Friday, February 6, 2026

ಸಾಗರದ ಮಾರಿಜಾತ್ರೆ -

 ಸಾಗರದ ಮಾರಿಜಾತ್ರೆ - ಶೋಭಾ ಸೋಮಯಾಜಿ 

ಜಾತ್ರೆ ಎಂದರೆ ನಾನು ನಾಲ್ಕು ಮಾರು ದೂರ ನಿಲ್ಲುವವಳು. ನನಗೆ ಅತೀ ಜನಸಂದಣಿ, ಅಲ್ಲಿನ ಗಲಾಟೆ, ಗಜಿಬಿಜಿ, ನೂಕುನುಗ್ಗಲು ಇವೆಲ್ಲ ಸಹ್ಯವಲ್ಲ. ಜಾತ್ರೆಯ ಬಿಸಿಯಲ್ಲಿ ದೇವರು ನೋಡಲು ಹೋದರೆ ಇರುವ ಚೂರುಪಾರು ಭಕ್ತಿಯೂ ಗೋತಾ! ಈ ಮನಸ್ಥಿತಿಯಿಂದಾಗಿ ಉಡುಪಿಯವಳೇ ಆದ ನಾನು ಈವರೆಗೆ ಪರ್ಯಾಯ ನೋಡಿಲ್ಲ. ಪ್ರಾಯಶಃ ಚಿಕ್ಕವಳಿದ್ದಾಗ ಅಪ್ಪನ ಜೊತೆಗೆ ಹೋಗಿರಬಹುದು. ಆದರೆ ನೆನಪಿಲ್ಲ.


ಸಾಗರದ ಮಾರಿಜಾತ್ರೆಗೆ ಮಾತ್ರ ನಾನು ತಪ್ಪದೇ ಹೋಗುತ್ತೇನೆ. ಅದರ ಕಾರಣ ನನ್ನ ಮಗಳು. ಅವಳಿಗೆ ಜಾತ್ರೆ ಗುಡ್ಡೆ ಸುತ್ತುವುದು, ಜಯಂಟ್ ವೀಲ್, ಕೊಲಂಬಸ್, ಟೊರ್ರಾಟೊರ್ರಾದಂತಹ ಆಟಗಳನ್ನಾಡುವುದು ಬಹಳ ಇಷ್ಟ. ನಾನು ಅವಳ ಬಾಲದಂತೆ ಹೋಗುವುದಷ್ಟೇ! ಒಟ್ಟಿಗೆ ಜನ ಇದ್ದರೆ ಒಂದಿಷ್ಟು ಗೌಜು ಗದ್ದಲ ಮಾಡಿಕೊಂಡು ತಿರುಗುವುದು ನನ್ನ ಕೆಲಸ. 

ಕಳೆದ ಬಾರಿಯ ಮಾರಿಜಾತ್ರೆಯಲ್ಲಿ ನಾಲ್ಕೈದು ಸಲ ಜಾತ್ರೆಗೆ ಹೋಗಿ ನಾನು ಗಮ್ಮತ್ತು ಮಾಡಿದ್ದೇನೆ. ಈ ಸಲ ಆರೋಗ್ಯದ ಸಮಸ್ಯೆ ಸ್ವಲ್ಪ ಇರುವುದರಿಂದ ಹೋಗಲು ಹಿಂದೆಮುಂದೆ ನೋಡುವ ಹಾಗಾಗಿದೆ. ಆದರೂ ಇವತ್ತು ಡಾಕ್ಟರ್ ಹತ್ತಿರ ಹೋದವಳು ದೇವರನ್ನು ನೋಡಬೇಕೆಂದು ಆ ನುಗ್ಗಲಿನಲ್ಲಿ ಸ್ವಲ್ಪ ದೂರ ಹೋಗಿ ನಂತರದಲ್ಲಿ ‘ಇದು ನನ್ನಿಂದಾಗುವ ಕೆಲಸವಲ್ಲ’ ಎಂದು ನಿರ್ಣಯಿಸಿ ಹಾಗೇ ವಾಪಾಸು ಬಂದೆ. ತಾಲೂಕು ಆಫೀಸಿನ ಬಳಿ ಕೆಲವು ಹೂಕುಂಡ ಹಾಗೂ ಕಪ್ ಸೆಟ್ ತೆಗೆದುಕೊಂಡು ನನ್ನ ಮಗಳೊಡನೆ ಕಾರನ್ನೇರಿ ಮನೆಯತ್ತ ಹಿಂದಿರುಗಿದೆ ಎಂಬಲ್ಲಿ ಇಂದಿನ ನನ್ನ ಜಾತ್ರೆಯ ತಿರುಗಾಟ ಮುಗಿಯಿತು.


Posted 7/2/2026 

No comments:

Post a Comment