9/7/2024
ನಮ್ಮ ತೋಟದ ಹೂಗಳು ಹಲವಾರು
ಮೊನ್ನೆ ನೋಡಿದೆ ಮಳೆಯಲ್ಲಿ ಮಿಂದೆದ್ದಹೂವ ಮೇಲೊಂದು ಕೂತಿತ್ತು ಒಂಟಿ ಸೊಳ್ಳೆ
ನೋಡಿದೆ ಅದನು; ಕೂಡಲೇ ತೆಗೆದೆ ಫೋಟೋವನ್ನು
ಬರೆಯಲು ಕುಳಿತೆ ಅದರ ಬಗ್ಗೆ ಕವನವನ್ನು!
ಹೂವ ಮೇಲೆ ಕೂತ ಸೊಳ್ಳೆಗೆ ಸಿಕ್ಕಿರುವುದಾದರೂ ಏನು?
ಹೂವಿನಲ್ಲಿ ಹೀರಲು ರಕ್ತವಿಲ್ಲ; ಅದರಲಿ ಮತ್ತೇನೂ ಸಿಗದಲ್ಲ!
ಆದರೂ ಅದು ತಪಸ್ವಿಯಂತೆ ಅಲುಗಾಡದೆ ಕುಳಿತೇ ಇತ್ತಲ್ಲ!
ಸೊಳ್ಳೆ ಹೂವಿನ ಅಂದವನ್ನು ಆಸ್ವಾದಿಸುತ್ತಾ ಇತ್ತೇ?
ಅದರ ಮೇಲಿನ ನೀರ ಹನಿಗಳೊಡನೆ ಸರಸವಾಡಲು ಬಯಸಿತ್ತೆ?
ಅದ ಬಲ್ಲವರಾರು? ನಮಗೆ ಅದೊಂದು ಕಚ್ಚುವ ಸೊಳ್ಳೆಯಷ್ಟೇ!
ಅದೇ ಸೊಳ್ಳೆ………..
ಗುಂಯ್ ಗುಡುತ್ತಾ ಹಾರಿ, ಬಳಿ ಬಂದು ಚುಚ್ಚಿ ಕಚ್ಚಿ
ಹೀರುವುದು ನಮ್ಮ ರಕ್ತವನಷ್ಟೇ!ಅದು ಕಚ್ಚುವ ಸೊಳ್ಳೆಯಷ್ಟೇ!
ಅದರ ತೆಳ್ಳನೆಯ ಬಳುಕುವ ದೇಹ ನೋಡಲು ಚೆಂದವಷ್ಟೇ!
ಆದರೆ ಚುರ್ರೆಂದು ಕಚ್ಚುವ ಚೂಪನೆಯ ಮೂತಿ ಕಟುವಷ್ಟೇ!
ನಂತರದ ತುರಿಸುವ ಅನುಭವ ಬಲು ಕಠೋರವಷ್ಟೇ!
ಆದರೆ ಹೂವ ಮೇಲೆ ಕುಳಿತ ಸೊಳ್ಳೆ ಬಲು ಅಂದವಷ್ಟೇ
Posted 9/7/2024
No comments:
Post a Comment