ಶುಕ್ರವಾರ, 29 ಅಕ್ಟೋಬರ, 2021
ಕನ್ನಡ ಚಿತ್ರರಂಗದ ಮೇರು ನಟ, ಅಪಾರ ಅಭಿಮಾನಿಗಳನ್ನು ಹೊಂದಿದ 46 ವರ್ಷದ ತರುಣ,
( born 17 ಮಾರ್ಚ್ 197 5 ) ಪುನೀತ್ ರಾಜಕುಮಾರ್ ಅವರು ತೀವ್ರ ಹೃದಯಾಘಾತದಿಂದ ವಿಧಿವಶರಾಗಿರುವುದು ಅತ್ಯಂತ ದುಖದ ಸಂಗತಿ.
ನಟಸಾರ್ವಭೌಮ ಡಾ ರಾಜಕುಮಾರ್ ಅವರ ಕಿರಿಯ ಪುತ್ರನಾಗಿದ್ದು, ಬಾಲ್ಯದಿಂದಲೇ ಹಲವಾರು ಚಿತ್ರಗಳಲ್ಲಿ ಅಭಿನಯಿಸಿ ಹೆಸರನ್ನು ಗಳಿಸಿದವನಾಗಿದ್ದು ಈ ವಯಸ್ಸಿನಲ್ಲಿ ಹಠಾತ್ ನಿಧನರಾಗಿರುವುದು ನಂಬಲಾರದ, ಅರಗಿಸಿಕೊಳ್ಳಲಾರದ ಸುದ್ದಿಯಾಗಿದೆ.
ಸದಾ ನಗುಮುಖದ, ಎಲ್ಲರೊಡನೆ ಸ್ನೇಹದಿಂದ ಬೆರೆಯುವ ಸ್ನೇನಜೀವಿ, ಮಾನವೀಯ ಮೌಲ್ಯಗಳಿಗೆ ಅಪಾರ ಗೌರವ ನೀಡುವ, ಸಮಾಜ ಸೇವೆಯ ಮೂಲಕ ಜನರ ಹೃದಯವನ್ನು ಗೆದ್ದ ನಟ ಪುನೀತ್ ರಾಜಕುಮಾರ ಇನ್ನಿಲ್ಲವಾಗಿರುವುದು, ತುಂಬಲಾರದ ನಷ್ಟವಾಗಿದೆ.
ಈ ಸಮಯದಲ್ಲಿ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸಿ, ಭಗವಂತನು ಅವರ ಆತ್ಮಕ್ಕೆ ಚಿರಶಾಂತಿಯನ್ನು ಕರುಣಿಸಲಿ ಎಂದು ಪ್ರಾರ್ಥನೆ.
|
ಬಾಲ ಪ್ರತಿಭೆ ಪುನೀತ್ |
ನಮನಗಳು:ಶ್ರೀಕಾಂತ ಪ್ರಸಾದ್
ನಿನ್ನ ನೆನಪೇ ಅಮರ ನಮ್ಮ ಪುನೀತ
ಬಣ್ಣದಾ ಬದುಕಲ್ಲಿ ಕಾಲಿಟ್ಟ ಗಳಿಗೆಯದು
ಬಣ್ಣನೆಗೂ ಸಿಗದಿಂದು ಕೊನೆಯ ದಿವಸದಲಿ
ಅಣ್ಣಂದಿರಿರುವಾಗ ತಮ್ಮನಿಗೆ ಸೂಳಾಯ್ತೆ
ಕಣ್ಣ ಮುಂದಿನ ಬೊಂಬೆ ಇಲ್ಲವಾಯ್ತೆ||
ಅಕ್ಕರೆಯ ಮಗನಾಗಿ ಸಕ್ಕರೆಯ ಸವಿ ನೀಡಿ
ಕಕ್ಕುಲತೆಯಿಂದೆಲ್ಲ ಮಾತನಾಡುತಲಿ
ಬಿಕ್ಕು ತಾ ಬರುವಂತೆ ಮಾಡಿ ಹೋದೆಯ ಅಪ್ಪು
ದಿಕ್ಕೆಟ್ಟ ಅಭಿಮಾನಿಗಳದೇನು ತಪ್ಪು||
ಪ್ರೇಮದಾ ಕಾಣಿಕೆಯೊ ಭಕ್ತ ಪ್ರಹ್ಲಾದನೋ
ಭೂಮದಲಿ ಕಂಡೆ ನಾ ಬೆಟ್ಟದಾ ಹೂವು
ರಾಮನಂತೆಯೆ ಬದುಕಿ ಭೀಮನಂತೆಯೆ ಬಾಳಿ
ಶಾಮನಂತೆಯೆ ಎಲ್ಲಿ ಕಾಣದಾದೆ||
ಕುಡಿದ ಹಾಲದು ತುಟಿಯ ಮೇಲಿನ್ನೂ ಮಾಸದಿಹ
ಮಿಡಿದ ನಗುವದು ಮೊಗದಿ ಬಾಡಿಲ್ಲವಿನ್ನೂ
ಕುಡಿಯ ಕಡೆ ಬಾಡಿತದು ಏಕೊ ಅರಿವಾಗದಿದೆ
ಕಡೆಯ ಮಗ ಮೊದಲಾದ ಸಾವ ಮನೆಗೆ||
ಎಷ್ಟೊಂದು ಶಾಲೆಗಳು ವೃದ್ಧಾಶ್ರಮಗಳಿವೆಯೊ
ಅಷ್ಟೇ ಅನಾಥರಿಗೆ ಬಡವರಿಗೆ ದಾನಿ
ಎಷ್ಟು ಮಾಡಿದರೇನು ಅಷ್ಟು ಪುಣ್ಯದ ಜೊತೆಗೆ
ಇಷ್ಟೇಕೆ ಬೇಗ ತೆರಳಿದೆಯೊ ನೀನು||
ರಾಜಣ್ಣನಿದ್ದಾಗ ಬೇರೇನೂ ಬೇಕಿಲ್ಲ
ರಾಜನಳಿದಂದು ನೀ ಯುವರತ್ನವಾದೆ
ರಾಜನಂತೆಯೆ ಬದುಕಿ ರಾಜಿಸಿದೆ ಕೀರ್ತಿಯಲಿ
ರಾಜನಿಗು ಬರಬಹುದೆ ಬೇಗ ಸಾವು||
ನಿನ್ನ ನೆನಪಲಿ ಸಿನಿಮ ಕತೆಗಳನು ಹೇಳುತಿವೆ
ನಿನ್ನ ಅಗಲಿಕೆಯಲ್ಲಿ ಪಾತ್ರಗಳು ಉಳಿದು
ನಿನ್ನ ವ್ಯಕ್ತಿತ್ವವದು ಜನರಮನದಲಿ ತಾನು
ಚಿನ್ನವಾಗುಳಿಯುವುದು ಅಪ್ಪಿನಿಂದು||
ಹೋಗಿ ಬಾ ಲೋಹಿತನೆ ಹರಿಶ್ಚಂದ್ರಕಥೆಯಲಿ
ಸಾಗಿ ಬಂದಂತೆ ಜೀವವದು ಬರಬಹುದೆ
ಕೂಗಿ ಕರೆದರು ನೀನು ಬಾರದಿಹ ಲೋಕಕ್ಕೆ
ಸಾಗಿದೆ ಪುನೀತನೊಲು ಪುಣ್ಯವಾಗಿ||
ಅಗಲಿದ ಪುನೀತ್ ರಾಜ್ ಕುಮಾರ್ ಗೆ ಕಾವ್ಯ ನಮನ.
ಭಾವಪೂರ್ಣ ಶ್ರದ್ಧಾಂಜಲಿ.
© ತನಾಶಿ.
ನಗುಮೊಗದ ಸರದಾರ
ನಗುವ ಹಂಚಿದ ಧೀರ
ಪ್ರತಿಭೆಗಳ ಮಹಾ ಆಗರ
ಸೇವೆಯಲಿ ಅಗ್ರೇಸರ
ನೀನೇಕೆ ಸಾಗಿದೆ ಬಲುದೂರ?!!
ಹಮ್ಮಿಲ್ಲದ ವಿನಯ ಸೌಜನ್ಯ
ನಿನ್ನ ಹಡೆದ ಪಡೆದವರೆಷ್ಟು ಧನ್ಯ
ಕರುನಾಡ ಕಣ್ಮಣಿ ಮಾನ್ಯ
ನೀನೆಲ್ಲ ನಾಯಕರಲಿ ಅನನ್ಯ
ಪದಗಳು ಸಾಲದು ಬಣ್ಣಿಸಲು ಗಣ್ಯ!
ಕೋಟಿ ಜನಮನ ಗೆದ್ದವ
ಮಾನವೀಯತೆ ಮೆರೆದವ
ಶುದ್ಧ ಅಂತಃಕರಣದವ
ಜನಮಾನಸದಿ ನೆಲೆನಿಂತವ
ಭಗವಂತಗೆ ಅತಿಪ್ರಿಯನಾದವ!!
ಪುನೀತ ಹೆಸರಿಗೆ ಅನ್ವರ್ಥಕ
ಬಾಳಿ ನಡೆದೆ ಅವಸರದಿ ಪರಲೋಕ
ಅನಂತದಲಿ ಲೀನವಾಗುತ ನಾಕ
ಪದಗಳಿಲ್ಲ ಪ್ರಕಟಿಸಲು ಈ ಶೋಕ
ಹುಟ್ಟಿ ಬಾ ಮತ್ತೊಮ್ಮೆ ಅಪ್ಪು** ಜನ ನಾಯಕ!!
ಯಶೋದಾ ಭಟ್ಟ ದುಬೈ
ಶ್ರೀ ಗಣೇಶ್ ರೈ ಅವರಿಂದ ಅಂತಿಮ ನಮನ
ಓಂ ಶಾಂತಿ, ಓಂ ಸದ್ಗತಿ ....
ಬರೆದಿರುವುದು ಶನಿವಾರ, 30 ಅಕ್ಟೋಬರ
No comments:
Post a Comment