Tuesday, February 1, 2022

ಅರಳುಂಡೆ - ಸಿಹಿ ಖಾದ್ಯ

ಫೆಬ್ರುವರಿ 1. 2022  

ಅರಳುಂಡೆ ನಾನು ಸಾಮಾನ್ಯವಾಗಿ ಮಾಡುವ ಸಿಹಿತಿಂಡಿ. ಗ್ಯಾಸ್ಟ್ರಿಕ್ ಸಮಸ್ಯೆ ಇರುವ ನನಗೆ ಹೊಟ್ಟೆಯಲ್ಲಿ ಉರಿ ಬಂದಾಗ ಒಂದು ಅರಳುಂಡೆ ತಿಂದು ನೀರು ಕುಡಿದರೆ ಒಂದು ರೀತಿಯ ಹಿತವಾಗುತ್ತದೆ.

ನನಗೆ ಚಿಕ್ಕವಳಿದ್ದಾಗ ಅರಳು ಪಂಚಕಜ್ಜಾಯ ತಿಂದು ರೂಢಿ ಇತ್ತು. ಅರಳುಂಡೆಯ ಪರಿಚಯ ಅಷ್ಟು ಇರಲಿಲ್ಲ. ನಮ್ಮಲ್ಲಿ ಹಬ್ಬ ಹರಿದಿನಗಳಲ್ಲಿ ಅರಳು ಅಥವಾ ತೆಳು ಅವಲಕ್ಕಿಯ ಪಂಚಕಜ್ಜಾಯ ಮಾಡುತ್ತಿದ್ದರು. ಅದಕ್ಕೆ ಬೆಲ್ಲ, ತೆಂಗಿನತುರಿ, ತುಪ್ಪ, ಏಲಕ್ಕಿ ಪುಡಿ ಹಾಕಿ ಹದವಾಗಿ ಕಲೆಸಿ ದೇವರ ನೈವೇದ್ಯ ಆದ ಮೇಲೆ ನಮಗೆಲ್ಲ ಪ್ರಸಾದ ರೂಪದಲ್ಲಿ ಕೊಡುತ್ತಿದ್ದರು. ಕೆಲವೊಮ್ಮೆ ಕಲೆಸುವಾಗ ಅದಕ್ಕೆ ಬಾಳೆಹಣ್ಣು ಸೇರಿಸುತ್ತಿದ್ದರು. ಆಗದರ ರುಚಿ ಉತ್ಕೃಷ್ಟವಾಗಿರುತ್ತಿತ್ತು. ನಾವೆಲ್ಲ ಆ ಪಂಚಕಜ್ಜಾಯಕ್ಕಾಗಿ ಬಾಯಿ ಬಿಟ್ಟುಕೊಂಡು ಕಾಯುತ್ತಾ ಕೂರುತ್ತಿದ್ದ ಅನುಭವ ಬಹಳ ಚೆಂದ. ಕಾದು ಕಾದು ನಂತರದಲ್ಲಿ ಪ್ರಸಾದ ಸಿಕ್ಕಾಗ ಅದನ್ನು ರುಚಿಕರವಾಗಿ ಮೆಲ್ಲುತ್ತಿದ್ದದ್ದನ್ನು ನೆನಪಿಸಿಕೊಂಡರೆ ಈಗಲೂ ಬಾಯಿಯಲ್ಲಿ ನೀರು ಬರುತ್ತದೆ🤗 ಪೂಜಾ ಕಾರ್ಯಕ್ರಮದ ನಂತರ ಈ ಪ್ರಸಾದ ಕೊಡುವ ರೂಢಿ ಬೆಳೆದದ್ದೇ ಪೂಜೆ ಮುಗಿಯುವ ತನಕ ಎಲ್ಲರೂ ಉಳಿಯಲಿ ಎಂದೇನೋ?
ನಾನು ಅರಳುಂಡೆ ಮಾಡಲು ಪ್ರಾರಂಭಿಸಿ ಈಗ್ಗ್ಯೆ ಒಂದೆರಡು ವರ್ಷಗಳಾದವಷ್ಟೇ. ಮಾಡಲು ಬಲು ಸುಲಭ. ನಾನು ಕೆಲವೊಮ್ಮೆ ಇಡೀ ಅರಳು ಹಾಕುತ್ತೇನೆ. ಮತ್ತೆ ಕೆಲವೊಮ್ಮೆ ಅರಳು ಪುಡಿ ಮಾಡಿ ಹಾಕುತ್ತೇನೆ. ಕೆಲವೊಮ್ಮೆ ಬರೀ ಅರಳಲ್ಲಿ ಉಂಡೆ ಮಾಡುತ್ತೇನೆ. ಕೆಲವೊಮ್ಮೆ ಅದರೊಡನೆ ಹುರಿದ ಶೇಂಗಾ, ತೆಂಗಿನತುರಿ ಸೇರಿಸುತ್ತೇನೆ. ಬೆಲ್ಲವನ್ನು ಬಾಣಲೆಗೆ ಹಾಕಿ ಒಂದೆಳೆ ಪಾಕ ಬಂದಾಗ ಅರಳನ್ನು ಸೇರಿಸಿ ಸ್ವಲ್ಪ ಬಾಣಲೆ ಬಿಡುವ ತನಕ ಮಗುಚಿ ಬೆಂಕಿ ಆರಿಸಿ ತಯಾರಾದ ಮಿಶ್ರಣ ತಣ್ಣಗಾಗುತ್ತಾ ಬಂದಾಗ ಉಂಡೆ ಕಟ್ಟಿದರೆ ಅರಳುಂಡೆ ತಿನ್ನಲು ಸಿದ್ಧ😊 ಇಂತಹ ಸುಲಭದ ಆರೋಗ್ಯಕರವಾದ ತಿನಿಸನ್ನು ಯಾರು ಬೇಕಾದರೂ ಮಾಡಬಹುದಲ್ಲವೇ?

No comments:

Post a Comment