Tuesday, July 9, 2024

ಚಿಟ್ಟೆ - ಪತಂಗಗಳು

 9/7/2024

ಚಿಟ್ಟೆ - ಪತಂಗಗಳು ಬಲು ಸುಂದರ 



ಬಣ್ಣ ಬಣ್ಣದ ಚಿತ್ತಾರದ ಚಿಟ್ಟೆ , 
ಆಯ್ದ ಬಣ್ಣಗಳಲ್ಲಷ್ಟೇ ಕಾಣುವ ಪತಂಗ
ವ್ಯತ್ಯಾಸ ಏನೇ ಇದ್ದರೂ ಅವು ಬಲು ಚೆಂದ!, 
ಮೊನ್ನೆ ರಾತ್ರಿ ಕಂಡೆ ನಮ್ಮ ಮನೆಯ ಗೋಡೆಯ ಮೇಲೆ
ಬಿಳಿ ಬಣ್ಣ ಹಾಗೂ ರೆಕ್ಕಗಳ ತುದಿಯಲ್ಲಿ ,
ಕಂಡೂ ಕಾಣದಂತೆ ಇರುವ ಪುಟ್ಟ ಕರಿ ಬೊಟ್ಟಿರುವ ಪತಂಗ
ರೇಷ್ಮೆಯ ಎಳೆಗಳು ನೇಯ್ದು ಮಾಡಿದಂತಿದ್ದ ರೆಕ್ಕೆಗಳ ಪತಂಗ! 
ಮುಟ್ಟಲೆಂದು ಹೊರಟೆ; ಬೇಡವೆಂದು ಬಿಟ್ಟೆ
ಮುಟ್ಟಿದರೆ ಅದರ ರೆಕ್ಕೆಗಳು ನಲುಗಿದರೆ?
ಮುಟ್ಟಿದರೆ ಅದರ ರೆಕ್ಕೆಗಳು ಉದುರಿದರೆ?
ಮುಟ್ಟಿದರೆ ಅದರ ಮೈ ಮುದುರಿದರೆ?
ಹೀಗೆಲ್ಲ ಯೋಚಿಸಿ ಮುಟ್ಟದೇ ಅದನ್ನು ಬಿಟ್ಟೆ!
ಬದುಕಿನಲ್ಲಿ ನಾವು ಎಷ್ಟೆಷ್ಟನ್ನೋ ಹೀಗೆಯೇ ಬಿಡುತ್ತೇವಲ್ಲ!
ಆದರೂ ಬಿಟ್ಟೆನೆಂದರೂ ಬಿಡದೀ ಮಾಯೆಯಂತೆ
ಕೆಲವು ನಮ್ಮನ್ನು ಅಂಟಿಕೊಂಡೇ ಉಳಿಯುತ್ತವಲ್ಲಾ?
ನಾನಂದು ಮುಟ್ಟದೇ ಬಿಟ್ಟಿರುವ ಪತಂಗ 
ಇನ್ನೂ ಜೀವಂತವಾಗಿ ಉಳಿದು ಬಿಟ್ಟಿರಬಹುದಲ್ಲಾ?! 
ಎಲ್ಲವೂ ಉಳಿಯಲಿ, ಬದುಕಲಿ, ಬೆಳೆಯಲಿ
ಮತ್ತಷ್ಟು ಹೊಸ ಹೊಸದು ಉದಿಸಲಿ! 
ಬಿಳಿ ಪತಂಗ, ಹಳದಿ ಪತಂಗ, ತಿಳಿ ನೀಲ ಪತಂಗ
ಜೊತೆಗೆ ಬಣ್ಣ ಬಣ್ಣದ ಚಿಟ್ಟೆಗಳೂ ಕೂಡಾ, 
ಯಾವುದೇ ಆತಂಕವಿಲ್ಲದೆ ಬದುಕಲಿ; ಹಾಗೆಯೇ
ನನ್ನ ಬದುಕೂ ಪತಂಗದ ಬಿಳಿಬಣ್ಣದ ಶಾಂತಿ ಪಡೆಯಲಿ!!! 

Posted 10/7/2024

No comments:

Post a Comment