ಜೂನ್ 12, 2026
Aroma ಮತ್ತು ‘ಪರಿಮಳ’
ನಾವು ರೆಗ್ಯುಲರ್ ಆಗಿ ಬಳಸುವ/ಮಾಡುವ ಆಹಾರದ, ನಮ್ಮ ನಮ್ಮ ಜಾಗದ, ನಾವು ಉಪಯೋಗಿಸುವ ವಸ್ತುಗಳ ವಿಶಿಷ್ಟ ಪರಿಮಳ ಯಾವತ್ತೂ ಕೂಡಾ ನಮ್ಮಲ್ಲಿ “ಸುರಕ್ಷಿತ" ಮನೋಭಾವವನ್ನು ಮೂಡಿಸುತ್ತದೆ ಎನ್ನುವುದು ನನ್ನ ಅನಿಸಿಕೆ. ಅದು ಭಾವನಾತ್ಮಕ ನಂಟನ್ನು ಕೂಡಾ ಸೃಷ್ಟಿಸುತ್ತದೆ ಎನ್ನುವುದು ನನ್ನ ಅನುಭವ. ನಾವು ಅಡುಗೆ ಮಾಡುವಾಗ ಅದು ಹೊಮ್ಮಿಸುವ ‘ಪರಿಮಳ’ ಆ ಹೊತ್ತಿಗೆ ನಮ್ಮ ಅನುಭವಕ್ಕೆ ಬರುವುದಿಲ್ಲ. ಆದರೆ ಮನೆಯ ಹೊರಗೆ ಹೋಗಿ ಮನೆಯೊಳಗೆ ಹೊಕ್ಕಾಗ ನಮ್ಮ ಮೂಗಿಗೆ ಅದರ ಘಮಲು ಹೊಡೆದಾಗ ಏನೋ ಒಂದು ರೀತಿಯ " ಸುಖ”ದ ಭಾವ ಸಿಗುತ್ತದೆ. ನಾಯಿಗಳು ಊರು ತಿರುಗ ಹೊರಟಾಗ ಅಲ್ಲಲ್ಲಿ ಉಚ್ಚಿ ಹಾರಿಸಿ ತಮ್ಮ ಗಡಿಯನ್ನು ಮಾರ್ಕ್ ಮಾಡಿ ವಾಪಾಸ್ ಹಿಂದಿರುಗುವಾಗ ಆ ಜಾಗಗಳನ್ನು ಮೂಸಿ ತಮ್ಮ ಗಡಿಯಲ್ಲಿ ಇದ್ದೇವೆ ಎಂದು ಖಚಿತ ಪಡಿಸಿಕೊಂಡು ಧೈರ್ಯದಿಂದ ತಮ್ಮ ಪಯಣವನ್ನು ಮುಂದುವರಿಸುತ್ತವೆ. ಅದೇ ರೀತಿ ನಮ್ಮ ಮನೆಯೊಳಗೆ ಹೊಕ್ಕಾಗ ನಮ್ಮ ಮೂಗಿಗೆ ಅಡರುವ ಪರಿಚಿತ ‘ಪರಿಮಳ’ ನಮ್ಮೊಳಗೆ ನೆಮ್ಮದಿಯ ಭಾವವನ್ನು ಹುಟ್ಟಿಸುತ್ತದೆ. ಇದು ಬಹಳ ವಿಚಿತ್ರವಲ್ಲವೆ?
ನಾವು ಪರವೂರಿಗೆ ಹೋದಾಗ ನಮಗೆ ಬೇಕಾದಂತಹ ಆಹಾರ ಸಿಗದಿದ್ದಾಗ ಯಾವುದೋ ಮನೆಯ ಒಳಗಿನಿಂದ ನಮ್ಮ ಪರಿಚಿತ ಆಹಾರದ ಪರಿಮಳ ಬಂದಾಗ ನಮಗರಿವಿಲ್ಲದೆ ನಮ್ಮ ಬಾಯಿಯಲ್ಲಿ ನೀರೂರುತ್ತದೆಯಲ್ಲವೆ? ಹಾಗೆಯೇ ನಮ್ಮ ಆಪ್ತರು ಬಳಸುವ ಸುಗಂಧದ್ರವ್ಯದ ಪರಿಮಳ, ಹಸುಗೂಸಿನ ಮೈಯ್ಯ ಪರಿಮಳ, ನಾವು ಬಳಸುವ ಸೋಪಿನ ಪರಿಮಳ, ದೇವರಿಗೆ ಹಚ್ಚುವ ಊದುಬತ್ತಿಯ ಪರಿಮಳ, ಮೂಗಿಗೆ ಅಡರುವ ಸೊಗಸಾದ ಕಾಫಿಯ ಪರಿಮಳ….ಒಂದೇ ಎರಡೇ. ಹೀಗೆ ನಮ್ಮನ್ನು ಆವರಿಸಿರುವ, ನಮಗರಿವಿಲ್ಲದೆ ನಮ್ಮ ಬದುಕಿನ ಭಾಗವಾಗಿರುವ ಹಲವಾರು ಬಗೆಯ ಪರಿಮಳವನ್ನು ನಾವು ಪಟ್ಟಿ ಮಾಡಬಹುದು. ನಮ್ಮ ಕಣ್ಣಿಗೆ ಕಾಣದ “ಪರಿಮಳ” ನಮ್ಮೆಲ್ಲರ ಬದುಕಿನಲ್ಲಿ ಬಹಳ ದೊಡ್ಡ ಪಾತ್ರ ವಹಿಸುತ್ತದೆ ಎನ್ನುವುದು ಎಲ್ಲರೂ ಒಪ್ಪುವ ಮಾತಲ್ಲವೆ?!
Posted 14/6/2026

No comments:
Post a Comment