Friday, May 6, 2022
ನನ್ನ ಬಾಲ್ಯ ಹೀಗಿರಲಿಲ್ಲ ಮಗಳೇ
ಕಂಡದ್ದೆಲ್ಲಾ ಕೊಂಡು ತಂದು ತುಂಬಿಡುವುದೇಕೆ ಮಗಳೇ..
ಒಮ್ಮೆ ತೊಟ್ಟ ಉಡುಗೆಗಳು ಆಕಳಿಸುತ ನಿನ್ನ ಕಾಯುತಿವೆ
ಮುಕ್ತಿಯ ದಾರಿ ಕಾಣದೇ ಕಪಾಟಿನಲ್ಲಿ ಕೊರಗುತಿವೆ...
ನನ್ನ ಬಾಲ್ಯ ಹೀಗಿರಲಿಲ್ಲ ಮಗಳೇ
ವರುಷಕ್ಕೊಂದೇ ಜೊತೆ ಹೊಸಬಟ್ಟೆ ತೊಡಲು ಒಡೆಯುತಿತ್ತು ಸಂಭ್ರಮದ ಕಟ್ಟೆ
ಪ್ರತಿ ಬಾರಿಯು ಖುಷಿಯ ನವಿರಿರುತ್ತಿತ್ತು..ವರ್ಷವಿಡೀ ಅದೇ ಹೊಸ ಅಂಗಿ
ಬೇಸರವಿರಲಿಲ್ಲ ಮತ್ತೆ ಮತ್ತೆ ತೊಡಲು...ಕಾಡುತ್ತಿರಲಿಲ್ಲ ಮತ್ತೊಂದು ಕೊಡಿಸಲು..
ಉಳ್ಳವರ ಬಟ್ಟೆಯ ಕಂಡು ಬಯಕೆಯಾದರೂ ಬೇಕೆನ್ನುತ್ತಿರಲಿಲ್ಲ...
ಹೆತ್ತವರ ಕಷ್ಟದ ಅರಿವಿರುತ್ತಿತ್ತು ಕೇಳಿದರೂ ಸಿಗುವುದು ಸಂಶಯವಿತ್ತು...
ಸದಾ ಹಣಕ್ಕೆ ಇದ್ದರೂ ಕೊರತೆ ಪುಟಿಯುತ್ತಿತ್ತು ಉತ್ಸಾಹದ ಒರತೆ...
ಬೆಳಗ್ಗಿನದೇ ಉಪ್ಪಿಟ್ಟೋ ಚಿತ್ರಾನ್ನವೋ ಮಧ್ಯಾಹ್ನಕ್ಕೂ ನಮ್ಮ ಬುತ್ತಿಯಲ್ಲಿ
ಹಸಿದ ಹೊಟ್ಟೆಗದುವೆ ಅಮೃತಪ್ರಾಯ ಬೇರೆ ಆಯ್ಕೆಯ ಅವಕಾಶ ಇತ್ತೇನಲ್ಲಿ...
ನಿಮ್ಮಂತೆ ರುಚಿ ಹೊರಗೆ ಹುಡುಕಿದರೆ ಧಿಮಾಕೆಂಬ ಹಣೆಪಟ್ಟಿಯ ಭಯ
ನಾವು ಹಾಗನ್ನುವಂತಿರಲಿಲ್ಲ ...ನಮ್ಮ ಬಾಲ್ಯ ಹೀಗಿರಲಿಲ್ಲ ಮಗಳೇ...
ದೊಡ್ಡವರ ಮಾತಿಗೆ ನಾವೆಂದೂ ಎದುರಾಡಲೇ ಇಲ್ಲ ನೋಡು....
ಚಾಚೂ ತಪ್ಪದೆ ಹೇಳಿದ್ದು ಮಾಡಿದ್ದೆವು ಅವರೆಂದುದು ತಪ್ಪೆಂದು ತಿಳಿದರೂ
ಯಾಕೆಂದು ವಾದಿಸದೇ ಪಾಲಿಸಿದ್ದೆವು ತಲೆಮೇಲೆ ಹೊತ್ತು ನಡೆಸಿದ್ದೆವು
ಮಡಿ ಮೈಲಿಗೆ ಮೂಢನಂಬಿಕೆ ಹೇಳಿದ್ದೆಲ್ಲವನ್ನೂ ಒಪ್ಪಿ ದ್ದೆವು
ಅವರ ಸಂತೋಷಕ್ಕಾಗಿ ನಮ್ಮ ನೆಮ್ಮದಿಗಾಗಿ....
ಇದೀಗ... ಇಷ್ಟು ವರ್ಷಗಳ ನಂತರ,
ನೀವು ಕೇಳಿದ್ದಕ್ಕೆಲ್ಲ ಉತ್ತರಿಸಲಾಗದೆ ಬೆಪ್ಪಾಗಿದ್ದೇವೆ..
ಅದೇಕೆ ಹಾಗೆ, ಅದರಿಂದೇನು ನಮ್ಮಿಷ್ಟಕ್ಕೆ ಬೆಲೆಯಿಲ್ಲವೇ
ನಮಗೆ ಸ್ವಾತಂತ್ರ್ಯ ಇಲ್ಲವೇ.ನೂರಾರು ಪ್ರಶ್ನೆಗಳು, ಸಂಶಯಗಳು..
ನಮ್ಮ ಬಾಲ್ಯ ಹೀಗಿರಲಿಲ್ಲ ಮಗಳೇ..ಇಂತಹ ಗೊಂದಲಗಳೇ ಇರುತ್ತಿರಲಿಲ್ಲ..
ಆದರೆ...
ಈಗ ಕಾಡುತ್ತಿದೆ ಯೋಚನೆ..ನಾವು ಸರಿಯೋ, ನೀವು ಸರಿಯೋ
ಆ ಕಾಲಕ್ಕದು ಸರಿ,ಈ ಕಾಲಕ್ಕಿದು ಸರಿ ಅಂದುಕೊಂಡರೂ,
ನಾವು ಎಡಬಿಡಂಗಿಗಳೇ ಹೌದು ಅಂದು ಹಿರಿಯರಿಗಂಜಿ
ಇಂದು ಕಿರಿಯರಿಗಂಜಿ ಬಾಳುವಲ್ಲಿ ನಮ್ಮ ಅಸ್ತಿತ್ವವೆಲ್ಲಿ????
ವಾಟ್ಸ್ ಅಪ್ ಬಂದಿರುವುದು
No comments:
Post a Comment