Tuesday. February 10, 2026
ಅಲರ್ಜಿಗೆ ಸಡನ್ ಆಗಿ ನನ್ನ ನೆನಪಾಯಿತೋ ಏನೋ? ಬಂದು ನನ್ನನ್ನು ಆವರಿಸಿಯೇ ಬಿಟ್ಟಿತು ನೋಡಿ! ಕಳೆದ ಮಂಗಳವಾರ ಬೆಳಿಗ್ಗೆ ಏಳುವಾಗ ನನ್ನ ಮೂಗು, ತುಟಿಗಳು ಸ್ವಲ್ಪ ಬಿರುಸಾಗಿದ್ದವು ಹಾಗೂ ಅವುಗಳ ಸುತ್ತಲಿನ ಪ್ರದೇಶ ಕೆಂಪಗಾಗಿತ್ತು. ಮೇಲ್ತುಟಿಯ ಒಂದು ಭಾಗ ಸ್ವಲ್ಪ ಊದಿತ್ತು. ಇದೇನಪ್ಪಾ ಎಂದು ನನ್ನ ‘ಅಂದದ’ ಫೋಟೊ ತೆಗೆದು ನನ್ನ ಡಾಕ್ಟರ್ ಸೊಸೆಗೆ ಕಳಿಸಿದೆ. “ಅಲರ್ಜಿಯ ತರಹ ಕಾಣಿಸುತ್ತದೆ; ಒಂದು ಒಕಾಸೆಟ್ ಮಾತ್ರೆ ತಗೊಳ್ಳಿ” ಎಂದು ಅವಳಿಂದ ಸಲಹೆ ಬಂದ ಮೇಲೆ ಮಧ್ಯಾಹ್ನ ಒಂದು ಮಾತ್ರೆ ತೆಗೆದುಕೊಂಡು ರೆಸ್ಟ್ ಮಾಡಿದೆ. ಸಾಯಂಕಾಲ ಸೂರ್ಯಾಸ್ತ ನೋಡಲು ಕಾರಿನಲ್ಲಿ ಒಂದು ಪುಟ್ಟ ತಿರುಗಾಟ ಮಾಡಿಕೊಂಡು ಬಂದ ನಂತರ ಅಲರ್ಜಿ ಹೆಚ್ಚಿದ ಹಾಗೆ ಕಂಡಿತು. ನಾನೇ ಡಾಕ್ಟರ್ ಆಗಿ ಮತ್ತೊಂದು ಮಾತ್ರೆ ತಗೊಂಡು ಮಲಗಿದೆ. ರಾತ್ರಿ ನಿದ್ರೆ ಅಷ್ಟೇನೂ ಹಿತಕರವಾಗಿರಲಿಲ್ಲ. ಮುಖ ತುಂಬಾ ಬಾಧಿಸುತ್ತಿತ್ತು. ಭಾರವೆನಿಸುತ್ತಿದ್ದ ಮುಖವನ್ನು ಹೊತ್ತು ಬೆಳಿಗ್ಗೆ ಎದ್ದ ನಾನು ಮುಖ ಮಾರ್ಜನ ಮಾಡುತ್ತಾ ಕನ್ನಡಿಯಲ್ಲಿ ನೋಡಿಕೊಂಡರೆ ಯಾವುದೋ ‘ಏಲಿಯೆನ್’ ಅನ್ನು ನೋಡಿದ ಹಾಗಾಯಿತು. ನನ್ನ ಗುರುತು ನನಗೇ ಸಿಗದೆ ಕಂಗಾಲಾದೆ. ಕೋಣೆಯಿಂದ ಹೊರ ಬಂದ ನನ್ನ ಗುರುತು ನಮ್ಮ ಶಂಕರಿಗೂ ಸಿಗದಷ್ಟು ಮುಖ-ಮೂತಿ ಊದಿಕೊಂಡಿತ್ತು. ತುಟಿಯಂತೂ ಊದಿ ನೇತಾಡುತ್ತಿತ್ತು. ಮುಖದಲ್ಲಿ ಊದದೇ ಇದ್ದ ಯಾವ ಭಾಗವೂ ಇರಲಿಲ್ಲ. ಯಾರದ್ದೋ ಎಕ್ಸ್ಟ್ರಾ ಮುಖವನ್ನು ನನ್ನ ಮುಖಕ್ಕೆ ಫಿಕ್ಸ್ ಮಾಡಿದ ಹಾಗಾಗಿತ್ತು. ಪುನಃ ಸೊಸೆಗೆ ಫೋಟೊ ಕಳಿಸಿದಾಗ 'ಕೂಡಲೇ ಲೋಕಲ್ ಡಾಕ್ಟರ್ ಹತ್ತಿರ ಹೋಗಿ' ಎಂದು ಹೇಳಿದಳು. ಬೆಳಗಿನ ಹತ್ತೂವರೆಯ ಸುಮಾರಿಗೆ ಸಾಗರದ ಡಾ. ದೀಪಕ್ ಹತ್ತಿರ ಹೋದಾಗ ಅಲರ್ಜಿ ಇಂಜೆಕ್ಷನ್ ಚುಚ್ಚಿ, ಒಂದು ಕೋರ್ಸ್ ಮಾತ್ರೆ ಕೊಟ್ಟರು. ನಂತರದಲ್ಲಿ ಊತ ಸಾಕಷ್ಟು ಇಳಿದರೂ ಅಲರ್ಜಿಯ ‘ಆಫ್ಟರ್ ಇಫೆಕ್ಟ್’ ಜೋರಾಗಿಯೇ ಇತ್ತು. ಮುಖವಂತೂ ಕೆಂಪು ಮೂತಿಯ ಮಂಗನ ತರಹ ಆಗಿತ್ತು. ತದನಂತರದಲ್ಲಿ ಮುಖದಿಂದ ಅಲರ್ಜಿ ಮೈಕೈಗೆಲ್ಲಾ ರವಾನೆ ಆಯ್ತು. ಹಾಗೆ ಮಾಡದಿದ್ದರೆ ಒಂದೇ ದೇಹದ ಉಳಿದ ಭಾಗಗಳಿಗೆ ಬೇಜಾರಾಗಬಹುದೆಂಬ ಯೋಚನೆ ಅಲರ್ಜಿಯದ್ದೋ ಏನೋ? ಅಲ್ಲೆಲ್ಲಾ ಆದದ್ದು ಊತಕ್ಕಿಂತ ಹೆಚ್ಚು ಕೆಂಪು ದದ್ದುಗಳು, ರ್ಯಾಶಸ್ ಹಾಗೂ ಅದರೊಡನೆಯ ಅದ್ಭುತವಾದ ತುರಿಕೆ! ಎಲ್ಲಾದರೂ ಒಂದು ಕಡೆ ಮುಟ್ಟಿದರೆ ತುರಿಸುತ್ತಾ ಇರುವ ಎನ್ನುವ ಭಾವ. ತುರಿಸುವ ಪ್ರಕ್ರಿಯೆ ಎಷ್ಟು ರಗಳೆ ಕೊಡುತ್ತದೋ ಅಷ್ಟೇ ಹಿತವನ್ನೂ ಕೊಡುತ್ತದೆ. ಅಲ್ಲವೆ?!
ಈ ಅಲರ್ಜಿಯ ಕಾಲದಲ್ಲಿ ನಾನೊಂದಿಷ್ಟು ದಣಿದೆ! ನನ್ನ ಸಹಜವಾದ ಮಲಗುವ ಭಂಗಿಯಲ್ಲಿ ಮಲಗಲು ಆಗದಂತಹ ತೊಂದರೆ ಕೊಡುವ ಅಲರ್ಜಿಯು ನನ್ನ ನಿದ್ರಾ ಸುಖವನ್ನೇ ಕೊಂದು ಹಾಕಿ ಬಿಟ್ಟಿದೆ. ಈಗ ಕಡಿಮೆಯಾಗುತ್ತಿರುವಂತೆ ಅನಿಸುತ್ತಿರುವ ಅಲರ್ಜಿ ನನ್ನನ್ನು ಬಿಟ್ಟು ತೊಲಗಿದರೆ ಸಾಕೆಂಬ ಹಂಬಲ ನನ್ನದು. ಅಲರ್ಜಿಯನ್ನು ಅನುಭವಿಸಿದವರಿಗೆ ಇದೆಲ್ಲ ಸುಲಭವಾಗಿ ಅರ್ಥವಾಗುವ ವಿಷಯವಲ್ಲವೆ?
ಹೀಗೊಂದು ಅಲರ್ಜಿಯ ವೃತ್ತಾಂತ!
Posted 11/2/2026

No comments:
Post a Comment