Saturday, January 9, 2021

ಕುದುರೆ ಬಂತು ಕುದುರೆ - ಕನ್ನಡ ನಾಟಕ

 ಶನಿವಾರ, ಜನವರಿ 9, 2021 

ಯು ಟ್ಯೂಬ್ ಲೈವ್ ಮೂಲಕ 


ಇಂದು ರಂಗಶಂಕರದಲ್ಲಿ ನಾಟಕ ನೋಡುವಯೋಚನೆ ಇತ್ತು. ಆದರೆ ಇಲ್ಲಿಂದ ಹೋಗಿ ಬರುವುದು  ಸಾಹಸ ಎನಿಸಿ ಅದನ್ನು ಕೈ ಬಿಟ್ಟದ್ದಾಯಿತು.




ಅದರೂ ಸಂಜೆ ಯೂ ಟ್ಯೂಬ್ ಲೈವ್ ನಲ್ಲಿ ಬರುವ ನಮ್ಮ "ಅಭಿಲಾಷ" ನಟಿಸಿರುವ ಮೇಲಿನ ನಾಟಕ ನೋಡುವ ಅವಕಾಶ ಆಯಿತು. 

ಸಭಾ ಕಾರ್ಯಕ್ರಮ ಮುಗಿದು ಸುಮಾರು 7.20 ರ ನಾಟಕ ಪ್ರಾರಂಭವಾಯಿತು.

ಆಕೆ ಹಳ್ಳಿಯೊಂದರಲ್ಲಿ ಸಣ್ಣ ಹೋಟೆಲೊಂದನ್ನು ನಡೆಸಿ, ತನ್ನ ಸಣ್ಣ ಮಗನೊಂದಿಗೆ ಜೀವನ ನಡೆಸುತ್ತಿರುವ ಹೆಂಗಸು. ಗಂಡ ಅವಳನ್ನು ಬಿಟ್ಟು ಹೋಗಿ ಹಲವು ವರ್ಷಗಳೇ ಕಳೆದಿತ್ತು.


ಸಿನೆಮಾ ತಂಡದಿಂದ ಬಂದ ಸಣ್ಣ ಚಿತ್ರ ನಟ ಒಬ್ಬ ಹೋಟೆಲಿಗೆ ಬಂದು, ಅವನು ಹೆಂಡತಿ ಮಗನನ್ನು ಬಿಟ್ಟು ಬಂದ ವಿಚಾರ, ಪುಟ್ಟ ಬಾಲಕನ ಓಡಾಟ, ಪೋಸ್ಟ್ ಮ್ಯಾನ್, ಕ್ಲರ್ಕು, ಮಾಸ್ತರು, ಇವರ ಅಭಿನಯ ಅಭಿನಂದನಾರ್ಹ.


ಜಗಳಗಳು ಸ್ವಲ್ಪ ಜಾಸ್ತಿ ಅದಂತೆ ಅನಿಸಿತು. ಆದರೆ, ಶಾಲೆಗೆ ಹೋಗುವ ಪುಟ್ಟ ಬಾಲಕನನ್ನು ಸಂಭಾಳಿಸಿ , ಜೀವನ ನಡೆಸುವ ಆಕೆಯ ಆಶೋತ್ತರಗಳು, ಒಂದೆರಡು  ಬಾರಿ ಆಕೆಯ ವಿಚಲಿತ ಮನಸ್ಸು, ಗಂಡ ಬರುವನು ಎಂಬ ಭರವಸೆಯ ಜೀವನ ಮನ ಮುಟ್ಟುವಂತಿತ್ತು.


ರಂಗ ವಿನ್ಯಾಸ, ಬೆಳಕು, ಸಂಗೀತ ಎಲ್ಲವೂ ಚೆನ್ನಾಗಿತ್ತು.


ಶ್ರಮ ವಹಿಸಿದ ಎಲ್ಲರಿಗೂ ಅಭಿನಂದನೆಗಳು.


https://www.youtube.com/watch?fbclid=IwAR0gaAZqIeH2xctQLr9sMz8cNCV_eblB83AyuF6EbUJLyj0ri0EqrO2y83M&v=ZbFtd4lsIRw&feature=youtu.be

ರಮೇಶ್ ಗುಲ್ವಾಡಿ ಅವರಿಂದ :

#ಕುದುರೆ_ಬಂತು_ಕುದುರೆ
ಬಹಳ ದಿನಗಳೇ ಆಗಿಬಿಟ್ಟವು !
ರಂಗಭೂಮಿಯನ್ನು ಆವರಿಸಿದ್ದ ಸೂತಕದ ಕಳೆ ನಿಧಾನವಾಗಿ ಮಾಸತೊಡಗಿದೆ....
ನಾಟಕಗಳ ಮೂಲಕ ಸಮಾಜವನ್ನು ಬದಲಾಯಿಸುವ ಆಲೋಚನೆ ಒತ್ತಟ್ಟಿಗಿಟ್ಟು ಒಂದಿಷ್ಟು ಚಿಂತನೆಗೆ ಹಚ್ಚುವ ಕನಿಷ್ಟ ಪ್ರಯತ್ನವಾದರೂ ಆಗಬೇಕು ಎಂಬ ತುಡಿತವೋ ಅಥವಾ ರಂಗ ರಸಿಕರ ಭಾವ ನಿರ್ವಾತವನ್ನು ತುಂಬುವ ಸೆಳೆತವೋ ತಿಳಿಯದು, ಒಂದು ರಂಗ ಪ್ರಯೋಗ ಆಗಿಯೇಬಿಟ್ಟಿತಲ್ಲಾ ಎಂಬ ಸಂತಸ ನನಗೆ !
"ಕೋಶಿಕಾ ಚೇರ್ಕಾಡಿ" ಬಳಗ ಕೈಗೆತ್ತಿಕೊಂಡ #ರಾಮಚಂದ್ರ_ದೇವಾ ರವರ ನಾಟಕ #ಕುದುರೆ_ಬಂತು_ಕುದುರೆ ಯನ್ನು ಯೂ ಟ್ಯೂಬ್ ಲೈವ್ ಮೂಲಕ ನೋಡಿದಾಗ ಮನಸು ಅರಳಿತು.
ಭ್ರಮೆಗಳ ಬೆನ್ನು ಹತ್ತುವ ಮನುಷ್ಯ ಸಹಜ ಗುಣ ಬೇರೆ ಬೇರೆ ವ್ಯಕ್ತಿತ್ವಗಳ ಮೂಲಕ ಮೂರ್ತವಾಗುತ್ತಾ ಒಂದು ಆತ್ಮ ವಿಮರ್ಶೆಯ ಅಂತ್ಯ ಪಡೆಯುವ ನಡುವೆ ವರ್ಣರಂಜಿತವಾಗಿ ದೃಶ್ಯವಾಗುವ ಪರಿಗೆ ನಿರ್ದೇಶಕ #ರೋಹಿತ್_ಬೈಕಾಡಿಯವರನ್ನು ಅಭಿನಂದಿಸಲೇಬೇಕು.
ನಾಟಕ ಸರಳವಾದದ್ದೇನೂ ಅಲ್ಲ !
ಆರಂಭದಿಂದ ಅಂತ್ಯದವರೆಗಿನ ಲಯವನ್ನು ಒಂದೇ ಹಿಡಿತದಲ್ಲಿ ನಿಯಂತ್ರಿಸುವ ವಿನ್ಯಾಸವೇ ಒಂದು ಸವಾಲಿನಂತಿದೆ.
ಸಾಮಾಜಿಕ ನಾಟಕಗಳ ಛಾಯೆಯನ್ನು ಮೀರಿ ನಾಟಕವು ತಾರ್ಕಿಕ ಮಜಲನ್ನು ಪ್ರವೇಶಿಸುವ ಶೈಲಿ ಗಮನಾರ್ಹ. ಪ್ರತಿಯೊಂದು ಪಾತ್ರ ತನ್ನೊಳಗೆ ಒತ್ತಿಟ್ಟುಕೊಂಡಿರುವ ಭಾವ ತೀವ್ರತೆಯನ್ನು ಸ್ಫೋಟಿಸುವ ಮೂಲಕ ರಂಗದಲ್ಲಿ ಮೂಡುವ ಕೌತುಕ ಒಂದು ದೀರ್ಘ ಮೌನದ ಬಳಿಕದ ನಿಟ್ಟುಸಿರಿನಂತೆ ನನ್ನೊಳಗನ್ನು ತಟ್ಟಿದ್ದು ನಿಜ!
ಇಲ್ಲಿನ ಸಿನಿಮಾ ಶೂಟಿಂಗು,ಲಾಟರಿಯ ಬಹುಮಾನ, ಬಾರದ ಮಳೆಯ ನಿರೀಕ್ಷೆ,ಸಿಗದ ವರ್ಗಾವಣೆಯ ಕನಸು ಮತ್ತು ಬಿಳಿ ಕುದುರೆ ಹತ್ತಿ ಬರುವ ಗಂಧರ್ವ .... ಎಲ್ಲವೂ ಮರೀಚಿಕೆಗಳ ಸುತ್ತಲಿನ ಪರಿಭ್ರಮಣದಂತೆ ಕಾಡುತ್ತವೆ.
#ಕೌಸ್ತುಭ_ಹೇರ್ಳೆ ಸಂಗೀತದ ಮೂಲಕ ದೃಶ್ಯಗಳನ್ನು ಮತ್ತಷ್ಟು ಅರ್ಥಪೂರ್ಣ ಗೊಳಿಸಿದರು ಅನಿಸುತ್ತದೆ.
ಬೆಳಕಿನ ಮೂಲಕ ಕತ್ತಲೆಯನ್ನು ಮೌಲ್ಯಯುತಗೊಳಿಸುವ #ರಾಜು_ಮಣಿಪಾಲ್ ಕೈ ಚಳಕ ಸನ್ನಿವೇಶಗಳ ಚಿತ್ರಣವನ್ನು ವಿಶಿಷ್ಟಗೊಳಿಸಿದೆ.
ನಾಟಕದುದ್ದಕ್ಕೂ ರಂಗವನ್ನು ಆಸ್ವಾದಿಸುತ್ತಾ ಆಕ್ರಮಿಸುವ ಆ ಪುಟ್ಟ ಬಾಲಕ ಇಡೀ ನಾಟಕದ ಜೀವ ನಾಡಿಯಂತೆ, ಭ್ರಮೆ ಮತ್ತು ವಾಸ್ತವಗಳ ನಡುವಿನ ದಿನಚರಿಯಂತೆ ಕಳೆಗಟ್ಟಿದ್ದಾನೆ.
ಗಂಭೀರ ಪಾತ್ರವಾಗಿ ತಾಯ್ತನ ಮತ್ತು ಜವಾಬ್ದಾರಿಯ ಜೊತೆಗೆ ಬಿಟ್ಟು ಹೋದ ಪತಿ ಮತ್ತೆ ಬಂದೇ ಬರುವನೆಂಬ ವಿಶ್ವಾಸದ ಪ್ರತಿಬಿಂಬವೆಂಬಂತೆ #ಅಭಿಲಾಷಾ ಮೇಡಂ ಪಾತ್ರ ಪೋಷಣೆ ನಾಟಕದುದ್ದಕ್ಕೂ ಬೆಳೆಯುತ್ತದೆ. ಸಂಯಮಭರಿತ ನಟನೆ ಆಕೆಯದು.
ಉಳಿದ ಪಾತ್ರಗಳು: ಪೋಸ್ಟ್ ಮ್ಯಾನ್, ಕ್ಲರ್ಕು, ಮಾಸ್ಟ್ರು, ಚಿತ್ರ ನಟ ಮತ್ತು ಕುರಿ ಸಾಕಿದವ ಹೀಗೆ ಪ್ರತಿಯೊಬ್ಬರೂ ತಮ್ಮ ಸುತ್ತ ಕಟ್ಟಿಕೊಂಡಿರುವ ಭ್ರಮೆಯೆಂಬ ಪರದೆಯಲ್ಲೇ ಸುಖಿಸುತ್ತಾ ನೀರ್ಗುಳ್ಳೆ ಒಡೆದಾಗ ನಿಜವನ್ನು ಜೀರ್ಣಿಸಿಕೊಳ್ಳಲಾಗದ ಸ್ಥಿತಿಯಲ್ಲೂ "ತನ್ನತನ" ವನ್ನು ಗುರುತಿಸಿಕೊಂಡ ನಟ ಮರಳಿ ತಾನು ಬಿಟ್ಟು ಬಂದ ಊರಿಗೆ ಹೊರಡುವುದು ಸುಖಾಂತ್ಯ....
ತುಂಬಾ ಖುಷಿಯಾಗಿದೆ #ಕೋಶಿಕಾ.....

ಬರೆದಿರುವುದು ಭಾನುವಾರ, 10/1/2021

No comments:

Post a Comment