಕ್ಕೆ ಕೆಳಮನೆಗೆ ಹೋಗಿದ್ದೆ. ನಮ್ಮ ಮನೆಯಲ್ಲಿ ಮಣ್ಣಿನ ಗಣಪತಿ ಇಟ್ಟು ಪೂಜೆಯಾದ ಮೆಲೆ ಮಧ್ಯಾಹ್ನಕ್ಕೆ ವಿಸರ್ಜಿಸುತ್ತಾರೆ. ಹಬ್ಬಕ್ಕಾಗಿ ನಮ್ಮ ಮನೆಯ ಅವಳಿಜವಳಿ ಕಂದಮ್ಮಗಳು ಚೆಂದದ ಉದ್ದಲಂಗ ಹಾಕಿಕೊಂಡಿದ್ದವು. ತುಂಬಾ ಮುದ್ದಾಗಿ ಕಾಣುತ್ತಿದ್ದವು. ಉದ್ದಲಂಗವೇ ಹಾಗೆ. ಒಂದು ರೀತಿಯ ಲಾವಣ್ಯಯುತವಾದ ಉಡುಗೆ.
ನನಗಾಗ ನಾನು ಚಿಕ್ಕವಳಿದ್ದಾಗ ನನ್ನ ಹತ್ತಿರವಿದ್ದ ರೇಷಿಮೆಯ ಹಸಿರು ಉದ್ದಲಂಗದ ನೆನಪಾಯಿತು. ನಾನು ಚಿಕ್ಕವಳಿರುವಾಗ ಯಾವುದೇ ಬಟ್ಟೆ ಹಾಕಿಕೊಂಡರೂ ಅದರಲ್ಲೇ ಊಟ, ತಿಂಡಿ, ಮಲಗುವಿಕೆ ಕೂಡಾ. ಒಳ್ಳೆಯ ಬಟ್ಟೆ ಬಿಚ್ಚಿ ಮನೆಯಲ್ಲಿ ಹಾಕುವ ಸಾಧಾರಣ ಬಟ್ಟೆ ಹಾಕುವ ಪ್ರಮೇಯವೇ ಇರಲಿಲ್ಲ! ಒಮ್ಮೆ ಮೈಮೇಲೆ ಬಂದ ಬಟ್ಟೆಯನ್ನು ಪುನಃ ಬದಲಿಸುವುದೆಂದರೆ ನನಗೆ ಯಾವಾಗಲೂ ರಗಳೆಯ ವಿಷಯವಾಗಿತ್ತು. ಅಮ್ಮ ರೇಷಿಮೆಯ ಲಂಗ ಬಿಚ್ಚಿಟ್ಟು ಮಲಗು ಅಂದರೂ ನನ್ನದು 'ಡೋಂಟ್ ಕೇರ್" ಅನ್ನುವ ಪ್ರತಿಕ್ರಿಯೆ. ನನಗೆ ರೇಷಿಮೆ ಅಥವಾ ಕಾಟನ್ ಎಲ್ಲವೂ ಒಂದೇ ಆಗಿತ್ತು. ಒಂದು ಬಟ್ಟೆ ಇಷ್ಟವಾದರೆ ಅದನ್ನೇ ಹಾಕುತ್ತಿರುತ್ತಿದ್ದೆ. ಅಂತಹ ಪ್ರವೃತ್ತಿ ನನ್ನದ್ದು.
ನನ್ನ ಬಳಿ ಬಹಳ ಉದ್ದಲಂಗಗಳಿದ್ದವು. ಆದರೆ ನನ್ನ ನೆನಪಿನಲ್ಲಿರುವ ಎರಡು ಉದ್ದಲಂಗಗಳೆಂದರೆ ಒಂದು ಬಾಂಬೆ ಡೈಯಿಂಗ್ ನ ಬಿಳಿ ಬಟ್ಟೆಯ ಮೇಲಿದ್ದ ಕಪ್ಪು ಬುಟ್ಟಾಗಳು ಹಾಗೂ ಕೆಂಪು ಹೂವಿದ್ದ ಲಂಗ. ಅದಕ್ಕೆ ಕೆಂಪು ಅಥವಾ ಕಪ್ಪು ರವಿಕೆ ಧರಿಸುತ್ತಿದ್ದೆ. ಅದನ್ನು ನಾನು ಮೂರ್ನಾಲ್ಕು ವರ್ಷ ಹಾಕಿಕೊಂಡರೂ ಗಿಡ್ಡವಾಯಿತೇ ಹೊರತು ಫೇಡ್ ಆಗಲಿಲ್ಲ. ಬಾಂಬೆ ಡೈಯಿಂಗ್ ಬಟ್ಟೆಯೇ ಹಾಗೆ. ನನಗಂತೂ ಆ ಕೆಂಪು ಹೂವಿನ ಕಪ್ಪು ಬುಟ್ಟಾದ ಲಂಗ ಯಾವತ್ತೂ ಮರೆಯಲಾಗದ ದಿರಿಸು😊
ನನಗೆ ನೆನಪಿರುವ ಇನ್ನೊಂದು ಲಂಗ ಅಮ್ಮನ ಹಳೆಯ ಲಿಂಬೆ ಹಳದಿ ಬಣ್ಣದ ಸೀರೆಯಲ್ಲಿ ಹೊಲಿಸಿದ ಲಂಗ. ಅದರ ಮೇಲೆ ಕಡು ಹಸಿರು ಬ್ಲೌಸ್ ಧರಿಸುತ್ತಿದ್ದೆ. ಬಹಳ ಚೆಂದದ ಲಂಗವದು! ಕಾಲೇಜ್ ದಿನಗಳಲ್ಲಿ ಹೊಲಿಸಿದ ಲಂಗ. ಬಹಳ ಸೊಗಸಾಗಿತ್ತು. ಆಗಾಗ್ಗೆ ಅಮ್ಮನ ಹಲವಷ್ಟು ಹಳೆಯ ಸೀರೆಗಳು ನನ್ನ ಲಂಗವಾಗಿ ಪರಿವರ್ತಿತವಾಗುತ್ತಿದ್ದದ್ದಂತೂ ನಿಜ.
ನಾವೆಲ್ಲ ಬಹಳ ಚಿಕ್ಕವರಿರುವಾಗ ಫ್ರಾಕ್ ಹಾಕುತ್ತಿದ್ದರೂ ದೊಡ್ಡವರಾಗುತ್ತಿದ್ದಂತೆಯೆ ಸ್ಕರ್ಟ್, ಉದ್ದಲಂಗ ರವಿಕೆ ಸರ್ವೇ ಸಾಮಾನ್ಯವಾಗಿದ್ದ ಉಡುಪಾಗಿತ್ತು. 1980ರ ದಶಕದಲ್ಲಿ ಚೂಡಿದಾರದ ಪ್ರವೇಶವಾದರೂ ಉದ್ದಲಂಗ ಆ ಕೂಡಲೇ ತನ್ನ ಪ್ರಭಾವವನ್ನು ಕಳೆದುಕೊಳ್ಳಲಿಲ್ಲ. ತದನಂತರದಲ್ಲಿ ಹೊಸಹೊಸ ಫ್ಯಾಶನ್ ನ ನಡುವೆ ಉದ್ದಲಂಗ ಮರೆಯಾಗಿ ಹೋಗಿಬಿಟ್ಟಿತ್ತು. ಈಗ ಪುನಃ ಉದ್ದಲಂಗ ಬೇರೆಬೇರೆ ಹೆಸರಿನಲ್ಲಿ ಪುನರ್ ಪ್ರವೇಶ ಮಾಡುತ್ತಿರುವುದು ಖುಷಿಯ ವಿಷಯವೇ ಸರಿ. ಜೈ ಉದ್ದಲಂಗಂ ಗೆಲ್ಗೆ😊

121. ನೆನಪುಗಳು- ಎಲೆ ಅಡಿಕೆ (ಕವಳ)


ಎಲೆ ಅಡಿಕೆ ಎನ್ನುವುದು ನನಗೆ ಬಾಲ್ಯದಿಂದಲೂ ಚಿರಪರಿಚಿತ ವಸ್ತು. ನಮ್ಮ ಮನೆಯಲ್ಲಿ ಅಜ್ಜಯ್ಯ, ನನ್ನ ಅಮ್ಮ, ಅಮ್ಮನ ಅಣ್ಣ, ತಮ್ಮ ಎಲ್ಲಾ ಎಲೆ ಅಡಿಕೆ ಹಾಕುತ್ತಿದ್ದವರೇ. ನಮ್ಮ ಕಡೆ ಎಲೆ ಅಡಿಕೆಗೆ ಅಂಬಾಡಿ ಎಲೆಯ ಜೊತೆಗೆ ಹಸಿ ಅಡಿಕೆಯನ್ನು ಬಳಸುತ್ತಿದ್ದರು. ನನ್ನ ಅಜ್ಜಯ್ಯ ಹಸಿ ಅಡಿಕೆಯನ್ನು ಒಂದು ಮಣ್ಣಿನ ಗಡಿಗೆಯಲ್ಲಿ ನೀರೊಳಗೆ ನೆನೆಸಿ ಇಡುತ್ತಿದ್ದರು. ಅದರ ಮುಚ್ಚಳ ತೆಗೆದರೆ ಕೊಳಕಾದ ವಾಸನೆ ಮೂಗಿಗೆ ರಪ್ಪನೆ ಬಡಿಯುತ್ತಿತ್ತು. ಆ ಹಸಿ ಅಡಿಕೆಯ ಕವಳ ಕೆಲವೊಮ್ಮೆ ಸೊಕ್ಕು ಬರಿಸಿ ಮುಖಮೂತಿಯನ್ನು ಬಿಸಿಯಾಗುವಂತೆ ಮಾಡುತ್ತಿತ್ತು. ನನ್ನಮ್ಮನ ಹತ್ತಿರ ಎಲೆ ಅಡಿಕೆ ಕುಟ್ಟಿ ತಿನ್ನಲು ಬಳಸುವ ಕುಟ್ಟಾಣಿ ಇದೆ. ತಯಾರಿಸಿದ ಎಲೆಅಡಿಕೆಯನ್ನು ಅದರೊಳಗೆ ಇಟ್ಟು ಕುಟ್ಟಿ ಪುಡಿ ಮಾಡಿ ತಿಂದರೆ ಅದರ ರುಚಿಯೇ ಬೇರೆ! ನಾನು ಮದುವೆಯಾಗಿ ಗಂಡನ ಮನೆಗೆ ಬಂದಾಗ ನೋಡಿದರೆ ಇಲ್ಲಿ ಎಲ್ಲಾ ಗಂಡಸರೂ ಎಲೆ ಅಡಿಕೆ ಹಾಕುವವರೇ! ಆದರೆ ಇಲ್ಲಿ ಕವಳಕ್ಕೆ ದಪ್ಪನೆಯ ವೀಳ್ಯದೆಲೆಯ ಜೊತೆಗೆ ಕೆಂಪಡಿಕೆಯ ಬಳಕೆಯಾಗುತ್ತಿತ್ತು. ಮನೆಮಂದಿಗೇ ತಿನ್ನಲು ವರ್ಷಕ್ಕೆ ಒಂದು ಕ್ವಿಂಟಾಲ್ ಕೆಂಪಡಿಕೆ ಬೇಕಿತ್ತು. ಆರೀತಿಯ ಎಲೆಅಡಿಕೆಯ ಬಳಕೆ ನನ್ನ ಗಂಡನ ಮನೆಯಲ್ಲಿತ್ತು.
ನಾನು ಪ್ರತಿನಿತ್ಯ ಅಲ್ಲದಿದ್ದರೂ ವಿಶೇಷವಾದ ಭೋಜನವಿದ್ದಾಗ ಸಿಹಿಗವಳ ಹಾಕುವವಳು. ನನಗೆ ಕವಳಕ್ಕೆ ಒಂದೆರಡು ಎಲೆ ಸಾಲುವುದಿಲ್ಲ. ಕನಿಷ್ಟ ಐದಾರು ಎಲೆಗಳಾದರೂ ಬೇಕು. ಅವುಗಳನ್ನು ಅಡಿಕೆ ಪುಡಿಯೊಡನೆ ತಿನ್ನುವುದರ ಸೊಗಸೇ ಬೇರೆ. ಎಲ್ಲರೂ ನನಗೆ "ನೀನು ಹಿಂದಿನ ಜನ್ಮದಲ್ಲಿ ಆಡಾಗಿದ್ದಿ" ಅಂತ ತಮಾಷೆ ಮಾಡುತ್ತಿದ್ದರು. ವಿಶೇಷದ ದಿನಗಳಲ್ಲಿ ಮನೆಯ ಹೆಂಗಸರಿಗೆ ಹಾಗೂ ಮಕ್ಕಳಿಗೆ ಎಲೆಅಡಿಕೆಯನ್ನು ರೆಡಿ ಮಾಡಿ ಕೊಡುವ ಕೆಲಸ ನನ್ನದು. ವೀಳ್ಯದೆಲೆಗಳನ್ನು ಒರೆಸಿ, ತೊಟ್ಟು ಹಾಗೂ ಬುಡದ ಚೂಪನೆಯ ಭಾಗವನ್ನು ತುಂಡರಿಸಿ, ಹದವಾಗಿ ಸುಣ್ಣ ಹಚ್ಚಿ, ಒಂದರ ಮೇಲೊಂದು ಎಲೆಗಳನ್ನು ಇಟ್ಟು, ಅಗತ್ಯವಿರುವಷ್ಟೇ ಅಡಿಕೆ ಪುಡಿ ಹಾಕಿ, ಚೆಂದವಾಗಿ ಮಡಚಿ ಎಲ್ಲರಿಗೂ ಕೊಡುವುದು ಒಂದು ಖುಷಿಯ ವಿಷಯ. ತಿಂದ ಮೇಲೆ ಯಾರ ನಾಲಿಗೆ ಹೆಚ್ಚು ಕೆಂಪಾಗಿದೆ ಎಂದು ನೋಡಿಕೊಳ್ಳುವುದು ಎಲೆಅಡಿಕೆಯ ಗಮ್ಮತ್ತಿನ ಒಂದು ಭಾಗ.
ಮಲೆನಾಡಿನಲ್ಲಿ ಎಲೆಅಡಿಕೆಯ ತಬಕು ಇಲ್ಲದ ಮನೆಯೇ ಇಲ್ಲ. ಅದು ಇಲ್ಲಿನ ಸಂಸ್ಕೃತಿಯ ದ್ಯೋತಕ.
ಎಲೆಯನ್ನು ಬರೀ ಅಡಿಕೆಯೊಡನೆ ಭಾರೀ ಊಟದ ನಂತರ ತಿಂದರೆ ಅದರದ್ದೇ ಆದ ಒಳಿತುಗಳಿವೆ. ಆದರೆ ಅದರೊಡನೆ ತಂಬಾಕು ಸೇವಿಸಿದರೆ ಹಾನಿ ತಪ್ಪಿದ್ದಲ್ಲ.
ಮೂಲತಃ ತಾಂಬೂಲ ಎಂದು ಗ್ರಾಂಥಿಕವಾಗಿ ಕರೆಯಲ್ಪಡುವ ಎಲೆಅಡಿಕೆ ಔಷಧೀಯ ಗುಣಗಳನ್ನು ಹೊಂದಿದೆ. ಅದು ಜೀರ್ಣಕಾರಿಯಾಗಿ ಕೆಲಸ ಮಾಡುತ್ತದೆ. ವೀಳ್ಯದೆಲೆಗೆ ಕಫವನ್ನು ಕರಗಿಸುವ ಗುಣವಿದೆ. ಹಾಗೆಯೇ ಅದರಲ್ಲಿ ಬಳಸುವ ಸುಣ್ಣ ಕ್ಯಾಲ್ಸಿಯಂ ನ್ನು ಹೊಂದಿದೆ. ಒಟ್ಟಾರೆ ಹೇಳುವುದಾದರೆ ಹಿಂದಿನ ಕಾಲದಿಂದಲೂ ಸಾಮಾಜಿಕ ಮಾನ್ಯತೆ ಪಡೆದಿರುವ ಎಲೆಅಡಿಕೆಯನ್ನು ಅದರ ಔಷಧೀಯ ಗುಣಗಳಿಗಾಗಿ ಹಿತಮಿತವಾಗಿ ಬಳಸಿದರೆ ಅದರ ಪ್ರಯೋಜನ ಸಿಗುವುದಂತೂ ನಿಜ. ಯಾವುದೇ ವಸ್ತುವಾಗಲಿ ಅದರ ಸದ್ಬಳಕೆಯ ಮೇಲೆ ಅದರ ಪ್ರಯೋಜನ ಸಿಗುತ್ತದೆ. ಹೀಗಾಗಿ ಎಲ್ಲಾ ವಸ್ತುಗಳ ಹಿತಮಿತವಾದ, ಆರೋಗ್ಯಕರ ಬಳಕೆಯನ್ನಷ್ಟೇ ಮಾಡುವ ಪಣ ತೊಟ್ಟರೆ ಲೋಕೋದ್ಧಾರದ ಕಾರ್ಯದಲ್ಲಿ ನಮ್ಮ ಅಳಿಲು ಸೇವೆಯೂ ಸೇರಿದಂತಾಗುತ್ತದೆ.

120. ನೆನಪುಗಳು - ಪೆಟ್ಲೇ 

ಮೊನ್ನೆ ಊರಿಗೆ ಹೋಗಿದ್ದಾಗ ಮುಂಡುಗನ ಓಲಿ ಬೆಳೆಯುತ್ತಿದ್ದ ತೋಡಿನ ಹತ್ತಿರ ಹೋಗಲು ಜೀರ್ಣವಾಗಿದ್ದ ಗದ್ದೆ ಬದುವಿನ ಮೇಲೆ ಸರ್ಕಸ್ ಮಾಡುತ್ತಾ ಹೋಗುವಾಗ ಒಂದು ಪೇಟ್ಲಕಾಯಿ ಗಿಡ ಸಿಕ್ಕಿತು. ಅದನ್ನು ಕಂಡು ನಿಧಿ ಸಿಕ್ಕ ಹಾಗೆ ಅನಿಸಿತು. ಇತ್ತೀಚಿನ ಬಹಳ ವರ್ಷಗಳಲ್ಲಿ ಪೇಟ್ಲಕಾಯಿ ಗಿಡ ನೋಡಲು ಸಿಕ್ಕಿರಲಿಲ್ಲ. ಮೊದಲು ಅಜ್ಜಯ್ಯನ ಮನೆಯ ಧರೆಯ ಮೇಲೆ ಒಂದು ಪೇಟ್ಲಕಾಯಿ ಗಿಡ ಇತ್ತು. ನಂತರದಲ್ಲಿ ಕಾಲನ ಪ್ರಭಾವಕ್ಕೆ ಸಿಲುಕಿ ಅದು ಇಲ್ಲದಾಯಿತು. ಅಷ್ಟಮಿ ಸಮಯದಲ್ಲಿ ಆದರ ತುಂಬಾ ಪೇಟ್ಲಕಾಯಿ ಬರುತ್ತಿತ್ತು. ಆ ಪೇಟ್ಲ ಕಾಯಿಗಳು ಖಾರ ಹಾಗೂ ಘಾಟು ಇರುವ ಕಾಯಿಗಳಾಗಿದ್ದವು. ಪೇಟ್ಲದೊಳಗೆ ಅವುಗಳನ್ನು ಹಾಕಿ ಪೇಟ್ಲದ ಕೋಲಿನಿಂದ ಒತ್ತಿದಾಗ ಅದು ಢಂ ಎಂಬ ಶಬ್ದದೊಡನೆ ಹೊರ ಬರುತ್ತಿತ್ತು. ಪೇಟ್ಲಕಾಯಿ ಸಿಡಿಯುವಾಗ ಅದರ ರಸ ಸಿಡಿದು ಕಣ್ಣುರಿ ಬರುತ್ತಿತ್ತು. ಆದರೂ ಅದನ್ನು ಹೊಡೆಯುವ ಆಟಕ್ಕೆ ಮಿಗಿಲಾದ ಬೇರೆ ಆಟವಿರಲಿಲ್ಲ. ಯಾರ ಪೇಟ್ಲ ಹೆಚ್ಚು ಶಬ್ದ ಮಾಡುತ್ತದೆ ಅನ್ನುವ ಸಣ್ಣ ಸ್ಪರ್ಧಾತ್ಮಕ ಮನೋಭಾವ ನಮ್ಮೊಳಗಿತ್ತು ಕೂಡಾ😊
ಪೇಟ್ಲ ಒಂದು ಸರಳ ಸಾಧನ. ಸಪೂರವಾದ ಒಂದಡಿ ಗಾತ್ರದ ಬಿದಿರಿನ ತುಂಡನ್ನು ತೆಗೆದುಕೊಂಡು ಅದರೊಳಗಿನ ಟೊಳ್ಳನ್ನು ನಯಗೊಳಿಸಲಾಗುವುದು. ತದನಂತರ ಇನ್ನೊಂದು ಕಾಲು ಅಡಿ ಬಿದಿರಿನ ತುಂಡಿನೊಳಗೆ ಆ ಟೊಳ್ಳಿನೊಳಗೆ ಹೊಗಿಸಲಾಗುವಂತಹ ಕೋಲನ್ನು ಫಿಕ್ಸ್ ಮಾಡಲಾಗುವುದು. ಇದೇ ಪೇಟ್ಲ. ನನ್ನಪ್ಪ ನಮಗೆಲ್ಲಾ ಅಷ್ಟಮಿಯ ಸಮಯದಲ್ಲಿ ಪೇಟ್ಲ ಮಾಡಿ ಕೊಡುತ್ತಿದ್ದರು. ಅವರು ಪೇಟ್ಲವನ್ನು ತಯಾರಿ ಮಾಡುವುದನ್ನು ನೋಡುವುದೇ ಒಂದು ಸಂಭ್ರಮ. ಕೆಲವೊಮ್ಮೆ ಪೇಟ್ಲಕಾಯಿ ಸಿಗದಿದ್ದಾಗ ಕಾಟು ಕೆಸುವಿನ ಎಲೆಯನ್ನು ಪೇಟ್ಲದೊಳಗೆ ತುರುಕಿಸಿ ಹೊಡೆಯುವ ಗಮ್ಮತ್ತೇ ಬೇರೆಯದಾಗಿತ್ತು. ಆದರೆ ಕೆಸು ಯಾವತ್ತೂ ಪೇಟ್ಲಕಾಯಿಯಷ್ಟು ಪರಿಣಾಮಕಾರಿಯಾಗಿರಲಿಲ್ಲ.
ಪೇಟ್ಲಕಾಯಿ ಸ್ವಲ್ಪ ಪೊದೆಪೊದೆಯಾಗಿ ಸಣ್ಣ ಗಾತ್ರದ ತೆಳುವಾದ ರೆಂಬೆಗಳನ್ನು ಹೊಂದಿರುವ ಗಿಡ/ಮರದಲ್ಲಿ ಬೆಳೆಯುತ್ತದೆ. ಆ ಕಾಯಿಗಳು ಹಸುರು ಬಣ್ಣದ ಪುಟ್ಟಪುಟ್ಟ ಕಾಯಿಗಳಾಗಿದ್ದು ಗೊಂಚಲು ಗೊಂಚಲಾಗಿ ಬಿಡುತ್ತವೆ. ಅವುಗಳನ್ನು ಮೂಸಿದರೆ ಒಂದು ವಿಶಿಷ್ಟ ಘಾಟು ಇರುತ್ತದೆ. ಪೇಟ್ಲಕಾಯಿಯನ್ನು ಮತ್ತೆ ಯಾವುದಕ್ಕೆಲ್ಲ ಬಳಸುತ್ತಾರೆ ಎನ್ನುವ ಅರಿವು ನನಗಿಲ್ಲ. ಆದರೆ ಬಾಲ್ಯಕಾಲದಲ್ಲಿ ಪೇಟ್ಲವನ್ನು ಢಾಂಢೂಂ ಎಂದು ಹೊಡೆಯುತ್ತಿದ್ದ ನೆನಪಂತೂ ಅಚ್ಚಳಿಯದೆ ಉಳಿದಿದೆ. ಕೆಲವೊಮ್ಮೆ ಏರ್ ಟೈಟ್ ಥರ ಆಗಿ ಪೇಟ್ಲವನ್ನು ಹೊಡೆಯಲಿಕ್ಕಾಗದೆ ಒದ್ದಾಡಿದ್ದೂ ಇದೆ. ಚಿಕ್ಕವಳಾಗಿದ್ದ ನನ್ನನ್ನು ಆಗ ನನಗಿಂತ ದೊಡ್ಡಕ್ಕಿದ್ದ ನನ್ನ ಕಸಿನ್ಸ್ ಸಹಾಯ ಮಾಡದೆ ಗೋಳು ಹೊಯ್ಕೊಳ್ಳುತ್ತಿದ್ದದ್ದೂ ಇದೆ. ಒಂದು ಕಡೆ ಪೇಟ್ಲವನ್ನು ಹೊಡೆಯಲೇ ಬೇಕೆಂಬ ಹುಮ್ಮಸ್ಸು - ಹೊಡೆಯಲಾಗದಿದ್ದಾಗ ಉಳಿದವರ ಸಹಾಯ ಸಿಗದ ಅಸಹಾಯಕ ಸ್ಥಿತಿ. ಇಂತಹ ಪರಿಸ್ಥಿತಿಯಲ್ಲಿ ನಮ್ಮೊಳಗಾಗುವ ತಾಕಲಾಟ. ಇವೆಲ್ಲ ಆಟದ ಅವಿಭಾಜ್ಯ ಅಂಗಗಳಾಗಿದ್ದವು.
ಒಂದು ಪೇಟ್ಲ ಎನ್ನುವುದು ಎಷ್ಟೆಲ್ಲಾ ಅನುಭವ ಕೊಡುವ ವಸ್ತುವಾಗಿತ್ತಾಗ! ಈಗಲೂ ಪೇಟ್ಲದೊಡನೆ ರಾಶಿ ರಾಶಿ ನೆನಪುಗಳು ನನ್ನೊಳಗೆ ಹರಿದು ಬರುತ್ತವೆ ಅಂದರೆ ಸುಳ್ಳಲ್ಲ.



119. ನೆನಪುಗಳು - ಬಾಲ್ಯ
ಮೊನ್ನೆ ಊರಿಗೆ ಹೋಗುವಾಗ "ಹೊರಗೆ ತಿನ್ನುವುದಿಲ್ಲ" ಎನ್ನುವ ನನ್ನ ವ್ರತವನ್ನು ಮುರಿದು ಸಿದ್ದಾಪುರದಲ್ಲಿದ್ದ ಸದಾನಂದ ಭಟ್ಟರ ಸಣ್ಣ ಅಂಗಡಿಯಲ್ಲಿ ರುಚಿರುಚಿಯಾದ ಮಸಾಲೆ ಮಂಡಕ್ಕಿ ತಿಂದದ್ದಾಯಿತು. ಏನು ರುಚಿ ಅಂತೀರಾ ಅದಕ್ಕೆ. ಅದು ದಪ್ಪನೆಯ ಮಂಡಕ್ಕಿ. ಅದಕ್ಕೆ ಉಪ್ಪು, ಖಾರ, ತೆಂಗಿನೆಣ್ಣೆಯನ್ನು ಹಾಕಿ ಹದವಾಗಿ ಕಲೆಸಿ ಅದರ ಮೇಲೆ ಕತ್ತರಿಸಿದ ನೀರುಳ್ಳಿ, ಟೊಮೇಟೊ, ಕುತ್ತುಂಬರಿ ಸೊಪ್ಪು ಹಾಕಿ ತಿನ್ನಲು ಕೊಡುತ್ತಾರೆ. ಕಳೆದ ಐವತ್ತು ವರ್ಷಗಳಿಂದ ಈ ಅಂಗಡಿಯನ್ನು ನಡೆಸುತ್ತಿರುವ ಅವರು ಕ್ವಾಲಿಟಿಯಲ್ಲಿ ಕಾಂಪ್ರಮೈಸ್ ಮಾಡುವುದಿಲ್ಲ. ಇಕಿಗಾಯ್ ಪುಸ್ತಕದಲ್ಲಿ ಒಂದು ಕಡೆ ಬಹಳ ವರ್ಷಗಳಿಂದ ಒಂದೇ ರುಚಿಯ ಸೂಶಿಯನ್ನು ತಯಾರಿಸುವ ವ್ಯಕ್ತಿಯ ಬಗ್ಗೆ ಬರೆಯಲಾಗಿದೆ. ನನಗೆ ಭಟ್ಟರು ಮಾಡಿದ ಮಸಾಲೆ ಮಂಡಕ್ಕಿ ತಿನ್ನುವಾಗ ಅದೇ ಚಿತ್ರ ಕಣ್ಮುಂದೆ ಬಂದಿತು. ಏಕೆಂದರೆ ಹಲವಾರು ವರ್ಷಗಳಿಂದ ಅಲ್ಲಿ ನಾನು ತಿನ್ನುತ್ತಿರುವ ಮಸಾಲೆ ಮಂಡಕ್ಕಿಯ ರುಚಿಯಲ್ಲಿ ನನಗೆ ಯಾವ ವ್ಯತ್ಯಾಸವೂ ಕಂಡು ಬಂದಿಲ್ಲ. ಪ್ರತೀ ಬಾರಿ ತಿಂದಾಗಲೂ ಅದೇ ರುಚಿ, ಅದೇ ಹದ!
ನಂತರದ ಸರದಿ ಸೋಡಾದ್ದು. ಬರೀ ಸೋಡಾವಲ್ಲ, ಗೋಲಿಸೋಡಾ😊 ಅಲ್ಲಿ ಮಜ್ಜಿಗೆ ಸೋಡಾ ಹಾಗೂ ಶುಂಠಿ ಸೋಡಾ ಸಿಗುತ್ತದೆ. ಬಹಳ ಚೆನ್ನಾಗಿರುತ್ತದೆ. ಪ್ರಥಮ ಬಾರಿ ಅಲ್ಲಿಗೆ ಹೋದಾಗ ಗೋಲಿಸೋಡಾವನ್ನು ನೋಡಿದಾಗ ನನಗೆ ಒಂದು ರೀತಿಯ ವಿಚಿತ್ರ ಖುಷಿಯಾಗಿತ್ತು. ಕಳೆದು ಹೋದ ವಸ್ತು ಬಹಳ ವರ್ಷಗಳ ಮೇಲೆ ಸಿಕ್ಕಿದ ಖುಷಿಯದು!
ನನಗೆ ಚಿಕ್ಕವಳಾಗಿದ್ದಾಗಿಂದಲೂ ಗೋಲಿಸೋಡಾ ಅಂದರೆ ಒಂದು ರೀತಿಯ ಸೆಳೆತ. ಸೋಡಕ್ಕಿಂತ ಅದರ ಬಾಟಲಿಯ ಮೋಹ! ಅಂಗಡಿಯವರು ಅದರೊಳಗಿರುವ ಗೋಲಿಯನ್ನು ಒತ್ತಿದಾಗ 'ಟುಸ್' ಎನ್ನುವ ಶಬ್ದದೊಂದಿಗೆ ಸಣ್ಣ ಗ್ಯಾಸ್ ರಿಲೀಸ್ ಆಗಿ ಅದು ಓಪನ್ ಆಗುವ ರೀತಿಯೇ ಕುತೂಹಲಕಾರಿ. ಅದರೊಳಗೆ ಗೋಲಿ ಹೇಗೆ ಹೋಗುತ್ತದೆ, ಸೋಡ ಹೇಗಿರುತ್ತದೆ ಎನ್ನುವುದು ಆಗ ಮಕ್ಕಳಾಗಿದ್ದ ನಮಗೆಲ್ಲ ಸೋಜಿಗದ ವಿಷಯವಾಗಿತ್ತು. ಆಗ ಎರಡು ಮೂರು ರೀತಿಯ ಬಣ್ಣಗಳಲ್ಲಿ ಸೋಡಾ ಸಿಗುತ್ತಿದ್ದ ನೆನಪು.
ಈಗಿನ ಕಾರ್ಬೊನೇಟೆಡ್ ಡ್ರಿಂಕ್ಸ್ ಬಂದು ಗೋಲಿಸೋಡಾ ಮಾರ್ಕೆಟ್ ನಿಂದ ಮರೆಯಾದರೂ ಅದಕ್ಕಿರುವ ಗ್ರಾಮ್ಯದ ಸೊಗಡಿಗೆ ಅವ್ಯಾವವೂ ಸಮಾನವಲ್ಲ. ಗೋಲಿಸೋಡಾಕ್ಕೆ ಆದರದ್ದೇ ಆದ ಅನನ್ಯತೆ ಇದೆ. ಅದು ಕೇವಲ ಒಂದು ಕುಡಿಯುವ ವಸ್ತುವಲ್ಲ. ಮಕ್ಕಳ ಮುಂದೆ ರೋಚಕ ಲೋಕವನ್ನು ತೆರೆದಿಡುವ ಈ ಗೋಲಿಸೋಡಾ ತನ್ನ ಬಾಟಲಿಯ ಆಕಾರ ಮತ್ತು ರುಚಿಯಿಂದ ಅದನ್ನು ಕುಡಿದಿರುವ ನಮ್ಮೆಲ್ಲರೊಳಗಿನ ಭಾವವಾಗಿ ಉಳಿದಿದೆ ಎಂದರೆ ತಪ್ಪಲ್ಲ!

118.ನೆನಪುಗಳು - ಒತ್ತು ಶ್ಯಾವಿಗೆ 
ಒಂದೆರಡು ದಿವಸಗಳ ಮಟ್ಟಿಗೆ ಅಮ್ಮನ ಮನೆಗೆ ಹೋಗಿದ್ದೆ. ಅತ್ತಿಗೆ ಒತ್ತು ಶಾವಿಗೆ ಮಾಡಿದ್ದಳು. ಶಾವಿಗೆ ಒತ್ತುವುದನ್ನು ನೋಡುತ್ತಿರುವಾಗ ಬಾಲ್ಯದ ನೆನಪಿನ ಝಲಕ್ ಒಳಗಿಂದ ಒತ್ತಿಕೊಂಡು ಬಂದಿತು.
ಹಿಂದೆ ಮನೆಯಲ್ಲಿ ವಿಶೇಷದ ದಿನಗಳಲ್ಲಿ ಮನೆ ತುಂಬ ಜನರಿದ್ದಾಗ ಒತ್ತು ಶಾವಿಗೆಯನ್ನು ಮಾಡುವುದು ಒಂದು ಪರಿಪಾಠವಾಗಿತ್ತು. ನಮ್ಮಂತಹ ಮಕ್ಕಳಿಗೆ ಶಾವಿಗೆ ಮಣೆ ತಿರುಗಿಸುವ ಕೆಲಸ ಕೊಡುತ್ತಿದ್ದರು. ನಾವು ಕಾಂಪಿಟೇಶನ್ನಲ್ಲಿ ಒಬ್ಬರಾದ ಮೇಲೆ ಒಬ್ಬರು ಶಾವಿಗೆ ಒತ್ತುತ್ತಿದ್ದೆವು. ಶಾವಿಗೆ ಮಣೆಯನ್ನು ತಿರುಗಿಸುವುದು ಆಗ ನಮಗೆ ಥ್ರಿಲ್ಲಿಂಗ್ ವಿಷಯ ಆಗಿತ್ತು. ಆದರೆ ಹಿಟ್ಟು ತಣ್ಣಗಾಗಿ ಒತ್ತುವುದು ಬಿಗಿಯಾದಾಗ ನಾವು ಅಲ್ಲಿಂದ ಜಾಗ ಖಾಲಿ ಮಾಡುತ್ತಿದ್ದೆವು.
ಮೂರು ಕಾಲಿನ ಕಬ್ಬಿಣದ ಶಾವಿಗೆ ಮಣೆ ಸ್ವಲ್ಪ ಭಾರ ಇರುತ್ತದೆ. ಮೂರು ಕಾಲಿನ ಮೇಲೆ ಮಧ್ಯ ಓಪನ್ ಇರುವ ಕಬ್ಬಿಣದ ಪ್ಲೇಟ್ ಒಂದನ್ನು ಕೂರಿಸಲಾಗಿರುತ್ತದೆ. ಅದರ ಮೇಲೆ ಸಮನಾಂತರವಾಗಿಟ್ಟಿರುವ ಎರಡು ಸರಳಿನ ಮೇಲೆ ಅಡ್ಡವಾಗಿ ಫಿಕ್ಸ್ ಮಾಡಿದ ಹ್ಯಾಂಡಲ್ ಇರುತ್ತದೆ. ಅದರ ನಡುವೆ ಮೇಲೆ ಕೆಳಗೆ ಮೂವ್ ಮಾಡಲು ಸೂಕ್ತ ವಿನ್ಯಾಸವಿರುವ ಮತ್ತೊಂದು ಸರಳು ಇರುತ್ತದೆ. ಆ ಸರಳಿನ ಕೊನೆಯಲ್ಲಿ ಲೋಟದಾಕಾರದ ಹಿತ್ತಾಳೆಯ ದಪ್ಪನೆಯ ಒತ್ತುವ ಸಾಧನ ಜೋಡಿಸಲಾಗಿರುತ್ತದೆ. ಮಧ್ಯದಲ್ಲಿರುವ ಕಬ್ಬಿಣದ ಪ್ಲೇಟಿಗೆ ಕೆಳಗೆ ಸಣ್ಣ ರಂಧ್ರದ ಬಿಲ್ಲೆಗಳನ್ನು ಸೇರಿಸಬಹುದಾದಂತಹ ಲೋಟದಾಕಾರದ ಹಿತ್ತಾಳೆಯ ಅಚ್ಚು ಇರುತ್ತದೆ. ಅದರಲ್ಲಿ ಬೇಯಿಸಿದ ಶಾವಿಗೆ ಹಿಟ್ಟನ್ನು ಹಾಕಿ ಹ್ಯಾಂಡಲ್ ತಿರುಗಿಸುತ್ತಾ ಒತ್ತಿದಾಗ ಕೆಳಗೆ ಇಟ್ಟಿರುವ ತಟ್ಟೆಯಲ್ಲಿ ಬಿಡಿಬಿಡಿಯಾದ ಶಾವಿಗೆ ಎಳೆಗಳು ಮುದ್ದೆಯಾಗಿ ಬೀಳುತ್ತವೆ.
ಶಾವಿಗೆ ಹಿಟ್ಟನ್ನು ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ತಯಾರಿಸುತ್ತಾರೆ. ನನ್ನ ತವರುಮನೆಯಲ್ಲಿ ಬೆಳ್ತಿಗೆ ಅಕ್ಕಿ, ಅವಲಕ್ಕಿ, ಕಾಯಿ ಸೇರಿಸಿ ರುಬ್ಬಿ ಬೇಯಿಸಿ ಹಿಟ್ಟನ್ನು ತಯಾರಿಸುತ್ತಾರೆ. ನನ್ನ ಅತ್ತೆ ಮನೆಯಲ್ಲಿ ಹಿಟ್ಟನ್ನು ಉಕ್ಕರಿಸುತ್ತಾರೆ. ಬೆಲ್ಲ ಹಾಕಿ ಸಿಹಿ ಶಾವಿಗೆಯನ್ನು ಕೂಡಾ ಮಾಡುತ್ತಾರೆ. ಹೀಗೆ ತಯಾರಾದ ಶಾವಿಗೆಗೆ ಕಾಯಿಹಾಲು/ಚಟ್ನಿ/ತುಪ್ಪ ಹಾಕಿಕೊಂಡು ತಿನ್ನಲು ಸೊಗಸಾಗಿರುತ್ತದೆ.
ಶಾವಿಗೆ ಮಾಡುವ ಪ್ರಕ್ರಿಯೆ ಸ್ವಲ್ಪ ಸಂಕೀರ್ಣ ಕೆಲಸವಾದರೂ ಎಲ್ಲರ ಸಹಾಯ ಹಸ್ತ ಸಿಕ್ಕಾಗ ಸಲೀಸಾಗಿ ನಡೆಯುತ್ತದೆ. ಇದು ಮನೆ ಮಂದಿಯನ್ನೆಲ್ಲ ತೊಡಗಿಸಿ ಮಾಡುವಂತಹ ಕೆಲಸ. ಶಾವಿಗೆಯ ಎಲ್ಲಾ ಬಿಡಿ ಎಳೆಗಳು ಮುದ್ದೆಯಾಗಿ ಒಂದಾಗುವಂತೆ ಈ ಕೆಲಸ ಎಲ್ಲರನ್ನೂ ಒಗ್ಗೂಡಿಸುತ್ತದೆ. ಶಾವಿಗೆ ಒತ್ತುತ್ತಾ ಮಾಡುವ ಒಂದಿಷ್ಟು ಹರಟೆ, ಶಾವಿಗೆ ಒತ್ತಲು ಮುಂದಾಗುವ ಮಕ್ಕಳ ಕಿತ್ತಾಟ ದೈನಂದಿನ ಏಕತಾನತೆಯನ್ನು ಹೋಗಲಾಡಿಸಿ ಮನೆಮಂದಿಯ ಮನಸ್ಸನ್ನು ರಿಫ್ರೆಶ್ ಮಾಡುತ್ತದೆ. ಪ್ರಾಯಶಃ ನಮ್ಮ ಹಿರಿಯರು ಇದೇ ಕಾರಣಕ್ಕಾಗಿಯೆ ಶಾವಿಗೆಯಂತಹ ತಿಂಡಿಯ ಆವಿಷ್ಕಾರ ಮಾಡಿರಬಹುದೇನೋ?

117. ನೆನಪುಗಳು - ಕಡುಬು 
ನಾನು ಸಾಗರದ ಕಡೆ ಮದುವೆಯಾಗಿ ಬಂದಾಗ ಅಲ್ಲಿನ ವಿವಿಧ ರೀತಿಯ ಕಡುಬುಗಳನ್ನು ನೋಡಿ ಆಶ್ಚರ್ಯವಾಗಿತ್ತು. ಸೌತೆಕಾಯಿ ಕಡುಬು, ಚೀನಿಕಾಯಿ ಕಡುಬು, ಹಲಸಿನಹಣ್ಣಿನ ಕಡುಬು, ಉದ್ದಿನಕಡುಬು.... ಹೀಗೆ ವೈವಿಧ್ಯಮಯ ಕಡುಬುಗಳ ಪಟ್ಟಿಯೇ ಇತ್ತು. ಆ ಎಲ್ಲಾ ಕಡುಬುಗಳನ್ನು ಬಾಳೆಎಲೆಯ ಕೊಟ್ಟೆಯಲ್ಲಿ ಮಾಡುತ್ತಿದ್ದರು. ದೊಡ್ಡ ಬಾಳೆ ಸಿಗುಳನ್ನು ತೆಗೆದುಕೊಂಡು ಅದನ್ನು ಬಾಡಿಸಿ ಸುತ್ತಿ ಒಂದು ಭಾಗವನ್ನು ಬಾಳೆನಾರಿನಿಂದ ಕಟ್ಟಿ ಇನ್ನೊಂದು ಭಾಗದಿಂದ ಹಿಟ್ಟನ್ನು ತುಂಬಿಸಿ ತದನಂತರ ಆ ಭಾಗವನ್ನೂ ನಾರಿನಿಂದ ಕಟ್ಟಿ ದೊಡ್ಡ ಕಡಾಯಿಯಲ್ಲಿ ಕುದಿಯುತ್ತಿರುವ ನೀರಿನೊಳಗೆ ಮುಳುಗಿಸಿ ಗಂಟೆಗಟ್ಟಲೆ ಬೇಯಿಸಲಾಗುತ್ತಿತ್ತು. ಚೀನಿಕಾಯಿ/ಸೌತೆಕಾಯಿ ಕಡುಬನ್ನು ಬೆಂದ ನಂತರ ತಿನ್ನುವ ರೀತಿಯೇ ಬಾಯಿಯಲ್ಲಿ ನೀರು ಬರಿಸುವಂತಹುದು. ಅದನ್ನು ತುಪ್ಪದೊಳಗದ್ದಿ ಅಥವಾ ಗಟ್ಟಿ ಮೊಸರಿನೊಡನೆ ತಿನ್ನುವುದು ಪರಮಾನಂದವಾದುದು.
ಹಲಸಿನ ಎಲೆಗಳನ್ನು ಉಪಯೋಗಿಸಿ ಸಣ್ಣ ಕೊಟ್ಟೆಯಾಕಾರವನ್ನು ಮಾಡಿ ಅದರೊಳಗೆ ಹಿಟ್ಟು ಹಾಕಿ ಅಟ್ಟದಲ್ಲಿ ಬೇಯಿಸುವುದು ಇನ್ನೊಂದು ವಿಧಾನ.
ಒಂದೇ ಅಳತೆಯ ಹಲಸಿನ ಎಲೆಗಳನ್ನು ತೆಗೆದುಕೊಂದು ಅದರ ಅಗಲವಾದ ಭಾಗದ ನಯವಾದ ಭಾಗವನ್ನು ಒಳಮುಖ ಮಾಡಿ ತುದಿಗಳನ್ನು ಒಂದರ ಮೇಲೆ ಇನ್ನೊಂದನ್ನಿಟ್ಟು ಹಿಡಿಕಡ್ಡಿಯಿಂದ ಚುಚ್ಚಬೇಕು. ತದನಂತರ ಎರಡು ಎಲೆಗಳನ್ನು ಮೇಲೆತ್ತಿ ಜೋಡಿಸಿ ಅದಕ್ಕೆ ಹಿಡಿಕಡ್ಡಿಯಿಂದ ಚುಚ್ಚಿ ಜೋಡಿಸಬೇಕು. ಹಾಗೆ ಜೋಡಿಸಿದ ಎರಡೂ ಎಲೆಗಳ ಮತ್ತೊಂದು ಭಾಗಕ್ಕೆ ಉಳಿದ ಎರಡು ಎಲೆಗಳನ್ನೆತ್ತಿ ಹಿಡಿಕಡ್ಡಿಯಿಂದ ಚುಚ್ಚಿ ಜೋಡಿಸಬೇಕು. ನಾಲ್ಕೂ ಎಲೆಗಳ ಜೋಡಣೆಯಾದಾಗ ಅದರೊಳಗೊಂದು ಉದ್ದನೆಯ ಬಟ್ಟಲಾಕಾರ ನಿರ್ಮಿತವಾಗುತ್ತದೆ. ಅದರೊಳಗೆ ಹಿಟ್ಟನ್ನು ಹಾಕಿ ಅಟ್ಟದೊಳಗಿಟ್ಟು ಬೇಯಿಸಿದರೆ ಹಲಸಿನ ಕೊಟ್ಟೆ ಕಡುಬು ರೆಡಿ. ಇದರ ಕಂಪು ಕೂಡಾ ಬಹಳ ಸೊಗಸು. ಚಟ್ನಿ ಮತ್ತು ಕಾಯಿಹಾಲಿನೊಡನೆ ತಿನ್ನಲು ಬಲು ರುಚಿ.
ಇಂತಹ ಆರೋಗ್ಯಕರ ತಿಂಡಿಗಳೇ ನಮ್ಮ ಜಿಹ್ವಾ ಚಾಪಲ್ಯವನ್ನು ತಣಿಸುತ್ತಿದ್ದವು ಅಂದರೆ ಸತ್ಯವೇ ತಾನೇ?


116. ನೆನಪುಗಳು - ಕೊಟ್ಟೆ ಕಡಬು 

ನನ್ನ ಬಾಲ್ಯದಲ್ಲಿ ಹಬ್ಬದ ದಿನಗಳಲ್ಲಿ ನಮ್ಮ ಮನೆಯಲ್ಲಿ ಕೊಟ್ಟೆ ಕಡುಬು, ಕಾಯಿಹಾಲು, ಚಟ್ನಿ ಸರ್ವೇ ಸಾಮಾನ್ಯ. ಅದಕ್ಕೆ ಮೂಡೆ ಅಂತ ಕರೆಯುತ್ತಾರೆ ಕೂಡಾ. ಅದರ ತಯಾರಿ ಬಹಳ ಆಸಕ್ತಕರ. ಹಬ್ಬಕ್ಕೆ ಒಂದು ವಾರದ ಮುಂಚೆಯೇ ನನ್ನ ಸೋದರತ್ತೆ ನಾಗವೇಣಿ ಗದ್ದೆ ಬೈಲಲ್ಲಿ ಸುಮಾರು ದೂರ ನಡೆದು ಹೋಗಿ ಅಲ್ಲಿದ್ದ ಒಂದು ತೋಡಿನ ಮರಗಳ ಸಂಧಿಯಲ್ಲಿ ಮಟ್ಟಿಯಾಗಿ ಬೆಳೆದಿದ್ದ ಮುಂಡುಗನ ಓಲಿಯನ್ನು ಕೊಯ್ದು ತರುತ್ತಿದ್ದರು. ಅವರ ಬಾಲವಾಗಿ ನಾನು ಅವರ ಹಿಂದೆ ಹೋಗುತ್ತಿದ್ದೆ.
ನೀರಿನ ಹರಿವು ಇರುವಲ್ಲಿ ಹೆಚ್ಚಾಗಿ ಕಾಣಸಿಗುವ ಈ ಓಲಿಯ ಹಿಂಭಾಗದಲ್ಲಿ, ಬದಿಗಳಲ್ಲಿ ಚೂಪನೆಯ ಮುಳ್ಳುಗಳಿರುವುದರಿಂದ ಅದನ್ನು ಕೊಯ್ಯುವುದು ಬಹಳ ಕಷ್ಟದ ಕೆಲಸವೇ ಸೈ. ನಾಗವೇಣತ್ತೆ ಗಟ್ಟಿಗಿತ್ತಿ. ಬಹಳ ಸರಾಗವಾಗಿ ಕೊಯ್ಯುವ ಕೆಲಸ ಮಾಡುತ್ತಿದ್ದರು. ಆ ಮುಂಡುಗನ ಓಲಿಯನ್ನು ಒಂದೊಂದಾಗಿ ಹಿಡಿದು ಅದನ್ನು ಅವರು ಕರಕರನೆ ಕೊಯ್ಯುವುದನ್ನು ನಾನು ಬಾಯಿಬಿಟ್ಟುಕೊಂಡು ನೋಡುತ್ತಿದ್ದೆ. ಉದ್ದನೆಯ ಆ ಓಲಿಗಳನ್ನು ತನ್ನ ಮೈಗೆ ಚುಚ್ಚದಂತೆ ಹಿಡಿದುಕೊಂಡು ಬಂದ ಮೇಲೆ ಮನೆಯ ಹೊರಗಡೆ ಕುಳಿತು ಅದರ ಮುಳ್ಳನ್ನು ಹೆರೆದು ತೆಗೆಯುತ್ತಿದ್ದರು. ನಂತರ ಅಲ್ಲಿಯೇ ಕಟ್ಟಿಗೆ ಒಟ್ಟಿ ಬೆಂಕಿ ಮಾಡಿ ಆ ಹೆರೆದ ಎಲೆಗಳನ್ನು ಬಾಡಿಸುತ್ತಿದ್ದರು. ತದನಂತರ ಅವುಗಳನ್ನು ಅಗಲ ಮಾಡಿ ಒಂದರೊಳಗೊಂದು ಓಲಿಗಳನ್ನಿಟ್ಟು ಉರುಟಾದ ಆಕಾರದ ಸಿಂಬೆ ಮಾಡಿಡುತ್ತಿದ್ದರು. ಹಬ್ಬದ ಹಿಂದಿನ ದಿನ ಆ ಸಿಂಬೆಯಲ್ಲಿದ್ದ ಓಲಿಗಳನ್ನು ಒಂದೊಂದಾಗಿ ತೆಗೆದು ಒರೆಸಿ ಮಡಚಿ ಹಿಡಿಸುಡಿ ಕಡ್ಡಿ ಚುಚ್ಚಿ ಕೊಟ್ಟೆಯನ್ನು ಕಟ್ಟುತ್ತಿದ್ದರು. ತಯಾರಾದ ಕೊಟ್ಟೆಯನ್ನೆತ್ತಿ ಅದರ ಎಡಕುಗಳಲ್ಲಿ ಬೆಳಕೇನಾದರೂ ಕಾಣಿಸುತ್ತದಾ ಅಂತ ಪರೀಕ್ಷಿಸಿ ಸರಿಯಾಗಿರುವ ಕೊಟ್ಟೆಯನ್ನು ಬದಿಗಿರಿಸಿ ಹಬ್ಬದ ದಿನ ಬೆಳಗ್ಗೆ ಅದಕ್ಕೆ ಕಡುಬಿನ ಹಿಟ್ಟನ್ನು ಹಾಕಿ ಕಡುಬಿನ ಅಟ್ಟದಲ್ಲಿ ಬೇಯಿಸುತ್ತಿದ್ದರು. ಹೀಗೆ ತಯಾರಾದ ಕಡುಬಿಗೆ ಒಂದು ಒಳ್ಳೆಯ ಕಂಪು ಇರುತ್ತದೆ. ಕಾಯಿಹಾಲು/ಚಟ್ನಿಯೊಡನೆ ಈ ಕಡುಬನ್ನು ತಿನ್ನುವ ಸೊಗಸೇ ಬೇರೆ!
ನಮ್ಮ ಬಾಲ್ಯಕಾಲದಲ್ಲಿ ದೊಡ್ಡವರು ಕೊಟ್ಟೆಯನ್ನು ತಯಾರಿಸುವ ಇಡೀ ಪ್ರಕ್ರಿಯೆಯೇ ನಮಗೆ ಸೋಜಿಗವಾಗಿ ಕಾಣುತ್ತಿತ್ತು. ಅದೊಂದು ನಿಗೂಢ ವಿಷಯವಾಗಿ ಕಾಣುತ್ತಿತ್ತು. ಯಾವುದೋ ತೋಡಿನ ಹತ್ತಿರ ಮಟ್ಟಿಯಾಗಿ ಬೆಳೆಯುವ ಮುಂಡುಗನ ಗಿಡದ ಮುಳ್ಳಿನ ಓಲಿ ಕಡುಬಿನ ಕೊಟ್ಟೆಯಾಗಿ ಮಾರ್ಪಡುವುದು ಚಿಕ್ಕವರಾಗಿದ್ದ ನಮಗೆ ನಿಗೂಢವಾಗಿ ಕಾಣದೆ ಮತ್ತೇನು?
ಬಗೆದಷ್ಟು ಒಂದೊಂದಾಗಿ ಹೊರಬರುವ ಇಂತಹ ನೆನಪುಗಳ ಆಕರವಾದ ನನ್ನ ಬಾಲ್ಯದ ಬಗ್ಗೆ ನನಗೆ ಹೆಮ್ಮೆ ಇದೆ.


115. ಹೊಂಗಿರಣ - ಕಲಿಕಾ ವಿಧಾನ 

ಶಿಕ್ಷಕರಾಗಿ ಶಿಕ್ಷಣ ಕ್ಷೇತ್ರದಲ್ಲಿ ಹತ್ತು ಹದಿನೈದು ವರ್ಷಗಳ ನಮ್ಮ ಅನುಭವ ಇಡೀ ಶಿಕ್ಷಣ ವ್ಯವಸ್ಥೆಯ ಬಗ್ಗೆ ನಮ್ಮೊಳಗೆ ಪ್ರಶ್ನೆಗಳನ್ನು ಹುಟ್ಟಿಸಿ ಆಳವಾದ ಚಿಂತನೆ ತೊಡಗಿಸಿದ್ದು ನಾವು ಹೊಂಗಿರಣ ಶಾಲೆ ಶುರು ಮಾಡಲು ಮುಖ್ಯ ಪ್ರೇರಣೆ. ಯಾವುದೇ ಶಿಕ್ಷಣ ಸಂಸ್ಥೆ ಒಂದು ಮಾತೃ ಸಂಸ್ಥೆಯ ಛತ್ರ ಛಾಯೆಯಡಿ ಬೆಳೆಯಬೇಕೆಂಬ ಕಾನೂನಿರುವುದರಿಂದ 2002 ಅಕ್ಟೋಬರ್ 24ರಂದು ನಾವೊಂದಿಷ್ಟು ಶಿಕ್ಷಕ ಮಿತ್ರರು, ಆತ್ಮೀಯರು ಸೇರಿ ಸಾಗರ ಅಕಾಡೆಮಿ ಆಫ್ ಎಜುಕೇಶನ್ ಎಂಬ ದತ್ತಿಸಂಸ್ಥೆಯನ್ನು ನೋಂದಣಿ ಮಾಡಿಸಿದೆವು. ಯಾವುದೇ ವಾಣಿಜ್ಯೀಕರಣ ಉದ್ದೇಶವನ್ನಿಟ್ಟುಕೊಳ್ಳದೆ ಗ್ರಾಮೀಣ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಂತಹ ಶಾಲೆಯನ್ನು ಮಾಡಬೇಕೆಂಬ ಕಲ್ಪನೆಯನ್ನಿಟ್ಟುಕೊಂಡು ರಚಿತವಾದ ನಮ್ಮ ಟ್ರಸ್ಟ್ ಹದಿನೇಳು ವರ್ಷಗಳ ತನ್ನ ಸತತ, ನಿರಂತರ ಪ್ರಯತ್ನದಿಂದ ಅಮಟೆಕೊಪ್ಪದ ಹನ್ನೊಂದು ಎಕರೆಯ ಕ್ಯಾಂಪಸ್ಸಿನಲ್ಲಿ ಹೊಂಗಿರಣ ಸ್ಕೂಲ್ ಆಫ್ ಎಕ್ಸೆಲೆನ್ಸ್, ಹೊಂಗಿರಣ ಪದವಿಪೂರ್ವ ಕಾಲೇಜು, ಹೊಂಗಿರಣ ಹಾಸ್ಟೆಲ್ ಗಳನ್ನು ಯಶಸ್ವಿಯಾಗಿ ರೂಪಿಸಿ ಬೆಳೆಸಿದೆ ಎನ್ನಲು ಹೆಮ್ಮೆ ಎನಿಸುತ್ತದೆ.
ನಮ್ಮೀ ಅಂಗಸಂಸ್ಥೆಗಳನ್ನು ಬೆಳೆಸಿದ ದಾರಿ ಸುಲಭಸಾಧ್ಯದ್ದಾಗಿರಲಿಲ್ಲ. ಏಳುಬೀಳುಗಳಿದ್ದವು; ಪ್ರತಿಕೂಲ ಪರಿಸ್ಥಿತಿಗಳಿದ್ದವು; ಕಠಿಣ ಸಮಯ ಬಂದೊದಗಿದ್ದವು. ಆದರೆ ಇವೆಲ್ಲವೂ ನಮ್ಮ ಧ್ಯೇಯದಿಂದ ನಮ್ಮನ್ನು ವಿಚಲಿತಗೊಳಿಸಲಿಲ್ಲ.
ಇದಕ್ಕೆ ಮುಖ್ಯ ಕಾರಣ ನಮಗೆ ನಾವು ಕೈಗೆತ್ತಿಕೊಂಡಿರುವ ಕಾರ್ಯದ ಬಗ್ಗೆ ಇದ್ದ ಸ್ಪಷ್ಟತೆ. ಹಾಗೆಯೇ ನಮ್ಮ ಮಾತೃ ಸಂಸ್ಥೆಯ ಹೆಚ್ಚಿನ ಸದಸ್ಯರು ಶಿಕ್ಷಕರಾಗಿರುವುದರಿಂದ ಹೊಂಗಿರಣದಲ್ಲಿನ ಕಲಿಕಾ ವ್ಯವಸ್ಥೆಯನ್ನು ಇನ್ನಷ್ಟು ಗಟ್ಟಿ ಮಾಡುವುದು ನಮ್ಮ ಆದ್ಯತೆ ಆಗಿತ್ತೇ ಹೊರತು ಬೇರಾವುದೂ ಅಲ್ಲ. ಸಂಸ್ಥೆಯ ಅಧ್ಯಕ್ಷರಾದ ಸುರೇಶ್ ರವರು ಶಿಕ್ಷಣ ಕ್ಷೇತ್ರದವರಲ್ಲದಿದ್ದರೂ ಗ್ರಾಮೀಣ ಮಕ್ಕಳಿಗೆ ಉತ್ಕೃಷ್ಟವಾದುದನ್ನು ಯುಕ್ತವಾದ ರೀತಿಯಲ್ಲಿ ಕೊಡಬೇಕೆನ್ನುವ ಅವರ ತುಡಿತ ನಮ್ಮೊಳಗಿನ ಶಿಕ್ಷಕತ್ವಕ್ಕಿಂತ ಹೆಚ್ಚಿನದಾಗಿದೆ. ಹೀಗಾಗಿ ನಮ್ಮೆಲ್ಲರ ನಿರುಪಾದಿಕ ಉದ್ದೇಶವೆಂಬುವುದು ನಮ್ಮನ್ನು ಇನ್ನಷ್ಟು ದೃಢವಾಗಿ ಹೊಂಗಿರಣ ಸಂಸ್ಥೆಗಳನ್ನು ನಡೆಸಿಕೊಂಡು ಹೋಗಲು ಶಕ್ತರನ್ನಾಗಿ ಮಾಡಿದೆ. ಯಾವುದೇ ಕಾರಣಕ್ಕೂ ನಾವು ನಮ್ಮ ಉದ್ದೇಶದಿಂದ ವಿಚಲಿತರಾಗದೆ ನಾವು ಕೈಗೊಂಡ ಶಿಕ್ಷಣ ಯಾಗವನ್ನು ನಿಸ್ಪೃಹತೆಯಿಂದ ಮುಂದುವರೆಸಿಕೊಂಡು ಹೋಗುತ್ತೇವೆ ಎನ್ನುವ ಧೃಡ ಸಂಕಲ್ಪ ನಮ್ಮೆಲ್ಲರದ್ದು.
ಯಾವುದೇ ಸಂಸ್ಥೆಯ ಅಳಿವು, ಉಳಿವು ಹಾಗೂ ಬೆಳವಣಿಗೆ ಎನ್ನುವುದು ಆ ಸಂಸ್ಥೆಯ ಸಿದ್ಧಾಂತ ಹಾಗೂ ಸಮಗ್ರತೆಯ ಮೇಲೆ ಅವಲಂಬಿತವಾಗಿದೆ. ತನ್ನ ಸಿದ್ಧಾಂತಕ್ಕೆ ಗಟ್ಟಿಯಾಗಿ ಅಂಟಿಕೊಂಡಿರುವ ಸಾಗರ ಆಕಾಡೆಮಿ ಆಫ್ ಎಜುಕೇಶನ್ ಯಾವ ಗಾಳಿಸುದ್ದಿಯಿಂದಲೂ ತನ್ನ ಗಟ್ಟಿತನವನ್ನು ಕಳೆದುಕೊಳ್ಳದೆ ತನ್ನ ಕೈಂಕರ್ಯವಾದ ಹೊಂಗಿರಣ ಸಂಸ್ಥೆಗಳ ಅಭಿವೃದ್ಧಿಯನ್ನು ಬದ್ಧತೆಯಿಂದ ಮುಂದುವರೆಸಿಕೊಂಡು ಹೋಗುತ್ತಿದೆ.

114. ಹೊಂಗಿರಣ - ಗ್ಲಾಸ್ ಹೌಸ್ 

ಹೊಂಗಿರಣದಲ್ಲಿ ಅತಿ ಹೆಚ್ಚು ಉಪಯೋಗಿಸಲ್ಪಡುವ ಸ್ಥಳ ನಮ್ಮಗ್ಲಾಸ್ ಹೌಸ್. ಸುಮಾರು 50/40 ಅಡಿ ಆಯಳತೆಯ ಈ ಚಾವಡಿ/ಹಾಲ್ ನಲ್ಲಿ ಹೊಂಗಿರಣದ ಹೆಚ್ಚಿನ ಕಾರ್ಯಕ್ರಮಗಳು ನಡೆಯುತ್ತವೆ. ಹೊಂಗಿರಣ ಯಾವಾಗಲೂ ತನ್ನ ವೈವಿಧ್ಯಮಯ ಕಾರ್ಯ ಚಟುವಟಿಕೆಗಳಿಗೆ ಗುರುತಿಸಿಕೊಂಡಿರುವಂತಹದ್ದು. ಹೀಗಾಗಿ ವಾರದಲ್ಲಿ ಒಂದೆರಡು ದಿನ ಕಲಿಕಾ ಸಂಬಂಧಿ ಕಾರ್ಯಕ್ರಮ ಇದ್ದೇ ಇರುತ್ತದೆ. ಗ್ಲಾಸ್ ಹೌಸಿನ ಈ ಚಾವಡಿಯ ಗರಿಷ್ಠ ಉಪಯೋಗವನ್ನು ಪಡೆದುಕೊಳ್ಳುತ್ತಿರುವವರು ನಮ್ಮ ಪ್ರಾಥಮಿಕ ವಿಭಾಗದವರು ಹಾಗೂ ಹಾಸ್ಟೆಲ್ ನವರು.
ಗ್ಲಾಸ್ ಹೌಸಿನ ಮುಂಭಾಗವನ್ನು ಪೂರ್ತಿಯಾಗಿ ಗಾಜಿನಿಂದಲೇ ಕವರ್ ಮಾಡಲಾಗಿದೆ. ಅದರ ಎರಡೂ ಪಕ್ಕದಲ್ಲೂ ಒಳಹೋಗಲು ಬಾಗಿಲುಗಳಿವೆ. ಒಳಹೊಕ್ಕರೆ ವಿಶಾಲವಾದ ಚಾವಡಿ ಹಾಗೂ ಅದರ ಇನ್ನೊಂದು ಕೊನೆಯ ಮಧ್ಯಭಾಗದಲ್ಲಿ ಅನುಕೂಲಕರವಾದ ಸೈಜಿನ ಸ್ಟೇಜ್. ಆ ಚಾವಡಿಯ ಎಡ ಭಾಗದಲ್ಲಿ ಒಂದನೇ ತರಗತಿಯ ಕೊಠಡಿಗಳ ಅಡ್ಡಗೋಡೆ ಹಾಗೂ ಬಲ ಪಕ್ಕಕ್ಕೆ ಟೀಚರ್ಸ್ ಉಳಿಕೆಯ ಕೊಠಡಿಗಳು ಹಾಗೂ ಮಕ್ಕಳ ಉಳಿಕೆಯ ಒಂದು ಉದ್ದನೆಯ ಹಾಲ್. ಸ್ಟೇಜಿನ ಹಿಂಭಾಗದಲ್ಲಿ ಮಕ್ಕಳ ಉಳಿಕೆಯ ಇನ್ನೊಂದು ಹಾಲ್. ಅಳಿದುಳಿದ ಬಣ್ಣ ಬಣ್ಣದ ಟೈಲ್ಸ್ ಹಾಕಿದ ನೆಲ, ಕೆನೆ ಬಣ್ಣದ ಗೋಡೆಗಳು ಆ ಚಾವಡಿಗೆ ಚೆಂದದ ಕಳೆಯನ್ನು ಕೊಟ್ಟಿವೆ.
ಹಾಸ್ಟೆಲ್ ಮಕ್ಕಳ ಬೆಳಗಿನ ಯೋಗ, ಸಂಜೆಯ ಪ್ರಾರ್ಥನಾ ಕಾರ್ಯಕ್ರಮ, ರಜಾ ದಿನಗಳ ಚಟುವಟಿಕೆಗಳು, ವಾರಕ್ಕೊಮ್ಮೆ ನೋಡುವ ಸಿನೆಮಾಕ್ಕೆ ಗ್ಲಾಸ್ ಹೌಸಿನ ಈ ಚಾವಡಿ ಬಳಕೆಯಾಗುತ್ತದೆ.
ಪ್ರಾಥಮಿಕ ವಿಭಾಗದವರು ವಾರಕ್ಕೊಮ್ಮೆ ನಡೆಸುವ ವಿಷಯಾಧಾರಿತ ಅಸೆಂಬ್ಲಿ, ವಿಷಯವಾರು ಕಲಿಕಾ ಪ್ರದರ್ಶನ, ಗುಂಪು ಚಟುವಟಿಕೆಗಳು, ವಿಶೇಷ ದಿನಗಳ ಆಚರಣೆಗಳಿಗೆ ಈ ಚಾವಡಿ ಉಪಯೋಗಿಸಲ್ಪಡುತ್ತದೆ. ಉಳಿದಂತೆ ಇತರೆ ವಿಭಾಗದ ವೆಲ್ ಕಂ ಡೆ, ಟ್ಯಾಲೆಂಟ್ ಡೆ, ಸೆಂಡ್ ಆಫ್, ವಿಶೇಷ ದಿನಗಳ ಆಚರಣೆ, ಸಂಪನ್ಮೂಲ ವ್ಯಕ್ತಿಗಳ ಮಾತುಕತೆ, ಕಾರ್ಯಾಗಾರಗಳಿಗೆ ಈ ಚಾವಡಿ ಬಳಸಲ್ಪಡುತ್ತದೆ. ಮಕ್ಕಳ ಫುಡ್ ಫೆಸ್ಟ್ ಹಾಗೂ ಕ್ಲಬ್ ಆಕ್ಟಿವಿಟೀಸ್ ಗಳಿಗೆ ಈ ಚಾವಡಿ ಹೇಳಿ ಮಾಡಿಸಿದಂತಹುದು.
ಗ್ಲಾಸ್ ಹೌಸಿನ ಮುಂದೆ ಹಾದು ಹೋಗುವಾಗ ಮುಖವನ್ನು ಪ್ರತಿಬಿಂಬಿಸುವ ಅದರ ಹೊರಗಿನ ಗಾಜನ್ನು ನೋಡಿ ತಮ್ಮನ್ನು ತಾವು ಅವಲೋಕಿಸದವರೇ ಇಲ್ಲ. ಆ ಗಾಜು ಹೊರಗಣ ಅವಲೋಕನಕ್ಕಾದರೆ ಒಳಗಿನ ಚಾವಡಿ ಮಕ್ಕಳ ಕಲಿಕಾ ಕೌಶಲ್ಯಗಳ ಹಾಗೂ ಪ್ರತಿಭೆಯ ಅನಾವರಣಕ್ಕಾಗಿ! ಆ ಗ್ಲಾಸ್ ಹೌಸ್ ಒಂದಲ್ಲ ಒಂದು ರೀತಿಯಲ್ಲಿ ಹೊಂಗಿರಣದ ಪ್ರತಿಯೊಬ್ಬರ ಬದುಕಿಗೆ ಗಂಟು ಹಾಕಿಕೊಂಡಿದೆ ಎಂದರೆ ತಪ್ಪಲ್ಲ😊

113. ಹೊಂಗಿರಣ - ಪಿ.ಯು. ಕಾಲೇಜ್ 

ಅತ್ಯುತ್ತಮ ಗುಣಮಟ್ಟದ ವಿಜ್ಞಾನ ಶಿಕ್ಷಣ ನೀಡಲೋಸುಗ 2006ರಲ್ಲಿ ಪ್ರೊ ಎಚ್. ಎಲ್. ಎಸ್. ರಾವ್ ಅವರ ಸಾರಥ್ಯದಲ್ಲಿ ಕರ್ನಾಟಕ ಘನ ಸರ್ಕಾರದ ಮಾನ್ಯತೆ ಪಡೆದು ಪ್ರಾರಂಭವಾದ ಹೊಂಗಿರಣ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಪಿ ಯು ಕಾಲೇಜ್ ನಿಂದ ಈವರೆಗೆ ಹದಿಮೂರು ಬ್ಯಾಚ್ಗಳು ಹೊರಹೋಗಿದ್ದು ಪ್ರತಿ ಬಾರಿಯು ಫಲಿತಾಂಶದಲ್ಲಿ ನಮ್ಮ ಕಾಲೇಜ್ ಸಾಗರ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಶಿವಮೊಗ್ಗ ಜಿಲ್ಲೆಯಲ್ಲಿ ಐದನೇ ಸ್ಥಾನದೊಳಗಿನ ಉತ್ತಮ ಕಾಲೇಜ್ ಎಂದು ಗುರುತಿಸಿಕೊಂಡಿದೆ.
ನಮ್ಮ ಕಾಲೇಜಿನ ವಿಶೇಷವೇನೆಂದರೆ ಇಲ್ಲಿ ದಾಖಲಾತಿಗೆ ಅಂಕಗಳು ಗಣನೆಗೆ ಬರುವುದಿಲ್ಲ. ಹತ್ತನೇ ತರಗತಿಯಲ್ಲಿ ಅಂಕ ಕಡಿಮೆ ಇದ್ದರೂ ನಿಜವಾಗಿ ವಿಜ್ಞಾನವನ್ನು ಕಲಿಯಲು ಬಯಸುವ ಮಗುವನ್ನು ನಾವು ಆದರದಿಂದ ಬರಮಾಡಿಕೊಳ್ಳುತ್ತೇವೆ. ಅಂತೆಯೇ ಉತ್ಕೃಷ್ಟ ಅಂಕ ಪಡೆದವರಿಗೂ ಕಾನ್ಸೆಪ್ಚುವಲ್ ಲರ್ನಿಂಗ್ ಗೆ ಒತ್ತು ಕೊಟ್ಟು ಅವರ ಕಲಿಕಾ ಸಾಮರ್ಥ್ಯವನ್ನು ಇನ್ನಷ್ಟು ಗಟ್ಟಿಗೊಳಿಸುತ್ತೇವೆ. ನಮ್ಮ ಆದ್ಯತೆ ಕೇವಲ ಸಿಲೆಬಸ್ ಮುಗಿಸುವುದಕ್ಕಲ್ಲ. ಬದಲಿಗೆ ಕಲಿತ ವಿಷಯ ವಿದ್ಯಾರ್ಥಿಗಳ ಅರಿವಿನೊಳಗಿಳಿಯಬೇಕು ಎನ್ನುವುದು ನಮಗೆ ಬಹಳ ಮುಖ್ಯವಾಗುತ್ತದೆ. ಮಕ್ಕಿಕಾಮಕ್ಕಿ ಕಲಿಕೆ ಕೇವಲ ಅಂಕ ಗಳಿಕೆಗೆ ಸಹಾಯ ಮಾಡುತ್ತದಷ್ಟೇ. ಆದರೆ ವಿಷಯವನ್ನರಿತು ಕಲಿತ ಕಲಿಕೆ ಅಂಕ ಪಡೆಯುವುದರ ಜೊತೆಗೆ ಬದುಕನ್ನು ಕಟ್ಟಿ ಕೊಳ್ಳಲು ಕಲಿಸುತ್ತದೆ.
ಸೀಮಿತ ಸಂಖ್ಯೆಯಲ್ಲಿ ಪ್ರತಿ ತರಗತಿಗೂ ವಿದ್ಯಾರ್ಥಿಗಳನ್ನು ದಾಖಲು ಮಾಡುವ ಪರಿಪಾಠ ನಮ್ಮಲ್ಲಿದೆ. ಸುಮರು 30/25 ಅಡಿ ಅಳತೆಯ ಕೊಠಡಿಗಳಲ್ಲಿ ಐವತ್ತರ ಆಸುಪಾಸಿನ ಸಂಖ್ಯೆಯಲ್ಲಿ ಮಕ್ಕಳನ್ನು ಕೂರಿಸಿ ಪಾಠ ಮಾಡಲಾಗುವುದು. 40/30 ಅಡಿ ಆಯಳತೆಯ ವಿಷಯಾವಾರು ಪ್ರಯೋಗಶಾಲೆಯಲ್ಲಿ ಪ್ರತೀ ಬ್ಯಾಚಿಗೆ ಇಪ್ಪತ್ತಕ್ಕೂ ಕಡಿಮೆ ಮಕ್ಕಳನ್ನು ಇರಿಸಿ ವಿಶದವಾಗಿ ಪ್ರಾಕ್ಟಿಕಲ್ಸ್ ಮಾಡುವ ಅವಕಾಶ ಕೊಡಲಾಗುವುದು. ಪ್ರತೀ ತರಗತಿಯ ಕೊಠಡಿ ಹಾಗೂ ಲ್ಯಾಬ್ ಗಳಲ್ಲಿ ವಿಪುಲವಾದ ಗಾಳಿ ಬೆಳಕಿಗಾಗಿ ವಿಶಾಲವಾದ ಕಿಟಕಿಗಳನ್ನು ಇರಿಸಲಾಗಿದೆ. ಕಾಲೇಜು ಕಟ್ಟಡದ ಸುತ್ತಲಿರುವ ಮರಗಳು ಸಹಜವಾದ ತಂಪಿನ ವಾತಾವರಣವನ್ನು ಸೃಷ್ಟಿಸಿವೆ.
ಕಲಿಕೆಯ ಏಕತಾನತೆಗೆ ವಿರಾಮ ನೀಡಲು ವಿದ್ಯಾರ್ಥಿಗಳನ್ನು ಆಟೋಟಗಳಲ್ಲಿ ತೊಡಗಿಸಿ ಅವರ ಕಲಿಕೆಗೆ ಹೊಸ ಚೈತನ್ಯ ಸಿಗುವಂತೆ ಮಾಡಲಾಗುವುದು. ಗ್ರಂಥಾಲಯದ ಪುಸ್ತಕಗಳು ವಿವಿಧ ಪ್ರವೇಶ ಪರೀಕ್ಷಾ ತಯಾರಿಗೆ ಹೆಚ್ಚಿನ ಇಂಬು ಕೊಡುತ್ತವೆ. ಹಾಗೆಯೇ ರಾಜ್ಯ ಮಟ್ಟದ ವಿಷಯ ಸಂಪನ್ಮೂಲ ವ್ಯಕ್ತಿಗಳಿಂದ ಸಿಗುವ ತರಬೇತಿ ನಮ್ಮ ವಿದ್ಯಾರ್ಥಿಗಳ ಗುಣಮಟ್ಟದ ಫಲಿತಾಂಶಕ್ಕೆ ಕಾರಣೀಭೂತವಾಗಿದೆ. ಎಲ್ಲದಕ್ಕಿಂತಲೂ ಹೆಚ್ಚಾಗಿ ಶಿಕ್ಷಿತ, ಬದ್ಧತೆಯುಳ್ಳ, ಆತ್ಮೀಯ ಶಿಕ್ಷಕ ವೃಂದದವರ ನಿರಂತರ ಬೋಧನೆ ಹಾಗೂ ನೈತಿಕ ಬೆಂಬಲ ನಮ್ಮ ವಿದ್ಯಾರ್ಥಿಗಳಿಗೆ ಅದ್ವಿತೀಯ ಫಲಿತಾಂಶ ಪಡೆಯಲು ಸಹಕರಿಸಿದೆ.
ಹೊಂಗಿರಣದಿಂದ ಈವರೆಗೆ ಹೊರಹೋದ ಹಳೆಯ ವಿದ್ಯಾರ್ಥಿಗಳು ರಾಜ್ಯದ, ದೇಶದ, ವಿದೇಶದ ಪ್ರತಿಷ್ಠಿತ ಕಾಲೇಜುಗಳಲ್ಲಿ ಉನ್ನತ ಶಿಕ್ಷಣ ಪಡೆದು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಹಾಗೂ ಬಹಳಷ್ಟು ಜನ ಸ್ವಂತ ಉದ್ದಿಮೆ ನಡೆಸುತ್ತಿದ್ದಾರೆ. ಅವರೆಲ್ಲರ ಸಾಧನೆಗೆ, ಧೈರ್ಯದ ನಡೆಗೆ ಹೊಂಗಿರಣ ಕಟ್ಟಿಕೊಟ್ಟ ಮುಕ್ತ ಹಾಗೂ ಒಳಗೊಳ್ಳುವಿಕೆಯ ಮನಸ್ಥಿತಿ ಹಾಗೂ ಸ್ವಾವಲಂಬನೆಯೇ ಕಾರಣ ಎನ್ನುವುದು ಅವರ ಅಂಬೋಣ.


112. ಹೊಂಗಿರಣ - ಗ್ರಂಥಾಲಯ 

ನಾವೆಲ್ಲ ಚಿಕ್ಕವರಿರುವಾಗ ಸಮಯ ಕಳೆಯಲು ನಮಗಿದ್ದ ಆಯ್ಕೆಗಳು ಕಥೆ ಪುಸ್ತಕ ಓದುವುದು ಇಲ್ಲವೇ ಆಟ ಆಡುವುದು. ಹೀಗಾಗಿ ಬಿಡುವಿದ್ದಾಗ ಓದುವುದು ಸರ್ವೇ ಸಾಮಾನ್ಯ ವಿಷಯವಾಗಿತ್ತು. ಓದಿನ ಮಹತ್ವ ಹಾಗೂ ಪರಿಣಾಮವನ್ನು ನನ್ನ ಸ್ವಂತ ಅನುಭವದಿಂದ ಅರಿತುಕೊಂಡಿರುವುದು ನಮ್ಮ ಹೊಂಗಿರಣದ ಮಕ್ಕಳಿಗೆ ಓದಿನ ಅಭಿರುಚಿ ಹುಟ್ಟಿಸಬೇಕೆಂಬ ನಮ್ಮ ವಿಚಾರಕ್ಕೆ ಇಂಬು ಕೊಟ್ಟಿದೆ ಎಂದರೆ ತಪ್ಪಾಗಲಾರದು.
ಓದಬೇಕು ಎಂದಾಕ್ಷಣ ಓದಲಾಗುವುದಿಲ್ಲ. ಅದಕ್ಕೆ ಒಂದು ಮನಸ್ಥಿತಿ ಹಾಗೂ ಪೂರಕ ವಾತಾವರಣ ಬೇಕಾಗುತ್ತದೆ. ವಯೋಮಾನಕ್ಕೆ ತಕ್ಕುದಾದ ಹಾಗೂ ಅಭಿರುಚಿಗೆ ಪೂರಕವಾದ ಪುಸ್ತಕಗಳಿರಬೇಕು.
ಹೊಂಗಿರಣ ಕ್ಯಾಂಪಸ್ಸಿನ ಹೃದಯ ಭಾಗದಲ್ಲಿರುವ ಗ್ರಂಥಾಲಯ ಇಂತಹ ಒಂದು ಓದುವ ವಾತಾವರಣವನ್ನು ಕಟ್ಟಿ ಕೊಡುವ ಪ್ರಯತ್ನ ಮಾಡುತ್ತಿದೆ. ಸುತ್ತಮುತ್ತಲು ಗಿಡಮರಗಳಿಂದ ಆವೃತವಾದ ಸುಮಾರು 40/30 ಅಡಿ ಆಯಳತೆಯ, ಶೀಟಿನ ಮಾಡನ್ನು ಹೊಂದಿರುವ ವಿಶಾಲವಾದ ಕಟ್ಟಡವದು. ಅದಕ್ಕೆ 15/20ರ ಒಂದು ಸಿಟೌಟ್ ಇದೆ. ಆ ಜಾಗದಲ್ಲಿ ಮಕ್ಕಳಿಗೆ ದಿನಪತ್ರಿಕೆ ಓದುವ ವ್ಯವಸ್ಥೆ ಇದೆ. ಹಾಗೆಯೇ ಅಲ್ಲೊಂದು ವಿಶೇಷ ಲೇಖನಗಳನ್ನು ಹಾಕುವ ನೋಟಿಸ್ ಬೋರ್ಡ್ ಕೂಡಾ ಇದೆ. ಪ್ರವೇಶ ದ್ವಾರದಿಂದ ಒಳಹೊಕ್ಕರೆ ಮುಕ್ತವಾದ, ವಿಶಾಲವಾದ ಹಾಲ್ ನ ಗೋಡೆಗೆ ತಾಗಿಕೊಂಡಿರುವ rackಗಳಲ್ಲಿ ಜೋಡಿಸಿಟ್ಟಿರುವ ವೈವಿಧ್ಯಮಯವಾದ ಪುಸ್ತಕಗಳು ಕಾಣ ಸಿಗುತ್ತವೆ. ಅಲ್ಲಲ್ಲಿ ವಿಶಾಲವಾದ ಕಿಟಕಿ ಕಟ್ಟೆಗಳಿವೆ. ಇಡೀ ಗ್ರಂಥಾಲಯದಲ್ಲಿ ಎರಡು ದೊಡ್ಡ ಟೇಬಲ್ ಗಳು ಹಾಗೂ ನಾಲ್ಕಾರು ಬೆಂಚುಗಳನ್ನು ಬಿಟ್ಟರೆ ಬೇರೆ ಪೀಠೋಪಕರಣಗಳು ಇಲ್ಲ. ಪ್ರವೇಶ ದ್ವಾರದ ಎರಡೂ ಪಕ್ಕಗಳಲ್ಲೂ ಲೈಬ್ರೇರಿಯನ್ಸ್ ಕುಳಿತುಕೊಳ್ಳುವ ವ್ಯವಸ್ಥೆ ಇದೆ. ಓಪನ್ ಆಕ್ಸೆಸ್ ವ್ಯವಸ್ಥೆ ಇರುವ ನಮ್ಮ ಗ್ರಂಥಾಲಯದಲ್ಲಿ ಸಂಗ್ರಹಿತವಾಗಿರುವ ಸುಮಾರು ಹನ್ನೆರಡು ಸಾವಿರಕ್ಕೂ ಮೇಲ್ಪಟ್ಟಿರುವ ಪುಸ್ತಕಗಳಲ್ಲಿ ಮಕ್ಕಳು ತಮ್ಮ ಆಸಕ್ತಿಗೆ ಸಂಬಂಧಪಟ್ಟ ವಿಷಯಗಳ ಪುಸ್ತಕಗಳನ್ನು ಓದಬಹುದು ಹಾಗೂ ಮನೆಗೆ ಕೊಂಡೊಯ್ಯಬಹುದು. ನಮ್ಮ ಇಡೀ ಗ್ರಂಥಾಲಯ ಸೋಲಾರ್ ವಿದ್ಯುತ್ತಿನ ದೀಪಗಳಿಂದ ಚಾಲಿತವಾಗಿದೆ.. ನಮ್ಮ ಕಲಾಲಯದಲ್ಲೂ ಕೂಡಾ ಸೋಲಾರ್ ವಿದ್ಯುತ್ತನ್ನು ಬಳಸಲಾಗಿದೆ.
ಮಕ್ಕಳು ಚಾಪೆ ಹಾಕಿಕೊಂಡು ನೆಲದ ಮೇಲೆ ಕುಳಿತು ಆರಾಮವಾಗಿ ಓದುವ ಕ್ರಮ ನಮ್ಮಲ್ಲಿದೆ. ಕಿಟಕಿಯ ಕಟ್ಟೆಯನ್ನೇರಿ ಕುಳಿತು ಓದುವವರೂ ಇದ್ದಾರೆ. ನಮ್ಮ ಗ್ರಂಥಾಲಯದಲ್ಲಿ ಬರೀ ಓದುವಿಕೆ ನಡೆಯುವುದಿಲ್ಲ. ಜೊತೆಜೊತೆಗೆ ಲೇಖಕರ ಜನ್ಮ ದಿನಾಚರಣೆಯಂದು ಹಲವು ಪುಸ್ತಕ ಸಂಬಂಧಿ ಕಾರ್ಯಕ್ರಮಗಳು ನಡೆಯುತ್ತವೆ. ಪುಸ್ತಕಗಳ ವಿಮರ್ಶೆ, ರಸಪ್ರಶ್ನೆ, ಸ್ವರಚಿತ ಲೇಖನಕ್ಕೆ ಪ್ರೋತ್ಸಾಹ ನೀಡುವಂತಹ ಕಾರ್ಯಕ್ರಮಗಳು ನಡೆಯುತ್ತವೆ. ಪುಸ್ತಕ ಪ್ರಜ್ಞೆ ಮೂಡಿಸುವ ಹತ್ತು ಹಲವಾರು ಕಾರ್ಯಕ್ರಮಗಳನ್ನು ನಮ್ಮ ಗ್ರಂಥಾಲಯದಲ್ಲಿ ಹಮ್ಮಿಕೊಳ್ಳಲಾಗುತ್ತದೆ. ಅಪ್ರತಿಬಂಧಕ ಪರಿಸರದಲ್ಲಿ ನಮ್ಮ ಗ್ರಂಥಾಲಯ ಓದಿನ ಸ್ಫುರಣೆ ಹುಟ್ಟಿಸುವ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತಿದೆ.
ಮಕ್ಕಳಲ್ಲಿ ಓದಿನ ಅಭಿರುಚಿಯನ್ನು ರಚನಾತ್ಮಕವಾಗಿ ಬೆಳೆಸುತ್ತಿರುವ ನಮ್ಮ ಗ್ರಂಥಾಲಯ ಈಗಾಗಲೇ ಹಲವು ಸಹೃದಯ ಓದುಗರನ್ನು, ಉದಯೋನ್ಮುಖ ಬರಹಗಾರರನ್ನು, ಉತ್ತಮ ವಾಗ್ಮಿಗಳನ್ನು ಬೆಳೆಸಿದೆ ಎನ್ನುವುದು ಸ್ತುತ್ಯರ್ಹ ವಿಷಯ.


111. ಹೊಂಗಿರಣ - ಕಲಾಲಯ 



ನಾವು ಹೊಂಗಿರಣದ ಕಟ್ಟಡಗಳನ್ನು ಕ್ಯಾಂಪಸ್ಸಿನೆಲ್ಲೆಡೆ ವ್ಯಾಪಕವಾಗಿ ಕಟ್ಟುತ್ತಿರುವಾಗ ಬಹಳಷ್ಟು ಜನ ಅವುಗಳನ್ನು ಒಂದೇ ಕಡೆ ಕೇಂದ್ರೀಕರಿಸಿ ಕಟ್ಟಲು ಸಲಹೆ ಕೊಟ್ಟರು. ಆದರೆ ನಮ್ಮ ಮೂಲ ಕಲ್ಪನೆಯೆ ಆ ಕ್ಯಾಂಪಸ್ಸಿನ ವಿಸ್ತಾರಳತೆಯನ್ನು ಕಲಿಕಾ ಹರಹಾಗಿ ಬಳಸಿಕೊಳ್ಳುವುದಾಗಿತ್ತು. ಎಲ್ಲಾ ಕಟ್ಟಡಗಳು ಒಂದೇ ಕಡೆ ಇದ್ದರೆ ಒಂದು ರೀತಿಯ ವಾಣಿಜ್ಯ ಸಂಕೀರ್ಣದ ಭಾವ ಹುಟ್ಟಿಸುತ್ತದೆ ಹಾಗೂ ಪ್ರತೀ ಥೀಮ್ ಗೆ ತಕ್ಕಂತೆ ಜಾಗದ ಆಯ್ಕೆ, ಕಟ್ಟಡದ ವಿನ್ಯಾಸವಿದ್ದಲ್ಲಿ ಅದು ನಿರೀಕ್ಷಿತ ಪರಿಣಾಮವನ್ನು ಸಹಜವಾಗಿ ಕೊಡುತ್ತದೆ ಎಂದು ನಮ್ಮ ಅನಿಸಿಕೆ. ಹೀಗಾಗಿ ಆಯ್ದ ಸ್ಥಳಗಳಲ್ಲಿ ಬೇರೆ ಬೇರೆ ವಿಷಯಕ್ಕೆ ಸಂಬಂಧಪಟ್ಟ ಕಟ್ಟಡಗಳನ್ನು ಕಟ್ಟಲಾಯಿತು.
ಇತ್ತೀಚಿನ ಎಂಟ್ಹತ್ತು ವರ್ಷಗಳ ಹಿಂದೆ ನಿರ್ಮಿತವಾದ ಕಟ್ಟಡ ನಮ್ಮ ಕಲಾಲಯ. ನಮ್ಮೊಳಗಿನ ಕಲ್ಪನೆಗೆ ತನ್ನ ಸೃಜನಶೀಲತೆಯ ಮೂಸೆಯೊಳಗಿಂದ ಮೂರ್ತರೂಪ ಕೊಟ್ಟವನು ಮಾರಿಮುತ್ತು. ಮಲೆನಾಡಿನ ಸೊಗಡನ್ನು, ಕಲೆಯ ಸತ್ವವನ್ನು ಬಿಂಬಿಸುವಂತೆ ಅದನ್ನು ಕಟ್ಟಲಾಯಿತು. ಭವಂತಿ ಮನೆಯ ಸ್ವರೂಪದಲ್ಲಿರುವ ನಮ್ಮ ಕಲಾಲಯದ ಮಧ್ಯದ ಬಯಲು ಜಾಗದಲ್ಲಿ ಒಂದು ಹಳೆಯ ಮರವಿದೆ. ಅದರ ಸುತ್ತಲೂ ಬಳ್ಳಿಗಳನ್ನು ಹಬ್ಬಿಸಲಾಗಿದೆ. ಅಲ್ಲದೇ ಆ ಮರದ ಕಟ್ಟೆಯ ಮೇಲೆ ವಿವಿಧ ತೆರನಾದ ಗಿಡಗಳನ್ನು ನೆಡಲಾಗಿದೆ. ಒಟ್ಟಾರೆ 40/40 ಅಡಿ ಆಯಳತೆಯ ಕಟ್ಟಡವದು.
ಕಲಾಲಯದ ಮುಂಭಾಗದಲ್ಲಿ 15/15 ಅಡಿಯ 'ಮುಖ' ದ್ವಾರವಿದ್ದು ಅದು ಹೆಂಚಿನ ಮಾಡನ್ನು ಹೊಂದಿದೆ. ದ್ವಾರ ಬಾಗಿಲು ಕಲಾತ್ಮಕವಾಗಿದ್ದು ಸುಮಾರು 6/4 ರ ಅಳತೆಯದ್ದಾಗಿದೆ. ಅದರ ಮೇಲಿನ ಗೋಡೆಯಲ್ಲಿ ಮೋಡಿ ಅಕ್ಷರದಲ್ಲಿ 'ಕಲಾಲಯ' ಎಂಬ ಮ್ಯೂರಲ್ ಇದೆ. ಕಲಾಲಯದೊಳಗೆ ಪ್ರವೇಶಿಸುತ್ತಿದ್ದಂತೆ ಮಾರಿಮುತ್ತು ಮಾಡಿದ ಕಲಾದೇವಿಯ ಪ್ರತಿಮೆ ಇದೆ. ಚಚ್ಚೌಕವಾಗಿರುವ ಕಲಾಲಯದಲ್ಲಿ ನಾಲ್ಕು ಜಗಲಿಗಳು ಕೂಡಿ ನಾಲ್ಕು ಮೂಲೆಗಳಾಗಿವೆ. ಕಲಾಲಯದ ಎಡಪಕ್ಕದ ಕೊನೆಯಲ್ಲಿ ಒಂದು ಸಣ್ಣ ಕೊಠಡಿಯಿದೆ. ಮಧ್ಯ ಭಾಗ ಓಪನ್ ಆಗಿರುವ ಕಾರಣ ಮಕ್ಕಳು ಕಾಲನ್ನು ಜಗಲಿಯಿಂದ ಇಳಿಬಿಟ್ಟು ಬೀಳುವ ಮಳೆಯನ್ನು, ಬೀಸುವ ಗಾಳಿಯನ್ನು, ಬೀರುವ ಬೆಳಕನ್ನು ನೋಡುತ್ತಾ ಸಹಜವಾಗಿ ಕಲಾಸಕ್ತಿ ಹುಟ್ಟಿಸಿಕೊಳ್ಳುವ ಸಿದ್ಧ ವ್ಯವಸ್ಥೆ ಅಲ್ಲಿದೆ. ಕೆಂಪು ಖಾವಿಯ ನೆಲ, ಹೆಂಚಿನ ಮಾಡು, ಮುಕ್ತ ವಾತಾವರಣ ಚಿತ್ರಕಲೆಯ ಒಲವನ್ನು ಸಹಜವಾಗಿ ಬಿತ್ತುತ್ತದೆ. ಈ ಕಲಾಲಯದ ಮೂಲಕ ಕಲಾ ಶಿಕ್ಷಕರ ಮಾರ್ಗದರ್ಶನದಲ್ಲಿ ಈಗಾಗಲೇ ಬಹಳಷ್ಟು ಮಕ್ಕಳು ಉತ್ತಮ ಚಿತ್ರಕಾರರಾಗಿ ವಿಕಸಿತರಾಗಿದ್ದಾರೆ. ಸೂಕ್ತ ವಾತಾವರಣ, ಬದ್ಧ ಶಿಕ್ಷಕರು, ತಮ್ಮ ತಮ್ಮ ಆಸಕ್ತಿ, ಪ್ರತಿಭೆಯನ್ನು ಅರಿಯುವಂತೆ ಮಾಡುವ ವ್ಯವಸ್ಥೆ ಪ್ರತಿ ಮಗುವನ್ನು ಅದರ ಸ್ವಾಭಾವಿಕ, ಸಹಜ ಅಭಿರುಚಿಯೊಂದಿಗೆ ಬೆಳೆಯಲು ಅನುವು ಮಾಡಿಕೊಡುತ್ತದೆ ಎನ್ನುವುದು ಹೊಂಗಿರಣದ ಈ ಹದಿನೇಳು ವರ್ಷಗಳ ಪಯಣ ತೋರಿಸಿಕೊಟ್ಟಿದೆ ಎಂದರೆ ತಪ್ಪಲ್ಲ.


110. ಹೊಂಗಿರಣ - ಕಟ್ಟಡಗಳು

ನಮ್ಮ ಹೊಂಗಿರಣದ ಪ್ರಾಥಮಿಕ ವಿಭಾಗದ ಕಟ್ಟಡಗಳು ವಿಭಿನ್ನವಾಗಿವೆ. ಅಷ್ಟಕೋನಾಕೃತಿಯ ಅಡ್ಡಗೋಡೆಗಳಿಲ್ಲದ open ಆಗಿರುವ ಪ್ರತ್ಯೇಕ ತರಗತಿ ಕಟ್ಟಡಗಳ ಗುಚ್ಛವದು. ಒಂದು ರೀತಿಯಲ್ಲಿ ಪಿರಮಿಡ್ ಗಳನ್ನು ನೆನಪಿಸುವ, ಧ್ಯಾನ ಮಂದಿರಗಳಿಗೆ ಹೋಲುವ ಕಟ್ಟಡಗಳವು. ನಾವು ಆ ಕಟ್ಟಡ ವಿನ್ಯಾಸದ ಬಗ್ಗೆ ಯೋಚಿಸಿದಾಗ ನಮ್ಮ ಮುಖ್ಯ ಉದ್ದೇಶವಿದ್ದದ್ದು ದಿನದ ಎಂಟು ಗಂಟೆ ತರಗತಿಯ ಕೊಠಡಿಯಲ್ಲಿ ಕಳೆಯುವ ಮಕ್ಕಳಿಗೆ ಸಮೃದ್ಧ ಗಾಳಿ ಬೆಳಕು ಸಿಕ್ಕಿ ಅವರ ಮನಸ್ಸು ತಾಜಾ ಸ್ಥಿತಿಯಲ್ಲಿ ಇರಲಿ ಎಂದು. ಹಾಗೆಯೇ ಎದ್ದು ನಿಂತಾಗ ಕಾಣುವ ಹೊರಗಿನ ವಿಪುಲ ಹಸಿರಿನ ದೃಶ್ಯ ಅವರ ಕಣ್ಣಿಗೆ ತಂಪೆರೆದು ಮನಕ್ಕೆ ಮುದ ನೀಡಲಿ ಎಂದು. ಮನಸ್ಸಿನ ತಾಜಾತನ ಎನ್ನುವುದು ಕಲಿಯುವ ಮನಸ್ಥಿತಿಯನ್ನು ಕಾಪಿಡುತ್ತದೆ ಎನ್ನುವುದು ನಮ್ಮ ನಿಲುವು. ಬಂಧಿತ ಮನಸ್ಥಿತಿ ಕಲಿಯುವಿಕೆಯ ಗಟ್ಟಿತನವನ್ನು ದುರ್ಬಲಗೊಳಿಸುವ ಸಾಧ್ಯತೆ ಹೆಚ್ಚು. ಹೀಗಾಗಿ ಪುಟಾಣಿಗಳು ಮುಕ್ತ ವಾತಾವರಣದಲ್ಲಿ ಪ್ರಕೃತಿಯ ಮಡಿಲಲ್ಲಿ ಕಲಿಯುವ ಒಂದು ಆಹ್ಲಾದಕರ ಪರಿಸರ ನಿರ್ಮಿಸುವ ಪ್ರಯತ್ನ ನಮ್ಮದು.
ನಮ್ಮ ಪ್ರಾಥಮಿಕ ವಿಭಾಗದ ಪ್ರಾಂಗಣಕ್ಕೆ ಕಾಲಿಡುತ್ತಿದ್ದಂತೆ ಮೊದಲಿಗೆ ಕಾಲ್ದಾರಿಯ ಎರಡೂ ಪಕ್ಕದಲ್ಲೂ ತಗ್ಗು ಮಾಡಿನ ಒಂದೊಂದು ಕಟ್ಟಡ ಕಾಣ ಸಿಗುತ್ತದೆ. ತದ ನಂತರ ಮುಂದೆ ಸಾಗಿದಾಗ ನಟ್ಟ ನಡುವೆ ಒಂದಂತಸ್ತಿನ ಅಷ್ಟಕೋನದ ಕಟ್ಟಡ ಹಾಗೂ ಅದರ ನಾಲ್ಕು ದಿಕ್ಕಿನಲ್ಲಿ ಅಷ್ಟ ಕೋನದ ಒಂದೊಂದು ಕಟ್ಟಡ ಕಾಣ ಸಿಗುತ್ತವೆ. ಅದರ ಎಡ ಪಕ್ಕದಲ್ಲಿ ಮೂರು ಕೊಠಡಿಗಳ ಉದ್ದನೆಯ ಕಾಂಕ್ರೀಟ್ ಕಟ್ಟಡವಿದೆ. ಅದರ ಹಿಂಬದಿಯಲ್ಲಿ ಎರಡು ಕೊಠಡಿಗಳ ಹೆಂಚಿನ ಮಾಡಿನ ಇನ್ನೊಂದು ಕಟ್ಟಡವಿದೆ. ಪ್ರತಿ ಅಷ್ಟ ಕೋನಾಕೃತಿಯ ಕಟ್ಟಡಕ್ಕೆ ಪಿರಮಿಡ್ ರೀತಿಯ ಚೂಪನೆಯ ಹೆಂಚಿನ ಮಾಡು ಇದೆ.
ಪ್ರತಿ ಅಷ್ಟಕೋನಾಕೃತಿಯ ಕಟ್ಟಡಕ್ಕೆ ಒಂದು ಭಾಗದಲ್ಲಿ ಕರಿಹಲಗೆಗಾಗಿ ಪೂರ್ಣ ಪ್ರಮಾಣದ ಗೋಡೆ ಇದ್ದು ಉಳಿದ ಕಡೆಯೆಲ್ಲ ಕೇವಲ ನಾಲ್ಕಡಿಯ ಗೋಡೆ ಇದ್ದು open ಜಾಗವನ್ನು ಮರದ ಚೌಕಟ್ಟಿನಲ್ಲಿ ಗಾಜನ್ನು ಕೂರಿಸಿ ಮುಚ್ಚಲಾಗಿದೆ. ಈ ಕಟ್ಟಡಗಳನ್ನು ಕಟ್ಟಿದ ಒಂದೆರಡು ವರ್ಷ ಆ open ಜಾಗವನ್ನು ಮುಕ್ತವಾಗಿಯೇ ಬಿಟ್ಟಿತ್ತು. ನಂತರದಲ್ಲಿ ಗಾಳಿಮಳೆಯ ಪ್ರತಾಪಕ್ಕೆ ಬೆದರಿ ಗಾಜಿನಿಂದ ಮುಚ್ಚಲಾಯಿತು. ತರಗತಿಯ ಕೊಠಡಿಯಲ್ಲಿ ಚಪ್ಪಟೆಯಾದ ತಗ್ಗಿನ ಟೇಬಲ್ಲಿನ ಸುತ್ತ ನಾಲ್ಕು ನಾಲ್ಕು ತಗ್ಗಾದ ಬೆಂಚುಗಳನ್ನು ಜೋಡಿಸಿ ಮಕ್ಕಳು ಗುಂಪಾಗಿ ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಗುಂಪು ಚಟುವಟಿಕೆಗಳನ್ನು ಗಮನದಲ್ಲಿರಿಸಿಕೊಂಡು ಈ ರೀತಿಯ ಸೀಟಿಂಗ್ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಯಾರೂ 'ಹಿಂದಿನ ಸಾಲಿನ' ಮಕ್ಕಳಿಲ್ಲ.
ಒಂದು ಕಟ್ಟಡದಿಂದ ಇನ್ನೊಂದಕ್ಕೆ ಇಪ್ಪತ್ತಡಿಗೂ ಮೀರಿ ಅಂತರವಿದೆ. ಇದಲ್ಲದೆ ವಾಚನಾಲಯ/ಕಲಾ ಅವಧಿ, ನೃತ್ಯ/ಸಂಗೀತ/ಕಥೆಯ ಅವಧಿಗಳಿಗಾಗಿ ಸೂಕ್ತವಾದ ಪ್ರತ್ಯೇಕ ಕಟ್ಟಡಗಳಿವೆ. ಕಟ್ಟಡಗಳ ಸುತ್ತಲೂ ಹಸಿರ ಸಿರಿ ಇದೆ.
ಮಕ್ಕಳ ಸರ್ವತೋಮುಖ ಬೆಳವಣಿಗೆಯನ್ನು ಗಮನದಲ್ಲಿರಿಸಿಕೊಂಡು ವಿನ್ಯಾಸಗೊಳಿಸಿದ ಕಟ್ಟಡಗಳು ಮುಕ್ತ ವಾತಾವರಣದಲ್ಲಿ ಒತ್ತಡರಹಿತ ಹಾಗೂ ಹಿತವಾದ ಕಲಿಕಾ ಪ್ರಕ್ರಿಯೆಗೆ ಬೇಕಾದ ವಾತಾವರಣ ಸೃಷ್ಟಿಸುವಲ್ಲಿ ಶಕ್ತವಾಗಿವೆ ಎಂದರೆ ಸುಳ್ಳಲ್ಲ.


109. ಹೊಂಗಿರಣ - ಶಿಶು ವಿಹಾರ 

ನಮ್ಮ ಹೊಂಗಿರಣ ಶಾಲಾ ಕಟ್ಟಡಗಳಲ್ಲಿ ಅದ್ವಿತೀಯವಾದದ್ದು ನಮ್ಮ ಶಿಶುವಿಹಾರ ಗೃಹ. ಅದೊಂದು ನಮ್ಮ ಡ್ರೀಮ್ ಪ್ರಾಜೆಕ್ಟ್ ಅಂದರೂ ತಪ್ಪಿಲ್ಲ. ನಾಲ್ಕೈದು ವರ್ಷದ ಮಕ್ಕಳು ದಿನದ ಎಂಟು ಗಂಟೆ ಕಳೆಯುವ ಆ ಜಾಗ ಆಪ್ತವಾಗಿರಬೇಕು ಹಾಗೂ ಹಿತಕರವಾಗಿರಬೇಕು ಎನ್ನುವುದು ನಮ್ಮ ವಿಚಾರ. ಪ್ರಪಂಚವನ್ನು ಕಣ್ಣು ತೆರೆದು ನೋಡಲು ಪ್ರಾರಂಭಿಸುತ್ತಿರುವ ಮಗುವಿಗೆ ಶಾಲೆಯೊಂದು ಜೈಲ್ ತರಹ ಕಾಣದೆ ಪ್ರೀತಿಯಿಂದ ಬರಮಾಡಿಕೊಂಡು ಕಲಿಸುವ ತಾಣವಾಗಬೇಕು ಎನ್ನುವುದು ನಮ್ಮ ಸಿದ್ಧಾಂತ. ಮಗು ತನಗೆ ಬೇಕಾದಲ್ಲಿ ಬೇಕಾದ ಹಾಗೆ ಕುಳಿತು ತನ್ನೊಡನಿರುವವರೊಡನೆ ಪರಿಚಿತತೆ ಬೆಳೆಸಿಕೊಂಡು ತಾನು ಕಲಿಯುವ ಪ್ರಕ್ರಿಯೆಯಲ್ಲಿ ತೊಡಗಲು ಬಂದ ಆ ಜಾಗದೊಡನೆ ಹಾಗೂ ಅಲ್ಲಿರುವವರೊಡನೆ ಬಾಂಧವ್ಯ ಬೆಳೆಸಿಕೊಳ್ಳುವುದು ಬಹಳ ಮುಖ್ಯ ಎನ್ನುವುದು ನಮ್ಮ ದೃಷ್ಟಿಕೋನ. ಹಾಗಿದ್ದಲ್ಲಿ ಆ ಕಟ್ಟಡ ವಿನ್ಯಾಸ ವಿಭಿನ್ನವಾಗಿ ಇರಬೇಕಾದ ಅಗತ್ಯವಿದೆಯಲ್ಲವೆ?
ಆಗ ನಮ್ಮಲ್ಲಿ ಕಲಾ ಶಿಕ್ಷಕನಾಗಿದ್ದ ನಮ್ಮ ನವೋದಯದ ಹಳೆಯ ವಿದ್ಯಾರ್ಥಿಯಾಗಿದ್ದ ಮಾರಿಮುತ್ತು ನಮ್ಮ ಕಲ್ಪನೆಯನ್ನು ತನ್ನ ಸ್ಕೆಚ್ ನ ಮೂಲಕ ನಮ್ಮ ಮೇಸ್ತ್ರಿ ಹಾಗೂ ಆಚಾರ್ರಿಗೆ ತಿಳಿಯಪಡಿಸಿದ. ತಗ್ಗಾದ ಹೆಂಚಿನ ಮಾಡಿನ ಕಟ್ಟಡವದು. ನಡುವೆ ಎತ್ತರವಾದ ಚೂಪಾದ ಮಾಡು. ಅದನ್ನು ಸುತ್ತುವರಿದು ಅದಕ್ಕಿಂತ ತಗ್ಗಿನಲ್ಲಿ ನಾಲ್ಕು ಕಡೆಗಳಲ್ಲೆದ್ದ ಇಳಿಮಾಡುಗಳು. ಮೂರ್ನಾಲ್ಕು ಮೆಟ್ಟಲೇರಿ ಒಳ ಪ್ರವೇಶಿಸಿದರೆ ಮೂರು/ಆರರ ಒಂದು ಸಣ್ಣ ಕಾರಿಡಾರ್. ಅದಕ್ಕೆ ವಿರುದ್ಧ ದಿಕ್ಕಿನಲ್ಲಿ ಅಂತಹುದೇ ಮತ್ತೊಂದು ಕಾರಿಡಾರ್. ಒಳ ಹೊಕ್ಕರೆ ಇಪ್ಪತ್ತೈದು ಅಡಿ ಆಯಳತೆಯ ಚಚ್ಚೌಕವಾದ ಮುಕ್ತ ಜಾಗ. ಅದರ ನಾಲ್ಕೂ ಮೂಲೆಗಳಲ್ಲಿ ಗೋಡೆಗೆ ತಾಗಿದಂತೆ ಕೂರಲು ಅನುಕೂಲವಾಗುವಂತಹ ಎರಡು ಸ್ಟೆಪ್ ನ ಕಟ್ಟೆಗಳು. ಆ ರೂಮ್ ನ ಗೋಡೆಯನ್ನು ಮಕ್ಕಳಿಗೆ ಗೀಚಲು, ಬರೆಯಲು ಅನುಕೂಲವಾಗುವಂತೆ ಕರಿ ಬಣ್ಣ ಹೊಡೆಸಿ ಕರಿಹಲಗೆಯಾಗಿ ಪರಿವರ್ತಿಸಲಾಗಿದೆ. ಆ ರೂಮಿನ ಬಲ ಪಕ್ಕದಲ್ಲಿ ಯೂರಿನಲ್ಸ್ ಹಾಗೂ ಅದಕ್ಕೆ ತಾಗಿದಂತೆ ಮಕ್ಕಳು ನೀರಾಟವಾಡಲು ಒಂದು ಬಾತ್ ಟಬ್. ಎಡಪಕ್ಕದಲ್ಲಿ ಮಕ್ಕಳು ವಿರಮಿಸುವ ಕೊಠಡಿ. ಹಿಂದಿನ ಕಾರಿಡಾರ್ ಬಾಗಿಲು ತೆರೆದರೆ ಅದಕ್ಕೆ ತಾಗಿಕೊಂಡಿರುವ ಹಚ್ಚ ಹಸಿರು ಉದ್ಯಾನವನಕ್ಕೆ ಪ್ರವೇಶ. ಆ ಕಟ್ಟಡವಿಡೀ ಮರ,ಗಿಡ,ಬಳ್ಳಿಗಳಿಂದ ಆವೃತವಾಗಿದೆ.
ಆ ಕಟ್ಟಡದ ಒಳಹೊಕ್ಕರೆ ಕಾಣುವುದು ಉತ್ಸಾಹದಿಂದ ಪುಟಿದೆದ್ದು ಒಂದಲ್ಲಾ ಒಂದು ಚಟುವಟಿಕೆಗಳಲ್ಲಿ ತೊಡಗಿಕೊಂಡು ವಿವಿಧ ಕೌಶಲ್ಯಗಳನ್ನು ರೂಢಿಸಿಕೊಳ್ಳುತ್ತಿರುವ ಮಕ್ಕಳು. ಅವರು ಹಾಡುತ್ತಾರೆ, ಕುಣಿಯುತ್ತಾರೆ, ಕಥೆ ಕೇಳುತ್ತಾರೆ, ಕಥೆ ಹೇಳುತ್ತಾರೆ, ಚಿತ್ರ ಬರೆಯುತ್ತಾರೆ, ನಾಟಕ ಮಾಡುತ್ತಾರೆ, ಮಣ್ಣು, ಹಿಟ್ಟಿನ ಮುದ್ದೆಗಳಲ್ಲಿ ಅವರ ಕಲ್ಪನೆಯ ಆಕಾರಗಳನ್ನು ಮೂಡಿಸುತ್ತಾರೆ, ಆಡುತ್ತಾರೆ, ಹರಟೆ ಹೊಡೆಯುತ್ತಾರೆ, ಪ್ರಶ್ನಿಸುತ್ತಾರೆ, ಕೀಟಲೆ ಮಾಡುತ್ತಾರೆ, ಕ್ಯಾಂಪಸ್ ಸುತ್ತಿ ಸುತ್ತಮುತ್ತಲಿನ ವಸ್ತುಗಳನ್ನು ನೋಡುತ್ತಾರೆ, ಹಲವರೊಡನೆ ಸಂಭಾಷಿಸುತ್ತಾರೆ, ಓದುತ್ತಾರೆ ಬರೆಯುತ್ತಾರೆ. ಇದು ನಮ್ಮ ಶಿಶುವಿಹಾರ ಗೃಹ ಕಟ್ಟಡದ ಚಿತ್ರಣ ಹಾಗೂ ಅದರಲ್ಲಿರುವವರ ಕಲಿಕಾ ಪ್ರಕ್ರಿಯೆಯ ಕಿರು ಪರಿಚಯ!


108. ನೆನಪು - ಕನ್ನಡಕ 

ನನಗೆ ಚಿಕ್ಕವಳಿದ್ದಾಗ ಕನ್ನಡಕ ಹಾಕಿಕೊಳ್ಳಬೇಕೆಂಬ ಹಂಬಲ. ಆದರೆ ದೃಷ್ಟಿ ದೋಷವಿರಲಿಲ್ಲ. ತಲೆನೋವು ಮಾತ್ರ ಆಗಾಗ ಬರುತಿತ್ತು. ಅಂತೂ ಇಂತೂ ಆ ತಲೆನೋವಿನ ನೆಪದಲ್ಲಿ ಪಿಯುಸಿ ಮುಗಿದು ಫರ್ಸ್ಟ್ ಇಯರ್ ಡಿಗ್ರಿಗೆ ಬಂದಾಗ ಒಂದು ದೊಡ್ಡ ಫ್ರೇಮಿನ ಪವರ್ ಲೆಸ್ ಕನ್ನಡಕ ಹಾಕಿಕೊಂಡದ್ದಾಯಿತು. ಒಂದೆರಡು ವಾರ ಹಾಕಿಕೊಂಡಾಗ ಕನ್ನಡಕ ಬೋರ್ ಬರಿಸಿ ನಂತರ ಮೂಲೆ ಸೇರಿದ್ದು ಎಲ್ಲಿ ಹೋಯಿತು ಅಂತ ಈಗಲೂ ನನಗೆ ಗೊತ್ತಿಲ್ಲ! ಆ ವಯಸ್ಸಿನಲ್ಲಿ ಎಲ್ಲರಿಗೂ ಕನ್ನಡಕ ಎನ್ನುವುದು ಮಹಾ ಆಕರ್ಷಣೆಯ ವಸ್ತುವೇನೋ ಎಂದು ಈಗ ಅನಿಸುತ್ತಿದೆ.
ನನಗೆ ನಲವತ್ತು ವರ್ಷ ದಾಟಿ ಚಾಲೀಸ್ ಶುರುವಾದಾಗ ಕನ್ನಡಕ ಹಾಕುವುದು ಕಿರಿಕಿರಿ ಎಂದೆನಿಸಿತು. ಆ ಬೈ ಫೋಕಲ್ ಕನ್ನಡಕ ರೂಢಿಯಾಗಲಿಕ್ಕೆ ಸುಮಾರು ಹದಿನೈದು ದಿನ ಹಿಡಿಯಿತು. ಅದು ರೂಢಿಯಾಗುವ ತನಕ ಒಂದು ರೀತಿಯ ವಾಂತಿಯ ಸೆನ್ಸೇಶನ್ ಇರುತ್ತಿತ್ತು. ಒಂದೆರಡು ವರ್ಷಕ್ಕೊಮ್ಮೆಕನ್ನಡಕದ ಪವರ್ ಜಾಸ್ತಿಯಾಗಿ ಕನ್ನಡಕ ಬದಲಿಸಬೇಕಾಗಿ ಬರುತ್ತಿತ್ತು. ಅದನ್ನು ಬಿಟ್ಟರೆ ಬೇರೇನು ತೊಂದರೆ ಇರಲಿಲ್ಲ.
ಇತ್ತೀಚೆಗೆ ಕಣ್ಣಿನ ದೃಷ್ಟಿ ಮಂದವಾಗಿ ಹೆಚ್ಚಿನ ಪವರ್ ನ ಕನ್ನಡಕ ತೆಗೆದುಕೊಳ್ಳಬೇಕಾದ ಪ್ರಮೇಯ ಬಂದಿತು. ಹೊಸ ಹುಮ್ಮಸ್ಸಿನಲ್ಲಿ ಪ್ರೊಗ್ರೆಸ್ಸಿವ್ ಲೆನ್ಸ್ ನ ಕನ್ನಡಕ ತೆಗೆದುಕೊಂಡೆ. ಆದರೆ ಪುನಃ ಹಳೆಯ ಅನುಭವವೇ ಮರುಕಳಿಸಿತು. ಅಂದರೆ ಕನ್ನಡಕದ ಪವರ್ ಸೆಟ್ ಆಗುವ ತನಕ ಒಂದು ರೀತಿಯ ವಾಂತಿಯ ಸೆನ್ಸೇಶನ್.
ಅಂತೂ ಇಂತೂ ಹೊಸ ಕನ್ನಡಕ ಸೆಟ್ ಆದ ಮೇಲೆ ಅದರ ಬಳಕೆ ಆರಾಮ್ ಎಂದೆನಿಸಿತು.
ಈಗ ನಿಜಕ್ಕೂ ಕನ್ನಡಕ ಹಾಕುವ ಯಾವ ಆಸಕ್ತಿಯೂ ಇಲ್ಲ. ಆದರೆ ಕನ್ನಡಕ ಉಪಯೋಗಿಸುವ ಅನಿವಾರ್ಯತೆ ಇದೆಯಷ್ಟೆ. ಬದುಕೇ ಹಾಗಲ್ಲವೆ. ಬೇಕೆನ್ನಿಸುವುದು ಸಿಗುವುದಿಲ್ಲ; ಬೇಡವೆಂದಿರುವುದು ಅಂಟಿಕೊಂಡು ಬಿಡುತ್ತದೆ. ಹಾಗೇ ಈ ಕನ್ನಡಕ. ಈಗ ಬೇಡವೆಂದರೂ ನನ್ನನ್ನು ಅಂಟಿಕೊಂಡು ಬಿಟ್ಟಿದೆ😊

107. ಕೆ.ಎಸ್. ಹೆಗ್ಡೆ 
ನಾವು ಶಾಲೆ ಪ್ರಾರಂಭಿಸಿದ ಎರಡನೇ ವರ್ಷ. ಸುತ್ತಮುತ್ತಲಿನ ಹಳ್ಳಿಗಳಿಗೆ ಹೋಗಿ ಅಲ್ಲಿನ ಪಾಲಕರನ್ನು ಖುದ್ದಾಗಿ ಭೇಟಿಯಾಗಿ ಅವರ ಮಕ್ಕಳನ್ನು ಹೊಂಗಿರಣಕ್ಕೆ ಸೇರಿಸುವ ಬಗ್ಗೆ ಮಾತನಾಡುತ್ತಿತ್ತು. ಸಿಬಿಎಸ್ಇ ಪಠ್ಯಕ್ರಮ ಈ ಪ್ರಾಂತ್ಯಕ್ಕೆ ಹೊಸದಾಗಿದ್ದ ಕಾರಣ ಅವರಿಗೆ ಆ ವಿಷಯವನ್ನು ಮನವರಿಕೆ ಮಾಡಲು ಕಷ್ಟವಾಗುತ್ತಿತ್ತು. ಆದರೂ ಶತಾಯಗತಾಯ ಮಾಡಿ ಅವರನ್ನು ಒಪ್ಪಿಸುವುದರಲ್ಲಿ ಕಲಿತ ಬುದ್ಧಿಯೆಲ್ಲಾ ಖರ್ಚಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ನಮ್ಮ ಹಳೆಯ ಶಿಷ್ಯನಾದ ನಂದಿತಳೆಯ ಅನಂತರಾಮು ನಮ್ಮನ್ನು ಕಾಸ್ಪಾಡಿಯ ಕೆ.ಎಸ್.ಹೆಗ್ಡೆಯವರ ಮನೆಗೆ ಕರೆದುಕೊಂಡು ಹೋದ. ಮಾತುಕತೆಯ ನಂತರ ಅವರ ಮೂವರು ಮೊಮ್ಮಕ್ಕಳನ್ನು ನಮ್ಮಲ್ಲಿ ದಾಖಲಾತಿ ಮಾಡಿದರು. ಅಲ್ಲಿ ಪ್ರಾರಂಭವಾದ ನಮ್ಮ ನಂಟು ಅಲ್ಲಿಗೇ ಮುಗಿಯದೇ ಒಂದು ಗಟ್ಟಿಯಾದ ಬಂಧವಾಗಿ ಬೆಳೆಯಿತು.
ನಾನು ಕಂಡ ಅಪರೂಪದ ವ್ಯಕ್ತಿಗಳಲ್ಲಿ ಕೆ. ಎಸ್. ಹೆಗ್ಡೆ ಯವರು ಒಬ್ಬರು. ವಕೀಲಿ ವೃತ್ತಿಯಲ್ಲಿ ತಮ್ಮ ನಿಸ್ಪೃಹತೆ ಹಾಗೂ ಪ್ರಾಮಾಣಿಕತೆಗೆ ಹೆಸರಾಗಿದ್ದವರವರು. ನಮಗೆ ಆವರ ಪರಿಚಯವಾದಾಗ ಅವರಿಗೆ ಎಪ್ಪತ್ತು ವರ್ಷ ದಾಟಿತ್ತು. ಆದರೆ ಅವರಲ್ಲಿದ್ದ ಜೀವನೋತ್ಸಾಹ, ಸಹಾಯ ಮಾಡುವ ಮನೋಭಾವ, ನಿಷ್ಕಳಂಕ ಪ್ರೀತಿ, ಕಷ್ಟಕ್ಕೆ ಅವರು ಸ್ಪಂದಿಸುತ್ತಿದ್ದ ರೀತಿ ಎಲ್ಲವೂ ಅಸಾಧಾರಣ ಹಾಗೂ ಶ್ಲಾಘನೀಯವಾಗಿತ್ತು. ಅವರ ಪತ್ನಿಯಂತೂ ಪ್ರೀತಿ ತುಂಬಿದ ಕೊಡ. ಬಾಯಿ ತುಂಬಾ ಮಾತನಾಡಿ ಆಪ್ತವಾಗುತ್ತಿದ್ದ ಅವರಿಬ್ಬರೂ ನಮ್ಮೊಳಕ್ಕೆ ಇಳಿದು "ನಿಮ್ಮ ಜೊತೆ ನಾವಿದ್ದೇವೆ" ಎನ್ನುವ ಧೈರ್ಯ ಕೊಡುವಂತವರು. ಅಂತಹ ಇಳಿ ವಯಸ್ಸಿನಲ್ಲೂ
ಕೆ. ಎಸ್. ಹೆಗ್ಡೆಯವರು ಶಾಲೆಯ ಪ್ರಚಾರಕ್ಕೆ ಹಾಗೂ ದೇಣಿಗೆ ಕೇಳಲಿಕ್ಕೆ ನಮ್ಮೊಡನೆ ಊರೂರು ಸುತ್ತಿ ನಮಗೆ ನೈತಿಕ ಬೆಂಬಲ ಕೊಟ್ಟಿದ್ದರು. ಏನೇ ಸಮಸ್ಯೆ ಇದ್ದರೂ ಕಾನೂನು ಪುಸ್ತಕ ತಿರುವಿ ಹಾಕಿ ಸರಿಯಾದ ಮಾರ್ಗದರ್ಶನ ನೀಡುತ್ತಿದ್ದರು. ಶಾಲೆಯ ಆಡಳಿತಾತ್ಮಕ ಒತ್ತಡ ಜಾಸ್ತಿಯಾದಾಗ ರವಿ, ನಾನು ಅವರ ಮನೆಗೆ ಹೋಗಿ ಉಂಡು, ವಿಶ್ರಮಿಸಿ ಆ ದಂಪತಿಗಳ ಜೊತೆ ಕಷ್ಟ ಸುಖ ಹಂಚಿಕೊಂಡು ಮನಸ್ಸಿಗೆ ಸಮಾಧಾನ ತಂದುಕೊಂಡು ವಾಪಾಸು ಬರುತ್ತಿದ್ದೆವು. ಅವರ ಮಗ, ಸೊಸೆ ಕೂಡಾ ಅಷ್ಟೇ ಆಪ್ತತೆ ತೋರಿಸುವ ವ್ಯಕ್ತಿಗಳಾಗಿದ್ದರು. ಒಂದು ಸಜ್ಜನ, ಸುಸಂಸ್ಕೃತ, ಪ್ರೀತಿಯ ಕುಟುಂಬವದು.
ಕಳೆದೆರಡು ವರ್ಷಗಳ ಕೆಳಗೆ ಹಿರಿಮಗನನ್ನು ಕಳಕೊಂಡ ದಂಪತಿಗಳಿಗೆ ಅದೊಂದು ದೊಡ್ಡ ಆಘಾತವಾಯಿತು. ನಂತರದ ಆರು ತಿಂಗಳಲ್ಲಿ ಅನಾರೋಗ್ಯದಿಂದಿದ್ದ ತಾಯಿ ಮಗನ ದಾರಿಯನ್ನೇ ಹಿಡಿದರು. ತದನಂತರದಲ್ಲಿ ಅಲ್ಪ ಕಾಲದ ಅನಾರೋಗ್ಯದಿಂದ ಹೆಗ್ಡೆಯವರು ನಿಧನರಾದರು. ಸೊಸೆ ಕುಮುದ ಇವರೆಲ್ಲರ ಸೇವೆ ಮಾಡಿದ್ದು, ಒಬ್ಬರ ಹಿಂದೆ ಒಬ್ಬರನ್ನು ಕಳಕೊಂಡು ಅಂತಹ ಸೂಕ್ಷ್ಮ ಪರಿಸ್ಥಿತಿಯನ್ನು ಹಾಗೂ ತನ್ನನ್ನು ತಾನು ನಿಭಾಯಿಸಿಕೊಂಡದ್ದು ನಿಜಕ್ಕೂ ಪ್ರಶಂಸನೀಯ. ಕೆ. ಎಸ್. ಹೆಗ್ಡೆಯವರ ಕುಟುಂಬ ಬಹಳ ಅಪರೂಪದ ಕುಟುಂಬ. ಯಶಸ್ಸು - ಸೋಲುಗಳ ಸಮ್ಮಿಳಿತ ಬದುಕನ್ನು ಕಂಡು ಅದನ್ನು ಸ್ಥಿತಪ್ರಜ್ಞತೆಯಿಂದ ಸ್ವೀಕರಿಸಿದವರು ಕೆ. ಎಸ್. ಹೆಗ್ಡೆಯವರು. ಸಾಗರದ ಹಲವು ಕ್ಷೇತ್ರಗಳ ಬೆಳವಣಿಗೆಯಲ್ಲಿ ಕೆ. ಎಸ್. ಹೆಗ್ಡೆಯವರ ಕೊಡುಗೆಯಿದೆ.
ಈಗಿರುವ ಅವರ ಕುಟುಂಬದ ಸದಸ್ಯರೆಲ್ಲರೂ ಬಂದ ಆಘಾತಗಳನ್ನು ಸರಿಯಾಗಿ ನಿರ್ವಹಿಸಿ ತಮ್ಮ ಬದುಕನ್ನು ಅರ್ಥಪೂರ್ಣವಾಗಿ ಕಟ್ಟಿಕೊಳ್ಳಲಿ ಎಂಬುದು ನಮ್ಮೆಲ್ಲರ ಹಾರೈಕೆ.


106. ಪರಿಸರ - ಉಣುಗೋಲು 



ಉಣುಗೋಲು ಮಲೆನಾಡಿನ ಹಳ್ಳಿಯ ಮನೆಗಳಲ್ಲಿ ಕಾಣುವ ಸಾಮಾನ್ಯ ವಸ್ತು. ಮನೆಯ ಕಡೆಗೆ ತಿರುಗುವ ರಸ್ತೆ ಅಥವಾ ತೋಟಕ್ಕೆ ಹೋಗುವ ದಾರಿಯಲ್ಲಿ ಜಾನುವಾರು ಬಾರದಿರಲು ಇದನ್ನು ತಡೆಯಾಗಿ ಬಳಸುತ್ತಾರೆ. ನಮ್ಮ ಹೊಂಗಿರಣ ಪ್ರಾರಂಭವಾದಾಗ ಈ ಉಣುಗೋಲೇ ನಮ್ಮ ಮುಖ್ಯ ದ್ವಾರವಾಗಿತ್ತು.
ಹೆಚ್ಚಾಗಿ ಮೂರು ತಡೆಗೋಲು(ತಡಗಲು)ಗಳನ್ನು ಈ ಉಣುಗೋಲು ಹೊಂದಿರುತ್ತದೆ. ಊರಿದ ಎರಡೂ ಗೂಟಗಳಿಗೂ ಮೂರು ರಂಧ್ರಗಳನ್ನು ಮಾಡಿರುತ್ತಾರೆ. ಕೆಲವೊಮ್ಮೆ ಅದಕ್ಕೆ ಬಳಸುವ ತಡೆಗೋಲನ್ನು ನೂಕಿ ತೆಗೆಯಲು ಎರಡು ಕೈಗಳು ಸಾಲುವುದಿಲ್ಲ. ತಡೆಗೋಲು ಒಂದೇ ಭಾರವಾಗಿರುತ್ತದೆ ಇಲ್ಲವೇ ಡೊಂಕಾಗಿರುತ್ತದೆ. ಕೆಲವು ಮನೆಗಳಲ್ಲಿ ಮೇಲಿನ ತಡೆಗೋಲು ಮಾತ್ರ ತೆಗೆಯಲಾಗುವಂತೆ ಮಾಡಿರುತ್ತಾರೆ. ಅಂತಲ್ಲಿ ಉಣುಗೋಲನ್ನು ದಾಟಲು ಸ್ವಲ್ಪ ಸರ್ಕಸ್ ಮಾಡುವ ಪ್ರಮೇಯ ಬರುತ್ತದೆ.
ಅಕೇಶಿಯ ಮರದ ಕೊಂಬೆಯನ್ನು/ಯಾವುದಾದರೂ ಮರದ ಟೊಂಗೆಯನ್ನು ಅಥವಾ ಬಿದಿರಿನ ಗಳವನ್ನು ತಡೆಗೋಲಾಗಿ ಬಳಸುತ್ತಾರೆ. ಗೂಟಕ್ಕೆ ಉಪಯೋಗಿಸುವ ಮರದ ತುಂಡು ಸುಮಾರು 1/4 ಅಡಿ ಅಗಲದ್ದಾಗಿರುತ್ತದೆ. ಗೂಟವನ್ನು ತಡೆಗೋಲಿಗಿಂತ ಹೆಚ್ಚು ಕಾಲ ಬಳಸಬಹುದೆಂದು ಕಾಣುತ್ತದೆ.
ಈಗೀಗ ಕಬ್ಬಿಣದ ಗೇಟುಗಳು ಉಣುಗೋಲನ್ನು ರಿಪ್ಲೇಸ್ ಮಾಡುತ್ತಿವೆ. ಆದರೂ ಕೆಲವೊಂದು ಮನೆಗಳಲ್ಲಿ ಇನ್ನೂ ಉಣುಗೋಲಿನ ಬಳಕೆಯಿದೆ. ಹಿಂದಿನ ಕಾಲದವರ ಸುಲಭೋಪಾಯದ ವಸ್ತುಗಳ ಆವಿಷ್ಕಾರದ ಕಲೆಗೆ ಹಾಗೂ ಅವರ ಸೃಜನಶೀಲತೆಗೆ ಕನ್ನಡಿ ಹಿಡಿದಂತಿರುವ ಸೃಷ್ಟಿ ಈ ಉಣುಗೋಲು!

105. ಪರಿಸರ - ನೆನಪು 

ಎರಡು ದಿನಗಳಿಂದ ಭಯಾನಕ ಗಾಳಿಮಳೆ. ಒಂದೆಡೆ ಈ ಗಾಳಿ ಏನು ಮಾಡುತ್ತದೋ ಎನ್ನುವ ಆತಂಕವಾದರೆ ಇನ್ನೊಂದೆಡೆ ಅದರ ತಂಪಿನ ಅನುಭವದ‌ ಖುಷಿ.
ಕಳೆದ ವರ್ಷ ಹೀಗೇ ಗಾಳಿಮಳೆಯಾಗುತ್ತಿದ್ದ ದಿನಗಳವು. ಒಂದು ರಾತ್ರಿ ಅದ್ಯಾವುದೋ ಮಾಯಕದಲ್ಲಿ ಬಂದ ಸುಂಟರಗಾಳಿಯೊಂದು ತಾನು ಸಾಗಿದ ಮಾರ್ಗದಲ್ಲಿದ್ದ ಗಿಡಮರ, ಕಟ್ಟಡಗಳನ್ನೆಲ್ಲ ಹಾನಿ ಮಾಡಿ ಹೋದದ್ದು ಮರೆಯಲಾಗದ ವಿಷಯ. ಅಷ್ಟನ್ನು ಹಾನಿಗೊಳಿಸಿ ಅವಾಂತರ ಮಾಡಲು ಆ ಗಾಳಿ ತೆಗೆದುಕೊಂಡ ಸಮಯ ಕೇವಲ ಐದು ನಿಮಿಷ! ಕ್ಯಾಂಪಸ್ಸಿನ ಮೇಲ್ತಟ್ಟಿನಲ್ಲಿದ್ದ ನನಗೆ ಅದು ಮಾಡಿದ ಭಯಾನಕ ಶಬ್ದಗಳು ಅಷ್ಟು ಕೇಳಿಸಿರಲಿಲ್ಲ. ಆದರೆ ಕೆಳ ತಟ್ಟಿನಲ್ಲಿದ್ದ ಅಜಯ, ನವೀನ, ಟೀಚರ್ಸ್ ಗಳಿಗೆಲ್ಲ ಅದರ ದಾಂದಲೆ ಒಂದು ಮಟ್ಟಿಗೆ ಅರಿವಿಗೆ ಬಂದಿತ್ತು. ರಾತ್ರಿ ಸುಮಾರು ಎರಡು ಗಂಟೆಯ ಸಮಯ ಇರಬಹುದು. ನವೀನನ ಬಿಡಾರದ ಶೀಟ್ ಹಾರಿ ಹೋಗಿ ಪಕ್ಕದ ಪ್ಲಾಟಿಗೆ ಬಿದ್ದಿತ್ತು. ಆ ಕತ್ತಲಲ್ಲಿ ಹೆಚ್ಚಿನದೇನನ್ನೂ ಗಮನಿಸಲಿಕ್ಕಾಗದೆ ಎಲ್ಲರೂ ಸ್ವಸ್ಥಾನಕ್ಕೆ ಹೋಗಿ ವಿಶ್ರಮಿಸಿದರು.
ಬೆಳಿಗ್ಗೆ ಎದ್ದು ನೋಡಿದಾಗ ಆ ಗಾಳಿ ನಡೆಸಿದ ಅಧ್ವಾನಗಳು ಕಂಡು ಬಂದವು. ನಮ್ಮ ಮಹಾದ್ವಾರದ ಮಾಡಿನ ಅರ್ಧಕ್ಕಿಂತ ಹೆಚ್ಚು ಹೆಂಚುಗಳು, ಮೈನ್ ಬಿಲ್ಡಿಂಗ್ ನ ಮಾಡಿನ ಸುಮಾರಷ್ಟು ಹೆಂಚುಗಳು, ಪ್ರೈಮರಿ ವಿಭಾಗದ ಕುಟೀರದ ಕೆಲವಷ್ಟು ಹೆಂಚುಗಳು, ಹುಡುಗರ ಹಾಸ್ಟೆಲ್ ನ ಕೆಲವು ಕಡೆಯ ಹೆಂಚುಗಳು ಹಾರಿ ಹೋಗಿದ್ದವು. ಮೈನ್ ಬಿಲ್ಡಿಂಗ್ ನ ಒಂದು ಕಡೆಯ ಕಾರಿಡಾರಿನ ಶೀಟ್ಗಳು ಲೇಶ ಮಾತ್ರವೂ ಉಳಿಯದೆ ಹಾರಿ ಹೋಗಿದ್ದವು. ಕಾಲೇಜ್ ಕಟ್ಟಡದ ಟೆರೇಸ್ ಮೇಲಿನ ರೂಮಿನ ಶೀಟ್ ಹಾರಿ ಹೋಗಿ ಪಕ್ಕದ ಬ್ಯಾಣಕ್ಕೆ ಬಿದ್ದಿತ್ತು. ಆ ಸುಂಟರಗಾಳಿಯ ದಾರಿಯಲ್ಲಿ ಸಿಕ್ಕಿದ್ದ ದಪ್ಪ ಮರದ ಕೊಂಬೆಗಳು ತಿರುಚಿ ಹೋಗಿದ್ದವು. ಸಣ್ಣ ಮರಗಳು ತಿರುಚಿ ಬಾಗಿ ಅಡ್ಡ ಬಿದ್ದಿದ್ದವು. ಕರೆಂಟ್ ಕಂಬವೊಂದು ವಾಲಿ ಹೋಗಿತ್ತು. ಇಡೀ ವಾತಾವರಣ ರುದ್ರ ರಮಣೀಯವಾಗಿತ್ತು!
ಆ ದಿನ ಸಣ್ಣ ಮಕ್ಕಳಿಗೆ ರಜೆ ಘೋಷಿಸಿ ಡ್ರೈವರ್ಸ್ ಹಾಗೂ ಕೆಲಸದವರ ಸಹಾಯದಿಂದ ಆಗಿದ್ದ ಹೆಚ್ಚಿನ ಹಾನಿಯನ್ನು ಸರಿಪಡಿಸಿ ಅಲ್ಲಿನ ವಸ್ತು ಸ್ಥಿತಿಯನ್ನೇ ಬದಲಿಸಲಾಯಿತು. ಕಾರಿಡಾರ್ ಶೀಟ್ ಹಾಕುವ ಕೆಲಸ ನಂತರದ ಎರಡು ದಿನಗಳಲ್ಲಿ ಮುಗಿಯಿತು. ನಮ್ಮ ಟೀಮ್ ವರ್ಕ್ನ್ ಬಲ ಅಲ್ಲಿ ಕಾಣಸಿಕ್ಕಿತು. ಒಟ್ಟಿನಲ್ಲಿ ಒಂದು ಸುಂಟರಗಾಳಿ ಮಾಡಿದ ಹಾನಿಯಿಂದ ತತ್ತರಿಸಿ ಹೋದ ನಮ್ಮವರೆಲ್ಲರೂ ಕೂಡಲೇ ಕಾರ್ಯತತ್ಪರರಾಗಿ ಪರಿಸ್ಥಿತಿಯನ್ನು ಸಮತೋಲನಕ್ಕೆ ತಂದದ್ದು ನಿಜಕ್ಕೂ ಸ್ಮರಣೀಯ ಮತ್ತು ಅನುಕರಣೀಯ! ಒಂದು ಸಂಸ್ಥೆಯ ಒಳಗಿನ ಹೂರಣ ಗೊತ್ತಾಗುವುದೇ ಇಂತಹ ಸಂದರ್ಭಗಳಲ್ಲಿ. ಹೊಂಗಿರಣ ಒಂದು 'ಒಟ್ಟು ಶಕ್ತಿ' ಎಂಬುವುದನ್ನು ಆ ದಿನ ನಮ್ಮವರೆಲ್ಲರೂ ಸಾಬೀತು ಪಡಿಸಿದ್ದು ನನ್ನ ಸ್ಥೈರ್ಯವನ್ನು ನೂರು ಪಟ್ಟು ಹೆಚ್ಚಿಸಿದ್ದಂತೂ ನಿಜ.

104. ಬ್ಯಾಗ್ - ನೆನಪುಗಳು 

ಯಾವುದೋ ರೆಕಾರ್ಡ್ ಹುಡುಕಲು ನನ್ನ ಟೇಬಲ್ ಡ್ರಾವರ್ ಎಳೆದಾಗ ಅಲ್ಲೇ ಮೂಲೆಯಲ್ಲಿದ್ದ ನನ್ನ ಹಳೆಯ ಕಪ್ಪನೆಯ 'ಈ ಬ್ಯಾಗ್' ಕಣ್ಣಿಗೆ ಬಿತ್ತು. ಈ ಬ್ಯಾಗಿನೊಂದಿಗೆ ನನ್ನ ಹಲವಾರು ನೆನಪುಗಳು ಹೆಣೆಯಲ್ಪಟ್ಟಿವೆ. ಅದು ಜೀರ್ಣಾವಸ್ಥೆಯಲ್ಲಿದ್ದರೂ ಅದನ್ನು ನಾನಿನ್ನೂ ವರ್ಜಿಸಿಲ್ಲ. ಅದರ ಜೊತೆಗೆ ಹೊಂಗಿರಣದ ಪ್ರಾರಂಭದ ದಿನಗಳ ನನ್ನ ಸಿಹಿ ಕಹಿ ಅನುಭವಗಳು ಅಂಟಿಕೊಂಡಿವೆ.
ಮೂಲತಃ ನಾನು ಭೌತಿಕವಾದಿಯಲ್ಲ. ಯಾವುದೇ ವಸ್ತುವಿಗೆ ಅಂಟಿಕೊಳ್ಳುವುದು, ಒಂದು ವಸ್ತುವಿನ ಮೌಲ್ಯದ ಆಧಾರದ ಮೇಲೆ ಒಂದು ವ್ಯಕ್ತಿಯನ್ನು ಅಳೆಯುವುದು ನನ್ನ ಡಿಕ್ಷನರಿಯಲ್ಲೇ ಇಲ್ಲ. ಅಂತಹ ಮನಸ್ಥಿತಿಯ ನಾನು ಈ ಬ್ಯಾಗನ್ನು ಇನ್ನೂ ಇಟ್ಟುಕೊಂಡಿರುವುದು ನನಗೇ ಆಶ್ಚರ್ಯವೆನಿಸುವ ವಿಷಯ!
ನಾನು ಒಳ್ಳೆಯ ಸುರಕ್ಷಿತ ವಾತಾವರಣದಲ್ಲಿ ಹುಟ್ಟಿ ಬೆಳೆದವಳು ಹಾಗೂ ಕೆಲಸ ಮಾಡಿದವಳು. ಬ್ಯಾಂಕ್, ಕಛೇರಿ ಕೆಲಸಗಳನ್ನು ಮಾಡಿಯೇ ಗೊತ್ತಿಲ್ಲದವಳು. ಬ್ಯಾಂಕ್ ಗೆ ಹೋಗಿ ಸಂಬಳದ ಹಣವನ್ನು ಡ್ರಾ ಮಾಡಿ ತಂದರೆ ಅದೊಂದು ದೊಡ್ಡ ಸಾಧನೆ ಮಾಡಿದಂತೆ ಅನ್ನುವ ಮನಸ್ಥಿತಿಯವಳು. ಅಂತಹ ನಾನು ಹೊಂಗಿರಣದ ಪ್ರಾರಂಭದ ದಿನಗಳಲ್ಲಿ ಭೇಟಿ ಕೊಡದೇ ಬಿಟ್ಟ ಕಛೇರಿಗಳೇ ಇಲ್ಲ. ಎಲ್ಲಾ ಕಛೇರಿಗಳ ಮೆಟ್ಟಿಲು ಹತ್ತಿ ಇಳಿದು ಚಪ್ಪಲಿಗಳು ಸವೆದದ್ದೆಷ್ಟೋ? ಪುಣ್ಯಕ್ಕೆ ನೆನಪಿಗಿರಲಿ ಅಂತ ಸವೆದ ಚಪ್ಪಲಿಗಳನ್ನು ಇಟ್ಟುಕೊಂಡಿಲ್ಲವಷ್ಟೇ😄 ಆ ದಿನಗಳ ನನ್ನೆಲ್ಲಾ ತಿರುಗಾಟದ ನಿರಂತರ ಸಂಗಾತಿ ಈ ಬ್ಯಾಗ್. ಅದರಲ್ಲಿ ಎಷ್ಟೆಲ್ಲ ದಾಖಲೆಗಳನ್ನು ಇಟ್ಟುಕೊಂಡು ತಿರುಗಾಡಿದ್ದೆನೋ ಆ ದೇವರೇ ಬಲ್ಲ!
ಒಂದು ಸಣ್ಣ ಕೆಲಸ ಆಗಬೇಕಿದ್ದರೂ ಕೆಲವು ಕಛೇರಿಗಳಿಗೆ ಹತ್ತ್ಹಲವು ಬಾರಿ ಎಡತಾಕಬೇಕಿತ್ತು. ಅಲ್ಲಿ ಒಂದು ಟೇಬಲ್ಲಿನಿಂದ ಇನ್ನೊಂದು ಟೇಬಲ್ ಗೆ ಆಟದ ಚೆಂಡಿನಂತೆ ಓಡಾಡಬೇಕಿತ್ತು. ದಿನವೆಲ್ಲ ಓಡಾಡಿ ಅವರು ಹೇಳಿದಂತೆಲ್ಲ ಮಾಡಿದರೂ ನಂತರ ಸಿಗುತ್ತಿದ್ದ ಉತ್ತರ " ನಾಳೆ ಬನ್ನಿ" ಎಂದು. ಶಾಲೆಯ ಅಗತ್ಯದ ರೆಕಾರ್ಡ್ ಗಳನ್ನು ಒಟ್ಟು ಮಾಡಲು ಆಗುವುದೇ ಇಲ್ಲವೇನೋ ಎನ್ನುವ ಆತಂಕ ಒಂದೆಡೆಯಾದರೆ ಕಛೇರಿಯ ನೌಕರರಲ್ಲಿರುವ ಕೆಲಸವನ್ನು ಮುಗಿಸದೇ ಮುಂದೂಡುವ ಗುಣ ಜಿಗುಪ್ಸೆ ಹುಟ್ಟಿಸುವ ಮನಸ್ಥಿತಿ ಇನ್ನೊಂದೆಡೆ. ಆಗೆಲ್ಲ ನನ್ನ ಕೈಯಾಸರೆ ಆಗಿ ನನ್ನೊಡನಿದ್ದದ್ದು ಈ ಬ್ಯಾಗ್.
ಆಗಿನ ನನ್ನ ಹೋರಾಟ, ಅನುಭವಿಸಿದ ತೊಳಲಾಟವನ್ನು ಈ ಬ್ಯಾಗ್ ಗ್ರಹಿಸಿದಷ್ಟೂ ಇನ್ಯಾರೂ ಗ್ರಹಿಸಿರಲಾರರು. ಆ ಸಮಯದಲ್ಲಿ ಈ ಬ್ಯಾಗ್ ನ್ನು ಒಂದು ಕಡೆ ಇಟ್ಟು ಪುರುಸೊತ್ತು ತೆಗೆದುಕೊಂಡು ವಿರಮಿಸಿದ್ದು ನನಗೆ ನೆನಪಿಲ್ಲ ಎಂದರೆ ಉತ್ಪ್ರೇಕ್ಷೆಯಲ್ಲ. ಶಾಲಾ ರೆಕಾರ್ಡ್ ರೆಡಿ ಮಾಡಿಸುವ ಸಂಬಂಧಿ ನಾನು ಅಷ್ಟರ ಮಟ್ಟಿಗೆ ತಿರುಗಿದ್ದೇನೆ. ಮತ್ತೆಲ್ಲಿಗೂ ಅಲ್ಲ, ಕಛೇರಿಗಳಿಗೆ! ಆಗಿನ ಅವಮಾನಗಳು, ನಿರ್ಲಕ್ಷ್ಯಗಳು, ಉಪೇಕ್ಷೆಗಳು ಕಲಿಸಿದ ಜೀವನದ ಪಾಠಗಳನ್ನು ಯಾವುದೇ ವಿಶ್ವವಿದ್ಯಾಲಯದಲ್ಲಿ ಕಲಿಯಲು ಸಿಗುವುದಿಲ್ಲ. ಒಂದು ಶಾಲೆ ಕಟ್ಟುವಾಗ ವಿವಿಧ ಮಜಲುಗಳಲ್ಲಿ ನಾವು ಅನುಭವಗಳಿಂದ ಹಣ್ಣಾಗಿ ನಮ್ಮ ವ್ಯಕ್ತಿತ್ವವೂ ಜೊತೆ ಜೊತೆಗೆ ಕಟ್ಟಲ್ಪಡುತ್ತದೆ ಎನ್ನುವುದಂತೂ ಶತಸ್ಸತ್ಯ. ನನ್ನ ಪ್ರಾಥಮಿಕ ಅನುಭವಗಳ ಮಜಲುಗಳಲ್ಲಿ ನನ್ನ ಜೊತೆಯಲ್ಲಿದ್ದು ನನ್ನಂತೆ ಹಣ್ಣಾದದ್ದು ಈ ಬ್ಯಾಗ್! ಕೊನೆಗೂ ಹಿಡಿದ ಕೆಲಸವನ್ನು ಮಾಡಿ ಮುಗಿಸಿ ನೆಮ್ಮದಿಯ ನಿಟ್ಟುಸಿರು ಬಿಡುವಾಗ ನನ್ನೊಡನಿದ್ದದ್ದು ಈ ಬ್ಯಾಗ್!


103. ಹೊಂಗಿರಣ - ನೆನಪುಗಳು 

ನಾವು ಶಾಲೆ ಪ್ರಾರಂಭಿಸಿದಾಗಿನ ಮಳೆಗಾಲ ನೆನಪಿಸಿಕೊಂಡರೆ ಮೈ ಜುಂ ಎನ್ನುತ್ತದೆ. ಇದಕ್ಕೆ ಮುಖ್ಯ ಕಾರಣ ಜೂನ್ ತಿಂಗಳಲ್ಲೇ ಜೋರಾಗಿ ಸುರಿಯುತ್ತಿದ್ದ ಮಳೆ ಹಾಗೂ ಕಟ್ಟಡಗಳ ಕಟ್ಟೋಣ ಮುಗಿಯದೆ ಅವ್ಯವಸ್ಥೆಯ ಆಗರವಾಗಿರುತ್ತಿದ್ದ ನಮ್ಮ ಪರಿಸ್ಥಿತಿ!
ನಾವು ಶಾಲೆಯ ಪ್ರಾರಂಭದ ಹತ್ತನ್ನೆರಡು ವರ್ಷ ಯಾವುದೇ ಇಂಜಿನಿಯರ್ ಗಳ ಸಹಾಯ ಪಡೆಯದೆ ಸ್ಥಳೀಯ ಮೇಸ್ತ್ರಿ ಹಾಗೂ ಬಡಗಿಯ ಸಹಾಯದಿಂದ ಕಟ್ಟಡಗಳನ್ನು ಕಟ್ಟಿದ್ದು. ಅವರ ಕೆಲಸದ ವೇಗಕ್ಕೂ ನಮ್ಮ ಆಲೋಚನೆಯ ಓಘಕ್ಕೂ ತಾಳಮೇಳ ಇರುತ್ತಿರಲಿಲ್ಲ. ಪ್ರಪಂಚವೇ ಅಡಿಮೇಲಾದರೂ ಅವರು ತಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡುತ್ತಿದ್ದರೇ ಹೊರತು ನಮ್ಮ ಅಗತ್ಯ, ಅನಿವಾರ್ಯತೆ ಅವರಿಗೆ ಅರ್ಥವಾಗುತ್ತಿರಲಿಲ್ಲ. ಮಧ್ಯದಲ್ಲಿ ಹಬ್ಬ ಹರಿದಿನ ಬಂದರೆ ಕೆಲಸಗಾರರು ವಾರಗಟ್ಟಲೆ ಕೆಲಸಕ್ಕೆ ಚಕ್ಕರ್! ಇದಲ್ಲದೆ ಕೆಲವೊಮ್ಮೆ ಕಟ್ಟಡ ಸಾಮಾಗ್ರಿಗಳ ಕೊರತೆಯಾಗಿ ಕಟ್ಟಡದ ಕೆಲಸ ನಿಧಾನವಾಗುತ್ತಿತ್ತು. ಒಟ್ಟಿನಲ್ಲಿ ಒಂದಿದ್ದರೆ ಒಂದಿಲ್ಲದಿರುವ ಇಕ್ಕಟ್ಟಿನ ಸ್ಥಿತಿ. ಈ ಎಲ್ಲಾ ಜಂಜಾಟಗಳ ನಡುವೆ ಕಟ್ಟಡ ಕಾಮಗಾರಿ ಮಾಡಿಸುವಾಗ ಸೋತು ಸುಣ್ಣವಾದ ಅನುಭವ.
ಒಮ್ಮೆಯಂತೂ ಶಾಲೆ ಶುರುವಾಗಿ ಬಿಟ್ಟಿತ್ತು. ಹಾಸ್ಟೆಲ್ ಗೆ ಸುಮಾರು 250 ಮಕ್ಕಳ ದಾಖಲಾತಿ ಆಗಿ ಬಿಟ್ಟಿತ್ತು. ಆದರೆ ಹಾಸ್ಟೆಲ್ ನ ಹೊಸ ಮೂರು ರೂಮುಗಳ ಕಟ್ಟೋಣ ಅರ್ಧಂಬರ್ಧ ಆಗಿ ಬಿಟ್ಟಿತ್ತು. ರೂಮ್ ಗಳ ಕೊರತೆಯಿಂದಾಗಿ ಮಕ್ಕಳ ಉಳಿಕೆಯ ಬಗೆಗಿನ ನಮ್ಮ ಲೆಕ್ಕಾಚಾರ ತಲೆಕೆಳಗಾಗಿತ್ತು. ಇದ್ದ ರೂಮ್ ಗಳೆಲ್ಲ ವಿಶಾಲವಾದವುಗಳೇ ಆಗಿದ್ದವು. ಆದರೂ ಹದಿನಾರು ಮಕ್ಕಳು ಉಳಿಯುವ ರೂಮಿನಲ್ಲಿ ನಾವು ಇಪ್ಪತ್ತು ಮಕ್ಕಳನ್ನು ಉಳಿಸಿದಾಗ ಸ್ವಲ್ಪ ಇಕ್ಕಟ್ಟು ಎಂದೆನಿಸುತ್ತಿತ್ತು. ಉಳಿದ ಮೂರು ರೂಮ್ ಗಳು ರೆಡಿಯಾಗಲು ಎರಡು ತಿಂಗಳು ಹಿಡಿದವು. ಅಷ್ಟರೊಳಗೆ ನಾವು ಮಕ್ಕಳಿಂದ, ಪಾಲಕರಿಂದ ಅನುಭವಿಸಿದ ಒತ್ತಡವನ್ನು ಮರೆಯಲಾಗದು. ಮಳೆ ಜೋರಾಗಿ ಇರುತ್ತಿದ್ದ ಕಾರಣ ಬಟ್ಟೆಗಳು ಒಣಗದೆ ಅದೊಂದು ತಲೆನೋವಾಗುತ್ತಿತ್ತು.

ಒಟ್ಟಿನಲ್ಲಿ ಆಗಿನ ಮಳೆಗಾಲ, ಶಾಲಾ ಪ್ರಾರಂಭದ ದಿನಗಳು, ಅವ್ಯವಸ್ಥೆಗಳು ಇವುಗಳನ್ನೆಲ್ಲ ನೆನಪಿಸಿಕೊಂಡರೆ ಈಗಿನ ಸುಸಜ್ಜಿತ ವ್ಯವಸ್ಥೆಯ ಬಗ್ಗೆ ನಿರಾಳವೆನಿಸುತ್ತದೆ. ಆದರೆ ಇಲ್ಲಿಯ ತನಕ ನಡೆದು ಬಂದದ್ದು ಮಾತ್ರ ಮರೆಯಲಾಗದ ಪಥ!


102. ಪರಿಸರ - ಬಾವಿ 


ಬಾವಿ ಎನ್ನುವುದು ಪ್ರತಿಯೊಂದು ಮನೆಯ ಮೂಲಭೂತ ಅಗತ್ಯಗಳಲ್ಲಿ ಒಂದು. ಎಲ್ಲರೂ ಮನೆ ಕಟ್ಟುವ ಮೊದಲು ಬಾವಿ ತೆಗೆಸಿಯೇ ತೆಗೆಸುತ್ತಾರೆ. ಬಾವಿ ತೆಗೆಸಿಯಾದ ಮೇಲೆ ಅದಕ್ಕೆ ಕಟ್ಟೆ ಕಟ್ಟುವುದು ಅನಿವಾರ್ಯ. ಹೀಗಾಗಿ ಎಲ್ಲರ ಮನೆಯಲ್ಲಿ ಬಾವಿಕಟ್ಟೆ ಪ್ರಧಾನವಾಗಿರುತ್ತದೆ. ನಾನು ಮೂಲತಃ ಉಡುಪಿ ಕಡೆಯವಳಾದರೂ ಮದುವೆಯಾಗಿ ಸೇರಿದ್ದು ಮಲೆನಾಡಿನ ಮನೆಗಾದ್ದರಿಂದ ಎರಡೂ ಕಡೆಯ ಬಾವಿಕಟ್ಟೆಗಳು ನನಗೆ ಪರಿಚಿತ.
ಸಾಲಿಕೇರಿಯ ಅಜ್ಜಯ್ಯನ ಮನೆಯ ಬಾವಿಕಟ್ಟೆ ಮನೆಯಿಂದ ಹೊರಗಿದ್ದು ಅದನ್ನು ಅನುಕೂಲತೆಗಾಗಿ ಒಳಕೈ ಮಾಡಿಕೊಂಡಿದ್ದೇವೆ. ಆ ಬಾವಿಕಟ್ಟೆಯ ಪಕ್ಕದಲ್ಲಿಯೇ ಬಟ್ಟೆ ಒಗೆಯುವ ಕಲ್ಲು, ಪಾತ್ರೆ ತೊಳೆಯುವ ಜಾಗವಿದೆ. ಆ ಬಾವಿಯ ನೀರನ್ನು ಮನೆಯ ಎಲ್ಲಾ ಕೆಲಸಗಳಿಗೂ, ತೋಟಕ್ಕೆ ನೀರು ಬಿಡುವುದಕ್ಕೂ ಉಪಯೋಗಿಸುತ್ತೇವೆ. ಹಿಂದೆ ಆ ಬಾವಿಯಿಂದಲೇ ಏತದ ಮೂಲಕ ತೋಟಕ್ಕೆ ನೀರು ಹಾಯಿಸುತ್ತಿದ್ದದ್ದು ನನಗಿನ್ನೂ ಮಸುಕು ಮಸುಕಾಗಿ ನೆನಪಿದೆ. ಮಳೆಗಾಲದಲ್ಲಂತೂ ಸ್ವಲ್ಪ ಸರ್ಕಸ್ ಮಾಡಿ ಕಟ್ಟೆಯಿಂದ ಬಾವಿಯೊಳಗೆ ಬಗ್ಗಿದರೆ ನೇರವಾಗಿ ಕೊಡಪಾನದಲ್ಲಿ ನೀರು ಎತ್ತುವಷ್ಟು ಮೇಲಕ್ಕೆ ಬಾವಿಯಲ್ಲಿ ನೀರು ಬಂದಿರುತ್ತದೆ. ಬೇಸಿಗೆಯಲ್ಲಿ ನೀರು ತಳಕ್ಕೆ ಹೋಗಿ ಕೆಸರು ನೀರಿನ ಲಭ್ಯತೆ ಇರುತ್ತದೆ. ಅದು ಬಹಳ ಅಂದ್ರೆ ಮೂವತ್ತಡಿ ಆಳದ ಬಾವಿಯಷ್ಟೆ. ಆ ಬಾವಿಕಟ್ಟೆಯಲ್ಲಿ ನಮ್ಮ ಮನೆಯ ಮಕ್ಕಳನ್ನು ಸಾಲಾಗಿ ಕೂರಿಸಿ ಬಾವಿಯಿಂದ ನೀರೆತ್ತಿ ಹೊಯ್ದು ಸ್ನಾನ ಮಾಡಿಸಿದ ಗಮ್ಗತ್ತಿನ ಕ್ಷಣಗಳ ನೆನಪಿನ ಸಂಗ್ರಹವಿದೆ.
ನಮ್ಮ ಕೆಳಮನೆಯ ಬಾವಿ ಮನೆಯ ಒಳಗೇ ಇದೆ. ಅದರ ನೀರನ್ನು ಬರೀ ಅಡುಗೆಗಾಗಿ ಮಾತ್ರ ಬಳಸಲಾಗುವುದು. 60 ಅಡಿಗೂ ಮೀರಿ ಆಳವಾಗಿರುವ ಬಾವಿಯದು. ಎಂತಹ ಮಳೆಗಾಲದಲ್ಲೂ ಆ ಬಾವಿಯಲ್ಲಿ ನೀರು ಪಾತಾಳದಲ್ಲಿಯೇ ಇರುತ್ತದೆ. ಕಳೆದ ವರ್ಷದ ಭೀಕರ ಮಳೆಗಾಲದಲ್ಲಿ ನೀರು ಸ್ವಲ್ಪ ಮೇಲೆ ಬಂದು ಹೋದದ್ದು ಬಿಟ್ಟರೆ ಉಳಿದಂತೆ ನೀರು ಮೇಲೆ ಬಂದ ಪುರಾವೆಯೇ ಇಲ್ಲ. ಆ ಬಾವಿಯಿಂದ ನೀರು ಸೇದುವುದು ಒಂದು ಒಳ್ಳೆಯ ವ್ಯಾಯಾಮ. ಆ ಬಾವಿಯ ನೀರು ಎಲ್ಲಾ ಕಾಲದಲ್ಲೂ ಒಂದೇ ರೀತಿಯಲ್ಲಿ ಇರುತ್ತದೆ. ಒಳ್ಳೆಯ ತಿಳಿಯಾದ ನೀರು!
ಹಿಂದೆ ಪಂಪ್ ಸೆಟ್ ಇಲ್ಲದಿದ್ದಾಗ ಮನೆ ಮಂದಿಯ ಸ್ನಾನಕ್ಕೆ ಮನೆಯ ಹೆಂಗಸರು ಆ ಬಾವಿಯಿಂದ ನೀರು ಸೇದಿ ಕೊಡುತ್ತಿದ್ದರಂತೆ. ನಾನು ಮದುವೆಯಾಗಿ ಬಂದಾಗ ಮನೆಯಲ್ಲಿ ಕೆಲವು ಆಧುನಿಕ ಸೌಲಭ್ಯಗಳು ಲಭ್ಯವಿದ್ದ ಕಾರಣ ಹಾಗೆಲ್ಲ ನೀರೆತ್ತುವ ಅನುಭವವಾಗಿಲ್ಲ.
ನನ್ನ ತೌರಿನ ಹಾಗೂ ಅತ್ತೆ ಮನೆಯ ಬಾವಿಗಳೆರಡೂ ಮನೆಯ ಸ್ವಂತದ ಬಾವಿಯಾಗಿರುವ ಕಾರಣ ಬಾವಿಕಟ್ಟೆ ಪಟ್ಟಾಂಗದ ಪ್ರಮೇಯವೇ ಬರುವುದಿಲ್ಲ. ಊರಿಗೆ ಒಂದೇ ಬಾವಿಯಾದರೆ ನೀರಿಗೆ ಬಂದ ಊರವರೊಡನೆಯ ಪಟ್ಟಾಂಗಕ್ಕೆ ಒಳ್ಳೆಯ ಅವಕಾಶವಿರುತ್ತದೆ. ಆದರೆ ನಮ್ಮ ಬಾವಿಕಟ್ಟೆ ಪುರಾಣ ಬರೀ ನೀರೆಳೆಯುವುದಕ್ಕೇ ಸೀಮಿತವಾಗಿದೆ. ದೀಪಾವಳಿ ಹಬ್ಬದಂದು ಎಣ್ಣೆ ಸ್ನಾನಕ್ಕೆ ಹಂಡೆಗೆ ನೀರು ತುಂಬಿಸುವಾಗ ಜಾಗಟೆ ಬಾರಿಸುತ್ತಾ ಬಾವಿಯಿಂದ ನೀರು ಸೇದುವುದು ಒಂದು ಖುಷಿಯ ಕ್ಷಣವೇ ಸೈ. ಉಳಿದಂತೆ ನಮ್ಮ ಅಗತ್ಯಗಳಿಗೆ ನೀರೊದಗಿಸುವ ಕಟ್ಟೆಯನ್ನೊಳಗೊಂಡ ಬಾವಿ ನಮ್ಮ ಪಾಲಿಗೆ ಸರ್ವ ಶ್ರೇಷ್ಠವೆಂದು ಹೇಳಿದರೆ ತಪ್ಪಿಲ್ಲ.

101. ಹೊಂಗಿರಣ - ಕೌಶಲ್ಯ ಅಭಿವೃದ್ಧಿ.
ಮಕ್ಕಳಲ್ಲಿ ಜೀವನ ಕೌಶಲ್ಯ ಬೆಳೆಸುವುದು ಹೊಂಗಿರಣದ ಮೂಲ ಉದ್ದೇಶಗಳಲ್ಲಿ ಒಂದು. ಪಠ್ಯದ ಜೊತೆಗೆ ಜೀವನ ಕೌಶಲ್ಯವನ್ನು ಅನುಭವಯುಕ್ತವಾಗಿ ಪ್ರತಿನಿತ್ಯ ನಿರಂತರವಾಗಿ ಕೊಡುವುದು ಅಷ್ಟು ಸುಲಭದ ವಿಷಯವಲ್ಲ. ಬಹಳ ಯೋಚಿಸಿದಾಗ ನಮಗೆ ಪರಿಹಾರಾತ್ಮಕವಾಗಿ ದೊರಕಿದ ವಿಚಾರ ಸ್ಕೌಟ್ & ಗೈಡ್ ನ ಅಳವಡಿಕೆ. ಸ್ಕೌಟ್ & ಗೈಡ್ ಜೀವನ ಕೌಶಲ್ಯದ ಜೊತೆ ಜೀವನ ಮೌಲ್ಯಗಳನ್ನು ಒದಗಿಸುವ ಒಂದು ಸಂಘಟನೆ/ಆಂದೋಲನ. 2004ರಲ್ಲಿ ನಾವು ಪ್ರಾರಂಭಿಸಿದ ಸ್ಕೌಟ್ & ಗೈಡ್ ಚಟುವಟಿಕೆಗಳು ಈಗಿನವರೆಗೂ ನಮ್ಮಲ್ಲಿ ನಿರಂತರವಾಗಿ ನಡೆಯುತ್ತಾ ಬಂದಿವೆ. ಒಂದು ಹೆಗ್ಗಳಿಕೆಯ ವಿಷಯವೇನೆಂದರೆ ಇಡೀ ರಾಜ್ಯದಲ್ಲಿ ಸ್ಕೌಟ್ & ಗೈಡ್ ಆಂದೋಲನದಲ್ಲಿ ಶಾಲೆಯ ಎಲ್ಲಾ ಮಕ್ಕಳನ್ನು ತೊಡಗಿಸಿರುವ ಏಕೈಕ ಶಾಲೆ ಹೊಂಗಿರಣ.
ನಮ್ಮ ನರ್ಸರಿಯ ಮಕ್ಕಳನ್ನು ಬನ್ನೀಸ್ ನಲ್ಲಿ, 1 ರಿಂದ 4ರ ವರೆಗಿನ ಮಕ್ಕಳನ್ನು ಕಬ್ & ಬುಲ್ ಬುಲ್ ನಲ್ಲಿ ಹಾಗೂ 5 ರಿಂದ 10ರ ವರೆಗಿನ ಮಕ್ಕಳನ್ನು ಸ್ಕೌಟ್ & ಗೈಡ್ ನಲ್ಲಿ ತೊಡಗಿಸಲಾಗಿದೆ. ನಮ್ಮ ಟೀಚರ್ಸ್ ಗಳನ್ನು ತರಬೇತಿ ಶಿಬಿರಕ್ಕೆ ಕಳುಹಿಸಿ ಮಕ್ಕಳಿಗೆ ಅವರುಗಳಿಂದ ಸಮರ್ಪಕ ತಲಬೇತಿ ಸಿಗುವಂತೆ ಮಾಡಲಾಗುವುದು. ವಾರದಲ್ಲಿ ಎರಡು ಅವಧಿಗಳನ್ನು ಸ್ಕೌಟ್ & ಗೈಡ್ ತರಗತಿಗಳಿಗಾಗಿ ಇರಿಸಲಾಗಿರುವುದು. ಅದಕ್ಕಾಗಿ ಥಿಯರಿ ಹಾಗೂ ಪ್ರಾಕ್ಟಿಕಲ್ ಯೋಜನೆಗಳನ್ನು ಮಾಡಿ ತರಗತಿಗಳನ್ನು ತೆಗೆದುಕೊಳ್ಳಲಾಗುವುದು. 2ನೆಯ ತರಗತಿಗೆ ಮೇಲ್ಪಟ್ಟ ಮಕ್ಕಳಿಗೆ ಓವರ್ ನೈಟ್ ಕ್ಯಾಂಪ್ ಗಳನ್ನು ವರ್ಷಕ್ಕೊಮ್ಮೆ ಆಯೋಜಿಸಿ ಮಕ್ಕಳಲ್ಲಿ ಸ್ವಾವಲಂಬನೆ, ನಾಯಕತ್ವ ಗುಣ, ಹೊಂದಾಣಿಕೆಯ ಗುಣ, ಆತ್ಮವಿಶ್ವಾಸ...‌ ಹೀಗೆ ಹಲವಾರು ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ಅನುವು ಮಾಡಿ ಕೊಡಲಾಗುವುದು. ಹೀಗಾಗಿ ನಮ್ಮಲ್ಲಿ ಕಲಿಯುವ ಮಕ್ಕಳಲ್ಲಿ ಮನೋದಾರ್ಢ್ಯತೆ ಚೆನ್ನಾಗಿ ಬೆಳೆದಿದೆ. ಟೀಚರ್ಸ್ ಮತ್ತು ಮಕ್ಕಳ ನಡುವಿನ ಸಂಬಂಧ ಕೂಡ ಈ ಶಿಬಿರಗಳಿಂದ ಗಟ್ಟಿಯಾಗಿದೆ.
ನಮ್ಮಲ್ಲಿ ಕಲಿಯುವ ಮಕ್ಕಳು ಈ ಓವರ್ ನೈಟ್ ಕ್ಯಾಂಪಿಗಾಗಿ ಉತ್ಸುಕತೆಯಿಂದ ಕಾಯುತ್ತಿರುತ್ತಾರೆ. ಕಾಡಿಗೆ ಹತ್ತಿರವಿರುವ ನಮ್ಮ ಯಾವುದಾದರೂ ಪಾಲಕರ ಮನೆಯೊಂದರಲ್ಲಿ ಆಯೋಜಿಸುವ ಈ ಕ್ಯಾಂಪಿನಲ್ಲಿ ಅತ್ಯಂತ ಕನಿಷ್ಠ ಸೌಲಭ್ಯದಲ್ಲಿ ಹಾಗೂ ಎರಡು ದಿನಗಳ ಬಿಡುವಿಲ್ಲದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು ಮಕ್ಕಳಿಗೆ ಒಂದು ಸ್ಮರಣೀಯ ಅನುಭವ. ಒಂದೊಂದು ಕ್ಯಾಂಪ್ ಕೂಡಾ ಮಕ್ಕಳಿಗೆ ಅನುಭವದ ಭಂಡಾರವನ್ನೇ ತೆರೆದಿಡುತ್ತದೆ. ಆ ಭಂಡಾರದಿಂದ ತಮಗೆ ಬೇಕಾದಷ್ಟನ್ನು ದೊರಕಿಸಿಕೊಳ್ಳುವುದು ಅವರವರ ಆಸಕ್ತಿ ಹಾಗೂ ಸಾಮರ್ಥ್ಯಕ್ಕೆ ಬಿಟ್ಟದ್ದು. ಆ ಕ್ಯಾಂಪಿನಲ್ಲಿ ನಟ್ಟಿರುಳಲ್ಲಿ ಕಾಡೊಳಗಿನ ವಾಕಿಂಗ್, ಕ್ಯಾಂಪ್ ಫೈರ್, ಪ್ಯಾಟ್ರೋಲ್ ವೈಸ್ ಅನೇಕ ಸಾಹಸೀ ಚಟುವಟಿಕೆಗಳಿರುತ್ತವೆ, ಮಕ್ಕಳೇ ಮಾಡಿದ ಕರಕುಶಲ ವಸ್ತುಗಳ ಹಾಗೂ ಹಸಿ ಖಾದ್ಯಗಳ ಪ್ರದರ್ಶನ ಇರುತ್ತದೆ, ಶ್ರಮದಾನವಿರುತ್ತದೆ.... ಹೀಗೆ ಹಲವಾರು ರೀತಿಯ ಚಟುವಟಿಕೆಗಳು ಮಕ್ಕಳನ್ನು ಸಂಪೂರ್ಣ ವ್ಯಸ್ತವಾಗಿಡುತ್ತವೆ. ಇದಲ್ಲದೆ ವರ್ಷವಿಡೀ ನಡೆಸುವ ಹತ್ತುಹಲವಾರು ಚಟುವಟಿಕೆಗಳು ಮಕ್ಕಳಿಗೆ ವೈವಿಧ್ಯಪೂರ್ಣ ಎಕ್ಸ್ ಪೋಷರ್ ಕೊಡುತ್ತವೆ. ಹೀಗೆ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಈ ಆಂದೋಲನ ಬಹಳ ಸಹಕಾರಿಯಾಗಿದೆ. ಹಾಗೂ ಹೊಂಗಿರಣದ ಮೂಲ ಉದ್ದೇಶವನ್ನು ಕಾರ್ಯರೂಪಕ್ಕೆ ತರುವುದರಲ್ಲಿ ಫಲಕಾರಿಯಾಗಿದೆ.

No comments:

Post a Comment