Saturday, January 2, 2021

ಶೋಭಾಳ ಬರಹಗಳು - ಭಾಗ 7

 

ಶೋಭಾ, (3/9/1966) ಅಣ್ಣನ ಮಗಳು, ಸಾಗರ ಹೊಂಗಿರಣ ಸಂಸ್ಥೆಯ ಸಂಸ್ಥಾಪಕಿ, ಪ್ರಾಂಶುಪಾಲೆ, ಗ್ರಹ ಬಂಧನದ (lockdown) ಈ ಸಮಯದಲ್ಲಿ ಹಲವಾರು ಲೇಖನಗಳನ್ನು ಬರದು ಬಾಲ್ಯ, ತನ್ನ ಹಿರಿಯರು, ಪರಿಸರ, ಜೀವನದ ಅನುಭವ ಇತ್ಯಾದಿ ವಿಷಯಗಳನ್ನು ಸುಂದರವಾಗಿ, ಅರ್ಥಪೂರ್ಣವಾಗಿ ಬರೆದು ಫೆಸ್ಬುಕ್ , ಇನ್ಸ್ಟಗ್ರಾಂ ಖಾತೆಗಳಲ್ಲಿ ಹಂಚಿ ಕೊಂಡಿರುತ್ತಾಳೆ. ಅವಳ ಬರವಣಿಗೆಯ ವೈಖರಿ, ವಿಷಯಗಳ ನಿರೂಪಣೆ ಮನ ಮುಟ್ಟುವಂತಿದ್ದು ನೆನಪಿಗೋಸ್ಕರ ಇಲ್ಲಿ ಇರಿಸಿಕೊಂಡಿದ್ದೇನೆ. 


276. ಪರಿಸರ - ಬಡೇ ಸೊಂಪು/ಸೊಂಪು ಜೀರಿಗೆ (28/2/2021)

ಬಡೆ ಸೋಂಪು/ಸೋಂಪು ಜೀರಿಗೆಯನ್ನು ಹೋಲುವ ಮಸಾಲ ಪದಾರ್ಥ. ಉತ್ತರ ಭಾರತದ ಅಡುಗೆಗಳಲ್ಲಿ ಇದರ ಉಪಯೋಗ ಸರ್ವೇ ಸಾಮಾನ್ಯ. ದಕ್ಷಿಣ ಭಾರತದವರಿಗೆ ಈ ಹಿಂದೆ ಅದರ ಪರಿಚಯವಾದದ್ದು ದೊಡ್ಡ ಹೋಟೆಲುಗಳಲ್ಲಿ ಬಿಲ್ಲಿನ ಪ್ಲೇಟಿನಲ್ಲಿ ಕಂಡು. ಈಗ ಎಲ್ಲಾ ಹೋಟೆಲುಗಳಲ್ಲಿ ಕ್ಯಾಷಿಯರ್ ಕುಳಿತಿರುವಲ್ಲಿ ಒಂದು ತಟ್ಟೆಯಲ್ಲಿ ಸೋಂಪನ್ನು ಇಟ್ಟಿರುತ್ತಾರೆ. ತಿನ್ನಬೇಕೆನಿಸಿದವರು ಅದನ್ನು ತಿನ್ನಬಹುದು! ಈಗ ದಕ್ಷಿಣ ಭಾರತದವರಿಗೂ ಅದು ಅತ್ಯಂತ ಪರಿಚಿತ ವಸ್ತುವೇ ಸೈ!
ಹೋಟೆಲಿನ ಬಡೆಸೋಂಪು ಸ್ವಲ್ಪ ಸಿಹಿ ಮಿಶ್ರಿತವಾಗಿರುತ್ತದೆ. ನಾವು ಚಿಕ್ಕವರಿದ್ದಾಗ ಹೋಟೆಲ್ ನ ಬಿಲ್ಲಿನ ಪ್ಲೇಟಿನಲ್ಲಿ ಇರುತ್ತಿದ್ದ ಸೋಂಪನ್ನು ಯಾರಿಗೂ ಗೊತ್ತಾಗದಂತೆ ಕರ್ಚೀಫಿನಲ್ಲಿ ಕಟ್ಟಿಕೊಂಡು ಬರುತ್ತಿದ್ದೆವು. ಏನೋ ಘನ ಕಾರ್ಯ ಮಾಡಿದ ಭಾವ ಆಗ ನಮ್ಮಲ್ಲಿ ಇರುತ್ತಿತ್ತು! ನಂತರದಲ್ಲಿ ಎಷ್ಟೋ ಸಲ ಅದನ್ನು ತಿನ್ನಲು ಮರೆತೇ ಹೋಗಿರುತ್ತಿತ್ತು. ಆದರೂ ಪ್ರತಿ ಬಾರಿ ಹೋಟೆಲಿನಿಂದ ಹೊರ ಬರುವಾಗ ನಮ್ಮ ಕೈ ಮುಷ್ಟಿಯಲ್ಲೋ ಇಲ್ಲವೇ ಕರ್ಚೀಫ್ ನಲ್ಲೋ ಸೋಂಪು ಇದ್ದೇ ಇರುತ್ತಿತ್ತು. ಅದೇನೋ ಆ ಘಳಿಗೆಗೆ ಅದರ ಬಗ್ಗೆ ಒಂದು ವಿಚಿತ್ರ ಆಕರ್ಷಣೆಯಷ್ಟೇ!
ಸೋಂಪಿನಲ್ಲಿರುವ ಔಷಧೀಯ ಗುಣಗಳು ನನ್ನರಿವಿಗೆ ಬಂದಿದ್ದು ಈಗ್ಗ್ಯೆ ಕೆಲವು ವರ್ಷಗಳ ಹಿಂದಷ್ಟೇ! ನಮ್ಮಂತಹ ಗ್ಯಾಸ್ಟ್ರಿಕ್ ಸಮಸ್ಯೆಯವರಿಗೆ ಅದರ ಸೇವನೆ ಬಹಳ ಉಪಯೋಗಕಾರಿ. ಏಕೆಂದರೆ ಅದರಲ್ಲಿ ತಿಂದ ಆಹಾರವನ್ನು ಜೀರ್ಣ ಮಾಡುವ ಗುಣವಿದೆ. ಬಾಯಿ ವಾಸನೆಯನ್ನು ಅದು ತಡೆಗಟ್ಟುತ್ತದೆ. ಹೊಟ್ಟೆಯ ಯಾವುದೇ ರೀತಿಯ ಸಮಸ್ಯೆಗಳಿಗೆ ಸೋಂಪಿನ ಸೇವನೆ ರಾಮಬಾಣ. ಇದು ಯಕೃತ್ತನ್ನು ಆರೋಗ್ಯಕರವಾಗಿ ಇಡುತ್ತದೆ. ಇದನ್ನು ಜಠರವಾಯು ನಿರೋಧಕವೆಂದು ಕರೆಯುತ್ತಾರೆ. ಇದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಶೀತ, ಕೆಮ್ಮಿಗೆ ಇದರ ಉಪಯೋಗ ಶಮನಕಾರಿ. ಅಸ್ತಮಾದಂತಹ ಶ್ವಾಸಕೋಶ ಸಮಸ್ಯೆಗೂ ಇದು ಪರಿಣಾಮಕಾರಿ.
ಸೋಂಪಿನ ಕಾಳನ್ನು ಇಂಗ್ಲಿಷ್ ನಲ್ಲಿ ಫೆನೆಲ್ ಸೀಡ್ ಎಂದು ಕರೆಯುತ್ತಾರೆ. ಇದರ ಗಿಡ ಬಹಳ ಮೃದು ಹಾಗೂ ಸೂಕ್ಷ್ಮವಾಗಿರುತ್ತದೆ. ಸಣ್ಣ ಚೂಪನೆಯ ಎಲೆಗಳನ್ನು ಒಳಗೊಂಡ ಈ ಗಿಡ ಹಳದಿ ಹೂವನ್ನು ಬಿಡುತ್ತದೆ. ಆ ಹೂವೇ ಬಲಿತ ನಂತರ ಕಾಯಿಯಾಗುತ್ತದೆ. ಆ ಗಿಡ, ಹೂವು, ಕಾಯಿಗಳಿಗೆ ಒಳ್ಳೆಯ ಸುಗಂಧವಿದೆ.
ಯಾವುದೇ ಮಸಾಲೆಯ ಪದಾರ್ಥವಿರಲಿ ನಮ್ಮ ಹಿರಿಯರು ಅದರ ಆರೋಗ್ಯಕಾರಿ ಅಂಶಗಳನ್ನು ಗಮನಿಸಿಯೇ ಬಳಸತೊಡಗಿರುತ್ತಾರೆ. ಅದನ್ನು ಹೇಗೆ, ಎಷ್ಟರ ಮಟ್ಟಿಗೆ ಬಳಸುತ್ತೇವೆ ಎನ್ನುವ ವಿವೇಚನೆ ನಮನಮಗೆ ಬಿಟ್ಟದ್ದು. ನಮ್ಮ ಅಡುಗೆಮನೆಗಳಲ್ಲಿ ಬಡೆಸೋಂಪು ಇದ್ದಲ್ಲಿ, ಅದನ್ನು ಸರಿಯಾದ ರೀತಿಯಲ್ಲಿ ಬಳಸಿದಲ್ಲಿ ನಮ್ಮ ಆರೋಗ್ಯ ಚೆನ್ನಾಗಿಟ್ಟುಕೊಳ್ಳಬಹುದು ಎನ್ನುವ ಸತ್ಯವನ್ನು ನಾವೆಲ್ಲ ಒಪ್ಪಿಕೊಳ್ಳಬಹುದಲ್ಲವೆ?

275. ಪರಿಸರ - ಬಚ್ಚಲು ಮನೆ (25/2/2021)

ನಮ್ಮ ಬಚ್ಚಲು ಮನೆಯಲ್ಲಿ ಸಣ್ಣ ಪ್ರಾಣಿ ಪ್ರಪಂಚವೇ ಇದೆ. ಅದರಲ್ಲಿ ಮುಖ್ಯವಾಗಿರುವುದು ಸಣ್ಣ ಕಪ್ಪೆ ಹಾಗೂ ಸಿಂಬಳದ ಹುಳ/ಹಿಸ್ಕ್. ಹಿಸ್ಕುಗಳು ಬಹಳಷ್ಟು ಸಂಖ್ಯೆಯಲ್ಲಿ ಇವೆ. ಅವು ಯಾವಾಗ, ಎಲ್ಲಿ, ಎಷ್ಟು ಕಾಣ ಸಿಗುತ್ತವೆ ಎಂದು ಹೇಳುವುದು ಕಷ್ಟ. "ನಾವಿದ್ದೇವೆ" ಎಂದು ತಮ್ಮ ಉಪಸ್ಥಿತಿಯನ್ನು ಆಗಾಗ ತೋರಿಸುತ್ತಲೇ ಇರುತ್ತವೆ. ನಿನ್ನೆಯೂ ಅಷ್ಟೇ ಸ್ನಾನ ಮಾಡಿದ ನಂತರ ಬಕೆಟಿನ ಹ್ಯಾಂಡಲ್ ಮೇಲಿದ್ದ ದೊಡ್ಡ ಹಿಸ್ಕಿನ ದರ್ಶನವಾಯಿತು. ನೋಡಿ ಸುಮ್ಮನಾದೆ. ಆಗೊಂದು ವಿಚಿತ್ರ ಯೋಚನೆ ಬಂದಿತು - ಆ ಹಿಸ್ಕಿನ ಜಾಗದಲ್ಲಿ ಹಾವಿದ್ದಿದ್ದರೆ ನನ್ನ ಪ್ರತಿಕ್ರಿಯೆ ಹೇಗಿರುತ್ತಿತ್ತು ಎಂದು😀 ನಾನು ಏನೂ ಭಯ ಇಲ್ಲದೆ ಹೀಗೆ ಅದರ ಉಪಸ್ಥಿತಿಯನ್ನು ಅಲಕ್ಷಿಸಿ ಶಾಂತವಾಗಿ ಇರುತ್ತಿದ್ದೆನೆ ಎನ್ನುವ ಪ್ರಶ್ನೆಯೂ ಮನದೊಳಗೆ ಮೂಡಿತು.
ಭಯ, ಭೀತಿ, ಆತಂಕ ಎನ್ನುವುದು ನಾವು ಏನು ನೋಡುತ್ತೇವೆ, ಅದನ್ನು ಹೇಗೆ ಪರಿಗಣಿಸುತ್ತೇವೆ ಎನ್ನುವುದರ ಮೆಲೆ ಆವಲಂಬಿತವಾಗಿರುತ್ತದಲ್ಲವೆ? ಭಯ/ಆತಂಕ ಎನ್ನುವುದು ನಮ್ಮ ಜೀವನದಲ್ಲಿ ಏನೇನೆಲ್ಲಾ ಮಾಡಿಬಿಡುತ್ತವೆ? ನಾವು ಹೇಗಿದ್ದವರು ಹೇಗಾಗಿ ಹೋಗುತ್ತೇವೆ? ನಮ್ಮ ವಿಚಾರಶಕ್ತಿ ಎಷ್ಟರ ಮಟ್ಟಿಗೆ ನಿಷ್ಕ್ರಿಯವಾಗಿ ಬಿಡುತ್ತದೆ? ನಾವು ಆತಂಕ/ಭಯವನ್ನು ಹೋಗಲಾಡಿಸಲು ಏನೆಲ್ಲಾ ಕಸರತ್ತು ಮಾಡುತ್ತೇವೆ? ಆತಂಕ/ ಭಯ ನಮ್ಮ ಸೃಜನಶೀಲತೆಗೆ ಎಷ್ಟರ ಮಟ್ಟಿಗೆ ಧಕ್ಕೆ ತರುತ್ತದೆ? ಇವೆಲ್ಲವೂ ನಾವು ಯೋಚನೆ ಮಾಡಬೇಕಾದ ವಿಷಯಗಳಲ್ಲವೆ?
ನಮ್ಮಲ್ಲಿ ಈಗ್ಗ್ಯೆ ಹತ್ತು ವರ್ಷಗಳ ಹಿಂದೆ "ಸ್ಟೂಡೆಂಟ್ಸ್ ಮಾಂಕ್" ಎಂದು ಕರೆಯಲ್ಪಡುತ್ತಿದ್ದ ಘನ ವಿದ್ವಾಂಸರಾಗಿದ್ದ ಒಬ್ಬರು ಸನ್ಯಾಸಿಗಳು ಬಂದು ಪ್ರೌಢ ಹಾಗೂ ಪದವಿಪೂರ್ವ ತರಗತಿಗಳ ಮಕ್ಕಳನ್ನು ಉದ್ದೇಶಿಸಿ ಅದ್ಭುತವಾಗಿ ಮಾತನಾಡಿದ್ದರು‌. ಮಕ್ಕಳಿಗೆ ಪ್ರಶ್ನೆ ಕೇಳಲು ಅವಕಾಶ ಕೊಟ್ಟಿದ್ದರು. ಆಗ ಒಬ್ಬ ಹುಡುಗ, "ಭಯವನ್ನು ಹೇಗೆ ನಿಯಂತ್ರಿಸಬೇಕು/ಹೋಗಲಾಡಿಸಬೇಕು?" ಎಂದು ಕೇಳಿದ್ದ. ಆಗ ಅವರು "ನೀನು ಆ 'ಭಯ'ವನ್ನೇ ಸ್ನೇಹಿತನನ್ನಾಗಿ ಮಾಡಿಕೊಂಡರೆ 'ಭಯ'ಕ್ಕೆ ಭಯ ಪಡಬೇಕಾದ ಪ್ರಸಂಗವೇ ಬರುವುದಿಲ್ಲ" ಎಂದು ಹೇಳಿದ್ದರು. ಎಷ್ಟು ಸರಳ ಉತ್ತರವಲ್ಲವೇ ಅದು?! ಆದರೆ ಅದನ್ನು ಕಾರ್ಯರೂಪಕ್ಕೆ ತರುವುದು ಅವರಂದಷ್ಟು ಸರಳವಲ್ಲವಲ್ಲವೆ?
ನನಗೆ ಭಯದ ಭಾವ ಕಡಿಮೆ ಎಂದು ನಾನಂದುಕೊಂಡಿದ್ದೆ. ಎಲ್ಲವೂ ಸಹಜ, ಸರಳವಾಗಿ ನಡೆಯುವಾಗ ನನಗೆ ಅನಗತ್ಯ ಭಯ, ಭೀತಿ, ಆತಂಕಗಳು ನಿಜಕ್ಕೂ ಇರುವುದಿಲ್ಲ🤔 ಆದರೆ ಕೆಲವು ಅನಿರೀಕ್ಷಿತ ಘಟನೆಗಳು, ಅನಪೇಕ್ಷಿತ ಪ್ರಾಣಿಗಳು, ಅಸಾಮಾನ್ಯ ಅನುಭವಗಳು ನನ್ನೊಳಗೆ ಭಯ, ಆತಂಕಗಳನ್ನು ಖಂಡಿತವಾಗಿಯೂ ಹುಟ್ಟಿಸುತ್ತವೆ. ಇದು ಎಲ್ಲರಿಗೂ ಆಗುವ ಅನುಭವ ಕೂಡಾ ಇರಬಹುದು! ಕೆಲವೊಮ್ಮೆ ಅದು ಕ್ಷಣಿಕ ಭಯವಾಗಿರುತ್ತದೆ. ಮತ್ತೆ ಕೆಲವೊಮ್ಮೆ ಮನದಾಳದೊಳಗೆ ನನಗರಿವಿಲ್ಲದೆ ಉಳಿಯುವ ಆತಂಕವೂ ಆಗಿಬಿಡುತ್ತದೆ. ಅಂತಹುದರಿಂದ ಬೇಸತ್ತು ಅಂತಹ ಭಯ, ಆತಂಕಗಳನ್ನು ನನ್ನ ಸ್ನೇಹಿತರನ್ನಾಗಿ ಪರಿಗಣಿಸುವ ದಾರಿಯನ್ನು ಹುಡುಕುತ್ತಿದ್ದೇನೆ. ಬಲ್ಲವರು ಆ ದಾರಿ ತೋರಬಹುದೆ?!


274. ಪರಿಸರ - ರಸ್ತೆ ಪಯಣ (20/2/2021)

ಕೇರಳಕ್ಕೆ ಸಾಗುವ ರಸ್ತೆ ಪಯಣದ ಬಗ್ಗೆ ಬಹಳಷ್ಟು ಅಪಸ್ವರ ಕೇಳಿದ್ದೆ. ಮಗಳ ಸಾರಥ್ಯದಲ್ಲಿ ನಮ್ಮ ಸಿಯಾಝ್ ಕಾರಿನಲ್ಲಿ ಕಣ್ಣೂರಿನೆಡೆಗೆ ಪಯಣ ಪ್ರಾರಂಭಿಸಿದಾಗ ದಾರಿಯ ಮೇಲಿನ ಟ್ರಾಫಿಕ್ ಬಗ್ಗೆ ಸಣ್ಣ ಅಳುಕಿತ್ತು. ಆ ಟ್ರಾಫಿಕ್ ಎಷ್ಟೆಲ್ಲಾ ಕಾಟ ಕೊಡಬಹುದು ಎಂದು ಊಹಿಸಿ ಮನ ದಣಿದಿತ್ತು. ಮುಡಿಪುವಿನಿಂದ ನಮ್ಮ ಪಯಣ ಹುರುಪಿನಿಂದ ಪ್ರಾರಂಭವಾಯಿತು. ಪ್ರಾರಂಭವೇ ತಿರುವುಮುರುವಿನ ಘಾಟ್ ರಸ್ತೆಯ ಮೂಲಕವಾಯಿತು. ಉದ್ದಾನುದ್ದಕ್ಕೂ ಇದ್ದ ಆ ತಿರುವು ಮುರುವಿನ ರಸ್ತೆ ನಮ್ಮ ಪಯಣಕ್ಕೆ ಥ್ರಿಲ್ ಕೊಟ್ಟಿತು. ನನ್ನ ಮಗಳ ಉತ್ತಮ ಡ್ರೈವಿಂಗ್ ನಲ್ಲಿ ನಮ್ಮಿಬ್ಬರ ಪಯಣ ಹಿತಕರವಾಗಿ ಮುಂದುವರಿಯಿತು. ದಾರಿ ತಿರುವು ಮುರುವಿನದ್ದಾದರೂ ರಸ್ತೆ ಉತ್ತಮವಾಗಿತ್ತು. ರಸ್ತೆಯ ಆಚೀಚಿನ ನೋಟ ಅದ್ಭುತವಾಗಿತ್ತು. ಎಲ್ಲಿ ನೋಡಿದರಲ್ಲಿ ಹಸಿರ ಛಾಯೆ! ಘಾಟ್ ನ ಏರಿಳಿತದ ನಯನ ಮನೋಹರವಾದ ದಾರಿ ಮುಗಿಯುತ್ತಿದ್ದಂತೆ ಹಿನ್ನೀರಿನ ಪ್ರದೇಶದಲ್ಲಿ ಪಯಣ. ಅಗಲವಾದ ನೀರಿನ ಹರವುಳ್ಳ ಸೇತುವೆಗಳನ್ನು ದಾಟಿ ಹೋಗುವಾಗ ಮನಸ್ಸಿಗೇನೋ ಮುದ. ನೀರಿನ ಕಡು ಹಸಿರಿನ ಬಣ್ಣವಂತೂ ಕಣ್ಣಿಗೆ ತಂಪೆರೆಯುವ ಕೆಲಸವನ್ನು ಯಶಸ್ವಿಯಾಗಿ ಪೂರೈಸಿತ್ತು. ವಿವರಣೆಗೆ ಮೀರಿದ ಸೌಂದರ್ಯವದು!
ಹಾಗೆಯೇ ದಾರಿಯುದ್ದಕ್ಕೂ ಸಿಗುವ ಊರುಗಳು ಸುಂದರವಾಗಿದ್ದವು. ಅಲ್ಲೂ ಕಟ್ಟಡಗಳ ನಡು ನಡುವೆ ಮರಗಿಡಗಳು ಇಣುಕಿ ಹಾಕಿ ಊರಿಗೆ ಹಸಿರ ತೊಡಿಗೆ ತೊಡಗಿಸಿದ್ದವು. ಪಯಣ ಮುಂದುವರಿದಂತೆ ಬಲ ಪಕ್ಕದುದ್ದಕ್ಕೂ ಅಲ್ಲಲ್ಲಿ ಕಡಲ ದರ್ಶನ. ಗುಡ್ಡವಿಳಿದು ಬರುತ್ತಿದ್ದಂತೆ ಕಾಣ ಸಿಗುವ ನೀಲ ಕಡಲು ಮನಮೋಹಕವಾಗಿ ಕಾಣುತ್ತಿತ್ತು. ಕೇವಲ ಕೆಲವೇ ಕಿಲೋಮೀಟರ್ ಗಳ ಅಂತರದಲ್ಲಿ ಬದಲಾಗುವ ಭೌಗೋಳಿಕ ಲಕ್ಷಣಗಳು ಪ್ರಕೃತಿಯ ವೈಚಿತ್ರ್ಯವಲ್ಲದೆ ಮತ್ತೇನು ಹೇಳಿ?!
ಕಣ್ಣೂರಿನ ಕಡಲ ತೀರದಲ್ಲಿ ನಾವು ಉಳಿದಿದ್ದ ಪ್ರಣವ ಬೀಚ್ ರೆಸಾರ್ಟ್ ನ ಕಾಟೇಜ್ ಸರಳ ಸುಂದರವಾಗಿತ್ತು. ಹತ್ಹನ್ನೆರಡು ಕಾಟೇಜುಗಳನ್ನು ಹೊಂದಿದ್ದ ವಿಶಾಲವಾದ ಜಾಗದಲ್ಲಿದ್ದ ಆ ರೆಸಾರ್ಟ್ ಒಂದು ರೀತಿಯ ಆಪ್ತ ವಾತಾವರಣವನ್ನು ಹೊಂದಿತ್ತು. ಮರ ಮತ್ತು ಬಿದಿರ ತಟ್ಟಿಯನ್ನು ಬಳಸಿ ಮಾಡಿದ ಕಾಟೇಜುಗಳು ಸರಳ ಸುಂದರವಾಗಿದ್ದು ಸುಸಜ್ಜಿತವಾಗಿದ್ದವು. ಅದರ ಮುಂದೆಯೇ ಇದ್ದ ಭೋರ್ಗರೆಯುವ ಕಡಲು ನಮ್ಮನ್ನು ಸದಾ ತನ್ನೆಡೆಗೆ ಕರೆಯುತ್ತಿದ್ದಂತೆ ಅನಿಸುತ್ತಿತ್ತು. ಅಲ್ಲಿಂದ ಕೇವಲ 25ಕಿಮೀ ದೂರದಲ್ಲಿದ್ದ ತಲಿಪರಂಬ ಸಮುದ್ರದ ಮಟ್ಟಕ್ಕಿಂತ ಸುಮಾರು ಇನ್ನೂರು ಅಡಿ ಎತ್ತರದಲ್ಲಿರುವ ಊರು. ನದಿ ನೀರಿನಿಂದ ಆವೃತವಾದ ಗುಡ್ಡದ ಮೇಲಿರುವ ಈ ಊರು ಒಂದು ಹಿಲ್ ಸ್ಟೇಷನ್ ತರಹ ಸುಂದರವಾಗಿದೆ. ಅಲ್ಲದೇ ಅಲ್ಲಿರುವ ಪುರಾತನವಾದ ರಾಜರಾಜೇಶ್ವರ ದೇವಸ್ಥಾನ ಬಹಳ ಪ್ರಖ್ಯಾತಿ ಪಡೆದಿದ್ದು ನೋಡಲು ಸುಂದರವಾಗಿದೆ. ಆ ಊರು ನಮ್ಮಿಬ್ಬರಿಗೂ ಬೀಚ್ ನಿಂದ ಆ ಕೂಡಲೇ ಹಿಲ್ ಸ್ಟೇಷನ್ ಗೆ ಹೋದ ಅನುಭವ ಕೊಟ್ಟಿತು.
ಹಿಂದಿರುಗುವಾಗ ಕೇರಳದಿಂದ ವಿಟ್ಲದೆಡೆಗಿನ ಪಯಣ ಅದ್ಭುತ ಅನುಭವ ಕೊಟ್ಟಿತು. ಪ್ರಕೃತಿ ಸೌಂದರ್ಯವನ್ನೆಲ್ಲ ಅಲ್ಲಿಯೇ ಒಟ್ಟುಗೂಡಿಸಿದಂತಿತ್ತು ಆ ದಾರಿ! ಊರು ಕಡಿಮೆ ಕಾಡಿನ ದಾರಿ ಜಾಸ್ತಿ ಇದ್ದ ಆ ಘಟ್ಟದ ದಾರಿಯಲ್ಲಿ ಸಾಗುವುದು ಒಂದು ಬಲು ಸುಂದರ ಆನುಭವ. ಕೇರಳದಲ್ಲಿದ್ದದ್ದು ಒಂದೇ ರಾತ್ರಿಯಾದರೂ ಅದರೆಡೆಗಿನ ಪಯಣ ನನ್ನ ನಿರೀಕ್ಷೆಗೆ ಮೀರಿದ ಖುಷಿ ಕೊಟ್ಟಿತು ಎಂದರೆ ಸುಳ್ಳಲ್ಲ☺️

.
273. ಪರಿಸರ - ನೆನಪುಗಳು. (ಕಣ್ಣೂರು) 14/2/2021 )
ಭೋರ್ಗರೆಯುತ್ತಿರುವ ಕಡಲಿನ ಶಬ್ದವನ್ನು ಕೇಳುತ್ತಾ ಈ ಬರವಣಿಗೆ. ಕೇರಳದ ಕಣ್ಣೂರಿನಲ್ಲಿದ್ದೇನೆ. ನಾನು ಒಂಬ್ಹತ್ತು ವರ್ಷದವಳಿದ್ದಾಗ ಕಣ್ಣೂರಿನಲ್ಲಿ ನನ್ನ ಅಪ್ಪ ಅಮ್ಮನೊಡನೆ ಕೆಲವು ದಿನಗಳ ಕಾಲವಿದ್ದೆ. ನನ್ನಪ್ಪ ಆಗ ಎಲ್ ಐ ಸಿ ಬ್ರ್ಯಾಂಚ್ ಮ್ಯಾನೇಜರ್ ಆಗಿದ್ದರು. ಅವರಾಗ ಒಂದೆರಡು ವರ್ಷ ಕಲ್ಲಿಕೋಟೆ ಹಾಗೂ ಕಣ್ಣೂರಿನಲ್ಲಿ ಇದ್ದರು. ನಾನು ಶಾಲಾ ರಜೆಯಲ್ಲಿ ಅವರೊಡನಿರಲು ಬಂದಿದ್ದೆ.
ಈಗಿನ ಕಣ್ಣೂರಿಗೂ ಆಗಿನದಕ್ಕೂ ಅಜಗಜಾಂತರ ವ್ಯತ್ಯಾಸ. ಊರು ತುಂಬಾ ಬೆಳೆದಿದೆ. ಆದರೆ ಕಡಲು ಮಾತ್ರ ಅಂದಿನಂತೆಯೇ ಇದೆ. ನಾನು, ನನ್ನ ಮಗಳು ಪ್ರಣವ್ ಬೀಚ್ ರೆಸಾರ್ಟ್ ನಲ್ಲಿ ಉಳಿದು ನಮ್ಮ ಕಡಲ ಮೋಹವನ್ನು ತೀರಿಸಿಕೊಳ್ಳುತ್ತಿದ್ದೇವೆ.
ಕಡಲು ಎಂದಿನಂತೆ ಸುಂದರವಾಗಿದೆ. ಅದೇ ಮೊರೆತವಿದೆ. ಅದು ತನ್ನ ಪಾಡಿಗೆ ತಾನು ತೀರಕ್ಕೆ ಅಲೆಗಳ ಹೊಡೆತ ಕೊಡುತ್ತಿದೆ. ಇಲ್ಲಿ ಉಸುಕು ಬಹಳ ಸಡಿಲವಾಗಿಲ್ಲ. ಕಾಲು ಉಸುಕಿನೊಳಗೆ ಹುಗಿಯುವ ತಾಪತ್ರಯವಿರದ ಕಾರಣ ಆರಾಮವಾಗಿ ನಡೆಯಬಹುದು. ಕಡಲ ತೀರ ತುಂಬಾ ಆಳವಾಗಿರದೆ ಸುರಕ್ಷಿತವಾಗಿದೆ.
ದೂರದಲ್ಲಿ ಮೀನುಗಾರರ ದೋಣಿಗಳು ಕಾಣುತ್ತವೆ. ಅದಕ್ಕಿಂತಲೂ ದೂರದಲ್ಲಿ ಹಡಗುಗಳು ಚುಕ್ಕಿಗಳಂತೆ ಕಾಣುತ್ತವೆ. ತೀರದಲ್ಲಿ ವಾಕಿಂಗ್ ಮಾಡುವ, ನೀರಾಟವಾಡುವ, ಆಟವಾಡುವ, ಸೈಕ್ಲಿಂಗ್ ಮಾಡುವ ಜನರ ಭರಪೂರತೆ ಕಾಣ ಸಿಗುತ್ತದೆ. ಆಕಾಶದಲ್ಲಿ ಹದ್ದುಗಳ ಹಾರಾಟ. ತೀರದಲ್ಲಿ ಆಹಾರವನ್ನು ಅರಸುತ್ತ ಸಣ್ಣ ಸಣ್ಣ ಚೂಪನೆಯ ಕೊಕ್ಕಿನ ಹಕ್ಕಿಗಳ ಓಡಾಟ. ಹೀಗಾಗಿ ಕಡಲಿನಂತೆ ಕಡಲ ತೀರವೂ ಜನರ ಕಾರ್ಯಚಟುವಟಿಕೆಗಳಲ್ಲಿ ವ್ಯಸ್ತವಾಗಿದೆ.
ಕಡಲಿನ ಅಗಾಧತೆಯನ್ನು ಕಣ್ಣರಸುವಷ್ಟು ದೂರ ನೋಡಿದೆ. ಆದರೂ ದಿಗಂತದಾಚೆ ಇನ್ನೇನು ಕಾಣಸಿಗುತ್ತದೆ ಎಂದು ನೋಡುವ, ತಿಳಿಯುವ ತವಕ ಯಾವಾಗಲೂ ನನ್ನಲ್ಲಿ ಇರುವುದೇ🤔 ಹೀಗೆನಿಸಿದಾಗಲೆಲ್ಲ ಅಡಿಗರ " ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿಯುದೆ ಜೀವನ" ಎಂಬ ಸಾಲಿನ ನೆನಪಾಗುತ್ತದೆ ☺️
ಇಂದು ನಮ್ಮ ಪಯಣ ಬೇರೆಡೆಗೆ ಮುಂದುವರೆಯುತ್ತದೆ. ಕಡಲು ತಾನಿದ್ದಲ್ಲೇ ತನ್ನ ಕೆಲಸ ಮುಂದುವರೆಸುತ್ತಿರುತ್ತದೆ. ಕಡಲ ತೀರದಲ್ಲಿದ್ದವರಿಗೆ ಅದರ ಮೊರೆತ ಕೇಳುತ್ತಾ ಅದರ ಕಾರ್ಯ ನಿರಂತರತೆಯನ್ನು ನೋಡುವ ಸುಯೋಗ ಸದಾ ಇದ್ದೇ ಇರುತ್ತದೆ!



272. ಪರಿಸರ - ಐಸ್ ಕ್ಯಾಂಡಿ (11/2/2021)

ನನಗೆ ಐಸ್ ಕ್ಯಾಂಡಿ ಅಂದರೆ ಇಷ್ಟ. ಐಸ್ ಕ್ರೀಮ್ ಅಷ್ಟಕ್ಕಷ್ಟೇ?! ಪಿಯುಸಿಯ ಹೆಚ್ಚಿನ ದಿನಗಳಲ್ಲಿ ನನ್ನ ಮಧ್ಯಾಹ್ನದ ಆಹಾರ ಐಸ್ ಕ್ಯಾಂಡಿಯೇ ಆಗಿರುತ್ತಿತ್ತು. ಅದರಲ್ಲೂ ಪ್ಲಾಸ್ಟಿಕ್ ನ ಉದ್ದನೆಯ ಕವರ್ ನಲ್ಲಿ ಬರುತ್ತಿದ್ದ ಪೆಪ್ಸಿ ಕ್ಯಾಂಡಿಯನ್ನು ಮಜವಾಗಿ ತಿನ್ನುತ್ತಿದ್ದೆ.
ಆಗೆಲ್ಲಾ ಒಂದು ಸೈಕಲ್ಲಿನ ಮೇಲೆ ಐಸ್ ಕ್ಯಾಂಡಿಯನ್ನು ಒಂದು ಡಬ್ಬದೊಳಗೆ ಇಟ್ಟುಕೊಂಡು ಮಾರುತ್ತಿದ್ದರು. ಆ ಸೈಕಲ್ಲಿಗೆ ಘಣಘಣಿಸುವ ಒಂದು ಗಂಟೆ ಇರುತ್ತಿತ್ತು. ಆ ಶಬ್ದ ಕೇಳಿದ ತಕ್ಷಣ ನಾವೆಲ್ಲಾ ರಸ್ತೆಯ ಬದಿಗೆ ಹಾಜರ್😀 ಐದ್ಹತ್ತು ಪೈಸೆಗೆಲ್ಲ ಸಿಗುತ್ತಿದ್ದ ಆ ಕ್ಯಾಂಡಿಯನ್ನು ಯಾರು ಎಷ್ಟು ಹೊತ್ತು ತಿನ್ನುತ್ತಾರೆ ಇಲ್ಲವೇ ಎಷ್ಟು ಬೇಗ ತಿಂದು ಮುಗಿಸುತ್ತಾರೆ ಎನ್ನುವುದು ನಮ್ಮೊಳಗೆ ನಡೆಯುತ್ತಿದ್ದ ಸ್ಪರ್ಧೆ 😀 ಕೈಮೈಯೆಲ್ಲಾ ಜೋರಿಸಿಕೊಂಡು ಆ ಐಸ್ ಕ್ಯಾಂಡಿಯನ್ನು ತಿನ್ನುವ ಖುಷಿ ವರ್ಣನೆಗೆ ಮೀರಿದ್ದು. ಅದರಲ್ಲೂ ಕೇಸರಿ ಬಣ್ಣದ ಐಸ್ ಕ್ಯಾಂಡಿ ತಿಂದು ನಮ್ಮ ನಾಲಿಗೆಯ ಮೇಲೆ ಉಳಿಯುತ್ತಿದ್ದ ಅದರ ಬಣ್ಣ ನೋಡಿ ಕುಣಿದು ಕುಪ್ಪಳಿಸುತ್ತಿದ್ದೆವು. ಐಸ್ ಕ್ಯಾಂಡಿ ತಿಂದ ಕೂಡಲೇ ಮಾತನಾಡಲು ಸರಿಯಾಗಿ ಬರದೆ ತೊದಲುತ್ತಾ ಮಾತನಾಡಿ ನಗುತ್ತಿದ್ದೆವು. ಅವೆಲ್ಲ ನಮ್ಮ ಪಾಲಿಗೆ ಬಹಳ ಖುಷಿಯ ಕ್ಷಣಗಳಾಗಿದ್ದವು. ಐಸ್ ಕ್ಯಾಂಡಿ ತಿಂದು ಬಾಯಿ, ಹೊಟ್ಟೆ ತೃಪ್ತಿ ಪಡೆದುಕೊಂಡರೆ ನಾಲಿಗೆಯ ಮರಗಟ್ಟುವಿಕೆ, ನಾಲಿಗೆಯ ಮೇಲೆ ಅದರಿಂದ ಉಂಟಾದ ಬಣ್ಣ ನಮ್ಮ ಮರ್ಕಟ ಮನಸ್ಸನ್ನು ತೃಪ್ತಿ ಪಡಿಸುತ್ತಿತ್ತು. ನಮಗೆ ಅದೊಂದು ಆಟವಾಗಿತ್ತು. ಹೀಗಾಗಿ ಐಸ್ ಕ್ಯಾಂಡಿ ಸಿಕ್ಕಾಗ ತಪ್ಪದೇ ತಿಂದು ಆನಂದಿಸುತ್ತಿದ್ದೆವು.
ಆಗೆಲ್ಲಾ ಕಂಪೆನಿಯ ಬ್ರ್ಯಾಂಡೆಡ್ ಐಸ್ ಕ್ಯಾಂಡಿ ಇರುತ್ತಿರಲಿಲ್ಲ. ಸೈಕಲ್ ನವನು ತರುತ್ತಿದ್ದ ಐಸ್ ಕ್ಯಾಂಡಿ ನಮಗೆ ಸರ್ವ ಶ್ರೇಷ್ಠವಾಗಿತ್ತು. ಅಂತಹುದೆಲ್ಲ ತಿಂದು ನಮ್ಮ ಆರೋಗ್ಯ ಹಾಳಾದ ದಾಖಲೆಯೇ ಇರಲಿಲ್ಲ. ಏನನ್ನೂ ಎಲ್ಲಿ ಬೇಕಾದರೂ ಆತಂಕವಿಲ್ಲದೆ ಮುಕ್ತವಾಗಿ ತಿನ್ನುವ ಪರಿಸ್ಥಿತಿ ಆಗಿತ್ತು🤔
ಈಗಲೂ ನನಗೆ ಐಸ್ ಕ್ಯಾಂಡಿ ತಿನ್ನುವಾಗ ಅದೇ ಹಳೆಯ ಭಾವ, ಖುಷಿ ಸಿಗುತ್ತದೆ. ಬ್ರ್ಯಾಂಡೆಡ್ ಬಿಟ್ಟು ಕಂಡಕಂಡದ್ದನ್ನೆಲ್ಲ ತಿನ್ನುವ ಧೈರ್ಯ ಈಗಿಲ್ಲ. ಬ್ರ್ಯಾಂಡೆಡ್ ಐಸ್ ಕ್ಯಾಂಡಿ ರುಚಿ ಚೆನ್ನಾಗಿದ್ದರೂ ಆಗಿನ ಸೈಕಲ್ ಕ್ಯಾಂಡಿಗೆ ಅದು ಸರಿ ಸಾಟಿಯಾಗಲಾರದು! ಆಗಿನ ಕ್ಯಾಂಡಿ ಸಾಧಾರಣ ರುಚಿ ಹೊಂದಿದ್ದರೂ ಹಾಗೂ ಅರ್ಧ ತಿನ್ನುವಷ್ಟರಲ್ಲಿ ರುಚಿ ಕಳೆದುಕೊಳ್ಳುತ್ತಿದ್ದರೂ ಗೆಳೆಯ ಗೆಳತಿಯರೊಡನೆ ಹುಡುಗಾಟಿಕೆ ಮಾಡುತ್ತಾ ತಿನ್ನುತ್ತಿದ್ದ ಆ ಕ್ಷಣಗಳು ಅದಕ್ಕೆ ವಿಶಿಷ್ಟ ರುಚಿ ಕೊಡುತ್ತಿದ್ದವು. ಹಾಗೆಯೇ ಆ ಐಸ್ ಕ್ಯಾಂಡಿ ಬಿಟ್ಟರೆ ನಮಗಾಗ ತಿನ್ನಲು ವಿಶೇಷವಾದದ್ದೇನೂ ಸಿಕ್ಕುತ್ತಿರಲಿಲ್ಲ. ಸಿಕ್ಕ ಐಸ್ ಕ್ಯಾಂಡಿಯನ್ನು ಆದಷ್ಟು ಸವಿದು ತಿನ್ನುತ್ತಿದ್ದೆವು. ಐಸ್ ಕ್ಯಾಂಡಿಯನ್ನು ಯಾವಾಗಲೂ ಜೊತೆಗಾರರೊಡನೆಯೇ ತಿನ್ನುತ್ತಿದ್ದೆವು. ಇದರಿಂದಾಗಿ ಐಸ್ ಕ್ಯಾಂಡಿ ತನ್ನೊಡನೆ ನಮ್ಮ ಬಹಳಷ್ಟು ಸ್ನೇಹಮಯ ಕ್ಷಣಗಳನ್ನು ಹೊಂದಿದೆ ಎಂದರೆ ಸುಳ್ಳಲ್ಲ ☺️


271. ಪರಿಸರ - ಜೋನಿ ಬೆಲ್ಲ (9/2/2021)

ಜೋನಿ ಬೆಲ್ಲ ಮಲೆನಾಡಿಗರಿಗೆ ಹಾಗೂ ಕರಾವಳಿಯ ಜನರಿಗೆ ಚಿರಪರಿಚಿತ. ಜೋನಿ ಬೆಲ್ಲ ತಿನ್ನುವ ರೂಢಿಯಾದವರಿಗೆ ಬೇರೆ ರೀತಿಯ ಬೆಲ್ಲ ಅಷ್ಟು ಹಿಡಿಸುವುದಿಲ್ಲ. ಇದೀಗ ಜೋನಿ ಬೆಲ್ಲ ಮಾಡುವ ಆಲೆಮನೆಯ ಕಾಲ. ಆಲೆಮನೆಗೆ ಹೋಗಿ ಅಲ್ಲಿ ಕಬ್ಬು ತಿಂದು, ಕಬ್ಬಿನ ಹಾಲು ಕುಡಿದು, ಬಿಸಿ ಬಿಸಿ ಬೆಲ್ಲವನ್ನು ನೆಕ್ಕಿ ತಿನ್ನುವುದೇ ಒಂದು ಸಂಭ್ರಮ.
ನಾನು ಮದುವೆಯಾಗಿ ಬಂದಾಗ ಒಂದು ದಿನ ಮಟಮಟ ಮಧ್ಯಾಹ್ನ ಆಲೆಮನೆಗೆ ಹೋಗಿ ಹೊಟ್ಟೆ ತುಂಬಾ ಕಬ್ಬಿನ ಹಾಲು ಕುಡಿದು ಬಿರು ಬಿಸಿಲಿನಲ್ಲಿ ನಡೆದುಕೊಂಡು ಮನೆಗೆ ಹಿಂದಿರುಗುವಾಗ ಮೈ ಲಘುವಾಗಿ ತೂರಾಡತೊಡಗಿದ್ದು ನೆನಪಾದರೆ ನನಗೀಗ ನಗು ಬರುತ್ತದೆ 🤓 ಆದರೆ ರಾತ್ರಿ ಹೊತ್ತಿನಲ್ಲಿ ಆಲೆಮನೆಗೆ ಹೋಗುವ ಮಜಾನೇ ಬೇರೆ. ಹಿಂದೆಲ್ಲಾ ಕೋಣವನ್ನು ಕಟ್ಟಿ ಕಣೆ ತಿರುಗಿಸುತ್ತಿದ್ದರು. ಆಲೆಮನೆಗೆ ಹೋಗಿ ಧಗಧಗನೆ ಉರಿಯುವ ಆಲೆ ಒಲೆಯ ಬಳಿ ಕುಳಿತು ಬೆಂಕಿ ಕಾಯಿಸಿ ಚಳಿ ಓಡಿಸುತ್ತಾ ಲೋಟಗಟ್ಟಲೆ ಕಬ್ಬಿನ ಹಾಲನ್ನು ಕುಡಿಯುವ ಸೊಗಸನ್ನು ಮರೆಯಲಾಗದು. ಅಲ್ಲಿಯೇ ಕುಳಿತು ಕಬ್ಬಿನ ಗೆಣ್ಣನ್ನು ಹಿಡಿದು, ಸಿಪ್ಪೆ ತೆಗೆದು, ಕಬ್ಬನ್ನು ಕಚ್ಚಿ ಕಚ್ಚಿ ರಸ ಹೀರಿ ಅದರ ಜೊಗಟನ್ನು ಉಗಿಯುತ್ತಾ, ಕಿತ್ತೊಗೆದ ಸಿಪ್ಪೆಯ ಒಂದು ತುಂಡನ್ನು ಬಿಸಿ ಬೆಲ್ಲದೊಳಗೆ ಅದ್ದಿ ತೆಗೆದು ಅದಕ್ಕಂಟಿದ ಬೆಲ್ಲವನ್ನು ಹೀರುತ್ತಾ ಕಥೆ ಹೊಡೆಯುತ್ತಾ ಕುಳಿತುಕೊಂಡರೆ ಸಮಯ ಸರಿದದ್ದೇ ಗೊತ್ತಾಗುತ್ತಿರಲಿಲ್ಲ. ಊರಿನ ಪರಿಚಯಸ್ಥರು ತಪ್ಪದೇ ಒಟ್ಟು ಸೇರಿ ಕಥೆ ಹೊಡೆಯುವ ಜಾಗ ಆಲೆಮನೆಯಾಗಿತ್ತು. ವಾಪಾಸ್ಸು ಹಿಂದಿರುಗುವಾಗ ದೊಡ್ಡ ಬಾಟಲಿಗಳಲ್ಲಿ ಕಬ್ಬಿನ ಹಾಲನ್ನು ತುಂಬಿಕೊಂಡು ಮನೆಗೊಯ್ದು ಬೆಳಗಿನ ತಿಂಡಿಗೆ ಆ ಕಬ್ಬಿನ ಹಾಲಿಗೆ ನೆನೆಸಿದ ಅಕ್ಕಿ ಸೇರಿಸಿ ರುಬ್ಬಿ ದೋಸೆ ಹೊಯ್ದು ಘಮಘಮಿಸುವ ತುಪ್ಪದೊಡನೆ ತಿನ್ನುವುದು ಕೂಡಾ ಒಂದು ಸಂಭ್ರಮವೇ ಸರಿ!
ಈಗೀಗ ಆಲೆಮನೆಗಳು ಸ್ವಲ್ಪ ಮಟ್ಟಿಗೆ ವ್ಯಾವಹಾರಿಕವಾಗ ತೊಡಗಿವೆ. ಕೋಣದ ಕಣೆ ಹೋಗಿ ಡೀಸೆಲ್ ಚಾಲಿತ ಮೋಟಾರ್ ಕಣೆ ಬಂದಿದೆ. ಮನೆಮನೆಗಳಲ್ಲಿ ನಡೆಯುತ್ತಿದ್ದ ಆಲೆಮನೆ ಕೆಲವು ಆಯ್ದ ಜಾಗಗಳಲ್ಲಿ ನಡೆಯುತ್ತಿದೆ. ಬೆಳೆದವರು ಕಬ್ಬನ್ನು ಆಲೆಮನೆಗಳಲ್ಲಿ ಇಳಿಸಿ ನಂತರದಲ್ಲಿ ತಯಾರಾದ ಬೆಲ್ಲವನ್ನು ತೆಗೆದುಕೊಂಡು ಹೋಗಲು ಮಾತ್ರ ಬರುವ ಕಾಲ ಬಂದಿದೆ. ಮೊದಲಿನ ಸಂಭ್ರಮ ಮಾಸಿ ಹೋಗಿದೆ. ಆಲೆಮನೆಗೆ ಹೋಗಲೇ ಬೇಕು ಹಾಗೂ ಅಲ್ಲಿ ಸ್ವಲ್ಪ ಸಮಯ ಕಳೆಯಲೇ ಬೇಕು ಎನ್ನುವ ಮನಸ್ಸಿದ್ದವರು ಯಾರದೋ ಕಬ್ಬು ಯಾವುದೋ ಆಲೆಮನೆಯಲ್ಲಿ ಬೆಲ್ಲವಾಗುವ ಆಲೆಮನೆಗೆ ಹೋಗಿ, ಬೆಂಕಿ ಕಾಯಿಸಿ, ಕಬ್ಬು ತಿಂದು, ಹಾಲು ಕುಡಿದು, ಬೆಲ್ಲ ತಿಂದು ಆಲೆಮನೆಯ ಬಗೆಗಿನ ತಮ್ಮ ಭಾವುಕ ಭಾವಗಳನ್ನು ತಣಿಸಿಕೊಂಡು ತೃಪ್ತರಾಗುತ್ತಿದ್ದಾರೆ. ನನಗಂತೂ ಆಲೆಮನೆಯ ಕಾಲದಲ್ಲಿ ಒಮ್ಮೆಯಾದರೂ ಆಲೆಮನೆಗೆ ಭೇಟಿ ನೀಡದಿದ್ದರೆ ಏನೋ ಕಳೆದುಕೊಂಡ ಅನುಭವವಾಗುತ್ತದೆ. ಇದಕ್ಕೆ ಕಾರಣ ಆಲೆಮನೆ ಕೊಡುವ ಹಳ್ಳಿಗಾಡಿನ ಸೊಗಡಿನ ಅನುಭವ!
ಅವಕಾಶ ಸಿಕ್ಕರೆ ಆಲೆಮನೆಗೆ ಭೇಟಿ ನೀಡಿ ಜೀವನದ ರಸಾನುಭವವನ್ನು ತಪ್ಪದೇ ಪಡೆಯಿರಿ.


270. ಪರಿಸರ - ಸಿಹಿ ಗೆಣಸು (7/2/2021)

ಸಿಹಿ ಗೆಣಸು ಬಹಳ ರುಚಿಕರ. ಅದರಲ್ಲೂ ತಿಳಿ ಗುಲಾಬಿ ಬಣ್ಣದ ಸಿಪ್ಪೆ ಇರುವ ಗೆಣಸು ಕ್ರೀಂ ಕಲರ್ ಸಿಪ್ಪೆ ಇರುವ ಗೆಣಸಿಗಿಂತ ಹೆಚ್ಚು ಸವಿಯಾಗಿರುತ್ತದೆ.
ಗೆಣಸು ಗೆಡ್ಡೆ ಜಾತಿಯ ತರಕಾರಿಗಳಲ್ಲೊಂದು. ಇದರ ಗೆಡ್ಡೆ ನೆಲದೊಳಗೆ ಬೆಳೆದರೆ ಬಳ್ಳಿ ನೆಲದ ಮೇಲೆ ಹರಡಿರುತ್ತದೆ. ಇದರ ಬಳ್ಳಿ, ಎಲೆ, ಕಾಂಡ ದುರ್ಬಲವಾಗಿರುತ್ತದೆ. ಆದರೆ ಗೆಡ್ಡೆ ವಿವಿಧ ಗಾತ್ರ ಹಾಗೂ ಆಕಾರ ಹೊಂದಿದ್ದು ಗಟ್ಟಿಯಾಗಿ ಇರುತ್ತದೆ. ಸಾಧಾರಣವಾಗಿ ಒಂದು ಗಿಡದಲ್ಲಿ ಹತ್ತ್ಹದಿನೈದು ಗೆಡ್ಡೆಗಳು ಬೆಳೆಯುತ್ತವೆ. ಸಿಹಿ ಗೆಣಸನ್ನು ಪ್ರಪಂಚದಾದ್ಯಂತ ಬಳಸುತ್ತಾರೆ.
ಗೆಣಸನ್ನು ಬೇಯಿಸಿ ಇಲ್ಲವೇ ಸುಟ್ಟು ತಿನ್ನುತ್ತಾರೆ. ಸ್ವಲ್ಪ ಉಪ್ಪು ಸೇರಿಸಿ ಬೇಯಿಸಿದರೆ ಬೆಂದ ಗೆಣಸಿಗೆ ಅದ್ಭುತ ರುಚಿ ಸಿಗುತ್ತದೆ. ಗೆಣಸಿನಿಂದ ಹಪ್ಪಳ, ಚಿಪ್ಸ್, ಪಲ್ಯ, ಪಾಯಸ, ಹಲ್ವಾ... ಹೀಗೆ ಹಲವು ಬಗೆಯ ಖಾದ್ಯಗಳನ್ನು ತಯಾರಿಸುತ್ತಾರೆ.
ಗೆಣಸಿನ ಹಪ್ಪಳ ಎಂದ ತಕ್ಷಣ ನನಗೆ ಅಜ್ಜಯ್ಯನ ಮನೆಯಲ್ಲಿ ಹಿರಿಯರೆಲ್ಲ ಸೇರಿ ಮಾಡುತ್ತಿದ್ದ ಗೆಣಸಿನ ಸಿಹಿ ಹಪ್ಪಳದ ನೆನಪಾಗುತ್ತದೆ. ಸರಿ ಸುಮಾರು ಬೇಸಿಗೆ ಕಾಲದಲ್ಲಿ ಗೆಣಸನ್ನು ಬೇಯಿಸಿ, ಕುಟ್ಟಿ ಹದಗೊಳಿಸಿ ಮನೆಯಂಗಳದಲ್ಲಿ ಹಪ್ಪಳ ಮಾಡುತ್ತಿದ್ದ ನೆನಪು ನನಗಿನ್ನೂ ಇದೆ. ತಯಾರಾದ ಹಪ್ಪಳದ ಹಿಟ್ಟನ್ನು ಉಂಡೆ ಮಾಡಿ ಮಣೆಯ ಮೇಲ್ಭಾಗದಲ್ಲಿ ಎಣ್ಣೆ ಸವರಿದ ದಪ್ಪನೆಯ ಪ್ಲಾಸ್ಟಿಕ್ ಹಾಳೆಯ ಮೇಲಿಟ್ಟು ಅದರ ಮೇಲೆ ಎಣ್ಣೆ ಸವರಿದ ಇನ್ನೊಂದು ಪ್ಲಾಸ್ಟಿಕ್ ಹಾಳೆಯನ್ನಿಟ್ಟು ಮತ್ತದರ ಮೇಲೆ ಇನ್ನೊಂದು ಮಣೆಯನ್ನು ಇಟ್ಟು ಒತ್ತುತ್ತಿದ್ದರು. ಮಕ್ಕಳಾಗಿದ್ದ ನಾವು ಒಬ್ಬರ ನಂತರ ಇನ್ನೊಬ್ಬರಂತೆ ಷರತ್ತುಗಟ್ಟಿ ಮಣೆಯ ಮೇಲೆ ನಿಂತು ಉಂಡೆ ಚಟ್ಟೆಯಾಗಿ ಹಪ್ಪಳವಾಗಿಸುವಲ್ಲಿ ನಮ್ಮ ಕೊಡುಗೆ ಸಲ್ಲಿಸುತ್ತಿದ್ದೆವು. ಮಧ್ಯೆ ಮಧ್ಯೆ ಹಪ್ಪಳದ ಉಂಡೆ ತಿಂದು ಮಧ್ಯಾಹ್ನದ ಹೊತ್ತಿಗೆ ವಾಯು ಪ್ರಕೋಪವನ್ನು ಪ್ರದರ್ಶಿಸಿ ಬೈಸಿಕೊಳ್ಳುತ್ತಿದ್ದವು. ಎಷ್ಟೇ ವಾಯು ಬಾಧೆಯಾದರೂ ನಾವು ಗೆಣಸಿನ ಹಪ್ಪಳದ ಉಂಡೆ ತಿನ್ನುವುದನ್ನು ಕಡಿಮೆ ಮಾಡುತ್ತಿರಲಿಲ್ಲ. ಒಣಗಿ ತಯಾರಾದ ಹಪ್ಪಳವನ್ನು ಸುಟ್ಟು ತಿಂದರೂ ರುಚಿ ಇಲ್ಲವೇ ಎಣ್ಣೆಯಲ್ಲಿ ಕರಿದು ತಿಂದರೂ ರುಚಿ. ಆ ಸಿಹಿ ಹಪ್ಪಳವನ್ನು ಹಸಿಯಾಗಿಯೂ ತಿನ್ನಬಹುದಿತ್ತು. ಇವೆಲ್ಲ ಮಳೆಗಾಲದಲ್ಲಿ ನಮ್ಮ ಬಾಯಿ ಚಪಲ ತೀರಿಸುವ ದಾಸ್ತಾನುಗಳಾಗಿದ್ದವು.

ಈಗಲೂ ಕೂಡಾ ಮಾರುಕಟ್ಟೆಯಲ್ಲಿ ಸಿಹಿ ಗೆಣಸು ಕಂಡರೆ ತಂದು ಬೇಯಿಸಿ ತಿನ್ನುವುದಿದೆ. ತಿಂದ ನಂತರದಲ್ಲಿ ಬಾಧಿಸುವ ವಾಯು ಬಾಧೆಯ ಅರಿವಿದ್ದರೂ ಗೆಣಸನ್ನು ತಿನ್ನದೆ ಇರಲು ಸಾಧ್ಯವೇ ಇಲ್ಲ. ಅಂತಹ ಬಾಯಿ ಚಪಲ ಗೆಣಸು ಹುಟ್ಟಿಸುತ್ತದೆ ಎಂದರೆ ತಪ್ಪಿಲ್ಲವಲ್ಲ?


269. ಪರಿಸರ - ನೂಲು (5/2/2021)

ನಾವು ದಿನನಿತ್ಯ ತೊಡುವ ಬಟ್ಟೆ ತಯಾರಾಗಬೇಕಾದರೆ ಬೇಕಾಗುವ ವಸ್ತು ನೂಲು. ಬಟ್ಟೆಗಳನ್ನು ನೈಸರ್ಗಿಕ ಅಥವಾ ಕೃತಕ ಎಳೆಗಳು/ನೂಲುಗಳ ಜಾಲದಿಂದ ಮಾಡಿರುತ್ತಾರೆ. ಮನುಷ್ಯನಿಗೆ ಊಟ, ವಸತಿಯಷ್ಟೇ ಮುಖ್ಯವಾದುದು ಬಟ್ಟೆ. ಅಂತಹ ಬಟ್ಟೆಯನ್ನು ತಯಾರಿಸಬೇಕಾದ ನೂಲನ್ನು ನಾವು ಎಷ್ಟರಮಟ್ಟಿಗೆ ಪರಿಗಣಿಸಿದ್ದೇವೆ ಎನ್ನುವುದು ಮುಖ್ಯ! ನಮ್ಮ ದಿನನಿತ್ಯದ ಕ್ರಿಯೆಗಳಲ್ಲಿ ನಾವು ಎಷ್ಟು ಮುಳುಗಿ ಹೋಗಿರುತ್ತೇವೆಂದರೆ ಯಾವುದನ್ನೂ ವಿಶೇಷವಾಗಿ ಗಮನಿಸದೆ ಯಾಂತ್ರಿಕವಾಗಿ ಬಳಸುತ್ತಿರುತ್ತೇವೆ. ಎಷ್ಟೋ ಬಾರಿ ನಾವು ಬಳಸುವ ವಸ್ತುಗಳ ಮೂಲವನ್ನು, ನಮ್ಮೊಡನಿರುವ ವ್ಯಕ್ತಿಗಳ ಮನಸ್ಥಿತಿಯನ್ನು ಕೂಲಂಕುಷವಾಗಿ ಪರಿಗಣಿಸದೆ ಜೀವನದ ಓಟದಲ್ಲಿ ಓಡುತ್ತಿರುತ್ತೇವೆ.
ನಾವ್ಯಾಕೆ ನೂಲಿನ ಕಿರು ಪರಿಚಯ ಮಾಡಿಕೊಳ್ಳಬಾರದು? ನೂಲನ್ನು ಹತ್ತಿ, ಉಣ್ಣೆ, ರೇಷ್ಮೆ, ನೈಲಾನ್ ಹೀಗೆ ಹಲವಾರು ಕಚ್ಛಾ ವಸ್ತುಗಳಿಂದ ತಯಾರಿಸುತ್ತಾರೆ. ಮೊದಮೊದಲು ತಕಲಿಯಿಂದ ಒರಟಾಗಿ ನೂಲನ್ನು ತಯಾರಿಸಲಾಗುತ್ತಿತ್ತು. ಕಾಲಕ್ರಮೇಣ ನೂಲುವ ವಿಧಾನದಲ್ಲಿ ಬಹಳ ಸುಧಾರಣೆಗಳಾಗಿ ಈಗ ಯಾಂತ್ರೀಕೃತ ನೂಲುಗಳ ಉಪಯೋಗವಾಗುತ್ತಿದೆ.
ನಾನು ಕಂಡದ್ದು ಅಜ್ಜಯ್ಯ ತಕಲಿ ಹಾಗೂ ಚರಕ ಉಪಯೋಗಿಸಿ ಮಾಡುತ್ತಿದ್ದ ಜನಿವಾರದ ನೂಲು ಹಾಗೂ ಬಟ್ಟೆ ಹೊಲಿಯಲು ಬಳಸುವ ನೂಲುಂಡೆ ಹಾಗೂ ಎಂಬ್ರಾಯ್ಡರಿಗೆ ಬಳಸುವ ವಿವಿಧ ಬಗೆಯ ನೂಲುಗಳು. ಇದಕ್ಕೆ ಹೊರತಾಗಿ ಗಾಳಿಪಟ ಬಿಡಲು ಬಳಸುವ ದಪ್ಪಗಿನ ನೂಲನ್ನು ನೋಡಿದ್ದೇನೆ. ಬಟ್ಟೆ ಹೊಲಿಯುವ ನೂಲಿನಲ್ಲೂ ವಿವಿಧ ಗುಣಮಟ್ಟದ ನೂಲುಗಳಿವೆ. ಹೊಲಿಯಲು ಬಳಸುವ ಸೂಜಿಯಲ್ಲೂ ಬಹಳ ವೈವಿಧ್ಯತೆ ಇದೆ. ಆದರೆ ನಾನು ಬಳಸುವುದು ಹರಿದ ಬಟ್ಟೆಗಳನ್ನು ಹೊಲಿಯುವ ಸರ್ವೇ ಸಾಧಾರಣವಾದ ಸೂಜಿ ಮತ್ತು ನೂಲು.

ತೆಳುವಾದ ನೂಲಿನೆಳೆಗಳು ಹೆಣೆಯಲ್ಪಟ್ಟು ತಯಾರಾಗುವ ಬಟ್ಟೆ ದಿರಿಸಾಗುವುದು ಕೂಡಾ ಅದೇ ತೆಳುವಾದ ನೂಲಿನೆಳೆ ಬಳಸಿ ಹೊಲಿಯಲ್ಪಟ್ಟು! ಅಷ್ಟು ತೆಳ್ಳನೆಯ ನೂಲಿನಿಂದ ತಯಾರಾದ ಬಟ್ಟೆ ಹರಿದುಹೋಗಬಹುದು ಹಾಗೂ ಅಂತಹುದೇ ನೂಲಿನಿಂದ ಹೊಲಿಯಲ್ಪಟ್ಟ ದಿರಿಸಿನ ಹೊಲಿಗೆ ಬಿಚ್ಚಿ ಹೋಗಬಹುದು ಎಂಬುದು ನಮ್ಮ ಮನಸ್ಸಿಗೆ ಬರುವುದೇ ಇಲ್ಲ. ಒಂದು ವೇಳೆ ಅಂತಹ ಯೋಚನೆ ಬಂದರೂ ಕ್ಷಣ ಮಾತ್ರದಲ್ಲಿ ಬದಿಗೊತ್ತಿ ಬಿಡುತ್ತೇವೆ. ಒಂದು ಬಟ್ಟೆಯ ಥಾನಾಗಲು ಮತ್ತದು ನಮ್ಮೆಲ್ಲರ ದಿರಿಸುಗಳಾಗಿ ಪರಿವರ್ತಿತವಾಗಲು ತೆಳ್ಳನೆಯ ನೂಲಿನೆಳೆಗಳು ಎಷ್ಟು ಮುಖ್ಯ ಪಾತ್ರ ವಹಿಸುತ್ತದಲ್ಲವೆ? ಇಷ್ಟು ಮುಖ್ಯ ಕಾರ್ಯ ನಿರ್ವಹಿಸುವ ನೂಲಿಗೆ ನಾವು ಎಷ್ಟು ಬೆಲೆ ಕೊಟ್ಟಿದ್ದೇವೆ? ಆದರೂ ನಮಗರಿವಿಲ್ಲದೆ ನೂಲೆನ್ನುವುದು ನಮ್ಮ ಬದುಕಿನಲ್ಲಿ ಹಾಸುಹೊಕ್ಕಾಗಿ ಬೆಸೆದಿದೆ. ನಮಗೆ ಇಲ್ಲಿ ಯಾರೂ ಅಮುಖ್ಯರಲ್ಲ; ಯಾವುದೂ ಅಮುಖ್ಯವಲ್ಲ ಎನ್ನುವ ಪಾಠವನ್ನೂ ಕಲಿಸಿದೆ!


268. ಪರಿಸರ - ಕಪ್ಪೆ (2/2/2021)

ಕಪ್ಪೆ ಕರೆ ಕರ ತುಪ್ಪ ಜಲಿ ಜಲಿ
ಮಾವಿನ ವಾಟೆ ಮರದಲಿ ಕೋಟೆ....ಈ ಪದ್ಯವನ್ನು ಪ್ರಾಥಮಿಕ ಶಾಲೆಯಲ್ಲಿ ನಾನು ಕಲಿತದ್ದು ನನ್ನ ನೆನಪು. ಈ ಪದ್ಯದಲ್ಲಿ ಮಹಾ ವಿಶೇಷಾರ್ಥವಿಲ್ಲದಿದ್ದರೂ ಬಹಳಷ್ಟು ಪಕ್ಷಿ, ಕೀಟ, ಮರಗಿಡಗಳನ್ನು ಮಕ್ಕಳಿಗೆ ಪರಿಚಯಿಸುವ ಕೆಲಸ ಇದು ಮಾಡುತ್ತದೆ. ನಮ್ಮ ಮನೆಯ ಬಚ್ಚಲು ಮನೆಯಲ್ಲಿ ಇರುವ ಒಂದು ಸಣ್ಣ ಕಪ್ಪೆ(ಪ್ರಾಯಶಃ ಮರಕಪ್ಪೆ)ಯನ್ನು ನೋಡಿದಾಗಲೆಲ್ಲ ಈ ಪದ್ಯದ ನೆನಪಾಗುತ್ತದೆ.
ನಾನು ಚಿಕ್ಕವಳಿದ್ದಾಗ ನನಗೆ ಕಪ್ಪೆ ಕಂಡರೆ ಹೇಸಿಗೆಯಾಗುತ್ತಿತ್ತು. ಮುಖದಿಂದ ಹೊರಬಂದಿರುವ ಅದರ ಉಬ್ಬು ಕಣ್ಣುಗಳು, ಅದರ ಗುಳ್ಳೆ ಇರುವ ಮೈಯನ್ನು ನೋಡಿದಾಗ ಅದರಿಂದ ದೂರ ಓಡಿ ಹೋಗುವ ಎಂದೆನಿಸುತ್ತಿತ್ತು. ಆದರೆ ದೊಡ್ಡವಳಾದಂತೆ ಕಪ್ಪೆಯನ್ನು ಅದು ಇರುವ ರೀತಿಯಲ್ಲಿಯೇ ಒಪ್ಪಿಕೊಳ್ಳುವ ಮನಸ್ಥಿತಿ ಬೆಳೆಯಿತು. ಅದರಲ್ಲಿರುವ ವೈವಿಧ್ಯತೆಯನ್ನು ಗಮನಿಸತೊಡಗಿದೆ. ಅದು ಪುಟಿಯುವ ರೀತಿ, ಅದು ಮಾಡುವ ವಿಚಿತ್ರ ಶಬ್ದ, ಅದು ಹುಳುಗಳನ್ನು ಬೇಟೆಯಾಡುವ ರೀತಿಯನ್ನು ಬಹಳಷ್ಟು ಬಾರಿ ಗಮನಿಸಿದೆ. ಅದರ ಬಗ್ಗೆ ಆಸಕ್ತಿ ಬೆಳೆಯತೊಡಗಿತು. ಈ ಎಲ್ಲಾ ಅಂಶಗಳು ಕಪ್ಪೆಯನ್ನು ಒಪ್ಪಿಕೊಳ್ಳಲು ನನ್ನ ಮನಸ್ಸನ್ನು ಅಣಿಗೊಳಿಸಿದವು ಎಂದರೆ ತಪ್ಪಲ್ಲ!
ಕಪ್ಪೆ ಒಂದು ಉಭಯವಾಸಿ ಜೀವಿ. ಹುಳಹುಪ್ಪಟೆಗಳನ್ನು ತಿಂದು ಬದುಕುವ ಮಾಂಸಾಹಾರಿ ಜೀವಿ. ಸಾಮಾನ್ಯವಾಗಿ ನೀರಿನಲ್ಲಿ ಮೊಟ್ಟೆಯಿಟ್ಟು ಸಂತಾನೋತ್ಪತ್ತಿ ಮಾಡುತ್ತದೆ. ಅದರ ಗೊದಮೊಟ್ಟೆಗಳು ಗುಂಪಾಗಿ ನೀರಿನಲ್ಲಿ ಚಲಿಸುವಾಗ ಯಾವುದೋ ವಿಚಿತ್ರ ಜೀವಿಯನ್ನು ಕಂಡಂತನಿಸುತ್ತದೆ. ಇದೊಂದು ಶೀತರಕ್ತ ಪ್ರಾಣಿ. ಕಪ್ಪೆಗಳು ಜಿಗಿಯಬಲ್ಲವು, ಓಡಬಲ್ಲವು ಹಾಗೂ ಮರ ಹತ್ತ ಬಲ್ಲವು. ವಿಚಿತ್ರವಾದರೂ ವಿಶೇಷ ಪ್ರಾಣಿಯಿದು.
ನಮ್ಮ ಮನೆಯ ಬಚ್ಚಲು ಮನೆಯಲ್ಲಿರುವ ಕಪ್ಪೆ ಆಕಾರದಲ್ಲಿ ಬಹಳ ಪುಟ್ಟದು. ಸ್ವಲ್ಪ ಕ್ರೀಂ ಬಣ್ಣದ ಕಪ್ಪೆಯದು. ತನ್ನ ಪಾಡಿಗೆ ತಾನು ಬಚ್ಚಲುಮನೆಯಿಡೀ ಪುಟಿದು ಹಾರುತ್ತಿರುತ್ತದೆ. ಕೆಲವೊಮ್ಮೆ ನನ್ನ ಟವೆಲ್ ಒಳಗೆ ಹೊಕ್ಕು ಮೈ ಒರೆಸಿಕೊಳ್ಳುವಾಗ ಅದರಿಂದ ಪುಳಕ್ಕನೇ ಹಾರಿ ನನ್ನನ್ನು ಗಾಬರಿಪಡಿಸುತ್ತದೆ😀 ಕೆಲವೊಮ್ಮೆ ವಾರಗಟ್ಟಲೆ ತನ್ನ ದರ್ಶನವನ್ನು ಅದು ಕೊಡುವುದೇ ಇಲ್ಲ. ಆಗ ಒಂದು ರೀತಿಯ ಖಾಲಿ ಖಾಲಿ ಎಂದೆನಿಸುತ್ತದೆ.
ಇತ್ತೀಚೆಗೆ ನಾನು ದೊಡ್ಡ ಕಪ್ಪೆಯನ್ನು ಕಂಡಿದ್ದು ಕಡಿಮೆ. ಅವುಗಳ ಸಂಖ್ಯೆ ಕಡಿಮೆಯಾಗಿದೆಯೋ ಅಥವಾ ನನಗೆ ಕಾಣ ಸಿಕ್ಕಿಲ್ಲವೋ ಎನ್ನುವುದು ನನಗೆ ಗೊತ್ತಿಲ್ಲ. ನನಗಂತೂ ದೊಡ್ಡ ಕಪ್ಪೆ ಕಾಣಸಿಕ್ಕಿಲ್ಲವಷ್ಟೇ!

ನಾನು ಈಜಲು ಹೋಗುತ್ತಿದ್ದಾಗ ಕೆರೆಯಲ್ಲಿ ಗೊದಮೊಟ್ಟೆಗಳ ಗುಂಪನ್ನು ದೂರದಲ್ಲಿ ಕಂಡಾಗ ಅದು ಹಾವೇನೋ ಎಂದು ಒಂದು ಕ್ಷಣ ಹೆದರಿಕೆಯಾಗುತ್ತಿತ್ತು. ಹತ್ತಿರ ಬಂದಾಗ ಗೊದಮೊಟ್ಟೆ ಎಂದು ಅರಿವಾಗಿ ಸಮಾಧಾನವಾಗುತ್ತಿತ್ತು. ಬಾಲವಿರುವ ಗೊದಮೊಟ್ಟೆ ಪುಟಿಯುವ ಕಪ್ಪೆಯಾಗಿ ಪರಿವರ್ತಿತವಾಗುವ ಪ್ರಕ್ರಿಯೆಯೇ ವಿಶೇಷ. ಪರಿವರ್ತನೆ ಸಹಜ ಸಾಧ್ಯ ಎನ್ನುವುದನ್ನು ಈ ಪ್ರಕ್ರಿಯೆ ನಿರೂಪಿಸುತ್ತದಲ್ಲವೆ?

267. ಪರಿಸರ - ಹುಣಿಸೆ ಹಣ್ಣು (26/1/2021)


ಹುಣಿಸೆ ಹಣ್ಣು/ಕಾಯಿ ನಾನು ಇಷ್ಟಪಟ್ಟು ತಿನ್ನುತ್ತಿದ್ದ ವಸ್ತುಗಳಲ್ಲಿ ಒಂದು. ಈಗಲೂ ಮರದಲ್ಲಿ ನೇಲುವ ಹುಣಿಸೆ ಕಾಯಿಯನ್ನು ನೋಡಿದಾಗ ಬಾಯಿಯಲ್ಲಿ ಛಿಲ್ಲನೆ ನೀರೂರುತ್ತದೆ. ಕೈಗೆ ಸಿಕ್ಕ ಕಾಯಿಯನ್ನು ಕಿತ್ತು ಉಪ್ಪು ತಾಗಿಸಿ ಕಚಕಚನೆ ತಿಂದು ಬಿಡುವ ಎಂದೆನಿಸುತ್ತದೆ. ಆದರೆ ಈಗ ಅದನ್ನು ತಿಂದು ನಾನು ಜೀರ್ಣಿಸಿಕೊಳ್ಳಲಾರೆ ಎನ್ನುವ ಸತ್ಯವೂ ನೆನಪಾಗುತ್ತದೆ.
ಹಿಂದೆಲ್ಲಾ ಈಗಿನಂತೆ ಅಗತ್ಯ ಬಿದ್ದಾಗ ಅಂಗಡಿಗೆ ಹೋಗಿ ಹುಣಿಸೆ ಹಣ್ಣನ್ನು ತರುತ್ತಿರಲಿಲ್ಲ. ಮನೆಯ ಮರದಲ್ಲಿ ಬಿಟ್ಟ ಅಥವಾ ವರ್ಷಕ್ಕೆ ಬೇಕಾದಷ್ಟು ಖರೀದಿಸಿದ ಇಡೀ ಹುಣಿಸೆ ಹಣ್ಣನ್ನು ಸಿಪ್ಪೆ ತೆಗೆದು, ನಾರು ಬಿಡಿಸಿ, ಮೆಟ್ಟುಕತ್ತಿಯಲ್ಲಿ ಅದರ ಬೀಜ ತೆಗೆದು, ನಾಲ್ಕೈದು ಬಿಸಿಲಿಗೆ ಹಾಕಿ, ಸ್ವಲ್ಪ ಉಪ್ಪು ಸೇರಿಸಿ ಕುಟ್ಟಿ, ದೊಡ್ಡ ಉಂಡೆಗಟ್ಟಿ ಗಾಳಿಯಾಡದ ಡಬ್ಬದಲ್ಲಿ ತುಂಬಿ ಇಡುತ್ತಿದ್ದರು‌. ಹೀಗೆ ವರ್ಷಕ್ಕಾಗುವಷ್ಟು ಹುಣಿಸೆ ಹಣ್ಣನ್ನು ಸಂಗ್ರಹಿಸಿ ಇಡುತ್ತಿದ್ದರು.
ನನ್ನ ಅಜ್ಜಯ್ಯನ ಮನೆಯೂ ಇದಕ್ಕೆ ಹೊರತಲ್ಲ. ಪ್ರತಿ ಬೇಸಿಗೆಯಲ್ಲೂ ಹುಣಿಸೆ ಬೆಳೆಯ ಸಂದರ್ಭದಲ್ಲಿ ಅದನ್ನು ಶುದ್ಧೀಕರಿಸಿ ಇಡುವ ಕಾಯಕ ನಡೆಯುತ್ತಿತ್ತು. ಮಕ್ಕಳಾಗಿದ್ದ ನಮಗೆ ಆಗ ಹುಣಿಸೆ ಹಣ್ಣನ್ನು ತಿನ್ನುವುದೇ ಕೆಲಸ. ಅದಕ್ಕೆ ಬೆಲ್ಲ, ಉಪ್ಪು, ಖಾರ ಹಾಕಿ ಕುಟ್ಟಿ ಉಂಡೆ ಮಾಡಿ ಹಿಡಿಕಡ್ಡಿಯ ದಪ್ಪಭಾಗಕ್ಕೆ ಸಿಕ್ಕಿಸಿ ನೆಕ್ಕಿ ನೆಕ್ಕಿ ತಿನ್ನುವ ಸುಖ ಅಸೀಮವಾದದ್ದು. ಹುಣಿಸೆ ಬೀಜವನ್ನು ಹುರಿದು ಡಬ್ಬದಲ್ಲಿ ತುಂಬಿಟ್ಟು ಒಂದೊಂದನ್ನೇ ಕಚ್ಚಿ ತಿನ್ನುತ್ತಿದ್ದರೆ ಗೋಡಂಬಿಗಿಂತಲೂ ಅದ್ಭುತ ರುಚಿ. ನಾನು ಚಿಕ್ಕವಳಿದ್ದಾಗ ತಿಂದಷ್ಟು ಹುರಿದ ಹುಣಿಸೆ ಬೀಜವನ್ನು ಯಾರೂ ತಿಂದಿರಲಾರರೇನೊ? ಆ ಪ್ರಮಾಣದಲ್ಲಿ ಹುಣಿಸೆ ಬೀಜ ತಿಂದಿದ್ದೇನೆ. ನನ್ನ ಕಂಪಾಸ್ ಬಾಕ್ಸ್ ನಲ್ಲಿ ಪೆನ್ಸಿಲ್, ರಬ್ಬರ್ ಗಿಂತ ಹುಣಿಸೆ ಬೀಜ ತುಂಬಿರುತ್ತಿದ್ದುದೇ ಹೆಚ್ಚು. ಹುಣಿಸೆ ಬೀಜದ ಬಗ್ಗೆ ನನಗೆ ಅಷ್ಟು ಒಲವಿತ್ತು 😀
ಹುಣಿಸೆ ಕಾಯಿ ಕೂಡಾ ಬಲು ರುಚಿ. ಮರದಿಂದ ಕೊಯ್ದ ತಾಜಾ ಕಾಯಿಗೆ ಉಪ್ಪು ಹಾಕಿ ತಿಂದರೆ ಬಲು ಸೊಗಸು. ನನ್ನ ದೊಡ್ಡಮ್ಮ ಅದರ ತೊಕ್ಕು ಮಾಡುತ್ತಿದ್ದರು. ಬಲು ರುಚಿಯಾಗಿರುತ್ತಿತ್ತದು. ಹುಣಿಸೆ ಕಾಯಿ, ಹಸಿಮೆಣಸು, ಅರಿಶಿನ, ಉಪ್ಪು, ಇಂಗು ಎಲ್ಲವನ್ನೂ ಸರಿಯಾದ ಪ್ರಮಾಣದಲ್ಲಿ ಬೆರೆಸಿ, ನೀರು ಹಾಕದೆ ರುಬ್ಬುವ ಕಲ್ಲಿನಲ್ಲಿ ರುಬ್ಬಿಟ್ಟರೆ ಅದು ಹಾಳಾಗದೆ ತಿಂಗಳುಗಟ್ಟಲೆ ಉಳಿಯುತ್ತದೆ. ಅನ್ನ, ತಿಂಡಿ ಎಲ್ಲವುದಕ್ಕೂ ಅದು ಒಳ್ಳೆಯ ಕಾಂಬಿನೇಷನ್. ಹುಣಿಸೆ ಹಣ್ಣಿನ ಪಾನಕ, ಸಾರು ಬಹಳ ಸ್ವಾದಿಷ್ಟವಾಗಿರುತ್ತದೆ. ಹುಣಿಸೆ ಹಣ್ಣು ಬಳಸಿ ಮಾಡುವ ಪುಳಿಯೋಗರೆಯಂತೂ ಪರಮ ರುಚಿಕರ.
ಹುಣಿಸೆ ಹಣ್ಣು ಆರೋಗ್ಯಕಾರಿ ಅಂಶಗಳನ್ನು ಹೊಂದಿದೆ. ಅದರಲ್ಲಿರುವ ವಿಟಮಿನ್ ಸಿ, ಈ, ಬಿ ಅಂಶಗಳು, ಕಬ್ಬಿಣ, ರಂಜಕ, ಪೊಟ್ಯಾಷಿಯಂ ನಮ್ಮ ದೇಹವನ್ನು ಸದೃಢವಾಗಿಡಲು ಸಹಕರಿಸುತ್ತವೆ. ಹುಣಿಸೆ ಹಣ್ಣಿನಲ್ಲಿರುವ ಹೈಡ್ರೋಕ್ಸಿ ಸಿಟ್ರಿಕ್ ಆಸಿಡ್ ದೇಹದಲ್ಲಿ ಕೊಬ್ಬಿನ ಉತ್ಪಾದನೆಯನ್ನು ನಿಧಾನಗೊಳಿಸುತ್ತದೆ. ಹುಣಿಸೆ ಹಣ್ಣಿನ ರಸವು ಪಿತ್ಥವನ್ನು ನಿಯಂತ್ರಿಸುತ್ತದೆ. ಉತ್ತಮ ಜೀರ್ಣಕ್ರಿಯೆಗೆ ಸಹಕಾರಿ. ಜೀರ್ಣಕ್ರಿಯೆ ಸಂಬಂಧಿ ಹಲವು ಸಮಸ್ಯೆಗಳಿಗೆ ಹುಣಿಸೆ ಹಣ್ಣು ರಾಮಬಾಣ.
ಇಂತಹ ಬಹೂಪಯೋಗಿ ಹುಣಿಸೆ ಹಣ್ಣು ಸದಾ ನಮ್ಮ ಅಡುಗೆಮನೆಯಲ್ಲಿರಲಿ ಎನ್ನುವುದು ನನ್ನ ಅಭಿಪ್ರಾಯ!


266. ಪರಿಸರ - ಅಪಾನವಾಯು (ಹೂಸು) (24/1/2021)

ಅಪಾನವಾಯು/ಆಧೋವಾಯು ಎಂದ ತಕ್ಷಣ ನೆನಪಾಗುವ ವಾಕ್ಯ " ಭರ್ ಭುರ್ ಬಹಿರ್ನಾಸ್ತಿ; ಪುಂಯ್ ಪುಸ್ ಪ್ರಾಣಹರಣಂ". ಈ ಒಂದು ವಾಕ್ಯ ಅಪಾನವಾಯುವಿನ ವಾಸನಾ ಬಲವನ್ನು ತೋರಿಸುತ್ತದೆ. ಅಪಾನವಾಯು/ಅಧೋವಾಯು/ಹೂಸು ಎಂಬೆಲ್ಲಾ ಹೆಸರಿನಿಂದ ಕರೆಯಲ್ಪಡುವ ಈ ವಾಯು ಪ್ರಕೋಪಕ್ಕೆ ಒಳಗಾಗದವರೇ ಇಲ್ಲ. ಇದು ಎಲ್ಲರ ದೇಹದಿಂದ ಸರ್ವೇ ಸಾಮಾನ್ಯವಾಗಿ ಹೊರಹೊಮ್ಮುವುದಾದರೂ ಇದರ ಬಗ್ಗೆ ಮುಕ್ತವಾಗಿ ಎಲ್ಲರೊಡನೆ ಮಾತನಾಡುವುದಕ್ಕೆ ಹಾಗೂ ಮುಕ್ತವಾಗಿ ಎಲ್ಲರೆದುರು ಹೊರಹಾಕಲು ನಾವಿನ್ನೂ ಮುಕ್ತವಾಗಿಲ್ಲ ಎನ್ನುವುದು ಎಲ್ಲರೂ ಒಪ್ಪಿಕೊಳ್ಳುವ ವಿಷಯ🤭
ಅಪಾನವಾಯು ನಮ್ಮ ಜೀರ್ಣಕ್ರಿಯೆಯ ಸಮಸ್ಯೆಯಿಂದಾಗಿ ಉಂಟಾಗುವ ಪರಿಣಾಮ. ಅಜೀರ್ಣವಾದಾಗ ಇಲ್ಲವೇ ಹೊಟ್ಟೆ ಉಬ್ಬರಿಸಿದಾಗ ಒಂದೇ ಅದು ತೇಗಿನ ರೂಪದಲ್ಲಿ ಇಲ್ಲವೇ ಹೂಸಿನ ರೂಪದಲ್ಲಿ ಹೊರಬರುತ್ತದೆ. ಅದು ಯಾವ ರೂಪದಲ್ಲೂ ಹೊರಬರದಿದ್ದರೆ ಗ್ಯಾಸ್ಟ್ರಿಕ್ ಸಮಸ್ಯೆ ತೀವ್ರವಾಗಿ ಆ ವ್ಯಕ್ತಿ ಬಹುರೂಪಗಳನ್ನು ನೋಡುವಂತಾಗುತ್ತದೆ🤔
ತೇಗನ್ನು ಸಹಜ ಕ್ರಿಯೆ ಎಂದು ಸ್ವೀಕರಿಸುವ ಸಮಾಜ ಅಪಾನವಾಯುವನ್ನು ಅಸಹ್ಯಕರವೆಂದು ಪರಿಗಣಿಸುತ್ತದೆ. ಹಾಗೆಂದು ಅಪಾನವಾಯುವನ್ನು ಒಳಗೇ ಅದುಮಿಟ್ಟುಕೊಳ್ಳುವುದು ಅನಾರೋಗ್ಯಕ್ಕೆ ಎಡೆ ಮಾಡಿ ಕೊಡುತ್ತದೆ. ಒಂದು ಅಧ್ಯಯನದ ಪ್ರಕಾರ ಒಬ್ಬ ಸಾಮಾನ್ಯ ಆರೋಗ್ಯವಂತ ವ್ಯಕ್ತಿ ದಿನಕ್ಕೆ 14 ರಿಂದ 20 ಸಾರಿ ಅಧೋವಾಯುವನ್ನು ಬಿಡುವುದು ಸಹಜಕ್ರಿಯೆ.ನಾಲ್ಕು ಜನರ ಮುಂದೆ ಬಿಡಲು ಸಂಕೋಚವಾದರೆ ಸ್ವಲ್ಪ ದೂರ ಹೋಗಿ ಬಿಡುವುದೊಳ್ಳೆಯದು. ಸಂಕೋಚದಿಂದ ಕಟ್ಟಿಕೊಂಡರೆ ಬೇಡದ ಕಾಯಿಲೆಗಳಿಗೆ ಆಹ್ವಾನ ಕೊಟ್ಟಂತೆ.
ನಾನು ವಿವಿಧ ಜನರ ವಿವಿಧ ರೀತಿಯ ಅಪಾನವಾಯು ಬಿಡುಗಡೆಯನ್ನು ದರ್ಶಿಸಿದ್ದೇನೆ. ಕೆಲವರು ಜನರ ನಡುವಿದ್ದರೂ ಅನಿವಾರ್ಯತೆಯಿಂದ "ಎಕ್ಸ್ಯೂಸ್ ಮೀ" ಎಂದು ಅದನ್ನು ಹೊರ ಬಿಡುವುದಿದೆ. ಕೆಲವೊಮ್ಮೆ ಶಬ್ದರಹಿತವಾಗಿ ಹೊರಬರುವ ಅಧೋವಾಯು ಸೇರಿದ ಜನರನ್ನು ಆ ಜಾಗದಿಂದ ಓಡಿಸಿದ್ದೂ ಇದೆ😀 ರಾಗಬದ್ಧವಾಗಿ ಅಪಾನವಾಯುವನ್ನು ಹೊರಡಿಸುವವರನ್ನೂ ನೋಡಿದ್ದೇನೆ. ಮದುವೆ ಮುಂಜಿಗಳಲ್ಲಿ ಎಲ್ಲರೂ ಒಟ್ಟಿಗಿದ್ದಾಗ ದೊಡ್ಡವರು ಬಿಡುಗಡೆಗೊಳಿಸಿದ ನಾದವನ್ನು ಸಣ್ಣವರ ಮೇಲೆ ಹಾಕಿದ್ದನ್ನೂ ಸಾಕ್ಷೀಕರಿಸಿದ್ಧೇನೆ. ಜನರಿದ್ದಾರೆ ಎಂದು ಉಸಿರು ಬಿಗಿ ಹಿಡಿದು ಅದುಮಿಟ್ಟುಕೊಂಡದ್ದು ಯಾವುದೋ ಕಾರಣಕ್ಕೆ ಅಚಾತುರ್ಯದಿಂದ ಹೊರಬಂದು ಎಲ್ಲರೆದುರು ಆಭಾಸವಾದದ್ದನ್ನು ಕಂಡಿದ್ದೇನೆ.
ನಾವು ಚಿಕ್ಕವರಿದ್ದಾಗ ಯಾರಾದರೂ ಹೂಸಿದರೆ ಅಂತವರನ್ನು ಕಂಡು ಹಿಡಿಯಲು "ಅವಲಕ್ಕಿ ಪವಲಕ್ಕಿ ಕಾಂಚಿಣಿ ಮಿಣಿಮಿಣಿ .....ಟುಂಯ್ಯಾ ಟುಸ್" ಎಂದು ಹೇಳುತ್ತಾ "ಟುಸ್" ಪದ ಯಾರ ಮುಂದೆ ಬರುತ್ತದೋ ಅವರು ಹೂಸು ಬಿಟ್ಟಿರಲೀ ಬಿಟ್ಟಿರದೇ ಇರಲಿ ಅವರೇ ಹೂಸು ಬಿಟ್ಟವರು ಎಂದು ನಿರ್ಧರಿಸಿ ಬಿಡದವರನ್ನು ಅಳಿಸಿದ್ದೂ ಇದೆ. ಅದೊಂದು ಅವಮಾನ ಎಂದು ಪರಿಗಣಿಸಲ್ಪಟ್ಟು ಅಳು ಬರುತ್ತಿದ್ದದ್ದು.
ಯಾರೂ ಬಳಿ ಇಲ್ಲದಿದ್ದಾಗ ಹೂಸು ಆರಾಮವಾಗಿ ಹೊರಬರುತ್ತದೆ. ಯಾರಾದರೂ ಅಪರಿಚಿತರು ಇದ್ದಲ್ಲಿ ಅದು ಒಳಗೇ ಒತ್ತಿ ಕುಳಿತಿರುತ್ತದೆ. ಆಗ ಒಂದು ರೀತಿಯ ಚಡಪಡಿಕೆ ಉಂಟಾಗುತ್ತದೆ. ಒಳಗಿದ್ದಾಗ ಅದರಿಂದಾಗುವ ಬಾಧೆ ಅಸಹನೀಯ. ಅದನ್ನು ಅನುಭವಿಸಿದವರೇ ಬಲ್ಲರು☺️

ನಮ್ಮ ಆಹಾರ/ಜೀವನ ಕ್ರಮವನ್ನು ಸರಿಗೊಳಿಸಿ ವಾಯು ಬಾಧೆಯನ್ನು ನಿವಾರಿಸಿಕೊಳ್ಳೋಣವಲ್ಲವೆ?


265. ಅನುಭವ - ಶೌಚಾಲಯ  (21/1/2021)

ಒಂದು ಕಾಲದಲ್ಲಿ ಸಾರ್ವಜನಿಕ ಶೌಚಾಲಯ ಎಂದರೆ ದುಃಸ್ವಪ್ನವಾಗಿತ್ತು. ದುಸ್ಥಿತಿ/ಗಲೀಜಾದ ಸ್ಥಿತಿಯಲ್ಲಿರುವ ಸಾರ್ವಜನಿಕ ಶೌಚಾಲಯದ ಬಳಕೆಯ ಅನೇಕ ಅಸಹನೀಯ ಅನುಭವಗಳು ನನಗಾಗಿವೆ. ಈಗ ನೆನಪಿಸಿಕೊಂಡರೂ ವಾಕರಿಕೆ ಬರಿಸುವ ಅನುಭವಗಳವು.
ಈಗ್ಗ್ಯೆ ಮೂವತ್ತು ವರ್ಷಗಳ ಹಿಂದೆ ಶಿವಮೊಗ್ಗದ ಸರ್ಕಾರಿ ಬಸ್ ಸ್ಟ್ಯಾಂಡಿನ ಶೌಚಾಲಯ ಯೋಗ್ಯ ಸ್ಥಿತಿಯಲ್ಲಿ ಇರಲಿಲ್ಲ. ನಾನೊಮ್ಮೆ ಪ್ರವಾಸ ಮಾಡುವಾಗ ಶಿವಮೊಗ್ಗ ಬಸ್ಟ್ಯಾಂಡಿನ ಶೌಚಾಲಯ ಉಪಯೋಗಿಸಲು ಸುಮಾರು ಮಧ್ಯಾಹ್ನದ ಸಮಯದಲ್ಲಿ ಹೋಗಿದ್ದೆ. ಒಳಹೋಗಿ ನೋಡಿದರೆ ಟಾಯಿಲೆಟ್ ಬೇಸಿನ್ ಬಿಟ್ಟು ಎಲ್ಲೆಡೆಯೂ ಮನುಷ್ಯರ ಮಲ ದರ್ಶನ😳 ಹೆಜ್ಜೆ ಎಲ್ಲಿಡುವುದೆಂದು ಯಕ್ಷ ಪ್ರಶ್ನೆ ಹುಟ್ಟಿ ಶೌಚಾಲಯ ಬಳಸದೇ ಒಳಗಿನಿಂದ ಒತ್ತಿ ಬರುತ್ತಿದ್ದ ಹೇಸಿಗೆಯ ಭಾವವನ್ನು ನಿಯಂತ್ರಣಕ್ಕೆ ತಂದುಕೊಳ್ಳುತ್ತಾ ಹೊರ ಬಂದೆ. ಅಲ್ಲಿ ಕಂಡ ಮಲಭರಿತ ಶೌಚಾಲಯದ ಅಸಹನೀಯ ದೃಶ್ಯ ಮಸುಕಾಗಲು ಬಹಳ ದಿನಗಳು ಬೇಕಾದವು.
ನವೋದಯದಲ್ಲಿದ್ದಾಗ ಮಕ್ಕಳನ್ನು ಎಸ್ಕಾರ್ಟ್ ಮಾಡಿಕೊಂಡು ಮಧ್ಯಪ್ರದೇಶದಿಂದ ಬೆಳಗಿನ ನಾಲ್ಕು ಗಂಟೆಯ ಆಸುಪಾಸಿನಲ್ಲಿ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಬಂದಿಳಿದ ಸಂದರ್ಭ. ವೆಯಿಟಿಂಗ್ ರೂಮಿನಲ್ಲಿ ಇನ್ನೊಂದು ರೈಲಿಗಾಗಿ ಕಾಯುತ್ತಾ ಕುಳಿತ ಸಮಯದಲ್ಲಿ ಅಲ್ಲಿನ ಶೌಚಾಲಯದೊಳಗೆ ಹೋದಾಗ ಹಿಂದೆ ಶಿವಮೊಗ್ಗ ಬಸ್ಟ್ಯಾಂಡಿನ ಶೌಚಾಲಯದಲ್ಲಿ ಕಂಡ ದೃಶ್ಯವನ್ನು ಇನ್ನೊಮ್ಮೆ ನೋಡುವ ಭಾಗ್ಯ ಲಭಿಸಿತು😭 ಈ ಬಾರಿ ಮಲದ ಜೊತೆಗೆ ಸ್ಯಾನಿಟರಿ ಪ್ಯಾಡ್ ಗಳ ದರ್ಶನ.
ನನಗಾದ ಅನುಭವಗಳಲ್ಲಿ ಇವು ಒಂದೆರಡು ಸ್ಯಾಂಪಲ್ ಗಳಷ್ಟೇ! ಸಾರ್ವಜನಿಕ ಶೌಚಾಲಯಗಳು ಎಲ್ಲೆಡೆಯೂ ಆಗ ಅದೇ ಸ್ಥಿತಿಯಲ್ಲಿ ಕಂಡು ಬರುತ್ತಿದ್ದದ್ದು ಸರ್ವೇ ಸಾಮಾನ್ಯ.
ನವೋದಯದಲ್ಲಿ ಶಿಕ್ಷಕ ವೃತ್ತಿ ಪ್ರಾರಂಭಿಸಿದ ವರ್ಷ. ಹೈದರಾಬಾದಿನಲ್ಲಿ ಮೂರು ದಿನಗಳ ವೃತ್ತಿ ಸಂಬಂಧಿ ಕಾರ್ಯಾಗಾರ. ಹಿಂದಿರುಗಿ ಬರುವಾಗ ರಾತ್ರಿಯ ಪಯಣದಲ್ಲಿ ಬಸ್ಸಿನವರು ಯಾವುದೋ ಢಾಬಾದ ಮುಂದೆ ಬಸ್ಸು ನಿಲ್ಲಿಸಿದ್ದರು. ಅಲ್ಲಿ ಸುಮಾರು ದೂರ ಗದ್ದೆಯಲ್ಲಿ ನಡೆದುಕೊಂಡು ಹೋಗಿ ಅಲ್ಲಿದ್ದ ಟಾಯಿಲೆಟ್ ನ ಬಾಗಿಲು ಎಳೆದು ಮುಚ್ಚಿ ನಂತರದಲ್ಲಿ ಬಾಗಿಲು ತೆರೆಯಲು ಎಷ್ಟೇ ಪ್ರಯತ್ನಿಸಿದರೂ ತೆಗೆಯಲು ಆಗಲೇ ಇಲ್ಲ. ಎಷ್ಟು ಕೂಗಿದರೂ ಯಾರಿಗೂ ಕೇಳಲೇ ಇಲ್ಲ. ಒಂದೆಡೆ ಕಗ್ಗತ್ತಲು ಹಾಗೂ ಇನ್ನೊಂದೆಡೆ ಬಾಗಿಲು ತೆಗೆಯಲಾಗದ ಅಸಹಾಯಕತೆ. ನನ್ನಲ್ಲಿದ್ದ ಬಲವನ್ನೆಲ್ಲಾ ಉಪಯೋಗಿಸಿ ಬಾಗಿಲನ್ನು ಗುದ್ದಿ ಗುದ್ದಿ ಸ್ವಲ್ಪ ಮಟ್ಟಿಗೆ ತೆರೆದು ಅದರೆಡಕಿನಲ್ಲಿ(ಆಗ ನಾನು ತೆಳ್ಳಗಿದ್ದೆ😀) ಹೇಗೋ ಹೊರಬಂದು ಬಸ್ಸಿನ ಬಳಿ ಬಂದು ಅದರ ಬೆಳಕಿನಲ್ಲಿ ನೋಡಿದಾಗ ಆ ಬಾಗಿಲಿನ ಅಷ್ಟೂ ತುಕ್ಕು ಹಾಗೂ ಕೊಳಕು ನನ್ನ ಬಟ್ಟೆಗೆ ಅಂಟಿಕೊಂಡಿರುವುದು ಕಂಡಿತು. ಬೆಂಗಳೂರು ತಲುಪಿ, ನನ್ನ ಕಸಿನ್ ಮನೆಗೆ ಹೋಗಿ ಆ ಬಟ್ಟೆ ಕಳಚಿ ಸ್ನಾನ ಮಾಡುವ ತನಕ ನನಗೆ ಮುಳ್ಳಿನ ಮೇಲೆ ಕುಳಿತ ಅನುಭವ‌! ಇಂತಹ ಹತ್ತು ಹಲವಾರು "ಸ್ಮರಣೀಯ(?)" ಅನುಭವಗಳ ಬುತ್ತಿಯೇ ನನ್ನಲ್ಲಿದೆ.

ಅದೃಷ್ಟವಶಾತ್ ಈಗ ಪರಿಸ್ಥಿತಿ ಬದಲಾಗಿದೆ. ಎಲ್ಲೆಡೆಯೂ ಸುಲಭ ಶೌಚಾಲಯ ಲಭ್ಯವಿದೆ. ಗಲೀಜಾದ ಸ್ಥಿತಿಯಲ್ಲಿರುತ್ತಿದ್ದ ಶೌಚಾಲಯ ಬಳಕೆಯಿಂದ ನಮ್ಮನ್ನು ರಕ್ಷಿಸಿ ಸುಲಭ ಶೌಚಾಲಯದ ಪರಿಕಲ್ಪನೆ ಮಾಡಿ ಅದನ್ನು ಕಾರ್ಯರೂಪಕ್ಕೆ ತಂದ ಮಹಾಶಯರಿಗೆ ನಾವೆಲ್ಲಾ ಮನಃಪೂರ್ವಕವಾಗಿ ಕೃತಜ್ಞತೆಯನ್ನು ಸಲ್ಲಿಸಲೇಬೇಕು🙏


264.ನೆನಪುಗಳು - ಚಾಕೊಲೇಟ್ (17/1/2021)


ನಿನ್ನೆ ಮಧ್ಯಾಹ್ನ ಊಟವಾದ ಮೇಲೆ ಒಂದು ಕೋಕೊ ಚಾಕೊಲೆಟ್ ತಿಂದೆ. ನಾನು ಇಷ್ಟ ಪಡುವುದು ಹುಳಿ ಪೆಪ್ಪರ್ ಮಿಂಟನ್ನಾದರೂ ಅಪರೂಪಕ್ಕೊಮ್ಮೆ ಕೋಕೊ ಚಾಕೊಲೆಟ್ ತಿನ್ನುತ್ತೇನೆ. ಚಾಕೊಲೆಟ್ ಚೆನ್ನಾಗಿತ್ತು. ಅದಕ್ಕಿಂತ ಹೆಚ್ಚಾಗಿ ಅದರ ಕವರ್ ಫಳಫಳ ಹೊಳೆಯುತ್ತಿದ್ದು ಬಹಳ ಚೆನ್ನಾಗಿ ಕಂಡಿತು. ತಕ್ಷಣ ಮನಸ್ಸಿನಲ್ಲಿ ನಾವೆಲ್ಲಾ ಚಿಕ್ಕವಳಿದ್ದಾಗ ಚಾಕೊಲೆಟ್ ಕವರ್ ಒಟ್ಟು ಮಾಡಿ ಮಾಡುತ್ತಿದ್ದ ಅಲಂಕಾರಿಕ ವಸ್ತುಗಳ ನೆನಪಾಯಿತು.
ನಾನು ಚಿಕ್ಕವಳಿದ್ದಾಗ ತಿನ್ನುತ್ತಿದ್ದದ್ದು ಕೇಸರಿ/ಬಿಳಿ ಕವರ್ ನೊಳಗೆ ಬರುತ್ತಿದ್ದ ಕೇಸರಿ ಬಣ್ಣದ ಹುಳಿ ಚಾಕೊಲೆಟ್ ಹಾಗೂ ನ್ಯೂಟ್ರಿನ್ ಕಂಪೆನಿಯ ಹಸಿರು ಕವರ್ ನ ತುಪ್ಪದ ರುಚಿಯ ಚಾಕೊಲೆಟ್. ಆಗ ಇನ್ನೂ ಹಲವಾರು ರೀತಿಯ ಚಾಕೊಲೆಟ್ ಗಳು ಲಭ್ಯವಿದ್ದವು ಕೂಡಾ. ನಾವು ತಿಂದ ಚಾಕೊಲೆಟ್ ಕವರ್ ಗಳನ್ನು ಹಾಗೂ ಅಂಗಡಿಯ ಸುತ್ತ ಎಸೆದಿರುತ್ತಿದ್ಧ ಚಾಕೊಲೆಟ್ ಕವರ್ ಗಳನ್ನು ಒಟ್ಟು ಮಾಡಿ ಅವುಗಳ ಮಧ್ಯ ಭಾಗ ತಿರುಪಿ ಹೂವಿನ ಆಕಾರಕ್ಕೆ ತಂದು ಮಾಲೆ ಕಟ್ಟಿ ಮನೆಯ ಬಾಗಿಲಿನ ಚೌಕಟ್ಟಿಗೆ ಕಟ್ಟುತ್ತಿದ್ದೆವು ಹಾಗೂ ಶಾಲೆಯ ಅಲಂಕಾರಕ್ಕೆ ಟೀಚರ್ ಗೂ ಕೂಡಾ ಕೊಡುತ್ತಿದ್ದೆವು‌. ಅವುಗಳಿಂದ ಇನ್ನೂ ಹಲವಾರು ರೀತಿಯ ಅಲಂಕಾರಿಕ ವಸ್ತುಗಳನ್ನು ಮಾಡಿ ಖುಷಿ ಪಡುತ್ತಿದ್ದೆವು. ಯಾವುದನ್ನೂ ನಿರುಪಯೋಗಿಯಾಗಲು ಬಿಡುತ್ತಿರಲಿಲ್ಲ.
ಇನ್ನೊಂದು ಆಸಕ್ತಿಯ ವಿಷಯವೇನೆಂದರೆ ಬಾಜಲ್ ಬಾಟಲಿಯ ಮುಚ್ಚಳದ ಮಧ್ಯೆ ಎರಡು ತೂತು ಮಾಡಿ ಅದರೊಳಗೆ ದಪ್ಪನೆಯ ದಾರ ಹಾಕಿ ಕೈ ಬೆರಳೊಳಗೆ ಸಿಕ್ಕಿಸಿ ಯಾವುದೋ ರೀತಿಯಲ್ಲಿ ತಿರುಗಿಸಿ ಆಟ ಆಡುತ್ತಿದ್ದದ್ದು. ಬಾಜಲ್ ಬಾಟಲಿ ಎಂದು ತಕ್ಷಣ ನನಗೆ ನನ್ನ ಒಂದು ಟೆಲಿಫಿಲ್ಮ್ ನ ಶೂಟಿಂಗಿನ ನೆನಪಾಗುತ್ತದೆ. ಈಗ್ಗ್ಯೆ ಇಪ್ಪತ್ತು ವರ್ಷಗಳ ಹಿಂದೆ ನಾನೊಂದು ತುಳು ಟೆಲಿಫಿಲ್ಮ್ ನ ಶೂಟಿಂಗಿಗೆ ಹೋಗಿದ್ದಾಗ ಐದಾರು ವರ್ಷದ ನನ್ನ ಮಗ ವಿಜೇತ ಹಾಗೂ ನನ್ನಣ್ಣನ ಮಗ ಅನಿಶನನ್ನು ನನ್ನ ಬೆಂಗಾವಲಿಗೆ(😀) ಕರೆದುಕೊಂಡು ಹೋಗಿದ್ದೆ. ಪಡುಬಿದ್ರೆಯ ಹತ್ತಿರದ ಒಂದು ಹಳ್ಳಿಯದು. ಮೂರು ದಿನಗಳ ಶೂಟಿಂಗ್. ನಾನು ಶೂಟಿಂಗಿನಲ್ಲಿರುವಾಗ ಈ ಎರಡೂ ಮಕ್ಕಳು ಇಡೀ ಹಳ್ಳಿ ಸುತ್ತಿ ಬಾಜಲ್ ಬಾಟಲಿಯ ಮುಚ್ಚಳಗಳನ್ನು ಒಟ್ಟು ಮಾಡುತ್ತಿದ್ದರು ಹಾಗೂ ಗಜ್ ಅಂತ ಒಂದು ಪಾನೀಯವನ್ನು ಕುಡಿಯುತ್ತಿದ್ದರು. ಮೂರು ದಿನಗಳು ಅವರಿಬ್ಬರು ಇದ್ದ ಸ್ಥಿತಿ ಹಾಗೂ ಅವರು ಮಾಡಿದ ತುಂಟಾಟ ನೆನಪಿಸಿಕೊಂಡಾಗ ನನಗೀಗಲೂ ನಗು ಬರುತ್ತದೆ. ನಮ್ಮ ಬಾಲ್ಯದಲ್ಲಿ ಬಾಜಲ್ ಬಾಟಲಿಯ ಮುಚ್ಚಳಗಳು ಮಾತ್ರವಲ್ಲ ಚಾಕೊಲೆಟ್ ಕವರ್ ಗಳು, ಸಿಗರೇಟ್ ಪ್ಯಾಕೆಟ್ ನ ಕವರ್ ಗಳು, ಖಾಲಿ ಬೆಂಕಿಪೊಟ್ಟಣಗಳು ಎಲ್ಲಾ ನಮ್ಮ ಸೃಜನಶೀಲತೆಯ ಪ್ರಯೋಗಕ್ಕೆ ಒಳಪಟ್ಟು ನಲುಗಿ ಹೋಗಿವೆ😂
ಸಿಗರೇಟ್ ಪ್ಯಾಕೆಟನ್ನು ಅರ್ಧ ಇಂಚು ಅಳತೆಯಲ್ಲಿ ಕತ್ತರಿಸಿ ಒಂದರೊಳಗೊಂದು ಹೊಸೆದು ಫೋಟೊ ಫ್ರೇಮ್, ಮಾಲೆ, ಪರ್ಸ್ ಗಳನ್ನು ಮಾಡುತ್ತಿದ್ದೆವು. ಬೆಂಕಿ ಪೊಟ್ಟಣದಲ್ಲಿ ಮನೆ, ಮೇಜು, ರೈಲು ಬೋಗಿ ... ಹೀಗೆ ಹಲವಾರು ವಸ್ತುಗಳನ್ನು ಮಾಡುತ್ತಿದ್ದೆವು.

ಇಂತಹ ಅನುಪಯುಕ್ತ ವಸ್ತುಗಳಲ್ಲಿ ಹೊಸ ಸೃಷ್ಟಿ ಮಾಡುವ ಅನುಭವವೇ ಒಂದು ಆನಂದದಾಯಕ ಪ್ರಕ್ರಿಯೆ. ಅಂತಹ ಆನಂದವೇ ಅವುಗಳನ್ನು ಇನ್ನೂ ನಮ್ಮ ನೆನಪಿನಾಳದಲ್ಲಿ ಜೀವಂತವಾಗಿಟ್ಟಿರುತ್ಣವೆ ಎಂದರೆ ಸುಳ್ಳಲ್ಲ ತಾನೆ?


263 . ನೆನಪುಗಳು - ಹಲ್ಲುಜ್ಜುವುದು (16/1/2021)

ಹಲ್ಲು ತಿಕ್ಕುವುದು ಪ್ರತಿಯೊಬ್ಬರೂ ದಿನಂಪ್ರತಿ ಮಾಡುವ ಕೆಲಸ. ಹಲ್ಲು ಸೆಟ್ ಬಳಸುವವರು ಕೂಡಾ ಮಾಡುವ ಕೆಲಸವಿದು. ಹೀಗಾಗಿ ಪ್ರತಿಯೊಬ್ಬರ ಮನೆಯಲ್ಲಿ ಟೂತ್ ಬ್ರಷ್ ಹಾಗೂ ಟೂತ್ ಪೇಸ್ಟ್ ಇದ್ದೇ ಇರುತ್ತದೆ ಎನ್ನುವುದು ನನ್ನ ಅಭಿಪ್ರಾಯ!? ಅವೆರಡೂ ಇಲ್ಲದೆ ದಂತಮಾರ್ಜನ ಮಾಡುತ್ತಿದ್ದ ಕಾಲವೂ ಹಿಂದೆ ಇತ್ತು.
ಹಲ್ಲು ತಿಕ್ಕಲು ಇಷ್ಟೇ ಸಮಯ ತೆಗೆದುಕೊಳ್ಳಬೇಕೆಂದು ದಂತವೈದ್ಯ ವಿಜ್ಞಾನ ಹೇಳುವುದಾದರೂ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮ್ಮದೇ ಆದ ಸಮಯ ತೆಗೆದುಕೊಂಡು ಹಲ್ಲುಜ್ಜುತ್ತಾರೆ. ಕೆಲವರಿಗೆ ಹಲ್ಲುಜ್ಜಲು ಒಂದು ನಿಮಿಷ ಸಾಕಾದರೆ ಇನ್ನು ಕೆಲವರಿಗೆ ಅರ್ಧ ಘಂಟೆ ಬೇಕು🤔 ಕೆಲವರು ಹಲ್ಲುಜ್ಜುತ್ತಾ ಜೊತೆ ಜೊತೆಗೆ ಹಲವಾರು ಕೆಲಸಗಳನ್ನು ಮುಗಿಸುತ್ತಾರೆ. ಬಾಯಿಯಲ್ಲೇ ಬ್ರಶ್ ಇಟ್ಟುಕೊಂಡು ಫೋನಿನಲ್ಲಿ ಕಥೆ ಹೊಡೆಯುತ್ತಾರೆ ಕೂಡಾ. ಕೆಲವರು ಬಹಳ ನಾಜೂಕಾಗಿ ಆಗಿ ಹಲ್ಲುಜ್ಜುತ್ತಾರೆ. ಇನ್ನು ಕೆಲವರು ಹಲ್ಲುಜ್ಜುವ ರಭಸಕ್ಕೆ ಅವರ ಬ್ರಶ್ ಬಚ್ಚಲು ಉಜ್ಜುವ ಬ್ರಶ್ ನಂತೆ ಆಗಿರುತ್ತದೆ 😀
ಹಿಂದಿನ ಕಾಲದವರು ಹಲ್ಲುಜ್ಜಲು ಮಾವಿನ ಕಡ್ಡಿ, ನೇರಲ ಕಡ್ಡಿ... ಹೀಗೆ ಯಾವುದಾದರೂ ಮರದ ಕಡ್ಡಿಯನ್ನು ಬಳಸುತ್ತಿದ್ದರು. ಇನ್ನು ಕೆಲವರು ಇದ್ದಲಿನಲ್ಲಿ ಹಲ್ಲುಜ್ಜುತ್ತಿದ್ದರು. ಇನ್ನು ಕೆಲವರು ಉಮಿಕರಿಯಲ್ಲಿ ಹಲ್ಲುಜ್ಜುತ್ತಿದ್ದರು. ನನ್ನ ಅಜ್ಜಯ್ಯ ಉಮಿಕರಿಯಲ್ಲಿ ಹಲ್ಲುಜ್ಜುತ್ತಿದ್ದದ್ದನ್ನು ನಾನು ನೋಡಿದ್ದೇನೆ. ಆದರೆ ನಾವೆಲ್ಲ ಟೂತ್ ಬ್ರಶ್ ಹಾಗೂ ಟೂತ್ ಪೇಸ್ಟ್ ನ ಕಾಲದವರು. ಪ್ಲಾಸ್ಟಿಕ್ ನ ಅಗಲವಾದ ಕಡ್ಡಿಯ ಮೇಲೆ ಒಂದು ತುದಿಯಲ್ಲಿ ಪ್ಲಾಸ್ಟಿಕ್ ನದ್ದೇ ಬ್ರಿಸಲ್ಸ್ ನ ಮೇಲೆ ಪೇಸ್ಟನ್ನು ಸವರಿ ಗಸಗಸನೆ ಹಲ್ಲುಜ್ಜುವಾಗ ಬಾಯಿ ತುಂಬುವ ಪೇಸ್ಟಿನ ನೊರೆಯನ್ನು ಉಗಿಯುತ್ತಾ ನೀರಿನಲ್ಲಿ ಬಾಯಿ ಮುಕ್ಕಳಿಸಿದರೆ ನಮ್ಮ ಬಾಯಿ ಶುಚಿರ್ಭೂತವಾದಂತೆ! ಇಷ್ಟು ಕೆಲಸಕ್ಕೆ ನಮಗೆ ಬೇರೆ ಬೇರೆ ಕಂಪೆನಿಯ ವಿವಿಧ ಬಗೆಯ ಬ್ರಶ್ ಹಾಗೂ ಪೇಸ್ಟ್ ಗಳನ್ನು ಖರೀದಿಸಿ ಬಳಸುವ ಅಪಾರ ಅವಕಾಶ ಹಾಗೂ ಆಯ್ಕೆ ಇದೆ. ಇದು ವಿಜ್ಞಾನ ನಮಗೆ ನೀಡಿದ ಕೊಡುಗೆ ಎಂದು ಭಾವಿಸೋಣವೆ?

ಬೆಳಗಿನ ದೇಹಶುದ್ಧಿಯ ಕೆಲಸಗಳಲ್ಲಿ ಹಲ್ಲುಜ್ಜುವುದು ಬಹಳ ಮುಖ್ಯ ಕೆಲಸ. ನಮ್ಮಲ್ಲಿ ಹೊರದೇಶದವರು ಬಂದು ಇರುತ್ತಿದ್ದಾಗ ನಾನು ಅವರಲ್ಲಿ ಗಮನಿಸಿದ ಮುಖ್ಯ ಅಂಶವೆಂದರೆ ಅವರು ಬೆಳಗಿನ ಉಪಹಾರವೆಲ್ಲ ತಿಂದಾದ ಮೇಲೆ ಹಲ್ಲುಜ್ಜುತ್ತಿದ್ದದ್ದು. ಅವರು ರಾತ್ರಿ ಮಲಗುವಾಗ ಹಲ್ಲುಜ್ಜಿ ಮಲಗುತ್ತಿದ್ದರು. ನಂತರ ಬೆಳಿಗ್ಗೆ ಎದ್ದು ಬಾಯಿ ಮುಕ್ಕಳಿಸಿ ಉಪಾಹಾರ ಸೇವಿಸುತ್ತಿದ್ದರು. ಅವರ ಪ್ರಕಾರ ತಿಂಡಿ ತಿಂದು ಹಲ್ಲು ಉಜ್ಜಿದರೆ ಇನ್ನೊಮ್ಮೆ ಏನಾದರೂ ತಿನ್ನುವವರೆಗೆ ಬಾಯಿ ಸ್ವಚ್ಛವಾಗಿರುತ್ತದೆಂದು. ಅವರ ವಾದ ಒಂದು ರೀತಿಯಲ್ಲಿ ಸರಿಯೇ! ಆದರೆ ಹಲ್ಲುಜ್ಜದೇ ತಿಂಡಿ ತಿನ್ನುವುದನ್ನು ನನಗೆ ಕಲ್ಪಿಸಿಕೊಳ್ಳಲೂ ಆಗುವುದಿಲ್ಲ. ಎಲ್ಲಾ ಕ್ರಿಯೆಗಳು ಅವರವರ ಭಾವಕ್ಕೆ ತಕ್ಕಂತೆ ಇರುತ್ತದೆ ತಾನೇ?



262. ನೆನಪುಗಳು - ವಿಮಾನ. (15/1/2021)

ನಿನ್ನೆ ಮಧ್ಯಾಹ್ನ ಆಫೀಸಿನಲ್ಲಿ ಕೂತಿದ್ದಾಗ ದೂರದ ನಭದಲ್ಲೆಲ್ಲೋ ವಿಮಾನ ಹಾರಾಡುವ ಶಬ್ದ ಕೇಳಿ ಕಿವಿ ಚುರುಕಾಯಿತು. ಒಂದರೆಘಳಿಗೆ ಹೊರಗೆ ಹೋಗಿ ಆಕಾಶದಲ್ಲಿ ಅದು ಪುಟ್ಟಕ್ಕೆ ಹಾರುವುದನ್ನು ನೋಡುವ ಆಸೆಯಾಯಿತು. ಆದರೆ ಸಣ್ಣ ಉದಾಸೀನ ಹಾಗೂ ಕೆಲಸದ ಒತ್ತಡ ಎನ್ನುವುದು ನನ್ನನ್ನು ಹೊರಹೋಗುವುದರಿಂದ ತಡೆಯಿತು. ನಂತರದಲ್ಲಿ ವಿಮಾನದ ಶಬ್ದ ಇಲ್ಲದಾಯಿತು. ಆದರೆ ಮನದಲ್ಲಿ ವಿಮಾನ ಹಾರಾಡುವುದನ್ನು ನಾನು ನೋಡಲು ಹೋಗಲಿಲ್ಲವಲ್ಲ ಎನ್ನುವ ಸಣ್ಣ ಖೇದ ಹಾಗೆಯೇ ಉಳಿಯಿತು🤔
ನಾನು ಹಲವಾರು ಬಾರಿ ವಿಮಾನದಲ್ಲಿ ಪಯಣಿಸಿದ್ದರೂ ನನಗೆ ವಿಮಾನದಲ್ಲಿನ ಪಯಣಕ್ಕಿಂತ ಆಕಾಶದಲ್ಲಿ ಹಾರುವ ವಿಮಾನವನ್ನು ಕೆಳಗಿನಿಂದ ನೋಡುವುದೇ ಖುಷಿ. ನಾನು ವಿಮಾನವನ್ನು ವಿಮಾನ ನಿಲ್ದಾಣದಲ್ಲಿ ಹತ್ತಿರದಿಂದ ನೋಡಿದ್ದು ಎಪ್ಪತ್ತರ ದಶಕದಲ್ಲಿ ನನ್ನ ಚಿಕ್ಕಪ್ಪನನ್ನು ಆಫ್ರಿಕಾದ ವಿಮಾನ ಹತ್ತಿಸ ಹೊರಟಾಗ. ಆಕಾಶದಲ್ಲಿ ಪುಟ್ಟದಾಗಿ ಕಾಣುತ್ತಿದ್ದ ವಿಮಾನದ ಬೃಹತ್ ರೂಪ ನೋಡಿ ಸುಮಾರು ಐದಾರು ವಯಸ್ಸಿನವಳಾಗಿದ್ದ ನಾನು ಆಶ್ಚರ್ಯಚಕಿತಳಾಗಿದ್ದೆ. ಪ್ರತಿ ಬಾರಿ ಚಿಕ್ಕಪ್ಪನನ್ನು ಎದುರುಗೊಳ್ಳುವಾಗ, ಬೀಳ್ಕೊಡುವಾಗ ವಿಮಾನ ನಿಲ್ದಾಣಕ್ಕೆ ಹೋಗುವ ಅವಕಾಶ ನನಗಿತ್ತು. ವಿಮಾನದ ಒಳಗೆ ಹೇಗಿರುತ್ತದೆ, ವಿಮಾನ ಹೇಗೆ ಹಾರುತ್ತದೆ, ಮೇಲೆ ಹೋದಾಗ ಅದು ಹೇಗೆ ಚಿಕ್ಕದಾಗುತ್ತದೆ, ಪರದೇಶ ಎನ್ನುವುದು ಆಕಾಶದ ಮೇಲೆ ಹೇಗಿರುತ್ತದೆ...ಇಂತಹ ಯಕ್ಷ ಪ್ರಶ್ನೆಗಳು ನನ್ನನ್ನಾಗ ಕಾಡುತ್ತಿದ್ದವು. ಆಕಾಶದಲ್ಲಿ ಎಷ್ಟೇ ಹೊತ್ತಿಗೆ ವಿಮಾನದ ಹಾರಾಟದ ಶಬ್ದ ಕೇಳಿದರೂ ನಾನು ಮನೆಯೊಳಗಿಂದ ರಾಕೆಟ್ ನಂತೆ ಹೊರಬಂದು ಆಕಾಶ ನೋಡುತ್ತಿದ್ದೆ. ಸಣ್ಣವಳಿದ್ದಾಗ ಇದ್ದ ಆಕಾಶದಲ್ಲಿ ವಿಮಾನ ನೋಡುವ ಅದೇ ಸೆಳೆತ ಈಗಲೂ ನನ್ನಲ್ಲಿದೆ. ಕಿರಿಗಣ್ಣು ಮಾಡಿಕೊಂಡು ಆಗಸದಲ್ಲಿ ಹಾರುವ ಪುಟಾಣಿ ವಿಮಾನವನ್ನು ಹುಡುಕುವುದು ಒಂದು ಗಮ್ಮತ್ತಿನ ಅನುಭವ! ರಾತ್ರಿ ಆಗಾಗ ಮಾಡುವ ನಕ್ಷತ್ರ ವೀಕ್ಷಣೆಯ ಸಮಯದಲ್ಲಿ ಕೆಲವೊಮ್ಮೆ ಪುಕುಪುಕು ದೀಪ ಹತ್ತಿ ಆರುತ್ತಾ ಹೋಗುವ ವಿಮಾನದ ವೀಕ್ಷಣೆಯೂ ಆಗುತ್ತದೆ. ಕೆಲವೊಮ್ಮೆ ಹಗಲಲ್ಲಿ ಜೆಟ್ ವಿಮಾನ ಹೊಗೆ ಉಗುಳುತ್ತಾ ಹೋಗುವುದನ್ನು ನೋಡುವುದು ಒಂದು ಚೆಂದದ ಅನುಭವವೇ!
ಹೆಲಿಕಾಪ್ಟರ್ ಬಹಳ ಕೆಳಗಿನಿಂದ ಹಾರಿ ಹೋಗುವಾಗ ಅದರಲ್ಲಿರುವವರಿಗೆ ಕಾಣುತ್ತದೋ ಬಿಡುತ್ತದೋ ನಾವಂತೂ ಕೆಳಗಿನಿಂದ ಹೆಲಿಕಾಪ್ಟರ್ ನಲ್ಲಿರುವವರಿಗೆ ಕೆಲವೊಮ್ಮೆ"ಟಾಟಾ" ಮಾಡುವುದಿದೆ. ಹುಡುಗಾಟಿಕೆ ಎಂದೆನಿಸಿದರೂ ಹಾಗೆಲ್ಲಾ ಮಾಡುವಾಗ ಪುನಃ ಮಗುವಿನಂತಾಗುವ ಅನುಭವ. ಇಂತಹ ಸಣ್ಣ ಸಣ್ಣ ಖುಷಿಗಳೇ ನಮ್ಮೊಳಗಿನ ಮಗುತನವನ್ನು ಜೀವಂತವಾಗಿಡುತ್ತವೇನೊ?

ಈಗಲೂ ನನ್ನೊಳಗೆ "ಝಗ್" ಗುಡಿಸುವ ಶಕ್ತಿ ಇರುವುದು ಆಕಾಶದಲ್ಲಿ ಹಾರಾಡುವ ಆ ಪುಟ್ಟ ವಿಮಾನಕ್ಕೆ ಮಾತ್ರ🤔


261. ನೆನಪುಗಳು - ತುಪ್ಪ (14/1/2021 )

ಮೊಸರು ಕಡೆದಾಗ ಬೆಣ್ಣೆ ಸಿಗುತ್ತದೆ. ಬೆಣ್ಣೆ ಕಾಯಿಸಿದಾಗ ತುಪ್ಪ ಸಿಗುತ್ತದೆ. ತುಪ್ಪದ ಬಣ್ಣ ಮತ್ತು ರುಚಿ ಬೆಣ್ಣೆಯ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಆಕಳ ತುಪ್ಪವನ್ನು ಪವಿತ್ರವಾದದ್ದೆಂದು ಪರಿಗಣಿಸಿ ದೇವತಾ ಕಾರ್ಯಗಳಲ್ಲಿ ಬಳಸುತ್ತಾರೆ. ಇದು ತುಪ್ಪದ ಪ್ರವರ!
ಬೆಣ್ಣೆ ಕಾಯಿಸುವಾಗ ಒಂದು ಹದವಿರುತ್ತದೆ. ಸಣ್ಣ ಬೆಂಕಿಯಲ್ಲಿ ಬಾಣಲೆಯನ್ನು ಇಟ್ಟು ಅದರ ಶಾಖಕ್ಕೆ ಕರಗುವ ಬೆಣ್ಣೆಯನ್ನು ಒಂದು ಸೌಟಿನಿಂದ ಕಲಕುತ್ತಾ ಇರಬೇಕು. ಅದು ಕಾದು ಉಕ್ಕಿ ಬಂದು ಅದರ ಘನರೂಪ ಬಾಣಲೆಯ ಬುಡಕ್ಕೆ ಹೋಗಿ ನೊರೆ ಹಾಗೂ ಕುದಿಯುವ ಸದ್ದು ನಿಂತ ಮೇಲೆ ಬೆಂಕಿಯನ್ನು ಆರಿಸಬೇಕು. ತದನಂತರದಲ್ಲಿ ಸ್ವಲ್ಪ ತಣಿದ ತುಪ್ಪವನ್ನು ಬಾಟಲಿಗೆ ಸೋಸಿದಾಗ ಆ ಘನರೂಪ ಸೋಸುವ ಹುಟ್ಟಿನಲ್ಲಿ ಉಳಿದು ದ್ರವರೂಪದ ತುಪ್ಪ ಬಾಟಲಿ ಸೇರಿ ತಣ್ಣಗಾದ ಮೇಲೆ ಗಟ್ಟಿಯಾಗಿ ಸಣ್ಣಗೆ ರವೆಯಾಗಿ ಮಾರ್ಪಾಟಾದರೆ ಅದು ಉತ್ತಮ ಗುಣಮಟ್ಟದ ತುಪ್ಪ ಎಂದರ್ಥ. ನಾನು ಚಿಕ್ಕವಳಿದ್ದಾಗ ತುಪ್ಪ ಕಾಯಿಸಿದ ಬಾಣಲೆಗೆ ಅನ್ನ ಹಾಕಿ ಸ್ವಲ್ಪ ಉಪ್ಪು ಬೆರೆಸಿ ಕಲೆಸಿ ತಿನ್ನುತ್ತಿದ್ದೆ. ನನಗದು ಬಹಳ ರುಚಿಕರವಾಗಿ ಇಷ್ಟವಾಗುತ್ತಿತ್ತು. ತುಪ್ಪ ಕಾಯಿಸುವ ಸಮಯದಲ್ಲಿ ನಾನು ಮನೆಯಲ್ಲಿ ಇಲ್ಲದಿದ್ದರೂ ನನ್ನಮ್ಮ ತುಪ್ಪ ಕಾಯಿಸಿದ ಬಾಣಲೆಯನ್ನು ನನಗಾಗಿ ಇಟ್ಟಿರುತ್ತಿದ್ದಳು.
ಭಕ್ಷ್ಯಗಳನ್ನು ಹಾಗೂ ಸಿಹಿತಿಂಡಿಗಳನ್ನು ತಯಾರಿಸುವಾಗ ತುಪ್ಪವನ್ನು ಬಳಸುತ್ತಾರೆ. ಹೋಳಿಗೆ ತಿನ್ನುವಾಗ ಅದರ ಮೇಲೆ ತುಪ್ಪ ಹಾಕಿಕೊಂಡು ತಿನ್ನುತ್ತಾರೆ. ಕೆಲವು ರೀತಿಯ ಮೇಲೋಗರಗಳನ್ನು ಅನ್ನಕ್ಕೆ ಕಲೆಸಿ ತಿನ್ನುವಾಗ ಅದರೊಂದಿಗೆ ತುಪ್ಪ ಬೆರೆಸಿದರೆ ಅದಕ್ಕೆ ವಿಶೇಷ ರುಚಿ ದೊರಕುತ್ತದೆ. ಸಣ್ಣಕ್ಕಿ ಕೇಸರಿಬಾತಿನಲ್ಲಂತೂ ತುಪ್ಪ ಒಸರುತ್ತಿರುತ್ತದೆ. ಕೂಷ್ಮಾಂಡ ಹಲ್ವವನ್ನು ಹದವಾಗಿ ತುಪ್ಪ ಸೇರಿಸಿ ಮಾಡಿದರೆ ಅದಕ್ಕೆ ಅದ್ಭುತ ರುಚಿ ಸಿಗುತ್ತದೆ. ಸತ್ಯನಾರಾಯಣ ಪೂಜೆಯ ಸಪಾದಕ್ಕೆ ಸಮ ಪ್ರಮಾಣದಲ್ಲಿ ತುಪ್ಪ ಬೆರೆಸಿ ಮಾಡಿದರೆ ಅದರ ರುಚಿಗೆ ಬೇರೆ ಸಾಟಿ ಇರುವುದಿಲ್ಲ. ದೋಸೆ ಮಾಡುವಾಗ ತುಪ್ಪ ಹಾಕಿ ಕಾಯಿಸಿದರೆ ಅದಕ್ಕೊಂದು ವಿಶಿಷ್ಟ ಘಮ ಸಿಗುತ್ತದೆ. ಆಯುರ್ವೇದ ಔಷಧಿಗಳ ತಯಾರಿಕೆಯಲ್ಲೂ ತುಪ್ಪವನ್ನು ಬಳಸಲಾಗುತ್ತದೆ. ಮಲಬದ್ಧತೆಯ ನಿವಾರಣೆಗೆ ತುಪ್ಪ ಉಪಯೋಗಕಾರಿ.
ತುಪ್ಪದಲ್ಲಿ ಕೊಬ್ಬಿನಂಶವಿದ್ದರೂ ಅದು ನಮಗೆ ಪೂರಕವಾದ ಕೊಲೆಸ್ಟ್ರಾಲ್ ಒದಗಿಸುವ ವಸ್ತುವಾಗಿದೆ. ತುಪ್ಪವು ರಕ್ತದ ಓಡಾಟವನ್ನು ಸರಾಗಗೊಳಿಸುತ್ತದೆ. ಕೆಲವರು ತುಪ್ಪದಲ್ಲೇ ದೇವರ ದೀಪ ಹಚ್ಚುತ್ತಾರೆ. ಹಿಂದೆ ಯಜ್ಞ ಯಾಗಾದಿಗಳಲ್ಲಿ ತುಪ್ಪವನ್ನು ಬಳಸುತ್ತಿದ್ದ ಕಾರಣ ಹುಡುಕ ಹೊರಟವರು ಕಂಡುಕೊಂಡ ಸತ್ಯವೇನೆಂದರೆ ಹವನದಲ್ಲಿ ನಡೆಯುವ ರಾಸಾಯನಿಕ ಪ್ರಕ್ರಿಯೆಗಳಿಂದ ಅಧಿಕ ಪ್ರಮಾಣದಲ್ಲಿ ಆಮ್ಲಜನಕದ ಉತ್ಪತ್ತಿಯಾಗುವುದೆಂದು.

ತುಪ್ಪವನ್ನು ಆದಷ್ಟು ಮನೆಯಲ್ಲಿ ತಯಾರಿಸುವುದೊಳ್ಳೆಯದು. ಹಾಲಿನಿಂದ ಮೊಸರು - ಮೊಸರು ಕಡೆದು ಬೆಣ್ಣೆ - ಬೆಣ್ಣೆ ಕಾಯಿಸಿ ತುಪ್ಪ ಮಾಡಿದರೆ ನಾವೇ ತಯಾರಿಸಿದ ಶುದ್ಧ ತುಪ್ಪ ಲಭಿಸುತ್ತದೆ. ಯತ್ನಿಸಿ - ತಯಾರಿಸಿ!


260. ನೆನಪುಗಳು - ಬೆಣ್ಣೆ  (13/1/2021)

"ಬೆಣ್ಣೆ ಕದ್ದನಮ್ಮಾ ಕೃಷ್ಣ, ಬೆಣ್ಣೆ ಕದ್ದನಮ್ಮಾ" ಎಂಬ ಹಾಡು ಜನಪ್ರಿಯ. ಕೃಷ್ಣ ಜನ್ಮಾಷ್ಟಮಿಯಂದು ಮಕ್ಕಳ ನೃತ್ಯಕ್ಕೆ ಅದನ್ನು ಬಳಸಿಯೇ ಬಳಸುತ್ತಾರೆ. ಅಲ್ಲಿ ಕೃಷ್ಣನಷ್ಟೇ ಬೆಣ್ಣೆ ಕೂಡಾ ಮುಖ್ಯವಾಗುತ್ತದೆ. ಅನಾದಿ ಕಾಲದಿಂದಲೂ ದೇವಾದಿದೇವತೆಗಳ ಪ್ರಿಯ ವಸ್ತು ಬೆಣ್ಣೆ ಎನ್ನುವುದು ವಿದಿತವಾಗುತ್ತದೆ.
ಬೆಣ್ಣೆಯನ್ನು ಇಷ್ಟ ಪಡದವರು ಬಹಳ ಕಡಿಮೆ ಜನ ಇರಬಹುದು. ಅದರಲ್ಲಿ ನನ್ನ ಮಗಳೂ ಒಬ್ಬಳು🙁 ನನ್ನ ಗಂಡ, ನನ್ನ ಮಗ ಹಾಗೂ ನಾನು ಬೆಣ್ಣೆ ಪ್ರಿಯರು! ನಾನು ಮದುವೆಯಾಗಿ ನನ್ನ ಗಂಡನ ಮನೆಗೆ ಬಂದ ಸಮಯದಲ್ಲಿ ಪ್ರತಿದಿನ ಮಜ್ಜಿಗೆ ಕಡೆದು ದೊಡ್ಡ ಸೌತೆಕಾಯಿ ಗಾತ್ರದ ಬೆಣ್ಣೆಯನ್ನು ಮಾಡುತ್ತಿದ್ದರು. ಅದರಲ್ಲಿ ಮುಕ್ಕಾಲು ಪಾಲು ಬೆಣ್ಣೆ ಎಲ್ಲರೂ ತಿಂಡಿ ತಿನ್ನುವ ಹೊಡೆತದಲ್ಲಿ ಧ್ವಂಸವಾಗಿ ಬಿಡುತ್ತಿತ್ತು☺️ ಒಳ್ಳೆಯ ಎಮ್ಮೆ ಹಾಲಿನ ಬಿಳಿ ಬಣ್ಣದ ಬೆಣ್ಣೆ ಅದಾಗಿತ್ತು. ಏನು ರುಚಿಯಂತೀರಾ ಅದಕ್ಕೆ?! ತಿಂದಷ್ಟು ಬೇಕು ಎಂದನಿಸುವ ಹಾಗೆ ಮಾಡುವ ಬೆಣ್ಣೆ ಅದಾಗಿತ್ತು. ದಿನಂಪ್ರತಿ ಕಡೆದ ತಾಜಾ ಬೆಣ್ಣೆ ರುಚಿಯಾಗಿರದೆ ಮತ್ತೇನು?
ನನ್ನಪ್ಪನ ಮನೆಯಲ್ಲೂ ಬೆಣ್ಣೆ ಬಳಕೆ ಬಹಳಷ್ಟು ಇತ್ತು. ಕೊಂಡು ಕೊಂಡ ಹಾಲಾದ ಕಾರಣ ಮನೆಯ ಹಾಲಷ್ಟು ಬೆಣ್ಣೆ ಬರುತ್ತಿರಲಿಲ್ಲ. ಹೀಗಾಗಿ ಧಾರಾಳವಾಗಿ ಬೆಣ್ಣೆಯ ಬಳಕೆ ಇರಲಿಲ್ಲ. ಅದಲ್ಲದೆ ನನ್ನಂತವರಿಗೆ ಬೆಣ್ಣೆ ಎಷ್ಟು ತಿನ್ನುವುದು ಎಂದು ಗೊತ್ತಾಗದೆ ಇರುವಾಗ ಬೇಕೆಂಬಷ್ಟು ಬೆಣ್ಣೆ ಒದಗಿಸುವುದು ಕಷ್ಟಸಾಧ್ಯವಲ್ಲವೆ?
ಪಾಲಕರ ಮನೆಗಳ ಭೇಟಿಯ ಸಂದರ್ಭದಲ್ಲಿ ನಾನೊಮ್ಮೆ ಒಬ್ಬರ ಮನೆಗೆ ಹೋಗಿದ್ದೆ. ಕೂಡು ಕುಟುಂಬದ ಒಳ್ಳೆಯ ಕರಾವಿದ್ದ ಮನೆಯದು. ಮಾತುಕತೆಯೆಲ್ಲಾ ಮುಗಿದು ನಾವು ಅಲ್ಲಿಂದ ಹೊರಟಾಗ ಮನೆಯಾಕೆ ಎಮ್ಮೆ ಹಾಲಿನ ದೊಡ್ಡ ಗಾತ್ರದ ಬೆಣ್ಣೆ ಮುದ್ದೆಯನ್ನು ಕೈ ಮೇಲಿಟ್ಟರು. ನಾನದನ್ನು ತೆಗೆದುಕೊಂಡು ಹೋಗಲು ಒಪ್ಪುವ ತನಕ ಅವರು ಬಿಡಲಿಲ್ಲ. ಆ ತಾಜಾ ಬೆಣ್ಣೆ ಮುದ್ದೆಯ ಗಾತ್ರ, ಬಣ್ಣ ಇನ್ನೂ ನನ್ನ ಕಣ್ಣ ಮುಂದಿದೆ. ಆದರೆ ನನ್ನ ವಯಸ್ಸು ಆ ಬೆಣ್ಣೆಯನ್ನು ತಿಂದು ಜೀರ್ಣಿಸಿಕೊಳ್ಳುವ ತಾಕತ್ತನ್ನು ಅದಾಗಲೇ ನನ್ನಿಂದ ಕಸಿದಿತ್ತು. ಹೀಗಾಗಿ ಅದನ್ನು ನೋಡಿ ತೃಪ್ತಿ ಪಟ್ಟದ್ದಷ್ಟೇ ಆಯಿತು ಬಿಡಿ🙁
ಬೆಣ್ಣೆ ಮುರುಕು, ಬೆಣ್ಣೆ ಬಿಸ್ಕತ್, ಬೆಣ್ಣೆ ಮಸಾಲೆ ದೋಸೆ.... ಹೀಗೆ ಬೆಣ್ಣೆ ಉಪಯೋಗಿಸಿ ಮಾಡುವ ತಿಂಡಿಗಳು ಹಲವಾರು. ಅವುಗಳ ರುಚಿಯಂತೂ ಅದ್ವಿತೀಯ. ಇಡ್ಲಿ-ದೋಸೆಯೊಡನೆ ಬೆಣ್ಣೆ-ಬೆಲ್ಲ ಸೇರಿಸಿ ತಿಂದರೆ ಅದ್ಭುತವಾಗಿರುತ್ತದೆ. ಬಾಳೆಹಣ್ಣು, ಹೀರೆಕಾಯಿ ದೋಸೆಗಳಿಗೆ ಬೆಣ್ಣೆ ಒಳ್ಳೆಯ ಕಾಂಬಿನೇಷನ್. ಪತ್ರೊಡೆಯನ್ನು ಬೆಣ್ಣೆ ಇಲ್ಲದೆ ತಿನ್ನುವುದನ್ನು ಕಲ್ಪಿಸಿಕೊಳ್ಳಲು ಆಗುವುದಿಲ್ಲ. ತಾಳಿಪಟ್ಟಿಗೂ ಬೆಣ್ಣೆ-ಬೆಲ್ಲ ಒಳ್ಳೆಯ ಕಾಂಬಿನೇಷನ್. ನನ್ನಮ್ಮ ಮಾಡುವ ಕೆಂಪು ಹರಿವೆ ಸೊಪ್ಪಿನ ಸಾಂಬಾರ್ ಜೊತೆ ಬಿಸಿಬಿಸಿ ಅನ್ನಕ್ಕೆ ಬೆಣ್ಣೆ ಬೆರೆಸಿ ತಿಂದರೆ ತುಂಬಾ ರಸವತ್ತಾಗಿರುತ್ತದೆ. ತಾಜಾ ಬೆಣ್ಣೆಯನ್ನು ಬರಿ ಬಾಯಿಗೆ ತಿಂದು ಸವಿಯಬಹುದು😋

ಬೆಣ್ಣೆ ತಿಂದವರು, ತಿನ್ನುವವರು ಯಾವತ್ತೂ ಬೆಣ್ಣೆಯ ರುಚಿಯನ್ನು ಮರೆಯಲಾರರು. ಬೆಣ್ಣೆಯ ಮೃದುತ್ವ, ಅದರ ತಿಳಿ ಹಳದಿ/ಬಿಳಿ ಬಣ್ಣ, ಅದರ ನವಿರಾದ ಪರಿಮಳ, ಅದರ ಸವಿ ರುಚಿ ಮನಸ್ಸಿನೊಳಗಿಂದ ಹಾಗೂ ನಾಲಿಗೆಯ ಮೇಲಿಂದ ಎಂದಿಗೂ ದೂರಾಗಲಾರದು ಎಂದು ಬೆಣ್ಣೆ ಸಂಘದ ಸದಸ್ಯೆಯಾದ ನನ್ನ ಅನಿಸಿಕೆ 😌


259. ಪರಿಸರ - ಜಿರಳೆ (12/1/2021)

ಜಿರಳೆ ಎಂದ ತಕ್ಷಣ ಹೆದರಿ ಕೂಗಿ ನರ್ತಿಸುವ ಬಹಳಷ್ಟು ಜನರಿದ್ದಾರೆ. ಅವರು ಅದ್ಯಾಕೆ ಜಿರಳೆಗೆ ಅಷ್ಟೆಲ್ಲಾ ಹೆದರುತ್ತಾರೆ ಎಂದು ನನಗೆ ಅರ್ಥವೇ ಆಗುವುದಿಲ್ಲ. ನನ್ನೀ ಉದ್ಗಾರ ನೋಡಿ ಜಿರಳೆ ಅಂದರೆ ನನಗೆ ಇಷ್ಟ ಎಂದು ಭಾವಿಸಬೇಡಿ. ಹೆದರಿಕೆ ಇಲ್ಲ ಅಷ್ಟೇ!
ನಮ್ಮೂರಿನಲ್ಲಿ ನಾವು ಜಿರಳೆಗೆ ಅಕ್ಕಳೆ ಎಂದು ಕರೆಯುತ್ತೇವೆ. ನಾವು ಚಿಕ್ಕವರಿದ್ದಾಗ ನಮ್ಮ ಮನೆಯ ತಮಾಷೆಯ ಸ್ವಭಾವದ ಕೆಲವು ಹಿರಿಯರು "ಮಕ್ಕಳೇ, ನಿಮ್ಮ ಬಾಯಿಗೆ ಅಕ್ಕಳೆ" ಎಂದು ಜೋಕ್ ಮಾಡುತ್ತಿದ್ದರು. ಹಾಗೆ ಹೇಳಿದಾಗ ನಮಗವರು ಅಕ್ಕಳೆ ತಿನ್ನಿಸಿಯೇ ಬಿಡುತ್ತಾರೇನೋ ಎಂದು ಹೆದರಿಕೆಯಾಗುತ್ತಿತ್ತು. ಅದು ತಮಾಷೆಗೆ ಹೇಳಿದ್ದೆಂದು ನಂತರ ಗೊತ್ತಾಗುತ್ತಿತ್ತು 🤔☺️
ಜಿರಳೆ ಒಂದು ಸರ್ವಾಂತರ್ಯಾಮಿ ಜೀವಿ. ಮಿಲಿಯಗಟ್ಟಲೆ ವರ್ಷಗಳಿಂದ ಅಳಿಯದೇ ಉಳಿದಿರುವ ಜಿರಳೆಯ "ಹೊಂದಿಕೊಳ್ಳುವ ಗುಣ" ಅದು ಅಳಿಯದೇ ಉಳಿಯದಂತೆ ನೋಡಿಕೊಂಡಿದೆ. ಜಿರಳೆಯಲ್ಲಿ ಸಾವಿರಾರು ಜಾತಿಗಳಿವೆ. ನಾವು ನೋಡಿರುವುದು ಅವುಗಳ ಕೆಲವೇ ಕೆಲವು ವೈವಿಧ್ಯಗಳನ್ನಷ್ಟೇ!
ಜಿರಳೆ ಹೆಚ್ಚಾಗಿ ಬೆಚ್ಚಗಿನ ಹಾಗೂ ಆಹಾರವಿರುವ ಪ್ರದೇಶವನ್ನು ಇಷ್ಟ ಪಡುತ್ತದೆ. ಆಹಾರವಿಲ್ಲದೆ ಅದು ಒಂದು ತಿಂಗಳು ಬದುಕುತ್ತದೆ. ನೀರಿಲ್ಲದೆ ಅದು ಎರಡು ವಾರಗಳಷ್ಟು ಕಾಲ ಇರಬಲ್ಲುದು. ತಲೆಯಿಲ್ಲದೆ ಅದು ಒಂದು ವಾರದ ಕಾಲ ಇರಬಲ್ಲುದು. ಅದು ನಲವತ್ತು ನಿಮಿಷಗಳ ಕಾಲ ಉಸಿರು ಹಿಡಿದಿಡಬಲ್ಲುದು. ಗಂಟೆಗೆ ಅದು ಮೂರು ಮೈಲುಗಳಷ್ಟು ದೂರ ಓಡಬಲ್ಲುದು(ಇದು ನಾನು ಗೂಗಲ್ ಗುರುವಿನಿಂದ ಪಡೆದ ಮಾಹಿತಿ. ನನ್ನ ಸ್ವ ಸಂಶೋಧನೆಯಲ್ಲ😀) ಇಷ್ಟೆಲ್ಲಾ ತಾಕತ್ತಿರುವ ಜಿರಳೆ ಮಿಲಿಯಗಟ್ಟಲೆ ವರ್ಷ ಬದುಕಿರುವುದರಲ್ಲಿ ಆಶ್ಚರ್ಯವೇನೂ ಇಲ್ಲ.
ಮನೆ ಹೆಂಚಿನದಾಗಿರಲಿ, ಹುಲ್ಲಿನದಾಗಿರಲಿ, ಕಾಂಕ್ರೀಟ್ ನದಾಗಿರಲಿ ಅದನ್ನು ಜಿರಳೆರಹಿತಗೊಳಿಸುವುದು ಬಹಳ ಕಷ್ಟ. ನಮ್ಮ ಮನೆಯಲ್ಲೂ ಬಹಳಷ್ಟು ಜಿರಳೆಗಳಿವೆ. ಎರಡೆರಡು ಬೆಕ್ಕುಗಳಿದ್ದರೂ ಕೂಡಾ ಜಿರಳೆಯ ಕಾಟವೇನು ಕಡಿಮೆ ಇಲ್ಲ. ಕಪಾಟು ಬಾಗಿಲಿನ ಚಡಕಿನಿಂದ ಕಪಾಟನ್ನು ಪ್ರವೇಶಿಸುತ್ತದೆ. ದಿನಸಿ ಸಾಮಾನಿನ ಡಬ್ಬಗಳಿಗೂ ಭೇಟಿ ನೀಡುತ್ತದೆ. ಹಳೆಯ ಸಾಮಾನಿನ ರಾಶಿಗೆ ಕೈ ಹಾಕಿದರೆ ಪ್ರಪ್ರಥಮವಾಗಿ ಸಿಗುವುದು ಜಿರಳೆಯೇ😀 ಜಿರಳೆಯ ಪಿಷ್ಟೆಯೇನಾದರೂ ಆಹಾರ ಸಾಮಗ್ರಿಯ ಜೊತೆ ಸೇರಿದರೆ ಅದನ್ನು ಎಸೆಯುವುದಲ್ಲದೆ ಬೇರೆ ದಾರಿಯೇ ಇರುವುದಿಲ್ಲ. ನ್ಯಾಫ್ತಲೀನ್ ಬಾಲ್ಸ್ ಕೂಡಾ ಅಂತಹ ಪ್ರಯೋಜನಕಾರಿಯೇನು ಅಲ್ಲ. ಅದು ಜಿರಳೆಯ ಕಾಟವನ್ನು ಸ್ವಲ್ಪ ಕಡಿಮೆ ಮಾಡಬಹುದಷ್ಟೆ. ಅದನ್ನು ನಿಸ್ಸಂತಾನ ಮಾಡುವ ತಾಕತ್ತು ಆ ಅಕ್ಕಳೆ ಗುಳಿಗೆಗಳಿಗಿಲ್ಲ. ಕೆಲವೊಮ್ಮೆ ಪೊರಕೆಗಳು ಜಿರಳೆಯನ್ನು ಓಡಿಸುವಲ್ಲಿ ಸಹಾಯಕವಾಗುತ್ತವೆ. ಆಗಾಗ್ಗೆ ಚಪ್ಪಲಿಗಳೂ ಜಿರಳೆಯನ್ನು ಕೊಲ್ಲಲು ಬಳಸಲ್ಪಡುತ್ತವೆ😀 ಕೆಲವೊಮ್ಮೆ ಕಾಲಡಿ ಜಿರಳೆ ಸಿಕ್ಕಿ ಅದು ಅಲ್ಲಿಯೇ ಪಚಗುಟ್ಟಿದಾಗ ಒಂದು ಅಂಟಾದ ದ್ರವ ಕಾಲಿಗಂಟಿ ಕಿರಿಕಿರಿಯುಂಟು ಮಾಡುತ್ತದೆ. ಹಾಗೆ ಜಿರಳೆ ಕಾಲಡಿ ಸಿಗುವುದು ಬಹಳ ವಿರಳ🤔

ಏನೇ ಸರ್ಕಸ್ ಮಾಡಿದರು ಕೂಡಾ ಜಿರಳೆಗಳಿಂದ ಸಂಪೂರ್ಣವಾಗಿ ಮುಕ್ತಿ ಪಡೆಯುವುದು ಕಷ್ಟಸಾಧ್ಯ ಎನ್ನುವುದು ಎಲ್ಲರೂ ಒಪ್ಪುವ ವಿಷಯವಲ್ಲವೆ?


258. ಪರಿಸರ - ಕಸಬರಿಕೆ (11/1/2021)

ಕಸಬರಿಗೆ, ಪೊರಕೆ, ಹಿಡಿ, ಹಿಡಿಸುಡಿ, ಪೊರ್ಕೆ, ಬರಲು ಹಾಗೂ ಇಂಗ್ಲಿಷ್ ನಲ್ಲಿ ಬ್ರೂಮ್ ಎನ್ನುವುದು ಗುಡಿಸುವ ಸಾಧನ. ಅದರಲ್ಲಿ ಕಡ್ಡಿ ಪೊರಕೆ, ಈಚಲು ಪೊರಕೆ, ಹುಲ್ಲಿನ ಪೊರಕೆ, ಮಂಕಿ ಬ್ರಾಂಡ್ ಪೊರಕೆ.... ಹೀಗೆ ಹಲವು ರೀತಿಯ ಪೊರಕೆಗಳಿವೆ. ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಹೆಚ್ಚಾಗಿ ಬಳಸುವುದು ಕಡ್ಡಿ ಪೊರಕೆಯನ್ನು. ಈಚಲು ಪೊರಕೆಯ ಬಳಕೆ ಬಯಲು ಸೀಮೆ ಪ್ರದೇಶದಲ್ಲಿ ಜಾಸ್ತಿ. ಪಟ್ಟಣಗಳಲ್ಲಿ ಮಂಕಿ ಬ್ರಾಂಡ್ ಅಥವಾ ಇನ್ಯಾವುದೋ ಬ್ರ್ಯಾಂಡೆಡ್ ಪೊರಕೆಯ ಬಳಕೆ ಜಾಸ್ತಿ. ಈಗೆಲ್ಲ ಪ್ಲಾಸ್ಟಿಕ್ ಕೋಲಿಗೆ ಸಿಕ್ಕಿಸಿದ ಮಾಪ್ ರೀತಿಯ ಪೊರಕೆಯೂ ಬಳಕೆಯಲ್ಲಿದೆ. ತಟ್ಟೆಯಾಕಾರದ ರೋಬೋಟ್ಗಳು ಪೊರಕೆಯಂತೆ ಸ್ವಚ್ಛಗೊಳಿಸುವ ಕೆಲಸ ಮಾಡುವುದನ್ನು ನಾನು ವೀಡಿಯೋಗಳಲ್ಲಿ ನೋಡಿದ್ದೇನೆ.
ನಾವೆಲ್ಲಾ ಬಳಸುವುದು ಕಡ್ಡಿ ಪೊರಕೆಯನ್ನು. ತೆಂಗಿನ ಮಡಲಿನಿಂದ ಉದ್ದನೆಯ ಎಲೆಗಳನ್ನು ಬೇರ್ಪಡಿಸಿ ಅವುಗಳ ನಡುವಿನಲ್ಲಿರುವ ಕಡ್ಡಿಯನ್ನು ತೆಗೆದು, ಅವುಗಳನ್ನು ಸರಿಯಾಗಿ ಜೋಡಿಸಿ, ಅದರ ದಪ್ಪನೆಯ ಭಾಗಕ್ಕೆ ಒಂದು ಹಗ್ಗದಿಂದ ಬಿಗಿಯಾಗಿ ಕಟ್ಟಿ, ನಮ್ಮ ಮುಷ್ಟಿಯ ಹಿಡಿತಕ್ಕೆ ಬರುವಷ್ಟು ದಪ್ಪನೆಯ ಹಿಡಿ ತಯಾರಾದರೆ ಗುಡಿಸಲು ಆರಾಮ. ಕಡ್ಡಿಯ ಒಂದು ಭಾಗ ದಪ್ಪನೆಯದಾಗಿರುತ್ತದೆ ಹಾಗೂ ಇನ್ನೊಂದು ಭಾಗ ತೆಳ್ಳಗೆ ಬಳಕುತ್ತಿರುತ್ತದೆ. ಗುಡಿಸಿ ಹಳೆಯದಾದಾಗ ತೆಳ್ಳನೆಯ ಕಡ್ಡಿಯು ಸವೆದು ಬಿರುಸಾಗಿ ಬಚ್ಚಲು ಕಲ್ಲು ಹಾಗೂ ಅಂಗಳ ಗುಡಿಸಲು ಉಪಯೋಗಕ್ಕೆ ಬರುತ್ತದೆ.
ನನ್ನ ಗಂಡನ ಮನೆಯಲ್ಲಿ ಅಡುಗೆ ಮನೆ ಗುಡಿಸಲು ಹಾಗೂ ಒಲೆಯ ಸುತ್ತಲೂ ಗುಡಿಸಲು ಆದಷ್ಟು ಈಚಲು ಹಿಡಿ ಅಥವಾ ಇಟ್ಟಂಡೆ ಹಿಡಿಯನ್ನು ಬಳಸುತ್ತಾರೆ. ಕೆರೆಯ ನೀರಿನಲ್ಲಿ, ಕೆರೆ ಏರಿಯ ಸುತ್ತ ಜೊಂಡಿನಂತೆ ಬೆಳೆಯುವ ಹುಲ್ಲಿಗೆ ಇಟ್ಟಂಡೆ ಎನ್ನುತ್ತಾರೆ. ಅದರ ತಲೆಯ ಭಾಗದಲ್ಲಿ ಬಿಳಿಯ ಅಣಬೆಯಂತಹ ಆಕಾರವಿರುತ್ತದೆ. ದೇವಸ್ಥಾನ ಸ್ವಚ್ಛಗೊಳಿಸಲು ಅದರ ಹಿಡಿ ಪ್ರಶಸ್ತ ಎಂದು ಹಿರಿಯರ ಅಂಬೋಣ.

ಗುಡಿಸುವುದು ಕಣ್ಣಿಗೆ ಕಾಣುವಷ್ಟು ಸುಲಭವಲ್ಲ. ಅದೊಂದು ಕಲೆ. ಅದಕ್ಕೊಂದು ಲಯವಿದೆ. ಕಣ್ಣಿಗೆ ಕಾಣುವ/ಕಾಣದ ಧೂಳನ್ನು, ಕಸವನ್ನು ಹೋಗಿಸುವ ಶಕ್ತಿ ಅದಕ್ಕಿದೆ. ಮಾಡಿಗೆ ಕಟ್ಟಿದ ಬಲೆ, ಮನೆಯ ಮೂಲೆಯಲ್ಲಿರುವ ಬಲೆ... ಹೀಗೆ ಮನೆಯ ಸಂದುಗೊಂದನ್ನೆಲ್ಲ ಕಸಬರಿಗೆಯಿಂದ ಸ್ವಚ್ಛಗೊಳಿಸಬಹುದು. ದೊಡ್ಡ ಹಬ್ಬ ಹತ್ತಿರ ಬಂದಾಗ ಕರಿ ಗುಡಿಸುವ ಕೆಲಸದಲ್ಲಿ ಕಸಬರಿಗೆಯೇ ಮುಖ್ಯ ಪಾತ್ರ ವಹಿಸುತ್ತದೆ 🤔 ಕಸಬರಿಗೆಯನ್ನು ನಿಕೃಷ್ಟವಾಗಿ ಕಾಣದೆ ಅದರ ಉಪಯೋಗವನ್ನು ಪರಿಗಣಿಸಿ ಅದಕ್ಕೆ ಸೂಕ್ತವಾದ ಬೆಲೆ ಕೊಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಲ್ಲವೆ?


257. ನೆನಪುಗಳು - ಗಂಜಿ (10/1/2021 )

ಗಂಜಿ ಎಂದ ತಕ್ಷಣ ನನ್ನ ಕಣ್ಣ ಮುಂದೆ ಬರುವುದು ಕೊಚ್ಚಕ್ಕಿ/ಕುಸುಬಲಕ್ಕಿ ಗಂಜಿ. ದಕ್ಷಿಣ ಕನ್ನಡ/ಉಡುಪಿ ಜಿಲ್ಲೆಯ ಪ್ರತಿ ಮನೆಗಳಲ್ಲೂ ಗಂಜಿ ಪ್ರಚಲಿತವಾಗಿ ಬಳಕೆಯಲ್ಲಿದ್ದ ಕಾಲವೊಂದಿತ್ತು. ಕೃಷಿಕರಂತೂ ದಿನಾ ಬೆಳಿಗ್ಗೆ ಗಂಜಿಯುಂಡೇ ತಮ್ಮ ನಿತ್ಯದ ಕೆಲಸಕ್ಕೆ ಹೊರಡುತ್ತಿದ್ದದ್ದು.
ಹೆಬ್ರಿಯ ಆನಮ್ಮನ ಮನೆಯಲ್ಲಿ ರಾತ್ರಿ ಗಂಜಿ ಒಂದು ಕುದಿ ಬರಿಸಿ ಒಳಗೆಲ್ಲಾ ಒಣಹುಲ್ಲು ಇಟ್ಟು ಕಾವು ಇರುವ ಹಾಗೆ ಮಾಡಿದ ಡಬ್ಬದೊಳಗೆ ಇಟ್ಟು ಮುಚ್ಚಿಡುತ್ತಿದ್ದರು. ಬೆಳಗಾಗುವಾಗ ಒಳ್ಳೆಯ ಹದವಾದ ಗಂಜಿ ಸಿದ್ಧವಾಗಿರುತ್ತಿತ್ತು. ಬೆಳಿಗ್ಗೆ ಗಂಜಿಯೊಡನೆ ತಿಂಡಿಯ ವ್ಯವಸ್ಥೆಯೂ ಅವರ ಮನೆಯಲ್ಲಿತ್ತು.
ನಮ್ಮ ಮನೆಯಲ್ಲಿ ಗಂಜಿಯ ಬಳಕೆ ಕಡಿಮೆ. ಬೆಳ್ತಿಗೆ ಅಕ್ಕಿ ಗಂಜಿ ನಮ್ಮ ಮನೆಯಲ್ಲಿ ವರ್ಜ್ಯ. ಮಾಡಿದರೆ ಅಮ್ಮ ಅಪರೂಪಕ್ಕೊಮ್ಮೆ ಕೊಚ್ಚಕ್ಕಿ ಗಂಜಿ ಮಾಡುತ್ತಿದ್ದಳು. ನಮಗೇನಿದ್ದರೂ ಬೆಳಿಗ್ಗೆ ತಿಂಡಿಯೇ ಪ್ರಧಾನ. ತಿಂಡಿ ಇಲ್ಲದಿದ್ದರೆ ನಮ್ಮ ಗಾಡಿ ಮುಂದೆ ಹೋಗುವುದೇ ಇಲ್ಲ 😀
ನಾನು ಶಿವಮೊಗ್ಗದಲ್ಲಿ ದೊಡ್ಡಪ್ಪನ ಮನೆಯಲ್ಲಿ ಇದ್ದಾಗ ನನಗೆ ಜ್ವರ ಬಂದಾಗ ನನ್ನ ದೊಡ್ಡಮ್ಮ ಬಟ್ಟಲ ತುಂಬಾ ಬೆಳ್ತಿಗೆ ಅಕ್ಕಿ ಗಂಜಿ ಬಿಡಿಸಿ"ತಿನ್ನು ಮಗಾ" ಎಂದು ಹೇಳುತ್ತಿದ್ದದ್ದು ನನಗೆ ನೆನಪಿದೆ. ಅದನ್ನು ತಿನ್ನಲು ಸೇರದಿದ್ದಾಗ ರವೆ ಗಂಜಿ ಮಾಡಿ ಕೊಡುತ್ತಿದ್ದರು. ಅವರು ಮನೆಯಲ್ಲಿ ಕೊಚ್ಚಕ್ಕಿ ಗಂಜಿಯ ರೂಢಿ ಇರಲಿಲ್ಲ.
ಬಿಸಿ ಬಿಸಿ ಕೊಚ್ಚಕ್ಕಿ ಗಂಜಿಗೆ ಒಂದು ಮಿಳ್ಳೆ ತುಪ್ಪ, ಮಿಡಿ ಉಪ್ಪಿನಕಾಯಿ ಅಥವಾ ಬೆಳ್ಳುಳ್ಳಿ ಹಾಕಿದ ಖಾರವಾದ ಕಾಯಿ ಚಟ್ನಿ ಒಳ್ಳೆಯ ಕಾಂಬಿನೇಷನ್. ಮಾಂಸಾಹಾರಿಗಳು ಗಂಜಿಯೊಡನೆ ಫಿಶ್ ಫ್ರೈ ಕಾಂಬಿನೇಷನ್ ಮಾಡಿ ತಿನ್ನುತ್ತಾರೆ ಎಂದು ಕೇಳಿದ್ದೇನೆ. ಅದೇನೇ ಇರಲಿ ಗಂಜಿಯನ್ನು ಸುರಿದು ಸೊರಸೊರನೆ ಉಣ್ಣುವ ಸೊಗಸನ್ನು ಉಂಡವನೇ ಬಲ್ಲ😌

ಗಂಜಿಯನ್ನು ಬೇರೆಬೇರೆ ಧಾನ್ಯದಿಂದ ಮಾಡುತ್ತಾರೆ. ಆದರೆ ನನಗೆ ಹೆಚ್ಚು ಪರಿಚಿತವಿರುವುದು ಕೊಚ್ಚಕ್ಕಿ ಗಂಜಿ ಮಾತ್ರ. ಅದರಲ್ಲೂ ಕೆಂಪು ಕೊಚ್ಚಕ್ಕಿ ಗಂಜಿ ಬಲು ರುಚಿ. ಗಂಜಿ ಮಾಡುವುದು ಸುಲಭ ಹಾಗೂ ಕೆಲಸ ಕಡಿಮೆ. ಗಂಜಿ ಮಾಡಲು ಸರಳ, ತಿನ್ನಲು ರುಚಿಕರ ಹಾಗೂ ಆರೋಗ್ಯಕರ. ಹೀಗಾಗಿ ಗಂಜಿ ತಿನ್ನುವ ರೂಢಿ ಇಟ್ಟುಕೊಂಡು ಆರೋಗ್ಯ ಕಾಪಾಡಿಕೊಳ್ಳುವುದು ಬುದ್ಧಿವಂತರ ಲಕ್ಷಣ ಎನ್ನುವುದು ನನ್ನ ಅನಿಸಿಕೆ!


256. ಪರಿಸರ (ನೆನಪುಗಳು) - ಏತ (9/1/2021)

ಅಜ್ಜಯ್ಯನ ಮನೆಯ ಸುತ್ತ ಇರುವ ತೋಟದಲ್ಲಿ ಎಂಟ್ಹತ್ತು ತೆಂಗಿನಮರಗಳಿವೆ. ಮನೆಯ ಖರ್ಚಿಗಾಗಿ ಸ್ವಲ್ಪ ಎಣ್ಣೆ ಮಾಡುವಷ್ಟು ಕಾಯಿ ಸಿಗುತ್ತಿತ್ತು. ತೆಂಗಿನ ಮರಕ್ಕೆ ಬೇಕಾದ ಆರೈಕೆಯನ್ನು ನನ್ನ ಅಜ್ಜಯ್ಯ ಮನೆಯವರ ಸಹಾಯದಿಂದ ಮಾಡುತ್ತಿದ್ಧರು. ಮುಖ್ಯವಾಗಿ ಬೇಸಿಗೆಯಲ್ಲಿ ಮರಕ್ಕೆ ನೀರು ಬಿಡುವ ವ್ಯವಸ್ಥೆಯನ್ನು ಏತದ ಸಹಾಯದಿಂದ ಮಾಡುತ್ತಿದ್ದರು.
ಅಜ್ಜಯ್ಯನ ಮನೆಯ ಬಾವಿ ಸುಮಾರು ಇಪ್ಪತ್ತೈದು ಅಡಿ ಆಳದ ಬಾವಿ. ಅದರ ಎದುರು ಭಾಗದಲ್ಲಿ ಸಿಮೆಂಟಿನ ಕಟ್ಟೆ ಇದ್ದು ಬಾವಿ ನೀರು ಸೇದಲು ಬೇಕಾಗುವ ರಾಟೆ, ಹಗ್ಗವೆಲ್ಲಾ ಇತ್ತು. ಹಿಂಭಾಗದಲ್ಲಿ ನೆಲದಿಂದ ಎರಡಡಿಯಷ್ಟೇ ಎತ್ತರಕ್ಕೆ ಕಲ್ಲು ಕಟ್ಟಿತ್ತು. ಹಿಂದಿನ ಕಟ್ಟೆಗೆ ಏತವನ್ನು ಫಿಕ್ಸ್ ಮಾಡಿದ್ದರು.
ಏತವು ಲಂಬ ಚೌಕಟ್ಟನ್ನು ಹೊಂದಿರುತ್ತದೆ. ಇದರ ಮೇಲೆ ಉದ್ದನೆಯ ಕೋಲು ಅಥವಾ ಶಾಖೆಯನ್ನು, ಒಂದು ಕೊನೆಯಿಂದ ಸುಮಾರು ಅದರ ಉದ್ದದ ಐದನೇ ಒಂದು ಭಾಗದಷ್ಟು ದೂರದಲ್ಲಿ ಜೋತುಬಿಡಲಾಗುತ್ತದೆ. ಈ ಕೋಲಿನ ಉದ್ದನೆಯ ತುದಿಯಲ್ಲಿ ಒಂದು ಬಕೆಟ್, ಚರ್ಮದ ಚೀಲ, ಅಥವಾ ಡಾಂಬರ್ ಲೇಪಿತ ಜೊಂಡಿನ ಚೀಲ ಜೋತು ಬಿದ್ದಿರುತ್ತದೆ. ಗಿಡ್ಡನೆಯ ತುದಿಯು ಒಂದು ತೂಕವನ್ನು (ಜೇಡಿ ಮಣ್ಣು, ಕಲ್ಲು ಅಥವಾ ಹೋಲುವ ತೂಕ) ಹೊತ್ತಿರುತ್ತದೆ. ಇದು ಸನ್ನೆಕೋಲಿನ ಪ್ರತಿಭಾರವಾಗಿ ಕಾರ್ಯನಿರ್ವಹಿಸುತ್ತದೆ. ಸರಿಯಾಗಿ ಸಮವಾದಾಗ, ಪ್ರತಿಭಾರವು ಅರ್ಧ ತುಂಬಿದ ಬಕೆಟ್ಗೆ ಆಧಾರವಾಗುತ್ತದೆ. ಹಾಗಾಗಿ ಖಾಲಿ ಬಕೆಟ್ಟನ್ನು ಕೆಳಗೆ ನೀರಿಗೆ ಬಿಟ್ಟು ನೀರೆಳೆಯುವುದಕ್ಕೆ ಸ್ವಲ್ಪ ಶ್ರಮವನ್ನು ಮಾತ್ರ ಬಳಸಲಾಗುತ್ತದೆ. ಆದರೆ ತುಂಬಿದ ಬಕೆಟ್ ಅನ್ನು ಎತ್ತಲು ಅಷ್ಟೇ ಶ್ರಮ ವಹಿಸಬೇಕಾಗುತ್ತದೆ.

ಸರಿ ಸುಮಾರು ಇದೇ ರೀತಿಯ ಏತ ಅಜ್ಜಯ್ಯನ ಮನೆಯಲ್ಲಿ ಇತ್ತು. ಏತದಿಂದ ಮೊಗೆದ ನೀರನ್ನು ಒಂದು ಸಣ್ಣ ತೋಡಿನ ಮುಖಾಂತರ ಮರಗಳಿಗೆ ಹಾಯಿಸಲಾಗುತ್ತಿತ್ತು. ಆ ಏತದಿಂದ ನೀರನ್ನು ಮೊಗೆಯಲು ಇಬ್ಬರು ಬೇಕಾಗುತ್ತಿದ್ದರು. ಒಬ್ಬರು ಬಾವಿಯ ಕಟ್ಟೆಯ ಅಂಚಿಗೆ ನಿಂತು ನೀರು ತುಂಬಿ ಮೇಲೆ ಬರುತ್ತಿದ್ದ ಪರಿಕರವನ್ನು ಎತ್ತಿ ನೀರನ್ನು ಹೊರ ಹಾಕುತ್ತಿದ್ದರು. ಇನ್ನೊಬ್ಬರು ಆ ಸಾಧನವನ್ನು ಬಾವಿಗಿಳಿಸಿ ನೀರು ಮೇಲೆತ್ತುವ ಕಾಯಕದಲ್ಲಿ ತೊಡಗುತ್ತಿದ್ದರು. ನನ್ನ ಅಜ್ಜಯ್ಯ ಹೆಚ್ಚಾಗಿ ಬಾವಿಯಂಚಿಗೆ ನಿಂತು ನೀರು ತುಂಬಿ ಮೇಲೆ ಬರುತ್ತಿದ್ದ ಪರಿಕರವನ್ನು ಮೇಲೆತ್ತಿ ನೀರನ್ನು ಹೊರಹಾಕುವ ಕೆಲಸ ಮಾಡುತ್ತಿದ್ದರು. ಮನೆಯ ಹೆಂಗಸರು ಏತವನ್ನು ಬಲ ಪ್ರಯೋಗಿಸಿ ಎತ್ತಿ ಇಳಿಸುವ ಕೆಲಸ ಮಾಡುತ್ತಿದ್ದರು. ಚಿಕ್ಕವರಾಗಿದ್ದ ನಮಗೆ ಅದೊಂದು ಥ್ರಿಲ್ಲಿಂಗ್ ವಿಷಯವಾಗಿತ್ತು. ಕೆಲವೊಮ್ಮೆ ಏತವನ್ನು ಮೇಲೆತ್ತಿ ಇಳಿಸುವ ಮರದ ತುಂಡಿನ ಮೇಲೆ ಕುಳಿತು ನಾವು ಸರ್ಕಸ್ ಮಾಡುತ್ತಿದ್ದ ಮಸುಕಾದ ನೆನಪಿದೆ. ಏಕೆಂದರೆ ನಮಗೆ ಬುದ್ಧಿ ಬಲಿಯುವಾಗ ಏತ ಮಾಯವಾಗಿ ಪಂಪ್ ಸೆಟ್ ಬಂದಿತ್ತು. ಹೀಗಾಗಿ ಏತದ ಬಗ್ಗೆ ಬಹಳ ಅಧಿಕೃತವಾಗಿ ಬರೆಯುವಷ್ಟು ಸರಕು ನನ್ನಲ್ಲಿಲ್ಲ. ಆದರೆ ನಮ್ಮಲ್ಲಿದ್ದ ಏತದ ಚಿತ್ರ ಮಾತ್ರ ನನ್ನಲ್ಲಿ ಅಚ್ಚೊತ್ತಿ ನಿಂತಿದೆ.

255.ಪರಿಸರ - ಕಿಟಿಕಿಗಳು (8/1/2021)


ಕಿಟಕಿಗಳಿಲ್ಲದ ಕಟ್ಟಡಗಳೇ ಇಲ್ಲವೆನ್ನಬಹುದು. ಬರೀ ಕಟ್ಟಡಗಳಿಗಷ್ಟೇ ಅಲ್ಲ ವಾಹನಗಳಿಗೂ ಕಿಟಕಿಗಳಿರುತ್ತವೆ. ಮನೆಗಾಗಲಿ/ವಾಹನಗಳಿಗಾಗಲಿ ಕಿಟಕಿ ಭೂಷಣ ಹಾಗೂ ವಾಯು ಸಂವಹನಕ್ಕೆ ಪ್ರಯೋಜಕ.
ಕಿಟಕಿಗಳಲ್ಲಿ ಬಹಳಷ್ಟು ವೈವಿಧ್ಯತೆ ಇರುತ್ತದೆ. ಈಗಿನ ಕಾಲದಲ್ಲಂತೂ ಕಿಟಕಿಗಳಿಗೂ, ಬಾಗಿಲುಗಳಿಗೂ ವ್ಯತ್ಯಾಸವೇ ಇಲ್ಲದಷ್ಟು ದೊಡ್ಡ ಕಿಟಕಿಗಳಿರುತ್ತವೆ. ಹಿಂದಿನ ಕಾಲದ ಕಿಟಕಿಗಳಿಗೂ ಈಗಿನ ಕಾಲದ ಕಿಟಕಿಗಳಿಗೂ ನೋಟ ಹಾಗೂ ಮಾಟದಲ್ಲಿ ಅಜಗಜಾಂತರ. ಹಿಂದಿನ ಕಾಲದ ಮನೆಗಳಲ್ಲಿ ಇರುತ್ತಿದ್ದ ಕಿಟಕಿಗಳ ಸಂಖ್ಯೆ ಕಡಿಮೆ. ಮನೆಯ ಎದುರಿನ ಭಾಗ ಹಾಗೂ ಹಿಂದಿನ ಭಾಗಗಳಲ್ಲಿ ಉದ್ದನೆಯ ದಳಿ ಇರುತ್ತಿತ್ತು. ಒಳಕೋಣೆಗಳಲ್ಲಿ ಪುಟಾಣಿ ಕಿಟಕಿ ಇರುತ್ತಿತ್ತು. ಆದರೆ ಈಗ ದಳಿ ಇಲ್ಲದ ದೊಡ್ಡ ಕಿಟಕಿಗಳ ಮನೆಗಳು ಕಟ್ಟಲ್ಪಡುತ್ತಿವೆ.
ನಾನು ದೊಡ್ಡದಾದ ಕಿಟಕಿಗಳನ್ನು ಇಷ್ಟ ಪಡುವವಳು. ನಮ್ಮ ಮನೆಯಲ್ಲಿರುವ ಕಿಟಕಿಗಳೆಲ್ಲ ದೊಡ್ಡ ದೊಡ್ಡ ಕಿಟಕಿಗಳು. ನಮ್ಮ ಮನೆಯ ಹಾಲ್ ನಲ್ಲಿ ಒಂದು ಬೇ ವಿಂಡೋವಿದೆ(ಚಾಚು ಕಿಟಕಿ ಎಂದೂ ಹೇಳಬಹುದು). ನಮ್ಮ ಮನೆಗೆ ಬರುವವರಿಗೆಲ್ಲ ಅದೊಂದು ಪ್ರಿಯವಾದ ಜಾಗ. ಕಟ್ಟೆ ಇರುವ ಬಹಳ ವಿಶಾಲವಾದ ಕಿಟಕಿಗಳ ಸಮುಚ್ಚಯವದು. ಮನೆಯ ಉಳಿದ ಕಿಟಕಿಗಳೂ ಬಹಳ ದೊಡ್ಡದಾಗಿಯೇ ಇವೆ. ಹೀಗಾಗಿ ನಮ್ಮ ಮನೆಯಲ್ಲಿ ನೈಸರ್ಗಿಕ ಗಾಳಿ, ಬೆಳಕು ಹೇರಳವಾಗಿದೆ.
ಕಿಟಕಿಗಳನ್ನು ಮರ, ಕಬ್ಬಿಣ ಹಾಗೂ ಅಲ್ಯೂಮಿನಿಯಂ ನಿಂದ ಮಾಡುತ್ತಾರೆ. ಹಿಂದಿನ ಕಾಲದ ಕಿಟಕಿಗಳನ್ನು ಬರೀ ಮರದಿಂದಲೇ ಮಾಡುತ್ತಿದ್ದರು. ಕೆಲವು ಹಳೆಯ ಕಾಲದ ಮನೆಗಳಲ್ಲಿ ಕೆತ್ತನೆ ಕೆಲಸ ಮಾಡಿದ ಕಿಟಕಿಗಳನ್ನು ಕಾಣಬಹುದು.
ಹಿಂದೆ ಕಿಟಕಿ ಬಾಗಿಲುಗಳಿಗೆ ಗಾಜನ್ನು ಬಳಸುತ್ತಿರಲಿಲ್ಲ. ಈಗಂತೂ ಬರೀ ಗಾಜೇ ಕಿಟಕಿಯ ಬಾಗಿಲಾಗಿರುತ್ತದೆ. ಅದಕ್ಕೆ ಚೆಂದ ಚೆಂದದ ಕರ್ಟನ್ ಗಳಿಂದ ಅಲಂಕರಿಸಿರುತ್ತಾರೆ. ಗಾಜಿನ ಕಿಟಕಿಗಳನ್ನು ತೆಗೆದು ಹಾಕುವ ಕೆಲಸ ಇರುವುದಿಲ್ಲ. ಬರೀ ಸರಿಸಿದರಾಯಿತು. ಹೀಗಾಗಿ ಮಳೆಗಾಲದಲ್ಲಿ ಬಾಗಿಲು ಬಿಗಿಯಾಯಿತು ಹಾಗೂ ನಂತರದಲ್ಲಿ ಸಡಿಲಾಯಿತು ಎಂದು ಹೇಳುವ ರಗಳೆ ಇರುವುದಿಲ್ಲ☺️.
ಮಳೆಗಾಲದಲ್ಲಿ ಕಿಟಕಿಯ ಕಂಬಿಗಳಿಗೆ ಮುಖವೊತ್ತಿ ಹೊರ ನೋಡುವ ಅನುಭವ ಬಹಳ ಚಂದ! ಕಗ್ಗತ್ತಲ ರಾತ್ರಿಯಲ್ಲಿ ಕಿಟಕಿಯಿಂದ ನಕ್ಷತ್ರ ಭರಿತ ಆಕಾಶದತ್ತ ದೃಷ್ಟಿ ಹಾಯಿಸುವುದು ಕೂಡಾ ಖುಷಿ ಕೊಡುವ ಅನುಭವ. ಸೆಖೆಗಾಲದಲ್ಲಿ ಕಿಟಕಿಗೆ ಮುಖವೊಡ್ಡಿ ಗಾಳಿ ಸೇವನೆ ಮಾಡುವುದು ಅತ್ಯಂತ ಮುದ ನೀಡುವ ಅನುಭವ!
ವಾಹನಗಳಲ್ಲೂ ಕಿಟಕಿ ಪಕ್ಕದ ಸೀಟಿಗೆ ಬಹಳ ಬೇಡಿಕೆ. ವಾಹನ ಚಲಿಸುವಾಗ ಮುಖವನ್ನು ಸ್ವಲ್ಪ ಹೊರ ಹಾಕಿ ಗಾಳಿಯು ಮುಖದ ಮೇಲೆ ಹಾಯ್ದು ಹೋಗುವುದಂತೂ ಉತ್ಕೃಷ್ಟ ಅನುಭವ. ಟ್ರಾವೆಲ್ ಸಿಕ್ ನೆಸ್ ಇರುವವರಿಗಂತೂ ಪಯಣಿಸುವಾಗ ಕಿಟಕಿ ಸೀಟು ಬೇಕೇ ಬೇಕು😳 ಇಲ್ಲದಿದ್ದರೆ ಅವರ ವಾಂತಿಯ ಪ್ರಕೋಪಕ್ಕೆ ಎಲ್ಲರೂ ಬಲಿಪಶುಗಳಾಗಬೇಕಾಗುತ್ತದೆ.

ಒಂದು ಕಿಟಕಿ ಎನ್ನುವುದು ಎಲ್ಲರ ಬದುಕಿನಲ್ಲೂ ಪ್ರಮುಖ ಪಾತ್ರ ವಹಿಸಿರುತ್ತದೆ ಎಂದರೆ ನೀವು ಒಪ್ಪುತ್ತೀರಲ್ಲವೆ?


254.ನೆನಪುಗಳು - ಹೆಂಚಿನ ಮನೆ (7/1/2021)


ನಾನು ಹುಟ್ಟಿ ಬೆಳೆದಿದ್ದೆಲ್ಲ ಹೆಂಚಿನ ಮನೆಗಳಲ್ಲಿ. ಒಳ್ಳೆಯ ಗಟ್ಟಿಮುಟ್ಟಿನ ಮಾಡು ಹಾಗೂ ಮರದ ಮುಚ್ಚಿಗೆ ಇದ್ದ ಮನೆಗಳವು. ಶಿವಮೊಗ್ಗಕ್ಕೆ ನನ್ನಪ್ಪನಿಗೆ ವರ್ಗಾವಣೆಯಾದಾಗ ಅಲ್ಲಿ ನಾವಿದ್ದ ಬಾಡಿಗೆ ಮನೆ ತಾರಸಿ ಮನೆಯಾಗಿತ್ತು. ಚಿಕ್ಕಂದಿನಿಂದಲೂ ಹೆಂಚಿನ ಮನೆಯೇ ಹೆಚ್ಚು ಪರಿಚಿತ ಹಾಗೂ ಆಪ್ತವಾದ ಕಾರಣ ಅಂತಹ ಮನೆಗಳ ಬಗ್ಗೆ ಹೆಚ್ಚಿನ ಒಲವು ನನಗೆ! ಆದರೆ ಈಗ ನಾನು ಕಟ್ಟಿ ವಾಸ್ತವ್ಯ ಹೂಡಿರುವ ಮನೆ ತಾರಸಿ ಮನೆ🤔
ಹೊಂಗಿರಣದ ಪ್ರಾರಂಭದ ವರ್ಷಗಳಲ್ಲಿ ನಾವು ಉಳಿದುಕೊಂಡಿದ್ದ ಮನೆಗಳು ಹೆಂಚಿನ ಮನೆಗಳೇ ಆಗಿದ್ದವು. ನಾವು ಈಗಿರುವ ಕ್ಯಾಂಪಸ್ಸಿಗೆ ಬಂದಾಗ ಜಿರಾಪತಿ ಮಳೆಯಲ್ಲಿಯೇ ನಾಲ್ಕೆಂಟು ಕಲ್ಲಿನ ಕಂಬಗಳನ್ನು ಊರಿ ಅಕೇಶಿಯಾ ಮರದ ಬೊಡ್ಡೆ ಉಪಯೋಗಿಸಿ ಮಾಡಿದ ತಗ್ಗಾದ ಹೆಂಚಿನ ಮಾಡು ಇದ್ದ ಹಾಗೂ ಜಂಬಿಟ್ಟಿಗೆಯ, ಗಾರೆ ರಹಿತ ಗೋಡೆಗಳಿದ್ದ, ಕಡಪ ಕಲ್ಲಿನ ನೆಲವಿದ್ದ ಆತುರಾತುರವಾಗಿ ಕಟ್ಟಿದ ಪುಟಾಣಿ ಮನೆಯೆಂಬ ಗೂಡಿನಲ್ಲಿ ನಾವು ವಾಸ್ತವ್ಯ ಹೂಡಿದ್ದೆವು. ಅದೊಂದು ಸುಮಾರು ಹನ್ನೆರಡು/ಇಪ್ಪತ್ತು ಅಡಿಯ ಆಯಳತೆಯಿದ್ದ, ಒಂದು ಮೂಲೆಯಲ್ಲಿ ಕಡಪ ಕಲ್ಲಿನ ಅಡುಗೆ ಕಟ್ಟೆಯಿದ್ದ, ಇನ್ನೊಂದು ಕಡೆ ಬಚ್ಚಲು/ಟಾಯಿಲೆಟ್ ಇದ್ದ ಹಾಲ್ ಮಾದರಿಯ ಕಟ್ಟಡವಾಗಿತ್ತು. ಆ ಮನೆಯಲ್ಲಿ ನಾವು ಹೊಂಗಿರಣದ ಪ್ರಾರಂಭದ ಏಳೆಂಟು ವರ್ಷಗಳನ್ನು ಖುಷಿಯಿಂದಲೇ ಕಳೆದಿದ್ದೇವೆ. ನಮ್ಮಲ್ಲಿದ್ದ ಎರಡು ಕಪಾಟುಗಳನ್ನು ಅಡ್ಡವಾಗಿರಿಸಿ ಒಂದು ರೂಮಿನ ಆಕಾರ ಕೊಟ್ಟಿದ್ದೆವು. ಅಲ್ಲಿಯೇ ನಮ್ಮ ಡಬಲ್ ಕಾಟ್ ಹಾಕಿ ಮಲಗುವ ಕೋಣೆಯನ್ನಾಗಿ ಮಾಡಿಕೊಂಡಿದ್ದೆವು.
ಆ ಮನೆಯಲ್ಲಿ ನನಗೆ ಯಾವಾಗಲೂ ಥ್ರಿಲ್ ಕೊಡುತ್ತಿದ್ದದ್ದು ಆ ತಗ್ಗಾದ ಹೆಂಚಿನ ಮಾಡು. ಮಳೆ ಜೋರಿದ್ದಾಗ ನೀರಿನ ಹನಿಗಳು ಒಳ ಸೀರುವಷ್ಟು ತಗ್ಗಾದ ಮಾಡಾಗಿತ್ತದು. ಮಲಗಿದಾಗ ಮೈಮುಖವೆಲ್ಲ ಮಳೆ ಹನಿಯ ಸಿಂಚನವಾಗುತ್ತಿತ್ತು. ಜೋರಾದ ಗಾಳಿಮಳೆ ಬಂದಾಗ ಆ ಮಾಡು ಹಾರಿಯೇ ಹೋಗುತ್ತದೇನೋ ಎಂಬ ಭಯ ಹುಟ್ಟಿಸುತ್ತಿತ್ತು. ಅಂತಹ ರಾತ್ರಿಗಳಲ್ಲಿ ನಾವು ಜಾಗರಣೆ ಮಾಡಿದ್ದೇ ಹೆಚ್ಚು🥺
ಆದರೂ ಆ ಪುಟಾಣಿ ಮನೆಯ ಬಗ್ಗೆ ಒಂದು ರೀತಿಯ ಪ್ರೀತಿ. ಮನೆ ಅಷ್ಟು ಪುಟ್ಟದಾಗಿದ್ದರೂ ಬಂದ ನೆಂಟರಿಷ್ಟರು ಅದರಲ್ಲೇ ಅಡ್ಜಸ್ಟ್ ಮಾಡಿಕೊಂಡು ಉಳಿಯುತ್ತಿದ್ದರು. ಉಳಿಕೆಗೆ ಮನೆ ಮುಖ್ಯವಲ್ಲ ಮನ ಮುಖ್ಯ ಎನ್ನುವುದನ್ನು ಆಗಿನ ಪರಿಸ್ಥಿತಿ ವಿದಿತ ಪಡಿಸಿತು.

ಸುಮಾರು ಎಂಟು ಕಲ್ಲಿನ ಕಂಬಗಳನ್ನು ಆಧರಿಸಿದ್ದ ಆ ಹೆಂಚಿನ ಮಾಡು ನಾವು ಆ ಮನೆಯಲ್ಲಿರುವಷ್ಟು ಕಾಲವೂ ನಮಗೆ ಒಳ್ಳೆಯ ರಕ್ಷಣೆ ಕೊಟ್ಟಿತ್ತು. ನಂತರದಲ್ಲಿ ಹೊಸ ಕಟ್ಟಡಗಳ ಕಟ್ಟೋಣದ ವೇಳೆಯಲ್ಲಿ ಅದನ್ನು ಕೆಡವಿ ಅಲ್ಲಿ ಬೇರೆ ಸದೃಢ ಕಟ್ಟಡ ಕಟ್ಟಲಾಯಿತು. ಆ ಮನೆ ಇಲ್ಲವಾಗಿ ಎಂಟ್ಹತ್ತು ವರ್ಷಗಳಾದರೂ ಆ ಮನೆಯೊಟ್ಟಿಗಿನ ಹಿತವಾದ/ಅಹಿತವಾದ ನೆನಪುಗಳು ಆಗಾಗ ಕಾಡುತ್ತಿರುತ್ತವೆ. ಆ ಹೆಂಚಿನ ಮಾಡಿನ ನಡುವಣದ ಮಳೆಯ ಸಿಂಚನವಂತೂ ಮರೆಯಲಾಗದ ಅನುಭವವೇ ಆಗಿ ಉಳಿದಿದೆ☺️


253 .ನೆನಪುಗಳು - ಪರೀಕ್ಷೆ ಪರಿಕರಗಳು  (6/1/2021)


ಪರೀಕ್ಷೆ ಎಂದ ತಕ್ಷಣ ನನಗೆ ನೆನಪಿಗೆ ಬರುವುದು ಓದುವ ತಯಾರಿಯಲ್ಲ; ಅದರ ಬದಲಿಗೆ ಪರೀಕ್ಷೆ ಬರೆಯಲು ಬೇಕಾಗುವ ಸಲಕರಣೆಗಳ ತಯಾರಿ. ಕಂಪಾಸ್ ಬಾಕ್ಸ್ ಹಾಗೂ ಮುಖ್ಯವಾಗಿ ಅದರೊಳಗೆ ಇಡುವ ಪೆನ್ಸಿಲ್, ರಬ್ಬರ್, ಸ್ಕೇಲ್, ಪೆನ್ನು, ಶಾರ್ಪನರ್. ಇವೆಲ್ಲಕ್ಕಿಂತಲೂ ಮುಖ್ಯವಾಗಿ ಬರೆಯಲು ಬೇಕಾದ ಎಕ್ಸಾಂ ಪ್ಯಾಡ್.
ನಾವೆಲ್ಲ ಚಿಕ್ಕವರಿದ್ದಾಗ ಸಿಗುತ್ತಿದ್ದ ಎಕ್ಸಾಂ ಪ್ಯಾಡ್ ಅನ್ನು ಕಾರ್ಡ್ ಬೋರ್ಡ್ ನಿಂದ ಮಾಡುತ್ತಿದ್ದರು. ಕಂದು ಅಥವಾ ಮೆಂತೆ ಬಣ್ಣದ ಎಕ್ಸಾಂ ಪ್ಯಾಡ್ ಗಳು ದೊರಕುತ್ತಿದ್ದವು. ಅದರ ಮೇಲೆ ಒಂದು ದೊಡ್ಡ ಕ್ಲಿಪ್ ಇರುತ್ತಿತ್ತು. ಕೆಲವೊಮ್ಮೆ ಅದು ಎಷ್ಟು ಬಿಗಿಯಾಗಿ ಇರುತ್ತಿತ್ತೆಂದರೆ ನಾವು ಎರಡೆರಡು ಸಲ ಊಟ ಮಾಡಿ ಶಕ್ತಿ ಹಾಕಿ ಒತ್ತಬೇಕಾದಂತಹ ಅಗತ್ಯ ಬೀಳುತ್ತಿತ್ತು🥺 ಆಗೆಲ್ಲ ಕಿರು ಪರೀಕ್ಷೆ, ಮಧ್ಯವಾರ್ಷಿಕ ಪರೀಕ್ಷೆಗಳಿಗೆ ನಾವೇ ಪೇಪರ್ ಕೂಡಾ ತೆಗೆದುಕೊಂಡು ಹೋಗಬೇಕಾಗಿತ್ತು. ಆ ಪೇಪರ್ ಗಳನ್ನು ಎಕ್ಸಾಂ ಪ್ಯಾಡ್ ನ ಕ್ಲಿಪ್ ಗೆ ಸಿಕ್ಕಿಸಿ ತೆಗೆದುಕೊಂಡು ಹೋಗುತ್ತಿದ್ದೆವು. ಕೆಲವರು ಆ ಬೋಳು ಎಕ್ಸಾಂ ಪ್ಯಾಡಿಗೆ ಸ್ಟಿಕ್ಕರ್ ಗಳನ್ನು ಅಂಟಿಸುತ್ತಿದ್ದರು. ಆ ಸ್ಟಿಕ್ಕರ್ ಗಳು ಹಳೆಯದಾದಂತೆ ಎಕ್ಸಾಂ ಪ್ಯಾಡುಗಳು ಕೊಳಕಾಗಿ ಕಾಣುತ್ತಿದ್ದವು.
ಆಗೆಲ್ಲ ಪದೇ ಪದೇ ನಾವು ಕೇಳಿದ್ದನ್ನು ತೆಗೆಸಿ ಕೊಡುವ ಪರಿಸ್ಥಿತಿ ಇರಲಿಲ್ಲ. ಒಂದು ವೇಳೆ ನಮ್ಮ ಬಳಿ ಇರುವ ವಸ್ತುಗಳು ಹಾಳಾದರೆ ನಾವೇ ಬದಲಿ ವ್ಯವಸ್ಥೆ ಮಾಡಕೊಳ್ಳಬೇಕಾದ ಅನಿವಾರ್ಯತೆ ಇತ್ತು. ಎಕ್ಸಾಂ ಪ್ಯಾಡ್ ಏನಾದರೂ ಹಾಳಾದರೆ ಹಳೆ ನೋಟ್ ಪುಸ್ತಕದ ದಪ್ಪನೆಯ ರಟ್ಟುಗಳನ್ನು ಕತ್ತರಿಸಿ ಜೋಡಿಸಿ, ಅಂಟಿಸಿ ಅದರ ಮೇಲೆ ವರ್ಣಮಯ ಕ್ಯಾಲೆಂಡರ್ ಗಳ ಹಿಂದಿನ ಬಿಳಿ ಭಾಗ ಮೇಲೆ ಕಾಣುವಂತೆ ಅಂಟಿಸಿ ನಾವೇ ಎಕ್ಸಾಂ ಪ್ಯಾಡುಗಳನ್ನು ತಯಾರಿಸುತ್ತಿದ್ದೆವು. ಆ ತಯಾರಿಕೆಯಲ್ಲೇನೋ ಖುಷಿ ಸಿಗುತ್ತಿತ್ತು.
ಎಕ್ಸಾಂ ಪ್ಯಾಡುಗಳು ಬಹೂಪಯೋಗಿ. ಬೇಸಿಗೆಯಲ್ಲಿ ಅವುಗಳನ್ನು ಬೀಸಣಿಗೆಯಂತೆ ಉಪಯೋಗಿಸಬಹುದಿತ್ತು. ನಮ್ಮ ಆಟಗಳಲ್ಲಿ ಅದೊಂದು ಒಳ್ಳೆಯ ಪ್ರಾಪರ್ಟಿ ಆಗಿತ್ತು. ಬಿಸಿಲು ಕಣ್ಣಿಗೆ ಹೊಡೆಯುವಾಗ ಕಿಟಕಿಯಲ್ಲಿ ಅದನ್ನು ತಡೆಗೋಡೆಯಂತೆ ಉಪಯೋಗಿಸಬಹುದಾಗಿತ್ತು. ನಮ್ಮ ನಮ್ಮ ಸೃಜನಶೀಲತೆಗೆ, ಅಗತ್ಯಕ್ಕೆ ತಕ್ಕ ಹಾಗೆ ಎಕ್ಸಾಂ ಪ್ಯಾಡ್ ಉಪಯೋಗಿಸಲ್ಪಡುತ್ತಿತ್ತು.
ಈಗ ಫೈಬರ್ ನ ಹಾಗೂ ಬೇರೆ ಬೇರೆ ಡಿಸೈನ್ ಇರುವ ಎಕ್ಸಾಂ ಪ್ಯಾಡುಗಳ ಲಭ್ಯತೆ ಇದೆ. ನಮಗೆ ಬೇಕಾದ ಬಣ್ಣದ ಪ್ಯಾಡ್ ಖರೀದಿಸುವ ಅವಕಾಶವಿದೆ. ಇಷ್ಟೆಲ್ಲಾ ವರ್ಣ ವೈವಿಧ್ಯತೆ ಇದ್ದರೂ ಅದನ್ನು ಬಳಸುವ ಮುಖ್ಯ ಉದ್ದೇಶ ಪರೀಕ್ಷೆ ಬರೆಯಲು ತಾನೇ?


252. ನೆನಪುಗಳು - ಅಲ್ಯುಮಿನಿಯಂ ನಾಣ್ಯ (5/1/2021)


ನಾವೆಲ್ಲ ಚಿಕ್ಕವರಿದ್ದಾಗ ಪೈಸೆ ಪೈಸೆಗೆ ಬೆಲೆ ಇತ್ತು. ಐದು ಪೈಸೆಗೆ ಕೈ ತುಂಬುವಷ್ಟು ಪೆಪ್ಪರ್ ಮಿಂಟ್ ಬರುತ್ತಿತ್ತು. ಯಾರಾದರೂ ನಾಲ್ಕಾಣೆ/ಇಪ್ಪತ್ತೈದು ಪೈಸೆ ಕೊಟ್ಟರೆ ನಮಗೆಲ್ಲ ನಿಧಿ ಸಿಕ್ಕಷ್ಟು ಖುಷಿ!
ನನಗೆ ಎರಡು ಪೈಸೆ, ಮೂರು ಪೈಸೆ, ಐದು ಪೈಸೆ, ಹತ್ತು ಪೈಸೆ, ಇಪ್ಪತ್ತು ಪೈಸೆ, ನಾಲ್ಕಾಣೆ, ಎಂಟಾಣೆ(ಐವತ್ತು ಪೈಸೆ) ಉಪಯೋಗಿಸಿದ ನೆನಪಿದೆ. ಎರಡು ಪೈಸೆಯಿಂದ ಹತ್ತು ಪೈಸೆ ವರೆಗಿನ ಅಲ್ಯೂಮಿನಿಯಂ ನಾಣ್ಯ, ಇಪ್ಪತ್ತು ಪೈಸೆಯ ಹಿತ್ತಾಳೆಯ ನಾಣ್ಯ, ನಾಲ್ಕಾಣೆ, ಎಂಟಾಣೆಯ ನಿಕೆಲ್ ನಾಣ್ಯ ನೆನಪಿದೆ. ಎರಡು ಪೈಸೆ ಹಾಗೂ ಹತ್ತು ಪೈಸೆಯ ನಾಣ್ಯಗಳು ಹೂವಿನ ಪಕಳೆಯಂತಿದ್ದವು. ಇಪ್ಪತ್ತು ಪೈಸೆಯ ಅಲ್ಯೂಮಿನಿಯಂ ನಾಣ್ಯ ಷಟ್ಕೋನವುಳ್ಳದ್ದಾಗಿತ್ತು. ಇಪ್ಪತ್ತು ಪೈಸೆಯ ಹಿತ್ತಾಳೆಯ ನಾಣ್ಯ ದುಂಡಗಿತ್ತು. ಐದು ಪೈಸೆಯ ನಾಣ್ಯ ಚೌಕಾಕಾರದ್ದಾಗಿತ್ತು. ನಾಲ್ಕಾಣೆ ನಾಣ್ಯ ಪುಟ್ಟದಾಗಿ ದುಂಡಗಿತ್ತು. ಐವತ್ತು ಪೈಸೆಯ ನಾಣ್ಯವೂ ದುಂಡಗಿತ್ತು.
ನಮಗಾಗ ಹಿರಿಯರು ಹತ್ತು ಪೈಸೆ ಕೊಟ್ಟರೆ ಬಹಳ ಖುಷಿ. ಅದನ್ನು ಪಿಗ್ಗಿ ಬ್ಯಾಂಕಿನಲ್ಲೂ ಹಾಕಿಡುತ್ತಿದ್ದೆವು, ಇಲ್ಲವೇ ಗೆಳೆಯ ಗೆಳತಿಯರೊಡನೆ ಸೇರಿ ಏನಾದರೂ ತಿನಿಸು ಖರೀದಿಸಿ ತಿನ್ನುತ್ತಿದ್ದೆವು. ನಮ್ಮ ಅಜ್ಜಯ್ಯ ಮನೆಯಲ್ಲಿ ಶ್ರಾದ್ಧವಾದಾಗ ನಮಗೆಲ್ಲ ನಾಲ್ಕಾಣೆ ದಕ್ಷಿಣೆ ಕೊಟ್ಟಾಗ ಅದು ಅಂದೇ ಗಟ್ಟಿಬಜೆಯ ಖರೀದಿಯಲ್ಲಿ ಕರಗುತ್ತಿತ್ತು😀 ನಾವು ಹುಡುಗಿಯರೆಲ್ಲ ಇಪ್ಪತ್ತು ಪೈಸೆಯ ಹಿತ್ತಾಳೆಯ ನಾಣ್ಯ ಒಟ್ಟು ಮಾಡಿ ಅದನ್ನು ಅಕ್ಕಸಾಲಿಗೆ ಕೊಟ್ಟು ಕರಗಿಸಿ ಕಾಲ್ಗೆಜ್ಜೆ ಮಾಡಿಸಿಕೊಂಡದ್ದೂ ಇದೆ.
ನಾನು ಪಿಯುಸಿ ಓದುವಾಗ ಸಾಲಿಕೇರಿಯಿಂದ ಬ್ರಹ್ಮಾವರಕ್ಕೆ ಬಸ್ಸಿನಲ್ಲಿ ಪಯಣಿಸಬೇಕಾದರೆ ನಾಲ್ಕಾಣೆ ಪಾವತಿಸಬೇಕಾಗಿತ್ತು. ನಮಗೇನಾದರೂ ತಿನಿಸನ್ನು ತಿನ್ನುವ ಚಪಲ ಹುಟ್ಟಿದಾಗ ಕಾಲೇಜಿಗೆ ಬಸ್ಸಿನಲ್ಲಿ ಹೋಗುವ ಬದಲು ನಡೆದುಕೊಂಡು ಹೋಗಿ ಆ ದುಡ್ಡನ್ನು ಉಳಿಸಿ ತಿನ್ನಲು ಏನಾದರೂ ಖರೀದಿಸುತ್ತಿದ್ದೆವು. ಬಸ್ಸಿನಲ್ಲಿ ಕಾಲೇಜಿಗೆ ಹೋಗುವುದು ಅಪರೂಪವಾಗಿದ್ದರೂ ಅದಕ್ಕೂ ಖೊಕ್ ಕೊಡುತ್ತಿದ್ದೆವು. ಮಧ್ಯಾಹ್ನ ಊಟದ ಬ್ರೇಕಿನಲ್ಲಿ ನಾಲ್ಕಾಣೆಯ ಐಸ್ ಕ್ಯಾಂಡಿ ಖರೀದಿಸಿ ತಿನ್ನುತ್ತಿದ್ದೆವು☺
ನಾನು ಐದಾರನೇ ತರಗತಿಯಲ್ಲಿ ಓದುವಾಗ ಶಿವಮೊಗ್ಗದಲ್ಲಿ ದೊಡ್ಡಪ್ಪನ ಮನೆಯಲ್ಲಿದ್ದೆ. ಆಗ ಪ್ರತಿ ಭಾನುವಾರ ನನ್ನ ದೊಡ್ಡಪ್ಪ ನನಗೆ ಖರ್ಚಿಗೆ ನಾಲ್ಕಾಣೆ ಕೊಡುತ್ತಿದ್ದರು. ಅದರಲ್ಲಿ ನಾನು ಹೆಚ್ಚಾಗಿ ಕಡಲೆ ಮಿಠಾಯಿ ಖರೀದಿಸಿ ತಿನ್ನುತ್ತಿದ್ದೆ. ಭಾನುವಾರದ ನಾಲ್ಕಾಣೆಗಾಗಿ ನಾನು ಚಾತಕ ಪಕ್ಷಿಯಂತೆ ಕಾಯುತ್ತಿದ್ದೆ.
ವಿಶೇಷವಾಗಿ ನೆನಪಿನಲ್ಲಿರುವ ಇನ್ನೊಂದು ಸಂಗತಿ ಎಂದರೆ ಪಿಗ್ಗಿ ಬ್ಯಾಂಕಿನಲ್ಲಿರುವ ನಾಣ್ಯಗಳನ್ನು ಲೆಕ್ಕ ಮಾಡುವುದು. ಅದೆಂತಹ ಸಂಭ್ರಮ! ಘಣಘಣಿಸುವ ಸದ್ದಿನೊಂದಿಗೆ ಹೊರಬೀಳುವ ನಾಣ್ಯಗಳು.... ಅಲ್ಲಲ್ಲಿ ಉರುಳಿ ಹೋಗುವ ದುಂಡಗಿನ ನಾಣ್ಯಗಳು.... ಅವುಗಳನ್ನು ಆರಿಸಿ ವಿಭಿನ್ನ ಮೌಲ್ಯದ ನಾಣ್ಯಗಳನ್ನು ಬೇರೆ ಬೇರೆ ಗುಂಪು ಮಾಡಿ ಅವುಗಳನ್ನೆಲ್ಲ ಲೆಕ್ಕ ಮಾಡಿ ಒಟ್ಟಾಗಿರುವ ದುಡ್ಡನ್ನು ನೋಡಿ ಸಂಭ್ರಮಿಸುವ ಪರಿ ಎಷ್ಟು ಚೆಂದ😇

ಅಂತಹ ಖುಷಿಗಳೆಲ್ಲ ಈಗ ಎಲ್ಲಿ ಹೋದವು? ಈಗ ದೊಡ್ಡ ನೋಟುಗಳಿದ್ದರೂ ಆ ನಾಣ್ಯಗಳು ಕೊಡುತ್ತಿದ್ದ ಖುಷಿ ಸಿಗುತ್ತಿಲ್ಲ. ಖುಷಿ ಎನ್ನುವುದು ದುಡ್ಡಿನಲ್ಲಿದೆಯೇ ಅಥವಾ ಅದನ್ನು ಸ್ವೀಕರಿಸುವ ಮನಸ್ಥಿತಿಯಲ್ಲಿದೆಯೆ?


251 .ಪರಿಸರ - ಬೋರೋಲಿನ್ ಕ್ರೀಮ್ (4/1/2021)

ಕಳೆದ ವಾರ ಸಾಗರಕ್ಕೆ ಹೋದಾಗ ನನ್ನ ಮಗಳು ಹಸುರು ಬಣ್ಣದ ತೆಳ್ಳನೆಯ ಹಳೆಯ ಕಾಲದ ಛಾಯೆಯನ್ನು ಇನ್ನೂ ಉಳಿಸಿಕೊಂಡಿರುವ ಬೊರೊಲಿನ್ ಕ್ರೀಂ ಅನ್ನು ಖರೀದಿಸಿದಳು. ನನಗೆ ಆ ಕ್ರೀಂ ನ ಬಗ್ಗೆ ಅಷ್ಟು ಗೊತ್ತಿರಲಿಲ್ಲ. ಬರೀ ಹೆಸರು ಕೇಳಿದ್ದೆನಷ್ಟೇ. ಮಾತನಾಡುತ್ತಾ ಮಾತನಾಡುತ್ತಾ ಅವಳು ಆ ಕ್ರೀಂ ನ ಉಪಯೋಗ, ಬಂಗಾಳಿಗಳ ಮನೆಮನೆಯ ಅವಿಭಾಜ್ಯ ಅಂಗವಾಗಿರುವ ಅದರ ಪ್ರಾಮುಖ್ಯತೆಯ ಬಗ್ಗೆ ನನಗೆ ತಿಳಿಸಿದಳು. ಆಗ ನನಗದು ತೊಂಭತ್ತು ವರ್ಷಗಳ ಹಿಂದಿನ, ಯಾವುದೇ ಆಧುನಿಕತೆಯ ಹೊಡೆತಕ್ಕೆ ಸಿಲುಕದೆ ನಲುಗದೆ ತನ್ನ ಗಟ್ಟಿತನವನ್ನು ಉಳಿಸಿಕೊಂಡಿರುವ ನಿಜವಾದ ಮೇಕ್ ಇನ್ ಇಂಡಿಯಾ ಪ್ರಾಡಕ್ಟ್ ಎಂದೆನಿಸಿತು. ಗೂಗಲ್ ನಲ್ಲಿ ಶೋಧಿಸಿದಾಗ ಅದರ ಬಗ್ಗೆ ಇನ್ನಷ್ಟು ಮಾಹಿತಿ ದೊರಕಿತು.
ಸ್ವದೇಶಿ ಚಳುವಳಿಯ ಪ್ರಭಾವಕ್ಕೆ ಒಳಗಾದ ಗೌರ್ ಮೋಹನ್ ದತ್ತ ಎನ್ನುವ ಬಂಗಾಳದ ಆಮದು ಉದ್ಯಮಿ 1929ರಲ್ಲಿ ಪ್ರಾರಂಭಿಸಿದ ಜಿ.ಡಿ. ಫಾರ್ಮಾದ ಸ್ವದೇಶಿ ಕ್ರೀಂ ಬೊರೊಲಿನ್. ಬೋರಿಕ್ ಪೌಡರ್, ಝಿಂಕ್ ಆಕ್ಸೈಡ್, ಪ್ಯಾರಾಫಿನ್ ಹಾಗೂ ಕೆಲವು ಎಣ್ಣೆಗಳನ್ನು ಬಳಸಿ ಮಾಡಿದ ಆಂಟಿಸೆಪ್ಟಿಕ್ ಕ್ರೀಂ ಬೊರೊಲಿನ್. ಕಾಲೊಡಕು, ಒಡೆದ ತುಟಿ, ಸನ್ ಬರ್ನ್, ಗಾಯ, ಚರ್ಮವ್ಯಾಧಿ... ಹೀಗೆ ಎಲ್ಲವುದಕ್ಕೂ ರಾಮಬಾಣ ಈ ಬೊರೊಲಿನ್. ಬಂಗಾಳಿಯರಿಗೆ ಬೊರೊಲಿನ್ ಎನ್ನುವುದು ಅವರ ಪರಂಪರೆಯನ್ನು ಪ್ರತಿನಿಧಿಸುವ ಹೆಮ್ಮೆಯ ವಸ್ತುವಾಗಿದೆ. ಜಿ.ಡಿ. ಫಾರ್ಮಾದವರಿಗೆ ಇದೊಂದು ಪ್ರಮುಖ ಉತ್ಪನ್ನವಾಗಿದೆ. ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಬೊರೊಲಿನ್ ದೇಶಪ್ರೇಮವನ್ನು ಪ್ರತಿನಿಧಿಸುವ ಉತ್ಪನ್ನವಾಗಿತ್ತು. ಜಿ. ಡಿ. ದತ್ತಾರವರು ಆಗಸ್ಟ್ 15, 1947ರಂದು ಬೊರೊಲಿನ್ ಅನ್ನು ಉಚಿತವಾಗಿ ಎಲ್ಲರಿಗೂ ಹಂಚಿದ್ದರು.
ಕಾಲದ ಬದಲಾವಣೆಯೊಂದಿಗೆ ಬೊರೊಲಿನ್ ನ ಚಿತ್ರಣ ಬದಲಾಗಲಿಲ್ಲ. ಬೊರೊಲಿನ್ ಗೆ ಯಾವುದೇ ಪ್ರಚಾರದ ಅಗತ್ಯವಿಲ್ಲ. ಅದರ ಸರಳತೆ ಹಾಗೂ ಉಪಯುಕ್ತತೆ ಅದನ್ನು ಸದಾ ಬಳಕೆಯಲ್ಲಿಟ್ಟಿದೆ. ಬಂಗಾಳಿಗಳು ಏನನ್ನು ಮರೆತರೂ ಬೊರೊಲಿನ್ ಅನ್ನು ಜೊತೆಗಿಟ್ಟುಕೊಳ್ಳುವುದನ್ನು ಎಂದಿಗೂ ಮರೆಯುವುದಿಲ್ಲ. ಈ ರೀತಿಯಲ್ಲಿ ಬೊರೊಲಿನ್ ಪ್ರತಿ ಬಂಗಾಳಿ ಮನೆಯ, ಬದುಕಿನ ಅವಿಭಾಜ್ಯ ಅಂಗವಾಗಿ ಬಿಟ್ಟಿದೆ. ಪ್ರತಿ ಬಂಗಾಳಿಯು ರವೀಂದ್ರನಾಥ ಠಾಗೋರ್, ಸತ್ಯಜಿತ್ ರೇ ಅವರೊಡನೆ ಹೇಗೆ ತನ್ನನ್ನು ತಾನು ಗುರುತಿಸಿಕೊಳ್ಳ ಬಯಸುತ್ತಾನೋ ಅದೇ ರೀತಿ ಬೊರೊಲಿನ್ ನೊಡನೆ ಕೂಡಾ ಗುರುತಿಸಿಕೊಳ್ಳ ಬಯಸುತ್ತಾನೆ. ಹೀಗೆ ಬೊರೊಲಿನ್ ಪ್ರತಿ ತಲೆಮಾರಿನೊಡನೆ ಗುರುತಿಸಿಕೊಂಡು ತನ್ನ ಮೌಲ್ಯವನ್ನು ಕಾಪಾಡಿಕೊಂಡು ಬಂಗಾಳಿಗರ ಪ್ರಾದೇಶಿಕತೆಯ ಹೆಮ್ಮೆಯ ಗುರುತಾಗಿ ಉಳಿದಿದೆ ಹಾಗೂ ಭಾರತೀಯರ ಹೆಮ್ಮೆಯೂ ಆಗಿದೆ🙏


250. ಪರಿಸರ - ಭತ್ತದ ಗದ್ದೆ (3/1/2021)

ಅಜ್ಜಯ್ಯನ ಮನೆ ಇರುವುದು ಗದ್ದೆಗಳ ಮಧ್ಯೆ. ಮನೆಯ ಬಲಪಕ್ಕದಲ್ಲಿ ಆಚೆಮನೆ ಇದ್ದದ್ದು ಬಿಟ್ಟರೆ ಉಳಿದಂತೆ ಎಲ್ಲಾ ಕಡೆಯೂ ಅದು ಗದ್ದೆಗಳಿಂದ ಸುತ್ತುವರೆದಿತ್ತು. ಮನೆಯವರೆಗೆ ರಸ್ತೆ ಇರದಿದ್ದ ಕಾರಣ ಹಿಂದೆ ನನ್ನಪ್ಪ ತನ್ನ ಕಾರನ್ನು ಮುಖ್ಯ ರಸ್ತೆಯ ಪಕ್ಕದಲ್ಲಿರುವ ಕುಮಾರನ ಚಾವಡಿಯಲ್ಲಿಟ್ಟು ಬರುತ್ತಿದ್ದರು. ನನ್ನಣ್ಣ ಗದ್ದೆಯ ಬದುವಿನ ಮೇಲೆಯೆ ಬೈಕ್ ನಲ್ಲಿ ಬರುತ್ತಿದ್ದ. ಕಳೆದ ಇಪ್ಪತ್ತೈದು ವರ್ಷಗಳ ಹಿಂದೆ ಅಜ್ಜಯ್ಯನ ಮನೆಗೆ ಬರಲು ಕಾಲ್ದಾರಿಗಿಂತಲೂ ಒಂದು ದೊಡ್ಡ ದಾರಿಯಾಯಿತು. ವಾಹನಗಳನ್ನು ಮನೆಯವರೆಗೆ ತರುವಂತಾಯಿತು. ಹಾಗೆಯೇ ಮನೆಯ ಹಿಂಭಾಗದ ಗದ್ದೆಗಳಲ್ಲಿ ಮನೆಗಳೂ ಏಳತೊಡಗಿದವು. ಹೀಗಾಗಿ ಈಗ ಅಜ್ಜಯ್ಯನ ಮನೆಯ ಎಡಪಕ್ಕ, ಎದುರುಗಡೆ ಹಾಗೂ ಆಚೆ ಮನೆಯ ಬಲಪಕ್ಕದಲ್ಲಿ ಮಾತ್ರ ಉತ್ತು ಬಿತ್ತದ ಗದ್ದೆಗಳು ಉಳಿದಿವೆ. ಹಿಂಭಾಗದ ಗದ್ದೆಗಳಿಲ್ಲ ಮನೆಗಳಿಂದ ತುಂಬಿವೆ.
ಹಿಂದೆಲ್ಲಾ ಮಳೆಗಾಲದಲ್ಲಿ ಉತ್ತು ಬಿತ್ತಿದ ಗದ್ದೆಗಳು ಭತ್ತದ ಪೈರನ್ನು ಹೊತ್ತು ಗಾಳಿಗೆ ತೊನೆದಾಡುತ್ತಿದ್ದ ದೃಶ್ಯ ಇನ್ನೂ ಕಣ್ಣಿಗೆ ಕಟ್ಟಿದಂತಿದೆ. ಹಸಿರು ಹುಲ್ಲು ತಿಂಗಳೆರಡು ಕಳೆಯುವುದರಲ್ಲಿ ನಿಧಾನವಾಗಿ ಭತ್ತದ ತೆನೆಗಳನ್ನು ಹೊರಹಾಕುತ್ತಾ ಬಂಗಾರದ ಬಣ್ಣಕ್ಕೆ ತಿರುಗುವ ಆ ರೂಪಾಂತರ ಪ್ರಕ್ರಿಯೆ ಕಣ್ಣಿಗೆ ಚೆಂದ! ಮೊದಮೊದಲು ಹಾಲ್ತುಂಬಿ ಮೆತ್ತಗಿರುವ ಭತ್ತವು ನಂತರದಲ್ಲಿ ಗಟ್ಟಿಯಾಗುತ್ತಾ ಬರುವುದು ಕೂಡಾ ಅದ್ಭುತವಾದ ಪ್ರಕ್ರಿಯೆಯೇ ಸೈ! ನಾನು ಎಷ್ಟೋ ಸಲ ಎಳೆಯ ಭತ್ತದ ತೆನೆಗಳನ್ನು ಕಿತ್ತು ಕಚ್ಚಿ ಅದರ ಬೀಜದಲ್ಲಿರುವ ಹಾಲನ್ನು ಹೀರಿದ್ದಿದೆ. ಅದಕ್ಕೊಂದು ವಿಚಿತ್ರ ಸ್ವಾದವಿರುತ್ತದೆ.
ಬಂಗಾರದ ಬಣ್ಣಕ್ಕೆ ತಿರುಗಿದ ಆ ಗದ್ದೆಬಯಲು ನೋಡಲು ಆಕರ್ಷಕವಾಗಿರುತ್ತದೆ. ಕಣ್ಣು ಹಾಯಿಸಿದಷ್ಟು ದೂರ ಎಲ್ಲೆಂದರಲ್ಲಿ ಗಾಳಿಗೆ ತೊನೆದಾಡುವ ಬಂಗಾರದ ಬಣ್ಣದ ತೆನೆಗಳೇ ಕಾಣುವುದು ಮನಸ್ಸಿಗೆ ಮುದ ನೀಡುತ್ತದೆ. ಒಂದರ್ಥದಲ್ಲಿ ಅದೇ ನಿಜವಾದ ಬಂಗಾರವಲ್ಲವೆ?
ಆಗೆಲ್ಲ ಗದ್ದೆಗಳನ್ನು ಖಾಲಿ ಬಿಟ್ಟಿರುತ್ತಿರಲಿಲ್ಲ. ಭತ್ತದ ಕೊಯ್ಲು ಆಗುತ್ತಿದ್ದ ಹಾಗೆ ಉದ್ದು, ಹೆಸರು, ಅವಡೆಯ ಬೀಜಗಳನ್ನು ಬಿತ್ತುತ್ತಿದ್ದರು. ಅವೆಲ್ಲ ಪುಟಾಣಿ ಗಿಡಗಳು. ಆ ಗಿಡಗಳಲ್ಲಿ ಕೋಡುಗಳು ಬಿಟ್ಟಾಗ ಆ ಹಸಿ ಕೋಡುಗಳನ್ನು ಕಿತ್ತು ನಾವು ಕಚಕಚನೆ ತಿನ್ನುತ್ತಿದ್ದೆವು. ಅವು ಬಹಳ ರುಚಿಕರವಾಗಿರುತ್ತಿದ್ದವು.
ಅಜ್ಜಯ್ಯನ ಮನೆಯ ಎದುರುಗಡೆ ಗದ್ದೆಯಲ್ಲಿ ಉದ್ದು ಬೆಳೆಯುತ್ತಿದ್ದರು. ಕೋಡುಗಳು ಬಲಿತ ಮೇಲೆ ಅವುಗಳನ್ನು ಕೊಯ್ದು, ಬಡಿದು ಸುಲಿದು, ಕರಿ ಸಿಪ್ಪೆಯ ಉದ್ದಿನ ಬೀಜಗಳಿಗೆ ಎಣ್ಣೆ ಸವರಿ, ಬೀಸುವ ಕಲ್ಲಿನಲ್ಲಿ ಲಘುವಾಗಿ ಬೀಸಿ ಅವುಗಳ ಸಿಪ್ಪೆ ತೆಗೆದು, ಗೆರಸಿಯಲ್ಲಿ ಕೇರಿ, ಬಿಸಿಲಿಗೆ ಹಾಕಿ ಒಣಗಿಸಿ ನನ್ನ ಸೋದರತ್ತೆ ಡಬ್ಬಿಗಳಲ್ಲಿ ಶೇಖರಿಸಿ ಇಡುತ್ತಿದ್ದದ್ದು ನನಗೆ ಮಸುಕು ಮಸುಕಾಗಿ ನೆನಪಿದೆ.

ಇಷ್ಟೆಲ್ಲಾ ನೆನಪನ್ನು ಕಲಕಿದ್ದು ಎರಡು ವಾರಗಳ ಹಿಂದೆ ಬರೇಕಲ್ ಚಾರಣಕ್ಕೆ ಹೋದಾಗ ಕಣ್ ಸೆಳೆದ ಗೌಡರ ಬಂಗಾರದ ಬಣ್ಣದ ತೆನೆದುಂಬಿದ ಭತ್ತದ ಗದ್ದೆ!


249 . ಪರಿಸರ - ಬಾಗಿಲು (2/1/2021)


ಬಾಗಿಲು ಎಂದು ತಕ್ಷಣ ನೆನಪಾಗುವುದು ಮನೆಯ ಬಾಗಿಲು. ಬಾಗಿಲಿಲ್ಲದ ಮನೆಗಳು ಇಲ್ಲವೇ ಇಲ್ಲ ಎಂದು ಹೇಳಬಹುದು. ಬಾಗಿಲೆನ್ನುವುದು ಮನೆಯ ಸುರಕ್ಷಿತೆಗೆ ಬಹಳ ಮುಖ್ಯವಾಗುತ್ತದೆ. ನಮ್ಮ ಹುಟ್ಟಿನಿಂದಲೂ ಮನೆ ಬಾಗಿಲು ಹಾಕಿಕೊಂಡರೆ ನಾವು "ಸುರಕ್ಷಿತರು" ಎಂಬ ಭಾವನೆ ನಮ್ಮೆಲ್ಲರಲ್ಲಿ ಬಿತ್ತಿ ಬೆಳೆದಿದೆ. ಅಷ್ಟರ ಮಟ್ಟಿಗೆ ನಮಗೆ ಬಾಗಿಲಿನ ಮೇಲಿನ ನಂಬಿಕೆ ಹಾಗೂ ಅವಲಂಬನೆ ಇದೆ.
ಹೆಚ್ಚಾಗಿ ಎಲ್ಲಾ ಮನೆಗಳಲ್ಲೂ ಮುಂಬಾಗಿಲು, ಹಿಂಬಾಗಿಲು, ವಾಸ್ತು ಬಾಗಿಲು, ಕೋಣೆ ಬಾಗಿಲು, ಬಚ್ಚಲು ಮನೆ ಬಾಗಿಲು, ಸಂಡಾಸು ಮನೆ ಬಾಗಿಲು, ಕಿಟಕಿ ಬಾಗಿಲು ಎಂದು ಹಲವಾರು ಬಾಗಿಲಿರುತ್ತವೆ. ಹಳ್ಳಿ ಮನೆಗಳಲ್ಲಿ ವಾಸ್ತು ಬಾಗಿಲಿನ ಮೇಲೆ ಅದ್ಭುತವಾದ ಕೆತ್ತನೆ ಇರುತ್ತದೆ. ಅದಕ್ಕಾಗಿ ಬಹಳಷ್ಟು ಹಣ ವ್ಯಯಿಸುತ್ತಾರೆ. ಮನೆಯ ಮುಖ್ಯ ಲಕ್ಷಣವೇ ಆ ವಾಸ್ತು ಬಾಗಿಲು ಎನ್ನುವುದು ಹಿರಿಯರ ಅಂಬೋಣ. ವಾಸ್ತು ಬಾಗಿಲು ಬಹಳ ತಗ್ಗಾಗಿರುತ್ತದೆ. ಮನೆಯೊಳಗೆ ಹೋಗುವವರು ತಲೆ ತಗ್ಗಿಸಿ ಹೋಗಬೇಕೆಂದು ಅದರ ಅರ್ಥ. ವಿನಯ, ವಿಧೇಯತೆ ಎನ್ನುವುದನ್ನು ನಾವು ತಗ್ಗಿಬಗ್ಗಿ ನಡೆದು ರೂಢಿಸಿಕೊಳ್ಳಬೇಕೆಂಬ ತಮ್ಮ ಅಪೇಕ್ಷೆಯನ್ನು ಹಿರಿಯರು ಈ ಮೂಲಕ ಸೂಚಿಸುತ್ತಾರೆ.
ಹೆಚ್ಚಾಗಿ ಎಲ್ಲರ ಮನೆಗಳಲ್ಲಿ ಮರದ ಬಾಗಿಲುಗಳಿರುತ್ತವೆ. ವಾಸ್ತು ಬಾಗಿಲಿಗೆ ಹಲಸು ಅಥವಾ ಉತ್ತಮ ಜಾತಿಯ ಮರವನ್ನು ಬಳಸುತ್ತಾರೆ. ಮರದ ಬಾಗಿಲಿನ ಸಮಸ್ಯೆ ಎಂದರೆ ಮಳೆಗಾಲದಲ್ಲಿ ಮರ ಹಿಗ್ಗಿ ಬಾಗಿಲು ಹಾಕುವುದು ಹಾಗೂ ತೆಗೆಯುವುದು ತ್ರಾಸದಾಯಕವಾಗುತ್ತದೆ. ಮೊದಲೆಲ್ಲ ಬಾಗಿಲಿಗೆ ಲೋಹದ ಚಿಲಕ ಅಥವಾ ಮರದ ಚಿಲಕವನ್ನು ಬಳಸುತ್ತಿದ್ದರು. ಈಗೆಲ್ಲಾ ಬಾಗಿಲೊಳಗೇ ಫಿಕ್ಸ್ ಮಾಡಿರುವ ಇಂಟರ್ನಲ್ ಲಾಕ್ ಬಳಸುತ್ತಾರೆ. ಈಗಂತೂ ಸೆನ್ಸರ್ ಗಳಿಂದ ಕೆಲಸ ಮಾಡುವ ಬಾಗಿಲ ಚಿಲಕಗಳು ಬಂದಿದ್ದಾವೆ.
ಬಾಗಿಲು ಎಂದ ತಕ್ಷಣ ನನಗೆ ನೆನಪಾಗುವುದು ನವೋದಯದ ನಮ್ಮ ಕ್ವಾರ್ಟರ್ಸ್ ಗಳ ಬಾಗಿಲುಗಳು! ನವೋದಯದಲ್ಲಿದ್ದಾಗ ನಮಗೆ ವಿಶಾಲವಾದ ಕ್ವಾರ್ಟರ್ಸ್ ಕೊಟ್ಟಿದ್ದರೂ ಅವುಗಳಿಗೆಲ್ಲ ಕಬ್ಬಿಣದ ತಗಡಿನ ಬಾಗಿಲುಗಳಿದ್ದವು. ವರ್ಷಗಳು ಸಂದಂತೆ ಆ ಬಾಗಿಲುಗಳು ತುಕ್ಕು ಹಿಡಿದು ಅಧೋಗತಿಗೆ ಬಂದಿದ್ದವು. ಬಾತ್ರೂಂ ಹಾಗೂ ಟಾಯಿಲೆಟ್ ಬಾಗಿಲುಗಳಂತೂ ಅರ್ಧರ್ಧ ಉದುರಿ ಹೋಗುವ ಸ್ಥಿತಿಗೆ ಬಂದಿದ್ದವು. ಪ್ರತಿ ಬಾರಿ ಬಾಗಿಲು ತೆಗೆದು ಹಾಕಿದಾಗ ಬಾಗಿಲಿನ ಒಂದೊಂದು ತುಂಡು ಉದುರಿ ಬೀಳುತ್ತಿದ್ದವು. ನಂತರದಲ್ಲಿ ನಾವು ಆ ಬಾಗಿಲುಗಳಿಗೆ ತಗಡು ಬಡಿದು ರಿಪೇರಿ ಮಾಡಿಕೊಳ್ಳುತ್ತಿದ್ದೆವು. ಮಳೆನೀರು ರಾಚುತ್ತಿದ್ದ ಕ್ವಾರ್ಟರ್ಸ್ ಗಳಲ್ಲಿ ಮುಂಬಾಗಿಲುಗಳ ಕಥೆಯೂ ಹಾಗೇ ಆಗಿತ್ತು. ಕ್ವಾರ್ಟರ್ಸ್ ಚೆನ್ನಾಗಿದ್ದರೂ ಬಾಗಿಲುಗಳೇ ಸಮಸ್ಯೆಯಾಗಿದ್ದವು. ಹೀಗೆ ಮನೆಯ ಕಟ್ಟೋಣದಲ್ಲಿ ಸರಿಯಾದ ಬಾಗಿಲುಗಳು ಬಹಳ ಮುಖ್ಯ ಎನ್ನುವುದು ಆ ಕ್ವಾರ್ಟರ್ಸ್ ಗಳು ನಮಗೆ ಅರಿವನ್ನು ಮೂಡಿಸಿದವು🤔


೨೪೭. ನೆನಪುಗಳು - ಕೇಕ್(1/1/2021)


ಕೇಕ್ ಎನ್ನುವ ಪದ ಕೇಳಿದೊಡನೆ ನೀರೊಡೆಯುವ ಬಾಯಿಗಳು ಬಹಳಷ್ಟಿವೆ. ಕೇಕ್ ಅಂತಹ ಸೆಳೆತವನ್ನು ನಮ್ಮೆಲ್ಲರಲ್ಲೂ ಹುಟ್ಟಿಸುತ್ತದೆ. ಎಷ್ಟೇ ರುಚಿಕರವಾದ ಸಿಹಿತಿಂಡಿ ಇದ್ದರೂ ಕೆಲವೊಮ್ಮೆ ಕೇಕಿನ ಮುಂದೆ ಅವು ನಗಣ್ಯವೆನಿಸಿ ಬಿಡುತ್ತವೆ. ಅಂತಹ ಪ್ರಭಾವಶಾಲಿ ಖಾದ್ಯ ಕೇಕ್. ಇದೊಂದು ಜಾಗತಿಕ ತಿನಿಸು ಎನ್ನುವುದು ಎಲ್ಲರೂ ಒಪ್ಪುವ ವಿಷಯ.
ಕೇಕ್ ನಾನಾ ಆಕಾರ, ಸ್ವಾದಗಳಲ್ಲಿ ಸಿಗುತ್ತದೆ. ನನಗೆ ಕ್ರೀಂ ಕೇಕಿಗಿಂತ ಪ್ಲಂ ಕೇಕ್ ಇಷ್ಟ. ಅದಕ್ಕೊಂದು ಕಿರುಕಹಿ ಹಾಗೂ ಹದವಾದ ಸಿಹಿಯ ಸ್ವಾದವಿರುತ್ತದೆ. ಕ್ರೀಂ ಕೇಕಿನಲ್ಲಿ ಸಿಹಿ ಹಾಗೂ ಕ್ರೀಂ ನ ಜಾಸ್ತಿ ಇರುವ ಕಾರಣ ನನಗೆ ಅದು ಅಷ್ಟು ರುಚಿಸುವುದಿಲ್ಲ.
ಕೇಕ್ ಅನ್ನು ಮೈದಾ ಹಿಟ್ಟು, ಕೊಬ್ಬು, ಸಕ್ಕರೆ ಹಾಗೂ ಇನ್ನಿತರ ವಸ್ತುಗಳನ್ನು ಹಾಕಿ ಬೆರೆಸಿ ಬೇಕ್ ಮಾಡುತ್ತಾರೆ. ಅದಕ್ಕೆ ಸಾಮಾನ್ಯವಾಗಿ ಮೊಟ್ಟೆಯನ್ನು ಹಾಕುತ್ತಾರೆ. ಮೊಟ್ಟೆ ಸೇರಿಸದೆ ಮಾಡಿದ ಕೇಕ್ ಕೂಡಾ ದೊರೆಯುತ್ತದೆ.
ನಾನು ಮೊತ್ತ ಮೊದಲಿಗೆ ಕೇಕಿನ ರುಚಿ ನೋಡಿದ್ದು ನನ್ನ ಕ್ರಿಶ್ಚಿಯನ್ ಗೆಳತಿಯರ ಮನೆಯ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ. ಪ್ರಪ್ರಥಮವಾಗಿ ನಾನು ತಿಂದಿದ್ದು ಪ್ಲಂ ಕೇಕ್ ಆದ ಕಾರಣ ನನಗದು ಬಹಳ ರುಚಿಸಿತು. ಆಗೆಲ್ಲಾ ಈಗಿನಂತೆ ಈಗಿನಷ್ಟು ವೈವಿಧ್ಯಮಯವಾದ ಕೇಕ್ ಗಳು ಸಿಗುತ್ತಿರಲಿಲ್ಲ. ಕೇವಲ ಕೆಲವೇ ಬಗೆಯ ಕೇಕ್ ಗಳು ದೊರೆಯುತ್ತಿದ್ದವು. ಹಾಗೆಯೇ ಆಗಿನ ಕಾಲದಲ್ಲಿ ಆಯ್ದ ಸಂದರ್ಭಗಳಲ್ಲಿ ಮಾತ್ರ ಕೇಕ್ ತಿನ್ನುತ್ತಿದ್ದರು. ಈಗಿನಂತೆ ಎಲ್ಲವುದಕ್ಕೂ ಕೇಕ್ ಅನ್ನು ಬಳಸುವ ಕ್ರಮ ಆಗ ಇರಲಿಲ್ಲ. ಈಗಾದರೋ ಹುಟ್ಟಿದ ಹಬ್ಬಕ್ಕೆ, ಮದುವೆಗೆ, ಮದುವೆ ವಾರ್ಷಿಕೋತ್ಸವಕ್ಕೆ, ಹಬ್ಬಕ್ಕೆ, ಗೆಟ್ ಟುಗೆದರ್ ಗೆ, ಸೆಂಡ್ ಆಫ್ ಗೆ, ಹೊಸ ವರ್ಷದ ಆಚರಣೆಗೆ, ಶುಭಾಶಯ ಕೋರಲಿಕ್ಕೆ... ಹೀಗೆ ಕೂತು ನಿಂತದ್ದಕ್ಕೆಲ್ಲ ಕೇಕ್ ನ ಬಳಕೆಯಾಗುತ್ತದೆ. ಅದನ್ನು ತಿನ್ನುವುದಕ್ಕಿಂತ ಅದರ ಕ್ರೀಂ ಅನ್ನು ಮುಖ ಮೂತಿಗೆ ಹಚ್ಙಲು ಬಳಸಲಾಗುತ್ತದೆ😀
ಈಗೀಗಂತೂ ಹತ್ತಾರು ಅಡಿಗಳ, ವಿಚಿತ್ರ ಆಕಾರಗಳ ಕೇಕ್ ಗಳನ್ನು ತಮ್ಮ ಕಲಾ ಚಾತುರ್ಯವನ್ನು ತೋರಿಸಲು ಜನ ತಯಾರಿಸುತ್ತಾರೆ. ಅವುಗಳನ್ನು ನೋಡಲು ಮಾತ್ರ ಅವಕಾಶವಿರುತ್ತದೆ. ಅದನ್ನೊಂದು ಕಲಾಕೃತಿಯಾಗಿ ನೋಡಿ ಖುಷಿ ಪಡುವ ಸೌಭಾಗ್ಯವಷ್ಟೇ ನಮ್ಮದಾಗಿರುತ್ತದೆ.
ಕೇಕ್ ಗಳಲ್ಲಿ ಕಪ್ ಕೇಕ್, ಸ್ಪಾಂಜ್ ಕೇಕ್, ಪೊಟ್ಯಾಟೊ ಕೇಕ್, ಹನಿ ಕೇಕ್, ಚೀಸ್ ಕೇಕ್, ಪೇಸ್ಟ್ರಿ ಎಂಬ ಹತ್ತಾರು ಬಗೆಗಳಿವೆ. ತಿನ್ನಲು ಎಲ್ಲವೂ ಒಂದಕ್ಕಿಂತ ಒಂದು ರುಚಿ. ಬೇಕರಿಯ ಗಾಜಿನ ಕಪಾಟಿನೊಳಗೆ ಅವುಗಳನ್ನು ನೋಡುವಾಗ ಅವುಗಳ ವರ್ಣವೈವಿಧ್ಯತೆ ನೋಡಿ ಬೇಡವೆಂದರೂ ಬಾಯಿಯಲ್ಲಿ ನೀರೂರುತ್ತದೆ. ಮನಸ್ಸಿಗೂ ಮುದ ನೀಡಿ ಬಾಯಿಗೂ ರುಚಿ ನೀಡುವ ಕೇಕ್ ಮಕ್ಕಳಿಂದ ವಯೋವೃದ್ಧರವರೆಗೆ ಎಲ್ಲರಿಗೂ ಸಲ್ಲುವ ಖಾದ್ಯ ಎಂದರೆ ಒಪ್ಪುತ್ತೀರಲ್ಲವೆ?


No comments:

Post a Comment