Friday, February 7, 2025

DASHAMANOTSAVA SAMBHRAMA

 February 5, 2025

ವಿನಯ್ ನಾಡಿಗ್ ನನ್ನ ಪರಮ ಶಿಷ್ಯ. ನವೋದಯ ವಿದ್ಯಾಲಯದಲ್ಲಿ ತನ್ನ ಕಲಿಕೆ ಪ್ರಾರಂಭವಾದಾಗಿನಿಂದ ಇಂದಿನವರೆಗೂ ನನ್ನನ್ನು ನಿಯಮಿತವಾಗಿ ಭೇಟಿಯಾಗುತ್ತಾ ಬಾಲ್ಯದ ತನ್ನ ಅದೇ ಪ್ರೀತಿ - ಅಭಿಮಾನವನ್ನು ಮುಂದುವರೆಸಿಕೊಂಡು ಹೋಗುತ್ತಿರುವವನು ಈ ನನ್ನ ಶಿಷ್ಯ. ವಿನಯನ ಕಂಠಸಿರಿಯನ್ನು ಅವನ ಎಳವೆಯಲ್ಲೇ ಗುರುತಿಸಿದ್ದ ನನ್ನ ಪತಿ ಕೆ.ಜಿ.ರವೀಂದ್ರ ಅವರು ಅವನು ಸುಮಾರು ಹದಿಮೂರು ವರ್ಷದವನಾಗಿದ್ದಾಗಲೇ ಅವನಿಂದ ಯಕ್ಷಗಾನದ ಭಾಗವತಿಕೆಯನ್ನು ಮಾಡಿಸಿದ್ದರು. ಇದರಿಂದ ಉತ್ತೇಜಿತನಾಗಿ ತನ್ನ ಸಂಗೀತಾಸಕ್ತಿಯನ್ನು ಮುಂದುವರೆಸಲು ನವೋದಯದಲ್ಲಿದ್ದಾಗ ಸಂಗೀತ ಶಿಕ್ಷಕಿ ರಜನಿಯವರ ಗರಡಿಯಲ್ಲಿ ಪಳಗಿದ ವಿನಯ ತನ್ನ ಉನ್ನತ ಶಿಕ್ಷಣದ ಸಂದರ್ಭದಲ್ಲೂ ಮೈಸೂರಿನಲ್ಲಿ ಸಂಗೀತ ಕಲಿಕೆಯನ್ನು ಗಟ್ಟಿಗೊಳಿಸಿಕೊಂಡು ಸಂಗೀತ ಕ್ಷೇತ್ರದಲ್ಲಿಯೇ ಮುಂದುವರೆದು ಇಂದು ನಾಡು ಕಂಡ ಉತ್ತಮ ಸುಗಮ ಸಂಗೀತಗಾರನಾಗಿ ಗುರುತಿಸಲ್ಪಟ್ಟಿದ್ದಾನೆ. ಜೊತೆಗೆ ಕಳೆದ ಹತ್ತು ವರ್ಷಗಳಿಂದ "ನಾಡಿಗ್ ಅಕಾಡೆಮಿ ಆಫ್ ಮ್ಯೂಸಿಕ್" ಎನ್ನುವ ತನ್ನದೇ ಸಂಗೀತ ಶಾಲೆಯನ್ನು ನಡೆಸಿ ನೂರಾರು ಜನರಿಗೆ ಸಂಗೀತ ಕಲಿಸುತ್ತಿದ್ದಾನೆ.


ವಿನಯ ನಡೆದು ಬಂದ ದಾರಿ ಸುಲಭದ್ದಲ್ಲ. ವಿನಯ ತನ್ನ ಬದುಕಿನ ಮುಖ್ಯ ಘಟ್ಟದಲ್ಲಿ ನಿಂತಾಗ ಬಹಳಷ್ಟು ಆಯ್ಕೆಗಳಿದ್ದರೂ ಯಾರೂ ಹೆಚ್ಚಾಗಿ ಬಳಸಿ ಸವೆಯದ ದಾರಿಯನ್ನೇ ಆರಿಸಿ ತದನಂತರದಲ್ಲಿ ಬಂದ ಸವಾಲುಗಳನ್ನು ಎದುರಿಸಿ ತನ್ನ ಆಯ್ಕೆಯ ಸದುಪಯೋಗ ಮಾಡಿ ತೋರಿಸಿ ತನ್ನ ಆಸಕ್ತಿಯ ಕ್ಷೇತ್ರದಲ್ಲಿ ಬೆಳೆದು ತೋರಿಸಿದ್ದಾನೆ. ಅವನ ಈ ಬೆಳವಣಿಗೆ ಖುಷಿಕೊಡುವಂತಹುದು. ಅವನು ಕ್ರಮಿಸಿದ ದಾರಿಯಲ್ಲಿ ಅವನಿಗೆ ಅವನ ತಂದೆ ತಾಯಿಯ, ಹೆಂಡತಿಯ, ಆಪ್ತೇಷ್ಟರ ಬೆಂಬಲ ಸಿಕ್ಕಿರುವುದು ಅವನ ನಡಿಗೆಯನ್ನು ಸುಗಮಗೊಳಿಸಿರುವುದು ನಿಜ. ಅದರ ಜೊತೆ ಜೊತೆಗೆ ಅವನಲ್ಲಿ ಇರುವ ಸರಳತೆ, ಸಹಜತೆ, ಮುಕ್ತತೆ ಹಾಗೂ ಎಲ್ಲರೊಡನೆ ಸಲೀಸಾಗಿ ಬೆರೆಯುವ ಗುಣ ಅವನಿಗೆ ಅಯಾಚಿತವಾಗಿ ಎಲ್ಲರ ಪ್ರೀತಿ ಅಭಿಮಾನ ದೊರಕುವಂತೆ ಮಾಡಿದ್ದು ಖಂಡಿತ. 


ಫೆಬ್ರವರಿ ಎರಡರಂದು ತನ್ನ ಸಂಗೀತ ಶಾಲೆಯ ದಶಮಾನೋತ್ಸವ ಕಾರ್ಯಕ್ರಮಕ್ಕೆ ನನ್ನನ್ನು ಅತಿಥಿಯಾಗಿ ಆಹ್ವಾನಿಸಿ ಆದರೋಪಚಾರ ಮಾಡಿದ್ದು ಒಬ್ಬ ಶಿಷ್ಯನ ಗುರುಭಕ್ತಿಗೆ ಒಂದು ಉತ್ತಮ ನಿದರ್ಶನ. ಅಲ್ಲಿ ನೆರೆದಿದ್ದ ಅವನ ಶಿಷ್ಯರ ಪ್ರತಿಭಾ ಪ್ರದರ್ಶನ ಹಾಗೂ ಕಾರ್ಯಕ್ರಮದ ನಿರ್ವಹಣೆಯ ಪರಿ ಅವನು ತನ್ನವರೊಡನೆ ಇರಿಸಿಕೊಂಡಿರುವ ಉತ್ತಮ ಸಂಬಂಧದ ಪ್ರತೀಕ. ತನ್ನೆಲ್ಲಾ ಸದ್ಗುಣಗಳೊಡನೆ ಸಂಗೀತ ಕ್ಷೇತ್ರದಲ್ಲಿ ವಿನಯನ ಕೈಂಕರ್ಯ ಹೀಗೆ ಮುಂದುವರೆದು ಅವನ ಮನೋಭಿಲಾಷೆ ನೆರವೇರಲಿ ಎಂದು ನನ್ನ ಪ್ರೀತಿಯ ಹಾರೈಕೆ. 


Posted 7/2/2025

No comments:

Post a Comment