13 March 2025
RIDING A BIKE - SHOBHA ARTICLE
ಇವತ್ತು ಸಂಜೆ ಕತ್ತಲಾಗುತ್ತಿರುವ ಹೊತ್ತಿಗೆ ಪೂರ್ಣ ಚಂದಿರನ ಬೆಳಕಿನಲ್ಲಿ ನನ್ನ ಮಗಳೊಡನೆ ಅವಳ ಬುಲೆಟ್ ನಲ್ಲಿ ನನ್ನ ಭಾವ ಕಿಟ್ಟಣ್ಣನ ಮನೆಗೆ ಪಯಣಿಸಿದ್ದೆ. ಹೆಚ್ಚೆಂದರೆ ಹತ್ತು ನಿಮಿಷಗಳ ಬೈಕ್ ರೈಡ್ ಅಷ್ಟೇ! ಆದರೆ ಬೈಕ್ ಹತ್ತಿದ್ದು, ಅವರ ಮನೆಯ ತನಕ ಒಂದೇ ಸೈಡಿನಲ್ಲಿ ಬೈಕಿನಲ್ಲಿ ಕುಳಿತಿದ್ದು, ಬೈಕ್ ಇಳಿದಿದ್ದು ನನ್ನ ಮಹಾ ಸಾಧನೆಯಾಗಿ ನನಗೆ ತೋರಿತು. ನನ್ನ ಹರೆಯದ ದಿನಗಳಲ್ಲಿ ನಮ್ಮ ಬಳಿ ಇದ್ದ ಹೀರೊ ಹೋಂಡಾ ಬೈಕಿನಲ್ಲಿ ಮಕ್ಕಳಿಬ್ಬರು ಹಾಗೂ ಲಗೇಜ್ ಸಮೇತ ನೂರು ಕಿಮೀ ವೇಗದಲ್ಲಿ ರಸ್ತೆಯಲ್ಲದ ರಸ್ತೆಗಳಲ್ಲಿ ನಾನು ಮತ್ತು ರವಿ ಸುತ್ತುತ್ತಿದ್ದ ದಿನಗಳ ನೆನಪಾಯಿತು. ಎಷ್ಟು ಸಂತೋಷದ ದಿನಗಳವು! ಬರುತ್ತಿದ್ದ ಅಲ್ಪ ಸಂಬಳದಲ್ಲಿಯೇ ಸ್ನೇಹಿತರೊಡಗೂಡಿದ ದೊಡ್ಡ ಕುಟುಂಬದಲ್ಲಿ ಸಂತೋಷವಾಗಿ ಕಳೆಯುತ್ತಿದ್ದ ದಿನಗಳವು! ದೊಡ್ಡ ಕನಸುಗಳಿಲ್ಲದ, ದೊಡ್ಡ ಬಯಕೆಗಳಿಲ್ಲದ, ಇದ್ದುದರಲ್ಲೇ ತೃಪ್ತಿ - ಸಂತೋಷ ಕಂಡುಕೊಂಡಿದ್ದ ದಿನಗಳವು! ಈ ಬೈಕ್ ರೈಡಿನಲ್ಲಿ ಅವೆಲ್ಲಾ ಒಮ್ಮೆ ನನ್ನ ಕಣ್ಣ ಮುಂದೆ ಹಾಯ್ದು ಹೋದವು.
ಇವತ್ತು ವಿಪರೀತವಾದ ತಡೆಯಲಾರದ ಸೆಖೆಯಿತ್ತು. ಗಾಳಿಗೆ ಮೈಯೊಡ್ಡಿ ಸಾಗಿದ ಆ ಬೈಕ್ ರೈಡ್ ನನ್ನ ಮೈಮನಗಳನ್ನು ತಂಪುಗೊಳಿಸಿತು. ನನ್ನ ಮಗಳು ಒಳ್ಳೆಯ ಬೈಕ್ ರೈಡರ್. ಅವಳ ಜೊತೆ ಕೂತು ಹೋಗುವಾಗ ಯಾವುದೇ ಅಳುಕಿರುವುದಿಲ್ಲ. ಅವಳು ಸುರಕ್ಷಿತವಾಗಿ ಗುರಿ ಮುಟ್ಟಿಸುತ್ತಾಳೆ ಎನ್ನುವ ಧೈರ್ಯದಲ್ಲಿ ಅವಳ ಹಿಂದೆ ಕೂತು ಸಾಗಬಹುದು.ನಾನು ಬೈಕನ್ನು ಹತ್ತಲು ಧೈರ್ಯ ಕೊಟ್ಟ ಇನ್ನೊಂದು ವಿಷಯವೇನೆಂದರೆ ಕಳೆದ ಮೂರು ತಿಂಗಳಿನಿಂದ ಬೆಳಿಗ್ಗೆ ನಾನು ಮಾಡುತ್ತಿರುವ ಸೌರಭ್ ಬೋತ್ರಾ ನಿರ್ದೇಶಿತ ಯೋಗ ಮತ್ತು ಲಘುವಾದ ಎಕ್ಸರ್ಸೈಜ್. ಕೆಳಗೆ ಕುಳಿತುಕೊಳ್ಳಲು ಒದ್ದಾಡುತ್ತಿದ್ದ ನನಗೆ ಬೋತ್ರಾ ಅವರ ಸೆಷನ್ ಬಹಳ ಪ್ರಯೋಜನಕಾರಿಯಾಗಿದೆ. ದೇಹದ ಎಲ್ಲಾ ಭಾಗಗಳು ಫ್ಲೆಕ್ಸಿಬಲ್ ಆಗುತ್ತಿವೆ. ಹೀಗಾಗಿ ನಾನು ಬೈಕ್ ಹತ್ತಿ ಕೂರುವ ಧೈರ್ಯ ಮಾಡಿದ್ದು!
ಅಂತೂ ಇಂತೂ ಇಂದಿನ ಬೈಕ್ ರೈಡ್ ಇಂದಿನ ಸೆಖೆಯ ಧಗೆಯನ್ನು ಕಡಿಮೆ ಮಾಡಿದ್ದಲ್ಲದೆ ನನ್ನ ದೇಹದ ಫ್ಲೆಕ್ಸಿಬಿಲಿಟಿಯ ಬಗ್ಗೆ ನನಗೆ ಆತ್ಮವಿಶ್ವಾಸ ನೀಡಿದ್ದಂತೂ ನಿಜ. ನನ್ನ ಒಲೆಯುವ ದೇಹವನ್ನು ಕೂರಿಸಿಕೊಂಡು ಬೈಕ್ ಓಡಿಸಿದ ನನ್ನ ಮಗಳಿಗೆ ‘ಥ್ಯಾಂಕ್ಸ್’ ಹೇಳಬೇಕಲ್ವೆ?!
No comments:
Post a Comment