Wednesday, October 19, 2022

ಬಿ. ಪುಟ್ರಾಯ ಭಟ್ - ಶ್ರದ್ಧಾಂಜಲಿ

 16 ಅಕ್ಟೋಬರ್ 2022 



ನಾಗಶ್ರೀ ಶ್ರೀನಿವಾಸ್ ಅವರ ಫೇಸ್ ಬುಕ್ ಪೋಸ್ಟ್ ನಿಂದ:

ಕಳೆದ ಎರಡು ದಿನಗಳಿಂದ ಮನಸ್ಸಿನಲ್ಲಿ ಏನೋ ಹೇಳಲಾಗದ ಸಂಕಟ, ಅತೀವ ದು:ಖ, ಕಾರಣ ನಮ್ಮೆಲ್ಲರ ಪ್ರೀತಿಯ , ಪಿತೃ ಸಮಾನರಾದ ಶ್ರೀ ಪುಟ್ರಾಯ ಭಟ್ ಅಂಕಲ್ ಅವರ ಅಗಲಿಕೆ.


ಶ್ರೀಯುತರು ದಿನಾಂಕ 12.08.1949 ರಲ್ಲಿ ಕುಂದಾಪುರದಲ್ಲಿ ಜನಿಸಿದರು. Bsc ಪದವೀಧರರಾದ ಇವರು ಸಿಂಡಿಕೇಟ್ ಬ್ಯಾಂಕ್ ನಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಅದೇ ಬ್ಯಾಂಕ್ ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಸೇವೆಯಿಂದ ನಿವೃತ್ತಿ ಹೊಂದಿದನ್ನ ನೋಡಿದರೆ ಅವರು ಕಾರ್ಯಕ್ಷಮತೆ ಎಂತಹದು ಎಂದು ನಮಗೆ ತಿಳಿಯುತ್ತದೆ. ವೃತ್ತಿ ಜೀವನದಲ್ಲಿ ಮಾತ್ರವಲ್ಲ ವೈಯಕ್ತಿಕ ಜೀವನದಲ್ಲೂ ಸಹ ಆದರ್ಶ ಪತಿ, ಒಬ್ಬಳೇ ಮಗಳು ದೀಪಾಳ ಪ್ರೀತಿಯ ಅಪ್ಪ ಯ್ಯ, ಮೊಮ್ಮಗಳ ಪ್ರೀತಿಯ ತಾತ, ಮಾವ , ನೃತ್ಯ ಕುಟೀರ ಸಂಸ್ಥೆಯ ಎಲ್ಲಾ ಮಕ್ಕಳಿಗೆ ನಲ್ಮೆಯ ಅಂಕಲ್, ಹೀಗೇ ಎಲ್ಲಾ ಸಂಬಂಧಗಳನ್ನು ಬಹಳ ಜಾಗ್ರತೆಯಿಂದ ಕಿಂಚಿತ್ತೂ ಚ್ಯುತಿ ಬರದಂತೆ ಜೀವನದುದ್ದಕ್ಕೂ ಕಾಪಿಟ್ಟುಕೊಂಡು ಬಂದು ಓರ್ವ ಆದರ್ಶ ವ್ಯಕ್ತಿಯಾಗಿ ಬಾಳಿ ಬದುಕಿದವರು. ಇವರು ಜೀವನ ನಡೆಸಿದ ರೀತಿ, ಇವರ ಕಾರ್ಯ ವೈಖರಿ, ಪರೋಪಕಾರಿ, ಅಚ್ಚುಕಟ್ಟಾದ ಶಿಸ್ತುಬದ್ಧ ಜೀವನಶೈಲಿ, ಲಲಿತ ಕಲೆಗಳ ಬಗ್ಗೆ ಇವರಿಗಿದ್ದ ಒಲವು, ಸದಾಕಾಲವೂ ಪಾದರಸದಂತೆ ಒಂದಿಲ್ಲೊಂದು ಧರ್ಮಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳತ್ತಿದ್ದ ನಮ್ಮೆಲ್ಲರ ಪ್ರೀತಿಯ ಪುಟ್ರಾಯ ಭಟ್ ಅಂಕಲ್ ಅವರ ಸಾವು ನಿಜಕ್ಕೂ ಬಹಳ ಆಘಾತವನ್ನು ಉಂಟುಮಾಡಿದೆ. ಯಾವುದೇ ಅಹಂಭಾವ ವಿಲ್ಲದೆ ತಮ್ಮ ನಡತೆಯಿಂದ ಹಲವಾರು ಜನರಿಗೆ ಮಾದರಿಯಾದ , ಶ್ರೀ ಪುಟ್ರಾಯ ಭಟ್ ಅವರಿಗೆ ನಮ್ಮ ಮನದಾಳದ ಶ್ರದ್ಧಾಂಜಲಿ


ನೃತ್ಯ ಕುಟೀರದ ವಾರ್ಷಿಕೋತ್ಸವ 2019 

ಶುಭಾಳ ಮಗಳು, ಲಹರಿಯ ನೃತ್ಯ ಟೀಚರ್ ದೀಪಾ ಭಟ್ ಅವರ ತಂದೆಯವರು. ಶ್ರೀ ಪುಟ್ರಾಯ ಭಟ್ಟರು
ನೃತ್ಯ ಕುಟೀರದ ಸಂಸ್ಥಾಪಕರು.

"ಅಪ್ಪನೆಂಬ ಅದ್ಭುತ" ಅಪ್ಪನ ಬಗ್ಗೆ ಒಂದಿಷ್ಟು.....
ಅಮ್ಮನ ಕಂಬನಿ ಕಂಡಷ್ಟು ನಮಗೆ, ಅಪ್ಪನ ಬೆವರಹನಿ ಕಾಣುವುದೇ ಇಲ್ಲ..!
ಅಪ್ಪನೆಂದರೆ ನಮ್ಮ ಮನೆಯ ಕಾಮಧೇನು ! ಬೇಡಿದ್ದೆಲ್ಲ ನೀಡಲೇ ಬೇಕಾದ ಕಲ್ಪವೃಕ್ಷ !
ಅಪ್ಪ ಅತ್ತಿದ್ದು..ಕಂಡವರು ಕಡಿಮೆ ! ಅಪ್ಪ ನೋವುಗಳಿಲ್ಲದ ಸಮಚಿತ್ತ ಸರದಾರ !
ಹಬ್ಬ ಸಂತಸಗಳಲಿ ರೇಷ್ಮೆಸೀರೆ ಹೊಸಬಟ್ಟೆ ತೊಡಿಸಿ ಸಂಭ್ರಮಿಸುವ ಅಪ್ಪನುಡುಗೆ ಗಮನಿಸಿದವರಾರು?!
ಧರೆಯ ನಿತ್ಯ ಪೊರೆವ ಅಂಬರದಂತೆ ತಂದೆ ಸತಿಸುತರ ಹಗಲಿರುಳು ಕಾಯ್ವ ವಾತ್ಸಲ್ಯಧಾರೆ !
ಅಮ್ಮನ ಮಡಿಲಿಂದ ಕೈಹಿಡಿದು ನಮ್ಮನ್ನೆಲ್ಲ ಹೆಗಲಿಗೇರಿಸಿ, ಲೋಕ ತೋರಿಸಿದ ಮಾರ್ಗದರ್ಶಕ !
ನೋವು-ಬೇವು ನಿರಾಸೆ ಸಂಸಾರದೊತ್ತಡಗಳ..ಹಾಲಾಹಲವನೆಲ್ಲ ನುಂಗಿ ನಗುವ ನೀಲಕಂಠ !
ಅಮ್ಮನೆಂದರೆ ಮಮತೆ ! ಅಪ್ಪನೆಂದರೆ ಭದ್ರತೆ ! ಸದಾ ಮಡದಿ-ಮಕ್ಕಳ ಭವಿಷ್ಯಕಾಗಿ ಬದುಕನೆ ಮುಡುಪಿಟ್ಟು ಬೆಳಗುವ ಕರ್ಪೂರದ ಹಣತೆ !
ಅಪ್ಪನ ಕಣ್ಣಲ್ಲಿ ಯಾವತ್ತೂ ನೀರಿಲ್ಲ ಅಪ್ಪ ನೋವು ನುಂಗಿ ಇಂಗಿದ ಬಾವಿ !
ನಾವು ಅಳುವಾಗಲೆಲ್ಲಾ ಅಪ್ಪ ಸಂತೈಸುತ್ತಿದ್ದ ಅಪ್ಪ ಅಳುವುದಿಲ್ಲ ಸಂತೈಸಲು ಅಪ್ಪನಿಗೆ ಅಪ್ಪನಿಲ್ಲ !
ಅಪ್ಪ ಒಬ್ಬನೇ ನಕ್ಕಿಲ್ಲ ನಗುವಾಗ ನಗಿಸುತ್ತಿದ್ದ ನೋವು ಹಂಚಲಿಲ್ಲ ಮರೆಯಲ್ಲೇ ನುಂಗಿದ್ದ !
ಅಮ್ಮನ ಕಣ್ಣೀರಿಗೆ ಅಪ್ಪ ಕರಗುವ ಮೌನಿಯಾಗಿ...ಗೋಡೆ ನೋಡುತ್ತಾ ಸೋತು ಒರಗುವ !.
ಅಪ್ಪನ ಮಾತಿಗೆ ಮನೆ ತುಂಬಾ ಮೌನ, ಅಪ್ಪನ ಮೌನಕ್ಕೆ ಮನೆಯೇ ಸ್ಮಶಾನ !.
ಅಪ್ಪನ ಸಾಧನೆಗೆ ಅಮ್ಮನಿಗೂ ಸನ್ಮಾನ ಅಪ್ಪ ಸೋತಾಗ ಅಮ್ಮನಿಗೂ..ಅನುಮಾನ !
ಅಪ್ಪ ಗಂಧದ ಕೊರಡು...ಮನೆ ತುಂಬಾ ಪರಿಮಳ ತೇದು ತೇದು ಸವೆದಿದ್ದು ಯಾರಿಗೂ ತಿಳಿಯಲಿಲ್ಲ !
ಅಪ್ಪನ ಏಟು, ನಮ್ಮ ತಪ್ಪಿಗೆ. ನೋವು ಮರೆಸಿದ್ದು ಮದ್ದಲ್ಲ....ಅಪ್ಪನ ಅಪ್ಪುಗೆ !
ಅಪ್ಪನ ಬಗ್ಗೆ ಒಂದಿಷ್ಟು ಸಣ್ಣವನ ಮಾತು ಅಪ್ಪ ಸಣ್ಣವನಲ್ಲ ದೇವರಿಗೂ ಗೊತ್ತು !
ಅಪ್ಪಾ ....ಲೋಕ ಮೆಚ್ಚದಿರಬಹುದು ನಿನ್ನ.....ನನಗಂತೂ ನೀನು ಅಪರಂಜಿ ಅಪ್ಪಟ ಚಿನ್ನ !!.
ಕೃಷ್ಣಾರ್ಪಣಮಸ್ತು
(ಸತ್ಸಂಗ ಸಂಗ್ರಹ)
ಅಪ್ಪ ಅಂದರೆ ಆಕಾಶ


ಶಿವಳ್ಳಿ ಸ್ಮಾರ್ತ ಬ್ರಾಹ್ಮಣ ಮಹಾ ಪರಿಷತ್ತಿನಲ್ಲಿ ಅತ್ಯಂತ ಕ್ರಿಯಾ ಶೀಲರಾಗಿ ತಮ್ಮನ್ನು ತೊಡಗಿಸಿಕೊಂಡವರು.


ಸಹೃದಯ, ಗೌರವಾನ್ವಿತ ಸರಳ, ಸಜ್ಜನ ವ್ಯಕ್ತಿತ್ವ. ಎಲ್ಲರಿಗೂ ಬೇಕಾದವರು.


ಅವರ ಅಗಲಿಕೆ, ಎಲ್ಲರಿಗೆ ನೋವು ಉಂಟು ಮಾಡಿದೆ.

ದೀಪಾ ಭಟ್ ಅವರ ತಾಯಿ, ಕುಟುಂಬದವರಿಗೆ ಈ ಅಗಲಿಕೆಯನ್ನು ಭರಿಸುವ ಶಕ್ತಿಯನ್ನು ಶ್ರೀ ದೇವರು ಕರುಣಿಸಲಿ...
ಓಂ ಶಾಂತಿ..... ಓಂ ಸದ್ಗತಿ.....

ಬರೆದಿರುವುದು 20/10/2022




No comments:

Post a Comment