Monday, June 19, 2023

ಶರಾವತಿಯ ಒಡಲು - ಶೋಭಾ ಲೇಖನ

ಶರಾವತಿಯ ಒಡಲು - ಶೋಭಾ ಲೇಖನ 
18/6/2023 


 ನಾನು ಸಾಗರದ ಸೊಸೆಯಾಗಿ ಬಂದು ಇದು ಮೂವತ್ತೆರಡನೇ ವರ್ಷ. ಈ ಮಲೆನಾಡಿನ ಸೊಸೆಯಾಗಿ ನಾನು ಬಹಳ ಖುಷಿ ಪಟ್ಟೇ ಬಂದೆ. ಮೊದಲನೆಯ ಕಾರಣ ನನ್ನೊಲವಿನ ಸಖನನ್ನು ವರಿಸಿದ್ದು; ಎರಡನೆಯದಾಗಿ ಕಣ್ಣಿಗೆ ತಂಪೆರೆಯುವ ಹಚ್ಚ ಹಸಿರಿನ ಒಡಲಿಗೆ ಬಂದು ಸೇರಿದ್ದು. ವರ್ಷದಲ್ಲಿ ಸಿಗುವ ಎರಡು ತಿಂಗಳ ರಜೆಯಲ್ಲಿ ತವರಿಗೆ ಹೋದದ್ದು ಕಡಿಮೆ; ಕೂಡು ಕುಟುಂಬವಾಗಿದ್ದ ಕಾರಣ ಬಂದು ಸೇರಿದ ಮನೆಯಲ್ಲಿ ಇದ್ದದ್ದೇ ಹೆಚ್ಚು! ನನ್ನವರೆಲ್ಲ ಮುಳುಗಡೆಯಾಗಿ ಹೊಳೆಯೀಚೆ ಬಂದಿದ್ದರೂ ಅವರೆಲ್ಲರಲ್ಲಿ ಹಳೆಯೂರಿನ ನಂಟು ಬಹಳವೇ ಇತ್ತು. ಹೀಗಾಗಿ ಪ್ರತಿರಜೆಯಲ್ಲೂ ಲಾಂಚಿನಲ್ಲಿ ಪಯಣಿಸಿ ಕಳಸವಳ್ಳಿ, ಸಿಗಂದೂರು, ತುಮರಿ…ಅಂತ ಅಲ್ಲಿನ ಸಂಬಂಧಿಕರ ಹಾಗೂ ಆತ್ಮೀಯರ ಮನೆಗಳಿಗೆ ತಪ್ಪದೇ ಭೇಟಿ ಕೊಡುವ ರೂಢಿ ಇತ್ತು. ಅಗಾಧವಾದ ಹಿನ್ನೀರಿನ ಎದೆಯಾಳವನ್ನು ಸೀಳಿಕೊಂಡು ಹೋಗುತ್ತಿದ್ದ ಆ ಲಾಂಚಿನ ಪ್ರಯಾಣವೇ ಒಂದು ಖುಷಿ! ಎತ್ತ ನೋಡಿದರತ್ತ ಬರೀ ನೀರೇ ನೀರು. ಅಲ್ಲಲ್ಲಿ ಇರುವ ನಡುಗಡ್ಡೆಗಳಲ್ಲಿ ಕಾಣುವ ಕೆಲವು ಮರಗಳನ್ನು ಬಿಟ್ಟರೆ ಕಣ್ಣಿಗೆ ಕಾಣುವುದು ಬರೀ ನೀರು. ಸುಮಾರು ಅರ್ಧ ಗಂಟೆಯ ಆ ಪಯಣ ಮನಸ್ಸಿಗೆ ಬಹಳ ಹಿತವನ್ನು ಕೊಡುತ್ತಿತ್ತು (ನಾನು ನೀರ ಪ್ರೇಮಿಯಾಗಿರುವುದರಿಂದ ಲಾಂಚಿನ ಪಯಣ ಹೆಚ್ಚಿನ ಮುದವನ್ನು ನೀಡುತ್ತಿತ್ತು) ಇಡೀ ವರ್ಷದ ಕೆಲಸದ ಒತ್ತಡ/ಸಾಂಸಾರಿಕ ಕ್ಲೇಷಗಳನ್ನು ಆ ಪಯಣ ತೊಡೆದು ಹಾಕುತ್ತಿತ್ತು.

ಇಂದು ನನ್ನ ಮಗಳ ಸ್ನೇಹಿತರಿಗೆ ಹಿನ್ನೀರಿನ ಸೊಬಗನ್ನು ತೋರಿಸಲು ಕರೆದೊಯ್ದಾಗ ನನ್ನ ಮುಂದೆ ಕಂಡದ್ದು ಬರಿದಾದ ಶರಾವತಿಯ ಒಡಲು! ಒಂದರೆಕ್ಷಣ ನನ್ನ ಕಣ್ಣು ಕಂಡದ್ದನ್ನು ನಾನೇ ನಂಬದ ಸ್ಥಿತಿಯಲ್ಲಿದ್ದೆ. ಹೂಳಿನ ನಡುವೆ ನಿಂತಿದ್ದ ಬೋಳಾದ ಮರದ ಬುಡ್ಡೆಗಳು ತಮ್ಮ ಗತಕಾಲದ ಕಥೆ ಅರುಹಲು ಅಲ್ಲಿ ನಿಂತಂತೆ ಕಂಡವು. ತೀರದಲ್ಲಿ ಬಿರಿದು ಬಾಯಿಬಿಟ್ಟ ನೆಲ ತನ್ನಳಲನ್ನು ಹೇಳಲು ಬಾಯಿ ತೆರೆದಂತೆ ಕಂಡಿತು. ಎಲ್ಲಿ ಆಗಿದ್ದ ಆ ಅಪಾರ ನೀರ ರಾಶಿ? ಎಲ್ಲಿ ಆ ಅಗಾಧ ಆಳದ ನೀರೊಡಲು? ಎಲ್ಲಿ ತನ್ನೆಲ್ಲಾ ರಹಸ್ಯವನ್ನು ಬಚ್ಚಿಟ್ಟಿದ್ದ ಹಿನ್ನೀರ ಕಡಲು? ಆ ಬರಿದಾದ ನೀರೊಡಲನ್ನು ತುಂಬಿಸುವ ಶಕ್ತಿ ನನ್ನ ಕಣ್ಣೀರಿಗಿದ್ದಿದ್ದರೆ ನಾನು ಮನ ಬಿರಿದು ಅತ್ತು ಬಿಡುತ್ತಿದ್ದೆನೇನೊ?! 
ನಿಸರ್ಗದ ಈ ಸೊರಗುವಿಕೆಗೆ ನಾವೆಲ್ಲಾ ಎಷ್ಟು ಮಟ್ಟಿಗೆ ಕಾರಣೀಭೂತರು?! ಈ ಪರಿಸ್ಥಿತಿ ಹೀಗೆಯೇ ಮುಂದುವರೆದರೆ ನಾವೆತ್ತ ಹೋಗುವುದು? ಇದು ಮುಂಬರಲಿರುವ ಅಶುಭದ ದಿನಗಳ ಸೂಚಕವೇ? ಇಂತಹ ಘೋರ ಪರಿಸ್ಥಿತಿಯನ್ನು ಸರಿಮಾಡುವಲ್ಲಿ ನಾವು ಹೇಗೆ ಸಕ್ರಿಯವಾಗಿ ತೊಡಗಿಕೊಳ್ಳಬೇಕು?.... ಎಂಬಿತ್ಯಾದಿ ಪ್ರಶ್ನೆಗಳು ನನ್ನನ್ನು ಕಾಡತೊಡಗಿದ್ದು ನಿಜ. ಉತ್ತರ ಕಾಣದೆ ಕಂಗಾಲಾಗಿದ್ದೇನೆ. ಈಗಾಗಿರುವ ಹಾನಿಯನ್ನು ಸರಿಮಾಡಲು ನಾವೆಲ್ಲರೂ ಜೊತೆಗೂಡಿ ಪರಿಸರ ಸಂರಕ್ಷಣೆಯ ಕೆಲಸದಲ್ಲಿ ನಮ್ಮ ಕೈಲಾದಷ್ಟು ತೊಡಗಿಕೊಳ್ಳೋಣವೆ?

No comments:

Post a Comment