Thursday, October 20, 2022

ಭೂತಾರಾಧನೆಯ ಬಗ್ಗೆ ಒಂದು ಚಿಂತನೆ

 ಭೂತಾರಾಧನೆಯ ಬಗ್ಗೆ ಒಂದು ಚಿಂತನೆ

(ಲೇಖಕರು: ಮಹೇಂದ್ರ ಸೋಮಯಾಜಿ). 

ಭೂತಾರಾಧನೆ ತುಳುನಾಡಿನಲ್ಲಿ ವಿಶೇಷವಾಗಿ ಕಂಡುಬಂದರೂ ಬೇರೆ ಕಡೆ ಭೂತಗಳ ಆರಾಧನೆಯೇ ಇಲ್ಲ ಎನ್ನುವಂತಿಲ್ಲ. ಆಯಾ ಪ್ರದೇಶಗಳ ಸಂಪ್ರದಾಯದಂತೆ ಬೇರೆ ಕಡೆಗಳಲ್ಲೂ ಇದೆ. ಆದರೆ ಭೂತಾರಾಧನೆಯ ಮುಖ್ಯ ತಾಣ ತುಳುನಾಡು.

 


ಎಡಪಂಥೀಯರ ಅಕ್ರಮ ಪ್ರವೇಶ 

ಭೂತಗಳ ಬಗ್ಗೆ ತುಂಬಾ ತಪ್ಪುಕಲ್ಪನೆಗಳು ಜನರಲ್ಲಿ ಇವೆ. ಭೂತಾರಾಧಕರಲ್ಲೂ ಇರುವ ಈ ತಪ್ಪುಕಲ್ಪನೆಯ ದುರ್ಲಾಭವನ್ನು ಪಡೆಯಲು ಬಯಸುತ್ತಿರುವ ಎಡಪಂಥೀಯರು ಭೂತಾರಾಧಕರನ್ನು ಹಿಂದೂಸಮಾಜದಿಂದ ಬೇರ್ಪಡಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಹಿಂದೂ ಎಂಬ ಪದವು  ಭಾರತದೇಶದಲ್ಲಿ ಕಂಡುಬರುವ ಎಲ್ಲಾ ಮತಗಳ ಸಮೂಹವನ್ನು ಹೇಳುತ್ತದೆ. ಇದು ಕೋಶದಿಂದ ತಿಳಿಯುವ ಅರ್ಥವಲ್ಲ. ಆದರೆ ಈ ಅರ್ಥದಲ್ಲೇ ಎಲ್ಲರ ಪ್ರಯೋಗ ಇದೆ.


ಆದರೆ ವೈದಿಕಧರ್ಮವೇ ಹಿಂದೂಧರ್ಮ ಎಂಬ ಅರ್ಥದಲ್ಲೂ ಪ್ರಯೋಗ ಇದೆ. ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರ ಎಂಬ ಪಂಗಡಗಳಲ್ಲಿ ಸೇರುವ ಬ್ರಾಹ್ಮಣ ದಲಿತ ಬಿಲ್ಲವ ಬಂಟ ಮುಂತಾದ ಎಲ್ಲರೂ ವೈದಿಕರೇ. ಯಾಕೆಂದರೆ ಇವರೆಲ್ಲ ವೇದಗಳನ್ನು ಮತ್ತು ವೇದಾನುಕೂಲಸಾಹಿತ್ಯಗಳನ್ನು ನಿರಾಕರಿಸುವರಲ್ಲ. ಈ ದೇಶದಲ್ಲಿ ಎಲ್ಲವೂ ಹೀಗೆ ಸರಿಯಾಗಿ ನಡೆದುಬಂದಿತ್ತು. ಈ ನಾಲ್ಕು ವರ್ಣಗಳಲ್ಲಿ ಸೇರುವ ಎಲ್ಲರೂ ಈ ದೇಶದ ಮೂಲನಿವಾಸಿಗಳು.

ಭೂತಾರಾಧನೆ ಶಾಸ್ತ್ರಗಳಲ್ಲಿ ಅನುಕ್ತವಾದದ್ದು ಎಂದು ಸಾಧಿಸಿದರೆ ವೈದಿಕಶಾಸ್ತ್ರಗಳಲ್ಲಿ ಹೇಳದೇ ಇರುವ ಭೂತಗಳ ಆರಾಧನೆಯನ್ನು ಸಾವಿರಾರು ವರ್ಷಗಳಿಂದ ಮಾಡುತ್ತಿರುವ ಶೂದ್ರರು ವೈದಿಕರಲ್ಲ ಎಂದು ಸಾಧಿಸಬಹುದು. ಈ ಮೂಲಕ ಹಿಂದೂಸಮಾಜವನ್ನು ದುರ್ಬಲಗೊಳಿಸುವ ಆಲೋಚನೆ ಎಡಪಂಥೀಯರದ್ದು.

 


ಭೂತಗಳ ವಿಷಯದಲ್ಲಿ ಪ್ರಮಾಣ 

 ಭೂತಗಳ ವಿಷಯದಲ್ಲಿ ಶಾಸ್ತ್ರಪ್ರಮಾಣ ಇದೆ. ಈ ಭೂತಗಳು ಬೇರೆ ಯಾರೂ ಅಲ್ಲ. ಶಿವನ ಗಣಗಳು. ಇವುಗಳ ವಿಷಯದಲ್ಲಿ ಎರಡು ರೀತಿಯ ಆರಾಧನೆ ಇದೆ.

1. ಭೂತಗಳಿಗೆ ಒಂದು ಸತ್ಕಾರ ಕೊಟ್ಟು ಕಳುಹಿಸಿಕೊಡುವುದು.

2. ಭೂತಗಳಿಗೆ ಒಂದು ಸ್ಥಾನ ಕೊಟ್ಟು ನಿರಂತರ ಆರಾಧನೆ ನಡೆಸುವುದು.

 ಬೇರೆ ಯುಗಗಳಲ್ಲಿ ಭೂತಗಳ ಬಾಧೆ ಉಂಟಾದರೆ ಅವುಗಳಿಗೆ ಸತ್ಕಾರ ಕೊಟ್ಟು ಕಳುಹಿಸಿಕೊಡುವ ಕ್ರಮ ಹೆಚ್ಚಿಗೆ ಇತ್ತು. ಅವುಗಳಿಗೆ ಸ್ಥಾನ ಕೊಡುವ ಕ್ರಮ ಕಡಿಮೆ ಇತ್ತು. ಆದರೆ ಕಲಿಯುಗದಲ್ಲಿ ಅವುಗಳಿಗೆ ಸತ್ಕಾರ ಕೊಟ್ಟು ಕಳುಹಿಸುವ ಕ್ರಮವೂ ಇದೆ. ಅವುಗಳಿಗೆ ಶಾಶ್ವತಸ್ಥಾನ ಕೊಟ್ಟು ಆರಾಧಿಸುವ ಕ್ರಮವೂ ಇದೆ.

ಭಾಗವತಾದಿಪುರಾಣಗಳಲ್ಲಿ ಈ ಭೂತಗಣಗಳ ವಿವರ ಇದೆ.

ಕೃಷ್ಣ ಪೂತನೆಯನ್ನು ಕೊಂದ ನಂತರ ಅವನಿಗೆ ಯಾವುದೇ ಭೂತಗಳ ಬಾಧೆ ಬರಬಾರದೆಂದು ಅವನಿಗೆ ರಕ್ಷೆ ಮಾಡಿದ ಉಲ್ಲೇಖ ಇದೆ. (ಕೃಷ್ಣನಿಗೆ ಯಾವ ಬಾಧೆಯೂ ತಾಗುವುದಿಲ್ಲ ಎಂಬುದು ಬೇರೆ ಮಾತು) ಈಗಲೂ ಯಾರಾದರೂ ಭೂತಗಣಗಳ ಬಾಧೆಗೆ ಒಳಪಟ್ಟಿದ್ದರೆ ಓಕುಳಿ ನೀರನ್ನು ಸುಳಿದು ಬಿಸಾಡುವ ಕ್ರಮ ಇದೆ. ಆ ಓಕುಳಿ ನೀರನ್ನು ಸ್ವೀಕರಿಸಿ ಆ ಗಣಗಳು ಹೋಗುತ್ತವೆ ಎಂಬ ಭಾವ. ಇವೆಲ್ಲಾ ಸತ್ಕಾರ ಮಾಡಿ ಭೂತಗಳನ್ನು ಕಳುಹಿಸುವುದಕ್ಕೆ ಉದಾಹರಣೆಗಳು.

ಶಾಶ್ವತವಾಗಿ ಭೂತಗಳನ್ನು ನೆಲೆಗೊಳಿಸಿ ಆರಾಧಿಸುವ ಮಂತ್ರವಾದಿಗಳು ಯುಗಾಂತರದಲ್ಲೂ ಇದ್ದರು. ಆದರೆ ಸಂಖ್ಯೆ ಕಡಿಮೆ ಇತ್ತು.

ಈ ಭೂತಗಳ ಹೆಸರುಗಳನ್ನೂ ಭಾಗವತ ಹೇಳುತ್ತದೆ.

"ಡಾಕಿನ್ಯೋ ಯಾತುಧಾನ್ಯಶ್ಚ ಕೂಷ್ಮಾಂಡಾ ಯೇರ್ಭಕಗ್ರಹಾ:.....  ಎಂಬಲ್ಲಿ ಡಾಕಿನೀ, ಯಾತುಧಾನಾ, ಕೂಷ್ಮಾಂಡಾ, ಯಕ್ಷ, ಕೋಟರಾ, ರೇವತೀ ಮುಂತಾದ ಭೂತಗಳ ಹೆಸರುಗಳು ಭಾಗವತದಲ್ಲಿ ಹೇಳಲ್ಪಟ್ಟಿವೆ.

ಪ್ರಶ್ನಮಾರ್ಗ ಎಂಬ ಗ್ರಂಥ ಇದೆ. ಇದು ಅಲ್ಲಿಯವರೆಗೆ ರಚಿತವಾದ ಹೆಚ್ಚಿನ ಪ್ರಶ್ನಗ್ರಂಥಗಳ ಸಂಗ್ರಹಗ್ರಂಥ. ಇದರಲ್ಲಿ "ರುದ್ರಕೋಪೋದ್ಭವಾ ಏತೇ ಹ್ಯನ್ಯೇ ಚ ಬಹವೋ ಗ್ರಹಾ:" ಎಂಬುದಾಗಿ ಭೂತಗಳೆಲ್ಲಾ ಶಿವನ ಕೋಪದಿಂದ ಹುಟ್ಟಿದವು ಎನ್ನಲಾಗಿದೆ. ಹಾಗಾಗಿ ಭೂತಗಳು ಶಿವನ ಪರಿವಾರಗಳು ಎಂದು ತಿಳಿಯುತ್ತದೆ. "ಅಮರಾ ಅಸುರಾ ನಾಗಾ: ಯಕ್ಷಾ: ಗಂಧರ್ವರಾಕ್ಷಸಾ: | ಹೇಡ್ರ ಕಶ್ಮಲ........." ಇತ್ಯಾದಿಯಾಗಿ ಭೂತಗಳ ಹೆಸರುಗಳನ್ನೂ ಹೇಳಲಾಗಿದೆ. 

 ಪಂಜುರ್ಲಿ ಮುಂತಾದವು ಶಿವಗಣಗಳು 

ಅದೆಲ್ಲಾ ಸರಿ. ಶಾಸ್ತ್ರಗಳಲ್ಲಿ ಶಿವನ ಪರಿವಾರಗಳಾದ ಭೂತಗಳ ವಿವರ ಇದೆ. ಆ ಭೂತಗಳೇ ನಾವು ಆರಾಧಿಸುವ ಪಂಜುರ್ಲಿ, ಜುಮಾದಿ, ಮೈಸಂದಾಯ ಮುಂತಾದ ಭೂತಗಳು ಎಂಬುದಕ್ಕೆ ಏನು ಆಧಾರವಿದೆ ಎಂಬುದು ಪ್ರಶ್ನೆ.ಭೂತಾರಾಧನೆಯ ಇತಿಹಾಸ ತಿಳಿದರೆ ಅದು ಸ್ಪಷ್ಟವಾಗುತ್ತದೆ.

ಭೂತಾರಾಧನೆ ಬ್ರಾಹ್ಮಣರಲ್ಲಿ ಅಲ್ಲಲ್ಲಿ ಇದ್ದರೂ ಅದರ ವ್ಯಾಪ್ತಿ ಶೂದ್ರರಲ್ಲೇ ಹೆಚ್ಚು ಇರುವುದು. ಹಿಂದೆ ಕಾಡಿನಲ್ಲಿ ಅಥವಾ ಕಾಡಿಗೆ ಅಂಟಿದ ಪ್ರದೇಶಗಳಲ್ಲಿ ವಾಸ್ತವ್ಯ ಇರುವಾಗ ಈ ಭೂತಗಳ ಅನುಭವ ಅವರಿಗೆ ಹೆಚ್ಚು ಬಂದಿರುತ್ತದೆ. ಪ್ರಶ್ನಮಾರ್ಗದಲ್ಲಿ ಭೂತಗಳು ಇರುವ ಪ್ರದೇಶಗಳನ್ನು ಹೀಗೆ ಹೇಳುತ್ತಾರೆ.

"ಗುಹಾಶ್ಮಕೂಟಶೈಲಾಗ್ರವನೋಪವನ ಸಾನುಷು | ಸರಿದ್ವಾಪೀ ಸರ:ಕೂಪತಟಾಕೋದನ್ವತಾಂ ತಟೇ || ಸಂಗಮೇ........" ಇತ್ಯಾದಿಯಾಗಿ ಗುಹೆ, ಬೆಟ್ಟ, ಕಾಡು, ಉಪವನ ( ಹೂದೋಟ ಅಥವಾ ಹಾಡಿಯಂತದ್ದು), ಕಣಿವೆ, ನೀರಿನ ಸಮೀಪ,  ನದಿಗಳು ಸಂಗಮಿಸುವ ಪ್ರದೇಶಗಳಲ್ಲಿ, ದನಗಳ ಹಟ್ಟಿಯಲ್ಲಿ, ನಿಧಿ ಇರುವ ಪ್ರದೇಶ, ರಸಬಾವಿಯ ಸ್ಥಳ, ಬಿಲದ್ವಾರದಲ್ಲಿ, ಗ್ರಾಮದ ಗಡಿಯಲ್ಲಿ, ಮನೆಯಅಟ್ಟದಲ್ಲಿ ಈ  ಭೂತಗಳು ಇರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಈಗ ನೋಡಿ. ನಮ್ಮ ದೇಶದಲ್ಲಿ ಇಂತಹಾ ಜಾಗಗಳೇ ಭೂತಾಲಯಗಳು.ಗುಹೆಯೊಳಗೆ, ಬೆಟ್ಟದಲ್ಲಿ, ಕಾಡಿನಲ್ಲಿ ಹಾಡಿಯಲ್ಲಿ, ಕಣಿವೆಯಲ್ಲಿ, ನೀರಿನ ಸಮೀಪ, ಭೂತಗಳ ಸನ್ನಿಧಾನಗಳು ಇರುತ್ತವೆ. ದನಗಳ ಹಟ್ಟಿಯಲ್ಲಿ ಭೂತಗಳು ಇರುತ್ತವೆ ಎಂದು ಶಾಸ್ತ್ರ ಹೇಳುತ್ತದೆ. ಹಟ್ಟಿಬಾಗಿಲಿನಲ್ಲಿ ಬೊಬ್ಬರ್ಯನ ಆರಾಧನೆ ಪ್ರಸಿದ್ಧ. ನಿಧಿ ಇರುವ ಸ್ಥಳದಲ್ಲೂ ದೈವಗಳ ಪ್ರತಿಷ್ಠೆ ನಡೆಯುತ್ತದೆ. ಗ್ರಾಮದ ಗಡಿಯಲ್ಲಿ ಭೂತಗಳ ಇರುವಿಕೆಯನ್ನು ಶಾಸ್ತ್ರ ಹೇಳುತ್ತದೆ. ಮಾರಿ ಎಬ್ಬಿದ ನಂತರ ಗ್ರಾಮದ ಗಡಿಯಲ್ಲಿ ಬಲಿ ಕೊಡುವ ಕ್ರಮ ಇದೆ. ಅಟ್ಟದಲ್ಲಿ ಭೂತಗಳ ಇರುವಿಕೆಯ ಸಾಧ್ಯತೆಯನ್ನು ಶಾಸ್ತ್ರ ಹೇಳುತ್ತದೆ. ಇವತ್ತಿಗೂ ತುಳುನಾಡಿನಲ್ಲಿ ನೋಡಿ. ಎಷ್ಟೋ ಕಡೆ ಅಟ್ಟಗಳಲ್ಲಿ ದೈವಗಳ ಮಣೆಮಂಚ ಇಟ್ಟಿರುತ್ತಾರೆ. ಅಥವಾ ಅಟ್ಟದಂತೆ ಇರುವ ಮದನಕೈ ಹಲಗೆಯಲ್ಲಿ ದೈವಗಳ ಮಣೆಗಳು ಇರುತ್ತವೆ.

ಶಾಸ್ತ್ರಗಳಲ್ಲಿ ಹೇಳಿದ ಶಿವಗಣಗಳು ಶೂದ್ರರ ಅನುಭವಕ್ಕೆ ಬಂದು ಅವರಿಂದ ದೈವಗಳ ಪೂಜೆ ಆರಂಭವಾಯಿತು. ಆದರೆ ಶಾಸ್ತ್ರದಲ್ಲಿ ಹೇಳಿದ ಸಂಸ್ಕೃತ ಹೆಸರುಗಳ ಬಳಕೆ ಇಲ್ಲದೆ ತುಳು ಅಥವಾ ಕನ್ನಡದಲ್ಲಿ ನಾಮಗಳು ಉಂಟಾದವು. ಬೇರೆ ರಾಜ್ಯಗಳಲ್ಲಿ ಆಯಾ ಭಾಷೆಯ ಹೆಸರುಗಳಿಂದ ಕರೆಯಲ್ಪಟ್ಟವು. 

ಶಿವನ ಯಾವುದೋ ಒಂದು ಗಣ ವಿಚಿತ್ರಹಂದಿಯ ರೂಪದಲ್ಲಿ ಕಾಣಿಸಿ ಭೀತಿ ಉಂಟುಮಾಡಿದ್ದರಿಂದ ಅದಕ್ಕೆ ಪಂಜುರ್ಲಿ ಎಂಬ ಹೆಸರಿಟ್ಟು ಆರಾಧನೆ ಮಾಡಿದರು. ಯಾವುದೋ ಒಂದು ಗಣ ವಿಚಿತ್ರಹುಲಿಯ ರೂಪದಲ್ಲಿ ಹೆದರಿಸಿದ್ದರಿಂದ ಅದಕ್ಕೆ ಹುಲಿದೇವರು ಅಥವಾ ಹುಲಿಚೌ೦ಡಿ ಎಂಬ ಹೆಸರಿನಿಂದ ಆರಾಧನೆ ನಡೆಸಿದರು. 

 ಬ್ರಾಹ್ಮಣರು ಧಾರ್ಮಿಕ ಮಾರ್ಗದರ್ಶಕರು 

ಹಿಂದಿನಿಂದಲೂ ಬ್ರಾಹ್ಮಣರು ಇತರರಿಗೆ ಧಾರ್ಮಿಕವಿಷಯದಲ್ಲಿ ಮಾರ್ಗದರ್ಶಕರು ಎಂಬುದು ಪ್ರಸಿದ್ಧ. ಹಾಗಾಗಿ ಮೊದಲು ಆರಾಧನೆ ನಡೆಯುವಾಗ ಬ್ರಾಹ್ಮಣರ ಮಾರ್ಗದರ್ಶನ ಪಡೆದೇ ಮುಂದುವರಿದದ್ದು ನಿಶ್ಚಯ. ಅದಕ್ಕೆ ಪೂರಕವಾಗಿ ಪಾಡ್ದಾನಗಳಲ್ಲಿ ಯಾವುದೋ ದೈವ ಬರುವುದು, ಬ್ರಾಹ್ಮಣರಲ್ಲಿ ಕೇಳಿ ಹೋಮ ಇಟ್ಟು ದೈವ ನಂಬಿದ್ದು ಇಂತಹಾ ವಿಷಯಗಳು ಇವೆ. ಆ ಸಮಯದಲ್ಲಿ ಇದು ಯಾವುದೋ ರುದ್ರಗಣ. ಇದನ್ನು ಆರಾಧಿಸಬೇಕು ಎಂಬ ಮಾರ್ಗದರ್ಶನ ಸಿಕ್ಕಿರುತ್ತದೆ.

 ಮನುಷ್ಯರು ಸತ್ತು ದೈವ ಆಗುವುದು ಹೇಗೆ? 

ಇನ್ನು ಮತ್ತೊಂದು ಸಂಶಯ ಬರುತ್ತದೆ. ಕೆಲವು ಮನುಷ್ಯರು ಸತ್ತ ನಂತರ ದೈವ ಆದದ್ದಿದೆ. ಇದಕ್ಕೆ ಮಾಯಕ್ಕೆ ಸೇರುವುದು ಎನ್ನುತ್ತಾರೆ. ಇಲ್ಲಿ ಮಾಯೆ ಅಂದರೆ ಮಹಿಮೆ. ಮಹಿಮೆ ಪಡೆಯುವುದು ಎಂಬುದು ಇದರ ಅರ್ಥ.

ಸತ್ತ ನಂತರ ಸದ್ಗತಿ ಆಗದಿದ್ದರೆ ಆ ವ್ಯಕ್ತಿ ದುರ್ಗತಪ್ರೇತ ಅಥವಾ ದುರ್ಗತಪಿಶಾಚಿ ಆಗುತ್ತಾನೆ. ದೈವ ಆಗುವುದು ಹೇಗೆ ಎಂಬುದು ಪ್ರಶ್ನೆ.

ಆದರೆ ಸತ್ತ ನಂತರ ಆ ವ್ಯಕ್ತಿಗಳ ಆರಾಧನೆಯೂ ಸಹ ಸೂಚನೆ ಬಂದ ನಂತರ ಆರಂಭವಾದದ್ದು. ಸಾಮಾನ್ಯ ಮನುಷ್ಯ ಸತ್ತ ನಂತರ ಅವನಿಗೆ ಸದ್ಗತಿ ಆಗದಿದ್ದರೆ ತನಗೆ ಮೋಕ್ಷ ಕೊಡಿ ಎಂಬ ಸೂಚನೆ ಕೊಡುತ್ತಾನೆ.  ಕನಸಿನಲ್ಲಿ, ಅಥವಾ ಏನೋ ಆಕೃತಿ ಕಾಣಿಸಿ, ಅಥವಾ ಯಾರಿಗಾದರೂ ಆವೇಶ ಆಗಿ ಇಂತಹಾ ಸೂಚನೆ ಸಿಗುತ್ತದೆ. ಆದರೆ ವ್ಯಕ್ತಿಯೊಬ್ಬ ಸತ್ತ ನಂತರ ತನಗೆ ಸ್ಥಾನಕೊಟ್ಟು ದೈವದ ರೀತಿ ಪ್ರತಿಷ್ಠೆ ಮಾಡಬೇಕೆಂಬ ಸೂಚನೆ ಕೊಟ್ಟರೆ ಆ ವ್ಯಕ್ತಿ ಒಂದು ಶಿವಗಣದ ಅವತಾರವೇ ಆಗಿರುತ್ತಾನೆ. ಕಲ್ಕುಡ, ಕಾಳಮ್ಮ, ಚಿಕ್ಕು, ಕೋಟಿ, ಚೆನ್ನಯ್ಯ, ಸಿರಿ, ಕುಮಾರ, ಸಾಮು, ದಾರು, ಸೊನ್ನೆ, ಗಿಂಡೆ, ಅಬ್ಬಕ್ಕ, ದಾರಕ್ಕ, ತಿಮ್ಮಣ್ಣನಾಯಕ, ಇಂತಹವೆಲ್ಲ ಮೂಲದಲ್ಲಿ ಶಿವನ ಗಣಗಳೇ ಆಗಿದ್ದು ಶಿವನ ಆಜ್ಞೆಯಂತೆ ಧರ್ಮಸ್ಥಾಪನೆಗಾಗಿ ಭೂಮಿಗೆ ಬಂದು ಕಾಯ ಬಿಟ್ಟು ಮಾಯ ಸೇರಿ ಆರಾಧನೆ ಪಡೆದು ಅನುಗ್ರಹಿಸುತ್ತಿರುವವರು.

 ದೈವಗಳ ಪಾಡ್ದಾನಗಳು 

ಇನ್ನು ದೈವಗಳ ಪಾಡ್ದಾನಗಳ ವಿಷಯ. ದೈವಗಳ ಪಾಡ್ದಾನಗಳಲ್ಲಿ ದೈವಗಳಿಂದ ಈ ಭೂಮಿಯಲ್ಲಿ ಆದ ಕಾರಣೀಕಗಳ ವಿಷಯದಲ್ಲಿ ಸತ್ಯಾಂಶ ಇರುತ್ತದೆ. ಆದರೆ ಅವುಗಳ ಉತ್ಪತ್ತಿಗೆ ಸಂಬಂಧಿಸಿದಂತೆ ಕೈಲಾಸ ಲೋಕದಲ್ಲಿ ಆಗುವ ಘಟನೆಗಳು, ಅವು ಮಾಯ ಸೇರಿದ ನಂತರ ಬೇರೆ ದೇವತೆಗಳೊಡನೆ ವ್ಯವಹಾರ ಇತ್ಯಾದಿಗಳು ಕಾವ್ಯದೃಷ್ಟಿಯಿಂದ ಹೇಳಲ್ಪಟ್ಟವು ಎಂದು ತಿಳಿಯಬೇಕು. ಅದೇ ರೀತಿಯಲ್ಲಿ ದೈವಗಳಿಗೆ ಧ್ಯಾನಶ್ಲೋಕಗಳನ್ನು ಕೆಲವು ಬ್ರಾಹ್ಮಣರು ರಚಿಸಿ ಆರಾಧಿಸಿದ್ದಿದೆ. ಇದೂ ಸಹ ಪಾಡ್ದಾನದಂತೆ ರಚಿತವಾದದ್ದಾಗಿದೆ. ಹಾಗಾಗಿ ಶಿವನ ಗಣಗಳೇ ಪಂಜುರ್ಲಿ ಮುಂತಾದ ಭೂತಗಳು ಎಂಬುದಕ್ಕೆ ಪಾಡ್ದಾನಗಳ ಅಥವಾ ಸಂಸ್ಕೃತಶ್ಲೋಕಗಳ ಆಧಾರ ಸಾಕಾಗುವುದಿಲ್ಲ. ಅದಕ್ಕೆ ಈ ಹಿಂದೆ ಕೊಟ್ಟ ರೀತಿ ಕೆಲವು ಶಾಸ್ತ್ರವಾಕ್ಯಗಳಿಗೆ ಪೂರಕವಾದ ಯುಕ್ತಿಗಳೇ ಪ್ರಮಾಣಗಳು. ವಿಷ್ಣು, ಶಿವ, ಸುಬ್ರಹ್ಮಣ್ಯ ಮುಂತಾದ ವೇದೋಕ್ತದೇವತೆಗಳ ಸ್ಥಳಗಳಲ್ಲಿ ಪಂಜುರ್ಲಿ ಮುಂತಾದ ಭೂತಗಳು ಪರಿವಾರಗಳಾಗಿ ಪೂಜೆ ಪಡೆಯುವುದು ಕಾಣುತ್ತೇವೆ. ಅವು ಶಿವನ ಗಣಗಳಾಗಿದ್ದರಿಂದಲೇ ಅವುಗಳಿಗೆ ಅಲ್ಲಿ ಆರಾಧನೆ ನಡೆಯುತ್ತದೆ. ಹಾಗೆ ಅಲ್ಲದಿದ್ದರೆ ಹಿಂದಿನ ಆಚಾರವಂತರು ಅವುಗಳು ದೇವಸ್ಥಾನದ ಹತ್ತಿರ ಬರಲು ಬಿಡುತ್ತಿರಲಿಲ್ಲ.

 ಇಬ್ಬರು ಶಿವರು ಇಲ್ಲ. 

ಇನ್ನು ಕೆಲವರು ಹೇಳುತ್ತಾರೆ. ದೈವಗಳು ಶಿವನ ಗಣಗಳು ಹೌದು. ಆದರೆ ವೇದ ಪುರಾಣಗಳಲ್ಲಿ ಹೇಳಿದ ಶಿವನೇ ಬೇರೆ. ಈ ಶಿವನೇ ಬೇರೆ ಎಂಬುದಾಗಿ. ಆದರೆ ಇದು ಸರಿಯಲ್ಲ. ಹಾಗೆ ಹೇಳಿದರೆ ಕಲ್ಪನಾಗೌರವ. ಪಾಡ್ದಾನಗಳ ಕಥೆ ತೆಗೆದುಕೊಂಡರೂ ಅಲ್ಲಿ ಕೈಲಾಸಪರ್ವತ, ಪಾರ್ವತಿ ಹೀಗೆ ಪದಗಳು ಇರುವುದರಿಂದ ಆ ಕೈಲಾಸವೇ ಬೇರೆ ಈ ಕೈಲಾಸವೇ ಬೇರೆ, ಆ ಪಾರ್ವತಿಯೇ ಬೇರೆ ಈ ಪಾರ್ವತಿಯೇ ಬೇರೆ ಇತ್ಯಾದಿ ತುಂಬಾ ಕಲ್ಪಿಸಬೇಕಾಗುತ್ತದೆ. ಈ ವಾದವೂ ಸಹ ದ್ವೇಷದಿಂದ ಬಂದದ್ದು. ಬ್ರಾಹ್ಮಣರು ಪೂಜಿಸುವ ದೇವರ ಅಧೀನದಲ್ಲಿ ತಮ್ಮ ದೈವಗಳು ಇವೆ ಎಂದರೆ ಅದು ಅವಮಾನ ಎಂಬ ಹುಚ್ಚು ಕಲ್ಪನೆ ಅಷ್ಟೇ. ದೈವಗಳಿಗೇ ಇಲ್ಲದ ತಲೆಬಿಸಿ ಅವರಿಗೆ ಯಾಕೆ?

 ತುಳುನಾಡ ಬೆರ್ಮೇರ್ ವಿಷಯ 

ಇನ್ನು ತುಳುನಾಡ ದೈವಗಳಲ್ಲಿ ಮುಖ್ಯವಾದದ್ದು 

ಬೆರ್ಮೇರ್ ಎಂದು ಕಾಣುತ್ತದೆ. ಶಿವನ  ಮುಖ್ಯಗಣಗಳಲ್ಲಿ ಒಂದರ ಗೋಚರಿಕೆ ಶೂದ್ರರಿಗೆ ಬಂದಾಗ ಅದಕ್ಕೆ ಬೆರ್ಮೇರ್ ಎಂದು ಶೂದ್ರರು ಹೆಸರಿಟ್ಟರು. ಬ್ರಾಹ್ಮಣರು ಬ್ರಹ್ಮ ಎಂದು ಹೆಸರಿಟ್ಟರು. ಈ ಎರಡೂ ಹೆಸರೂ ಸಹ ಭಕ್ತರಿಂದ ಇಡಲ್ಪಟ್ಟದ್ದು. ಕೈಲಾಸದಲ್ಲಿ ಅದರ ಹೆಸರು ಯಾವುದೆಂದು ಯಾರಿಗೂ ಗೊತ್ತಿಲ್ಲ. ಈ ಬ್ರಹ್ಮ ಸೃಷ್ಟಿ ಮಾಡುವ ಬ್ರಹ್ಮ ಅಲ್ಲ. ಶಿವನ ಒಂದು ಗಣ. ಈ ಬ್ರಹ್ಮನ ಮುಖ್ಯಕ್ಷೇತ್ರ ಮಾರಣಕಟ್ಟೆ. ಅನೇಕ ಭೂತಗಳಿಂದ ಕೂಡಿಕೊಂಡ ಬ್ರಹ್ಮನ ಸಾನ್ನಿಧ್ಯ ಅಲ್ಲಿ ಇದೆ. ಆದರೆ ಅದನ್ನು ಮೂಕಾಸುರ ಎಂದು ತಪ್ಪು ತಿಳಿದಿದ್ದಾರೆ. ಅದು ತುಳುನಾಡಿನ ಪ್ರಧಾನ ದೈವವಾದ ಬೆರ್ಮೇರ್ ಅಥವಾ ಬ್ರಹ್ಮ.

 


ದೈವಗಳನ್ನು ಬ್ರಾಹ್ಮಣರು ಪೂಜಿಸಬಹುದು 

ಇನ್ನು ದೈವಗಳಿಗೆ ಬ್ರಾಹ್ಮಣರು ಪೂಜೆ ಮಾಡಬಹುದಾ ಬೇಡವಾ ಎಂಬ ವಿಷಯ. ಶೂದ್ರರ ಪೂಜೆಗೂ ಬ್ರಾಹ್ಮಣರ ಪೂಜೆಗೂ ಇಷ್ಟೇ ವ್ಯತ್ಯಾಸ. ಶೂದ್ರರು ತುಳು ಅಥವಾ ಕನ್ನಡದಲ್ಲಿ ಪೂಜೆ ಮಾಡುತ್ತಾರೆ. ಬ್ರಾಹ್ಮಣರು ಸಂಸ್ಕೃತದಲ್ಲಿ ಪೂಜಿಸುತ್ತಾರೆ. ಇವೆಲ್ಲಾ ಭಾರತದ ಭಾಷೆಗಳೇ. ಅಲ್ಲದೇ ಕೈಲಾಸದಲ್ಲಿ ಮೂಲರೂಪದಲ್ಲಿ ಇರುವಾಗ ದೈವಗಳ ಭಾಷೆ ಸಂಸ್ಕೃತವೇ. ಯಾಕೆಂದರೆ ಸಂಸ್ಕೃತ ದೇವಭಾಷೆ. ಉದಾಹರಣೆಗೆ ಕಲ್ಕುಡನನ್ನು ಶೂದ್ರನೊಬ್ಬ ಪೂಜಿಸುವಾಗ ತುಳು ಅಥವಾ ಕನ್ನಡದಲ್ಲಿ ಪೂಜಿಸುತ್ತಾನೆ. ಜಕಣಾಚಾರಿ ಎಂಬ ಅವತಾರರೂಪದ ವಿವಕ್ಷೆ ಆಗ ಇರುತ್ತದೆ. ಆದರೆ ಬ್ರಾಹ್ಮಣ ಕಲ್ಕುಡನ ಪೂಜೆ ಮಾಡುವಾಗ ಅವನ ಮೂಲರೂಪದ ವಿವಕ್ಷೆಯೊಂದಿಗೆ ಜಕಣಾಚಾರಿಯ ವಿವಕ್ಷೆ ಇರುತ್ತದೆ. 

 ದೈವಗಳಿಗೆ ಬ್ರಹ್ಮಕಲಶ ತಪ್ಪಲ್ಲ 

ಇನ್ನು ದೈವಗಳಿಗೆ ನೂರಾರು ಕಲಶ ಅಭಿಷೇಕ ಸರಿಯೇ ಎಂಬುದು ಪ್ರಶ್ನೆ. ಕಲಶವೇ ದೈವಗಳಿಗೆ ನಿಷಿದ್ಧ ಆದರೆ ನಿಷಿದ್ಧ ಎನ್ನಬಹುದು. ಆದರೆ ಹಾಗಿಲ್ಲ. ದೈವಗಳಿಗೆ ಕಲಶ ಕಟ್ಟುವುದು ಪ್ರಸಿದ್ಧ. ಒಂದು ಕಲಶ ಅಭಿಷೇಕ ಮಾಡಬಹುದಾದರೆ ನೂರು ಮಾಡಿದರೇನು ಸಾವಿರ ಮಾಡಿದರೇನು. 

ಇನ್ನು ಆಗಮೋಕ್ತ ತತ್ತ್ವಾವಾಹನೆ ಎಲ್ಲ ಮಾಡಬಹುದಾ ಅಂತ ಪ್ರಶ್ನೆ. ಅದರಲ್ಲಿ ಏನು ತಪ್ಪಿದೆ. ತತ್ತ್ವಾಭಿಮಾನಿ ದೇವತೆಗಳು ಎಲ್ಲಾ ಚೇತನರಲ್ಲೂ ಇರುತ್ತಾರೆ. ದೈವಗಳಲ್ಲೂ ಇರುತ್ತಾರೆ. ಇರುವ ಆ ಶಕ್ತಿಗಳನ್ನು ನೆನಪಿಸಿಕೊಂಡರೆ ಏನು ತಪ್ಪಿದೆ? ದೇವಯೋನಿಗಳಲ್ಲಿ ಸೇರಿದ್ದರಿಂದ ಅಗ್ನಿಮುಖದ ಆಹುತಿಯೂ ತಪ್ಪಲ್ಲ.

ಅನೇಕ ಕಡೆಗಳಲ್ಲಿ ದೈವಗಳಿಗೆ ವೇದಮಂತ್ರಗಳನ್ನು ಹೇಳದೆ ಪುರಾಣಮಂತ್ರಗಳನ್ನು ಹೇಳುವ ಕ್ರಮ ಯಾಕೆ ಎಂಬ ಪ್ರಶ್ನೆ ಹಲವರಿಗೆ ಇದೆ. ಶೂದ್ರರು ಆರಾಧಿಸುವ ದೈವಗಳಿಗೆ ಬ್ರಾಹ್ಮಣರು ಚೈತನ್ಯ ವೃದ್ಧಿಪಡಿಸುವ ಸಮಯದಲ್ಲಿ ವೇದಮಂತ್ರಗಳನ್ನು ಹೇಳುವಂತೆಯೇ ಇಲ್ಲ. ಯಾಕೆಂದರೆ ವೇದೋಪದೇಶ ಇಲ್ಲದವರು ಆರಾಧಿಸುವುದರಿಂದ ಪುರಾಣಮಂತ್ರಗಳನ್ನೇ ಹೇಳಬೇಕು. ಆದರೆ ಬ್ರಾಹ್ಮಣರು ಪೂಜಿಸುವ ದೈವಗಳಿಗೂ ಹೆಚ್ಚಿನ ಕಡೆಗಳಲ್ಲಿ ವೇದಮಂತ್ರಗಳನ್ನು ಹೇಳದೆ ಪುರಾಣಮಂತ್ರಗಳನ್ನು ಹೇಳಲಾಗುತ್ತದೆ. ಇದಕ್ಕೆ ಕಾರಣ ಇಷ್ಟೇ. ಹೆಚ್ಚಿನ ಶಿವಗಣಗಳು ಬ್ರಾಹ್ಮಣೇತರ ಜಾತಿಗಳಲ್ಲಿ ಅವತಾರ ತಾಳಿದ್ದಾರೆ. ಹಾಗಾಗಿ ಅವರು ಜೀವಿತದಲ್ಲಿ ವೇದಾಧ್ಯಯನ ಮಾಡಲಿಲ್ಲ. ಹಾಗಾಗಿ ಅವರಿಗೆ ವೇದಮಂತ್ರಗಳ ಪೂಜೆ ಇಲ್ಲ. ಆದರೆ ಮೂಲರೂಪದಲ್ಲಿ ಅವರು ವೇದಾಧಿಕಾರ ಇರುವ ಶಿವನ ಗಣಗಳೇ ಆಗಿರುವ ವಿಷಯ ಗಮನದಲ್ಲಿಟ್ಟುಕೊಂಡು ಕೆಲವು ಕಡೆಗಳಲ್ಲಿ ದೈವಗಳಿಗೆ ವೇದಮಂತ್ರಗಳಿಂದ ಪೂಜೆ ಇದೆ.


ಹೀಗೆ ಭೂತಾರಾಧನೆ ಸಮಗ್ರ ಹಿಂದೂಗಳ ಹಕ್ಕು. ಭೂತಗಳು ಎಲ್ಲರನ್ನೂ ಒಗ್ಗೂಡಿಸಲು ಇರುವವುಗಳು. ಅವುಗಳ ಹೆಸರಿನಲ್ಲಿ ಹಿಂದೂಸಮಾಜ ಒಡೆಯಲು ಯತ್ನಿಸುವುದು ಮೂರ್ಖತನ.

ಕೊನೆಯಲ್ಲಿ ಒಂದು ಮಾತು. ನಿಮ್ಮ ನಿಮ್ಮ ಮನೆಗಳಲ್ಲಿ, ಸ್ಥಳಗಳಲ್ಲಿ ಇರುವ ದೈವಗಳನ್ನು ತುಂಬಾ ಪ್ರೀತಿಯಿಂದ ಆರಾಧಿಸಿರಿ. ಅವುಗಳಿಗೆ ಇಷ್ಟವಾದ ಪೂಜೆ, ಕೋಲ, ದರ್ಶನ ಇತ್ಯಾದಿಗಳನ್ನು ನಡೆಸಿಕೊಂಡು ಬನ್ನಿ. ದೈವಗಳ ಪೂಜೆ ಮಾಡಿ ಹಾಳಾದವರಿಲ್ಲ. ಅವುಗಳ ಆರಾಧನೆ ಬಿಟ್ಟದ್ದರಿಂದ ಸರ್ವನಾಶವಾದದ್ದಿದೆ.  ಎಡಪಂಥೀಯರ ಮಾತು ಕೇಳಿ  ಬ್ರಾಹ್ಮಣರನ್ನು ದೈವಗಳಿಂದ ದೂರಮಾಡುವ ಪ್ರಯತ್ನವನ್ನು ಮಾಡಬೇಡಿ. (ಬ್ರಾಹ್ಮಣರಾದ ನಮ್ಮ ಮನೆಯಿಂದ ಇಪ್ಪತ್ನಾಲ್ಕು ದೈವಗಳ ಆರಾಧನೆ ನಡೆಯುತ್ತಿದೆ). ಹಿಂದಿನಿಂದ ಬಂದಂತೆ ಪರಸ್ಪರ ಸಾಮರಸ್ಯ ಇರಲಿ. ನಿಸ್ಸಂಶಯವಾಗಿ ಶೂದ್ರರ ಕ್ರಮದಂತೆಯೂ ಬ್ರಾಹ್ಮಣರ ಕ್ರಮದಂತೆಯೂ ದೈವಗಳ ಆರಾಧನೆ ನಡೆದುಬರಲಿ. ದೈವಾರಾಧನೆ ವಿಶ್ವಪ್ರಸಿದ್ಧವಾಗಲಿ. ಈ ದೇಶದ ಮೂಲನಿವಾಸಿಗಳಾದ ಬ್ರಾಹ್ಮಣ,ಕ್ಷತ್ರಿಯ, ವೈಶ್ಯ, ಶೂದ್ರರೆಲ್ಲಾ ಸೇರಿಕೊಂಡು ದೈವಗಳನ್ನು ಶಿವಗಣಗಳೆಂದು ತಿಳಿದು ಆರಾಧಿಸೋಣ. ಅವುಗಳ ಅನುಗ್ರಹ ಪಡೆಯೋಣ.

ಮಹೇಂದ್ರ ಸೋಮಯಾಜೀ.

WhatsApp forwarded 21/10/2022

No comments:

Post a Comment