Wednesday, September 7, 2022

H SRIDHAR HANDE (ಎಚ್. ಶ್ರೀಧರ್ ಹಂದೆ)

 8 ಸಪ್ಟಂಬರ 2022 


ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ, ನಿರ್ದೇಶಕ, ರಂಗಭೂಮಿ ಕಲಾವಿದ ಕೋಟದ ಎಚ್. ಶ್ರೀಧರ ಹಂದೆಗೆ ಮುದ್ದಣ ಪ್ರಶಸ್ತಿ..!
: ಬೆಂಗಳೂರಿನ ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್ ನಿಯಮಿತ ಸಂಸ್ಥೆಯು ಪ್ರತಿವರ್ಷ ನೀಡುವ 2021 ರ ಸಾಲಿನ ಮಹಾ ಕವಿ ಮುದ್ದಣ ಪ್ರಶಸ್ತಿಗೆ ಈ ಬಾರಿ ಹಂಗಾರಕಟ್ಟೆ ಚೇತನಾ ಹೈಸ್ಕೂಲ್ ನಲ್ಲಿ ಹಿಂದಿ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯಾರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ರಾಷ್ಟ್ರಪ್ರಶಸ್ತಿ ಪುರಸ್ಕøತ, ಸಾಲಿಗ್ರಾಮ ಮಕ್ಕಳ ಮೇಳದ ಸ್ಥಾಪಕ ನಿರ್ದೇಶಕ, ರಂಗಭೂಮಿ ಕಲಾವಿದ
ಕೋಟದ ಎಚ್. ಶ್ರೀಧರ ಹಂದೆ ಭಾಜನರಾಗಿದ್ದಾರೆ.
ಇದೀಗ 86 ರ ಇಳಿವಯಸ್ಸಿನ ಹಂದೆಯವರು ಮೂರು ದಶಕಗಳ ಕಾಲ ಶಿಕ್ಷಕರಾಗಿ, ಶಿಕ್ಷಣದಲ್ಲಿ ರಂಗಕಲೆಗಳನ್ನೂ ಅಳವಡಿಸಿಕೊಂಡು ಇತಿಹಾಸ, ವಿಜ್ಞಾನ, ಮತ್ತು ಭಾಷಾ ಪಠ್ಯಗಳನ್ನು ಬೋಧನೆಮಾಡಿದವರು.
ಕಾರ್ಕಡ ಶ್ರೀನಿವಾಸ ಉಡುಪರೊಂದಿಗೆ 1975 ರಲ್ಲಿ ಸಾಲಿಗ್ರಾಮ ಮಕ್ಕಳ ಮೇಳವನ್ನು ಕಟ್ಟಿ, ಯಕ್ಷಗಾನವನ್ನು
ಮೊದಲು ವಿದೇಶಕ್ಕೆ ಕೊಂಡೊಯ್ದ ದಾಖಲೆಗೆ ಪಾತ್ರರಾದವರು. ಯಕ್ಷ ಸಂಘಟಕ, ನಿರ್ದೇಶಕ ಮಾತ್ರವಲ್ಲದೆ ಸ್ವತಃ ವೇಷಧಾರಿ, ಭಾಗವತ, ಪ್ರಸಂಗಕವಿಯೂ ಆಗಿ ಗುರುತಿಸಿಕೊಂಡಿದ್ದಾರೆ.
ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು 50 ಕ್ಕೂ ಹೆಚ್ಚು ವರ್ಷಗಳ ಕಾಲ ಗಣನೀಯ ಸೇವೆ ಸಲ್ಲಿಸಿದ ಹಂದೆಯವರಿಗೆ ಸೆಪ್ಟಂಬರ್ 18 ರಂದು ಬೆಂಗಳೂರಿನ ಬಸವನಗುಡಿ ಬುಲ್ ಟೆಂಪಲ್ ರಸ್ತೆಯಲ್ಲಿರುವ ಮರಾಠ ಹಾಸ್ಟೆಲ್ನ ಸಭಾವೇದಿಕೆಯಲ್ಲಿ ನಡೆಯುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ 25000 ನಗದು ಪುರಸ್ಕಾರದೊಂದಿಗೆ ಮುದ್ದಣ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಪ್ರಕಟಣೆ ತಿಳಿಸಿದೆ.






ಪ್ರಶಸ್ತಿ ಪುರಸ್ಕಾರ ದೊರೆತ ಕೂಡಲೇ "ರಾತ್ರಿಯಿಡೀ ಕಸುಬು ಮಾಡುವ ಕಲಾವಿದರಿಗೆ ಸಿಗಬೇಕಿರುವ ಗೌರವ ಇದು!! ನನಗಲ್ಲ" ಎಂದು ಚಡಪಡಿಸುತ್ತಲೇ ಆ ಕಾರಣಕ್ಕೆ ಅಭಿನಂದನೆಗಳ ಸುರಿಮಳೆಯಾದಾಗ ಮಗುವಿನಂತೆ ಹಿಗ್ಗುವ, ಯಕ್ಷಗಾನದ ಸಾಂಪ್ರದಾಯಿಕ ಚೆಲುವಿನ ಉಳಿವಿಗೆ ಇಂದಿಗೂ ಬದ್ಧರಾಗಿರುವ ನನ್ನ ತಂದೆ ಶ್ರೀಧರ ಹಂದೆಯವರಿಗೆ ಮುದ್ದಣ ಪ್ರಶಸ್ತಿ ಬಂದಿರುವ ಈ ಹೊತ್ತು ಯಕ್ಷಗಾನದ ವಿದ್ವಾಂಸರಾದ ರಾಘವ ನಂಬಿಯಾರ್ ಬರೆದ ಬರೆಹ: - ಅಭಿಲಾಷ ಹಂದೆ
ಶ್ರೀಧರ ಹಂದೆ ಅವರಿಗೆ ಅಭಿನಂದನೆಗಳು
ಯಕ್ಷಗಾನದ ಪರಿಪೂರ್ಣ ಕಲಾವಿದರಾದ ಶಿಕ್ಷಕವರೇಣ್ಯ ಎಚ್.ಶ್ರೀಧರ ಹಂದೆ ಅವರಿಗೆ ಬೆಂಗಳೂರಿನ ಕಲಾಪೋಷಕರ 'ಮುದ್ದಣ ಪ್ರಶಸ್ತಿ' ಆಯ್ಕೆ ಬಂದಿರುವುದಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಅರ್ಪಿಸುವೆ.
ಕಳೆದ ಅರ್ಧ ಶತಮಾನದ ಕಾಲ ಅವರು ಕೈಗೊಂಡ ಕಲಾರಾಧನೆ ನನ್ನ ಕಣ್ಣೆದುರಿಗೆ ನಡೆದಿರುವಂಥದು. ತಾನು ಕಂಡು ಮೆಚ್ಚಿದ ಮಾದರಿ ಕಲಾಕಾರರ ನಾಟ್ಯ, ಅಭಿನಯ, ವೇಷವಿಧಾನ ಇತ್ಯಾದಿಗಳನ್ನು ಅಭ್ಯಸಿಸಿ ವಶಗೊಳಿಸಿದ್ದಲ್ಲದೆ ಹವ್ಯಾಸಿ ಪರಿಣತರ ತಂಡಗಳಲ್ಲಿ ಪುಂಡುವೇಷದಲ್ಲಿ ಸ್ಥಳೀಯ ರಂಗಸ್ಥಳದಲ್ಲಿ ಮಾತ್ರವಲ್ಲ ದೇಶದ ನಾನಾ ಕಡೆಗಳಲ್ಲೂ ಮಿಂಚಿ ಕಾಣಿಸಿದ ಹಂದೆಯವರು ಬಡಗುತಿಟ್ಟಿನ ಅಭಿಜಾತ ಶೈಲಿಯೊಂದರ ಅಧ್ಯಯನ,ಪ್ರಯೋಗಗಳಿಂದ ಪ್ರಾತಿನಿಧಿಕ ಭಾಗವತರಾದರು.
ಹಿರಿಯ ಶಿಕ್ಷಕ ಕಾರ್ಕಡ ಶ್ರೀನಿವಾಸ ಉಡುಪರೊಂದಿಗೆ ಇವರು ಕಟ್ಟಿದ 'ಸಾಲಿಗ್ರಾಮ ಮಕ್ಕಳ ಮೇಳ' ಸಾಂಪ್ರದಾಯಿಕ ಯಕ್ಷಗಾನ ಆಟದ ಪ್ರದರ್ಶನದಿಂದ ವಿಶ್ವವಿಖ್ಯಾತವಾಯಿತೆಂದರೆ ಮುಖಸ್ತುತಿಯೆನಿಸದು. ಎಲ್ಲಕ್ಕಿಂತ ಇವರಿಬ್ಬರು ದಂತಕತೆಗಳಾದ ಹಾರಾಡಿ ರಾಮಗಾಣಿಗರು, ಹಾರಾಡಿ ಕೃಷ್ಣಗಾಣಿಗರು, ಮಟ್ಪಾಡಿ (ಬ್ರಹ್ಮಾವರ) ವೀರಭದ್ರ ನಾಯಕ್ ಮೊದಲಾದವರ ವಿಭಿನ್ನವಾದ ಶೈಲಿಯ ನಾಟ್ಯಾಭಿನಯವನ್ನು ಎಳೆಯ ಮಕ್ಕಳಿಗೆ ಕಲಿಸಿ ಅದು ಮೂಲ ಕಲಾವಿದರ ಕಾಲಾನಂತರವೂ ಬಹುಕಾಲ ರಂಗಸ್ಥಳದಲ್ಲಿ ಬಾಳುವಂತೆ ಮಾಡಿದ್ದಾರೆ. ಈ ನಾಟ್ಯಶೈಲಿ ಮರೆವೆಗೆ ಸಲ್ಲುತ್ತದಲ್ಲ ಎಂಬ ಆತಂಕದಿಂದಲೇ ತಾವಿಬ್ಬರು ಮಕ್ಕಳ ಮೇಳ ರೂಪಿಸಿರುವುದು ಎಂದು ನನ್ನಲ್ಲಿ ಅವರು ಹೇಳಿದ್ದರು.
ಮಕ್ಕಳಿಗೆ ನಾಟ್ಯಾಭಿನಯ ಕಲಿಸಿ ಫಲಪ್ರದಗೊಳಿಸುವುದು ಸುಲಭದ ಮಾತಲ್ಲ. ಯಕ್ಷಗಾನದ ಸೆಳೆತದಿಂದ ಶಾಲಾ ವಿದ್ಯಾಭ್ಯಾಸ ಕುಂಠಿತವಾಗಬಾರದೆಂಬ ಎಚ್ಚರದೊಂದಿಗೆ ಮೇಳದ ಮಕ್ಕಳಿಗೆ ಹಿಂದುಳಿದ ಪಠ್ಯ ವಿಷಯಗಳಲ್ಲಿ ಪ್ರತ್ಯೇಕ ಟ್ಯೂಷನ್ ನೀಡಿ ಆಧರಿಸಿರುವುದು ಹಂದೆಯವರ ದೊಡ್ಡದಾದ ಕೊಡುಗೆ.
ಅವರ ಶೈಲಿಯ ಹಾಡುಗಾರಿಕೆಯನ್ನು ಕಾಪಿಡುವ ಉತ್ಸಾಹ ಎಳೆಯ ತಲೆಮಾರಿನಲ್ಲಿ ಇಲ್ಲವಾದುದು ಅಚ್ಚರಿಯ ಮಾತು.
ಅದಕ್ಕೆ ಅವರೇನೂ ಮಾಡುವಂತಿಲ್ಲ.
ಹಂದೆಯವರ ವಿಶ್ವಾಸಪೂರ್ವಕ ಸ್ನೇಹಾಚಾರ, ಅರಿವಿನ ವಿತರಣೆ ಪ್ರವೃತ್ತಿ ಆದರ್ಶವಾದುದು. ಅವರಿಗೆ ಅಭಿನಂದನೆ ಹೇಳುವ ಇನ್ನಷ್ಟು ಸಂದರ್ಭಗಳು ಬರಲೆಂದು ಆಶಿಸುವೆ.
ರಾಘವ ನಂಬಿಯಾರ್







10/12/2022

ಶುಭ ಹಾರೈಸಿದ ಹಿರಿಯ ಕಿರಿಯ ಬಂಧುಗಳೆಲ್ಲರಿಗೂ ಕೃತಜ್ಞತೆಗಳು, ನಿಮ್ಮ ಅಭಿಮಾನ ಪ್ರೀತಿ ಮಮತೆ ಪ್ರೋತ್ಸಾಹದಿಂದ ಈ ಪ್ರಶಸ್ತಿ ಲಭಿಸಿದೆ ಎಂದು ತಿಳಿಯುತ್ತೇನೆ ಸರ್ವರಿಗೂ ವಂದನೆಗಳು .
-- ಎಚ್ ಶ್ರೀಧರ ಹಂದೆ
ಪಟೇಲರ ಮನೆ ,ಕೋಟ.
ಜೋಡಿಸಿರುವುದು.... 11/9/2022 

No comments:

Post a Comment