24 February 2025
Shobha Article:
ಕಳೆದ ವಾರ ಲಕ್ನೋ ಗೆ ಒಂದು ಶೈಕ್ಷಣಿಕ ಸಮ್ಮೇಳನದಲ್ಲಿ ಭಾಗವಹಿಸಲು ಹೋಗಿದ್ದೆ. ಹೋಗಿದ್ದು ದೆಹಲಿಯ ಮೂಲಕ ಹಾಗೂ ಹಿಂದಿರುಗಿದ್ದು ಕೂಡಾ ದೆಹಲಿಯ ಮೂಲಕ. ಏರ್ ಪೋರ್ಟ್ ನಿಂದ ದೆಹಲಿ ನಗರ ಭಾಗಕ್ಕೆ ಹೋಗಿ ಬರುವ ಎರಡೂ ಸಂದರ್ಭಗಳಲ್ಲಿ ರಾತ್ರಿಯ ವೇಳೆಯಲ್ಲಿ ಮೆಟ್ರೋದಲ್ಲಿ ಸಂಚರಿಸುವ ಸಂದರ್ಭ ನನಗೆ ಒದಗಿ ಬಂದಿತ್ತು. ದೆಹಲಿಯ ಎಲ್ಲಾ ಭಾಗಗಳನ್ನು ಒಳಗೊಳಗೇ ಜೋಡಿಸಿದ ಮೆಟ್ರೋದ ಬಗ್ಗೆ ನನಗೆ ಬಹಳ ಹೆಮ್ಮೆ ಎನಿಸಿತು. ಒಂದು ಹಳ್ಳಿಯಿಂದ ಮಹಾನಗರಕ್ಕೆ ಬಂದಾಗ ಮೆಟ್ರೋ ಬಳಸಿ ನಮಗೆ ಬೇಕಾದಲ್ಲಿಗೆ ಆರಾಮವಾಗಿ ಹೋಗಿ ಬರುವ ಆ ವ್ಯವಸ್ಥೆ ಇರುವುದು ನಿಜಕ್ಕೂ ಶ್ಲಾಘನೀಯ.
ಆ ಮೆಟ್ರೋದ ಪಯಣದ ವೇಳೆಯಲ್ಲಿ ನಾನು ಸಮಯ ವ್ಯಯಿಸಲು ಅದರಲ್ಲಿ ಪಯಣಿಸುವವರ ಮುಖ ನೋಡುತ್ತಿದ್ದೆ. ರಾತ್ರಿ ಒಂಬತ್ತು ಕಳೆದು ಗಡಿಯಾರದ ಮುಳ್ಳು ಹತ್ತರ ಹತ್ತಿರ ಹೋಗುವ ಸಮಯವದು. ಆಫೀಸಿನಲ್ಲೋ ಮತ್ತೆಲ್ಲೋ ದುಡಿದು ದಣಿದ ಬಸವಳಿದ ಮುಖಗಳವು. ಅವರವರ ನಿಲ್ದಾಣದಲ್ಲಿ ಇಳಿದು ಮತ್ತೆಷ್ಟೋ ದೂರ ಅವರವರ ಮನೆ ಮುಟ್ಟಲು ಹೋಗಬೇಕಾದ ತವಕ ಅಲ್ಲಿ ಕಾಣುತ್ತಿತ್ತು. ಅವರು ಮನೆ ಪ್ರವೇಶಿಸುತ್ತಿದ್ದಂತೆಯೇ ಅವರ ಮನೆಯ ವಾತಾವರಣ ಹೇಗಿರಬಹುದು? ಕೆಲಸದ ತಾಣದ ಹೊರೆ ಹೊತ್ತ ಅವರು ಮನೆ ಸೇರಿದಾಗ ಇನ್ಯಾತರ ಸ್ವಾಗತ ಕಾದಿರಬಹುದು? ಮನೆಯ ವಾತಾವರಣ ಹಿತಕರವಾಗಿರಬಹುದೆ ಇಲ್ಲವೇ? ಅವರ ಮನೆಯಲ್ಲಿ ಅವರಿಗಾಗಿ ಕಾತುರದಿಂದ ಕಾಯುವ ಮನಸ್ಸುಗಳಿರಬಹುದೆ? ಆ ಕಾತರದ ಮನಗಳನ್ನು ನೋಡಿ ಅವರ ಮನ ತಣಿಯಬಹುದೆ? ಮಾರನೇ ದಿನದ ತಯಾರಿಗಾಗಿ ಮನೆಯಲ್ಲಿ ಇನ್ನಷ್ಟು ಕೆಲಸಗಳು ಕಾದಿರಬಹುದೆ? ಹೀಗೆ ಅವರ ದಿನಂಪ್ರತಿಯ ಬದುಕಿನ ಬಗ್ಗೆ ನನಗೆ ಹಲವಾರು ಆಲೋಚನೆಗಳು ಬಂದವು. ಎಳೆಯ ಹುಡುಗ ಹುಡುಗಿಯರು, ಮಧ್ಯವಯಸ್ಕ ಗಂಡು ಹೆಣ್ಣುಗಳು ಎಲ್ಲರೂ ಆ ಆಪರ ಹೊತ್ತಿನಲ್ಲಿ ಪಯಣಿಸುವವರೇ?! ನಗರದಲ್ಲಿ ಗಡಿಯಾರದ ಮುಳ್ಳಿನ ಓಟಕ್ಕೆ ಎಣೆಯೇ ಇಲ್ಲವೇ? ಹಳ್ಳಿಗರಾದ ನಾವಷ್ಟೇ ರಾತ್ರಿ ಏಳೆಂಟು ಗಂಟೆಯಾದೊಡನೆ “ಸಮಯ ಬಹಳವಾಯಿತು” ಎಂದು ಎಣಿಸುವವರೆ?
ಈ ಸಮಯಾಸಮಯಗಳ ನಡುವೆಯೂ ನಾನು ಗಮನಿಸಿದ್ದು ಕೂತ ಕೆಲವು ಎಳೆಯರು ತಲೆಕೂದಲು ಹಣ್ಣಾದ ನಮ್ಮಂತವರಿಗೆ ಎದ್ದು ಸೀಟನ್ನು ಬಿಟ್ಟು ಕೊಡುತ್ತಿದ್ದ ರೀತಿಯನ್ನು. ಉತ್ತಮ ಸಂಸ್ಕಾರ ಎಂಬುದು ಹಳ್ಳಿಯಾದರೂ ದಿಲ್ಲಿಯಾದರೂ ಸರಿಯೇ ಹಿರಿಯರು ಕೊಟ್ಟ ಮಾರ್ಗದರ್ಶನದಿಂದ ಬರುವಂತಹದ್ದು ಎಂದು ನನಗೆ ವಿದಿತವಾಯಿತು. ಅಲ್ಲಿನ ಧಾವಂತದ ಬದುಕಿನ ಅನುಭವ ಕಂಡಿತು. ಹಗಲು - ರಾತ್ರಿಯ ಭೇದವಿಲ್ಲದ ಜೀವನ ಶೈಲಿಯ ನೋಟ ದೊರಕಿತು. ಇವೆಲ್ಲವನ್ನು ನೋಡಲು ಅನುವು ಮಾಡಿಕೊಟ್ಟ ಮೆಟ್ರೋದಲ್ಲಿನ ನನ್ನ ಕಿರು ಪಯಣ ನನ್ನೊಳಗಿನ ಕೆಲವು ಆಲೋಚನಾ ತಂತಿಗಳನ್ನು ಮೀಟಿದವು ಎಂದರೆ ತಪ್ಪಾಗಲಾರದು!
No comments:
Post a Comment