Wednesday, June 10, 2026
ವಯಸ್ಸು ನಿಲ್ಲುವುದಿಲ್ಲ; ವರ್ಷಗಳು ಕಳೆದಂತೆ ವಯಸ್ಸು ನಿಲ್ಲದೆ ಅದರೊಡನೆ ಬೆಳೆಯುತ್ತದೆ. ವಯಸ್ಸು ಬರೀ ಸಂಖ್ಯೆಯಲ್ಲಿ ಹೆಚ್ಚಾಗುವುದಿಲ್ಲ; ಅದರ ಪ್ರಭಾವ ನಮ್ಮ ಪ್ರತೀ ಅವಯವದ ಮೇಲೂ ಕಾಣಿಸುತ್ತದೆ. ಸುಕ್ಕಾದ ಬಣ್ಣಗುಂದಿದ ಚರ್ಮ, ನರೆತ ತಲೆಗೂದಲು, ಕಾಂತಿ ಕಳೆದುಕೊಂಡ ಕಣ್ಣುಗಳು, ವೇಗ ಕಳೆದುಕೊಂಡ ನಡಿಗೆ, ಶಕ್ತಿಗುಂದಿದ ದೇಹ…..ಒಂದೇ ಎರಡೇ. ಮನಸ್ಸು ಇನ್ನೂ ತನ್ನ ಹುರುಪನ್ನು ಉಳಿಸಿಕೊಂಡಿದ್ದರೂ ದೇಹ ಮಾತ್ರ ಕಾಲನ ಕೃಪೆಗೆ ಬಾಗುತ್ತಿರುತ್ತದೆ. ಇಂತಹ ಬದಲಾವಣೆಯನ್ನು ಒಪ್ಪುವುದು ಮನಸ್ಸಿಗೆ ಕಷ್ಟವೆನಿಸುತ್ತದೆ. ಆದರೆ ಅದನ್ನು ಒಪ್ಪಲೇಬೇಕಾದ ಅನಿವಾರ್ಯತೆ ಇರುವುದು ವಾಸ್ತವ ಸತ್ಯ.
ನಾವಿದನ್ನೆಲ್ಲ ಮರೆಯಲು ಸಾಧ್ಯವಾಗುವುದು ಒಂದು ಪುಟ್ಟ ಕಂದನ ಒಡನಾಟದಲ್ಲಿ. ಪುಟ್ಟ ಕಂದನನ್ನು ಹಿಡಿದು ಮುದ್ದಿಸುವಾಗ ವಯಸ್ಸು ನಮ್ಮ ಮೇಲೆ ಮಾಡಿದ ಪ್ರಭಾವದ ಸಂಪೂರ್ಣ ಅರಿವಾಗುತ್ತದೆ. ಮಗುವಿನ ರಸಭರಿತ ಪುಟ್ಟ ಕೈ ಬೆರಳುಗಳು ನಮ್ಮ ಸುಕ್ಕುಗಟ್ಟಿದ ಬೆರಳುಗಳನ್ನು ಹಿಡಿದಾಗ ವಯಸ್ಸಿನ ವ್ಯತ್ಯಾಸ ಸ್ಪಷ್ಟವಾಗಿ ಕಾಣ ಸಿಗುತ್ತದೆ. ಆದರೆ ಆ ಮಗುವಿನೊಡನೆ ಕಳೆಯುವ ಸಮಯ ನಮ್ಮ ವಯಸ್ಸನ್ನು ನಾವು ಮರೆತು ಬಿಡುವಂತೆ ಮಾಡುತ್ತದೆ. ಪುಟ್ಟ ಕಂದ ನಮ್ಮೊಡನೆ ಇರುವ ಭಾವವೇ ಒಂದು ವಿಶಿಷ್ಟ ಅನುಭೂತಿಯನ್ನು ಕೊಡುವಂತಹುದು. ಅದರ ಮೈಯ್ಯ ಬಿಸುಪು ನಮ್ಮ ಬದುಕಿನ ಒತ್ತಡವನ್ನೆಲ್ಲಾ ಕರಗಿಸಿಬಿಡುವಂತಹುದು. ಅದರ ಇನಿದನಿ, ಕೇಕೆಯ ದನಿ ಇಂಪಾದ ಸಂಗೀತವನ್ನು ಕೇಳಿಸಿಕೊಂಡ ಅನುಭವ ಕೊಡುವಂತಹುದು. ಅದರ ಅಳುವಿನ ದನಿ ಹೃದಯವನ್ನು ಕರಗಿಸುವಂತಹುದು. ನಾವು ಕೂಡಾ ಒಂದಾನೊಂದು ಕಾಲದಲ್ಲಿ ಅಮ್ಮನ ಮಡಿಲಲ್ಲಿ, ಮುದ್ದಿಸುವವರ ತೆಕ್ಕೆಯಲ್ಲಿ ಬೆಳೆದು ಬಂದವರೇ ತಾನೆ? ಮಗುವಾಗಿ ನಾವು ಹಿರಿಯರಿಗೆ ಕೊಟ್ಟ ಸುಖವನ್ನು ನಾವೀಗ ಹಿರಿಯರಾಗಿ ಪುಟ್ಟ ಮಗುವಿನಿಂದ ಪಡೆಯುತ್ತಿದ್ದೇವೆ. ‘“ಕಾಲಾಯ ತಸ್ಮೈನಮಃ" ಎನ್ನುವುದು ಸತ್ಯವಲ್ಲವೆ? 'ಕಾಲ'ದ ನಡೆಯನ್ನು ಒಪ್ಪಿಕೊಳ್ಳೋಣ; ಹಾಗೆಯೇ ನಮ್ಮ ವಯಸ್ಸನ್ನು ಒಪ್ಪಿಕೊಂಡು ಸ್ವೀಕರಿಸೋಣ; ಮಕ್ಕಳ ಹೂ ಮನಸ್ಸನ್ನು ಪ್ರೀತಿಸೋಣ. ಅಲ್ಲವೆ?!
Posted 11/6/2026

No comments:
Post a Comment