Sunday, August 7, 2022

ತಿರು ಶ್ರೀಧರ ಅವರಿಗೆ ‘ಪರಿಮಳ ಪ್ರಶಸ್ತಿ’

 ತಿರು ಶ್ರೀಧರ ಅವರಿಗೆ ‘ಪರಿಮಳ ಪ್ರಶಸ್ತಿ’


ಶ್ರೀಯುತ ತಿರು ಶ್ರೀಧರ್ ಅವರ ಪರಿಮಳ ಗೆಳೆಯರ ಬಳಗದಿದಂದ "ಪರಿಮಳ ಪ್ರಶಸ್ತಿ" ಪ್ರಧಾನ ಸಮಾರಂಭಕ್ಕೆ ಬೆಂಗಳೂರು ಗಾಯನ ಸಮಾಜದಲ್ಲಿ ನಾವು ಹಾಜರಿದ್ದೆವು 



ತಿರು ಶ್ರೀಧರ – ಮುಖಪುಟದ ಮಿತ್ರರಿಗೆಲ್ಲಾ ಈ ಹೆಸರು ಚಿರಪರಿಚಿತ. ಕನ್ನಡ ಸಂಪದದ ಮೂಲಕ ಸದ್ದು ಗದ್ದಲವಿಲ್ಲದೆ ಅವರು ಮಾಡುತ್ತಿರುವ ಕನ್ನಡ ಕೈಂಕರ್ಯವೂ ಸಹ. ಹಾಗೆಯೇ ಅವರ ಸಂಸ್ಕೃತಿ ಸಲ್ಲಾಪದ ತಾಣವೂ (www.sallapa.com) ಬಹುಜನಪ್ರಿಯವಾಗಿದೆ. ದಿನನಿತ್ಯವೂ ತಿರು ಶ್ರೀಧರ ತಮ್ಮ ಹೆಸರಿನ ಮುಖಪುಟದಲ್ಲಿ ನಾಡು ನುಡಿಗಾಗಿ ದುಡಿಯುತ್ತಿರುವ ಸಾಧಕರ ಸಾಧನೆಗಳನ್ನು ಕುರಿತು, ಅವರ ಜನ್ಮದಿನದ ನೆಪದಿಂದ ಪರಿಚಯಾತ್ಮಕ ಬರಹಗಳನ್ನು ಬರೆಯುತ್ತಿರುತ್ತಾರೆ. ಒಂದೇ ಸಮನೆ ಬಿಟ್ಟ ಬಾಣಗಳಂತೆ ಒಂದಾದ ಮೇಲೆ ಒಂದರಂತೆ, ವಿವಿಧ ಸಾಧಕರ ಗುಣವರ್ಣನೆಗಳ ಬರಹಗಳು ಬರುತ್ತಿರುತ್ತವೆ. 


ಇದು ಒಂದು ದಿನದ ಮಾತಲ್ಲ, ಅನೇಕ ದಶಕಗಳಿಂದ ತಿರು ಶ್ರೀಧರ ಅವರು ನಿಸ್ವಾರ್ಥ ಭಾವದಿಂದ ಯಾವುದೇ ಪ್ರಚಾರದ ಗೀಳಿಲ್ಲದೆ ಮಾಡುತ್ತಿರುವ ನುಡಿಕಾಯಕ. ಈ ಹೊತ್ತಿಗೂ ಸೇವೆ ಸಲ್ಲಿರಸುತ್ತಿರುವ ಸಾಧಕರನ್ನಷ್ಟೇ ಅಲ್ಲ, ನಾಡು ನುಡಿಗೆ ವಿಶಿಷ್ಟ ಕೊಡುಗೆ ಕೊಟ್ಟು ಕಣ್ಮರೆಯಾದ ಸಾಧಕರನ್ನು, ಅವರ ಸಂಬಂಧಿಕರು ಮರೆತರೂ ತಿರು ಶ್ರೀಧರ ಮರೆಯುವುದಿಲ್ಲ. ಸಾಧಕರ ಸಾಧನೆಗಳ ವೈಶಿಷ್ಟ್ಯತೆ ಹಾಗೂ ವೈವಿಧ್ಯಮಯ ವ್ಯಕ್ತಿತ್ವವನ್ನು, ಓದುಗರ ಕಣ್ಣಿಗೆ ಕಟ್ಟುವಂತೆ ಬರೆಯುವುದರಲ್ಲಿ ತಿರು ಸಿದ್ಧ ಹಸ್ತರು. ಕೇವಲ ಮುಖಪುಟದಲ್ಲಷ್ಟೇ ದಿನನಿತ್ಯ ನಿಯಮಿತವಾಗಿ ಬರುವ ಇವರ ಬರಹಗಳಲ್ಲದೇ, ಶ್ರೀಧರ ಅವರನ್ನು ಪ್ರತ್ಯಕ್ಷ ನೋಡಿದವರು ತುಂಬಾ ಕಡಿಮೆ. ಏಕೆಂದರೆ ಅವರಿರುವುದು ದೂರದ ದುಬಾಯಿಯಲ್ಲಿ. ವಿದೇಶದಲ್ಲಿದ್ದರೂ ‘ಕನ್ನಡ ಪ್ರಜ್ಞೆ’ಯನ್ನು ಜಾಗೃತವಾಗಿಟ್ಟುಕೊಂಡಿರುವ ತಿರು ಶ್ರೀಧರರನ್ನು ಪ್ರತ್ಯಕ್ಷ ನೋಡುವ ಮತ್ತು ಅವರು ಅನೇಕ ದಶಕಗಳಿಂದ ಸದ್ದಿಲ್ಲದೆ ಮಾಡುತ್ತಿರುವ ‘ನುಡಿ ಕಾಯಕ’ಕ್ಕೆ ಕೃತಜ್ಞತೆಯಿಂದ ಒಂದು ಸಲಾಂ ಹೇಳುವ ಅವಕಾಶವನ್ನು ಬೆಂಗಳೂರಿನ ‘ಪರಿಮಳ ಗೆಳೆಯರ ಬಳಗ’ ಕಲ್ಪಿಸಿಕೊಟ್ಟಿದೆ. ಇದೇ ಆಗಸ್ಟ್ 7ರ ಭಾನುವಾರ ಸಂಜೆ 5.45ಕ್ಕೆ ಬೆಂಗಳೂರಿನ ಹೃದಯಭಾಗದಲ್ಲಿರುವ ಕೆ. ಆರ್. ರಸ್ತೆಯ (ಕಿಮ್ಸ್ ಆಸ್ಪತ್ರೆ ಎದುರಿಗೆ) ಗಾಯನ ಸಮಾಜದ ಸಭಾಂಗಣದಲ್ಲಿ ಪರಿಮಳ ಬಳಗದ 47ನೇ ವಾರ್ಷಿಕೋತ್ಸವ ಸಮಾರಂಭ ನಡೆಯುತ್ತಿದೆ. 


ಅದರಲ್ಲಿ ತಿರು ಶ್ರೀಧರ ನಮ್ಮೊಂದಿಗಿರುತ್ತಾರೆ. ವಿವಿಧ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆಗೈದ ಹದಿನಾರು ಸಾಧಕರಲ್ಲಿ ಒಬ್ಬರಾಗಿ ಅವರು ‘ಪರಿಮಳ ಪ್ರಶಸ್ತಿ’ ಸ್ವೀಕರಿಸಲಿದ್ದಾರೆ. ಅಂದು ನ್ಯಾಯಾಂಗ ಕ್ಷೇತ್ರದ ದಿಗ್ಗಜರಾದ ಸರ್ವೋಚ್ಚ ನಿವೃತ್ತ ನ್ಯಾಯಮೂರ್ತಿ ಶ್ರೀ ಎಂ.ಎನ್. ವೆಂಕಟಾಚಲಯ್ಯ ಮತ್ತು ಕನ್ನಡ ನಾಡಿನ ಪ್ರಾಮಾಣಿಕತೆಯ ‘ಸಾಕ್ಷಿ ಪ್ರಜ್ಞೆ’ಯಂತೆ ನಮ್ಮೊಡನಿರುವ ನಿವೃತ್ತ ಲೋಕಾಯುಕ್ತ, ನ್ಯಾಯಮೂರ್ತಿ ಶ್ರೀ ಎನ್. ಸಂತೋಷ್ ಹೆಗ್ಡೆ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಉಡುಪಿ ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಧೀಶತೀರ್ಥರು ಮತ್ತು ಶ್ರೀಸುವಿದ್ಯೇಂದ್ರತೀರ್ಥರ ದಿವ್ಯ ಉಪಸ್ಥಿತಿಯೂ ಇರಲಿದೆ. 




ಸಮಾರಂಭದ ಆಹ್ವಾನ ಪತ್ರಿಕೆ ಇದರೊಂದಿಗಿದೆ.

- ಪರಿಮಳ ಗೆಳೆಯರ ಬಳಗ, ಬೆಂಗಳೂರು. 
ಬರೆದಿರುವುದು 8 ಆಗೋಸ್ಟ್ 2022 

No comments:

Post a Comment