ಸೋಮವಾರ, 30/3/2026
ನಾನು ಹುಟ್ಟಿದ್ದು ಹಾಗೂ ಒಂಬತ್ತು ವರ್ಷಗಳವರೆಗೆ ಬೆಳೆದಿದ್ದು ಹೆಬ್ರಿಯಲ್ಲಿ ಆದ ಕಾರಣ ನನಗೆ ಸೀತಾನದಿಯೊಂದಿಗೆ ಬಾಲ್ಯ ಕಾಲದಿಂದಲೂ ಬಾಂಧವ್ಯವಿದೆ. ನಮ್ಮ ಮನೆಯ ಮಾಲಿಕರಾದ ಸುಮತಿ ಆಂಟಿಯ ಬಾಲವಾದ ನಾನು ಅವರು ಅವರ ನೆಂಟರ ಮನೆಯಾದ ಸೀತಾನದಿಗೆ ಹೋಗುವಾಗಲೆಲ್ಲ ಅವರ ಮಕ್ಕಳೊಡನೆ ಅವರ ಹಿಂದೆ ಹೋಗುತ್ತಿದ್ದೆ. ರಸ್ತೆಯ ಪಕ್ಕದಲ್ಲಿ ಇದ್ದ ಆ ನೆಂಟರ ಮನೆಯ ಮಗ್ಗುಲಲ್ಲಿ ಸೀತಾನದಿ ಹರಿಯುತ್ತಿತ್ತು. ಅವರ ಮನೆಯ ಬಳಿ ಅದು ಹೆಚ್ಚು ಆಳವಿಲ್ಲದ ಕಾರಣ ನಾವು ಮನಸೋ ಇಚ್ಛೆ ಆ ನದಿಯ ನೀರಿನಲ್ಲಿ ಆಟವಾಡುತ್ತಿದ್ದೆವು. ಅದರೊಡನೆಯ ನನ್ನ ನಂಟು ಎಷ್ಟಿದೆಯೆಂದರೆ ನಾನು ಈಗಲೂ ಆಗುಂಬೆ ಘಾಟಿ ಮುಖಾಂತರ ಊರೆಡೆಗೆ ಹೋಗುವಾಗಲೆಲ್ಲ ರಸ್ತೆಯ ಪಕ್ಕದಲ್ಲಿ ಹರಿಯುವ ಆ ನದಿ ಪ್ರತಿ ಬಾರಿಯೂ ಚುಂಬಕದಂತೆ ನನ್ನನ್ನು ಸೆಳೆಯುತ್ತದೆ.
ಮಾರ್ಚ್ 28ರಂದು ನಮ್ಮ ಶಾಲಾ ಶಿಕ್ಷಕರ ಔಟಿಂಗ್ ಗೆ ಹೊರಟ ನಾವು ಉಳಿದುಕೊಂಡಿದ್ದು ಸೀತಾನದಿಯ ತೀರದಲ್ಲಿದ್ದ ಇಕ್ಕೊಡ್ಲು ಹೋಂ ಸ್ಟೇ ಯಲ್ಲಿ. ಸಾಯಂಕಾಲ ಐದೂವರೆಗೆ ಅಲ್ಲಿ ತಲುಪಿದ ನಮ್ಮ ತಂಡ ಮೂಗು ಬಾಯಿಯಲ್ಲಿ ಸ್ನ್ಯಾಕ್ಸ್ ತಿಂದು, ಟೀ ಕುಡಿದು ಓಡಿದ್ದು ಆ ನದಿಯೆಡೆಗೆ! ನನಗೆ ಆ ಉರುಳುಗಲ್ಲಿನ ರಾಶಿಯಲ್ಲಿ ಹೆಜ್ಜೆ ಇಡುವುದು ಕಷ್ಟವಾದರೂ ನಮ್ಮವರೆಲ್ಲರ ಸಹಾಯ ಪಡೆದು ಮಹಾನ್ ಸಾಧನೆ ಮಾಡಿದವಳಂತೆ ನೀರಿನೊಳಗೆ ಇಳಿದೇ ಬಿಟ್ಟೆ. ಅರವತ್ತರ ಹೊಸ್ತಿಲಲ್ಲಿ ಇರುವ ನಾನು ಬೇರೆಯವರ ಸಹಾಯ ಪಡೆಯುವುದು ತಪ್ಪಲ್ಲವಲ್ಲವೆ? ನೀರಿನೊಳಗೆ ಇಳಿದ ಮೇಲೆ ನಾನು ಸರ್ವ ಸ್ವತಂತ್ರಳು; ಒಂದು ರೀತಿಯಲ್ಲಿ ನೀರೊಳಗಿನ ಮೀನಿನಂತೆ !!!
ಹದವಾಗಿ ಬೆಚ್ಚಗಿದ್ದ ಸೀತಾನದಿಯ ನೀರಿನೊಳಗೆ ನಮ್ಮ ತಂಡದವರು ಆಡಿದ್ದೇ ಆಡಿದ್ದು! ನೀರೆರಚಾಟವಂತೂ ಬಹಳ ಮಜವಾಗಿತ್ತು. ಈಜು ಬಲ್ಲವರು ಹೆಚ್ಚಿನ ಜನ ಇಲ್ಲದ ಕಾರಣ ತುಂಬಾ ಆಳವಿದ್ದ ಕಡೆಗೆ ಅವರನ್ನು ಹೋಗಗೊಡಲಿಲ್ಲ. ಈಜು ಬಲ್ಲ ನಾವೊಂದಿಷ್ಟು ಜನ ನದಿಯೊಳಗೆ ಒಂದಿಷ್ಟು ಈಜಿದೆವು. ಒಂದು ಕಡೆ ದಟ್ಟ ಮಳೆಯ ಮೋಡ; ಗುಡುಗು ಸಿಡಿಲಿನ ಅಬ್ಬರಾಟ. ನಂತರದಲ್ಲಿ ಸಣ್ಣಗೆ ಹನಿಗರೆಯತೊಡಗಿದ್ದ ಆ ವಾತಾವರಣದಲ್ಲಿ ನೀರೊಳಗೆ ಇರುವ ಆನಂದವೇ ಬೇರೆ. ಸುಮಾರು ಒಂದು ಗಂಟೆಯ ಕಾಲ ನದಿ ನೀರಿನಲ್ಲಿ ಆಟವಾಡಿ ನಂತರದಲ್ಲಿ ಹೋಂ ಸ್ಟೇ ಯಲ್ಲಿದ್ದ ಈಜುಕೊಳದಲ್ಲಿ ಈಜಾಟವಾಡಿದೆವು.
ಬಹಳ ವರುಷಗಳ ನಂತರ ನಾನು ಸೀತಾನದಿಯ ನೀರಲ್ಲಿ ಆಟವಾಡಿದ್ದು ನನ್ನ ಹಳೆಯ ನೆನಪುಗಳನ್ನು ಕಲುಕಿದಂತಾಯಿತು. ಬಾಲ್ಯದ ನೆನಪುಗಳೇ ಚೆಂದ. ಯಾವುದೇ ಜವಾಬ್ದಾರಿ ಇಲ್ಲದೆ ನಮ್ಮದೇ ಆದ ಜಗತ್ತಿನೊಳಗೆ ನಾವಿರಲು ಸಾಧ್ಯವಾಗುವುದು ನಮ್ಮ ಬಾಲ್ಯಕಾಲದಲ್ಲಿ ಮಾತ್ರವೇನೊ? ಪುನಃ ನಾನು ನನ್ನ ಬಾಲ್ಯಕಾಲಕ್ಕೆ ಹಿಂತಿರುಗಿ ಹೋಗಬಾರದೆ ಎಂದು ಆ ಕ್ಷಣ ಹಂಬಲಿಸಿದೆ.
ಮಾರನೆಯ ದಿನ ಬೆಳಿಗ್ಗೆ ಎದ್ದು ಮತ್ತೊಮ್ಮೆ ಅಲ್ಲಿ ಪ್ರಶಾಂತವಾಗಿ ಹರಿಯುತ್ತಿದ್ದ ಸೀತಾನದಿಯನ್ನು ಸಾದ್ಯಂತವಾಗಿ ಅವಲೋಕಿಸಿದೆ. ರಾತ್ರಿಯ ಮಳೆಯಿಂದ ನದಿಯ ರಭಸವೇನು ಜಾಸ್ತಿಯಾಗಿರಲಿಲ್ಲ. ಅದನ್ನು ಸುತ್ತುವರೆದಿದ್ದ ಹಸಿರು ಸಿರಿಯನ್ನು ನೋಡಿ ಕಣ್ತುಂಬಿಸಿಕೊಂಡೆ. ನನ್ನನ್ನೊಮ್ಮೆ ಪುನಃ ಬಾಲ್ಯಕ್ಕೆ ಕರೆದೊಯ್ದ ಆ ಕ್ಷಣವನ್ನು ಮನಸ್ಸಿನೊಳಗೆ ಭದ್ರಗೊಳಿಸಿದೆ. ನನ್ನೊಳಗಿನ ಭಾವನೆಗಳ ಪರಿವೇ ಇಲ್ಲದೆ ತನ್ನ ಪಾಡಿಗೆ ತಾನು ಹರಿಯುತ್ತಿದ್ದ ಆ ನದಿಗೆ ಮನದೊಳಗೆ ನಮಿಸಿದೆ
Posted 31.3.2026

No comments:
Post a Comment