Wednesday, May 13, 2026

ಅಂತಾರಾಷ್ಟ್ರೀಯ ತಾಯಂದಿರ ದಿನ. - ಶೋಭಾ ಸೋಮಯಾಜಿ

 ಶನಿವಾರ, ಮೇ 9, 2026


ನಾಳೆ ಅಂತಾರಾಷ್ಟ್ರೀಯ ತಾಯಂದಿರ ದಿನ. ತೊಂಬತ್ತರ ಹರೆಯದ ನನ್ನಮ್ಮ ಆರೋಗ್ಯಯುತವಾಗಿ, ಅವಳ ಕೆಲಸವನ್ನು ಅವಳು ಮಾಡುತ್ತಾ ವಯೋಸಹಜ ಸಣ್ಣ ಪುಟ್ಟ ನೋವನ್ನು ಅನುಭವಿಸುವುದನ್ನು ಹೊರತು ಪಡಿಸಿ ಉತ್ತಮ ಕೇಳುವಿಕೆ, ದೃಷ್ಟಿ, ನಿದ್ರೆ ಹಾಗೂ ಜೀರ್ಣಕ್ರಿಯೆಯನ್ನು ಹೊಂದಿ ಅವಳ ಇಚ್ಛೆಯ ಪ್ರಕಾರ ಬದುಕು ನಡೆಸುತ್ತಿದ್ದಾಳೆ. ಅವಳು ಇವತ್ತಿಗೂ ತಾನು ಹೋಗಿ ಇರುವಲ್ಲಿ ತನ್ನ ಅಧಿಕಾರವನ್ನು ನಡೆಸುವ ಗಟ್ಟಿಗಿತ್ತಿ. ಅವಳ ಗಟ್ಟಿತನ ಅವಳ ಮಕ್ಕಳಾದ ನಮಗ್ಯಾರಿಗೂ ಬಂದಿಲ್ಲವೆಂದೇ ಹೇಳಬಹುದು. ನನ್ನನ್ನು ಹೊತ್ತು, ಹೆತ್ತು, ಕಾಲಕಾಲಕ್ಕೆ ನನ್ನ ದೇಖಾರೇಖಿ ಮಾಡಿದ ಬಗ್ಗೆ ನನ್ನಮ್ಮನ ಬಗ್ಗೆ ಗೌರವ ಹಾಗೂ ಕೃತಜ್ಞತಾ ಭಾವವಿದೆ. ಆದರೆ ನನಗೆ ಮಾನಸಿಕ ಸ್ಥೈರ್ಯ, ಪ್ರೀತಿ, ಒಲುಮೆ ತೋರಿಸಿ ಜೀವನ ಪಾಠವನ್ನು ಕಲಿಸಿದ ನನ್ನಪ್ಪ ನನ್ನ ನಿಜವಾದ ತಾಯಿ. ಅವರ ಬಗ್ಗೆ ನನಗೆ ವಿಶೇಷ ಪ್ರೀತಿ.


ನನ್ನಪ್ಪನ ಜೊತೆಗಿನ ನನ್ನ ಬಾಂಧವ್ಯ ಹಾಗೂ ಅನುಬಂಧವನ್ನು ವಿವರಿಸಲು ನನ್ನಲ್ಲಿ ಪದಗಳೇ ಇಲ್ಲ. ನಾನೊಬ್ಬ ಸಿಂಗಲ್ ಪೇರೆಂಟ್ ಆಗಿ ತಾಯಿ-ತಂದೆಯ ಎರಡೂ ಪಾತ್ರಗಳನ್ನು ನಿರ್ವಹಿಸುವಾಗ ನನಗೆ ಅದರ ನಿರ್ವಹಣೆಯ ಜಟಿಲತೆ ಅನುಭವಕ್ಕೆ ಬಂದಿದೆ. ನನ್ನಪ್ಪ ಪ್ರಾಯಶಃ ಆ ಎರಡೂ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎನ್ನುವುದು ನನ್ನ ಅನಿಸಿಕೆ. ಪುರುಷ ಹಾಗೂ ಸ್ತ್ರೀ ಭಾವ ಎರಡನ್ನೂ ನಿರ್ವಹಿಸುವ ತಾಕತ್ತು ನನ್ನಪ್ಪನಿಗೆ ಇತ್ತು. ತಾಯಂದಿರ ದಿನ ಎಂದಾಕ್ಷಣ ಮೊದಲಿಗೆ ನನ್ನ ಕಣ್ಣ ಮುಂದೆ ಬರುವುದು ನನ್ನಪ್ಪನ ಭಾವಬಿಂಬ! 
ತಾಯಿಯಾಗುವುದು ಒಂದು ಜೈವಿಕ ಪ್ರಕ್ರಿಯೆಯಾದರೆ ತಾಯ್ತನವನ್ನು ಅನುಭವಿಸುವುದು ಮಾನಸಿಕ ಪ್ರಕ್ರಿಯೆ ತಾನೆ? ಪ್ರಾಯಶಃ ನನ್ನಪ್ಪ ಆ ತಾಯ್ತನವನ್ನು ನಿಜಕ್ಕೂ ಅನುಭವಿಸರಬಹುದು ಎಂದು ನನ್ನೆಣಿಕೆ. ತಾಯಿಯ ಬಿಸುಪು, ತ್ಯಾಗ ಭಾವ, ನಿರಪೇಕ್ಷ ಪ್ರೀತಿ, ತಾಳ್ಮೆ, ಮನಬಿಚ್ಚಿ ಮಾತನಾಡುವಿಕೆ, ನೈತಿಕ ಬೆಂಬಲ ಇವೆಲ್ಲವನ್ನೂ ನಾನು ಪಡೆದಿದ್ದು ನನ್ನಪ್ಪನಿಂದ ಎಂದರೆ ಅತಿಶಯೋಕ್ತಿಯಲ್ಲ. ಅಂತಹ ತಾಯಿಯಂಥ ಅಪ್ಪನನ್ನು ಪಡೆದಿದ್ದಕ್ಕೆ ನನಗೆ ಖುಷಿ ಇದೆ. 
ಅಮ್ಮನ ಭಾವದ ಅಪ್ಪನ ಪ್ರೀತಿ ಎಲ್ಲರಿಗೂ ಸಿಗುವುದಿಲ್ಲ. ನನ್ನ ಅಪ್ಪನಿಂದ ದೊರೆತ ಅಂತಹ ಪ್ರೀತಿ ಹಾಗೂ ಬೆಂಬಲ ಇವತ್ತಿನ ‘ನನ್ನೀ ವ್ಯಕ್ತಿತ್ವ ‘ವನ್ನು ರೂಪಿಸಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಎಲ್ಲೂ ಅತಿರೇಕದ ಶಿಸ್ತಿನ ಹೇರಿಕೆ ಇಲ್ಲದೆ, ಹುಡುಗಿಯರು ಹಾಗಿರಬೇಕು - ಹೀಗಿರಬೇಕು ಎನ್ನುವ ಬಿಗುವಿಲ್ಲದೆ, ಅತಿಯಾದ ನಿರೀಕ್ಷೆಯಿಲ್ಲದೆ, ಜವಾಬ್ದಾರಿಯುತ ಸ್ವಾತಂತ್ರ್ಯವನ್ನು ನೀಡಿ ನನ್ನನ್ನು ಬೆಳೆಸಿದ ಕಾರಣದಿಂದ ನಾನು ನಾನಾಗಿ ಬೆಳೆಯಲು ಹಾಗೂ ಸ್ವತಂತ್ರ ಪ್ರವೃತ್ತಿಯನ್ನು ಬೆಳೆಸಿಕೊಳ್ಳಲು ಸಾಧ್ಯವಾಯಿತು ಎನ್ನುವುದು ನನ್ನ ಅನಿಸಿಕೆ. ಇದೆಲ್ಲದರ ಕ್ರೆಡಿಟ್ ನನ್ನಪ್ಪನಿಗೆ ಸಿಗಬೇಕು. ಅಂತಹ ತುಂಬು ವ್ಯಕ್ತಿತ್ವದ, ತಾಯಿಯಂಥ ಮನಸ್ಸಿನ ನನ್ನಪ್ಪನಿಗೆ ತಾಯಂದಿರ ದಿನದ ಪ್ರೀತಿಪೂರ್ವಕ ನಮನಗಳು🙏


Posted 14/5/2026




No comments:

Post a Comment