Thursday, September 1, 2022

ಗಣೇಶ ಚತುರ್ಥಿ ಸಂಭ್ರಮ - 202 2

 ಬುಧವಾರ, 31 ಆಗೋಸ್ಟ್, 2022 

ಪ್ರತೀ ವರ್ಷದಂತೆ ಎಲ್ಲೆಲ್ಲೂ ಗಣೇಶನ ಹಬ್ಬದ ಸಂಭ್ರಮ.




ಗಣೇಶ ಮೂರ್ತಿಯ ಪ್ರತಿಷ್ಟಾಪನೆ, ಪೂಜೆ, ಭಜನೆ, ನೈವೈದ್ಯ, ಮೋದಕ, ಕಾಯಿ ಕಡುಬು ಇತ್ಯಾದಿಗಳ ಸಮರ್ಪಣೆ, ನಂತರ ಅದರ ರುಚಿ ಸವಿಯುವಿಕೆ.





ಆರತಿ 

ಭಜನೆ 

ಬಿರ್ತಿಮನೆ ಬೆಂಗಳೂರಿನಲ್ಲಿ ಸಣ್ಣ ರೀತಿಯ ಗಣೇಶ ಹಬ್ಬದ ಸಂಭ್ರಮ, ಬೆಳಿಗ್ಗೆ ಪೂಜೆ, ಮಧ್ಯಾಹ್ನ ವಿಶೇಷ ಊಟ, (ಮೋದಕ, ಕಾಯಿ ಕಡುಬು) ಇತ್ಯಾದಿ.

ಉಸುಳಿ 

ಮೋದಕ, ಕಾಯಿ ಕಡುಬು ಊಟ 

ಪಂಚ ಕಜ್ಜಾಯ 

ಸಂಜೆ ಬೀದಿಯ ನೆರೆಹೊರೆಯ ಮಕ್ಕಳೊಂದಿಗೆ ಭಜನೆ, ಆರತಿ, ಪ್ರಸಾದ.


ಕವಿತಾ, ಅಥರ್ವ್ 

ಕವಿತಾ, ಅಥರ್ವ್ ಅವರ ವಸತಿ ಸಮುಚ್ಚಯದಲ್ಲಿ ಹಬ್ಬದ ಸಂಭ್ರಮ, ರಿಶಿ ಉತ್ತರ ಭಾರತದಲ್ಲಿ ಚಾರಣ 

ವಿದ್ಯಾ, ರವಿ, ಊರ್ವಿ 

ರವಿ,ವಿದ್ಯಾ ಊರ್ವಿ ಬಿದರ ಹಳ್ಳಿಯವರ ಮನೆಯಲ್ಲಿ (ವಿದ್ಯಾ ತಂದೆ) ಪೂಜೆ, ಸಂಭ್ರಮ.

ಗಣೇಶ ಚತುರ್ಥಿ

ಬುದ್ಧಿವಂತಿಕೆ, ಜ್ಞಾನ, ಹೊಸ ಆರಂಭಗಳ ದೇವತೆ ಗಣೇಶ. ವಿಘ್ನ ವಿನಾಶಕ ಗಣಪತಿಯ ಹಬ್ಬವನ್ನು ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿ(ಚತುರ್ಥಿ)ಯ ದಿನ ಚೌತಿಹಬ್ಬವೆಂದು ಆಚರಿಸಲಾಗುತ್ತದೆ.

ಗಣೇಶನನ್ನು "ಓಂಕಾರ" ಎಂದು ಕರೆಯಲಾಗುತ್ತದೆ. ಗಣೇಶನ ದೇಹಸ್ವರೂಪವು ದೇವನಾಗರಿ ಲಿಪಿಯ ಅಕ್ಷರದಂತೆ ಇರುವುದರಿಂದ ಗಣೇಶನನ್ನು ಇಡೀ ವಿಶ್ವದ ಪ್ರತಿರೂಪ ಎಂದು ಪರಿಗಣಿಸಲಾಗುತ್ತದೆ. ವಿಶ್ವದ ಮೂಲದಲ್ಲಿರುವ ಕಾರಣ ವಿಶ್ವಾಧಾರ, ಜಗದೋದ್ಧಾರ ಎಂದೂ ಕರೆಯಲಾಗುತ್ತದೆ.

ಚೌತಿಯ ಹಿಂದಿನ ದಿನ ತಾಯಿ ಸ್ವರ್ಣಗೌರಿಯ ಹಬ್ಬ. ತಾಯಿಯನ್ನು ಮರಳಿ ಕರೆದುಕೊಂಡು ಹೋಗುವ ಕೆಲಸ ಗಣಪನದಾಗಿರುವುದರಿಂದ, ತಾಯಿ ಭೂಲೋಕಕ್ಕೆ ಬಂದ ಮಾರನೆ ದಿನವೇ ಅಜ್ಜಿ ಮನೆಗೆ ಬಂದು, ಅಜ್ಜಿ ಮನೆಯಲ್ಲಿ ಮಾಡಿದ ವಿವಿಧ ಭಕ್ಷ್ಯ ಭೋಜನಗಳನ್ನು ಭಕ್ಷಿಸಿ ತಾಯಿಯೊಂದಿಗೆ ಹಿಂದಿರುಗುತ್ತಾನೆ.

ಗಜಮುಖಾಸುರನೆಂಬ ರಾಕ್ಷಸ. ವರಬಲದಿಂದ ಮತ್ತನಾಗಿ ದೇವತೆಗಳಿಗೆಲ್ಲಾ ಕಿರುಕುಳ ನೀಡುತ್ತಿದ್ದ. ಅವನ ಕಾಟ ತಾಳಲಾಗದೆ ಅವರೆಲ್ಲರೂ ಗಣೇಶನ ಮೊರೆ ಹೋಗುತ್ತಾರೆ. ಅಭಯ ನೀಡಿದ ಗಜಮುಖ ಗಜಮುಖಾಸುರನೊಂದಿಗೆ ಘೋರ ಯುದ್ಧ ಮಾಡುತ್ತಾನೆ. ಆ ಹೊತ್ತಿನಲ್ಲಿ ಗಣೇಶನ ಒಂದು ಹಲ್ಲು ಮುರಿದು ಹೋಗುತ್ತದೆ. ಅಧಿಕ ಕ್ರೋಧಯುಕ್ತನಾದ ಗಣಪತಿ ಗಜಮುಖಾಸುರನನ್ನು ಬಲವಾಗಿ ಹೊಡೆಯುತ್ತಾನೆ. ಸೋಲಿನ ಅರಿವಾದ ಅಸುರ ಓಡಿಹೋಗಲು ಪ್ರಯತ್ನಿಸುತ್ತಾನೆ. ಗಣೇಶ ಅವನನ್ನು ಹಿಡಿದುಕೊಳ್ಳುತ್ತಾನೆ. ಗಜಮುಖಾಸುರ ಪ್ರಾಣಭಿಕ್ಷೆ ಬೇಡುತ್ತಾನೆ. ಗಣಪತಿ ಕರುಣೆ ತೋರಿ, ಅಸುರನನ್ನು ಇಲಿಯ ರೂಪದಲ್ಲಿ ತನ್ನ ವಾಹನವಾಗಿಸಿಕೊಳ್ಳುತ್ತಾನೆ.

ದೇವಲೋಕದಲ್ಲಿ ದೇವೇಂದ್ರ ಅಪ್ಸರೆಯರೊಂದಿಗೆ ತಮಾಷೆಮಾಡುತ್ತಾ ಸಂತೋಷದಿಂದ ಕಾಲಕಳೆಯುತ್ತಿದ್ದ. ಅದೇ ಸಮಯದಲ್ಲಿ ಅಲ್ಲೇ ಇದ್ದ ಕ್ರೌಚ್ ಎಂಬ ಗಂಧರ್ವ ಅದರ ಪರಿವೆಯೇ ಇಲ್ಲದೆ ಗಂಭೀರವಾಗಿ ಕುಳಿತಿದ್ದ. ಸಿಟ್ಟಿಗೆದ್ದ ಇಂದ್ರ ಅವನನ್ನು ಇಲಿಯಾಗೆಂದು ಶಪಿಸಿದ. ಶಾಪಗ್ರಸ್ಥ ಇಲಿ ಕ್ರೌಚ್ ಪರಾಶರ ಮುನಿಗಳ ಆಶ್ರಮದಲ್ಲಿ ಬಿದ್ದ. ಇಲಿ ಆಶ್ರಮವಾಸಿಗಳ ಬಟ್ಟೆಗಳನ್ನೆಲ್ಲಾ ಕಚ್ಚಿ ಧ್ವಂಸಗೊಳಿಸತೊಡಗಿತು. ಇಲಿಯ ಕಾಟ ತಾಳಲಾಗದೆ ಮುನಿಗಳು ಗಣೇಶನ ಮೊರೆ ಹೋದರು. ಗಣಪತಿ ಅವರ ಕಷ್ಟ ನಿವಾರಣೆ ಮಾಡುವುದಾಗಿ ಮಾತು ಕೊಟ್ಟ. ವಿಷಯ ತಿಳಿದ ಕ್ರೌಚ್ ಪ್ರಾಣಭಯದಿಂದ ಅಡಗಿ ಕುಳಿತುಕೊಂಡ. ಆದರೆ ಗಣೇಶ ಅವನನ್ನು ಬಿಡದೆ ಹೊರಗೆ ಎಳೆದು ತಂದ. ಹೆದರಿದ ಕ್ರೌಚ್ ಗಣಪತಿಯ ಪೂಜೆ ಮಾಡತೊಡಗಿದ ಮತ್ತು ತನ್ನನ್ನು ರಕ್ಷಿಸುವಂತೆ ಬೇಡಿಕೊಂಡ. ವಿಘ್ನೇಶ್ವರ ಅವನಿಗೆ ಅಭಯ ನೀಡಿ, ತನ್ನ ವಾಹನವನ್ನಾಗಿ ಮಾಡಿಕೊಂಡ.

ಪಾರ್ವತಿ ತನ್ನ ಮೈ ಕೊಳೆಯಿಂದ ಒಂದು ಮಗುವನ್ನು ಸೃಷ್ಟಿಸಿ, ಯಾರೂ ಒಳಬಾರದಂತೆ ಬಾಗಿಲಿಗೆ ಕಾವಲು ನಿಲ್ಲಿಸಿ, ತಾನು ಸ್ನಾನ ಮಾಡುತ್ತಿರುತ್ತಾಳೆ. ಆಗ ಅಲ್ಲಿಗೆ ಬಂದ ಶಿವನನ್ನು ತಡೆದಾಗ, ಕ್ರೋಧಗೊಂಡ ಶಿವ ಅವನ ತಲೆ ತುಂಡರಿಸಿದ. ನಂತರ ಪಾರ್ವತಿಯನ್ನು ಸಮಾಧಾನ ಪಡಿಸಲು ಆನೆಯ ತಲೆಯನ್ನು ಸೇರಿಸಿ ಜೀವ ಕೊಟ್ಟು ಗಜಮುಖನನ್ನಾಗಿ ಮಾಡಿದನು. ತನ್ನ ಗಣಗಳ ಅಧಿಪತಿಯಾಗಿ ಮಾಡಿ ಅವನನ್ನು ಗಣಪತಿಯಾಗಿಸಿದನು.

ಗಣೇಶ ಪ್ರಥಮಪೂಜಿತನಾಗಬೇಕೆಂದು ಶಿವನ ನಿರ್ಧಾರ. ಆದರೆ ತ್ರಿಪುರಮರ್ದನದ ಕಾಲದಲ್ಲಿ ಶಿವನೇ ಇದನ್ನು ಮರೆಯುತ್ತಾನೆ. ಪರಿಣಾಮವಾಗಿ ಯುದ್ಧದಲ್ಲಿ ಸೋಲುವ ಸ್ಥಿತಿಗೆ ಬರುತ್ತಾನೆ. ಆಗ ಶಿವನಿಗೆ ತಾನು ಯುದ್ಧದ ಮೊದಲು ಗಣೇಶನನ್ನು ಪೂಜಿಸಲಿಲ್ಲ ಎಂದು ನೆನಪಾಗುತ್ತದೆ. ಗಣೇಶನ ಪೂಜೆ ಮಾಡಿ ತ್ರಿಪುರ ಸಂಹಾರ ಯಶಸ್ವಿಯಾಗಿ ನೆರವೇರಿಸುತ್ತಾನೆ.

ಗಣೇಶ ಒಮ್ಮೆ ಆಟವಾಡುತ್ತಾ ಒಂದು ಬೆಕ್ಕನ್ನು ಗಾಯಗೊಳಿಸುತ್ತಾನೆ. ಮನೆಗೆ ಬಂದು ನೋಡುವಾಗ ತಾಯಿಯ ದೇಹದ ಮೇಲೆ ಗಾಯ!  ಆಶ್ಚರ್ಯದಿಂದ ಏನಾಯಿತೆಂದು ಕೇಳಿದಾಗ ಅದಕ್ಕೆ ಗಣಪತಿಯೇ ಕಾರಣವೆಂದು ಹೇಳುತ್ತಾಳೆ. ಪಾರ್ವತಿ ತಾನೇ ದೇವಿ, ಎಲ್ಲಾ ಜೀವಿಗಳಲ್ಲಿ ಅಂತರ್ಗತಳಾಗಿ ಇರುವವಳು. ಬೆಕ್ಕಿಗೆ ಮಾಡಿದ ಗಾಯ ತನ್ನ ದೇಹದ ಮೇಲೆ ಕಾಣಿಸಿದೆ ಎನ್ನುತ್ತಾಳೆ. ಆಗ ಗಣೇಶನಿಗೆ ಸ್ತ್ರೀಯರೆಲ್ಲಾ ತನ್ನ ತಾಯಿಯ ಪ್ರತಿರೂಪವೆಂಬ ಜ್ಞಾನೋದಯವಾಗಿ, ತಾನು ಮುಂದೆ ಮದುವೆಯಾಗದಿರುವ ನಿರ್ಧಾರ ತೆಗೆದುಕೊಳ್ಳುತ್ತಾನೆ. ಆಜನ್ಮ ನೈಷ್ಠಿಕ ಬ್ರಹ್ಮಚಾರಿಯಾಗಿ ಉಳಿಯುತ್ತಾನೆ.

ಯಾವುದೇ ಕಾರ್ಯವನ್ನು ಮಾಡಬೇಕಾದರೂ ಬುದ್ಧಿ ಬೇಕು. ಬುದ್ಧಿಪೂರ್ವಕ ಮಾಡಿದ ಕೆಲಸ ಸಿದ್ಧಿಯಾಗುತ್ತದೆ. ಪ್ರಥಮಪೂಜಿತ ಬ್ರಹ್ಮಚಾರಿ ಸಿದ್ಧಿಬುದ್ಧಿಪ್ರದಾಯಕ ವಿಘ್ನವಿನಾಯಕನಿಗೆ ಬ್ರಹ್ಮನ ಮಕ್ಕಳಾದ ಸಿದ್ಧಿ ಬುದ್ಧಿ ಇಬ್ಬರು ಹೆಂಡತಿಯರು ಎಂಬ ಕಲ್ಪನೆಯೂ ಇದೆ. ಸಿದ್ಧಿಯಲ್ಲಿ ಕ್ಷೇಮ, ಬುದ್ಧಿಯಲ್ಲಿ ಲಾಭ ಎಂಬಿಬ್ಬರು ಮಕ್ಕಳು ಎಂಬ ಕತೆಯೂ ಇದೆ.

ಒಮ್ಮೆ ಗಣೇಶ ಹೊಟ್ಟೆ ತುಂಬಾ ಊಟ ಮಾಡಿಕೊಂಡು, ಇಲಿಯನ್ನೇರಿ ವಿಹಾರಕ್ಕೆ ತೆರಳುತ್ತಾನೆ. ದಾರಿಯಲ್ಲಿ ಹಾವೊಂದನ್ನು ನೋಡಿದ ಇಲಿ ಹೆದರಿ, ಗಣೇಶನನ್ನು ಬೀಳಿಸುತ್ತದೆ. ಆಗ ಗಣೇಶನ ಒಂದು ದಂತ ಮುರಿಯುತ್ತದೆ. ಹಾವನ್ನು ಹೊಟ್ಟೆಗೆ ಸುತ್ತಿಕೊಂಡು, ಚೆಲ್ಲಾಪಿಲ್ಲಿಯಾದ ಮೋದಕಗಳನ್ನು ಸಂಗ್ರಹಿಸಲು ಕಷ್ಟಪಡುತ್ತಿರುವ ಗಣಪತಿಯನ್ನು ಕಂಡು ಚಂದ್ರ ಅವಹೇಳನ ಮಾಡುವಂತೆ ನಗುತ್ತಾನೆ. ಕ್ರೋಧಗೊಂಡ ಗಣೇಶ ಇಂದಿನಿಂದ ಚಂದ್ರನನ್ನು ಯಾರೂ ನೋಡಬಾರದು. ಹಾಗೆ ನೋಡಿದರೆ ಅವರಿಗೆ ಅಪವಾದ ಬರಲೆಂದು ಶಪಿಸುತ್ತಾನೆ. ಅಹಂಕಾರ ಇಳಿದು ಚಿಂತಾಕ್ರಾಂತನಾದ ಚಂದ್ರ ವಿನೀತನಾಗಿ ಗಣೇಶನ ಮನವೊಲಿಸುವ ಪ್ರಯತ್ನ ಮಾಡುತ್ತಾನೆ. ಗಣಪತಿ ಪ್ರಸನ್ನನಾಗಿ ಶಾಪದ ತೀಕ್ಷ್ಣತೆಯನ್ನು ಕಡಿಮೆಗೊಳಿಸುತ್ತಾನೆ. ಗಣೇಶಚತುರ್ಥಿಯಂದು ಮಾತ್ರ ಚಂದ್ರನನ್ನು ನೋಡಿದರೆ ಅಪವಾದ ಬರಲಿ ಎಂದು ಶಾಪವನ್ನು ಬದಲಿಸುತ್ತಾನೆ. ಅಪವಾದಕ್ಕೆ ಗುರಿಯಾದವರು ಶುದ್ಧ ಬಿದಿಗೆಯ ದಿನ ಚಂದ್ರನನ್ನು ನೋಡಿದರೆ ಮತ್ತು ಸ್ಯಮಂತಕಮಣಿಯ ಕಥೆ ಕೇಳಿದರೆ ಅಪವಾದದಿಂದ ಮುಕ್ತರಾಗುತ್ತಾರೆ ಎಂದು ಅನುಗ್ರಹಿಸುತ್ತಾನೆ.

ಹೀಗೆ ಗಣೇಶನನ್ನು ಕುರಿತ ಕಥೆಗಳು ಅನೇಕ. ಕಥೆಗಳು ಏನಾದರೂ ಇರಲಿ, ಎಷ್ಟಾದರೂ ಇರಲಿ; ನಾವಂತೂ ಚೌತಿಹಬ್ಬದ ಸಂಭ್ರಮದ ಸವಿಯನ್ನು ಸವಿಯೋಣ. ಮೋದಕಪ್ರಿಯ ವಿಘ್ನೇಶ್ವರನ ಅನುಗ್ರಹ ಪಡೆಯೋಣ.

ಸಂಗ್ರಹ 

ಬರೆದಿರುವುದು 2/9/2022 

No comments:

Post a Comment