14 ಜೂಲೈ 202 4
ಹೊಂಗಿರಣ ಶಾಲೆ , ಸಾಗರ.
ಇವತ್ತು ನಮ್ಮ ಹೂ ತೋಟದ ಮೂಲೆಯಲ್ಲಿ ಅರಳಿದ್ದ ಹಳದಿಯ ಹೂವನ್ನು ನೋಡಿದೆ. ಆಗಷ್ಟೇ ಮಳೆ ಬಂದು ಹೋದ ಕಾರಣ ಇನ್ನೂ ಕೆಲವು ಹನಿಗಳು ಅದರ ಪಕಳೆಗಳ ಮೇಲೆ ಉಳಿದಿದ್ದವು. ಆ ಗಿಡದಲ್ಲಿ ಅರಳಿದ್ದ ಒಂಟಿ ಹೂವು ಅದಾಗಿತ್ತು.ಎಂತಹ ಗಾಢ ಹಳದಿ ಬಣ್ಣ! ಎಂತಹ ಸ್ನಿಗ್ಧ ಸೌಂದರ್ಯ! ಬೇಡ ಬೇಡವೆಂದರೂ ಕಣ್ಸೆಳೆಯುವ ನೋಟವದು!? ಮೂಲೆಯಲ್ಲಿ ಇದ್ದರೂ ‘ನಾನಿಲ್ಲಿ ಅರಳಿ ನಿಂತಿದ್ದೇನೆ. ನೋಡು ನನ್ನನ್ನು ‘ ಎಂದು ಕರೆಯುತ್ತಿರುವಂತಹ ನೋಟವದು.
ಹೂವಿಗೂ ಭಾವವಿರುತ್ತದೆ ಎನ್ನುವ ಅನುಭವ ನನಗಾಯಿತು ಇಂದು! ನನ್ನ ಪಾಡಿಗೆ ನಾನು ವಾಕಿಂಗಿಗೆ ಹೊರಟಿದ್ದವಳು ಅರೆ ಘಳಿಗೆ ಅದರತ್ತ ನೋಟ ಹರಿಸಿ, ಅದರೆಡೆಗೆ ಹೋಗಿ, ಅಲ್ಲೇ ಸ್ವಲ್ಪ ಹೊತ್ತು ನಿಂತು, ಮನ ತಡೆಯದೆ ಒಂದು ಫೋಟೊ ಕ್ಲಿಕ್ಕಿಸಿ ಅದರ ಸೌಂದರ್ಯವನ್ನು ಸೆರೆ ಹಿಡಿಯುವ ಪ್ರಯತ್ನ ಮಾಡಿದೆ. ಆ ಹೂವಿನಲ್ಲಿ ನನ್ನನ್ನು ಹತ್ತಿರಕ್ಕೆ ಆಹ್ವಾನಿಸುವ ಭಾವವನ್ನು ನಾನು ನೋಡಿದೆ!
ಮತ್ತೊಮ್ಮೆ ನನ್ನನ್ನು ನಾನೇ ಪ್ರಶ್ನಿಸಿಕೊಂಡೆ. ನಾನೇಕೆ ಆ ಹಳದಿ ಹೂವಿನೆಡೆಗೆ ಹೋದೆ? ಹಸಿರ ರಾಶಿಯ ನಡುವೆ ಅಡಗಿ ಕುಳಿತು ಹಣಕಿ ಹಾಕಿ ನನ್ನೆಡೆ ನೋಡುತ್ತಿದ್ದಂತೆ ಕಂಡ ಅದರ ನೋಟಕ್ಕೆ ಮನಸೋತೊ? ಅಥವಾ ಅದರ ಬಣ್ಣಕ್ಕೆ ಮನಸೋತೊ? ನಾನರಿಯೆ!
ಅದರ ಹೆಸರನ್ನು ಹುಡುಕಿದೆ. ಅಲ್ಲಮಂಡಾ ಕ್ಯಾಥರ್ಟಿಕಾ ಅಥವಾ ಗೋಲ್ಡನ್ ಟ್ರಂಪೆಟ್ ಎನ್ನುವ ಹೆಸರೆಂದು ಗೊತ್ತಾಯಿತು. ‘ಹೆಸರಿನಲ್ಲೇನಿದೆ ಅಂತಹ ಮಹತ್ವ’ ಎಂದು ನನಗೆ ನಾನೇ ಹೇಳಿಕೊಂಡು ಆ ಹೂವನ್ನು ಅದರ ಅಜ್ಞಾತತೆಯಲ್ಲಿಯೇ ಹೆಚ್ಚು ಇಷ್ಟ ಪಟ್ಟೆ. ಏಕೆಂದರೆ ನಾನದರಿಂದ ಆಕರ್ಷಿತಳಾದದ್ದು ಅದರ ಭೌತಿಕತೆಯಿಂದಲೇ ಹೊರತು ಅದರ ಹೆಸರಿನಿಂದಲ್ಲ. ಅದೇನೇ ಇರಲಿ ಅದರ ಸೌಂದರ್ಯ ನನ್ನ ಮನಸ್ಸಿಗೆ ಖುಷಿ ಕೊಟ್ಟಿದ್ದಂತೂ ನಿಜ! ಇರುವುದನ್ನು ಇರುವಂತೆಯೆ ಸ್ವೀಕರಿಸಿ ಬದುಕುವುದರಲ್ಲಿ ಅರ್ಥವಿದೆಯಲ್ಲವೆ?
Posted 17/7/2024
No comments:
Post a Comment