Thursday, January 12, 2023

ಶ್ರೀ ವಿಷ್ಣು ಸಹಸ್ರನಾಮ

 ಶ್ರೀ ವಿಷ್ಣು ಸಹಸ್ರನಾಮದ ಹುಟ್ಟಿಗೆ ಕಾರಣ..

ಶ್ರೀ ವಿಷ್ಣು ಸಹಸ್ರನಾಮ


ಶ್ರೀ ವಿಷ್ಣು ಸಹಸ್ರನಾಮವು ಮಹಾವಿಷ್ಣುವಿನ ಒಂದು ಸಾವಿರ ಹೆಸರುಗಳನ್ನು ಒಳಗೊಂಡಿದೆ. ಈ ಎಲ್ಲಾ ಹೆಸರುಗಳನ್ನು ಒಟ್ಟುಗೂಡಿಸಿದ್ದು ಮಹಾಭಾರತದ ತರುವಾಯ ಮತ್ತು ಆ ಸಮಯದಲ್ಲಿ ಇದ್ದಂತಹ ಪಾಂಡವರು ಮತ್ತು ಇನ್ನಿತರ ವ್ಯಕ್ತಿಗಳ ಸಂಶಯವನ್ನು ಅಥವಾ ಅವರ ಪ್ರಶ್ನೆಗಳಿಗೆ ಉತ್ತರಗಳನ್ನು ಕೊಡುವ ಉದ್ದೇಶದಿಂದ ಶ್ರೀ ವ್ಯಾಸ ಮಹಾಮುನಿಗಳು ಇದರಲ್ಲಿನ ಎಲ್ಲಾ 108 ಶ್ಲೋಕಗಳನ್ನು ಬರೆದರು. ಪ್ರತಿಯೊಂದು ವಿಷ್ಣುವಿನ ಹೆಸರುಗಳಿಗೂ ಒಂದೊಂದು ಅರ್ಥವಿದ್ದು, ಸ್ವಲ್ಪ ಅರ್ಥ ವ್ಯತ್ಯಾಸಗಳಿವೆ. ಇದರಲ್ಲಿನ ʼನಾಮʼ ಮತ್ತು ʼನಾಮಾವಳಿʼಗಳನ್ನು ಹೇಳುವಂತಹ ಸಮಯದಲ್ಲಿ ಏರ್ಪಡುವ ಧ್ವನಿತಂತುಗಳು ಅತ್ಯದ್ಭುತವಾಗಿದ್ದು ಮನುಷ್ಯನ ಜ್ಞಾನಕ್ಕೆ ಅತಿ ಆವಶ್ಯಕವಾಗಿವೆ. ಈ ಧ್ವನಿತಂತುಗಳು ಹೇಗೆ ಹೇಳುವ ಮತ್ತು ಕೇಳುವ ವ್ಯಕ್ತಿಯ ಮೇಲೆ ಪರಿಣಾಮವನ್ನು ಬೀರುತ್ತವೆ ಎಂಬುದನ್ನು ಹಲವಾರು ನುರಿತ ವಿದ್ವಾಂಸರುಗಳು ತಮ್ಮ ಗ್ರಂಥಗಳಲ್ಲಿ ತಿಳಿಸಿದ್ದಾರೆ. ಈ 108 ಶ್ಲೋಕಗಳ ಪಠಣ ಮತ್ತು ಶ್ರವಣ ವ್ಯಕ್ತಿಯ ಆತ್ಮೋದ್ಧಾರಕ್ಕೆ ಸಹಾಯಕವಾಗಿದೆ. ಇದರಿಂದಾಗಿ ಮೆದುಳಿನ ನರಗಳಲ್ಲಿ ಅಲೆಗಳು ಉತ್ಪತ್ತಿಯಾಗಿ ದೇಹದಲ್ಲಿನ ಜೈವಿಕ ಶಕ್ತಿಯ ಬೆಳವಣಿಗೆಗೆ ಸಹಕಾರಿಯಾಗುತ್ತದೆ. ಇದಷ್ಟೇ ಅಲ್ಲದೇ ಒಬ್ಬ ವ್ಯಕ್ತಿಯ ಭಾವನೆಗಳು ಮತ್ತು ಆತನ ಯೋಚನಾಮಟ್ಟನ್ನು ನಿಯಂತ್ರಿಸುವುದರಲ್ಲಿ ಇದರ ಪಾತ್ರ ಮಹತ್ವವಾದುದು.

ವಿಷ್ಣು ಸಹಸ್ರನಾಮದ ಹುಟ್ಟಿಗೆ ಕಾರಣ

ಮಹಾಭಾರತದ ಕುರುಕ್ಷೇತ್ರ ಯುದ್ಧದ ಬಳಿಕ ಭೀಷ್ಮಾಚಾರ್ಯರು ತಮ್ಮ ಇಚ್ಛೆಯಂತೆ ದೇಹವನ್ನು ತ್ಯಜಿಸಲು ಸಿದ್ಧರಾಗಿದ್ದ ಸಮಯದಲ್ಲಿ ಯುಧಿಷ್ಠಿರನು ಧರ್ಮ ಮತ್ತು ಕರ್ಮಗಳ ಬಗ್ಗೆ ತನಗಿದ್ದ ಸಂಶಯವನ್ನು ಪರಿಹರಿಸಿಕೊಳ್ಳಲು ಯೋಚಿಸುತ್ತಿದ್ದ ಸಮಯದಲ್ಲಿ ಭಗವಾನ್‌ ಶ್ರೀಕೃಷ್ಣನು ಅದನ್ನರಿತು ಅವನನ್ನು ಪ್ರಪಂಚದಲ್ಲೇ ಹನ್ನೇರಡನೇ ಮಹಾಜ್ಞಾನಿಯೆಂದು ಕರೆಸಿಕೊಂಡಿದ್ದ ಭೀಷ್ಮರನ್ನು ಭೇಟಿ ಮಾಡಲು ತಿಳಿಸುತ್ತಾನೆ. (ಉಳಿದ ಹನ್ನೊಂದು ಜನ ಜ್ಞಾನಿಗಳೆಂದರೆ ಬ್ರಹ್ಮ, ನಾರದ, ಶಿವ, ಸುಬ್ರಹ್ಮಣ್ಯ, ಕಪಿಲ, ಮನು, ಪ್ರಹ್ಲಾದ, ಜನಕ, ಬಲಿ, ಶುಕ ಮತ್ತು ಯಮ) ಆನಂತರ ಶ್ರೀಕೃಷ್ಣನ ಆಜ್ಞೆಯಂತೆ ಯುಧಿಷ್ಠಿರನು ಭೀಷ್ಮರನ್ನು ಭೇಟಿಯಾಗಿ ತನ್ನಲ್ಲಿದ್ದ ಸಂಶಯಗಳ ನಿವಾರಣೆಗಾಗಿ ಆರು ಪ್ರಶ್ನೆಗಳನ್ನು ಕೇಳಿದನು. ಅವು ಯಾವುವೆಂದರೆ -

(1) ಕಿಮೇಕಂ ದೈವತಂ ಲೋಕೇ - ಪ್ರಪಂಚದಲ್ಲೇ ಶ್ರೇಷ್ಠನಾದ ದೇವನು ಯಾರು?

(2) ಕಿಂವಾಪ್ಯೇಕಂ ಪರಾಯಣಮ್‌ - ಎಲ್ಲಾ ಜಡ ಮತ್ತು ಕ್ರಿಯಾ ವಸ್ತುಗಳಿಗೆ ಯಾರು ಆಶ್ರಯದಾತನು ?

(3) ಸ್ತುವಂತಂ ಕಂ ಪ್ರಾಪ್ನುಯಾಮ ನವಾ ಶುಭಂ - ಯಾರನ್ನು ಸ್ತುತಿಸುವುದರಿಂದ ಮನುಷ್ಯನು ಶಾಂತಿ ಮತ್ತು ಸಮೃದ್ಧಿಯನ್ನು ಹೊಂದುತ್ತಾನೆ?

(4) ಕಂ ಅರ್ಚಂತ ಪ್ರಾಪ್ನುಯಾಂ ನವಾ ಶುಭಂ - ಯಾರನ್ನು ಪೂಜಿಸುವುದರಿಂದ ಮನುಷ್ಯನು ಶುಭವನ್ನು ಪಡೆಯುತ್ತಾನೆ?

(5) ಕೋ ಧರ್ಮಃ ಸರ್ವ ಧರ್ಮಾಣಾಂ ಭವತಃ ಪರಮೋ ಮತಃ - ಎಲ್ಲಾ ಧರ್ಮಗಳಲ್ಲಿ ಯಾವುದು ಶ್ರೇಷ್ಠವಾದ ಧರ್ಮ?

(6) ಕಿಂ ಜಪಂ ಉಚ್ಯತೇ ಜಂತುಃ ಜನ್ಮ ಸಂಸಾರ ಬಂಧನಾತ್‌ - ಯಾರ ಜಪವನ್ನು ಅಥವಾ ಹೆಸರನ್ನು ಹೇಳುವುದರಿಂದ ಜೀವಿಯು ಸಂಸಾರ ಸಾಗರದಿಂದ ಪಾರಾಗುತ್ತಾನೆ?

ಇದಕ್ಕೆ ಉತ್ತರವಾಗಿ ಭೀಷ್ಮರು ಹೀಗೆ ಉತ್ತರಿಸಿದರು -

ಜಗತ್ತಿಗೆ ಪ್ರಭುವೂ ದೇವದೇವನೂ ಪುರುಷೋತ್ತಮನೂ ಆದ ವಿಷ್ಣುವಿನ ಸಾವಿರ ಹೆಸರುಗಳನ್ನು ಸ್ತುತಿಸುವುದರಿಂದ ಅಥವಾ ಅರ್ಚನೆಯ ಮುಖಾಂತರ ಬೇಡಿಕೊಳ್ಳುವುದರಿಂದ ಮಾನವನು ಈ ಸಂಸಾರ ಸಾಗರದಿಂದ ಮುಕ್ತಿಯನ್ನು ಹೊಂದುತ್ತಾನೆ.

ಪ್ರಪಂಚದಲ್ಲೇ ಇಷ್ಟೊಂದು ದೀರ್ಘವಾದ, ಪರಮಾತ್ಮನ ವೈಭವವನ್ನು ತೋರಿಸುವ ನಾಮಾವಳಿಗಳಿರುವುದೇ ವಿರಳ. ʼನಾಮʼ ಎಂಬ ಪದದ ವೈಜ್ಞಾನಿಕ ಅರ್ಥವನ್ನು ಗಮನಿಸಿದರೆ ನ- ನರಮಂಡಲ, ಮ - ಮನಸ್ಸು ಅಥವಾ ಬುದ್ಧಿಯಾಗಿದ್ದು ವಿಷ್ಣುವಿನ ಈ ಹೆಸರುಗಳನ್ನು ಹೇಳುವುದರಿಂದ ಮನಸ್ಸು ಮತ್ತು ನರಮಂಡಲದ ಮೇಲೆ ಇದು ಉತ್ತಮ ಪರಿಣಾಮ ಬೀರುತ್ತದೆ.

ವಿಷ್ಣು ಸಹಸ್ರ ನಾಮದ ಪ್ರಮುಖ ಭಾಗವೆಂದರೆ 107 ಶ್ಲೋಕಗಳು. ಇವು ವಿಷ್ಣುವಿನ 1000 ಹೆಸರುಗಳನ್ನು ಒಳಗೊಂಡಿದ್ದು ಪ್ರತಿಯೊಂದು ಹೆಸರೂ ಆ ಪರಮಾತ್ಮನ ವೈಶಿಷ್ಟ್ಯ ಮತ್ತು ಗುಣಗಳನ್ನು ಸೂಚಿಸುತ್ತದೆ. ಈ ಹೆಸರುಗಳ ಅರ್ಥವನ್ನು ತಿಳಿಯುವುದರಿಂದ ಆಳವಾದ ಭಕ್ತಿ ಹಾಗೂ ಜ್ಞಾನ ಪ್ರಾಪ್ತಿಯಾಗುತ್ತದೆ.

ಈ 1000 ಹೆಸರುಗಳಿಂದ ಪರಮಾತ್ಮನನ್ನು ಪೂರ್ಣವಾಗಿ ತಿಳಿಯಲು ಸಾಧ್ಯವೇ ಎಂದು ಕೇಳಿದರೆ, ವೇದಗಳ ಪ್ರಕಾರ ಪರಮಾತ್ಮನು ಮನುಷ್ಯನ ಬುದ್ಧಿಗಾಗಲಿ ಅಥವಾ ಮಾತಿಗಾಗಲಿ ಲಭಿಸುವವನಲ್ಲ. ಇಡೀ ಜೀವನವೆಲ್ಲಾ ಇದರ ಬಗ್ಗೆಯೇ ತಿಳಿಯಲು ಪ್ರಯತ್ನಿಸಿದರೂ ಅದು ನಮಗೆ ತಿಳಿಯಲಾರದಷ್ಟು ರಹಸ್ಯವಾದುದು ಮತ್ತು ಅವಿನಾಶಿಯಾದ ಈ ಪರಮಾತ್ಮನ ರಹಸ್ಯವನ್ನು ಪೂರ್ಣವಾಗಿ ಯಾವುದೇ ಶಾಸ್ತ್ರಗಳಿಂದಾಗಲೀ, ವೇದ-ಪುರಾಣಗಳಿಂದಾಗಲೀ ತಿಳಿಯಲು ಸಾಧ್ಯವಿಲ್ಲ.

ಕೆಲವರು, ʼನಮಗೆ ಸಂಸ್ಕೃತ ಜ್ಞಾನವಿಲ್ಲದಿರುವುದರಿಂದ ಈ ಶ್ಲೋಕಗಳ ಅರ್ಥ ನಮಗೆ ತಿಳಿಯುವುದಿಲ್ಲ. ಆದ್ದರಿಂದ ಇದನ್ನು ಹೇಳುವುದರಿಂದ ಯಾವುದೇ ಪ್ರಯೋಜನವಿಲ್ಲʼ ಎಂದು ವಾದಿಸುವರು. ಆದರೆ ಅರ್ಥ ಗೊತ್ತಿಲ್ಲದಿದ್ದರೂ ಇದರ ಪಠಣ ಶ್ರೇಯಸ್ಕರವೇ ಆಗಿದೆ. ಶ್ಲೋಕದ ಅರ್ಥ ಸಿಕ್ಕಾಗ, ಪಠಣ ಇನ್ನೂ ಸುಲಭವಾಗುತ್ತದೆ.

ಹಾಗೆಯೇ, ಸಂಸ್ಕೃತ ಜ್ಞಾನವಿಲ್ಲದಿದ್ದಾಗ ಉಚ್ಛಾರಣೆಯಲ್ಲಿ ಹಲವಾರು ತಪ್ಪುಗಳಾಗುತ್ತವೆ. ಆದ್ದರಿಂದ ಇದನ್ನು ಪಠಿಸಬಾರದೆಂದೂ ಮತ್ತಷ್ಟು ಜನ ಹೇಳುತ್ತಾರೆ. ಇದಕ್ಕೆ ಒಂದು ಉತ್ತಮ ಉದಾಹರಣೆ ಎಂದರೆ ಮಗು ತಾಯಿಯನ್ನು ತನಗೆ ಇಷ್ಟವಾದ ಹಣ್ಣು ಬೇಕೆಂದು ತೊದಲು ನುಡಿಯಲ್ಲಿ ಕೇಳುತ್ತದೆ. ಆಗ ತಾಯಿಯು ಮಗು ಸರಿಯಾಗಿ ಉಚ್ಚರಿಸದಿದ್ದರೂ ಅದು ಹೇಳುತ್ತಿರುವುದನ್ನು ಗಮನಿಸಿ ಅದರ ಆಸೆಯನ್ನು ತಿಳಿದುಕೊಂಡು, ಅದನ್ನು ಪೂರೈಸುತ್ತಾಳೆ. ಇದೇ ರೀತಿಯಲ್ಲಿ ನಾವು ಭಕ್ತಿಯಿಂದ ಮತ್ತು ಶ್ರದ್ಧೆಯಿಂದ ಪರಮಾತ್ಮನನ್ನು ಧ್ಯಾನಿಸಿದರೆ, ಅವನು ನಮ್ಮ ಭಕ್ತಿಯನ್ನು ನೋಡುತ್ತಾನೆಯೇ ವಿನಾ ನಮ್ಮ ಆಡಂಬರದ ಪ್ರದರ್ಶನವನ್ನಾಗಲಿ, ವಾಗಾಡಂಬರವನ್ನಾಗಲಿ ಅಲ್ಲ.

ಇಂದಿನ ಈ ಆಧುನಿಕ ಪ್ರಪಂಚದಲ್ಲಿ ಉತ್ತಮ ಆರೋಗ್ಯಕ್ಕೆ ಹೇಗೆ ದೇಹಶುದ್ಧಿಯು ಆವಶ್ಯಕವೋ ಹಾಗೆ ನಮ್ಮ ಮನಸ್ಸಿನ ಶುದ್ಧಿಯೂ ಹೆಚ್ಚು ಮುಖ್ಯ. ಯಾರು ತಮ್ಮ ಮನಸ್ಸನ್ನು ಶುದ್ಧಿ ಮಾಡಿಕೊಳ್ಳಲು ಪ್ರಯತ್ನಿಸುವುದಿಲ್ಲವೋ ಅವರು ಮಾನಸಿಕವಾಗಿ ದುರ್ಬಲರಾಗುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಧ್ಯಾನವು ಮನಸ್ಸಿನ ಶುದ್ಧಿಗೆ ಉತ್ತಮ ಸಾಧನವಾಗಿದ್ದು, ವಿಷ್ಣು ಸಹಸ್ರನಾಮವನ್ನು ಶ್ರದ್ಧೆ ಮತ್ತು ಭಕ್ತಿಯಿಂದ ಧ್ಯಾನಿಸಿದ್ದೇ ಆದರೆ ಅಂತಹವರ ಕಷ್ಟಗಳೆಲ್ಲ ಪರಿಹಾರವಾಗಿ ಮಾನಸಿಕ ನೆಮ್ಮದಿ ಸಿಗುವುದರಲ್ಲಿ ಯಾವುದೇ ಸಂದೇಹವಿಲ್ಲ.

ಶ್ರೀಕೃಷ್ಣಾರ್ಪಣಮಸ್ತು

Courtesey : WhatsApp

No comments:

Post a Comment