16/7/2024
Sagara.
ನಿನ್ನೆ ನಾನು, ಮೇದಿನಿ ಹಾಗೂ ಮೈತ್ರೇಯಿ ಮಳೆಯ ಅಬ್ಬರವನ್ನು ನೋಡಲೆಂದೇ ವಿಭಾಳ ಸಾರಥ್ಯದಲ್ಲಿ ಕಾರಿನಲ್ಲಿ ಮಳೆಯ ಪ್ರವಾಸ ಕೈಗೊಂಡೆವು. ನಮ್ಮ ಉದ್ದೇಶವಿದ್ದದ್ದು ಕೋಗಾರ್ ಕ್ರಾಸಿನಿಂದ ನಿಟ್ಟೂರು ಮಾರ್ಗದ ರಸ್ತೆಯನ್ನು ಶೋಧಿಸುವುದು. ಆ ಮಾರ್ಗದ ಬಗ್ಗೆ ಅವರಿವರಿಂದ ಕೇಳಲ್ಪಟ್ಟಿದ್ದೇ ಹೊರತು ಆ ಮಾರ್ಗದ ಪಯಣ ಮಾಡಿರಲಿಲ್ಲ.
ಸರಿ. ಬೆಳಗಿನ ಹತ್ತೂವರೆಗೆ ಮಧ್ಯಾಹ್ನದ ಭೋಜನ ತಯಾರಿಸಿಕೊಂಡು ಹೊರಟ ನಾವು ಹುಚ್ಚು ಮಳೆಯಲ್ಲಿ ವೈಪರ್ ನ ಮೂಲಕ ಕಾರಿನ ಗಾಜನ್ನು ಒರೆಸಿ ಸ್ವಚ್ಛಗೊಳಿಸಿಕೊಳ್ಳುತ್ತಾ ತಾಳಗುಪ್ಪ, ಚೂರಿ ಕಟ್ಟೆ, ಅರಳಗೋಡಿನ ಮಾರ್ಗವಾಗಿ ಸಾಗಿದೆವು. ಎಲ್ಲಿ ನೋಡಿದರಲ್ಲಿ ಕಾಣುತ್ತಿದ್ದ ಹಚ್ಚ ಹಸಿರನ್ನು ಆಸ್ವಾದಿಸುತ್ತಾ ಮುಂದೆ ಸಾಗುತ್ತಾ ಮಾರ್ಗ ಮಧ್ಯದಲ್ಲಿ ಮೂತ್ರ ವಿಸರ್ಜನೆಗೆ ಕಾರನ್ನು ನಿಲ್ಲಿಸಿದಾಗ ರಸ್ತೆಯ ಬಲಪಕ್ಕದಲ್ಲೊಂದು ಕಂಡ ಮಣ್ಣಿನ ರಸ್ತೆಯಲ್ಲಿ ಸಾಗಿದಾಗ ನಾವೆಲ್ಲೋ ಸ್ವಿಟ್ಜರ್ಲ್ಯಾಂಡ್ ನಲ್ಲಿ ಇದ್ದೇವೇನೊ ಎನ್ನುವ ಅನುಭವ ಕೊಡುವ ತೊರೆಗಳು ಹಾಗೂ ಮಂಜು ಮುಸುಕಿದ ಸಣ್ಣ ಸಣ್ಣ ಹಚ್ಚ ಹಸಿರಿನ ಗುಡ್ಡಗಳು. ಸ್ವರ್ಗಕ್ಕೆ ಮೂರೇ ಗೇಣು ಇದ್ದಂತಹ ಅನುಭವ! ಅಲ್ಲೊಂದಿಷ್ಟು ಫೋಟೊ ಶೂಟ್ ಮುಗಿಸಿಕೊಂಡು ಕೋಗಾರ್ ಕ್ರಾಸಿನಿಂದ ನಿಟ್ಟೂರು ಮಾರ್ಗದಲ್ಲಿ ಮುಂದುವರಿದಾಗ ನಾವೆಲ್ಲೋ ಹೊಸ - ಹೊರ ಪ್ರಪಂಚದಲ್ಲಿ ಇದ್ದೇವೇನೊ ಎನ್ನುವ ಭಾವ. ಪ್ರಕೃತಿ ಸೌಂದರ್ಯದ ಅದ್ಭುತದ ಪರಮಾವಧಿ! ಅದನ್ನು ವರ್ಣಿಸಲು ಪದಗಳೇ ಸಿಗುವುದಿಲ್ಲವೇನೊ?
ಮಂಜು ಮುಸುಕಿದ ಮಾರ್ಗ; ರಸ್ತೆಯ ಇಕ್ಕೆಲಗಳಲ್ಲಿ ರಭಸವಾಗಿ ಹರಿಯುವ ನೀರ ಝರಿ; ತೆಳ್ಳನೆಯ ಹಸಿರ ಹುಲ್ಲು ಆವರಿಸಿದ ನೆಲ; ಗಾಳಿಗೆ ಅತ್ತಿತ್ತ ತೊನೆದಾಡುವ ಮರಗಳು; ದಪ್ಪನೆಯ ನೀರ ಹನಿಗಳೊಡನೆ ಭರ್ರನೆ ಬೀಸುವ ಗಾಳಿ; ಸ್ವಲ್ಪವೇ ಸ್ವಲ್ಪ ಕಿಟಕಿ ತೆರೆದರೂ ರಪಕ್ಕನೆ ಕಾರಿನ ಒಳತೂರುವ ಮಳೆ ಹನಿಗಳು! ಮಳೆಯ ರಭಸ ಕಡಿಮೆಯಾದಾಗ ಅಲ್ಲಲ್ಲಿ ಸಿಗುವ ತೊರೆಗಳ ಅಕ್ಕಪಕ್ಕದಲ್ಲಿ ನಮ್ಮ ಫೋಟೊ ಶೂಟ್! ತಕ್ಷಣವೇ ಯಾವುದೇ ಮುನ್ಸೂಚನೆ ಇಲ್ಲದೆ ಬರುವ ಮಳೆಗೆ ಮೈಯೊಡ್ಡಿ ಆಟವಾಡಿದ ಕ್ಷಣಗಳು! ಆ ರಭಸದ ಮಳೆಯಲ್ಲೇ ಕೊಡೆ ಹಿಡಿದುಕೊಂಡು ತಟ್ಟೆಗೆ ಬೀಳುತ್ತಿದ್ದ ನೀರ ಹನಿಗಳೊಡನೆ ಊಟ ಮಾಡಿದ ಮಜಾ! ಇದ್ದ ಒಂದೆರಡು ಕೊಡೆಗಳು ಮಳೆಯ ರಭಸಕ್ಕೆ ಛಿದ್ರವಾಗಿ ವಿರೂಪಗೊಂಡಾಗ ಆದ ಫಜೀತಿ! ನಂತರದಲ್ಲಿ ತೊರೆಯ ನೀರೊಳಗೆ ಇಳಿದಾಗ ಮೈಗೆ ಹತ್ತಿದ ಇಂಬಳದಿಂದಾಗಿ ಮೇದಿನಿಯ ಬಾಯಿಯಿಂದ ಹೊರಬಂದ ಚೀತ್ಕಾರ! ಇಂಬಳ ಮೈಯಿಂದ ಹೊರಹೋಗುವ ತನಕ ಮೇದಿನಿ ಮಾಡಿದ ಅವತಾರಗಳು! ಇವೆಲ್ಲವೂ ನಮ್ಮ ಮಳೆ ಪ್ರವಾಸವನ್ನು ರಂಜನೀಯವಾಗಿಸಿ ಅದನ್ನೊಂದು ಸ್ಮರಣೀಯ ಅನುಭವವಾಗಿಸಿದ್ದಂತೂ ನಿಜ!
ಅದೇ ದಾರಿಯಲ್ಲಿ ಮುಂದುವರೆದ ನಾವು ಹೊಸನಗರ ಮಾರ್ಗವಾಗಿ ಬಂದು ಮನೆ ಸೇರಿದಾಗ ಘಂಟೆ ಸಂಜೆ ಐದೂವರೆಯಾಗಿತ್ತು. ಹೀಗೆ ನಮ್ಮ ಮಳೆ ಪ್ರವಾಸ ಮುಗಿದಿತ್ತು.
Posted 18/7/2024
No comments:
Post a Comment