Sunday 27th July 2024
Shobha Articles
ಇವತ್ತು ಭಾನುವಾರದ ಪೇಪರನ್ನು ಪುರುಸೊತ್ತಿನಲ್ಲಿ ಓದುವಾಗ “ಪಾಪ್ ಕಾರ್ನ್ ಬ್ರೈನ್” ಎನ್ನುವ ಅಂಕಣ ಬರಹ ನನ್ನ ಕಣ್ಸೆಳೆಯಿತು. ನಾನೇನು ಪಾಪ್ ಕಾರ್ನ್ ಪ್ರಿಯಳಲ್ಲ. ಆದರೆ ಆ ತಲೆಬರಹ ವಿಚಿತ್ರವಾಗಿ ನನ್ನನ್ನು ಸೆಳೆದದ್ದಂತೂ ಹೌದು!
ಓದಿದಾಗ ಇಡೀ ಲೇಖನ ನನಗೆ ಸುಲಭವಾಗಿ ಕನೆಕ್ಟ್ ಆಯಿತು. ಅದರಲ್ಲಿ ಈಗಿನ ಬುಲೆಟ್ ವೇಗದ ಯುಗದಲ್ಲಿ ಅದಕ್ಕಿಂತಲೂ ವೇಗವಾಗಿ ಮನಸ್ಸು ಕ್ಷಣಕ್ಕೊಂದು ವಿಚಾರಗಳಿಗೆ ಹಾರುವ ಬಗ್ಗೆ ವಿಶ್ವಾಸಾರ್ಹ ವಿವರಣೆ ಇತ್ತು. ಆ ಲೇಖನದಲ್ಲಿ ಪಾತ್ರೆಯಲ್ಲಿ ಹಾಕಿದಾಗ ಪಾಪ್ ಕಾರ್ನ್ ಹೇಗೆ ಪಟಪಟನೆ ಸಿಡಿಯುತ್ತದೆಯೋ ಹಾಗೆಯೇ ವಿಚಾರಗಳು ನಮ್ಮ ತಲೆಯಲ್ಲಿ ಸಿಡಿಯತೊಡಗಲು ಈಗಿನ ತಾಂತ್ರಿಕತೆ ಹಾಗೂ ಸಾಮಾಜಿಕ ಜಾಲತಾಣಗಳು ಎಷ್ಟರ ಮಟ್ಟಿಗೆ ಪ್ರಭಾವ ಬೀರಿವೆ ಎಂಬುವುದರ ಬಗ್ಗೆ ವಿಷಯ ಪ್ರಸ್ತಾಪವಿತ್ತು.
“ಮನಸ್ಸು ಮರ್ಕಟ” ಎನ್ನುವುದು ಎಲ್ಲರೂ ಬಲ್ಲ ವಿಷಯವೇ! ಒಂದು ಕಡೆ ಮನಸ್ಸನ್ನು ಕೇಂದ್ರೀಕರಿಸಿ ಕೆಲಸ ಮಾಡುವುದು ಸುಲಭದ ವಿಷಯವಲ್ಲ. ನನಗಂತೂ ಧ್ಯಾನ ಮಾಡುವಾಗಲೂ ಮನಸ್ಸು ಪ್ರಶಾಂತವಾಗಿರದೆ ಹಲವಾರು ವಿಷಯಗಳ ಬಗ್ಗೆ ಯೋಚನೆ ಹುಟ್ಟಿಸಿ ಕಾಟ ಕೊಡುತ್ತಿರುತ್ತದೆ. ಈ ರೀತಿಯ ಧ್ಯಾನ ಯಾಕಾಗಿ ಮಾಡಬೇಕು ಎಂದು ಹಲವಾರು ಬಾರಿ ಅನ್ನಿಸಿದ್ದಿದೆ. ಆದರೆ ಮನಸ್ಸನ್ನು ಅಲ್ಪಸ್ವಲ್ಪ ರಿಲ್ಯಾಕ್ಸ್ ಮಾಡುವ ಧ್ಯಾನವನ್ನು ಬಿಡಲು ಮನಸ್ಸಾಗುವುದಿಲ್ಲ. ಕೆಲವು ಸಲ ಧ್ಯಾನದ ವೇಳೆಯಲ್ಲಿ ತಲೆಯೊಳಗಾಗುವ ವಿಚಾರಗಳ ಮಂಥನದಿಂದ ಅದ್ಭುತವಾದ ಐಡಿಯಾಗಳು ಉದ್ಭವವಾದದ್ದೂ ಇದೆ!?
ನನ್ನ ವಯೋಮಾನದವರ ಬದುಕು ಒಂದು ಹಂತಕ್ಕೆ ಬಂದು ನಿಂತಿದೆ. ನಮ್ಮ ಮೇಲೂ ಸಾಮಾಜಿಕ ಜಾಲತಾಣಗಳ ಪ್ರಭಾವ ಹಾಗೂ ಅವುಗಳ ಬಗ್ಗೆ ಸ್ವಲ್ಪ ಮಟ್ಟಿಗಿನ ವ್ಯಸನವೂ ಇದೆ. ಅದರಿಂದಾಗಿ ನಮ್ಮ ಅಧ್ಯಯನ ಹಾಗೂ ಸಂವಹನ ಕುಂಠಿತವಾದದ್ದೂ ಇದೆ. ಹೊಸ ಹೊಸ ವಿಷಯಗಳ ಬಗ್ಗೆ ಕಲಿತದ್ದೂ ಇದೆ. ಆದರೆ ಸಾಮಾಜಿಕ ಜಾಲತಾಣಗಳನ್ನು ಬದುಕಿನ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡಿರುವ/ಮಾಡಿಕೊಳ್ಳುತ್ತಿರುವ ಈಗಿನ ಹಾಗೂ ಮುಂಬರುವ ಜನಾಂಗದ ಕಥೆ ಏನಾಗಬಹುದು? ಅವರ ಮನಸ್ಸು ಅವರ ಹತೋಟಿಯಲ್ಲಿರಲು ಸಾಧ್ಯವೆ? ಅವರ ಪಾಪ್ ಕಾರ್ನ್ ಬ್ರೈನ್ ಯಾವ ಸ್ಥಿತಿಯನ್ನು ತಲುಪಬಹುದು? ಲೇಖನ ಓದಿ ಇವೆಲ್ಲಾ ವಿಚಾರಗಳು ಪಾಪ್ ಕಾರ್ನ್ ಸಿಡಿದಂತೆ ನನ್ನ ತಲೆಯೊಳಗೆ ಸಿಡಿದದ್ದಂತೂ ನಿಜ. ಇದಕ್ಕುತ್ತರ ಅಥವಾ ಪರಿಹಾರ ಹುಡುಕುವವರು ಯಾರು?
Posted 29/7/2024
No comments:
Post a Comment