ಬಿರ್ತಿಮನೆ, ಬೆಂಗಳೂರು.
ದೀಪಾವಳಿ ಸಂಬ್ರಮ.
ತೈಲಾಭ್ಯಂಜನ ಕಡ್ಡಾಯ – ನರಕ ಚತುರ್ದಶಿಯಂದು ಪ್ರತಿಯೊಬ್ಬ ಜೀವಿಯೂ ಅಭ್ಯಂಜನವನ್ನು ಮಾಡಲೇಬೇಕು. ಇಲ್ಲದಿದ್ದರೆ ದಾರಿದ್ರ್ಯಾದಿಗಳಿಂದ ಪೀಡಿತರಾಗುವರು.
ಈ ದಿನ ಗಂಗೆಯು ಜಲದಲ್ಲಿ ಮತ್ತು ತೈಲದಲ್ಲಿ ಲಕ್ಷ್ಮೀದೇವಿಯು ವಿಶೇಷವಾಗಿ ಸನ್ನಿಹಿತಳಾಗಿರುತ್ತಾರೆ.
ಸಾಮಾನ್ಯವಾಗಿ ತಂದೆ ತಾಯಿಗಳ ಶ್ರಾದ್ಧ ದಿನಗಳಲ್ಲಿ, ವ್ಯತೀಪಾತ, ವೈಧೃತಿ ಯೋಗಗಳಲ್ಲಿ ಅಭ್ಯಂಜನವನ್ನು ಮಾಡಿಕೊಳ್ಳುವ ಸಂಪ್ರದಾಯವಿಲ್ಲ. ವಿಧವೆಯರೂ, ಸನ್ಯಾಸಿಗಳೂ ಅಭ್ಯಂಜನವನ್ನು ಮಾಡಿಕೊಳ್ಳಬಾರದು ಸಾಮಾನ್ಯವಾಗಿ. ಆದರೆ ನರಕ ಚತುರ್ದಶಿಯಂದು ಇದೆಲ್ಲ ಇದ್ದರೂ ಕೂಡ ಅಭ್ಯಂಜನವನ್ನು ಮಾಡಲೇಬೇಕು. ಸನ್ಯಾಸಿಗಳೂ, ವಿಧವೆಯರೂ ಕೂಡ ಅಭ್ಯಂಜನವನ್ನು ಮಾಡಿಕೊಳ್ಳಲೇಬೇಕು.
ಏಕೆ ಅಭ್ಯಂಜನವನ್ನು ಮಾಡಿಕೊಳ್ಳಬೇಕು ? –
ಈ ದಿನ ಶ್ರೀ ಕೃಷ್ಣನು ನರಕಾಸುರನನ್ನು ಸಂಹರಿಸಿದಾಗ ನರಕಾಸುರನು ಒಂದು ವರವನ್ನು ಕೇಳುತ್ತಾನೆ. “ನನ್ನ ಸಂಹಾರದ ನೆನಪಿಗಾಗಿ ಎಲ್ಲರೂ ಅಭ್ಯಂಜನವನ್ನು ಮಾಡಬೇಕು ಮತ್ತು ದೀಪಪ್ರಜ್ವಲನವನ್ನು ಮಾಡಬೇಕು” ಎಂದು ಕೇಳಿದುದರಿಂದ ಕೃಷ್ಣನು ಹಾಗೆಯೇ ಆಗಲಿ ಎಂದು ಅನುಗ್ರಹಿಸಿದ್ದನು. ಅದರ ನಿಮಿತ್ತ ಎಲ್ಲರೂ ಅಭ್ಯಂಜನವನ್ನು ಮಾಡಿಕೊಳ್ಳಬೇಕು. ಶ್ರೀಕೃಷ್ಣನು ನರಕಾಸುರನನ್ನು ಸಂಹರಿಸಿದಾಗ ಅವನ ಮೇಲೆ ರಕ್ತದ ಕಲೆಗಳು ಸಿಡಿದಿದ್ದವು. ಅದನ್ನು ತೊಳೆದು ಕೊಳ್ಳಲೆಂಬಂತೆ ಶ್ರೀಕೃಷ್ಣನೂ ಸಹ ಎಣ್ಣೆ-ನೀರನ್ನು ಹಾಕಿಕೊಂಡಿದ್ದನು.
ಎಣ್ಣೆಶಾಸ್ತ್ರ (ನರಕ ಚತುರ್ದಶಿಯಂದು) –
ಮೊದಲು ಮನೆಯ ಹಿರಿಯರೊಬ್ಬರು ಎಣ್ಣೆಯನ್ನು ಪರಮಾತ್ಮನಿಗೆ ಸಮರ್ಪಿಸಬೇಕು. ಈದಿನ ಪ್ರಾತ: ಕಾಲ ಶುಚಿರ್ಭೂತನಾಗಿ ಬಿಸಿನೀರು, ಎಳ್ಳೆಣ್ಣೆ, ಸೀಗೆಪುಡಿ, ಅರಿಶಿನ, ಮುಂತಾದುವನ್ನು ದೇವರ ಮುಂದಿಟ್ಟು
“ತೈಲೇ ಲಕ್ಷ್ಮೀ: ಜಲೇ ಗಂಗಾ ದೀಪಾವಲ್ಯಾಂ ಚತುರ್ದಶೀ |
ಪ್ರಾತ: ಸ್ನಾನಂ ತು ಯ: ಕುರ್ಯಾತ್ ಯಮಲೋಕಂ ನ ಪಶ್ಯತಿ|
ಎಂಬಂತೆ ಲಕ್ಷ್ಮಿಯು ಶ್ರೀಮನ್ನಾರಾಯಣನಿಗೆ ಅಭ್ಯಂಜನ ಸ್ನಾನ ಮಾಡಿಸುವಳೆಂದು ಭಾವಿಸಿ, ನಾರಾಯಣನಿಗೆ ಸಮರ್ಪಿಸಿ, ನಂತರ ಆ ಎಣ್ಣೆಯಿಂದಲೇ ಎಲ್ಲರಿಗೂ ಎಣ್ಣೆ ಶಾಸ್ತ್ರ ಮಾಡತಕ್ಕದ್ದು.
ಎಣ್ಣೆ ಶಾಸ್ತ್ರ ಎಲ್ಲರೂ ಮಾಡಿಸಿಕೊಳ್ಳತಕ್ಕದ್ದು. ಮೊದಲು ಮನೆಯ ಹೆಂಗಸರು ಗಂಡಸರನ್ನೆಲ್ಲ ಕೂಡಿಸಿ, ದೇವರಿಗೆ ಸಮರ್ಪಿಸಿದ ಎಣ್ಣೆಯನ್ನು ಹಚ್ಚುವ ಶಾಸ್ತ್ರ ಮಾಡುತ್ತಾರೆ. ಇಲ್ಲಿ ಎಣ್ಣೆ ಶಾಸ್ತ್ರಕ್ಕೆ ಕೂಡುವಾಗ ಉತ್ತರೀಯವಿರಲೇ ಬೇಕು. ಮೊದಲು ದೇವರಬಳಿ, ತುಳಸಿಯ ಗಿಡದ ಬಳಿ ದೀಪವನ್ನು ಹಚ್ಚಬೇಕು. ನಂತರ ಒಂದು ಮಣೆಯ ಮೇಲೋ ಅಥವಾ ಚಾಪೆಯ ಮೇಲೋ ಕುಳಿತುಕೊಳ್ಳಬೇಕು. ಮನೆಯ ಹಿರಿಯ ಹೆಣ್ಣುಮಕ್ಕಳು ಎಲ್ಲರಿಗೂ ಮೊದಲು ಹಣೆಯಲ್ಲಿ ಕುಂಕುಮ ತಿಲಕವಿಡುತ್ತಾರೆ. ಚಿನ್ನದ ಉಂಗುರವನ್ನು ಬಳಸಿ ಎಣ್ಣೆ ಶಾಸ್ತ್ರ ಮಾಡಬೇಕು . ಚಿನ್ನದ ಉಂಗುರ ಇಲ್ಲದ ಪಕ್ಷದಲ್ಲಿ ಪಾರಿಜಾತ ಹೂ ಆಗಲಿ ಅಥವಾ ಮಲ್ಲಿಗೆ ಹೂ ಆಗಲಿ ಬಳಸಬಹುದು . ಪ್ರತಿಯೊಬ್ಬರಿಗೂ ವಿಳ್ಳೆದೆಲೆಯ ಪಟ್ಟಿಯನ್ನು ಕೊಡುತ್ತಾರೆ ಅಥವಾ ಎಲ್ಲರಿಗೂ ಮುಟ್ಟಿಸಿ ಯಾರಾದರೂ ಒಬ್ಬರಿಗೆ ವಿಳ್ಳೆದೆಲೆ ಪಟ್ಟಿಯನ್ನು ನೀಡುತ್ತಾರೆ. ಒಂದು ಬೆಳ್ಳಿಯ ಬಟ್ಟಲಿನಲ್ಲಿ ದೇವರಿಗೆ ಸಮರ್ಪಿಸಿದ ಎಣ್ಣೆಯನ್ನು ಅರಿಶಿನ ಸೇರಿಸಿ ಎಲ್ಲರಿಗೂ ಹಣೆಯಿಂದ ಪಾದದವರೆಗೂ ಸ್ವಲ್ಪ ಸ್ವಲ್ಪ ಹಚ್ಚುತ್ತಾರೆ.
ನಮಸ್ಕಾರ..
ದೀಪಾವಳಿ ಹಬ್ಬದ ಶುಭಾಶಯಗಳು.
ದೀಪಾವಳಿ ದೀಪಗಳ ಹಬ್ಬ ಬೆಳಕಿನ ಹಬ್ಬ ಎಂದೇ ಪ್ರಸಿದ್ಧವಾಗಿದೆ. ಇದು ಹಿಂದುಗಳಿಗೆ ಮಾತ್ರವಲ್ಲದೇ ಜೈನ್ಯರಿಗೆ, ಸಿಕ್ ಪಂಥದವರಿಗೆ ಹಾಗೂ ಕೆಲ ಪಂಥದವರೂ ಆಚರಿಸುವ ಹಬ್ಬ.
ಆಶ್ವಯುಜಮಾಸದ ಕೃಷ್ಣ ಪಕ್ಷದ ಚತುರ್ದಶಿ, ಅಮವಾಸ್ಯೆ ಹಾಗೂ ಕಾರ್ತಿಕ ಮಾಸ ಶುಕ್ಲ ಪಕ್ಷ ಪಾಡ್ಯ ಈ ದಿನಗಳಲ್ಲಿ ದೀಪಾವಳಿ ಹಬ್ಬ ಆಚರಿಸಲಾಗುವುದು.
ನಾನಿಲ್ಲಿ ನಾ ಅನುಭವಿಸಿದ ಸಂಪ್ರದಾಯ ಪದ್ದತಿಯನ್ನು ಹಂಚಿಕೊಳ್ಳಲಿದ್ದೇನೆ.
ಉತ್ತರ ಭಾರತದ ಕಡೆ ದಾಂತೆರಸ್ ಎಂಬುದಾಗಿ ಹಬ್ಬದ ಮುಂಚಿನ ದಿನದ ಆಚರಣೆಯಿದೆ.ಅಂದು ಚಿನ್ನಾಭರಣ ಕೊಳ್ಳುವ ಪದ್ಧತಿ ಯಿದೆ. ಆದಿನ ಚಿನ್ನ ಕೊಂಡಲ್ಲಿ ಅದು ಅಕ್ಷಯವಾಗುವುದೆನ್ನುವ ನಂಬಿಕೆ.
ಮೊದಲನೆ ದಿನ ನೀರು ತುಂಬುವುದು. ಅಂದರೆ ಗಂಗೆಯನ್ನು ಪೂಜಿಸಿ ಹಂಡೆಗೆ ತುಂಬುವರು. (ಸ್ನಾನ ಮಾಡಲು ಸ್ನಾನದ ಮನೆಯಲ್ಲಿ, ನೀರು ಕಾಯಿಸಲು ಉಪಯೋಗಿಸುವ ದೊಡ್ಡ ಪಾತ್ರೆ).
ನೀರು ತುಂಬುವ ಮೊದಲು, ಹಂಡೆ ಶುಚಿಗೊಳಿಸಿ, ಅದರ ಸುತ್ತ ರಂಗೋಲಿ ಹಾಕಿ, ಹೂವಿನಿಂದ ಹಂಡೆಯನ್ನು ಅಲಂಕರಿಸುವರು. ಗಂಗೆ ಪೂಜೆ ಮಾಡಿ, ಎರೆಯಪ್ಪ ಮಾಡಿ ನೈವೇದ್ಯ ಮಾಡುವರು. (ಅಕ್ಕಿ, ಕಾಯಿ ಬೆಲ್ಲ ಸೇರಿಸಿ ಕರಿದು ಮಾಡುವ ಖಾದ್ಯ).
ಗೂಡು ದೀಪದಲ್ಲಿ ಹಣತೆಯಿಟ್ಟು ತೂಗು ಹಾಕುವರು. ಇದಿಷ್ಟು ಸಂಭ್ರಮ ಮೊದಲ ದಿನ.
ಎರಡನೆ ದಿನ
ನರಕ ಚತುರ್ದಶಿ. ಬೆಳಿಗ್ಗೆ ಎಣ್ಣೆ ನೀರಿನ ಸಂಭ್ರಮ. ಬೆಳಿಗ್ಗೆ 4ರ ವೇಳೆಗೆ ಎದ್ದು ಹಂಡೆಯ ನೀರು ಬಿಸಿ ಮಾಡುವರು. ನಂತರ ಎಣ್ಣೆ ಶಾಸ್ತ್ರ. ಮನೆಯ ಹಿರಿಯ ವ್ಯಕ್ತಿ ದೇವರ ದೀಪ ಹಚ್ಚಿ ದೇವರಿಗೆ ಎಣ್ಣೆ ಮುಟ್ಟಿಸುವರು. ನಂತರ ಒಬ್ಬೊಬ್ಬರಾಗಿ ದೇವರ ಮುಂದೆ ಕುಳ್ಳಿರಿಸಿ ಕುಂಕುಮವಿಟ್ಟು,ಎಣ್ಣೆಯನ್ನು ಭೂಮಿಗೆ ಗರಿಕೆಯಿಂದ ತಾಗಿಸಿ
ತಲೆ, ಭುಜ, ಮಂಡಿ, ಕಾಲು ಹೀಗೆ ಮೂರು ಬಾರಿ ಮುಟ್ಟಿಸಿ ನಂತರದಲ್ಲಿ ಎಣ್ಣೆ ಇಡೀ ಮೈಗೆ ಹಚ್ಚುವರು. ಸ್ವಲ್ಪ ಹೊತ್ತು ಬಿಟ್ಟು ಸ್ನಾನ. ಹೊಸಬಟ್ಟೆ. ಎಲ್ಲರ ಸ್ನಾನದ ನಂತರ ಪೂಜೆ, ದೋಸೆ ಪಂಚಕಜ್ಜಾಯ ನೈವೇದ್ಯ ಹಾಗೂ ಬೆಳಗಿನ ಉಪಹಾರ.
ಹೀಗೆ ಹಬ್ಬದ ಸಂಭ್ರಮ ಪ್ರಾರಂಭ.
ಈ ನರಕ ಚತುರ್ದಶಿ ಬಗ್ಗೆ ಪುರಾಣ ಕತೆ ಹೀಗಿದೆ.
ನರಕಾಸುರನೆಂಬ ರಾಕ್ಷಸ, ರಾಜರನ್ನೆಲ್ಲಾ ಹಿಂಸಿಸಿ, ರಾಜಕುಮಾರಿಯರನ್ನು ಸೆರೆಯಲ್ಲಿಡುತ್ತಿದ್ದನಂತೆ. ದೇವಲೋಕದವರನ್ನೂ ಬಿಡಲಿಲ್ಲ ಎಂಬ ಮಾತಿದೆ. ಎಲ್ಲರೂ ಸೇರಿ ಶ್ರೀ ಕೃಷ್ಣನನ್ನು ಪ್ರಾರ್ಥನೆ ಮಾಡಿದಾಗ ಶ್ರೀ ಕೃಷ್ಣ ಆತನನ್ನು ಕೊಂದು ಜನರನ್ನು ರಕ್ಷಿಸಿದ. ಸೆರೆಯಲ್ಲಿದ್ದ ರಾಜಕುಮಾರಿಯರನ್ನು ಬಿಡಿಸಿದ. ಅವರನ್ನು ಜನರ ಕೆಟ್ಟ ಮಾತಿನಿಂದ ರಕ್ಷಿಸಲು ತನ್ನ ರಾಣಿಯರಂತೆ ಅವರನ್ನು ನೋಡಿಕೊಂಡನು.
ನರಕಾಸುರನು ತಾನು ಶ್ರೀ ಕೃಷ್ಣ ನಿಂದ ಸಾಯುತ್ತಿರುವುದನ್ನು ತಿಳಿದು, ಈ ದಿನ ಸಂಭ್ರಮ ದ ದಿನವಾಗಲಿ ಎಂದು ಬೇಡಿದನಂತೆ. ಹಾಗಾಗಿ ದುಷ್ಟನನ್ನು ಶಿಕ್ಷಿಸಿದ ದಿನ. ಜನರಿಗೆ ಒಳಿತಾದ ದಿನ. ಸಂಭ್ರಮದ ದಿನ.
ಇಡೀ ದಿನ ಹಬ್ಬದ ವಾತಾವರಣ. ದೇವಾಲಯಗಳಲ್ಲಿ ಪೂಜೆ. ಮನೆಗಳಲ್ಲಿ ಹಬ್ಬದ ಊಟ. ಕೊಟ್ಟೆಕಡುಬು, ಕಾಯಿ ಹಾಲು,ಚಟ್ನಿ, ಹುಳಿ, ಮಜ್ಜಿಗೆ ಮೆಣಸಿನ ಕಾದ ಎಣ್ಣೆ ಹೀಗೆ ಬಗೆಬಗೆ.
ಸಂಜೆ ದೀಪಗಳ ಸಂಭ್ರಮ.
ಪಟಾಕಿಗಳ ಸದ್ದು ಗದ್ದಲ ಪೇಟೆಗಳಲ್ಲಿ. ನಮ್ಮ ಊರಲ್ಲಿ ಪಟಾಕಿಗಳ ಸದ್ದಿಲ. ಏಕೆಂದರೆ ದನಗಳು ಪಟಾಕಿಯ ಸದ್ದಿಗೆ ಹೆದರುವುವು. ಹಾಗೆ ಸಂಗ್ರಹಿಸಿಟ್ಟ ಹುಲ್ಲು ಮೆದೆಗೆ ಬೆಂಕಿ ಬೀಳುವ ಸಂಭವ. ಅದನ್ನು ತಡೆಯಲು ಪಟಾಕಿ ಸುಡುವುದಿಲ್ಲ. ರಾತ್ರಿಯಲಿ ತುಳಸಿ ಪೂಜೆ, ಪಂಚಕಜ್ಜಾಯ ನೈವೇದ್ಯ.
ಮರುದಿನ ಅಮವಾಸ್ಯೆ. ಅದೇ ರಾತ್ರಿ ಬಲೀಂದ್ರನ ಸ್ವಾಗತ. ತುಳಸಿ ಕಟ್ಟೆಯ ಬದಿಯಲ್ಲಿ ಒಂದು ಮೊರ/ಗೆರಸಿಯಲ್ಲಿ ಅವಲಕ್ಕಿ, ವಿಳ್ಯದೆಲೆ ಅಡಿಕೆ ಇಟ್ಟು ಪೂಜಿಸಿ, ಅದನ್ನು ಹೊತ್ತು, ದೊಂದಿ ಹಚ್ಚಿ ( ಕೋಲಿಗೆ ಹತ್ತಿ ಬಟ್ಟೆಯನ್ನು ಸುತ್ತಿ ಎಳ್ಳೆಣ್ಣೆಯಲ್ಲಿ ಮುಳುಗಿಸಿ ಇಟ್ಟು ಕೊಳ್ಳುವುದು).
ಇವುಗಳನ್ನು ಒಂದೊಂದಾಗಿ ಹಚ್ಚಿ ಗದ್ದೆಗಳಲ್ಲಿ ಊರುವುದು.(ನೆಡುವುದು). ಗದ್ದೆಗೆ ಹೋಗುವಾಗ ಈರೀತಿ ಕೂಗುತ್ತಾ ಹೋಗುವರು.
ಹೊಲಿಯೇ ಕೊಟ್ರೋ, ಬಲಿಯೇ ಕೊಟ್ರೋ, ಬಲೀಂದ್ರ ದೇವರು ತಮ್ ರಾಜ್ಯಕ್ಕೆ ತಾವೇ ಬಂದ್ರೂ...ಕೂಊಊ.
ಬಲಿ ಚಕ್ರವರ್ತಿ ಕಾಲದಲ್ಲಿ ಇದ್ಧಂತ ಸಮೃದ್ಧಿ ಈಗಲೂ ಬರಲಿ,
ನಾವಿರುವ ಸ್ಥಳಗಳನ್ನು ಸಮೃದ್ಧಿ ಗೊಳಿಸಿ ಮಳೆ, ಬೆಳೆ ಸಮಯಕ್ಕೆ ಸರಿಯಾಗಿ ಬರುವಂತೆ ಮಾಡು, ನಮ್ಮನ್ನು ಸಲಹು ಎಂದು ಬೇಡಿಕೊಳ್ಳುವುದು. ಬಲಿ ಚಕ್ರವರ್ತಿಯು ತನ್ನ ಪ್ರಜೆಗಳನ್ನು ತುಂಬಾ ಪ್ರೀತಿಯಿಂದ ಚೆನ್ನಾಗಿ ನೋಡಿಕೊಳ್ಳುತ್ತಿದ್ದನಂತೆ. ಸತ್ಯವಂತನೂ ಆದ ಬಲಿ ಚಕ್ರವರ್ತಿ ಯ ಬಗ್ಗೆ ಹೀಗೊಂದು ಕತೆಯಿದೆ.
ಭಕ್ತ ಪ್ರಹ್ಲಾದನ ಮಗನಾದ ಬಲಿ ಸತ್ಯವಂತನೂ, ನಿಷ್ಠಾವಂತನೂ ಆಗಿದ್ದು, ಆತ ಸಹ ವಿಷ್ಣು ಭಕ್ತನಾಗಿದ್ಥ. ಈತ ಭೂಲೋಕವಲ್ಲದೇ ದೇವಲೋಕವನ್ನೂ ಆಳಲು ಪ್ರಾರಂಭಿಸಿದಾಗ, ದೇವತೆಗಳು ವಿಷ್ಣುವಿಗೆ ಮೊರೆ ಹೋದರಂತೆ.
ವಿಷ್ಣು ವಾಮನ ಅವತಾರ ತಳೆದು, ಯಜ್ಞದ ಸಮಯದಲ್ಲಿ ಬಂದು ಬಲಿ ಚಕ್ರವರ್ತಿಯಲ್ಲಿ ಮೂರು ಹೆಜ್ಜೆ ಬಿಕ್ಷೆ ಬೇಡಿದನಂತೆ. ಹಾಗೇ ಆಗಲಿ ಎಂದಾಗ, ಒಂದು ಹೆಜ್ಜೆ ಭೂಲೋಕದ ಪೂರ್ಣ, ಎರಡನೇ ಹೆಜ್ಜೆ ಆಕಾಶ ಆವರಿಸಿ ಮೂರನೆ ಹೆಜ್ಜೆ ಎಲ್ಲಿಡಲಿ ಎಂದು ಬಲಿಯನ್ನು ಕೇಳಿದಾಗ ಬಲಿ ತನ್ನ ಶಿರ /ತಲೆ ತೋರಿಸಿದನಂತೆ. ಬಲಿಯ ತಲೆಯ ಮೇಲೆ ಕಾಲಿಟ್ಟು ಆತನನ್ನು ಪಾತಾಳಕ್ಕೆ ದೂಡಿದ ಶ್ರೀ ಕೃಷ್ಣ ಆತನಿಗೊಂದು ವರ ನೀಡಿದ. ಅದೇ ಈ ದಿನ ಬಲಿ ಪಾಡ್ಯಮಿ ಎಂದೇ ಪ್ರಸಿದ್ಧ. ಬಲಿ ಚಕ್ರವರ್ತಿ ತನ್ನ ರಾಜ್ಯಕ್ಕೆ/ಭೂಲೋಕಕ್ಕೆ ಬಂದು ಹೋಗುವನು ಎಂಬ ಮಾತಿದೆ.
ಅದಕ್ಕಾಗಿ ಮುಂಚಿನ ದಿನವೇ ದಾರಿ ತೋರಲು ಈ ಕಂದಿಲುಗಳ ನೆಡುವ ಒಂದು ಸಂಪ್ರದಾಯ.
ಪೇಟೆಗಳಲ್ಲಿ ಇದೇ ಅಮವಾಸ್ಯೆ ಯ ಸಾಯಂಕಾಲ ಲಕ್ಷ್ಮೀ ಪೂಜೆ ಮಾಡುವರು. ಅಂಗಡಿ ಪೂಜೆ ಹಾಗೂ ಮನೆಮನೆಗಳಲ್ಲೂ ಲಕ್ಷ್ಮೀ ಪೂಜೆ ಮಾಡಿ ಸಂಭ್ರಮಿಸುವರು. ಕೆಲಸಗಾರರಿಗೆ ಭಕ್ಷೀಸು ನೀಡುವರು.
ಮೂರನೆ ದಿನ ಬಲಿ ಪಾಡ್ಯಮಿ. ಹಬ್ಬದ ಸಂಭ್ರಮ, ಪೂಜೆ, ಹೋಮಗಳು ದೇವಾಲಯಗಳಲ್ಲಿ.
ನಾಲ್ಕನೇ ದಿನ ಗೋ ಪೂಜೆ.
ಬೆಳಿಗ್ಗೆ ತುಳಸಿ ಪೂಜೆ ಮಾಡಿ, ದನ ಕರುಗಳನ್ನು ತೊಳೆದು ಅಲಂಕರಿಸಿ ಹೂ ಮುಡಿಸಿ ಪೂಜಿಸುವರು.ಕಾಯಿ ಬೆಲ್ಲ ಅವಲಕ್ಕಿ ತಿನ್ನಿಸುವರು.
ಸಂಜೆ ಮತ್ತೆ ತುಳಸಿ ಪೂಜೆ, ಅವಲಕ್ಕಿ ನೈವೇದ್ಯ. ತುಳಸಿ ಪೂಜೆ, ಮುಂದುವರಿದು ಉತ್ಥಾನ ದ್ವಾದಶಿಯವರೆಗೆ ನಡೆಯುವುದು. ಅಲ್ಲಿಯವರೆಗೆ ದೀಪಗಳ ಸಂಭ್ರಮ ಎಲ್ಲಾ ದೇವಾಲಯಗಳಲ್ಲೂ ಕಾಣಬಹುದು.ಲಕ್ಷ ದೀಪಗಳ ಉತ್ಸವಗಳು ಸಂಭ್ರಮವನ್ನು ಹೆಚ್ಚಿಸುವುವು.
ಕಾರ್ತಿಕ ಮಾಸವೇ ಹಾಗೆ ದೀಪಗಳ ಮಾಸವೆಂದೇ ಹೇಳಬಹುದು.
ದೀಪಾವಳಿ ಹಬ್ಬವನ್ನು ಖುಷಿಯಿಂದ ಸಂಭ್ರಮದಿಂದ ಆಚರಿಸೋಣ. ಪಟಾಕಿ ಹಚ್ಚುವಲ್ಲಿ ಜಾಗರೂಕರಾಗಿರಿ.
ದೀಪಾವಳಿ ಹಬ್ಬದ ಶುಭಾಶಯಗಳೊಂದಿಗೆ.
ನಳಿನಿ ಸೋಮಯಾಜಿ.
ಬೆಂಗಳೂರು.
|
ಆರತಿ ಹಾಡು
ಸರಸಿಜ ನಯನಗೆ ಸಾಗರಶಯನಗೆ
ನಿರುತ ಸುಖಾನಂದಭರಿತನಾದವಗೆ
ಬರೆಸಿ ಉತ್ತರವ ಕಳುಹಿ ಹರುಷದಿ ತಂದ ಸತಿಯ-
ರರಸಿ ರುಕ್ಮಿಣಿ ಸಹಿತ ಹರುಷದಿ ಕುಳಿತ ಹರಿಗೆ
ಸರಸದಾರತಿಯ ಬೆಳಗಿರೆ ||ಪ||
ನಿಂದ್ಯ ಪರಿಹರಿಸಲು ಬಂದು ಯುದ್ಧವ ಮಾಡಿ
ಸಿಂಧುಗಟ್ಟಿದ ರಾಮಚಂದ್ರಗೆವೊಂದಿಸುತ
ತಂದು ಮಗಳ ಧಾರೆ ಮಂದರೋದ್ಧ್ಧರಗೆರೆಯೆ
ಜಾಂಬುವಂತ್ಯೇರ ಸಹಿತಾನಂದದಿ ಕುಳಿತ ಹರಿಗೆ ||1||
ಮಿತ್ರೆ ಕಾಳಿಂದಿ ಭದ್ರಾ ಅಚ್ಚುತನೆಡಬಲ
ಲಕ್ಷಣ ನೀಲ ನಕ್ಷತ್ರದಂದಲಿ
ಒಪ್ಪುವಾ ಚಂದ್ರನಂಥ ವಾರಿಜಾಕ್ಷನು ಇರಲು
ಅಷ್ಟಭಾರ್ಯೆಯರ ಸಹಿತ ನಕ್ಕು ಕುಳಿತ ಹರಿಗೆ ||2||
ನಾಶವಾಗಲಿ ನರಕಾಸುರನ ಮಂದಿರ ಪೊಕ್ಕು
ಏಸುಜನ್ಮದ ಪುಣ್ಯ ಒದಗಿ ಶ್ರೀಹರಿಯು
ಶ್ರೀಶನೊಲಿದ ಭೀಮೇಶಕೃಷ್ಣನು ಸೋಳ-
ಸಾಸಿರ ಸತಿಯರಿಂದ್ವಿಲಾಸದಿ ಕುಳಿತ ಹರಿಗೆ ||3||
ಗುರುವಾರ, ನವಂಬರ 4, ಬೆಳಿಗ್ಗೆ 5 ಗಂಟೆಗೆ ರಿಶಿ, ಕವಿತಾ ಮತ್ತು ಅಥರ್ವ್ ಅವರ ಮನೆಯಿಂದ ಬಂದರು.
ನಂತರ ಅಮ್ಮನು ಎಲ್ಲರಿಗೆ ಎಣ್ಣೆ ಹಾಕಿ, ದೀಪಾವಳಿ ಸ್ನಾನವನ್ನು ಮಾಡಲಾಯಿತು.
ಹೊಸ ಬಟ್ಟೆಯನ್ನು ಧರಿಸಿ, ಬೆಳಗ್ಗಿನ ತಿಂಡಿ, ದೋಸೆ, ಅವಲಕ್ಕಿ ಯನ್ನು ತಿಂದದ್ದೂ ಆಯಿತು.
ಇದೇ ಸಮಯದಲ್ಲಿ ರವಿ, ವಿದ್ಯಾ ಮತ್ತು ಊರ್ವಿ ಮಗುವೂ ಬಂದರು.
ಅದೊಂದು ಹಬ್ಬದ, ಸಂಭ್ರಮದ ವಾತಾವರಣ.
ಎಲ್ಲರ ತಿಂಡಿ ಆದ ನಂತರ ಮನೆಯ ಟೆರೆಸ್ ಮೇಲೆ, ಪಟಾಕಿ ಬಿಡುವ ಸಂಭ್ರಮ.
ಮಧ್ಯಾಹ್ನ ಊಟಕ್ಕೆ ಕಡಬು, ಬಿಸಿಬೇಳೆ ಬಾತ್ ಅಮ್ಮನು ತಯಾರು ಮಾಡಿದರು.
ಸುಮಾರು 4 ಗಂಟೆಯ ಸಮಯಕ್ಕೆ ರವಿ, ವಿದ್ಯಾ ಊರ್ವಿ ಅವರ ಮನೆ ಕೆ.ಅರ್.ಪುರಂ ಗೆ ಹೊರಟರು.
ಸಂಜೆ ಲಕ್ಷ್ಮಿ ಪೂಜೆಗೆ ರಂಗೋಲಿ, ದೀಪಗಳ ಜೋಡಣೆಯನ್ನು ಕವಿತಾ ಮತ್ತು ಅಮ್ಮನು ಮಾಡಿದರು.
ಸಂಜೆ 7 ಗಂಟೆಯ ನಂತರ, ಪುನಃ ಪಟಾಕಿ ಹೊಡೆಯುವ ಭರಾಟೆ.
ನಕ್ಷತ್ರ ಕಡ್ಡಿ, ನೆಲಚಕ್ರ, ಹೂ ಕುಂಡ ಇತ್ಯಾದಿ ಇತ್ಯಾದಿ.
ಅದೊಂದು ಅವಿಸ್ಮರಣಿಯ ದೀಪಾವಳಿಯ ಸಂಭ್ರಮಾಚರಣೆ.
ಎಲ್ಲರಿಗೂ ದೀಪಾವಳಿಯ ಶುಭಾಶಯಗಳು.
ಬರೆದಿರುವುದು ಶನಿವಾರ ನವಂಬರ 6, 2021
No comments:
Post a Comment