Tuesday, August 30, 2022

ಸ್ವರ್ಣ ಗೌರಿ ಹಬ್ಬದ ಸಂಬ್ರಮ

ಸ್ವರ್ಣ ಗೌರಿ ಹಬ್ಬ  

ಮಂಗಳವಾರ, 30 ಆಗೋಸ್ಟ್, 2022 

ಪ್ರತೀ ವರ್ಷದಂತೆ ಶ್ರೀಮತಿ ಮತ್ತು ಚಿದಂಬರ ಭಟ್ಟರ (ಶುಭಾಳ ಅತ್ತೆ ಮಾವ ) ಮನೆಯಲ್ಲಿ ಸ್ವರ್ಣ ಗೌರಿ ಹಬ್ಬದ ಸಂಬ್ರಮ, ನಮಗೆ ಊಟ.

ಇಂದು ಸಹ, ನಾವು ಬಸವೇಶ್ವರನಗರದಲ್ಲಿ ಅವರ ಮನೆಗೆ ಮಧ್ಯಾಹ್ನ ಹೋಗಿದ್ದೆವು. ಬಾಗಿನ ಗಳನ್ನು ಕೊಟ್ಟು ಪಡೆಯುವ ಸಂಬ್ರಮ ಆದ ನಂತರ ಬಿಸಿಬೇಳೆ ಬಾತ್, ಕೋಸಂಬರಿ, ಪಾಯಸ, ಅನ್ನ ಸಾರು, ಮೊಸರಿನ ಊಟ.

ನಂತರ ಒಂದು ಸಣ್ಣ ನಿದ್ರೆ, ಮತ್ತೆ ಮನೆಗೆ ವಾಪಸ್ಸು.

“ಪ್ರತಿ ವರ್ಷವೂ ಈ ದಿನ (ಭಾದ್ರಪದ ತದಿಗೆ) ಮಣ್ಣಿನ ವಿಗ್ರಹದಲ್ಲಿ ಗೌರಿ ಬಂದು ನೆಲೆಸುತ್ತಾಳೆ” ಎಂದು ಶಿವ ಆಶ್ವಾಸನೆ ನೀಡುತ್ತಾನೆ. “ಆಹಾರ, ಸಂಪತ್ತು ಮತ್ತು ಅಧಿಕಾರವನ್ನು ಗೌರವಿಸುವ ಪಾಠ ಮಾಡಲು ಗೌರಿಗೆ ಅವಕಾಶ ಮಾಡಿಕೊಟ್ಟ; ಸಮಾನತೆಯ ಗೌರವವನ್ನು ಹಕ್ಕಿನಿಂದ ಪ್ರತಿಪಾದಿಸಿದ ಚಾಂಡಾಲಿಕೆಯರ ಮುಖ್ಯಸ್ಥೆ ಕೌರೀ ಬಾಯಿಗೂ ಈ ದಿನ ಪೂಜೆ ಸಲ್ಲುತ್ತದೆ” ಎಂದು ಘೋಷಿಸುತ್ತಾನೆ 


ಗೌರಿ ಭೂಮಿಗೆ ಬಂದ ದಿನವನ್ನು ನೆನೆದು ಸಂಭ್ರಮ ಪಡುವುದಕ್ಕಾಗಿ ಗೌರಿ ಹಬ್ಬ ಅನ್ನೋದು ನಮಗೆ ಗೊತ್ತಿರುವ ವಿಷಯವೇ. ಆದರೆ, ಗೌರಿ ಇಲ್ಲಿಗೆ ಬಂದಿದ್ಯಾಕೆ ಅನ್ನೋದಕ್ಕೆ ಹಲವು ಕಥೆಗಳಿವೆ. ಅವುಗಳಲ್ಲಿ ಬೋಧಪ್ರದವೂ, ಕೇಳಲು – ಅರಿಯಲು ಸುಂದರವೂ ಆಗಿರುವ ಕಥೆ ಇದು. ಈ ಕಥೆ ಉತ್ತರ ಭಾರತದಲ್ಲಿ ಹೆಚ್ಚು ಪ್ರಚಲಿತ.

ದೇವಾಸುರರು ಸಮುದ್ರ ಮಥನ ಮಾಡಿ ಅಮೃತ ಪಡೆಯುತ್ತಾರಲ್ಲ… ಅದಕ್ಕೆ ಮುಂಚೆ ಅಸುರರು ದೇವಲೋಕದ ಮೇಲೆ ಆಕ್ರಮಣ ಮಾಡಿ ಧ್ವಂಸ ಮಾಡಿರುತ್ತಾರೆ. ಇನ್ನೂ ಅದರ ದುರಸ್ಥಿ ನಡೆಯುತ್ತಿರುವಾಗಲೇ ಸಮುದ್ರ ಮಂಥನದ ಯಶಸ್ಸಿಗಾಗಿ ಔತಣ ಕೂಟ ಏರ್ಪಡಿಸ ಬೇಕೆಂಬ ಆಸೆ ದೇವತೆಗಳಿಗೆ. ದೇವಲೋಕ ದುರಸ್ಥಿಯಲ್ಲಿರುವುದರಿಂದ, ಕೈಲಾಸದಲ್ಲೇ ಔತಣ ಕೂಟ  ಯಾಗುತ್ತದೆ. ಪಾರ್ವತಿ ಸ್ವತಃ ಅನ್ನಪೂರ್ಣೆಯಾಗಿ ಎಲ್ಲರಿಗೂ ಉಣಬಡಿಸುತ್ತಾಳೆ. ಈ ಸಂದರ್ಭದಲ್ಲಿ ಗಣೇಶನೂ ಸೇರಿದಂತೆ ದೇವತೆಗಳೆಲ್ಲ ಎಲೆಯಲ್ಲಿ ಇನ್ನೂ ಊಟ ಇರುವಾಗಲೇ ಕೈತೊಳೆಯಲು ಹೋಗುತ್ತಾರೆ. ಪಾರ್ವತಿಗೆ ಇದನ್ನು ನೋಡಿ ಬೇಸರವಾಗುತ್ತದೆ. “ಯಾವುದೇ ಆದರೂ ಅಧಿಕ ಪ್ರಮಾಣದಲ್ಲಿದ್ದರೆ, ಅದರ ಬೆಲೆ ತಿಳಿಯುವುದಿಲ್ಲ… ವ್ಯರ್ಥ ಮಾಡುತ್ತಾರೆ” ಎಂದು ನೊಂದುಕೊಳ್ಳುತ್ತಾಳೆ.

ಅದೇ ಸಮಯಕ್ಕೆ ಭೂಲೋಕದಿಂದ ಕೆಲವು ಚಾಂಡಾಲಿಕೆಯರು ಪಾರ್ವತಿಯನ್ನು ನೋಡಲು ಕೈಲಾಸಕ್ಕೆ ಬರುತ್ತಾರೆ. ಅವಳಿಗೆ ಅರ್ಪಿಸಲು ತಮ್ಮ ಬಳಿ ಇರುವ ಚೂರುಪಾರು ಆಹಾರ, ಹಣ್ಣಿನ ತುಣುಕುಗಳನ್ನೇ ತೆಗೆದುಕೊಂಡು ಬರುತ್ತಾರೆ. ಅವರು ಇನ್ನೂ ಬಾಗಿಲ ಮುಂದೆ ಇರುವಾಗ, ಔತಣ ಮುಗಿಸಿಕೊಂಡು ಹೊರಟ ಲಕ್ಷ್ಮಿ, ಪಾರ್ವತಿಯರು ಎದುರಾಗುತ್ತಾರೆ. ಇಂದ್ರ, ನಂದಿ ಕೂಡಾ ಹೊರಗಿರುತ್ತಾರೆ.

ಅವರೆಲ್ಲರೂ ಚಾಂಡಾಲಿಕೆಯರು ಒಳಗೆ ಹೋಗದಂತೆ ತಡೆಯುತ್ತಾರೆ. ಹಣ್ಣಿನ ತುಣುಕುಗಳನ್ನು ನೋಡಿ “ದೇವಿಗೆ ಎಂಜಲು ಅರ್ಪಿಸಲು ಬಂದಿದ್ದೀರಲ್ಲ… ನಿಮ್ಮ ಕೀಳು ಜಾತಿಗೆ ಇನ್ನೇನು ತಾನೆ ಹೊಳೆಯುತ್ತದೆ” ಎಂದು ಮೂದಲಿಸುತ್ತಾರೆ. ಲಕ್ಷ್ಮಿ, “ದೇವಿಗೆ ಇದನ್ನು ನೀಡಲು ಬರುವ ಸಾಹಸ ಮಾಡಿದ್ದೀರಲ್ಲ… ಬೇಡಲು ಬಂದಿದ್ದರೆ ನಿಮಗೂ ಇಲ್ಲಿ ಭೋಜನ ಸಿಗುತ್ತಿತ್ತು. ನಿರ್ಗತಿಕರು ತಮ್ಮ ಮಿತಿಯಲ್ಲಿರಬೇಕು” ಅನ್ನುತ್ತಾಳೆ. “ಸರಸ್ವತಿ, “ನಿಮ್ಮಲ್ಲಿ ಜ್ಞಾನದ ಅಭಾವವಿದೆ. ಅದಕ್ಕೇ ಕೀಳು ಜಾತಿಯವರಾದ ನೀವು ಮರ್ಯಾದೆಯ ಸೀಮೆ ದಾಟಿ ಇಲ್ಲೀತನಕ ಬಂದಿದ್ದೀರಿ” ಅಂತ ಗದರುತ್ತಾಳೆ.

ಹೊರಗೆ ಈ ಗಲಾಟೆ ನಡೆಯುವಾಗ ಗೌರಿ ಹೊರಗೆ ಬರುತ್ತಾಳೆ. ದೇವತೆಗಳು ಚಾಂಡಾಲಿಕೆಯರನ್ನು ಅವಮಾನಿಸಿದ ವಿಷಯ ತಿಳಿದು ಕೋಪಗೊಳ್ಳುತ್ತಾಳೆ. “ಭಗವಂತನ ಶ್ರೇಷ್ಠತೆ ಇರೋದು ಭಕ್ತರ ನಂಬಿಕೆಯಲ್ಲಿ. ಭಕ್ತರೇ ಇಲ್ಲದ ಮೇಲೆ ಎಲ್ಲಿಯ ಭಗವಂತ?” ಎಂದು ಎಲ್ಲರನ್ನೂ ತರಾಟೆಗೆ ತೆಗೆದುಕೊಳ್ಳುತ್ತಾಳೆ. “ನಿಮ್ಮಲ್ಲಿ ಸಂಪತ್ತು , ವಿದ್ಯೆ, ಜ್ಞಾನ, ಶಕ್ತಿ ಎಲ್ಲವೂ ಅಧಿಕ ಪ್ರಮಾಣದಲ್ಲಿರುವುದರಿಂದ ನಿಮಗೆಲ್ಲ ಅಹಂಕಾರ ಬಂದಿದೆ. ಶ್ರೇಷ್ಠತೆಯ ವ್ಯಸನ ತಲೆಗೇರಿದೆ. ನೀವು ಆಹಾರವನ್ನೂ ಗೌರವಿಸುವುದಿಲ್ಲ, ಹಣವಿಲ್ಲದ ಮನುಷ್ಯರನ್ನೂ ಗೌರವಿಸುವುದಿಲ್ಲ…. ನೀವೆಲ್ಲರೂ ನಿಮ್ಮ ತಪ್ಪು ತಿದ್ದಿಕೊಳ್ಳುವವರೆಗೆ ನಾನು ಕೈಲಾಸಕ್ಕೆ ಮರಳೋದಿಲ್ಲ” ಎಂದು ಶಪಥ ಮಾಡಿ ಭೂಮಿಗೆ ಬಂದು ಬಿಡುತ್ತಾಳೆ.



ಗೌರಿ ಭೂಮಿಗೆ ಬಂದಿದ್ದು ಹೀಗೆ. ಆಮೇಲೆ ಗೌರಿ, ಚಾಂಡಾಲಿಕೆಯರ ಕೇರಿಗೆ ಹೋಗುತ್ತಾಳೆ. ಆದರೆ ಚಾಂಡಾಲಿಕೆಯರ ಮುಖ್ಯಸ್ಥೆ ಕೌರಿ ಬಾಯಿ, ನಮಗಾದ ಅವಮಾನವೇ ಸಾಕು, ನಿಮ್ಮ ದಯೆ ಬೇಡ ಅನ್ನುತ್ತಾರೆ. ನಮಗೆ ಬೇಕಿರೋದು ಆತ್ಮಸಮ್ಮಾನ, ಅದೇ ಇಲ್ಲದ ಮೇಲೆ ನೀವು ಏನು ನೀಡಿದರೂ ಪ್ರಯೋಜನವಿಲ್ಲ” ಅನ್ನುತ್ತಾಳೆ.


ಗೌರಿ ಅದನ್ನು ಒಪ್ಪುತ್ತಾ, “ನಾನು ದಯೆ ತೋರಲು ಬಂದಿಲ್ಲ. ಆದರೆ ನಿಮ್ಮ ಗೌರವವನ್ನು ನೀವೇ ಗಳಿಸಬೇಕು. ಅದಕ್ಕೆ ಬೇಕಾದ ವ್ಯವಸ್ಥೆ ನಾನು ಮಾಡುತ್ತೇನಷ್ಟೆ” ಅನ್ನುತ್ತಾಳೆ. ಅಗ್ನಿ, ವರುಣ, ವಾಯು, ಇಂದ್ರ, ಭೂಮಿಗಳಿಂದ ಪಂಚತತ್ತ್ವಗಳನ್ನು ಸೆಳೆದುಕೊಂಡು, ಅಡುಗೆ ಮಾಡಲು ಅಗ್ಗಿಷ್ಟಿಕೆ, ಕುಡಿಯಲು ಶುದ್ಧ ನೀರು, ಉತ್ತಮ ಪರಿಸರ ಮತ್ತು ಉಳುಮೆ ಮಾಡಲು ಭೂಮಿ ನೀಡಿ, ಸಕಾಲದಲ್ಲಿ ಮಳೆಯಾಗುವಂತೆ.

“ಆಶೀರ್ವಾದ ರೂಪದಲ್ಲಿ ಬೀಜ ನೀಡಿರುವೆ. ಉತ್ತು, ಬಿತ್ತು, ಮರ ಬೆಳೆಸಿ, ಫಲ ಪಡೆಯುವುದು ನಿಮ್ಮ ಜವಾಬ್ದಾರಿ” ಅನ್ನುತ್ತಾಳೆ. ಆಮೇಲೆ ಗೌರಿ. ಅವರ ಆಗ್ರಹದಂತೆ ಅಲ್ಲೇ ‘ಮಾತಂಗಿ;ಯ ರೂಪದಲ್ಲಿ ನೆಲೆಸುತ್ತಾಳೆ.

ಇತ್ತ ದೇವತೆಗಳಿಗೆಲ್ಲ ಬುದ್ಧಿ ಬಂದು, ಗಣೇಶನ ನೇತೃತ್ವದಲ್ಲಿ ಗೌರಿಯನ್ನು ಕರೆದೊಯ್ಯಲು ಬರುತ್ತಾರೆ (ಗೌರಿ ಹಬ್ಬದ ಮರುದಿನ ಗಣೇಶನ ಹಬ್ಬಕ್ಕಿದು ಹಿನ್ನೆಲೆ). ಆಗ ಚಾಂಡಾಲಿಕೆಯರು ಬೇಸರ ಗೊಳ್ಳುತ್ತಾರೆ. ಗೌರಿಯೂ ನಿಮಗೆ ಬುದ್ಧಿಯಷ್ಟೆ ಬಂದಿದೆ, ಆದರೆ ಸಂಪೂರ್ಣ ಅರಿವಾಗಿಲ್ಲ ಅಂದು ದೇವತೆಗಳ ಜೊತೆ ಹೋಗಲು ನಿರಾಕರಿಸುತ್ತಾಳೆ.

ಆಗ ಗಣೇಶ, ತಾನು ತಿಂದು ಬಿಟ್ಟ ಮೋದಕವನ್ನು ನೈವೇದ್ಯ ಹರಿವಾಣದಲ್ಲಿಟ್ಟು ಮಾತೆಯನ್ನು ಪ್ರೀತಿಯಿಂದ ಕರೆಯುತ್ತಾನೆ. ಶಿವ ಮಾತಂಗನ ರೂಪದಲ್ಲಿ ಬಂದು ದೇವಿಯನ್ನೇ ಭಿಕ್ಷೆಯಾಗಿ ಬೇಡುತ್ತಾನೆ. ದೇವತೆಗಳೆಲ್ಲರೂ ಪಾರ್ವತಿ ಎಂಜಲು ಮೋದಕವಿಟ್ಟ ಹರಿವಾಣದಿಂದ ಭಿಕ್ಷೆ ಸ್ವೀಕರಿಸುವ ಮೂಲಕ ಅವಳ ಮನಸ್ಸನ್ನು ಗೆಲ್ಲುತ್ತಾರೆ. ಚಾಂಡಾಲಿಕೆಯರ ಬಳಿ ಕ್ಷಮೆ ಕೇಳುತ್ತಾರೆ. ಕೊನೆಗೂ ಗೌರಿ ಕೈಲಾಸಕ್ಕೆ ಮರಳಲು ಒಪ್ಪುತ್ತಾಳೆ.

ಚಾಂಡಾಲಿಕೆಯರ ಮನಸ್ಸು ಸಂತೈಸಲು ಶಿವ ಒಂದು ಯೋಚನೆ ಮಾಡುತ್ತಾನೆ. ಚಾಂಡಾಲಿಕೆಯರಿಗೆ “ನಿಮ್ಮ ಮೈ ಉಜ್ಜಿ ಎಷ್ಟು ಸಿಗುತ್ತದೋ ಅಷ್ಟು ಮಣ್ಣು ತೆಗೆದು ಕೊಡಿ” ಅನ್ನುತ್ತಾನೆ. ಹೊಲದಲ್ಲಿ ದುಡಿದು ಬಂದ ಆ ಹೆಣ್ಣುಮಕ್ಕಳು ಸಾಕಷ್ಟು ಮಣ್ಣು ಒಟ್ಟು ಮಾಡಿ ಕೊಡುತ್ತಾರೆ. ಶಿವ ಅದನ್ನು ಕಲಿಸಿ ಗೌರಿಯ ಮೂರ್ತಿ ಮಾಡಿ, ಅದರಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಾನೆ. ಚಾಂಡಾಲಿಕೆಯರು ಆ ಮಣ್ಣಿನ ಗೌರಿಗೆ ತಾವು ಬೆಳೆದ ದವಸ ಧಾನ್ಯಗಳನ್ನು ಅರ್ಪಿಸುತ್ತಾರೆ. ಇದೇ ಬಾಗಿನ.

“ಪ್ರತಿ ವರ್ಷವೂ ಈ ದಿನ (ಭಾದ್ರಪದ ತದಿಗೆ) ಮಣ್ಣಿನ ವಿಗ್ರಹದಲ್ಲಿ ಗೌರಿ ಬಂದು ನೆಲೆಸುತ್ತಾಳೆ” ಎಂದು ಶಿವ ಆಶ್ವಾಸನೆ ನೀಡುತ್ತಾನೆ. “ಆಹಾರ, ಸಂಪತ್ತು ಮತ್ತು ಅಧಿಕಾರವನ್ನು ಗೌರವಿಸುವ ಪಾಠ ಮಾಡಲು ಗೌರಿಗೆ ಅವಕಾಶ ಮಾಡಿಕೊಟ್ಟ; ಸಮಾನತೆಯ ಗೌರವವನ್ನು ಹಕ್ಕಿನಿಂದ ಪ್ರತಿಪಾದಿಸಿದ ಚಾಂಡಾಲಿಕೆಯರ ಮುಖ್ಯಸ್ಥೆ ಕೌರೀ ಬಾಯಿಗೂ ಈ ದಿನ ಪೂಜೆ ಸಲ್ಲುತ್ತದೆ” ಎಂದು ಘೋಷಿಸುತ್ತಾನೆ. (ಉತ್ತರ ಭಾರತದಲ್ಲಿ ಈ ದಿನ ಕೌರೀ ಮಾತೆ ಎಂದು ಮತ್ತೊಂದು ಮೂರ್ತಿಯನ್ನು ಗೌರಿಯ ಬಳಿ ಇರಿಸಿ ಪೂಜಿಸುವ ರೂಢಿ ಇದೆ).

ಹೀಗೆ ಶುರುವಾಗುತ್ತದೆ ಗೌರಿ ಹಬ್ಬ.


ಪಾಠಾಂತರಗಳಿರಬಹುದು…. ಅವುಗಳಲ್ಲಿ ಈ ಕಥೆ ಅತ್ಯಂತ ಸುಂದರವಾಗಿದೆ ಅಲ್ಲವೆ? ಇದರಲ್ಲೊಂದು ಅದ್ಭುತ ಪಾಠವಿದೆ. ಇದನ್ನು ಅರಿತು, ಗೌರಿಯ ಮನಸಿನಂತೆ ನಡೆದರೆ… ಹಬ್ಬವೂ ಸಾರ್ಥಕ, ಗೌರಿಗೂ ಸಂ
ಭ್ರಮ.

ಪೋಸ್ಟ್ ಮಾಡಿರುವುದು 31/8/ 2022 

No comments:

Post a Comment