ಭಾನುವಾರ, ಸೆಪ್ಟೆಂಬರ್ 20, 2026
ತರಳಬಾಳು ಕೇಂದ್ರ ಗ್ರಂಥಾಲಯ, ಆರ್. ಟಿ. ನಗರ, ಬೆಂಗಳೂರು.
ಶಿವರಾಮ ಕಾರಂತ ವೇದಿಕೆಯು ತಿಂಗಳ ಕಾರ್ಯಕ್ರಮದಲ್ಲಿ ಡಾ ವಸುಂದರಾ ಭೂಪತಿ ಮುಖ್ಯ ಅತಿಥಿಯಾಗಿ ಭಾಗವಹಿಸಿ " ಮಹಿಳಾ ಸಬಲೀಕರಣ ಬಗ್ಗೆ" ಅದ್ಬುತವಾಗಿ ಮಾತನಾಡಿದರು. ಡಾ.ಜಗದೀಶ ಅವರು ಮಾತನಾಡಿ ಶಿಕ್ಷಣದ ಮಹತ್ವದ ಬಗ್ಗೆ ವಿವರಿಸಿದರು.
ಡಾ ಉಮಾದೇವಿ ಅವರ ಸೊಗಸಾದ ನಿರೂಪಣೆ ,ಶ್ರೀಮತಿ ಮಂಜುಳಾ ಅವರ ಕಾರ್ಯಕ್ರಮ ನಿರ್ವಹಣೆ ಜೊತೆಗೆ ಶ್ರೀ ಸುಧೀಂದ್ರ ಮತ್ತು ಶ್ರೀಮತಿ ಕೈವಲ್ಯ ಅವರ ಸಹಕಾರದಿಂದ ಇಡೀ ಕಾರ್ಯಕ್ರಮ ಅಚ್ಚು ಕಟ್ಟಾಗಿ ನಡೆಯಿತು. ಶ್ರೀ ಕೋಟೆಯವರು ಪ್ರಾರ್ಥನೆಯನ್ನು ಸಲ್ಲಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಶ್ರೀ ಚಂದ್ರಶೇಖರ ಚಡಗರು ಗೌರವ ಸಮರ್ಪಣೆ ಮಾಡಿದರು.
ಕಾರ್ಯದರ್ಶಿ : ಮಂಜುಳಾ ಭಾರ್ಗವಿ
ಸೆಪ್ಟೆಂಬರ್ 20.2026.ರ ತಿಂಗಳ ಕಾರ್ಯಕ್ರಮದ ಒಂದು ವರದಿ.
ಮೊದಲಿಗೆ ವಿಶೇಷ ಅತಿಥಿಗಳಾದ ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರಾದ ಡಾ. ವಸುಂಧಾರಾ ಭೂಪತಿಯವರನ್ನು ಹಾಗೂ ಡಾ. ಜಗದೀಶ್ ಎಚ್. ( ನಿವೃತ್ತ ಪ್ರಾoಶುಪಾಲರು. ಬಿ ಎಂ. ಎಸ್. ಕಾಲೇಜು) ಇವರುಗಳನ್ನು ಅಧ್ಯಕ್ಷರೊಂದಿಗೆ ವೇದಿಕೆಗೆ ಆಹ್ವಾನಿಸಲಾಯಿತು.ನಾಡಗೀತೆಗೆ ಗೌರವ ಸಲ್ಲಿಸಿ,
ಶ್ರೀ ಚಿದಂಬರ ಕೋಟೆಯವರಿಂದ ವಿಘ್ನವಿನಾಯಕನ ಪ್ರಾರ್ಥನೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅತ್ಯಂತ ಮಧುರ ಕಂಠದಿಂದ ಹಾಡಿದ ಚಿದಂಬರ ಕೋಟೆಯವರಿಗೆ ಧನ್ಯವಾದಗಳನ್ನು ಹೇಳಿದ ಬೆನ್ನಲ್ಲೇ, ಡಾ.ವಸುಂಧರಾ ಭೂಪತಿಯವರ ಮಾತುಗಳಿಗೆ ಕಿವಿಗಳಾಗಲು ನಾವೆಲ್ಲ ಸಜ್ಜಾದೆವು. "ಶಿಕ್ಷಣದಿಂದ ಮಹಿಳಾ ಸಶಕ್ತೀಕರಣ ಸಾಧ್ಯವಾಗಿದೆಯೇ"? ಎಂಬ ವಿಷಯವನ್ನು ಹೊತ್ತು ತಂದಿದ್ದ ಡಾ. ವಸುಂಧರಾ ಮೇಡಂ, ಮೊದಲಿಗೆ ಶಿವರಾಮ ಕಾರಂತರ ಬಗ್ಗೆ ಅತ್ಯಂತ ಅಭಿಮಾನದಿಂದಲೂ, ಕಾರಂತರು ವೈಜ್ಞಾನಿಕವಾಗಿ,ಸಾಮಾಜಿಕವಾಗಿ, ತೆರೆದುಕೊಳ್ಳುತ್ತಿದ್ದ ಬಗೆಗೆ ಕೌತುಕ ವ್ಯಕ್ತಪಡಿಸಿ, ತದ ನಂತರ ಕಾರಂತರು ತಮ್ಮ ನಡೆ, ನುಡಿ, ಯಕ್ಷಗಾನ,ಬಾಲ ಸಂಪುಟ, ಭೌತವಿಜ್ಞಾನ,ಸಾಹಿತ್ಯದ ಮೂಲಕ ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಚಿಕ್ಕದ್ದಾಗಿ ಚೊಕ್ಕವಾಗಿ ಹೆಸರಿಸುತ್ತಲೇ,ನಮಗರಿವಿಲ್ಲಯೇ, ತಮ್ಮ ಮುಖ್ಯ ವಿಷಯಕ್ಕೆ ನಮ್ಮನ್ನೆಲ್ಲ ಕೊಂಡೊಯ್ದಿದ್ದರು.
" ಪುಸ್ತಕಗಳ ಮಧ್ಯೆ ಸಾಹಿತ್ಯ ಚರ್ಚೆ ಎಂದರೆ ಇದೇ ನಿಜವಾದ ಮಹಿಳೆಯರ ಸಬಲೀಕರಣ" ಎಂದು ಹೇಳಿ ಮೊದಲನೇ ಮಾತಿನಲ್ಲೇ ಎಲ್ಲರ ಹೃದಯ ಗೆದ್ದರು.ನಂತರ ಜಿ. ಎಸ್. ಶಿವರುದ್ರಪ್ಪನವರ ಕವಿತೆ "ದಾಟಿ ಬಾ ನಿರ್ಭಯದ ನಿಲುವಿಗೆ" ಕವಿತೆಯನ್ನು ನೆನೆಯುತ್ತ, ಹೆಣ್ಣು ಮಕ್ಕಳು ಮಹಾದೇವಿಯoತೆ ಮನೆ ಕಟ್ಟುವರು, ಮನ ಕಟ್ಟುವವರು, ಎಂದು ಅತ್ಯಂತ ಸ್ಪಷ್ಟವಾಗಿ ಹೇಳಿ,ನಮ್ಮನ್ನೇ ನಾವು ಮುಕ್ತ ಮನಸಿನಿಂದ ಅವರ ಮಾತುಗಳಿಗೆ ತೆರೆದು ಕೊಳ್ಳುವoತೆ ಮಾಡಿತು. ಈ ದಿನಗಳಲ್ಲಿ ರಾಜಕೀಯದಲ್ಲಿ ಹೆಣ್ಣು ಮಕ್ಕಳನ್ನು ಎರಡನೇ ದರ್ಜೆಯ ಪ್ರಜೆ ಎಂದೇ ಗುರುತಿಸಲ್ಪಡುತ್ತಿರುವ ಈ ನಮ್ಮ ಸಮಾಜದಲ್ಲಿ ಮಹಿಳೆಯರು ಭೂಮಿಯಿಂದ ಆಗಸದ ವರೆಗೂ ಮಾಡಲ್ಪಟ್ಟ ಸಾಧನೆಗಳು, ಕಂಪನಿಗಳಲ್ಲಿ ಹನ್ನೆರಡು, ಹದಿನಾಲ್ಕು ಗಂಟೆಗಳ ಕೆಲಸ ಮಾಡಿ, ಮನೆಗೆ ಬಂದು ತಮ್ಮ ಕೆಲಸಕಾರ್ಯಗಳಲ್ಲಿ ತೊಡಗಿ ಕೊಳ್ಳುವ ಹೆಣ್ಣುಮಕ್ಕಳ ಸ್ಥಾನ ಮಾನಗಳ ಮಾತನಾಡುತ್ತಾ, ಪೌರಾಕಾರ್ಮಿಕರಾಗಿ ಇಂದು ಸಮಾಜದಲ್ಲಿ ಮಹಿಳೆಯರ ಪಾತ್ರ ಎಂಥದ್ದು? ಎಂದು ಹೇಳುತ್ತಾ. ಕುವೆಂಪುರವರು ಮಹಿಳೆಯರನ್ನು ಕುರಿತು " ಗೃಹತಪಸ್ವಿನಿ "ಎಂದು ಹೇಳಿದ ಮಾತನ್ನು ಉಲ್ಲೇಕಿಸುತ್ತ,ಅಕ್ಷರಕ್ಕೆ ಮಹಿಳೆಯರು ತೆರೆದು ಕೊಂಡದ್ದು ಸ್ವಲ್ಪ ತಡವೇ ಆದರೂ ಕೂಡ, ಅಕ್ಕಮಹಾದೇವಿ, ಸತ್ಯಕ್ಕ, ಬಾಲಸರಸ್ವತಿ, ಗಂಗೂಬಾಯಿ ಹಾನಗಲ್, ಎಂ.ಎಸ್ ಸುಬ್ಬಲಕ್ಷ್ಮಿ, ರೈತ ಹೆಣ್ಣುಮಕ್ಕಳು, ಸೇನೆಯಲ್ಲಿ ಕಮಾಂಡೋಗಳಾಗಿ, ಲೈನ್ ವುಮನ್ ಆಗಿ, ನಮ್ಮ ಸಮಾಜಕ್ಕೆ ಸೇವೆಸಲ್ಲಿಸಿರುವುದನ್ನು,
ಇನ್ನೂ ಅನೇಕ ಹೆಣ್ಣುಮಕ್ಕಳು ಈಗಲೂ ಕೂಡ ನಮ್ಮ ಸಮಾಜ ಕಟ್ಟುವ ಬಗ್ಗೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಬಗ್ಗೆ ಅತ್ಯಂತ ಸ್ವಾರಸ್ಯಕರವಾಗಿ ಮಾತನಾಡಿದರು. ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳ ಮೇಲೆ ಆಗುತ್ತಿರುವ ಬಾಲ್ಯ ವಿವಾಹ,ಅತ್ಯಾಚಾರಗಳು, ಹೆಣ್ಣು ಭ್ರೂಣಹತ್ಯೆಗಳು, ಕೊಳ್ಳುಬಾಕ ಸಂಸ್ಕೃತಿ, ಸ್ಯಾರೋಗೆಟ್ ಮದರ್, ಮರ್ಯಾದೆ ಹತ್ಯೆ, ಆಸ್ತಿಯಲ್ಲಿ ಹಕ್ಕಿಲ್ಲ, ಎಂಬ ಧೋರಣೆ, ಈ ಎಲ್ಲವೂ ಕೂಡ ಬದಲಾಗಬೇಕಿದೆ, ನಮ್ಮ ಸಮಾಜಕ್ಕೆ ಮಾರಕವಾದ ಈ ಎಲ್ಲಾ ಕೆಟ್ಟ ವಿಷಯಗಳ ವಿರುದ್ಧ ಹೋರಾಡಲು ಎಲ್ಲರಿಗೂ ತಕ್ಕ ರೀತಿಯಲ್ಲಿ ಶಿಕ್ಷಣದ ಉದ್ದೇಶ, ಸಾಹಿತ್ಯದ ಉದ್ದೇಶಗಳನ್ನು ತಿಳಿಸಬೇಕಿರುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಹೇಳುತ್ತಾ, ತಮ್ಮ ವೃತ್ತಿ ಜೀವನದಲ್ಲಿ ಕಂಡ ಕೆಲವು ಸತ್ಯ ಸಂಗತಿಗಳನ್ನು ಉದಾಹರಣೆ ಮೂಲಕ ಹೇಳುತ್ತಾ, ತಮ್ಮ ಅಮೂಲ್ಯ ನುಡಿಗಳನ್ನು ನಮ್ಮ ಮುಂದಿಟ್ಟರು. ನಿಜಕ್ಕೂ ಅವೆಲ್ಲ ಮಾತುಗಳು ಹೆಣ್ಣು ಮಕ್ಕಳಿಗಷ್ಟೇ ಅಲ್ಲಾ ಪುರುಷರಿಗೂ ಕೂಡ ಬಹಳ ಉತ್ಸಾಹ ಮೂಡಿಸಿದ್ದು ಸುಳ್ಳಲ್ಲ. ಇಂಥ ಒಂದೆರಡು ಉಪನ್ಯಾಸಗಳನ್ನು ಶ್ರದ್ಧೆಯಿಂದ ಆಲಿಸಿದರೆ ಸಾಕು ಹೆಣ್ಣು ಅಥವಾ ಗಂಡು ಯಾರೇ ಆಗಲಿ,ಎಂದಿಗೂ ಜೀವನದಲ್ಲಿ ಸೋಲುವುದಿಲ್ಲ ಎನಿಸಿತು.
ಇದಾದ ನಂತರ ಡಾ. ಜಗದೀಶ್ ರವರು ಒಂದೆರಡು ಮಾತುಗಳನ್ನು ಆಡುತ್ತ, ಹಾಸ್ಯದೊಂದಿಗೆ ಶಿವರಾಮ ಕಾರಂತ ವೇದಿಕೆಯ ಅಧ್ಯಕ್ಷರಾದ ಶ್ರೀ ವೀರಶೇಖರ ಸ್ವಾಮಿಯವರಿಗೆ ಮಾತಿಗಾಗಿ ಅವಕಾಶ ಮಾಡಿ ಕೊಟ್ಟರು. ಹೆಣ್ಣು ಮಕ್ಕಳ ಬಗ್ಗೆ,ಅಧ್ಯಕ್ಷರ ಭಾವ ತುಂಬಿದ ಮಾತುಗಳು,ಬಹಳ ಸಹ್ಯವೆನಿಸಿದವು. ಹೆಣ್ಣು ಮಕ್ಕಳು ಕೋಟೆಯಾದರೂ ಸರಿ, ಕೋಣೆಯಾದರು ಸರಿ,ಬಹಳ ಅಚ್ಚುಕಟ್ಟಾಗಿ ತಮ್ಮ ಕರ್ತವ್ಯ ನಿರ್ವಹಿಸಬಲ್ಲರು ಎಂಬ ಉತ್ತೇಜನ ನುಡಿಗಳಿಂದ ತಮ್ಮ ಪುಟ್ಟ ಭಾಷಣಕ್ಕೆ ವಿರಾಮ ಕೊಟ್ಟರು. ನಂತರ ಕೋಶಧಿಕಾರಿಗಳು, ಹಾಗೂ ಸಂಸ್ಥಾಪಕರಾದ ಶ್ರೀಚಂದ್ರಶೇಖರ ಚಡಗರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಶುಭಮುಕ್ತಾಯವಾಯಿತು.
Posted 21/9/2026







No comments:
Post a Comment