ಮಂಗಳವಾರ, 24 ನವಂಬರ 2020
ನಾವು ಸುಬ್ರಮಣ್ಯ,ರಜನಿ ಒಡನೆ ವಾಮಂಜೂರಿನಿಂದ ಬೆಳಿಗ್ಗೆ 10 ಗಂಟೆಗೆ ಹೊರಟು, 28 ಕಿ.ಮೀ ದೂರದ ಇನ್ನೋಳಿಯ ಸೋಮನಾಥೇಶ್ವರ ದೇವಸ್ಥಾನವನ್ನು ತಲುಪಿದೆವು. ಕಾರು ಗುಡ್ಡ ಬೆಟ್ಟ ಗಳನ್ನು ಹತ್ತಿ ಇಳಿದು, ನೇತ್ರಾವತಿ ನದಿ ತೀರದಲ್ಲಿ ಸಾಗುತ್ತಾ ಬೃಹದಾಕಾರದ ದೇವಸ್ಥಾನವನ್ನು ತಲುಪಿದೆವು. ಸುಂದರವಾದ ಆವರಣ, ಇನ್ನೂ ದೇವಸ್ಥಾನದ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯುತ್ತಿದೆ. ಸುಂದರವಾದ ಹೊರಾಂಗಣ, ವಿಶಾಲವಾದ ಮುಂಭಾಗ, ಸುಮಧುರವಾದ ನೋಟ. ಸುತ್ತಲೂ ಹರಿಯುತ್ತಿರುವ ನೇತ್ರಾವತಿ ನದಿ. ಪ್ರಶಾಂತವಾದ ವಾತಾವರಣ. ಸುಮಾರು ಒಂದು ಗಂಟೆ ಅಲ್ಲಿ ಕಳೆದು, ಅಲ್ಲಿಂದ ಹೊರಟೆವು.
ಇನೋಳಿಯು ನೇತ್ರಾವತಿ ನದಿಯ ತಟದಲ್ಲಿರುವ ಒಂದು ಹಳ್ಳಿ.ಇನೋಳಿ ಗ್ರಾಮದ ಒಂದು ಗುಡ್ಡದ ತಪ್ಪಲಿನಲ್ಲಿ ಈ ದೇವಸ್ಥಾನ ಸ್ಥಾಪಿತವಾಗಿದೆ.ಈ ಊರಿನ ಗ್ರಾಮ ದೇವಸ್ಥಾನ ಶ್ರೀ ಸೋಮನಾಥೇಶ್ವರ ದೇವಸ್ಥಾನ ಇದೊಂದು ಐತಿಹಾಸಿಕ ಹಾಗು ಪ್ರೇಕ್ಷಣೀಯ ಸ್ಥಳ.ಈ ದೇವಸ್ಥಾನಕ್ಕೆ ಸುಮಾರು 3000 ವರ್ಷಗಳ ಇತಿಹಾಸವಿದೆ.
ಮಂಗಳೂರಿನಿಂದ 28 ಕಿ.ಮೀ ಹಾಗೂ ಮುಡಿಪುವಿನಿಂದ 12 ಕಿ.ಮೀ ದೂರದಲ್ಲಿದೆ.ದೇವಸ್ಥಾನದವರೆಗೂ ರಸ್ತೆ ಇದೆ.ಕಾರು,ಬೈಕ್ ಗಳಲ್ಲಿಯೂ ನೀವಿಲ್ಲಿಗೆ ಬರಬಹುದು.ಫರಂಗಿಪೇಟೆಯಿಂದ ದೋಣಿಯ ಮೂಲಕ ನೇತ್ರಾವತಿ ನದಿ ದಾಟಿ ಇನೋಳಿ ಗ್ರಾಮ ಸೇರಬಹುದು.ಅಲ್ಲಿಂದ ಗುಡ್ಡದ ತಪ್ಪಲಿಗೆ ಸ್ವಲ್ಪ ಹೊತ್ತು ನಡೆದುಕೊಂಡು ಹೋಗಬೇಕು.
ಮಂಗಳೂರಿನಿಂದ ಬರುವವರು ಉಳ್ಳಾಲ ಸೇತುವೆಯಿಂದ ಸ್ವಲ್ಪ ಮುಂದೆ ಎಡಭಾಗಕ್ಕೆ ತಿರುಗಿ ಎಲ್ಯಾರುಪದವು-ಇನೋಳಿ ರಸ್ತೆ ಮೂಲಕ ಸಾಗಬೇಕು.ಮುಡಿಪುವಿನಿಂದ ಬರುವವರು ಕೊಣಾಜೆ - ಪಜೀರು ಮಾರ್ಗವಾಗಿ ಬರಬಹುದು.ಪಜೀರಿನಿಂದ ಇನೋಳಿಯತ್ತ ಹೋಗುವಾಗ ಬಲಬದಿಗೆ ದೇವಸ್ಥಾನದ ದ್ವಾರ ಸಿಗುತ್ತದೆ. ಆ ದಾರಿಯಲ್ಲಿ ಸ್ವಲ್ಪ ಮುಂದೆ ಸಾಗಿದರೆ ದೇವಸ್ಥಾನ ಬಂದು ತಲುಪುತ್ತೀರಿ. ಮಂಗಳೂರು ಹಾಗು ಮುಡಿಪುವಿನಿಂದ ಇನೋಳಿಗೆ ನಿರಂತರ ಬಸ್ ಸೌಲಭ್ಯವಿದೆ.
ದೇವಸ್ಥಾನದ ಮುಂದೆ ವಿಶಾಲವಾದ ಮೈದಾನ,ಹೂವಿನ ಕೈತೋಟವಿದೆ.ಹಾಗೂ ಬೃಹದಾಕಾರದ 'ಘಂಟೆ' ಇದೆ. ದೇವಸ್ಥಾನದ ಮೂರೂ ದಿಕ್ಕಿನಲ್ಲಿ ಮೈದುಂಬಿ ಹರಿಯುವ ನೇತ್ರಾವತಿ ನದಿಯು ಕಣ್ಣು ತುಂಬುತ್ತದೆ. ದೇವಸ್ಥಾನವು ಕಳೆದ ಕೆಲವು ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡಿದೆ. ದೇವಸ್ಥಾನದ ಒಳಗೆ ವಿಶಾಲವಾದ ಗರ್ಭಗುಡಿಯಿದೆ.ಗರ್ಭಗುಡಿಯ ಸುತ್ತ ಇರುವ ಕಲ್ಲಿನ ಕಂಬಗಳು ದೇವಸ್ಥಾನದ ಅಂದವನ್ನು ಹೆಚ್ಚಿಸುತ್ತದೆ.
ಪ್ರತಿದಿನ ಬೆಳಗ್ಗೆ 6 ರಿಂದ ಮಧ್ಯಾಹ್ನ 1 ಗಂಟೆವರೆಗೆ ದೇವಸ್ಥಾನ ತೆರೆದಿರುತ್ತದೆ. ಸೋಮವಾರ ಮಾತ್ರ ಸಂಜೆ 5 ರಿಂದ 7.30 ತನಕ ತೆರೆದಿರುತ್ತದೆ.ಪ್ರತಿದಿನ ಮಧ್ಯಾಹ್ನ ಇಲ್ಲಿ ಊಟದ ವ್ಯವಸ್ಥೆ ಇದೆ.ಜನಜಂಗುಳಿ ಇಲ್ಲದ ಪ್ರಶಾಂತವಾದ ಪ್ರದೇಶ.ಇಲ್ಲಿನ ಪ್ರಾಕೃತಿಕ ಸೌಂದರ್ಯ ಮನಸ್ಸಿಗೆ ಮುದ ನೀಡುತ್ತದೆ.ದೇವಾಲಯದ ಸುತ್ತ ವಾಯುವಿಹಾರ ನಡೆಸುತ್ತಾ ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಬಹುದು.ಈ ಗುಡ್ಡದ ತಪ್ಪಲಿನಿಂದ ಸುತ್ತ ನೋಡಿದರೆ SRINIVAS, EXPERT ವಿದ್ಯಾಸಂಸ್ಥೆಗಳು, ಫರಂಗಿಪೇಟೆ , ಪಶ್ಚಿಮ ಘಟ್ಟದ ಅನೇಕ ಗುಡ್ಡ ಬೆಟ್ಟಗಳು ಹಾಗೂ ಇತರ ಊರುಗಳು ಕಾಣಸಿಗುತ್ತದೆ.ನವಿಲುಗಳು ಸ್ವಚ್ಛಂದವಾಗಿ ವಿಹರಿಸುತ್ತಿರುತ್ತದೆ.
ಸಂಜೆಯ ಹೊತ್ತನ್ನು ಕುಟುಂಬದವರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಕಳೆಯಲು ಇದೊಂದು ಉತ್ತಮವಾದ ಸ್ಥಳ.
ಬರೆದಿರುವುದು 4 ದಶಂಬರ 2020
No comments:
Post a Comment