SHOBHA SOMAYAJI - ಹಿನ್ನೀರ ಓದುಗರ ತಂಡ
ಬಹಳ ತಿಂಗಳುಗಳ ನಂತರ ಇಂದು ಹಿನ್ನೀರ ಓದುಗರ ತಂಡ ಮರುಜೀವ ಪಡೆದಿದೆ. ಹಸಿರುಮಕ್ಕಿಯ ಹಿನ್ನೀರಿನ ತಾಣಕ್ಕೆ ಹೋಗಿ ಓದಬೇಕೆಂದಿದ್ದ ನಮ್ಮ ತಂಡ ಕೊನೆಯ ಗಳಿಗೆಯಲ್ಲಿ ಕೆಳದಿಯ ಕೆರೆಯ ಏರಿಯ ಮೇಲೆ ಓದುವುದೆಂದು ನಿರ್ಧರಿಸಿ ಸಾಯಂಕಾಲ ನಾಲ್ಕೂವರೆಗೆ ಕೆಳದಿಯ ಕೆರೆಯ ಏರಿಯ ಮೇಲೆ ಪ್ರತಿಷ್ಟಾಪಿತಗೊಂಡಿತು. ತಂಡದಲ್ಲಿ ಇದ್ದದ್ದು ನಾನು, ವಿಭಾ, ಅನಿಶ ಹಾಗೂ ಮೇದಿನಿ!
ನೂರಾರು ಬಾರಿ ನಾನು ಕೆಳದಿಯ ಬೃಹತ್ ಕೆರೆಯನ್ನು ದೃಷ್ಟಿಸಿದ್ದೇನೆ. ಇಂದು ಅದರ ಪಕ್ಕದ ಮಣ್ಣಿನ ದಾರಿಯಲ್ಲಿ ಸಾಗಿದಾಗ ಕೆರೆಯ ದಿವ್ಯ ರೂಪದ ದರ್ಶನವಾಯಿತು. ಎಂತಹ ತರಹೇವಾರಿ ಹಕ್ಕಿಗಳು! ಎಂತಹ ವೈವಿಧ್ಯಮಯವಾದ ಜಲಸಸ್ಯಗಳು! ಸಂಜೆಯ ಸುಂದರ ಸೂರ್ಯಾಸ್ತ!
ಸೂರ್ಯನ ಪ್ರಖರತೆಯಿದ್ದರೂ ಕೆರೆಯ ಪಕ್ಕದಲ್ಲಿದ್ದ ತೋಟ ತಂಪಿನ ನೆರಳನ್ನು ಕೊಟ್ಟಿತ್ತು. ಬಿಳಿ ತಾವರೆಗಳ ಸಣ್ಣ ಮೊಗ್ಗಿನಿಂದ ಹಿಡಿದು ಅರಳಿದ ತಾವರೆಯವರೆಗಿನ ವಿವಿಧ ಹಂತ ಸದೃಶವಾಗಿ ಸಿಕ್ಕಿತು. ಓದುವುದೋ…ಸುತ್ತಲಿನ ಪ್ರಕೃತಿ ಸೌಂದರ್ಯದಲ್ಲಿ ಮುಳುಗೇಳುವುದೋ ಎಂಬುದನ್ನು ನಿರ್ಧರಿಸಲು ಕಷ್ಟವಾಗುವ ಗಳಿಗೆ ಅಲ್ಲಿಯದಾಗಿತ್ತು. ಎಲ್ಲವುದಕ್ಕೂ ನ್ಯಾಯ ಒದಗಿಸೋಣವೆಂದು ಓದಿದ್ದಾಯಿತು..ನೋಡಿದ್ದಾಯಿತು…ಫೋಟೊ ತೆಗೆದದ್ದೂ ಆಯಿತು.
ನಾನಿಂದು ಓದತೊಡಗಿದ ಪುಸ್ತಕ ಡಾ. ವಿ. ಕೃ. ಗೋಕಾಕರು ಬರೆದು 1949ರಲ್ಲಿ ಪ್ರಥಮ ಮುದ್ರಣವಾಗಿದ್ದ “ಜೀವನ ಪಾಠಗಳು”. ಜೀವನ ದರ್ಶನವನ್ನು ತೋರುವ, ಜೀವನ ದರ್ಶನವನ್ನು ಒಲವಿನಿಂದ ಹೇಳುವ ಜೀವನ ಪಾಠಗಳ ಅಮೂಲ್ಯ ಪುಸ್ತವಿದು. ನಾನು ಕಳೆದ ಬಾರಿ ಬೆಂಗಳೂರಿಗೆ ಹೋದಾಗ ಡಿ. ವಿ. ಜಿ. ಪುಸ್ತಕ ಭಂಡಾರದಲ್ಲಿ ಖರೀದಿಸಿದ ಪುಸ್ತಕವಿದು. ಈ ಪುಸ್ತಕದಲ್ಲಿ ಒಂದು ಮಾತಿದೆ - ಬಳ್ಳಿಯಂತೆ ಯಾವ ವ್ಯಕ್ತಿಯೂ ಸಂಸ್ಥೆಗೆ ಕಾಲ್ತೊಡಕಾಗಬಾರದು. ನಾಯಿಯಂತೆ ಬಾಗಿಲಲ್ಲಿಯೂ ಸುಳಿದಿರಬಾರದು. ಮೋಡದಂತೆ ಗುರಿಯಿಲ್ಲದೆ ಗಾಳಿಯ ತೊತ್ತಾಗಬಾರದು. ನಿಲ್ಲಬೇಕಾದಲ್ಲಿ ನಿಲ್ಲುವ, ಉರುಳ ಬೇಕಾದಲ್ಲಿ ಉರುಳುವ ಗೋಲವಾಗಬೇಕು ವ್ಯಕ್ತಿತ್ವ. ಈ ಕೇಂದ್ರದಲ್ಲಿಯೇ ವ್ಯಕ್ತಿ - ಸಮಾಜಗಳ ಸಾಮರಸ್ಯ ಬೀಜವಿದೆ. ಸಣ್ಣ ಸಣ್ಣ ಪತ್ರ ರೂಪದಲ್ಲಿರುವ ಪುಸ್ತಕವಿದು. ಪ್ರತಿಯೊಂದು ಪತ್ರಗಳು ಕೇವಲ ಒಂದೆರಡು ಪುಟಗಳಷ್ಟು ದೊಡ್ಡದಿರುವವು. ಆದರೆ ಒಂದೊಂದು ಪತ್ರವನ್ನೂ ಓದಲು ಹಿಡಿಯುವ ಸಮಯ ಬಹಳಷ್ಟು! ತೇಲಿಸಿ ಓದಲು ಆಗುವುದೇ ಇಲ್ಲ. ಪ್ರತಿ ಪದ - ಪ್ರತಿ ಸಾಲು ಅದಕ್ಕೂ ಮಿಕ್ಕಿದ ಅರ್ಥವನ್ನು ಹೇಳುತ್ತವೆ. ಗಮನವಿಟ್ಟು ಅರ್ಥೈಸಿಕೊಂಡು ಓದಿದರೆ ನಿಜವಾಗಿಯೂ ಮಹತ್ತರ ಜೀವನ ಪಾಠಗಳನ್ನು ನೀಡುವ ಪತ್ರಗಳವು.
ಒಂದೆರಡು ಗಂಟೆ ಅಲ್ಲಿ ಓದಿ…ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿ….ಫೋಟೊ ಶೂಟ್ ಮಾಡಿ ‘ಕಾಲಹರಣ’ ಮಾಡಿ ಹತ್ತಿರದ ಹಾರೆಗೊಪ್ಪದಲ್ಲಿ ಹಿರಿಯರಾದ ಸೀತಾರಾಮ ಅವರ ಮನೆಯಲ್ಲಿ ನಡೆಯುತ್ತಿದ್ದ ಪುಸ್ತಕ ಬಿಡುಗಡೆಯ ಕಾರ್ಯಕ್ರಮವನ್ನು ವೀಕ್ಷಿಸಿ, ಅಲ್ಲಿ ಲಘು ಉಪಹಾರವನ್ನು ಸೇವಿಸಿ, ಅವರೇ ಕೆತ್ತಿದ ಕಿರಿಗಾಮಿಯ ನನ್ನ ಹಾಗೂ ರವಿಯ ಚಿತ್ರಗಳನ್ನು ಅವರಿಂದ ಸ್ವೀಕರಿಸಿ, ಸಾಗರದಲ್ಲಿ ಪರಿಣಿತಿ ತಂಡದವರು ನಡೆಸುತ್ತಿದ್ದ ನೃತ್ಯ ಸಂಗೀತ ಕಾರ್ಯಕ್ರಮದಲ್ಲಿ ಒಂದೆರಡು ಗಂಟೆ ಇದ್ದು ಮನೆಗೆ ಹಿಂದಿರುಗಿದಾಗ ಇಂದಿನ ಸಂಜೆ ಅರ್ಥಪೂರ್ಣವಾಗಿ ಕಳೆಯಿತು ಎಂದೆನಿಸಿತು.
Posted 27/11/2024
No comments:
Post a Comment