Friday, 22nd September 2023
ಸೈಕಲ್ ಸಾಹಸ :
ನಾನು ಆರನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಕಲಿತದ್ದು ಕುಂದಾಪುರದಲ್ಲಿ. ನಮ್ಮ ಬಾಡಿಗೆ ಮನೆ ಬಹಳ ಹಳೆಯ ಕಾಲದ್ದಾಗಿದ್ದು ಒಂದು ತೆಂಗಿನ ತೋಟದ ಮಧ್ಯದಲ್ಲಿ ಇತ್ತು. ನನಗೆ ಅಲ್ಲಿ ನನ್ನ ವಾರಿಗೆಯ ಹಲವಾರು ಸ್ನೇಹಿತೆಯರು ಇದ್ದರು. ಆ ತೋಟದಲ್ಲಿ ಬರೀ ತೆಂಗಿನಮರಗಳಲ್ಲದೆ ಹಲವು ರೀತಿಯ ಹಣ್ಣಿನ ಮರಗಳೂ ಇದ್ದು ಮಂಗನಂತಹ ನಮಗೆ ಮರಕೋತಿ ಆಡಲು ಅನುಕೂಲವೂ ಆಗಿತ್ತು. ಮರ್ಕಟಗಳಾಗಿದ್ದ ನನಗೂ ನನ್ನ ಸ್ನೇಹಿತೆಯರಿಗೂ ಬರೀ ಮರಕೋತಿ, ಮನೆಯಾಟ ಆಡಿ ಬೋರ್ ಬರುವುದು ಸಹಜ ತಾನೆ? ಆಗ ನಮಗೆ ಹೊಳೆದ ಐಡಿಯಾ ಏನೆಂದರೆ ಬಾಡಿಗೆ ಸೈಕಲ್ ಪಡೆದು ಸೈಕಲ್ ಹೊಡೆಯುವುದನ್ನು ಕಲಿಯುವುದು. ನಮ್ಮೆಲ್ಲರ ಮನೆ ಪೇಟೆಯ ಗಡಿಬಿಡಿಯ ಆವರಣದಿಂದ ಹೊರಗಿದ್ದ ಕಾರಣ ನಮ್ಮ ಬೀದಿಯಲ್ಲಿ ಗಾಡಿಗಳ ಓಡಾಟ ಕಡಿಮೆ ಇತ್ತು. ಹೀಗಾಗಿ ನಮ್ಮ ತೋಟದ ಖಾಲಿ ಜಾಗದಲ್ಲಿ ಸೈಕಲ್ ಕಲಿತ ಮೇಲೆ ರಸ್ತೆಯ ಮೇಲೆ ಸೈಕಲ್ ಬಿಡುವುದು ಎಂಬ ನಿರ್ಧಾರದೊಂದಿಗೆ ನಮ್ಮ ಸೈಕಲ್ ಕಲಿಕೆಯ ಸಾಹಸ ಶುರುವಾಯಿತು. ಮನೆಯವರು ಏನೂ ಕಿರಿಕಿರಿ ಮಾಡದೆ ಬಾಡಿಗೆ ಕೊಡಲು ಹಣವನ್ನೂ ಕೊಟ್ಟರು.
ನಾನಾಗ ಹೈಸ್ಕೂಲಿನಲ್ಲಿ ಓದುತ್ತಿದ್ದ ನೆನಪು. ನನ್ನ ಜೊತೆಗಿದ್ದವರೂ ಅದೇ ವಾರಿಗೆಯವರು. ನಾವು ನಾಲ್ಕೈದು ಜನ ಇದ್ದ ಕಾರಣ ಎರಡು ಸೈಕಲ್ ಬಾಡಿಗೆಗೆ ತಂದುಕೊಂಡು ಪರಸ್ಪರ ಒಬ್ಬರಿಗೊಬ್ಬರು ಸಹಾಯ ನೀಡುತ್ತಾ ಸೈಕಲ್ ಹೊಡೆಯುವುದನ್ನು ಕಲಿಯತೊಡಗಿದೆವು. ನಾಲ್ಕೈದು ದಿವಸಗಳೊಳಗೆ ನಾವೆಲ್ಲಾ ಯಾರ ಸಹಾಯವಿಲ್ಲದೆ ರಸ್ತೆಯ ಮೇಲೂ ಸೈಕಲ್ ಹೊಡೆಯತೊಡಗಿದೆವು. ನಮ್ಮ ಖುಷಿಗೆ ಪಾರವೇ ಇರಲಿಲ್ಲ. ಏನೋ ಮಹತ್ಸಾಧನೆ ಮಾಡಿದ ಮನಸ್ಥಿತಿ!
ನನಗಿಂತ ಆರೇಳು ವರ್ಷ ಚಿಕ್ಕವಳಾದ ನನ್ನ ತಂಗಿ ಶೈಲ ಯಾವಾಗಲೂ ನನ್ನ ಪ್ರಯೋಗಗಳಿಗೆ ಬಲಿಪಶು ಅಲ್ಪಸ್ವಲ್ಪ ಸೈಕಲ್ ಕಲಿತ ನನಗೆ ಏಕಾಂಗಿಯಾಗಿ ಸೈಕಲ್ ಹೊಡೆಯಲು ಬೋರ್ ಆಗಿ ನನ್ನ ತಂಗಿಯನ್ನು ಹಿಂದೆ ಕೂರಿಸಿಕೊಂಡು ನನ್ನ ಸೈಕಲ್ ಹೊಡೆಯುವ ಕೌಶಲ್ಯದ ಪರೀಕ್ಷೆಗೆ ಇಳಿದೆ. ಬಿಲ್ಲಿನಿಂದ ಬಿಟ್ಟ ಬಾಣದಂತೆ ಹೊಂಡಾಗುಂಡಿಯ ರಸ್ತೆಯಲ್ಲಿ ಸುಂಯ್ಯನೆ ಸೈಕಲ್ ಹೊಡೆಯುವಾಗ ಸಣ್ಣ ಬಾವಿಯಂತಿದ್ದ ರಸ್ತೆಯ ಹೊಂಡದೊಳಗೆ ನಮ್ಮಿಬ್ಬರನ್ನು ಹೊತ್ತ ಸೈಕಲ್ ಇಳಿದಾಗ ಬ್ಯಾಲೆನ್ಸ್ ತಪ್ಪಿ ನಾವಿಬ್ಬರೂ ಬಡಕ್ಕನೆ ಬಿದ್ದು ಕೈಮೈ ಸ್ವಲ್ಪ ತರಿಚಿಕೊಂಡಿತು. ರಸ್ತೆ ಮೇಲೆ ಬಿದ್ದ ನಾವಿಬ್ಬರೂ ಅಲ್ಲಿಂದ ಎದ್ದದ್ದೂ ಆಯಿತು. ಅಷ್ಟರಲ್ಲಿ ಅಲ್ಲೇ ಹತ್ತಿರದಲ್ಲಿದ್ದ ಅಂಗಡಿ ಕಟ್ಟೆ ಮೇಲೆ ಕುಳಿತಿದ್ದ ಐದಾರು ಮಂದಿ ಬಂದು ನನಗೆ ಬೈದ ಬಿರುಸಿಗೆ ನಾನು ಈವರೆಗೆ ಯಾವುದೇ ವಾಹನವನ್ನು ರಸ್ತೆಗೆ ಕೊಂಡೊಯ್ಯುವ ಧೈರ್ಯವನ್ನೇ ಕಳೆದುಕೊಂಡು "ಹಲವು ವಿದ್ಯಾ ಪಾರಂಗತೆ ಡ್ರೈವಿಂಗ್ ವಿದ್ಯಾ ಹೀನೆ"ಯಾಗಿ ಉಳಿದು ಬಿಟ್ಟಿದ್ದೇನೆ.
ಪೆಪರೋಮಿಯಾ ಪೆಲ್ಲುಸಿಡಾ
ನೀರು ಗಂಟೆ ಗಿಡ |
ಪೆಪರೋಮಿಯಾ ಪೆಲ್ಲುಸಿಡಾ ಎಂಬ ವೈಜ್ಞಾನಿಕ ಹೆಸರಿನಿಂದ ಕರೆಯಲ್ಪಡುವ ನೀರು ಗಂಟಿ ಗಿಡ(ನಮ್ಮ ಬಾಲ ಭಾಷೆಯಲ್ಲಿ) ನಮ್ಮ ಬಾಲ್ಯದ ದಿನಗಳ ನೆನಪನ್ನು ಸದಾ ಹಸಿರಾಗಿಡುವ ಗಿಡ.
ನನ್ನ ಜಮಾನದವರು ಕಡ್ಡಿ/ಬಳಪ ಮತ್ತು ಸ್ಲೇಟನ್ನು ಬಳಸುತ್ತಿದ್ದವರು. ಮರದ ಚೌಕಟ್ಟಿನೊಳಗೆ ಇರುತ್ತಿದ್ದ ಕರಿ ಬಳಪಕಲ್ಲಿನ ಸ್ಲೇಟಿನ ಮೇಲೆ ಬಿಳಿ ಬಳಪ/ಕಡ್ಡಿಯಿಂದ ಬರೆಯುತ್ತಿದ್ದವರು ನಾವು. ಸ್ಲೇಟ್ ಒರೆಸಲು ಮನೆಯಿಂದ ಅಮ್ಮ ಕಳಿಸುತ್ತಿದ್ದ ಸಣ್ಣ ಬಟ್ಟೆಯ ತುಂಡು ಕಳೆದು ಹೋದಾಗ ನಾವು ಮೊರೆ ಹೋಗುತ್ತಿದ್ದದ್ದು ಈ ನೀರು ಗಂಟಿ ಗಿಡಕ್ಕೆ. ಕಲ್ಲಿನ ಸಂದಿಗೊಂದಿಯಲ್ಲಿ ಬೆಳೆಯುತ್ತಿದ್ದ ಈ ಗಿಡವನ್ನು ಹುಡುಕಿ ಸ್ಲೇಟನ್ನು ಒರೆಸುವುದು ಒಂದು ಖುಷಿಯ ವಿಷಯವಾಗಿತ್ತು. ಆ ಗಿಡದ ಎಲೆಗಳಿಗೆ ಒಂದು ವಿಶಿಷ್ಟ ಸುವಾಸನೆ ಇರುತ್ತಿತ್ತು. ಗಿಡ ಕಿತ್ತಾದ ಮೇಲೆ ಅದನ್ನೊಮ್ಮೆ ಆಘ್ರಾಣಿಸಿ ನಂತರದಲ್ಲಿ ಸ್ಲೇಟನ್ನು ಒರೆಸಲು ಪ್ರಾರಂಭಿಸುತ್ತಿದ್ದೆವು. ಈ ಗಿಡ ಕಂಡಾಗಲೆಲ್ಲ ಅದನ್ನು ಹಿಸುಕಿ ಅದರಿಂದ ಹೊರ ಬರುವ ನೀರನ್ನು ನೋಡುವುದು ಕೂಡಾ ಒಂದು ಆಟವಾಗಿತ್ತು ನಮಗೆ!
ಇದು ಹತ್ತು ಹದಿನೈದು ಸೆಂಟಿಮೀಟರ್ ನಷ್ಟು ಎತ್ತರ ಬೆಳೆಯುವ ಗಿಡ. ಹೃದಯದ ಆಕಾರದ ಎಲೆಗಳನ್ನು ಹೊಂದಿರುವ ಈ ಗಿಡದ ಕಾಂಡ ನೀರಿನಿಂದ ತುಂಬಿರುತ್ತದೆ. ಅದರ ಬೀಜಗಳು ಚುಕ್ಕೆಗಳಂತೆ ನೋಡಲು ಚೆಂದ. ಗಿಡದ ಎಲೆಗಳಿಗೆ ಒಂದು ರೀತಿಯ ಹೊಳಪು ಇರುತ್ತದೆ. ಕೀಳಲು ಹೋದರೆ ಪಟಕ್ಕನೆ ತುಂಡಾಗುವಷ್ಟು ಮೃದುವಾದ ಗಿಡವಿದು. ಕೆಲವು ಗಿಡದ ಕಾಂಡ ಬಳಪದಷ್ಟು ದಪ್ಪವಿದ್ದರೆ ಕೆಲವು ಕಾಂಡ ತೆಂಗಿನ ಕಡ್ಡಿಯ ಬುಡದಷ್ಟು ಸಣ್ಣ. ಅದರ ಗಾತ್ರ ಎಷ್ಟೇ ಇದ್ದರೂ ಕೂಡಾ ಅದು ನಮ್ಮ ಸ್ಲೇಟ್ ಒರೆಸುವ ಕೆಲಸಕ್ಕೆ ಸಾಕಾಗುವಷ್ಟು ನೀರನ್ನು ಕೊಡುತ್ತಿತ್ತು. ಹೀಗಾಗಿ ಇದು ನಮ್ಮ ಆಪ್ತರಕ್ಷಕನಾಗಿ ಕೆಲಸ ಮಾಡುತ್ತಿತ್ತು.
ಇಂತಹ ಮೃದುವಾದ ಗಿಡವೊಂದು ನಮ್ಮ ಬಾಲ್ಯದ ನೆನಪನ್ನು ಕೆದಕುವಷ್ಟು ಗಟ್ಟಿಯಾಗಿರುವುದನ್ನು ಕಂಡರೆ ಅದರ ತಾಕತ್ತಿನ ಬಗ್ಗೆ ಅಚ್ಚರಿ ಎನಿಸುತ್ತದಲ್ಲಾ?!
ಪೋಸ್ಟ್ ಮಾಡಿರುವುದು 22/9/2023
No comments:
Post a Comment