Thursday, February 19, 2026

ದೋಸೆಯ ಅವಾಂತರ - ಶೋಭಾ ಸೋಮಯಾಜಿ

 Thursday, Feb.20, 2026



ನಿನ್ನೆ ದೋಸೆ ಕಾವಲಿಯೊಡನೆ ನನ್ನ ‘ಉಗ್ರ ಹೋರಾಟ'ವಾಗಿತ್ತು. ಈಗ್ಗ್ಯೆ ನಾಲ್ಕೈದು ವರ್ಷಗಳ ಹಿಂದೆ ಆನ್ಲೈನ್ ನಲ್ಲಿ ಖರೀದಿಸಿದ ಆ ಇಂಡಸ್ ಕಂಪೆನಿಯ ಕಾವಲಿ ಚೆನ್ನಾಗಿಯೇ ಇದೆ. ನಿನ್ನೆ ಅದೇನಾಗಿತ್ತೋ ಏನೋ ಬಹಳ ಅಸಹಕಾರವನ್ನು ತೋರಿಸಿ ನನ್ನ ತಾಳ್ಮೆಯ ಪರೀಕ್ಷೆ ಮಾಡಿತು. ನನ್ನಪ್ಪ ಯಾವಾಗಲೂ “ತಣ್ಣೀರನ್ನಾದರೂ ತಣಿಸಿ ಕುಡಿಯಬೇಕು” ಎಂದು ಸದಾ ತಾಳ್ಮೆಯ ಪಾಠ ಮಾಡುತ್ತಿದ್ದರು. ಅವರ ಅವಿರತ ಪಾಠದಿಂದ ನಾನು ಬೆಳೆಸಿಕೊಂಡಿದ್ದ  ಆ  ‘ಅಲ್ಪ ತಾಳ್ಮೆ’ ನಿನ್ನೆ ಉಪಯೋಗಕ್ಕೆ ಬಂದಿತು

ನಾನು ವಾರದಲ್ಲಿ ಮೂರ್ನಾಲ್ಕು ದಿನ ವಿಧವಿಧದ ದೋಸೆ ಮಾಡುವವಳು. ಯಾರೋ ಕೊಟ್ಟ ಗಳಿತ ಪಚ್ಚಬಾಳೆ ಇದ್ದ ಕಾರಣ ನಿನ್ನೆ ಬಾಳೆಹಣ್ಣು ದೋಸೆ ಮಾಡಿದ್ದೆ. ಹಿಟ್ಟಿನಲ್ಲಿ ಅದ್ದಿ ಅದ್ದಿ ಬಾಳೆಹಣ್ಣಿನ ತೆಳುವಾದ ವರ್ತುಲಾಕಾರದ ತುಂಡನ್ನು ಕಾವಲಿಯ ಮೇಲೆ ಇಟ್ಟು, ಮೇಲೊಂದಿಷ್ಟು ತುಪ್ಪ ಹಾಕಿ, ಮುಚ್ಚಳ ಮುಚ್ಚಿ, ಅದು ಬೆಂದ ಮೇಲೆ ಮಗುಚಿ ಹಾಕಲು ಕಾವಲಿಯಿಂದ ತೆಗೆಯಲು ಹೋದರೆ ‘ಕಾವಲಿಯನ್ನು ಬಿಡುವುದೇ ಇಲ್ಲ’ ಎನ್ನುವ ಅಚಲ ನಿರ್ಧಾರದಿಂದ ಅದು ಕಾವಲಿಗೆ ಅಂಟಿಕೊಂಡೇ ಇತ್ತು. ನನ್ನಲ್ಲಿ ಇರುವ ಅಲ್ಪಸ್ವಲ್ಪ ಬುದ್ಧಿಯನ್ನು, ಶಕ್ತಿಯನ್ನು ಉಪಯೋಗಿಸಿ ದೋಸೆಯನ್ನು ‘ಬಲಾತ್ಕಾರ’ ಪೂರ್ವಕವಾಗಿ ಕಾವಲಿಯಿಂದ ಎಬ್ಬಿಸಿ, ಮಗುಚಿ ಹಾಕಿ ಕಾಯಿಸಿ, ಪುನಃ ಎತ್ತಲು ಹೋದಾಗ ‘ದುಂಡನೆಯ’ ದೋಸೆ ತನ್ನ ರೂಪವನ್ನು ಕಳೆದುಕೊಂಡು ತಿನ್ನುವವರಿಗೆ ಅನುಕೂಲವಾಗಲೆಂದು ಸಣ್ಣ ಸಣ್ಣ ತುಂಡುಗಳಾಗಿ ಕಾವಲಿಯನ್ನು ಬಿಟ್ಟೆದ್ದಿತು. ನಾನೂ ಕೂಡಾ ಅಷ್ಟೇ ‘ಹಠಮಾರಿ’! ಪ್ರತೀ ದೋಸೆಯೊಂದಿಗೆ ಅಂತಹ ‘ಉಗ್ರ’ ಹೋರಾಟ ಮಾಡುತ್ತಲೇ ಎಲ್ಲರಿಗೂ ದೋಸೆ ಮಾಡಿ ಹಾಕಿದೆ. ಪ್ರಾಯಶಃ ಹಿಟ್ಟಿನ ಹದದ ಸಮಸ್ಯೆ ಅಥವಾ ಬಾಳೆಹಣ್ಣು ಗಳಿತದ್ದು ಜಾಸ್ತಿಯಾಗಿ ಈ ಸಮಸ್ಯೆ ಆಗಿರಬಹುದೆಂದು ಭಾವಿಸಿ ಸಮಾಧಾನ ಮಾಡಿಕೊಂಡೆ

ಆದರೆ ಸಾಯಂಕಾಲ ಉದ್ದಿನ ದೋಸೆ ಮಾಡಿದಾಗಲೂ ದೋಸೆ ಕಾವಲಿ ಯಾವುದೇ ಭೇದಭಾವ ಇಲ್ಲದೆ ಬೆಳಗಿನ ಸವಾಲನ್ನೇ ನನ್ನ ಮುಂದೊಡ್ಡಿತು?! ನಾನೂ ಕೂಡಾ ಅದರೊಡನೆ ಹೋರಾಡುತ್ತಲೇ ದೋಸೆ ಮಾಡುತ್ತಾ ಎಬ್ಬಿಸುವಾಗ ತುಂಡು ತುಂಡಾದ ದೋಸೆಯನ್ನೇ ಮಾಡಿ ಎಲ್ಲರಿಗೂ ತಿನ್ನಲು ಕೊಟ್ಟೆ. ನಾವೆಲ್ಲರೂ ಕಾವಲಿಗೆ ಸಡ್ಡು ಹೊಡೆದು ಹೊಟ್ಟೆ ತುಂಬಾ ‘ವಿರೂಪ’ವಾದ ದೋಸೆಯನ್ನು ತಿಂದು ಸಂತೃಪ್ತರಾದೆವು. ದೋಸೆ ಕಾವಲಿಯ ಮೇಲೆ ಗೆಲುವು ಸಾಧಿಸಿದ ವಿಚಿತ್ರ ಖುಷಿ ಇದ್ದರೂ ಈ ‘ಉಗ್ರ’ ಹೋರಾಟದಲ್ಲಿ ನನ್ನ ‘ಕೈ’ಗೆ ನೋವಾಯಿತು ಎನ್ನುವುದು ವಾಸ್ತವದ ವಿಷಯವಾಗಿತ್ತು! ಅಂತೂ ಹೀಗೊಂದು ಉಗ್ರ ಹೋರಾಟದ ವಿಷಯವನ್ನು ಬರೆಯಲು ನಮ್ಮ ಮನೆಯ ದೋಸೆ ಕಾವಲಿ ಪ್ರೇರೇಪಿಸಿತು ಎಂಬಲ್ಲಿ ಈ ಬರಹದ ಮುಕ್ತಾಯ ಮಾಡುತ್ತಿದ್ದೇನೆ


Posted 20/2/2026

No comments:

Post a Comment