ಸೋಮವಾರ, ಅಕ್ಟೋಬರ್ 3, 2022
ಐನೊಕ್ಷ್ ಮಣಿಪಾಲ
ನಾವು, ರಘುರಾಮ, ಸುಜಾತಾ, ಸ್ಮಿತಾ, ನಳಿನಿ ಮತ್ತು ನಾನು ಸೋಮವಾರ ಮಧ್ಯಾಹ್ನ ಮಣಿಪಾಲದ ಇನೊಕ್ಷ್ ಥಿಯೇಟರ್ ಗೆ ಹೋಗಿ "ಕಾಂತಾರ" ಸಿನೆಮಾವನ್ನು ವೀಕ್ಷಿಸಿದೆವು.
ಅದೊಂದು ಅದ್ಭುತವಾದ ಕನ್ನಡ ಸಿನೆಮಾ ಆಗಿತ್ತು.
ಕರಾವಳಿ ಜನರು ನಂಬಿದ ದೈವದ ಕಥೆ, ಭೂತಾರಾಧನೆ, ಪಂಜುರ್ಲಿ, ಕೋಲ, ಗುಳಿಗ , ಕ್ಷೇತ್ರಪಾಲ ಗಳನ್ನು ಒಳಗೊಂಡ ಸುಂದರವಾದ ಚಿತ್ರಣ. ಅದೊಂದು ದಂತ ಕಥೆ.....
ಅದೊಂದು ಐತಿಹಾಸಿಕ, ಸಾಂಸ್ಕೃತಿಕ, ವಿಶ್ಲೇಷಣಾತ್ಮಕ ನೋಟ....
ನಿರ್ದೇಶನ, ಮುಖ್ಯ ಪಾತ್ರದಲ್ಲಿ ಇದ್ದ ರಿಶಬ್ ಶೆಟ್ಟಿ ಅವರ ಅದ್ಭುತ ನಟನೆ ಎಲ್ಲರನ್ನೂ ಅಚ್ಚರಿಗೊಳಿಸಿತ್ತು.
ಎರಡು ವಾರಗಳ ನಂತರ, ಸಿನೆಮಾವು ರಾಜ್ಯಾದಂತ, ಬೇರೆ ರಾಜ್ಯಗಳಲ್ಲೂ ಹೌಸ್ ಫುಲ್ ಶೋ ಕಾಣುತ್ತಿದೆ.
ಅಚ್ಹುತ ಕುಮಾರ, ಸಪ್ತಮಿ ಗೌಡ, ಮಾನಸಿ ಸುಧೀರ್ ಪ್ರಮೋದ್ ಶೆಟ್ಟಿ ಇತರ ಪಾತ್ರಗಳಲ್ಲಿ ಕಾಣಿಸುತ್ತಾರೆ.
ರೋಹಿತ್ ಚಕ್ರತೀರ್ಥ ಅವರ ಅಂಕಣ:
"ಕಾಂತಾರ" ಗೆದ್ದಿದೆ ಎನ್ನುವುದಕ್ಕೆ ಕರ್ನಾಟಕದಾದ್ಯಂತ ಕೇಳಿಬರುತ್ತಿರುವ ಪಂಜುರ್ಲಿಯ ರಣಗರ್ಜನೆಯೇ ಸಾಕ್ಷಿ. ಈ ಸಿನೆಮವನ್ನು ಕರಾವಳಿಯ ಆಚೆಗಿನ ಜನರು ಕೂಡ ಒಪ್ಪಿಕೊಂಡಿದ್ದಾರೆ. ಒಂದೇ ಪೆಟ್ಟಿಗೆ ಈ ಸಿನೆಮ ಇದುವರೆಗೆ ತಜ್ಞರು ಕಟ್ಟಿಬೆಳೆಸಿದ್ದ ಹಲವು ಪೂರ್ವಗ್ರಹದ ನಿರ್ಣಯಗಳನ್ನು ಹೊಡೆದುಹಾಕಿದೆ ಎಂದು ಹೇಳಬಹುದು. ಉದಾಹರಣೆಗೆ ಇದು, ಸಂಪೂರ್ಣವಾಗಿ ನಂಬಿಕೆಯನ್ನು ನೆಚ್ಚಿಕೊಂಡಿರುವ ಸಿನೆಮ. ಇಲ್ಲಿ ಭೂತದ ಕಾರಣಿಕವನ್ನು ವೈಜ್ಞಾನಿಕ ಮನೋಧರ್ಮದ ಮೂಸೆಯಲ್ಲಿ ಅದ್ದಿತೆಗೆದು ಪರೀಕ್ಷಿಸುವ ಎಡ-ಬಿಡಂಗಿತನ ಇಲ್ಲ. ಭೂತದ ನುಡಿಯೆಂಬುದೆಲ್ಲ ಸುಳ್ಳು, ವರ್ತಮಾನ-ಭವಿಷ್ಯಗಳನ್ನು ಬದಲಿಸುವ ಶಕ್ತಿ ಭೂತಕ್ಕಿಲ್ಲ - ಎಂಬೆಲ್ಲ ವಾದಗಳನ್ನು ತಂದು ಸೇರಿಸಿ ಕಥೆ ಬೆಳೆಸುವುದಕ್ಕೆ ಅಮಿತ ಅವಕಾಶಗಳಿದ್ದರೂ ಅವೆಲ್ಲವನ್ನು ಬದಿಗಿಟ್ಟು ನಿರ್ದೇಶಕರು ಒಂದು ಶುದ್ಧ ಗ್ರಾಮೀಣ ಕತೆ ಹೇಳಿದ್ದಾರೆ. ಯಾವುದೋ ಒಂದು ಸೀಮಿತ ಕ್ಷೇತ್ರಕ್ಕೆ ಸಂಬಂಧಿಸಿದ ಸಂಸ್ಕೃತಿ, ಸಂಪ್ರದಾಯಗಳು ಪ್ಯಾನ್ ಕರ್ನಾಟಕದ ವೀಕ್ಷಕರಿಗೆ ರುಚಿಸುವುದಿಲ್ಲ - ಎಂಬ ಇದುವರೆಗೆ ಬೆಳೆಸಿಕೊಂಡು ಬಂದಿದ್ದ ತಜ್ಞರ ಥಿಯರಿಯನ್ನು ಕೂಡ ಈ ಸಿನೆಮ ಹೊಡೆದುಹಾಕಿದೆ. ಇಲ್ಲಿ ಭೂತಕೋಲದ ವಿವರಣೆಗೆ ನಿರ್ದೇಶಕರು ಇಳಿಯುವುದಿಲ್ಲ. ಭೂತ ಎಂದರೇನು, ದೈವ ಎಂದರೇನು, ಪಂಜುರ್ಲಿ ಎಷ್ಟು ಕಾರಣಿಕದ ದೈವ, ಕಾರಣಿಕ ಎಂದರೇನು - ಇತ್ಯಾದಿ ಯಾವ ಪ್ರಶ್ನೆಗಳಿಗೂ ಸಿನೆಮ ಉತ್ತರ, ವಿವರಣೆ ಕೊಡುವ ಕೆಲಸ ಮಾಡುವುದಿಲ್ಲ. ಪಕ್ಕಾ ನೇಟಿವಿಟಿಯನ್ನು ನಂಬಿಕೊಂಡೂ ಸಿನೆಮ ಗೆಲ್ಲಿಸಿತರುವುದು ಸುಲಭದ ಸಾಧನೆಯೇನಲ್ಲ.
ಕಾಂತಾರ ಎಂದರೆ ಅನೂಹ್ಯವಾದ ಕಾಡು ಎಂದು ಅರ್ಥ. ಕಾಡು, ನಾಡು, ಕೃಷಿ, ಭೂತ, ಗ್ರಾಮೀಣಜೀವನ - ಈ ಎಲ್ಲ ಸಂಗತಿಗಳ ಸುತ್ತ ಸುತ್ತುವ ಸಿನೆಮಕ್ಕೆ ಕಾಂತಾರ ಎಂಬುದು ಸೂಕ್ತವಾಗಿ ಒಪ್ಪುವ ಹೆಸರು. ದೈವವೇ ಇಲ್ಲಿ ಪ್ರಮುಖ ಪಾತ್ರ. ಭೂತ ಎಂಬ ಶಬ್ದಕ್ಕೆ ಪ್ರಪಂಚದ ಬೇರೆಲ್ಲ ಕಡೆಯಲ್ಲಿರುವ ಅರ್ಥಕ್ಕಿಂತ ಭಿನ್ನವಾದ ಅರ್ಥವ್ಯಾಪ್ತಿ ನಮ್ಮ ಕರಾವಳಿಯ ತುಳುಸಂಸ್ಕೃತಿಯಲ್ಲಿದೆ. ಭೂತಗಳು ಮೂಲತಃ ಮನುಷ್ಯರೇ (ಮನುಷ್ಯರಷ್ಟಲ್ಲದೆ ಪ್ರಾಣಿಗಳೂ ದೈವದ ಸ್ಥಾನಕ್ಕೇರಿವೆ). ಅಸಾಧಾರಣ ಸಾಧನೆ ಮಾಡಿ ದೈವತ್ವಕ್ಕೇರಿದ ಮನುಷ್ಯರನ್ನು ಭೂತ, ದೈವ ಎಂದು ಆರಾಧಿಸುವ ಪರಂಪರೆ ತುಳುನಾಡಿನಲ್ಲಿದೆ. ಭೂತಗಳಿಗೆ ಪ್ರತಿ ವರ್ಷ ಕೋಲ, ನೇಮ ನಡೆಯುತ್ತವೆ. ಈ ಸಂದರ್ಭದಲ್ಲಿ ಭೂತವು ಊರಿನ ಒಬ್ಬ ವ್ಯಕ್ತಿಯ ಮೂಲಕ ಪ್ರಕಟವಾಗಿ ನುಡಿ ಕೊಡುತ್ತದೆ. ಊರಿನ ಜನರ ಸಮಸ್ಯೆ-ಸಂಕಟಗಳನ್ನು ಪರಿಹಾರ ಮಾಡುತ್ತದೆ. ಸರ್ವರಿಗೆ ಅಭಯಪ್ರಧಾನ ಮಾಡುತ್ತದೆ. ವಿಶೇಷವೆಂದರೆ ಭೂತಕೋಲದಲ್ಲಿ ಭೂತದ ಪಾತ್ರವನ್ನು ನಿರ್ವಹಿಸುವವನು ಆ ಊರಿನ ಅತ್ಯಂತ ನಿಮ್ನಸಮುದಾಯದ ವ್ಯಕ್ತಿ. ವರ್ಷದ ಬಾಕಿ ದಿನಗಳಲ್ಲಿ ಆತ ಊರಿನವರಿಗೆ, ಊರಿಗೆ ಅಸ್ಪೃಶ್ಯನಾದರೂ ಕೋಲದ ದಿನ ಆತನೇ ಭೂತವಾಗುತ್ತಾನೆ. ಊರಿನ ಗಣ್ಯಾತಿಗಣ್ಯರೆಲ್ಲರೂ ಅವನಿಗೆ ಅಡ್ಡಬೀಳುತ್ತಾರೆ, ತಲೆಬಾಗುತ್ತಾರೆ. ಇದೇಕೆ ಹೀಗೆ?
ಸ್ವಲ್ಪ ಮನೋವೈಜ್ಞಾನಿಕ ವಿಶ್ಲೇಷಣೆಗೆ ಇಳಿಯೋಣ. ಮನುಷ್ಯನ ಮಿದುಳಿನಲ್ಲಿ ಎರಡು ರೀತಿಯ ಮನಸ್ಸುಗಳಿರುತ್ತವೆ. ಒಂದು ಜಾಗ್ರತಮನಸ್ಸು, ಇನ್ನೊಂದು ಸುಪ್ತಮನಸ್ಸು. ಜಾಗ್ರತಮನಸ್ಸು ಮನುಷ್ಯನ ದಿನನಿತ್ಯದ ಜೀವನದ ಆಗುಹೋಗುಗಳಿಗೆ ಪ್ರತಿಕ್ರಿಯಿಸುತ್ತಿರುತ್ತದೆ. ವ್ಯಕ್ತಿಯು ಬುದ್ಧಿಪೂರ್ವಕವಾಗಿ ಮಾಡುವ ಎಲ್ಲ ಕೆಲಸಗಳಲ್ಲೂ ಜಾಗ್ರತಮನಸ್ಸು ಒಂದಿಲ್ಲೊಂದು ರೀತಿಯಲ್ಲಿ ಕೆಲಸ ಮಾಡುತ್ತಿರುತ್ತದೆ. ಒಬ್ಬ ಒಂದೂರಿಂದ ಇನ್ನೊಂದೂರಿಗೆ ಪ್ರಯಾಣಿಸಬೇಕಿದೆಯೆನ್ನಿ. ಆಗ ಆತ ಬಸ್ಸು ಹಿಡಿಯುತ್ತಾನೆ, ಕಂಡಕ್ಟರ್‌ಗೆ ಟಿಕೇಟಿಗೆ ದುಡ್ಡು ಕೊಡುತ್ತಾನೆ. ತನ್ನ ಗಮ್ಯ ಬಂದಾಗ ಇಳಿಯುತ್ತಾನೆ. ಇವೆಲ್ಲ ಜಾಗ್ರತಮನಸ್ಸು ಕ್ರಿಯಾಶೀಲವಾಗಿರುವುದರಿಂದ ನಡೆಯುವ ಕೆಲಸಗಳು. ಆದರೆ ಬಸ್ಸಿನಲ್ಲಿ ಕೂತಾಗ ಆತ ಅಕ್ಕಪಕ್ಕದವರನ್ನು ಗಮನಿಸುತ್ತಾನೆ. ಹೊರಗಿನ ಪರಿಸರವನ್ನು ನೋಡುತ್ತಾನೆ. ಯಾರ್ಯಾರು ಯಾವ್ಯಾವ ರೀತಿಗಳಲ್ಲಿ ವ್ಯವಹರಿಸುತ್ತಿದ್ದಾರೆಂಬುದನ್ನು ಕಾಣುತ್ತಾನೆ. ಈ ಯಾವ ಸಂಗತಿಗಳಿಗೂ ಆತ ಪ್ರತಿಕ್ರಿಯಿಸದೆ ಇದ್ದರೂ ಇದೆಲ್ಲವನ್ನು ಅವನ ಒಳಮನಸ್ಸು ದಾಖಲಿಸುತ್ತಾ ಇರುತ್ತದೆ. ತಾನು ಕಂಡ, ಕೇಳಿದ, ಅನುಭವಿಸಿದ ಪ್ರತಿಯೊಂದು ಸುದ್ದಿ, ಸಂಗತಿ, ಘಟನೆಗಳನ್ನು ಕೂಡ ಮನುಷ್ಯ ತನ್ನ ಒಳಮನಸ್ಸಿಗೆ ಸಾಗಿಸುತ್ತಾ ಹೋಗುತ್ತಾನೆ. ಹೀಗೆ ಮನುಷ್ಯ ಅಪ್ರಯತ್ನಪೂರ್ವಕವಾಗಿ ತನ್ನೊಳಗೆ ದಾಖಲಿಸಿಕೊಳ್ಳುತ್ತ ಹೋಗುವ ಸಂಗತಿಗಳೆಲ್ಲವೂ ಸುಪ್ತಮನಸ್ಸಿನಲ್ಲಿ ಅಚ್ಚೊತ್ತುತ್ತವೆ. ಅವನ ಜೀವನದ ಯಾವುದೋ ಸಂದರ್ಭದಲ್ಲಿ, ಯಾವುದೋ ಕ್ಷಣದಲ್ಲಿ ಅವು ಎದ್ದುಬರಬಹುದು.
ಸುಪ್ತ ಮತ್ತು ಜಾಗ್ರತ ಮನಸ್ಸುಗಳು ಒಟ್ಟೊಟ್ಟಾಗಿ ಕೆಲಸ ಮಾಡುವುದಿಲ್ಲ. ಸುಪ್ತಮನಸ್ಸು ಕೆಲಸ ಶುರುಮಾಡಬೇಕಾದರೆ ಜಾಗ್ರತಮನಸ್ಸು ನಿದ್ರಿಸಬೇಕು; ಅರ್ಥಾತ್ ತಾನು ಸುಮ್ಮನಾಗಬೇಕು. ನಾವು ನಿದ್ರೆ ಮಾಡುವಾಗ ಜಾಗ್ರತಮನಸ್ಸು ಕೂಡ ಸಂಪೂರ್ಣವಾಗಿ ನಿದ್ರೆಗೆ ಜಾರುವುದರಿಂದ ಸುಪ್ತಮನಸ್ಸು ಎದ್ದುಕುಣಿಯುತ್ತದೆ. ತಾನು ಇದುವರೆಗೆ ನೋಡಿದ, ಕೇಳಿದ ಸಂಗತಿಗಳನ್ನೆಲ್ಲ ಅದು ಮೆಲುಕು ಹಾಕುತ್ತದೆ. ನಿದ್ರೆಯಲ್ಲಿ ನಾವು ಕಾಣುವ ಕನಸು, ಸುಪ್ತಮನಸ್ಸು ಜಾಗ್ರತವಾಗಿರುವುದರ ಪರಿಣಾಮವೇ. ಜಾಗ್ರತಮನಸ್ಸನ್ನು ಮಲಗಿಸಿ ಸುಪ್ತಮನಸ್ಸನ್ನು ಎಬ್ಬಿಸುವ ಪ್ರಕ್ರಿಯೆಯಲ್ಲಿ ವ್ಯಕ್ತಿ ಭೌತಿಕವಾಗಿಯೂ ಮಲಗಿದ್ದರೆ ಅದು ಕನಸು; ಭೌತಿಕವಾಗಿ ಎಚ್ಚರಿದ್ದರೆ ಅದು ಯೋಗ/ಧ್ಯಾನ.
ಭೂತಕೋಲವನ್ನು ವೈಜ್ಞಾನಿಕವಾಗಿ ವಿಶ್ಲೇಷಿಸಬೇಕಾದರೆ ನಮಗೆ ಈ ಸಂಗತಿಗಳ ಪ್ರಾಥಮಿಕ ಪರಿಚಯವಾದರೂ ಇರಬೇಕು. ಕೋಲದ ಅಣಿ ಕಟ್ಟುವ ನಲ್ಕೆಯವನು (ಭೂತದ ಪಾತ್ರಧಾರಿ) ತನ್ನ ಜಾಗ್ರತಮನಸ್ಸನ್ನು ಸಂಪೂರ್ಣವಾಗಿ ನಿದ್ರಾಸ್ಥಿತಿಗೆ ಕೊಂಡೊಯ್ದು ಸುಪ್ತಮನಸ್ಸನ್ನು ಎಬ್ಬಿಸುತ್ತಾನೆ. ಅವನು ಕಟ್ಟುವ ವೇಷ, ಗಗ್ಗರ, ಅಲ್ಲಿ ನಡೆಯುವ ಆಚರಣೆಗಳು, ಕಿವಿತುಂಬುವ ವಾದ್ಯ, ಆ ರಾತ್ರಿಯ ಪರಿಸರ, ಆ ಅನೂಹ್ಯವಾದ ಗಾಢಕತ್ತಲೆ - ಇವೆಲ್ಲವೂ ಸೇರಿ ಅವನಿಗೆ ಜಾಗ್ರತಸ್ಥಿತಿಯಿಂದ ಸುಪ್ತಸ್ಥಿತಿಗೆ ಜಾರಲು ಅನುವು ಮಾಡಿಕೊಡುತ್ತವೆ. ಸುಪ್ತಮನಸ್ಸು ತೆರೆದುಕೊಂಡಾಗ ಆತ ನಿತ್ಯ ಕಾಣುವ ಸಾಮಾನ್ಯ ವ್ಯಕ್ತಿಯಾಗಿರುವುದಿಲ್ಲ. ಆತ ವರ್ಷಗಳಷ್ಟು ಕಾಲ (ಬಹಳಷ್ಟು ಬಾರಿ ಮೌನವಾಗಿ) ಕಂಡುಂಡ ಸ್ಥಿತಿಗತಿಗಳೆಲ್ಲವೂ ಅವನ ಕಣ್ಣ ಮುಂದೆ ಕುಣಿಯತೊಡಗುತ್ತವೆ. ಅವನ್ನು ಆತ ತನ್ನದೇ ರೀತಿಯಲ್ಲಿ ವಿಮರ್ಶೆಗೊಡ್ಡುತ್ತಾನೆ. ಆ ವಿಮರ್ಶೆಗೆ ತಕ್ಕಂತೆ ತನ್ನ ನಿರ್ಣಯಗಳನ್ನು ಕೊಡುತ್ತಾನೆ. ಅದನ್ನು ಜನ ದೈವನುಡಿ ಎಂದು ಭಕ್ತಿಯಿಂದ ಒಪ್ಪಿಕೊಳ್ಳುತ್ತಾರೆ. ಹೀಗೆ ವ್ಯಕ್ತಿಯೊಬ್ಬ ತನ್ನ ಜಾಗ್ರತಮನಸ್ಸನ್ನು ಮಲಗಿಸಿ ಸುಪ್ತಮನಸ್ಸನ್ನೆಬ್ಬಿಸಿ, ಅದರ ಬೆಂಬಲದಿಂದ ಮಾತಾಡುವುದನ್ನೇ ಜನ "ಮೈಯಲ್ಲಿ ಬಂದದ್ದು" ಎನ್ನುತ್ತಾರೆ.
ಹಿಂದಿನ ಕಾಲದಲ್ಲಿ ಪೊಲೀಸ್, ನ್ಯಾಯಾಲಯ ಇರಲಿಲ್ಲ. ಊರಿನ ನ್ಯಾಯಾನ್ಯಾಯಗಳ ತೀರ್ಮಾನವೆಲ್ಲ ನಡೆಯುತ್ತಿದ್ದದ್ದು ಪಂಚಾಯಿತಿಯಲ್ಲಿ; ತಪ್ಪಿದರೆ, ಭೂತದ ಸಮ್ಮುಖದಲ್ಲಿ. ಭೂತದ ನಲ್ಕೆ ಮಾಡುತ್ತಿದ್ದವನು ಸಮಾಜದ ಅತ್ಯಂತ ತಳ ಸಮುದಾಯದ ವ್ಯಕ್ತಿ. ಬಹುಶಃ ಆ ಸಮಾಜದವನೇ ಆಗಿರಬೇಕು ಎಂದು ಊರೇ ಸಾಂಘಿಕವಾಗಿ ಒಪ್ಪಿರಬೇಕು. ಯಾಕೆಂದರೆ ಸಮಾಜದ ಅತ್ಯಂತ ಕೆಳಗಿನ ಸಮುದಾಯದವನಾದ್ದರಿಂದ ಆತ ಸಮಾಜದ ಎಲ್ಲ ಸ್ತರದ ವ್ಯಕ್ತಿಗಳನ್ನೂ, ಅವರ ಜೀವನಗಳನ್ನೂ, ಅವರ ಬದುಕಿನ ಸರಿತಪ್ಪುಗಳನ್ನೂ, ಅವರು ಮಾಡಿದ ನ್ಯಾಯಾನ್ಯಾಯಗಳ ಕೆಲಸಗಳನ್ನೂ ನೋಡಿರುವ ಸಾಧ್ಯತೆಯಿದೆ. ಸರಳವಾಗಿ ಹೇಳಬೇಕೆಂದರೆ ನಿಮ್ನಸಮುದಾಯದ ತನಿಯ, ತುಕ್ರ, ಗುರುವ, ತೋಮ, ಅಂಗರರು ಸಮಾಜದ ನಿಜವಾದ ಸಾಕ್ಷಿಪ್ರಜ್ಞೆಗಳು. ಅವರಿಗೆ ಬಹುತೇಕ ಸಂದರ್ಭಗಳಲ್ಲಿ ಮಾತಾಡುವ ಅವಕಾಶವಿಲ್ಲ. ಸಮಾಜ ನಡೆಸಿರುವ ಎಲ್ಲ ಧರ್ಮಾಧರ್ಮಗಳ ಕೆಲಸಗಳನ್ನು, ಎಲ್ಲ ಭ್ರಷ್ಟಾಚಾರ - ಶಿಷ್ಟಾಚಾರಗಳನ್ನು ಮೌನವಾಗಿ ನೋಡುವ ಸಮುದಾಯವದು. ಹಾಗೆ ಅವರು ನೋಡಿದ, ಕೇಳಿದ ಸಮಾಜದ ಎಲ್ಲ ಓರೆಕೋರೆಗಳೂ ಅವರ ಸುಪ್ತಮನಸ್ಸುಗಳಲ್ಲಿ ದಾಖಲಾಗಿರುತ್ತವೆ. ಅಂಥ ತನಿಯ, ಗುರುವರಿಗೆ ವರ್ಷದಲ್ಲೊಮ್ಮೆ ಕೋಲದ ನೆಪದಲ್ಲಿ ಮಾತಾಡುವ ಅವಕಾಶ ಸಿಗುತ್ತದೆ. ಆಗವರು ಜಾಗ್ರತಮನಸ್ಸನ್ನು ನಿದ್ರೆಗಿಳಿಸಿ, ಸುಪ್ತಮನಸ್ಸನ್ನು ಎಬ್ಬಿಸಿ ಆ ಮೂಲಕ, ಭೂತದ ಮುಖವಾಣಿಯಾಗಿ ಮಾತಾಡತೊಡಗುತ್ತಾರೆ; ಸಮಾಜದ ಬಗ್ಗೆ ತಮ್ಮ ಸುಪ್ತಮನಸ್ಸು ಅದುವರೆಗೆ ಮಾಡಿಕೊಂಡುಬಂದ ವಿಶ್ಲೇಷಣೆಯ ಆಧಾರದಲ್ಲಿ ಧರ್ಮಾಧರ್ಮಗಳ ತೀರ್ಪು ಕೊಡುತ್ತಾರೆ. ಮತ್ತದನ್ನು ಭೂತದ ನುಡಿ ಎಂದು ಇಡೀ ಸಮಾಜ ಕಣ್ಣಿಗೊತ್ತಿ ಒಪ್ಪಿಕೊಳ್ಳುತ್ತದೆ. ತನ್ನನ್ನು ಧರ್ಮದ ಚೌಕಟ್ಟಿನಲ್ಲಿ ಬಂಧಿಸಲು ಸಮಾಜವೇ ಕಂಡುಕೊಂಡಿದ್ದ ಒಂದು ಸುಂದರ ಸಮುಚಿತ ಸಮೀಕರಣ ಇದು.
ಇದೇನೋ ಸರಿಯೆ. ಆದರೆ ಭೂತಕೋಲದ ಸಂದರ್ಭದಲ್ಲಿ ಇದಕ್ಕೊಂದು ದೈವಿಕ ಆವರಣ ಇದೆ. ತಳಸಮುದಾಯದ ದಲಿತ ಯುವಕನೊಬ್ಬ ವೇಷ ಹಾಕಿ ನುಡಿ ಹೇಳಿದ್ದರೆ ಏನು ಪರಿಣಾಮವಾಗುತ್ತಿತ್ತೋ ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಮಾಡಲು ದೈವದ ಹಿನ್ನೆಲೆಯೂ ಬೇಕಾಗುತ್ತದೆ. ಸೂಕ್ಷ್ಮವಾಗಿ ನೋಡಿದರೆ ಈ ದೈವಗಳೆಲ್ಲವೂ ತಮ್ಮ ಜೀವಿತದಲ್ಲಿ ಒಂದಿಲ್ಲೊಂದು ಸಂಘರ್ಷಕ್ಕೆ ತಮ್ಮನ್ನು ಒಡ್ಡಿಕೊಂಡಿದ್ದವುಗಳೇ. ಎಷ್ಟೋ ಸಲ ವ್ಯಕ್ತಿಗಳು ತಮ್ಮ ಕ್ಷಾತ್ರವನ್ನು ತೋರಿಸಿದ ಕಾರಣಕ್ಕೆ ಬಲಾಢ್ಯರಿಂದ ಕೊಲೆಯಾಗಿಹೋಗಿದ್ದಾರೆ. ಅಥವಾ ಧರ್ಮದ ಪರವಾಗಿ ನಿಂತ ಕಾರಣಕ್ಕೆ ಅವರನ್ನು ಬಲಾಢ್ಯಶಕ್ತಿಗಳು ಬಗ್ಗುಬಡಿದದ್ದುಂಟು. ಹೀಗೆ ನ್ಯಾಯ, ನೀತಿ, ಧರ್ಮದ ಪರವಾಗಿ ನಿಂತ; ಕೆಲವೊಮ್ಮೆ ಉಗ್ರಹೋರಾಟವನ್ನೂ ಮಾಡಿದ ವ್ಯಕ್ತಿಗಳು ಸತ್ತು ದೈವಗಳಾಗಿದ್ದಾರೆ. ಹಾಗಾಗಿ ನಲ್ಕೆಯವರು ನುಡಿ ಕೊಡುವಾಗ ಅವರಿಗೆ ಈ ಭೂತದ ಹಿರಿಮೆಯ ಹಿನ್ನೆಲೆಯೂ ಇರುತ್ತದೆ. ತಾನು ಇಂತಿಂಥ ಭೂತದ ಪರವಾಗಿ ಮಾತಾಡುತ್ತಿದ್ದೇನೆಂಬ ಎಚ್ಚರವು ನಲ್ಕೆಯವರಲ್ಲಿ ಒಂದು ಅಪಾರವಾದ ಜವಾಬ್ದಾರಿಯ ಭಾರವನ್ನೂ ಹೊರಿಸುತ್ತದೆ. ಅಲ್ಲದೆ ಅಂಥ ಭೂತದ ಬಾಯಿಯಿಂದ ಹೊರಬಂದ ಮಾತುಗಳನ್ನು ಮನಸಾ ಸ್ವೀಕರಿಸಬೇಕೆಂಬ ಜವಾಬ್ದಾರಿಯನ್ನೂ ಅದು ಜನಸಾಮಾನ್ಯರಲ್ಲಿ ತುಂಬುತ್ತದೆ. ಅದಕ್ಕಾಗಿಯೇ ಭೂತಕೋಲ ನಡೆಯುತ್ತಿರುವಂತೆಯೇ ಆ ಭೂತದ ಕಾರಣಿಕವನ್ನು ಸಾರುವ ಒಂದು ಮೌಖಿಕಕಾವ್ಯವನ್ನು (ಪಾಡ್ದನ) ಊರಿನ ಹಿರಿಯ ಹೆಂಗಸರು ಹಾಡುತ್ತಿರುತ್ತಾರೆ. ಈ ಕಾವ್ಯಗಳು ಭೂಮಿಯ, ಸೃಷ್ಟಿಯ ಆರಂಭದ ಕತೆಯಿಂದ ಶುರುಮಾಡಿ, ಆ ಭೂತದ ಜೀವನದ ಸಂಘರ್ಷ-ಹೋರಾಟಗಳನ್ನೆಲ್ಲ ಚಿತ್ರವತ್ತಾಗಿ ವಿವರಿಸಿ, ಕೊನೆಗೆ ದೈವತ್ವಕ್ಕೇರಿದ ಕಥೆಯನ್ನು ಹೇಳುತ್ತವೆ. ಒಟ್ಟಾರೆ ಭೂತಕೋಲಕ್ಕೆ ಇದೊಂದು ಅವರ್ಣನೀಯವಾದ ಅಲೌಕಿಕ ಆವರಣವನ್ನು ಒದಗಿಸುತ್ತದೆ.
ಕಾಂತಾರ ಶುದ್ಧ ಹಳ್ಳಿಯ ಕಥೆ. ಇಲ್ಲಿ ವೈದಿಕ ಸಂಸ್ಕೃತಿಯ ಸಣ್ಣ ವಾಸನೆಯೂ ಇಲ್ಲ. ಹಳ್ಳಿಯ ನಿಮ್ನವರ್ಗ, ಜಮೀನ್ದಾರ (ಧಣಿ) ಎಲ್ಲರೂ ಇಲ್ಲಿ ಅವೈದಿಕ ಸಂಸ್ಕೃತಿಯವರೇ. ಧಣಿ ಬ್ರಾಹ್ಮಣ ಎಂದು ಅಲ್ಲೆಲ್ಲೂ ತೋರಿಸಿಲ್ಲ. ದಲಿತನೊಬ್ಬ ತನ್ನ ಮನೆಯೊಳಗೆ ಬಂದುಹೋದ ಬಳಿಕ ಧಣಿ ಪಂಚಗವ್ಯ ಹಾಕಿಸುವ ಒಂದು ದೃಶ್ಯ - ಅದು ಅನಗತ್ಯವಾಗಿತ್ತು - ಬಿಟ್ಟರೆ ಇಡೀ ಚಿತ್ರದಲ್ಲಿ ವೈದಿಕ ಸಂಸ್ಕೃತಿಯ ನೆರಳೂ ಕಾಣಿಸುವುದಿಲ್ಲ. ಅಷ್ಟರಮಟ್ಟಿಗೆ ಇದು ಅಪ್ಪಟ ಅಬ್ರಾಹ್ಮಣ ತುಳುಸಂಸ್ಕೃತಿಯ ಪ್ರತಿಬಿಂಬದಂತೆ ಇದೆ ಎನ್ನಬಹುದು. ಹಾಗಂತ ತುಳುಸಂಸ್ಕೃತಿಯೆಂದರೆ ಅವೈದಿಕವಾದ್ದನ್ನಷ್ಟೇ ತೋರಿಸಬೇಕು ಎಂದೂ ಅರ್ಥವಲ್ಲ. ಉದಾಹರಣೆಗೆ ಈ ಚಿತ್ರದಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುವ ಪಂಜುರ್ಲಿ ದೈವಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇವರ, ಈಶ್ವರ-ಪಾರ್ವತಿಯರ ಸಂಸರ್ಗವಿದೆ. ಹಂದಿಯ ಮರಿಯನ್ನು ಪಾರ್ವತಿ ತನ್ನ ಸ್ವಂತಮಗನಂತೆ ನೋಡಿಕೊಂಡದ್ದರ ಬಗ್ಗೆ, ಆ ಹಂದಿಯೇ ಮುಂದೆ ಸತ್ತು ದೈವತ್ವಕ್ಕೇರಿದ್ದರ ಬಗ್ಗೆ ಪಾಡ್ದನ ಬಹಳ ವಿಸ್ತೃತವಾಗಿ ಹೇಳುತ್ತದೆ. ಅಣ್ಣ-ತಂಗಿಯರಾಗಿದ್ದ ಹಂದಿಗಳು ಕುಕ್ಕೆಯ ಸುಬ್ರಹ್ಮಣ್ಯ ದೇವರಲ್ಲಿ ಬಂದು, "ಬೇಡಿಕೊಂಡ ಎಲ್ಲರಿಗೂ ಸಂತಾನ ಕರುಣಿಸುವ ನೀನು ನಮಗೂ ಸಂತಾನ ಕರುಣಿಸಬೇಕು. ನಾವು ಇನ್ನು ಮುಂದೆ ಗಂಡ ಹೆಂಡತಿಯಾಗಿ ಬಾಳುವುದಕ್ಕೆ ಅನುಮತಿ ಕೊಡಬೇಕು" ಎಂದು ಬೇಡಿ, ಅನುಮತಿ ಪಡೆದು ನಂತರ ಗಂಡಹೆಂಡತಿಯಾಗಿ ಬಾಳುವ, ಸಂತಾನ ಪಡೆಯುವ ವಿವರಗಳು ಕೂಡ ಪಾಡ್ದನದಲ್ಲಿ ಬರುತ್ತವೆ. ಅಂದರೆ ತುಳುನಾಡಿನ ಸಂಸ್ಕೃತಿಯಲ್ಲಿ ವೈದಿಕ - ಅವೈದಿಕ ಕವಲುಗಳೆರಡೂ ಒಂದರೊಳಗೊಂದು ಬೆಸೆದುಕೊಂಡು ಬಾಳಿದ್ದನ್ನೇ ನಾವು ಇತಿಹಾಸದುದ್ದಕ್ಕೂ ನೋಡುತ್ತೇವೆ. ಆದ್ದರಿಂದ "ಕಾಂತಾರ"ದಲ್ಲಿ ವೈದಿಕ ಸಂಸ್ಕೃತಿಯ ಚಿತ್ರಣವೇನಾದರೂ ಬಂದಿದ್ದರೂ ಅದೇನೂ ಅಪರಾಧವಾಗುತ್ತಿರಲಿಲ್ಲ. ಆದರೆ ಯಾವೊಂದು ರೀತಿಯಲ್ಲೂ ವೈದಿಕ ಸಂಸ್ಕೃತಿಯನ್ನು ತೋರಿಸದಿದ್ದರೂ ಈ ಸಿನಿಮಾದಲ್ಲಿ ಕೆಲವು ಬುದ್ಧಿವಂತರಿಗೆ ಓಂಕಾರ ಕೇಳಿಸಿದೆ; ವೈದಿಕ ಧರ್ಮ ಕಾಣಿಸಿದೆ; ಆ ಮೂಲಕ ಅವರಿಗೆ ರಿಷಬ್ ಶೆಟ್ಟಿಯವರ ಎದೆಯ ಮೇಲೂ ಜನಿವಾರವೊಂದು ಕಾಣಿಸಿದೆ! ಕಾಮಾಲೆ ಕಣ್ಣಿಗೆ ಪ್ರಪಂಚ ಹಳದಿಯಾಗಿ ಕಾಣುತ್ತದಲ್ಲ, ಹಾಗೆ!
"ಕಾಂತಾರ"ದಂಥ ಚಿತ್ರಗಳು ಗೆಲ್ಲಬೇಕು - ಹಲವು ಕಾರಣಗಳಿಗಾಗಿ. ಒಂದು - ಇದು ಅಪ್ಪಟ ತುಳು ಸಂಸ್ಕೃತಿಯನ್ನು ಅದು ಇದ್ದ ಹಾಗೇ ತೋರಿಸಿದೆ. ಆ ಸಂಸ್ಕೃತಿಯನ್ನು ಆಧುನಿಕ ವಿಶ್ಲೇಷಣೆಗೆ ಒಳಪಡಿಸಿ, ಜನ ಭೂತಗಳನ್ನು ನಂಬಬೇಕೋ ಬೇಡವೋ ಎಂಬ ಪ್ರಶ್ನಾರ್ಥಕ ಚಿಹ್ನೆಯ ಹುಳವನ್ನು ಪ್ರೇಕ್ಷಕರ ತಲೆಯೊಳಗೆ ಬಿಡುವ ಕೆಲಸವನ್ನು ಮಾಡಿಲ್ಲ. ಭೂತಾರಾಧನೆಯ ಬಗ್ಗೆ ತುಳುನಾಡಿನದು ಹಲವಾರು ಶತಮಾನಗಳಿಂದಲೂ ಪ್ರಶ್ನಾತೀತ ನಂಬಿಕೆ. ಅದೆಷ್ಟೇ ಆಧುನಿಕತೆ ಬಂದರೂ ಭೂತಕೋಲದ ಆಚರಣೆ ತುಳುನಾಡಿನಲ್ಲಿ ಇಂದಿಗೂ ಉಳಿದುಬಂದಿದೆ. ಹಿಂದೆಲ್ಲ ಹಳ್ಳಿಯ ಮಟ್ಟಸ ಮಾಡಿದ ನೆಲದಲ್ಲಿ, ಪೆಟ್ರೊಮ್ಯಾಕ್ಸ್ ಬೆಳಕಲ್ಲಿ, ಗವ್ವೆನ್ನುವ ಕತ್ತಲೆಯ ಮಧ್ಯದಿಂದ ಬೆಳಕಿನ ಬಳ್ಳಿಯಂತೆ ಮೂಡಿಬರುತ್ತಿದ್ದ ಭೂತಗಳು ಇಂದು ಜಗಮಗಿಸುವ ವಿದ್ಯುದ್ದೀಪದ ಬೆಳಕಿನಲಂಕಾರದಲ್ಲಿ ಸ್ವಲ್ಪ ಮಸುಕಾದಂತೆ ಕಾಣುತ್ತವೆ ಎಂಬುದೊಂದೇ ಬೇಸರ. ಮನುಷ್ಯ-ಪ್ರಕೃತಿಯ ನಡುವಿನ ಸಂಬಂಧವನ್ನು ಹಳ್ಳಹಿಡಿಸದೆ, ಸಮತೋಲನದಿಂದಿರುವಂತೆ ಮಾಡುವುದರಲ್ಲಿ ಭೂತಗಳ ಪಾತ್ರ ದೊಡ್ಡದು. ಭೂತಸ್ಥಾನವೆಂಬ ಕಾರಣಕ್ಕೇ ತುಳುನಾಡಿನಲ್ಲಿ ಅನೇಕ ಕಾಡುಗಳು ಉಳಿದಿವೆ; ಕೃಷಿಸಂಸ್ಕೃತಿ ಇನ್ನೂ ಬಾಳಿಬದುಕಿದೆ. ಭೂತಗಳ ಅಭಯಹಸ್ತವೊಂದಿದೆಯೆಂಬ ಕಾರಣಕ್ಕೇ ತುಳುನಾಡು ಇಂದಿಗೂ ಧರ್ಮದ ನೆಲೆಯಾಗಿ ಗುರುತಿಸಿಕೊಂಡಿದೆ. ಭೂತಗಳ ಮೇಲಿನ ನಂಬಿಕೆಯನ್ನು ಕಳೆದುಕೊಂಡ ದಿನ ತುಳುನಾಡು ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ ಬರಡಾಗುತ್ತದೆ. ಇನ್ನು ಎರಡನೆಯದಾಗಿ, "ಕಾಂತಾರ" ಸಿನೆಮದಿಂದಾಗಿ ಕನ್ನಡ ಚಿತ್ರರಂಗ ಕೂಡ ಪ್ರಾದೇಶಿಕ ಸಂಸ್ಕೃತಿಗಳ ಕಡೆ, ಅಲ್ಲಿನ ನೆಲಮೂಲಸಂಸ್ಕೃತಿಯ ಕಥೆಗಳ ಕಡೆ ಹೊರಳುವಂತಾಗಿದೆ. ಭೂತಾರಾಧನೆಯ ಬಗ್ಗೆ ಇದುವರೆಗೆ ಡಜನ್‌ಗಟ್ಟಲೆ ಸಂಶೋಧನಾ ಕೃತಿಗಳು ಬಂದಿದ್ದರೂ ಅವು ವಿದ್ವದ್ವಲಯದಿಂದ ಹತ್ತು ಮೀಟರ್ ಆಚೆಗೂ ಹೋಗಿರಲಿಲ್ಲ. ಆದರೆ ಈಗ ಕೇವಲ ಒಂದು ಸಿನೆಮ, ಇಡೀ ಕರ್ನಾಟಕವು ತುಳುಸಂಸ್ಕೃತಿಯತ್ತ, ಭೂತಾರಾಧನೆಯತ್ತ ಅಚ್ಚರಿಯ ಕಣ್ಣುಗಳಿಂದ ನೋಡುವಂತೆ ಮಾಡಿದೆಯೆಂದರೆ ಅದು ಸಿನೆಮವೆಂಬ ಮಾಧ್ಯಮದ ಗೆಲುವೂ ಹೌದು, "ಕಾಂತಾರ"ದ ಗೆಲವೂ ಹೌದು.
ಸೇರಿಸಿರುವುದು 14/10/2022
No comments:
Post a Comment