Friday, October 30, 2020

ಶೋಭಾಳ ಬರಹಗಳು - ಭಾಗ 5

ಶೋಭಾ, (3/9/1966) ಅಣ್ಣನ ಮಗಳು, ಸಾಗರ ಹೊಂಗಿರಣ ಸಂಸ್ಥೆಯ ಸಂಸ್ಥಾಪಕಿ, ಪ್ರಾಂಶುಪಾಲೆ, ಗ್ರಹ ಬಂಧನದ (lockdown) ಈ ಸಮಯದಲ್ಲಿ ಹಲವಾರು ಲೇಖನಗಳನ್ನು ಬರದು ಬಾಲ್ಯ, ತನ್ನ ಹಿರಿಯರು, ಪರಿಸರ, ಜೀವನದ ಅನುಭವ ಇತ್ಯಾದಿ ವಿಷಯಗಳನ್ನು ಸುಂದರವಾಗಿ, ಅರ್ಥಪೂರ್ಣವಾಗಿ ಬರೆದು ಫೆಸ್ಬುಕ್ , ಇನ್ಸ್ಟಗ್ರಾಂ ಖಾತೆಗಳಲ್ಲಿ ಹಂಚಿ ಕೊಂಡಿರುತ್ತಾಳೆ. ಅವಳ ಬರವಣಿಗೆಯ ವೈಖರಿ, ವಿಷಯಗಳ ನಿರೂಪಣೆ ಮನ ಮುಟ್ಟುವಂತಿದ್ದು ನೆನಪಿಗೋಸ್ಕರ ಇಲ್ಲಿ ಇರಿಸಿಕೊಂಡಿದ್ದೇನೆ. 



205. ನೆನಪುಗಳು - ಹಾಳೆ ಟೋಪಿ (17/11/2020)

ಕೃಷಿ ಹಿನ್ನೆಲೆಯಿಂದ ಬಂದ ಎಲ್ಲರಿಗೂ ಚಿರಪರಿಚಿತ ವಸ್ತು ಹಾಳೆಟೋಪಿ. ತಲೆಯ ಮೇಲೆ ಭಾರ ಹೊರುವ ರೈತರ ತಲೆಗೆ ರಕ್ಷಣೆ ನೀಡುವ ಈ ಹಾಳೆಟೋಪಿ ಒಂದು ರೀತಿಯಲ್ಲಿ ರೈತರ ಶಿರಸ್ತ್ರಾಣವಿದ್ದಂತೆ.
ಅಡಿಕೆ ಹಾಳೆ/ಮುಟ್ಟಾಳೆಯನ್ನು ನೀರಿನಲ್ಲಿ ನೆನೆಸಿ ಅದು ಮೃದುವಾದಾಗ ಬೇಕಾದ ಅಳತೆಗೆ ತುಂಡರಿಸಿ ಸರಿಯಾಗಿ ಟೋಪಿಯ ಆಕಾರಕ್ಕೆ ತಂದುಕೊಂಡು ತುದಿಗಳೆರಡನ್ನು ಹಗ್ಗದಲ್ಲಿ ನೇಯ್ದು ಕಟ್ಟಿದರೆ ಹಾಳೆಟೋಪಿ ಸಿದ್ಧ. ಅದರ ತುದಿಗಳನ್ನು ಜೋಡಿಸಿ ಕಲಾತ್ಮಕವಾಗಿ ಸಿದ್ಧ ಪಡಿಸಬಹುದು. ಇಲ್ಲವೇ ತುದಿಗಳನ್ನು ಸುಮ್ಮನೆ ಕಟ್ಟಿ ಬಳಸಬಹುದು.
ಹಿಂದೆಲ್ಲ ಹಾಳೆಟೋಪಿ ಬಳಸದೇ ಇದ್ದ ರೈತರಿರಲಿಲ್ಲ. ಎಲ್ಲರೂ ಹಾಳೆಟೋಪಿ ಬಳಸುವವರೇ ಆಗಿದ್ದರು. ಈಗ ಅದರ ಬದಲಿಗೆ ಬಳಸಲು ಹಲವಾರು ರೀತಿಯ ಶಿರಸ್ತ್ರಾಣಗಳು ಲಭ್ಯವಿವೆ. ಹೀಗಾಗಿ ಹಾಳೆಟೋಪಿಗಳಿಗೆ ಮೊದಲಿನಷ್ಟು ಬೇಡಿಕೆ ಈಗಿಲ್ಲ. ಆದರೆ ಹಾಳೆಟೋಪಿಯ ಬಳಕೆ ಇನ್ನೂ ಚಾಲ್ತಿಯಲ್ಲಿದೆ.
ನಮ್ಮೂರಿನ ರೈತರೆಂದರೆ ನೆನಪಾಗುವುದು ಪಾಣಿಪಂಚೆ ತೊಟ್ಟ, ತಲೆಗೆ ಹಾಳೆಟೋಪಿ ಹಾಕಿಕೊಂಡ, ಬಾಯಲ್ಲಿ ಕವಳ ತುಂಬಿಕೊಂಡು ಬಗಲಲ್ಲಿ ಕತ್ತಿ ಹಿಡಿದುಕೊಂಡು ಬರಿಮೈಯ್ಯಲ್ಲಿ ಕೆಲಸದಲ್ಲಿ ವ್ಯಸ್ತವಾಗಿರುವ ವ್ಯಕ್ತಿ. ಸೊಂಟದಲ್ಲಿ ಕತ್ತಿಯಿಲ್ಲದೆ ತಲೆಯಲ್ಲಿ ಹಾಳೆಟೋಪಿ ಇಲ್ಲದೆ ಆಗಿನ ರೈತರ್ಯಾರೂ ಗದ್ದೆಗೆ ಇಳಿಯುತ್ತಿರಲಿಲ್ಲ. ಕೆಲಸ ಮುಗಿದ ಮೇಲೆ ಇಳಿಸಂಜೆಯ ಹೊತ್ತಿಗೆ ತಲೆಯ ಮೇಲೆ ಹೊರೆ ಹುಲ್ಲು ಹೊತ್ತು ಮನೆಕಡೆಗೆ ಸಾಗುವ ರೈತರ ಚಿತ್ರಣ ಸರ್ವೇ ಸಾಮಾನ್ಯವಾಗಿತ್ತು. ಹೆಂಗಸರಾದರೆ ಮೊಣಕಾಲಿನವರೆಗೆ ಸೀರೆಯನ್ನು ಎತ್ತಿ ಕಟ್ಟಿ ಹಾಳೆಟೋಪಿ ಹಾಕಿದ ತಲೆಯ ಮೇಲೆ ಹುಲ್ಲಿನ ಹೊರೆ ಅಥವಾ ಬುಟ್ಟಿಯಲ್ಲೊಂದಿಷ್ಟು ದವಸಧಾನ್ಯ ಹೊತ್ತುಕೊಂಡು ಹೋಗುತ್ತಿದ್ದುದನ್ನು ಕಂಡ ನೆನಪು ಇನ್ನೂ ನನ್ನಲ್ಲಿ ಹಸಿಯಾಗಿದೆ.
ಹಾಳೆಟೋಪಿಯ ಪ್ರಭಾವ ನನ್ನೊಳಗೆ ಎಷ್ಟಿದೆಯೆಂದರೆ ಅದನ್ನು ಚಿತ್ರಕಾರನ ಕುಂಚದಿಂದ ರೂಪಾಂತರಿಸಿ ನಮ್ಮಲ್ಲಿ ಹೊಂಗಿರಣೋತ್ಸವದಲ್ಲೊಮ್ಮೆ ನಾವು ಕೃಷಿ ಉತ್ಸವ ಆಚರಿಸಿದಾಗ ಅತಿಥಿಗಳಿಗೆ ನೆನಪಿನ ಕಾಣಿಕೆಯಾಗಿ ಅಂತಹ ಕಲಾತ್ಮಕ ಹಾಳೆಟೋಪಿಗಳನ್ನು ಕೊಡುವಷ್ಟರ ಮಟ್ಟಿಗೆ ಯೋಚಿಸಿ ಯೋಜಿಸುವಂತೆ ಮಾಡಿತ್ತು. ಬಂದ ಗಣ್ಯರು ಚಿತ್ತಾರದ ಹಾಳೆಟೋಪಿಗಳನ್ನು ನೋಡಿ ಖುಷಿ ಪಟ್ಟರು. ಹಾಳೆ ಟೋಪಿಯನ್ನು ಈ ರೀತಿಯ ಒಂದು ಕಲಾಕೃತಿಯಾಗಿಯೂ ಉಪಯೋಗಿಸಬಹುದು ಎಂದು ಅಂದು ಎಲ್ಲರೂ ಆಶ್ಚರ್ಯ ಪಟ್ಟರು.
ಬಾಲ್ಯದ ದಿನಗಳಲ್ಲಿ ನಾವು ನಿರಂತರವಾಗಿ ಕಂಡ ವಸ್ತುಗಳು ಕಾಲಕಳೆದಂತೆ ಹೇಗೆಲ್ಲಾ ನಮ್ಮ ನೆನಪಿನ ಗಂಟಿನೊಳಗಿನ ಸರಕಾಗಿ ಉಳಿಯುತ್ತವೆ ಎನ್ನುವುದೊಂದು ಆಶ್ಚರ್ಯಕರ ಸಂಗತಿಯೇ ಸೈ!


204. ಹುಟ್ಟು ಹಬ್ಬ  - ಅನೀಶ (16/11/2020)

ಇವತ್ತು ನನ್ನ ಅಣ್ಣನ ಮಗನಾದ ಅನಿಶನ ಹುಟ್ಟು ಹಬ್ಬ. ಅವನೊಟ್ಟಿಗಿನ ನನ್ನ ಅನುಬಂಧ ವಿಶೇಷವಾದುದು. ಅವನ ಬಗೆಗಿರುವ ನನ್ನ ಮಮತೆಯನ್ನು ವಿವರಿಸಲು ಪದಗಳು ಸಿಗುವುದಿಲ್ಲ😌
ಒಮ್ಮೆ ಪರಿಚಯವಾದರೆ ಎಲ್ಲರ ಮನಸ್ಸಿನಲ್ಲಿ ಉಳಿಯುವಂತಹ ವ್ಯಕ್ತಿತ್ವ ಅನಿಶನದು. ಎಲ್ಲರನ್ನೂ ನಿಸ್ಪೃಹವಾಗಿ ಪ್ರೀತಿಸುವ ಗುಣ ಅವನದ್ದು‌. ಅವನ ಪ್ರೀತಿಯಲ್ಲಿ ಯಾವುದೇ ಕಲ್ಮಷ ಕಾಣಲು ಸಾಧ್ಯವೇ ಇಲ್ಲ. ಅಂತಹ ನಿಷ್ಕಳಂಕ ಪ್ರೀತಿ ಅವನದ್ದು.
ನಾನು ನನ್ನ ಮೊದಲ ಹೆರಿಗೆಗಾಗಿ ತವರು ಸೇರಿದಾಗ ಅನಿಶ ಐದು ತಿಂಗಳ ಮಗು. ನೋಡಲು ಬಹಳ ಮುದ್ದು ಮುದ್ದಾಗಿದ್ದ ಅನಿಶ ಗುಂಡು ಗುಂಡಗಿದ್ದ. ಬಹಳ ಭಾರದ ಮಗು. ತುಂಬು ಬಸುರಿಯಾಗಿದ್ದರೂ ನಾನವನನ್ನು ಎತ್ತಿ ಮುದ್ದಾಡುತ್ತಿದ್ದೆ. ಆ ಸಮಯದಲ್ಲಿ ಬೆಳೆದ ನನ್ನ ‌ಹಾಗೂ ಅವನ ಅನುಬಂಧ ಒಂದೇ ಓಘದಲ್ಲಿ ಸಾಗುತ್ತಿದೆ. ಅವನಿಗೆ ವರ್ಷ ಇಪ್ಪತ್ತೊಂಬತ್ತಾದರೂ ನನ್ನ ಕಣ್ಣಿಗೆ ಅವನು ಇನ್ನೂ ಆ ಪುಟ್ಟ ಅನಿಶನೆ. ಈಗಲೂ ನಾನು ಊರಿಗೆ ಹೋದಾಗ ನನ್ನ ಹತ್ತಿರ "ಕೈ ತುತ್ತು ಕೊಡಿ, ಶೋಭತ್ತೆ" ಎಂದು ಕೇಳಿ ನನ್ನ ಕೈ ತುತ್ತು ತಿನ್ನುವ ಮಗುತನವನ್ನು ಉಳಿಸಿಕೊಂಡವನು ಅನಿಶ.
ನಾನು ಎರಡನೇ ಸಲ ಗರ್ಭಿಣಿಯಾದ ಸಂದರ್ಭ. ನಾನಾಗ ಸುಮಾರು ಏಳೆಂಟು ತಿಂಗಳ ಗರ್ಭಿಣಿ. ನಾವೆಲ್ಲರೂ ಯಾರದ್ದೋ ಮನೆಗೆ ಹೋದಾಗ ಆ ಮನೆಯ ದೊಡ್ಡ ಹಾಲಿನಲ್ಲಿ ನಾನು ಗೋಡೆಗೊರಗಿ ನಿಂತಿದ್ದೆ. ಅನಿಶ ಆಗ ಮೂರ್ನಾಲ್ಕು ವರ್ಷದವ. ನನ್ನ ಗಡಿಗೆಯಂತಹ ಹೊಟ್ಟೆ ನೋಡಿ ಅವನಿಗೆ ಏನನಿಸಿತೇನೋ? ಆ ಹಾಲ್ ನ ಇನ್ನೊಂದು ಮೂಲೆಯಿಂದ ಓಡಿ ಬಂದ ಅವನು ನನ್ನ ಉಬ್ಬಿದ ಹೊಟ್ಟೆಗೆ ತನ್ನ ದೊಡ್ಡ ತಲೆಯಿಂದ ಢಿಕ್ಕಿ ಹೊಡೆದ. ಆ ರಭಸಕ್ಕೆ ನನಗೆ ಒಂದು ಸಲ ಕಣ್ಣು ಕತ್ತಲೆ ಬಂದಿತು. ಪುಣ್ಯಕ್ಕೆ ನನಗೆ ಅದರಿಂದ ಏನೂ ತೊಂದರೆಯಾಗದೆ ನಂತರ ಒಂದೆರಡು ತಿಂಗಳಲ್ಲಿ ನನ್ನ ಮಗಳು ಸುಸೂತ್ರವಾಗಿ ಧರೆಗಿಳಿದಳು. ಪುಟ್ಟ ಅನಿಶನ ಈ 'ಕೃತ್ಯ'ವನ್ನು ನನ್ನ - ಅವನ ಭೇಟಿಯಲ್ಲಿ ಪ್ರತಿ ಬಾರಿಯೂ ನಾವಿಬ್ಬರೂ ನೆನಪಿಸಿಕೊಂಡು ನಗುತ್ತೇವೆ.
ನನ್ನ ಮಗ ವಿಜೇತ ಮತ್ತು ಆನಿಶ ಒಟ್ಟೊಟ್ಟಿಗೆ ಬೆಳೆದವರು. ಚಿಕ್ಕವರಿದ್ದಾಗ ಕೂಡಿ ಆಟವಾಡಿದವರು ಹಾಗೂ ಹೊಡಕೊಂಡವರು ಕೂಡಾ! ಅವರು ಕಸಿನ್ಸ್ ಕ್ಕಿಂತ ಹೆಚ್ಚಾಗಿ ಒಳ್ಳೆಯ ಸ್ನೇಹಿತರು ಎಂದರೆ ತಪ್ಪಿಲ್ಲ. ಈಗಲೂ ಅವರಿಬ್ಬರ ನಡುವೆ ಅದೇ ಪ್ರೀತಿ, ವಿಶ್ವಾಸ, ಕಾಳಜಿ ಇರುವುದು ಖುಷಿಯ ವಿಷಯ.
ಎಂ ಬಿ ಎ ಮುಗಿಸಿರುವ ಅನಿಶ ಬೆಂಗಳೂರಿನ ಪ್ರೈವೇಟ್ ಕಂಪನಿಯಲ್ಲಿ ಎಚ್ ಆರ್ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದಾನೆ. ಮೂಲತಃ ಸ್ನೇಹಜೀವಿಯಾದ ಅವನು ತನ್ನ ಆಸಕ್ತಿಯ ಎಚ್ ಆರ್ ಡಿಪಾರ್ಟ್ಮೆಂಟ್ ಸಂಬಂಧಿ ಕೆಲಸದಲ್ಲಿ ನಿರತನಾಗಿ ನುರಿತನಾಗುತ್ತಿದ್ದಾನೆ. ಮಾಡುವ ಕೆಲಸದಲ್ಲಿ ಅವನು ತನ್ನನ್ನು ಪ್ರಾಮಾಣಿಕವಾಗಿ ತೊಡಗಿಸಿಕೊಳ್ಳುವ ರೀತಿ ಸ್ತುತ್ಯರ್ಹ.
ನೆಂಟರೇ ಆಗಲಿ, ಸ್ನೇಹಿತರೇ ಆಗಲಿ ಸಂಬಂಧವನ್ನು ಒಂದೇ ರೀತಿಯಲ್ಲಿ ಗಟ್ಟಿಯಾಗಿ ಉಳಿಸಿಕೊಳ್ಳುವುದು ಸುಲಭವಲ್ಲ. ಒಂದು ಘಟ್ಟದಲ್ಲಿ ಈ ಸಂಬಂಧಗಳು ಸಾರಗುಂದಿ ಜೊಳ್ಳು ಎಂದೆನಿಸಿ ಬಿಡುತ್ತವೆ. ಆದರೆ ಅನಿಶನ ಜೊತೆಗಿನ ನನ್ನ ಪ್ರೀತಿ - ವಿಶ್ವಾಸ ದಿನೇ ದಿನೇ ಸದೃಢವಾಗುತ್ತಿದೆಯೇ ವಿನಃ ಎಂದೂ ಜೊಳ್ಳು ಎಂದೆನಿಸಿಲ್ಲ. ಇದು ಹೀಗೆಯೇ ಉಳಿಯಲಿ ಎನ್ನುವ ಹಾರೈಕೆ ನನ್ನದು🙂

203. ಅನುಭವ - ನೆಗಡಿ (15/11/2020)

ನೆಗಡಿ ದೊಡ್ಡ ಕಾಯಿಲೆಯಲ್ಲ. ಆದರೆ ಅದರಿಂದಾಗುವ ಬಾಧೆಗಳು ಯಾವುದೇ ದೊಡ್ಡ ಕಾಯಿಲೆಗೂ ಮೀರಿದವು. ಆದರೆ ನೆಗಡಿಯಿಂದಾಗುವ ನಮ್ಮ ಆ ಬಾಧೆಗಳನ್ನು ಯಾರೂ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಅದು ನೆಗಡಿಯಿಂದ ಬಳಲುವ ವ್ಯಕ್ತಿಯ ದುರಂತ😳 ಬಾಧೆಯನ್ನು ಅನುಭವಿಸುವುದೂ ತಪ್ಪುವುದಿಲ್ಲ; ಯಾರಿಂದ ಉಪಚಾರವೂ ಸಿಗುವುದಿಲ್ಲ. ಎಂತಹ ವಿಪರ್ಯಾಸವಲ್ಲವೇ?
ನನಗೆ ಪಿಯುಸಿಯಲ್ಲಿರುವಾಗ ಕನ್ನಡದಲ್ಲಿ ನೆಗಡಿಯ ಮೇಲಿದ್ದ ಒಂದು ಪಾಠದ ನೆನಪಾಗುತ್ತದೆ. ಯಾರು ಬರೆದದ್ದು ಎಂದು ಈಗ ನೆನಪಿಲ್ಲ. ಅದೊಂದು ಲಲಿತಪ್ರಬಂಧ. ನೆಗಡಿ ಬಂದಾಗ ಆಗುವ ತಾಪತ್ರಯಗಳ ಬಗ್ಗೆ ಸವಿಸ್ತಾರವಾಗಿ ಲೇಖಕರು ಬರೆದಿದ್ದಾರೆ. ಹಾಗೆಯೇ ನೆಗಡಿ ಬಂದು ಒದ್ದಾಡುವಾಗ ಉಳಿದವರು "ಓ ನೆಗಡಿಯಾ? ಅದಕ್ಕೆಲ್ಲ ಎಂತ ತಲೆಬಿಸಿ?" ಎಂದು ಪ್ರತಿಕ್ರಿಯಿಸುವುದು ಹಾಗೂ ಅದರಿಂದಾಗಿ ನೆಗಡಿಯಾದವರಿಗೆ ಆಗುವ ಕಿರಿಕಿರಿಯ ಬಗ್ಗೆಯೂ ಬರೆದಿದ್ದಾರೆ. ನಮ್ಮದೇ ನೆಗಡಿಯ ಕಥೆಯೇನೋ ಅನ್ನಿಸುವಷ್ಟು ನಮ್ಮೊಡನೆ ಕನೆಕ್ಟ್ ಆಗುವ ಲೇಖನ ಅದಾಗಿತ್ತು.
ಜ್ವರ ಅಥವಾ ಇನ್ಯಾವುದೇ ಕಾಯಿಲೆಯಾದರೆ ದೊರಕುವ ಗಮನ ಹಾಗೂ ಆರೈಕೆ ನೆಗಡಿಯಿಂದ ಒದ್ದಾಡುವ ವ್ಯಕ್ತಿಗೆ ಸಿಕ್ಕುವುದಿಲ್ಲ ಎಂದು ಬಹಳ ವಿಡಂಬನಾತ್ಮಕವಾಗಿ ಬರೆದ ಪ್ರಬಂಧ ಅದಾಗಿತ್ತು.
ನೆಗಡಿಯಿಂದಾಗುವ ಒದ್ದಾಟಗಳು ಒಂದೇ ಎರಡೇ? ಮೂಗು ಕಟ್ಟುವುದು, ತಲೆನೋವು, ಕೆಲವೊಮ್ಮೆ ಧಾರಾಕಾರವಾಗಿ ಸುರಿಯುವ ಮೂಗು, ಒರೆಸಿ ಒರೆಸಿ ಕೆಂಪಗಾಗುವ ಮೂಗಿನ ತುದಿ, ಗಂಟಲು ಉರಿ, ತಲೆಭಾರ, ಮೈಕೈ ಹೊಡೆತ... ಇವೆಲ್ಲ ಸರ್ವೇಸಾಮಾನ್ಯವಾಗಿ ನೆಗಡಿಯಾದವರನ್ನು ಕಾಡುವ ಸಮಸ್ಯೆಗಳು. ಇಷ್ಟೆಲ್ಲಾ ಸಮಸ್ಯೆಗಳಿಂದ ಒದ್ದಾಡುವಾಗ ನಮ್ಮೊಡನಿರುವವರಿಂದ "ಬರೀ ನೆಗಡಿ ತಾನೇ?" ಎನ್ನುವ ಉದ್ಗಾರ. ಅದರೊಂದಿಗೆ ಎಲ್ಲರಿಂದ ಸಿಗುವ ಬಿಟ್ಟಿ ಸಲಹೆಗಳು! ಅನುಭವಿಸುವ ವ್ಯಕ್ತಿಯ ಮನಸ್ಥಿತಿ ಆಗ ಹೇಗಿರಬಹುದು ಹೇಳಿ?
ನೆಗಡಿಯಾದಾಗ ಮನೆ ಔಷಧಿ ಉತ್ತಮ ಕೆಲಸ ಮಾಡುತ್ತದೆ. ಕಷಾಯ, ಸಾಂಬಾರ್ ಬಳ್ಳಿ ಎಲೆ ರಸ, ವೀಳ್ಯದೆಲೆ ರಸ, ನಿಂಬೆ ಕಲ್ಲುಸಕ್ಕರೆ ಮಿಶ್ರಿತ ರಸ, ಜೀರಿಗೆಯ ಹಸಿಬಿಸಿ ಕಷಾಯ....ಹೀಗೆ ಉದ್ದನೆಯ ಮನೆ ಔಷಧಿ ಪಟ್ಟಿಯನ್ನೇ ಇಲ್ಲಿಡಬಹುದು. ಆದರೆ ನೀವೇನೇ ಮಾಡಿ ನೆಗಡಿ ಬಂದಾಗ ಒಂದು ವಾರದ ಒದ್ದಾಟ ಇದ್ದೇ ಇರುತ್ತದೆ. ಆದರೆ ಈ ಔಷಧಿಗಳಿಂದ ಬಾಧೆ ಕಡಿಮೆಯಾಗಬಹುದಷ್ಟೇ!
ಚಳಿಗಾಲ ಪ್ರಾರಂಭವಾಗುತ್ತಿದೆ. ನೆಗಡಿಗಯನ್ನು ಆಹ್ವಾನಿಸಲು ಹೇಳಿ ಮಾಡಿಸಿದ ಕಾಲ🤧 ನೆಗಡಿಯ ಕಾಟದ ಪ್ರತಾಪವನ್ನು ಅರಿತು ಅದು ಬಾರದಂತಿರಲು ಸೂಕ್ತ ಎಚ್ಚರಿಕೆ ವಹಿಸುವುದು ಒಳ್ಳೆಯದೇನೋ? ಹೀಗಾಗಿ ಬೆಚ್ಚಗಿದ್ದು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎನ್ನುವ ಕಿವಿಮಾತಿನೊಂದಿಗೆ....!


202. ನೆನಪುಗಳು - ಶಾಲೆಯ ಘಂಟೆ (14/11/2020)

ನಿನ್ನೆ ಸಂಜೆ ನಾನು, ನನ್ನ ಮಗಳು ಹಾಗೂ ನನ್ನ ಬಂಟ ಡಿಂಗ ವಾಕಿಂಗ್ ಮಾಡುವಾಗ ಗ್ರೌಂಡಿನ ರೌಂಡ್ಸ್ ಮುಗಿಸಿ ಶಾಲಾ ಮುಖ್ಯ ಕಟ್ಟಡದೊಳಗಿಂದ ನಡೆದು ಹಾಗೇ ಕ್ಯಾಂಪಸ್ಸಿನ ಕೆಳ ಭಾಗಕ್ಕೆ ಹೋಗಿ ತಿರುಗಿ ವಾಪಾಸ್ ಮೇಲೆ ಬಂದೆವು. ಶಾಲಾ ಕಟ್ಟಡದೊಳಗೆ ಸಾಗುವಾಗ ಅಲ್ಲಿದ್ದ ಶಾಲೆಯ ಘಂಟೆಯನ್ನು ನನ್ನ ಮಗಳು ಬಾರಿಸಿದಳು. ತದನಂತರ ಡಿಂಗನೂ ಬಾರಿಸಿದ. ನಾನೂ ಅದೇ ಕೆಲಸ ಮಾಡಿದೆ. ಇಷ್ಟು ದಿನ ಆ ಘಂಟೆಯ ಸುದ್ದಿಗೆ ಯಾರೂ ಹೋಗಿರಲಿಲ್ಲ. ಇವತ್ತು ಅದರ ರಿಂಗಣ ಮೈ ನವಿರೇಳಿಸಿತು. ಭಣಭಣ ಅನ್ನುತ್ತಿದ್ದ ಪರಿಸರದಲ್ಲಿ ಘಂಟಾನಾದದ ಇಂಪು ತುಂಬಿತು.
ಶಾಲೆ ಮತ್ತು ಘಂಟೆ ಇವೆರಡರ ಅವಿನಾಭಾವ ಸಂಬಂಧ ವಿವರಣೆಗೆ ಮೀರಿದ್ದು. ಶಾಲಾ ದಿನಗಳಲ್ಲಿ ಘಂಟೆಯ ನಾದ ಎಷ್ಟು ಮುಖ್ಯ ಪಾತ್ರ ವಹಿಸುತ್ತದೆ ಎಂಬುವುದನ್ನು ಎಲ್ಲರೂ ಬಲ್ಲರು. ಎಲ್ಲಾ ಸಮಯದಲ್ಲಿ ಅದು ಮುಖ್ಯವಾಗುತ್ತದೋ ಇಲ್ಲವೋ ಆಟದ ಪೀರಿಯಡ್ಡಿನ ಮುಂಚಿನ ಪೀರಿಯಡ್ ನಲ್ಲಂತೂ ಮಕ್ಕಳು ಘಂಟೆಯ ಶಬ್ದಕ್ಕಾಗಿ ಕಾತುರತೆಯಿಂದ ಮೈಯೆಲ್ಲಾ ಕಿವಿಯಾಗಿ ಕಾಯುತ್ತಿರುತ್ತಾರೆ😊 ಘಂಟೆಯ ದನಿ ಕೇಳುವುದೇ ತಡ ಟೀಚರ್ ಗಿಂತ ಮುಂಚೆ ಮಕ್ಕಳು ತರಗತಿಯಿಂದ ಹೊರಬಂದಿರುತ್ತಾರೆ. ಹೀಗೆ ಎಲ್ಲಾ ಸಮಯದಲ್ಲಿ ಅಲ್ಲದಿದ್ದರೂ ಕೆಲ ಕೆಲವು ಸಮಯದ ಘಂಟಾನಾದಕ್ಕೆ ಬಹಳ ಮಹತ್ವವಿರುತ್ತದೆ. ಒಂದು ರೀತಿಯಲ್ಲಿ ಶಾಲೆಯ ದಿನನಿತ್ಯದ ಶಿಸ್ತಿನ ನಡೆಯುವಿಕೆಯು ನಿಗದಿತ ಸಮಯದ ಘಂಟೆ ಹೊಡೆಯುವಿಕೆಯ ಮೇಲೆ ಅವಲಂಬಿತವಾಗಿರುತ್ತದೆ, ಅಲ್ಲವೇ?
ನಿನ್ನೆಯ ಘಂಟೆಯ ದನಿ ಮಾರ್ಚ್ 20ರಿಂದ ಕೇಳಿರಲಿಲ್ಲ. ಆ ಘಂಟೆಯ ದನಿ ಇಷ್ಟು ದಿನಗಳ ಖಾಲಿತನವನ್ನು ಒಮ್ಮೆಲೇ ಮರೆಸಿತು. ಮಕ್ಕಳಿಲ್ಲದ ಹಾಗೂ ಘಂಟಾನಾದವಿಲ್ಲದ ಶಾಲೆ ಶಾಲೆಯೇ ಅಲ್ಲ. ಮಕ್ಕಳ ಕಲರವ, ಗಲಾಟೆ, ಗದ್ದಲವಿಲ್ಲದೆ ಕಳೆದೆಂಟು ತಿಂಗಳುಗಳಿಂದ ಎಲ್ಲಾ ಶಾಲೆಗಳು ಭಣಗುಡುತ್ತಿವೆ. ನಮ್ಮ ದೊಡ್ಡ ಕ್ಯಾಂಪಸ್ಸಂತೂ ಮಕ್ಕಳು ಎಂದು ಬಂದು ಅದಕ್ಕೆ ಜೀವ ತುಂಬುತ್ತಾರೋ ಎಂದು ಕಾಯುತ್ತಿರುವಂತೆ ಅನಿಸುತ್ತಿದೆ. ಮಕ್ಕಳ ಮುಖ ಕಾಣದೆ ಮಂಕಾದ ಮನಸ್ಸು ಚುರುಕುಗೊಳ್ಳಲು ದಾರಿ ಕಾಣದಾಗಿದೆ. ಮಕ್ಕಳು ಕೂಡಾ ಶಾಲೆಗೆ ಹಿಂದಿರುಗಿ ಬರಲು ಅಷ್ಟೇ ಉತ್ಸುಕತೆಯಿಂದ ಕಾಯುತ್ತಿರಬಹುದು. ದೀಪಾವಳಿಯ ಹೊಂಬೆಳಕು ಇದಕ್ಕೇನಾದರೂ ಹೊಸ ದಾರಿಯನ್ನು ತೋರಿಸಬಹುದೇನೋ ಎಂಬ ನಿರೀಕ್ಷೆ ಎಲ್ಲರಲ್ಲೂ ಇದೆ. ನಮ್ಮೆಲ್ಲರ ನಿರೀಕ್ಷೆ ಹುಸಿಯಾಗದೆ ಸತ್ಫಲ ನೀಡಲಿ ಎಂಬ ಆಶಾಭಾವನೆಯನ್ನು ಆ ಘಂಟಾನಾದ ಹುಟ್ಟಿಸಿತೇ?



201. ನೆನಪುಗಳು - ದೀಪಾವಳಿ (12/11/2020)

ಇನ್ನೊಂದೆರಡು ದಿನಗಳಲ್ಲಿ ದೀಪಾವಳಿ ಹಬ್ಬ. ನಾವೆಲ್ಲ ಚಿಕ್ಕವರಿದ್ದಾಗ ಅಜ್ಜಯ್ಯನ ಮನೆಯಲ್ಲಿ ಹಬ್ಬಕ್ಕೆ ಎಲ್ಲರೂ ಸೇರಿಕೊಂಡು ಮಾಡುತ್ತಿದ್ದ ಗೌಜು ಗದ್ದಲ ಮಸ್ತ್ ಆಗಿತ್ತು.
ನನಗೆ ಚೆನ್ನಾಗಿ ನೆನಪಿರುವುದು ಹಂಡೆಗೆ ನೀರು ತುಂಬುವ ದೃಶ್ಯ. ಬೂರೆ ಹಬ್ಬದ ಹಿಂದಿನ ದಿವಸ ಸಂಜೆ ಹಂಡೆಗೆ ಹೂವಿನ ಮಾಲೆ ಹಾಗೂ ಕಹಿ ಹಿಂಡ್ಲೆ ಬಳ್ಳಿ ಕಟ್ಟಿ ಶೇಡಿ ಬಳಿದು ಬಾವಿಯಿಂದ ನೀರು ಸೇದಿ ಸೇದಿ ಘಂಟಾನಾದದೊಂದಿಗೆ ಹಂಡೆಯನ್ನು ತುಂಬಿಸುತ್ತಿದ್ದಾಗಿನ ಖುಷಿ ಇನ್ನೂ ನೆನಪಿದೆ. ನಾವು ನೀರು ಸೇದದೆ ಬರೀ ಘಂಟೆ ಹೊಡೆಯುತ್ತಾ ಆಚೀಚೆ ತಿರುಗುತ್ತಿದ್ದ ಕಾರಣ ನಮಗದು ಖುಷಿಯಾಗದೆ ಮತ್ತೇನು?
ಮಾರನೆಯ ದಿನ ನಾಲ್ಕು ಗಂಟೆಗೆಲ್ಲ ನನ್ನ ಸೋದರತ್ತೆ ನಮ್ಮನ್ನೆಲ್ಲ ಎಬ್ಬಿಸಿ ದೇವರ ಮುಂದೆ ಮಣೆ ಹಾಕಿ ಕೂರಿಸಿ ಮೈಕೈಗೆಲ್ಲಾ ಎಣ್ಣೆ ಹಚ್ಚಿ ಬಿಡುತ್ತಿದ್ದರು. ಒಂದರ್ಧ ಗಂಟೆಯ ನಂತರ ಬಚ್ಚಲು ಮನೆಯಲ್ಲಿ ಕೂರಿಸಿ ಹಂಡೆಯಿಂದ ಬಿಸಿ ಬಿಸಿ ನೀರು ಮೊಗೆದು ನಮ್ಮಗಳ ಮೇಲೆ ಹೊಯ್ಯುತ್ತಿದ್ದರು. ನಂತರದಲ್ಲಿ ಮೊಸರವಲಕ್ಕಿ ತಿನ್ನಲು ಕೊಡುತ್ತಿದ್ದರು. ಇಷ್ಟೆಲ್ಲಾ ಆಗುವಾಗ ಸುಮಾರು ಆರು ಗಂಟೆಯಾಗಿರುತ್ತಿತ್ತು. ಅಷ್ಟು ಹೊತ್ತಿಗೆ ನನ್ನಪ್ಪ ನಮಗೆಲ್ಲರಿಗೂ ಪಟಾಕಿಗಳನ್ನು ಹಂಚುತ್ತಿದ್ದರು. ಸರ ಪಟಾಕಿ, ಬಿಡಿ ಪಟಾಕಿ, ಲಕ್ಷ್ಮಿ ಪಟಾಕಿ, ನೆಲ ಚಕ್ರ, ಸುರ್ ಸುರ್ ಬತ್ತಿ, ಹನುಮಂತನ ಬಾಲ, ಹೂವಿನ ಕುಂಡ(ದುರ್ಸು), ನೆಲ ಗುಮ್ಮ...ಹೀಗೆ ಹಲವಾರು ರೀತಿಯ ಪಟಾಕಿಗಳನ್ನು ಹಚ್ಚಿ ನಾವು ಕುಣಿಯುತ್ತಿದ್ದೆವು. ನೆಲಗುಮ್ಮವನ್ನು ನೆಲಕ್ಕೆ ಹೊಡೆದೂ ಹೊಡೆದೂ ಢಂ ಗುಡಿಸಿ ಕೈ ಭುಜ ಎಲ್ಲಾ ಸೋತು ಬರುತ್ತಿದ್ದವು. ಆದರೂ ಅದೊಂದು ರೀತಿಯ ಮಜಾ. ನನ್ನಪ್ಪನಂತೂ ಎಲ್ಲಾ ರೀತಿಯ ಪಟಾಕಿಗಳನ್ನು ಕೈಯ್ಯಲ್ಲಿ ಹಿಡಿದು ಢಂ ಗುಡಿಸುತ್ತಿದ್ದರು. ಆಗ ನಾವೆಲ್ಲಾ ಬಾಯಿಬಿಟ್ಟುಕೊಂಡು ಅವರನ್ನು ನೋಡುತ್ತಿದ್ದೆವು. ನಾವಾದರೋ ಪಟಾಕಿಗೆ ಬೆಂಕಿ ಹಚ್ಚಿ ಒಂದು ಮೈಲು ದೂರ ಬಿಸಾಡಿ ಅದು ಢಂ ಗುಡುವುದನ್ನು ನೋಡುವವರು😀 ಆಗ ನಮಗೆಲ್ಲ ನನ್ನಪ್ಪ ದೊಡ್ಡ ಹೀರೋ ತರಹ ಕಾಣಿಸುತ್ತಿದ್ದರು.
ಮುಂಜಾವಿನಲ್ಲಿ ಪಟಾಕಿ ಹೊಡೆದು ಮುಗಿಸುವಾಗ ಬಿಸಿ ಬಿಸಿ ಕೊಟ್ಟೆ ಕಡುಬು ತಿನ್ನಲು ಸಿಗುತ್ತಿತ್ತು. ಅದನ್ನು ಹೊಟ್ಟೆ ಬಿರಿಯುವಷ್ಟು ತಿಂದು ನಮ್ಮ ಪುಟಾಣಿಗಳ ಸೈನ್ಯ ಇತರೆ ಕಾರುಬಾರುಗಳಲ್ಲಿ ಮಗ್ನರಾಗುತ್ತಿದ್ದೆವು. ಮಧ್ಯಾಹ್ನ ಗಡದ್ದಾಗಿ ಹಬ್ಬದ ಊಟ ಉಂಡು ಅಲ್ಲಲ್ಲೇ ಅಡ್ಡಾಗುತ್ತಿದ್ದೆವು. ಮಧ್ಯಾಹ್ನದ ಬಿಸಿಲು ಮರೆಯಾಗಿ ಸಂಜೆಯಾಗುತ್ತಿದ್ದಂತೆ ಮತ್ತೊಮ್ಮೆ ಪಟಾಕಿಯ ಭರಾಟೆ ಶುರು. ಅಜ್ಜಯ್ಯ ರಾತ್ರಿ ಗದ್ದೆಗೆ ದೀಪ ಇಡಲು ಹೋಗುವಾಗ ನಾವೆಲ್ಲಾ ಗಲಾಟೆ ಮಾಡುತ್ತಾ ಅವರ ಹಿಂದೆ ಹೋಗುತ್ತಿದ್ದದ್ದು ಮಸುಕಾಗಿ ನೆನಪಿದೆ.
ನಂತರ ಬೆಳೆದು ದೊಡ್ಡವರಾಗುತ್ತಿದ್ದಂತೆ ನಮ್ಮ ಕಲಿಕೆ, ವೃತ್ತಿಬದುಕು ನಮ್ಮ ದಾರಿಗಳನ್ನು ಬೇರೆಯಾಗಿಸಿ ಹಬ್ಬ ಹರಿದಿನಗಳಲ್ಲಿ ಎಲ್ಲರೂ ಒಟ್ಟಾಗಿ ಸೇರುವುದು ನಿಂತು ಅದರ ಸ್ವಾರಸ್ಯ ನಿಧಾನವಾಗಿ ಕಡಿಮೆಯಾಗತೊಡಗಿತು. ಹಬ್ಬ ಎನ್ನುವುದು ಬರೀ ಆಚರಣೆಯಾಗುಳಿಯಿತೇ ಹೊರತು ಬಾಲ್ಯದ ದಿನಗಳ ಆ ಸೊಗಸು, ಸಂಭ್ರಮ ಮಾಯವಾಯಿತು. ಕಾಲದ ಸಾಗುವಿಕೆ ಎನ್ನುವುದು ನಮ್ಮ ಜೀವನದಲ್ಲಿ ಬಹಳಷ್ಟು ಬದಲಾವಣೆಗಳನ್ನು ತಂದು ಬಾಲ್ಯದ ದಿನಗಳ ಸ್ಮರಣೆಯನ್ನಷ್ಟೇ ಉಳಿಸಿತು. ಆ ಬಾಲ್ಯದ ಆ ದಿನಗಳ ಸಂಭ್ರಮ ಮರಳಿ ದೊರೆಯಬಾರದೇ?



200. ನೆನಪುಗಳು - ಕೈ ತುತ್ತು (11/11/2020)

ಕೈ ತುತ್ತು ಕೊಡುವುದು ನನ್ನ ಪ್ರೀತಿಯ ಕೆಲಸಗಳಲ್ಲಿ ಒಂದು. ದೊಡ್ಡ ಪಾತ್ರೆಯಲ್ಲಿ ಅನ್ನ ಹಾಕಿಕೊಂಡು ಅದಕ್ಕೆ ಒಮ್ಮೆ ಸಾಂಬಾರ್, ಒಮ್ಮೆ ಮೊಸರು, ಒಮ್ಮೆ ಉಪ್ಪಿನಕಾಯಿ... ಹೀಗೆ ಏನೇನು ಲಭ್ಯವಿದೆಯೋ ಅದನ್ನು ಸೇರಿಸಿ ಚೆನ್ನಾಗಿ ಹಿಚುಕಿ ಕಲೆಸಿ ನನ್ನ ಸುತ್ತಲೂ ಎಲ್ಲರನ್ನೂ ಕೂರಿಸಿಕೊಂಡು ದೊಡ್ಡ ದೊಡ್ಡ ಉಂಡೆಗಳನ್ನು ಮಾಡಿ ಕೈ ತುತ್ತು ಕೊಡುವುದರಲ್ಲಿ ಅಸೀಮವಾದ ಸುಖವಿದೆ.
ಹಿಂದೆಲ್ಲ ನಾನು ಊರಿಗೆ ಹೋಗಲಿ, ಗಂಡನ ಮನೆಗೆ ಹೋಗಲಿ ಎಲ್ಲೇ ಹೋದರೂ ನಾನು ಅಲ್ಲಿರುವ ದಿನಗಳಲ್ಲಿ ಒಮ್ಮೆಯಾದರೂ ಮನೆಯ ಮಕ್ಕಳನ್ನೆಲ್ಲ ಕೂರಿಸಿಕೊಂಡು ಕೈ ತುತ್ತು ಹಾಕುವ ಕಾರ್ಯಕ್ರಮ ನಡೆದೇ ನಡೆಯುತ್ತಿತ್ತು. ಕೆಲವೊಮ್ಮೆ ಮಕ್ಕಳೊಂದಿಗೆ ದೊಡ್ಡವರೂ ಸಾಲಿನಲ್ಲಿ ಸೇರಿಕೊಳ್ಳುತ್ತಿದ್ದರು. ಕೈ ತುತ್ತು ಕೊಟ್ಟಾಗ ಅನ್ನ ಜಾಸ್ತಿ ಪ್ರಮಾಣದಲ್ಲಿ ಖರ್ಚಾಗುತ್ತಿತ್ತು. ನಾಲ್ಕು ಜನ ಸೇರಿ ತಿನ್ನುವಾಗ ಆಹಾರ ಜಾಸ್ತಿ ಒಳ ಹೋಗುವುದು ಸಹಜ ತಾನೇ?
ಹೊಂಗಿರಣ ಪ್ರಾರಂಭಿಸಿದ ಮೊದಲಿನ ಹಲವಾರು ವರ್ಷಗಳು ನಾನು ಹಾಸ್ಟೆಲ್ಲಿನ ಮಕ್ಕಳಿಗೆ ಹೆಚ್ಚು ಕಮ್ಮಿ ತಿಂಗಳಿಗೊಮ್ಮೆ ಕೈ ತುತ್ತು ಕೊಡುತ್ತಿದ್ದೆ. ಮಕ್ಕಳ ಜೊತೆ ಟೀಚರ್ಸ್ ಕೂಡಾ ನನ್ನ ಕೈ ತುತ್ತಿಗೆ ಕಾಯುತ್ತಿದ್ದರು. ಕೈ ತುತ್ತು ಕೊಡುವ ರಾತ್ರಿ ಊಟಕ್ಕೆ ಜಾಸ್ತಿ ಅನ್ನ ಮಾಡುವಂತೆ ಭಟ್ಟರಿಗೆ ಹೇಳಿರುತ್ತಿದ್ದೆ. ದೊಡ್ಡದಾದ ಡಬರಿಯಲ್ಲಿ ಅನ್ನ ಹಾಕಿ ಹದವಾಗಿ ಕಲೆಸುವುದೇ ಒಂದು ಕಲೆ. ಹಾಸ್ಟೆಲ್ಲಿನ ಇನ್ನೂರಕ್ಕೂ ಹೆಚ್ಚಿನ ಸಂಖ್ಯೆಯ ಮಕ್ಕಳು ಸಾಲಿನಲ್ಲಿ ಬಂದು ಕೈ ತುತ್ತು ಹಾಕಿಸಿಕೊಂಡು ತಿನ್ನುತ್ತಿದ್ದರು. ಕಡಿಮೆ ತಿನ್ನುವ ಮಕ್ಕಳು ಎರಡು ಅಥವಾ ಮೂರನೇ ಸಲ ಬರದೇ ಕೈ ಕೊಡುತ್ತಿದ್ದರು. ಆಗ ಇನ್ನುಳಿದ ಮಕ್ಕಳು ಅವರನ್ನು ಎಳೆ ತಂದು ಇನ್ನೊಂದು ಬಾರಿ ಕೈ ತುತ್ತು ತಿನ್ನುವಂತೆ ಮಾಡುತ್ತಿದ್ದರು. ಆಗವರು ಒದ್ದಾಡುತ್ತಾ ಆ ಎಕ್ಸ್ಟ್ರಾ ತುತ್ತನ್ನು ತಿನ್ನುವ ಪರಿಯನ್ನು ನೋಡುವುದೇ ಚೆಂದ. ಅಷ್ಟೂ ಜನರಿಗೆ ಕೈ ತುತ್ತು ಹಾಕಿ ಮುಗಿಸುವಾಗ ಒಂದು ಗಂಟೆಗೂ ಮೀರಿದ ಸಮಯ ತಗಲುತ್ತಿತ್ತು. ಎಷ್ಟೇ ಸುಸ್ತಾದರೂ ಅಷ್ಟು ಜನರಿಗೆ ಕೈ ತುತ್ತು ಕೊಟ್ಟ ತೃಪ್ತತೆ ನನ್ನಲ್ಲಿ ಇರುತ್ತಿತ್ತು 😊
ಹಿಂದೆಲ್ಲಾ ರಜಾಕಾಲದಲ್ಲಿ ಮನೆಯಲ್ಲಿ ಎಲ್ಲರೂ ಸೇರಿದ್ದಾಗ ಸಾಯಂಕಾಲ ಬಾಯಿತೊಡುವಿಗೆ ಅನ್ನಕ್ಕೆ ಉಪ್ಪಿನಕಾಯಿ ತೆಂಗಿನೆಣ್ಣೆ ಹಾಕಿ ಕಲೆಸಿ ಕೈ ತುತ್ತು ಕೊಟ್ಟರೆ ಕ್ಷಣಮಾತ್ರದಲ್ಲಿ ಅನ್ನದ ಡಬರಿ ಖಾಲಿಯಾಗುತ್ತಿತ್ತು. ಕೈ ತುತ್ತಿನ ರುಚಿ ಅಂತಹುದು! ಪದಾರ್ಥದ ರುಚಿಯ ಜೊತೆಗೆ ಪ್ರೀತಿಯ ರುಚಿ ಸೇರಿ ಕೈ ತುತ್ತಿಗೊಂದು ವಿಶಿಷ್ಟ ರುಚಿ ಬರುತ್ತಿತ್ತು.
ಕೂಡು ಕುಟುಂಬದಲ್ಲಿ ನೆಲೆಸುವ ಪದ್ಧತಿ ಹಿಂದೆ ಎಲ್ಲಾ ಕಡೆಯೂ ಇದ್ದಾಗ ಮನೆಯ ಅಜ್ಜಿಯಂದಿರು ಮನೆಯ ಮೊಮ್ಮಕ್ಕಳಿಗೆಲ್ಲಾ ಕೈ ತುತ್ತು ಕೊಡುವುದು ಸರ್ವೇ ಸಾಮಾನ್ಯ ಸಂಗತಿಯಾಗಿತ್ತು. ತಾಯಂದಿರು ತಮ್ಮ ಮಕ್ಕಳು ಪುಟ್ಟವರಿದ್ದಾಗ ಬಾಯಿ ತುತ್ತು (ತಿನ್ನದ ಮಕ್ಕಳ ಬಾಯಿಗೆ ತುರುಕುವುದು😀) ಕೊಡುವಾಗ "ಇದು ಅಜ್ಜನ ತುತ್ತು, ಇದು ಅಜ್ಜಿ ತುತ್ತು...." ಹೀಗೆ ಮನೆಮಂದಿಯ ಹೆಸರನ್ನೆಲ್ಲ ಉಲ್ಲೇಖಿಸುತ್ತಾ ಮಕ್ಕಳ ಹೊಟ್ಟೆ ತುಂಬುವ ಹಾಗೆ ಮಾಡುವುದು ಒಂದು ಕೌಶಲ್ಯವೇ ಸರಿ! ಈ ರೀತಿಯ ಕೈ ತುತ್ತು ಕೊಡುವಾಗಿನ ಸಾಂಗತ್ಯ ನಮ್ಮ ನಮ್ಮೊಳಗಿನ ಬಾಂಧವ್ಯವನ್ನು ನಿಸ್ಸಂಶಯವಾಗಿ ಗಟ್ಟಿ ಮಾಡುತ್ತದೆ.


199. ನೆನಪುಗಳು - ಬಾವಿಕಟ್ಟೆ (10/11/2020)


ಅಜ್ಜಯ್ಯನ ಮನೆಯ "ಬಾವಿಕಟ್ಟೆ" ನನಗೆ ಬಹಳ ಆಪ್ತ ಜಾಗ. ನಾನು ಈಗಲೂ ಊರಿಗೆ ಹೋದರೆ ಒಮ್ಮೆ ಬಾವಿಕಟ್ಟೆಗೆ ಹೋಗಿ ಬಾವಿಯಲ್ಲಿ ಇಣುಕು ಹಾಕಿ ನೀರಿನ ಮಟ್ಟ ನೋಡಿ ತದನಂತರದಲ್ಲಿ ಹೊರಗೆ ಕಾಣುವ ತೋಟ ಗದ್ದೆಗಳೆಡೆಗೊಮ್ಮೆ ನೋಡಿದರೆ ನನಗೆ ಒಂದು ರೀತಿಯ ಸಮಾಧಾನ.
ಆ ಬಾವಿಕಟ್ಟೆ ಸುಮಾರು ಇಪ್ಪತ್ತಡಿ ಆಯಳತೆಯ ಜಾಗ. ಒಂದು ಕಡೆ ನೀರಿನ ಟ್ಯಾಂಕ್ ಇರುವ ಕಾರಣ ಆ ಕಡೆ ಕ್ಲೋಸ್ ಆಗಿದೆ. ಆ ಗೋಡೆಗೆ ತಾಗಿ ಎರಡು ನಲ್ಲಿಗಳಿವೆ ಹಾಗೂ ದೊಡ್ಡದಾದ ಬಟ್ಟೆಯೊಗೆಯುವ ಕಲ್ಲಿದೆ. ಇನ್ನೊಂದು ಪಕ್ಕಕ್ಕೆ ಹೊರಹೋಗುವ ಬಾಗಿಲಿದೆ. ಆ ಬಾಗಿಲಿನ ಬಲಪಕ್ಕದಲ್ಲಿ ಬಾವಿಯಿದೆ. ಬಾವಿ ಇರುವ ಭಾಗ ಓಪನ್ ಇದೆ. ಇಡೀ ಬಾವಿಕಟ್ಟೆಯ ನೆಲಕ್ಕೆ ಚಪ್ಪಡಿ ಕಲ್ಲು ಹಾಕಿದೆ. ಬೇಸಿಗೆ ಕಾಲ ಬಿಟ್ಟರೆ ಉಳಿದ ಕಾಲದಲ್ಲಿ ಬಾವಿಯ ನೀರು ಬಹಳ ಮೇಲಿರುತ್ತದೆ. ಹೀಗಾಗಿ ನೀರೆತ್ತುವ ಕೆಲಸ ಕಷ್ಟ ಎಂದೆನಿಸುವುದಿಲ್ಲ. ಬಾವಿ ಕಟ್ಟೆ ನನ್ನ ನೆನಪಿನಲ್ಲಿ ಜ್ವಲಂತವಾಗಿರುವುದಕ್ಕೆ ಕಾರಣ ಬಾವಿಕಟ್ಟೆ ಸ್ನಾನ!
ನಾವು ಊರಿಗೆ ಹೋದಾಗ ಸಾಲಿಗ್ರಾಮ ಬೀಚಿಗೆ ಹೋಗಿಯೇ ಹೋಗುತ್ತೇವೆ. ಬೆಳಿಗ್ಗೆ ಬೇಗ ಎದ್ದು ಬೀಚಿಗೆ ಹೋದರೆ ಹತ್ತು ಗಂಟೆಯ ಅಷ್ಟೊತ್ತಿಗೆ ಮನೆಗೆ ಮರಳಿ ಮಕ್ಕಳೆಲ್ಲರನ್ನೂ ಬಾವಿಕಟ್ಟೆಯಲ್ಲಿ ಸಾಲಾಗಿ ಕೂರಿಸಿ ಬಾವಿಯಿಂದ ನೀರನ್ನು ಎತ್ತಿ ಎತ್ತಿ ಆವರುಗಳ ಮೇಲೆ ಹೊಯ್ದು ಸ್ನಾನ ಮಾಡಿಸುವ ಖುಷಿ ವರ್ಣಿಸಲಸದಳ! ಮಕ್ಕಳೂ ಕೂಡ ಆ ಸ್ನಾನಕ್ಕಾಗಿ ಕಾಯುತ್ತಿರುತ್ತಾರೆ. ನನಗೂ ಕೂಡ ಆ ರೀತಿ ಬಾವಿಯಿಂದ ನೀರೆತ್ತಿ ನೀರನ್ನು ಧಸಧಸನೆ ಅವರುಗಳು ಮೇಲೆ ಹೊಯ್ಯುವುದೆಂದರೆ ಖುಷಿ. ನಾನು ಊರಿಗೆ ಹೋದೆ ಎಂದರೆ ಮಕ್ಕಳಿಗೆ ಬಾವಿಕಟ್ಟೆ ಸ್ನಾನ ಗ್ಯಾರಂಟಿ ಎಂದರ್ಥ. ನನ್ನಮ್ಮನದು ಮಾತ್ರ "ಅಷ್ಟು ದೊಡ್ಡ ಕುಂಟೆ ಕೋಣಗಳಿಗೆ ಎಂತಕ್ಕೆ ಹಾಗೆ ನೀರು ಹೊಯ್ಯುತ್ತಿ" ಎನ್ನುವ ಆಕ್ಷೇಪಣೆಯ ಕೂಗು. ಅದೆಲ್ಲ ಏನೇ ಇರಲಿ "ಬಾವಿಕಟ್ಟೆಯ ಸ್ನಾನ" ನಮ್ಮ ಮನೆಯ ಉಳಿದವರೆಲ್ಲ ಪ್ರೀತಿಯಿಂದ ಸ್ವೀಕರಿಸುವ ವಿಷಯ.
ಈ ರೀತಿಯ ಅಪರೂಪದ ಅನುಭವಗಳು ಯಾವತ್ತೂ ಮರೆಯಲಾಗದ ಸಂಗತಿಗಳು. ಸುಮ್ಮನೆ ಕೂತು ಯೋಚಿಸುವಾಗ ಆ ಬಾವಿಕಟ್ಟೆ, ಆ ನೀರು ಸೇದುವಿಕೆ, ಸಾಲಾಗಿ ಕುಳಿತ ಮಕ್ಕಳ ಮೇಲೆ ನೀರು ಹೊಯ್ಯುವಿಕೆ, ನಂತರದಲ್ಲಿ ಬಾವಿ ಕಟ್ಟೆಯ ತುಂಬಾ ಹರಡಿರುವ ಮರಳು....ಹೀಗೇ ಸಾಲು ಸಾಲು ನೆನಪುಗಳು!
ಈ ಬಾವಿಕಟ್ಟೆ ಸ್ನಾನ ಎಂದಾಗ ನನಗೆ ಹೊಂಗಿರಣದ ಪ್ರಾರಂಭದ ವರ್ಷಗಳಲ್ಲಿ ಸರಿಯಾಗಿ ಸ್ನಾನ ಮಾಡದ ಹಾಸ್ಟೆಲ್ಲಿನ ಕೆಲವು ಸಣ್ಣ ಮಕ್ಕಳನ್ನು ಸಾಲಾಗಿ ಕೂರಿಸಿ ಕೆಲವು ಟೀಚರ್ಸ್ ಗಳ ಸಹಾಯದೊಂದಿಗೆ ನಾನು ಸ್ನಾನ ಮಾಡಿಸುತ್ತಿದ್ದದ್ದು ನೆನಪಾಗುತ್ತದೆ. ಹಾಗೆಯೇ ಯಾವುದೋ ಒಂದು ವರ್ಷ ದೀಪಾವಳಿಗೆ ಹಾಸ್ಟೆಲ್ ಮಕ್ಕಳನ್ನು ಮನೆಗೆ ಕಳುಹಿಸದಿದ್ದಾಗ ನಾವೆಲ್ಲಾ ಟೀಚರ್ಸ್ ಸೇರಿ ಎಲ್ಲಾ ಮಕ್ಕಳಿಗೂ ಎಣ್ಣೆ ಹಾಕಿ ಸ್ನಾನ ಮಾಡಿಸಿದ ನೆನಪಾಗುತ್ತದೆ. ಈ ಸ್ನಾನ ಮಾಡಿಸುವ ಪ್ರಕ್ರಿಯೆಯಲ್ಲಿ ಒಂದು ಪ್ರೀತಿಯ ಸ್ಪರ್ಶ ಹಾಗೂ ಅನುಭೂತಿ ಇರುತ್ತದೆ. ಇಂತಹ ಅಪರೂಪದ ಸಂಗತಿಗಳೇ ನಮ್ಮ ಬದುಕನ್ನು ಅರ್ಥಪೂರ್ಣವಾಗಿಸಿ ನಮ್ಮ ನೆನಪುಗಳನ್ನು ತಾಜವಾಗಿ ಇರಿಸುತ್ತವೆ ಎಂದರೆ ಎಲ್ಲರೂ ಒಪ್ಪುವ ವಿಷಯ ತಾನೇ?



198. ನೆನಪುಗಳು - ಡಾಲ್ದ ಎಣ್ಣೆ (9/11/2020)

ಮೊನ್ನೆ ಗೂಗಲ್ ನಲ್ಲಿ ಏನೋ ಹುಡುಕುತ್ತಿರುವಾಗ ಹಳೇ ಡಾಲ್ಡಾ ಡಬ್ಬದ ಫೋಟೊ ಸಿಕ್ಕಿತು. ಅದು ಪುನಃ ಹಳೆಯ ನೆನಪುಗಳನ್ನು ಕೆದಕಿತು ಅಂದರೆ ಸುಳ್ಳಲ್ಲ.
ನನಗೆ ನೆನಪಿರುವ ಹಾಗೆ ನನ್ನಮ್ಮ ತೆಂಗಿನೆಣ್ಣೆ, ಮನೆಯಲ್ಲಿ ಕಾಸಿದ ತುಪ್ಪ ಬಿಟ್ಟರೆ ಅಡುಗೆ ಮನೆಗೆ ಪ್ರವೇಶ ಕೊಟ್ಟಿದ್ದು ಡಾಲ್ಡಕ್ಕೆ ಮಾತ್ರ, ಅದೂ ಏನಾದ್ರೂ ಸ್ವೀಟ್ ಮಾಡುವಾಗ ಮಾತ್ರ! ನಮ್ಮ ಮನೆಯಲ್ಲಿ ಅಮ್ಮ ಮಾಡುವ ಹೆಚ್ಚಿನ ಅಡುಗೆಗೆ ಬಳಸುವುದು ತೆಂಗಿನೆಣ್ಣೆ. ಅವಳ ಪ್ರಕಾರ ರಿಫೈಂಡ್ ಎಣ್ಣೆಯಲ್ಲಿ ಏನು ಮಾಡಿದರೂ ತೆಂಗಿನೆಣ್ಣೆ ಕೊಡುವ ಕಂಪು ಸಿಗುವುದಿಲ್ಲ ಹಾಗೂ ಅದಕ್ಕೊಂದು ರುಚಿಯೂ ಇರುವುದಿಲ್ಲವೆಂದು. ಅಮ್ಮ ಸ್ವೀಟ್ ತಯಾರಿಕೆಗೆ ತುಪ್ಪ, ಅದೂ ಮನೆಯಲ್ಲಿ ತಯಾರಾದ ತುಪ್ಪವನ್ನು ಬಳಸುತ್ತಿದ್ದಳು. ಹೊರಗೆ ಸಿಗುವ ತುಪ್ಪಕ್ಕೆ ಅಡ್ಡ ವಾಸನೆಯಿರುತ್ತದೆ ಎಂದು ಅವಳ ಅನಿಸಿಕೆ. ಅಂತಹ ನನ್ನಮ್ಮ ಡಾಲ್ಡಾ ಬಳಕೆ ಮಾಡಿದಳು ಅಂದರೆ ಡಾಲ್ಡಾದ ಗುಣಮಟ್ಟದ ಬಗ್ಗೆ ಬೇರೆ ಸರ್ಟಿಫಿಕೇಟ್ ಬೇಡ😀
ಆಗೆಲ್ಲ ಶೇಂಗಾ ಎಣ್ಣೆ, ತೆಂಗಿನೆಣ್ಣೆ, ಪಾಮ್ ಎಣ್ಣೆ ಬಿಟ್ಟರೆ ಬೇರೆ ಎಣ್ಣೆಗಳು ಪ್ರಚಲಿತದಲ್ಲಿರಲಿಲ್ಲ. ಆ ಸಮಯದಲ್ಲಿ ಡಾಲ್ಡಾ ಮಾರುಕಟ್ಟೆಗೆ ಕಾಲಿಟ್ಟಿತು. ಹಳದಿ ಟಿನ್ ಡಬ್ಬದಲ್ಲಿ ಹಸಿರು ಬಣ್ಣದ ಮರದ ಚಿತ್ರದೊಂದಿಗೆ ಬರುತ್ತಿದ್ದ ಡಾಲ್ಡಾ ಡಬ್ಬ ನನ್ನ ನೆನಪಿನಲ್ಲಿ ಅಚ್ಚಳಿಯದೇ ಇದೆ. ಅದರೊಳಗೆ ತುಪ್ಪದಂತೆ ಗಟ್ಟಿಯಾದ ತಿಳಿ ಹಳದಿ ಬಣ್ಣದ ಡಾಲ್ಡಾವಿರುತ್ತಿತ್ತು. ಅದರ ಬಳಕೆಯಾಗುತ್ತಿದ್ದದ್ದು ಬರೀ ಸಿಹಿತಿಂಡಿಗಲ್ಲ. ಕರಿದು ಮಾಡುವ ಖಾದ್ಯಕ್ಕೂ ಡಾಲ್ಡಾವನ್ನು ಬಳಸಲಾಗುತ್ತಿತ್ತು. ದೋಸೆ, ಚಪಾತಿ ಮಾಡುವಾಗಲೂ ಡಾಲ್ಡಾವನ್ನು ಬಳಸಲಾಗುತ್ತಿತ್ತು. ಒಂದು ರೀತಿಯಲ್ಲಿ ಡಾಲ್ಡಾ ಸರ್ವಾಂತರ್ಯಾಮಿ ಆಯಿತೆಂದರೆ ತಪ್ಪಲ್ಲ. ನಂತರದಲ್ಲಿ ಡಾಲ್ಡಾ ಬಳಕೆಯ ಬಗ್ಗೆ ಅಪಶ್ರುತಿ ಪ್ರಾರಂಭವಾದಾಗ ಅದರ ಬಳಕೆಯನ್ನು ನಮ್ಮ ಮನೆಯಲ್ಲಿ ಸಂಪೂರ್ಣವಾಗಿ ಕಡಿಮೆ ಮಾಡಲಾಯಿತು.
ನಾನು ಅಡುಗೆ ಪ್ರಾರಂಭಿಸುವ ಹೊತ್ತಿಗೆ ಹಲವಾರು ರೀತಿಯ ರಿಫೈಂಡ್ ಎಣ್ಣೆಗಳು ಬಂದ ಕಾರಣ ಡಾಲ್ಡಾ ಬಳಸುವ ಪ್ರಮೇಯವೇ ಬರಲಿಲ್ಲ. ಹೀಗಾಗಿ ನಾನು ಅಡುಗೆಗೆ ಡಾಲ್ಡಾ ಬಳಸಲೇ ಇಲ್ಲ. ತೆಂಗಿನೆಣ್ಣೆ ಹಾಗೂ ರಿಫೈಂಡ್ ಆಯಿಲ್ ನನ್ನ ಅಡುಗೆಯ ಪ್ರಧಾನ ಅಂಶಗಳು. ನಾನು ಕರಾವಳಿಯವಳಾದ ಕಾರಣ ಶೇಂಗಾ ಎಣ್ಣೆಯನ್ನು ಬಳಸುವ ಅಭ್ಯಾಸವಿಲ್ಲ. ಆದರೆ ಯಾವುದೇ ಎಣ್ಣೆ ಬಳಸಿದರೂ ಅದನ್ನು ಅಗತ್ಯಕ್ಕೆ ತಕ್ಕಷ್ಟು ಮಾತ್ರ ಬಳಸುತ್ತೇನೆಯೇ ಹೊರತು ಪದಾರ್ಥಗಳ ಮೇಲೆ ತೇಲುವಷ್ಟು ಬಳಸುವುದಿಲ್ಲ. ಇಂತಹ ಮಿತ ಬಳಕೆಯ ಕಾರಣ ಎಣ್ಣೆ ಉಪಯೋಗದ ಕ್ರಮದ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೂ ಡಾಲ್ಡಾ ಡಬ್ಬದ ಚಿತ್ರ ಒಮ್ಮೆ ಎಲ್ಲಾ ಎಣ್ಣೆಗಳ ಬಳಕೆಯ ಬಗ್ಗೆ ನೆನಪು ಮಾಡಿಕೊಟ್ಟಿತು ಅಷ್ಟೇ!


197. ಪರಿಸರ - ಆರೋಗ್ಯ (8/11/2020)

ಈಗ್ಗ್ಯೆ ಕೆಲವು ದಿವಸಗಳಿಂದ ನನಗೆ ಸ್ವಲ್ಪ ತೀವ್ರವಾಗಿ ಆಸಿಡಿಟಿ ಕಾಡುತ್ತಾ ಇದೆ. ಹೊಟ್ಟೆಯಲ್ಲಿ ಸಣ್ಣ ಸಂಕಟ, ದೇಹದ ಶಕ್ತಿ ಬಸಿದು ಹೋಗುತ್ತಿರುವ ಅನುಭವ, ಸುಸ್ತು, ಕೈ ಕಾಲು ಜಗ್ತಾ...ಒಂದೇ ಎರಡೇ? ಸಾಲು ಸಾಲು ಉಪದ್ರವಗಳು?!
ನನಗೆ ಈ ಆಸಿಡಿಟಿ/ಗ್ಯಾಸ್ಟ್ರಿಕ್ ಸಮಸ್ಯೆ ಶುರುವಾಗಿ ಸುಮಾರು ಮುವ್ವತ್ತು ವರ್ಷಗಳೇ ಆಗಿರಬಹುದು. ಹೊತ್ತು ಹೊತ್ತಿಗೆ ಸರಿಯಾಗಿ ಊಟ ಮಾಡದೆ, ಹಸಿವಿನ ಹೊತ್ತಿಗೆ ಕಾಟು ಕಸಂಟು ತಿನ್ನುತ್ತಾ ಗ್ಯಾಸ್ಟ್ರಿಕ್ ಶುರುವಾಗಲು ಬೇಕಾಗುವ ಫೌಂಡೇಶನ್ ಅನ್ನು ಪಿಯುಸಿ ಓದುವಾಗಲೇ ನಾನು ಹಾಕಿದ್ದೆ. ಬೆಳಿಗ್ಗೆ ಎಂಟೂವರೆಗೆ ಮನೆ ಬಿಟ್ಟರೆ ಥ್ರೋಬಾಲ್ ಆಟ ಮುಗಿಸಿ ಕೊಂಡು ಮೂರ್ನಾಲ್ಕು ಕಿಮೀ ನಡೆದುಕೊಂಡು ಮನೆಗೆ ಬರುವಾಗ ಸಾಯಂಕಾಲ ಆರು ಗಂಟೆ ದಾಟಿರುತ್ತಿತ್ತು. ಆಗೆಲ್ಲ ಹೋಟೆಲ್ ಅಥವಾ ಕ್ಯಾಂಟೀನಿನಲ್ಲಿ ತಿನ್ನುವ ಕ್ರಮವಿರಲಿಲ್ಲ. ರೆಗ್ಯುಲರ್ ಆಗಿ ಬುತ್ತಿ ತೆಗೆದುಕೊಂಡು ಹೋಗುತ್ತಿರಲಿಲ್ಲ. ಮಧ್ಯಾಹ್ನ ಹಸಿವಾದಾಗ ಅಲ್ಲಿಯೇ ಹತ್ತಿರದಲ್ಲಿದ್ದ ಜೂಲಿಯ ಅಜ್ಜಿ ಮನೆಯ ತೋಟಕ್ಕೆ ಲಗ್ಗೆ ಇಟ್ಟು ಮಾವಿನಕಾಯಿ, ಕರಂಡೆ...ಇಂತಹುದೇ ಹುಳಿ ಕಾಯಿಗಳನ್ನು ತಿಂದು ಹಸಿವನ್ನು ತಣಿಸಿಕೊಳ್ಳುತ್ತಿದ್ದೆವು. ಇಲ್ಲವೇ ಐಸ್ ಕ್ಯಾಂಡಿ ತಿನ್ನುತ್ತಿದ್ದೆವು. ಹೀಗಾಗಿ ಹೊಟ್ಟೆ ಭರ್ತಿ ತಿನ್ನುತ್ತಿದ್ದದ್ದು ಪುನಃ ಮನೆ ತಲುಪಿದ ಮೇಲೆಯೇ! ಕಾಲೇಜಿಗೆ ಹೋಗುವಾಗಲೂ ಕೂಡ ನಮ್ಮ ಕಾಲೇಜು ಬೆಳಿಗ್ಗೆ ಒಂಭತ್ತರಿಂದ ಮಧ್ಯಾಹ್ನ ಮೂರರವರೆಗೆ ನಡೆಯುತ್ತಿದ್ದ ಕಾರಣ ಹಾಗೂ ಕಾಲೇಜಿನಿಂದ ಮನೆಗೆ ಹಿಂದಿರುಗುವ ಸಮಯ ನಿಗದಿತವಾಗಿರದಿದ್ದ ಕಾರಣ ಮಧ್ಯಾಹ್ನದ ಊಟ ತಡವಾಗುತ್ತಿತ್ತು. ಈ ದೀರ್ಘಕಾಲದ ಹೊಟ್ಟೆ ಖಾಲಿ ಇಡುವಿಕೆ ಗ್ಯಾಸ್ಟ್ರಿಕ್ ಗೆ ನೇರವಾದ ಆಹ್ವಾನ ಕೊಟ್ಟಿತ್ತು. ನನ್ನ ಮೊದಲ ಕೆಲಸದ ಸಂದರ್ಭದಲ್ಲೂ ಕೂಡ ಕೆಲಸದ ವೇಳೆಯ ವ್ಯತಿರಿಕ್ತತೆಯಿಂದ ನಾನು ಬೆಳಿಗ್ಗೆ ಆರು ಗಂಟೆಗೆ ತಿಂದರೆ ನಂತರ ಹೊಟ್ಟೆಗೆ ತಿನ್ನುತ್ತಿದ್ದದ್ದು ಮಧ್ಯಾಹ್ನ ಮೂರು ಗಂಟೆಯ ಮೇಲೆಯೇ ಆಗಿತ್ತು. ಆ ಸಮಯದಲ್ಲಿ ವಕ್ಕರಿಸಿದ ಗ್ಯಾಸ್ಟ್ರಿಕ್ ಸಮಸ್ಯೆ ನನ್ನನ್ನು ಬಿಗಿಯಾಗಿ ಹಿಡಿದುಕೊಂಡದ್ದು ಇನ್ನೂ ಬಿಟ್ಟಿಲ್ಲ.
ಗ್ಯಾಸ್ಟ್ರಿಕ್ ಸಮಸ್ಯೆಯ ಬಗ್ಗೆ ನಾನು ಒಂದು ದೊಡ್ಡ ಕಾದಂಬರಿಯನ್ನೇ ಬರೆಯುವಷ್ಟು ಅನುಭವದ ಸರಕನ್ನು ಹೊಂದಿದ್ದೇನೆ. ಗ್ಯಾಸ್ಟ್ರಿಕ್ ಸಮಸ್ಯೆ ಯಾವಾಗ ಕಾಣಿಸಿಕೊಳ್ಳುತ್ತದೆ, ಯಾವ್ಯಾವ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ, ಹೇಗೆ ಕಾಡುತ್ತದೆ... ಎನ್ನುವುದನ್ನು ನಾನು ಬಹಳಷ್ಟು ಕಂಡಿದ್ದೇನೆ ಹಾಗೂ ಅನುಭವಿಸಿದ್ದೇನೆ.
ಇದರ ಮೂಲ ಕಾರಣ ಜಿಹ್ವಾ ಚಾಪಲ್ಯ ಮತ್ತು ಮಾನಸಿಕ ಒತ್ತಡ. ಗ್ಯಾಸ್ಟ್ರಿಕ್ ಸಮಸ್ಯೆ ಜೋರಾದಾಗ "ಇನ್ನು ಮೆಲೆ ಜಿಹ್ವಾ ಚಾಪಲ್ಯಕ್ಕೆ ಮಣಿಯಬಾರದು" ಎಂಬ ಪ್ರತಿಜ್ಞೆಯನ್ನು ಮಾಡಿ ಅನುಭವಿಸಿದ ಒದ್ದಾಟ ಮರೆಯುವ ತನಕ ಬಹಳ ಶಿಸ್ತಿನ ತಿನ್ನುವಿಕೆಯನ್ನು ಪಾಲಿಸುವುದು. ತದನಂತರದಲ್ಲಿ "ನಾಯಿಬಾಲ ಡೊಂಕು" ಎಂಬಂತೆ ಪುನಃ ಕಂಡದ್ದನ್ನು ತಿನ್ನತೊಡಗುವುದು. ಹೀಗೆಲ್ಲ ಮಾಡಿದರೆ ಗ್ಯಾಸ್ಟ್ರಿಕ್ ಸಮಸ್ಯೆ ಕಡಿಮೆಯಾಗುವುದಾದರೂ ಹೇಗೆ ಹೇಳಿ? ಮಾನಸಿಕ ಒತ್ತಡ ನಿರ್ವಹಣೆಗೆ ಯೋಗ ಮತ್ತು ಧ್ಯಾನ. ಆದರೆ ಅದನ್ನೆಲ್ಲ ಬಿಡದೆ ಮಾಡುವವರಾರು? ಹೀಗಾಗಿ ಗ್ಯಾಸ್ಟ್ರಿಕ್ ಸಮಸ್ಯೆ ಬೆಂಬಿಡದ ಭೂತವಾಗಿ ಕಾಡುತ್ತಿದೆ🙄 ನನ್ನ ಗ್ಯಾಸ್ಟ್ರಿಕ್ ಸಮಸ್ಯೆಗೆ ಹರಿಹರಬ್ರಹ್ಮಾದಿಗಳೇ ಪರಿಹಾರ ಕೊಡಬೇಕೇನೊ?


196. ಪರಿಸರ - ದಾಸವಾಳ ಹೂವು (7/11/2020)

ನಮ್ಮ ಹೂತೋಟದಲ್ಲಿರುವ ಹೂಗಿಡಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಗಿಡ ದಾಸವಾಳ. ಸುಮಾರು ಎಂಟ್ಹತ್ತು ವಿಧದ ದಾಸವಾಳದ ಗಿಡಗಳು ನಮ್ಮಲ್ಲಿವೆ. ನಮ್ಮ ಹೂ ತೋಟದೊಳಗೆ, ಹೂ ತೋಟದ ಹೊರಗಿನ ಬೇಲಿ ಸಾಲಿನಲ್ಲಿ ದಾಸವಾಳದ ಗಿಡಗಳದ್ದೇ ರಾಜ್ಯ.
ನಮ್ಮಲ್ಲಿರುವ ದಾಸವಾಳದ ಗಿಡಗಳಲ್ಲಿ ಕೆಲವು ಪುಟ್ಟ ಮರಗಳಾಗಿವೆ; ಇನ್ನು ಕೆಲವು ಪೊದೆಯಂತಿವೆ.ಇವುಗಳ ಎಲೆಗಳು ಏಕಾಂತರವಾಗಿದ್ದು, ಸರಳ ರಚನೆಯಲ್ಲಿದ್ದು ಸಾಮಾನ್ಯವಾಗಿ ಎಲೆಯ ಅಂಚಿನಲ್ಲಿ ಈಟಿಯ ತುದಿಯಂತೆ ಕಚ್ಚುಕಚ್ಚು ಇದ್ದು ಸ್ವಲ್ಪ ಅಂಡಾಕೃತಿಯಲ್ಲಿರುತ್ತವೆ. ಹೂವುಗಳು ದೊಡ್ಡದಾಗಿ, ಆಕರ್ಷಕವಾಗಿ ಕಹಳೆಯ ಮಾದರಿಯಲ್ಲಿರುತ್ತವೆ. ನಮ್ಮಲ್ಲಿ ಐದು ದಳಗಳ ಹಾಗೂ ಡಬಲ್ ದಳಗಳ ದಾಸವಾಳಗಳಿವೆ. ಐದು ದಳದ ಕೆಂಪು ದಾಸವಾಳ ಎಲ್ಲಾ ಕಡೆಯೂ ಕಂಡು ಬರುವ ದಾಸವಾಳ. ನಮ್ಮಲ್ಲಿ ಇದಕ್ಕೆ ಹೊರತಾಗಿ ಬೇಲಿ ದಾಸವಾಳ, ಮೊಗ್ಗಿನ ದಾಸವಾಳ, ಕ್ರೀಮ್ ಬಣ್ಣದ ಡಬಲ್ ದಾಸವಾಳ, ತಿಳಿ ಗುಲಾಬಿ ದಾಸವಾಳ, ಬಿಳಿ ದಾಸವಾಳ, ಗುಲಾಬಿ ಬಣ್ಣದ ದಾಸವಾಳ, ಹಳದಿ ದಾಸವಾಳ, ಕಸಿ ಕಟ್ಟಿದ ಹಲವು ಬಣ್ಣಗಳ ದಾಸವಾಳಗಳಿವೆ.
ಬಿಳಿ ಬಣ್ಣದ ದಾಸವಾಳ ಔಷಧೀಯ ಗುಣಗಳನ್ನು ಹೊಂದಿದೆ. ಇದನ್ನು ತೈಲ ತಯಾರಿಕೆಯಲ್ಲಿ ಬಳಸುತ್ತಾರೆ. ನಾನು ತಯಾರಿಸುವ ತೈಲದಲ್ಲಿ ಬಳಸುವ ಎಲೆಗಳಲ್ಲಿ ಬಿಳಿ ದಾಸವಾಳದ ಎಲೆಯೂ ಒಂದು. ಇದರ ಎಲೆ ತಂಪು ಎಂದು ನನ್ನಮ್ಮನ ಅಂಬೋಣ. ದಾಸವಾಳದ ಎಲೆಯನ್ನು ಅಕ್ಕಿಯೊಂದಿಗೆ ಸೇರಿಸಿ ದೋಸೆಯನ್ನು ಕೂಡಾ ಮಾಡುತ್ತಾರೆ. ಹಾಗೆಯೇ ಕೆಂಪು ದಾಸವಾಳದ ಹೂವಿನ ಪುಡಿಯಲ್ಲಿ ಚಹಾ ಮಾಡುತ್ತಾರೆಂದು ಬಲ್ಲೆ. ನನ್ನ ಸ್ನೇಹಿತರೊಬ್ಬರ ಮನೆಯಲ್ಲಿ ಅದರ ಚಹಾವನ್ನು ಕುಡಿದು ನನಗದು ಇಷ್ಟವಾಗಿ ನಂತರದಲ್ಲಿ ನಾನು ಹೂವನ್ನು ಒಣಗಿಸಿ ಅಂತಹುದೇ ಪುಡಿ ಮಾಡಿ ಚಹಾ ಮಾಡುವ ಪ್ರಯತ್ನದಲ್ಲಿ ವಿಫಲಗೊಂಡೆ🙄
ನಮ್ಮಲ್ಲಿ ದಿನನಿತ್ಯದ ಪೂಜೆಗೆ ನಾವು ಬಳಸುವುದು ದಾಸವಾಳದ ಹೂವನ್ನೇ. ಹೆಚ್ಚಿನ ಆರೈಕೆಯನ್ನು ಬಯಸದೆ ತನ್ನ ಪಾಡಿಗೆ ತಾನು ಬೆಳೆಯುವ ಗಿಡ ದಾಸವಾಳ. ಹೀಗಾಗಿ ಎಲ್ಲಾ ಕಡೆ ಸಲ್ಲುವ ಗಿಡವಿದು. ಬೆಳಿಗ್ಗೆ ಅರಳುವ ಈ ಹೂವು ಸಂಜೆಯಾಗುವಷ್ಟರಲ್ಲಿ ಬಾಡಿ ಹೋಗುತ್ತದೆ. ಆದರೂ ಅರಳಿರುವಷ್ಟು ಕಾಲ ಕಣ್ಣಿಗೆ ತಂಪೆರೆಯುವ ಹೂವು ಈ ದಾಸವಾಳ. ಈಗಂತೂ ಕಸಿ ಕಟ್ಟುವವರ ಚಮತ್ಕಾರದಿಂದ ಕರಿ ಬಣ್ಣದ ದಾಸವಾಳ ಹಾಗೂ ಬಣ್ಣದ ಹೆಸರು ಹೇಳಲು ಬಾರದಂತಹ ದಾಸವಾಳಗಳು ಲಭ್ಯ. ಹೂವು ಯಾವುದೇ ಬಣ್ಣದ್ದಾಗಿರಲಿ, ಆಕಾರದ್ದಾಗಿರಲಿ ಅದು ನೀಡುವ ಮುದ ಇನ್ಯಾವುದೂ ನೀಡದು. ಅಹುದಲ್ಲವೆ?


195. ಪರಿಸರ - ಸೇವಂತಿಗೆ ಹೂವು (6/11/2020)

"ಸೇವಂತಿಗೆ ಚೆಂಡಿನಂತ ಮುದ್ದುಕೋಳಿ" ಎನ್ನುವುದು ನಮ್ಮ ಕಾಲದ ಜನಪ್ರಿಯ ಗೀತೆ. ಮಗುವಿನ ಮುದ್ದಾದ ಸೌಂದರ್ಯವನ್ನು ಸೇವಂತಿಗೆ ಹೂವಿಗೆ ಹೋಲಿಸುತ್ತಾರೆ ಎಂದರೆ ಆ ಹೂವಿನ ಪ್ರಾಶಸ್ತ್ಯವನ್ನು ಗ್ರಹಿಸಲೇಬೇಕು.
ಮಲೆನಾಡಿನ ಕಡೆ ಹೂತೋಟ ಎಲ್ಲರ ಮನೆಯಲ್ಲೂ ಇರುವಂತಹುದು ಮತ್ತು ಅದು ಗೃಹಿಣಿಯರ ಮುಖ್ಯ ಹವ್ಯಾಸ ಕೂಡಾ ಎಂದರೆ ತಪ್ಪಲ್ಲ. ಮಳೆಗಾಲದಲ್ಲಿ ವಿವಿಧ ಬಗೆಯ ಡೇರೆ ಹೂವುಗಳನ್ನು ಬೆಳೆದರೆ ನಂತರದಲ್ಲಿ ವಿವಿಧ ಬಗೆಯ ಸೇವಂತಿಗೆ ಹೂವುಗಳನ್ನು ಬೆಳೆದು ಅವುಗಳ ಸೌಂದರ್ಯವನ್ನು ಆಸ್ವಾದಿಸುವುದೇ ಇಲ್ಲಿನ ಗೃಹಿಣಿಯರಿಗೆ ಹಿಂದಿನ ಕಾಲದಲ್ಲಿದ್ದ ಮನ ರಂಜನೆಯಾಗಿತ್ತು. ನಮ್ಮೂರಿನಲ್ಲಿ ಈ ರೀತಿಯ ಹೂತೋಟದ ಹವ್ಯಾಸವಿದ್ದವರನ್ನು ನಾನು ಕಂಡಿದ್ದು ಕಡಿಮೆ.
ಸುಮಾರು ಎರಡಡಿ ಎತ್ತರದ ಈ ಗಿಡದಲ್ಲಿ ಬಿಡುವ ಹೂವುಗಳನ್ನು ಕೊಯ್ಯದೇ ಬಿಟ್ಟರೆ ಹತ್ತಿರ ಹತ್ತಿರ ಒಂದು ತಿಂಗಳ ಕಾಲ ಬಾಡದೇ ಗಿಡದಲ್ಲಿ ಅರಳಿಕೊಂಡಿರುತ್ತವೆ. ಹೀಗಾಗಿ ಗಿಡದ ತುಂಬಾ ಹೂವು ಕಾಣಸಿಗುತ್ತವೆ. ಸೇವಂತಿಗೆಯಲ್ಲಿ ಅನೇಕ ಬಣ್ಣದ ಹಾಗೂ ಅನೇಕ ಆಕಾರದ ಹೂವುಗಳು ಇರುತ್ತವೆ. ಹಳದಿ, ಬಿಳಿ, ನೇರಳೆ, ಕೇಸರಿ, ತಿಳಿಗುಲಾಬಿ... ಹೀಗೆ ಹಲವಾರು ಬಣ್ಣದ ಹೂವುಗಳಿದ್ದರೂ ಸರ್ವೇ ಸಾಮಾನ್ಯವಾಗಿ ಕಂಡು ಬರುವುದು ಹಳದಿ ಬಣ್ಣದ ಹೂವುಗಳು. ಎಲ್ಲಾ ರೀತಿಯ ಪೂಜೆಗಳಲ್ಲೂ ಸಲ್ಲುವ ಹೂವು ಈ ಸೇವಂತಿಗೆ. ಈ ಹೂವಿಗೆ ಸೌಮ್ಯವಾದ ಘಾಟು ವಾಸನೆ ಇರುತ್ತದೆ.
ನಾನು ಚಿಕ್ಕವಳಿದ್ದಾಗ ಹಳದಿ ಬಣ್ಣದ ಮಿಟ್ಟೆ ಸೇವಂತಿಗೆಯ ಹೂಮಾಲೆ ಕಟ್ಟುತ್ತಿದ್ದದ್ದು ನೆನಪಿದೆ. ಹಾಗೆಯೇ ಹದವಾದ ಸೈಜಿನ ಹಳದಿ ಸೇವಂತಿಗೆಯನ್ನು ಬಾಳೆಪಟ್ಟೆಯಲ್ಲಿ ದಂಡೆ ಕಟ್ಟಿ ಬಿಗಿಯಾಗಿ ಕಟ್ಟಿದ್ದ ಒಂದು ಜಡೆಯ ಮೇಲೆ ಅಂದವಾಗಿ ಪೇರಿಸಿಕೊಳ್ಳುತ್ತಿದ್ದದ್ದು ನೆನಪಿದೆ. ಅಂತಹ ಹೂದಂಡೆಯನ್ನು ರಾತ್ರಿ ಮಲಗುವಾಗ ತೆಗೆದಿಟ್ಟು ಬಾಡದಿರಲು ನೀರು ಚಿಮುಕಿಸಿ ಎರಡು ಮೂರು ದಿನಗಳ ಕಾಲ ಅದನ್ನು ಮುಡಿಯುತ್ತಿದ್ದದ್ದು ಮರೆಯಲಾಗದ ಅನುಭವಗಳಲ್ಲೊಂದು. ಕಾಲಿನ ಹೆಬ್ಬೆರಳಿಗೆ ಬಾಳೆಪಟ್ಟೆಯ ತುದಿಗಂಟನ್ನು ಸಿಕ್ಕಿಸಿ ಎರಡು ಪಟ್ಟೆಗಳ ನಡುವೆ ಸೇವಂತಿಗೆ ಹೂವನ್ನಿಟ್ಟು ದಂಡೆಯನ್ನು ಕಟ್ಟುವ ಆ ಕೆಲಸವೇ ಬಹಳ ಕಲಾತ್ಮಕ ಹಾಗೂ ಆಸಕ್ತದಾಯಕ. ಆಗೆಲ್ಲ ಇಂತಹ ಕೆಲಸಗಳು ನಮ್ಮನ್ನು ಖುಷಿಯಾಗಿಡುತ್ತಿದ್ದವು.
ಈಗಲೂ ಕೂಡ ನನ್ನ ಗಂಡನ ಮನೆಯಲ್ಲಿ ನನ್ನ ಓರಗಿತ್ತಿಯರು ಬಗೆಬಗೆಯ ಸೇವಂತಿಗೆ ಹೂವಿನ ಗಿಡಗಳನ್ನು ಬೆಳೆಸುತ್ತಾರೆ. ಹಾಗಂತ ಆ ಹೂವುಗಳನ್ನು ಗಿಡದಿಂದ ಕೊಯ್ದು ಹಾಳು ಮಾಡುವುದಿಲ್ಲ. ಗಿಡದ ತುಂಬಾ ಬಿಡುವ ಹೂವುಗಳನ್ನು ನೋಡುವುದರಲ್ಲಿ ಅವರಿಗೆ ಖುಷಿ ಇದೆ. ಎಲ್ಲಾದರೂ ಹೊರ ಹೋಗುವುದಾದರೆ ಅದರ ಒಂದು ಹೂವು ಅವರ ಮುಡಿಯೇರುತ್ತದೆ.
ಸೇವಂತಿಗೆ ಗಿಡ/ಹೂವು ಕೂಡಾ ಔಷಧೀಯ ಅಂಶಗಳನ್ನು ಹೊಂದಿದೆ. ಜೀರ್ಣಕ್ರಿಯೆ ಸಂಬಂಧಿ ಹಾಗೂ ಚರ್ಮ ಸಂಬಂಧಿ ಸಮಸ್ಯೆಗಳಿಗೆ ಇದರ ಬಳಕೆ ಬಹಳ ಉತ್ತಮ. ಎಲ್ಲರ ಮನೆಯ ಅಂಗಳದಲ್ಲಿ, ಹೂಕುಂಡಗಳಲ್ಲಿ ಕಂಡು ಬರುವ ಸೇವಂತಿಗೆ ಹೂವು ಮನೋಲ್ಲಾಸಕರ ಎನ್ನುವುದು ದಿಟವಲ್ಲವೆ?


194. ಪರಿಸರ - ಚೆಂಡು/ಗೊಂಡೆ ಹೂವು (5/11/2020)

ಈಗ ಎಲ್ಲಿ ನೋಡಿದರಲ್ಲಿ ಕಾಣುವ ಹೂವು ಚೆಂಡು ಹೂವು ಅಥವಾ ಗೊಂಡೆ ಹೂವು. ಒಂದೂವರೆ ಎರಡು ಅಡಿ ಎತ್ತರವಿರುವ ಪೊದೆಯಂತೆ ಬೆಳೆಯುವ ಈ ಸಸ್ಯ ಸೀಳಿದಂತಹ ಎಲೆಗಳನ್ನು ಹೊಂದಿರುತ್ತದೆ. ಈ ಎಲೆಗಳಿಗೆ ಹಾಗೂ ಹೂವುಗಳಿಗೆ ಒಂದು ರೀತಿಯ ಘಾಟು ವಾಸನೆ ಇರುತ್ತದೆ. ಈ ಗಿಡದಲ್ಲಿ ಹಳದಿ ಅಥವಾ ಕೇಸರಿ ಬಣ್ಣದ ಹೂವುಗಳು ಬಿಡುತ್ತವೆ. ಕೆಲವು ಜಾತಿಯ ಗೊಂಡೆ ಹೂವುಗಳು ಮೆರೂನ್ ಮತ್ತು ಹಳದಿ ಬಣ್ಣದ ಸಮ್ಮಿಶ್ರಣವಾಗಿರುತ್ತವೆ. ನವರಾತ್ರಿ ಹಬ್ಬದ ಸಂದರ್ಭದಲ್ಲಿ ಈ ಹೂವಿಗೆ ವಿಶೇಷ ಬೇಡಿಕೆ.
ನಮ್ಮಲ್ಲೂ ವಿಜಯದಶಮಿಯಂದು ಈ ಹೂವಿಗೆ ಭಾರೀ ಬೇಡಿಕೆ. ನಮ್ಮಲ್ಲಿ ಅಂದು ವಾಹನ ಪೂಜೆ ಹಾಗೂ ಇತರೇ ಪೂಜೆ ಭರ್ಜರಿಯಾಗಿರುತ್ತದೆ. ಬಸ್ಸುಗಳು, ಕಾರುಗಳು, ಬೈಕುಗಳು, ಗಾಡಿಗಳು, ವಿದ್ಯುತ್ ಉಪಕರಣಗಳು....ಹೀಗೆ ನಮ್ಮಲ್ಲಿ ಪೂಜೆಗೊಳಪಡುವ ವಸ್ತುಗಳ ಉದ್ದ ಪಟ್ಟಿಯೇ ಇದೆ. ಅಂದು ಒಂದು ಗೊಂಡೆ ಹೂವಿನ ಮಾಲೆಯ ದೊಡ್ಡ ಹೊರೆಯನ್ನು ತರಲಾಗುವುದು. ಬಸ್ಸಿನ ಚಾಲಕರು ಅವರವರ ಗಾಡಿ ತೊಳೆದು ಹೂವಿನಿಂದ ಅಲಂಕರಿಸಿದರೆ ಉಳಿದ ಇನ್ ಚಾರ್ಜ್ ಗಳು ಅವರವರಿಗೆ ಸಂಬಂಧಿಸಿದ ವಸ್ತುಗಳನ್ನು ನೀಟಾಗಿ ಜೋಡಿಸಿ ಗೊಂಡೆ ಹೂವುಗಳಿಂದ ಅಲಂಕರಿಸುತ್ತಾರೆ. ಅದೊಂದು ಅತ್ಯಂತ ಸಂಭ್ರಮದ ಆಚರಣೆ. ನಂತರ ಎಲ್ಲವುಗಳಿಗೂ ನನ್ನ ದೊಡ್ಡ ಭಾವನ ನೇತೃತ್ವದಲ್ಲಿ ಸಾಂಗೋಪಸಾಂಗವಾದ ಪೂಜೆ ನಡೆಯುತ್ತದೆ.
ಪ್ರತಿವರ್ಷ ಕೆಲವು ಸಾವಿರ ರುಪಾಯಿಗಳನ್ನು ಗೊಂಡೆ ಹೂವಿನ ಖರೀದಿಗೆ ವ್ಯಯಿಸುವಾಗ ನಮ್ಮ ವಿಶಾಲವಾದ ಕ್ಯಾಂಪಸ್ಸಿನಲ್ಲಿ ನಾವೇ ಅದನ್ನು ಬೆಳೆಯಬಾರದೇಕೆ ಎನ್ನುವ ಯೋಚನೆ ಬಂದು ಅದರ ಗಿಡಗಳನ್ನು ನೆಡಿಸಿ, ಪೋಷಿಸಿ ಗೊಂಡೆ ಹೂವನ್ನು ಪಡೆಯುವ ಪ್ರಯತ್ನ ಮಾಡಿದರೂ ಅದು ಇಷ್ಟು ವರ್ಷ ನಿಷ್ಫಲವಾಗಿತ್ತು. ಆದರೆ ಈ ವರ್ಷ ನಮ್ಮ ಕ್ಯಾಂಪಸ್ಸಿನಲ್ಲಿ ಕಂಡಲ್ಲೆಲ್ಲಾ ಗೊಂಡೆ ಹೂವುಗಳು ರಾರಾಜಿಸುತ್ತಿವೆ. ಅದರ ಸೊಬಗನ್ನು ಕಣ್ತುಂಬಿಕೊಳ್ಳಲು ಸಂತಸವಾಗುತ್ತದೆ.
ಇದು ಔಷಧೀಯ ಗುಣಗಳನ್ನು ಹೊಂದಿದೆ. ರಕ್ತಶುದ್ಧಿಗೆ ಇದರ ರಸವನ್ನು ಬಳಸುತ್ತಾರೆ. ಕೂದಲ ಕರಿವರ್ಣಕ್ಕೂ ಇದರ ಪ್ರಾಸೆಸ್ ಮಾಡಿದ ತೈಲವನ್ನು ಬಳಸುತ್ತಾರೆ. ಇದು ಕಫ ಪಿತ್ತ ಪ್ರಕೃತಿಯ ಶಮನಕಾರಿ. ಸ್ನಾಯು ನೋವಿಗೆ ಹಾಗೂ ಸಂಧಿವಾತದ ಚಿಕಿತ್ಸೆಗೆ ಇದರ ಎಲೆಯ ಪೇಸ್ಟನ್ನು ಬಳಸುತ್ತಾರೆ. ಇನ್ನೂ ಬಹಳಷ್ಟು ಚರ್ಮ ಸಂಬಂಧಿ ಖಾಯಿಲೆಗಳಿಗೆ ಹಾಗೂ ಉರಿಮೂತ್ರಕ್ಕೆ ಇದನ್ನು ಬಳಸುತ್ತಾರೆ. ಹೂವಿನ ಹಾರಕ್ಕೆ, ವೇದಿಕೆಯ ಅಲಂಕಾರಕ್ಕೆ, ಬಣ್ಣ ತಯಾರಿಕೆಗಾಗಿ ಗೊಂಡೆ ಹೂವುಗಳಿಗೆ ಒಳ್ಳೆಯ ಬೇಡಿಕೆಯಿದೆ. ನನಗಂತೂ ಈ ಹೂವನ್ನು ನೋಡಲು ಹಾಗೂ ಘಾಟು ವಾಸನೆ ಮೂಸಲು ಬಹಳ ಇಷ್ಟ😌



193. ನೆನಪುಗಳು - ಮಾವಿನ ಹಣ್ಣಿನ ಹಂಚಟ (4/11/2020)


ಮಾವಿನ ಹಣ್ಣಿನ ಹಂಚಟ್ಟು ಅಥವಾ ಮಾಂಬಳ ನನ್ನ ಅತ್ಯಂತ ಪ್ರೀತಿಯ ತಿನಿಸು. ಈಗಲೂ ಹಂಚಟ್ಟನ್ನು ನೆನಪಿಸಿಕೊಂಡರೆ ಬಾಯಿಯಲ್ಲಿ ನೀರು ಬರುತ್ತದೆ. ಅಂಗಡಿಯಲ್ಲಿ ಸಿಗುವ ನ್ಯಾಚುರೋ ಹಂಚಟ್ಟನ್ನು ಹೋಲುತ್ತದಾದರೂ ಹಂಚಟ್ಟಿನ ಸಹಜ ರುಚಿ ಅದಕ್ಕಿಲ್ಲ.
ಹಂಚಟ್ಟನ್ನು ಕಾಟು ಮಾವಿನ ಹಣ್ಣಿನಲ್ಲಿ ಮಾಡಿದರೆ ರುಚಿ ಹೆಚ್ಚು. ಕಾಟು ಹಣ್ಣುಗಳು ಹುಳಿ ಸಿಹಿಯ ಸಮ್ಮಿಶ್ರಣ ಹೊಂದಿರುವ ಕಾರಣ ಹಂಚಟ್ಟಿಗೆ ಸೂಕ್ತ ರುಚಿ ಸಿಗುತ್ತದೆ. ಅಜ್ಜಯ್ಯನ ಮನೆಯ ಪಕ್ಕದ ಗದ್ದೆಯಲ್ಲಿದ್ದ ಅಶ್ವತ್ಥನ ಕಟ್ಟೆಯ ಮಾವಿನಹಣ್ಣಿಗಿದ್ದ ರುಚಿ ನಾನೀವರೆಗೆ ನಾನು ತಿಂದ ಬೇರಾವ ಕಾಟು ಹಣ್ಣಿನಲ್ಲಿ ಕಂಡಿಲ್ಲ. ರಾಶಿ ರಾಶಿ ಹಣ್ಣು ಬಿಡುತ್ತಿದ್ದ ಆ ಮರದ ಹಣ್ಣುಗಳು ತೆಳು ಸಿಪ್ಪೆಯವು. ಆ ಹಣ್ಣನ್ನು ಸಿಪ್ಪೆಗೂಡಲೆ ತಿನ್ನಬಹುದಿತ್ತು. ತಿಂದು ಜಾಸ್ತಿಯಾಗಿ ಉಳಿದ ಹಣ್ಣುಗಳನ್ನು ಸಿಪ್ಪೆ ತೆಗೆದು ಹಿಂಡಿ ರಸ ತೆಗೆದು ಗೆರಸಿಯ ಮೇಲೆ ದಪ್ಪನೆಯ ಪ್ಲಾಸ್ಟಿಕ್ ಹರಡಿ ಅದರ ಮೇಲೆ ಸುರಿದು ಕಟ್ಟನೆಯ ಬಿಸಿಲಲ್ಲಿ ಸುಮಾರು ದಿನ ಒಣಗಿಸಿ ನಂತರ ಸುರುಳಿ ಸುತ್ತಿ ಗಾಳಿ ಹೋಗದ ಜಾರಿನಲ್ಲಿ ಮುಚ್ಚಿ ಇಟ್ಟರೆ ವರ್ಷಪೂರ್ತಿ ಇರುತ್ತದೆ (ನಾವು ತಿನ್ನದೆ ಉಳಿಸಿದರೆ😀) ಈಗ ಅಜ್ಜಯ್ಯನ ಮನೆಯ ಗದ್ದೆಯಲ್ಲಿ ಆ ಮಾವಿನಮರವೂ ಇಲ್ಲ, ಹಂಚಟ್ಟೂ ಇಲ್ಲ!
ಹಂಚಟ್ಟು ತತ್ ಕ್ಷಣ ತಯಾರಾಗುವ ತಿನಿಸಾಗಿರಲಿಲ್ಲ. ಹಂಚಟ್ಟು ತಯಾರಿಸಲು ಹದಗೊಳಿಸಿ ಒಣಗಿಸಲಿಟ್ಟ ಮಾವಿನಹಣ್ಣಿನ ರಸ ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿತ್ತು. ನಮ್ಮ ಮನೆಯಲ್ಲಿ ಹಂಚಟ್ಟು ತಯಾರಾಗುವಾಗ ನಾನು ಮತ್ತು ನನ್ನಪ್ಪ ಪದೇ ಪದೇ ಅದು ಒಣಗಿದೆಯೋ ಇಲ್ಲವೋ ಎಂದು ಪರೀಕ್ಷಿಸಿ ಒಂದೊಂದು ತುಂಡುಗಳನ್ನು ಬಾಯಿಗೆ ಹಾಕಿಕೊಂಡು ಅಮ್ಮನ ಹತ್ತಿರ ಸರಿಯಾಗಿ ಬೈಸಿಕೊಳ್ಳುತ್ತಿದ್ದೆವು. ಆದರೂ ಆ ರೀತಿ ಓಪನ್ ಆಗಿ ಕದ್ದು ಮುಚ್ಚಿ ತಿನ್ನುವುದರಲ್ಲಿ ಒಂದು ರೀತಿಯ ಖುಷಿ ಇರುತ್ತದೆ. ಕೊಟ್ಟದ್ದನ್ನು ತಿನ್ನಲಿಕ್ಕೂ ಮನೆಯಲ್ಲಿ ಅನುಮತಿಯಿಲ್ಲದೆ ನಾವೇ ತೆಗೆದು ತಿನ್ನುವುದಕ್ಕೂ ಇರುವಲ್ಲಿನ ಅನುಭವದ ವ್ಯತ್ಯಾಸ ಬಹಳವಿರುತ್ತದೆ. ಹಂಚಟ್ಟಿನ ರುಚಿ ನೋಡುವುದರಲ್ಲಿ ನಾನು ಮತ್ತು ನನ್ನಪ್ಪ ಷರತ್ತುಗಟ್ಟಿ ಇಂತಹ ಕೆಲಸ ಬಹಳಷ್ಟು ಮಾಡಿದ್ದೇವೆ ಎಂದು ಅಭಿಮಾನದಿಂದ ಹೇಳುತ್ತೇನೆ😌
ಕೆಲಸಕ್ಕೆ ಸೇರಿ ಊರಿನಿಂದ ದೂರವಾದ ಮೇಲೆ ಅಂತಹ ಅನುಭವಗಳು ಇಲ್ಲವಾಗುತ್ತಾ ಹೋದವು. ನಂತರದಲ್ಲಿ ಸ್ನೇಹಿತರಾದ ಅಶೋಕನ ಅಮ್ಮ ನಾನೆಲ್ಲಿದ್ದರೂ ಅಲ್ಲಿಗೆ ತಪ್ಪದೇ ಹಂಚಟ್ಟನ್ನು ತಲುಪಿಸುತ್ತಿದ್ದರು. ಅವರಿಂದಾಗಿ ಹಂಚಟ್ಟನ್ನು ತಿನ್ನುವ ಸೌಭಾಗ್ಯ ಬಹಳ ವರ್ಷಗಳ ಕಾಲ ನನಗೆ ಸಿಕ್ಕಿತು. ಒಂದು ತುಂಡು ಹಂಚಟ್ಟನ್ನು ಬಾಯಿಯಲ್ಲಿಟ್ಟುಕೊಂಡು ಅದನ್ನು ಮೆಲ್ಲುವ ಸುಖ ಈಗ ಇಲ್ಲವಲ್ಲ ಎಂದು ಒಮ್ಮೊಮ್ಮೆ ಬೇಸರವಾಗುತ್ತದೆ. ಅದನ್ನು ಮೆಲ್ಲುತ್ತಾ ತಿಂದ ಅನುಭವ ಎಷ್ಟು ತಾಜಾವಾಗಿದೆ ಎಂದರೆ ಈ ಲೇಖನವನ್ನು ಬರೆಯುವಾಗ ಹಂಚಟ್ಟು ಬಾಯಿಯಲ್ಲಿದ್ದು ಅದರ ರುಚಿ ಅನುಭವಿಸುತ್ತಾ ಬರೆಯುತ್ತಿದ್ದೇನೋ ಎಂದೆನಿಸುತ್ತಿದೆ😊


192, ನೆನಪುಗಳು - ಮಾವಿನಕಾಯಿ/ಹಣ್ಣು  ಪದಾರ್ಥ (3/11/2020)

ನಾನು ಮದುವೆಯಾಗಿ ಸಾಗರದ ಕಡೆ ಬಂದಾಗ ನನ್ನ ಗಮನ ಸೆಳೆದದ್ದು ಇಲ್ಲಿನವರ ಮಾವಿನಕಾಯಿ ಪ್ರೇಮ. ನನ್ನ ಮದುವೆಯಾದದ್ದು ಏಪ್ರಿಲ್ ತಿಂಗಳಲ್ಲಿ. ಸರಿಯಾಗಿ ಮಾವಿನಕಾಯಿಯ ಕಾಲ. ಮನೆಯ ನಿತ್ಯದ ಊಟವಿರಲಿ ಇಲ್ಲವೇ ವಿಶೇಷದ ಊಟವಿರಲಿ ಮಾವಿನಕಾಯಿಯ ನೀರು ಗೊಜ್ಜು ಅಥವಾ ಮಂದಾನ್ ಗೊಜ್ಜು ಇರಲೇ ಬೇಕು. ಅದಿಲ್ಲದಿದ್ದರೆ ಊಟ ಅಪೂರ್ಣ🙄 ಅಂತಹ ಒಲವು ಮಾವಿನಕಾಯಿಯ ಖಾದ್ಯಗಳ ಬಗ್ಗೆ!
ನೀರುಗೊಜ್ಜಿಗೆ ಪರಿಮಳದ ಮಾವಿನಕಾಯಿ ಇದ್ದರೆ ಒಳ್ಳೆಯದು. ಸಾಧಾರಣವಾದ ಮಾವಿನಕಾಯಿ ಆದರೆ ಹುಳಿ ಇರುತ್ತದೆಯೇ ಹೊರತು ಫ್ಲೇವರ್ ಇರುವುದಿಲ್ಲ. ಮಾವಿನ ಹುಳಿಯ ಜೊತೆಗೆ ಅದರ ಫ್ಲೇವರ್ ಇದ್ದರೆ ನೀರು ಗೊಜ್ಜು ಕುಡಿಯಲಿಕ್ಕೆ ಅಥವಾ ಅನ್ನಕ್ಕೆ ಕಲಿಸಲಿಕ್ಕೆ ಖುಷಿಯಾಗುತ್ತದೆ. ಮದುವೆಯಾಗಿ ಸಾಗರದ ಕಡೆಗೆ ಬಂದು ನೆಲೆಸಿ ಮೂವತ್ತು ವರ್ಷಗಳಾಗುತ್ತಾ ಬಂದರೂ ನನಗೆ ಮಾವಿನಕಾಯಿ ನೀರುಗೊಜ್ಜಿನ ಬಗ್ಗೆ ಮೋಹ ಈವರೆಗೆ ಬೆಳೆಯಲೇ ಇಲ್ಲ. ಯಾಕೆಂದು ನನಗೆ ಗೊತ್ತಿಲ್ಲ.
ಆದರೆ ಮಾವಿನಕಾಯಿ ಮಂದಾನ್ ಗೊಜ್ಜು ನನಗೆ ಬಹಳ ಇಷ್ಟ. ಒಳ್ಳೆಯ ಬೆಳ್ಳುಳ್ಳಿ ಹಾಕಿ ಖಾರ ಕಟ್ಟಗೆ ಇರುವ ಮಂದಾನ್ ಗೊಜ್ಜಿನಲ್ಲಿ ಕೆಜಿಗಟ್ಟಲೆ ಅನ್ನ ಕಲೆಸಬಹುದು. ಅಂತಹ ರುಚಿ ಅದಕ್ಕೆ😛
ಅಪ್ಪೆ ಕಾಯಿ, ಅಪ್ಪೆ ಮಿಡಿ, ಜೀರಿಗೆ ಮಿಡಿ, ಅನಂತನ ಅಪ್ಪೆ... ಇವೆಲ್ಲ ಪದಗಳು ನಾನು ಸಾಗರದ ಕಡೆಗೆ ಬಂದ ಮೇಲೆ ಪರಿಚಿತವಾದದ್ದು. ಅವುಗಳ ರುಚಿ ಕಂಡದ್ದೂ ಕೂಡಾ ಇಲ್ಲಿಯೇ. ಅವುಗಳ ಮೇಲೆ ಪ್ರೀತಿ ಹುಟ್ಟಿದ್ದು ಇಲ್ಲಿಯೇ 😄 ಈಗ ನಾನು ಕೂಡಾ ಮಾವಿನಕಾಯಿ ಪ್ರೇಮಿಯಾಗಿದ್ದೇನೆ.
ನನ್ನ ಅತ್ತೆ ಬದುಕಿದ್ದಾಗ ರಜಾ ದಿನಗಳಲ್ಲಿ ನಾವೆಲ್ಲಾ ಒಟ್ಟಾದಾಗ ದಿನಕ್ಕೊಂದು ರೀತಿಯ ಮಾವಿನಕಾಯಿ ಖಾದ್ಯದ ತಯಾರಿ. ನೀರು ಗೊಜ್ಜಂತೂ ಖಾಯಂ ಆಗಿ ಇರುತ್ತಿತ್ತು. ಮಾವಿನಕಾಯಿ ಬೀಸುಗೊಜ್ಜು, ಮಾವಿನಕಾಯಿ ಕಾಯಿರಸ, ಮಾವಿನ ಹಣ್ಣಿನ ಸಾಸಿವೆ... ಇನ್ನೂ ಏನೇನೋ ರುಚಿಯಾದ ಖಾದ್ಯಗಳು. ರಜೆ ಮುಗಿಸಿ ಕೆಲಸಕ್ಕೆ ಹಿಂದಿರುಗುವಾಗ ಭಾರವಾದ ದೇಹದೊಡನೆ(😂) ನಾವು ಹಿಂದಿರುಗುತ್ತಿದ್ದೆವು. ದಿನಂಪ್ರತಿ ಭರ್ಜರಿ ಊಟ ಮಾಡಿದರೆ ದೇಹ ಭಾರವಾಗದೆ ಇನ್ನೇನಾಗುತ್ತದೆ. ಅಲ್ಲವೇ?
ಹಳ್ಳಿ ಅಡುಗೆಯ ದೇಸಿ ವೈವಿಧ್ಯತೆಯನ್ನು ಹಾಗೂ ಅವುಗಳ ಸಹಜ ರುಚಿಯನ್ನು ಇನ್ಯಾವುದೇ ರೀತಿಯ ಹೈಟೆಕ್ ಅಡುಗೆ ಭರಿಸಲಾರದು. ಮಾವಿನ ಕಾಯಿಯ ಖಾದ್ಯಗಳನ್ನಂತೂ ಖಂಡಿತವಾಗಿಯೂ ಬೇರ್ಯಾವ ಖಾದ್ಯವು ರಿಪ್ಲೇಸ್ ಮಾಡಲಾಗದು. ಮಾವಿನಕಾಯಿಯ ಖಾದ್ಯಗಳ ರುಚಿ ನೋಡಿದವರು ನನ್ನ ಮಾತನ್ನು ಒಪ್ಪುತ್ತೀರಲ್ಲವೆ?


191. ನೆನಪುಗಳು - ಬೂಗಿ ನಾಯಿ (2/11/2020)

ಬೂಗಿ ಮೊನ್ನೆ ರಾತ್ರಿ ಇಲ್ಲವಾಯಿತು. ಹಿಟ್ ಆಂಡ್ ರನ್ ಕೇಸ್. ರಾತ್ರಿ ಗೂಡಿನಿಂದ ಹೊರಬಂದ ನಮ್ಮ ನಾಯಿಗಳೆಲ್ಲವೂ ಒಮ್ಮೆ ಮೇನ್ ಗೇಟಿನಿಂದ ಹೊರಹೋಗಿ ರಸ್ತೆಯ ಬದಿಯಲ್ಲಿ ಓಡಾಡಿ ಸ್ವಲ್ಪ ಹೊತ್ತು ಕಾಲಹರಣ ಮಾಡಿ ನಂತರ ಒಳಬರುವ ರೂಢಿ. ಮೊನ್ನೆ ರಾತ್ರಿ ಹೊರಹೋದ ಬೂಗಿ ಸಡನ್ ಆಗಿ ರಸ್ತೆ ದಾಟಲು ಹೋದಾಗ ಒಂದು ಸ್ಕಾರ್ಪಿಯೋ ಗಾಡಿ ಢಿಕ್ಕಿ ಹೊಡೆದು ಅದರ ತಲೆಯ ಮೇಲೆಯೇ ಹಾದು ಹೋಗಿದೆ. ಬೂಗಿ ಅಲ್ಲಿಯೇ ಕೊನೆಯುಸಿರು ಎಳೆದಿದೆ. ಗೇಟಿನಲ್ಲಿದ್ದ ನವೀನ ಈ ವಿವರಣೆ ಕೊಟ್ಟಾಗ ಸಂಕಟವಾಯಿತು.ನವೀನ ಬೆಳಿಗ್ಗೆ ಅದನ್ನು ಗುಂಡಿ ತೋಡಿ ಹೂತುಹಾಕಿದ.
ಕಳಕೊಳ್ಳುವ ಅನುಭವ ಬಹಳ ನೋವು ಕೊಡುತ್ತದೆ. ಕಳೆದ ತಿಂಗಳಷ್ಟೇ ಬಾಲಿಯನ್ನು ಕಳಕೊಂಡ ನೋವು ಇನ್ನೂ ಮಾಯದಿರುವಾಗ ಬೂಗಿಯನ್ನು ಕಳಕೊಂಡಿರುವುದು ಪೆಟ್ಟಿನ ಮೇಲೊಂದು ಪೆಟ್ಟು.
ಭಾಮ ಮತ್ತು ಬಾಲಿ ಕ್ರಾಸ್ ಆಗಿ ಹುಟ್ಟಿದ ಮರಿಗಳಲ್ಲೊಂದು ಬೂಗಿ. ಸುಮಾರು ಮೂರ್ನಾಲ್ಕು ವರ್ಷ ಪ್ರಾಯದ್ದು. ಹದವಾದ ಮೈಕಟ್ಟು ಅದರದ್ದು. ಬಹಳ ಚುರುಕು. ಆಕಾರದಲ್ಲಿ ಸಣ್ಣಕ್ಕಿದ್ದರೂ ಬಹಳ ಆಕ್ರಮಣಕಾರಿ ಸ್ವಭಾವ ಅದರದ್ದು. ಅನಗತ್ಯವಾಗಿ ಯಾರ ತಂಟೆಗೂ ಹೋಗುವ ನಾಯಿಯಾಗಿರಲಿಲ್ಲ. ನಾವು ಅದಕ್ಕೆ ಹೆಚ್ಚು ಮುದ್ದು ಮಾಡಿರದಿದ್ದ ಕಾರಣ ಬಾಲಿಯಂತೆ ಅದು ನಮ್ಮ ಪ್ರೀತಿಯ ಸ್ಪರ್ಶಕ್ಕೆ ಹಾತೊರೆಯುತ್ತಿರಲಿಲ್ಲ. ಹಾಗಂತ ನಮ್ಮೆಲ್ಲರ ಮೇಲಿನ ಅದರ ಪ್ರೀತಿ ಸಾಂದರ್ಭಿಕವಾಗಿ ವ್ಯಕ್ತವಾಗುತ್ತಿತ್ತು.
ಹೆಚ್ಚಾಗಿ ಭಾಮ ಮತ್ತು ಬೂಗಿ ಒಟ್ಟೊಟ್ಟಿಗೆ ಮರಿ ಹಾಕುತ್ತಿದ್ದವು. ಆಗೆಲ್ಲ ಮರಿಗಳು ಅದಲುಬದಲಾಗಿ ಭಾಮಾ ಮತ್ತು ಬೂಗಿಯ ಮಧ್ಯೆ ಕಚ್ಚಾಟ ನಡೆಯುತ್ತಿತ್ತು. ಅವುಗಳನ್ನು ಆಗ ಬೇರೆ ಬೇರೆ ಗೂಡುಗಳಲ್ಲಿ ಹಾಕಿಡುತ್ತಿತ್ತು. ಉಳಿದಂತೆ ಭಾಮಾ ಮತ್ತು ಬೂಗಿ ಒಂದೇ ಗೂಡಿನಲ್ಲಿ ಇರುತ್ತಿದ್ದದ್ದೇ ಹೆಚ್ಚು. ಈ ಬಾರಿ ಬೂಗಿ ಹಾಕಿದ ಮರಿಗಳೆಲ್ಲ ಬಹಳ ಚೆನ್ನಾಗಿದ್ದವು. ಐದು ಮರಿಗಳನ್ನು ಹಾಕಿತ್ತು. ಎಲ್ಲವೂ ವಿಲೇವಾರಿ ಆದವು.
ಬೂಗಿ ಬಹಳ ಪರಿಶುದ್ಧ ತಳಿಯಲ್ಲ. ಲ್ಯಾಬ್ರಡಾರ್ ತಳಿಯ ಸುಮಾರು ಎಪ್ಪತ್ತೈದು ಪರ್ಸೆಂಟ್ ಅಂಶ ಅದು ಹೊಂದಿತ್ತು. ಹೀಗಾಗಿ ಇನ್ನೂ ಎಂಟ್ಹತ್ತು ವರ್ಷಗಳು ಅದು ಆರಾಮವಾಗಿ ಬದುಕುತ್ತದೆ ಎಂಬುವುದು ನಮ್ಮ ಲೆಕ್ಕಾಚಾರವಾಗಿತ್ತು. ಆದರೆ ವಿಧಿಯಾಟ ಬೇರೆಯೇ ಇತ್ತು. ನಾವು ಎಣಿಸಿದ್ದು ಒಂದು ಆಗಿದ್ದು ಇನ್ನೊಂದಾಯಿತು. ಮೊನ್ನೆ ಮೊನ್ನೆ ಕಣ್ಣ ಮುಂದೆ ಓಡಾಡುತ್ತಿದ್ದ ಬೂಗಿ ಇನ್ನು ಮುಂದೆ ನಮ್ಮ ನೆನಪಿನ ಬುತ್ತಿಯಲ್ಲಿ ಮಾತ್ರ ಓಡಾಡುತ್ತಿರುತ್ತದೆ ಎನ್ನುವುದು ನಿಜಕ್ಕೂ ನೋವು ಕೊಡುತ್ತದೆ😔


190. ಪರಿಸರ - ಸಾಂಬಾರ್ ಬಳ್ಳಿ (1/11/2020)

ಸಾಂಬಾರ್ ಬಳ್ಳಿ ಸೊಪ್ಪು ಬರೀ ಹಳ್ಳಿ ಮಾತ್ರವಲ್ಲ ಪೇಟೆಯ ಮನೆಗಳಲ್ಲೂ ಬೆಳೆಸುವ ಒಂದು ಸೊಪ್ಪಿನ ಗಿಡ. ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ಸಾಂಬಾರ್ ಬಳ್ಳಿ ಗಿಡವನ್ನು ಪೇಟೆ ಮನೆಗಳಲ್ಲಿ ಪಾಟ್ ಗಳಲ್ಲಾದರೂ ಬಹಳಷ್ಟು ಜನ ಬೆಳೆಸುತ್ತಾರೆ. ಹಳ್ಳಿ ಮನೆಯ ಕೈತೋಟದಲ್ಲಿ ಇದು ಸರ್ವೇ ಸಾಮಾನ್ಯವಾಗಿ ಕಾಣುವ ಗಿಡ. ಒಂದೆರಡು ಎಲೆಗಳನ್ನು ಬೆಂಕಿಯಲ್ಲಿ ಬಾಡಿಸಿ ಹಿಂಡಿ ಅದರ ರಸಕ್ಕೆ ಕಾಲು ಚಮಚದಷ್ಟು ಜೇನುತುಪ್ಪ ಸೇರಿಸಿ ಮಕ್ಕಳಿಗೆ ದಿನಕ್ಕೆ ಒಂದೆರಡು ಬಾರಿ ಕುಡಿಸಿದರೆ ಮಕ್ಕಳ ಶೀತ ಮಾಯ🙄
ಈ ಎಲೆಗೆ ದೊಡ್ಡ ಪತ್ರೆ ಎಂದೂ ಕರೆಯುತ್ತಾರೆ. ಈ ಗಿಡದ ಕಾಂಡ ನಾಜೂಕಾಗಿದ್ದು ಎಲೆಗಳು ದಪ್ಪಗಿರುತ್ತವೆ. ರೆಗ್ಯುಲರ್ ಎಲೆಗಳಿಗಿಂತ ವಿಭಿನ್ನವಾದ ಎಲೆಯಿದು. ಈ ಎಲೆಗಳು ಒಂದು ರೀತಿಯ ಕಡು ಸುವಾಸನೆ ಹೊಂದಿರುತ್ತವೆ. ಸುಮಾರು ಮೂವತ್ತರಿಂದ ತೊಂಬತ್ತು ಸೆಂಟಿಮೀಟರ್ ಎತ್ತರ ಬೆಳೆಯುವ ಈ ಗಿಡದ ಕಾಂಡಗಳು ಚಿಕ್ಕದಾಗಿರುತ್ತವೆ.
ನನ್ನ ಮಕ್ಕಳು ತುಂಬಾ ಪುಟ್ಟ ಕಂದಗಳಾಗಿದ್ದಾಗ ಶೀತವಾದರೆ ಇದರ ಎಲೆಯನ್ನು ಬೆಂಕಿಯಲ್ಲಿ ಬಾಡಿಸಿ ಮಕ್ಕಳ ನೆತ್ತಿಯ ಮೇಲಿಟ್ಟು ಬಟ್ಟೆಯ ಟೋಪಿಯನ್ನು ಕಟ್ಟುತ್ತಿದ್ದೆವು. ನಂತರದಲ್ಲಿ ಮಕ್ಕಳು ಸ್ವಲ್ಪ ದೊಡ್ಡವರಾದಾಗ ಇದರ ಎಲೆಯ ರಸಕ್ಕೆ ಜೇನುತುಪ್ಪ ಸೇರಿಸಿ ಕುಡಿಸಿ ಶೀತ ನಿವಾರಣೆಯಾಗುವಂತೆ ಮಾಡುಲಾಗುತ್ತಿತ್ತು. ಶೀತ ಜ್ವರಕ್ಕೆಲ್ಲ ಡಾಕ್ಟರ್ ಮನೆ ಬಾಗಿಲಿಗೆ ಹೋಗುತ್ತಿದ್ದದ್ದು ಬಹಳ ಕಡಿಮೆ. ಸಾಂಬಾರ್ ಬಳ್ಳಿಯೇ ಆಪ್ತ ರಕ್ಷಕ.
ಸಾಂಬಾರ್ ಬಳ್ಳಿ ಸೊಪ್ಪು ಔಷಧೀಯ ಗುಣಗಳ ಭಂಡಾರ. ಶೀತ ಜ್ವರವಲ್ಲದೆ ಅಜೀರ್ಣಕ್ಕೆ, ಪಿತ್ತ ಪ್ರಕೋಪಕ್ಕೆ, ದೇಹದ ತಂಪಿಗೆ, ಗಾಯಕ್ಕೆ, ಚೇಳಿನ ಕಡಿತಕ್ಕೆ, ಬೇಧಿಗೆ, ಕಂಬಳಿ ಹುಳು ತಾಗಿದಾಗಿನ ತುರಿಕೆಗೆ, ಕಫಕ್ಕೆ...ಹೀಗೆ ಹತ್ತು ಹಲವಾರು ಸಮಸ್ಯೆಗಳ ಪರಿಹಾರಕ್ಕೆ ರಾಮಬಾಣ.
ಈ ಸೊಪ್ಪಿನಿಂದ ರುಚಿರುಚಿಯಾದ ಖಾದ್ಯಗಳನ್ನು ತಯಾರಿಸಬಹುದು. ತಂಬುಳಿ, ಗೊಜ್ಜು, ಕಾಯಿರಸ, ಸಲಾಡ್ ಅಲ್ಲದೆ ಬಜ್ಜಿ ಬೋಂಡಾಗಳನ್ನೂ ಮಾಡಬಹುದು. ಹಿತ್ತಲ ಗಿಡದ ಬಹೂಪಯೋಗವನ್ನು ತಿಳಿಯಪಡಿಸುವ ಸಸ್ಯಗಳಲ್ಲಿ ಒಂದು ಈ ಸಾಂಬಾರ್ ಬಳ್ಳಿ.


189. ನೆನಪುಗಳು - ಉಡುಪಿ ಸಾರು (31/10/2020)

ಉಡುಪಿ ಕಡೆಯ ಸಾರು ಅದರ ರುಚಿಗೆ ಬಹಳ ಪ್ರಖ್ಯಾತ. ಆ ಕಡೆಯಲ್ಲಿ ಉಂಡವರು ಬಲ್ಲರು ವಿಶೇಷದ ಊಟಕ್ಕೆ ಏನೇನು ಪದಾರ್ಥಗಳು ಇರುತ್ತವೆ ಎನ್ನುವುದನ್ನು. ಉಪ್ಪು, ಉಪ್ಪಿನಕಾಯಿ, ಎರಡು ಬಗೆಯ ಕೋಸಂಬರಿ, ಎರಡು ಬಗೆಯ ಗೊಜ್ಜು, ಮೂರ್ನಾಲ್ಕು ಬಗೆಯ ಪಲ್ಯಗಳು, ಕಾಯಿರಸ, ಪಳದ್ಯ, ಅವಿಯಲ್, ಉದ್ದಿನ ಹಿಟ್ಟು, ಸಾರು, ಎರಡ್ಮೂರು ಬಗೆಯ ಸಾಂಬಾರು, ಚಿತ್ರಾನ್ನ, ಬೋಂಡಾ/ಬಜ್ಜಿ, ಖಾರ, ಮೂರ್ನಾಲ್ಕು ಬಗೆಯ ಸಿಹಿಗಳು, ಪಾಯಸ, ಫ್ರೂಟ್ ಸಲಾಡ್ ಇವಿಷ್ಟು ಕಡ್ಡಾಯವಾಗಿ ಇರುವ ಪದಾರ್ಥಗಳು. ವಿಶೇಷ ಊಟಕ್ಕೆ ಇಂತಹ ಬಹಳಷ್ಟು ಬಗೆಯ ಖಾದ್ಯಗಳಿದ್ದರೂ ಉಣ್ಣುವವರು ಅನ್ನ ಕಟ್ಟೆ ಕಟ್ಟುವುದು ಸಾರಿನಲ್ಲಿ. ಅಂತಹ ಪರಿಮಳ ಮತ್ತು ರುಚಿ ಆಲ್ಲಿನ ಸಾರಿಗೆ! ಸಾರು ಚೆನ್ನಾಗಿದ್ದರೆ ಇಡೀ ಊಟವೇ ಚೆನ್ನಾಗಿತ್ತು ಎಂದು ಶಿಫಾರಸ್ಸು ಕೊಡುತ್ತಾರೆ. ಒಂದು ವೇಳೆ ಉಳಿದೆಲ್ಲ ಖಾದ್ಯಗಳು ಚೆನ್ನಾಗಿದ್ದು ಸಾರು ಪುಸ್ಕಟೆಯಾದರೆ ಊಟ ಪಾಸ್ ಆಗುವುದಿಲ್ಲ. ಅಂತಹ ಅವಲಂಬನೆ ಸಾರಿನ ಮೇಲೆ?!
ನಾನು ಮದುವೆಯಾಗಿ ಬಂದಾಗ ನಮ್ಮ ಮನೆಯವರೆಲ್ಲರೂ ನಮ್ಮೂರಿನ ಸಾರಿನ ಬಗ್ಗೆಯೇ ಮಾತನಾಡುತ್ತಿದ್ದರು. ಸಾರಿನ ಬಗ್ಗೆ ಅವರ ಹೊಗಳಿಕೆ ಕೇಳಿ ಆಶ್ಚರ್ಯವಾಗುತ್ತಿತ್ತು. ಅಂತಹ ಸಾರನ್ನು ಬಿಟ್ಟು ಬೇರೆ ರೀತಿಯ ಸಾರನ್ನು ಕಂಡಿರದಿದ್ದ ನನಗೆ ಆ ಸಾರಿನ ವಿಶೇಷ ರುಚಿಯ ಮಹತ್ವವೇ ತಿಳಿದಿರಲಿಲ್ಲ. ನನಗೆ ಅದೊಂದು ಸಾರಷ್ಟೇ! ಆದರೆ ಸಾಗರದ ಕಡೆಯ ಊಟದ ಮನೆಗಳಲ್ಲಿ ಸಾರು ತಿಂದ ಮೇಲೆ ಉಡುಪಿ ಕಡೆಯ ಸಾರಿನ ಬೆಲೆ ಗೊತ್ತಾಯಿತು.
ಸಾರಿನ ಬಗ್ಗೆ ಯೋಚನೆ ಮಾಡುವಾಗ ನಾನು ನನ್ನ ಸೋದರತ್ತೆಯ ಮನೆಯ ಕಾರ್ಯಕ್ರಮವೊಂದರಲ್ಲಿ ಸಾರು ಎಂದು ಭಾವಿಸಿ ಅಡುಗೆ ಭಟ್ಟರು ಅಡುಗೆ ಮಾಡುತ್ತಾ ಕೈ ತೊಳೆದ ಕೆಂಪನೆಯ ನೀರನ್ನು ಬಡಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾದದ್ದು ನೆನಪಾಯಿತು. ಅಂದು ನನ್ನಿಂದಾದ ಪ್ರಮಾದವನ್ನು ನಾನೆಂದೂ ಮರೆಯಲಾರೆ. ಈಗಲೂ ಯಾವುದಾದರೂ ಕಾರ್ಯದ ಮನೆಯಲ್ಲಿ ಬಡಿಸಲು ಸಾರಿನ ಪಾತ್ರೆ ಹಿಡಿದುಕೊಂಡಾಗ ಅದು 'ಸಾರು ಹೌದೋ ಅಲ್ಲವೋ' ಎಂದು ಎರಡೆರಡು ಬಾರಿ ಪರೀಕ್ಷಿಸಿ ಬಡಿಸಲು ಕೊಂಡೊಯ್ಯುತ್ತೇನೆ. ಜೀವನದ ಮರೆಯದೆ ಪಾಠಗಳೆಂದರೆ ಹಾಗೇ ಅಲ್ಲವೆ?
ಇಂತಹ ಘಮಘಮಿಸುವ ಸಾರು ಬೇಕೆಂದರೆ ಉಡುಪಿ ಕಡೆಯವರ ಊಟಕ್ಕೆ ತಪ್ಪದೇ ಹೋಗಿ. ಅಲ್ಲಿನ ಸಾರಿನ ರುಚಿಯನ್ನು ಉಂಡು ಅನುಭವಿಸಿ ಹಾಗೂ ಅದರ ಪರಿಮಳವನ್ನು ಆಸ್ವಾದಿಸಿ. ಊಟ ಮಾಡಿ ಕೈ ತೊಳೆದಾದ ಮೇಲೂ ಅದರ ಪರಿಮಳ ಉಳಿದಿರುವುದು ಅದರ ವಿಶೇಷತೆ! ಇದನ್ನು ಓದುತ್ತಾ ಬಾಯಿ ನೀರೂರಿದರೆ ಕ್ಷಮಿಸಿ😝


 188. ಪರಿಸರ : ಪೀಟಿ ಹುಳಗಳು (30/10/2020)

 ಮೊನ್ನೆ ಸಂಜೆ ಕ್ಯಾಂಪಸ್ಸಿನಲ್ಲಿ ವಾಕ್ ಮಾಡುವಾಗ ಒಂದಿಷ್ಟು ಪೀಟಿ ಹುಳುಗಳು ಹಾರಾಡುತ್ತಿದ್ದದ್ದು ಕಾಣಿಸಿತು. ಅವುಗಳು ಭಾರಿ ಹುರುಪಿನಿಂದ ಹಾರುತ್ತಿದ್ದ ಕಾರಣ ಅವುಗಳ ಫೋಟೊ ತೆಗೆಯಲಾಗಲೇ ಇಲ್ಲ. ಹಾಗೆ ಸ್ವಲ್ಪ ಹೊತ್ತು ಅಲ್ಲಿಯೇ ನಿಂತು ಅವುಗಳ ಹಾರಾಟವನ್ನು ನೋಡುತ್ತಿದ್ದೆ. ವಯಸ್ಸು ಐವತ್ತು ದಾಟಿದ್ದರೂ ಪೀಟಿಹುಳುಗಳ ಹಾರಾಟದ ಸೌಂದರ್ಯವನ್ನು ನೋಡುವ ಮನಸ್ಥಿತಿ ನನ್ನಲ್ಲಿಇನ್ನೂ ಹಾಗೆಯೇ ಉಳಿದಿದೆ😌 ನಾವು ಚಿಕ್ಕವರಿದ್ದಾಗ ಕಷ್ಟಪಟ್ಟು ಪೀಟಿ ಹುಳುಗಳನ್ನು ಹಿಡಿದು ಅದರ ಉದ್ದನೆಯ ಬಾಲದಂತಹ ದೇಹದ ಕೆಳಗಿನ ಭಾಗಕ್ಕೆ ದಾರ ಕಟ್ಟಿ ಗಾಳಿಪಟದಂತೆ ಹಾರಿಸುತ್ತಿದ್ದೆವು. ಅವುಗಳಿಗೆ ನೋವಾಗದಂತೆ ಹೇಗೆ ದಾರ ಕಟ್ಟುತ್ತಿದ್ದೆವು ಎನ್ನುವ ನೆನಪು ಅಷ್ಟಿಲ್ಲ. ಆದರೆ ಅವುಗಳನ್ನು ಹಿಡಿಯಲು ನಾವೆಲ್ಲ ಕಸಿನ್ಸ್ ಒಟ್ಟಾಗಿ ಗದ್ದೆ ತುಂಬೆಲ್ಲಾ ಓಡಿಯಾಡುತ್ತಿದ್ದ ನೆನಪಿದೆ. ಆಗಷ್ಟೇ ಕೊಯ್ಲು ಮುಗಿದಿರುತ್ತಿದ್ದ ಗದ್ದೆಯಲ್ಲಿ ಆ ಭತ್ತದ ಬುಡಗಳನ್ನು ಕಾಲಿಗೆ ಚುಚ್ಚಿಸಿಕೊಳ್ಳುತ್ತಾ ಆದ್ಯಾವುದರ ಗಮನವಿಲ್ಲದೆ ಪೀಟಿ ಹುಳುಗಳನ್ನು ಹಿಡಿಯಲು ಓಡುತ್ತಿದ್ದದ್ದನ್ನು ಮರೆಯಲು ಹೇಗೆ ಸಾಧ್ಯ? ಅವುಗಳನ್ನು ಹಿಡಿಯುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಅವುಗಳು ಬಹಳ ಚುರುಕಾದ ಜೀವಿಗಳಾದ ಕಾರಣ ಬಹಳ ಜಾಗರೂಕತೆಯಿಂದ ಅವುಗಳನ್ನು ಹಿಡಿಯುವ ಕೆಲಸ ಮಾಡಬೇಕಿತ್ತು. ನಮ್ಮ ತಾಳ್ಮೆಯ ಪರೀಕ್ಷೆಗೆ ಇದೊಂದು ಒಳ್ಳೆಯ ಕಾರ್ಯವಾಗಿತ್ತು. ಪೀಟಿ ಹುಳುಗಳನ್ನು ಹಿಡಿಯುವ ಕೆಲಸ ನಮ್ಮಂತಹ ಪುಟ್ಟ ಮಕ್ಕಳನ್ನು ಸಕ್ರಿಯವಾಗಿ ಆ ಕೆಲಸದಲ್ಲಿ ತೊಡಗಿಕೊಳ್ಳುವಂತೆ ಮಾಡುತ್ತಿತ್ತು. ಸ್ವಲ್ಪ ಹೊತ್ತು ನಮ್ಮ ಉಳಿದ ಚೇಷ್ಟೆಗಳಿಗೆ ಬಿಡುವು ದೊರೆಯುತ್ತಿತ್ತು. ಸುಮಾರು ಅಕ್ಟೋಬರ್ ತಿಂಗಳ ಕೊನೆಯಲ್ಲಿ ಕಾಣಸಿಗುವ ಪೀಟಿ ಹುಳುಗಳು ನೋಡಲಿಕ್ಕೆ ಆಕರ್ಷಕ. ಅವುಗಳ ಸುಂದರವಾದ ಪಾರದರ್ಶಕ ರೆಕ್ಕೆಗಳೇ ಅವುಗಳ ಆಕರ್ಷಣೆಯ ಗುಟ್ಟು. ಉದ್ದವಾಗಿರುವ ಪೀಟಿ ಹುಳುಗಳ ದೇಹದ ಮೇಲ್ಭಾಗ ಸ್ವಲ್ಪ ಅಗಲವಿದ್ದು ಎದೆ ಭಾಗದ ನಂತರದ ಕೆಳಗಿನ ಭಾಗ ತೆಳ್ಳನೆಯ ಬಾಲದಂತಿರುತ್ತದೆ. ಅವುಗಳ ರೆಕ್ಕೆಗಳು ದೇಹದ ಎದೆಯ ಪಕ್ಕಕ್ಕೆ ಅಂಟಿಕೊಂಡಿರುವಂತಿರುತ್ತವೆ. ಕೈಗೆಟಕುವ ಎತ್ತರದಲ್ಲಿ ಗುಂಪುಗುಂಪಾಗಿ ಅವು ಹಾರಾಡುವುದೇ ಚೆಂದ. ಹಸಿರಿರುವ ಕಡೆ ಹೆಚ್ಚಾಗಿ ಅವು ಹಾರಾಡುವುದನ್ನು ನಾನು ಕಂಡಿದ್ದೇನೆ. ಸಣ್ಣ ಮಕ್ಕಳಿಗೆ ಪೀಟಿ ಹುಳುಗಳ ಹಾರಾಟ ಕಿನ್ನರ ಲೋಕದಲ್ಲಿರುವ ಅನುಭವ ನೀಡುತ್ತದೆ. ಇಷ್ಟು ವಯಸ್ಸಾದ ನಮಗೇ ಪೀಟಿಹುಳುಗಳು ಹಾರಾಡುತ್ತಿದ್ದರೆ ನಿಂತು ನೋಡುವ ಬಯಕೆಯಾಗುತ್ತದೆ. ಇನ್ನು ಪುಟ್ಟ ಮಕ್ಕಳನ್ನು ಅವುಗಳು ಆಕರ್ಷಿಸುವುದರಲ್ಲಿ ಆಶ್ಚರ್ಯವೇನೂ ಇಲ್ಲ. ಅವುಗಳು ಇರುವೆ, ಸಣ್ಣ ಹುಳುಗಳನ್ನು ತಿಂದು ಬದುಕುತ್ತವೆ. ಬಹಳ ಚಟುವಟಿಕೆಯಿಂದಿರುವ ಕೀಟಗಳವು. ಜೀವಲೋಕದ ಸುಂದರವಾದ ಜೀವಿಗಳಲ್ಲಿ ಪೀಟಿಹುಳುಗಳೂ(dragon fly) ಒಂದು ಎಂದು ನಿಸ್ಸಂದೇಹವಾಗಿ ಹೇಳಬಹುದು. ಅಲ್ಲವೇ?

Wednesday, October 28, 2020

ಗೋವಿಂದ ಪ್ರಸಾದ್ - ಮನೆ ಭೇಟಿ

 ಸೋಮವಾರ, 26 ಅಕ್ಟೋಬರ 2020 

83/3 ಇಂದ್ರ ಸದನ ಅಪಾರ್ಟ್ ಮೆಂಟ್, ಮಹದೇವಪುರ, ಬೆಂಗಳೂರು.



ಮೈಸೂರು ಗೋವಿಂದ ಪ್ರಸಾದ್ ಅವರು ಸುಮಾರು 40 ವರ್ಷಗಳಿಂದಲೂ ಜಾಸ್ತಿ ಪರಿಚಿತರು, ಸಹೃದಯರು, ಹಿತ ಚಿಂತಕರು. ನೈಜೆರಿಯಾದ ಗೊಂಬೆ ಪೇಟೆಯಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಲು 1979 ನೇ ವರ್ಷ ಅವರು ಬಂದಾಗ ಅವರ ಪರಿಚಯ, ಒಡನಾಟ. ಅವರ ಮಗ ಬಚ್ಚು (ತ್ರಿವಿಕ್ರಮ ಪ್ರಸಾದ್) ಸಣ್ಣ ಹುಡುಗ. ಹೆಂಡತಿ ನಾಗಮಣಿ ಪ್ರಸಾದ. ಮೈಸುರಿನವರು, ಕನ್ನಡ ಮಾತನಾಡುವವರು, ಹಾಗಾಗಿ ಒಳ್ಳೆಯ ಸ್ನೇಹಿತರಾದರು.





1985 ರಲ್ಲಿ ಅವರು ನೈಜೇರಿಯಾ ಬಿಟ್ಟು ದುಬೈನಲ್ಲಿ ಕೆಲಸ ಮಾಡಲು ಬಂದು ಅವರ್ ಓನ್ ಶಾಲೆಯಲ್ಲಿ ಬಂದು ಸೇರಿದರು. ಅವರ ಶಿಫಾರಸ್ಸಿ ನಿಂದ 1986 ವರ್ಷ ನಾನೂ ದುಬೈ ಗೆ ಬಂದು ಅದೇ ಶಾಲೆಯಲ್ಲಿ ಕೆಲಸಕ್ಕೆ ಸೇರಿದ್ದೂ ಆಯಿತು. ಹೀಗೆ ಗೆಳೆತನ, ಆಗಾಗ್ಗೆ ಭೇಟಿ, ಒಟ್ಟಿಗೆ ಹೊರ ಸಂಚಾರ, ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆ ಯಿಂದಾಗಿ ಇನ್ನೂ ನಿಕಟ ಭಾಂಧವ್ಯ ಬೆಳೆಯಿತು.



ಅವರ ಹೆಂಡತಿ ನಾಗಮಣಿ ಯವರ ಅನಾರೋಗ್ಯದಿಂದ ಅವರು 2003 ರಲ್ಲಿ ವಾಪಸ್ಸು ಬೆಂಗಳೂರಿಗೆ ಬಂದು ನೆಲೆಸಿದರು.

6 ಜನವರಿ 2010 

ಕಳೆದ ಕೆಲ ವರ್ಷಗಳಿಂದ ಅವರು ಮೈಸೂರಿನಲ್ಲಿ ನೆಲೆಸಿದ್ದು 2019 ಸಪ್ಟಂಬರದಲ್ಲಿ ಅವರ ಹೆಂಡತಿಯ ದೇಹಾಂತವಾಯಿತು.

ಈ ವರ್ಷ ಅವರು ವಾಪಸ್ಸು ಬೆಂಗಳೂರಿಗೆ ಬಂದಿದ್ದು ಅವರ ಭೇಟಿಗೆ ಮೊನ್ನೆ ಅವರ ಮನೆಗೆ ಹೋಗಿದ್ದೆವು.

82 ವರ್ಷದ ಪ್ರಸಾದರಿಗೆ ದೈಹಿಕ ಆರೋಗ್ಯ ಚೆನ್ನಾಗಿದ್ದು ಮಾನಸಿಕವಾಗಿ ಹುಮ್ಮಸ್ಸಿನಿಂದ, ಜೀವನೋತ್ಸಾಹದಿಂದ, ಉಲ್ಲಾಸ ಭರಿತರಾಗಿ ಜೀವನವನ್ನು ಕಳೆಯುತ್ತಿರುವರು. ಅವರ ಮಗ ತ್ರಿವಿಕ್ರಮ ಹತ್ತಿರದ ಇನ್ನೊಂದು ಫ್ಲಾಟ್ ನಲ್ಲಿ ತನ್ನ ಕುಟುಂಬ ದೊಡನೆ ಜೀವನ ಸಾಗಿಸುತ್ತಿರುವನು.


ಅವರ ಪರಂಪರೆಯಿಂದ ಮಾಡಿಕೊಂಡು ಬಂದ ನವರಾತ್ರಿಯ ಬೊಂಬೆಯ ಪ್ರದರ್ಶನ, ಅವರ ನಿಷ್ಠೆ, ಬದ್ದತೆ, ಉತ್ಸಾಹ ವನ್ನು ತೋರಿಸುತ್ತದೆ. 

ಭಗವಂತನು ಅವರಿಗೆ ಆರೋಗ್ಯ, ನೆಮ್ಮದಿಯನ್ನು ಕರುಣಿಸಲಿ ಎಂದು ಪ್ರಾರ್ಥನೆ.

ಬರೆದಿರುವುದು ಗುರುವಾರ, 29 ಅಕ್ಟೋಬರ 2020