ಏಪ್ರಿಲ್ 13, 2024
ಶೋಭಾಳ ಬರಹ
ಒಂದೆರಡು ತಿಂಗಳುಗಳಿಂದ ವಿಪರೀತ ಸೆಖೆ. ಒಂದು ರೀತಿಯ ಉಸಿರುಗಟ್ಟಿಸುವ ಧಗೆ. ಏನು ಕೆಲಸ ಮಾಡಲು ಹುಮ್ಮಸ್ಸು ಇಲ್ಲದ ಮನಸ್ಥಿತಿ. ಸ್ಮಶಾನ ವೈರಾಗ್ಯ ಭಾವ! ಎಲ್ಲವೂ ಇದ್ದು ಏನೂ ಇಲ್ಲದ ಅನುಭವ. ಫ್ಯಾನಿನ ಕೆಳಗೆ ಕುಳಿತರೂ ತಂಪಾಗದ ಮೈ ಮನಸ್ಸು. ಎಷ್ಟು ನೀರು ಕುಡಿದರೂ ಮುಗಿಯದ ದಾಹ. ನಮಗೇ ಹೀಗಾಗಬೇಕಾದರೆ ಇನ್ನು ಭೂಮಿ ತಾಯಿಯ ಪರಿಸ್ಥಿತಿ ಏನು?
“ಅಯ್ಯೋ ಎಂತಹ ಸೆಖೆಯಪ್ಪಾ” ಎಂಬ ಭಾವದೊಂದಿಗೆ ಇಂದು ಸಾಯಂಕಾಲ ನಮ್ಮ ಕ್ಯಾಂಪಸ್ ನಲ್ಲಿ ವಾಕ್ ಮಾಡುವಾಗ ಪೂರ್ವದ ಭಾಗದಿಂದ ಆಕಾಶ ಕಪ್ಪಗಿನ ಮೋಡಗಳಿಂದ ಆವೃತವಾಗುತ್ತಿರುವುದು ಗೋಚರವಾಯಿತು. ಸಾಯಂಕಾಲ ಐದೂವರೆಯ ಸಮಯ. ತಣ್ಣನೆಯ ಗಾಳಿ ಬೀಸತೊಡಗಿತು. ಅಷ್ಟರವರೆಗೆ ಸೆಖೆಯ ಧಗೆಯಲ್ಲಿದ್ದವಳಿಗೆ ಅತ್ಯುತ್ತಮ ಏರ್ ಕಂಡೀಷನರ್ ನ ಕಟ್ಟಡದೊಳಗೆ ಹೊಕ್ಕಾಗ ಸಿಗುವ ತಣ್ಣನೆಯ ಅನುಭವವಾಯಿತು. ನಿಜ ಹೇಳಬೇಕೆಂದರೆ ಏರ್ ಕಂಡೀಷನರ್ ನ ತಣ್ಣನೆಯ ಅನುಭವವನ್ನು ಮೀರಿದ ತಂಪಿನ ಭಾವವನ್ನು ಈ ಗಾಳಿ ನೀಡಿತು. ಇಷ್ಟು ದಿವಸಗಳ ಧಗೆಯೆಲ್ಲ ಮರೆತಂತಾಯಿತು. ಕಪ್ಪು ಮೋಡಗಳ ಸಾಂದ್ರತೆ ಹೆಚ್ಚಿದಂತೆ ಮಳೆ ಬಂದೇ ಬರುತ್ತದೆ ಎನ್ನುವ ನಿರೀಕ್ಷೆ ಹೆಚ್ಚುತ್ತಾ ಹೋಯಿತು. ಆದರೆ ಗಾಳಿಯ ಹೊಡೆತ ಜಾಸ್ತಿಯಾಗಿ ಮೋಡಗಳು ಬೇರೆ ಕಡೆಗೆ ಹೋಗತೊಡಗಿದಾಗ “ಬಾ… ಮಳೆಯೇ ಬಾ...” ಎಂದು ಮನಸ್ಸು ಬೇಡತೊಡಗಿತು. ಆದರೂ ಮೋಡಗಳ ಸಾಗುವಿಕೆ ಮುಂದುವರೆದೇ ಇದ್ದಾಗ ಮಳೆ ಬರುವ ಬಗೆಗಿನ ನಿರೀಕ್ಷೆ ಕಡಿಮೆಯಾಗತೊಡಗಿತು. ಬೀಸುತ್ತಿದ್ದ ತಣ್ಣನೆಯ ಗಾಳಿಯಲ್ಲೇ ತೃಪ್ತಿ ಪಟ್ಟುಕೊಳ್ಳುವ ಪರಿಸ್ಥಿತಿಗೆ ಮನಸ್ಸು ತಯಾರಾಗುತ್ತಿದ್ದಂತೆ ಮಳೆ ಹನಿಗಳು ಬೀಳತೊಡಗಿದವು. ಅದರೊಟ್ಟಿಗೆ ಕಾದ ಮಣ್ಣು ಮಳೆಯ ಹನಿಗಳನ್ನು ಹೀರಿ ಹೊರಸೂಸಿದ ‘ಮಣ್ಣಿನ ವಾಸನೆ’ ಮೂಗಿಗೆ ಬಡಿಯಿತು. ಆ ‘ಸುವಾಸನೆ’ ಎಲ್ಲರ ಮನಸ್ಸಿಗೆ ಎಷ್ಟು ಮುದ ಕೊಡುತ್ತದಲ್ವೆ? ಹೀಗೆ ಪ್ರಾರಂಭವಾದ ಮಳೆ ಸುಮಾರು ಒಂದು ತಾಸು ಬಂದು ವಾತಾವರಣವನ್ನು ಹಾಗೂ ಮನಸ್ಸನ್ನು ತಂಪು ಮಾಡಿ ಖುಷಿ ಪಡಿಸಿದ ಅನುಭವವೇ ಈ ಲೇಖನ ಬರೆಯಲು ದೊರೆತ ಸ್ಫೂರ್ತಿ ಎಂದರೆ ತಪ್ಪಾಗಲಾರದು!
ಮಳೆ ಬರಲೆಂದು ನಾನು(ನಾವೆಲ್ಲರೂ) ಕೊಟ್ಟ ಕರೆ ಕೊನೆಗೂ ಮಳೆರಾಯನಿಗೆ ಕೇಳಿ ಮಳೆ ಇಳೆಗಿಳಿದದ್ದು ಇಂದಿನ ದಿನವನ್ನು ಸುದಿನವಾಗಿಸಿತಲ್ಲವೆ?! ಇಳೆಯನ್ನು ಹಾಗೂ ನಮ್ಮೆಲ್ಲರ ಮನವನ್ನು ತಂಪಿನಿಂದ ಹಸಿಯಾಗಿಸಿದ ಮಳೆರಾಯನಿಗೆ ನಮ್ಮೆಲ್ಲರ ಕೃತಜ್ಞತೆಗಳು
Posted 21/4/2024
No comments:
Post a Comment