ಭಾನುವಾರ, 21 ನವಂಬರ 2021
ತರಳಬಾಳು ಗ್ರಂಥಾಲಯ, ಅರ್.ಟಿ.ನಗರ, ಬೆಂಗಳೂರು.
ನವಂಬರ ತಿಂಗಳು ಕನ್ನಡ ರಾಜ್ಯೋತ್ಸವದ ದಿನಗಳು. ಕರ್ನಾಟಕ ಏಕೀಕರಣ ಆಗಿದ್ದು, ಭಾಷಾವಾರ ರಾಜ್ಯಗಳ ರಚನೆಯಾಗಿ ನವಂಬರ 1 ರಂದು ಕರ್ನಾಟಕ ರಾಜ್ಯವಾಗಿ ನಾಮಕರಣ ವಾಯ್ತು.
ಕನ್ನಡ ರಾಜ್ಯೋತ್ಸವವನ್ನು ರಾಜ್ಯದಲ್ಲಿ, ರಾಷ್ಟ್ರದಲ್ಲಿ, ಹಾಗೂ ವಿಶ್ವವ್ಯಾಪಿಯಾಗಿ ಆಚರಿಸಲಾಗುತ್ತಿದೆ.
ಶ್ರೀ ವೋದೆ .ಪಿ. ಕೃಷ್ಣ ಅವರು ಕಾರ್ಯಕ್ರಮದ ಉದ್ಘಾಟನೆಯನ್ನು ಮಾಡಿ ಕನ್ನಡ ಭಾಷೆ ಪುರಾತನವಾಗಿದ್ದು, ವಿಶ್ವಾದ್ಯಂತ ಕನ್ನಡಿಗರು ಸಂಭ್ರಮ, ಸಡಗರದಿಂದ ಭಾಷಣ, ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮಗಳಿಂದ ರಾಜ್ಯೋತ್ಸವವನ್ನು ಆಚರಿಸುವರು.
ಪಾ. ಚಂದ್ರಶೇಖರ ಚಡಗ |
ವೂಡೆ ಪಿ. ಕೃಷ್ಣ |
ಕರ್ನಾಟಕಕ್ಕೆ ಗಡಿ ಇದ್ದರೆ, ಕನ್ನಡಕ್ಕೆ ಗಡಿ ಇಲ್ಲ, ಆದ್ದರಿಂದ ಅದು ಕನ್ನಡ ರಾಜ್ಯೋತ್ಸವ.
ವನಮಾಲಾ ಸಂಪನ್ನಕುಮಾರ್ |
ಶ್ರೀಮತಿ ವನಮಾಲಾ ಸಂಪನ್ನಕುಮಾರ ಅವರು ತಮ್ಮ ಉಪನ್ಯಾಸದಲ್ಲಿ ಶಿವರಾಮ ಕಾರಂತರ ಅದ್ಭುತ ಸಾಧನೆಯನ್ನು ವಿವರವಾಗಿ ಬಣ್ಣಿಸಿದರು. ಕಡಲು ತೀರದ ಭಾರ್ಗವ, ಅವರು ಜ್ಞಾನದಲ್ಲಿ ಕಡಲು. ಆಡು ಮುಟ್ಟದ ಸೊಪ್ಪಿಲ್ಲ ಎಂದ ಹಾಗೆ, ಅವರು ಎಲ್ಲಾ ಕ್ಷೇತ್ರದಲ್ಲಿ ತಮ್ಮ ಕೊಡುಗೆಯನ್ನು ನೀಡಿದ್ದರು.
ಕಾದಂಬರಿ, ನಾಟಕ, ಯಕ್ಷಗಾನ, ಕಲೆ, ಅಭಿನಯ, ರಾಜಕೀಯ, ಶಿಕ್ಷಣ, ಇತ್ಯಾದಿ ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು.
ಡಾ. ನಿರ್ಮಲಾ ಪ್ರಭು |
ಶ್ರೀಮತಿ ಇಂದಿರಾ ಶರಣ್ ಅವರು ಕಾರ್ಯಕ್ರಮದ ನಿರೂಪಣೆಯನ್ನು ಮಾಡಿ ಅತಿಥಿಗಳ ಪರಿಚಯವನ್ನು ಮಾಡಿದರು.
ಶ್ರೀಮತಿ ಇಂದಿರಾ ಶರಣ್ |
ಶ್ರೀ ಪಾ. ಚಂದ್ರಶೇಖರ ಚಡಗ ಅವರು ಸ್ವಾಗತ ಭಾಷಣವನ್ನು ಮಾಡುತ್ತಾ, ಶಿವರಾಮ ಕಾರಂತ ವೇದಿಕೆಯು ನಡೆದು ಬಂದ ಹಾದಿ, ಬೆಂಗಳೂರಿನ ಉತ್ತರ ಭಾಗದಲ್ಲಿ ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ಪ್ರತಿಷ್ಟಿತ ಸಂಘಟನೆಯೆಂದು ಪ್ರತಿಪಾದಿಸಿದೆ.
ಶ್ರೀಮತಿ ಮಂಜುಳಾ ಭಾರ್ಗವಿ ಅವರು ತಮ್ಮ ಮಧುರ ಕಂಠದಿಂದ ಕನ್ನಡ ಭಾವಗೀತೆಯನ್ನು ಹಾಡಿ ಸಭಿಕರ ಮನರಂಜಿಸಿದರು.
ಶ್ರೀ ಚಿದಂಬರ ಕೋಟೆ ಅವರು ಕುವೆಂಪು ಅವರ ಹಾಡೊಂದನ್ನು ಮಧುರವಾಗಿ ಹಾಡಿದರು.
ಶ್ರೀ ವೀರಶೇಖರ ಸ್ವಾಮಿ ಯವರು ಧನ್ಯವಾದ ಸಮರ್ಪಿಸಿದರು.
ಬರೆದಿರುವುದು ಸೋಮವಾರ 22 ನವಂಬರ 2021
Shashikala C: ಕನ್ನಡ ರಾಜ್ಯೋತ್ಸವ" -2021
ಹೀಗೊಂದು ವಿಶೇಷ ಕನ್ನಡ ರಾಜ್ಯೋತ್ಸವ ಆಚರಣೆ,
ಆರ್.ಟಿ ನಗರದ ತರಳಬಾಳು ಕೇಂದ್ರದಲ್ಲಿ ಪಾ. ಚಂದ್ರಶೇಖರ್ ಚಡಗರವರು ಕಟ್ಟಿ ಬೆಳಸಿದ ಸಂಸ್ಥೆ ಶಿವರಾಮ ಕಾರಂತ ಸಾಹಿತ್ಯ ವೇದಿಕೆ ಯಿಂದ
ದಿನಾಂಕ 21.11.2021, ಭಾನುವಾರ ಸಂಜೆ 4.30 ಗೆ ಹಮ್ಮಿಕೊಳ್ಳಲಾಗಿತ್ತು.
ಎಲ್ಲರಿಗೂ ಪ್ರೀತಿಪೂರ್ವಕವಾದ ಸ್ವಾಗತ, ನಾಲ್ಕು ಭೌಗೋಳಿಕ ವಿಶೇಷತೆಗಳು, ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಅತ್ಯಂತ ಪ್ರಗತಿಶೀಲ ಭಾಷೆ ನಮ್ಮದು. ಕನ್ನಡ ರಾಜ್ಯೋತ್ಸವ ಅನ್ನುವುದು ನಮ್ಮ ಬದುಕು, ಭಾವನೆಗಳಿಗೆ ವಿಶೇಷ ಬೆಚ್ಚನೆಯ ಭಾವವನ್ನು ನೀಡುತ್ತದೆ ಎಂಬಂತಹ ಚಿನ್ನುಡಿಗಳೊಂದಿಗೆ ವೇದಿಕೆಯ ಕಾರ್ಯದರ್ಶಿ ಶ್ರೀಮತಿ ಇಂದಿರಾ ಶರಣ್ ರವರಿಂದ ನಿರೂಪಣೆ ಆರಂಭವಾಯಿತು.
ವಿಶೇಷ ಆಹ್ವಾನಿತ ಅತಿಥಿಗಳಾಗಿ ಶ್ರೀ ವೊಡೆ ಪಿ ಕೃಷ್ಣ , ನಾಡೋಜ ಗೌರವ ಸನ್ಮಾನಿತರು ಹಾಗೂ
ಉಪನ್ಯಾಸಕರಾಗಿ ಶ್ರೀಮತಿ ವನಮಾಲಾ ಸಂಪನ್ನಕುಮಾರ, ಅಧ್ಯಕ್ಷರು, ಕರ್ನಾಟಕ ಲೇಖಕಿಯರ ಸಂಘ ಇವರು ಭಾಗವಹಿಸಿದ್ದರು.
ವೇದಿಕೆಯ ಅಧ್ಯಕ್ಷರಾದ ಡಾ.ನಿರ್ಮಲ ಪ್ರಭುರವರು ಅದ್ಯಕ್ಷತೆಯನ್ನು ವಹಿಸಿದ್ದರು.
ಸುಂದರ, ಅರ್ಥಪೂರ್ಣವಾದ ಉಪನ್ಯಾಸಗಳು, ಎಂದಿನಂತೆ ನಮ್ಮ ರಾಜ್ಯೋತ್ಸವದ ವಿಶೇಷತೆಗಳು.
ನಾಡಗೀತೆ:
ವೇದಿಕೆಯ ಮಹಿಳಾ ಸದಸ್ಯರಿಂದ ನಾಡಗೀತೆಯೊಂದಿಗೆ ಸಂಭ್ರಮದ ಕಾರ್ಯಕ್ರಮ ಗರಿಗೆದರಿತು.
ಸ್ವಾಗತ ಭಾಷಣ:
ವೇದಿಕೆಯ ಸಂಸ್ಥಾಪಕ ಸದಸ್ಯರು, ಕಾರ್ಯಧ್ಯಕ್ಷರಾದ ಶ್ರೀ ಚಂದ್ರಶೇಖರ ಚಡಗ ರವರು ಬೆಂಗಳೂರು ಉತ್ತರ ಭಾಗದಲ್ಲಿ ನಮ್ಮ ವೇದಿಕೆ ವಿಶಿಷ್ಠವಾದ ಪ್ರತಿಷ್ಠೆಯ ಸಂಸ್ಥೆಯಾಗಿ ಬೆಳೆದಿರುವ ಹಿನ್ನಲೆಯನ್ನು, ಸರಳ ಮತ್ತು ಅರ್ಥಪೂರ್ಣವಾದ ಕಾರ್ಯಕ್ರಮಗಳ ಆಯೋಜನೆ, 25ಸಾವಿರ ಪುಸ್ತಕಗಳ ನಮ್ಮ ಗ್ರಂಥಾಲಯ ಮತ್ತಷ್ಟು ಉಪಯೋಗವಾಗಬೇಕಾದುದರ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸುತ್ತಾ ಅತಿಥಿಗಳ ಕಿರುಪರಿಚಯದೊಂದಿಗೆ ಸ್ವಾಗತಭಾಷಣ ನಡೆಸಿಕೊಟ್ಟರು.
ಉದ್ಘಾಟಕರ ಪರಿಚಯ:
ಶ್ರೀ ವೊಡೆ ಪಿ ಕೃಷ್ಣ , ನಾಡೋಜ ಗೌರವ ಸನ್ಮಾನಿತರು
ರಾಜ್ಯೋತ್ಸವ ಪ್ರಶಸ್ತಿ, ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್, ವಿಶೇಷವಾಗಿ ನಾಡೋಜ ಪ್ರಶಸ್ತಿ ನೀಡಿ ಗೌರವ. ಸ್ವಾತಂತ್ರ್ಯ ಹೋರಾಟಗಾರರ ಮನೆತನದಿಂದ ಬಂದ, ಮೈಸೂರಿನ ಹೆಸರಾಂತ ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ವ್ಯಾಸಂಗ, ಪಿಎಚ್ ಡಿ ಪದವಿ. ವೃತ್ತಿಯಲ್ಲಿ ಚಾಟೆಂಡ್ ಅಕೌಂಟೆಂಟ್, ಭಾರತೀಯ ಇಂಜನೀಯರುಗಳ ಅಧ್ಯಕ್ಷರಾಗಿ ಅನುಪಮ ಸೇವೆ ಸಲ್ಲಿಸಿದ್ದಾರೆ. ಮೌಲ್ಯಮಾಪನದಲ್ಲಿ ಪರಿಣಿತರು. ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಕ್ಷಯರೋಗ ಸಂಸ್ಥೆ, ಭಾರತೀಯ ಸೇವಾದಳ, ಶೇಷಾದ್ರಿ ಪುರಂ ಶಿಕ್ಷಣ ಸಂಸ್ಥೆ ಇವುಗಳಲ್ಲಿ ಅತ್ಯಂತ ಜವಾಬ್ದಾರಿಯುತ ಸ್ಥಾನ ಅಲಂಕರಿಸಿ ಪಾರದರ್ಶಕ ನಿಸ್ವಾರ್ಥ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಭಾರತೀಯ ಉತ್ಪಾದನಾ ಇಂಜನೀಯರುಗಳ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ.
ಕಾರ್ಯಕ್ರಮ ಉದ್ಘಾಟನೆ:
ಜ್ಯೋತಿಯನ್ನು ಬೆಳಗಿಸಿ ಕಾರ್ಯಕ್ರಮ ಉದ್ಘಾಟನೆಯಲ್ಲಿ ಉದ್ಘಾಟಕರ ಜೊತೆಯಾದ ವೇದಿಕೆಯ ಗಣ್ಯರು.
ಉದ್ಘಾಟನಾ ಭಾಷಣ:
ನಾಡೋಜ ಶ್ರೀ ವೊಡೆ ಪಿ ಕೃಷ್ಣ ರವರಿಂದ
21ನೇ ಸಾಲಿನ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ವೇದಿಕೆಗೆ ತಿಳಿಸಿದರು. "ಕನ್ನಡ ರಾಜ್ಯೋತ್ಸವ" ಎಂದು ಬರೆದಿದ್ದ ಪತ್ರಿಕೆ ನೋಡಿ ತುಂಬಾ ಸಂತೋಷವಾಯಿತು. ಯಾಕೆಂದರೆ ತುಂಬ ಕಡೆ ಕರ್ನಾಟಕ ರಾಜ್ಯೋತ್ಸವ ಎಂದು ಬರೀತಾರೆ. ಆದರೆ ನಾನು ಕನ್ನಡ ರಾಜ್ಯೋತ್ಸವ ತುಂಬಾ ಇಷ್ಟಪಡುತ್ತೇನೆ. ಕರ್ನಾಟಕಕ್ಕೆ ಗಡಿ ಇದೆ, ಆದರೆ ಕನ್ನಡಕ್ಕೆ ಗಡಿ ಇಲ್ಲ, ಇದು ಮುಖ್ಯವಾದ ಮೆಸೇಜ್ ಎಂದು ಭಾವಿಸುತ್ತೇನೆ. ರಾಜ್ಯೋತ್ಸವ ನಮಗೆಲ್ಲಾ ಹೆಚ್ಚಿನ ಶಕ್ತಿ ಚೈತನ್ಯ ಮತ್ತು ಪ್ರೇರಣೆ ನೀಡಲಿ ತುಂಬಲಿ.
ನಾನು ಆಂಗ್ಲ ಮಾಧ್ಯಮದಲ್ಲಿ ಪ್ರಥಮ ಭಾಷೆ ಹಿಂದಿ, ಕನ್ನಡ ದ್ವಿತೀಯ ಭಾಷೆ ಓದಿದವನು. ಆದರೆ ಮನೆಯಲ್ಲಿ ಕನ್ನಡ ವಾತಾವರಣವಿತ್ತು. ಎಲ್ಲವನ್ನೂ ಕನ್ನಡದಲ್ಲಿ ವ್ಯವಹರಿಸುವ ಕುಟುಂಬ ನಮ್ಮದಾಗಿತ್ತು. ರಾಷ್ಟ್ರೀಯ ಆಂದೋಲನದಲ್ಲಿದ್ದ ನಮ್ಮ ಮನೆಯವರು ,ಗಾಂಧಿಯವರ ತ್ರಿಭಾಷಾ ಸೂತ್ರ ಒಪ್ಪಿದ್ದ ಅವರು ಆಂಗ್ಲ ಮತ್ತು ಹಿಂದಿ ಭಾಷೆ ಕಲಿತರೆ ದೇಶದ ಯಾವುದೇ ಭಾಗದಲ್ಲಿ ಬದುಕಬಹುದು ಎಂಬ ಕಾರಣದಿಂದ ಹಿಂದಿ ಪ್ರಥಮ ಭಾಷೆಯಾಗಿ ನಮಗೆ ಕೊಡಿಸಿರಬಹುದು.
ಭಾಷೆ ಬದುಕಿನ ಭಾಗ ಎಂದು ನಾನು ನಂಬಿದ್ದೇನೆ. ನಮಗೆ ಆಹಾರ ಹೇಗೆ ಮುಖ್ಯವೋ ಹಾಗೆಯೇ ಭಾಷೆಯೂ ಬಹಳ ಮುಖ್ಯ. ಮುಖ್ಯವಾಗಿ ಭಾಷೆಯನ್ನು ಸರಿಯಾಗಿ ಬಳಸುವುದನ್ನು ಕಲಿಯಬೇಕು. ರಾಜಕುಮಾರ್ ರವರು ಸ್ಪಷ್ಟವಾಗಿ ಕನ್ನಡ. ಮಾತನಾಡುತ್ತಿದ್ದರು. ಲಕ್ಷಾಂತರ ಜನ ಸಿನಿಮಾ ನೋಡಿದವರ ಮೇಲೆ ಪ್ರಭಾವ ಬೀರಿದೆ. ಒಳ್ಳೇ ಭಾಷಣ ಮಾಡಿದರೆ ಹಬ್ಬದ ಊಟ ಮಾಡಿದ ಹಾಗೆ ಆಗುತ್ತದೆ. ಅದು ಭಾಷೆಗಿರುವ ತಾಕತ್ತು ಮತ್ತು ಶಕ್ತಿ. ಸ್ಪಷ್ಟವಾಗಿ, ಸರಳವಾಗಿ ಭಾಷೆ ಮನೆ ಅಥವಾ ವ್ಯವಹರಿಸುವ ಸ್ಥಳದಲ್ಲಿ ಇರಬೇಕು, ಇದರಿಂದ ಬಹಳ ಒಳ್ಳೆಯದಾಗುತ್ತದೆ. ಬೇರೆ ಭಾಷೆ ವ್ಯವಹಾರಿಕವಾಗಿ ಬೇಕಾಗುತ್ತದೆ. ಅದನ್ನೇ ಪ್ರಧಾನ ಮಾಡಿಕೊಂಡು ಹೋದರೆ ನಮ್ಮ ಭಾಷೆ ಸಂಸ್ಕೃತಿಗೆ ಮಾಡಿವ ದ್ರೋಹ ಎಂದು ಭಾವಿಸುವೆ. ಅಂತರರಾಷ್ಟ್ರೀಯ ಭಾಷೆಗಳನ್ನು ಕಲಿಯಲಿ, ಆದರೆ ಮಾತೃ ಭಾಷೆಯ ಮೇಲಿನ ಪ್ರೀತಿ ಪ್ರೇಮ ಯಾವತ್ತೂ ಕುಂದಬಾರದ ನಮ್ಮ ಸಂಸ್ಕೃತಿ, ಪರಂಪರೆಯ ಮೇಲೆ ಪ್ರೀತಿ ಬಂದಿದ್ದು ನಮ್ಮ ಹಿರಿಯರಿಂದ. ಗುಡಿಗೋಪುರ,ಮಠಮಾನ್ಯಗಳನ್ನು ಕಟ್ಟಿಕೊಂಡು ಹೋಗುತ್ತಿದ್ದರು. ಇದನ್ನು ನೋಡಿ ಕಲಿತಿದ್ದು ಬಹಳವಿದೆ. ಬೆಳಿಯುತ್ತಾ ಬೆಳಿಯುತ್ತಾ ಅದರ ಮೇಲೆ ನಮಗೆ ಗೌರವವಿದೆ. ಓದಿನ ಭರಾಟೆಯಲ್ಲಿ ನಮ್ಮ ಮಕ್ಕಳಿಗೆ ಒಂದು ಮುಂಜಿ, ಮದುವೆ, ನಾಮಕರಣ ಇವುಗಳಿಗೆ ಕರೆದುಕೊಂಡು ಹೋಗುವುದಿಲ್ಲ. ಮಕ್ಕಳಿಗೆ ವಿಧಿವಿಧಾನಗಳು ಅರ್ಥ ಆಗುವುದಿಲ್ಲ. ಇವುಗಳ ಬಗ್ಗೆ ಮಕ್ಕಳಿಗೆ ತೋರಿಸಿದರೆ ಸಾಕು ಎಷ್ಟೋ ವಿಚಾರಗಳನ್ನು ತಿಳಿದುಕೊಂಡ ಹಾಗೆ ಆಗುತ್ತದೆ. ಭಾಷೆಯು ಸಂಸ್ಕೃತಿಯೊಂದಿಗೆ ಸೇರಿರುವಂತಹದು. ಕನ್ನಡ ಭಾಷೆಯಲ್ಲಿ ತುಳು, ಕೊಡವ ಭಾಷೆಗಳೂ ಸೇರಿವೆ. ನಿತ್ಯ ಜೀವನದ ಭಾಷೆ ನಮ್ಮದಾಗಬೇಕು.
ನಾನು ಹುಟ್ಟಿದಾಗಿನಿಂದಲೂ ಪ್ರಜಾವಾಣಿ ಪತ್ರಿಕೆ ಓದುತ್ತಾ ಇದ್ದೇನೆ. ಇವತ್ತಿಗೂ ನಮ್ಮ ಮನೆಯಲ್ಲಿ ಪ್ರಜಾವಾಣಿ ಪತ್ರಿಕೆ ಬರುತ್ತದೆ. ಆಗ ಸುಧಾ,ಕರ್ಮವೀರ ಪತ್ರಿಕೆ ಬರ್ತಾ ಇತ್ತು. ಪತ್ರಿಕೆ ಬರೋದಕ್ಕೆ ಕಾಯ್ತಾ ಇರೋರು ಮನೆಯಲ್ಲಿ. ಒಬ್ಬರಾದ ಮೇಲೆ ಒಬ್ಬರು ಮನೆಯವರೆಲ್ಲಾ ಓದುತ್ತಾ ಇದ್ದರು. ಇವತ್ತು ತಾಂತ್ರಿಕತೆ ಬಂದಿರಬಹುದು. ಆದರೆ ಓದುವ ಸಂಸ್ಕೃತಿ ಇಟ್ಟುಕೊಂಡವರಿಂದ ಮಾತ್ರ ಇಷ್ಟು ಕೆಲಸ ಆಗ್ತಾ ಇದೆ. ತಾಂತ್ರಿಕತೆ ಬಳಸಿಕೊಂಡು ಕನ್ನಡ ವೃದ್ಧಿ ಹೇಗೆ ಮಾಡಬಹುದು ಎಂಬ ಯೋಚನೆ ಆಗಬೇಕು. ತಾಯಿಯಷ್ಟೇ ಮುಖ್ಯ ನಮ್ಮ ಭಾಷೆ. ಹಾಗೆಯೇ ಮಾತನಾಡುವುದರ ಬಗ್ಗೆಯೂ ಕೂಡ ಎಚ್ಚರಿಕೆ ಇರಬೇಕು. ನಿತ್ಯಜೀವನದಲ್ಲಿ ಮಾತನಾಡುವುದರ ಬಗ್ಗೆ ಮಕ್ಕಳಿಗೆ ಹೇಳಿಕೊಡಬೇಕು. ನಮ್ಮ ನಾಲಿಗೆಯ ಮೇಲೆ ಸರಸ್ವತಿ ಯಾವಾಗಲೂ ನೆಲೆಸಿರುತ್ತಾಳೆ, ನಾವು ಕೆಟ್ಟಪದಗಳನ್ನು ಬಳಸಬಾರದು, ಒಳ್ಳೇ ಪದಗಳನ್ನೇ ಮಾತನಾಡಬೇಕು ಎಂಬುದನ್ನು ಚಿಕ್ಕವಯಸ್ಸಿನಲ್ಲಿಯೇ ಮಕ್ಕಳಿಗೆ ತಿಳಿಸುತ್ತಾ ಬನ್ನಿ. ನಾವೆಲ್ಲ ಆಗರ್ಭ ಶ್ರೀಮಂತರು ಎಂತಹ ಭಾಷೆ, ಎಂತಹ ವೈಭವದ ಭಾಷೆ ಅಂತಹ ಹೆಮ್ಮೆ ನಮ್ಮಲ್ಲಿ ಯಾವತ್ತೂ ಇರಬೇಕು. ಕೆಲವು ಮೈಲಿಗಳ ಪ್ರವಾಸ ಮಾಡಿ ನಮ್ಮ ಭಾಷೆ ಹೇಗೆ ಬದಲಾಗುತ್ತದೆ. ಕೋಲಾರಕ್ಕೆ ಹೋಗಿ, ತುಮಕೂರಿನ ಹೋಗಿ, ಮೈಸೂರಿಗೆ, ಮಂಗಳೂರು, ಉತ್ತರ ಕರ್ನಾಟಕಕ್ಕೆ ಹೋಗಿ ಭಾಷೆ, ಆಹಾರ ಪದ್ಧತಿ ಎಲ್ಲವೂ ಬದಲಾಗುತ್ತದೆ. ಆದರೂ ಒಟ್ಟಾಗಿ ಹಿಡಿಯುವ ನಮ್ಮ ಸಂಸ್ಕೃತಿ ಅದೇ ಕನ್ನಡ, ಅದೇ ಭಾಷೆಯ ಶಕ್ತಿ.
ಭಾಷೆ ಅಂದರೆ ಕೇವಲ ಅಕ್ಷರ ಸೇವೆ ಮಾಡಿದವರನ್ನು ಮಾತ್ರ ಗುರುತಿಸುವುದಲ್ಲ. ಬೇಕಾದಷ್ಟು ವೈದ್ಯಕೀಯ, ಕೃಷಿ, ಬಾಹ್ಯಾಕಾಶದಲ್ಲಿ ಸೇವೆ ಮಾಡಿದ್ದಾರೆ. ನಾನು ಹೋದ ಕಡೆಯಲ್ಲಾ ವಿಶ್ವೇಶ್ವರಯ್ಯ ನವರ ಬಗ್ಗೆ ಹೇಳುತ್ತೇನೆ. ಅವರು ಕನ್ನಡ ಸಾಹಿತ್ಯ ಪರಿಷತ್ ನ್ನು ಹುಟ್ಟು ಹಾಕಿದ್ದಾರೆ. ಸಾಂಸ್ಕೃತಿಕ ವಾಗಿ ಸಾಹಿತ್ಯಕವಾಗಿ ಭಾಷೆ ಹಿಡಿಯಲಿಕ್ಕೆ ತಳಹದಿ ಹಾಕಿಕೊಟ್ಟರು. ಈ ಕ್ಷಣ ಅವರನ್ನು ನೆನೆಯಬೇಕಾಗಿದೆ. ಬದುಕಿನ ಎಲ್ಲಾ ರಂಗಗಳಲ್ಲಿ ಸೇವೆ ಮಾಡಿದವರೂ ಕೂಡ ಕನ್ನಡ ಸೇವೆ ಮಾಡಿದವರೇ. ಅನ್ಯ ಭಾಷಿಕರಿಗೆ ಕನ್ನಡ ಕಲಿಸುವ ಪ್ರಯತ್ನ ಮಾಡಬೇಕು. ಅವರನ್ನು ಕನ್ನಡದಲ್ಲಿ ಮಾತನಾಡಿಸುವ ಪ್ರಯತ್ನ ಮಾಡಬೇಕು. ನಮ್ಮ ಕನ್ನಡ ಭಾಷೆಯ ಮೇಲಿನ ಪ್ರೀತಿ ಬೆಳೆದದ್ದು ನಮ್ಮ ಕನ್ನಡ ಮೇಸ್ಟ್ರು ಗಳಿಂದ.
ಸ್ನೇಹಿತರೇ ನಾವು ರಾಷ್ಟ್ರ ದೃಷ್ಟಿ, ವಿಶ್ವದೃಷ್ಪಿ ಮತ್ತು ರಾಜ್ಯ ದೃಷ್ಟಿ ಯನ್ನು ಇಟ್ಟುಕೊಳ್ಳಬೇಕು. ಕುವೆಂಪುರವರು "ಜಯಭಾರತಿ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ" ಮೂಲಕ ಸಂದೇಶ ಕೊಟ್ಟಿದ್ದಾರೆ. ನಮ್ಮದೇ ಆದ ರಾಷ್ಟ್ರ ಗೀತೆ, ನಾಡಗೀತೆ ಇದೆ ಬಹಳ ಸಂತೋಷವಾದ ವಿಷಯ. ಅದೇ ರೀತಿ ರಾಷ್ಟ್ರ ಧ್ವಜ ಇದೆ. ರಾಜ್ಯ ಧ್ವಜ ಕೂಡ ಅಧಿಕೃತವಾಗಿ ಆಗಲಿ ಎಂಬುದು ನಮ್ಮ ಆಸೆ. ಕನ್ನಡಿಗರ ಮನಸ್ಸು ಬಹಳ ಶುದ್ಧ ನಿರ್ಮಲ ಮನಸ್ಸು. ಕಾಯಾ ವಾಚಾ ಒಂದೇ ಆಗಿರುವುದು. ನಾವು ಆಲೋಚನೆ ಮಾಡುತ್ತೇವೂ ಅದನ್ನು ಅಕ್ಷರ ರೂಪದಲ್ಲಿ ಬರೆಯುತ್ತೇವೆ. ಅದು ಆಂಗ್ಲ ಭಾಷೆಯಲ್ಲಿ ಸಾಧ್ಯವಿಲ್ಲ. ನೇರವಾಗಿ ಹೃದಯದ ಭಾಷೆ ನಮ್ಮ ಕನ್ನಡ. ಅಷ್ಟು ಅದ್ಭುತವಾದ ಭಾಷೆ.
ಪಂಪ ಹೇಳಿದ ಹಾಗೆ ಮನುಷ್ಯರಾಗಿ ಬದುಕೋಣ. ಬಸವಣ್ಣನವರ ಮಾತಿನಂತೆ ದಯೆಯೇ ಧರ್ಮದ ಮೂಲವಯ್ಯ ಎಂಬಂತೆ ಇನ್ನೊಬ್ಬರಿಗೆ ಸ್ಪಂದಿಸುತ್ತಾ ಪ್ರೀತಿಸುತ್ತಾ, ಶಾಂತಿಯುತ ಸಮಾಜ, ಸೌಹಾರ್ದಯುತ ಸಮಾಜ, ಅಹಿಂಸಾತ್ಮಕ ಸಮಾಜ, ಸಮುದಾಯಕ ಸಮಾಜದ ಕರ್ತವ್ಯ ನಮ್ಮದಾಗಬೇಕು. ನಾವೆಲ್ಲ ಸೌಹಾರ್ದಯುತೆಯಿಂದ ಬದುಕಬೇಕು.
ಕನ್ನಡ ಸಂಸ್ಕೃತಿ ನಮ್ಮನ್ನು ಬಹಳ ಎತ್ತರದ ಸ್ಥಿತಿಗೆ ತೆಗೆದುಕೊಂಡು ಹೋಗುತ್ತದೆ ಎಂಬ ಮಾತುಗಳೊಂದಿಗೆ ಕನ್ನಡದ ವಾತಾವರಣದ ಜೊತೆಗೆ ಕರ್ತವ್ಯ, ಸೌಹಾರ್ದತೆಗಳ ಸುಂದರ ಸಂದೇಶವನ್ನು ವೇದಿಕೆಗೆ ಕೊಟ್ಟು ಗಣ್ಯರು ಮಾತು ಮುಗಿಸಿದರು.
ಗಾನಸುಧೆ:
ನಮ್ಮ ವೇದಿಕೆಯ ಆಸ್ಥಾನ ಗಾಯಕಿ ಮಂಜುಳಾ ಭಾರ್ಗವಿ ಯವರ ಕಂಠದಲ್ಲಿ " ಕನ್ನಡವೆಂದರೆ ಬರಿ ನುಡಿಯಲ್ಲ" ನಿಸಾರ್ ಅಹಮದ್ ರವರ ಕವನ ಭಾವಮಾಧೂರ್ಯದಿಂದ ಸಭಿಕರ ತಣಿಸಿತು.
ಉಪನ್ಯಾಸಕರ ಪರಿಚಯ:
ಶ್ರೀಮತಿ ವನಮಾಲಾ ಸಂಪನ್ನಕುಮಾರ, ಅಧ್ಯಕ್ಷರು, ಕರ್ನಾಟಕ ಲೇಖಕಿಯರ ಸಂಘ, ಇವರು ವಾಸುಕಿ ಪಡುಕೋಣೆ ಜೀವನ ಚರಿತ್ರೆ ಹೊರತಂದಿದ್ದಾರೆ. "ಗ್ರಹಿಕೆ" ಅದ್ಭುತ ಕೃತಿ- ಉದಯೋನ್ಮುಖ ಬರಹಗಾರ್ತಿಯರ ಕವಿತೆಗಳ ಸಂಗ್ರಹ ತಂದಿದ್ದಾರೆ. "ನಮ್ಮ ಬದುಕಿನ ಪುಟಗಳು"- ಲೇಖಕಿಯರ ಆತ್ಮ ಕಥನ ಸಂಗ್ರಹ, "ನಮ್ಮ ಬದುಕು ಬರಹ" ಹಿರಿಯ ಲೇಖಕಿಯರ ಆತ್ಮಕಥನಗಳು ಸಂಪಾದನೆ. ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ ಸುಧೀರ್ಘ ಸೇವೆ ಮಾಡಿ ಈಗ ಅಧ್ಯಕ್ಷ ಸ್ಥಾನ ಅಲಂಕಾರ. ಇವರು ಸಾಮಾನ್ಯ ಕಿರಿಯ ಲೇಖಕಿಯ ಪ್ರೊತ್ಸಾಹಿಸುತ್ತಾ, ಅವರಲ್ಲಿ ಆತ್ಮವಿಶ್ವಾಸ, ಆತ್ಮಗೌರವ ಹೆಚ್ಚಿಸುವ ಕೆಲಸ ಮಾಡುತ್ತಿರುವುದು ಕನ್ನಡ ನುಡಿ ಸಂಪತ್ತಿಗೆ ನೀಡುತ್ತಿರುವ ಅಪಾರ ಕೊಡುಗೆಯಾಗಿದೆ.
ಉಪನ್ಯಾಸ:
ಶ್ರೀಮತಿ ವನಮಾಲಾ ಸಂಪನ್ನಕುಮಾರ, ಇವರು ಶಿವರಾಮ ಕಾರಂತರ ಅಪ್ಪಟ ಅಭಿಮಾನಿಯಾಗಿದ್ದು , ಕಾರಂತರ ಬಗ್ಗೆ ಸುಧೀರ್ಘ ವಾಗಿ ಉಪನ್ಯಾಸ ನೀಡಿದರು.
ಕಾರಂತರು ದೊಡ್ಡ ಕಡಲಿನಂತೆ ವಿಶಿಷ್ಟ ವ್ಯಕ್ತಿತ್ವದವರು, ದೇಶವಿದೇಶಗಳಲ್ಲಿ ಪ್ರಸಿದ್ಧರು. ಬದುಕಿದಂತೆ ಬರೆದವರು ಬರೆದಂತೆ ಬದುಕಿದವರು. ಅವರ ವೈಜ್ಞಾನಿಕ ಮನೋಭಾವ, ಸಾಮಾಜಿಕ ಚಿಂತನೆ, ಸಾಂಸ್ಕೃತಿಕ ಪ್ರೀತಿ, ಯಕ್ಷಗಾನ ಇತ್ಯಾದಿ ಗಳ ಸಮಗ್ರ ವಿಷಯ ಮಾತನಾಡಿದರು. "ಚೋಮನ ದುಡಿ" ಕಾದಂಬರಿ, ಚೋಮನ ಭಾವನೆಗಳು, ಹೋರಾಟ, ಅಸ್ಪೃಶ್ಯತೆ ಅಸಮಾನತೆಗಳನ್ನು ಸಮಾಜದ ಮುಂದೆ ತೆರೆದಿಟ್ಟ ಬಗ್ಗೆ ವಿವರಿಸಿದರು. ಕಾರಂತರು ಪ್ರಾತಃ ಸ್ಮರಣೀಯರು ಎನ್ನುತ್ತ ಅವರ ಮರಳಿ ಮಣ್ಣಿಗೆ, ಬೆಟ್ಟದ ಜೀವ, ಮೂಕಜ್ಜಿಯ ಕನಸುಗಳು, ಮೈಮನಗಳ ಸುಳಿಯಲ್ಲಿ ಇತ್ಯಾದಿ ಪುಸ್ತಕಗಳ ಆಂತರ್ಯವನ್ನು ತೆರೆದಿಟ್ಟರು. ಅವರ ಪರಿಸರ ಚಿಂತನೆ ಉದಾಹರಣೆ ಕೈಗಾ ಅಣುಸ್ಥಾವರದ ವಿರುದ್ಧ ಹೋರಾಟ. ಮಕ್ಕಳ ಸಾಹಿತ್ಯ, ಯಕ್ಷಗಾನಕ್ಕೆ ನೀಡಿದ ಕೊಡುಗೆ. ದೂರದೃಷ್ಟಿಯ ಅವರ ಚಿಂತನೆಗಳು. ಅವರ ಅರಸಿ ಬಂದ ಪ್ರಶಸ್ತಿಗಳು. ಒಂದು ಜೀವನದಲ್ಲಿ ಬೆರಗುಗೊಳ್ಳುವಷ್ಟು ಮಾಡಿದ ಕೆಲಸ. ಯಾರೂ ತುಳಿಯದ ಹಾದಿಯಲ್ಲಿ ಕ್ರಮಿಸಿ 92 ವಸಂತಗಳ ಕಾರಂತರ ಶತಮಾನದ ಪಯಣವನ್ನು ತೆರಿದಿಟ್ಟು ವೇದಿಕೆಯ ಸಾರ್ಥಕ ಕನ್ನಡ ರಾಜ್ಯೋತ್ಸವ ಆಚರಣೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿ ಉಪನ್ಯಾಸ ಮುಗಿಸಿದರು.
ಗಾನಸುಧೆ:
ಮತ್ತೊಮ್ಮೆ ಮಂಜುಳಾ ಭಾರ್ಗವಿಯವರ ಕಂಠದಲ್ಲಿ
ಬಿ.ಎಸ್ ಕರ್ಕಿಯವರ "ಹಚ್ಚೇವು ಕನ್ನಡದ ದೀಪ" ಗಾಯನ ಸಭೆಗೆ ಗಾನ ಬೆಳಕು ನೀಡಿತು.
ಗಾನಸುಧೆ:
ಕಾರ್ತೀಕ ದೀಪೋತ್ಸವದಲ್ಲಿ ಪುಷ್ಯಮಾಸವೇ!
ಹೌದು ವೇದಿಕೆಯ ಉತ್ಸವದಲ್ಲಿ, ದೇಶದ ರಾಜಧಾನಿಯಲ್ಲಿ ಕನ್ನಡದ ಕಂಪು ಹರಡುತ್ತಾ, ಮಧುರ ಮನಸೊರೆಯುವ ಕಂಠದಲ್ಲಿ ಸಂಗೀತ ಹೃದಯಗಳ ರಂಜಿಸುತ್ತಿರುವ ಗಾಯಕ ಶ್ರೀ ಚಿದಂಬರ ಕೋಟೆಯವರ
ಕಂಠಮಾಧುರ್ಯದಲಿ ಹೊಮ್ಮಿದ "ಪುಷ್ಯಮಾಸದಲ್ಲಿ ಒಂದು ಪ್ರಥಮ ಪ್ರಾತಃಕಾಲ ಭಾವಗೀತೆ, ಶುಭ್ರನವಮಿಯ ಆಕಾಶದ ಶುಭ್ರನೀಲ, ಶೃಂಗಾರದ ಹೂವು......ಭಾವಸಿಂಚನದಲಿ ಮನಸೋತು ಮೈಮರೆತು ತಲೆತೂಗಿದ ಸಭೆ.
ಅಧ್ಯಕ್ಷೀಯ ಭಾಷಣ: ಡಾ.ನಿರ್ಮಲ ಪ್ರಭು, ವಿಶೇಷ ಕನ್ನಡ ಸಾಹಿತ್ಯ ಕೃಷಿ ಮಾಡಿರುವ ಇವರು
ಕನ್ನಡ ಮತ್ತು ಕರುನಾಡು ಉದಯಕ್ಕೆ ಕಾರಣೀಭೂತರಾದ
ಆಲೂರು ವೆಂಕಟರಾಯರ ಕೊಡುಗೆ, 1973 ರಲ್ಲಿ ಕರ್ನಾಟಕ ವಾಗಿ ನಾಮಕರಣದವರೆಗಿನ ಸಂಕ್ಷಿಪ್ತವಾಗಿ ತಿಳಿಸುತ್ತಾ ಅತಿಥಿಗಳ ಭಾಷಣದಲ್ಲಿನ ವಿಷಯಗಳ ಬಗ್ಗೆ ಮೆಚ್ಚುಗೆ ನುಡಿಗಳೊಂದಿಗೆ ಉತ್ಕೃಷ್ಟ ನಮ್ಮ ಕನ್ನಡ ಭಾಷೆಯ ಬೆಳವಣಿಗೆಗೆ ನಮ್ಮ ಕರ್ತವ್ಯ ಗಳನ್ನು ಮುಂದಿಟ್ಟರು.
ವಂದನಾರ್ಪಣೆ:
ವೇದಿಕೆಯ ಉಪಾಧ್ಯಕ್ಷರಾದ ಶ್ರೀ ವೀರಶೇಖರ ಸ್ವಾಮಿಯವರು ಅರ್ಥ ಪೂರ್ಣವಾದ ವಂದನಾರ್ಪಣೆ ಮಾಡುವ ಮೂಲಕ ನಮ್ಮ ವೇದಿಕೆಯ ಕನ್ನಡ ರಾಜ್ಯೋತ್ಸವದ ವಿಶೇಷ ಕಾರ್ಯಕ್ರಮ ಮುಗಿಯಿತು.
ಕಾರ್ಯಕ್ರಮಗಳ ಆಯೋಜನೆ, ಕಷ್ಟದ ಲೆಕ್ಕ ಬರೆಯುವ,
ಕಾರ್ಯಕ್ರಮಗಳ ಯಶಸ್ಸಿಗೆ ತೊಡಗಿಸಿಕೊಳ್ಳುವ ಕೋಶಾಧಿಕಾರಿ ಶ್ರೀ ಜಯರಾಮ ಸೋಮಯಾಜಿಯವರು ಸದಾ ಅಭಿನಂದನಾರ್ಹರು.
~~~~~~~
ಎಂಟು ಜ್ಞಾನಪೀಠ ಪ್ರಶಸ್ತಿಗಳ ಮುಡಿಗೇರಿಸಿಕೊಂಡ ಕಸ್ತೂರಿ ಕನ್ನಡ ನಮ್ಮದು- ಸಿರಿಗನ್ನಡ ಗೆಲ್ಲಲಿ ಬಾಳಲಿ🙏
ಧನ್ಯವಾದಗಳು
ವೇದಿಕೆಯ ಪರವಾಗಿ
ಶಶಿಕಲಾ ಆರ್
ಸಹ ಕಾರ್ಯದರ್ಶಿ
No comments:
Post a Comment