ಭಾನುವಾರ, 23 ಏಪ್ರಿಲ್, 2023
ಅಕ್ಷಯ ತ್ರತೀಯಾ
ಅಕ್ಷಯ ತೃತೀಯ ಮಹತ್ವ :-.
ಅಕ್ಷಯ ತೃತೀಯ ಹಬ್ಬವನ್ನು ವೈಶಾಖ ಶುದ್ಧ ತೃತೀಯ ದಿನದಂದು ಆಚರಿಸಲಾಗುತ್ತದೆ. ಈ ಬಾರಿ 23.4.2023 ಆಚರಿಸಲಾಗುತ್ತದೆ.
“ಅಕ್ಷಯ” ಎನ್ನುವುದು ಕ್ಷಯವಾಗದೆ ಅಂದರೆ ಮುಗಿಯದೇ ಇರುವುದು ಎಂದರ್ಥ.
ಸ್ನಾತ್ವಾ ಹುತ್ವಾ ಚ ಜಪ್ತ್ವಾ ಚ ದತ್ತ್ವಾನಂತಫಲಂ ಲಭೇತ್
ಈ ಹಬ್ಬದಲ್ಲಿ ಆಚರಿಸುವ ಸ್ನಾನ, ಜಪ, ತಪಸ್ಸು , ಅಧ್ಯಯನ, ತರ್ಪಣ, ದಾನಾದಿಗಳೆಲ್ಲವೂ ಅಕ್ಷಯವಾದ ಫಲವನ್ನು ನೀಡುವುದರಿಂದ ಇದನ್ನು ಅಕ್ಷಯ ತೃತೀಯ ಎಂದು ಕರೆಯಲಾಗಿದೆ ಎಂದು ವ್ರತರಾಜದಲ್ಲಿ ಉಲ್ಲೇಖಿಸಿದೆ. ಅಕ್ಷಯವಾದ ಮೋಕ್ಷಕ್ಕೆ ಕಾರಣವಾಗಿರುವುದರಿಂದಲೂ ಇದಕ್ಕೆ ಈ ಹೆಸರು ಹೊಂದಾಣಿಕೆಯಾಗುತ್ತದೆ.
ಇದೊಂದು ಸ್ವಯಂಸಿದ್ಧ ಮೂರೂವರೆ ಮುಹೂರ್ತಗಳಲ್ಲಿ ಇದೂ ಒಂದು. ಈ ದಿನ ಮುಹೂರ್ತ ಇಡುವಾಗ ನಕ್ಷತ್ರ, ವಾರ, ತಿಥಿ, ಮುಂತಾದವನ್ನು ನೋಡುವ ಅವಶ್ಯಕತೆ ಇಲ್ಲ.
ಹೊಸ ವ್ಯವಹಾರ, ದಾನ ಧರ್ಮ ಗಳನ್ನು ಮಾಡಲು ಅಕ್ಷಯ ತೃತೀಯ ಅತ್ಯುತ್ತಮ ದಿನ. ಅಕ್ಷಯ ಎನ್ನುವುದು ಕ್ಷಯ ವಾಗದೆ ಅಂದರೆ ನಾಶವಾಗದೇ ಇರುವುದು ಎಂದರ್ಥ.
ಅಕ್ಷಯತೃತೀಯಾ ದಿನ ಪಿತೃ ತರ್ಪಣ ಕೊಡಬೇಕೆ?
ದೇವತೆಗಳ ಪೂಜೆಗೆ ಮಾತ್ರವಲ್ಲದೆ ಪಿತೃಗಳ ಪೂಜೆಗೂ ಪ್ರಶಸ್ತವೆನಿಸಿರುವ ತಿಥಿ ಅಕ್ಷಯ ತೃತೀಯಾ. ಪಿತೃಗಳನ್ನು ಕುರಿತು ತರ್ಪಣ ಮಾಡಿದರೆ ವಿಶೇಷ ಫಲ ಎಂದು ಧರ್ಮಸಿಂಧುವಿನಲ್ಲಿ ಉಲ್ಲೇಖಿಸಿದೆ
1. ಈ ದಿನವು ತ್ರೇತಾ ಯುಗದ ಆರಂಭವನ್ನು ಸೂಚಿಸುತ್ತದೆ.
2. ಪಾಂಡವರು ಸೂರ್ಯ ದೇವರಿಂದ ಅಕ್ಷಯ ಪಾತ್ರೆವನ್ನು ಪಡೆದದ್ದು,
3. ಪರಶುರಾಮನ ಅವತಾರವಾದ ದಿನ
4. ಕುಚೇಲನು ಕೃಷ್ಣನ ಮನೆಗೆ ಸಹಾಯ ಯಾಚಿಸಲು ಹೋಗಿ, ಕೃಷ್ಣನಿಂದ ಪಾದಪೂಜೆ ಪಡೆದು ಅವನಿಂದ ಅನುಗ್ರಹಿತನಾದನು.
5. ವೇದವ್ಯಾಸರು ಇದೇ ದಿನ ಮಹಾಭಾರತ ಗ್ರಂಥ ಆರಂಭಿಸಿದ್ದು.
6. ಪರಮಾತ್ಮ ತನ್ನ ದೇಹದ ಗಂಧದಿಂದ ಮಂಡೋದರಿಯನ್ನು ಸೃಷ್ಟಿಸಿದ್ದು ಇದೇ ದಿನ.
7. ಇದೇ ದಿನ ದೇವೇಂದ್ರ ತಾನು ಕಳೆದುಕೊಂಡಿದ್ದ ಪದವಿಯನ್ನು ಬೃಹಸ್ಪತ್ಯಾಚಾರ್ಯರ ನಿರ್ದೇಶನದಂತೆ ಜಪ ತಪ ಯಜ್ಞ ಮಾಡಿ ವಾಪಸ್ ಪಡೆದನು.
ಅಕ್ಷಯ ತೃತೀಯ ಕರ್ತವ್ಯಗಳು :
೧. ಸೂರ್ಯೋದಯ ಮುನ್ನ ಏಳಬೇಕು.
೨. ಸಂಕಲ್ಪ ಸಹಿತ ಸ್ನಾನ
೩. ಆಹ್ನೀಕ, ಪೂಜೆ, ಜಪ, ಪಾರಾಯಣ
೪. ತರ್ಪಣಾಧಿಕಾರಿಗಳು ತರ್ಪಣ ನೀಡಬೇಕು.
೫. ಯಥಾಶಕ್ತಿ ದಾನಧರ್ಮ
೬. ಗಂಧ ಸಮರ್ಪಣೆ ದೇವರಿಗೆ
ಅಕ್ಷಯ ತೃತೀಯ ದಿನದಂದು ಗಂಧಲೇಪನ ವೈಶಿಷ್ಟ್ಯ :
ಇದೇ ದಿನ ಭಗವಂತನು ತನ್ನ ದೇಹದ ಸುಗಂಧದಿಂದ ಮಂಡೋದರಿಯ ಸೃಷ್ಟಿ ಮಾಡಿದ್ದರಿಂದ ದೇವರಿಗೆ ಗಂಧ ಸಮರ್ಪಣೆ ಮಾಡುವ ಸಂಪ್ರದಾಯ ಇದೆ.
ಬಂಗಾರ ಖರೀದಿ :
ವೈಶಾಖ ಶುದ್ಧ ತೃತೀಯ ದಿನದಂದು ಅಕ್ಷಯ ತೃತೀಯ ಆಚರಣೆ ಮಾಡಲಾಗುತ್ತದೆ. ಬಹಳ ಜನರಿಗೆ ಅಕ್ಷಯ ತೃತೀಯ ಬಗ್ಗೆ ತಪ್ಪು ತಿಳುವಳಿಕೆ ಇದೆ. ಅಂದು ಬಂಗಾರ ತೆಗೆದುಕೊಳ್ಳಲೇ ಬೇಕು ಅದು ಇಮ್ಮಡಿ ಆಗುತ್ತದೆ ಎಂದು ಪ್ರಚೋದಿಸಿದ್ದಾರೆ ಕೆಲವು ಬಂಗಾರದ ಅಂಗಡಿಗಳು ಮತ್ತು ಜ್ಯೋತಿಷಿಗಳು. ಟೀವೀ ಛಾನೆಲ್ ಮೂಲಕ ಬಂಗಾರ ತೆಗೆದುಕೊಂಡರೆ ವೃದ್ಧಿಯಾಗುತ್ತದೆ ಎಂದು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಯಾವ ಪುರಾಣದಲ್ಲೂ ಬಂಗಾರ ಇಮ್ಮಡಿಯಾಗುವ ಪ್ರಸ್ತಾಪ ಇಲ್ಲ. ಜನಗಳು ಇದಕ್ಕೋಸ್ಕರ ಸಾಲ ಮಾಡಿ ಬಂಗಾರ ಕೊಳ್ಳುತ್ತಿದ್ದಾರೆ. ಹೌದು. ಸಾಲ ಇಮ್ಮಡಿಯಾಗುತ್ತದೆ. ಬಂಗಾರ ಅಲ್ಲ. ಬಂಗಾರ ಎಂದು ಕೊಂಡರೂ ಅದರ ಬೆಲೆ ಇದ್ದೇ ಇರುತ್ತದೆ. ಆದರೆ ಈ ದಿನ ನಾವು ಮಾಡಬೇಕಾದ್ದು ಸತ್ಕಾರ್ಯ, ದಾನ, ಪಾರಾಯಣ, ಬ್ರಾಹ್ಮಣ ಭೋಜನ ಮುಂತಾದುವು.
ಈ ದಿನ ನಾವು ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆವು.
1. ಬೆಳಿಗ್ಗೆ 5 ಗಂಟೆಗೆ ಸ್ನಾನ, ಜಪ, ಪೂಜೆ ವಿಷ್ಣು ಸಹಸ್ರನಾಮ ಪಾರಾಯಣ.
2. ಬೆಳಿಗ್ಗೆ 6 ಗಂಟೆಗೆ ಸ್ವರ್ಗ ಹೆರಿಟೇಜ್ ನಲ್ಲಿ ಉಷಾ-ಉಮೇಶ್ ಅವರ ಮಗಳ ಮದುವೆಗೆ.
3. 11 ಗಂಟೆಗೆ ನೂತನ್ ದೊಶೆಟ್ಟಿ ಯವರ ಪುಸ್ತಕ ಬಿಡುಗಡೆ, ೧೦ ನೇ ಕ್ರಾಸ್, ಭುವನೆಶ್ವರಿನಗರ.
4. ಮಧ್ಯಾಹ್ನ 1 ಗಂಟೆಗೆ ವೈದಿಕ ಮಂದಿರ ಊಟಕ್ಕೆ (ಸುಬ್ರಮಣ್ಯ ಸೋಮಯಾಜಿಯ ತಾಯಿಯ ಶ್ರಾದ್ಧ)5. ಮಧ್ಯಾಹ್ನ 3 ಗಂಟೆಗೆ ಸೂರ್ಯ ಲಕ್ಷ್ಮಿ ಭರತ್ ಮನೆಗೆ ಆಗಮನ, ಮದುವೆಯ ಆಮಂತ್ರಣ.
6. ಮಧ್ಯಾಹ್ನ 4 ಗಂಟೆಗೆ ಶಿವರಾಮ ಕಾರಂತ ವೇದಿಕೆಯ ಏಪ್ರಿಲ್ ತಿಂಗಳ ಕಾರ್ಯಕ್ರಮ - ವಿನಾಯಕ ದೇವಸ್ಥಾನ, ಅರ್. ಟಿ. ನಗರ, ಬೆಂಗಳೂರು.
ಸಂಜೆ 7 ಗಂಟೆಗೆ ಮನೆಗೆ........posted 27/4/2023