Friday, December 4, 2020

ಶೋಭಾಳ ಬರಹಗಳು- ಭಾಗ 6

 ಶೋಭಾ, (3/9/1966) ಅಣ್ಣನ ಮಗಳು, ಸಾಗರ ಹೊಂಗಿರಣ ಸಂಸ್ಥೆಯ ಸಂಸ್ಥಾಪಕಿ, ಪ್ರಾಂಶುಪಾಲೆ, ಗ್ರಹ ಬಂಧನದ (lockdown) ಈ ಸಮಯದಲ್ಲಿ ಹಲವಾರು ಲೇಖನಗಳನ್ನು ಬರದು ಬಾಲ್ಯ, ತನ್ನ ಹಿರಿಯರು, ಪರಿಸರ, ಜೀವನದ ಅನುಭವ ಇತ್ಯಾದಿ ವಿಷಯಗಳನ್ನು ಸುಂದರವಾಗಿ, ಅರ್ಥಪೂರ್ಣವಾಗಿ ಬರೆದು ಫೆಸ್ಬುಕ್ , ಇನ್ಸ್ಟಗ್ರಾಂ ಖಾತೆಗಳಲ್ಲಿ ಹಂಚಿ ಕೊಂಡಿರುತ್ತಾಳೆ. ಅವಳ ಬರವಣಿಗೆಯ ವೈಖರಿ, ವಿಷಯಗಳ ನಿರೂಪಣೆ ಮನ ಮುಟ್ಟುವಂತಿದ್ದು ನೆನಪಿಗೋಸ್ಕರ ಇಲ್ಲಿ ಇರಿಸಿಕೊಂಡಿದ್ದೇನೆ. 



248. ನೆನಪುಗಳು - ಸೀರೆ (30/12/2020)


ಸೀರೆ ಎನ್ನುವುದು ಭಾರತೀಯ ಸ್ತ್ರೀಯರ ಸಾಂಪ್ರದಾಯಿಕ ದಿರಿಸು. ಒಂದು ಕಾಲದಲ್ಲಿ ಮೈ ನೆರೆದ ಬಾಲೆ ಎಷ್ಟೇ ಪುಟ್ಟಕ್ಕಿದ್ದರೂ ಆರು ಮೊಳದ ಸೀರೆಯನ್ನು ಉಡಲೇ ಬೇಕಾಗಿದ್ದ ಅನಿವಾರ್ಯತೆ ಇತ್ತು. ಈಗ ಅಂತಹ ಹೇರಿಕೆಯೆಲ್ಲ ಇಲ್ಲದಾಗಿದೆ ಹಾಗೂ ಸೀರೆಯನ್ನು ಫ್ಯಾಶನೆಬಲ್ ಆಗಿ ಉಡುವ ಕ್ರಮವೂ ಇದೆ.
ಐದರಿಂದ ಆರು ಮೀಟರ್ ಉದ್ದವಿರುವ ಸೀರೆಯಲ್ಲಿ ಇರುವ ವೈವಿಧ್ಯತೆಯನ್ನು ಸುಲಭದಲ್ಲಿ ವಿವರಿಸಲಾಗುವುದಿಲ್ಲ. ಲಕ್ಷ ರುಪಾಯಿಗಿಂತಲೂ ಹೆಚ್ಚು ಮೌಲ್ಯದ ಸೀರೆಯಿಂದ ತೊಂಬತ್ತೊಂಬತ್ತು ರುಪಾಯಿಯ ಸೀರೆಯವರೆಗಿನ ವಿವಿಧ ಸೀರೆಗಳು ಲಭ್ಯವಿವೆ. ಅವರವರ ಆರ್ಥಿಕ ಸ್ಥಿತಿಗನುಗುಣವಾಗಿ, ಅವರವರ ಅಭಿರುಚಿಗೆ ಅನುಗುಣವಾಗಿ ಸೀರೆಯನ್ನು ಖರೀದಿಸುತ್ತಾರೆ.
ಹೆಂಗಸರಿಗೆ ಸೀರೆಯ ವ್ಯಾಮೋಹ ಜಾಸ್ತಿ ಎಂಬ ಮಾತಿದೆ. ಆದರೆ ಒಂದಂತೂ ಸತ್ಯ ಸೀರೆಗೆ ಜನರನ್ನು ಮೋಡಿ ಮಾಡುವ ಗುಣವಿದೆ. ಹೀಗಾಗಿ ಸೀರೆ ಉಡುವ ಹೆಂಗಸರು ಅದನ್ನು ಮೋಹಿಸುವುದರಲ್ಲಿ ತಪ್ಪೇನೂ ಇಲ್ಲವಲ್ಲ😀!
ನಾನು ಚಿಕ್ಕವಳಿದ್ದಾಗ ನನಗೆ ಸೀರೆ ಉಡುವುದೆಂದರೆ ಭಾರಿ ಖುಷಿ. ಮನೆಯಲ್ಲಿ ಅಮ್ಮನ ಸೀರೆಯನ್ನು ಹೇಗ್ ಹೇಗೋ ಉಟ್ಟುಕೊಂಡು ಅಮ್ಮನ ಹತ್ತಿರ ಬೈಸಿಕೊಂಡದ್ದಿದೆ. ಏಕೆಂದರೆ ನನಗೆ ಉಟ್ಟು ಬಿಚ್ಚಿದ ಅಷ್ಟು ದೊಡ್ಡ ಸೀರೆಯನ್ನು ಮಡಚಲು ಬರುತ್ತಿರಲಿಲ್ಲ. ನಾನು ಹೈಸ್ಕೂಲ್ ನಲ್ಲಿ ಇದ್ದಾಗಲೇ ಮನೆಯ ವಿಶೇಷ ಕಾರ್ಯಕ್ರಮಗಳಿಗೆ ಲಂಗ ದಾವಣಿ ಅಥವಾ ಸೀರೆಯನ್ನು ಉಡುತ್ತಿದ್ದೆ. ಆಗ ವಯಸ್ಸಿಗೆ ಮೀರಿ ದೊಡ್ಡವಳಾಗಿ ಕಾಣುತ್ತಿದ್ದ ನನ್ನನ್ನು ಕಂಡು ಅಪ್ಪ ಅಮ್ಮನ ಬಳಿ ನನ್ನ ಜಾತಕ ಕೇಳಿದವರೂ ಇದ್ದಾರೆ😀
ನನ್ನ ಸಮಕಾಲೀನರ ಕಪಾಟನ್ನು ತೆಗೆದರೆ ಎಲ್ಲರ ಕಪಾಟಿನೊಳಗೆ ಬೇಡವೆಂದರೂ ಕನಿಷ್ಠ ಎಪ್ಪತ್ತೆಂಭತ್ತು ಸೀರೆಗಳಿರುವುದಂತೂ ಸತ್ಯ. ಹಾಗೆಯೇ ನನ್ನ ಬಳಿಯೂ ಬಹಳಷ್ಟು ಸೀರೆಗಳಿವೆ☺️ ನನ್ನ ಬಳಿ ನನ್ನಮ್ಮನ ನಲವತ್ತು ವರ್ಷ ಹಳೆಯ ನೈಲಾನ್ ಸೀರೆ ಇನ್ನೂ ಉಡುವ ಸ್ಥಿತಿಯಲ್ಲಿದೆ. ರೇಷಿಮೆ ಸೀರೆಗಳನ್ನು ಉಟ್ಟದ್ದಕ್ಕಿಂತ ಒಳಗಿಟ್ಟು ಆಗಾಗ ಬಿಸಿಲಿಗಿಟ್ಟು ಚೆಂದ ನೋಡಿದ್ದೇ ಹೆಚ್ಚು. ನನಗೆ ಕಾಟನ್ ಸೀರೆಗಳು ಇಷ್ಟವಾದರೂ ಅವುಗಳನ್ನು ನಿರ್ವಹಿಸುವುದು, ಉಡುವುದು ಸ್ವಲ್ಪ ರಗಳೆ ಎನಿಸುತ್ತದೆ. ಇದ್ದದ್ದರಲ್ಲಿ ಆರಾಮಾಗಿ ಉಡಬಹುದಾದದ್ದು ಸಿಂಥೆಟಿಕ್ ಸೀರೆಗಳು. ಅವುಗಳಿಗೆ ನಾವು ಹೇಳಿದಂತೆ ಕೇಳುವ ಗುಣವಿದೆ😂

ಸೀರೆ ಖರೀದಿಸಿದರೆ ಅಷ್ಟಕ್ಕೇ ಮುಗಿಯುವುದಿಲ್ಲ. ಅದಕ್ಕೆ ಮ್ಯಾಚಿಂಗ್ ಲಂಗ, ರವಿಕೆ ಎಂದು ಹುಡುಕಾಟವಿದೆ. ಸರಿಯಾದ ರೀತಿಯಲ್ಲಿ ರವಿಕೆ ಹೊಲಿಯುವವರನ್ನು ತಲಾಶ್ ಮಾಡಬೇಕಾಗುತ್ತದೆ. ರೇಷಿಮೆ ಸೀರೆಯಾದರೆ ಸೆರಗಿನ ಕುಚ್ಙು ಹಾಕಿಸಬೇಕಾಗುತ್ತದೆ. ಎಲ್ಲಾ ರೀತಿಯ ಸೀರೆಗಳಿಗೂ ಸಾರಿ ಫಾಲ್ ಹಾಕಬೇಕಾಗುತ್ತದೆ. ಕಾಟನ್ ಸೀರೆಗಳಿಗೆ ತೆಳುವಾದ ಗಂಜಿ ಹಾಕಬೇಕಾಗುತ್ತದೆ. ಕೆಲವು ಬಗೆಯ ಸೀರೆಗಳಿಗೆ ಇಸ್ತ್ರಿ ಮಾಡುವ ಅಗತ್ಯವಿರುತ್ತದೆ. ಹೀಗೆ ಸೀರೆ ಎಂದರೆ ಅದರೊಡನೆ ಒಂದಲ್ಲ ಒಂದು ರೀತಿಯ ಮುಗಿಯದ ಕೆಲಸಗಳ ಪಟ್ಟಿಯೇ ಹೊಸೆದುಕೊಂಡಿರುತ್ತದೆ. ಆದರೂ ಹೊಸ ರೀತಿಯ ಸೀರೆ ಮಾರುಕಟ್ಟೆಗೆ ಬಂದಿದೆ ಎಂದಾದರೆ ಮನಸ್ಸು ಅದರೆಡೆಗೆ ಆಕರ್ಷಿತವಾಗುವುದು ನಿಜವಲ್ಲವೆ?


247.ಪರಿಸರ - ರಂಗೋಲಿ  (29/12/2020)


ರಂಗೋಲಿ ಒಂದು ಅದ್ಭುತವಾದ ಕಲೆ. ಹಳ್ಳಿಯ ಪ್ರತಿ ಮನೆಯ ಮುಂದೆ ಬೆಳಿಗ್ಗೆ ಸಾರಿಸಿ ಅಥವಾ ಒರೆಸಿ ರಂಗೋಲಿ ಹಾಕುವುದು ವಾಡಿಕೆ. ವಿಶೇಷ ಕಾರ್ಯಕ್ರಮಗಳಲ್ಲಿ ಹಾಗೂ ಹಬ್ಬ ಹರಿದಿನಗಳಲ್ಲಿ ರಂಗೋಲಿ ಹಾಕುವುದು ಸರ್ವೇ ಸಾಮಾನ್ಯ. ಇದೊಂದು ಗೃಹಾಲಂಕಾರ ಕಲೆ. ಇದನ್ನು ಚಿತ್ರಕಲೆಯ ಒಂದು ಭಾಗ ಎಂದೂ ಪರಿಗಣಿಸಬಹುದು. ಸ್ತ್ರೀಯರ ಕಲಾ ನೈಪುಣ್ಯತೆಯ ಪ್ರತೀಕ ಈ ರಂಗೋಲಿ.
ರಂಗವಲ್ಲಿ ಅಥವಾ ರಂಗಾವಳಿ ಎಂದರೆ ಬಣ್ಣಗಳ ಸಮೂಹ. ಹೆಚ್ಚಾಗಿ ದೇವಸ್ಥಾನ ಹಾಗೂ ದೇವರ ಕಾರ್ಯಗಳಲ್ಲಿ ಹಾಕಲ್ಪಡುವ ರಂಗೋಲಿ ಭಗವಂತನ ಆರಾಧನೆಯ ಒಂದು ರೂಪವೂ ಹೌದು. ಇದೊಂದು ರೀತಿಯ ಕಲಾರಾಧನೆಯೆ ಸೈ! ಆಯಾಯ ದೇವತೆಗಳ ಪ್ರತೀಕವಾಗಿ ರಂಗೋಲಿಯ ಚಿಹ್ನೆಗಳಿರುತ್ತವೆ. ಪದ್ಮ, ವೃತ್ತ, ಸ್ವಸ್ತಿಕ, ರಥ, ಚೌಕ, ಚಕ್ರ, ತ್ರಿಕೋನ..ಹೀಗೆ ಅನೇಕ ಚಿಹ್ನೆಗಳಿರುತ್ತವೆ. ಆಯಾಯ ದೇವತೆಗಳಿಗೆ ಸಂಬಂಧಪಟ್ಟ ಕಾರ್ಯಕ್ರಮಕ್ಕೆ ಪೂರಕವಾದ ಚಿಹ್ನೆಗಳನ್ನು ಬಳಸಿ ರಂಗೋಲಿ ಹಾಕುವರು.
ಸುಣ್ಣ, ಶೇಡಿಯ ಹುಡಿ, ಅಕ್ಕಿ ಹಿಟ್ಟು, ಬಣ್ಣದ ಪುಡಿಗಳನ್ನು ಬಳಸಿ ಬೆರಳುಗಳಿಂದ ರಂಗೋಲಿ ಹಾಕುವರು. ಕೆಲವರು ತೋರುಬೆರಳು, ಹೆಬ್ಬೆರಳುಗಳ ನಡುವೆ ಹಿಡಿದು ಪುಡಿ ಬಿಡುತ್ತಾರೆ ಹಾಗೂ ಇನ್ನು ಕೆಲವರು ಮುಷ್ಟಿಯಲ್ಲಿ ಹಿಡಿದು ಪುಡಿ ಬಿಡುತ್ತಾರೆ. ರಂಗೋಲಿಯಲ್ಲಿ ಎಳೆ ರಂಗೋಲಿ ಮತ್ತು ಚುಕ್ಕಿ ರಂಗೋಲಿ ಎನ್ನುವ ವಿಧಗಳಿವೆ. ಯಾವಾಗಲೂ ಎರಡು ಎಳೆ ರಂಗೋಲಿ ಹಾಕಬೇಕೆಂಬ ರೂಢಿ ಇದೆ. ರಂಗೋಲಿ ಶುಭದ ಸಂಕೇತ.
ಯಾವುದೇ ಶುಭ ಸಮಾರಂಭಗಳು ವರ್ಣಮಯ ರಂಗೋಲಿಯಿಂದ ಕಳೆಗಟ್ಟುತ್ತವೆ. ಸಂಕೇತಾರ್ಥವಾಗಿ ಪ್ರಾರಂಭವಾದ ರಂಗೋಲಿ ಕಲೆ ಈಗ ಅಲಂಕಾರಿಕ ಕಲೆಯಾಗಿ ಉಳಿದಿದೆ. ದೇವತಾ ಮೂಲ ಚಿಹ್ನೆಗಳಿಗೆ ಹೊರತಾಗಿ ಪಕ್ಷಿ, ಗಿಡ,ಮರ, ಬಳ್ಳಿ, ಹಣ್ಣು, ಕಾಯಿ, ಪರಿಕರಗಳು... ಹೀಗೆ ಸುತ್ತ ಮುತ್ತಲಿನ ವಸ್ತುಗಳ ಚಿತ್ರಗಳನ್ನು ರಂಗೋಲಿಯಲ್ಲಿ ಮೂಡಿಸಲು ಪ್ರಾರಂಭಿಸಿದ್ದಾರೆ. ಈಗ ಇದು ಕೇವಲ ಭಕ್ತಿಗೆ ಹೊರತಾಗಿ ಕಲಾತ್ಮಕ ಅಭಿವ್ಯಕ್ತಿಯೂ ಆಗಿ ಬಿಟ್ಟಿದೆ.

ಅಜ್ಜಯ್ಯನ ಮನೆಯಲ್ಲಿ ನಮ್ಮ ಕಾಶಿಯತ್ತೆ ರಂಗೋಲಿ ಪುಡಿಯಲ್ಲಿ ಹೊಸ್ತಿಲು ಬರೆಯುತ್ತಿದ್ದರು ಹಾಗೂ ತುಳಸಿಕಟ್ಟೆಯ ಮುಂದೆ ನಿಯಮಿತವಾಗಿ ರಂಗೋಲಿಯನ್ನು ಹಾಕುತ್ತಿದ್ದರು. ನನ್ನ ಗಂಡನ ಮನೆಯಲ್ಲಿ ನಿತ್ಯವೂ ಮನೆ ಮುಂದೆ ಸಾರಿಸಿ ರಂಗೋಲಿ ಹಾಕುತ್ತಾರೆ. ಮನೆಯಲ್ಲಿ ವಿಶೇಷ ಕಾರ್ಯಕ್ರಮ ಇದ್ದಾಗಂತೂ ಬಣ್ಣ ಬಣ್ಣದ ಚಿತ್ತಾಕರ್ಷಕ ರಂಗೋಲಿಗಳನ್ನು ಹಾಕುತ್ತಾರೆ. ಮದುವೆ ಮುಂಜಿಗಳಲ್ಲಿ ವಧು, ವರ, ವಟುಗಳ ಬಾಳೆ ಎಲೆಯ ಮುಂದೆ ಎರಡೆಳೆಯ ರಂಗೋಲಿ ಹಾಕಿ ಶೃಂಗರಿಸುತ್ತಾರೆ. ರಂಗೋಲಿ ಎನ್ನುವುದು ಕಾರ್ಯಕ್ರಮಕ್ಕೆ ಹೆಚ್ಚಿನ ಕಳೆ ಕೊಡುವುದಂತೂ ನಿಜ. ನಾನು ಇವೆಲ್ಲವನ್ನೂ ನೋಡುತ್ತಾ ಬೆಳೆದರೂ, ಅವುಗಳನ್ನು ಮೆಚ್ಚಿಕೊಂಡರೂ, ನನ್ನಲ್ಲಿ ಕಲಾಸಕ್ತಿ ಇದ್ದರೂ ಈವರೆಗೆ ನನಗೆ ರಂಗೋಲಿ ಹಾಕುವುದನ್ನು ಕರಗತ ಮಾಡಿಕೊಳ್ಳಲಾಗದಿರುವುದು ನನ್ನ ಮಟ್ಟಿಗೆ ಖೇದಕರ ವಿಷಯವೇ ಸೈ🤔 ಈ ಕಲೆಯ ಬಗ್ಗೆ ಹೆಚ್ಚಿನ ವಿಚಾರ ಮಾಡಿದಾಗ ಹಿಂದಿನ ಕಾಲದ ಸ್ತ್ರೀಯರಿಗೆ ರಂಗೋಲಿ ಹಾಕುವ ಕೆಲಸ ಅವರ ಕಲಾಭಿವ್ಯಕ್ತತೆಗೆ ಅವಕಾಶವೂ ಆಗಿತ್ತು ಹಾಗೂ ಮಾನಸಿಕ ಒತ್ತಡದ ನಿವಾರಕವೂ ಆಗಿದ್ದಿರಬಹುದು ಎಂದೆನಿಸುತ್ತದಲ್ಲವೆ?


246 . ನೆನಪುಗಳು - ಪುಗ್ಗ (28/12/2020)


ಪುಗ್ಗ ಎನ್ನುವುದು ಒಂದು ಮನ ಸೆಳೆಯುವ ವಸ್ತು. ಎಂತಹ ವಯೋಮಾನದವರನ್ನೂ ತನ್ನೆಡೆಗೆ ಸೆಳೆಯುವ ಶಕ್ತಿ ಪುಗ್ಗಗಳಿಗಿದೆ.
ನಾನು ಚಿಕ್ಕವಳಿದ್ದಾಗ ನನ್ನಪ್ಪ ಚಿಕ್ಕ ಚಿಕ್ಕ ಪುಗ್ಗಗಳನ್ನು ನಮಗೆಲ್ಲ ತಂದುಕೊಡುತ್ತಿದ್ದರು. ನಾವು ಪುಗ್ಗಗಳನ್ನು ಎಳೆದು ಊದಿ ಊದಿ ಗಾಳಿ ತುಂಬಿಸುತ್ತಿದ್ದೆವು. ಆ ಗಾಳಿ ತುಂಬಿದ ಪುಗ್ಗಗಳೊಡನೆ ನಾವು ಗಂಟೆಗಟ್ಟಲೆ ಆಡುತ್ತಿದ್ದೆವು. ಪುಗ್ಗ 'ಢಂ' ಎಂದು ಒಡೆದು ಹೋದಾಗ ಒಂದರೆಘಳಿಗೆ ಬೇಸರವಾಗುತ್ತಿತ್ತು. ನಂತರದಲ್ಲಿ ಪುನಃ ಉಳಿದ ಪುಗ್ಗಗಳೊಡನೆ ಆಡುವುದರಲ್ಲಿ ನಾವು ಮಗ್ನರಾಗುತ್ತಿದ್ದೆವು.
ಜಾತ್ರೆಗೆ ಹೋದಾಗ ಬೇರೆ ಆಟದ ಸಾಮಾನುಗಳಿಗಿಂತ ಮಾರಾಟಗಾರರ ಬಳಿ ಇರುತ್ತಿದ್ದ ದೊಡ್ಡ ದೊಡ್ಡ ಪುಗ್ಗಗಳೇ ಕಣ್ಣಿಗೆ ಬೀಳುತ್ತಿದ್ದವು. ದೊಡ್ಡದಾದ ವಿಭಿನ್ನ ಆಕಾರಗಳಲ್ಲಿ ಇರುತ್ತಿದ್ದ ಬಣ್ಣ ಬಣ್ಣದ ಪುಗ್ಗಗಳು ನಮ್ಮ ಗಮನವನ್ನು ಸೆಳೆಯುತ್ತಿದ್ದವು. ಆ ಪುಗ್ಗಗಳಿಗೆ ಸಪೂರವಾದ ಉದ್ದನೆಯ ಪುಗ್ಗದ ಬಾಲವಿರುತ್ತಿತ್ತು. ಕೆಲವೊಮ್ಮೆ ಮನೆಗೆ ಹೋಗುವುದರೊಳಗೆ ಆ ಪುಗ್ಗ ಒಡೆದು ಹೋಗಿರುತ್ತಿತ್ತು. ಕೆಲವು ಪುಟಾಣಿ ಪುಗ್ಗಗಳನ್ನು ಊದಿ ಉದ್ದನೆಯ ಕಡ್ಡಿಗೆ ಕಟ್ಟಿ ಮಾರಾಟ ಮಾಡುತ್ತಿದ್ದರು. ಕೆಲವು ಪುಗ್ಗಗಳನ್ನು ಊದಿ ದೊಡ್ಡದಾದ ಮೇಲೆ ಮಧ್ಯೆ ಒಳಗೆಳೆದು ಸೇಬಿನ ಹಣ್ಣಿನ ಆಕಾರ ನೀಡಿರುತ್ತಿದ್ದರು. ಆ ಪುಗ್ಗಗಳ ಆಕಾರ, ಗಾತ್ರ, ಬಣ್ಣ ಸದಾ ಆಕರ್ಷಕವಾಗಿರುತ್ತಿತ್ತು.

ಸಣ್ಣ ಮಗುವೊಂದು ಎಷ್ಟೇ ಅಳುತ್ತಿರಲಿ ಅದರ ಕೈಗೆ ಬಣ್ಣ ಬಣ್ಣದ ಪುಗ್ಗವನ್ನು ಕೊಟ್ಟು ಸುಮ್ಮನಾಗಿಸಬಹುದು. ಅಂತಹ ಸಾಂತ್ವನ ನೀಡುವ ಗುಣ ಪುಗ್ಗಕ್ಕೆ ಇದೆ. ಈಗೀಗಂತೂ ಬೃಹತ್ ಆಕಾರದ ಪುಗ್ಗಗಳು ಲಭ್ಯ. ಅವುಗಳನ್ನು ಆಗಸದಲ್ಲಿ ಬಹಳೆತ್ತರ ಹಾರಿಸಿ ಖುಷಿ ಪಡಬಹುದು. ಗಾಳಿ ತುಂಬಿಸಿ ಬಿಗಿಯಾದ ಪುಗ್ಗದ ಮೇಲ್ಮೈಯನ್ನು ತಿಕ್ಕಿದರೆ ಉಂಟಾಗುವ 'ಕ್ರೀಂ' ಎನ್ನುವ ಶಬ್ದ ಕಿರಿಕಿರಿಯುಂಟು ಮಾಡುತ್ತದೆ. ನಾವು ಚಿಕ್ಕವರಿದ್ದಾಗ ಆ ಶಬ್ದದಿಂದ ದೊಡ್ಡವರಿಗೆ ಕಿರಿಕಿರಿ ಮಾಡಿ ಬೈಸಿಕೊಂಡ ನೆನಪಿದೆ. ಗಾಳಿ ತುಂಬಿದ ಪುಗ್ಗದ ಬಾಯಿಯನ್ನು ಹಿಡಿದೆಳೆದು ನಿಧಾನವಾಗಿ ಗಾಳಿ ಬಿಟ್ಟರೆ ಅಧೋವಾಯು ಹೊರಹೋದ ಶಬ್ದ ಬರುತ್ತದೆ. ಅದಂತೂ ನಮಗೆ ಬಹಳ ಮನರಂಜನೆ ಕೊಟ್ಟ ಪುಗ್ಗದೊಟ್ಟಿಗಿನ ಆಟವಾಗಿತ್ತು☺️ ಹಾಗೆಯೇ ಗಾಳಿ ತುಂಬಿದ ಪುಗ್ಗವನ್ನು ಯಾರದ್ದಾದರೂ ಹಿಂದೆ ಹೋಗಿ ಸೂಜಿ ಚುಚ್ಚಿ ಒಡೆದು ಅವರನ್ನು ಬೆಚ್ಚಿ ಬೀಳಿಸಿದ ಪ್ರಸಂಗಗಳೂ ಇವೆ. ಕೆಲವೊಮ್ಮೆ ಸಭಾ ಕಾರ್ಯಕ್ರಮದಲ್ಲಿ ಅಲಂಕಾರಕ್ಕಾಗಿ ಕಟ್ಟಿರುವ ಪುಗ್ಗಗಳು ಮುಖ್ಯ ಅತಿಥಿಗಳು ಭಾಷಣ ಮಾಡುವಾಗ ಢಂಗುಟ್ಟಿ ಆಭಾಸ ಮಾಡಿದ್ದೂ ಇದೆ. ಒಟ್ಟಿನಲ್ಲಿ ಪುಗ್ಗದೊಂದಿಗೆ ಅನೇಕ ಹಸನಾದ, ನವಿರಾದ ನೆನಪುಗಳು ನೆಯ್ದುಕೊಂಡಿವೆ🙂


245. ಪರಿಸರ - ಕತ್ತೆಗಳು (27/12/2020)

ಈಗ್ಗ್ಯೆ ಮೂರು ದಿವಸಗಳ ಹಿಂದೆ ಗಾಜನೂರಿಗೆ ಹೋಗಿದ್ದೆ. ಗಾಜನೂರಿನ ಚೆಕ್ ಪೋಸ್ಟ್ ಬಳಿ ಮೂರ್ನಾಲ್ಕು ಕತ್ತೆಗಳು ಕಂಡವು. ಬಹಳ ವರ್ಷಗಳ ನಂತರ ಕತ್ತೆಗಳ ದರ್ಶನವಾದದ್ದು ಖುಷಿ ಕೊಟ್ಟಿತು. ಯಾವುದನ್ನೇ ಆಗಲಿ ಅಪರೂಪಕ್ಕೆ ನೋಡಿದಾಗ ನನ್ನಲ್ಲಿ ಒಂದು ಸಂಭ್ರಮದ ಭಾವ ಮೂಡುತ್ತದೆ🙂 ಕತ್ತೆಗಳನ್ನು ನೋಡಿದಾಗಲೂ ಹಾಗೇ ಆಯಿತು.
ನಾನು ಮೊದಲ ಬಾರಿ ಕತ್ತೆಗಳನ್ನು ನೋಡಿದ್ದು ಶಿವಮೊಗ್ಗದಲ್ಲಿ. ನಾಲ್ಕರಿಂದ ಆರನೇ ತರಗತಿಯವರೆಗೆ ಶಿವಮೊಗ್ಗದಲ್ಲಿ ದೊಡ್ಡಪ್ಪನ ಮನೆಯಲ್ಲಿದ್ದು ಓದಿದ ನನಗೆ ಕತ್ತೆಗಳನ್ನು ನೋಡುವ ಮೊದಲ ಅವಕಾಶ ಸಿಕ್ಕಿದ್ದು ಅಲ್ಲಿಯೇ. ನಮ್ಮೂರಿನಲ್ಲಿ ಕತ್ತೆ - ಕುದುರೆಗಳೆಲ್ಲ ಇಲ್ಲದ ಕಾರಣ ಶಿವಮೊಗ್ಗದಲ್ಲಿ ಅವುಗಳನ್ನು ನೋಡಲು ಸಾಧ್ಯವಾದಾಗ ಒಂದು ರೀತಿಯ ವಿಚಿತ್ರ ಖುಷಿಯಾಗಿತ್ತು! ದೊಡ್ಡಪ್ಪನ ಮನೆಯ ಬಳಿ ಇರುವ ಕತ್ತೆಗಳ ಹಿಂದೆ ನಾನು ಹೋದಾಗ ನನ್ನ ದೊಡ್ಡಮ್ಮ ಅವುಗಳು ಒದೆಯುವ ಕಾರಣ ಅವುಗಳ ಹಿಂದೆ ಹೋಗದಿರುವಂತೆ ನನಗೆ ಎಚ್ಚರಿಕೆ ನೀಡುತ್ತಿದ್ದರು.
ಮೊತ್ತ ಮೊದಲಿಗೆ ನೋಡಿದಾಗ ನನಗೆ ಕತ್ತೆ ಮತ್ತು ಕುದುರೆಗಳ ವ್ಯತ್ಯಾಸ ಗೊತ್ತಾಗಿರಲಿಲ್ಲ. ತದನಂತರದಲ್ಲಿ ಅವುಗಳ ವ್ಯತ್ಯಾಸದ ಆರಿವುಂಟಾಯಿತು. ಅವುಗಳು ಒಂದೇ ವರ್ಗಕ್ಕೆ ಸೇರಿದರೂ ಕುದುರೆಯ ಚೆಲುವು, ಧೀಮಂತಿಕೆ ಹಾಗೂ ಓಟದ ಮಾಟ ಕತ್ತೆಗಿಲ್ಲ🤔
ಆಗೆಲ್ಲ ಶಿವಮೊಗ್ಗದಲ್ಲಿ ಅಗಸರಿದ್ದರು. ಕತ್ತೆಗಳನ್ನು ಹೆಚ್ಚಾಗಿ ಬಳಸುವ ವ್ಯಕ್ತಿಗಳು ಅವರಾಗಿದ್ದರು. ಒಗೆಯುವ ಬಟ್ಟೆಗಳ ರಾಶಿಯನ್ನಾಗಲಿ ಹಾಗೂ ಒಗೆದ ಬಟ್ಟೆಗಳ ರಾಶಿಯನ್ನಾಗಲಿ ಅಗಸರು ಕತ್ತೆಗಳ ಮೇಲೆ ಹೊರೆಸಿ ಕೊಂಡು ಹೋಗುತ್ತಿದ್ದ ದೃಶ್ಯ ಇನ್ನೂ ನನ್ನ ಕಣ್ಣಿಗೆ ಕಟ್ಟಿದಂತಿದೆ. ನನ್ನ ದೊಡ್ಡಪ್ಪನ ಮನೆ ಮುಖ್ಯ ರಸ್ತೆಯ ಪಕ್ಕದಲ್ಲಿದ್ದ ಕಾರಣ ಇಂತಹ ದೃಶ್ಯಗಳು ಸರ್ವೇ ಸಾಮಾನ್ಯವಾಗಿ ನೋಡಲು ಸಿಗುತ್ತಿದ್ದವು. ದಾತಾರರಿಲ್ಲದ ಕತ್ತೆಗಳು ಬೀದಿ ಬದಿಯಲ್ಲಿ ಸಿಕ್ಕಿ ಸಿಕ್ಕಿದ್ದನ್ನು ಮೇಯುತ್ತಾ ಹಸಿದಾಗ ಕೂಗುತ್ತಾ ಇರುವುದನ್ನು ನೋಡಿದಾಗ ಕರುಳು ಚುರುಗುಟ್ಟುತ್ತಿತ್ತು.
ಕತ್ತೆಗಳು ಕುದುರೆಗಳಷ್ಟು ಸುಂದರವಲ್ಲದಿದ್ದರೂ ಕತ್ತೆಗಳ ಮರಿಗಳು ಮುದ್ದು ಮುದ್ದಾಗಿರುತ್ತವೆ. ಕತ್ತೆಗಳ ಕೂಗು ಕರ್ಕಶವಾಗಿರುತ್ತದೆ. ಹೀಗಾಗಿ ಯಾರಾದರೂ ಕೆಟ್ಟ ಸ್ವರದಲ್ಲಿ ಹಾಡಿದರೆ "ಗಾರ್ದಭ ಗಾಯನ"ವೆಂದು ಹೇಳುತ್ತಾರೆ. ಕತ್ತೆ ಸ್ವಲ್ಪ ಮೊಂಡುತನದ ಸ್ವಭಾವ ಉಳ್ಳದ್ದಾದರೂ ಬಹಳ ಶ್ರಮಜೀವಿ. ಎಂತಹುದೇ ಬಿಸಿಲಿನ ತಾಪದಲ್ಲೂ, ಕಷ್ಟಕರ ಪರಿಸ್ಥಿತಿಯಲ್ಲೂ ಕತ್ತೆಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತವೆ. ಈಗಲೂ ಕೂಡ ಪ್ರಪಂಚದ ಹಲವಾರು ಕಡೆಗಳಲ್ಲಿ ಕತ್ತೆಗಳನ್ನು ಕೆಲಸಕ್ಕೆ ಬಳಸುತ್ತಾರೆ. ಹಾಗೆಯೇ ಕತ್ತೆಗಳು ತಮ್ಮ ಹಿಂಗಾಲನ್ನೆತ್ತಿ ಒದೆಯುವ ರೀತಿಗೆ ಪ್ರಸಿದ್ಧಿ ಪಡೆದಿವೆ ಎನ್ನುವ ವಿಚಾರವನ್ನು ಎಲ್ಲರೂ ತಿಳಿದುಕೊಂಡಿರಬಹುದು.😀

ಆದರೂ ಕತ್ತೆಯ ತಾಕತ್ತನ್ನು ಲಕ್ಷಿಸದೆ ಅದನ್ನು ಕೇವಲ ಯಾರನ್ನಾದರೂ ಬೈಯ್ಯಲು, ಹೀಗಳೆಯಲು ಎಲ್ಲರೂ ಯಾವಾಗಲೂ ಬಳಸುವುದು ವಿಷಾದಕರ ಸಂಗತಿಯಲ್ಲವೆ?


244. ನೆನಪುಗಳು - ಬಾತ್ ಟವೆಲ್ (26/12/2020)


ಬಾತ್ ಟವೆಲ್ ಎಲ್ಲರಿಗೂ ಅತ್ಯಗತ್ಯವಾದ ವಸ್ತು. ನನ್ನ ತವರು ಮನೆಯಲ್ಲಿ ಅದಕ್ಕೆ ಬೈರಾಸ ಎಂದು ಹೇಳುತ್ತಾರೆ. ಟವೆಲ್ ಎಂದು ಹೇಳಬರದವರು ಟುವೆಲ್ ಎಂದು ಹೇಳುತ್ತಾರೆ. ಅದಕ್ಕೆ ಏನೇ ಹೆಸರಿರಲಿ ಬಿಡಲಿ ಟವೆಲ್ ಇಲ್ಲದೆ ನಮ್ಮ ದಿನ ಮುಂದೆ ಸಾಗುವುದೇ ಇಲ್ಲ.
ನನ್ನಮ್ಮನ ಮನೆಯಲ್ಲಿ ನಾವು ಉಪಯೋಗಿಸುತ್ತಿದ್ದದ್ದು ತೆಳ್ಳನೆಯ ಕೈಮಗ್ಗದ ಟವೆಲ್. ಒಗೆದು ಬಿಸಿಲಿಗೆ ಹಾಕಿದ ಕೆಲವೇ ಗಂಟೆಗಳಲ್ಲಿ ಗರಿಗರಿಯಾಗಿ ಒಣಗುತ್ತಿದ್ದ ಟವೆಲ್ ಅದು. ಅದನ್ನು ಬಿಟ್ಟರೆ ಕಾಟನ್ನಿನ ಸ್ವಲ್ಪ ದಪ್ಪಗಿನ ಬಿಳಿಯ ಟವೆಲ್ ಅನ್ನು ಉಪಯೋಗಿಸುತ್ತಿದ್ದೆವು. ಅದರ ಎರಡೂ ತುದಿಗಳಲ್ಲಿ ಬಣ್ಣದ ನೂಲಿನಲ್ಲಿ ಮಾಡಿದ ಸಣ್ಣ ಡಿಸೈನ್ ಇರುತ್ತಿತ್ತು. ಅದು ಕೊಳೆಯಾದರೆ ನನ್ನ ಅಮ್ಮನಿಗೆ ಸಿಟ್ಟು ಬರುತ್ತಿತ್ತು. ನನ್ನಮ್ಮನಿಗೆ ತಲೆಸ್ನಾನ ಮಾಡಿದಾಗ ಎರಡು ಟವೆಲ್ ಬೇಕಾಗುತ್ತಿತ್ತು. ತಲೆ ಒರೆಸಲಿಕ್ಕಾಗಿಯೇ ಅಂತ ಅವಳು ನಸುಕೆಂಪು ಬಣ್ಣದ ಕೈಮಗ್ಗದ ಟವೆಲ್ ಅನ್ನು ಉಪಯೋಗಿಸುತ್ತಿದ್ದಳು. ನಂತರದ ದಿನಗಳಲ್ಲಿ ನಮ್ಮ ಮನೆಗೆ ಚೆಕ್ಸ್ ಟವೆಲ್, ಟರ್ಕಿ ಟವೆಲ್ ಗಳ ಪ್ರವೇಶವಾಯಿತು.
ಚಿಕ್ಕಂದಿನಿಂದಲೂ ತೆಳುವಾದ ಟವೆಲ್ ಗಳನ್ನು ಬಳಸಿದ ಕಾರಣ ಇವತ್ತಿಗೂ ದಪ್ಪನೆಯ ಟವೆಲ್ ಅನ್ನು ಬಳಸಿದರೆ ನನಗೆ ಹಿತವೆನಿಸುವುದಿಲ್ಲ. ಟರ್ಕಿ ಟವೆಲ್ ನಲ್ಲಿ ಮೈ ಒರೆಸಿಕೊಂಡರೆ ಸ್ನಾನ ಮಾಡಿದ ನೀರು ಮೈಯಿಂದ ಆರಿದ ಅನುಭವವೇ ಆಗುವುದಿಲ್ಲ. ಹೀಗಾಗಿ ನಮ್ಮ ಮನೆಯಲ್ಲಿ ಇಂದಿಗೂ ಕೈಮಗ್ಗದ ಟವೆಲ್ ಅಲ್ಲದಿದ್ದರೂ ತೆಳುವಾದ ಕಾಟನ್ನಿನ ಟವೆಲ್ ಗಳೇ ಕಾಣಸಿಗುವುದು.
ಬಾತ್ ಟವೆಲ್ ನಲ್ಲಿ ಕೆಲವು ಹತ್ತಿಯಂತೆ ಮೃದುವಾಗಿರುತ್ತವೆ. ಇನ್ನು ಕೆಲವು ದೊರಗಾಗಿರುತ್ತವೆ. ಇನ್ನು ಕೆಲವು ಟವೆಲ್ ಗಳು ನೋಡಲು ಚೆನ್ನಾಗಿದ್ದರೂ ನೀರನ್ನು ಹೀರುವುದೇ ಇಲ್ಲ. ಇನ್ನು ಕೆಲವು ಟವೆಲ್ ಗಳು ಒಂದೆರಡು ಒಗೆತಕ್ಕೆ ಆರಡಿಯ ಗಾತ್ರದವು ಮೂರಡಿಯಾಗುತ್ತವೆ. ಹೀಗಾಗಿ ಟವೆಲ್ ಗಳನ್ನು ಖರೀದಿಸುವಾಗ ಜಾಗ್ರತೆಯಿಂದ ಖರೀದಿಸಬೇಕು.
ಚಿಕ್ಕವರಿದ್ದಾಗ ನಮನಮಗೆ ಸೆಪರೇಟ್ ಆದ ಟವೆಲ್ ಗಳು ಇರುತ್ತಿದ್ದವು. ಅವೆಲ್ಲಾದರೂ ಬದಲಾದರೆ ನನಗೂ ಹಾಗೂ ನನ್ನ ತಂಗಿಗೂ ಜಗಳ ಶುರುವಾಗುತ್ತಿತ್ತು. ಒಂದು ಸರ್ವೇ ಸಾಮಾನ್ಯ ಟವೆಲ್ ನ ಬಗ್ಗೆ ನಾವಾಗ ಅಷ್ಟು ಪೊಸೆಸಿವ್ ಆಗಿತ್ತು. ಈಗ ಅದನ್ನೆಲ್ಲಾ ನೆನಪಿಸಿಕೊಂಡರೆ ನಗು ಬರುತ್ತದೆ.
ಹೋಟೆಲ್ ಗಳಿಗೆ ಹೋದಾಗ ಅಲ್ಲಿ ಇಟ್ಟಿರುವ ಬಿಳಿಯ ಪರಿಶುಭ್ರ ಟರ್ಕಿ ಟವೆಲ್ ಅನ್ನು ನೋಡಿದಾಗ ಖುಷಿಯಾದರೂ ಬಳಸಲು ಮನಸ್ಸಾಗುವುದಿಲ್ಲ. ಬೇರೆಯವರು ಬಳಸಿದ ಟವೆಲ್ ಅನ್ನುವುದಕ್ಕಿಂತ ಟರ್ಕಿ ಟವೆಲ್ ನಲ್ಲಿ ಮೈ ಒರೆಸಿದರೆ ಮೈಯ್ಯ ನೀರು ಸರಿಯಾಗಿ ಹೋಗುವುದಿಲ್ಲ ಎನ್ನುವ ನನ್ನೊಳಗಿನ ಭಾವ ಆ ಟವೆಲ್ ಅನ್ನು ಉಪಯೋಗಿಸಲು ನನ್ನನ್ನು ಉತ್ತೇಜಿಸುವುದಿಲ್ಲ.
ಪ್ರಯಾಣದ ಸಮಯದಲ್ಲಿ ಬಟ್ಟೆಗಳನ್ನು ಪ್ಯಾಕ್ ಮಾಡುವಾಗ ಒಳ ಉಡುಪುಗಳ ಜೊತೆಗೆ ಟವೆಲ್ ಗಳು ಇಡಲ್ಪಟ್ಟಿವೆಯೋ ಇಲ್ಲವೋ ಎನ್ನುವುದನ್ನು ನಾವು ತಪ್ಪದೇ ಖಾತ್ರಿ ಪಡಿಸಿಕೊಳ್ಳುವುದು ಸತ್ಯದ ವಿಷಯವಲ್ಲವೆ?
ಒಂದು ಬಾತ್ ಟವೆಲ್ ಎನ್ನುವುದು ನಮ್ಮೆಲ್ಲರ ಬದುಕಿನಲ್ಲಿ ಎಷ್ಟು ದೊಡ್ಡ ಪಾತ್ರ ವಹಿಸುತ್ತದಲ್ಲವೆ? ನಾಲ್ಕಡಿ ಎರಡಡಿ ಅಳತೆಯ ಬಟ್ಟೆಯ ತುಂಡೊಂದು ಇಲ್ಲದಿದ್ದರೆ ನಮ್ಮ ಸ್ನಾನ ಎನ್ನುವ ಪ್ರಕ್ರಿಯೆ ಅಪೂರ್ಣವಾಗಿ ಬಿಡುತ್ತದೇನೋ ಎಂದೆನಿಸುವುದು ನಿಜವಲ್ಲವೆ?
ಹೀಗೊಂದು ಬರಹ ಬಾತ್ ಟವೆಲ್ ನ ಬಗ್ಗೆ.....😌


243.ಪರಿಸರ - ಉಣುಗುಗಳು (25/12/2020)


ಕಳೆದ ಶನಿವಾರ ಹಾಗೂ ಭಾನುವಾರದ ವಿಹಾರದ ಸುಸ್ತು ಕಡಿಮೆಯಾದರೂ ಅಲ್ಲಿ ಮೈ ಹತ್ತಿದ ಉಣುಗಿನ ಕಡಿತದಿಂದಾದ ತುರಿಕೆ ಇನ್ನೂ ಕಡಿಮೆಯಾಗಿಲ್ಲ. ಉಣುಗಿಗೆ ಇಂಗ್ಲಿಷ್ ನಲ್ಲಿ ಟಿಕ್/ಫ್ಲೀ ಎಂದೇನೋ ಹೇಳುತ್ತಾರೆ. ಇದು ಹೇನಿನಂತಿರುವ ಆದರೆ ಕಣ್ಣಿಗೆ ಸರಿಯಾಗಿ ಕಾಣದ ಜೀವಿ. ಒಮ್ಮೆ ನಮ್ಮ ಮೈಗೆ ಹತ್ತಿತೆಂದರೆ ಅದು ಕಚ್ಚಿ ತುರಿಸಲಿಕ್ಕೆ ಶುರುವಾಗಾದಷ್ಟೇ ಉಣುಗು ನಮ್ಮ ಮೈಗೆ ಹತ್ತಿದ್ದು ನಮ್ಮ ಅರಿವಿಗೆ ಬರುವುದು. ಲಂಟಾನ ಗಿಡ/ಗುಡ್ಡ, ಕಾಡು, ಬೆಟ್ಟಗಳಲ್ಲಿರುವ ಕರಡದಲ್ಲಿ ಉಣುಗುಗಳು ಧಾರಾಳವಾಗಿ ಇರುತ್ತವೆ. ಕುಳಿರ್ಗಾಳಿಗೂ ಅವು ನಮ್ಮ ಮೈ ಹತ್ತುತ್ತವೆ.
ಒಮ್ಮೆ ಮೈ ಹತ್ತಿದ ಉಣುಗುಗಳು ನಮ್ಮ ಮೈಯ್ಯ ಆಯಕಟ್ಟಿನ ಜಾಗಗಳಲ್ಲಿ ಮನೆ ಮಾಡಿಕೊಳ್ಳುತ್ತವೆ. ಒಂದೇ ಜಾಗದಲ್ಲಿ ಬಹಳ ಕಾಲ ಅವು ಇರದೇ ಜಾಗವನ್ನು ಬದಲಿಸುತ್ತಾ ಕಂಡ ಕಂಡ ಕಡೆಗಳಲ್ಲಿ ಕಚ್ಚಿ ತಮ್ಮ ಪ್ರತಾಪ ಮೆರೆಯತೊಡಗಿದಾಗ ನಾವು ಒಂದೇ ಅರಿಶಿನ ಎಣ್ಣೆಗೆ ಮೊರೆ ಹೋಗಬೇಕು ಇಲ್ಲವೇ ಉಪ್ಪಿನ ನೀರಿನ ಸ್ನಾನ ಮಾಡಬೇಕು. ಹೊಟ್ಟೆಗೆ ನಂಜಿಗೆ ಕುಡಿಯಬೇಕು. ಒಟ್ಟಿನಲ್ಲಿ ಮೈಗೆ ಹತ್ತಿದ ಉಣುಗಿನಿಂದ ಮುಕ್ತಿ ಪಡೆಯಲು ಬಹಳ ಸರ್ಕಸ್ ಮಾಡಬೇಕಾಗುತ್ತದೆ. ಇಷ್ಟೆಲ್ಲಾ ಮಾಡಿ ಉಣುಗಿನಿಂದ ಮುಕ್ತಿ ಪಡೆದ ಮೇಲೂ ಅವು ಕಚ್ಚಿದ ಜಾಗದ ತುರಿಕೆ ಹೋಗಲು ಒಂದೆರಡು ತಿಂಗಳಾದರೂ ಬೇಕು.
ಒಂದು ಕಣ್ಣಿಗೆ ಕಾಣದ ಜೀವಿ ಎಷ್ಟೆಲ್ಲಾ ಉಪದ್ರವ ಕೊಟ್ಟು ನಮ್ಮನ್ನು ಅಲ್ಲಾಡಿಸಿಬಿಡುತ್ತದೆಂದರೆ ಆಶ್ಚರ್ಯವೇ ತಾನೇ? ಒಂದು ಯಕಶ್ಚಿತ್ ಉಣುಗು ಕಡಿತದ ತುರಿಕೆಯಿಂದಾಗಿ ನಮ್ಮ ಮನಸ್ಸಿನ ನೆಮ್ಮದಿಯೇ ಮಾಯವಾಗುತ್ತದೆ. ಒಮ್ಮೆ ತುರಿಸಲು ಪ್ರಾರಂಭಿಸಿದರೆ ಹತ್ತು ಕೈಗಳಿಂದ ತುರಿಸಿದರೂ ಸಾಲದಷ್ಟು ತುರಿಕೆಯ ಪ್ರಮಾಣ ಏರುತ್ತಿರುತ್ತದೆ. ಸುದೀಪನ "ಈಗ" ಸಿನೆಮಾದಲ್ಲಿ ಅವನಿಗೆ ಕಣ್ಣಿಗೆ ಕಾಣುತ್ತಿದ್ದ ನೊಣವೊಂದು ಕಾಟ ಕೊಡುತ್ತಿದ್ದ ದೃಶ್ಯಗಳ ನೆನಪಾಗುತ್ತದೆ. ಇಲ್ಲಿ ಸಹಿಸಲಾಗದ ತುರಿಕೆಯೊಂದೇ ದೊಡ್ಡ ಉಪದ್ರವವಷ್ಟೇ!

ನಾವು ಎಷ್ಟೇ ಗಟ್ಟಿಗರಾಗಿದ್ದರೂ ಕಣ್ಣಿಗೆ ಕಾಣದ ಜೀವಿಗಳೊಡನೆ ನಮ್ಮ ಹೋರಾಟ ಅಸಂಭವ ಎಂದೆನಿಸಿ ಬಿಡುತ್ತದೆ. ಹಾಗೆ ನೋಡಿದರೆ ಕಳೆದ ಎಂಟ್ಹತ್ತು ತಿಂಗಳುಗಳಿಂದ ಅಗೋಚರವಾದ ವೈರಸ್ ನಮ್ಮೆಲ್ಲರ ಬದುಕನ್ನು ಹೈರಾಣಾಗಿಸಿಲ್ಲವೆ?


242. ನೆನಪುಗಳು - ಟೇಪ್ ರೆಕಾರ್ಡರ್  (24/12/2020)


ನನಗೆ ಶಾಸ್ತ್ರೀಯ ಸಂಗೀತದ ಗಂಧ ಗಾಳಿ ಇಲ್ಲದಿದ್ದರೂ ಒಳ್ಳೆಯ ಸಂಗೀತ ಕೇಳುವ ಅಭ್ಯಾಸವಿದೆ. ನನ್ನ ಅಪ್ಪ ಹಾಗೂ ಅಣ್ಣನಿಂದಾಗಿ ನಮ್ಮ ಮನೆಯಲ್ಲಿ ಸಂಗೀತದ ಹವೆ ಇತ್ತು. ನನ್ನ ಅಪ್ಪನಿಗೆ ಸಂಗೀತದ ಹುಚ್ಚಿತ್ತೇ ಹೊರತು ಅವರು ಸಂಗೀತಗಾರರಾಗಿರಲಿಲ್ಲ. ನನ್ನ ಅಣ್ಣ ಒಬ್ಬ ಅಭಿಜಾತ ಕಲಾವಿದ. "ಆಡು ಮುಟ್ಟದ ಸೊಪ್ಪಿಲ್ಲ" ಎನ್ನುವ ಹಾಗೇ ನನ್ನ ಅಣ್ಣ ಕೈಯ್ಯಾಡಿಸದ ಸಂಗೀತ ವಾದನಗಳಿರಲಿಲ್ಲ. ಅವನು ದಕ್ಷಿಣಾದಿ ಹಾಗೂ ಉತ್ತರಾದಿ ಸಂಗೀತ ಪ್ರಕಾರಗಳೆರಡರಲ್ಲೂ ನುರಿತವನಾಗಿದ್ದ. ಒಳ್ಳೆಯ ಹಾಡುಗಾರನಾಗಿದ್ದ. ಸಂಗೀತ ಸಂಯೋಜಕನಾಗಿದ್ದ. ಒಳ್ಳೆಯ ಸಂಗೀತ ಕೇಳುಗನೂ ಆಗಿದ್ದ. ಹೀಗಾಗಿ ನಮ್ಮ ಮನೆಯಲ್ಲಿ ಒಳ್ಳೆಯ ಟೇಪ್ ರೆಕಾರ್ಡರ್ ಗಳಿದ್ದವು. ನಮ್ಮ ಚಿಕ್ಕಪ್ಪನೂ ಫಾರಿನ್ ನಿಂದ ಬರುವಾಗ ಹೊಸ ಮಾದರಿಯ ಟೇಪ್ ರೆಕಾರ್ಡರ್ ಗಳನ್ನು ತರುತ್ತಿದ್ದರು ಕೂಡಾ.
ಆಗಿನಿಂದಲೂ ನಾನು ತರಹೇವಾರಿ ಟೇಪ್ ರೆಕಾರ್ಡರ್ ಗಳನ್ನು ನೋಡಿದ್ದೇನೆ. ಆಯತಾಕಾರದ ಹದವಾದ ಸೈಜಿನ ಚಟ್ಟೆ ಟೇಪ್ ರೆಕಾರ್ಡರ್, ಚೌಕಾಕಾರದ ಅಗಲವಾದ ಚಟ್ಟೆಯ ಟೇಪ್ ರೆಕಾರ್ಡರ್, ಒಂದೇ ಸ್ಪೀಕರ್ ಇರುವ ಟೇಪ್ ರೆಕಾರ್ಡರ್, ಎರಡು ಸ್ಪೀಕರ್ ಗಳಿರುವ ಟೇಪ್ ರೆಕಾರ್ಡರ್, ರೇಡಿಯೋ ಕಂ ಟೇಪ್ ರೆಕಾರ್ಡರ್....ಹೀಗೇ ವಿಭಿನ್ನವಾದ ಟೇಪ್ ರೆಕಾರ್ಡರ್ ಗಳು ಕಾಲಕ್ಕೆ ತಕ್ಕಂತೆ ನಮ್ಮ ಮನೆಯಲ್ಲಿ ಬದಲಾಗುತ್ತಿದ್ದವು. ಅವುಗಳಿಗೆ ಹಾಕುವ ಕ್ಯಾಸೆಟ್ ಗಳ ರಾಶಿಯೇ ನಮ್ಮಲ್ಲಿದ್ದವು. ಕ್ಯಾಸೆಟ್ ಗಳು ಕೆಲವೊಮ್ಮೆ ಟೇಪ್ ರೆಕಾರ್ಡರ್ ಗೆ ಸುತ್ತಿ ಅಧ್ವಾನ ಆದದ್ದೂ ಇದೆ. ನನ್ನ ಅಣ್ಣನ ಬಳಿ ಶ್ರೇಷ್ಠ ಕಲಾವಿದರು ಹಾಡಿದ ಕ್ಯಾಸೆಟ್ ಗಳಿದ್ದವು. ಅಣ್ಣನ ಸಂಗೀತ ಸಂಯೋಜನೆಯ ಕೆಲವು ಕ್ಯಾಸೆಟ್ ಗಳನ್ನು ಹೊರ ತರಲಾಗಿತ್ತು.
ಟೇಪ್ ರೆಕಾರ್ಡರ್ ಎಂತಹುದೇ ಆದರೂ ಅವುಗಳ ಬಟನ್ ಒತ್ತುವ ಕ್ರಮ ಒಂದೇ ರೀತಿಯಲ್ಲಿತ್ತು. ಸಾಮಾನ್ಯವಾಗಿ ಟೇಪ್ ರೆಕಾರ್ಡರ್ ಗಳಲ್ಲಿ ನಾಲ್ಕರಿಂದ ಐದು ಬಟನ್ ಗಳಿರುತ್ತಿದ್ದವು. ಎರಡು ಬಟನ್ ಗಳನ್ನು ಒಮ್ಮೆಲೆ ಒತ್ತಿಟ್ಟರೆ ನಾವು ಹಾಡಿದ ಹಾಡು ರೆಕಾರ್ಡ್ ಆಗುತ್ತಿತ್ತು. ಒಂದೇ ಬಟನ್ ಒತ್ತಿದರೆ ಹಾಡು ಪ್ಲೇ ಆಗುತ್ತಿತ್ತು. ಫಾರ್ವರ್ಡ್ ಹಾಗೂ ಬ್ಯಾಕ್ವರ್ಡ್ ಮಾಡುವ ಬಟನ್ಗಳೂ ಇದ್ದವು. ನಾವು ಬೇಸರವಾದಾಗಲೆಲ್ಲ ಟೇಪ್ ರೆಕಾರ್ಡರ್ ನಲ್ಲಿ ಹಾಡು ಕೇಳುತ್ತಿದ್ದೆವು. ನನ್ನ ಅಣ್ಣ ಮನೆಯಲ್ಲಿದ್ದರಂತೂ ಒಂದೇ ಅವನು ಹಾಡುತ್ತಿರುತ್ತಿದ್ದ ಇಲ್ಲವೇ ಟೇಪ್ ರೆಕಾರ್ಡರ್ ಹಾಡುತ್ತಿರುತ್ತಿತ್ತು😀
ಕ್ಯಾಸೆಟ್ ಗಳು ನಮಗೆ ಆಟದ ಸಾಮಾಗ್ರಿಗಳಾಗುತ್ತಿದ್ದವು ಕೂಡಾ! ಹಾಳಾದ ಕ್ಯಾಸೆಟ್ಟುಗಳ ಟೇಪ್ ತೆಗೆದು ನಾವು ಆಟವಾಡುತ್ತಿದ್ದೆವು. ಆ ಟೇಪ್ ದ್ರೌಪದಿಯ ಸೀರೆಯ ತರಹ ಎಳೆದಷ್ಟೂ ಹೊರಬರುತ್ತಿತ್ತು. ಅದರ ಫಳಫಳ ಹೊಳೆಯುವಿಕೆ ಆಕರ್ಷಕವಾಗಿ ಕಾಣುತ್ತಿತ್ತು.

ಆಗಿನ ಕಾಲದಲ್ಲಿ ಟೇಪ್ ರೆಕಾರ್ಡರ್ ನಮಗೆ ಸಂಗೀತದ ಮನರಂಜನೆ ನೀಡುವ ಉತ್ತಮ ಸಾಧನವಾಗಿತ್ತು. ಈಗ ಅವುಗಳ ಬಳಕೆ ಇಲ್ಲದಿದ್ದರೂ ಹಳೆಯ ಟೇಪ್ ರೆಕಾರ್ಡರ್ ಇನ್ನೂ ಮನೆಯಲ್ಲಿ ಇದೆ. ಕ್ಯಾಸೆಟ್ ಗಳೂ ಇವೆ. ಆದರೆ ಬಳಕೆ ಮಾತ್ರ ಇಲ್ಲ🤔

241. ಪರಿಸರ - ಬರೆಕಲ್ ಗುಡ್ಡ , ತಪಸ್ವಿ ಜಲಪಾತ (23/12/2020)


ನನಗೆ ಮೊದಲಿನಿಂದಲೂ ನೀರಿನ ತಾಣ, ಗುಡ್ಡಗಾಡು ಪ್ರದೇಶಕ್ಕೆ ಹೋಗುವುದೆಂದರೆ ಬಹಳ ಇಷ್ಟ. ಹೀಗಾಗಿ ಅಂತಹ ಸಂದರ್ಭಗಳಿಗಾಗಿ ಚಾತಕಪಕ್ಷಿಯಂತೆ ಕಾಯುತ್ತಿರುತ್ತೇನೆ. ಕಳೆದ ಶನಿವಾರ ಹಾಗೂ ಭಾನುವಾರ ನನ್ನ ಕುಟುಂಬದವರು ಹಾಗೂ ಬಂಧುಮಿತ್ರರೊಂದಿಗೆ ಅಂತಹ ಕಡೆಗಳಿಗೆ ವಿಹಾರಕ್ಕೆ ಹೋಗುವ ಅವಕಾಶ ಒದಗಿ ಬಂದಿತು. ಮಾಸ್ತಿಕಟ್ಟೆಯ ಸಮೀಪವಿರುವ ತಲಸ್ಸಿ ಜಲಪಾತ ಹಾಗೂ ಕಾರಣಗಿರಿಯ ಸಮೀಪವಿರುವ ಬರೇಕಲ್ ಗುಡ್ಡವನ್ನು ಹತ್ತುವ ಸ್ಮರಣೀಯ ಅನುಭವ ನನ್ನ ನೆನಪಿನ ಬುತ್ತಿಗೆ ಸೇರಿತು. ಉಳಿಕೆಯ ವ್ಯವಸ್ಥೆಯನ್ನು ನವೋದಯದಲ್ಲಿ ನನ್ನ ವಿದ್ಯಾರ್ಥಿಯಾಗಿದ್ದ ಹನಿಯದ ವಿಕ್ರಮ ಉಡುಪ ಕಲಾತ್ಮಕವಾಗಿ ವಿನ್ಯಾಸಗೊಳಿಸಿರುವ ಹಳ್ಳಿಗಾಡಿನ ಸೊಗಡಿರುವ ಬರೇಕಲ್ ಫಾರ್ಮ್ ಸ್ಟೇಯಲ್ಲಿ ಮಾಡಲಾಯಿತು. ಎರಡೂ ದಿನಗಳು ವಿಕ್ರಮ ನಮ್ಮೊಡನಿದ್ದದ್ದು ಖುಷಿ ಕೊಟ್ಟಿತು. ಅವನು ನಮ್ಮ ಉಳಿಕೆಯನ್ನು ಬರೀ ವ್ಯಾವಹಾರಿಕವಾಗಿ ನೋಡದೆ ನಮ್ಮೊಡನೆ ತನ್ನ ಸಮಯವನ್ನು ವ್ಯಯಿಸಿ ತಲಸ್ಸಿ ಫಾಲ್ಸ್ ನ ಭೇಟಿ ಹಾಗೂ ಬರೇಕಲ್ ಗುಡ್ಡದ ಹತ್ತುವಿಕೆಯನ್ನು ಫಲಪ್ರದವಾಗಿಸಿದ್ದು ನಮ್ಮ ಖುಷಿಯನ್ನು ಹೆಚ್ಚಿಸಿತು.
ಕಲ್ಲು ಬಂಡೆಗಳ ನಡುವೆ ಹಂತಹಂತವಾಗಿ ಹರಿದು ಚಿಮ್ಮುವ ತಲಸ್ಸಿ ಫಾಲ್ಸ್ ಇನ್ನೂ ಪ್ರವಾಸಿಗರ ಗಮನಕ್ಕಷ್ಟು ಬರದಿರುವ ಕಾರಣ ತನ್ನ ನಿರ್ಮಲ ಸೌಂದರ್ಯವನ್ನು ಉಳಿಸಿಕೊಂಡಿದೆ. ಪರಿಸರದ ಮಾಲಿನ್ಯತೆ ಕಡಿಮೆ ಇದೆ. ಅಲ್ಲಿ ಹಿಮದಂತೆ ತಣ್ಣಗಿರುವ ನೀರಿನಲ್ಲಿ ಕಲ್ಲಲ್ಲಿ ಅಲ್ಲಲ್ಲಿ ಇರುವ ಗುಂಡಿಗಳಲ್ಲಿ ನೀರಾಟವಾಡುವ ಸೊಗಸೇ ಬೇರೆ! ಅಂತಹ ನೀರಿನ ಗುಂಡಿಗಳಲ್ಲಿ ಮೇಲಿನಿಂದ ಧುಮ್ಮಿಕ್ಕುವ ಜಲಧಾರೆಗೆ ಬೆನ್ನು ಕೊಟ್ಟು ನಿಂತರೆ ಮೈಕೈ ನೋವನ್ನೆಲ್ಲ ಮರೆಸುವ ಸುಖವನ್ನನುಭವಿಸಬಹುದು😌 ಮುಖ್ಯ ರಸ್ತೆಯಿಂದ ಸುಮಾರು ಒಂದು ಕಿಲೋಮೀಟರ್ ದೂರ ನಡೆದು ತಲುಪಬಹುದಾದ ಸ್ಥಳವದು. ಯಾವುದೇ ಗಲಾಟೆ ಗೊಂದಲಗಳಿಲ್ಲದೆ ತನ್ನ ಪಾಡಿಗೆ ತಾನು ಹರಿಯುತ್ತಿರುವ ಆ ನದಿಯ ಪಾತ್ರ ಅಲ್ಲಿ ಹೋದವರಿಗೆ ಒಂದು ಹಿತವಾದ ಅನುಭವವನ್ನು ಕೊಡುವುದಂತೂ ನಿಜ!
ನಂತರದಲ್ಲಿ ಅಲ್ಲಿಂದ ಹಿಂದಿರುಗಿ ಬಂದು ಹನಿಯದ ಸಮೀಪವಿರುವ, ಮುಖ್ಯ ರಸ್ತೆಯಿಂದ ಕೆಲವೇ ಫರ್ಲಾಂಗ್ ದೂರವಿರುವ, ಸ್ವಲ್ಪ ತಗ್ಗಿನ ಜಾಗದಲ್ಲಿರುವ, ಸುತ್ತಲೂ ತೋಟ, ಗದ್ದೆ, ಗುಡ್ಡಗಳಿಂದ ಸುತ್ತುವರಿದಿರುವ, ವಿಶಾಲವಾದ ಹಾಗೂ ಸರಳ ಸುಂದರ ಸುಸಜ್ಜಿತವಾಗಿರುವ ಬರೇಕಲ್ ಫಾರ್ಮ್ ಸ್ಟೇಯಲ್ಲಿ ಉಳಿಕೆ. ವಿಕ್ರಮ ಉಡುಪನ ಕಲಾಭಿರುಚಿಯನ್ನು ಅಲ್ಲಿ ಕಾಣಬಹುದಾಗಿದೆ. ಊಟ, ಉಳಿಕೆ, ಆದರಾತಿಥ್ಯ ಎಲ್ಲವೂ ಪ್ರಶಂಸನೀಯ!
ಮಾರನೇ ದಿನ ಅಲ್ಲಿಂದ ಮುಖ್ಯ ರಸ್ತೆಯಲ್ಲಿ ಹತ್ಹದಿನೈದು ಕಿಮೀ ಕಾರಿನಲ್ಲಿ ಸಾಗಿ ಹಾಲಪ್ಪ ಗೌಡರ ಮನೆಯಂಗಳದಲ್ಲಿ ಕಾರುಗಳನ್ನಿರಿಸಿ ಗೌಡರ ನೇತೃತ್ವದಲ್ಲಿ ಬರೇಕಲ್ ಗುಡ್ಡವನ್ನು ಹತ್ತಿ ಇಳಿದ ಅನುಭವ ಎಂದೂ ಮರೆಯಲಾಗದ್ದು. ಅಲ್ಲಿನ ಮನಮೋಹಕ ದೃಶ್ಯ ಇನ್ನೂ ಕಣ್ಣ ಮುಂದೆ ಕುಣಿಯುತ್ತಿದೆ. ಅದೊಂದು ರೀತಿಯ ದಿವ್ಯಾನುಭವ ಎಂದರೆ ತಪ್ಪಾಗಲಾರದು.
ಆಗಾಗ್ಗೆ ನಮ್ಮವರೊಡಗೂಡಿ ಈ ರೀತಿಯ ಹೊರಸಂಚಾರ ಹೊಸ ಚೈತನ್ಯವನ್ನು ಕೊಡುತ್ತದೆಂದರೆ ತಪ್ಪಿಲ್ಲ. ಇಂತಹ ಕ್ಲಿಷ್ಟಕರ ಆದರೆ ಮನೋಹರವಾದ ಚಾರಣ ನಮ್ಮನ್ನೆಲ್ಲ ಇನ್ನೂ ಹತ್ತಿರವಾಗಿಸಿದ್ದು ವಾಸ್ತವ ಸತ್ಯ!


240.ನೆನಪುಗಳು - ಪೆಪ್ಪರ್ ಮಿಂಟ್ (22/12/2020


ಬಾಲ್ಯದ ನೆನಪುಗಳನ್ನು ಕೆದಕುತ್ತಾ ಹೋದರೆ ವಿಷಯಗಳು ಸರಣಿ ಸಾಲಿನಲ್ಲಿ ಬಂದು ಬಿಡುತ್ತವೆ. ಆಗ ತಿನ್ನುತ್ತಿದ್ದ ಹುಳಿ ಪೆಪ್ಪರ್ ಮಿಂಟ್, ಶುಂಠಿ ಪೆಪ್ಪರ್ ಮಿಂಟ್, ಆಟಂಬಾಂಬ್, ಪುಟ್ ಪುಟಾಣಿ ಜೀರಿಗೆ ಪೆಪ್ಪರ್ ಮಿಂಟ್, ನ್ಯೂಟ್ರಿನ್ ಚಾಕೊಲೆಟ್, ಪುಟಾಣಿ ಗೊಂಬೆ ಬಿಸ್ಕತ್......ಎಲ್ಲವೂ ನಾ ಮುಂದು, ತಾ ಮುಂದು ಎಂದು ದೊಪ್ಪನೆ ನನ್ನ ನೆನಪಿನ ಬುತ್ತಿಯಿಂದ ಹೊರಬೀಳುತ್ತವೆ.
ಆಗ ಐದು ಪೈಸೆಗೆ ಸಿಗುತ್ತಿದ್ದ ಕೇಸರಿ/ತಿಳಿ ಹಳದಿ ಬಣ್ಣದ ಹುಳಿ ಪೆಪ್ಪರ್ ಮಿಂಟ್ ನ್ನು ಈಗ ನೆನಪಿಸಿಕೊಂಡರೂ ಬಾಯಲ್ಲಿ ನೀರು ಬರುತ್ತದೆ. ಒಂದು ಪೆಪ್ಪರ್ ಮಿಂಟ್ ಬಾಯೊಳಗೆ ಹೋದರೆ ಕನಿಷ್ಟ ಹತ್ತ್ಹದಿನೈದು ನಿಮಿಷ ಬಾಯೊಳಗಿರುತ್ತಿತ್ತು. ಅದರ ಪರಿಮಳ ಬಹಳ ಹಿತಕರವಾಗಿತ್ತು. ಅದರ ಹುಳಿ-ಸಿಹಿ ರುಚಿ ಬಹಳ ಹೊತ್ತು ನಾಲಿಗೆಯ ಮೇಲಿರುತ್ತಿತ್ತು.
ಇನ್ನು ಬಿಳಿ ಬಣ್ಣದ ದುಂಡಗಿನ ಶುಂಠಿ ಪೆಪ್ಪರ್ ಮಿಂಟ್ ನ್ನು ಒಂದೊಂದು ತಿಂದೇ ಗೊತ್ತಿಲ್ಲ. ಐದಾರು ಪೆಪ್ಪರ್ ಮಿಂಟ್ ಗಳನ್ನು ಒಂದರ ಹಿಂದೊಂದರಂತೆ ತಿನ್ನುತ್ತಿದ್ದ ನೆನಪು. ಬಣ್ಣ ಬಣ್ಣದ ಪುಟಾಣಿ ಜೀರಿಗೆ ಪೆಪ್ಪರ್ ಮಿಂಟ್ ಅಂದರೆ ನಮಗೆಲ್ಲ ಪಂಚಪ್ರಾಣ. ಆಟಂಬಾಂಬ್(ಕಮರ್ ಕಟ್) ಬೆಲ್ಲದಿಂದ ಮಾಡಿದ ಒಂದು ದೊಡ್ಡ ಪೆಪ್ಪರ್ ಮಿಂಟ್/ಚಾಕೊಲೆಟ್! ಅದನ್ನು ತಿನ್ನಲು ಅರ್ಧ ಗಂಟೆಗೂ ಹೆಚ್ಚಿನ ಸಮಯ ಬೇಕಿತ್ತು. ಏನೋ ಒಂದು ವಿಚಿತ್ರ ರುಚಿಯದಕ್ಕೆ. ಅದು ತುಂಬಾ ದೊಡ್ಡದಿದ್ದ ಕಾರಣ ಕಟುವಾಯಿಯಿಂದ ಅದರ ರಸ ಹೊರ ಬರುತ್ತಿತ್ತು. ಒಸರುವ ರಸವನ್ನು ಅಂಗಿಯಿಂದ ಒರೆಸಿಕೊಳ್ಳುತ್ತಾ ಆ ಆಟಂಬಾಂಬ್ ಅನ್ನು ತಿನ್ನುವುದು ತುಂಬಾ ಗಮ್ಮತ್ತಿನ ಕೆಲಸವಾಗಿತ್ತು. ಪ್ಲ್ಯಾಸ್ಟಿಕ್ ನ ಹಸಿರು ಕವರ್ ನಲ್ಲಿ ಬರುತ್ತಿದ್ದ ನ್ಯೂಟ್ರಿನ್ ಚಾಕೊಲೆಟ್ ಗೆ ತುಪ್ಪದ ರುಚಿ ಇತ್ತು. ಅದನ್ನು ತಿನ್ನುವಾಗ ತುಪ್ಪದಲ್ಲಿ ಮಾಡಿದ ಸಿಹಿತಿಂಡಿ ತಿಂದಂತೆ ಭಾಸವಾಗುತ್ತಿತ್ತು.

ಈಗ ಸಿಗುವ ತರಹೇವಾರಿ ಚಾಕೊಲೆಟ್ ಗಳ ಮುಂದೆ ನಾನು ಉಲ್ಲೇಖಿಸಿದ ತಿನಿಸುಗಳು ಲೆಕ್ಕಕ್ಕೇ ಇಲ್ಲದವುಗಳು. ಆದರೆ ಆ ಕಾಲಕ್ಕೆ ನಮಗೆ ಅವು ಅತ್ಯಮೂಲ್ಯ ತಿನಿಸುಗಳು. ಅವುಗಳಿಗಿಂತ ಉತ್ತಮವಾದ ಹಲವಾರು ತಿನಿಸುಗಳನ್ನು ನಂತರದ ವರ್ಷಗಳಲ್ಲಿ ತಿಂದಿದ್ದರೂ ಆ ಪೆಪ್ಪರ್ ಮಿಂಟ್ ಗಳ ರುಚಿಯನ್ನು, ನೆನಪನ್ನು ಅವ್ಯಾವುವೂ ಅಳಿಸಲಾಗಲಿಲ್ಲ. ಅಂತಹ ಆಳವಾದ ರುಚಿಯ ಕುರುಹುಗಳನ್ನು ನಮ್ಮೊಳಗೆ ಆ ತಿನಿಸುಗಳು ಉಳಿಸಿದ್ದಾವೆ ಎನ್ನುವುದು ಒಪ್ಪಿಕೊಳ್ಳಬೇಕಾದ ವಿಷಯ ತಾನೆ?


239. ಪರಿಸರ - ಬದನೆಕಾಯಿ (21/12/2020)


ಬದನೆಕಾಯಿ ಎಲ್ಲರಿಗೂ ಚಿರಪರಿಚಿತ ತರಕಾರಿ. ಇದು ಉಷ್ಣವಲಯದ ಬೆಳೆ. ಇದಕ್ಕೆ ಇಂಗ್ಲಿಷ್ ನಲ್ಲಿ ಎಗ್ ಪ್ಲಾಂಟ್ ಅಥವಾ ಬ್ರಿಂಜಾಲ್ ಎಂದು ಹೇಳುತ್ತಾರೆ. ಸುಮಾರು ಒಂದರಿಂದ ಎರಡು ಅಡಿ ನೇರವಾಗಿ ಬೆಳೆಯುವ ಬದನೆ ಗಿಡದಲ್ಲಿ ಅಲ್ಲಲ್ಲಿ ರೆಂಬೆಗಳು ಟಿಸಿಲೊಡೆದು ಅದರಲ್ಲಿ ಹೂವಾಗಿ ಬದನೆಕಾಯಿಗಳು ಬಿಡುತ್ತವೆ. ಬದನೆಕಾಯಿಯಲ್ಲಿ ಹಲವಾರು ವಿಧಗಳಿವೆ. ಉದ್ದನೆಯ, ದುಂಡನೆಯ, ಪುಟ್ಟ ಪುಟ್ಟ ಹೀಗೆ ವಿವಿಧ ಆಕಾರದ ಬದನೆಕಾಯಿಗಳಿವೆ. ಹಾಗೆಯೇ ನೇರಳೆ, ನೇರಳೆ ಮೇಲೆ ಬಿಳಿ ಪಟ್ಟಿಗಳಿರುವ, ಬೂದು, ಹಸಿರು, ಹಸಿರಿನ ಮೇಲೆ ಬಿಳಿ ಪಟ್ಟಿಗಳಿರುವ, ಹಳದಿ, ಬಿಳಿ, ಕಪ್ಪು ಹೀಗೆ ಹಲವು ಬಣ್ಣಗಳ ಬದನೆಕಾಯಿಗಳಿವೆ.
ಬದನೆಕಾಯಿ ನನ್ನ ಪ್ರೀತಿಯ ತರಕಾರಿ. ಆದರೆ ಈಗ್ಗ್ಯೆ ಹತ್ಹದಿನೈದು ವರ್ಷಗಳಿಂದ ಬದನೆಕಾಯಿ ತಿಂದರೆ ನನಗೆ ಅಲರ್ಜಿ ಪ್ರಾರಂಭವಾಗಿ ನನ್ನ ಇಷ್ಟದ ಆ ತರಕಾರಿಯನ್ನೇ ತಿನ್ನಲು ಹೆದರುವಂತಾಗಿದೆ. ಅದರ ಬಗ್ಗೆ ನನಗೆ ಖೇದವಿದೆ.
ಬದನೆಕಾಯಿಯಿಂದ ವಿವಿಧ ಬಗೆಯ ಪಲ್ಯಗಳನ್ನು ಮಾಡಬಹುದು. ರೊಟ್ಟಿ ಮತ್ತು ಬದನೆಕಾಯಿ ಎಣ್ಣೆಗಾಯಿ ಅದ್ಭುತವಾದ ಕಾಂಬಿನೇಶನ್. ನಮ್ಮ ದಕ್ಷಿಣ ಕನ್ನಡದಲ್ಲಿ ಸಾರಿನ ಪುಡಿ ಹಾಕಿ ಬದನೆಕಾಯಿಯ ಪಲ್ಯ ಮಾಡುತ್ತಾರೆ. ಸ್ವಲ್ಪ ಹುಳಿ-ಸಿಹಿ ಮುಂದಿರುವ ಆ ಪಲ್ಯವನ್ನು ಅನ್ನದೊಡನೆಯೂ ತಿನ್ನಬಹುದು ಇಲ್ಲವೇ ತಿಂಡಿಯೊಡನೆಯೂ ತಿನ್ನಬಹುದು. ಬಹಳ ರುಚಿಯದು. ಮಟ್ಟಿ ಗುಳ್ಳದಲ್ಲಿ ಕೋಟದ ಕಡೆಯ ಹಸಿ ಮಸಾಲೆಯ ಸಾಂಬಾರ್ ಮಾಡುತ್ತಾರೆ. ಹಾಗೆಯೇ ಗುಳ್ಳದಲ್ಲಿ ಬೋಳು ಹುಳಿ ಮಾಡುತ್ತಾರೆ. ಅವುಗಳೆಲ್ಲ ಬಹಳ ರುಚಿಯಾಗಿಯರುವ ಪದಾರ್ಥಗಳು. ಬದನೆಕಾಯಿಯಿಂದ ಮಾಡುವ ವಾಂಗೀಬಾತ್ ಅದರ ರುಚಿಗೆ ಪ್ರಸಿದ್ಧಿ ಪಡೆದಿದೆ. ಬದನೆಕಾಯಿಯಿಂದ ಬಜ್ಜಿ/ಪೋಡಿಯನ್ನೂ ಮಾಡಬಹುದು.

ಬದನೆಕಾಯಿಗೆ ಔಷಧೀಯ ಗುಣವೂ ಇದೆ. ಅದು ಕೊಲೆಸ್ಟ್ರಾಲ್ ಮಟ್ಟವನ್ನು ಹಾಗೂ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಅದು ಸ್ಮರಣಶಕ್ತಿಯನ್ನು ಹೆಚ್ಚಿಸುತ್ತದೆ. ನೇರಳೆ ಬದನೆಕಾಯಿಯನ್ನು ಬೆಲ್ಲದೊಂದಿಗೆ ಸೇವಿಸುತ್ತಾ ಬಂದರೆ ಮೂಲವ್ಯಾಧಿ ಕಡಿಮೆಯಾಗುತ್ತದೆ. ಬದನೆ ರೋಗ ನಿರೋಧಕ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ. ಇಂತಹ ಹಲವಾರು ಆರೋಗ್ಯಕರ ಅಂಶಗಳು ಬದನೆಕಾಯಿಯಲ್ಲಿವೆ. ಹೀಗಾಗಿ ಬದನೆಕಾಯಿಯನ್ನು ಹೆಚ್ಚು ಹೆಚ್ಚಾಗಿ ಅಡುಗೆಯಲ್ಲಿ ಬಳಸಿದಲ್ಲಿ ಆರೋಗ್ಯವನ್ನು ಚೆನ್ನಾಗಿ ಕಾಪಿಡಬಹುದು.


238.ನೆನಪುಗಳು - ಜೋಳದ ರೊಟ್ಟಿ (20/12/2020)


ನನಗೆ ಜೋಳದ ರೊಟ್ಟಿಯ ರುಚಿ ಹಿಡಿದಿದ್ದು ನನ್ನ ಕಾಲೇಜು ಸ್ನೇಹಿತೆ ಮಲ್ಲಿಯ ಮನೆಯಲ್ಲಿ. ಅವಳ ಅಪ್ಪ ಪೊಲೀಸ್ ಇಲಾಖೆಯಲ್ಲಿದ್ದರು. ಬಿಜಾಪುರದ ಕಡೆಯವರು. ಮನೆಯಲ್ಲಿ ಐದಾರು ಮಕ್ಕಳು. ಮಲ್ಲಿ ದೊಡ್ಡವಳು. ಮನೆ ತುಂಬಾ ಜನ ಇದ್ದರೂ ಕೂಡಾ ನಾವೆಲ್ಲ ಅವರ ಮನೆಗೆ ಹೋದಾಗ ಅವರಮ್ಮ ನಮಗೆಲ್ಲ ದೊಡ್ಡ ದೊಡ್ಡ ಜೋಳದ ರೊಟ್ಟಿ ಅದರೊಡನೆ ಮೆಣಸಿನ ಖಾರವಾದ ಚಟ್ನಿ, ಬದನೆಕಾಯಿ ಎಣ್ಣೆಗಾಯಿ ಹಾಗೂ ದೊಡ್ಡ ಲೋಟದ ತುಂಬಾ ಮಜ್ಜಿಗೆಯನ್ನು ಪ್ರೀತಿಯಿಂದ ಕೊಡುತ್ತಿದ್ದರು. ಮೆಣಸಿನ ಚಟ್ನಿಯ ಖಾರ ತಾಳಲಾರದೆ ನಾವು ಲೀಟರ್ ಗಟ್ಟಲೆ ಮಜ್ಜಿಗೆ ಕುಡಿಯುತ್ತಿದ್ದೆವು. ಅವರು ರೊಟ್ಟಿಯ ಹಿಟ್ಟು ಸಿದ್ಧಪಡಿಸಿ ಕೈಯಲ್ಲೇ ತಟ್ಟಿ ರೊಟ್ಟಿ ಮಾಡುತ್ತಿದ್ದ ಚಿತ್ರಣ ಇನ್ನೂ ನನ್ನ ಕಣ್ಣ ಮುಂದಿದೆ. ಅವರ ಮನೆ ಕಾಲೇಜಿನಿಂದ ಬಹಳ ದೂರವಿದ್ದರೂ ರೊಟ್ಟಿ ಪಲ್ಯದ ಆಸೆಗಾಗಿ ನಾವು ಮಲ್ಲಿಯ ಮನೆಗೆ ಆಗಾಗ್ಗೆ ಭೇಟಿ ಕೊಡುತ್ತಿದ್ದೆವು. ಅವರಮ್ಮ ನಾವು ಹೋದಷ್ಟು ಸಲವೂ ಅದೇ ಪ್ರೀತಿಯಿಂದ ಬಿಸಿ ಬಿಸಿ ರೊಟ್ಟಿ ತಟ್ಟಿ ಕೊಡುತ್ತಿದ್ದರು! ಮಲ್ಲಿ ಕೂಡಾ ಒಳ್ಳೆಯ ಅಡುಗೆ ಮಾಡುತ್ತಾಳೆ. ಕಳೆದ ವರ್ಷ ಅವಳ ಮನೆಗೆ ಹೋಗಿದ್ದಾಗ ರೊಟ್ಟಿಯೊಂದಿಗೆ ಬಗೆಬಗೆಯ ಪಲ್ಯಗಳನ್ನು ಮಾಡಿ ಪ್ರೀತಿಯಿಂದ ಉಣಬಡಿಸಿದ್ದಳು🙂
ಕಾಲೇಜು ದಿನಗಳಲ್ಲಿ ಮಲ್ಲಿಯ ಮನೆಯಿಂದ ಪ್ರಾರಂಭವಾದ ನನ್ನ ರೊಟ್ಟಿ ತಿನ್ನುವಿಕೆಯ ಪಯಣ ಇನ್ನೂ ಮುಂದುವರೆದಿದೆ. ನನಗೆ ಜೋಳದ ರೊಟ್ಟಿ ಮಾಡಲು ಬರುವುದಿಲ್ಲ. ಆದರೆ ಮಾಡಿ ಹಾಕುವವರಿದ್ದರೆ ತಿನ್ನಲು ಸದಾ ಸಿದ್ಧ. ಉತ್ತರ ಕರ್ನಾಟಕದ ಕಡೆಗೆ ಹೋದಾಗ ನಮ್ಮ ಪಾಲಕರ ಮನೆಗಳಲ್ಲಿ ರೊಟ್ಟಿ ತಿಂದು ತೃಪ್ತಿ ಪಟ್ಟದ್ದಿದೆ. ಹೋಟೆಲ್ ನಲ್ಲಿ ರೊಟ್ಟಿ ತಿನ್ನಬಹುದು. ಆದರೆ ಅಲ್ಲಿ ಸಿಗುವ ರೊಟ್ಟಿಗೂ ಮನೆಯಲ್ಲಿ ಮಾಡುವ ರೊಟ್ಟಿಗೂ ರುಚಿಯಲ್ಲಿ ಬಹಳ ವ್ಯತ್ಯಾಸವಿರುತ್ತದೆ. ಉತ್ತರ ಕರ್ನಾಟಕದ ರೊಟ್ಟಿ, ಪಲ್ಯ, ಹಸಿ ತರಕಾರಿ ತುಂಡುಗಳು, ಮೆಣಸಿನ ಚಟ್ನಿ ಯಾವಾಗಲೂ ಸ್ಮರಣಾರ್ಹ.
ಮಲೆನಾಡಿನ ಅಕ್ಕಿ ರೊಟ್ಟಿಯೂ ಬಹಳ ರುಚಿಕರ. ನನ್ನ ಗಂಡನ ಮನೆಯಲ್ಲಿ ಅಕ್ಕಿ ಹಿಟ್ಟು ಉಕ್ಕರಿಸಿ, ನಾದಿ, ಲಟ್ಟಿಸಿ ಕೆಂಡದ ಒಲೆಯಲ್ಲಿ ಸುಟ್ಟು ಮಾಡುವ ಉಬ್ಬು ರೊಟ್ಟಿಯೊಂದಿಗೆ ಚಟ್ನಿ, ಜೋನಿ ಬೆಲ್ಲ, ಬೆಣ್ಣೆ, ಗಟ್ಟಿ ಮೊಸರು ಹಾಕಿ ತಿನ್ನಲು ಸೊಗಸಾಗಿರುತ್ತದೆ. ಹಾಗೆಯೇ ಅಕ್ಕಿ ಹಿಟ್ಟಿಗೆ ಅನ್ನ ಹಾಕಿ ಉಕ್ಕರಿಸಿ ಮಾಡಿದ ಅಕ್ಕಿ ರೊಟ್ಟಿ ಬಹಳ ಮೃದುವಾಗಿ ತಿನ್ನಲು ಚೆನ್ನಾಗಿರುತ್ತದೆ. ಇದರೊಡನೆ ಬದನೆಕಾಯಿ ಪಲ್ಯ ಒಳ್ಳೆಯ ಕಾಂಬಿನೇಷನ್! ಇಂತಹ ಅಕ್ಕಿ ರೊಟ್ಟಿಗಳನ್ನು ಎಷ್ಟು ಬೇಕಾದರೂ ತಿನ್ನಬಹುದು. ತಿಂದು ಹೊಟ್ಟೆಗೆ ಜಾಸ್ತಿಯಾಗಿ ದೇಹ ಭಾರ ಎಂದೆನಿಸುವುದಿಲ್ಲ.

ಯಾವುದೇ ಹಿಟ್ಟಿನ ರೊಟ್ಟಿಯಾಗಲಿ ಆರೋಗ್ಯಕ್ಕೆ ಹಿತಕರ ಹಾಗೂ ತಿನ್ನಲು ರುಚಿಕರ. ಬಿಸಿ ಬಿಸಿ ರೊಟ್ಟಿ ಮಾಡಿ ಒಳ್ಳೆಯ ಪಲ್ಯ ಹಾಗೂ ಚಟ್ನಿಯೊಂದಿಗೆ ಕೊಡುವವರಿದ್ದರೆ ತಿನ್ನಲು ನಾನು ರೆಡಿ😀


237. ಪರಿಸರ - ತೊಂಡೆಕಾಯಿ (19/12/2020)


ತೊಂಡೆ ಉಷ್ಣವಲಯದ ಒಂದು ಹಂಬು ಅಂದರೆ ಬಳ್ಳಿ. ಎಲ್ಲರೂ ಬಳಸುವ ಬಹಳ ಪ್ರಚಲಿತದಲ್ಲಿರುವ ತರಕಾರಿ. ಇದನ್ನು ಇಂಗ್ಲಿಷ್ ನಲ್ಲಿ ಐವಿ ಗೌರ್ಡ್ ಅಥವಾ ಟಿಂಡೋರಾ ಎಂದು ಕರೆಯುತ್ತಾರೆ. ಬಚ್ಚಲು ನೀರು/ಪಾತ್ರೆ ತೊಳೆಯುವ ನೀರು ಹೋಗುವಲ್ಲಿ ತೊಂಡೆ ಬಳ್ಳಿಯ ದಪ್ಪನೆಯ ತುಂಡನ್ನು ಊರಿ ಹಬ್ಬುವ ಬಳ್ಳಿಗೆ ಚಪ್ಪರ ಮಾಡಿದರೆ ಒಳ್ಳೆಯದಾಗಿ ತೊಂಡೆಕಾಯಿಗಳು ಬಿಡುತ್ತವೆ. ಈ ಬಾರಿ ನಮ್ಮ ಶಂಕರಿಯೂ ಪಾತ್ರೆ ತೊಳೆಯುವ ನೀರು ಹೋಗುವಲ್ಲಿ ತೊಂಡೆ ನೆಟ್ಟು, ಚಪ್ಪರ ಹಾಕಿ ಈಗ ಕಾಯಿ ಬಿಡತೊಡಗಿದೆ. ಆದರೆ ಮಂಗಗಳು ಕಾಯಿ, ಮಿಡಿ, ಹೂವುಗಳನ್ನೂ ಧ್ವಂಸ ಮಾಡಿವೆ. ಹೀಗಾಗಿ ನಮಗೆ ತೊಂಡೆ ಬಳ್ಳಿ ನೋಡಿದ ಖುಷಿಯೊಂದೇ ಸಿಕ್ಕಿದೆ!
ತೊಂಡೆಕಾಯಿ ಅಡುಗೆಗೆ ಎಷ್ಟು ಉಪಯುಕ್ತವೋ ಅದರ ಎಲೆ ಅಷ್ಟೇ ಔಷಧೀಯ ಗುಣಗಳನ್ನು ಹೊಂದಿದೆ. ತೊಂಡೆಕಾಯಿಯಿಂದ ತರಹೇವಾರಿ ಖಾದ್ಯಗಳನ್ನು ತಯಾರಿಸಬಹುದು. ನಮ್ಮ ದಕ್ಷಿಣ ಕನ್ನಡದಲ್ಲಿ ವಿಶೇಷ ಊಟಗಳಲ್ಲಿ ತೊಂಡೆಕಾಯಿ ಹಾಗೂ ಎಳೆ ಗೋಡಂಬಿ ಹಾಕಿ ಮಾಡಿದ ಪಲ್ಯ ಬಹಳ ಪರಿಚಿತ. ಅದು ತುಂಬಾ ರುಚಿಯಾಗಿರುತ್ತದೆ. ಅನ್ನಕ್ಕೆ ಬೆರೆಸದೆ ಬರೀ ಬಾಯಿಗೆ ತಿನ್ನುವಂತಹ ಪಲ್ಯವದು. ನನ್ನಮ್ಮ ಹೆಬ್ರಿಯಲ್ಲಿದ್ದಾಗ ಅಂತಹ ಪಲ್ಯವನ್ನು ಬಹಳ ಬಾರಿ ಮಾಡಿದ್ದಳು. ಅಲ್ಲಿದ್ದ ಕುಡುಬಿ ಜನಾಂಗದವರು ಹಸಿ ಗೋಡಂಬಿಯನ್ನು ಮಾರಿಕೊಂಡು ಬಂದಾಗ ನಮ್ಮಮ್ಮ ಅವರ ಬಳಿ ಗೋಡಂಬಿ ಖರೀದಿಸಿ ಎಳೆಯ ತೊಂಡೆಕಾಯಿಯೊಡನೆ ಅದನ್ನು ಸೇರಿಸಿ ಪಲ್ಯ ಮಾಡುತ್ತಿದ್ದುದನ್ನು ನೆನಪಿಸಿಕೊಂಡರೆ ಬಾಯಿಯಲ್ಲಿ ನೀರೂರುತ್ತದೆ. ಅಷ್ಟು ರುಚಿ ಅದರದ್ದು!
ತೊಂಡೆಕಾಯಿಗೆ ಕಾಯಿಸಾಸಿವೆ ಹಾಕಿ ಇನ್ನೊಂದು ರೀತಿಯ ಪಲ್ಯ ಮಾಡುತ್ತಾರೆ. ಬಾಣಲೆಗೆ ಒಗ್ಗರಣೆ ಹಾಕಿ , ಅದು ಸಿಡಿದ ಮೇಲೆ ಹುಣಿಸೆ ಹಣ್ಣಿನ ರಸ, ಬೆಲ್ಲ, ಉಪ್ಪು, ಅರಿಶಿನ ಪುಡಿ ಹಾಕಿ ಕುದಿಸಿ, ಉದ್ದುದ್ದಕ್ಕೆ ತೆಳ್ಳಗೆ ಕತ್ತರಿಸಿಟ್ಟ ತೊಂಡೆಕಾಯಿಯನ್ನು ಹಾಕಿ ಬೇಯಿಸಬೇಕು. ಅದು ಬೆಂದು ನೀರಾರಿದ ಮೇಲೆ ತೆಂಗಿನಕಾಯಿಯ ತುರಿಗೆ ಸ್ವಲ್ಪ ಸಾಸಿವೆ, ನಾಲ್ಕೈದು ಒಣಮೆಣಸು ಬೆರೆಸಿ ನೀರು ಬೆರೆಸದೆ ರುಬ್ಬಿದ ಮಸಾಲೆಯನ್ನು ಬೆರೆಸಿ ಸರಿಯಾಗಿ ಮಗುಚಬೇಕು. ಆ ರೀತಿಯ ಪಲ್ಯವನ್ನು ಅನ್ನಕ್ಕೆ ಸೇರಿಸಿ ತಿನ್ನಲು ಬಲು ರುಚಿ! ಅದಕ್ಕೆ ಸ್ವಲ್ಪ ಸಿಹಿ ಮುಂದಿರುತ್ತದೆ. ನನಗಂತೂ ಅದು ಇಷ್ಟದ ಪಲ್ಯ.
ತೊಂಡೆಕಾಯಿಯ ಸಾಂಬಾರು, ಮಜ್ಜಿಗೆ ಹುಳಿ, ಕಾಯಿರಸ ಸಹ ಮಾಡುತ್ತಾರೆ. ತೊಂಡೆಕಾಯಿಯನ್ನು ಜಜ್ಜಿ ಬರೀ ತೆಂಗಿಗೆ ಹಸಿ ಮಸಾಲೆ ಹಾಕಿ ಮಾಡಿದ ಸಾಂಬಾರು ತಿನ್ನಲು ರುಚಿ. ಅವಿಯಲ್ ಮಾಡುವಾಗ ಉಪಯೋಗಿಸುವ ತರಕಾರಿಗಳಲ್ಲಿ ತೊಂಡೆಕಾಯಿಯೂ ಒಂದು. ತೊಂಡೆಕಾಯಿಯನ್ನು ಗಾಲಿಗಾಲಿಯಾಗಿ ಕತ್ತರಿಸಿ, ಉಪ್ಪು ಖಾರ ಹಾಕಿ ಒಣಗಿಸಿ ಸಂಡಿಗೆ ಮಾಡುತ್ತಾರೆ. ತೊಂಡೆಕಾಯಿ ಹುರಿದು ತೆಂಗಿನ ತುರಿ ಸೇರಿಸಿ ಗೊಜ್ಜು ಮಾಡುತ್ತಾರೆ. ತೊಂಡೆಕಾಯಿಯ ಸಾಸಿವೆ ಮಾಡುತ್ತಾರೆ.

ಎಲ್ಲಾ ರೀತಿಯ ಅಡುಗೆಯಲ್ಲೂ ಬಳಸಲ್ಪಡುವ ತೊಂಡೆಕಾಯಿ ಬಹು ಜನಪ್ರಿಯ ತರಕಾರಿಗಳಲ್ಲೊಂದು!


236. ನೆನಪುಗಳು - ದೂಪದಕಟ್ಟೆ (18/12/2020)

ಉಡುಪಿಯಿಂದ ಬ್ರಹ್ಮಾವರಕ್ಕೆ ಬಸ್ಸಿನಲ್ಲಿ ಬರುವಾಗ ಮೇನ್ ಬಸ್ಟ್ಯಾಂಡಿನ ಎರಡು ಸ್ಟಾಪಿನ ಮೊದಲು ಧೂಪದಕಟ್ಟೆ ಸ್ಟಾಪ್ ಇದ್ದಿತ್ತು. ಅಲ್ಲಿಂದ ಕಾಲ್ನಡಿಗೆಯಲ್ಲಿ ಸಕ್ಕರೆ ಕಾರ್ಖಾನೆ, ಬೈಕಾಡಿ, ಹೊನ್ನಾಳ, ಹಾರಾಡಿ ಕಡೆಗೆ ಹೋಗಬಹುದಿತ್ತು. ಈ ಎಲ್ಲಾ ಸ್ಥಳಗಳು ಧೂಪದಕಟ್ಟೆ ಸ್ಟಾಪಿನಿಂದ ಎರಡ್ಮೂರು ಕಿಮೀ ಗಳಷ್ಟು ದೂರದಲ್ಲಿದ್ದವು. ಆ ಸ್ಟಾಪಿಗೆ ಧೂಪದಕಟ್ಟೆ ಎನ್ನುವ ಹೆಸರು ಬಂದಿದ್ದು ಅಲ್ಲಿರುವ ಬೃಹತ್ತಾದ ಧೂಪದ ಮರದಿಂದ. ನಾನೂ ಎಷ್ಟೋ ಬಾರಿ ಆ ಸ್ಟಾಪಿನಲ್ಲಿ ಇಳಿದು ಮನೆಗೆ ನಡೆದು ಹೋದದ್ದಿದೆ. ಬಸ್ಸಿಗೆ ಕಾಯುವಾಗ ಎಷ್ಟೋ ಬಾರಿ ಆ ಮರದಡಿ ಬಿದ್ದಿರುತ್ತಿದ್ದ ಧೂಪದ ಕಾಯಿಗಳನ್ನು ಹೆಕ್ಕಿ ಅದನ್ನೊಡೆದು ಅದರೊಳಗೆ ಕಾಣುತ್ತಿದ್ದ ಗಣಪತಿಯಾಕಾರದ ಬೀಜವನ್ನು ಕುತೂಹಲದಿಂದ ಪರೀಕ್ಷಾರ್ಥವಾಗಿ ನೋಡುತ್ತಿದ್ದೆ. ಆ ಕಾಯಿಯೊಳಗಿನ ರಚನೆ ಪ್ರಕೃತಿಯ ಒಂದು ಸುಂದರ ಸೃಷ್ಟಿಯಾಗಿತ್ತು. ಅದನ್ನು ವಿವರಿಸುವುದು ಕಷ್ಟಸಾಧ್ಯ. ಅದರ ಆಕಾರ, ವರ್ಣ ಸಂಕಿರಣ ಎಲ್ಲವೂ ಅದ್ಭುತವಾಗಿದ್ದವು. ಹೀಗಾಗಿ ಅಂದು ನಾನು ನೋಡಿದ್ದ ಆ ಬೀಜದ ಒಳರಚನೆ ಇನ್ನೂ ನನ್ನ ನೆನಪಿನ ಬುತ್ತಿಯಲ್ಲಿ ಅವಿತು ಕೂತಿದೆ.
ಅದನ್ನು ಸಾಲ್ಧೂಪ ಎಂದೂ ಕರೆಯುತ್ತಾರೆ ಹಾಗೂ ಸಾಮಾನ್ಯವಾಗಿ ರಸ್ತೆಯ ಎರಡೂ ಪಕ್ಕಗಳಲ್ಲಿ ಬೆಳೆಸುತ್ತಾರೆ. ಜನವರಿ ತಿಂಗಳ ಆಸುಪಾಸಿನಲ್ಲಿ ಮರ ಹೂ ಬಿಟ್ಟಾಗ ಮಾವು ಹೂ ಬಿಟ್ಟಂತೆ ಕಾಣುತ್ತದೆ. ದಾರಿಯುದ್ದಕ್ಕೂ ಆ ಬಿಳಿ ಹೂವಿನ ತೋರಣವನ್ನು ನೋಡಿದಾಗ ಮನಸ್ಸಿಗೆ ಹಿತವಾಗುತ್ತದೆ. ಬಿಳಿ ಬಿಳಿ ಪುಟ್ಟ ಹೂಗಳ ಗೊಂಚಲು ನೇತ್ರಾಕರ್ಷಕವಾಗಿರುತ್ತದೆ. ಮೇ ತಿಂಗಳ ಆಸುಪಾಸಿನಲ್ಲಿ ಬಲಿಯುವ ಧೂಪದ ಕಾಯಿಗಳು ಗೋಲಾಕಾರವಾಗಿ ದಪ್ಪವಿದ್ದು ಭರಣಿಯ ಆಕಾರದಲ್ಲಿರುತ್ತವೆ. ಕಿವಿ/ಸಪೋಟ ಹಣ್ಣಿನ ತರಹ ಕಾಣುತ್ತವೆ. ಅವು ಪಕ್ವವಾದಾಗ ಅವುಗಳೊಳಗಿನ ಬೀಜಗಳಿಂದ ಎಣ್ಣೆ/ಕೊಬ್ಬನ್ನು ತೆಗೆದು ಶೇಖರಿಸುತ್ತಾರೆ. ಧೂಪವನ್ನು ಆಯುರ್ವೇದ ಔಷಧಿ ತಯಾರಿಯಲ್ಲಿ ಬಳಸುತ್ತಾರೆ. ಅದರ ರಾಳವನ್ನು ಧೂಪದ್ರವ್ಯವಾಗಿ ಬಳಸುತ್ತಾರೆ. ಹಲವಾರು ಕಾಯಿಲೆಗಳಲ್ಲಿ ಅದರ ಕಷಾಯವನ್ನು ಬಳಸುತ್ತಾರೆ. ಮರದ ಕಾಂಡವನ್ನು ಪೀಠೋಪಕರಣಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಅದರ ಪ್ರತಿಯೊಂದು ಭಾಗವೂ ಉಪಯೋಗಕರ.
ರಾಷ್ಟ್ರೀಯ ಹೆದ್ದಾರಿ ಆದ ಮೇಲೆ ಆ ಧೂಪದ ಮರ ಈಗ ಕಾಣಸಿಗುತ್ತಿಲ್ಲ. ಹೆದ್ದಾರಿಯ ಅಗಲೀಕರಣಕ್ಕೆ ಅದು ಬಲಿಯಾಗಿದೆ. ಎಷ್ಟೋ ಪುರಾತನವಾದ ಆ ಮರವನ್ನು ಕಳಕೊಂಡದ್ದರ ಬಗ್ಗೆ ಬೇಸರವಿದೆ. ಹಾಗೆಯೇ ಹೆದ್ದಾರಿಯ ಅಗತ್ಯದ ಅರಿವೂ ಇದೆ!

ನಾನು ನಮ್ಮ ಕ್ಯಾಂಪಸ್ಸಿನಲ್ಲಿ ಬಹಳಷ್ಟು ಧೂಪದ ಗಿಡಗಳನ್ನು ನೆಟ್ಟಿದ್ದೇನೆ. ಅವುಗಳು ಮರಗಳಾಗಿ ಬೆಳೆಯುತ್ತಿರುವುದನ್ನು ವೀಕ್ಷಿಸುತ್ತಿದ್ದೇನೆ. ಅವುಗಳ ಪೂರ್ಣ ಬೆಳವಣಿಗೆಗೆ ಇನ್ನು ಎಷ್ಟು ವರ್ಷಗಳು ಬೇಕೇನೊ? ಕಾದು ನೋಡಬೇಕಷ್ಟೇ!


235. ನೆನಪುಗಳು - ಉಪ್ಪಿನಕಾಯಿ(17/12/2020)

ಉಪ್ಪಿನಕಾಯಿ ಎಂದ ಕೂಡಲೇ ಎಲ್ಲರ ಕಿವಿ ಚುರುಕಾಗುತ್ತದೆ; ಬಾಯಿಯಲ್ಲಿ ನೀರು ಬರುತ್ತದೆ. ಅಷ್ಟು ಪರಿಣಾಮಕಾರಿ ಪದ ಉಪ್ಪಿನಕಾಯಿ! ಮಕ್ಕಳಿಂದ ವಯಸ್ಸಾದವರ ತನಕ ಎಲ್ಲರೂ ಇಷ್ಟ ಪಡುವ ಖಾದ್ಯ ಉಪ್ಪಿನಕಾಯಿ. ಉಪ್ಪಿನಕಾಯಿಯಲ್ಲಿ ಇರುವಷ್ಟು ವೈವಿಧ್ಯತೆ ಮತ್ಯಾವ ಖಾದ್ಯದಲ್ಲೂ ಇದೆಯೋ ಇಲ್ಲವೋ ಎಂದು ಅನುಮಾನ ಬರುವಷ್ಟು ವಿವಿಧತೆ ಕಾಣಸಿಗುವ ಖಾದ್ಯ ಉಪ್ಪಿನಕಾಯಿ. ಅಂತಹ ಉಪ್ಪಿನಕಾಯಿಯನ್ನು ಮಾಡಲು ಸೂಕ್ತ ಪರಿಕರ ಬೇಕು. ಕಂಡ ಕಂಡ ಪರಿಕರಗಳಲ್ಲಿ ಉಪ್ಪಿನಕಾಯಿ ಮಾಡಲು ಆಗುವುದಿಲ್ಲ. ಹೀಗಾಗಿ ಉಪ್ಪಿನಕಾಯಿ ಮಾಡಲಿಕ್ಕಾಗಿಯೇ ಇರುವ ಪರಿಕರ ಜಾಡಿ/ಭರಣಿ/ಕುಪ್ಪಿ. ಹೀಗೆ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಬೇರೆ ಬೇರೆ ಹೆಸರಿನಿಂದ ಆ ಪರಿಕರ ಕರೆಯಲ್ಪಡುತ್ತದೆ. ಅದನ್ನು ಪಿಂಗಾಣಿ/ಗಾಜಿನಿಂದ ಮಾಡಿರುತ್ತಾರೆ. ಅವುಗಳು ವಿವಿಧ ಆಕಾರಗಳಲ್ಲಿ ಲಭ್ಯವಿರುತ್ತವೆ.
ನನ್ನಮ್ಮನ ಬಳಿಯಲ್ಲಿ ಕೇವಲ ನಾಲ್ಕೈದು ಜಾಲಿಗಳಿದ್ದವು. ಆದರೆ ನನ್ನ ಗಂಡನ ಮನೆಯಲ್ಲಿ ಇಪ್ಪತ್ತಕ್ಕೂ ಮೀರಿ ಜಾಲಿಗಳಿದ್ದವು. ಅಲ್ಲಿ ಮೊದಲೆಲ್ಲ ಬೃಹತ್ ಪ್ರಮಾಣದಲ್ಲಿ ಉಪ್ಪಿನಕಾಯಿಯನ್ನು ತಯಾರಿಸುತ್ತಿದ್ದರು. ಮಾರಾಟಕ್ಕಲ್ಲ, ಮನೆಯ ಬಳಕೆಗೆ ಮಾತ್ರ. ಈ ಎಲ್ಲಾ ಜಾಲಿಗಳು ಸುಮಾರು ಎರಡೂವರೆ ಅಡಿ ಎತ್ತರದ, ಎರಡೂ ಬದಿಗಳಲ್ಲಿ ಹಿಡಿಕೆ ಇದ್ದ, ತಿರುಪಿನ ಮುಚ್ಚಳವಿದ್ದ ತೆಳು ಕಂದು ಬಣ್ಣ ಹಾಗೂ ಮಬ್ಬಾದ ಬಿಳುಪು ಪಟ್ಟಿಯಿರುವ ಪರಿಕರಗಳು. ಆ ಮುಚ್ಚಳದ ಸುತ್ತಲೂ ಕಚ್ಚುಕಚ್ಙಾಗಿರುತ್ತದೆ. ದಪ್ಪನೆಯ ಪಿಂಗಾಣಿಯ ಆ ಜಾಲಿಗಳು ನೋಡಲು ಆಕರ್ಷಕವಾಗಿರುತ್ತವೆ. ಅವುಗಳಲ್ಲಿ ಉರುಟು ಜಾಲಿಗಳೂ ಇರುತ್ತವೆ. ನನ್ನ ಬಳಿಯೂ ಒಂದು ಜಾಲಿಯಿತ್ತು. ಆದರೆ ನನ್ನ ಅಜಾಗರೂಕತೆಯಿಂದಾಗಿ ಅದು ಕೆಲವು ವರ್ಷಗಳ ಹಿಂದೆ ಒಡೆದು ಹೋಯಿತು. ಅಂದರೆ ಆ ಜಾಲಿಗಳನ್ನು ಬಹಳ ಎಚ್ಚರಿಕೆಯಿಂದ ಬಳಸಬೇಕಂದರ್ಥ. ನಿಷ್ಕಾಳಜಿ ಎನ್ನುವುದು ಜಾಲಿಗೆ ಮಾರಕ!
ಆ ಜಾಲಿಗಳಲ್ಲಿ ಉಪ್ಪು ನೀರಿನಲ್ಲಿ ಚಟ್ಟಿದ ಮಾವಿನಮಿಡಿಗಳನ್ನು ಖಾರ ಹಾಗೂ ಮಸಾಲೆಯೊಂದಿಗೆ ಬೆರೆಸಿ ಹಾಕಿ ಉಪ್ಪಿನಕಾಯಿಯ ತಯಾರಿಯಾಗಲು ತಿಂಗಳುಗಟ್ಟಲೇ ಗಪ್ಪನೆ ಮುಚ್ಚಿಟ್ಟು ಅದು ಒಂದು ಹದಕ್ಕೆ ಬಂದಾಗ ಜಾಲಿಯ ಮುಚ್ಚಳ ತೆಗೆದು ಒಣಗಿದ ಸೌಟಿನಿಂದ ಉಪ್ಪಿನಕಾಯಿಯನ್ನು ನಿಧಾನವಾಗಿ ತೆಗೆಯುವ ದೃಶ್ಯ ಮನಸ್ಸಿಗೆ ಮುದ ಕೊಟ್ಟು ಬಾಯಿಯಲ್ಲಿ ನೀರು ಬರಿಸುತ್ತದೆ. ಅಗತ್ಯವಿರುವಷ್ಟು ಉಪ್ಪಿನಕಾಯಿಯನ್ನು ತೆಗೆದ ಮೇಲೆ ಪುನಃ ಅದನ್ನು ಹಾಗೆಯೇ ಗಪ್ಪನೆ ಮುಚ್ಚಿ ಅಟ್ಟದಲ್ಲೋ ಅಥವಾ ಇನ್ಯಾವುದೋ ಪ್ರಶಸ್ತ ಜಾಗದಲ್ಲಿ ಇಡುವುದು ಮನೆಯ ಹಿರಿಯರು ತಪ್ಪದೇ ಜಾಗ್ರತೆಯಿಂದ ಮಾಡುವ ವಾಡಿಕೆ. ಮನೆಯಲ್ಲಿ ಕಿರಿಯರಿಗೆ ಉಪ್ಪಿನಕಾಯಿ ತೆಗೆಯಲು ಅವಕಾಶವಿರುವುದಿಲ್ಲ. ಆನುಭವವಿರದ ಕಿರಿಯರು ಹೇಗೇಗೋ ಉಪ್ಪಿನಕಾಯಿ ತೆಗೆದು ತದನಂತರದಲ್ಲಿ ಉಳಿದ ಉಪ್ಪಿನಕಾಯಿಯಲ್ಲಿ ಹುಳವಾದರೆ ಎಂಬ ಭಯ🙁

ಈಗ ಉಪ್ಪಿನಕಾಯಿಯನ್ನು ಮನೆಗಳಲ್ಲಿ ಮಾಡುವುದು ಕಡಿಮೆಯಾಗಿದೆ. ಜಾಲಿಗಳು ನಿಷ್ಪ್ರಯೋಜಕವಾಗಿ ಮನೆಯ ಮೂಲೆ ಸೇರಿವೆ. ಆದರೆ ಅವುಗಳ ಚಿತ್ರ ಮನದಲ್ಲಿ ಹಸಿರಾಗಿಯೇ ಉಳಿದಿದೆ.


234. ನೆನಪುಗಳು - ವಿಮಾನ ಹಾರಿಸುವುದು (16/12/2020)


ಕಾಗದದ ವಿಮಾನ ಹಾರಿಸುವುದು ಎನ್ನುವುದು ನಮ್ಮ ಬಾಲ್ಯದ ದಿನಗಳ ಆಟಗಳಲ್ಲಿ ಬಹು ಮುಖ್ಯವಾದ ಆಟ. ಆ ಕಾಗದದ ವಿಮಾನದ ತಯಾರಿಯ ಪ್ರಕ್ರಿಯೆ ಬಹಳ ರೋಚಕವಾಗಿರುತ್ತಿತ್ತು. ಕಾಗದವನ್ನು ಸರಿಯಾಗಿ ಮಡಚಲೇ ಬಾರದಿದ್ದ ನಮಗೆ ಅದು ರೋಚಕವಲ್ಲದೆ ಮತ್ತೇನು ಹೇಳಿ?
ಆಯತಾಕಾರದ ಒಂದು ಕಾಗದವನ್ನು ತೆಗೆದುಕೊಂಡು ಅದನ್ನು ಉದ್ದುದ್ದವಾಗಿ, ಸಮಾನಾಂತರವಾಗಿ ಮಡಚಿ ಪುನಃ ಸರಿಯಾಗಿ ಇರಿಸಿ, ಕಾಗದದ ಒಂದು ಭಾಗದ ಎರಡು ತುದಿಗಳನ್ನು ಮಡಚಿದಾಗ ಅದೊಂದು ತ್ರಿಕೋನವಾಗುತ್ತದೆ. ಅದನ್ನು ಪುನಃ ಮಡಚಿ ಅದರ ತುದಿಗಳನ್ನು ಮಡಚಲ್ಪಟ್ಟ ತ್ರಿಕೋನದ ತುದಿಗೆ ತಂದು ತ್ರಿಕೋನದ ಚೂಪನೆಯ ಭಾಗವನ್ನು ಆ ಎರಡೂ ತುದಿಗಳ ಮೇಲೆ ಹಿಮ್ಮುಖವಾಗಿ ಮಡಚಬೇಕು. ತದನಂತರದಲ್ಲಿ ಅದನ್ನು ಸಮಾನಾಂತರವಾಗಿ ಮಡಚಿ ಅವುಗಳ ಪಕ್ಕಗಳನ್ನು ಅರ್ಧಕ್ಕೆ ಮಡಚಿದರೆ ಚೂಪನೆಯ ಮೂತಿಯ ವಿಮಾನ ರೆಡಿ!
ಆ ರೀತಿ ತಯಾರಿಸಲ್ಪಟ್ಟ ವಿಮಾನಗಳನ್ನು ಗೆಳೆಯ - ಗೆಳತಿಯರೊಡಗೂಡಿ ಮೇಲೆ ಹಾರಿಸುವ ಆಟ ಬಲು ಸೊಗಸು.
ಎಷ್ಟೋ ಬಾರಿ ಕಾಗದದ ಗುಣಮಟ್ಟದ ದೋಷದಿಂದಾಗಿ ಅಥವಾ ನಮ್ಮ ಮಡಚುವಿಕೆಯ ಅಸಮಾನತೆಯಿಂದಾಗಿ ಕಾಗದದ ವಿಮಾನಗಳು ಮೇಲೆ ಹಾರದೆ ಸುಂಯ್ಯನೆ ಕೆಳ ಬಿದ್ದಾಗ ನಮ್ಮ ಕನಸೆಲ್ಲ ನುಚ್ಚು ನೂರಾದಂತೆ ಅನಿಸುತ್ತಿತ್ತು. ಮಕ್ಕಳಾಗಿದ್ದ ನಮಗೆ ಆ ವಿಮಾನ ಹಾರಿಸುವುದೇ ಆ ಘಳಿಗೆಯಲ್ಲಿ ಜೀವನದ ಪರಮೋಚ್ಚ ಗುರಿಯಾಗಿರುತ್ತಿತ್ತು. ಆ ಗುರಿ ತಲುಪದಾದಾಗ ಜೀವನದ ರೈಲು ಹಳಿ ತಪ್ಪಿದಂತೆ ಅನಿಸುತ್ತಿತ್ತು. ಆದರೆ ಬಾಲ್ಯದ ಜೀವನೋತ್ಸಾಹ ನಮ್ಮನ್ನು ಹತಾಶೆಗೆ ದೂಡದೆ "ಮರಳಿ ಯತ್ನವನ್ನು ಮಾಡುವತ್ತ" ಹುರಿದುಂಬಿಸುತ್ತಿತ್ತು. ಪುನಃ ಇನ್ನೊಂದು ಕಾಗದವನ್ನು ಮಡಚಿ ವಿಮಾನ ತಯಾರಿಸಿ ಅದನ್ನು ಹಾರಿಸುವ ಕಾರ್ಯದಲ್ಲಿ ನಿರತರಾಗುತ್ತಿದ್ದೆವು. ಯಶಸ್ಸನ್ನೂ ಕಾಣುತ್ತಿದ್ದೆವು!

ಕಾಗದದ ವಿಮಾನವಾದರೂ ಕೂಡಾ ಅದರ ಯಶಸ್ವಿ ಉಡಾವಣೆ ನಮ್ಮಲ್ಲಿ ಪ್ರಪಂಚವನ್ನೇ ಗೆದ್ದ ಭಾವನೆಯನ್ನು ಮೂಡಿಸುತ್ತಿದ್ದಿತು. ಅದೊಂದು ಸುಂದರವಾದ ಫ್ಯಾಂಟಸಿಯ ಲೋಕವಾಗಿತ್ತು. ನಮಗೆ ನಾವೇ ದೊರೆಗಳಾಗಿ ತಪ್ಪು ಸರಿಯ ಅರಿವಿಲ್ಲದೆ ನಮ್ಮದೇ ಆದ ಆಟೋಟದ ಲೋಕದಲ್ಲಿ ವಿಹರಿಸುತ್ತಿದ್ದ ಆ ಬಾಲ್ಯಕಾಲ ಮರಳಿ ಬರಬಾರದೆ ಎಂದೆನಿಸುವುದಿದೆ. ಮನಸ್ಸು ಬಯಸ್ಸಿದ್ದನ್ನು ಹಠ ಮಾಡಿಯಾದರೂ ಪಡೆಯುತ್ತಿದ್ದ ಆ ಬಾಲ್ಯದ ದಿನಗಳ ಅಮಾಯಕತೆ ನಮ್ಮಿಂದೇಕೆ ದೂರವಾಯಿತು ಎಂದೆನಿಸುತ್ತದೆ! ಕೈಗೆ ಸಿಕ್ಕ ವಸ್ತುಗಳನ್ನು ನಮ್ಮ ಸೃಜನಶೀಲತೆಯ ಅಭಿವ್ಯಕ್ತಿಗೆ ಯಾವುದೇ ಸಿಗ್ಗಿಲ್ಲದೆ ಉಪಯೋಗಿಸುತ್ತಿದ್ದ ನಮ್ಮ ಪ್ರಯೋಗಶೀಲ ಮನಸ್ಸನ್ನು ಕಳೆದುಕೊಂಡ ಬಗ್ಗೆ ಖೇದವಾಗುತ್ತದೆ! ಬದುಕಿನ ಪಯಣದ ಧಾವಂತವೆನ್ನುವುದು ನಮ್ಮನ್ನೆಲ್ಲ ಹೂರಣವಿಲ್ಲದ ಹೋಳಿಗೆಯನ್ನಾಗಿಸಿದೆಯೆ ಎನ್ನುವ ಪ್ರಶ್ನೆಯೂ ನನ್ನನ್ನು ಕಾಡುತ್ತದೆ. ಬಾಲ್ಯದ ಖುಷಿ, ಮುಗ್ದ ಮನಸ್ಸು, ಕನಸು ಕಾಣುವ ಕಣ್ಗಳನ್ನು ಮರಳಿ ಪಡೆಯುತ್ತಾ ಜೀವನದ ಸಿಹಿಯನ್ನು ಸವಿಯುವ ಸೌಭಾಗ್ಯ ಮತ್ತೆ ದೊರೆಯುವುದೇ ಎನ್ನುವ ನಿರೀಕ್ಷೆಯೊಂದಿಗೆ..............😌

233. ಪರಿಸರ - ಕಾರ್ತಿಕ ಮಾಸ (15/12/2020)


ನನಗೆ ಮಾಸಗಳ ಬಗೆಗಿನ ಜ್ಞಾನ ಕಡಿಮೆ. ಆದರೆ ಕೆಲವು ಮಾಸಗಳು ಅವುಗಳ ಹಬ್ಬಗಳ ಆಚರಣೆಯಿಂದಾಗಿ ನನ್ನ ಗಮನದಲ್ಲಿರುತ್ತವೆ. ಈಗ ಕಾರ್ತಿಕ ಮಾಸ ನಡೆಯುತ್ತಿದೆ. ದ್ವಾದಶ ಮಾಸಗಳಲ್ಲಿ ಎಂಟನೇ ಮಾಸವೇ ಕಾರ್ತಿಕ ಮಾಸ. ಈ ಮಾಸದ ಮೊದಲ ದಿನವೇ ದೀಪಾವಳಿ. ಅಲ್ಲಿಂದ ಪ್ರಾರಂಭವಾಗುವ ಹಬ್ಬ ಹರಿದಿನಗಳು ಒಂದಿಡೀ ತಿಂಗಳು ನಿರಂತರವಾಗಿ ನಡೆಯುತ್ತವೆ. ತುಳಸಿ ಪೂಜೆಯೂ ಕಾರ್ತಿಕ ಮಾಸದಲ್ಲಿ ಆಚರಿಸಲ್ಪಡುವ ಹಬ್ಬವಾಗಿದೆ. ಅದಲ್ಲದೆ ಎಲ್ಲಾ ದೇವಸ್ಥಾನಗಳಲ್ಲಿ ಪ್ರತಿನಿತ್ಯ ದೀಪೋತ್ಸವ ಇರುತ್ತದೆ. ಈ ಸಮಯದಲ್ಲಿ ದೇವಸ್ಥಾನಗಳು ದೀಪಮಯವಾಗಿ ಅವುಗಳ ಮಿಣುಕು ಬೆಳಕಿನಲ್ಲಿ ಅದ್ಭುತವಾಗಿ ಕಾಣುತ್ತವೆ.
ನನ್ನ ಗಂಡನ ಮನೆಯಲ್ಲಿ ಕಾರ್ತಿಕ ಮಾಸದ ಅಮಾವಾಸ್ಯೆಯ ದಿನ ಮನೆಯ ರಾಮ ಮಂದಿರದಲ್ಲಿ ದೀಪೋತ್ಸವ ಇರುತ್ತದೆ. ಗ್ರಾಮಸ್ಥರು, ಆಳುಕಾಳುಗಳ ಸಂಸಾರ, ಸ್ನೇಹಿತ ವರ್ಗ ಎಂದು ಐವತ್ತು ಜನಕ್ಕೂ ಮೀರಿ ಜನ ಸೇರುತ್ತಾರೆ. ಮಂದಿರದ ಮುಂದೆ ಎರಡು ಸ್ಟ್ಯಾಂಡ್ ಗಳಲ್ಲಿ ಹಣತೆಗಳನ್ನು ಸಾಲಾಗಿ ಜೋಡಿಸಿಟ್ಟಿರುತ್ತಾರೆ. ಬಂದವರೆಲ್ಲ ಆ ಹಣತೆಗಳನ್ನು ಬೆಳಗುತ್ತಾರೆ. ರಾಮ ಮಂದಿರದೊಳಗೂ ಹಣತೆಗಳನ್ನು ಇಟ್ಟಿರುತ್ತಾರೆ. ಎಲ್ಲೆಡೆಯೂ ದೀಪಮಯ. ಪುಟಾಣಿ ಮಂದಿರ ಸಹಸ್ರ ಹಣತೆಗಳ ಬೆಳಕಿನಲ್ಲಿ ಜಾಜ್ವಲಮಾನವಾಗಿ ಕಾಣುತ್ತದೆ. ದೇವರ ಪೂಜೆಯ ನಂತರ ಎಲ್ಲರಿಗೂ ಪ್ರಸಾದ ವಿತರಣೆಯಾಗುತ್ತದೆ. ಪುಟಾಣಿಯ ಪಂಚಕಜ್ಜಾಯ, ಚೀನಿಕಾಯಿ/ಗೆಣಸಿನ ಸಿಹಿ, ಕೋಸಂಬರಿ, ಕಷಾಯವನ್ನು ಎಲ್ಲರಿಗೂ ವಿತರಿಸಲಾಗುತ್ತದೆ. ತದನಂತರದಲ್ಲಿ ಬಂದವರಿಗೆಲ್ಲ ಊಟದ ವ್ಯವಸ್ಥೆಯೂ ಇರುತ್ತದೆ.
ನಮ್ಮ ಕ್ಯಾಂಪಸ್ಸಿನಲ್ಲಿರುವ ನಾಗರಕಟ್ಟೆಯಲ್ಲೂ ಷಷ್ಟಿಯ ದಿವಸ ಕಾರ್ತಿಕ ದೀಪೋತ್ಸವವನ್ನು ನನ್ನ ಭಾವನ ನೇತೃತ್ವದಲ್ಲಿ ಮಾಡಲಾಗುವುದು. ಕಟ್ಟೆಯ ಸುತ್ತಲೂ ನೂರಾರು ಹಣತೆಗಳನ್ನು ಇಟ್ಟು ದೀಪ ಹಚ್ಚಲಾಗುವುದು. ಹಣತೆಯ ದೀಪಾಲಂಕೃತ ನಾಗರಕಟ್ಟೆ ದಿವ್ಯ ಸದೃಶವಾಗಿ ಕಾಣುತ್ತದಾಗ! ಹಾಸ್ಟೆಲ್ ನ ಎಲ್ಲಾ ಮಕ್ಕಳು ಹಾಗೂ ಶಿಕ್ಷಕರು ಹಾಗೂ ಇನ್ನುಳಿದ ಸಿಬ್ಬಂದಿಗಳು ಕಾರ್ತಿಕ ಪೂಜೆಗೆ ಹಾಜರಿದ್ದು ಹುರಿಗಡಲೆಯ ಪಂಚಕಜ್ಜಾಯ, ಕೋಸಂಬರಿ ಸ್ವೀಕರಿಸಿ ಖುಷಿ ಪಡುತ್ತಾರೆ. ಈ ಆಚರಣೆಯಲ್ಲಿ ಭಕ್ತಿ ಭಾವಕ್ಕಿಂತ ಮುಖ್ಯವಾದದ್ದು ಎಲ್ಲರೂ ಒಂದೆಡೆ ಸೇರಿ ಆಗುವ ಧನಾತ್ಮಕ ಸಂಚಲನ.
ಕಾರ್ತಿಕ ಮಾಸದ ಪ್ರತಿ ರಾತ್ರಿಯ ದೀಪೋತ್ಸವ ಅಜ್ಞಾನದ ಕತ್ತಲೆ ಹೊಡೆದೋಡಿಸಿ ಅರಿವಿನ ಬೆಳಕನ್ನು ನೀಡುವ ಸೂಚಕವೇ?🤔


232. ಪರಿಸರ - ಮಲೆನಾಡಿನಲ್ಲಿ ಅಡಿಕೆ (14/12/2020)

ಈಗ ಅಡಿಕೆ ಕೊಯ್ಲಿನ ಸಮಯ. ಮಲೆನಾಡಿನ ಎಲ್ಲಾ ಕಡೆಯಲ್ಲೂ ಅಡಿಕೆ ಕೊಯ್ಲಿನ ಬಿರುಸಿನ ಕೆಲಸ ನಡೆಯುತ್ತಿದೆ. ಪ್ರತಿಯೊಬ್ಬ ಅಡಿಕೆ ಕೃಷಿಕರ ಮನೆಯ ಅಂಗಳದಲ್ಲಿ ಕೊಯ್ದ ಅಡಿಕೆ ಕೊನೆಗಳ ರಾಶಿ ಕಾಣುತ್ತಿದೆ. ಅದರ ಹಸಿರು ಹಳದಿ ಬಣ್ಣ ಎಲ್ಲೆಡೆಯೂ ಕಣ್ಣಿಗೆ ರಾಚುತ್ತಿದೆ. ಇಷ್ಟು ದಿನ ಖಾಲಿ ಬಿದ್ದಿದ್ದ ಮನೆಯಂಗಳ ಅಡಿಕೆ ಕೊನೆಗಳಿಂದ ತುಂಬಿಕೊಂಡು ಕಣ್ಮನಗಳಿಗೆ ಆನಂದ ನೀಡುತ್ತಿದೆ. ಅಡಿಕೆಯನ್ನು ಸುಲಿಯುವ ಕೆಲಸ ಭರದಿಂದ ಸಾಗುತ್ತಿದೆ. ಹಿಂದೆಲ್ಲಾ ಎಲ್ಲರ ಮನೆಯಂಗಳದಲ್ಲೇ ಅಡಿಕೆ ಸುಲಿಯುವ ಕಾರ್ಯಕ್ರಮ ನಡೆಯುತ್ತಿತ್ತು. ಅದೀಗ ಕಡಿಮೆಯಾಗಿ ಅಡಿಕೆ ಸುಲಿಯುವ ಕಡೆಗೆ ಅಡಿಕೆಯನ್ನು ಒಯ್ಯಲಾಗುತ್ತಿದೆ. ಬದಲಾವಣೆಯ ಗಾಳಿ ಎಲ್ಲೆಡೆಯೂ ಬೀಸುತ್ತಿರುವಾಗ ಅದಕ್ಕೆ ತಕ್ಕಂತೆ ಕೃಷಿಕರೂ ಬದಲಾಗಬೇಕಾದ ಅಗತ್ಯ ಕಂಡು ಬರುತ್ತಿದೆ.
ಎಷ್ಟೇ ಬದಲಾವಣೆ ಕಂಡು ಬಂದಿದ್ದರೂ ಮಲೆನಾಡಿನ ಕೃಷಿಕರ ಮನೆಗಳಲ್ಲಿ ಇರುವ ಎಲೆಆಡಿಕೆಯ ಸಿಬ್ಲು ಹಾಗೂ ಅದರೊಳಗಿನ ಅಡಿಕೆ ಕತ್ತರಿಸುವ ಕತ್ತರಿ ಮಾತ್ರ ಹಾಗೇ ಇದೆ. ಏಕೆಂದರೆ ಮಲೆನಾಡಿನಲ್ಲಿ ಎಲೆ ಅಡಿಕೆ ತಿನ್ನದಿರುವವರೇ ಸಿಗುವುದಿಲ್ಲವೇನೋ ಅನಿಸುವಷ್ಟರ ಮಟ್ಟಿಗೆ ಎಲೆ ಅಡಿಕೆ ತಿನ್ನುತ್ತಾರೆ. ತುಂಬು ಸಂಸಾರಗಳಲ್ಲಿ ಎಲ್ಲರೂ ಎಲೆ ಅಡಿಕೆ ತಿನ್ನುವವರೇ ಆಗಿದ್ದಾಗ ಕತ್ತರಿಯ ನಿರಂತರ ಉಪಯೋಗ ಆಗುತ್ತಿರುತ್ತದೆ.
ಅಡಿಕೆ ಕತ್ತರಿಸುವ ಕತ್ತರಿಗಳು ಕಲಾತ್ಮಕವಾಗಿರುತ್ತವೆ. ಅವುಗಳು ದೀರ್ಘಕಾಲದವರೆಗೆ ಬಾಳಿಕೆ ಬರುತ್ತವೆ. ಎಷ್ಟೋ ಮನೆಗಳಲ್ಲಿ ಇರುವ ಅಡಿಕೆ ಕತ್ತರಿಗಳು ಎರಡು ಮೂರು ತಲೆಮಾರುಗಳವರು ಬಳಸಿ ಇನ್ನೂ ಬಳಕೆಯಲ್ಲಿರುವಷ್ಟು ಉತ್ತಮ ಸ್ಥಿತಿಯಲ್ಲಿವೆ. ಬಳಸಿದಷ್ಟೂ ಬಳಕೆಯಾಗುವ ಕತ್ತರಿ ಆ ಅಡಿಕೆ ಕತ್ತರಿ! ಹಗ್ಗ ಕತ್ತರಿಸಲು, ಗಿಡ ಕತ್ತರಿಸಲು ಅಥವಾ ಇನ್ನೇನಾದರು ಕತ್ತರಿಸಲು ಸೂಕ್ತ ಸಾಧನ ಸಿಗದಿದ್ದಾಗ ಅಡಿಕೆ ಕತ್ತರಿಯನ್ನೇ ಬಳಸುತ್ತಾರೆ. ಹೀಗಾಗಿ ಅದು ಬಹೂಪಯೋಗಿ!
ನನ್ನ ಗಂಡನ ಮನೆಯ ಎಲೆಸಿಬ್ಲಿನಲ್ಲೂ ಒಂದು ಅಡಿಕೆ ಕತ್ತರಿಸುವ ಕತ್ತರಿ ಇದೆ. ನಮ್ಮ ಮನೆಯ ಪ್ರತಿಯೊಬ್ಬ ಗಂಡಸರ ಬಾಯಿಯಲ್ಲಿ ಇಪ್ಪತ್ನಾಲ್ಕು ಗಂಟೆಯೂ ಎಲೆ ಅಡಿಕೆ ತುಂಬಿಕೊಂಡಿರುತ್ತದೆ. ಹೀಗಾಗಿ ಆ ಕತ್ತರಿಯ ಬಳಕೆ ಮಾಡುತ್ತಲೇ ಇರುತ್ತಾರೆ. ಮನೆಯಲ್ಲಿ ವಿಶೇಷ ಕಾರ್ಯಕ್ರಮ ಇದ್ದರಂತೂ ಕತ್ತರಿಗೆ ಪುರುಸೊತ್ತೇ ಇರುವುದಿಲ್ಲ. ಮದುವೆಯಾಗಿ ಮೂವತ್ತು ವರ್ಷಗಳಾಗುತ್ತಾ ಬಂದರೂ ನನಗಿನ್ನೂ ಆ ಕತ್ತರಿಯಲ್ಲಿ ಅಡಿಕೆ ಕತ್ತರಿಸುವ ಕ್ರಮ ಗೊತ್ತಾಗಿಲ್ಲ. ಅಡಿಕೆಯನ್ನು ಆ ಕತ್ತರಿಯ ಮಧ್ಯದಲ್ಲಿಟ್ಟು ಎಷ್ಟು ಒತ್ತಡ ಹಾಕಿ ಒತ್ತಿದರೂ ಅಡಿಕೆ ತುಂಡಾಗುವುದಿಲ್ಲ. ಈತನ್ಮಧ್ಯೆ ಬೆರಳುಗಳಿಗೆಲ್ಲಿ ಪೆಟ್ಟಾಗುತ್ತದೋ ಎಂಬ ಆತಂಕ ಬೇರೆ. ಬೇರೆಯವರು ಕತ್ತರಿಸುವಾಗ ಸುಲಭವಾಗಿ ಕಾಣುವ ಕತ್ತರಿಯ ಉಪಯೋಗ ನಾವು ಕತ್ತರಿಸುವಾಗ ಕಷ್ಟಸಾಧ್ಯವಾಗಿ ಬಿಡುತ್ತದೆ. ಅದರ ಕಾರ್ಯ ವಿಧಾನದ ಪೂರ್ಣ ಪರಿಚಯವಿದ್ದರೆ ಅದರ ಬಳಕೆ ಸುಲಭವೇನೊ? ಯಾವುದೇ ಪರಿಕರ/ಸಾಧನವನ್ನು ಸರಿಯಾಗಿ ಬಳಸುವ ಅರಿವಿರದಿದ್ದಲ್ಲಿ ಅವು ನಿರುಪಯುಕ್ತ ಎನಿಸಿ ಬಿಡುತ್ತವೆ. ಬಳಕೆಯ/ಬಳಸುವ ಜ್ಞಾನವಿದ್ದಲ್ಲಿ ಮಾತ್ರ ಎಲ್ಲ ವಸ್ತುಗಳ ಪ್ರಯೋಜನ ಪಡೆಯಬಹುದು. ಕಲಿಯುವ ಆಸಕ್ತಿ, ಅನ್ವಯಿಸುವ ಮನಸ್ಥಿತಿ ನಮ್ಮನ್ನು ಎಂತಹ ಎತ್ತರಕ್ಕೂ ಒಯ್ಯಬಹುದಲ್ಲವೆ? ಅಡಿಕೆ ಕತ್ತರಿಯ ಬಳಕೆಯೂ ಅಂತಹ ಅರಿವನ್ನು, ಅನ್ವಯಿಸುವಿಕೆಯನ್ನು ನಿರೀಕ್ಷಿಸುತ್ತದಲ್ಲವೆ?


231. ನೆನಪುಗಳು - ಅಡುಗೆ (13/12/2020)


ಅಡುಗೆ ಮಾಡುವುದು ಒಂದು ಧ್ಯಾನಸ್ಥ ಸ್ಥಿತಿ. ಅದೂ ಪುರುಸೊತ್ತಿನಲ್ಲಿ ಅಡುಗೆ ಮಾಡುವುದೆಂದರೆ ಇನ್ನಷ್ಟು ಮೈಮರೆಯುವ ಹಾಗಾಗುತ್ತದೆ. ಎಲ್ಲಿಲ್ಲದ ಸೃಜನಶೀಲ ಪಾಕ ವಿಧಾನಗಳು ಕಣ್ಣ ಮುಂದೆ ಕುಣಿಯುತ್ತವೆ. ಪಾಕ ವಸ್ತುಗಳನ್ನು ಒಂದೊಂದಾಗಿ ಆಯ್ದು ತಯಾರಿ ಮಾಡುತ್ತಾ, ಪ್ರಮಾಣಬದ್ಧವಾಗಿ ಬೆರೆಸುತ್ತಾ ಖಾದ್ಯಗಳ ತಯಾರಿಯಲ್ಲಿ ನಮ್ಮನ್ನೇ ನಾವು ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಅರ್ಪಣಾಭಾವದ ಅನುಭವವನ್ನು ಪದಗಳಲ್ಲಿ ವಿವರಿಸಲಾಗುವುದಿಲ್ಲ.
ಅಡುಗೆ ಮಾಡಿ ಹಾಕಿದ್ದನ್ನು ಖುಷಿಯಿಂದ ಹೊಟ್ಟೆ ತುಂಬಾ ತಿನ್ನುವವರಿದ್ದರೆ ಅಡುಗೆ ಮಾಡಿ ಹಾಕಲಿಕ್ಕೆ ಖುಷಿ ಆಗುತ್ತದೆ. ಮಾಡಿದ ಅಡುಗೆಯ ಬಗ್ಗೆ ಯಾರಾದರೂ ಟೀಕೆ ಮಾಡಿದರೆ ಮೈ ಉರಿದು ಬಿಡುತ್ತದೆ. ಏಕೆಂದರೆ ಅಡುಗೆ ಮಾಡುವುದು ಬರೀ ಒಂದು ಕೆಲಸವಲ್ಲ, ಕಲೆಯಾಗಿದೆ!
ನನಗೆ ಅಡುಗೆ ಮಾಡುವುದೆಂದರೆ ಇಷ್ಟ. ಮನೆಗೆ ಯಾರಾದರೂ ಬರುತ್ತಾರೆಂದರೆ ಮನಸ್ಸು ಹೊಸ ಹೊಸ ಖಾದ್ಯಗಳನ್ನು ಮಾಡುವ ಬಗ್ಗೆ ಮಂಡಿಗೆ ತಿನ್ನಲು ಪ್ರಾರಂಭಿಸುತ್ತದೆ. ಬೆಳಗಿನ ತಿಂಡಿಯಲ್ಲಿ ಏನೇನು ವಿಶೇಷವಾದದ್ದನ್ನು ಮಾಡುವುದು ಹಾಗೂ ಎಷ್ಟೆಷ್ಟು ಮಾಡುವುದು ಎಂಬ ಲೆಕ್ಕಾಚಾರ ಮನಸ್ಸಿನಲ್ಲಿ ನಡೆಯುತ್ತದೆ. ಬೆಳಿಗ್ಗೆಯೇ ಅಡುಗೆ ಹಾಗೂ ತಿಂಡಿಯ ಕೆಲಸವನ್ನೆಲ್ಲ ಮುಗಿಸಿ ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹೋಗಬೇಕಾಗಿರುವ ಕಾರಣ ಈ ಲೆಕ್ಕಾಚಾರ. ಇದು ಖರ್ಚಿನ ಲೆಕ್ಕಾಚಾರವಲ್ಲ. ಸಮಯದ ಮಿತಿ ಕೆಲವೊಮ್ಮೆ ಅಡುಗೆ ಮಾಡುವ ಉತ್ಸಾಹಕ್ಕೆ ಭಂಗ ತರುವುದೂ ಇದೆ. ಏನೇ ಇರಲಿ ನಮ್ಮ ಪಾಡಿಗೆ ನಾವು ಯಾವುದೇ/ಯಾರದ್ದೇ ಒತ್ತಡವಿಲ್ಲದೆ ಅಡುಗೆ ಮಾಡುವಾಗ ಸಿಗುವ ತೃಪ್ತ ಮನಸ್ಥಿತಿ ಮತ್ತೆಲ್ಲೂ ಸಿಗಲಾರದು. ಮಾಡುವುದರಲ್ಲಿ, ಮಾಡಿದ್ದನ್ನು ಪ್ರೀತಿಯಿಂದ ಬಡಿಸಿ ಉಣಿಸುವುದರಲ್ಲಿ ಆತ್ಮತೃಪ್ತಿ ಸಿಗುತ್ತದೆ. ನನಗಂತೂ ಅಡುಗೆ ಮಾಡುವಾಗ ಸಿಗುವ ಕೆಲಸದಲ್ಲಿನ ತಾದಾತ್ಮ್ಯತೆ ಮತ್ತೆಲ್ಲೂ ಸಿಗುವುದಿಲ್ಲ.

ನನಗೆ ಯಾವ ಕೆಲಸವನ್ನೇ ಆಗಲಿ ಒಂದೇ ರೀತಿಯಲ್ಲಿ ಯಾಂತ್ರಿಕವಾಗಿ ಮಾಡುವುದೆಂದರೆ ಒಂದು ರೀತಿಯ ಬೋರ್ ಅನಿಸುತ್ತದೆ. ಮಾಡುವ ಕೆಲಸದಲ್ಲಿ ಯಾವಾಗಲೂ ಹೊಸತನ ಹುಡುಕುವವಳು ನಾನು. ಅಡುಗೆಯಲ್ಲೂ ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತೇನೆ. ಹೀಗಾಗಿ ನನ್ನ ಅಡುಗೆಯ ರುಚಿ ಒಂದು ಸಲ ಇದ್ದ ಹಾಗೆ ಇನ್ನೊಂದು ಸಲ ಇರುವುದಿಲ್ಲ. ಕೆಲವೊಮ್ಮೆ ಪ್ರಯೋಗಶೀಲತೆ ಜಾಸ್ತಿಯಾಗಿ ಮಾಡಿದ ಅಡುಗೆ ಹಾಳಾಗಿದ್ದೂ ಇದೆ. ಆದರೆ ಇದರಿಂದ ನಾನೆಂದೂ ಹತಾಶಳಾಗದೆ ನನ್ನ ಪ್ರಯೋಗಗಳನ್ನು ಇನ್ನೂ ಮುಂದುವರೆಸಿಕೊಂಡು ಬರುತ್ತಿದ್ದೇನೆ. ನನ್ನ ಪ್ರಯೋಗಗಳಿಗೆ 'ಬಲಿಪಶು'ಗಳು ಕೂಡಾ ಸಿಗುತ್ತಾರೆ ಎನ್ನುವುದು ಬಹು ವಿಶೇಷ 😀 ಹೊಸತನದ ಪ್ರಯೋಗಗಳನ್ನು ಕೊನೆಪಕ್ಷ ಅಡುಗೆಮನೆಯಲ್ಲಾದರೂ ಮಾಡಲು ಸಿಗುತ್ತಿರುವ ವಿಪುಲ ಅವಕಾಶವೆನ್ನುವುದು ನನ್ನ ಜೀವನಾಸಕ್ತಿಯನ್ನು ಇನ್ನೂ ತಾಜಾ ಸ್ಥಿತಿಯಲ್ಲಿಟ್ಟಿದೆ. ನನ್ನ ಹೊಸರುಚಿಯ ಪ್ರಯೋಗಗಳ ಖಾದ್ಯಗಳ ರುಚಿ ನೋಡ ಬಯಸುವವರಿಗೆ ಸದಾ ಸ್ವಾಗತವಿದೆ ☺️


230. ನೆನಪುಗಳು - ಕಾಗದದ ಆಟಿಕೆಗಳು (12/12/2020)


ಕಾಗದದ ತುಂಡೊಂದು ಬಾಲ್ಯದಲ್ಲಿ ನಮ್ಮ ಮುಂದೆ ಯಕ್ಷ ಲೋಕವನ್ನೇ ಸೃಷ್ಟಿಸುತ್ತಿತ್ತು. ಅದು ಒಮ್ಮೆ ಕಾಗದದ ದೋಣಿಯಾದರೆ ಇನ್ನೊಮ್ಮೆ ಕಾಗದದ ಅರಿಶಿನ ಕುಂಕುಮದ ಬಟ್ಟಲು ಮಗದೊಮ್ಮೆ ಕಾಗದದ ವಿಮಾನವಾಗಿ ಬದಲಾಗುತ್ತಿತ್ತು. ಅದು ಅಷ್ಟಕ್ಕೇ ನಿಲ್ಲದೆ ಆಕಾಶದಲ್ಲಿ ಹಾರಾಡುವ ಗಾಳಿಪಟವೂ ಆಗುತ್ತಿತ್ತು. ಆ ಕಾಗದದ ತುಂಡಿಗೆ ಅಷ್ಟೆಲ್ಲಾ ರೂಪಾಂತರಗೊಳ್ಳುವ ಶಕ್ತಿ ಇದೆಯೇ ಎಂದು ಒಮ್ಮೊಮ್ಮೆ ಆಶ್ಚರ್ಯವಾಗುತ್ತಿತ್ತು. ಕೇವಲ ಮಡಿಕೆಗಳ ಬದಲಾವಣೆಯಲ್ಲಿ ಆ ತುಂಡು ಬೇರೆ ಬೇರೆ ಆಕಾರಗಳನ್ನು ಪಡೆಯುತ್ತಿದ್ದದ್ದು ನಮ್ಮ ಚಿಣ್ಣರ ಲೋಕದ ಅದ್ಭುತ ಅನುಭವವಾಗಿತ್ತು. ಬೆರಗು ಕಣ್ಣುಗಳಿಂದ ಪ್ರಪಂಚವನ್ನು ನೋಡಲು ಪ್ರಾರಂಭಿಸಿದ್ದ ನಮಗೆ ಅದು ವಿಚಿತ್ರವಾಗಿ ಕಾಣಿಸುತ್ತಿತ್ತು. ನೋಡುವ ಕುತೂಹಲ ಹಾಗೂ ಕಲಿಯುವ ಆಸಕ್ತಿ ಎರಡೂ ಬೆಳೆಯುತ್ತಿತ್ತು.
ನಮ್ಮ ಬಾಲ್ಯದ ಕಾಲದಲ್ಲಿ ಈಗಿನಷ್ಟು ಆಟಿಕೆಗಳಿರಲಿಲ್ಲ. ನಾವೆಲ್ಲ ಹಳ್ಳಿಯ ಮಕ್ಕಳಾಗಿದ್ದ ಕಾರಣ ನಮಗೆ ಕಾಗದ ನಿರ್ಮಿತ ಯಕ್ಷಲೋಕವೇ ಜಗತ್ತಾಗಿತ್ತು. ಹಳೆಯ ದಿನಪತ್ರಿಕೆಗಳು, ಮ್ಯಾಗಝಿನ್ ಗಳು, ಹಳೆಯ ಪತ್ರಗಳೆಲ್ಲ ನಮ್ಮ ಕೈ ಸೇರಿ ರೂಪಾಂತರಗೊಳ್ಳುತ್ತಿದ್ದವು. ಆ ಕಾಗದದ ತುಂಡು ಕೆಲವೊಮ್ಮೆ ನಮ್ಮ ಪ್ರಯೋಗದ ಬಲಿಪಶು ಆಗುತ್ತಿತ್ತು ಕೂಡಾ😀
ಕಾಗದದ ದೋಣಿಯಲ್ಲೂ ಎರಡು-ಮೂರು ರೀತಿಯ ದೋಣಿಗಳನ್ನು ನಿರ್ಮಿಸುತ್ತಿದ್ದೆವು. ಅರಿಶಿನ ಕುಂಕುಮದ ಬಟ್ಟಲನ್ನು ಮಾಡಿ ನುಮ್ಮಣ್ಣಿಗೆ/ಮರಳಿಗೆ ಬಣ್ಣ ಬೆರೆಸಿ ಅದರೊಳಗೆ ತುಂಬಿ ಆಟವಾಡುತ್ತಿದ್ದೆವು. ಗಾಳಿಪಟವನ್ನು ತಯಾರಿಸುವುದಂತೂ ಬಹಳ ಸಂಭ್ರಮದ ಕೆಲಸ. ಅದಕ್ಕೆ ದೊಡ್ಡದಾದ ಕಾಗದ ಬೇಕಿತ್ತು. ಕಾಗದವನ್ನು ಸೂಕ್ತ ಆಕಾರದಲ್ಲಿ ಕತ್ತರಿಸಿ, ಹಿಡಿಕಡ್ಡಿಯನ್ನು ಬಾಗಿಸಿ ಅಂಟಿಸಿ, ಉದ್ದನೆಯ ಬಾಲ ಹಾಗೂ ರೆಕ್ಕೆಗಳನ್ನು ಅಂಟಿಸಿ, ಅದರ ನಡುವಣ ಕಡ್ಡಿಗೆ ದಾರವನ್ನು ಕಟ್ಟಿ, ಗಾಳಿಯ ವಿರುದ್ಧ ದಿಕ್ಕಿನಲ್ಲಿ ಓಡುತ್ತಾ ಓಡುತ್ತಾ ನಿಧಾನವಾಗಿ ದಾರವನ್ನು ಬಿಡುತ್ತಾ ಗಾಳಿಪಟವನ್ನು ಆಕಾಶದಲ್ಲಿ ಹಾರಿಸುವ ಸುಖವನ್ನು ಅನುಭವಿಸಿದವರೇ ಬಲ್ಲರು. ಅದನ್ನು ಆಕಾಶದೆತ್ತರಕ್ಕೆ ಹಾರಿಸುವುದು ಸುಲಭದ ಮಾತಾಗಿರಲಿಲ್ಲ. ಅದಕ್ಕಾಗಿ ಬಹಳ ಕಸರತ್ತು ಮಾಡಬೇಕಿತ್ತು!
ಕಾಗದದ ದೋಣಿಯನ್ನು ಮಳೆಗಾಲದಲ್ಲಿ ತೋಡಿನ ನೀರಿನಲ್ಲಿ ಬಿಟ್ಟು ಅದನ್ನು ಹಿಂಬಾಲಿಸಿಕೊಂಡು ಹೋಗುವ ಗಮ್ಮತ್ತೇ ಗಮ್ಮತ್ತು😜 ಚಳಿಗಾಲ/ಬೇಸಿಗೆಯ ಸಂಜೆಯ ಗಾಳಿಯಲ್ಲಿ ಖಾಲಿ ಗದ್ದೆಯಲ್ಲಿ ಅಥವಾ ಬಯಲಿನಲ್ಲಿ ಗಾಳಿಪಟ ಹಾರಿಸುವ ಮೋಜೇ ಬೇರೆ! ಯಾರ ಗಾಳಿಪಟ ಹೆಚ್ಚು ಎತ್ತರಕ್ಕೆ ಹಾರುತ್ತದೆ ಎಂದು ನೋಡುತ್ತಾ ದಾರವನ್ನು ಜಗ್ಗಿ ಗಾಳಿಪಟದ ವೇಗವನ್ನು ಹೆಚ್ಚಿಸುತ್ತಾ ಅದು ಎತ್ತರೆತ್ತರಕ್ಕೆ ಹೋಗುವ ಹಾಗೆ ಮಾಡುವ ಪ್ರಯತ್ನದಲ್ಲಿ ಯಶಸ್ಸು ಸಿಕ್ಕಾಗ ನಿಧಿ ಸಿಕ್ಕಷ್ಟು ಸಂಭ್ರಮ. ಅಂತಹ ಆಟಗಳು, ಮುಗ್ಧ ಮನಸ್ಸಿನ ನೋಟಗಳು ಎಷ್ಟು ಚೆಂದ!
ಕಾಗದದ ತುಂಡೊಂದು ನಮ್ಮ ಬಾಲ್ಯವನ್ನು ಅಷ್ಟೆಲ್ಲಾ ರೀತಿಯಲ್ಲಿ ಹಸನಾಗಿಸಿದ ಮತ್ತು ಭವ್ಯವಾಗಿಸಿದ ಪರಿಯನ್ನು ನೆನೆಸಿಕೊಂಡರೆ ಮನ ಮುದಗೊಳ್ಳುತ್ತದಲ್ಲವೆ?


229. ಪರಿಸರ - ಹೊಸ ನಾಯಿಗಳು (11/12/2020)


ನಮ್ಮಲ್ಲಿಗೆ ಇನ್ನೂ ಇಬ್ಬರು ಹೊಸ ಸದಸ್ಯರ ಪ್ರವೇಶವಾಗಿದೆ. ಒಂದು ಸ್ವಲ್ಪ ತಿಳಿಯಾದ ಕಂದು ಮಿಶ್ರಿತ ಬಿಳಿ ನಾಯಿ ಹಾಗೂ ಇನ್ನೊಂದು ಮುಖದಲ್ಲಿ ಕಂದು ಪ್ಯಾಚ್ ಗಳಿರುವ ಕಪ್ಪು ಬಣ್ಣದ ನಾಯಿ. ಅದರ ತಾಯಿ ಹಾಕಿದ ಒಂಬತ್ತು ಮರಿಗಳಲ್ಲಿ ಇವೆರಡು ಗಂಡು ಮರಿಗಳನ್ನು ನಾವು ನಮ್ಮಲ್ಲಿಗೆ ತಂದೆವು. ಇನ್ನೂ ಒಂದು ತಿಂಗಳು ತುಂಬುತ್ತಿದ್ದ ಮರಿಗಳು ಬರೀ ತಾಯಿಯ ಹಾಲನ್ನು ಅವಲಂಬಿಸಿದ್ದ ಕಾರಣ ತಾಯಿ ನಾಯಿ ಮರಿಗಳಿಗೆ ಹಾಲೂಡಿಸಿ ಬಾಡಿ ಬಸವಳಿದಿತ್ತು. ನಾಯಿ ಪ್ರೇಮಿಯೊಬ್ಬರ ಮನೆಯ ಕಾಂಪೌಂಡಿನ ಒಳಗೆ ಅದು ಮರಿ ಹಾಕಿತ್ತು. ರವಿಯ ಕಸಿನ್ ರಂಜನಾಳ ಮೂಲಕ ಮರಿಗಳು ನಮಗೆ ಲಭಿಸಿದವು.
ಮರಿಗಳನ್ನು ಮನೆಗೆ ಕರೆ ತಂದಿದ್ದು ಒಂಬತ್ತನೇ ತಾರೀಕಿನ ಸಾಯಂಕಾಲ. ಸಂಜೆ ಸುಮಾರು ಆರು ಗಂಟೆಯ ಹೊತ್ತಿಗೆ ಮರಿಗಳೊಡನೆ ಕ್ಯಾಂಪಸ್ಸಿನಲ್ಲಿ ನಮ್ಮ ಪ್ರವೇಶವಾಯಿತು. ಸರಿಯಾದ ದೇಖಾರೇಖಿ ಇಲ್ಲದ ಕಾರಣ ಮರಿಗಳ ಮೈಯ್ಯಲ್ಲಿ ಚಿಗಟಗಳು ತುಂಬಿಕೊಂಡಿದ್ದವು. ಅಜಯ್ ಅವುಗಳಿಗೆ ಗೂಡಿನಲ್ಲಿ ಮಲಗಲು ಒಂದು ಟಯರ್ ವ್ಯವಸ್ಥೆ ಮಾಡಿದ. ಶಂಕರಿ ಅವುಗಳಿಗೆ ಹಾಲನ್ನ ಕೊಟ್ಟು, ಮೈಗೆಲ್ಲ ನೋಟಿಕ್ಸ್ ಪೌಡರ್ ಹಾಕಿ, ಟಯರ್ ನೊಳಗೆ ದಪ್ಪನೆಯ ಬಟ್ಟೆ ಹಾಕಿ ಮಲಗಲು ಸುಪ್ಪತ್ತಿಗೆಯನ್ನು ರೆಡಿ ಮಾಡಿದಳು. ಮಾರನೆಯ ದಿವಸ ಬೆಳಿಗ್ಗೆ ಅವುಗಳಿಗೆ ಶಾಸ್ತ್ರೋಕ್ತವಾಗಿ ಸ್ನಾನ ಮಾಡಿಸಿ ಮತ್ತೊಮ್ಮೆ ನೋಟಿಕ್ಸ್ ಪೌಡರ್ ಹಾಕಿ ಹಳೆಯ ಸ್ವೆಟರಿನೊಳಗೆ ಸುತ್ತಿ ಬೆಚ್ಚಗೆ ಮಲಗಿಸಿ ಆ ಎರಡೂ ಮರಿಗಳು ಶುಭ್ರವಾಗುವ ಹಾಗೆ ಮಾಡಲಾಯಿತು. ಕಪ್ಪನೆಯ ಮರಿಗೆ "ಪೀಕು" ಹಾಗೂ ಬೆಳ್ಳನೆಯ ಮರಿಗೆ "ಡಾಕು" ಎಂದು ನಾಮಕರಣ ಮಾಡಲಾಯಿತು☺️ ಸದ್ಯಕ್ಕೆ ಅವುಗಳ ಸ್ವಭಾವ, ಗುಣದೋಷಗಳನ್ನು ಗಮನಿಸಲಾಗಿಲ್ಲ. ಸುಕ್ಕು, ಭಾಮಾ ಹಾಗೂ ಮರಿಗಳೆರಡೂ ಚೆನ್ನಾಗಿ ಹೊಂದಿಕೊಂಡು, ಆಟವಾಡುತ್ತಾ ಖುಷಿಯಾಗಿವೆ. ನೋಡುವ ನಾವುಗಳು ಕೂಡಾ ಸಂತೋಷದಲ್ಲಿದ್ದೇವೆ. ಖಾಲಿಯಾಗಿದ್ದ ಗೂಡುಗಳು ಮತ್ತೆ ತುಂಬಿವೆ. ಪುಟಾಣಿ ಮರಿಗಳ ಆಟೋಟ ಮನಸ್ಸಿಗೆ ಮುದ ಕೊಡುತ್ತಿದೆ. ಅವುಗಳ ಬೆಳವಣಿಗೆ ನೋಡುತ್ತಾ ಸಮಯ ಕಳೆಯುವುದು ನಮ್ಮ ದಿನಚರಿಯ ಒಂದು ಭಾಗವಾಗಿದೆ.
ಒಮ್ಮೆ ಸಾಕು ಪ್ರಾಣಿಗಳ ಬಗ್ಗೆ ಕಕ್ಕುಲತೆ ಬೆಳೆದರೆ ಅವಿಲ್ಲದೆ ನಮ್ಮ ಜೀವನವಿಲ್ಲ ಎಂದೆನಿಸಿ ಬಿಡುತ್ತದೆ. ಅವು ನಮಗರಿವಿಲ್ಲದೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಬಿಡುತ್ತವೆ. ಅದು ಹೇಗೋ ಅವು ನಮ್ಮ ಮನೆಯ ಸದಸ್ಯತ್ವ ಪಡೆದು ಬಿಟ್ಟಿರುತ್ತವೆ🤔 ದಿನಕ್ಕೊಮ್ಮೆ ಅವುಗಳನ್ನು ಮಾತನಾಡಿಸದಿದ್ದರೆ ಉಂಡ ಅನ್ನ ಜೀರ್ಣವಾಗುವುದಿಲ್ಲ ಎಂದೆನಿಸುತ್ತದೆ. ಸಾಕುಪ್ರಾಣಿಗಳು ನಮ್ಮ ಮನಸ್ಸನ್ನು ಅವುಗಳ ಬೇಷರತ್ತಿನ ಪ್ರೀತಿಯಿಂದ ಗೆದ್ದು ಬಿಟ್ಟಿರುತ್ತವೆ. ಪ್ರಾಣಿ ಪ್ರೇಮ ಎನ್ನುವುದು ನಮ್ಮ ಜೀವನಾಸಕ್ತಿಯನ್ನು ಜೀವಂತವಾಗಿಡುತ್ತದೆ ಎನ್ನುವುದು ಎಲ್ಲರೂ ಒಪ್ಪುವ ವಿಷಯ ತಾನೆ?


228 .ಪರಿಸರ - ಸೆಗಣಿ (10/12/2020)

ಸೆಗಣಿಯ ಉಪಯುಕ್ತತೆ, ಸೆಗಣಿಯ ಪಾತ್ರ ನಮ್ಮ ದಿನನಿತ್ಯದ ಜೀವನದಲ್ಲಿ ಹಿಂದೆ ಎಷ್ಟಿತ್ತು ಹಾಗೂ ಈಗ ಎಷ್ಟಿದೆ ಎನ್ನುವ ವಿಷಯದ ಬಗ್ಗೆ ಅವಲೋಕಿಸುವ ಯತ್ನವನ್ನಿಲ್ಲಿ ಮಾಡುತ್ತಿದ್ದೇನೆ.
ಸೆಗಣಿಯಲ್ಲಿ ಎರಡು ವಿಧ - ದನ ಮತ್ತು ಎಮ್ಮೆಯ ಸೆಗಣಿ. ದನದ ಸೆಗಣಿಯಾದರೆ ಸ್ವಲ್ಪ ಪಾಚಿ ಹಸಿರಿನ ಬಣ್ಣದ್ದಾಗಿರುತ್ತದೆ. ಎಮ್ಮೆ ಸೆಗಣಿ ಸ್ವಲ್ಪ ಮಬ್ಬಾದ ಕಪ್ಪು ಬಣ್ಣದ್ದಾಗಿರುತ್ತದೆ. ಸೆಗಣಿಯ ಬಣ್ಣ ಹೆಚ್ಚಾಗಿ ಪಶುಗಳು ತಿಂದ ಆಹಾರವನ್ನು ಅವಲಂಬಿಸಿರುತ್ತದೆ.
ಎಮ್ಮೆ ಸೆಗಣಿ ಸ್ವಲ್ಪ ನೀರಾಗಿದ್ದರೆ ದನದ ಸೆಗಣಿ ಸ್ವಲ್ಪ ಗಟ್ಟಿಯಾಗಿ ಮುದ್ದೆಯಾಗಿರುತ್ತದೆ. ದನ ಸೆಗಣಿ ಹಾಕಿದಾಗ ಒಂದು ಮುದ್ದೆಯ ರೀತಿಯಲ್ಲಿ ಬಿದ್ದರೆ ಎಮ್ಮೆ ಸೆಗಣಿ ಪಚಪಚ ಎಂದು ಬೀಳುತ್ತದೆ. ಕರುಗಳ ಸೆಗಣಿ ಕುರುಣೆಯ ತರಹ ಇರುತ್ತದೆ. ಎಮ್ಮೆ ಸೆಗಣಿಗಿಂತ ದನದ ಸೆಗಣಿಗೆ ಶುಭ ಕಾರ್ಯಗಳಲ್ಲಿ ಪ್ರಾಶಸ್ತ್ಯ ಹೆಚ್ಚು. ಸೆಗಣಿ ಬಹೂಪಯೋಗಿ.
ನಾನು ಚಿಕ್ಕವಳಿದ್ದಾಗ ನನ್ನ ಸೋದರತ್ತೆ ಬೆರಣಿ ಮಾಡುವುದನ್ನು ನೋಡಿದ್ದೇನೆ. ಸೆಗಣಿಗೆ ಸ್ವಲ್ಪ ಪ್ರಮಾಣದಲ್ಲಿ ಬತ್ತದ ಹೊಟ್ಟು ಬೆರೆಸಿ ಅದನ್ನು ಕೊಟ್ಟಿಗೆಯ ಹಿಂದಣ ಹೊರಗಿನ ಗೋಡೆಗೆ ಅವರು ರೊಟ್ಟಿಯಂತೆ ತಟ್ಟಿ ಒಣಗಿಸುತ್ತಿದ್ದರು. ಅದನ್ನು ಉರುವಲಾಗಿ ಬಳಸಲಾಗುತ್ತಿತ್ತು. ಚಿಕ್ಕವರಾಗಿದ್ದ ನಮಗೆ ಅವೆಲ್ಲ ಕೌತುಕದ ಸಂಗತಿಯಾಗಿದ್ದವು.
ಹಿಂದೆ ಸಿಮೆಂಟಿನ ನೆಲವಿಲ್ಲದಾಗ ಮಣ್ಣಿನ ನೆಲಕ್ಕೆ ಸೆಗಣಿ ಹಾಕಿ ಸಾರಿಸುತ್ತಿದ್ದರು. ಇತ್ತೀಚಿನ ಕೆಲವು ವರ್ಷಗಳ ಹಿಂದಿನ ತನಕ ಮನೆಯ ಮುಂಬಾಗಿಲ ಅಂಗಳಕ್ಕೆ ಸೆಗಣಿ ಹಾಕಿ ಸಾರಿಸುತ್ತಿದ್ದ ನೆನಪು ನನಗಿದೆ. ಸೆಗಣಿ ಹಾಕಿ ಸಾರಿಸಿದಾಗ ಬರುವ ನೆಲದ ಕಂಪು ಹಿತವಾಗಿರುತ್ತದೆ. ಈಗಲೂ ಕೂಡ ನನ್ನ ಗಂಡನ ಮನೆಯಲ್ಲಿ ಊಟವಾದ ಮೇಲೆ ನೆಲಕ್ಕೆ ಸ್ವಲ್ಪ ಸೆಗಣಿ(ಗೋಮಯ) ಹಾಕಿ ನೆಲ ಸಾರಿಸುತ್ತಾರೆ. ಸೆಗಣಿ ಶುದ್ಧಕವಾಗಿ ಕೆಲಸ ಮಾಡುತ್ತದೆಂಬ ಕಾರಣಕ್ಕೆ ಆ ರೀತಿ ಅದರ ಬಳಕೆ!
ನಾನು ಚಿಕ್ಕವಳಿದ್ದಾಗ ಗುಲಾಬಿ ಗಿಡ ನೆಟ್ಟು ಅದರ ತುದಿಗೆ ಸೆಗಣಿಯ ಉಂಡೆ ಮಾಡಿ ಸಿಗಿಸುತ್ತಿದ್ದೆ. ಹಾಗೆ ಮಾಡಿದಲ್ಲಿ ಗಿಡ ಬೇಗನೆ ಚಿಗುರುತ್ತದೆ ಎಂದು ಯಾರೋ ನೀಡಿದ ಸಲಹೆ ಅದಾಗಿತ್ತು. ಅದೇನೆ ಇರಲಿ, ಗಿಡದ ಬುಡಕ್ಕೆ ಸೆಗಣಿ ಹಾಕಿದರೆ ಒಳ್ಳೆಯ ಗೊಬ್ಬರವಾಗುವುದಂತೂ ನಿಜ. ನಮ್ಮ ಶಂಕರಿಯಂತೂ ಸಂಜೆ ಹೊತ್ತು ಒಂದು ಬಕೆಟ್ ಹಿಡಿದುಕೊಂಡು ಸೆಗಣಿ ಒಟ್ಟು ಮಾಡಲು ಹೊರಟು ಬಿಡುತ್ತಾಳೆ ಅವಳ ಹೂತೋಟಕ್ಕಾಗಿ!
ನನ್ನಲ್ಲಿ ಸದಾ ಹಸುರಾಗಿರುವುದು ನಮ್ಮ ಆಡಿಟೋರಿಯಂ ಗೆ ಸೆಗಣಿ ಹಾಕಿ ಸಾರಿಸುತ್ತಿದ್ದ ದಿನಗಳು. ನಮ್ಮ ಈಗಿನ ಆಡಿಟೋರಿಯಂ ತಯಾರಾಗುವ ಮೊದಲು ಹೊಂಗಿರಣೋತ್ಸವದ ಸಂದರ್ಭದಲ್ಲಿ ನಮ್ಮ ಆಡಿಟೋರಿಯಂ ಇರುವ ಅಷ್ಟೂ ಜಾಗಕ್ಕೂ ರವಿಯ ನೇತೃತ್ವದಲ್ಲಿ ಮಕ್ಕಳು, ಟೀಚರ್ಸ್ ಎಲ್ಲಾ ಸೇರಿ ನೆಲಕ್ಕೆ ಸೆಗಣಿ ಹಾಕಿ ಸಾರಿಸುತ್ತಿದ್ದರು. ಅದೊಂದು ಸಂಭ್ರಮದ ಕೆಲಸವಾಗಿತ್ತಾಗ! ಸ್ಟೇಜಿನ ಧೂಳನ್ನು ನಿಯಂತ್ರಿಸಲು ಅದಕ್ಕೂ ಸೆಗಣಿ ಹಾಕಿ ಸಾರಿಸುತ್ತಿದ್ದೆವು.

ಸೆಗಣಿಯ ಫಲವತ್ತತೆ, ಶುದ್ಧಕ ಗುಣ, ಧೂಳನ್ನು ನಿಯಂತ್ರಿಸುವ ತಾಕತ್ತು, ಸೋಂಕು ನಿವಾರಕ ಗುಣಗಳಿಂದಾಗಿ ಅದನ್ನು ಹಿಂದೆ ನಮ್ಮ ದಿನನಿತ್ಯದ ಆವಶ್ಯಕ ವಸ್ತುವಾಗಿಸಿದ್ದರಲ್ಲಿ ಅನುಮಾನವೇ ಇಲ್ಲ. ನಮ್ಮ ಹಿರಿಯರು ಅದರ ಮಹತ್ವವನ್ನರಿತೇ ಅದಕ್ಕೆ ಶ್ರೇಷ್ಠ ಸ್ಥಾನ ಕೊಟ್ಟಿದ್ದಾರಲ್ಲವೆ?!


227. ಪರಿಸರ - ನಾಯಿ "ಸುಕ್ಕು"(9/12/2020)
ನಮ್ಮ ಮನೆಗೀಗ ಹೊಸ ಸದಸ್ಯನೊಂದು ಬಂದಿದೆ. ಖಾಲಿಯಾದ ನಾಯಿ ಗೂಡುಗಳನ್ನು ನೋಡಲಾಗದೆ, ಬದುಕಿ ಉಳಿದಿರುವ ಭಾಮಾನ ಖಿನ್ನತೆ ಸಹಿಸಲಾರದೆ, ಡಿಂಗನ ರಗಳೆ ತಡೆಯಲಾಗದೆ ನನ್ನ ಸ್ನೇಹಿತರಾದ ಬಾನಿಯವರ ಮನೆಯಲ್ಲಿದ್ದ ಊರುನಾಯಿಯ ಎರಡು ತಿಂಗಳ ಹೆಣ್ಣು ಮರಿಯೊಂದನ್ನು ರಾತ್ರೋರಾತ್ರಿ ತರಲಾಯಿತು. ಇಷ್ಟು ಕಾಲ ನಮ್ಮಲ್ಲಿ ಹೆಚ್ಚಾಗಿ ಇದ್ದದ್ದು ಜಾತಿನಾಯಿಗಳು. ಅವುಗಳ ಮಧ್ಯೆ ಬಾಂಡು, ಬಿಲ್ಲ, ಸುಬ್ಬಿಯಂತಹ ಬಹಳ ಆಪ್ತ ಸ್ವಭಾವದ ಊರುನಾಯಿಗಳೂ ಇದ್ದು ಹೋಗಿದ್ದಾವೆ. ಈಗ ತಂದ ಮರಿಯಲ್ಲಿ ಅಂತಹುದೇ ಬೇಷರತ್ತಿನ ಪ್ರೀತಿ ಇರುವುದು ಕಾಣುತ್ತಿದೆ.
ಮಣ್ಣು ಬಣ್ಣದ, ಮೈ ತುಂಬಾ ಕಂದು ಬಿಳಿ ಬಣ್ಣದ ತೇಪೆಗಳಿರುವ ಪುಟಾಣಿ ಚೂಪನೆಯ ಮುಖದ, ಕಾಡಿಗೆ ಹಚ್ಚಿದಂತಹ ಕಣ್ಣುಗಳಿರುವ ಹಾಗೂ ನೆರಿಗೆ ಬೀಳುವ ಮೈಯಿರುವ ಮರಿಗೆ "ಸುಕ್ಕು" ಎಂದು ನಾಮಕರಣ ಮಾಡಲಾಗಿದೆ🙂
ಭಾಮಾ ಮತ್ತು ಸುಕ್ಕು ಈಗಾಗಲೇ ಸ್ನೇಹಿತರಾಗಿ ಬಿಟ್ಟಿದ್ದಾರೆ. ಡಿಂಗನ ಸಡಗರಕ್ಕಂತೂ ಮಿತಿಯೇ ಇಲ್ಲ. ಒಂದೇ ದಿನಕ್ಕೆ ಸುಕ್ಕು ಮನೆಯ ಅಂಗಳ ಹಾಗೂ ಕೈತೋಟದ ತುಂಬಾ ತಿರುಗಾಡುತ್ತಾ ಕಿತಾಪತಿ ಮಾಡತೊಡಗಿದೆ. ಶಂಕರಿ ಅದಕ್ಕೆ ಮಧ್ಯಾಹ್ನ ಸ್ನಾನ ಮಾಡಿಸಿ ನೋಟಿಕ್ಸ್ ಪೌಡರ್ ಹಾಕಿ ಬಟ್ಟೆಯಲ್ಲಿ ಸುತ್ತಿ ಅದಕ್ಕಾಗಿ ಇಟ್ಟಿರುವ ದಿಂಬಿನ ಮೇಲೆ ಬೆಚ್ಚಗೆ ಮಲಗಿಸಿ ಖುಷಿ ಪಟ್ಟಿದ್ದಾಳೆ. ವೆಟರಿನರಿ ಡಾಕ್ಟರ್ ಆಗಿರುವ ನನ್ನ ಶಿಷ್ಯ ಡಾ. ಕೆ. ಎಂ. ಸುನಿಲ್ ಅದಕ್ಕೆ ವ್ಯಾಕ್ಸಿನೇಷನ್ ಮಾಡಿ ನಾಯಿ ಸಾಕುವ ಬಗ್ಗೆ ಒಂದಿಷ್ಟು ಒಳ್ಳೆಯ ಮಾಹಿತಿ ಕೊಟ್ಟಿದ್ದಾನೆ. ಎಲ್ಲವೂ ಒಂದರ ಹಿಂದೊಂದರಂತೆ ಸರಾಗವಾಗಿ ಆಗಿಬಿಟ್ಟಿದೆ.
ಭಾನುವಾರದಂದು ಬುಜ್ಜಿಯ ಅನಿರೀಕ್ಷಿತ ಮರಣದಿಂದ ಕಾಡುತ್ತಿದ್ದ ಖಾಲಿತನವನ್ನು ಸುಕ್ಕು ತನ್ನ ಉಪಸ್ಥಿತಿಯಿಂದ ತುಂಬುತ್ತಿದೆ. ಮೈಮೇಲೆ ಅದನ್ನಿರಿಸಿಕೊಂಡಾಗ ಅದು ನಮ್ಮ ಮೈಯ್ಯ ಬಿಸುಪನ್ನು ಅನುಭವಿಸುತ್ತಾ ಹಿತವಾಗಿ ಕಣ್ಣು ಮುಚ್ಚಿ ನಮ್ಮ ಮೈಗೊರಗಿ ಮಲಗುವುದು ತುಂಬಾ ಆಪ್ಯಾಯಮಾನ ಭಾವ ಮೂಡಿಸುತ್ತಿದೆ. ಒಂದು ಮಗುವನ್ನು ಹಿಡಿದು ಮುದ್ದಿಸುವಾಗ ಸಿಗುವಂತಹ ಖುಷಿ ಸುಕ್ಕುವನ್ನು ಹಿಡಿದು ಮುದ್ದಿಸುವಾಗ ಸಿಗುತ್ತಿದೆ. ಸುಕ್ಕುವಿನ ಮುಂದಿನ ಬೆಳವಣಿಗೆಗೆ ಬೇಕಾದ ವ್ಯವಸ್ಥೆ ಒದಗಿಸುವ ಜವಾಬ್ದಾರಿ ನಮ್ಮ ಮೇಲಿದೆ.
ಕಳಕೊಂಡ ಒಂದು ಪ್ರಾಣಿಯ ಬದಲು ಇನ್ನೊಂದು ಪ್ರಾಣಿಯ ಬದಲಿ ವ್ಯವಸ್ಥೆ ಬಹಳ ಬೇಗ ಆಗಿಬಿಡುತ್ತದೆ. ಕಳಕೊಂಡಿದ್ದರ ಬಗ್ಗೆ ನೋವಿದ್ದರೂ ಹೊಸದರ ಆಟೋಟಗಳು ಆ ನೋವನ್ನು ಕುಂಠಿತಗೊಳಿಸುವುದಂತೂ ನಿಜ. ಈ ಬದಲಾವಣೆಗೆ ನಾವೂ ಅಷ್ಟೇ ಶೀಘ್ರವಾಗಿ ಹೇಗೆ ಹೊಂದಿಕೊಂಡು ಬಿಡುತ್ತೇವೆ ಎನ್ನುವುದು ಆಲೋಚಿಸಿ ಅವಲೋಕಿಸಬೇಕಾದ ವಿಚಾರ ತಾನೆ?!


226.ನೆನಪುಗಳು - ಗೋಳಿಬಜೆ (8/12/2020)


ನನ್ನ ತವರೂರು ಗೋಳಿಬಜೆಗೆ ಪ್ರಸಿದ್ಧಿ ಪಡೆದಿದೆ. ಯಾವುದೇ ಹೋಟೆಲಿಗೆ ಹೋದರೂ ಗೋಳಿಬಜೆ ಸಿಕ್ಕೇ ಸಿಗುತ್ತದೆ. ಚಟ್ನಿ ಜೊತೆ ಗೋಳಿಬಜೆ ತಿನ್ನಲು ಬಹಳ ಸೊಗಸಾಗಿರುತ್ತದೆ.
ಸ್ಪಂಜಿನಂತೆ ಮೃದುವಾಗಿರುವ ಗೋಳಿಬಜೆಯನ್ನು ಮೈದಾಹಿಟ್ಟು ಹಾಗೂ ಮೊಸರಿನಿಂದ ಮಾಡುತ್ತಾರೆ. ಮೈದಾಹಿಟ್ಟಿಗೆ ಶುಂಠಿ ತುರಿ, ಹಸಿಮೆಣಸು, ಕರಿಬೇವು, ಕುತ್ತುಂಬರಿ ಸೊಪ್ಪು, ಉಪ್ಪು ಸೇರಿಸಿ ಮೊಸರಿನೊಂದಿಗೆ ಬೆರೆಸಿ ಸ್ವಲ್ಪ ಹೊತ್ತು ಹಾಗೆಯೇ ಇಟ್ಟು ಕುದಿಯುವ ಎಣ್ಣೆಯಲ್ಲಿ ಬಿಟ್ಟು ಕರಿದರೆ ಗೋಳಿಬಜೆ ಸಿದ್ಧ. ಕೆಲವರು ಅದಕ್ಕೆ ಕಾಯಿ ಚೂರುಗಳನ್ನು ಕೂಡಾ ಸೇರಿಸುತ್ತಾರೆ. ಬಿಸಿಬಿಸಿ ಗೋಳಿಬಜೆಯನ್ನು ಕಾಯಿ ಚಟ್ನಿಯೊಂದಿಗೆ ತಿನ್ನಲು ಬಲು ಸೊಗಸು! ಅದರೊಂದಿಗೆ ಒಂದು ಲೋಟ ಬಿಸಿ ಚಹಾ ಇದ್ದರಂತೂ ಸ್ವರ್ಗಕ್ಕೆ ಮೂರೇ ಗೇಣು😀
ನಾನು ಕರಿದ ತಿಂಡಿಗಳನ್ನು ಮಾಡುವುದು ಕಡಿಮೆ. ಆದರೂ ಒಂದೆರಡು ಬಾರಿ ಗೋಳಿಬಜೆ ಮಾಡಲು ಪ್ರಯತ್ನಿಸಿದ್ದೆ. ಒಮ್ಮೆ ಮೊಸರು ಹುಳಿಯಾದದ್ದು ಜಾಸ್ತಿಯಾಗಿ ಹುಳಿ ಹುಳಿ ಗೋಳಿಬಜೆ ತಿನ್ನುವಂತಾಯಿತು. ಇನ್ನೊಮ್ಮೆ ಕಲೆಸಿದ ಹಿಟ್ಟು ಸ್ವಲ್ಪ ನೀರಾಗಿ ಗೋಳಿಬಜೆ ಉರುಟುರುಟಾಗದೆ ಚಟ್ಟೆಯಾದ ಬಜೆಯಾಗಿತ್ತು. ಆದರೆ ರುಚಿ ಚೆನ್ನಾಗಿತ್ತು. ಹಿಟ್ಟು ನೀರಾಗಿದ್ದ ಕಾರಣ ಬಜೆ ಎಣ್ಣೆ ಜಾಸ್ತಿ ಕುಡಿದಿತ್ತು. ಎರಡು ಬಾರಿಯ ವಿಫಲತೆಯಿಂದಾಗಿ ನಂತರದಲ್ಲಿ ಗೋಳಿಬಜೆ ಮಾಡುವ ಕಾರ್ಯಕ್ರಮ ನಿಲ್ಲಿಸಿದೆ.
ಎಣ್ಣೆಯಲ್ಲಿ ಕರಿದ ತಿಂಡಿ ತಿನ್ನಲು ರುಚಿ. ಬೋಂಡಾ, ಬಜ್ಜಿ, ಬಜೆ, ಚಕ್ಕುಲಿ, ಕೋಡುಬಳೆ, ಮುರುಕು, ಖಾರದಕಡ್ಡಿ...ಎಲ್ಲವೂ ತಿಂದಷ್ಟು ತಿನ್ನಬೇಕೆನಿಸುವ ಖಾದ್ಯಗಳು. ಉಡುಪಿ, ಮಂಗಳೂರಿನ ಕಡೆಯ ಯಾವುದೇ ಹೋಟೆಲಿಗೆ ಹೋದರೂ "ತಿನ್ನಲಿಕ್ಕೆ ಏನುಂಟು?" ಎಂದು ವಿಚಾರಿಸಿದರೆ ತಿಂಡಿಯ ಪಟ್ಟಿಯಲ್ಲಿ ಬರುವ ಒಂದು ಹೆಸರು 'ಗೋಳಿಬಜೆ'. ಒಂದು ಪ್ಲೇಟ್ ಬಜೆ ಆರ್ಡರ್ ಮಾಡಿದರೆ ಅದರಲ್ಲಿ ನಾಲ್ಕು ಬಜೆ ಇರುತ್ತದೆ. ನಾವೆಲ್ಲ ಚಿಕ್ಕವರಿದ್ದಾಗ ಆ ನಾಲ್ಕು ಬಜೆಗಳು ನಮ್ಮ ಹೊಟ್ಟೆಯ ಯಾವ ಮೂಲೆಗೂ ಸಾಲುತ್ತಿರಲಿಲ್ಲ. ಹೀಗಾಗಿ ಎರಡು ಮೂರು ಪ್ಲೇಟ್ ಗೋಳಿಬಜೆಯನ್ನು ನಾವು ಒಬ್ಬೊಬ್ಬರೆ ತಿಂದು ಅಪ್ಪನ ಜೇಬಿಗೆ ಕತ್ತರಿ ಹಾಕುತ್ತಿದ್ದೆವು. ಈಗ ಒಂದು ಪ್ಲೇಟ್ ಗೋಳಿಬಜೆ ತಿನ್ನುವುದು ಕೂಡಾ ಕಷ್ಟ. ಒಂದು ಗೋಳಿಬಜೆ ತಿಂದರು ಕೂಡಾ ಬಹಳಷ್ಟು ಗೋಳಿಬಜೆಗಳನ್ನು ತಿಂದಷ್ಟು ತೃಪ್ತಿ ಇರುತ್ತದೆ.

ಹದವಾಗಿ ಕರಿದ ಬಂಗಾರದ ಬಣ್ಣದ ದುಂಡಗಿನ ಗೋಳಿಬಜೆ ತಿನ್ನಲು ಎಷ್ಟು ರುಚಿಯೋ ನೋಡಲು ಅಷ್ಟೇ ಚೆಂದ. ಅದನ್ನು ನೋಡಿದ ಕೂಡಲೆ ತಿನ್ನಬೇಕೆಂದು ಮನ ಬಯಸುವಂತಿರುತ್ತದೆ. ನೋಡುಗರ ಮನ ಕದ್ದು ಅವರನ್ನು ತಿನ್ನುಗರನ್ನಾಗಿಸುವ ಗೋಳಿಬಜೆಯನ್ನು ಈಗಾಗಲೇ ತಿಂದು ನೋಡಿರುವಿರಾ?


225.ಪರಿಸರ - ಬುಜ್ಜಿ ನಾಯಿ (7/12/2020)

ನಿನ್ನೆ ಬೆಳಿಗ್ಗೆ ಬುಜ್ಜಿಯೂ ಹೋಯಿತು. ಖಾಲಿಯಾಗುತ್ತಿರುವ ನಾಯಿ ಗೂಡುಗಳನ್ನು ನೋಡಿದರೆ ಸಂಕಟವಾಗುತ್ತದೆ. ಒಂದರ ಹಿಂದೊಂದು ಒಂದರಂತೆ ನಾವು ಪ್ರೀತಿಯಿಂದ ಸಾಕಿದ ನಾಯಿಗಳೆಲ್ಲ ಗತಪ್ರಾಣವಾಗುತ್ತಿರುವುದು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತಿರುವ ವಿಷಯ. ಸಾವು ನಮಗೇನು ಅಪರಿಚಿತವಾದದ್ದಲ್ಲ. ಆದರೆ ಸುಧಾರಿಸಿಕೊಳ್ಳಲು ಬಿಡದೆ ಒಂದರ ಮೇಲೊಂದರಂತೆ ಬೀಳುತ್ತಿರುವ ಈ ಹೊಡೆತವನ್ನು ಅರಗಿಸಿಕೊಳ್ಳಲು ಕಷ್ಟವಾಗಿದೆ.
ಬುಜ್ಜಿಗೆ ಈಗ ಒಂಭತ್ತರ ಹರಯ. ನಮ್ಮ ಡಾಬರ್ಮನ್ ಬಂಪಿಯ ಮೂರು ಮರಿಗಳನ್ನು ಕೊಟ್ಟು ಬದಲಿಗೆ ಪಡಕೊಂಡ ಮರಿ ಬುಜ್ಜಿ. ಒಂದು ರೀತಿಯಲ್ಲಿ ಹೇಳುವುದಾದರೆ ಬಾರ್ಟರ್ ಸಿಸ್ಟಂ ನಲ್ಲಿ ಬಂದಂತಹ ರಾಟ್ವೀಲರ್ ಮರಿ ಬುಜ್ಜಿಯಾಗಿತ್ತು. ನಮ್ಮ ಡಿಂಗನಿಗೆ ಕಚ್ಚಿದ ಏಕೈಕ ನಾಯಿ ಬುಜ್ಜಿ😀 ಡಿಂಗ ಮತ್ತು ಬುಜ್ಜಿ ಅಂಕೆಗಳ ಗಣನೆಯಲ್ಲಿ ಒಂದೇ ವಯೋಮಾನದವರು. ಬುಜ್ಜಿ ಮರಿಯಾಗಿದ್ದಾಗ ಅದರ ಊಟದ ತಟ್ಟೆಗೆ ಪುಟ್ಟ ಡಿಂಗನೂ ಮುಖ ಹಾಕಿದ್ದ ಕಾರಣ ಬುಜ್ಜಿ ಸಿಟ್ಟಿನಲ್ಲಿ ಡಿಂಗನ ಮುಖಕ್ಕೇ ಬಾಯಿ ಹಾಕಿತ್ತು. ನಂತರದಲ್ಲಿ ಅವರಿಬ್ಬರೂ ಸ್ನೇಹಿತರಾದದ್ದು ಬೇರೆ ವಿಷಯ!
ಬುಜ್ಜಿ ಘನಗಂಭೀರ ನಾಯಿ. ರಾಟ್ವೀಲರ್ ಜಾತಿಗೆ ಸೇರಿದ್ದರೂ ಕೂಡಾ ಅದು ಅದರ ಜಾತಿಯ ಉಗ್ರತೆ ಹೊಂದಿರಲಿಲ್ಲ. ಎಲ್ಲರಿಂದಲೂ ಮುದ್ದು ಮಾಡಿಸಿಕೊಳ್ಳುವ ಸ್ವಭಾವ ಅದಕ್ಕಿತ್ತು. ಅದರ ಪ್ರಪ್ರಥಮ ಮರಿ ಬಾಲಿಯಾಗಿತ್ತು. ಎರಡನೆಯ ಬಾರಿ ನಾಲ್ಕೈದು ಮರಿ ಹಾಕಿತ್ತು. ಅದರಲ್ಲೊಂದು ಮರಿ ಬುಟ್ಟ. ಅದರ ಕಣ್ಮುಂದೆ ಅದರ ಮರಿಗಳೆರಡೂ ಹೋದದ್ದು ಅದಕ್ಕೆ ತಡಕೊಳ್ಳಲು ಆಗಲಿಲ್ಲವೇನೋ? ರಾತ್ರಿ ಸರಿಯಾಗಿದ್ದ ಬುಜ್ಜಿ ಬೆಳಗಾಗುವಾಗ ಇಲ್ಲವಾಯಿತು. ಇನ್ನೂ ನಿದ್ರಿಸುತ್ತಿರುವಂತೆ ಕಾಣಿಸುತ್ತಿತ್ತು.
ಅದಕ್ಕೆ ಅಷ್ಟು ಪ್ರಾಯವಾಗಿದ್ದರೂ ಇನ್ನೂ ನಮ್ಮೊಡನೆ ಮುದ್ದು ಮಾಡಿಸಿಕೊಳ್ಳುತ್ತಿತ್ತು. ನನ್ನ ಮಗಳ ಜೊತೆ ಅದರ ಬಾಂಧವ್ಯ ಗಾಢವಾಗಿತ್ತು. ಅವಳು ಬೆಂಗಳೂರಿನಿಂದ ಹಿಂದಿರುಗಿ ಬಂದಾಗಲೆಲ್ಲ ಅವಳ ಕಾಲ ಮೇಲೆ ಬಂದು ಕೂತು ಅವಳಿಂದ ಮುದ್ದಿಸಿಕೊಳ್ಳುತ್ತಿತ್ತು. ಅದರ ಬ್ರೀಡಿಗೆ ಹೊರತಾದ ಬುದ್ಧಿ ಅದರದಾಗಿತ್ತು. ಇದ್ದ ಐದು ನಾಯಿಗಳ ಮೇಲೆ ಅಧಿಕಾರ ಚಲಾಯಿಸುವ ಗುಣ ಅದಕ್ಕಿತ್ತು. ಅದರ ಇಷ್ಟಕ್ಕೆ ವಿರೋಧವಾಗಿ ಅದನ್ನೆಂದೂ ಗೂಡಿಗೆ ಹಾಕಲಾಗುತ್ತಿರಲಿಲ್ಲ. ಅಷ್ಟು ಹಠಮಾರಿ ನಾಯಿ ಅದಾಗಿತ್ತು. ತನ್ನ ಇಷ್ಟದ ಪ್ರಕಾರ ಬದುಕಿದ ನಾಯಿಯದು!
ಬುಜ್ಜಿ ಮರಿ ಹಾಕುವ ಸಮಯ ಬಂತೆಂದರೆ ನಮಗೆಲ್ಲ ತಲೆಬಿಸಿಯಾಗುತ್ತಿತ್ತು. ಅದು ತಾನು ಆಗಷ್ಟೇ ಹಾಕಿದ ಮರಿಗಳ ಮೇಲೆಯೇ ಮಲಗಿ ಬಿಡುತ್ತಿತ್ತು. ಆ ಸಮಯದಲ್ಲಿ ಶಂಕರಿಗೆ ಅದರ ಹತ್ತಿರವಿದ್ದು ಮರಿಗಳನ್ನು ಜೋಪಾನ ಮಾಡುವುದೇ ಒಂದು ಕೆಲಸವಾಗುತ್ತಿತ್ತು. ಎಲ್ಲಾ ಮರಿಗಳು ಹೊರಬಂದ ಮೇಲೆ ಅದು ಸರಿಯಾಗುತ್ತಿತ್ತು. ಆ ಭರಾಟೆಯಲ್ಲಿ ಒಂದೆರಡು ಮರಿಗಳು ಸತ್ತು ಹೋಗುತ್ತಿದ್ದವು. ಉಳಿದ ಮರಿಗಳಿಗೆ ಹಾಲು ಕುಡಿಸುವುದನ್ನು ಬಿಟ್ಟರೆ ನೆಕ್ಕಿ ಮುದ್ದು ಮಾಡುತ್ತಿರಲಿಲ್ಲವದು. ಅದರದ್ದೇ ಆದ ರೀತಿಯ ಪಾಲಕತ್ವ ಅದರದಾಗಿತ್ತು.

ಬುಜ್ಜಿ ನಮ್ಮ ಅರಿವಿಗೇ ಬರದಂತೆ ನಮ್ಮೆಲ್ಲರ ಪ್ರೀತಿ ಪಡೆದ ನಾಯಿಯಾಗಿತ್ತು. ಸದ್ದಿಲ್ಲದ ಅದರ ಇಲ್ಲವಾಗುವಿಕೆ ಒಂದು ನಿರ್ವಾತವನ್ನು ಸೃಷ್ಟಿಸಿದೆ ಎಂದರೆ ಸುಳ್ಳಲ್ಲ. ಈಗ ನಮ್ಮೆಲ್ಲರ ನೆನಪಿನ ಬುತ್ತಿಯಲ್ಲಿ ಮತ್ತೊಂದರ ಸೇರ್ಪಡೆ😞


224 . ನೆನಪುಗಳು - ಕಡುಬಿನ ಅಟ್ಟ (6/12/2020)


ಕಡುಬಿನ ಅಟ್ಟ ಅಥವಾ ಇಡ್ಲಿ ಅಟ್ಟ ಈಗಲೂ ಹಳ್ಳಿಯ ಮನೆಗಳಲ್ಲಿ ಕಾಣ ಸಿಗುವ ಅಡುಗೆಯ ಪರಿಕರ. ಹಿಂದೆಲ್ಲಾ ಎಲ್ಲರ ಮನೆಗಳಲ್ಲಿ ಹಿತ್ತಾಳೆ ಅಥವಾ ತಾಮ್ರದ ಅಟ್ಟವಿರುತ್ತಿತ್ತು. ತದನಂತರದಲ್ಲಿ ಅಲ್ಯೂಮಿನಿಯಂ ಅಟ್ಟಗಳು ಆ ಜಾಗಕ್ಕೆ ಭರ್ತಿಯಾದವು. ಯಾವುದೇ ಲೋಹದ ಅಟ್ಟ ತಯಾರಾಗಿದ್ದರೂ ಅವುಗಳ ಆಕಾರ ಒಂದೇ! ಅಟ್ಟದ ಪಾತ್ರೆಗೆ ಮೇಲ್ಬದಿಯ ಎರಡೂ ಪಕ್ಕಗಳಲ್ಲಿ ಹಿಡಿಕೆ ಇರುತ್ತದೆ ಹಾಗೂ ಮುಚ್ಚಳಕ್ಕೂ ಮೇಲೊಂದು ಹಿಡಿಕೆ ಇದೆ. ನಡುಭಾಗ ಸ್ವಲ್ಪ ಒಳಸರಿದಿರುತ್ತದೆ.
ಇಡ್ಲಿ ಅಥವಾ ಕಡುಬಿಗೆ ಉಪಯೋಗಿಸುವ ಹಿಟ್ಟು ಒಂದೇ. ಉದ್ದನ್ನು ರುಬ್ಬಿ ಅದಕ್ಕೆ ಸಮರ್ಪಕ ಪ್ರಮಾಣದಲ್ಲಿ ಇಡ್ಲಿ ರವೆಯನ್ನು ಸೇರಿಸಿ ಹುದುಗು ಬರಿಸಿ ಮಾರನೆಯ ದಿನ ಅದನ್ನು ಹಲಸಿನ ಕೊಟ್ಟೆ ಅಥವಾ ಮುಂಡುಕನ ಓಲಿಯ ಕೊಟ್ಟೆಗೆ ಹಾಕಿ ಬೇಯಿಸಿದರೆ ಕಡುಬಾಗುತ್ತದೆ; ಇಡ್ಲಿ ತಟ್ಟೆಗೆ ಹಾಕಿ ಬೇಯಿಸಿದರೆ ಇಡ್ಲಿಯಾಗುತ್ತದೆ.
ಕಡುಬಿನ ಅಟ್ಟದ ನಡುಮಧ್ಯ ಅಥವಾ ಅದರ ನಡುಭಾಗ ಸ್ವಲ್ಪ ಒಳಬಾಗಿರುತ್ತದೆ. ಆ ಭಾಗದಲ್ಲಿ ಅಟ್ಟದೊಳಗೆ ಒಂದು ತೂತು ತೂತಿರುವ ತಟ್ಟೆಯನ್ನಿಟ್ಟು ಅದರ ಕೆಳಭಾಗದ ಖಾಲಿ ಜಾಗದಲ್ಲಿ ಮುಕ್ಕಾಲು ಪಾಲು ನೀರನ್ನು ಹಾಕಿ ಕುದಿಯಲಿಡಬೇಕು. ನೀರು ಕುದ್ದು ಹಬೆ ಬರಲು ಪ್ರಾರಂಭವಾದಾಗ ಆ ತೂತಿರುವ ತಟ್ಟೆಯ ಮೇಲೆ ಕಡುಬಿನ ಕೊಟ್ಟೆಯನ್ನು ಅಥವಾ ಇಡ್ಲಿಯ ತಟ್ಟೆಯನ್ನು ಬೇಯಿಸಲಿಡಬೇಕು. ಕಡುಬಾದರೆ ಅರ್ಧ ಘಂಟೆಗೂ ಮೀರಿ ಬೇಯಿಸಬೇಕು. ಇಡ್ಲಿಯಾದರೆ ಹತ್ಹದಿನೈದು ನಿಮಿಷ ಬೇಯಿಸಿದರೆ ಸಾಕು. ಹಬೆಯಾಡುವ ಕಡುಬು/ಇಡ್ಲಿಯನ್ನು ಚಟ್ನಿಯೊಡನೆ ತಿನ್ನಲು ಖುಷಿಯಾಗುತ್ತದೆ.
ಹಬ್ಬ ಹರಿದಿನಗಳಲ್ಲಿ ಶಾವಿಗೆ ಮಾಡುವಾಗ ಅದಕ್ಕೆ ಬೇಕಾದ ಹಿಟ್ಟನ್ನು ಇಂತಹ ಅಟ್ಟದಲ್ಲೇ ಬೇಯಿಸುತ್ತಾರೆ. ಉದ್ದನೆಯ ಲೋಟಗಳಲ್ಲಿ/ಕೊಟ್ಟೆಗಳಲ್ಲಿ ಹಿಟ್ಟನ್ನು ಹಾಕಿ ಬೇಯಿಸಿ ತದನಂತರದಲ್ಲಿ ಅದನ್ನು ಶಾವಿಗೆ ಮಣೆಯಲ್ಲಿ ಒತ್ತಿ ಶಾವಿಗೆ ಮಾಡಲಾಗುವುದು. ಬೇಯಿಸಿದ ಆ ಹಿಟ್ಟು ಹಾಗೆಯೇ ತಿನ್ನಲು ಕೂಡಾ ಚೆನ್ನಾಗಿರುತ್ತದೆ. ಆದರೆ ಶಾವಿಗೆಯನ್ನು ಶಾವಿಗೆ ಆಕಾರ ಕೊಟ್ಟು ತಿಂದರೆ ಮಾತ್ರ ಅದು ಶಾವಿಗೆಯೆನಿಸುವ ಕಾರಣ ಅದನ್ನು ಶಾವಿಗೆ ಮಣೆಯಲ್ಲಿ ಒತ್ತಿ ಶಾವಿಗೆ ಮಾಡಲಾಗುವುದು🤔
ಆ ಅಟ್ಟದಲ್ಲಿ ಹಲಸಿನ ತೊಳೆ/ಗೆಣಸು..ಹೀಗೆ ಹಪ್ಪಳಕ್ಕೆ ಬೇಕಾಗುವ ವಸ್ತುಗಳನ್ನು ಬೇಯಿಸಲಾಗುವುದು. ದೊಡ್ಡ ಪ್ರಮಾಣದ ಅಡುಗೆ ಮಾಡುವ ಸಂದರ್ಭದಲ್ಲಿ ಹಬೆಯಾಧಾರಿತ ಬೇಯಿಸುವಿಕೆಯನ್ನು ಆ ಅಟ್ಟದಲ್ಲಿಯೇ ಮಾಡಲಾಗುವುದು.

ಹಳ್ಳಿಯ ಜೀವನದಲ್ಲಂತೂ ಇಡ್ಲಿ/ಕಡುಬಿನ ಅಟ್ಟ ಒಂದು ಅವಿಭಾಜ್ಯ ಅಂಗವಾಗಿದೆ. ಆ ಅಟ್ಟವಿಲ್ಲದಿದ್ದರೆ ಒಂದು ರೀತಿಯಲ್ಲಿ ಕೈ ಕಳಕೊಂಡ ಅನುಭವ. ಹಬೆಯಲ್ಲಿ ಬೇಯಿಸಿ ಮಾಡುವ ಪ್ರತಿಯೊಂದು ಖಾದ್ಯಕ್ಕೂ ಆ ಅಟ್ಟದ ಅನಿವಾರ್ಯತೆ ಇದೆ. ಅದರ ಸದುಪಯೋಗವನ್ನು ಸದಾ ಮಾಡಲಾಗುವುದು. ಕಡುಬಿನ ಅಟ್ಟವು ಉಳಿದ ಪರಿಕರಗಳಂತೆ ಅಟ್ಟ ಸೇರದೆ ಒಲೆಯ ಮೇಲೆ ಉಪಯೋಗಿಸಲ್ಪಡಲಿ ಎನ್ನುವ ನಿರೀಕ್ಷೆ ನಮ್ಮೆಲ್ಲರಲ್ಲಿ ಇದೆ ತಾನೇ?


223 .ನೆನಪುಗಳು -  ಕುಟ್ಟಆನಿ (5/12/2020)


ನನ್ನ ಅಮ್ಮ ಎಲೆ ಅಡಿಕೆ ತಿನ್ನುವಾಕೆ. ಹಲ್ಲು ಸೆಟ್ ಉಪಯೋಗಿಸುವ ಕಾರಣ ಎಲೆ ಅಡಿಕೆ ಕುಟ್ಟಲು ಅವಳ ಬಳಿ ಒಂದು ಕುಟ್ಟಾಣಿ ಇದೆ. ಅದು ನನ್ನ ಅಜ್ಜಯ್ಯ ಬಳಸುತ್ತಿದ್ದ ಕುಟ್ಟಾಣಿ. ಅಮ್ಮ ಹೋದಲ್ಲೆಲ್ಲ ಆ ಕುಟ್ಟಾಣಿಯೂ ಅವಳ ಜೊತೆ ಹೋಗುತ್ತಿರುತ್ತದೆ. ಆ ಕುಟ್ಟಾಣಿಯಲ್ಲಿ ಕುಟ್ಟಿದ ಎಲೆ ಅಡಿಕೆಗೆ ಒಂದು ವಿಶೇಷ ರುಚಿ ಇರುತ್ತದೆ. ನಾನು ಊರಿಗೆ ಹೋದಾಗಲೆಲ್ಲಾ ಊಟವಾದ ನಂತರ ಅಮ್ಮನ ಹತ್ತಿರ ಎಲೆ ಅಡಿಕೆ ಕುಟ್ಟಿಸಿಕೊಂಡು ತಿನ್ನುತ್ತೇನೆ.
ನನ್ನ ಅಜ್ಜಯ್ಯ ಬದುಕಿದ್ದಾಗ ಆ ಕುಟ್ಟಾಣಿಯು ಯಾವಾಗಲೂ ಅವರ ಕಿಟಕಿಯ ಹತ್ತಿರ ಕಾಣ ಸಿಗುತ್ತಿತ್ತು. ಆಗ ಪುಟ್ಟವರಾಗಿದ್ದ ನಾವು ಅಜ್ಜಯ್ಯನಿಗೆ ಅಡಿಕೆ ಕುಟ್ಟಿ ಪುಡಿ ಮಾಡಿ ಕೊಡುತ್ತಾ ಒಂಚೂರು ಎಲೆ ಅಡಿಕೆ ತಿಂದು ನಮ್ಮ ಚಪಲವನ್ನು ತೀರಿಸಿಕೊಳ್ಳುತ್ತಿದ್ದೆವು. ನನಗೆ ಚಿಕ್ಕವಳಿದ್ದಾಗಿನಿಂದಲೂ ಆ ಕುಟ್ಟಾಣಿಯ ಬಗ್ಗೆ ವಿಶೇಷ ಮೋಹ. ಎಲೆ ಅಡಿಕೆ ತಿನ್ನಲಿಕ್ಕಾಗಿರುವ ಮೋಹವಲ್ಲ. ಅದರ ಪುಟ್ಟನೆಯ ಆಕಾರ, ಅಡಿಕೆ ಕುಟ್ಟುವಾಗಿನ ಅದರ ಖಣಖಣ ಶಬ್ದ ಎಲ್ಲವೂ ಚಿತ್ತಾಕರ್ಷಕವಾದದ್ದು. ನನಗಂತೂ ಹಳೆಯ ವಸ್ತುಗಳ ಬಗ್ಗೆ ಸೆಳೆತ ಜಾಸ್ತಿ!
ನಾನು ಇಷ್ಟ ಪಡುವ ಇನ್ನೊಂದು ಕುಟ್ಟುವ ವಸ್ತು ಒನಕೆ. ನಾನು ಪುಟ್ಟವಳಿದ್ದಾಗ ದಪ್ಪ ಅವಲಕ್ಕಿಯನ್ನು ಮನೆಯಲ್ಲೇ ಮಾಡುತ್ತಿದ್ದರು. ಭತ್ತವನ್ನು ಒಂದು ಹದಕ್ಕೆ ಬೇಯಿಸಿಕೊಂಡು ಅದು ತಣಿದ ಮೇಲೆ ಒರಳಿಗೆ ಹಾಕಿ ಒನಕೆಯನ್ನು ಬೀಸಿ ಬೀಸಿ ಎತ್ತೆತ್ತಿ ಒಗೆದು ಕುಟ್ಟಿ ಅವಲಕ್ಕಿಯನ್ನು ತಯಾರಿಸುತ್ತಿದ್ದದ್ದು ನನಗಿನ್ನೂ ನೆನಪಿದೆ. ಹಲಸಿನ ಹಾಗೂ ಗೆಣಸಿನ ಹಪ್ಪಳದ ಹಿಟ್ಟನ್ನು ಕೂಡಾ ನನ್ನ ಸೋದರತ್ತೆ ಒನಕೆಯಿಂದ ಕುಟ್ಟಿ ಹದಗೊಳಿಸುತ್ತಿದ್ದರು. ನನ್ನ ಗಂಡನ ಮನೆಯಲ್ಲೂ ಒನಕೆಯನ್ನು ಬಹಳ ವರ್ಷಗಳವರೆಗೆ ಬಳಸುತ್ತಿದ್ದದ್ದನ್ನು ನೋಡಿದ್ದೇನೆ. ಒನಕೆಯನ್ನು ಬೇಕಾಬಿಟ್ಟಿಯಾಗಿ ಬಳಸಲು ಬರುವುದಿಲ್ಲ. ಅದನ್ನು ಬೀಸಿ ಒಗೆಯುತ್ತಾ ಕುಟ್ಟಲು ಒಂದು ಹದವಿದೆ. ಒಂದು ಕೈಯಿಂದ ಕುಟ್ಟಲು ಕೆಳ ಬಿಟ್ಟ ಒನಕೆಯನ್ನು ಇನ್ನೊಂದು ಕೈಯಲ್ಲಿ ಹಿಡಿದುಕೊಂಡು ಮೇಲೆತ್ತುವುದೇ ಒಂದು ಕಲೆ. ಇಬ್ಬಿಬ್ಬರು ಒಟ್ಟಾಗಿ ಒನಕೆ ಬಳಸುವುದನ್ನು ನಾನು ನೋಡಿದ್ದೇನೆ.
ಯಂತ್ರಗಳ ಬಳಕೆ ಜಾಸ್ತಿಯಾಗುತ್ತಿದ್ದಂತೆಯೆ ನಮ್ಮ ಹಿಂದಿನವರು ಬಳಸುತ್ತಿದ್ದ ಬೀಸುವ ಕಲ್ಲು, ರುಬ್ಬುವ ಕಲ್ಲು, ಒನಕೆ, ಕಡಗೋಲು..ಎಲ್ಲವೂ ಅಟ್ಟದ ಮೂಲೆ ಸೇರಿವೆ. ಬಾವಿಯ ರಾಟೆ, ನೀರು ಸೇದುವ ಹಗ್ಗ, ನೀರೆತ್ತುವ ಬಿಂದಿಗೆಗಳ ಬಳಕೆ ಕೂಡಾ ಕಡಿಮೆಯಾಗುತ್ತಿದೆ. ಇವೆಲ್ಲವುಗಳನ್ನು ಬಳಸದಿರುವುದರಿಂದ ಪ್ರತಿನಿತ್ಯದ ಕೆಲಸ ಸುಲಭವಾದರೂ ಆವುಗಳೊಳಗೆ ಹೊಸೆದಿದ್ದ ಕೆಲಸದ ಲಯಬದ್ಧತೆ ಕಳೆದು ಹೋಗುತ್ತಿದೆ. ಯಂತ್ರಮುಖೇನ ಕೆಲಸ ಯಂತ್ರದಷ್ಟೇ ಯಾಂತ್ರಿಕವಾಗಿದೆ. ಕಣ್ಣು ಮುಚ್ಚಿ ತೆರೆಯುದರೊಳಗೆ ಕೆಲಸ ಮುಗಿದು ಹೋಗಿ ಕೆಲಸದೊಡಗಿನ ತಾದಾತ್ಮ್ಯತೆಯೇ ಕಳೆದು ಹೋಗುತ್ತಿದೆ ಎಂದೆನಿಸುತ್ತದೆ. ಬೀಸುವ ಕಲ್ಲಿನ 'ಸುಂಯ್' ನಾದ, ಒನಕೆ ಬೀಸುವಾಗಿನ 'ರೊಂಯ್' ದನಿ, ರುಬ್ಬುವಾಗಿನ 'ಗುಡುಗುಡು' ಶಬ್ದವನ್ನು ಮಿಕ್ಸರ್ ಗ್ರೈಂಡರ್ ನ 'ಗರಗರ' ಶಬ್ದ ನುಂಗಿ ಹಾಕಿಬಿಟ್ಟಿದೆ. ಇವೆಲ್ಲವೂ ಹೊಸಹೊಸ ಆವಿಷ್ಕಾರಗಳ ಪರಿಣಾಮ! ಕಾಲಾಯ ತಸ್ಯೈ ನಮಃ. ಕಾಲಕ್ಕೆ ತಕ್ಕಂತೆ ನಾವಿರಬೇಕಾದರೆ ಬದಲಾವಣೆಯನ್ನು ಒಪ್ಪಿಕೊಂಡು ಬದುಕುವುದು ಜೀವನಧರ್ಮ ತಾನೇ?!

222. ನೆನಪುಗಳು - ನಾಯಿ ಬುಟ್ಟ (4/12/2020)

ನಿನ್ನೆ ಸಂಜೆ ಬುಟ್ಟ ಇಲ್ಲವಾಯಿತು. ನಮ್ಮ ನಾಯಿಗಳಲ್ಲೇ ಬಹಳ ಮಜಬೂತಾಗಿದ್ದದ್ದು ಬುಟ್ಟ ನಮ್ಮ ನಾಯಿಗಳ ಕೋಳಿಗೆ ಅದು ಸರ್ವಾಧಾಕಾರಿಯಂತೆ ನಡೆದುಕೊಳ್ಳುತ್ತಿತ್ತು. ಈಗ್ಗ್ಯೆ ಒಂದು ವಾರದ ಹಿಂದೆ ಕ್ಯಾಂಪಸ್ಸಿನಿಂದ ಹೊರಹೋಗಿದ್ದ ಬುಟ್ಟನ ಜೊತೆ ಊರ ನಾಯಿಗಳ ಕಾದಾಟವಾಗಿ ಕಿವಿಯ ಭಾಗಕ್ಕೆ ಕಚ್ಚಿಸಿಕೊಂಡು ಬಂದ ಬುಟ್ಟ ಅದರಿಂದ ಸುಧಾರಿಸಿಕೊಳ್ಳಲಾಗದೆ ನಿನ್ನೆ ಸಂಜೆ ಗತಪ್ರಾಣವಾಯಿತು. ಗಟ್ಟಿತನದ ಪ್ರತೀಕವಾಗಿದ್ದ ಬುಟ್ಟನ ಮರಣ ಒಂದು ರೀತಿಯ ದುರ್ಮರಣವಾಯಿತಲ್ಲಾ ಎಂದು ಸಂಕಟವಾಯಿತು.
ನಮ್ಮ ರಾಟ್ವೀಲರ್ ಬುಜ್ಜಿಯ ಪ್ರೀತಿಯ ಮಗನಾದ ಬುಟ್ಟನಿಗೆ ಸಿಂಹದ ಹುಟ್ಟು ಇತ್ತು. ಬಣ್ಣವೂ ಸ್ವಲ್ಪ ಹಾಗೇ ಇದ್ದು ರೋಮಭರಿತ ಕುತ್ತಿಗೆ ಇದ್ದ ಬುಟ್ಟ ನೋಡಲು ಬಲು ಸುಂದರ! ಹದವಾದ ರೋಮಭರಿತ ಮೈ, ಆಕರ್ಷಕ ನಡಿಗೆ, ಸುಂದರವಾದ ಕಪ್ಪು ಮಿಶ್ರಿತ ಬಂಗಾರದ ಬಣ್ಣದ ಬುಟ್ಟ ಎಂತಹವರ ಗಮನವನ್ನೂ ಸೆಳೆಯುವ ನಾಯಿಯಾಗಿತ್ತು. ಆದರೆ ಅದು ಯಾವತ್ತೂ ತನ್ನ ಪ್ರೀತಿಯನ್ನು ಹತ್ತಿರ ಬಂದು ಮೈ ತಿಕ್ಕಿ ವ್ಯಕ್ತಪಡಿಸಿರಲಿಲ್ಲ. ಒಂದು ರೀತಿಯ ಘನ ಗಂಭೀರ ಹಾಗೂ ತಾವರೆಯ ಮೇಲಿನ ನೀರಿನಂತೆ ಸಂಬಂಧಗಳ ಅಂಟಿಲ್ಲದ ಸ್ವಭಾವದರದ್ದು ಎಂದು ನಾವು ತಿಳಿದುಕೊಂಡಿದ್ದೆವು. ನಾವು ಅದರ ಭಾವನೆಯ ವ್ಯಕ್ತಪಡಿಸುವಿಕೆಯನ್ನು ನೋಡಿದ್ದು ಬೂಗಿಯ ಮರಣವಾದ ಸಂದರ್ಭದಲ್ಲಿ. ಅಂದು ಬುಟ್ಟ ಹೊಟ್ಟೆಗೇನೂ ತಿನ್ನದೆ ತನಗಾದ ಸಂಕಟವನ್ನು ತನ್ನ ಮುಖಭಾವದಲ್ಲಿ ತೋರಿಸಿತ್ತು. ಬೂಗಿ ಇಲ್ಲವಾದ ಮೇಲೆ ಬುಟ್ಟ ಸ್ವಲ್ಪ ಡಲ್ ಆಗಿತ್ತು ಹಾಗೂ ನಮ್ಮೆಲ್ಲರ ಹತ್ತಿರ ಬಂದು ಮುದ್ದು ಮಾಡಿಸಿಕೊಳ್ಳುತ್ತಿತ್ತು. ಅಂತಹ ಬುಟ್ಟ ನೋವಿನಿಂದ ಒದ್ದಾಡಿ ಇಲ್ಲವಾದದ್ದು ನಮಗೆಲ್ಲ ನೋವಿನ ವಿಷಯ😔
ಬುಟ್ಟನಿಗೆ ಇನ್ನೂ ಮೂರ್ನಾಲ್ಕು ವರ್ಷವಾಗಿತ್ತಷ್ಟೇ. ಇಷ್ಟು ಬೇಗ ಅದು ಇಲ್ಲವಾಗಿದೆ ಎಂದರೆ ನಂಬಲು ಕಷ್ಟ. ನಾಯಿಗಳು ಸತ್ತಾಗ "ಇನ್ನು ಮೇಲೆ ನಾಯಿಗಳನ್ನು ಸಾಕಬಾರದು" ಎನ್ನುವ ಸ್ಮಶಾನ ವೈರಾಗ್ಯ ಬರುತ್ತದೆ. ಈಗಲೂ ನನಗೆ ಹಾಗೇ ಅನಿಸುತ್ತಿದೆ. ಇನ್ನೂ ಹತ್ತಾರು ವರ್ಷಗಳ ಕಾಲ ಇರಬಹುದಾಗಿದ್ದ ಬುಟ್ಟ ಹೀಗೆ ಅಕಾಲಿಕ ಮರಣಕ್ಕೊಳಗಾದದ್ದು ನಮ್ಮಲ್ಲಿ ಎಲ್ಲರ ಮನಸ್ಸಿಗೂ ಕಿರಿಕಿರಿ ಉಂಟುಮಾಡಿದೆ. ಅದರ ಔಷಧೋಪಚಾರವನ್ನು ಶಂಕರಿ, ಅಜಯ, ಬಾಲು ಎಲ್ಲರೂ ನಿಸ್ಪೃಹವಾಗಿ ಮಾಡಿದ್ದಾರೆ ಎನ್ನುವ ತೃಪ್ತಿ ನನಗಿದೆ. ಆದರೆ ಅದನ್ನು ಉಳಿಸಿಕೊಳ್ಳಲಾಗಲಿಲ್ಲ ಎನ್ನುವ ದುಃಖ ಎಲ್ಲರಿಗೂ ಆಗಿದೆ. ಬಾಲಿ ಹಾಗೂ ಬೂಗಿಯಂತೆ ಬುಟ್ಟನೂ ನಮ್ಮ ನೆನಪಿನ ಬುತ್ತಿಯೊಳಗೆ ಸೇರಿಹೋಗಿದೆ. ಇದ್ದವರು ಇಲ್ಲವಾಗುವುದು ಕ್ಷಣ ಮಾತ್ರದಲ್ಲಿ ಆಗಿ ಹೋಗುತ್ತದಲ್ಲಾ? ಆ ಬದಲಾವಣೆಗೆ ನಮ್ಮ ಒಗ್ಗಿಕೊಳ್ಳುವಿಕೆ ಮಾತ್ರ ಕ್ಷಣಮಾತ್ರದಲ್ಲಿ ಆಗದೇ ಅದರದ್ದೇ ಆದ ಸಮಯ ತೆಗೆದುಕೊಳ್ಳುತ್ತದೆ ಎನ್ನುವುದು ಕಟು ವಾಸ್ತವ!


221. ಕಾರ್ತಿಕ ಪೂರ್ಣಿಮೆ  (3/12/2020)

ಮೊನ್ನೆ ಕಾರ್ತಿಕ ಪೂರ್ಣಿಮೆಯಾಗಿತ್ತು ಹಾಗೂ ಈ ವರ್ಷದ ಕೊನೆಯ ಚಂದ್ರ ಗ್ರಹಣವಾಗಿತ್ತು. ಹೀಗಾಗಿ ಎಲ್ಲಿ ನೋಡಿದರಲ್ಲಿ ಬರೀ ಚಂದ್ರನ ಸುದ್ದಿಯೇ! ಚಂದಿರನನ್ನು ನೋಡುವ ನಮ್ಮೆಲ್ಲರ ಕುತೂಹಲವನ್ನು ಬಡಿದೆಬ್ಬಿಸುವಷ್ಟು ಚಂದ್ರನ ಸುದ್ದಿ. ಗ್ರಹಣ ಕಾಣದಿದ್ದರೂ ಸುಂದರವಾದ ಚಂದಿರ ಕಂಡ. ಬಹಳ ಪ್ರಕಾಶಮಾನವಾದ ಚಂದಿರ, ಚಂದಿರನ ಬೆಳಕು ಎಲ್ಲಾ ಕಣ್ಣಿಗೆ ಹಿತವಾಗಿತ್ತು.
ನಾನು ಬಾಳೆಹೊನ್ನೂರಿನ ನವೋದಯದಲ್ಲಿದ್ದಾಗ ಹುಣ್ಣಿಮೆಯ ಚಂದಿರನ ಬೆಳಕಿನ ರಾತ್ರಿಗಳಲ್ಲಿ ನಾನು, ಪಾರ್ವತಿ, ಗೀತಾ, ಉಮಾ ಕಿಲೋಮೀಟರುಗಟ್ಟಲೆ ಕಾಡಿನ ದಾರಿಯಲ್ಲಿ ವಾಕಿಂಗ್ ಹೋಗುತ್ತಿದ್ದೆವು. ಹೆದರಿಕೆ ಎನ್ನುವುದು ನಮ್ಮ ಹತ್ತಿರ ಸುಳಿಯುತ್ತಿರಲಿಲ್ಲ. ತಣ್ಣನೆಯ ಚಳಿಯಲ್ಲಿ ಚಂದಿರನ ಬೆಳಕಿನಲ್ಲಿ ಕಾಡುದಾರಿಯಲ್ಲಿ ನಡೆಯುವ ಸೊಗಸೇ ಬೇರೆ. ನಂತರ ಗಾಜನೂರಿನ ನವೋದಯದ ಜೀವನದಲ್ಲಿ ಹುಣ್ಣಿಮೆಯ ಕೆಲವು ರಾತ್ರಿಗಳಂದು ನಾವು ಸ್ನೇಹಿತರೆಲ್ಲ ಟೆರೇಸಿನಲ್ಲಿ ಕೂತು ಚಂದಿರನ ಬೆಳಕಿನಲ್ಲಿ ಕಥೆ ಹೊಡೆಯುತ್ತಿದ್ದೆವು. ಕೆಲವೊಮ್ಮೆ ಎಲ್ಲರೂ ಒಟ್ಟಿಗೆ ಸೇರಿ ಚಂದಿರನ ಬೆಳಕಿನಲ್ಲಿ ಊಟ ಮಾಡಿದ್ದೂ ಇದೆ. ಹೊಂಗಿರಣದ ಪ್ರಾರಂಭದ ವರ್ಷಗಳಲ್ಲಿ ಹೆಚ್ಚಿನ ಹುಣ್ಣಿಮೆಯ ರಾತ್ರಿಗಳಲ್ಲಿ ನನ್ನ ಕೈತುತ್ತಿನ ಕಾರ್ಯಕ್ರಮವಿರುತ್ತಿತ್ತು🙂
ನನ್ನ ಮಕ್ಕಳು ಚಿಕ್ಕವರಿದ್ದಾಗ ಅವರ ರಾತ್ರಿಯ ಊಟಕ್ಕೆ ಚಂದ್ರದರ್ಶನ ಸಹಾಯ ಮಾಡುತ್ತಿತ್ತು. ಇದು ಎಲ್ಲಾ ತಾಯಂದಿರ ಅನುಭವ ಕೂಡಾ! ನಾನಂತೂ ತುಂಬ ಚಿಕ್ಕವಳಿದ್ದಾಗ ರಾತ್ರಿ ಪಯಣಿಸುವಾಗ ಆಕಾಶದಲ್ಲಿ ಚಂದಿರ ನಾವು ಹೋದಲ್ಲೆಲ್ಲ ಹಿಂಬಾಲಿಸುವುದನ್ನು ನೋಡಿ ಆಶ್ಚರ್ಯಚಕಿತಳಾಗುತ್ತಿದ್ದೆ. ಚಂದಿರನ ಚಲನೆ ನನಗಾಗ ಒಂದು ಬಿಡಿಸಲಾಗದ ಒಗಟಾಗಿ ಕಾಣುತ್ತಿತ್ತು. ನನಗೆ ಆಕಾಶಕಾಯಗಳ ಬಗ್ಗೆ ಅಂತಹ ವ್ಯಾಮೋಹ ಇರದಿದ್ದರೂ ಚಂದಿರನ ಬಗ್ಗೆ ಮಾತ್ರ ವಿಶೇಷ ಆಸಕ್ತಿ. ಪ್ರತಿರಾತ್ರಿ ಚಂದ್ರದರ್ಶನ ಮಾಡುವುದು ಖುಷಿಯ ವಿಷಯ. ನನ್ನ ಅಡುಗೆಮನೆಯ ಕಿಟಕಿಯಿಂದ ಬೆಳಗಿನ ಸೂರ್ಯೋದಯ ಹಾಗೂ ರಾತ್ರಿ/ಸಂಜೆಯ ಚಂದ್ರೋದಯದ ದರ್ಶನವಾಗುತ್ತದೆ. ಇದೊಂದು ಸುಯೋಗವೇ ಸರಿ!
ನಾನು ಬಾಲ್ಯದಲ್ಲಿ ಕಲಿತ ಪದ್ಯ "ಚಂದಿರನೇತಕೆ ಓಡುವನಮ್ಮ ಮೋಡಕೆ ಹೆದರಿಹನೆ?...." ಈಗಲೂ ನನ್ನ ಕಿವಿಯಲ್ಲಿ ರಿಂಗಣಿಸುತ್ತಿರುತ್ತದೆ. ಅದೊಂದು ಅವಿಸ್ಮರಣೀಯ ಪದ್ಯ! ಇಂದಿಗೂ ಆ ಹಾಡನ್ನು ಕೇಳಿದರೆ ಅದೇ ಖುಷಿ ಸಿಗುತ್ತದೆ. ಕವಿಯು ಚಂದಿರ ಹಾಗೂ ಮೋಡವನ್ನು ಸಾದೃಶ್ಯವಾಗಿ ಚಿತ್ರಿಸಿದ ರೀತಿ ಆಮೋಘವಾದದ್ದು.
ನಮ್ಮೊಳಗೆ ಇಳಿದಿರುವ ಚಂದಿರನ ಚಿತ್ರಣವನ್ನು ಬದಲಿಸುವುದು ಸುಲಭ ಸಾಧ್ಯವಲ್ಲ. ಗಗನಯಾತ್ರಿಗಳು ಚಂದ್ರನ ಮೇಲೆ ನಡೆದು ಬಂದಿದ್ದರೂ ನಮಗೆಲ್ಲ ಆಕಾಶದಲ್ಲಿ ತಣ್ಣಗೆ ಬೆಳಗುವ ಆ ಚಂದಿರನೇ ಕಣ್ಣ ಮುಂದಿರುವುದು. ವಿಜ್ಞಾನದ ಪ್ರಗತಿಯಿಂದ ಸಿಕ್ಕ ಚಂದ್ರನ ಚಿತ್ರಣ ಬೇರೆಯೇ ಇದ್ದರೂ ನಾವ್ಯಾರೂ ಆಕಾಶದಲ್ಲಿ ಕಾಣುವ ಆ ಸುಂದರ, ಮುದ್ದಾದ ಚಂದಿರನ ಚಿತ್ರಣವನ್ನು ಬದಲಿಸಿಕೊಳ್ಳಲು ತಯಾರಿಲ್ಲವೋ ಏನೋ ಎಂದೆನಿಸುತ್ತದೆ. ನಮ್ಮೊಳಗಿನ ಮೃದು ಮಧುರವಾದ ಭಾವನೆಗಳನ್ನು ಸದಾ ಜೀವಂತವಾಗಿರಿಸಲು ಶಕ್ತನಾಗಿರುವ ಚಂದಿರನನ್ನು ನಾವು ಬೇರೆಯೇ ಆದ ರೀತಿಯಲ್ಲಿ ಕಲ್ಪಿಸಿಕೊಳ್ಳಲು ಸಾಧ್ಯವೇ?


220. ಪ್ರಾಣಿ ಪ್ರಿಯೆ (2/12/2020)
ನಾನು ಪ್ರಾಣಿ ಪ್ರಿಯೆ. ಎಲ್ಲಾ ರೀತಿಯ ಪ್ರಾಣಿಗಳನ್ನೂ ಇಷ್ಟಪಡುತ್ತೇನೆ. ಆದರೆ ಸಾಕುಪ್ರಾಣಿಗಳಾಗಿ ನನ್ನ ಬಳಿ ಇರುವುದು ನಾಯಿ ಮತ್ತು ಬೆಕ್ಕು ಮಾತ್ರ. ಬಹಳ ಹಿಂದೆ ಮೊಲ, ಮಂಗ, ಗಿಳಿಗಳನ್ನು ಸಾಕುವ ಪ್ರಯತ್ನ ಮಾಡಿ ವಿಫಲಳಾಗಿದ್ದೆ. ಮಂಗವೊಂದನ್ನು ಸಾಕಬೇಕೆನ್ನುವ ಆಸೆ ನನಗಿನ್ನೂ ಇದೆ. ಆದರೆ ಅವುಗಳನ್ನು ಬಂಧಿತ ಸ್ಥಿತಿಯಲ್ಲಿ ಇಡಲು ನಾನು ಇಷ್ಟ ಪಡುವುದಿಲ್ಲ. ಹೀಗಾಗಿ ನಾನು ನಾಯಿಗಳಿಗಾಗಿ ನಾಯಿ ಗೂಡನ್ನಲ್ಲ ನಾಯಿ ಮನೆಯನ್ನೇ ಮಾಡಿಸಿದ್ದೇನೆ. ಅವುಗಳು ಆ ಮನೆಯಂತಹ ಗೂಡಿನೊಳಗೆ ಆರಾಮವಾಗಿ ಓಡಾಡಿಕೊಂಡಿರಬಹುದು ಎನ್ನುವ ತೃಪ್ತಿ ನನಗಿದೆ. ಬಂಧನದೊಳಗಿನ ಸ್ವಾತಂತ್ರ್ಯವನ್ನು ನಾನು ಹತ್ತಿರದಿಂದ ನೋಡಿದ್ದು ಸಕ್ರೆಬೈಲಿನ ಆನೆ ಬಿಡಾರದಲ್ಲಿ!
ನಾವು ಹನ್ನೆರಡು ವರ್ಷಗಳ ಕಾಲ ಗಾಜನೂರಿನ ನವೋದಯದಲ್ಲಿದ್ದಾಗ ಅಲ್ಲಿದ್ದಷ್ಟು ವರ್ಷಗಳು ಮನೆಗೆ ನೆಂಟರು ಬಂದರೆ ನಾವು ಅವರನ್ನು ಗಾಜನೂರ್ ಡ್ಯಾಂ ಹಾಗೂ ಸಕ್ರೆಬೈಲಿಗೆ ಕರೆದುಕೊಂಡು ಹೋಗುತ್ತಿದ್ದೆವು. ನೀರು ಹಾಗೂ ಪ್ರಾಣಿಗಳಿದ್ದ ಜಾಗಗಳಾದ ಕಾರಣ ಅವೆರಡೂ ನನಗಿಷ್ಟವಾದ ಜಾಗಗಳೂ ಆಗಿದ್ದವು. ಬೆಳಿಗ್ಗೆ ಮುಂಚೆ ಹೋದರೆ ಸಕ್ರೆಬೈಲಿನಲ್ಲಿ ಸಾಕಷ್ಟು ಆನೆಗಳನ್ನು ಹತ್ತಿರದಿಂದ ನೋಡುವ ಅವಕಾಶ ಸಿಗುತ್ತಿತ್ತು. ಅವು ಸಾಕಿದ ಆನೆಗಳಾದ ಕಾರಣ ಅವುಗಳನ್ನು ಆರಾಮವಾಗಿ ಮುಟ್ಟಬಹುದಿತ್ತು. ಆ ದೊಡ್ಡ ದೇಹದ ಮುಂದೆ ನಿಂತ ನಾವು ನಗಣ್ಯವಾಗಿ ಕಾಣಿಸುತ್ತಿದ್ದೆವು. ನಮ್ಮನ್ನು ಕ್ಷಣಾರ್ಧದಲ್ಲಿ ಅವುಗಳು ಇಲ್ಲವಾಗಿಸಿ ಬಿಡಬಹುದಿತ್ತು. ಆದರೆ ಪ್ರಾಣಿಗಳು ವಿನಾಕಾರಣ ತೊಂದರೆ ಕೊಡುವವಲ್ಲವಾದ ಕಾರಣ ನಾವು ಯಾವುದೇ ತಲೆಬಿಸಿಯಿಲ್ಲದೇ ಅಲ್ಲಿ ನಿರ್ಭಯವಾಗಿ ನಿಲ್ಲಬಹುದಿತ್ತು!
ಅಲ್ಲಿ ಕಾಣುತ್ತಿದ್ದ ಮಾವುತರು ಆನೆಗಳಿಗೆ ಸ್ನಾನ ಮಾಡಿಸುವ ದೃಶ್ಯ, ಆನೆಗಳು ಸೊಂಡಿಲಿನಿಂದ ನೀರನ್ನು ಹೊಯ್ದುಕೊಳ್ಳುವ ದೃಶ್ಯ, ಮಾವುತ - ಆನೆಯ ನಡುವಣ ಮಧುರ ಮೈತ್ರಿ ಎಲ್ಲವೂ ನೋಡಲು, ಅನುಭವಿಸಲು ಯೋಗ್ಯವಾದವುಗಳು. ಪ್ರೀತಿಗೆ ಭಾಷೆಯ ಅಗತ್ಯವಿಲ್ಲ; ಕೇವಲ ಪ್ರೀತಿಯ ಭಾವವೇ ಅದನ್ನು ಆರುಹಲು ಸಾಕು ಎನ್ನುವುದನ್ನು ಆ ಮಾವುತ - ಆನೆಯ ಸಂಬಂಧದಲ್ಲಿ ಕಾಣಬಹುದಾಗಿತ್ತು.
ಆನೆ ಎಂದಾಗ ನನಗೆ ನೆನಪಾಗುವುದು ಅದರೊಟ್ಟಿಗಿನ ನಮ್ಮ ಮರೆಯಲಾಗದ ಒಂದು ಅನುಭವ. ನಾವೊಮ್ಮೆ ನಾಗರಹೊಳೆ ಅಭಯಾರಣ್ಯದ ರಸ್ತೆಯಲ್ಲಿ ಸಾಗುವಾಗ ಸಣ್ಣವಳಾಗಿದ್ದ ನನ್ನ ಮಗಳು ಕಾರಿನಿಂದ ತಲೆ ಹೊರಹಾಕಿ ರಸ್ತೆಯ ಆಚೆಗಿದ್ದ ಆನೆಮರಿಯನ್ನು ನೋಡಿ ಆನಂದದಿಂದ ಕೂಗಿದಳು. ಉಳಿದ ಆನೆಗಳು ಆ ಕೂಗಿನಿಂದ ಆತಂಕಗೊಂಡು ಮರಿಯ ರಕ್ಷಣೆಗಾಗಿ ನಮ್ಮ ಕಾರನ್ನು ಹಿಂಬಾಲಿಸಿದ್ದವು. ಅವುಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಕಾರನ್ನು ನಾಗಾಲೋಟದಿಂದ ಓಡಿಸುವ ಪ್ರಸಂಗ ಬಂದಿತ್ತು. ಈ ಘಟನೆ ಒಂದು ಘಳಿಗೆ ನಮ್ಮ ಧೃತಿಗೆಡಿಸಿದರೂ ಆನೆಗಳ ರಕ್ಷಣಾತ್ಮಕ ಗುಣದ ಅರಿವಾಯಿತು. ಮನುಷ್ಯರಾಗಲಿ ಪ್ರಾಣಿಗಳಾಗಲಿ ಪಾಲಕರು ಸದಾಕಾಲ ಮಕ್ಕಳ ರಕ್ಷಣೆಗಾಗಿ ಸಿದ್ಧರಾಗಿರುತ್ತಾರೆ ಎನ್ನುವ ಸತ್ಯದ ದರ್ಶನವಾಯಿತು. ಏನೇ ಇರಲಿ ಪ್ರಾಣಿಗಳ ಮನವರಿತು ನಡೆದರೆ ಅವುಗಳೊಡನೆ ಗಟ್ಟಿಯಾದ "ಬಂಧ" ಬೆಳೆಯುತ್ತದೆ ಎನ್ನುವುದು ಸತ್ಯ ತಾನೇ?


219. ತುಳಸಿ ಪೂಜೆ (1/12/2020)

"ತುಳಸಿ ಪೂಜೆಗೆ ಬಾ" ಎಂದು ನನ್ನ ದೊಡ್ಡ ಭಾವ ಮೊನ್ನೆ ಫೋನಾಯಿಸಿದ್ದರು. ಕಾರಣಾಂತರದಿಂದ ಪೂಜೆಗೆ ಹೋಗಲಾಗಿರಲಿಲ್ಲ. ನನ್ನ ಗಂಡನ ಮನೆಯಲ್ಲಿ ಎಲ್ಲಾ ಹಬ್ಬಗಳನ್ನು ಕ್ರಮಪ್ರಕಾರ ಆಚರಿಸುತ್ತಾರೆ. ತುಳಸಿ ಪೂಜೆಯಂದು ತುಳಸಿ ಕಟ್ಟೆಯ ಸುತ್ತ ಸಣ್ಣ ಮಂಟಪ ಮಾಡಿ, ಕಬ್ಬಿನ ಜಲ್ಲೆ, ನೆಲ್ಲಿ ಗಿಡದ ರೆಂಬೆಯನ್ನೆಲ್ಲಾ ಕಟ್ಟಿ ಸಿಂಗರಿಸಿ ಕಟ್ಟೆಯ ಸುತ್ತ ರಂಗೋಲಿ ಹಾಕಿ ಸುಂದರಗೊಳಿಸುತ್ತಾರೆ. ಕತ್ತಲಾಗುತ್ತಿದ್ದಂತೆ ಫಲ ತಾಂಬೂಲ, ನೈವೇದ್ಯವನ್ನಿಟ್ಟು ಸುತ್ತಲೂ ಹಣತೆಯಲ್ಲಿ ದೀಪ ಹಚ್ಚಿ ಆ ಕಟ್ಟೆಗೆ ಒಂದು ದೈವಿಕ ಕಳೆ ನೀಡಿ ಶಾಸ್ತ್ರೋಕ್ತವಾಗಿ ಪೂಜೆ ಮಾಡುತ್ತಾರೆ. ತುಳಸಿಯ ಪೂಜೆ ಮುಗಿದ ಮೇಲೆ ನಮ್ಮ ಹೊಟ್ಟೆಯ ಪೂಜೆ ಶುರುವಾಗುತ್ತದೆ 😀
ಅಜ್ಜಯ್ಯನ ಮನೆಯ ದೊಡ್ಡ ಅಂಗಳದಲ್ಲಿ ಒಂದು ಪುಟ್ಟ ತುಳಸಿಕಟ್ಟೆ ಇದೆ. ಕಾಶತ್ತೆ ಇರುವಷ್ಟು ಕಾಲ ಪ್ರತಿದಿನ ಸಾಯಂಕಾಲ ಹೊಸ್ತಿಲು ಪೂಜೆ ಹಾಗೂ ತುಳಸಿ ಪೂಜೆಯ ಸಮಯದಲ್ಲಿ ತುಳಸಿ ಪೂಜೆಯನ್ನು ಜವಾಬ್ದಾರಿಯುತವಾಗಿ ನಡೆಸುತ್ತಿದ್ದರು. ನಾವು ಚಿಕ್ಕವರಿದ್ದಾಗ ಅವರ ಬಾಲ! ಅವರು ಹೇಳಿದಂತೆ ನಾವೆಲ್ಲಾ ಹೆಣ್ಣು ಮಕ್ಕಳು ಹೊಸ್ತಿಲು ಪೂಜೆ ಮಾಡುತ್ತಿದ್ದ ನೆನಪಿದೆ. ತುಳಸಿ ಕಟ್ಟೆಗೂ ದಿನಂಪ್ರತಿ ಅವರು ದೀಪವಿಡುತ್ತಿದ್ದದ್ದು ನೆನಪಿದೆ. ತುಳಸಿ ಪೂಜೆಯಂದು ನಮಗೆಲ್ಲ ಬಹಳ ಸಂಭ್ರಮ. ತುಳಸಿ ಕಟ್ಟೆಯನ್ನು ತೊಳೆದು ಸಿಂಗರಿಸುವ ಕೆಲಸದಲ್ಲಿ ನಾವೂ ಕೈ ಜೋಡಿಸುತ್ತಿದ್ದೆವು. ಭಕ್ತಿ ಭಾವಕ್ಕಿಂತ ಏನೋ ಬೃಹತ್ ಕೆಲಸ ಮಾಡುತ್ತಿದ್ದೇವೆ ಎನ್ನುವ ಹಮ್ಮು! ಎಷ್ಟೆಂದರೂ ನಾವು ಪುಟ್ಟವರಲ್ಲವೆ? ಮಾಡುವ ಕೆಲಸಗಳ ಬಗ್ಗೆ ಅವಲೋಕಿಸುವ ವಯಸ್ಸು ಅದಾಗಿರಲಿಲ್ಲ. ಏನೇ ಹೊಸತಾದ ಕೆಲಸ ಮಾಡುವುದೆಂದರೆ ನಮಗೆ ಹುಮ್ಮಸ್ಸು. ಪೂಜೆಯ ನಂತರ ರುಚಿಯಾದ ಪಂಚಕಜ್ಜಾಯ ಸಿಗುತ್ತದೆನ್ನುವ ನಿರೀಕ್ಷೆಯೂ ಒಂದು ಕಾರಣವಾಗಿರಬಹುದು🙂 ಪೂಜೆ ಮುಗಿದು ಸ್ವಲ್ಪ ಹೊತ್ತಿನಲ್ಲಿ ಕಬ್ಬು ಹಾಗೂ ನೆಲ್ಲಿಕಾಯಿ ನಮ್ಮ ಹೊಟ್ಟೆಯಲ್ಲಿರುತ್ತಿದ್ದವು. ಹಿರಿಯರು ಎಷ್ಟೇ ಮಡಿ ಮಾಡಿದರೂ ನಮಗೆ ಅದರ ಅರ್ಥವೇ ಆಗುತ್ತಿರಲಿಲ್ಲ. ನಮ್ಮ ಕಾರ್ಯಗಳು ಮಡಿಹುಡಿ ಹಾಳು ಮಾಡಿ ದೇವರ ಪೂಜೆಯ ಪಾವಿತ್ರ್ಯತೆಗೆ ಭಂಗ ತರಬಹುದೆಂಬ ಕಲ್ಪನೆಯೂ ನಮಗಿರುತ್ತಿರಲಿಲ್ಲ. ಪೂಜೆಯ ಸಮಯದಲ್ಲಿ ಜಾಗಟೆ ಬಾರಿಸುವುದು, ಆರತಿ ತಟ್ಟೆ ಸಿದ್ಧಪಡಿಸಿ ಕೊಡುವುದು, ಆರತಿ ತೆಗೆದುಕೊಳ್ಳುವುದು, ಪ್ರಸಾದವನ್ನು ಸ್ವೀಕರಿಸಿ ತಿಂದು ಖುಷಿ ಪಡುವುದು ನಮ್ಮ ಧ್ಯೇಯೋದ್ದೇಶವಾಗಿತ್ತು. ನಮಗೆ ನಾವು ಇರುವ ರೀತಿನೀತಿಯೇ ಹಬ್ಬವಾಗಿತ್ತು! ಹಬ್ಬದ ಆಚರಣೆ ಎನ್ನುವುದು ದಿನಂಪ್ರತಿಯ ಕೆಲಸದ ಏಕತಾನತೆಗೆ ಬ್ರೇಕ್ ಕೊಡುತ್ತಿದ್ದದ್ದಂತೂ ಸತ್ಯ. ಆಹಾರ ತಯಾರಿ ಇರಲಿ, ಪೂಜೆಯ ತಯಾರಿ ಇರಲಿ, ಸಿಂಗರಿಸುವ ಹಾಗೂ ಸಿಂಗರಿಸಿಕೊಳ್ಳುವ ಸಂಭ್ರಮವೇ ಇರಲಿ..ಎಲ್ಲವೂ ಪ್ರತಿಯೊಬ್ಬರ ಮೂಡ್ ಅನ್ನು ರಿಫ್ರೆಶ್ ಮಾಡುತ್ತಿತ್ತು ಎನ್ನುವುದು ನನ್ನ ಅನಿಸಿಕೆ. ಹೀಗಾಗಿ ಹಬ್ಬದ ದಿನಗಳು ಎಲ್ಲರಲ್ಲೂ ಹುರುಪು ತುಂಬಿಸುತ್ತಿದ್ದವು.
ಇದು ಹಬ್ಬ-ಹರಿದಿನಗಳು ಸಾಲುಸಾಲಾಗಿರುವ ಮಾಸ. ಅವುಗಳ ಹಿನ್ನೆಲೆಯನ್ನರಿತು ಆಚರಿಸಿದರೆ ನಿಜಕ್ಕೂ ಅವು ಅರ್ಥಪೂರ್ಣ ಆಚರಣೆಯಾಗುತ್ತದೆ. ಸರಿಯಾಗಿ ನೋಡಿದಾಗ ಹಬ್ಬಗಳೆಲ್ಲವೂ ಪರಿಸರ ಸಂಬಂಧಿ ಆಚರಣೆಗಳೇ ಎನ್ನುವುದು ಗಮನಕ್ಕೆ ಬರುತ್ತದೆ. ಹಬ್ಬಗಳ ಸಂಭ್ರಮಾಚರಣೆಯಲ್ಲಿ ತೊಡಗುತ್ತಾ ಪರಿಸರದ ಬಗ್ಗೆ ಕಾಳಜಿ ಹೆಚ್ಚಿಸಿಕೊಳ್ಳೋಣವಲ್ಲವೆ?


218. ನೆನಪುಗಳು - ಪಾಯಸ (30/11/2020)

ನಾವೆಲ್ಲ ಚಿಕ್ಕವರಿದ್ದಾಗ ನಮಗೆ ಹೆಚ್ಚು ಪರಿಚಿತವಿದ್ದ ಸಿಹಿ ಎಂದರೆ ಪಾಯಸ. ಅದರಲ್ಲೂ ನಮ್ಮ ಮನೆಯಲ್ಲಿ ಹೆಚ್ಚಾಗಿ ಮಾಡುತ್ತಿದ್ದದ್ದು ಹೆಸರು ಬೇಳೆ ಪಾಯಸ. ಅಮ್ಮ ಮಾಡುತ್ತಿದ್ದ ಹೆಸರು ಬೇಳೆ ಪಾಯಸ ಬಹಳ ರುಚಿಯಾಗಿರುತ್ತಿತ್ತು.
ಹೆಸರು ಬೇಳೆಯನ್ನು ಚೆನ್ನಾಗಿ ಬೇಯಿಸಿ ಇಟ್ಟುಕೊಳ್ಳುತ್ತಿದ್ದ ಅಮ್ಮ ಅದಕ್ಕೆ ತೆಂಗಿನಕಾಯಿಯ ಹಾಲು ತೆಗೆದು ಹಾಕುತ್ತಿದ್ದಳು. ಅದರಲ್ಲೂ ತೆಂಗಿನಕಾಯಿಯ ದಪ್ಪ ಹಾಲನ್ನು ಹಾಕುತ್ತಿದ್ದಳು. ಕಾಯಿತುರಿಯನ್ನು ನುಣ್ಣಗೆ ರುಬ್ಬಿ ಅದನ್ನು ಒಂದು ತೆಳ್ಳನೆಯ ಬಟ್ಟೆಗೆ ಹಾಕಿ ಸೋಸಿ, ಬೆಂದ ಹೆಸರುಬೇಳೆಗೆ ಬೆಲ್ಲ ಸೇರಿಸಿ ಕುದಿಸಿ, ತದನಂತರದಲ್ಲಿ ಏಲಕ್ಕಿ ಸೇರಿಸಿ ಮಾಡಿಟ್ಟ ಆ ದಪ್ಪನೆಯ ಕಾಯಿಹಾಲನ್ನು ಹಾಕಿ ಕುದಿಸಿ ತುಪ್ಪದಲ್ಲಿ ಹುರಿದ ದ್ರಾಕ್ಷಿ ಗೋಡಂಬಿಯನ್ನು ಸೇರಿಸುತ್ತಿದ್ದಳು. ಅದನ್ನು ತಿನ್ನಲು ಪರಮಾನಂದವಾಗುತ್ತಿತ್ತು. ನನ್ನ ಕಸಿನ್ಸ್ ಎಲ್ಲಾ ನನ್ನಮ್ಮ ಮಾಡಿದ ಹೆಸರುಬೇಳೆ ಪಾಯಸವನ್ನು ಇಷ್ಟಪಟ್ಟು ತಿನ್ನುತ್ತಿದ್ದರು. ಹೀಗಾಗಿ ತುಂಬಾ ದೊಡ್ಡದಾದ ಪಾತ್ರೆಯಲ್ಲಿ ನನ್ನಮ್ಮ ಹೆಸರು ಬೇಳೆ ಪಾಯಸ ಮಾಡುತ್ತಿದ್ದಳು. ಮಾಡಿದ ಪಾಯಸ ಕ್ಷಣ ಮಾತ್ರದಲ್ಲಿ ಹೇಳಿ ಹೆಸರಿಲ್ಲದಂತೆ ಖಾಲಿಯಾಗುತ್ತಿತ್ತು!
ನಾನು ಬಾಳೆಹೊನ್ನೂರಿನ ನವೋದಯದಲ್ಲಿದ್ದಾಗ ಕೇರಳದ ನನ್ನ ಕಲೀಗ್ ಸುಭದ್ರಾ ಎನ್ನುವವರಿದ್ದರು. ಕೊಪ್ಪದಲ್ಲಿದ್ದ ಅವರ ಮನೆಗೆ ಹೋಗಿದ್ದಾಗ ಕೇರಳ ಶೈಲಿಯ ಹೆಸರು ಬೇಳೆ ಪಾಯಸ ಮಾಡಿದ್ದರು. ಹೆಸರು ಬೇಳೆಯನ್ನು ಕೆಂಪಗೆ ಹುರಿದು ಅವರು ಬೇಯಿಸಿಟ್ಟುಕೊಳ್ಳುತ್ತಿದ್ದರು. ತದನಂತರದಲ್ಲಿ ತೆಂಗಿನಕಾಯಿಯನ್ನು ಸಣ್ಣದಾಗಿ ತುಂಡರಿಸಿ ಕಮ್ಮನೆ ಪರಿಮಳ ಬರುವವರೆಗೆ ಹುರಿಯುತ್ತಿದ್ದರು. ನಂತರ ಬೆಲ್ಲ, ಕಾಯಿಹಾಲು, ಹುರಿದ ತೆಂಗಿನ ಹೋಳನ್ನು, ದ್ರಾಕ್ಷಿ ಗೋಡಂಬಿಗಳನ್ನು ಹುರಿದು ಬೇಯಿಸಿದ ಬೇಳೆಯೊಂದಿಗೆ ಕುದಿಸುತ್ತಿದ್ದರು. ಪ್ರಪ್ರಥಮ ಬಾರಿ ಅವರ ಮನೆಯಲ್ಲಿ ಆ ರೀತಿಯ ಪಾಯಸ ತಿಂದಾಗ ವಿಶೇಷ ರುಚಿಯೆನಿಸಿತ್ತು. ನಂತರದ ವರ್ಷಗಳಲ್ಲಿ ನನ್ನ ಪರಮ ಸ್ನೇಹಿತೆ ರೇಖಾ ಅಂತಹ ಪಾಯಸ ಮಾಡುತ್ತಿದ್ದಳು. ಅದೂ ಅಷ್ಟೇ ರುಚಿಯಾಗಿರುತ್ತಿತ್ತು!
ನಾನು ಪಾಯಸ ಮಾಡಲು ಯಾವಾಗಲೂ ಶಾರ್ಟ್ ಕಟ್ ಮಾರ್ಗ ಹುಡುಕುತ್ತೇನೆ. ಬೇಯಿಸಿದ ಬೇಳೆಗೆ ಹಾಲು, ಬೆಲ್ಲ ಸೇರಿಸಿ ಪಾಯಸ ಮಾಡುತ್ತೇನೆ. ಕಾಯಿ ತುರಿದು, ರುಬ್ಬಿ, ಅದನ್ನು ಸೋಸಿ, ಹಾಲು ತೆಗೆದು ಪಾಯಸ ಮಾಡುವ ಶಾಸ್ತ್ರೋಕ್ತ ಪ್ರಕ್ರಿಯೆ ಅನುಸರಿಸುವಷ್ಟು ಸಹನೆ ನನಗಿಲ್ಲದ ಕಾರಣ ಈ ಶಾರ್ಟ್ ಕಟ್! ಕಾಯಿಹಾಲು ಹಾಕಿ ಮಾಡಿದ ಪಾಯಸದ ರುಚಿ ಇದಕ್ಕಿರುವುದಿಲ್ಲ. ಆದರೆ ಬರೀ ಹಾಲು ಹಾಕಿ ಮಾಡಿದ ಪಾಯಸಕ್ಕೂ ಅದರದ್ದೇ ಆದ ವಿಭಿನ್ನ ರುಚಿ ಇರುತ್ತದೆ.
ಇತ್ತೀಚಿನ ಜಮಾನಾದವರು ಪಾಯಸಾಕಾಂಕ್ಷಿಗಳಲ್ಲ. ಈಗ ಸಿಗುತ್ತಿರುವ ನೂರಾರು ಬಗೆಯ ಸಿಹಿತಿಂಡಿಗಳನ್ನು ಮೆಟ್ಟಿ ನಿಲ್ಲುವ ತಾಕತ್ತು ಪಾಯಸಕ್ಕಿಲ್ಲವೇನೋ? ನನ್ನ ಜಮಾನಾದವರಿಗೆ ಹಾಗೂ ನಂತರದ ಕೆಲವು ಜಮಾನಾದವರಿಗಷ್ಟೇ ಸರಿಯಾಗಿ ಗೊತ್ತು ಈ ಸಾಂಪ್ರದಾಯಿಕ ಪಾಯಸದ ರುಚಿ. ಎಷ್ಟೇ ಸಿಹಿತಿಂಡಿಗಳಿರಲಿ ಪಾಯಸವಿಲ್ಲದ ವಿಶೇಷ ಊಟ ಅಪೂರ್ಣ ಎನ್ನುವುದು ನನ್ನ ವಾದ. ಇದಕ್ಕೆ ನಿಮ್ಮೆಲ್ಲರ ಸಹಮತವಿದೆಯಲ್ಲವೇ?


217. ಪರಿಸರ - ಕುರ್ಚಿ
ಕುರ್ಚಿ ಎನ್ನುವುದು ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಕಂಡು ಬರುವ ಪೀಠೋಪಕರಣ. ಮನೆಯಲ್ಲಿ ಮತ್ತೇನೂ ಪೀಠೋಪಕರಣ ಇಲ್ಲದಿದ್ದರೂ ಕೊನೇ ಪಕ್ಷ ಒಂದಾದರೂ ಕುರ್ಚಿ ಇದ್ದೇ ಇರುತ್ತದೆ. ಇದು ಎಲ್ಲರೂ ಒಪ್ಪುವ ಮಾತು!
ನಾನು ಪೀಠೋಪಕರಣ ವಿರೋಧಿ. ಕಸಗುಡಿಸಿ ಒರೆಸುವಾಗ ಅದು ರಗಳೆ ಕೊಡುತ್ತದೆ ಹಾಗೂ ಮನೆಯೊಳಗಿನ ವಿಶಾಲತೆಯನ್ನು ನುಂಗಿ ಒಂದು ರೀತಿಯಲ್ಲಿ ಉಸಿರುಗಟ್ಟಿಸುತ್ತದೆ ಎನ್ನುವುದು ನನ್ನ ವಿಚಾರ. ನಮ್ಮ ಮನೆಗಳಲ್ಲೆಂದೂ ನಾವು ಅಗತ್ಯಕ್ಕೆ ಮೀರಿದ ಪೀಠೋಪಕರಣ ಹೊಂದಿರಲಿಲ್ಲ. ಅಜ್ಜಯ್ಯನ ಮನೆಯಲ್ಲಿ ಕೂರಲು ಜಗುಲಿ ಇದ್ದ ಕಾರಣ ಹಾಲ್ ನಲ್ಲಿ ಒಂದೆರಡು ಕುರ್ಚಿಗಳು ಮಾತ್ರ ಇದ್ದವು. ನಮ್ಮ ಬಾಡಿಗೆ ಮನೆಯಲ್ಲಿ ಕೂಡಾ ಒಂದು ದೊಡ್ಡ ಸೋಫಾ ಮತ್ತು ಒಂದೆರಡು ಕುರ್ಚಿಗಳಿದ್ದವಷ್ಟೇ. ನಾವು ನವೋದಯದಲ್ಲಿದ್ದಾಗ ನಾಲ್ಕು ಬೆತ್ತದ ಕುರ್ಚಿಗಳಿದ್ದವು. ಅದನ್ನು ಕೂಡಾ ನಮ್ಮ ಸಂಸಾರ ಶುರುವಾದ ಬಹಳ ವರ್ಷಗಳ ಮೇಲೆ ಮಾಡಿದ್ದಷ್ಟೇ. ಒಮ್ಮೆ ನಮ್ಮ ಹಿರಿಯ ಅಧಿಕಾರಿಗಳು ನಮ್ಮ ಮನೆಗೆ ಬಂದಾಗ ಅವರಿಗೆ ಕೂರಲಿಕ್ಕೆ ಸರಿಯಾದ ಕುರ್ಚಿ ಇರದೆ ನಮ್ಮ ಎದುರು ಮನೆಯಿಂದ ಕುರ್ಚಿ ತಂದು ಕೂರಿಸಿದ್ದೆವು. ನಂತರದಲ್ಲಿ ನಮ್ಮ ಆತ್ಮೀಯರೆಲ್ಲ ನಮಗೆ ಬೈದು ನಾವು ಬೆತ್ತದ ಕುರ್ಚಿ ಖರೀದಿಸುವ ಹಾಗೆ ಮಾಡಿದ್ದರು.
ನನ್ನ ಐವತ್ತನೇ ಹುಟ್ಟಿದ ಹಬ್ಬಕ್ಕೆ ನನ್ನ ಮಗ ನನಗೊಂದು ರಿಕ್ಲೈನರನ್ನು ಉಡುಗೊರೆಯಾಗಿ ಕೊಟ್ಟ. ಅದು ಸೆಮಿ ಸ್ಲೀಪರ್ ತರಹ ಇರುವ ಕಾರಣ ಒರಗಿ ಮಲಗಿ ವಿಶ್ರಾಂತಿ ತೆಗೆದುಕೊಳ್ಳಲು ಚೆನ್ನಾಗಾಗುತ್ತದೆ. ನಮ್ಮ ಮನೆಯ ದೊಡ್ಡ ಹಾಲ್ ನಲ್ಲಿ ಒಂದು ದೀವಾನ್, ಒಂದು ರಿಕ್ಲೈನರ್, ನನ್ನ ತಂಗಿ ಕೊಟ್ಟ ಸೋಫಾ ಮಾದರಿಯ ಎರಡು ಕುರ್ಚಿಗಳಿದ್ದಾವೆ. ಬೇ ವಿಂಡೋ ಇರುವ ಕಾರಣ ಅಲ್ಲಿಯೂ ಕೂರಬಹುದು. ಜನ ಜಾಸ್ತಿಯಾದರೆ ಶುಭ್ರವಾದ, ತಣ್ಣನೆಯ ನೆಲದ ಮೇಲೆ ಕೂರುತ್ತಾರೆ🙂
ವಿವಿಧ ಬಗೆಯ ಕುರ್ಚಿಗಳನ್ನು ನೋಡಿದ್ದರೂ ನನಗೆ ಸದಾ ಖುಷಿ ಕೊಡುವ ಕುರ್ಚಿ ಅಜ್ಜಯ್ಯನ ಮನೆಯಲ್ಲಿದ್ದ ಬಟ್ಟೆಯ ಈಸೀಛೇರ್. ಅದರ ಮೇಲೆ ಕುಳಿತುಕೊಳ್ಳಲು ನಮ್ಮಲ್ಲಿ ಪೈಪೋಟಿ ಇರುತ್ತಿತ್ತು. ಆ ಕುರ್ಚಿಯ ಬಗ್ಗೆ ನನಗೆ ಮಾತ್ರವಲ್ಲ ನಮ್ಮ ಮನೆಯ ಮಕ್ಕಳಿಗೆಲ್ಲ ವಿಚಿತ್ರ ವ್ಯಾಮೋಹವಿತ್ತು.
ನನ್ನ ಆಫೀಸಿನಲ್ಲಿ ನಾನು ಕೂರುವುದು ಗಟ್ಟಿಯಾದ, ಅಗಲವಾದ ಮರದ ಕುರ್ಚಿಯ ಮೇಲೆ. ಈ ಹಿಂದೆ ಇದ್ದ ತಿರುಗು ಕುರ್ಚಿ ನನ್ನ ಭಾರ ತಾಳಲಾರದೆ ಕೆಲವೇ ದಿನಗಳಲ್ಲಿ ತುಂಡಾಗಿ ಹೋಯಿತು. ಈಗಿರುವ ಕುರ್ಚಿ ನನ್ನ ಭಾರವನ್ನು ಒಪ್ಪಿಕೊಂಡು ಒಳ್ಳೆಯ ಸೇವೆ ನೀಡುತ್ತಿದೆ😀 ಹೀಗಾಗಿ ಎಂತಹುದೇ ವಸ್ತುವಾಗಲಿ ಅದರ "ಆಯ್ಕೆ" ಎನ್ನುವುದು ಬಹಳ ಮುಖ್ಯವಾಗುತ್ತದೆ. ಸೂಕ್ತವಾದ ಆಯ್ಕೆ ಆ ವಸ್ತುವನ್ನು ದೀರ್ಘಕಾಲ ಉಪಯೋಗಕರವಾಗಿ ಇಡುತ್ತದೆ. ಕುರ್ಚಿಯ ಆಯ್ಕೆಯೂ ಇದಕ್ಕೆ ಹೊರತಲ್ಲ. ಹಾಗಂತ ನಾನು ಕುರ್ಚಿಯ ವ್ಯಾಮೋಹಿ ಎಂದು ಭಾವಿಸಿ ಬಿಡಬೇಡಿ😂


216. ನೆನಪುಗಳು - ಬೀಸುವ ಕಲ್ಲು
"ಬೀಸಾಕೆ ಬಂದರಿಗೆ, ಹಾಸವ್ವ ಹಳದಿಯ, ಸೂಸಂಗದ ಕಲ್ಲು ಹೊರಗಿಡೇ...." ಇದೊಂದು ಬೀಸುವ ಕಲ್ಲಿನ ಹಾಡು. ನಮ್ಮಲ್ಲಿ ಜಾನಪದ ಹಾಡುಗಳ ಕಾರ್ಯಾಗಾರ ನಡೆಸುವಾಗ ಕಲಿಸುತ್ತಿದ್ದ ಹಾಡಿದು. ಅದನ್ನು ರಾಗಬದ್ಧವಾಗಿ ಹಾಡುವುದನ್ನು ಕೇಳುವಾಗ ಮನಸ್ಸು ಉಲ್ಲಸಿತವಾಗುತ್ತದೆ. ಹಿಂದೆಲ್ಲಾ ಆಯಾಯ ಸಂದರ್ಭಕ್ಕೆ ತಕ್ಕಂತಿದ್ದ ಇಂತಹ ಹಾಡುಗಳು ನಮ್ಮ ಹಿರಿಯರ ಅನುಭವದ ಸೃಷ್ಟಿ! ಬಾಯ್ದೆರೆಯಾಗಿ ಮುಂದುವರಿದ ಇಂತಹ ಹಾಡುಗಳು ವಾಸ್ತವಾನುಭವಕ್ಕೆ ಅಂಟಿಕೊಂಡವಂತಹವು. ಹೀಗಾಗಿ ಕೇಳುವಾಗ ಆಪ್ತ ಭಾವ ಹುಟ್ಟಿಸುತ್ತವಿವು. ಈ ಹಾಡಿನ ಹಿನ್ನೆಲೆ ಬೀಸುವ ಕಲ್ಲಿನಲ್ಲಿ ಬೀಸುವ ಕೆಲಸ. ಹಿಂದಿನ ಕಾಲದಲ್ಲಿ ಇದು ಪ್ರತಿನಿತ್ಯದ ಕೆಲಸವಾಗಿತ್ತು. ಆಗ ಬೀಸುವ ಕಲ್ಲು ಎಲ್ಲರ ಮನೆಯಲ್ಲೂ ಇರುತ್ತಿದ್ದ ಪರಿಕರ!
ನನ್ನ ಅಜ್ಜಯ್ಯನ ಮನೆಯಲ್ಲೂ ಒಂದು ಬೀಸುವ ಕಲ್ಲಿತ್ತು. ಹಿಟ್ಟು ಮತ್ತು ರವೆಯನ್ನು ಆಗೆಲ್ಲ ಮನೆಯಲ್ಲೇ ಮಾಡಲಾಗುತ್ತಿತ್ತು. ಬೀಸುವ ಕಲ್ಲಿನ ತಿರುಗಿಸುವಿಕೆಯ ವೇಗದಲ್ಲಿಯೇ ಅಕ್ಕಿ ಒಂದೇ ಹಿಟ್ಟಾಗುತ್ತಿತ್ತು ಇಲ್ಲವೇ ರವೆಯಾಗುತ್ತಿತ್ತು. ಮನೆಯ ಹಿರಿಯರು ಬೀಸುವ ಕಲ್ಲಿನ ಮುಂದೆ ಕುಳಿತಾಗ ನಾವು ಅವರು ಬೀಸುವುದನ್ನು ಬಾಯಿ ಬಿಟ್ಟುಕೊಂಡು ನೋಡುತ್ತಿದ್ದೆವು. ಕೆಲವೊಮ್ಮೆ ಬೀಸುವಾಗ ಬೀಸುವ ಕಲ್ಲಿನ ಮಧ್ಯೆ ಧಾನ್ಯ ಹಾಕಲು ನಮಗೆ ಅನುಮತಿ ಸಿಗುತ್ತಿತ್ತು. ಆ ಕೆಲಸ ಸರಿಯಾಗಿ ಮಾಡದಿದ್ದಾಗ ನಡುಬೆನ್ನಿಗೆ ಒಂದು ಗುದ್ದು ಕೂಡಾ ಅಷ್ಟೇ ಬಿರುಸಾಗಿ ಬೀಳುತ್ತಿತ್ತು. ಸ್ವಲ್ಪ ದೊಡ್ಡವರಾಗುತ್ತಿದ್ದಂತೆ ಬೀಸುವುದಕ್ಕೂ ನಮಗೆ ಅವಕಾಶ ಸಿಕ್ಕಿತ್ತು. ಆದರೆ ಆಗ ನಾವು ಸ್ವಲ್ಪ ಹೊತ್ತು ಬೀಸಿ ನಂತರದಲ್ಲಿ ಆ ಕೆಲಸದಿಂದ ತಪ್ಪಿಸಿಕೊಳ್ಳುತ್ತಿದ್ದೆವು. ಏಕೆಂದರೆ ಆ ಕೆಲಸ ಮಾಡುವುದು ಅದನ್ನು ನೋಡಿದಷ್ಟು ಸುಲಭವಾಗಿರಲಿಲ್ಲ. ಬೀಸುವ ಕಲ್ಲನ್ನು ತಿರುಗಿಸಿ ತಿರುಗಿಸಿ ರಟ್ಟೆ ನೋವು ಬರುತ್ತಿತ್ತು.
ಮದುವೆಯಾಗಿ ಗಂಡನ ಮನೆಗೆ ಬಂದಾಗ ಅಲ್ಲಿಯೂ ಕೂಡಾ ಬೀಸುವ ಕಲ್ಲಿನ ಬಳಕೆ ಮಾಡುತ್ತಿದ್ದರು. ಬೀಸುವ ಕಲ್ಲಿನ ಮುಂದೆ ಇಬ್ಬರು ಕುಳಿತು ಸರದಿ ಪ್ರಕಾರ ಒಬ್ಬರು ಧಾನ್ಯ ಹಾಕುತ್ತಿದ್ದರೆ ಇನ್ನೊಬ್ಬರು ಬೀಸುತ್ತಿರುತ್ತಿದ್ದರು. ನಾನೂ ಆಗಾಗ ಕೈ ಜೋಡಿಸುತ್ತಿದ್ದೆ. ಹರಟೆ ಹೊಡೆಯುತ್ತಾ ಆ ಕೆಲಸ ಮಾಡಲು ಮಜವಾಗುತ್ತಿತ್ತು. ಅದನ್ನು ತಿರುಗಿಸುವಾಗ ಬರುತ್ತಿದ್ದ ಲಯಬದ್ಧವಾದ ಸುಂಯ್ ಸುಂಯ್ ಸದ್ದು ಎಂತಹವರಲ್ಲೂ ಸಂಗೀತ ಪ್ರಜ್ಞೆ ಮೂಡಿಸುತ್ತದೆಂದರೆ ತಪ್ಪಿಲ್ಲ!
ಬೀಸುವ ಕಲ್ಲಿನಲ್ಲಿ ತಯಾರಾದ ಧಾನ್ಯಗಳ ಹಿಟ್ಟು ಹಾಗೂ ರುಬ್ಬುವ ಕಲ್ಲಿನಲ್ಲಿ ರುಬ್ಬಲ್ಪಟ್ಟ ಮಸಾಲೆ ಹಾಗೂ ತಿಂಡಿಯ ಹಿಟ್ಟಿಗೆ ಅದರದ್ದೇ ಆದ ವಿಶಿಷ್ಟ ರುಚಿ ಇರುತ್ತದೆ. ಕಟ್ಟಿಗೆಯ ಒಲೆಯ ಮೇಲೆ ಗಡಿಗೆಯಿಟ್ಟು ರುಬ್ಬುವ ಕಲ್ಲಿನಲ್ಲಿ ರುಬ್ಬಿದ ಮಸಾಲೆ ಉಪಯೋಗಿಸಿ ಮಾಡುತ್ತಿದ್ದ ಅಡುಗೆಯ 'ಘಮ' ಈಗಿನ ಮಾಡರ್ನ್ ಉಪಕರಣಗಳನ್ನು ಉಪಯೋಗಿಸಿ ಮಾಡಿದ ಅಡುಗೆಯಲ್ಲಿ ಸಿಗದಿರುವುದು ವಿಷಾದವೇ ಸರಿ! ಬೀಸುವ ಕಲ್ಲಿನ ಹಿಟ್ಟಿನಲ್ಲಿ ಮಾಡಿದ ಖಾದ್ಯಗಳ ರುಚಿ ಕೂಡಾ ಬೇರೆಯೇ!
ಹಿಂದಿನವರ ಕೆಲಸಗಳು ದೈಹಿಕ ಶ್ರಮವನ್ನು ಬಯಸುತ್ತಿದ್ದುದೇನೋ ನಿಜ. ಆದರೆ ಆ ಕೆಲಸಗಳಿಂದ ಸಿಗುತ್ತಿದ್ದ ದೈಹಿಕ ಚಟುವಟಿಕೆಗಳು ಆಗಿನವರ ಒಳ್ಳೆಯ ಆರೋಗ್ಯದ ಗುಟ್ಟಾಗಿತ್ತು. ಆ ಕೆಲಸದೊಳಗಿದ್ದ ಲಯಗಾರಿಕೆ ಬದುಕಿನ ಖಾಲಿತನಕ್ಕೆ ಸಂಗೀತದ ದನಿಯಾಗುತ್ತಿತ್ತೇನೋ ಎನ್ನುವುದು ನನ್ನ ಅನಿಸಿಕೆ.


215. ಪರಿಸರ - ಸೋಪು
ಸೋಪ್ ಎಂದ ತಕ್ಷಣ ನನಗೆ ನೆನಪಾಗುವುದು ಬಟ್ಟೆ ಒಗೆಯುವ 501 ಬಾರ್ ಸೋಪ್ ಹಾಗೂ ಮೈಗೆ ಹಾಕುವ ಲೈಫ್ ಬಾಯ್ ಹಾಗೂ ಮೈಸೂರು ಸ್ಯಾಂಡಲ್ ಸೋಪ್.
ನಾನು ಚಿಕ್ಕವಳಿದ್ದಾಗ ನಮ್ಮ ಮನೆಯಲ್ಲಿ ಬಟ್ಟೆ ಒಗೆಯಲು 501 ಬಾರ್ ಸೋಪ್ ತರುತ್ತಿದ್ದರು. ಸುಮಾರು 6 ಇಂಚು ಉದ್ದವಿರುತ್ತಿದ್ದ ಆ ಬಾರ್ ಸೋಪ್ ಹಳದಿ ಬಣ್ಣದ್ದಾಗಿತ್ತು. ಅದರ ಮೇಲಿದ್ದ ಹಳದಿ ಬಣ್ಣದ ಕವರ್ ಮೇಲೆ 501 ಎನ್ನುವುದನ್ನು ಕೆಂಪು ಬಣ್ಣದಲ್ಲಿ ಬರೆದಿರಲಾಗುತ್ತಿತ್ತು. ನನ್ನಮ್ಮ ಅದನ್ನು ಸಮನಾದ ಮೂರು ತುಂಡುಗಳನ್ನಾಗಿ ಮಾಡಿಡುತ್ತಿದ್ದಳು. ಈಗಿನ ನೀಲಿ ಬಣ್ಣದ ಸರ್ಫ್/ರಿನ್ ಸೋಪುಗಳಂತೆ ಬಟ್ಟೆಗೆ ತಾಗಿಸುತ್ತಿದ್ದಂತೆ ನೊರೆ ಬರುತ್ತಿರಲಿಲ್ಲ. ಬಟ್ಟೆಯ ಮೇಲೆ ಸೋಪನ್ನು ಸರಿಯಾಗಿ ತಿಕ್ಕಿ ಕುಕ್ಕಿದಾಗ ಮಾತ್ರ ನೊರೆ ಬರುತ್ತಿತ್ತು. ಬಟ್ಟೆ ಒಗೆದು ಅಲುಬಲು ಕಡಿಮೆ ನೀರು ಸಾಕಾಗುತ್ತಿತ್ತು. ಅದರ ಬಳಕೆಯಿಂದ ಚರ್ಮಕ್ಕೆ ಅಷ್ಟೇನೂ ಹಾನಿಯಾಗುತ್ತಿರಲಿಲ್ಲ. ನಾನೀಗ ಅದನ್ನು ಬಳಸದಿದ್ದರೂ ಅಂಗಡಿಗೆ ಹೋಗಿ ಯಾವುದಾದರೂ ಬಾರ್ ಸೋಪ್ ನೋಡಿದಾಗ ತಕ್ಷಣ 501 ಬಾರ್ ಸೋಪಿನ ನೆನಪಾಗುತ್ತದೆ. ಕಳೆದ ಬಾರಿ ಅಂಗಡಿಗೆ ಹೋದಾಗ ಮನಸ್ಸು ತಡೆಯದೆ ಒಂದು ಹಳದಿ ಬಣ್ಣದ ಮೈಸೂರು ಬಾರ್ ಸೋಪ್ ತಂದಿದ್ದೆ😌
ನನ್ನಮ್ಮ ನಮಗೆ ಸ್ನಾನಕ್ಕೆ ಬಳಸುತ್ತಿದ್ದದ್ದು ಮೈಸೂರ್ ಸ್ಯಾಂಡಲ್ ಸೋಪ್. ಗಂಧದ ಬಣ್ಣದ ಗಂಧದ ಸುಗಂಧದ ಆ ಸೋಪ್ ಆಗ ನಮಗೆಲ್ಲ ಇಷ್ಟವಾದದ್ದಾಗಿತ್ತು. ಸ್ನಾನ ಮಾಡಿ ಬಹಳ ಹೊತ್ತಿನವರೆಗೆ ಮೈಯ್ಯಲ್ಲಿ ಗಂಧದ ಸುವಾಸನೆ ಇರುತ್ತಿತ್ತು. ಅಂತಹ ಉತ್ಕೃಷ್ಟ ಸೋಪ್ ಅದಾಗಿತ್ತು. ಅದನ್ನು ಬಿಟ್ಟು ನಮಗೆ ಬೇರೆ ಸೋಪ್ ಉಪಯೋಗಿಸಿಯೇ ಗೊತ್ತಿರಲಿಲ್ಲ. ನಾನು ದುಡಿಯಲು ಪ್ರಾರಂಭಿಸಿದ ನಂತರದಲ್ಲಿ ಮಾರುಕಟ್ಟೆಗೆ ಬರುತ್ತಿದ್ದ ಹೊಸ ಹೊಸ ಸೋಪ್ ಗಳನ್ನು ಬಳಸಲು ಪ್ರಾರಂಭಿಸಿ ಅವು ಯಾವುವೂ ಹಿಡಿಸದೆ ಕೊನೆಗೆ ಸಿಂಥಾಲ್ ಓಲ್ಡ್ ಸೋಪಿಗೆ ಅದರ ಸ್ಕಿನ್ ಫ್ರೆಂಡ್ಲಿ ಗುಣಕ್ಕಾಗಿ ಅಂಟಿಕೊಂಡೆ🤔
ಅಜ್ಜಯ್ಯನ ಮನೆಯಲ್ಲಿ ನಾನು ಓದಲು ಇದ್ದಾಗ ಅಲ್ಲಿದ್ದ ನನ್ನ ಸೋದರತ್ತೆ ಲೈಫ್ ಬಾಯ್ ಸೋಪ್ ಬಳಸುತ್ತಿದ್ದರು. ಆಗಿನ ಕಾಲದಲ್ಲಿ ಸರ್ವೇ ಸಾಮಾನ್ಯವಾಗಿ ಎಲ್ಲರೂ ಬಳಸುತ್ತಿದ್ದ ಸೋಪ್ ಲೈಫ್ ಬಾಯ್. ಮೈಗೆ ಹಚ್ಚುವ ಸೋಪ್ ಎಂದರೆ ಅಂಗಡಿಯವರು ಕೊಡುತ್ತಿದ್ದ ಸೋಪು ಲೈಫ್ ಬಾಯ್. ಆದರೆ ನನಗೇಕೋ ಅದರ ಪರಿಮಳ ಎಂದಿಗೂ ಇಷ್ಟವಾಗಲೇ ಇಲ್ಲ. ಇಂದು ಹೊಸ ಸುವಾಸನೆಯ ಲೈಫ್ ಬಾಯ್ ಸೋಪುಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದರೂ ನನಗೆ ಅದರ ಬಗ್ಗೆ ಒಲವು ಮೂಡಲೇ ಇಲ್ಲ. ಅದರಲ್ಲಿ ಸೋಪಿನ ತಪ್ಪೇನೂ ಇಲ್ಲ ಬಿಡಿ. ಅದು ನನ್ನ ಅಭಿಪ್ರಾಯ/ಅಭಿರುಚಿಯ ಸಮಸ್ಯೆಯಷ್ಟೇ😀
ಈಗ ಅಂಗಡಿಗೆ ಹೋದರೆ ನೂರಾರು ಹೆಸರಿನ/ಬ್ರ್ಯಾಂಡಿನ ಬಟ್ಟೆ ಒಗೆಯುವ ಸೋಪ್ ಹಾಗೂ ಮೈಗೆ ಹಾಕುವ ಸೋಪುಗಳು ದೊರೆಯುತ್ತವೆ. ನಮ್ಮ ಕಾಲದಲ್ಲಿದ್ದಂತೆ ಅವು ಕೆಲವೇ ವೆರೈಟಿಯ ಸೋಪುಗಳಿಗೆ ಸೀಮಿತವಾಗಿಲ್ಲ. ಆಗಿನ ಸೀಮಿತತೆ ಎನ್ನುವುದು ಆಗಿದ್ದ ಸೋಪುಗಳ ಬಗೆಗೆ ನಮಗೆ ಪ್ರೀತಿ ಬೆಳೆಯುವಂತೆ ಮಾಡಿತ್ತು. "ಇವು ನಮ್ಮವು" ಎನ್ನುವ ಭಾವ ನಮ್ಮಲ್ಲಿತ್ತು. ಅವುಗಳ ಬಗ್ಗೆ ಒಲವಿದ್ದ ಕಾರಣ ಅನಗತ್ಯವಾಗಿ ಅವುಗಳ ಅತಿಯಾದ ಬಳಕೆಯನ್ನು ನಾವು ಮಾಡುತ್ತಿರಲಿಲ್ಲ. ಅಗತ್ಯವಿದ್ದಷ್ಟೇ ಅವುಗಳ ಬಳಕೆಯಾಗುತ್ತಿತ್ತು. ಅವವೇ ಸೋಪುಗಳನ್ನು ಸತತ ಬಳಸುತ್ತಿದ್ದ ಕಾರಣ ಇಂದಿಗೂ ಕೂಡಾ ಆ ಸೋಪುಗಳ ಚಿತ್ರಣ ನಮ್ಮೊಳಗೆ ಅಚ್ಚೊತ್ತಿ ನಿಂತಿದೆ!


214. ಪರಿಸರ - ಫೇಸ್ಬುಕ್
ಫೇಸ್ಬುಕ್ ಅನ್ನು ಆಗಾಗ್ಗೆ ಸ್ಕ್ರಾಲ್ ಮಾಡುವ ಅಭ್ಯಾಸ ನನಗಿದೆ. ನನಗೆ ಅದರಲ್ಲಿ ಬರುವ ಹೊಸ ಹೊಸ ಶೋಧನೆಗಳು, ಆರೋಗ್ಯ ಸಂಬಂಧಿ ವಿಷಯಗಳು, ಮನಮುಟ್ಟುವ ಜಾಹಿರಾತುಗಳು ಖುಷಿ ಕೊಡುತ್ತವೆ. ಹಾಗೆಯೇ ಸಾಮಾನ್ಯರ ಅಸಾಮಾನ್ಯ ಸಾಧನೆಗಳ ಬಗೆಗಿನ ಕ್ಲಿಪ್ಪಿಂಗ್ ಗಳನ್ನೂ ನೋಡಿ ಹೊಸ ಪ್ರೇರಣೆ ಪಡೆಯುತ್ತೇನೆ.
ನಿನ್ನೆ ಸಂಜೆ ಫೇಸ್ಬುಕ್ ಸ್ಕ್ರಾಲ್ ಮಾಡುವಾಗ ಗೃಹಿಣಿಯ ಪಾತ್ರದ ಮಹತ್ವವನ್ನು ಸಾರುವ ಹಿಂದಿ ಭಾಷೆಯಲ್ಲಿ ನಿರೂಪಣೆ ಇರುವ ಒಂದು ವೀಡಿಯೋ ನೋಡಿದೆ. ಬಹಳ ಭಾವನಾತ್ಮಕವಾದ ಹಾಗೂ ವಾಸ್ತವಕ್ಕೆ ಹತ್ತಿರವಾದ ವೀಡಿಯೋವಾಗಿತ್ತದು. ಅತ್ಯಂತ ಪರಿಣಾಮಕಾರಿಯಾಗಿ ಧ್ವನಿಸಿದ ವೀಡಿಯೋವದು.
ಅದರಲ್ಲಿ ಒಂದು ಹೆಣ್ಣಿನ ಗತಿಸ್ಥಿತಿಯನ್ನು ಮನಮುಟ್ಟುವಂತೆ ನಿರೂಪಿಸಲಾಗಿದೆ. ಅಡುಗೆ ಮನೆಯೇ ಸರ್ವಸ್ವವಾಗಿರುವ ಹೆಣ್ಣಿನ ಬದುಕಿನ ಕಥೆಯನ್ನು ಇಲ್ಲಿ ಕಾಣಬಹುದಾಗಿದೆ. ಮನೆಯಲ್ಲಿ ತಾಯಿ ಗಂಟೆಗಟ್ಟಲೆ ತಯಾರಿ ಮಾಡಿ ಮಾಡಿದ ಅಡುಗೆ ಕ್ಷಣಾರ್ಧದಲ್ಲಿ ಖಾಲಿಯಾಗುತ್ತದೆ. ಆ ಅಡುಗೆಯನ್ನು ತಾಯಿಯಾದವಳು ಬಹಳ ಜತನದಿಂದ ಮಾಡಿರುತ್ತಾಳೆ. ಅದಕ್ಕೆ ವಿಶೇಷ ರುಚಿ ಭರಿಸಲಿಕ್ಕಾಗಿ ಮಸಾಲೆಗಳನ್ನು ಹದವಾಗಿ ಮಿಶ್ರಣ ಮಾಡಿ ಅಡುಗೆ ತಯಾರಿಸಿರುತ್ತಾಳೆ. ಆ ಅಡುಗೆ ಮಾಡುವಾಗ ಅವಳು ಅಡುಗೆ ಮನೆಯ ಬಿಸಿಯಲ್ಲಿ ಬೆಂದಿರುತ್ತಾಳೆ. ತರಕಾರಿ ಕತ್ತರಿಸುತ್ತಾ ಹಲವಾರು ಬಾರಿ ಬೆರಳುಗಳನ್ನು ಘಾಸಿಗೊಳಿಸಿಕೊಂಡಿರುತ್ತಾಳೆ. ಕುದಿಯುವ ಎಣ್ಣೆಯನ್ನು ಸಿಡಿಸಿಕೊಂಡಿರುತ್ತಾಳೆ. ಬಿಸಿ ಪಾತ್ರೆ ತಾಗಿಸಿಕೊಂಡು ಮೈಕೈ ಸುಡಿಸಿಕೊಂಡಿರುತ್ತಾಳೆ. ಗಂಟೆಗಟ್ಟಲೆ ಅಡುಗೆಯ ಕೆಲಸದಿಂದ ಸೊಂಟನೋವು, ಕಾಲುನೋವುಗಳಿಂದ ಬಳಲುತ್ತಿರುತ್ತಾಳೆ. ಅಡುಗೆ ಮನೆಯ ನಾಲ್ಕು ಗೋಡೆಗಳ ಮಧ್ಯೆ ಅವಳ ಯೌವ್ವನವನ್ನು ಕಳೆದುಕೊಂಡಿರುತ್ತಾಳೆ. ಆದರೂ ಗಂಡ-ಮಕ್ಕಳನ್ನು ಕಂಡ ಕೂಡಲೇ ಅವರ ಅಗತ್ಯಗಳನ್ನು ಪೂರೈಸಲು ಪ್ರಯತ್ನಿಸುತ್ತಾಳೆ. ಆದರೆ ದುರಂತವೇನೆಂದರೆ ಅವಳ ಸುತ್ತಲೂ ಇರುವವರಿಗೆ ಅವಳ ಒದ್ದಾಟ, ನೋವು, ತ್ಯಾಗ ಇದ್ಯಾವುದೂ ಕಾಣುವುದೇ ಇಲ್ಲ. ಏಕೆಂದರೆ ಅವೆಲ್ಲ ಅಗೋಚರವಾಗಿರವಾಗುತ್ತದೆಯಲ್ಲವೆ? ಅಗೋಚರವಾದದ್ದನ್ನು ಕಾಣುವುದಾದರೂ ಹೇಗೆ? ಅವಳು ಅಷ್ಟು ವರ್ಷಗಳಲ್ಲಿ ಬರೀ ಅಡುಗೆ ಮಾಡಿರುವುದಿಲ್ಲ. ಜೊತೆಜೊತೆಗೆ ಮನೆಯವರೆಲ್ಲರ ಬದುಕನ್ನು ಕಟ್ಟಿರುತ್ತಾಳೆ. ಆದರೆ ಅವಳು ಮಾಡಿದ ಕೆಲಸಗಳ ಪಟ್ಟಿ ಮಾಡುವುದೇ ಕಷ್ಟ. ಏಕೆಂದರೆ ಪಟ್ಟಿಗೂ ಮೀರಿದ ಕೆಲಸಗಳು ಅವಳಿಂದ ಆಗಿರುತ್ತವೆ. ಆದರೆ ಅದನ್ನು ಕಾಣುವ ಕಣ್ಣು, ಪರಿಗಣನೆಗೆ ತೆಗೆದುಕೊಳ್ಳುವ ಮನಸ್ಸು ಯಾರಿಗೂ ಇರುವುದಿಲ್ಲವಷ್ಟೆ?!
ನಾಸಿರ್ ಖಾನ್ ಎನ್ನುವವರು ಪರಿಕಲ್ಪಸಿ ವಾಚಿಸಿದ ಈ ವೀಡಿಯೋದ ದೃಶ್ಯಾವಳಿಗಳು ಅಷ್ಟು ಮನ ತಟ್ಟುವಂತಿರದಿದ್ದರೂ ಅದರ ವಾಚನ ಮನದೊಳಗಿಳಿದು ಆಲೋಚಿಸುವಂತೆ ಮಾಡುತ್ತದೆ. ನಮಗಾಗಿ ಮನೆಯಲ್ಲಿ ದುಡಿಯುವ ತಾಯಿಯನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೆ ಲಘುವಾಗಿ ಪರಿಗಣಿಸುವ ನಮ್ಮೆಲ್ಲರ ಕಳಪೆ ಮನಸ್ಥಿತಿಯ ಬಗ್ಗೆ ಜಿಗುಪ್ಸೆ ಮೂಡುವಂತೆ ಮಾಡುವ ವೀಡಿಯೋವದು. ನಿಜಕ್ಕೂ ನೋಡುತ್ತಾ ಕೇಳಲೇ ಬೇಕಾದ ಮೂರು ನಿಮಿಷಗಳ ವೀಡಿಯೋವದು. ತಪ್ಪದೇ ವೀಕ್ಷಿಸಿ - ಗಮನವಿಟ್ಟು ಆಲಿಸಿ!


213. ಪಾನೀಯ - ಚಹಾ.

ನಾನು ಚಹಾ ಪ್ರಿಯಳು. ಆದರೆ ಗ್ಯಾಸ್ಟ್ರಿಕ್ ಸಮಸ್ಯೆಯಿಂದಾಗಿ ಈಗ ಚಹಾ ಕುಡಿಯುವುದನ್ನು ಸಂಪೂರ್ಣವಾಗಿ ಕಡಿಮೆ ಮಾಡಿದ್ದೇನೆ. ನಾನು ಪಿಯುಸಿಯ ತನಕ ಬರೀ ಹಾಲು ಕುಡಿದು ಬೆಳೆದವಳು. ನಮ್ಮ ಮನೆಯಲ್ಲಿ ಕಾಫಿಯೇ ಪ್ರಧಾನ ಪೇಯ. ನನ್ನಮ್ಮ ಮಾಡುತ್ತಿದ್ದ ಕಾಫಿ ಬಹಳ ಫೇಮಸ್😌 ನಮ್ಮ ಮನೆಯಲ್ಲಿ ಚಹಾ ಕುಡಿಯುವ ರೂಢಿ ಇರಲಿಲ್ಲ. ಹೀಗಾಗಿ ನನಗೆ ಚಹಾ ರೂಢಿಯಾದದ್ದು ನನ್ನ ಸ್ನೇಹಿತೆ ಜ್ಯೂಲಿಯ ಮನೆಯಲ್ಲಿ. ಅಲ್ಲಿಂದ ಪ್ರಾರಂಭವಾದ ನನ್ನ ಚಹಾ ಕುಡಿಯುವಿಕೆ ಇಲ್ಲಿಯವರೆಗೂ ನಡೆದುಕೊಂಡು ಬಂದಿದೆ.
ಮೊದಲು ಕುಡಿಯುತ್ತಿದ್ದ ಲೈಟ್ ಚಹಾ ಬರಬರುತ್ತಾ ಸ್ಟ್ರಾಂಗ್ ಆಗಿ ಒಂದು ಹಂತಕ್ಕೆ ಖಡಕ್ ಚಹಾ ಕುಡಿಯುವ ಅಭ್ಯಾಸಕ್ಕೆ ಬಂದಿತ್ತು. ನನ್ನ ಭಾವ ನಾಗೇಶ್ ರಾವ್ ಅವರಿಂದ ಖಡಕ್ ಚಹಾದ ಅಭ್ಯಾಸವಾದದ್ದು. ಅಂತಹ ಚಹಾ ಅರ್ಧ ಲೋಟ ಕುಡಿದರೂ ಒಂದು ರೀತಿಯ ತೃಪ್ತಿ ಸಿಗುತ್ತಿತ್ತು. ಹೀಗಾಗಿ ನಾನು ಸೇರುಗೌಳಿಗೆ ಲೋಟದಿಂದ ಅರ್ಧ ಲೋಟ ಖಡಕ್ ಚಹಾ ಕುಡಿಯುವ ಹಂತಕ್ಕೆ ಬಂದಿದ್ದೆ. ಆ ಖಡಕ್ ಚಹಾದ ಬಣ್ಣ ಆಕರ್ಷಕ ಹಾಗೂ ಅದಕ್ಕೆ ಅದರದ್ದೇ ಆದ ವಿವರಣೆಗೆ ಮೀರಿದ ಪರಿಮಳ, ರುಚಿ ಇರುತ್ತದೆ.
ಚಹಾದ ಬಗ್ಗೆ ಇಷ್ಟೆಲ್ಲಾ ಬರವಣಿಗೆಗೆ ಕಾರಣ ನಿನ್ನೆ ಬೆಳಗಿನ ತಿಂಡಿಯೊಂದಿಗೆ ನಾನು ಕುಡಿಯಲು ಮಾಡಿಕೊಂಡ ಚಹಾ! ಸ್ವಲ್ಪ ಸ್ಟ್ರಾಂಗ್ ಇರಲಿ ಎಂದು ಜಾಸ್ತಿ ಪುಡಿ ಹಾಕಿದ್ದೆ. ಅದರ ಪರಿಣಾಮವಾಗಿ ಸ್ವಲ್ಪ ಸ್ಟ್ರಾಂಗ್ ಹೋಗಿ ಅದು ಬಹಳ ಬಹಳ ಸ್ಟ್ರಾಂಗ್ ಆಗಿ ಖಡಕ್ ಚಹಾ ಆಗಿ ಹೋಯಿತು. ಅದರ ಹದ ಚೆನ್ನಾಗಿದ್ದು ಅದನ್ನು ಕುಡಿಯುತ್ತಾ ಕುಡಿಯುತ್ತಾ ನನ್ನ ಈವರೆಗಿನ ಚಹಾ ಕುಡಿಯುವಿಕೆಯನ್ನು ಮೆಲುಕು ಹಾಕುವ ಹಾಗೆ ಮಾಡಿತು. ಆ ಚಹಾವನ್ನು ಬಹಳ ಆಸ್ವಾದಿಸಿ ಕುಡಿದೆ!
ಅದರೊಂದಿಗೆ ನನ್ನ ಸ್ನೇಹಿತೆ ತ್ರಿವೇಣಿ ಮಾಡುತ್ತಿದ್ದ ಕೆ ಟೀ ಯ ನೆನಪಾಯಿತು ಕೂಡಾ. ಆಕೆ ಪಾರದರ್ಶಕ ಗಾಜಿನ ಲೋಟದಲ್ಲಿ ಚಹಾದ ಡಿಕಾಕ್ಷನ್ ಹಾಗೂ ಹಾಲನ್ನು ಪ್ರತ್ಯೇಕವಾಗಿ ಇರುವಂತೆ ಮಾಡಿ ಕೊಡುತ್ತಾರೆ. ಅದನ್ನು ತದನಂತರದಲ್ಲಿ ಚಮಚದಲ್ಲಿ ಕದರಿಸಿ ಕುಡಿಯುವ ಪರಿಯೇ ಚೆಂದ. ಅವರು ಆ ರೀತಿಯಲ್ಲಿ ಚಹಾವನ್ನು ಲೋಟಕ್ಕೆ ಹಾಕುವುದನ್ನು ನೋಡುವುದೇ ಸೋಜಿಗ. ಹಾಗೆ ಮಾಡುವಾಗ ಅವರು ನೀಡುವ ವಿವರಣೆ ಅತಿ ರಂಜಕ!
ಚಹಾದ ಬಗ್ಗೆ ಬರೆಯುತ್ತಾ ಹೋದರೆ ಒಂದು ಕಾದಂಬರಿಯನ್ನೇ ಬರೆಯುವಷ್ಟು ವೈವಿಧ್ಯತೆ ಇದೆ. ಈಗೀಗಂತೂ ತರಹೇವಾರಿ ಚಹಾ ಪುಡಿಗಳು ಕೂಡಾ ಸಿಗುತ್ತವೆ. ಮೊದಲಿನಂತೆ ಬರೀ ಕಣ್ಣನ್ ದೇವನ್ ಚಹಾ ಪುಡಿಯಲ್ಲ! ಚಹಾವನ್ನು ಮಾಡುವ ಕ್ರಮದಲ್ಲೂ ವಿವಿಧತೆ ಇದೆ. ಹಾಲಿಲ್ಲದ ಚಹಾ ಈಗ ಹೆಚ್ಚೆಚ್ಚು ಪ್ರಚಲಿತಕ್ಕೆ ಬರುತ್ತಿದೆ. ಗ್ರೀನ್ ಟೀ ಯನ್ನು ಆರೋಗ್ಯವನ್ನು ಕಾಪಾಡುವ ಪೇಯ ಎಂದು ಪರಿಗಣಿಸಿದ್ದಾರೆ. ಏನೇ ಬರಲಿ, ಏನೇ ಹೋಗಲಿ ಖಡಕ್ ಚಹಾಕ್ಕೆ ಅದರದ್ದೇ ಆದ ಸ್ಥಿರವಾದ ನಿಶ್ಚಿತ ಸ್ಥಾನ ಎಲ್ಲೆಡೆಯೂ ಇದೆ ಎನ್ನುವುದನ್ನು ನಾನಂತೂ ಒಪ್ಪುತ್ತೇನೆ😌


212. ಪರಿಸರ - ಮಿಂಚು ಹುಳ
"ಎಲೆಲೆ ಬೆಳಕಿನ ಬಿತ್ತೆ! ಇರುಳ ಮೂಗಿನ ನತ್ತೆ! ಹುಳುವೆಂದು ಹೆಸರಿಟ್ಟು ಹಳಿಯುವರೆ ನಿನ್ನ? ಹುಳುವಾಗಿ ಹುಟ್ಟಿ ಲೋಕವ ಬೆಳಗುತಿರಲಿಂತು...." ಇದು ನನ್ನ ನೆನಪಿನ ಬುತ್ತಿಯಲ್ಲಿ ಸದಾ ಇರುವ ಪದ್ಯ. ಕಡೆಂಗೋಡ್ಲು ಶಂಕರ ಭಟ್ಟರ "ಪತ್ರ ಪುಷ್ಪ" ಕವನ ಸಂಕಲನದಲ್ಲಿ ಇರುವ "ಮಿಂಚುಹುಳು" ಕವನದ ಸಾಲುಗಳಿವು. ಮಕ್ಕಳ ಪದ್ಯವೆಂದು ಕಂಡರೂ ಅದು ವಾಚ್ಯಕ್ಕಿಂತ ಮೀರಿದ ಭಾವಾರ್ಥ ಹೊಂದಿದೆ. ನಮ್ಮ ಕಾಲದಲ್ಲಿ ಮಕ್ಕಳು ಹಿರಿಯರಾದಿಯಾಗಿ ಎಲ್ಲರನ್ನೂ ತಟ್ಟಿದ ಮುಟ್ಟಿದ ಪದ್ಯವಿದು.
ನಾನು ಮಿಂಚುಹುಳುವಿನ ಬಗ್ಗೆ ಬರೆಯ ಹೊರಟಿದ್ದೇ ಹೊರತು ಆ ಪದ್ಯದ ಬಗ್ಗೆ ಅಲ್ಲ. ಹಳ್ಳಿಯ ಜನರಿಗೆ ಚಿರಪರಿಚಿತ ಈ ಮಿಂಚು ಹುಳು. ಸದಾ ಬೆಳಕಿರುವ ಪೇಟೆಯಲ್ಲಿ ಇದರ ಗೋಚರತೆ ಕಷ್ಟಸಾಧ್ಯ ಎಂಬ ಕಾರಣಕ್ಕೆ ಹಳ್ಳಿ ಎಂದು ಉಲ್ಲೇಖಿಸಿದ್ದೇನೆ. ವಿದ್ಯುತ್ ಬೆಳಕಿರದ ಕಡು ಕಪ್ಪಿನ ರಾತ್ರಿಯಲ್ಲಿ ಮಿಂಚುಹುಳುಗಳ ಬೆಳಕು ನೋಡಲು ಚೆಂದ. ಅವು ಒಂದೊಂದೇ ಇದ್ದಾಗ ಅವುಗಳ ಬೆಳಕು ಅಷ್ಟು ಗಮನಕ್ಕೆ ಬಾರದಿದ್ದರೂ ಗುಂಪಾಗಿದ್ದಾಗ ಅವು ಹೊರಡಿಸುವ ಬೆಳಕು ಒಂದು ಫ್ಯಾಂಟಸಿಯ ಲೋಕವನ್ನೇ ಸೃಷ್ಟಿಸಿ ಬಿಡುತ್ತದೆ. ಅಷ್ಟು ಆಕರ್ಷಕ ಅವುಗಳ ಪುಕು ಪುಕು ಬೆಳಕು!
ನಾನು ಚಿಕ್ಕವಳಿದ್ದಾಗ ರಾತ್ರಿ ಮನೆಯೊಳಗೆ ಬರುತ್ತಿದ್ದ ಮಿಂಚುಹುಳುಗಳನ್ನು ಕಂಡು ಅವುಗಳ ಬೆಳಕು ಬಂದಲ್ಲಿ ಹಿಂಬಾಲಿಸಿ ಹೋಗುತ್ತಿದ್ದೆ. ಅವುಗಳನ್ನು ಹಿಂಬಾಲಿಸುವುದೇ ಒಂದು ಆಟ! ಅಜ್ಜಯ್ಯನ ಮನೆಯಲ್ಲಿದ್ದಾಗ ಸ್ವಲ್ಪ ಸಂಜೆಗತ್ತಲಲ್ಲಿ ಗದ್ದೆ ಬದುವಿನ ಮೇಲೆ ನಡಕೊಂಡು ಬರುವಾಗ ದೂರದಲ್ಲಿ ಮಿಣುಕುಗುಟ್ಟುತ್ತಿದ್ದ ಮಿಂಚು ಹುಳುಗಳನ್ನು ಕಂಡು ಕೆಲವೊಮ್ಮೆ ಹೆದರಿಕೆಯಾಗುತ್ತಿತ್ತು. ಆ ಬಯಲು ಜಾಗದ ಕತ್ತಲಲ್ಲಿ ಕಾಣುವ ಆ ಬೆಳಕು ಒಂದು ಅವ್ಯಕ್ತ ಭಯವನ್ನು ಹುಟ್ಟಿಸುತ್ತಿತ್ತು. ಆದರೆ ದೊಡ್ಡವಳಾಗುತ್ತಿದ್ದಂತೆ ಮಿಂಚು ಹುಳುವಿನ ಆ ಬೆಳಕನ್ನು ನಾನು ನನಗರಿವಿಲ್ಲದೆ ಇಷ್ಟಪಡತೊಡಗಿದೆ. ಈಗಲೂ ಕೆಲವೊಮ್ಮೆ ನನ್ನ ಮಲಗುವ ಕೊಠಡಿಯಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುವ ಮಿಂಚು ಹುಳುವಿನ ಬೆಳಕನ್ನು ನಾನು ಸವಿಯುತ್ತೇನೆ. ಈ ನಡುವಯಸ್ಸಿನಲ್ಲಿಯೂ ಮಿಂಚುಹುಳುವಿನ ಬೆಳಕಿನ ದರ್ಶನ ನನಗೆ ಕನಸು ಕಂಗಳನ್ನು ನೀಡುತ್ತದೆ ಎಂದರೆ ಅತಿಶಯೋಕ್ತಿಯಲ್ಲ! ಸ್ವರ್ಗ ಧರೆಗಿಳಿಯದಿದ್ದರೂ ಧರೆಯನ್ನೇ ತನ್ನ ಬೆಳಕಿನಿಂದ ಸ್ವರ್ಗವಾಗಿ ಪರಿವರ್ತಿಸುವ ಶಕ್ತಿ ಮಿಂಚುಹುಳುಗಳಿಗಿದೆ. ಮಿಂಚು ಹುಳುಗಳ ಬೆಳಕು ಕತ್ತಲ ಸೀರೆಗೆ ಹೊಳೆಯುವ ಜರಿಯಂತೆ ಕಾಣಿಸುತ್ತದೆ ಎಂದು ಕವಿ ಮನಸ್ಸು ನುಡಿಯುತ್ತದೆ. ಕವಿ ಮನಸ್ಸನ್ನು, ಕನಸು ಕಂಗಳನ್ನು ಹುಟ್ಟಿಸಲು ಶಕ್ತವಾಗಿರುವ ಮಿಂಚು ಹುಳುಗಳು ಸೃಷ್ಟಿಯ ವೈಚಿತ್ರ್ಯ ಎಂದರೆ ಸುಳ್ಳಲ್ಲ!
ಜೂನ್ - ಜುಲೈ ತಿಂಗಳ ಆಸುಪಾಸಿನಲ್ಲಿ ಹೆಚ್ಚಾಗಿ ಇವು ಕಾಣಸಿಗುತ್ತವೆ. ಇಷ್ಟೆಲ್ಲಾ ಪರಿಸರ ವಿನಾಶದ ನಡುವೆ ಕೂಡಾ ನಾವು ಮಿನುಗುವ ಮಿಂಚು ಹುಳುಗಳನ್ನು ಇನ್ನೂ ಕಾಣಬಹುದು.
ಇತ್ತೀಚೆಗಷ್ಟೇ ನಾನು ಒಂದು ಹಳೆಯ ಆದರೆ ನನಗೆ ಹೊಸದಾದ ವಿಷಯ ತಿಳಿದುಕೊಂಡೆ. ಮೊದಲ ವಿಶ್ವ ಯುದ್ಧದ ಸಂದರ್ಭದಲ್ಲಿ ಸೈನಿಕರು ಶತ್ರುಗಳಿಂದ ತಮ್ಮನ್ನು ರಕ್ಷಿಸಿಕೊಂಡು ತಮ್ಮ ರಾತ್ರಿಗಳನ್ನು ಬೆಳಗಲು ಮಿಂಚು ಹುಳುಗಳನ್ನು ಬಳಸುತ್ತಿದ್ದರಂತೆ. ವಿಚಿತ್ರವಲ್ಲವೆ? ಒಂದು ಸಣ್ಣ ಕೀಟ ನಿರ್ವಹಿಸಿದ ರಕ್ಷಕನ ಕೆಲಸವನ್ನು ನಾವು ಮೆಚ್ಚಬೇಕಲ್ಲವೆ?


211. ನೆನಪುಗಳು - ಅಜ್ಜನ ಗಡ್ಡ
ನಾನು ಚಿಕ್ಕವಳಿದ್ದಾಗ ಹೆಚ್ಚಾಗಿ ಹೊರಗಡೆ ಆಟವಾಡುತ್ತಿದ್ದ ಕಾರಣ ನನಗೆ ನನ್ನ ಸುತ್ತ ಮುತ್ತಲಿನ ವಸ್ತುಗಳನ್ನು ಕುತೂಹಲದಿಂದ ನೋಡುವ ಗುಣ ಬೆಳೆದಿತ್ತು. ನೋಡಿದ್ದರ ಬಗ್ಗೆ ಕೂಲಂಕುಷವಾಗಿ ತಿಳಿದುಕೊಳ್ಳುವ ಮನಸ್ಥಿತಿ ನನ್ನಲ್ಲಿರಲಿಲ್ಲ. ಆದರೆ ನೋಡಿದ್ದನ್ನು ಆ ಘಳಿಗೆಯಲ್ಲಿ ಆನಂದಿಸುವ, ಅನುಭವಿಸುವ ಸ್ವಭಾವ ನನ್ನದಾಗಿತ್ತು. ಇದು ನನಗೆ ವರ್ತಮಾನದ ಕ್ಷಣಗಳಲ್ಲಿ ಬದುಕುವುದನ್ನು ಕಲಿಸಿತೇನೋ?
ಬಾಲ್ಯದಲ್ಲಿ ನನಗೆ ಅತ್ಯಂತ ಕುತೂಹಲ ಮೂಡಿಸಿದ ಹಾಗೂ ಆಕರ್ಷಿಸಿದ ವಸ್ತು ಅಜ್ಜನ ಗಡ್ಡ. ನನ್ನಜ್ಜನ ಗಡ್ಡವಲ್ಲ ಮತ್ತೆ😀 ಗಾಳಿಯಲ್ಲಿ ಹಾರಿ ಬರುವ ಅಜ್ಜನ ಗಡ್ಡ. ಗಾಳಿಯಲ್ಲಿ ಎಲ್ಲಿಂದಲೋ ಹಾರಿ ಬರುವ ಒಂದು ಚಪ್ಪಟೆ, ಪುಟ್ಟ ಬೀಜದಂತಹ ಆಕಾರಕ್ಕೆ ಅಂಟಿಕೊಂಡಿರುವ ರೇಷ್ಮೆಯ ಕೂದಲೇ ಆ ಅಜ್ಜನ ಗಡ್ಡ. ಅದು ಗಾಳಿಯಲ್ಲಿ ಹಗುರವಾಗಿ, ಹೊಳೆಯುತ್ತಾ ಹಾರಿ ಬರುವಾಗ ಎಂತಹವರನ್ನೂ ಅಯಸ್ಕಾಂತದಂತೆ ತನ್ನತ್ತ ಸೆಳೆಯುತ್ತದೆ. ಇನ್ನು ಪುಟ್ಟವರಾಗಿದ್ದ ನಮ್ಮನ್ನು ಸೆಳೆಯುವುದರಲ್ಲಿ ಆಶ್ಚರ್ಯವೇ ಇಲ್ಲ.
ಅಜ್ಜನ ಗಡ್ಡ ಕಂಡ ತಕ್ಷಣ ಆಡುವ ಆಟವನ್ನು ಬಿಟ್ಟು ನಾವೆಲ್ಲಾ ಅದರ ಹಿಂದೆ ಓಡುತ್ತಿದ್ದೆವು. ಅದನ್ನು ಹಿಡಿಯಲು ಮಾಡುವ ಪ್ರಯತ್ನವೇ ಒಂದು ಆಟವಾಗುತ್ತಿತ್ತು. ಇನ್ನೇನು ನಮ್ಮ ಕೈಗೆ ಸಿಕ್ಕಿತು ಎನ್ನುವಾಗ ಬೀಸಿ ಬರುವ ಗಾಳಿ ಅದನ್ನು ತನ್ನೊಡನೆ ಒಯ್ಯುತ್ತಿತ್ತು. ಆಗ ನಮಗಾಗುತ್ತಿದ್ದ ಹತಾಶೆ ಅಪಾರ. ಕೈಗೆ ಬಂದ ತುತ್ತು ಬಾಯಿಗೆ ಬರದ ಸಂಕಷ್ಟವನ್ನು ಅನುಭವಿಸಿದವರೇ ಬಲ್ಲರು. ಆದರೂ "ಬಿಡದೆ ಯತ್ನವ ಮಾಡು" ಎನ್ನುವ ಸೂಕ್ತಿಯಲ್ಲಿ ನಂಬಿಕೆ ಇದ್ದ ನಾವು ಅದು ಕೆಳಗೆ ಬಂದಾಗ ಪುನಃ ಅದನ್ನು ಹಿಡಿಯುವ ಕೆಲಸದಲ್ಲಿ ತೊಡಗುತ್ತಿದ್ದೆವು. ಒಂದೊಮ್ಮೆ ಅಜ್ಜನ ಗಡ್ಡ ಕೈಗೆ ಸಿಕ್ಕಲ್ಲಿ ಅದನ್ನು ಜೋಪಾನವಾಗಿ ಸ್ವಲ್ಪ ಹೊತ್ತು ಹಿಡಿದುಕೊಂಡು ನಂತರ ಗಾಳಿಯಲ್ಲಿ ತೂರಿ ಬಿಡುತ್ತಿದ್ದೆವು. ಯಾರು ಬಿಟ್ಟ ಅಜ್ಜನ ಗಡ್ಡ ಹೆಚ್ಚು ದೂರ ಸಾಗಿದೆ ಎನ್ನುವ ಸ್ಪರ್ಧೆ ಕೂಡಾ ನಮ್ಮೊಳಗೆ ನಡೆಯುತ್ತಿತ್ತು. ಅದು ಗಾಳಿಯಲ್ಲಿ ಸ್ವಲ್ಪ ದೂರ ಸಾಗಿದ ಮೇಲೆ ಹಲವಾರು ಅಜ್ಜನ ಗಡ್ಡಗಳಲ್ಲಿ ನಾವು ಬಿಟ್ಟದ್ದು ಯಾವುದೆಂದು ಗೊತ್ತಾಗದೆ ತಬ್ಬಿಬ್ಬಾಗುತ್ತಿದ್ದೆವು🤔
ಅಂತಹ ಹಗುರವಾದ, ಸೂಕ್ಷ್ಮವಾದ ಅಜ್ಜನ ಗಡ್ಡದಂತಹ ವಸ್ತು ನಮ್ಮನ್ನು ಹೇಗೆಲ್ಲಾ, ಎಷ್ಟೆಲ್ಲಾ ವ್ಯಸ್ತವಾಗಿಡುತ್ತಿತ್ತು ಎನ್ನುವುದು ಈಗ ಯೋಚಿಸಿದಾಗ ಆಶ್ಚರ್ಯವಾಗುತ್ತದೆ. ಅದರ ಪ್ರಭಾವ ನನ್ನ ಮೇಲೆ ಎಷ್ಟಿದೆಯೆಂದರೆ ಈಗಲೂ ಕೂಡಾ ಅಜ್ಜನ ಗಡ್ಡ ಕಂಡರೆ ನಾನು ರೋಮಾಂಚಿತಳಾಗುತ್ತೇನೆ. ಅದನ್ನು ಹಿಂಬಾಲಿಸಿ ಹೋಗುವ ಮನಸ್ಸಾಗುತ್ತದೆ. ಆದರೆ ಈಗ ಭಾರವಾಗಿರುವ ದೇಹ ಅಂತಹ ಹಗುರವಾದ ಅಜ್ಜನ ಗಡ್ಡದ ಹಿಂದೆ ಹೋಗಲು ಸಶಕ್ತವಾಗಿಲ್ಲ ಎನ್ನುವುದರ ಅರಿವಾಗಿ ಅದರೆಡೆಗಿನ ನಡಿಗೆ ತಟಸ್ಥವಾಗಿ ಬಿಡುತ್ತದೆ. ಆದರೆ ಕಾಣುವ ಕಣ್ಣು, ಸ್ಪಂದಿಸುವ ಮನಸ್ಸೇನೂ ಭಾರವಾಗಿರದ ಕಾರಣ ಅವೆರಡೂ ಅದರ ಹಿಂದೆ ಹೋಗುತ್ತವೆ. ಸೂರ್ಯನ ಬೆಳಕಿನಲ್ಲಿ ಹೊಳೆಯುತ್ತಾ ಅದು ಯಾವುದೇ ಆತುರವಿಲ್ಲದೇ ತನ್ನದೇ ಆದ ಓಘದಲ್ಲಿ ಗಾಳಿ ಬಂದತ್ತ ಸಾಗುತ್ತಾ ಹೋಗುವ ಪರಿಯನ್ನು ಎಂದಿಗೂ ಮರೆಯಲಾಗುವುದಿಲ್ಲ. ಇಂತಹ ಸಣ್ಣ ಸಣ್ಣ ಖುಷಿಗಳೇ ನಮ್ಮ ಬದುಕನ್ನು ಸುಂದರಗೊಳಿಸುವವು ಎನ್ನುವ ನನ್ನ ಅನಿಸಿಕೆಗೆ ನಿಮ್ಮ ಸಮ್ಮತಿಯೂ ಇರಬಹುದಲ್ಲವೆ?


210. ಪರಿಸರ - ಸಾಂಬಾರ್ ಬಟ್ಟಲು

ಹಿಂದೆಲ್ಲಾ ಅಡುಗೆ ಮನೆಯ ವಸ್ತುಗಳನ್ನು ದಾಸ್ತಾನು ಮಾಡಲು ಮರದ ಪರಿಕರಗಳನ್ನು ಬಳಸುತ್ತಿದ್ದರು. ಮರದ ಸೌಟು, ಚಮಚ, ಕಡಗೋಲು, ಲಟ್ಟಣಿಗೆ, ರಂಗೋಲಿ ಮರಿಗೆ, ಅಕ್ಕಿ ಮರಿಗೆ, ಬಳೆ ಸ್ಟ್ಯಾಂಡ್, ಸಾಂಬಾರ್ ಬಟ್ಟಲು...ಹೀಗೇ ಬಹಳಷ್ಟು ಮರದ ಪರಿಕರಗಳು ಉಪಯೋಗದಲ್ಲಿದ್ದವು. ಅದರಲ್ಲಿ ದಿನಬಳಕೆಗೆ ಅತ್ಯಂತ ಉಪಯೋಗಿಸಲ್ಪಡುತ್ತಿದ್ದದ್ದು ಸಾಂಬಾರ್ ಬಟ್ಟಲು.
ಭಾರತೀಯ ಅಡುಗೆ ಎಂದರೆ ಮಸಾಲೆಗಳ ಸಮ್ಮಿಶ್ರಣ. ಕುತ್ತುಂಬರಿ, ಜೀರಿಗೆ, ಸಾಸಿವೆ, ಮೆಂತೆ, ಒಣಮೆಣಸಿನ ತುಂಡು, ಅರಿಶಿನ ಪುಡಿ...ಇಂತಹ ಹಲವಾರು ವಸ್ತುಗಳ ಆಗರ ಈ ಸಾಂಬಾರ್ ಬಟ್ಟಲು. ಪ್ರತಿನಿತ್ಯ ಅಡುಗೆಗೆ ಬೇಕಾಗುವ ಈ ಪದಾರ್ಥಗಳನ್ನು ಬೇರೆ ಬೇರೆ ಡಬ್ಬಗಳಿಂದ ಹುಡುಕಿ ಆರಿಸಿ ಅಡುಗೆಗೆ ಬಳಸುವುದು ಬಹಳ ಸಮಯವನ್ನು ಕಬಳಿಸುವ ಕಾರಣ ಈ ಸಾಂಬಾರ್ ಬಟ್ಟಲಲ್ಲಿ ಸೇರಿಸಿಡುವ ಜಾಣತನ ನಮ್ಮ ಹಿರಿಯರದ್ದು.
ಸಾಂಬಾರ್ ಬಟ್ಟಲು ಔಷಧಿಯ ಪುಟ್ಟ ಭಂಡಾರವೆಂದರೂ ಸರಿ. ಶೀತ, ಜ್ವರ, ಅಜೀರ್ಣ, ಕಫ - ಪಿತ್ಥ ಬಾಧೆಗೆ ರಾಮಬಾಣಗಳು ಈ ಸಾಂಬಾರ್ ಬಟ್ಟಲಿನಲ್ಲಿ ಸಿಗುತ್ತವೆ. ಅಡುಗೆಯ ರುಚಿಯ ಹಿಂದಿನ ರಹಸ್ಯ ಈ ಸಾಂಬಾರ್ ಬಟ್ಟಲಿನಲ್ಲಿದೆ. ತರಕಾರಿ ಕತ್ತರಿಸುತ್ತಾ ಗಾಯವಾದರೆ ರಕ್ತ ನಿಲ್ಲಿಸುವ ತಾಕತ್ತು ಸಾಂಬಾರ್ ಬಟ್ಟಲಿನಲ್ಲಿರುವ ಅರಿಶಿನ ಪುಡಿಯಲ್ಲಿದೆ. ಸಾರು, ಸಾಂಬಾರು, ತಂಬುಳಿ, ಗೊಜ್ಜಿನ ಘಮ ಹೆಚ್ಚಿಸುವ ಶಕ್ತಿ ಈ ಸಾಂಬಾರ್ ಬಟ್ಟಲಿನ ವಸ್ತುಗಳನ್ನು ಬಳಸಿ ಮಾಡುವ ಒಗ್ಗರಣೆಗಿದೆ. ಒಂದು ರೀತಿಯಲ್ಲಿ ಈ ಸಾಂಬಾರ್ ಬಟ್ಟಲಿನಲ್ಲಿ ಇರುವ ಮಸಾಲೆಗಳ ಖಾನೆಗಳು ನಮ್ಮ ಬದುಕಿನ ದಿನನಿತ್ಯದ ಅನುಭವಗಳ ಸಣ್ಣ ಸಣ್ಣ ಖಾನೆಗಳಂತೆ ಇರುತ್ತವೆ!
ಮರದ ಸಾಂಬಾರ್ ಬಟ್ಟಲಿನ ಪರಿಕಲ್ಪನೆ ಮಾಡಿದ ನಮ್ಮ ಹಿರಿಯರ ಬುದ್ಧಿಮತ್ತೆಯನ್ನು ಮೆಚ್ಚಬೇಕು. ಹೊರಗಿನ ಹವಾಮಾನದ ಬದಲಾವಣೆಯ ತಾಪ ಒಳಗಿನ ವಸ್ತುಗಳಿಗೆ ತಾಕದೇ ಅವುಗಳ ತಾಜಾತನ ಉಳಿಯಲಿ, ಆಹಾರದ ರುಚಿ ಕೆಡದಿರಲಿ ಎಂಬ ಅವರ ಉದ್ದೇಶವನ್ನು ಈ ಸಾಂಬಾರ್ ಬಟ್ಟಲು ಉಳಿಸಿ ಬೆಳೆಸಿದೆ ಎಂದರೆ ತಪ್ಪಲ್ಲ. ನಮ್ಮ ಜೀವನದ ಅನುಭವಗಳನ್ನು ಈ ಸಾಂಬಾರ್ ಬಟ್ಟಲಿನ ಖಾನೆಯಂತೆ ಪ್ರತ್ಯೇಕಿಸಿ ಬೇಕಾದಷ್ಟನ್ನೇ ಸ್ವೀಕರಿಸುವ ಮನೋಧರ್ಮವನ್ನು ನಮ್ಮಲ್ಲಿ ಬೆಳೆಸಿಕೊಂಡರೆ ನಮ್ಮ ಬದುಕು ಯಾವುದೇ ಏಳುಬೀಳುಗಳಿಂದ ಧಕ್ಕೆಗೊಳಪಡದೆ ಜೀವಂತಿಕೆಯ ತಾಜಾತನವನ್ನು ಕಾಪಿಟ್ಟುಕೊಳ್ಳಲು ಸಾಧ್ಯ ಎನ್ನುವುದು ನನ್ನ ಅನಿಸಿಕೆ. ಆದರೆ ಸಾಂಬಾರ್ ಬಟ್ಟಲಿನೊಳಗೆ ಪ್ರತ್ಯೇಕತೆ ಇದ್ದರೂ ಅಡುಗೆಗೆ ಉಪಯೋಗಿಸಲ್ಪಡುವಾಗ ರುಚಿಯ ಹೆಚ್ಚಳಕ್ಕಾಗಿ ಅಲ್ಲಿ ಆ ಮಸಾಲೆಗಳ ಸಮ್ಮಿಶ್ರಣವನ್ನು ಮಾಡಲೇ ಬೇಕಾಗುತ್ತದೆ. ಹಾಗೆಯೇ ನಮ್ಮ ಬದುಕಿಗೆ 'ಘಮ' ಸಿಗಬೇಕೆಂದರೆ ಭಾವನೆಗಳ ಸಮ್ಮಿಶ್ರಣ ಮಾಡಲು ನಾವು ಕಲಿಯಬೇಕು. ಎಷ್ಟರ ಮಟ್ಟಿಗೆ ಪ್ರತ್ಯೇಕತೆ - ಏಕತೆ ಇರಬೇಕೆನ್ನುವುದನ್ನು ನಿರ್ಧರಿಸುವ ತಾಕತ್ತು ನಾವು ಬೆಳೆಸಿಕೊಳ್ಳಬೇಕಷ್ಟೇ! ಒಂದು ಸಾಂಬಾರ್ ಬಟ್ಟಲಿನ ವಿಶ್ಲೇಷಣೆ ನಮ್ಮ ಮುಂದೆ ಬದುಕಿನ ಎಷ್ಟೆಲ್ಲಾ ಸತ್ಯಗಳ ಅನಾವರಣ ಮಾಡುತ್ತದೆಯಲ್ಲವೆ?


209. ನೆನಪುಗಳು - ಮನೆ ಬಳಕೆ ಸಾಮಾನುಗಳು
ಹಿಂದಿನ ಕಾಲದಲ್ಲಿ ಹಳ್ಳಿಯ ಪ್ರತಿಯೊಂದು ಮನೆಗಳಲ್ಲೂ ಬೆಳಿಗ್ಗೆ ಎದ್ದು ತಪ್ಪದೇ ಮಾಡುತ್ತಿದ್ದ ಕೆಲಸಗಳೆಂದರೆ ದೇವರ ಪೂಜೆಗೆ ಹೂವು ಕೊಯ್ಯುವುದು, ಕೊಟ್ಟಿಗೆಯಲ್ಲಿ ಹಾಲು ಕರೆಯುವುದು ಹಾಗೂ ಮೊಸರು ಕಡೆದು ಬೆಣ್ಣೆ ತೆಗೆಯುವುದು. ಆ ಕಡೆದ ಮಜ್ಜಿಗೆ ಕುಡಿಯಲು ಬಲು ಹಿತ.
ನನ್ನ ಅಪ್ಪನಿಗೆ ವರ್ಗಾವಣೆಯ ಕೆಲಸವಾಗಿದ್ದ ಕಾರಣ ನಾವು ಮನೆಯ ಬಳಕೆಗೆ ಹಾಲನ್ನು ಖರೀದಿಸುತ್ತಿದ್ದೆವು. ಹೀಗಾಗಿ ನಮ್ಮ ಮನೆಯಲ್ಲಿ ದೊಡ್ಡ ಪಾತ್ರೆಯಲ್ಲಿ ಹಾಲನ್ನು ಹೆಪ್ಪು ಹಾಕುತ್ತಿರಲಿಲ್ಲ. ಕಡಗೋಲನ್ನು ಕೈಯಲ್ಲಿ ಹಿಡಿದು ಮೊಸರು ಕಡೆಯುತ್ತಿದ್ದೆವು. ಕೆಲವೊಮ್ಮೆ ಹೆಪ್ಪು ಹಾಕಿದ ಹಾಲಿನ ಪ್ರಮಾಣ ಜಾಸ್ತಿ ಇದ್ದಾಗ ಕಡಗೋಲಿಗೆ ಹಗ್ಗ/ಕಡೆಯುವ ಬಳ್ಳಿ ಕಟ್ಟಿ ಮೊಸರು ಕಡೆಯುತ್ತಿದ್ದೆವು.
ನಾನು ಮಲೆನಾಡಿನ ತುಂಬು ಸಂಸಾರಕ್ಕೆ ಸೊಸೆಯಾಗಿ ಬಂದಾಗ ಅಲ್ಲಿನ ಚಿತ್ರಣವೇ ಬೇರೆಯದಾಗಿತ್ತು. ಮನೆ ತುಂಬಾ ಜನ, ಕೊಟ್ಟಿಗೆ ತುಂಬಾ ದನಕರುಗಳು, ಒಳ್ಳೆಯ ಕರಾವಿದ್ದ ಮನೆ. ಮೊಸರು, ಬೆಣ್ಣೆ, ತುಪ್ಪವಿಲ್ಲದೆ ಆಹಾರ ಗಂಟಲಿನಿಂದ ಕೆಳಗೇ ಹೋಗದಂತಹ ಮನಸ್ಥಿತಿಯ ಜನ! ಹಾಲನ್ನು ದೊಡ್ಡ ಸ್ಟೀಲಿನ ಬಕೆಟ್ ನಲ್ಲಿ ಕರೆದು ತರಲಾಗುತ್ತಿತ್ತು. ದೊಡ್ಡದಾದ ಪಾತ್ರೆಯಲ್ಲಿ ಹೆಪ್ಪು ಹಾಕುತ್ತಿದ್ದ ಹಾಲನ್ನು ಬೆಳಿಗ್ಗೆ ಎದ್ದ ಕೂಡಲೇ ಮನೆಯಲ್ಲಿ ಯಾರಾದರೊಬ್ಬರು ಕಡೆಯುತ್ತಿದ್ದರು. ಅದಕ್ಕಾಗಿ ಅಡುಗೆ ಮನೆಯ ಮೂಲೆಯಲ್ಲೊಂದು ಗೂಟ ಹುಗಿಯಲಾಗಿತ್ತು. ತೊಳೆದ ಕಡಗೋಲನ್ನು ಅದಕ್ಕೆ ಕಟ್ಟಿಡುತ್ತಿದ್ದರು. ಬೆಳಿಗ್ಗೆ ಗೂಟದ ಎರಡು ಹಗ್ಗಗಳಿಗೆ ಬಿಸಿನೀರಿನಲ್ಲಿ ಅದ್ದಿ ತೆಗೆದ ಕಡಗೋಲನ್ನು ಸೆಟ್ ಮಾಡಿ ಅದರ ನಡುಭಾಗಕ್ಕೆ ಕಟ್ಟಿದ ಹಗ್ಗ/ಕಡೆಯುವ ಬಳ್ಳಿಯನ್ನು ಎರಡೂ ಕೈಗಳಿಂದ ಸೊರಸೊರ ತಿರುಗಿಸುತ್ತಾ ಕಡೆಯುತ್ತಾ ಹೋದರೆ ನಿಧಾನವಾಗಿ ಬೆಣ್ಣೆಯ ಮುದ್ದೆ ಮಜ್ಜಿಗೆಯ ಮೇಲೆ ತೇಲತೊಡಗುತ್ತಿತ್ತು. ಬೆಣ್ಣೆಯ ಉತ್ಪತ್ತಿಯ ಈ ಪ್ರಕ್ರಿಯೆ ಬದುಕಿನ ಜೀವ - ಜೀವಂತಿಕೆಯ ದರ್ಶನ ಮಾಡಿಸುತ್ತಿತ್ತು.
ನಾನು ರಜಾಕಾಲದಲ್ಲಿ ನನ್ನ ಗಂಡನ ಮನೆಯಲ್ಲಿದ್ದಾಗ ಎಷ್ಟೋ ಸಲ ಮೊಸರನ್ನು ಮಥಿಸಿದ್ದಿದೆ. ಮಥಿಸುವಾಗಿನ ಲಯಬದ್ಧತೆ ನನಗೆ ಖುಷಿ ಕೊಡುತ್ತಿತ್ತು. ಅದರಲ್ಲೊಂದು ತನ್ಮಯತೆ ಇತ್ತು. ಬೆಣ್ಣೆ ಎಷ್ಟು ಹೊತ್ತಿಗೆ ಬರುತ್ತದೆ ಎನ್ನುವ ಕಾಯುವಿಕೆ, ಬೆಣ್ಣೆ ಮುದ್ದೆ ಮಜ್ಜಿಗೆಯಿಂದ ಹೊರಬರುವಾಗಿನ ಪ್ರಕ್ರಿಯೆ ಎಲ್ಲಾ ಒಂದು ರೀತಿಯ ಹೊಸ ಪ್ರಪಂಚವನ್ನೇ ನನ್ನ ಮುಂದೆ ತೆರೆದಿಡುತ್ತಿತ್ತು. ಬೆಳಗಿನ ಈ ಕಾರ್ಯ ಮನಸ್ಸಿಗೆ ಉಲ್ಲಾಸ ಕೊಡುತ್ತಿತ್ತು. ಆದರೆ ಒಬ್ಬೊಬ್ಬರೇ ಇದ್ದು ಮೈ ತುಂಬಾ ಕೆಲಸವಿದ್ದಾಗ ಮೊಸರು ಕಡೆಯುವ ಕೆಲಸ ಹೊರೆ ಎನಿಸಿ ಬಿಡುತ್ತಿತ್ತು. ಏಕೆಂದರೆ ಈ ಕೆಲಸ ವ್ಯವಧಾನವನ್ನು ಬಯಸುತ್ತದೆ.
ಮೊಸರು ಕಡೆಯುವ ಕೆಲಸ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ನಡೆಯುತ್ತದೆ. ಆದರೆ ಎಲ್ಲಾ ಕಡೆಯೂ ಮರದ ಕಡಗೋಲಿನ ಬಳಕೆ ಸಾಮಾನ್ಯವಾದದ್ಧು. ಕಾಲಾನಂತರದಲ್ಲಿ ಮರದ ಕಡಗೋಲನ್ನು ಸ್ಟೀಲಿನ ಪುಟ್ಟ ಕಡಗೋಲು ರಿಪ್ಲೇಸ್ ಮಾಡಿತು. ನಂತರದಲ್ಲಿ ಮೊಸರು ಕಡೆಯುವ ಯಂತ್ರ ಆ ಕೆಲಸ ಮಾಡುತ್ತಿದೆ. ಈಗ ಪ್ರತಿ ಮನೆಗಳಲ್ಲೂ ಇರುವ ಕಡಗೋಲು, ಹಗ್ಗ ಅಟ್ಟ ಸೇರಿದೆ. ಮೊಸರು ಕಡೆಯುವ ಯಂತ್ರ ನಮ್ಮ ಯಾಂತ್ರಿಕ ಬದುಕಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಈಗಲೂ ಮೊಸರಿನಿಂದ ಬೆಣ್ಣೆ ಬರುತ್ತಿದೆ. ಆದರೆ ಅದರ ಹಿಂದಿದ್ದ ಕಡಗೋಲಿನ ಕಡೆಯುವಿಕೆಯ ಲಯಬದ್ಧತೆ ಮಾಯವಾಗಿದೆಯಷ್ಟೇ


208. ನೆನಪುಗಳು - ಎಣ್ಣೆಯ ದೀಪಗಳು

ನಾನು ಅರವತ್ತರ ದಶಕದಲ್ಲಿ ಹುಟ್ಟಿದವಳಾದ ಕಾರಣ ವಿದ್ಯುತ್ ಲಭ್ಯತೆ ಇದ್ದ ಜಮಾನದವಳು. ಆಗೆಲ್ಲ ನಿರಂತರ ವಿದ್ಯುತ್ ಲಭ್ಯತೆ ಇರುತ್ತಿರಲಿಲ್ಲವಾದ ಕಾರಣ ವಿದ್ಯುತ್ ಇಲ್ಲದಿದ್ದಾಗ ಚಿಮಣಿ ದೀಪವೇ ಗತಿಯಾಗಿತ್ತು. ಹೀಗಾಗಿ ನನ್ನ ಜಮಾನ ಒಂದು ರೀತಿಯ ವಿದ್ಯುತ್ ಹಾಗೂ ಚಿಮಣಿ ದೀಪದ ಮಿಶ್ರಿತ ಜಮಾನ ಎಂದರೂ ತಪ್ಪಿಲ್ಲ.
ನಾನು ಚಿಮಣಿ ಬುಡ್ಡಿಯನ್ನು ನೋಡುವುದನ್ನು ಬಿಟ್ಟದ್ದು ಈಗ್ಗ್ಯೆ ಹತ್ತ್ಹನ್ನೆರಡು ವರ್ಷಗಳ ಕೆಳಗೆ ಎಂದರೂ ತಪ್ಪಿಲ್ಲ. ಆಗೆಲ್ಲಾ ಲಾಟೀನು ಹಾಗೂ ಚಿಮಣಿ ಬುಡ್ಡಿಗಳು ಪ್ರತಿ ಮನೆಯ ಅವಿಭಾಜ್ಯ ಅಂಗವಾಗಿದ್ದವು. ಅವಿಲ್ಲದಿದ್ದರೆ ಕತ್ತಲ ಲೋಕದಲ್ಲಿ ಮುಳುಗಿ ಹೋಗಬೇಕಿತ್ತು.
ನನಗಿನ್ನೂ ನನ್ನ ಅಜ್ಜಯ್ಯ ಬಳಸುತ್ತಿದ್ದ ಚಿಮಣಿ ಬುಡ್ಡಿಯ ನೆನಪಿದೆ. ವಿದ್ಯುತ್ ಇದ್ದರೂ ಕೂಡ ಅದನ್ನು ಅತಿ ಮಿತವಾಗಿ ಬಳಸುತ್ತಿದ್ದ ವ್ಯಕ್ತಿ ನನ್ನ ಅಜ್ಜಯ್ಯ. ಪ್ರಾತಃಕಾಲದಲ್ಲೆದ್ದು ಜನಿವಾರಕ್ಕಾಗಿ ಚರಕದಲ್ಲಿ ನೂಲುತ್ತಿದ್ದ ನನ್ನ ಅಜ್ಜಯ್ಯ ಆ ಕೆಲಸವನ್ನು ಚಿಮಣಿ ದೀಪದ ಬೆಳಕಿನಲ್ಲಿಯೇ ಮಾಡುತ್ತಿದ್ದರು. ನಮ್ಮ ಮನೆಯಲ್ಲಿ ಲಾಟೀನು ಕೂಡಾ ಇತ್ತು. ಆ ಲಾಟೀನನ್ನು ಪ್ರತಿದಿನ ಒರೆಸಿ ಅದರ ಬತ್ತಿ ಸರಿಮಾಡಿ ಇಡುವ ಕೆಲಸವನ್ನು ಕಾಶತ್ತೆ ಮಾಡುತ್ತಿದ್ದರು. ಒಂದು ವೇಳೆ ವಿದ್ಯುತ್ ಇಲ್ಲದಾದ ಸಂದರ್ಭದಲ್ಲಿ ಆದು ಉಪಯೋಗ ಯೋಗ್ಯ ಸ್ಥಿತಿಯಲ್ಲಿ ಇರಲೆಂಬುದು ಅವರ ಉದ್ದೇಶವಾಗಿತ್ತು. ಹೆಚ್ಚಿನ ದಿನಗಳಲ್ಲಿ ಅದನ್ನು ಉಪಯೋಗಿಸುವ ಅಗತ್ಯವೂ ಬರುತ್ತಿತ್ತು.
ಪರೀಕ್ಷೆಯ ಸಮಯದಲ್ಲಿ ಲಾಟೀನಿನ ಬೆಳಕಿಗೆ ಕಣ್ಣು ಅಡ್ಜಸ್ಟ್ ಮಾಡಿ ಓದುವ ಪ್ರಕ್ರಿಯೆ ನಮ್ಮನ್ನು ಹೈರಾಣಾಗಿಸುತ್ತಿತ್ತು. ಆದರೂ ಓದುವ ಅನಿವಾರ್ಯತೆ ನಮ್ಮನ್ನು ಆ ಬೆಳಕಿನಲ್ಲಿ ಓದಲು ತಯಾರು ಮಾಡುತ್ತಿತ್ತು.
ನನಗಿನ್ನೂ ನಾನು ಮದುವೆಯಾಗಿ ಕೆಳಮನೆಗೆ ಬಂದಾಗ ಕಾಡಿನ ಕಡು ಕತ್ತಲಿನಲ್ಲಿ ಗ್ಯಾಸ್ ಲೈಟ್ ಬೆಳಕಿನಲ್ಲಿ ನನ್ನನ್ನು ಬರಮಾಡಿಕೊಂಡ ಥ್ರಿಲ್ಲಿಂಗ್ ಅನುಭವ ಇನ್ನೂ ಹಸಿಯಾಗಿದೆ. ರಜಾದಿನಗಳಲ್ಲಿ ವಿದ್ಯುತ್ ಇಲ್ಲದಿದ್ದಾಗ ಲಾಟೀನು, ಚಿಮಣಿ ಬೆಳಕಿನಲ್ಲಿ ಆ ದೊಡ್ಡ ಮನೆಯಲ್ಲಿ ಅತ್ತಿತ್ತ ಓಡಾಡುವಾಗ ಒಳಗೊಳಗೆ ಕಾಡುತ್ತಿದ್ದ ಅವ್ಯಕ್ತ ಭಯದ ಅನುಭವ ಇನ್ನೂ ನನ್ನೊಳಗೆ ಅಡಗಿದೆ. ವಿಶೇಷದ ದಿನಗಳಲ್ಲಿ ಗ್ಯಾಸ್ ಲೈಟ್ ಬೆಳಕಿನಲ್ಲಿ ಅಡುಗೆ ತಯಾರಿ ಹಾಗೂ ಕಾರ್ಯಕ್ರಮದ ತಯಾರಿಯನ್ನು ಭರ್ಜರಿಯಾಗಿ ನಡೆಸುತ್ತಿದ್ದ ಪರಿ ಇನ್ನೂ ನೆನಪಿದೆ.
ಲಾಟೀನು, ಚಿಮಣಿಯ ಬೆಳಕಿನ ಅರೆಗತ್ತಲೆಯ ಬದುಕನ್ನು ಈಗ ಊಹಿಸಿಕೊಳ್ಳಲೂ ಕಷ್ಟವಾಗುತ್ತದೆ. ಆದರೂ ಆ ಬದುಕಿಗೂ ಅದರದ್ದೇ ಆದ ತೂಕವಿತ್ತು ಹಾಗೂ ಅರ್ಥವಿತ್ತು ಎನ್ನುವುದು ಎಲ್ಲರೂ ಒಪ್ಪುವ ವಿಷಯವಲ್ಲವೇ?


207. ನೆನಪುಗಳು - ಸೈಕಲ್

ನಾನು ಸೈಕಲ್ ಬಿಡಲು ಕಲಿತದ್ದು ಒಂಬತ್ತನೇ ತರಗತಿಯಲ್ಲಿದ್ದಾಗ. ನಾನಾಗ ಕುಂದಾಪುರದಲ್ಲಿದ್ದೆ. ನಮ್ಮ ಮನೆಯ ರಸ್ತೆಯ ಆಚೆಬದಿ ಹುಡುಗಿಯರ ಪಾಳ್ಯವೇ ಇತ್ತು. ನಾವೆಲ್ಲಾ ಹೆಚ್ಚು ಕಮ್ಮಿ ಒಂದೇ ವಾರಿಗೆಯವರು. ಬೇಸಿಗೆ ರಜೆಯಲ್ಲಿ ನಾವೆಲ್ಲಾ ಸೇರಿ ಬಾಡಿಗೆ ಸೈಕಲ್ ತೆಗೆದುಕೊಂಡು ಸೈಕಲ್ ಬಿಡಲು ಕಲಿತದ್ದೇ ಕಲಿತದ್ದು. ನಾನಂತೂ ಒಂದೇ ದಿನದಲ್ಲಿ ಸೈಕಲ್ ಬ್ಯಾಲೆನ್ಸ್ ಮಾಡಿ ಹೊಡೆಯುವುದನ್ನು ಕಲಿತಿದ್ದೆ. ಮಾರನೇ ದಿನ ರಸ್ತೆಯ ಮೇಲೆ ಸೈಕಲ್ ಬಿಟ್ಟಿದ್ದೆ. ಅದರ ಮಾರನೇ ದಿನ ನನ್ನ ತಂಗಿಯನ್ನು ಡಬಲ್ ರೈಡ್ ಮಾಡಿ ರಸ್ತೆಯ ಮೇಲೆ ಬೀಳಿಸಿ ಎಲ್ಲರ ಹತ್ತಿರ ಬೈಸಿಕೊಂಡಿದ್ದೆ. ಅಂದೇ ರಸ್ತೆಯ ಮೇಲಿನ ನನ್ನ ಸೈಕಲ್ ಸವಾರಿಗೆ ಇತಿಶ್ರೀ ಹಾಕಿಬಿಟ್ಟೆ.
ಸೈಕಲ್ ಸವಾರಿ ಎಂದಾಗ ನನ್ನ ಅಪ್ಪನ ನೆನಪಾಗುತ್ತದೆ. 60ರ ದಶಕದಲ್ಲಿ ನನ್ನ ಅಪ್ಪ ತನ್ನ ಸೈಕಲ್ಲಿನ ಮೇಲೆ ನನ್ನ ಅಮ್ಮನನ್ನು ಕೂರಿಸಿಕೊಂಡು ಸುಮಾರು ಹದಿನೈದಿಪ್ಪತ್ತು ಕಿಮೀ ದೂರದ ಅವಳ ತವರುಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಆಗಿನ ಕಾಲದಲ್ಲಿ ಹೆಂಡತಿಯನ್ನು ಸೈಕಲ್ ಮೇಲೆ ಕೂರಿಸಿ ತಿರುಗಿಸುವ ಧೈರ್ಯ ಮಾಡಿದವರು ನನ್ನಪ್ಪ ಮಾತ್ರ ಅಂತ ಕಾಣುತ್ತದೆ. ಒಂದು ರೀತಿಯ ರೆವೊಲ್ಯೂಶನರಿ ವಿಷಯವಾಗಿತ್ತದು!
ಒಮ್ಮೆ ಕಲಿತ ವಿದ್ಯೆ ಯಾವತ್ತೂ ಮರೆತು ಹೋಗುವುದಿಲ್ಲ. ಹೀಗಾಗಿ ಈಗಲೂ ನಾನು ಸೈಕಲ್ ಹೊಡೆಯಬಲ್ಲೆ. ನನ್ನ ಬಂಟ ಡಿಂಗನಿಗೆ ಅವನಮ್ಮ ಈಗ್ಗ್ಯೆ ಎರಡು ತಿಂಗಳ ಕೆಳಗೆ ದೊಡ್ಡದಾದ ಹೊಸ ಸೈಕಲ್ ಕೊಡಿಸಿದಾಗ ನಾನೂ ಎರಡು ರೌಂಡ್ ಹೊಡೆದಿದ್ದೆ😀 ಈಗಲೂ ಬ್ಯಾಲೆನ್ಸ್ ಚೆನ್ನಾಗಿ ಮಾಡಬಲ್ಲೆ. ಆದರೆ ಸೈಕಲ್ ತುಳಿಯುವ ಸ್ಟ್ಯಾಮಿನಾ ಇಲ್ಲ ಅಷ್ಟೇ.
ನಾವು ಬಹಳಷ್ಟು ಬಗೆಯ ವಾಹನಗಳನ್ನು ಬಳಸಬಹುದು. ಆದರೆ ಸೈಕಲ್ ಹೊಡೆಯುವಾಗ ಸಿಗುವ ಥ್ರಿಲ್ ಬೇರೆಯೇ. ನಮ್ಮದೇ ಶಕ್ತಿಯ ಪ್ರಯೋಗದಿಂದ ಮುಂದೆ ಹೋಗುವ ಸೈಕಲ್ ನಮ್ಮ ಸ್ವಾಧೀನದಲ್ಲಿಯೇ ಇದ್ದರೂ ಬ್ಯಾಲೆನ್ಸ್ ತಪ್ಪಿ ಬೀಳುವ ಸಾಧ್ಯತೆಯನ್ನು ಇಲ್ಲಗಳೆಯಲಾಗುವುದಿಲ್ಲ. ಆದರೆ ವೇಗ ಕಡಿಮೆ ಇರುವ ಕಾರಣ ಬಿದ್ದರೂ ಹೆಚ್ಚು ಪೆಟ್ಟಾಗುವುದಿಲ್ಲವೆನ್ನುವ ಧೈರ್ಯವಿದೆ. ಬೀಳುತ್ತೇನೇನೋ ಎನ್ನುವ ಹೆದರಿಕೆ ನಮ್ಮಲ್ಲಿ ಇರಬಾರದು. ಬಿದ್ದ ಮೇಲೆ ಎದ್ದೇಳುವುದು ಇದ್ದೇ ಇರುತ್ತದೆ ಎನ್ನುವ ಭರವಸೆಯಿಂದ ಮುಂದುವರಿಯಬೇಕಷ್ಟೇ!
ಇತ್ತೀಚಿನ ದಿನಗಳಲ್ಲಿ ಪುನಃ ಸೈಕಲ್ಲಿನ ಬಳಕೆ ಹೆಚ್ಚುತ್ತಿರುವುದು ಸಂತಸದ ವಿಷಯ. ಈಗ ಸೈಕಲ್ಲುಗಳಲ್ಲಿಯೂ ಕೂಡಾ ಹೊಸ ಹೊಸ ಬಗೆಯ ಸೈಕಲ್ಲುಗಳು ಲಭ್ಯವಿವೆ. ಸೈಕಲ್ಲಿನ ಬಳಕೆಯಿಂದ ಪರಿಸರಕ್ಕೆ ಆಗುತ್ತಿರುವ ಹಾನಿ ಕಡಿಮೆಯಾಗಬಹುದೇನೋ ಎನ್ನುವ ಆಶಾಭಾವ ನಮ್ಮೆಲ್ಲರದಾಗಿರಲಿ🙏


206 . ನೆನಪುಗಳು - ಅಡುಗೆಯ ಸೊಗಡು

ಹಳ್ಳಿಗಾಡಿನ ಅಡುಗೆಯ ಸೊಗಡು ಈಗಿನ ಫಾಸ್ಟ್ ಫುಡ್ ಗಳಲ್ಲಿ ಸಿಗುವುದಿಲ್ಲ ಎನ್ನುವುದು ನನ್ನ ಅನಿಸಿಕೆ. ವಿಶೇಷ ದಿನಗಳಲ್ಲಿ ಮಾಡುವ ಅರಿಶಿನ ಎಲೆ ಕಡುಬು/ಪತೋಳಿ, ಹಾಲುಬಾಯಿ ಇವೆಲ್ಲ ಅಕ್ಕಿ, ಕಾಯಿ, ಬೆಲ್ಲ ಉಪಯೋಗಿಸಿ ಬೇಯಿಸಿ ಮಾಡುವ ಸಿಹಿತಿಂಡಿಗಳು. ಇಂತಹುದೇ ಹಲವು ಆರೋಗ್ಯಕರ ಖಾದ್ಯಗಳ ಭಂಡಾರವೇ ನಮ್ಮ ಹಳ್ಳಿ ಅಡುಗೆಯಲ್ಲಿದೆ.
ಅರಿಶಿನ ಎಲೆಯಲ್ಲಿ ಮಾಡುವ ಪತೋಳಿ ನನ್ನ ಇಷ್ಟದ ತಿನಿಸು. ಅಕ್ಕಿ ನೆನೆಸಿ, ಸ್ವಲ್ಪ ಉಪ್ಪು ಹಾಕಿ ರುಬ್ಬಿ, ಅರಿಶಿನ ಎಲೆಗೆ ರುಬ್ಬಿದ ಹಿಟ್ಟನ್ನು ಹಚ್ಚಿ, ಬೆಲ್ಲದೊಡನೆ ಕಲೆಸಿದ ಕಾಯಿ ತುರಿಯನ್ನು ಅದರ ಮೇಲೆ ಹರಡಿ, ಅಟ್ಟದಲ್ಲಿ ಬೇಯಿಸಿ, ಬೆಂದ ಮೇಲೆ ಅದರ ಮೇಲೆ ತುಪ್ಪ ಸವರಿ ತಿನ್ನುವಾಗ ಸಿಗುವ ಆನಂದ ವರ್ಣನೆಗೆ ಮೀರಿದ್ದು. ಅರಿಶಿನ ಎಲೆಯ ಸೌಮ್ಯವಾದ ಪರಿಮಳವನ್ನು ಆಸ್ವಾದಿಸುತ್ತಾ ಆ ಪತೋಳಿಯನ್ನು ತಿನ್ನಲು ಮಜವಾಗುತ್ತದೆ. ಮಾಡಲು ತುಂಬಾ ಸುಲಭ ಹಾಗೂ ತಿನ್ನಲು ಅಷ್ಟೇ ರುಚಿಯಾದ ಖಾದ್ಯ ಈ ಪತೋಳಿ.
ಹಾಲುಬಾಯಿ ಕೂಡಾ ತುಂಬಾ ರುಚಿಕರವಾದ ಸಿಹಿತಿಂಡಿ. ನಮ್ಮೂರಿನಲ್ಲಿ ನಾಗರಪಂಚಮಿಯಂದು ಹೆಚ್ಚಾಗಿ ಮಾಡುವ ಖಾದ್ಯವಿದು. ನೆನೆಸಿದ ಅಕ್ಕಿಗೆ ಸ್ವಲ್ಪ ಉಪ್ಪು, ಅಗತ್ಯವಿದ್ದಷ್ಟು ಬೆಲ್ಲ, ತೆಂಗಿನ ತುರಿ, ಏಲಕ್ಕಿ ಹಾಕಿ ನುಣ್ಣಗೆ ರುಬ್ಬಿ, ಬಾಣಲೆಯಲ್ಲಿ ಆ ಹಿಟ್ಟನ್ನು ಗೊಟಾಯಿಸಿ ಅದು ಗಟ್ಟಿಯಾಗುತ್ತಿದ್ದಂತೆ ಸ್ವಲ್ಪ ತುಪ್ಪವನ್ನು ಒಂದು ಊಟದ ಬಟ್ಟಲಿಗೆ ಹಚ್ಚಿ, ಗೊಟಾಯಿಸಿದ ಹಿಟ್ಟನ್ನು ಅದರ ಮೇಲೆ ಹಾಕಿ ಅದನ್ನು ಒಂದೇ ಹದಕ್ಕೆ ತಟ್ಟಿ ಚೌಕಾಕಾರದ ತುಂಡು ಮಾಡಿ ಸ್ವಲ್ಪ ತಣಿದ ಮೇಲೆ ತಿನ್ನಲು ಇದು ಬಲು ರುಚಿ. ಇದು ಕೂಡಾ ಸುಲಭವಾಗಿ ಮಾಡುವಂತಹ, ಆರೋಗ್ಯಕ್ಕೆ ಹಾನಿಯಾಗದ ಸಿಹಿತಿಂಡಿ. ಗೊಟಾಯಿಸುವಾಗ ಸ್ವಲ್ಪ ಎಚ್ಚರಿಕೆಯಿಂದ ಗೊಟಾಯಿಸಬೇಕಷ್ಟೇ. ಇಲ್ಲವೇ ಹಿಟ್ಟು ಗಂಟು ಗಂಟಾಗುತ್ತದೆ.
ಪತೋಳಿಯ ರುಚಿ ನನಗೆ ಸಿಕ್ಕಿದ್ದು ಹೆಬ್ರಿಯ ಆನಮ್ಮನ ಮನೆಯಲ್ಲಿ. ಹಾಲುಬಾಯಿಯನ್ನು ನನ್ನಮ್ಮನ ಕೈಯಿಂದ ತಿಂದಿದ್ದು. ಅದನ್ನು ನನ್ನಮ್ಮ ಸೊಗಸಾಗಿ ಮಾಡುತ್ತಾಳೆ. ನಾನೂ ಕೂಡಾ ಈ ಎರಡು ಸಿಹಿತಿಂಡಿಗಳನ್ನು ತಕ್ಕಮಟ್ಟಿಗೆ ರುಚಿಯಾಗಿ ಮಾಡುತ್ತೇನೆ.
ಈ ವಿವಿಧ ಖಾದ್ಯಗಳ ಹುಟ್ಟಿನ ಗುಟ್ಟು ಜಿಹ್ವಾ ಚಾಪಲ್ಯ. ಜಿಹ್ವಾಚಾಪಲ್ಯದಿಂದಾಗಿ ಎಷ್ಟೆಷ್ಟು ಬಗೆಯ ತಿನಿಸುಗಳು ಆವಿರ್ಭವಿಸಿವೆಯೋ ನಾ ಕಾಣೆ? ಒಂದು ಕಾಲದಲ್ಲಿ ಹಸಿ ವಸ್ತುಗಳನ್ನು ತಿನ್ನುತ್ತಿದ್ದ ನಾವುಗಳು ಈಗ ಹೆಸರೇ ಗೊತ್ತಿರದಷ್ಟು ಖಾದ್ಯಗಳನ್ನು ವಿವಿಧ ಬಗೆಯಲ್ಲಿ ತಯಾರಿಸಿ ತಿನ್ನುವಷ್ಟು ಪ್ರವೀಣರಾಗಿದ್ದೇವೆ ಎಂದರೆ ಸುಳ್ಳಲ್ಲ. ಅಷ್ಟೆಲ್ಲಾ ಬಗೆಬಗೆಯ ಖಾದ್ಯಗಳನ್ನು ತಿಂದು ಜೀರ್ಣಿಸಿಕೊಳ್ಳುವ ತಾಕತ್ತು ಇಲ್ಲದಿದ್ದಲ್ಲಿ ಇದ್ದುದರಲ್ಲಿ ನಮ್ಮ ಆರೋಗ್ಯಕ್ಕೆ ಸೂಕ್ತವಾದ (ಬಾಯಿಗೆ ಬೇಕಾದದ್ದಲ್ಲ😀) ತಿನಿಸುಗಳನ್ನು ತಿಂದು ನಮ್ಮ ಆರೋಗ್ಯವನ್ನು ಕಾಯ್ದುಕೊಳ್ಳುವುದು ಜಾಣತನವಾಗುತ್ತದೆ.


No comments:

Post a Comment