7th January 2024
ಅಡುಗೆಯ ವಿಧಾನ - ಶೋಭಾ
ಇವತ್ತು ಬೆಣ್ಣೆ ಕಾಯಿಸಿ ತುಪ್ಪ ಮಾಡುವಾಗ ಅದರ ಕೊತಕೊತ ಶಬ್ದ ನಿಂತಾದ ಮೇಲೆ ತುಪ್ಪ ರೆಡಿಯಾಗಿರಬಹುದೆಂದು ‘ಅಂದಾಜು’ ಮಾಡಿ ಗ್ಯಾಸ್ ಆಫ್ ಮಾಡಿದೆ. ತುಪ್ಪದ ಪರಿಮಳ ಹಿತವಾಗಿತ್ತು. ಹೀಗಾಗಿ ನನ್ನ 'ಅಂದಾಜು' ಸರಿಯಾಗಿತ್ತು ಎಂದು ಖುಷಿ ಪಟ್ಟೆ.
ಅಡುಗೆ ಮಾಡುವುದು ನನ್ನ ವೈಯಕ್ತಿಕ ಖುಷಿಗಳಲ್ಲಿ ಒಂದು. ಆದರೆ ನೀವ್ಯಾರಾದರೂ ನನ್ನ ಬಳಿ ಯಾವುದೇ ಅಡುಗೆಯ ಬಗ್ಗೆ ಅಳತೆಯುಕ್ತ ರೆಸಿಪಿ ಕೇಳಿದರೆ ನಾನು ಅದನ್ನು ಒದಗಿಸುವಲ್ಲಿ ನೂರಕ್ಕೆ ನೂರರಷ್ಟು ವಿಫಲಳಾಗುತ್ತೇನೆ. ವಿಧಾನ ಹೇಳಬಲ್ಲೆ, ಆದರೆ ನಿಖರವಾದ ಪ್ರಮಾಣ ಹೇಳಲಾರೆ

ನನಗೂ ನನ್ನ ಅಮ್ಮನಿಗೂ ಇದೇ ಕಾರಣಕ್ಕೆ ವಾಗ್ವಾದವಾಗುತ್ತದೆ. ನನ್ನಮ್ಮ ಬಹಳ ನಿಖರವಾದ ಪ್ರಮಾಣದಲ್ಲಿ ಅಗತ್ಯದ ಪದಾರ್ಥಗಳನ್ನು ಬಳಸಿ ಮಧ್ಯಮ ಉರಿಯಲ್ಲಿ ತಾಳ್ಮೆಯಿಂದ ಅಡುಗೆ ಮಾಡುವವಳು(ಆದರೆ ಅದೂ - ಇದೂ ಹೇಳಿ ಜೊತೆಗಿದ್ದವರ ತಾಳ್ಮೆ ತಪ್ಪಿಸುತ್ತಾಳೆ

ಈ ‘ಅಂದಾಜಿ’ನಲ್ಲಿ ಪದಾರ್ಥಗಳನ್ನು ಬಳಸಿ ಅಡುಗೆ ಮಾಡುವ ಬಗ್ಗೆ ನನ್ನ ಸಹಮತವಿದೆ. ಏಕೆಂದರೆ ಒಂದೇ ರೀತಿಯ ಮಸಾಲೆಗಳನ್ನು ಬಳಸಿದರೂ ಒಂದು ‘ನಿರ್ದಿಷ್ಟ ಭಕ್ಷ್ಯ’ ಪ್ರತೀ ಸಲವೂ ವಿಭಿನ್ನ ರುಚಿಯನ್ನು ಪಡೆಯುತ್ತದೆ. ಇದನ್ನು “ಏಕತೆಯಲ್ಲಿ ವಿಭಿನ್ನತೆ” ಎನ್ನೋಣವೆ? ಒಂದೇ ಅಡುಗೆಯ ಈ ವಿಭಿನ್ನ ರುಚಿ ನೀವು ನಿಖರವಾದ ಪ್ರಮಾಣದ ಪದಾರ್ಥಗಳನ್ನು ಬಳಸಿ ಮಾಡುವಾಗ ಸಿಗಲಾರದು

ಈ ‘ಅಂದಾಜು’ ಎನ್ನುವುದು ಅಡುಗೆಯಲ್ಲಿ ನಮ್ಮ ಸೃಜನಶೀಲತೆಯನ್ನು ಜೀವಂತವಾಗಿಡುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಅದೇ ಅಡುಗೆ ಮನೆ - ಅದೇ ಅಡುಗೆ - ಅವೇ ಪದಾರ್ಥಗಳು - ಆದರೆ ಅಂದಾಜಿನಲ್ಲಿ ಮಸಾಲೆ ಹಾಕುವ ರೀತಿಯಿಂದಾಗಿ ವಿಭಿನ್ನ ರುಚಿ! ಇದು ಸೃಜನಶೀಲತೆಯ ಅಭಿವ್ಯಕ್ತಿ ಅಲ್ಲದೆ ಮತ್ತೇನು ಹೇಳಿ?
ಅಂದಾಜಿನಲ್ಲಿ ಮಸಾಲಾ ಪದಾರ್ಥಗಳನ್ನು ಬಳಸಿ ಅಡುಗೆ ಮಾಡುವವರ್ಯಾರೂ ಹತಾಶರಾಗದೆ ಆ ವಿಧಾನವನ್ನು ಮುಂದುವರೆಸಿಕೊಂಡು ಹೋಗಿ. ಏಕೆಂದರೆ ಕಳೆದ ಮೂವತ್ತು - ನಲವತ್ತು ವರ್ಷಗಳಿಂದ ನಾನು ಅನುಸರಿಸುತ್ತಿರುವ ಈ ವಿಧಾನದಿಂದ ಮಾಡಿದ ಅಡುಗೆಯನ್ನು ಉಂಡ ಯಾರೂ ಈವರೆಗೆ ನನ್ನನ್ನು ಬಹಿಷ್ಕರಿಸಿಲ್ಲ
Posted 10/1/2024
No comments:
Post a Comment