Tuesday, April 11, 2023

ಕಡಿಗೆ ಪಲ್ಯ - ಶೋಭಾ ಸೋಮಯಾಜಿ

 ಶನಿವಾರ, 8/4/2023 



ಇವತ್ತು ಮಧ್ಯಾಹ್ನ ಶೈಲನ ಮನೆಯಲ್ಲಿ ಊಟ ಮಾಡಿದೆ. ಅನ್ನ, ಸಾರು, ಕಡಿಗೆ ಪಲ್ಯ ಮಾಡಿದ್ದಳು. ರುಚಿಕರವಾಗಿತ್ತು. ಆದರೆ ಕಡಿಗೆ ಕತ್ತರಿಸಿದ ರೀತಿ ಸರಿಯಾಗಿರಲಿಲ್ಲ. ಅದನ್ನು ಅವಳ ಮನೆಯ ಕೆಲಸದವಳು ಕತ್ತರಿಸಿದ್ದಾಗಿತ್ತು. ನಾನು ಎಂದಿನಂತೆ ಕಾಮೆಂಟ್ ಮಾಡುತ್ತಾ ಅವಳ ಕಾಲೆಳೆದೆ. ಆಗ ನಮಗಿಬ್ಬರಿಗೂ ನಮ್ಮ ಅಜ್ಜಯ್ಯ ಕಡಿಗೆ ಕತ್ತರಿಸುತ್ತಿದ್ದ ರೀತಿ ನೆನಪಾಯಿತು.

ಅಜ್ಜಯ್ಯನ ಮನೆಯ ಹಿಂಭಾಗದಲ್ಲಿ ಒಂದು ಹಲಸಿನ ಮರವಿದೆ. ಅದರಲ್ಲಿ ಹಲಸಿನ ಮಿಡಿ ಹದವಾಗಿ ಬಲಿತಾಗ ಅಜ್ಜಯ್ಯ ಅದನ್ನು ತಂದು, ಅದರ ಮೇಣ ತೆಗೆದು, ಅದನ್ನು ಒಂದು ಗೆರಸಿಯ ಮೇಲಿಟ್ಟು, ಮಧ್ಯದ ಭಾಗಕ್ಕೆ ಒಂದು ಗೂಟ ನೆಟ್ಟು ತದನಂತರದಲ್ಲಿ ಆ ಕಡಿಗೆಯ ಮುಳ್ಳು ಮುಳ್ಳು ಸಿಪ್ಪೆಯನ್ನು ಸವರಿ ತೆಗೆಯುತ್ತಿದ್ದರು. ಆ ಗೆರಸಿಯಲ್ಲಿದ್ದ ಸಿಪ್ಪೆಯ ಕಸವನ್ನು ಸ್ವಚ್ಛಗೊಳಿಸಿ, ಆ ಗೂಟವನ್ನು ಹಿಡಿದು ಕಡಿಗೆಯನ್ನು ಕತ್ತಿಯಿಂದ ಒಂದೇ ಹದದಲ್ಲಿ ಕೊಚ್ಚುತ್ತಿದ್ದರು. ಅದರಲ್ಲೊಂದು ತಾದಾತ್ಮ್ಯ ತನ ಕಂಡು ಬರುತ್ತಿತ್ತು. ಒಂದೇ ಹದದಲ್ಲಿ ಕತ್ತರಿಸಲ್ಪಟ್ಟ ಕಡಿಗೆ ಗೆರಸಿಯ ಮೇಲೆ ಒಟ್ಟಾಗುತ್ತಿತ್ತು. ಸಣ್ಣಗೆ ಕತ್ತರಿಸಿದ ಕ್ಯಾಬೇಜ್ ತರಹ ಕಾಣುತ್ತಿತ್ತು. ಕೆಲವೊಮ್ಮೆ ಕಡಿಗೆ ಜಾಸ್ತಿ ಬಲಿತದ್ದಾದರೆ ಅದರೊಳಗಿನ ಬೀಜ ಸ್ವಲ್ಪ ದೊಡ್ಡದಾಗಿ ಕತ್ತರಿಸಲ್ಪಡುತ್ತಿತ್ತು. 
ಕಡಿಗೆ ಸಣ್ಣದಾಗಿ ಕೊಚ್ಚಲ್ಪಟ್ಟ ನಂತರದ ಕೆಲಸ ಅಡುಗೆ ಮಾಡುವವರದಾಗಿತ್ತು. ಬಾಣಲೆಯಲ್ಲಿ ಒಗ್ಗರಣೆ ಹಾಕಿ, ಹೆಚ್ಚಿದ ಕಡಿಗೆಯನ್ನು ತೊಳೆದು ಅದಕ್ಕೆ ಹಾಕಿ ಉಪ್ಪು, ಹುಳಿ, ಬೆಲ್ಲ, ಅರಿಶಿನ ಹಾಕಿ ಬೇಯಿಸಿ ತದನಂತರದಲ್ಲಿ ರುಬ್ಬಿದ ಕಾಯಿಸಾಸಿವೆ ಹಾಕಿ ಮಗುಚಿ ಸ್ವಲ್ಪ ಸಮಯದ ನಂತರ ಬೆಂಕಿ ಆರಿಸಿದರೆ ಅನ್ನದೊಡನೆ ಕಲೆಸಿ ತಿನ್ನಲು ಕಡಿಗೆ ಪಲ್ಯ ಸಿದ್ಧ. 
ಹಲಸಿನ ಕಾಲದಲ್ಲಿ ಅದರ ತರಹೇವಾರಿ ಅಡುಗೆ ಮಾಡಿ ತಿನ್ನುವುದೇ ಆಗ ಒಂದು ಸಂಭ್ರಮವಾಗಿತ್ತು. ಕಡಿಗೆ ಹುಳಿ, ಸಾಸಿವೆ, ಪಲ್ಯ …. ಹೀಗೆ ಒಂದೇ ಎರಡೇ! ಎಲ್ಲವೂ ಬಹಳ ರುಚಿ. ಈಗ ಮನಸ್ಸು ಅದನ್ನೆಲ್ಲ ತಿನ್ನಲು ಬಯಸಿದರೂ ಹಾಳು ಗ್ಯಾಸ್ಟ್ರಿಕ್ ಪ್ರಾಬ್ಲಂ ಅವುಗಳನ್ನು ತಿನ್ನದಂತೆ ಬಾಯಿಗೆ ಲಗಾಮು ಹಾಕುತ್ತದೆ. ಇದು ಬಹಳಷ್ಟು ಜನರು ಅನುಭವಿಸುತ್ತಿರುವ ಕಷ್ಟ ತಾನೆ?

ಶಿಕ್ಷಕರೊಡನೆ ಹೊರ ಸಂಚಾರ

ಶಿಕ್ಷಕರ ನಡುವಣ "ಬಂಧ"ವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಹೊಂಗಿರಣ ತನ್ನ ಪ್ರತಿ ವರ್ಷದ ಶೈಕ್ಷಣಿಕ ವರ್ಷವನ್ನು ಶಿಕ್ಷಕರ ಔಟಿಂಗ್ ನೊಂದಿಗೆ ಕೊನೆಗೊಳಿಸುತ್ತದೆ. ಈ ಬಾರಿಯ ಔಟಿಂಗಿಗೆ ಆರಿಸಿಕೊಂಡ ತಾಣ ಬಾಳೆಹೊನ್ನೂರಿನಿಂದ ಹನ್ನೊಂದು ಕಿಮೀ ದೂರದಲ್ಲಿರುವ ಕಡಬಗೆರೆಯ ಕಾಸಲ್ ಹೋಂ ಸ್ಟೇ. ಪೀಟರ್ ಎನ್ನುವವರು ತನ್ನ ಹನ್ನೊಂದು ಎಕರೆಯ ಕಾಫಿ ಪ್ಲಾಂಟೇಶನ್ ನಲ್ಲಿ ಸುಂದರವಾಗಿ ಸೃಷ್ಟಿಸಿರುವ ಹೋಂ ಸ್ಟೇ ಇದು! ಅಲ್ಲಿರುವ ಎರಡು ಟ್ರೀ ಹೌಸ್, ಎರಡು ಡಾರ್ಮಿಟರಿ ಹಾಗೂ ಟೆಂಟ್ಗಳಲ್ಲಿ ಏಕಕಾಲದಲ್ಲಿ ಮೂವತ್ತರಿಂದ ಮೂವತ್ತೈದು ಜನರು ಉಳಿಯುವ ಅವಕಾಶವಿದೆ. ಅಡ್ವೆಂಚರ್ ಆಕ್ಟಿವಿಟಿಗಳನ್ನು ಬೇಸ್ ಆಗಿ ಇಟ್ಟುಕೊಂಡು ಹೋಂ ಸ್ಟೇ ನಡೆಸುತ್ತಿರುವ ಪೀಟರ್ ಬೆಳಗಿನ ಐದಾರು ಗಂಟೆಗಳಲ್ಲಿ ಗುಡ್ಡಗಳನ್ನು ಹತ್ತಿಸಿ, ಕಾಡುಮೇಡು ಸುತ್ತಿಸಿ, ಭದ್ರಾ ನದಿಯಲ್ಲಿ ಈಜಾಡಿಸಿ, ಪ್ರೀತಿಯಿಂದ ಉಪಚರಿಸಿ ಎಲ್ಲರನ್ನೂ ಚೆನ್ನಾಗಿ ನೋಡಿಕೊಳ್ಳುವ ವ್ಯಕ್ತಿ. ಭದ್ರೆಯ ತೀರದಲ್ಲಿಯೇ ಹುಟ್ಟಿ ಬೆಳೆದ ಇವರಿಗೆ ಭದ್ರೆಯ ಒಡಲು ತವರಿದ್ದಂತೆ. ಇವರು ನೀರಲ್ಲಿ ಮುಳುಗಿ ಸತ್ತವರ ಶವಗಳನ್ನು ಮೇಲೆತ್ತುತ್ತಾರೆ ಹಾಗೂ ಹಾವುಗಳನ್ನು ಹಿಡಿದು ಅಭಯಾರಣ್ಯಕ್ಕೆ ಬಿಡುತ್ತಾರೆ.
ಏಪ್ರಿಲ್ 6ರ ಸಾಯಂಕಾಲ ಹೋಂ ಸ್ಟೇ ತಲುಪಿದ ನಾವೆಲ್ಲರೂ ರಿಫ್ರೆಶ್ ಆಗಿ ಹೊರ ಆವರಣದ ಊಟದ ಹಾಲ್ ನಲ್ಲಿ ಬಿಸಿಬಿಸಿ ಟೀ ಕುಡಿದು ಇಡೀ ಪ್ಲಾಂಟೇಶನ್ ಅನ್ನು ಸುತ್ತಿ ಅಲ್ಲಿರುವ ಬಗೆಬಗೆಯ ಹಣ್ಣುಗಳ ಮರಗಳಿಗೆ ಲಗ್ಗೆಯಿಟ್ಟು ಮುಲಾಜಿಲ್ಲದೆ ಮಂಗಗಳಂತೆ ಎಲ್ಲವನ್ನೂ ಧ್ವಂಸಗೊಳಿಸಿ ಬಿಟ್ಟೆವು🤫😉 ನಂತರದಲ್ಲಿ ರಾತ್ರಿಯ ಊಟ ಹಾಗೂ ಹಾಡುಹಸೆಯ ನಂತರ ನಮ್ಮ ನಮ್ಮ ಬಿಡಾರಗಳಲ್ಲಿ ನಿದ್ರೆ. ಬೆಳಗಿನ ಏಳೂವರೆಗೆ ಟೀ ಕುಡಿದು ಟಿಫಿನ್ ಬಾಕ್ಸ್ ಗಳಲ್ಲಿ ಪಲಾವ್ ಹಾಕಿಕೊಂಡು ಪೀಟರ್ ರೊಂದಿಗೆ ನಮ್ಮೆಲ್ಲರ ಟ್ರೆಕಿಂಗ್ ಪ್ರಾರಂಭ. ಮೊದಮೊದಲು ಸಾಗಿದ್ದು ಕಾಫಿ ಪ್ಲಾಂಟೇಶನ್ ನಡುವಿರುವ ಕೊರಕಲು ದಾರಿಯಲ್ಲಿ! ನಂತರ ಶುರುವಾಯಿತು ನೋಡಿ ಗುಡ್ಡ ಹತ್ತುವ ಕಾರ್ಯ. ನನ್ನ ನಡಿಗೆಯ ಆಸರೆಗೆ ನನ್ನ ಜೊತೆಗಿದ್ದದ್ದು ಒಂದು ಮರದ ಕೊಂಬೆ, ನನ್ನ ಮಗಳು ಹಾಗೂ ನಾಲ್ಕಾರು ಶಿಕ್ಷಕರು. ನಾನೋ ಏದುಸಿರು ಬಿಡುತ್ತಾ ಗುಡ್ಡ ಹತ್ತುತ್ತಾ, ಅಲ್ಲಲ್ಲಿ ದಣಿವಾರಿಸಿಕೊಳ್ಳುತ್ತಾ, ಧಾರಾಕಾರವಾಗಿ ಬೆವರುತ್ತಾ ದುರ್ಗಮ ದಾರಿಯನ್ನು ಕ್ರಮಿಸುತ್ತಿದ್ದರೆ ನನ್ನ ಜೊತೆಗಿರುವವರಿಗೆ ನಾನೆಲ್ಲಿ ಎನರ್ಜಿ ಕಳೆದುಕೊಂಡು ಪ್ಯಾಚ್ ಆಗಿ ಬಿಡುತ್ತೇನೋ ಎನ್ನುವ ಆತಂಕ! ಏರುವಿಕೆಯ ಕಾರ್ಯ ಒಂದು ಹಂತಕ್ಕೆ ಬರುತ್ತಿದ್ದಂತೆ ಇಳಿಯುವಿಕೆಯ ಪ್ರಕ್ರಿಯೆ ಶುರುವಾಯಿತು ನೋಡಿ! ಹಿಂದಿನ ರಾತ್ರಿಯ ಮಳೆಯಿಂದಾಗಿ ಮೆತ್ತಗಾಗಿದ್ದ ಭೂತಾಯಿಯ ಮಡಿಲು ಜಾರಲು ಹೇಳಿ ಮಾಡಿಸಿದಂತಿತ್ತು. ನಾನು ಒಂದು ಕಡೆ ಜಾರಿ ಸ್ಲೋ ಮೋಶನ್ ನಲ್ಲಿ ಭೂ ಸ್ಪರ್ಶ ಮಾಡಿಯೂ ಆಯಿತು!? ನನ್ನ ಜೊತೆಗಿರುವವರ ಆತಂಕ ದ್ವಿಗುಣಗೊಂಡಿತು. ನನ್ನ ರಕ್ಷಣೆಯ ಕಾರ್ಯಪಡೆಗೆ ಇನ್ನಿಬ್ಬರ ಸೇರ್ಪಡೆಯಾಯಿತು. ಅವರೆಲ್ಲರ ಸಪೋರ್ಟ್ ತೆಗೆದುಕೊಳ್ಳುತ್ತಾ, ಅಲ್ಲಲ್ಲಿ ಸ್ವಲ್ಪ ಸ್ವಲ್ಪ ಜಾರುತ್ತಾ, ಹಿಡಿದ ಪಟ್ಟು ಬಿಡದೆ ಗಮ್ಯವನ್ನು ತಲುಪಿದಾಗ ಸುಸ್ತಾಗಿದ್ದರೂ ನನಗೇನೋ ಸಾಧನೆ ಮಾಡಿದ ಭಾವ! ತಂದ ತಿಂಡಿಯನ್ನು ತಿಂದು ನಮ್ಮ ಬಣ ನೀರಿಗಿಳಿದು ಹರಿಯುತ್ತಿದ್ದ ಭದ್ರೆಯ ಒಡಲಲ್ಲಿ ನೀರಾಟ ಆಡಿದ್ದೇ ಆಡಿದ್ದು! ನಮಗೆ ರಕ್ಷಣೆಯ ಭರವಸೆಯನ್ನು ಕೊಡುತ್ತಾ ಪೀಟರ್ ನಮ್ಮೊಂದಿಗೇ ಇದ್ದರು.
ಭದ್ರೆಯ ಒಡಲಲ್ಲಿ ಆಡುತ್ತಿದ್ದ ನಾವೆಲ್ಲರೂ ಪೀಟರ್ ನೇತೃತ್ವದಲ್ಲಿ ಮತ್ತೊಂದು ಗಂಟೆಯ ಕಾಲ ಪ್ಲಾಂಟೇಶನ್ ನ ರಸ್ತೆಯಲ್ಲಿ ನಡೆದು ಹೋಂ ಸ್ಟೇ ತಲುಪಿ, ಶುಚಿರ್ಭೂತರಾಗಿ, ಉಂಡು ಎರಡೂವರೆ ಗಂಟೆಗೆ ಬಸ್ಸನ್ನು ಏರಿ ಸಾಗಿದ್ದು ಶ್ರೀ ಪ್ರೇಮ್ ಕುಮಾರ್ ರವರು ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿರುವ ಸೀಗೋಡಿನ ಜವಾಹರ್ ನವೋದಯ ವಿದ್ಯಾಲಯಕ್ಕೆ(ನನ್ನ ರೆಸಿಡೆನ್ಶಿಯಲ್ ಶಾಲೆಯ ವೃತ್ತಿ ಜೀವನ ಪ್ರಾರಂಭವಾದದ್ದು ಇಲ್ಲಿಯೇ). ಅವರ ಪ್ರೀತಿಯ ಆದರಾತಿಥ್ಯ ಸ್ವೀಕರಿಸಿ ನಾವು ನಮ್ಮ ಪಯಣವನ್ನು ಮುಂದುವರಿಸಿ ರಾತ್ರಿಯ ಏಳೂವರೆಗೆ ನಮ್ಮ ನಮ್ಮ ಮನೆಗಳನ್ನು ತಲುಪಿದಾಗ ಎರಡು ದಿವಸಗಳ ಸುಸ್ತು ಆ ಗಳಿಗೆಗೆ ನಮ್ಮನ್ನೆಲ್ಲಾ ಆವರಿಸಿದ್ದು ನಿಜ!

No comments:

Post a Comment