Wednesday, November 6, 2024

ಹೋಮ ಹವನ, ಪೂಜೆ ಪುನಸ್ಕಾರಗಳು

29 /10/2024

Shobha Article:

 ಹೋಮ ಹವನ, ಪೂಜೆ ಪುನಸ್ಕಾರಗಳು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿವೆ. ನನಗೆ ಈ ರೀತಿಯ ಧರ್ಮ ಕರ್ಮಗಳಲ್ಲಿ ಅಂತಹ ನಂಬಿಕೆ, ಶ್ರದ್ಧೆ ಇರದಿದ್ದರೂ ಅವೆಲ್ಲವನ್ನು ಧಿಕ್ಕರಿಸುವ ಗಟ್ಟಿ ಮನಸ್ಥಿತಿಯೂ ಇಲ್ಲ. ಇಂತಹ ಆಚರಣೆಗಳಲ್ಲಿ ತೊಡಗಿಕೊಳ್ಳಬೇಕಾದ ಸಂದರ್ಭದಲ್ಲಿ ನನ್ನ ಮನಸ್ಸಿನ ಸಮಾಧಾನಕ್ಕಾಗಿ ಇಂತಹವುಗಳ ಬಗ್ಗೆ ನಾನು ನನಗೇ ನೀಡುವ ಸಮರ್ಥನೆ ಏನೆಂದರೆ ‘ಇವುಗಳೆಲ್ಲ ನಮ್ಮ ತೊಂದರೆಗಳ ಪರಿಹಾರಕ್ಕಾಗಿ ನಾವು ಒಪ್ಪಿಕೊಂಡು ಒಳಗಾಗುವ ಥೆರಪಿಗಳು’ ಎಂದು. ನಮಗೆ ಏನೇನೊ ತೊಂದರೆ ಬಂದಾಗ ಅದನ್ನು ನಮ್ಮ ಬಲದ ಪರಿಮಿತಿಯೊಳಗೆ ಪರಿಹರಿಸಿಕೊಳ್ಳಲು ಆಗದಿದ್ದಾಗ ಪರಿಹಾರಕ್ಕಾಗಿ ಯಾವುದೋ ಪ್ರಾಜ್ಞರಿಗೆ ಮೊರೆ ಹೊಕ್ಕಾಗ ಅವರು ನಮಗೆ ನೀಡುವ ಪಾರಿಹಾರಿಕ ಸಲಹೆಗಳ ಪ್ರಕಾರ ನಾವು ಹೋಮ - ಹವನಗಳನ್ನು ಮಾಡಿಸುತ್ತೇವೆ; ಇಲ್ಲವೇ ಪ್ರಾಜ್ಞರು ಹೇಳಿದ ಯಾವುದೋ ದೇವಸ್ಥಾನಕ್ಕೆ ಹೋಗಿ ಅಲ್ಲಿ ವಿಶೇಷ ಪೂಜೆ ಸಲ್ಲಿಸುತ್ತೇವೆ. ಇದರಿಂದ ಸಮಸ್ಯೆ ಕಡಿಮೆ ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ.

ಆದರೆ ಪ್ರಾಜ್ಞರು ಹೇಳಿದ್ದನ್ನು ಮಾಡಿದ ಸಮಾಧಾನ ಮನಸ್ಸಿಗಿರುತ್ತದೆ. ಹಾಗೆಯೇ ಅದರ ಫಲ ಸಿಕ್ಕಿಯೇ ಸಿಗುತ್ತದೆ ಎನ್ನುವ “ನಂಬಿಕೆ” ಕಷ್ಟ ಪರಿಹಾರದ ಆಸರೆಯಾಗುತ್ತದೆ. ನನಗೆ ಇಂತಹುದನ್ನೆಲ್ಲ ಮಾಡುವಾಗ ಅಥವಾ ಮಾಡಿಸುವಾಗ ಶೇಕಡಾ ನೂರರಷ್ಟು ಆ ಪ್ರಕ್ರಿಯೆಯೊಳಗೆ ತೊಡಗಿಕೊಳ್ಳಲು ಆಗುವುದೇ ಇಲ್ಲ. ನನ್ನ ಧ್ಯೇಯ - ನಿಲುವುಗಳ ಬಗ್ಗೆ ನನಗೇ ಸಂದೇಹವಾಗುತ್ತದೆ. ಇದು ನನ್ನೊಳಗೆ ಬಹಳ ದ್ವಂದ್ವಗಳನ್ನು ಹುಟ್ಟಿಸುತ್ತದೆ. ನಾನು ನಾಸ್ತಿಕಳಲ್ಲ. ದೇವರ ಅಸ್ತಿತ್ವವನ್ನು ಒಪ್ಪಿಕೊಳ್ಳುವವಳು. ನಾನು ದೇವರ ಪೂಜೆಯನ್ನು ನನಗೆ ಅರ್ಥವಾಗದ ಯಾವುದೇ ಶಾಸ್ತ್ರಗಳನ್ನು ಅನುಸರಿಸದೆ ನನ್ನದೇ ಆದ ಪ್ರಕಾರದಲ್ಲಿ ಮಾಡಲು ಇಚ್ಛಿಸುವವಳು. ಎಲ್ಲರೂ ಸೇರಿ ಶಾಸ್ತ್ರೋಕ್ತವಾಗಿ ಮಾಡುವ ಪೂಜೆ ಪುನಸ್ಕಾರದ ಸಂದರ್ಭದಲ್ಲಿ ನಾನು ಆ ಜಾಗಕ್ಕೆ ಪರಕೀಯಳು ಎಂದೆನಿಸತೊಡಗುತ್ತದೆ. ನಾನು ಆ ಪೂಜೆ ಪುನಸ್ಕಾರಗಳಲ್ಲಿ ತೊಡಗಿಕೊಳ್ಳುವಾಗ ಯಾರದೋ ಕೈಗೊಂಬೆಯಾಗಿ ವರ್ತಿಸುವಂತೆ ಅನಿಸುತ್ತದೆ. ‘ನಾನಲ್ಲದ ನಾನು’ ಅಲ್ಲಿ ಉಪಸ್ಥಿತಳಿದ್ದೇನೆ ಎಂದೆನಿಸುತ್ತದೆ.  ನನ್ನ ಉಪಸ್ಥಿತಿಯಲ್ಲಿ ಪೂರ್ಣ ಪ್ರಾಮಾಣಿಕತೆ ಇಲ್ಲದಿರುವುದು ನನ್ನಲ್ಲಿ ಕೆಲವೊಮ್ಮೆ ಪಾಪಪ್ರಜ್ಞೆ ಮೂಡಿಸುತ್ತದೆ. 

ಇಂತಹ ಭಾವನೆ/ದ್ವಂದ್ವಗಳು ಎಲ್ಲರೊಳಗೂ ಉದಿಸುತ್ತದೆಯೋ ಇಲ್ಲವೋ ಎನ್ನುವುದು ನನಗೆ ಗೊತ್ತಿಲ್ಲ. ಆದರೆ ನನ್ನೊಳಗೆ ಮೂಡಿ ನನ್ನ ಮನದಲ್ಲಿ ಗೊಂದಲ ಮೂಡಿಸುವುದಂತೂ  ನಿಜ!

No comments:

Post a Comment