Thursday, 4th May 2023
Shri Gurunarasimha Kalyana Mantapa, Bengaluru.
That was grand celebration of Shri Narasimha Jayanthi at Guru Narasimha Kalyana Mantapa, both in the afternoon and evening.
We were fortunate to be present for the whole of evening Shodasha Pooja with all the sevas by different devotees.
with Ambika Sandeep Somayaji and family |
ನರಸಿಂಹ ಜಯಂತಿ - ಮಹತ್ವ
ವೈಶಾಖ ಶುದ್ಧ ಚತುರ್ದಶಿಯಂದು ನರಸಿಂಹ ಜಯಂತಿ
ವೈಶಾಖಸ್ಯ ಚತುರ್ದಶ್ಯಾಂ ಸೋಮವಾರೇSನಿಲರ್ಕ್ಷಕೇ |
ಅವತಾರೋ ನೃಸಿಂಹಸ್ಯ ಪ್ರದೋಷ ಸಮಯೇSಭವತ್ ||
ಎಂಬ ʼನಿರ್ಣಯಸಿಂಧುʼವಿನ ವಾಕ್ಯದಂತೆ, ವೈಶಾಖ ಶುದ್ಧ ಚತುರ್ದಶಿ, ಪ್ರದೋಷ ಕಾಲದಲ್ಲಿ ನರಸಿಂಹಾವತಾರವಾಯಿತು. ಅಂದು ನರಸಿಂಹರೂಪದಿಂದ ಆವೇಶಾವತಾರ ತಾಳಿದ ಭಗವಂತ, ತಾಮಸ ಗುಣ ಭೂಯಿಷ್ಠನಾದ ಹಿರಣ್ಯಕಶಿಪುವನ್ನು ಕೊಂದು, ಸಾತ್ವಿಕ ಗುಣ ಭೂಯಿಷ್ಠನೂ, ಭಾಗವತೋತ್ತಮನೂ ಆದ ಪ್ರಹ್ಲಾದನಿಗೆ ಆಹ್ಲಾದ ನೀಡಿದ ಸುದಿನ, ನರಸಿಂಹ, ವಿಷ್ಣುವಿನ ದಶಾವತಾರಗಳಲ್ಲಿ ನಾಲ್ಕನೇ ಅವತಾರವೆಂಬುದು ಸ್ಮರಣೀಯ.
ವ್ರತಾಚರಣೆಯ ವಿಧಾನ:
ಈ ವ್ರತಾಚರಣೆ ಅತ್ಯಂತ ಸರಳ. "ಧರ್ಮಸಿಂಧು"ವಿನಲ್ಲಿ ಹೇಳಿದಂತೆ,
ಉಪೋಷ್ಯೇಹಂ ನಾರಸಿಂಹ ಭುಕ್ತಿ ಮುಕ್ತಿ ಫಲಪ್ರದ | ಶರಣಂ ತ್ವಾಂ ಪ್ರಪನ್ನೋಸ್ಮಿ ಭಕ್ತಿಂ ಮೇ ನೃಹರೇ ದಿಶ ||
ಅಂದರೆ, "ಭಕ್ತಿ ಮುಕ್ತಿಗಳನ್ನು ಕರುಣಿಸುವ ಹೇ ನರಸಿಂಹಸ್ವಾಮಿ; ಈ ದಿನ ನಾನು ಉಪವಾಸವಿದ್ದು ನಿನಗೆ ಶರಣು ಬಂದಿದ್ದೇನೆ. ನನಗೆ ನಿನ್ನ ಪಾದಾರವಿಂದಗಳಲ್ಲಿ ಅನನ್ಯ ಭಕ್ತಿ ನೀಡು," ಎಂದು ಸಂಕಲ್ಪಿಸಿ ಧಾನ್ಯದಲ್ಲಿ ಸ್ಥಾಪಿಸಿದ ಕಲಶದಲ್ಲಿ ಲಕ್ಷ್ಮೀ-ನರಸಿಂಹ ಸ್ವಾಮಿಯ ಪ್ರತಿಮೆ ಇಟ್ಟು ಆವಾಹಿಸಿ, ಷೋಡಶೋಪಚಾರ ವಿಧಾನದಿಂದ ಪೂಜಿಸಬೇಕು. ಸಾಯಂಕಾಲದ ಪೂಜೆ ವಿಶೇಷ ಪುಣ್ಯಪ್ರದ, ಬಳಿಕ,
ಪರಿತ್ರಾಣಾಯ ಸಾಧೂನಾಂ ಜಾತೋವಿಷ್ಣೋನೃಕೇಸರೀ | ಗೃಹಾಣಾರ್ಘ್ಯಂ ಮಯಾದತ್ತಂ ಸಲಕ್ಷ್ಮೀನೃಹರಿಃ ಸ್ವಯಮ್ || ವಜ್ರನಖಾಯ ವಿದ್ಮಹೇ, ಸಹಸ್ರ ಜ್ವಾಲಾಯ ಧೀಮಹೀ | ತನ್ನೋ ನಾರಸಿಂಹಃ ಪ್ರಚೋದಯಾತ್ ||
ಎಂಬ ಮಂತ್ರದಿಂದ ಅರ್ಘ್ಯ ನೀಡಬೇಕು. ಎಲ್ಲಾ ವ್ರತಗಳಲ್ಲಿ ಇರುವಂತೆ, ಈ ರಾತ್ರಿ ಜಾಗರಣೆ ಮಾಡಿ, ನರಸಿಂಹ ದೇವರ ಹಾಗೂ ವೈಷ್ಣವ ಶಿರೋಮಣಿಯಾದ ಪ್ರಹ್ಲಾದನ ಚರಿತ್ರೆಯನ್ನು ಶ್ರವಣ ಮಾಡಬೇಕು.
ಮದ್ವಂಶೇ ಯೇ ನರಾ ಜಾತಾ ಯೇ ಜನಿಷ್ಯಂತಿ ಚಾಪರೇ ತಾನ್ ತ್ವಮುದ್ಧರ ದೇವೇಶ ದುಃಸಹಾತ್ ಭವಸಾಗರಾತ್ || ಕರಾವಲಂಬನಂ ದೇಹಿ ಶೇಷಶಾಯಿನ್ ಜಗತ್ಪತೇ | ಶ್ರೀ ನೃಸಿಂಹ ರಮಾಕಾಂತ ಭಕ್ತಾನಾಂ ಭಯನಾಶನ ||
ಎಂದರೆ "ನನ್ನ ವಂಶದಲ್ಲಿ ಹುಟ್ಟಿದ ಹಾಗು ಮುಂದೆ ಹುಟ್ಟಲಿರುವ ವಂಶದ ಕುಡಿಗಳನ್ನೆಲ್ಲ, ದುಃಸಹವಾದ ಸಂಸಾರ ಸಾಗರದಿಂದ ಪಾರುಮಾಡು. ಸದಾ ನನ್ನನ್ನು ಕೈಹಿಡಿದು ಮುನ್ನಡೆಸು". ಈ ರೀತಿ ಪ್ರಾರ್ಥಿಸಿ, ಕಲಶ ವಿಸರ್ಜಿಸಿ, ಪ್ರತಿಮಾ ಸಹಿತ ಆಚಾರ್ಯರಿಗೆ ದಾನ ಮಾಡಿ, ಪಾರಣೆಯ ಅಂಗವಾಗಿ ಸುಗ್ರಾಸ ಭೋಜನ ಸವಿಯಬೇಕು. ಈ ದಿನ ತಿಲಸ್ನಾನ, ತಿಲದೀಪ ದಾನ ಬಹುಶ್ರೇಷ್ಠ.
ನರಸಿಂಹಾವತಾರದ ವೈಶಿಷ್ಟ್ಯ
ನರಸಿಂಹಾವತಾರ ಕೃತಯುಗದ ಕಥೆ. ಕಶ್ಯಪ ಮುನಿಯಿಂದ ದಿತಿಯಲ್ಲಿ ಜನಿಸಿದ ಹಿರಣ್ಯಾಕ್ಷ ಹಾಗೂ ಹಿರಣ್ಯಕಶಿಷಪು ಎಂಬ ಪ್ರಚಂಡ ಪರಾಕ್ರಮಿಗಳೂ, ಕ್ರೂರ ಕರ್ಮಿಗಳೂ ಆದ, ದೈತ್ಯ ಸೋದರರಿದ್ದರು. ಅವರು ಸಾಧು-ಸಜ್ಜನರನ್ನು ಪೀಡುಸುತ್ತಿದ್ದರಲ್ಲದೆ, ದೇವತೆಗಳನ್ನು ಪದಚ್ಯುತಿಗೊಳಿಸಿ ಅವರ ಅಧಿಕಾರಗಳನ್ನೆಲ್ಲ ಆಕ್ರಮಿಸಿ, ವಿಷ್ಣು ದ್ವೇಷಿಗಳಾಗಿದ್ದರು. ಈ ಸನ್ನಿವೇಶದಲ್ಲಿ ಪರಮಾತ್ಮ ವರಾಹಾವತಾರ ಧರಿಸಿ ಹಿರಣ್ಯಾಕ್ಷನನ್ನು ಸಂಹರಿಸಿದ. ಇದರಿಂದ ಸಿಟ್ಟುಗೊಂಡ ಹಿರಣ್ಯಕಶಿಪು, ʼಯಾರೂ ವಿಷ್ಣುವಿನ ನಾಮಸ್ಮರಣೆ, ಜಪ-ತಪ, ಯಜ್ಞ-ಯಾಗಾದಿ ಉಪಾಸನೆ ಮಾಡಕೂಡದು ಎಂದು ಆಜ್ಞಾಪಿಸಿದ. ಋಷಿ-ಮುನಿ, ಸಾಧು-ಸಜ್ಜನರನ್ನು ಹಿಂಸಿಸಿದ. ತಾನೇ ಸ್ವಯಂ ಭಗವಂತ, ತನ್ನ ನಾಮಸ್ಮರಣೆ ನಡೆಯಲಿ ಎಂದ. ಮನುಷ್ಯರಿಂದಲೂ ದೇವತೆಗಳಿಂದಲೂ ಮರಣ ಬರಬಾರದು, ಮನೆಯ ಒಳಗೂ-ಹೊರಗೂ, ಹಗಲೂ-ರಾತ್ರಿಯೂ, ಯಾವ ಆಯುಧಗಳಿಂದಲೂ, ನಿರಾಯುಧದಿಂದಲೂ ಮರಣ ಬರಬಾರದುʼ ಎಂದು ವರ ಪಡೆದು, ಉಬ್ಬಿ-ಕೊಬ್ಬಿ ಮೆರೆಯತೊಡಗಿದ. ಇವನ ಕಠೋರ ಆಜ್ಞೆಯಿಂದ ಭೂಮಂಡಲವೇ ತತ್ತರಿಸಿತು.
ಹಿರಣ್ಯಕಶಿಪುವಿನ ಪತ್ನಿ ಕಯಾದು ಗರ್ಭವತಿಯಾದಾಗ ಅಲ್ಲಿಗೆ ಬಂದ ನಾರದರು, ಅವಳಿಗೆ ʼಹರಿನಾಮ ಸ್ಮರಣೆʼಯ ಮಹಿಮೆ ಅರುಹಿದರು. ಅದು ಗರ್ಭದ ಮೇಲೂ ಪರಿಣಾಮ ಬೀರಿತು. ಮಗು ಜನಿಸುತ್ತಿದ್ದಂತೆ ಭೂಮಂಡಲವೆಲ್ಲಾ ಸಂತೋಷಗೊಂಡಿತು. ಆ ಮಗು ಪ್ರಹ್ಲಾದ. ಆ ಮಗು ಬಾಲ್ಯದಲ್ಲೇ ಎಲ್ಲರಿಗೂ ಭಾಗವತವನ್ನು ಬೋಧಿಸಹತ್ತಿತು. ಐದು ವರ್ಷಕ್ಕೆ ಗುರುಕುಲಕ್ಕೆ ಸೇರಿಸಿದರೆ ಅಲ್ಲಿ ಪಾಠ ಕಂಠಸ್ಯ ಮಾಡುವ ಬದಲು, ಮಾತುಮಾತಿಗೆ ʼಶ್ರೀ ಹರಿʼ ಎನ್ನುತ್ತಿತ್ತು.
ತಸ್ಮಾತ್ ಸರ್ವೇಷು ಭೂತೇಷು ದಯಾಂ ಕರುತ ಸೌಹೃದಂ | ಆಸುರಂ ಭಾವಮ್ರುನ್ಮುಚ್ಯ ಯಯಾ ತುಷ್ಯತ್ಯದೋಕ್ಷಜಃ || ಎಂದರೆ ʼಎಲ್ಲ ಪ್ರಾಣಿಗಳನ್ನು ಪ್ರೀತಿಸೋಣ. ನಮ್ಮ ತಾಮಸ ಸ್ವಭಾವ ಬಿಟ್ಟು ಬಿಡೋಣ. ಆಗ ಶ್ರೀಹರಿ ನಮಗೊಲಿಯುತ್ತಾನೆ.ʼ ಎಂದು ಸಾರುತ್ತಾ ಸಮಗ್ರ ಗುರುಕುಲವನ್ನೇ ಭಗವದ್ಭಕ್ತಿರಸದಲ್ಲಿ ಮುಳುಗಿಸಿದ.
ಈ ಸುದ್ಧಿ ರಾಜನಾದ ಹಿರಣ್ಯಕಶಿಪುವಿಗೂ ತಲುಪಿತು. ನಯ, ಭಯಗಳಿಂದ ಹಿರಣ್ಯಕಶಿಪು ಮಗನಿಗೆ ಬುದ್ಧಿ ಹೇಳಿ, ತನಗೆ ಹಗೆಯಾದ ವಿಷ್ಣುವಿನ್ನು ಅವನು ಸ್ಮರಿಸುವುದು ತನಗೆ ಸಮ್ಮತವಲ್ಲವೆಂದು ಸಾರಿದ. ಆದರೆ ಮಗು ʼಹರಿನಾಮ ಸ್ಮರಣೆʼ ಬಿಡಲಿಲ್ಲ. ಇದರಿಂದ ಸಿಟ್ಟುಗೊಂಡ ಹಿರಣ್ಯಕಶಿಪು ಮಗನೆಂಬ ಮಮತೆಯನ್ನು ಬಿಟ್ಟು, ಅವನನ್ನು ಕೊಂದಲ್ಲದೆ ತನಗೆ ಸುಖವಿಲ್ಲವೆಂದು ನಿರ್ಧರಿಸಿ, ನಾನಾ ರೀತಿಯಲ್ಲಿ ಚಿತ್ರಹಿಂಸೆ ನೀಡಿದ. ವಿಷಮಿಶ್ರಿತ ಆಹಾರ ಕೊಡಿಸಿದ; ಆನೆಯ ಕಾಲಿನಿಂದ ತುಳಿಸಿದ; ಸರ್ಪಗಳಿಂದ ಕಚ್ಚಿಸಿದ; ದೊಡ್ಡ ಪರ್ವತದಿಂದ ಎಸೆದ; ಪರಿಜನರೆಲ್ಲ ಇದನ್ನು ಕಂಡು ದಂಗಾದರು. ಪರಮಾತ್ಮನ ರಕ್ಷಾಕವಚ ಇರುವವರನ್ನು ಯಾರು ಏನು ಮಾಡಬಲ್ಲರು? ಆಗ ಹಿರಣ್ಯಕಶಿಪುವಿಗೆ ತನ್ನ ವೈರಿಯೇ ಪ್ರಹ್ಲಾದನಾಗಿ ಜನಿಸಿದಂತೆ ತೋರಿತು. ಸಿಟ್ಟು ತಡೆಯಲಾಗಲಿಲ್ಲ. ತಾನೇ ಅವನನ್ನು ಮುಗಿಸಿಬಿಡಲು ಸಂಕಲ್ಪಿಸಿ, ʼಹಗಲಿರುಳೂ ನೀನು ಸ್ಮರಿಸುವ ನಿನ್ನ ಶ್ರೀಹರಿ ಅರಮನೆಯ ಈ ಕಂಬದಲ್ಲಿಯೂ ಇದ್ದಾನೆಯೇ?ʼ ಎಂದು ಕೇಳಿದ. ಆಗ ಪ್ರಹ್ಲಾದನು "ನನ್ನ ಸ್ವಾಮಿ ಅಣು-ರೇಣು-ತೃಣ-ಕಾಷ್ಠಗಳಲ್ಲೂ ಅಡಗಿದ್ದಾನೆ. ಈ ಕಂಬದಲ್ಲಿಯೂ ಇದ್ದಾನೆ. ಅವನನ್ನು ನೋಡುವ ಕಣ್ಣು ಬೇಕು ಅಷ್ಟೆ" ಎನ್ನಲು, ಸಿಟ್ಟು ನೆತ್ತಿಗೇರಿದ ಹಿರಣ್ಯಕಶಿಪು ಆ ಸಭಾಮಂಟಪದ ಕಂಬವನ್ನು ಗದೆಯಿಂದ ಅಪ್ಪಳಿಸಿದ.
ಆ ಕ್ಷಣ ಭಯಂಕರನಾದ, ಕುತ್ತಿಗೆಯವರೆಗೆ ನರನಾಗಿಯೂ, ಮೇಲೆ ಸಿಂಹವದನವಾಗಿಯೂ ಇರುವ ನರಸಿಂಹಸ್ವಾಮಿ ಕಂಬವನ್ನು ಭೇದಿಸಿ ಅಬ್ಬರಿಸುತ್ತ ಹೊರಬಂದು, ಹಗಲೂ ಅಲ್ಲದ ರಾತ್ರಿಯೂ ಅಲ್ಲದ ಪ್ರದೋಷಕಾಲದಲ್ಲಿ, ಒಳಗೂ ಅಲ್ಲದ ಹೊರಗೂ ಅಲ್ಲದ ಹೊಸ್ತಿಲ ಮೇಲೆ ಕುಳಿತು, ಹಿರಣ್ಯಕಶಿಪುವಿನ ದೇಹವನ್ನು ತೊಡೆಯ ಮೇಲಿಟ್ಟುಕೊಂಡು, ಆಯುಧವೂ ಅಲ್ಲದ ನಿರಾಯುಧವೂ ಅಲ್ಲದ ತನ್ನ ಹರಿತವಾದ ಉಗುರುಗಳಿಂದ, ಅವನ ಎದೆಯನ್ನು ಸೀಳಿ ಸಂಹರಿಸಿದ. ಹಿರಣ್ಯಕಶಿಪು ತನ್ನ ಗದೆಯಿಂದ ಕಂಬ ಅಪ್ಪಳಿಸಿದಾಗ ಹೊರಹೊಮ್ಮಿದ ನರಸಿಂಹಸ್ವಾಮಿಯ ಆರ್ಭಟ, ಭಯಾನಕರೂಪ, ಪರಾಕ್ರಮ ದರ್ಶನವನ್ನು ನರಸಿಂಹ ಪುರಾಣದ 44ನೇ ಅಧ್ಯಾಯದ ಈ ಶ್ಲೋಕಗಳು ಸಮರ್ಥವಾಗಿ ತಿಳಿಸುತ್ತವೆ.
ಅತಿ ರೌದ್ರಂ ಮಹಾಕಾಯಂ ದಾನವಾನಾಂ ಭಯಂಕರಂ | ಮಹಾನೇತ್ರಂ ಮಹಾವಕ್ತಂ ಮಹಾದಂಷ್ಟ್ರಂ ಮಹಾಭುಜಂ || ಮಹಾನಖಂ ಮಹಾಪಾದಂ ಕಾಲಾಗ್ನಿ ಸದೃಶಾನನಂ | ಕರ್ಣಾಂತಕೃತ ವಿಸ್ತಾರ ವದನಂ ಚಾತಿಭೀಷಣಮ್ ||
ಈ ಸನ್ನಿವೇಶದಲ್ಲೀ ಪ್ರಹ್ಲಾದ ಸ್ವಲ್ಪವೂ ವಿಚಲಿತನಾಗದೆ "ಓಂ ನಮೋ ನಾರಾಯಣಾಯ" ಎಂದು ಭಗವಂತನನ್ನು ಸ್ಮರಿಸುತ್ತಾ ನಿಂತಿದ್ದನು. ಆಗ ವಿಶ್ವವೇ ಪ್ರಹ್ಲಾದಮಯವಾಗಿ ದೇವತೆಗಳಿಂದ ಪುಷ್ಪವೃಷ್ಟಿಯಾಯಿತು. ಎಲ್ಲೆಲ್ಲೂ ಸ್ವರ್ಗೀಯ ಸಂಗೀತ ಮೊಳಗಿತು. ತಂಪಾದ ಗಾಳಿ, ಶಾಂತಿ ಸಂದೇಶ ಹೊತ್ತು ಬೀಸುತ್ತಿತ್ತು. ಸೂರ್ಯಚಂದ್ರರು ಮಲಿನಾವಸ್ಥೆ ತೊರೆದು ಬೆಳಗಿದರು. ಇದೆಲ್ಲಾ ನಡೆದದ್ದು ವೈಶಾಖ ಶುದ್ಧ ಚತುರ್ದಶಿಯಂದು. ಆ ಮಂಗಳಮಯ ವಾತಾವರಣದಲ್ಲಿ ನರಸಿಂಹಸ್ವಾಮಿ ಹಿರಣ್ಯಕಶಿಪುವಿನ ಸಿಂಹಾಸನದ ಮೇಲೆ ತನ್ನ ಭಕ್ತನಾದ ಪ್ರಹ್ಲಾದನನ್ನು ಕೂರಿಸಿ ಪಟ್ಟಾಭಿಷೇಕ ಮಾಡಿ, ಚಿರಂಜೀವಿ ಪದವಿ ನೀಡಿ ಆಶೀರ್ವದಿಸಿದರು. "ನೀನು ಹುಟ್ಟಿದ್ದರಿಂದಲೇ ನಿನ್ನ ತಂದೆಯು ಪವಿತ್ರನಾದನು, ವಂಶ ಪಾವನವಾಯಿತು, ನಿಶ್ಚಿಂತನಾಗು" ಎಂದು ಹರಸಿದರು.
ಲಕ್ಷ್ಮೀನರಸಿಂಹನ ರೂಪ ನಯನ ಮನೋಹರ. ನರಸಿಂಹನ ಮಡಿಚಿರುವ ಎಡತೊಡೆಯ ಮೇಲೆ ಲಕ್ಷ್ಮಿಯು ತನ್ನ ಕಾಲು ಇಳಿಯಬಿಟ್ಟು ಕುಳಿತಿದ್ದಾಳೆ. ಸ್ವಾಮಿಯು ತನ್ನ ಎಡಗೈಯಿಂದ ಅಮ್ಮನವರನ್ನು ಆಲಂಗಿಸಿಕೊಂಡಿದ್ದಾನೆ. ಈ ದಿವ್ಯ ಮಂಗಳ ವಿಗ್ರಹವನ್ನು ಆಚಾರ್ಯ ಶಂಕರರು ತಮ್ಮ ಲಕ್ಷ್ಮೀನರಸಿಂಹ ಸ್ತೋತ್ರದಲ್ಲಿ ಹೀಗೆ ಸ್ತುತಿಸುತ್ತಾರೆ.
ಸಂಸಾರ ಸಾಗರ ನಿಮಜ್ಜನ ಮಹ್ಯಮಾನಂ ದೀನಂ ವಿಲೋಕಯ ವಿಭೋ ಕರುಣಾನಿಧೇ ಮಾಂ | ಪ್ರಹಲಾದಖೇದ ಪರಿಹಾರ ಕೃತಾವತಾರ ಲಕ್ಷ್ಮೀನೃಸಿಂಹ ಮಮದೇಹಿ ಕರಾವಲಂಬಂ ||
ಅಂದರೆ, ʼಭಕ್ತಪ್ರಹ್ಲಾದನ ದುಃಖ ಪರಿಹಾರಕ್ಕೆ ಅವತರಿಸಿ ಬಂದ ಸರ್ವವ್ಯಾಪಿಯೇ, ಕರುಣಾಸಾಗರ ಲಕ್ಷ್ಮೀನರಸಿಂಹ! ಸಂಸಾರ ಸಾಗರದಲ್ಲಿ ಮುಳುಗಿ ಕಂಗಾಲಾದ ನಮ್ಮೆಡೆಗೆ ನಿನ್ನ ಕೃಪಾದೃಷ್ಟಿ ಬೀರಿ, ನಮಗೆ ನಿನ್ನ ಕರಗಳ ಆಶ್ರಯವನ್ನು ನೀಡಿ ಮುನ್ನಡೆಸುʼ ಎಂದು ಪ್ರಾರ್ಥಿಸಿದಾಗ ನರಸಿಂಹ ಜಯಂತಿ ಅರ್ಥಪೂರ್ಣವಾಗುತ್ತದೆ.
ಕವಿ ಡಿ.ವಿ.ಜಿ ಹೇಳುವಂತೆ "ನಂಬದಿದ್ದನು ತಂದೆ, ನಂಬಿದನು ಪ್ರಹ್ಲಾದ; ನಂಬಿಯೂ ನಂಬದಿರುವಿಬ್ಬಂದಿ ನೀನು | ಕಂಬದಿನೋ ಬಿಂಬದಿನೋ ಮೋಕ್ಷವವರಿಂಗಾಯ್ತು" ಹಾಗೆ ನಾವು ಭಗವಂತನನ್ನು ನಿಶ್ಚಲ ಮನಸ್ಸಿನಿಂದ ನಂಬಿದಾಗ ಆತ ನಮ್ಮನ್ನು ಸದಾ ಸಲಹುತ್ತಾನೆ. ಜಗದಗಲ ಯುಗದಗಲವಾದ ಸಿದ್ಧಿಪ್ರಸಿದ್ಧಿಗಳನ್ನು ನೀಡಿ ಚಿರಂಜೀವಿಗಳನ್ನಾಗಿಸುತ್ತಾನೆ. ಅಳಿದಾದ ದಿವ್ಯ ಪದವಿಯನ್ನು ನೀಡಿ ತನ್ನವನನ್ನಾಗಿಸಿ ಕೊಳ್ಳುತ್ತಾನೆ.
ಶ್ರೀಕೃಷ್ಣಾರ್ಪಣಮಸ್ತು
ಸರ್ವೇ ಜನಾಃ ಸುಖಿನೋ ಭವಂತು....
Posted 5/5/2023
No comments:
Post a Comment