Saturday, 7th February 2026
ಸ್ಮರಿಕಾ - ನೆನಪಿನ ಸೆಲೆಯಲ್ಲಿ” ಎನ್ನುವ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು ಕಳೆದ ವರ್ಷ. ಯಾವುದೇ ಸಂಸ್ಥೆ ಪ್ರಗತಿ ಪಥದಲ್ಲಿ ಮೇಲೇರುವಾಗ ತಾನು ಕಾಲಿಟ್ಟ ಘಳಿಗೆ, ಸ್ಥಿತಿ, ಧ್ಯೇಯ…. ಇವುಗಳನ್ನು ಮರೆಯಬಾರದು. ಪ್ರತಿ ಸಂಸ್ಥೆಯ ಹುಟ್ಟು ತುಂಬಾ ಸಾಧಾರಣವಾಗಿ ಸರಳವಾಗಿರುತ್ತದೆ. ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಗಿರುತ್ತದೆ. ಹೊಂಗಿರಣದ ಪ್ರಾರಂಭವೂ ಕೂಡಾ ಪುಟ್ಟ ಹೆಜ್ಜೆಗಳೊಡನೆಯೇ ಆದದ್ದು. ಆ ‘ಪುಟ್ಟ ಹೆಜ್ಜೆ’ಯನ್ನು ಬಲಗೊಳಿಸಲು ನೆರವಾದವರನ್ನು ನೆನಪಿಸಿಕೊಂಡು ಪುನಃ ಒಂದಾಗಿ ಹಳೆಯ ನೆನಪುಗಳನ್ನು ಹಂಚಿಕೊಳ್ಳಲೋಸುಗವೇ ಪ್ರಾರಂಭವಾದದ್ದು 'ಸ್ಮರಿಕಾ'. ಇದರರ್ಥ 'ಸ್ಮರಣಾರ್ಥ' ಎಂದು. ಒಂದರ್ಥದಲ್ಲಿ ನಮ್ಮೊಡನೆ ಇರದವರನ್ನು ಸ್ಮರಿಸುವುದು ಹಾಗೂ ನಮ್ಮೊಡನೆ ಇದ್ದವರು ನೀಡಿದ ಸಹಕಾರವನ್ನು ಸ್ಮರಿಸುವುದು ಎಂದು ಇನ್ನೊಂದು ರೀತಿಯಲ್ಲೂ ಅರ್ಥೈಸಿಕೊಳ್ಳಬಹುದು.
2025ರ ಜನವರಿಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಾವು ನಮ್ಮ ಮೊದಲ ಮೂರು ಬ್ಯಾಚುಗಳ, ಸುತ್ತಮುತ್ತಲಿನ ಊರಿನ ಪಾಲಕರನ್ನು ಆಹ್ವಾನಿಸಿದ್ದೆವು. ಪ್ರತಿಯೊಬ್ಬರ ಮನೆಗೆ ಖುದ್ದಾಗಿ ಹೋಗಿ ಕರೆದು ಬಂದಾಗ, ಅವರು ತೋರಿಸಿದ ಪ್ರೀತಿ, ವಿಶ್ವಾಸ ಹಾಗೂ ಹೊಂಗಿರಣದಲ್ಲಿ ಕಲಿತ ಅವರ ಮಕ್ಕಳ ಗಟ್ಟಿಗೊಂಡು ನೆಲೆನಿಂತ ಬದುಕಿನ ಬಗೆಗಿನ ಸಂತೃಪ್ತಿ ಕಂಡು ಮನದುಂಬಿ ಬಂದಿತ್ತು. ಆಮಂತ್ರಿತರೆಲ್ಲರೂ ಬಂದಿದ್ದರು. ನಮ್ಮದೇ ಹಳೆಯ ವಿದ್ಯಾರ್ಥಿ ಸಂವತ್ಸರ ಹಾಗೂ ತಂಡದವರು ನೀಡಿದ ಸಂಗೀತ ಕಾರ್ಯಕ್ರಮ ಆಹ್ಲಾದಕರವಾಗಿತ್ತು. ಒಟ್ಟಿನಲ್ಲಿ ಅದೊಂದು ಸುಂದರವಾದ ಪುನರ್ಮಿಲನದ ಕಾರ್ಯಕ್ರಮವಾಗಿತ್ತು.
ಇಂದು ನಡೆದ ಸ್ಮರಿಕಾ ಕಾರ್ಯಕ್ರಮವನ್ನು ಮೊದಲ ಎಂಟು ಬ್ಯಾಚಿನ ಮಕ್ಕಳು ಹಾಗೂ ಆಗ ನಮ್ಮಲ್ಲಿದ್ದ ಶಿಕ್ಷಕರ ಪುನರ್ಮಿಲನಕ್ಕಾಗಿ ಮೀಸಲಾಗಿಟ್ಟಿದ್ದೆವು. ನವೋದಯದ ನಮ್ಮ ಹಳೆಯ ವಿದ್ಯಾರ್ಥಿ ಹಾಗೂ ನಾಡಿನ ಹೆಸರಾಂತ ಸುಗಮಸಂಗೀತಕಾರನಾದ ಶ್ರೀ ವಿನಯ್ ನಾಡಿಗ್ ನ ಮಧುರ ಸಂಗೀತ ಸುಧೆಯೊಂದಿಗೆ ನಮ್ಮ ಇಂದಿನ ಕಾರ್ಯಕ್ರಮ ಪ್ರಾರಂಭವಾಯಿತು. ಹೇಳಿದ ಸಮಯಕ್ಕೆ ಹಳೆಯ ವಿದ್ಯಾರ್ಥಿಗಳು ಬಾರದಿದ್ದ ಕಾರಣ ನಮ್ಮ ಈಗಿನ ಹಿರಿಯ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕಾರ್ಯಕ್ರಮವನ್ನು ಪ್ರಾರಂಭಿಸಿದೆವು. ಸಂಗೀತ ಕಾರ್ಯಕ್ರಮ ಮುಗಿಯುವ ಹಂತಕ್ಕೆ ಬರುವಾಗ ಒಬ್ಬೊಬ್ಬರಾಗಿ ಕೆಲವು ಹಳೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಬಂದು ನಮ್ಮನ್ನು ಸೇರಿಕೊಂಡರು. ಸಂಗೀತ ಕಾರ್ಯಕ್ರಮ ಮುಗಿದ ನಂತರ ಒಂದು ಗಂಟೆಯ ಕಾಲ ಹಳೆಯ ನೆನಪುಗಳನ್ನು ಮೆಲುಕು ಹಾಕಲಾಯಿತು. ಸಮಯದ ಚಕ್ರ ಒಮ್ಮೆ ಹಿಂದೆ ಹೋಗಿ ಮುಂದೆ ಬಂದಂತಾಯಿತು. ನಮ್ಮ ನಿರೀಕ್ಷೆಯಷ್ಟು ಮಕ್ಕಳು ಬರದಿದ್ದರೂ, ಬಂದವರು ‘ನಿಮ್ಮ ಜೊತೆಗೆ ನಾವಿದ್ದೇವೆ’ ಎನ್ನುವ ಭರವಸೆಯ ಭಾವವನ್ನು ಕೊಟ್ಟರು. ಸರಳ ಸಹಭೋಜನದ ನಂತರ ಅಲ್ಲೇ ಅಷ್ಟಿಷ್ಟು ಮಾತನಾಡಿ ಎಲ್ಲರೂ ತಮ್ಮ ತಮ್ಮ ಗೂಡಿಗೆ ಇನ್ನೊಂದಿಷ್ಟು ನೆನಪುಗಳೊಡನೆ ಹಿಂದಿರುಗಿದರು. ಇಲ್ಲಿ ಉಳಿದ ನಾವು ಅವರೆಲ್ಲರೊಡನೆಯ ಒಡನಾಟದ ಖುಷಿಯನ್ನು ಪಡೆದ ಭಾವದಲ್ಲಿ ಮುಳುಗಿದ್ದೆವು.




No comments:
Post a Comment